Monday, January 8, 2018

ತಲೆಯ ಕಾಡುವ Hellಮೆಟ್

ಇದ್ದಕ್ಕಿದ್ದ ಹಾಗೆ ನಮ್ಮ ಸರ್ಕಾರ ಮತ್ತು ಇಡೀ ಕಾನೂನು ವ್ಯವಸ್ಥೆಗೆ ಬಹುದೊಡ್ಡ ಮಾನವೀಯ ಬಿಕ್ಕಟ್ಟು ಎದುರಾಗಿಬಿಟ್ಟಿದೆ. ಈ ರಾಮರಾಜ್ಯದ ಜನ ಇದ್ದಕ್ಕಿದ್ದ ಹಾಗೆ ಬದುಕುವ ಆಸೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಹೆಂಗಸರು ಗಂಡಸರು ಮಕ್ಕಳೆನ್ನದೇ (ಕೆಲವೊಮ್ಮೆ ಸಂಸಾರ ಸಮೇತ) ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸಿಬಿಟ್ಟಿದ್ದಾರೆ! ರಾಜ್ಯಸರ್ಕಾರವು ಸಾಲುಸಾಲಾಗಿ ಕೊಡಮಾಡುತ್ತಿರುವ ’ಭಾಗ್ಯ’ಗಳು, ಕೇಂದ್ರಸರ್ಕಾರವು ಇನ್ನಿಲ್ಲದಂತೆ ಸಾಲುಸಾಲಾಗಿ ಊಡುತ್ತಿರುವ ’ಅಚ್ಛೇದಿನ್’ಗಳು ಇವಾವುವೂ ಈ ಜನರಲ್ಲಿ ಜೀವಿಸುವ ಬಯಕೆಯನ್ನು ಕೊನರಿಸಲು ಸಹಾಯ ಮಾಡುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಈ ಜನ ಅನುಸರಿಸುತ್ತಿರುವ ವಿಧಾನವೂ ಘೋರವಾದರೂ ಸರಳವಾಗಿದೆ. ಏನಿಲ್ಲ, ಬೈಕ್ ತೆಗೆದುಕೊಂಡು ರೋಡಿಗಿಳಿಯುವುದು, ಅಡ್ಡಾದಿಡ್ಡಿ ಓಡುತ್ತಿರುವ ಬಸ್ಸು ಲಾರಿ ಕಾರು ಬೈಕು, ಎಲ್ಲೆಂದರಲ್ಲಿ ನಿಲ್ಲಿಸಿರುವ ಲಾರಿ ಕೊನೆಗೆ ತನ್ನಷ್ಟಕ್ಕೆ ತಾನಿರುವ ರಸ್ತೆವಿಭಾಜಕಗಳು ಹೀಗೆ ಸಿಕ್ಕಸಿಕ್ಕಿದ್ದಕ್ಕೆ ಡಿಕ್ಕಿಹೊಡೆದುಕೊಂಡು ತಲೆಯೊಡೆದು ಸಾಯುವುದು.  

ಮೊದಲೇ ಹೇಳಿದಂತೆ ಸರ್ಕಾರದ ಯೋಜನೆಗಳಾಗಲೀ, ಜನರನ್ನು ಮನವೊಲಿಸುವ ಪ್ರಯತ್ನವಾಗಲೀ ಯಾವುದೂ ಈ ಆತ್ಮಹತ್ಯೆಯ ಸಾಮೂಹಿಕ ಹುಚ್ಚನ್ನು ತಡೆಗಟ್ಟುವಲ್ಲಿ ಸಫಲವಾಗಿಲ್ಲ. ಇದನ್ನು ವಿಫಲಗೊಳಿಸಲು ಸರ್ಕಾರ ತನ್ನ ಕೈಲಿದ್ದುದನ್ನೆಲ್ಲಾ ಮಾಡಿದೆ - ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿಸಿದೆ, ಕಾಮಗಾರಿಯ ಹೆಸರಿನಲ್ಲಿ ಸಿಕ್ಕಸಿಕ್ಕಂತೆ ರಸ್ತೆಯನ್ನು ಅಗೆದು ಕೈಬಿಡುತ್ತಿದ್ದ ನಗರಪಾಲಿಕೆ ಅಧಿಕಾರಿಗಳನ್ನು ಉಗಿದು ಸರಿದಾರಿಗೆ ತಂದಿದೆ, ಅವೈಜ್ಞಾನಿಕ ರಸ್ತೆ ತಡೆಗಳನ್ನು ತೆರವುಗೊಳಿಸಿದೆ, ಇರುವ ರಸ್ತೆ ತಡೆಗಳಿಗೆ ಸ್ಪಷ್ಟವಾಗಿ ಕಾಣುವಂತೆ ಬಣ್ಣಗಳನ್ನು ಹಚ್ಚಿದೆ, ಈಗ ರಸ್ತೆಗಳಂತೂ ಹೇಮಮಾಲಿನಿಯ ಕೆನ್ನೆಯೂ ನಾಚಿ ಕೆಂಪಾಗಬೇಕು ಅಷ್ಟು ನುಣುಪಾಗಿವೆ.  ಈ ಸೌಂದರ್ಯವು ಎದ್ದು ಕಾಣುವಂತೆ ರಸ್ತೆಯುದ್ದಕ್ಕೂ ಸಾಲುದೀಪಗಳನ್ನು ನೆಡಿಸಿ, ಅವು ಹಗಲಿರುಳೂ ಜಗಮಗಿಸುವಂತೆಯೂ ನೋಡಿಕೊಂಡಿದೆ (ಕೇಂದ್ರಸರ್ಕಾರವಂತೂ ಬೈಕುಗಳು ಹಗಲುಹೊತ್ತೂ ದೀಪವುರಿಸಿಕೊಂಡು ಓಡಾಡಬೇಕೆಂಬ ಕಾನೂನನ್ನೇ ಮಾಡಿದೆ!)

ಇನ್ನು ಇತರರ ಜೀವಕ್ಕೆ ಸಂಚಕಾರ ತರುವಂತೆ ರಾಂಗ್ ಸೈಡಿನಲ್ಲಿ ಬರುವವರನ್ನು, ಮೊಬೈಲಿನಲ್ಲಿ ಮಾತಾಡುತ್ತಾ ಅಡ್ಡಾದಿಡ್ಡಿ ಗಾಡಿ ಓಡಿಸುವವರನ್ನು, ರಸ್ತೆಯ ಆ ಬದಿಯಿಂದ ಈ ಬದಿಗೆ ಜ಼ಿಗ್ ಜ಼ಾಗ್ ಮಾದರಿಯಲ್ಲಿ ಓಡಿಸುತ್ತಾ ಹಲವು ಜೀವಗಳಿಗೆ ಸಂಚಕಾರ ತರುವ ಪಡ್ಡೆಹುಡುಗರನ್ನು, ವೀಲಿಂಗ್ ಮಾಡುವವರನ್ನು, ಲೈಸೆನ್ಸ್ ಇಲ್ಲದೇ ಗಾಡಿ ಓಡಿಸುವ ಎಳೆ ಹುಡುಗರನ್ನು, ಅವರಿಗೆ ಗಾಡಿ ಕೊಡುವ ಅಪ್ಪ ಅಮ್ಮಂದಿರನ್ನು, ಕುಡಿದು ಗಾಡಿ ಓಡಿಸುವವರನ್ನು, ಸಿಗ್ನಲ್ ಜಂಪ್ ಮಾಡುವವರನ್ನು, ರಬ್ಬರುಬ್ಬನೆ ಫುಟ್ ಪಾತಿನ ಮೇಲೆ, ಜನದ ಮೇಲೆ, ಕೊನೆಗೆ ಸುಮ್ಮನೆ ನಿಲ್ದಾಣದಲ್ಲಿ ನಿಂತು ಬಸ್ಸಿಗಾಗಿ ಕಾಯುವವರ ಮೇಲೆ ಅಡ್ಡಾದಿಡ್ಡಿ ಬಸ್ಸು ನುಗ್ಗಿಸಿ ಜನರನ್ನು ಕೊಲ್ಲುತ್ತಿದ್ದ ಸಿಟಿ ಬಸ್ ಚಾಲಕರನ್ನು ಸರಿಯಾಗಿ ಕುಂಡೆಯ ಮೇಲೆ ಒದ್ದು ಒಳಹಾಕಲಾಗಿದೆ, ಅವರೆಲ್ಲಾ ತಮ್ಮ ತಪ್ಪಿಗೆ ಈಗ ಪರಿತಪಿಸುತ್ತಾ ಕಂಬಿಯ ಹಿಂದೆ ಇದ್ದಾರೆ.

