Thursday, January 7, 2010

ಕಾವುದಾನತಜನವ ಗದುಗಿನ ವೀರನಾರಯಣ...

ಕಳೆದ ವಾರ ರಜಾ ಸೀಸನ್ ಆದ್ದರಿಂದ ಪುಣೆಯಿಂದ ಮೈಸೂರಿಗೆ ಯಾವ ಬಸ್ಸೂ ಸಿಕ್ಕಿರಲಿಲ್ಲ. ಇನ್ನು ಟ್ರೈನಿನ ಮಾತಂತೂ ದೂರವೇ ಉಳಿಯಿತು, ಮಾಮೂಲಿನ ದಿನಗಳಲ್ಲೂ ಅದರ "ವೈಟಿಂಗ್ ಲಿಸ್ಟ್" ಮೊಟಕಾಗಿದ್ದೇ ಇಲ್ಲ. ವಿಮಾನಯಾನದ ದರವಂತೂ ವಿಮಾನದೊಂದಿಗೇ ಗಗನಗಾಮಿಯಾಗಿತ್ತು. ಇನ್ನು ಉಳಿದದ್ದೊಂದೇ, ಕಟ್ ರೂಟಿನ ಹೆಜ್ಜೆಸಾಲಿನ ಪಯಣ. ಹೇಗೂ ದೀರ್ಘ ರಜೆಯಿದ್ದುದರಿಂದ ಪಯಣ ಸ್ವಲ್ಪ ಎಳೆದರೂ ಪರವಾಗಿಲ್ಲವೆಂದುಕೊಂಡು, ಪುಣೆ - ಹುಬ್ಬಳ್ಳಿ - ಬೆಂಗಳೂರು - ಮೈಸೂರು ಹೀಗೆ ಪಯಣವನ್ನು ತುಂಡರಿಸಿಕೊಂಡೆ. ರಾತ್ರೆ ಪುಣೆಯಿಂದ ಹೊರಡುವ ಬಸ್ಸು ಬೆಳಗ್ಗೆ ೭ಕ್ಕೆ ಹುಬ್ಬಳ್ಳಿ ಸೇರುವುದಿತ್ತು. ಅಲ್ಲಿಂದ ಬೆಂಗಳೂರಿಗೆ ಸಂಜೆ ೫ರವರೆಗೂ ಯಾವ ಟ್ರೈನೂ ಖಾಲಿಯಿಲ್ಲ. ಈ ಹತ್ತು ಗಂಟೆಗಳನ್ನು ಕಳೆಯುವುದು ಹೇಗೆ? ಆಗ ಇದ್ದಕ್ಕಿದ್ದಂತೆ ನನ್ನ ಬಹುದಿನದ ಕನಸು ನೆನಪಿಗೆ ಬಂತು. ಬಾಲ್ಯದಿಂದಲೂ ಭಾವನಾತ್ಮಕವಾಗಿ ನನ್ನ ಒಡನಾಡಿಯಾದ ಗದುಗಿನ ಭಾರತ, ಅದರ ಕರ್ತೃ ಕುಮಾರವ್ಯಾಸ, ಅವನ ಸ್ಪೂರ್ತಿಯ ಸೆಲೆಯಾದ ವೀರನಾರಾಯಣನನ್ನು ದರ್ಶಿಸುವುದು, ಕವಿಯ ನೆನಪಿಗೆ ಕಾವ್ಯವಾಚನದ ಅಂಜಲಿಯನ್ನು ಸಲ್ಲಿಸುವುದು ಇದು ನನ್ನ ಬಹುದಿನದ ಕನಸಾಗಿತ್ತು. ಅನೇಕಬಾರಿ ಗದುಗಿಗೆ ಹೋಗಬೇಕೆಂದಿದ್ದರೂ ಸಾಧ್ಯವಾಗಿರಲಿಲ್ಲ; ಹೀಗೆ ನಾನು ಹೋಗಬೇಕೆಂದು ಎಣಿಸಿರುವ ಸ್ಥಳಗಳ ಪಟ್ಟಿಯೇ ಬಹಳ ದೊಡ್ಡದಿದ್ದುದರಿಂದ, ಆ ಪಟ್ಟಿಯಲ್ಲಿ ಇದೂ ಒಂದು ಹೆಸರಾಗಿ ಉಳಿದಿತ್ತಷ್ಟೇ. ಮೊನ್ನೆ ಪವನನ ಮದುವೆಗೆ ಧಾರವಾಡಕ್ಕೆ ಹೋದಾಗಲೂ ಗದುಗಿಗೆ ಹೋಗೋಣವೆಂದುಕೊಂಡೆ, ಆದರೆ ಜೊತೆಯಿದ್ದ ಗುಂಪಿನ ಆಸಕ್ತಿಗಳಿಗೆ ಈ ಆಲೋಚನೆ ಕೊಂಚವೂ ಪ್ರಸ್ತುತವಿರಲಿಲ್ಲವಾದ್ದರಿಂದ ಆ ಯೋಜನೆ ಮನಸ್ಸಿನಲ್ಲೇ ಉಳಿಯಿತು. ಆದರೆ ಅದಕ್ಕೆ ಈಗ ಇದ್ದಕ್ಕಿದ್ದಂತೆ ಸಮಯ ಕೂಡಿಬಂದಿತ್ತು. ಹುಬ್ಬಳ್ಳಿಯಿಂದ ಗದುಗಿಗೆ ೭೦ ಕಿಲೋಮೀಟರು, ಒಂದೂವರೆ ಗಂಟೆ ಪಯಣ. ಬೆಳಗ್ಗೆ ೮ಕ್ಕೆ ಹುಬ್ಬಳ್ಳಿ ಬಿಟ್ಟರೂ ೯.೩೦ಕ್ಕೆಲ್ಲಾ ಗದುಗಿನಲ್ಲಿರುತ್ತೇನೆ, ೧೦ಕ್ಕೆ ದೇವಾಲಯ. ಸ್ವಲ್ಪ ಬೇಗ ಹೋದರೆ ಜನವಿಲ್ಲದೆ ಪ್ರಶಾಂತವಾಗಿದ್ದರೆ ಅಂದುಕೊಂಡಂತೆ ಕಾವ್ಯವಾಚನಮಾಡುವ ಅವಕಾಶವೂ ಇರುತ್ತದೆ, ಇದು ನನ್ನ ಆಲೋಚನೆ. ಈ ಭಾವನಾತ್ಮಕ ಪ್ರೈವೆಸಿಯ ವಿಷಯದಲ್ಲಿ ದುರ್ಯೋಧನನ ಅಭಿಮಾನದ ಅಂಶ ನನ್ನಲ್ಲಿ ತುಸು ಹೆಚ್ಚಾಗೇ ಇದೆ. ಸ್ನಾನದ ಮನೆಯ ಹಾಡುಗಾರಿಕೆಗೂ ಸೌಂಡ್ ಪ್ರೂಫಿಂಗ್ ಇದ್ದರೆ ಒಳ್ಳೆಯದೆನ್ನುವ ಗುಂಪಿಗೆ ಸೇರಿದವನು ನಾನು. ಅವಕಾಶವೊದಗಿದರೆ ಇರಲಿ ಎಂದು ಕುಮಾರವ್ಯಾಸಭಾರತದ ಒಂದು ಪ್ರತಿಯನ್ನು ಬ್ಯಾಗಿನಲ್ಲಿರಿಸಿದೆ. ಸಾಮಾನ್ಯವಾಗಿ ನಾನು ಪ್ರಯಾಣದಲ್ಲಿ ಏನನ್ನೂ ಹೊತ್ತೊಯ್ಯುವುದಿಲ್ಲವಾದ್ದರಿಂದ ಇದೊಂದು ಪುಸ್ತಕದಿಂದ ಹೆಚ್ಚಿನ ಭಾರವೇನು ಆಗುವಂತಿಲ್ಲ. ಅಲ್ಲದೇ ಕುಮಾರವ್ಯಾಸನೇ ಹೇಳಿದ್ದಾನಲ್ಲ "ಭಾರತದ ಕಥನಪ್ರಸಂಗವ ಕ್ರೂರಕರ್ಮಿಗಳೆತ್ತಬಲ್ಲರು" ನನಗಂತೂ ಅದು ಎತ್ತಲು ಸುಲಭವಾಗಿತ್ತು!

