Thursday, August 9, 2018

ಕನ್ನಡ ಕುಲಪುಂಗವ ಹನುಮ?

ಮೊನ್ನೆ, ಮಿತ್ರರಾದ ಶ್ರೀ ಜೆ ಬಿ ರಂಗಸ್ವಾಮಿಯವರು (ಇವರು ಪೋಲೀಸು ಇಲಾಖೆಯಲ್ಲಿದ್ದೂ ಸದಭಿರುಚಿಯ ಸಹೃದಯ ಮಿತ್ರರು) ಫೇಸ್ಬುಕ್ಕಿನಲ್ಲೊಂದು ಚರ್ಚೆಯೆತ್ತಿದ್ದರು - ಹನುಮಂತನು ಕನ್ನಡಿಗನೇ? ಕನ್ನಡ ಕುಲಪುಂಗವ ಹನುಮ ಎಂಬ ವರ್ಣನೆ ಹನುಮಂತನಿಗೆ ಹೇಗೆ ಬಂತು?  ಅದಕ್ಕೆ ಪೂರಕವಾಗಿ ದಿ. ಬೀchiಯವರ ಒಂದು ಹಾಸ್ಯಪ್ರಸಂಗವೊಂದನ್ನು ನೆನಪಿಸಿಕೊಂಡರು.  ಬೀchiಯವರನ್ನೊಮ್ಮೆ ಹಾಸನ ಕನ್ನಡಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಸಂಘದ ಕಾರ್ಯದರ್ಶಿಗಳು ಸ್ವಾಗತಭಾಷಣ ಮಾಡಿ "ಕನ್ನಡದ ವೀರ ಪುಂಗವ ಹನುಮನುದಿಸಿದ ಈ ಕನ್ನಡನಾಡಿನಲ್ಲಿ ಖನ್ನಡಿಗರು ಹಬಿಮಾನ ಸೂನ್ಯರಾಗಿದ್ದಾರೆ..." ಎಂದೆಲ್ಲ ಮಾತನಾಡಿದರಂತೆ.  ಅದಕ್ಕೆ ಬೀchi ಉತ್ತರ ಹೀಗಿತ್ತು:

"ವೀರ ಹನುಮ ಕನ್ನಡ ನಾಡಿನಲ್ಲಿಯೇ ಹುಟ್ಟಿದನೋ ಇಲ್ಲವೋ ಅಂತ ನನಗೂ ಅನುಮಾನವಿತ್ತು. ನಾನು ಬಳ್ಳಾರಿಯವನೇ. ಅಲ್ಲೇ ಹನುಮ ಹುಟ್ಟಿದ್ದು ಅಂತ ಜನ ಹೇಳ್ತಿದ್ದರು.  ಆದರೆ ನನಗ ಅನುಮಾನ. ಹನುಮ ಬಳ್ಳಾರಿಯವನೋ ಅಲ್ಲವೋ ಅಂತ.  ಆದರೆ ಈವತ್ತು, ಅಂದರೆ ಈಗ ನಿಮ್ಮನ್ನೆಲ್ಲಾ ನೋಡಿದ ಮೇಲೆ ನನಗ ಖಾತ್ರಿ ಯಾಯ್ತು, ವೀರಹನುಮ ಇಲ್ಲೇ ಹುಟ್ಟಿದ್ದು. ಖಂಡಿತವಾಗಿಯೂ ಇಲ್ಲಿಯೇ ಹುಟ್ಟಿದ್ದು" - ಯಾವುದೋ ಕಾಲದ ಮಾತಿದು.  ಈಗ ಹೀಗೆ ಜೋಕು ಮಾಡಿದ್ದರೆ ಎಷ್ಟು ಜನರ "ಭಾವನೆಗಳಿಗೆ ನೋವು" ಆಗುತ್ತಿತ್ತೋ.  ಆಗಂತೂ ಈ ಜೋಕಿಗೆ ಹಾಸನದ ’ಹಬಿಮಾನಿ’ಗಳಾಗಲಿ ’ಅನುಮಾ’ನಿಗಳಾಗಲೀ ಸಿಟ್ಟು ಮಾಡಿದ್ದಂತಿಲ್ಲ - ಬದಲಿಗೆ ಭಾಷಣಕಾರರ ಹಾಸ್ಯಕ್ಕೆ ಹುಚ್ಚುಬಿದ್ದು ನಕ್ಕಿದ್ದಾರು.  ಬೀchiಯವರ ಹಾಸ್ಯಪ್ರಜ್ಞೆ ಅಂಥದ್ದು.  "I may lose a friend but not a joke" ಎನ್ನುತ್ತಲೇ ಜೋಕು ಮಾಡುತ್ತಲೇ ಅಸಂಖ್ಯಾತ ಫ್ರೆಂಡುಗಳ ದಂಡು ಕಟ್ಟಿಕೊಂಡು ಬದುಕಿದವರು ಬೀchi - ಅಜಾತಶತ್ರುವಲ್ಲದಿದ್ದರೂ ಮಡಿವಂತರ ಅಭಿಜಾತಶತ್ರು. 