ಸರ್ಕಾರವು ಇಷ್ಟೆಲ್ಲಾ ಪ್ರಾಮಾಣಿಕ ಕ್ರಮಗಳನ್ನು ಕೈಗೊಂಡರೂ ಅಪಘಾತರೂಪದ ಆತ್ಮಹತ್ಯೆಗಳನ್ನು ಮಾತ್ರ ತಡೆಗಟ್ಟಲಾಗದಿರುವುದು ಸರ್ಕಾರಗಳನ್ನು ತೀವ್ರ ಕಳವಳಕ್ಕೀಡುಮಾಡಿದೆ. ಜೊತೆಗೆ ಇದು ಪೂರ್ವನಿರ್ಧರಿತ ಆತ್ಮಹತ್ಯೆಯಾದ್ದರಿಂದ ಕೈಯೋ ಕಾಲೋ ಮುರಿದುಕೊಂಡು ಜೀವನಪೂರ್ತಿ ನರಳುವ ಅಪಾಯವಿಲ್ಲವೇ ಇಲ್ಲ, ಏಕ್ ದಂ ಡಿಕ್ಕಿ ಹೊಡೆಯುವುದು, ತಲೆಯೊಡೆದು ಪಟ್ಟಂತ ಅಲ್ಲೇ ಸತ್ತುಹೋಗುವುದು ಈ ಜನಗಳ ಉದ್ದೇಶವೆಂಬುದು ಹಲವು ಅಧ್ಯಯನಗಳಿಂದ ಸ್ಪಷ್ಟವಾಗಿದೆಯಂತೆ. ಹೀಗಾಗಿ ಪರಿಸ್ಥಿತಿಯ ಗಂಭೀರತೆಯನ್ನರಿತ ಹೆಲ್ಮೆಟ್ ತಯಾರಕರೂ ಸರ್ಕಾರದ ಪ್ರಯತ್ನದ ಜೊತೆ ಕೈ ಜೋಡಿಸಿ, ಐ ಎಸ್ ಐ ಮಾರ್ಕಿನ ಹೆಲ್ಮೆಟ್ಟುಗಳನ್ನು ಮೊಪೆಡಿನಲ್ಲಿ ಸೊಪ್ಪು ತರಕಾರಿ ಮಾರುವವರೂ ಖರೀದಿಸಲು ಅನುಕೂಲವಾಗುವಷ್ಟು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದಾರೆ (ದರ ಕೇವಲ ಎರಡು ಸಾವಿರ - ಜೀವಕ್ಕಿಂತ ಎರಡು ಸಾವಿರ ಹೆಚ್ಚೇ ಹೇಳಿ). ಜುಜುಬಿ ಒಂದು ವಾರದ ಸೊಪ್ಪಿನ ಹಣ! ಹೀಗೆ ಸೊಪ್ಪಿನ ಮೇಲೆ ದುಡ್ಡು ಸುರಿಯುವ ಬದಲು ಅದೇ ಬೆಲೆಗೆ ಹೆಲ್ಮೆಟ್ಟು ಕೊಂಡು ಜೀವ ಉಳಿಸಿಕೊಳ್ಳದ ಮೂರ್ಖ ಸೊಪ್ಪಿನ ವ್ಯಾಪಾರಿಗಳು, ಜೀವಕ್ಕಿಂತಾ ಸೊಪ್ಪು ವ್ಯಾಪಾರವೇ ಹೆಚ್ಚೆಂದು ಬಗೆದು, ಇರುವ ದುಡ್ಡಿನಲ್ಲಿ ಸೊಪ್ಪು ಕೊಂಡು ಹೆಲ್ಮೆಟ್ಟಿಲ್ಲದೇ ರಾಜಾರೋಷವಾಗಿ ಮಾರಿಕೊಂಡು ಹೋಗುತ್ತಿದ್ದಾರೆ - ಜೀವನಕ್ಕಾಗಿ ಹೋರಾಡಿ ಜೀವ ಬಿಡುವ ಹುನ್ನಾರ ಅವರದ್ದು.