ಪುಣೆಯಿಂದ ಹುಬ್ಬಳ್ಳಿವರೆಗಿನ ರಾತ್ರಿ ಪ್ರಯಾಣದಲ್ಲಿ ನಿದ್ದೆ ಬರಲಿಲ್ಲ. ಮನಸ್ಸು ತುಸು ಉದ್ವೇಗಗೊಂಡಿತ್ತು. ನನ್ನ ನೆಚ್ಚಿನ ಕವಿ, ಕಾವ್ಯವನ್ನು ರಚಿಸಿದ ಜಾಗದಲ್ಲೇ ಕುಳಿತು ಅದನ್ನು ವಾಚಿಸುವ, ಅರ್ಪಿಸುವ ಕಲ್ಪನೆಯೇ ಮನವನ್ನು ಮುದಗೊಳಿಸಿತ್ತು. ಮರುದಿನ ಅಂದುಕೊಂಡದ್ದಕ್ಕಿಂತ ಮುಂಚೆಯೇ ಹುಬ್ಬಳ್ಳಿ ತಲುಪಿದವನು, ಬೆಳಗ್ಗೆ ೯ಕ್ಕೆಲ್ಲಾ ಗದುಗಿನಲ್ಲಿದ್ದೆ. ಬಸ್ ಸ್ಟಾಂಡಿನಲ್ಲಿಳಿದು ಅಲ್ಲಿ ಇಲ್ಲಿ ವಿಚಾರಿಸುತ್ತಾ ಕೊನೆಗೊಮ್ಮೆ ದೇವಾಲಯವನ್ನು ತಲುಪಿದಾಗ ಅದರ "ಜನ ಜಂಗುಳಿ"ಯ ಬಗ್ಗೆ ಇದ್ದ ವಿಪರೀತ ಕಲ್ಪನೆಯೆಲ್ಲಾ ಹಾರಿಹೋಯಿತು. ಗದುಗಿನ ಸಂದಿಗೊಂದಿ ಗಲ್ಲಿ ಗಲ್ಲಿ ಸುತ್ತಿ ಅದೊಂದು ಕಡೆ ಎಡಕ್ಕೆ ಹೊರಳಿದರೆ ಧುತ್ತನೆ ಪ್ರತ್ಯಕ್ಷವಾಗುತ್ತದೆ, ವೀರನಾರಾಯಣನ ಗೋಪುರ. ಎರಡು ಗಲ್ಲಿ ಕೂಡುವೆಡೆಯಲ್ಲಿ ಮೂಲೆಯಲ್ಲಿರುವ ದೇವಾಲಯದ ಗೋಪುರವನ್ನು ಅದರ ಮುಂದೆ ಬೆಳೆದಿರುವ ದೊಡ್ಡ ಅರಳೀ ಮರ ಮುಚ್ಚಿದ್ದರೆ, ದೇವಾಲಯದ ಉಳಿದ ಭಾಗವನ್ನು ಅದರ ಮುಂದೆ ಅಡ್ಡಾದಿಡ್ಡಿ "ಪಾರ್ಕ್"ಮಾಡಿರುವ ಟ್ರಕ್ಕುಗಳು ಮುಚ್ಚಿರುತ್ತವೆ. ಆದರೂ ಅಲ್ಲೊಂದು ಇಲ್ಲೊಂದು ರಸ್ತೆಸೂಚಿಗಳಿರುವುದರಿಂದ ದೇವಾಲಯವನ್ನು ಕಂಡುಹಿಡಿಯುವುದು ಅಷ್ಟೇನು ಕಷ್ಟವಲ್ಲ, ಅಲ್ಲದೆ ಊರೂ ಚಿಕ್ಕದು. ದೇವಾಲಯ ನಿರ್ಜನವಾಗಿತ್ತು. ಬಹುಶಃ ಭಕ್ತ ನಾರಣಪ್ಪನಂತೆಯೇ ದೈವ ವೀರನಾರಾಯಣನೂ ಊರಿಗೆ ಅಜ್ಞಾತನಿರಬಹುದು. ಅದೇನೇ ಇರಲಿ, ಈ ಅಜ್ಞಾತತೆಯಿಂದ ಒಂದು ಅನುಕೂಲವಂತೂ ಇತ್ತು. ಬೇರೆ ಟೂರಿಸ್ಟ್ ಸ್ಪಾಟ್ ಅಥವಾ ಯಾತ್ರಾಸ್ಥಳಗಳಂತೆ ಇಲ್ಲಿ ಗಜಿಬಿಜಿ ಗಲೀಜುಗಳಾಗಲಿ, ಅದರೊಂದಿಗೆ ಬರುವ ಸ್ಥಳಮಹಾತ್ಮೆ, ಭಕ್ತಿಗೀತೆಗಳ ಕ್ಯಾಸೆಟ್ಟು ಸಿ.ಡಿ., ಬುಕ್ಕುಗಳನ್ನು ಮಾರುವ ಅಂಗಡಿ-ಮುಂಗಟ್ಟುಗಳ ಗಲಾಟೆಗಳಾಗಲಿ ಇಲ್ಲಿರಲಿಲ್ಲ. ಕೇವಲ ಹರಕೆ ಮಾತ್ರದಿಂದ ಭಕ್ತರ ಭವರೋಗಗಳನ್ನೆಲ್ಲಾ ಜಾಲಾಡಿ ಬಿಸಾಕುವ "ಪವರ್ ಫುಲ್" ದೈವಗಳು ಸಾಕಷ್ಟಿರುವಾಗ, ಈ ಬಡ ಗದಾಧರನನ್ನು ಹುಡುಕಿಕೊಂಡು ಯಾವ ಭಕ್ತಗಡಣವೂ ಗದುಗಿನ ಈ ಮೂಲೆಗೆ ಬರುವಂತಿಲ್ಲ. ಹೀಗಾಗಿ ಬಹುತೇಕ ಸ್ಥಳೀಯ ದೈವವಾದ ವೀರನಾರಾಯಣ, ಆ ಅರ್ಥದಲ್ಲಿ ಊರನಾರಾಯಣನೇ ಸರಿ, ನಮ್ಮೂರ ನಾರಾಯಣಸ್ವಾಮಿಯಂತೆ. ಅವನಂತೆ ಇವನಿಗೂ ಸ್ಥಳಪುರಾಣವಿದೆ, "ಹೊರಗಿನವ"ರಿಗೆ ಅದನ್ನು ಅರ್ಚಕರು ಹೇಳುತ್ತಾರೆ, ಈ ಪುರಾಣದ ಮಧ್ಯೆ ಕ್ವಚಿತ್ತಾಗಿ ಕುಮಾರವ್ಯಾಸನು ಇಲ್ಲಿ ಕಾವ್ಯ ಬರೆದನೆನ್ನುವ "ಪ್ರತೀತಿ"ಯೂ ಸುಳಿದು ಹೋಗುತ್ತದೆ. ಅದು ಬಿಟ್ಟರೆ "ಕುಮಾರವ್ಯಾಸನ ಕಂಬ" ಎಂಬ ಬೋರ್ಡು ಹೊತ್ತ ಒಂದು ಕಂಬ, ಹೊರಗೆ ಅಂಗಳದಲ್ಲಿ "ಕುಮಾರವ್ಯಾಸಮಂಟಪ" ಎಂಬ ಹೆಸರು ಹೊತ್ತ ಒಂದು ಮಂಟಪ, ಆಲಯದ ಒಳಬಾಗಿಲ ಮೇಲೆ "ಶ್ರೀ ವನಿತೆಯರಸನೆ..." ಪದ್ಯ ಮತ್ತು ಅದಕ್ಕಿಂತಲೂ ಮುಖ್ಯವಾಗಿ "ಸೇವೆ: ಕೆನರಾ ಬ್ಯಾಂಕ್" ಎಂಬ ಎಚ್ಚರಿಕೆಯನ್ನು ಹೊತ್ತ ಫಲಕ, ಇವಿಷ್ಟೇ ಕುಮಾರವ್ಯಾಸನ ಬಗ್ಗೆ "ಸ್ಥಳೀಯ" ನೆನಪು. ಊರಿನ ಧಾರ್ಮಿಕ ಕುಟುಂಬಗಳು ದಿನಕ್ಕೊಂದೋ ಎರಡೋ ಬಾರಿ ಗುಡಿಗೆ ಬಂದು ನಮಸ್ಕಾರ ಹಾಕಿದರೆ ಮುಗಿಯಿತು; ವರ್ಷಕ್ಕೊಂದೋ ಎರಡೋ ಜಾತ್ರೆ-ಉತ್ಸವ; ಇಷ್ಟು ಬಿಟ್ಟರೆ ಉಳಿದಂತೆ ಭಕ್ತರ ಗಲಾಟೆಯಿಲ್ಲದ ಪ್ರಶಾಂತಮೂರ್ತಿ ಇವ. ಅಜ್ಞಾತವೆನ್ನುವುದಕ್ಕಿಂತ ಅತಿ ಪರಿಚಯದ ಉಪೇಕ್ಷೆಯೆಂದರೆ ಹೆಚ್ಚು ಸೂಕ್ತ; ಬಹುಶಃ ಇದೇ ವಿವರಣೆ ನಾರಣಪ್ಪನಿಗೂ ಅನ್ವಯಿಸುತ್ತದೆ. ಇನ್ನು ಆಗೀಗ ಬರುವ "ಹೊರಗಿನವ"ರೆಂದರೆ ಕುಮಾರವ್ಯಾಸನ ಕಾವ್ಯವನ್ನು ಆನಂದಿಸಿ, ಅವನ ನೆನಪಿಗೆ ಒಂದು ಭಕ್ತಿಯ ಕಾಣಿಕೆ ಸಲ್ಲಿಸಬಯಸುವ ಒಂದಷ್ಟು ಸಾಹಿತ್ಯಾಸಕ್ತರು, ನನ್ನಂತೆ.

ನಾನು ದೇವಾಲಯಕ್ಕೆ ಬೇಗ ಬಂದಿದ್ದರಿಂದ ಬೆಳಗಿನ ಪೂಜಾಕೈಂಕರ್ಯಗಳನ್ನು ವೀಕ್ಷಿಸುವ ಅವಕಾಶವೊದಗಿತ್ತು. ನಿರಾಲಂಕೃತವಾದ ಶಂಖಚಕ್ರಗದಾಭಯ ಮೂರ್ತಿಯ ವಿಶ್ವರೂಪ ದೃಶ್ಯ ಮನೋಹರವಾಗಿತ್ತು. ಇದು ನಾನು ನೋಡಿದ ಬಹು "expressive"ಆದ ನಾರಾಯಣಮೂರ್ತಿಗಳಲ್ಲೊಂದು. ಕುಮಾರವ್ಯಾಸನ ಭಾರತದಲ್ಲಿಡೀ ನಮ್ಮ-ನಿಮ್ಮಂತೆ ನಡೆದಾಡುವ, ಮಾತಾಡುವ, ಕಪಟನಾಟಕದ ಸೂತ್ರ ಹಿಡಿದಾಡಿಸುವ, ಏನೂ ಅರಿಯದಂತೆ ನಸುನಗುವ "ಸಿರಿಮೊಗದ, ಕಿರುಬೆಮರ, ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ, ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ", ದೇವದೇವನಾದರೂ ಶ್ರೇಷ್ಠ ಮಾನವಭಾವಗಳನ್ನು ಪ್ರದರ್ಶಿಸುವ ಕೃಷ್ಣಮೂರ್ತಿಯ ಕಲ್ಪನೆಯ ಸೆಲೆ ನಸುನಗುವ ಈ ವೀರನಾರಾಯಣನೇ ಸರಿ.