ಹಾಸ್ಯ ಪಕ್ಕಕ್ಕಿರಲಿ, ಆದರೆ ಹನುಮಂತ ನಿಜಕ್ಕೂ ಕನ್ನಡಿಗನೇ?  ಇದಕ್ಕೆ ಉತ್ತರವೇನೇ ಇರಲಿ, ಈ ಪ್ರಶ್ನೆಯನ್ನು ಹಾಕುವುದರಿಂದ ಒಂದನ್ನಂತೂ ಒಪ್ಪಿದಂತಾಯಿತು - ಹನುಮನೆನ್ನುವವನು ಇದ್ದ; ಎಂದರೆ ರಾಮಾಯಣವೆಂಬುದು ನಡೆದ ಕತೆ ಎಂದು ಒಪ್ಪಿದಂತಾಯಿತಲ್ಲ.  ರಾಮಾಯಣ ನಡೆದದ್ದು ನಿಜವೇ? ರಾಮ ಯಾವ ಯೂನಿವರ್ಸಿಟಿಯಲ್ಲಿ ಡಿಗ್ರೀ ಮಾಡಿದ? ಎಂದೆಲ್ಲಾ ನವಬೌದ್ಧಿಕಪ್ರಶ್ನೆಗಳೇಳುವ ಕಾಲದಲ್ಲಿ ಇಷ್ಟನ್ನಾದರೂ ಒಪ್ಪುವುದು ಕಡಿಮೆ ನಂಬಿಕೆಯೇನಲ್ಲ!  ಹಾಗೂ, ನಿಮಗೆ ರಾಮಾಯಣದಲ್ಲಿ ಅಪನಂಬಿಕೆಯೇ ಇರವಲ್ಲದೇಕೆ?  ಆದರೆ ಎದ್ದ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕಾದರೆ ಸಧ್ಯಕ್ಕಾದರೂ ರಾಮಾಯಣವು ನಡೆದ ಕತೆಯೆಂದು ಒಪ್ಪಬೇಕಾಗುತ್ತದೆ; ರಾಮನು ನಮ್ಮ ನಿಮ್ಮ ನಡುವೆಯೇ ನಡೆದಾಡಿದ ವ್ಯಕ್ತಿಯೆಂದು ನಂಬಬೇಕಾಗುತ್ತದೆ, ಆತ ಕಾಲ್ನಡಿಗೆಯಲ್ಲಿ ರಾಮೇಶ್ವರಕ್ಕೆ ಹೋಗುವಾಗ ನಮ್ಮೂರಿನ ಕಾವೇರಿಯಲ್ಲೇ ಮಿಂದು ಅಲ್ಲೇ ಹೊಳೆದಂಡೆಯ ಬಂಡೆಯ ಮೇಲೆ ಕುಳಿತು ವಿಶ್ರಮಿಸಿದ್ದ, ನಿಮ್ಮೂರಿನ ಗುಡ್ಡದ ಲಿಂಗನಿಗೆ ಪೂಜೆ ಮಾಡಿದ್ದ, ಅಲ್ಲೇ ಬೆಳೆದಿದ್ದ ಸೀತಾಫಲವನ್ನು ತಿಂದಿದ್ದ.  ಅಚ್ಚರಿಯೇಕೆ, ನೀವು ಭಾರತದ ಯಾವ ಹಳ್ಳಿಗೆ ಹೋಗಿ ನೋಡಿ, ರಾಮಸೀತೆಯರ ಒಂದಿಲ್ಲೊಂದು ಕುರುಹು ಅಲ್ಲಿಯ ಜನಪದದಲ್ಲಿ, ಜನಮನದಲ್ಲಿ ದೊರೆಯುತ್ತದೆ - ರಾಮನು ಇಲ್ಲಿಯೇ ಕಾಂಚನಮೃಗವನ್ನು ಬೇಟೆಯಾಡಿದ್ದು, ಇಲ್ಲೇ ಒಮ್ಮೆ ಸೀತಾಮಾತೆಯು ಮುಟ್ಟಾಗಿದ್ದು, ಆಕೆಯ ಸ್ನಾನಕ್ಕಾಗಿ ರಾಮನು ಭೂಮಿಗೆ ಬಾಣ ಹೂಡಿ ನೀರೆತ್ತಿದ್ದು, ಹನುಮನು ಸೀತಾಶೋಧನಕ್ಕೆ ಹೊರಡುವ ಮುನ್ನ ಇಲ್ಲೇ ತುಸು ಮಲಗಿ ವಿಶ್ರಮಿಸಿಕೊಂಡಿದ್ದ... ಒಂದೇ ಎರಡೇ!  ರಾಘವನು ಲೋಕಚರಿತನಲ್ಲವೇ!  ಇರಲಿ, ಮಾತು ಎಲ್ಲೆಲ್ಲಿಯೋ ಹೋಯಿತು.  ರಾಮಾಯಣವು ನಡೆದ ಕತೆಯೆಂದು ನೀವೊಪ್ಪದಿದ್ದರೆ ಹನುಮನು ಕನ್ನಡಿಗನೋ ಅಲ್ಲವೋ ಎಂಬ ಪ್ರಶ್ನೆಗೆ ಅರ್ಥವಾದರೂ ಎಲ್ಲಿ ಉಳಿದೀತು?  ಆದ್ದರಿಂದ ಕೊನೆಯ ಪಕ್ಷ ಈ ಪ್ರಶ್ನೆಯು ನಿಷ್ಕರ್ಷೆಯಾಗುವವರೆಗಾದರೂ ರಾಮಾಯಣವು ನಡೆದ ಘಟನೆಯೆಂದು ಒಪ್ಪಿ ಮುಂದುವರೆಯದೇ ನಿಮಗೆ ಗತ್ಯಂತರವಿಲ್ಲ.  ತರ್ಕದಲ್ಲಿ willing suspension of disbelief - ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಪ್ರಜ್ಞಾಪೂರ್ವಕವಾಗಿ ಪಕ್ಕಕ್ಕಿಡುವುದು ಎನ್ನುವುದು ಬಹು ಮೂಲಭೂತವಾದ ಶಿಸ್ತು.  ಅಷ್ಟನ್ನೂ ರೂಢಿಸಿಕೊಳ್ಳದ ವೀರವೈಚಾರಿಕರು ಮುಂದೆ ಓದದಿರುವುದೇ ಲೇಸು (ಹಾಗಿದ್ದರೆ ವೀರವೈಚಾರಿಕರು ತರ್ಕಾತೀತರೇ ಎಂದು ಕೇಳಬೇಡಿ - ಅದಕ್ಕೆ ನಾನು ಉತ್ತರಿಸಲಾರೆ).