ಎಲ್ಲೆಡೆಯೂ ಹೀಗೆ ಹೆಲ್ಮೆಟ್ ಜಾಗೃತಿ ಮೂಡಿ ತಾಂಡವವಾಡುತ್ತಿದ್ದರೆ, ಕೆಲವು ವಿಘ್ನಸಂತೋಷಿಗಳು ಮಾತ್ರ "ಅವರವರ ಜೀವ ಅವರವರ ಕಾಳಜಿ, ಸರ್ಕಾರ ಇದರಲ್ಲಿ ಮೂಗು ತೂರಿಸಬೇಕೇಕೆ" ಎಂಬ ಅಸಂಬದ್ಧ ವಾದಗಳನ್ನು ಹೂಡುತ್ತಾ, ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸಿ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.

ಹೀಗಾದರೆ ಬಡ ಹೆಲ್ಮೆಟ್ ಕಂಪನಿಗಳು ತಾನೆ ಏನು ಮಾಡಬೇಕು? ಅವರ ಸಾಮಾಜಿಕ ಕಳಕಳಿಗೆ ಇನಿತೂ ಮನ್ನಣೆ ಬೇಡವೇ? ಅದಕ್ಕಾಗಿಯೇ ಈ ಬಗ್ಗೆ ಸರ್ಕಾರಕ್ಕೆ ಸೂಟ್ ಕೇಸ್ ಗಟ್ಟಲೇ ಮನವಿಪತ್ರಗಳನ್ನು ಸಲ್ಲಿಸಿವೆ. ಕೊನೆಗೂ ಇದಕ್ಕೆ ಓಗೊಟ್ಟ ಸರ್ಕಾರ, ಅನಿವಾರ್ಯವಾಗಿ ಹೆಲ್ಮೆಟ್ ಕಡ್ಡಾಯವನ್ನು (ಐ ಎಸ್ ಐ ಮಾರ್ಕಿನ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.

ಸರ್ಕಾರದ ಈ ಕಳಕಳಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡ ಪೋಲೀಸರೂ ತಮ್ಮ ಉಳಿದೆಲ್ಲ ಕೆಲಸಗಳನ್ನೂ ಬಿಟ್ಟು (ಉದಾಹರಣೆಗೆ ಮೇಲೆ ತೋರಿಸಿದ ಇತರ ಟ್ರಾಫಿಕ್ ಅಪರಾಧಿಗಳನ್ನು ಹಿಡಿಯುವುದನ್ನೂ ಬಿಟ್ಟು), ಹೆಲ್ಮೆಟ್ ಇಲ್ಲದೇ ಡಿಕ್ಕಿ ಹೊಡೆದು ತಲೆಯೊಡೆದು ಸಾಯಲು ಯತ್ನಿಸುವ ಈ ಆತ್ಮಹತ್ಯಾ ದಳವನ್ನು ಅಟ್ಟಾಡಿಸಿಕೊಂಡಾದರೂ ಹಿಡಿಯುವಲ್ಲಿ ಕರ್ತವ್ಯಪರಾಯಣರಾಗಿದ್ದಾರೆ. ಈ ಆತ್ಮಹತ್ಯೆಬಾಕರು (ವೈಯಾಕರಣರು ಮನ್ನಿಸಬೇಕು, ಇದು ತಲೆ ಹೋಗುವ ವಿಷಯ), ಪೋಲೀಸರ ಕಣ್ಣಿಗೆ ಮಣ್ಣೆರಚಿ ತಮ್ಮ ಉದ್ದೇಶ ಸಫಲಗೊಳಿಸಿಕೊಳ್ಳಲೋಸುಗ ಐ ಎಸ್ ಐ ಮಾರ್ಕಿಲ್ಲದ, ಬರೀ ನಡುನೆತ್ತಿಯನ್ನು ಮಾತ್ರ ಮುಚ್ಚುವ, ಪೋಲೀಸರು ಕಾಣುತ್ತಿದ್ದಂತೆ ಲಬಕ್ಕನೇ ಹಾಕಿಕೊಳ್ಳಲು ಅನುಕೂಲಕರವಾದ ಅರೆ-ಹೆಲ್ಮೆಟ್ಟುಗಳನ್ನು ಹಾಕಿಕೊಂಡು ಗಾಡಿ ಓಡಿಸುತ್ತಿರುವುದು ಗಮನಕ್ಕೆ ಬಂದಿದೆ. ಕಾನೂನಿನ ಕೈಗೆ ಸಿಕ್ಕದೇ ತಾವೇ ಸಾಯಹೊರಟ ಈ ಕಾನೂನು ದ್ರೋಹಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಪೋಲೀಸರು ತಮ್ಮ ನಿಯಮಗಳನ್ನು ಬಿಗಿಗೊಳಿಸಿ ಇಂಥಾ ಹೆಲ್ಮೆಟ್ಟುಗಳು ಕಂಡಲ್ಲಿ ಕಸಿದುಕೊಂಡು ನಾಶಪಡಿಸಲು ಆರಂಭಿಸಿದ್ದಾರೆ.

ಇದಕ್ಕೆ ಸಾಕಷ್ಟು ಪ್ರತಿರೋಧವೊಡ್ಡಿರುವ ಕೆಲವು ಆತ್ಮಹತ್ಯಾದಳದ ಸದಸ್ಯರಂತೂ ರಸ್ತೆಯಲ್ಲಿ ಇನ್ನಾರಾದರೂ ಹೆಲ್ಮೆಟ್ ಇಲ್ಲದೇ ಹೋಗುತ್ತಿರುವುದು ಕಂಡರೆ ಸಾಕು "ಎಲ್ಮೆಟ್ಟಿಡೀತವ್ರೆ" ಎಂದು ಕೂಗಿಯೋ, ತಲೆಯನ್ನು ತೋರಿಸಿ ಸಂಜ್ಞೆ ಮಾಡಿಯೋ ತಮ್ಮ ರೋಡ್ ಮೇಟುಗಳನ್ನು, ಹೆಲ್ಮೆಟ್ಟಿಲ್ಲದ ಅಣ್ತಮ್ಮಂದಿರನ್ನು ಅಕ್ತಂಗಿಯರನ್ನು ಪೋಲೀಸರ ಕಾಯುವ ಕೈಗಳಿಂದ ರಕ್ಷಿಸಿಬಿಡುತ್ತಿದ್ದಾರೆ. Abetment of crime is crime in itself ಎಂಬ ಮಾತಿನಂತೆ, ಹೀಗೆ "ಹೆಲ್ಮೆಟ್ ಎಚ್ಚರ" ಕೂಗುವವರು ಹೆಲ್ಮೆಟ್ ಧರಿಸಿದ್ದರೂ ಧರಿಸಿಲ್ಲದಂತೆ ಎಂದು ಪರಿಗಣಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

ಇನ್ನು ಈ ವಿಷಯದಲ್ಲಿ ನಡೆದ ಸರ್ಕಾರೀ ಸಂಶೋಧನೆಯಿಂದ ಒಂದು ಅತ್ಯಾಶ್ಚರ್ಯಕರವಾದ ವಿಷಯ ತಿಳಿದುಬಂದಿದೆ. ಅದೇನೆಂದರೆ, ಸಿಕ್ಖರು ಧರಿಸುವ ಬಟ್ಟೆಯ ಶಿರಸ್ತ್ರಾಣ (ಟರ್ಬನ್) ಐ ಎಸ್ ಐ ಮಾರ್ಕಿನ ಹೆಲ್ಮೆಟ್ಟಿನಷ್ಟೇ ಬಲಿಷ್ಟವಾದದ್ದೆಂಬುದು! ಏಕೆಂದರೆ ಟರ್ಬನ್ ಧರಿಸಿ ಬೈಕ್ ಓಡಿಸುವ ಸಿಕ್ಖರಿಗೆ ಐಎಸ್ಐ ಹೆಲ್ಮೆಟ್ ನಿಯಮದಿಂದ ವಿನಾಯಿತಿಯಿದೆ. ಎಲ್ಲರ ತಲೆ ಕಾಯುವ ಸರ್ಕಾರ ಸಿಕ್ಖರನ್ನು ಮಾತ್ರ ತಲೆಯೊಡೆದು ಸಾಯಲು ಬಿಡುತ್ತದೆಂದು ಭಾವಿಸುವುದು ಸರ್ವಥಾ ತಪ್ಪು. ಆದ್ದರಿದ ಟರ್ಬನ್ನಿಗೆ ಐಎಸ್ಐ ಹೆಲ್ಮೆಟ್ಟಿನಷ್ಟೇ ತಾಖತ್ತಿದೆ ಎಂಬುದು ದೃಢಪಟ್ಟಂತಾಯಿತಲ್ಲವೇ? ಇದೇ ತಾಖತ್ತು ನೀರ್ದೋಸೆ ಟೋಪಿಗಳಲ್ಲೂ ಇದೆಯೇ ಎಂಬ ಸಂಶೋಧನೆಗಳು ನಡೆಯುತ್ತಿವೆ. ಅದೇನಾದರೂ ದೃಢಪಟ್ಟರೆ ಹೆಲ್ಮೆಟ್ಟಿನ ಬದಲು ಎಲ್ಲರೂ ಹಗುರವಾದ ಸುಂದರವಾದ ನೀರ್ದೋಸೆ ಟೋಪಿಗಳನ್ನೇ ಬಳಸಬಹುದೇನೋ.  ಜೊತೆಗೆ ಇದರಲ್ಲೂ ಮೀಸಲಾತಿ ವಿನಾಯಿತಿಗಳನ್ನು ನೀಡಿದರೆ ಸಾಮಾಜಿಕನ್ಯಾಯವನ್ನೂ ಸಾಧಿಸಿದಂತಾಗುತ್ತದೆ.