ಭಾವದ ಸಂದರ್ಭದ ಉತ್ಕಟತೆಯನ್ನು ಕಟ್ಟಿಕೊಡುವುದರಲ್ಲಿ ಕುಮಾರವ್ಯಾಸನದು ಎತ್ತಿದ ಕೈ. ಅದರಲ್ಲೂ ಕೃಷ್ಣನ ಬರವನ್ನು ವರ್ಣಿಸುವ ಒಂದು ಅವಕಾಶವನ್ನೂ ಕವಿ ಕಳೆದುಕೊಳ್ಳುವುದೇ ಇಲ್ಲ. ಮಾತು ನಿರರ್ಗಳವಾಗುತ್ತದೆ. "ನಂದಗೋಪಕುಮಾರ ಗೋಪೀವೃಂದ ವಲ್ಲಭ ದೈತ್ಯ ಮಥನ ಮುಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧಿ" ಎಂದು ದ್ರೌಪದಿ ಮೊರೆಯಿಡುತ್ತಾಳೆ; "ಒಲಿದವರನುಜ್ಜೀವಿಸುವ ಬಗೆ ಬಲುಹು ಮುರಮಥನಂಗೆ"; ಮುಂದೆ ಸಂಧಾನಕ್ಕಾಗಿ ದೇವರ ದೇವ ದುರ್ಯೋಧನನ ಅರಮನೆಗೆ ಬರುವ ಪರಿ ನೋಡಿ "ದೇವಬಂದನು ತನ್ನ ನೆನೆವರ ಕಾವ ಬಂದನು ದೈತ್ಯಕುಲವನದಾವ ಬಂದನು ಭಾಗವತಜನ ಲೋಲುಪನು ಬಂದ, ಭಾವಿಸುವೊಡಘಹಾರಿ ಬಂದನು ಓವಿ ಬಂದರೆ ತನ್ನ ನೀಡುವ ದೇವ ಬಂದನು ವೀರ ನರಯಣ ಬಂದನರಮನೆಗೆ" ಎನ್ನುತ್ತಾನೆ.

ನಿರಾಲಂಕೃತವಾದ ಮೂರ್ತಿಗೆ ಶಂಖ ಚಕ್ರಗಳನ್ನೇರಿಸಿ, ಶುಭ್ರವಾದ ಬಿಳೀ ಪಂಚೆಯುಡಿಸಿ, ಸರಳವಾಗಿ ಸೇವಂತಿಗೆಯನ್ನೇರಿಸಿ ಅಲಂಕಾರವನ್ನು ಮುಗಿಸುವ ವೇಳೆಗೆ ಅಂದು ನಾನು ವಾಚನಮಾಡಬೇಕಾದ ಭಾಗ ಮನದಲ್ಲಿ ಮೂಡಿತ್ತು. ಬೆಳಗಿನ ಮಂಗಳಾರತಿಗಾಗಿ ಬಂದಿದ್ದ ನಾಲ್ಕೈದು ಜನ ಸ್ಥಳೀಯರು ಖಾಲಿಯಾದರು. ಹೊರಗಿನಿಂದ ಬಂದಿದ್ದ ಒಂದಿಬ್ಬರು ದರ್ಶನ ಮುಗಿಸಿಕೊಂಡು ದೇವಸ್ಥಾನದ ಹೊರ ಅಂಗಳಕ್ಕೆ ನಡೆದರು. ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವುದಿರಲಿ, ಜೋರಾಗಿ ಅರಚಿದರೂ ಯಾರೂ ಕೇಳುವವನಿರಲಿಲ್ಲ. ಗರ್ಭಗುಡಿಯ ಹೊರಪ್ರಾಂಗಣದಲ್ಲಿ ಕುಮಾರವ್ಯಾಸನು ಕುಳಿತು ಕಾವ್ಯ ರಚಿಸುತ್ತಿದ್ದನೆನ್ನಲಾದ ಕಂಬದೆಡೆ ನಡೆದೆ. ಅದೊಂದು ವಿಧದ ಹೆಸರಿಲ್ಲದ ಭಾವದಿಂದ ಮನಸ್ಸು ಉತ್ಕಂಠಿತವಾಗಿತ್ತು. ಕಂಬಕ್ಕೊರಗಿ ಕುಳಿತು, ಪುಸ್ತಕವನ್ನು ತೆರೆದಿಟ್ಟು ನನ್ನಷ್ಟಕ್ಕೆಂಬ ಕೆಳದನಿಯಲ್ಲಿ ಮಂಗಳಾಚರಣೆಯ ಭಾಗಗಳನ್ನು ಶುರುಮಾಡಿದೆ. "ಶ್ರೀ ವನಿತೆಯರಸನೆ..."; "ತಿಳಿಯಹೇಳುವೆ ಕೃಷ್ಣಕಥೆಯನು... "; "ಅರಸುಗಳಿಗಿದು ವೀರ..." ಗುಡಿಗೆ ಆಗೊಬ್ಬರು ಈಗೊಬ್ಬರು ಜನ ಬರುತ್ತಿದ್ದರು. ಕುತೂಹಲದಿಂದ ಈ ಕಡೆ ನೋಡಿದಾಗೆಲ್ಲಾ ಅದೊಂದು ರೀತಿಯ ಸ್ವಪ್ರಜ್ಞೆ ಜಾಗೃತವಾಗಿ ದನಿ ಕುಗ್ಗುವುದು. ಆಗೆಲ್ಲಾ ಐದಾರು ಶತಕಗಳ ಹಿಂದೆ, ಪ್ರಾಯಶಃ ಇದೇ ಜಾಗದಲ್ಲಿ ಕಾವ್ಯಾವೇಶಭರಿತನಾಗಿ ಮೈಮರೆತು ಹಾಡುತ್ತಿದ್ದ ಭಕ್ತ ಕವಿಯ ಚಿತ್ರ ಕಣ್ಮುಂದೆ ಬರುವುದು, ಮನಸ್ಸು ಮತ್ತೆ ಕಾವ್ಯದಲ್ಲಿ ಹೊಗುವುದು. ಅವತ್ತು ನಾನು ವಾಚಿಸಲು ಆಯ್ದುಕೊಂಡ ಭಾಗ ಉದ್ಯೋಗಪರ್ವದ ಎಂಟನೆಯ ಸಂಧಿ, ಸಂಧಾನಕ್ಕಾಗಿ ಹಸ್ತಿನಾವತಿಗೆ ಆಗಮಿಸುವ ಕೃಷ್ಣ ವಿದುರನ ಮನೆಗೆ ಬಂದ ಪ್ರಸಂಗ. ಪಯಣದ ಆಯಾಸದಿಂದ ನಸುವೇ ಬಾಡಿದ ಸಿರಿಮೊಗದ ಮೂರ್ತಿ; ಭಕ್ತ್ಯುದ್ರೇಕದಿಂದ ಮನೆಯನ್ನೇ ಮುರಿದೀಡಾಡುವ ವಿದುರ; ಅದರ ಹುಚ್ಚಾಟವನ್ನು ನೋಡಿ ನಸುನಗುತ್ತಾ "ಹಸಿದು ನಾವೈತಂದರೀ ಪರಿ ಮಸಗಿ ಕುಣಿದಾಡಿದೊಡೆ ಮೇಣೀ ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೇ? ವಸುಮತಿಯ ವಲ್ಲಭರು ಮಿಗೆ ಪ್ರಾರ್ಥಿಸಿದೊಡೊಲ್ಲದೆ ಬಂದೆವೈ, ನಾಚಿಸದಿರೈ ಬಾ ವಿದುರ" ಎಂದು ಅವನನ್ನು ಸಂತೈಸಿ ಒಳಗೆ ಕರೆದೊಯ್ಯುವ ಕೃಷ್ಣ. ವಾಚನದ ಕೊನೆಗೆ "ವೇದಪಾರಾಯಣದ ಫಲ..." ಹಾಡಿ ಕೈ ಮುಗಿಯುವಹೊತ್ತಿಗೆ ಸಂಪೂರ್ಣ ತಾದಾತ್ಮ್ಯ ಲಭಿಸಿತ್ತು. ಬಹುದಿನದ ಕನಸು ನನಸಾಗಿತ್ತು. ಗುಡಿಗೆ ಬಂದವರು ಹಾಗೇ ಆಲಿಸುತ್ತಾ ಕುಳಿತ ಒಂದಿಬ್ಬರು "ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು" ಒಳನಿಂತಿದ್ದ ಕವಿ ವೀರನಾರಾಯಣನಿಗೆ ನಮಿಸಿ ತೆರಳಿದರು. ನಾನು "ಲಿಪಿಕಾರ ಕುವರವ್ಯಾಸ"ನ ಪುಣ್ಯಸ್ಮೃತಿಯೊಂದಿಗೆ ಊರ ದಾರಿ ಹಿಡಿದೆ.

ಅಡಿಟಿಪ್ಪಣಿ:
ಊರಿಗೆ ಪಯಣಿಸುತ್ತಾ ಮನಸ್ಸಿನಲ್ಲಿ ಮೂಡಿದ ಯೋಚನೆ ಇದು. ಇಡೀ ಕುಮಾರವ್ಯಾಸಭಾರತವನ್ನು ಧ್ವನಿರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವೇ? ಊರಿಗೆ ಬಂದಮೇಲೆ ಗೆಳೆಯ ಶ್ರೀಕಾಂತರೊಡನೆ ಚರ್ಚಿಸುತ್ತಿದ್ದಾಗ ಅವರಿಂದ ಅದಕ್ಕೆ ಪೂರಕವಾಗಿ ಅದಕ್ಕೂ ಪ್ರಾಥಮಿಕವಾಗಬಹುದಾದ ಮತ್ತೊಂದು ಯೋಚನೆಯೂ ಬಂತು, ಕುಮಾರವ್ಯಾಸಭಾರತವನ್ನು ಎಲೆಕ್ಟ್ರಾನಿಕ್ ಪುಸ್ತಕವಾಗಿ ಸಂಗ್ರಹಿಸಬಾರದೇಕೆ? ಅಂತರ್ಜಾಲದಲ್ಲೆಲ್ಲೂ ಗದುಗಿನ ಭಾರತ e-book ಇರುವಂತೆ ಕಾಣಲಿಲ್ಲ. ಎರಡೂ ಯೋಜನೆಗಳು ಕಷ್ಟಸಾಧ್ಯವಾದರೂ ಇದ್ದುದರಲ್ಲಿ ಮೊದಲನೆಯ ಯೋಜನೆಗಿಂತಲೂ ಎರಡನೆಯ ಯೋಜನೆ ಸುಲಭವೆಂದು ಕಂಡಿತು. ಆದ್ದರಿಂದ ಪ್ರಾರಂಭಿಕವಾಗಿ ಎಲೆಕ್ಟ್ರಾನಿಕ್ ಪುಸ್ತಕದ ಯೋಜನೆಯನ್ನು ಕೈಗೊಳ್ಳುವುದೆಂದೂ, ಅದರ ಯಶಸ್ಸನ್ನು ಅವಲಂಬಿಸಿ ಧ್ವನಿರೂಪದ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದೆಂದೂ ತೀರ್ಮಾನಿಸಿದೆವು. ಮುಂದುವರೆದು, ಇಡೀ ಕಾರ್ಯ ನಮ್ಮಿಬ್ಬರಿಂದಲೇ ಆಗುವುದಲ್ಲವೆಂದೂ, ನಮ್ಮಿಬ್ಬರದೇ ಆಗಿ ಉಳಿಯಬಾರದೆಂದೂ ಅರಿತೆವು. ಜನಪ್ರಿಯವಾದ ಗದುಗಿನ ಭಾರತದ ಇ-ಆವೃತ್ತಿ ಬಹು ಜನರ ಪ್ರಯತ್ನದಿಂದಲೇ ಸಾಕಾರಗೊಳ್ಳುವುದು ಸಾಧುವೆಂದು ನಮ್ಮ ಅನಿಸಿಕೆ. ಸ್ಥೂಲವಾಗಿ ಎರಡು ಹಂತಗಳ ಯೋಜನೆ ಹೀಗೆ:

೧. ಇ-ಪುಸ್ತಕ: ಸುಮಾರು ೬೦೦ ಪುಟಗಳ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಒಬ್ಬರು ಒಂದೊಂದು ಪರ್ವವನ್ನು ವಹಿಸಿಕೊಂಡರೂ, ದಿನಕ್ಕೊಂದು ಪುಟದಂತೆ ಟೈಪು ಮಾಡಿದರೂ ಹತ್ತು ಜನ ಇದನ್ನು ಎರಡು ತಿಂಗಳಲ್ಲಿ ಮುಗಿಸಬಲ್ಲರೆಂದು ಅಂದಾಜು. ಇವೆಲ್ಲವನ್ನೂ ಒಂದು ಕಡೆ ಕಲೆಹಾಕಿ, ಕರಡು ತಿದ್ದಿ ಕ್ರಮಪಡಿಸಿದರೆ ಇ-ಪುಸ್ತಕವನ್ನು ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುವಂತೆ ಪ್ರಕಟಿಸಬಹುದು. ಸಲಕರಣೆಗಾಗಿ ನಮಗೆ ಬೇಕಾದ್ದೆಲ್ಲಾ ಒಂದು unicode ತಂತ್ರಾಂಶ (ಬರಹ ಇತ್ಯಾದಿ), ಗದುಗಿನ ಭಾರತದ ಪ್ರತಿ, ಬರೆಯಲು ಸಮಯ ಮತ್ತು ಉತ್ಸಾಹ. ಈ ಉದ್ದೇಶಕ್ಕಾಗಿ ಬ್ಲಾಗೊಂದನ್ನು ಸಿದ್ಧಪಡಿಸಿದ್ದೇವೆ http://gaduginabharata.blogspot.com/. ಸಧ್ಯಕ್ಕೆ ಶ್ರೀಕಾಂತ್ ಆದಿಪರ್ವವನ್ನೂ ನಾನು ಸಭಾಪರ್ವವನ್ನೂ ಕೈಗೆತ್ತಿಕೊಂಡಿದ್ದೇವೆ. ಉತ್ಸಾಹಿಗಳು ಉಳಿದ ಪರ್ವಗಳನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಲ್ಲಿ ಬ್ಲಾಗಿನ authorship ಪಡೆಯಲು ಸ್ವಾಗತ.