ಅದೇನೇ ಇರಲಿ, ಒಟ್ಟಾರೆ ಪ್ರಜಾಹಿತದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ಕಟ್ಟುನಿಟ್ಟಿನ ಕ್ರಮದಿಂದ ಹಲವರಿಗೆ ಸಂಪದ್ವೃದ್ಧಿಯೂ ಕೆಲವರಿಗೆ ಆಯುಷ್ಯಲಾಭವೂ ಮತ್ತು ಹಿಡಿಯಲು ಕೇಸುಗಳೇ ಇಲ್ಲದೇ ಖಾಲಿ ಹೊಡೆಯುತ್ತಿದ್ದ ಪೋಲೀಸರ ಕೈ ತುಂಬಾ ಕೆಲಸವೂ ಸಿಕ್ಕು ಎಲ್ಲೆಡೆಯೂ ಸಂತಸ ತಾಂಡವವಾಡುತ್ತಿದೆ. ಇನ್ನು ಈ ಆತ್ಮಹತ್ಯೆಯ ಹುಚ್ಚರು ಬೇರೆ ದಾರಿಯೇ ಇಲ್ಲದೇ, ಫಾರ್ಮುಲಾ ಒನ್ ರೇಸಿಗೆ ಹೊರಡುವ ಆಟಗಾರರ ರೀತಿ ಕವಚಕುಂಡಲಧಾರಿಗಳಾಗಿ ಮನೆ ಬಿಡಬೇಕಾದ ಪರಿಸ್ಥಿತಿ ಬಂದಿದೆ.

ಹಾಗೆಂದು ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತಿಲ್ಲ - ಏಕೆಂದರೆ ಈ ಹುಚ್ಚರು ಹೆಲ್ಮೆಟ್ ಧರಿಸಿ ಓಡಾಡುತ್ತಿರುವುದು ಕಾನೂನಿಗಂಜಿಯೇ ಹೊರತು ತಮ್ಮ ಜೀವದ ಮೇಲಿನ ಪ್ರೀತಿಯಿಂದಲ್ಲ - ಆತ್ಮಹತ್ಯೆಯ ಭೂತ ತಲೆಯನ್ನೊಮ್ಮೆ ಹೊಕ್ಕಿತೆಂದರೆ ಅದು ಒಂದಲ್ಲಾ ಒಂದು ವಿಧಾನಗಳನ್ನು ಕಂಡುಹಿಡಿಯುತ್ತಿರುತ್ತದೆ - ಉದಾಹರಣೆಗೆ, ಬೈಕಿನ ಮೇಲೆ ಹೋದರೆ ತಾನೆ ಹೆಲ್ಮೆಟ್ಟಿನ ಕಾಟ, ನಡೆದೇ ಹೋಗುವುದು (ಹೋಗಿ ಯಾವುದಕ್ಕಾದರೂ ಡಿಕ್ಕಿ ಹೊಡೆಯುವುದು) ಎಂದು ಈ ಜನ ಯೋಚಿಸಲಾರರೇ? ಆದ್ದರಿಂದ ಸರ್ಕಾರವೇ ಮುಂಜಾಗರೂಕವಾಗಿ "ರಸ್ತೆಯಲ್ಲಿ ನಡೆಯಬೇಕಾದರೆ ಹೆಲ್ಮೆಟ್ (ಐ ಎಸ್ ಐ ಮಾರ್ಕಿನ) ಕಡ್ಡಾಯ ಎಂದು ಕಾನೂನು ಮಾಡಿಬಿಡಬೇಕು (ಇದನ್ನು ಯಾರಾದರೂ ಮೀರಿದರೆ, ಅವರಿಂದ ಕಿತ್ತುಕೊಳ್ಳಲು ಅನುಕೂಲವಾಗುವಂತೆ, "ನಡೆಯುವ ಲೈಸೆನ್ಸ್" ಕಡ್ಡಾಯ ಮಾಡಿಬಿಡಬೇಕು). ಹಾಗೆಯೇ ಕೆಲವು ಮುಂಜಾಗ್ರತಾ ಕಾನೂನು ಕ್ರಮಗಳು:

ಸರ್ಕಾರೀ ರಸ್ತೆಯ ಮೇಲೆ ನಡೆಯುವಾಗ ಎಲ್ಲೆಂದರಲ್ಲಿ ಚೂಪಾಗಿ ಎದ್ದುಕೊಂಡಿರುವ ನೊರಜುಗಲ್ಲುಗಳು ಚುಚ್ಚಿ ಪಾದಕ್ಕೆ ಗಾಯವಾಗಬಹುದು - ಆಗಬಹುದೇನು, ಆಗಿಯೇ ಆಗುತ್ತದೆ. ಇದರಿಂದ ಧನುರ್ವಾಯು ಬರಬಹುದು - ಬಂದೇ ಬರುತ್ತದೆ. ಸಕ್ಕರೆ ಖಾಯಿಲೆಯುಳ್ಳವರಿಗೆ ಗ್ಯಾಂಗ್ರಿನ್ ಆಗಬಹುದು - ಖಂಡಿತಾ ಆಗುತ್ತದೆ. ಆದ್ದರಿಂದ ನಡೆಯುವವರು (ಐ ಎಸ್ ಐ ಮಾರ್ಕಿನ) ಪಾದರಕ್ಷೆ ಧರಿಸುವುದು ಕಡ್ಡಾಯ. ಇಂಥಾ ಚಪ್ಪಲಿಗಳನ್ನು ’ಅಗ್ಗ’ದ ದರದಲ್ಲಿ ಪೂರೈಸಲು ಯಾಕೋ ಚಪ್ಪಲಿ ಕಂಪನಿಗಳು ಮನಸ್ಸು ಮಾಡಿದಂತಿಲ್ಲ.

ಗೃಹಿಣಿಯರು ಗ್ಯಾಸಿನ ಮುಂದೆ ಅಡುಗೆ ಮಾಡಬೇಕಾದರೆ ಬೆಂಕಿಯ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಗ್ಯಾಸಿನ ಮುಂದೆ ಅಡುಗೆ ಮಾಡುವವರು ಒದ್ದೆಬಟ್ಟೆ ಉಟ್ಟು ಅಡುಗೆ ಮಾಡಬೇಕು (ಅಥವಾ ಯಾವುದಾದರೂ ಫೈರ್ ಜ್ಯಾಕೆಟ್ ಕಂಪನಿಗಳು ’ಮುಂದೆ ಬಂದರೆ’, ಫೈರ್ ಜಾಕೆಟ್ ತೊಟ್ಟು ಅಡುಗೆ ಮಾಡುವುದನ್ನು ಕಡ್ಡಾಯ ಮಾಡಬಹುದು)

ನಾಯಿಗಳು ಹೆಚ್ಚಿರುವ ಪ್ರದೇಶದಲ್ಲಿ ಅವುಗಳ ಕಡಿತದಿಂದ ಪಾರಾಗಲು ನಾಯಿ ಬಿಸ್ಕೆಟ್ ತೆಗೆದುಕೊಂಡು ಹೋಗುವುದನ್ನು ಕಡ್ಡಾಯ ಮಾಡಬಹುದು - ಬಿಸ್ಕೆಟ್ ಕಂಪನಿಗಳು ’ಮನವಿ’ ನೀಡಿದರೆ ಇದು ಆಗಬಹುದೇನೋ.