೨. ದ್ವನಿರೂಪದ ಸಂಗ್ರಹ: ಇದು ಮೂಲತಃ ಕಾವ್ಯವಾಚನದ ಯೋಜನೆ, ಆದರೆ ಸಿ.ಡಿ. ಹೊರತರುವುದೋ, ಭಾಗಶಃ ವಾಚನ-ವ್ಯಾಖ್ಯಾನವೋ ಅಲ್ಲ. ಮೇಲೆ ಹೇಳಿದ ಇ-ಪುಸ್ತಕದಂತೆಯೇ ಇದು ಧ್ವನಿ ಪುಸ್ತಕ. ಮೇಲಿನಂತೆಯೇ ಒಂದಷ್ಟು ಜನ ಉತ್ಸಾಹಿ ಗಮಕಿಗಳ ಗುಂಪು ಭಾರತದ ಒಂದೊಂದು ಭಾಗವನ್ನು ಹಾಡಿ ಧ್ವನಿಮುದ್ರಿಸಿ ಒಂದು ಕಡೆ ಕಲೆಹಾಕುತ್ತಾ ಹೋಗುವುದು. ಮುಂದೆ ಅವೆಲ್ಲವನ್ನೂ ಪರಿಷ್ಕರಿಸಿ ಕರ್ಣಾಟಭಾರತ ಕಥಾಮಂಜರಿ ಧ್ವನಿ ಅವತರಣಿಕೆ ಹೊರತರಲು ಸಾಧ್ಯ. ಇದೂ ಇ-ಪುಸ್ತಕದಂತೆಯೇ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರಬೇಕೆಂದು ಆಶಯ. ಆದರೆ ಇದಕ್ಕೆ ಮೇಲಿನದಕ್ಕಿಂತ ಹೆಚ್ಚು ಜನ ಬೇಕಾಗುತ್ತದೆ ಎನ್ನುವುದಂತೂ ನಿಜ. ಆದರೆ ಭಾಗವಹಿಸುವವರು ಉತ್ತಮ ಸಂಗೀತಗಾರರೋ, ವೃತ್ತಿಪರ ಗಮಕಿಗಳೋ ಆಗಿರಬೇಕೆಂದೇನೂ ಇಲ್ಲ. ಕಾವ್ಯವನ್ನು ಆಸ್ವಾದಿಸುವ, ಅದನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿ ಪ್ರಸ್ತುತಪಡಿಸುವ, ಆ ಕ್ರಿಯೆಯನ್ನು ಆನಂದಿಸುವ ಮನಸ್ಸುಳ್ಳವರಾದರೆ ಸಾಕು. ಮತ್ತು ಸಲಕರಣೆಯಾಗಿ ನಮಗೆ ಬೇಕಾದ್ದೆಲ್ಲಾ ಗದುಗಿನ ಭಾರತದ ಪ್ರತಿ, ಒಂದು audacity ತಂತ್ರಾಂಶ (ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತದೆ), ಒಂದು ಶ್ರುತಿಪೆಟ್ಟಿಗೆ/ತಂಬೂರಿ, ಗೊತ್ತುಪಡಿಸಿದ ಒಂದು ಸಾಮಾನ್ಯ ಶ್ರುತಿ, ಧ್ವನಿಮುದ್ರಿಸಲು ಪ್ರಶಾಂತವಾದ ಸ್ಥಳ, ಎಲ್ಲವನ್ನು ಕಲೆಹಾಕಲು ಒಂದು rapid share ಅಥವ ಅಂಥದ್ದೊಂದು ಖಾತೆ. ಈ ಯೋಜನೆ ಇನ್ನೂ ಆಲೋಚನೆಯ ಹಂತದಲ್ಲಿದೆ. ಸಲಹೆ ಸೂಚನೆಯನ್ನೂ ಒಳಗೊಂಡು ಎಲ್ಲಾ ವಿಧದ ಭಾಗವಹಿಸುವಿಕೆಗೆ ಸ್ವಾಗತ.