ಮಳೆಗಾಲದಲ್ಲಿ ಹೊರಗೆ ಹೋಗಬೇಕಾದರೆ (ನೆಂದು ನ್ಯುಮೋನಿಯಾ ಆಗಿ ಸತ್ತುಹೋಗುವ ಅಪಾಯವಿರುವುದರಿಂದ) ಹುಡ್ ಇರುವ ಐಎಸ್ಐ ಮಾರ್ಕಿನ ಜರ್ಕಿನ್ ಕಡ್ಡಾಯ

ಸರ್ಕಾರೀ ಕೊಳಾಯಿಯಲ್ಲಿ ಬರುವ ನೀರಿನ ಗುಣಮಟ್ಟ ’ಖಾತ್ರಿ’ ಇರುವುದರಿಂದ, ಪ್ರತಿ ಮನೆಯಲ್ಲೂ ಆರ್ ಓ ಫಿಲ್ಟರ್ ಕಡ್ಡಾಯ

ಸಿಟಿ ಬಸ್ಸಿನ ಡ್ರೈವರು ಸ್ಟಾಪಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೋಗಿ ನಿಲ್ಲಿಸುವುದರಿಂದ, ಓಡಿ ಬಸ್ಸು ಹಿಡಿಯಬೇಕಾಗುತ್ತದೆ. ಹೀಗೆ ಓಡುವಾಗ ತಲೆ ಒಡೆಯಬಹುದು, ಕೈಕಾಲು ಮುರಿಯಬಹುದು, ಹಿಂದಿನಿಂದ ಬಂದ ವಾಹನ ನಮ್ಮ ಮೈಮೇಲೆ ಹೋಗಬಹುದು. ಆದ್ದರಿಂದ ಮೈ ಪೂರ ಲೋಹದ ಕವಚ (ಐ ಎಸ್ ಐ ಮಾರ್ಕಿನದ್ದು) ಕಡ್ಡಾಯ.

ಜನ ಯಾವುದೇ ಕಾರಣಕ್ಕಾದರೂ ಸಾಯುವುದು ನಿಶ್ಚಿತವಾಗಿರುವುದರಿಂದ, ನಿರ್ದಿಷ್ಟ ಕಂಪನಿಯೊಂದರಿಂದ ಜೀವವಿಮೆ ಕಡ್ಡಾಯ (ಜೀವವಿಮೆಗೆ ಐ ಎಸ್ ಐ ಮಾರ್ಕ್ ಹಾಕುವುದಿಲ್ಲವೇನೋ!!)

ಅಂದ ಹಾಗೆ ನೋಡಿ, ಹುಟ್ಟಿದರೇ ತಾನೆ ಸಾಯುವ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿ ಬರುವುದು? ಆದ್ದರಿಂದ ಹುಟ್ಟನ್ನೇ ತಡೆದುಬಿಡುವುದು ಜಾಣತನವಲ್ಲವೇ. ಆದ್ದರಿಂದ ಇನ್ನು ಮುಂದೆ ಮದುವೆಯಾಗುವ ಪ್ರತಿ ಜೋಡಿಯೂ (ಗಂಡ ಹೆಂಡತಿ ಇಬ್ಬರೂ) ಮದುವೆಗೆ ಮೊದಲು ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರಬೇಕೆಂದೂ, ಆ ಬಗ್ಗೆ ವೈದ್ಯರಿಂದ ಪ್ರಮಾಣಪತ್ರವನ್ನು ವಧೂವರರಿಬ್ಬರೂ ಮದುವೆಗೆ ಮೊದಲೇ ಸರ್ಕಾರಕ್ಕೆ ಹಾಜರುಪಡಿಸಿ ಮದುವೆಗೆ ಪರ್ಮಿಶನ್ ಪಡೆಯಬೇಕೆಂದೂ ಕಾನೂನು ಮಾಡಿಬಿಟ್ಟರೆ ಆಯಿತು - ಪರ್ಮಿಷನ್ ಕೊಡಿಸುವ ಒಂದಷ್ಟು ಏಜೆಂಟುಗಳಿಗೂ ಜೀವನಕ್ಕೆ ದಾರಿಯಾಗುತ್ತದೆ.