ಆಯಿತು, ರಾಮಾಯಣ ನಡೆದದ್ದೆಂದೇ ಇಟ್ಟುಕೊಳ್ಳೋಣ.  ಆದರೂ ಹನುಮನು ಕನ್ನಡಿಗನೋ ಅಲ್ಲವೋ ಎಂಬ ಜಿಜ್ಞಾಸೆಯಾದರೂ ಏಕೆ ಬೇಕು.  ಮಾತಾಡಿದ, ಯಾವುದೋ ಒಂದು ಭಾಷೆಯಲ್ಲಿ, ನಮಗೆ ರಾಮಾಯಣದ ರಸ ಮುಖ್ಯವೋ ಹನುಮಂತ ಯಾವ ಭಾಷೆಯಲ್ಲಿ ಮಾತಾಡಿದ ಎಂಬ ಕ್ಷುಲ್ಲಕ ವಿಷಯ ಮುಖ್ಯವೋ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ.  ಸ್ವತಃ ಡಿವಿಜಿಯವರು ದಿ. ರಂಗನಾಥಶರ್ಮರ ಕನ್ನಡ ರಾಮಾಯಣದ ಕಿಷ್ಕಿಂಧಾಕಾಂಡಕ್ಕೆ ಮುನ್ನುಡಿ ಬರೆಯುತ್ತಾ ತಮಗೂ ಮತ್ತು ತಮ್ಮ ಅಸಂಗತಜಿಜ್ಞಾಸು ಮಿತ್ರರೊಬ್ಬರಿಗೂ ನಡೆದ ಸಂಭಾಷಣೆಯೊಂದನ್ನು ಹೀಗೆ ವಿವರಿಸುತ್ತಾರೆ:

ಪ್ರಶ್ನೆ:  ರಾಮನೂ ಆಂಜನೇಯನೂ ಮಾತಾಡಿದರಂತಲ್ಲ, ಅದು ಯಾವ ಭಾಷೆಯಲ್ಲಿ?
ಉತ್ತರ: ಕನ್ನಡದಲ್ಲಿ
ಪ್ರಶ್ನೆ: ನೀವು ಹಾಗೆ ಹೇಳಲು ಏನು ಆಧಾರ
ಉತ್ತರ: ರಾಮಾಯಣಗ್ರಂಥವೇ ಆಧಾರ.  ಅದರಲ್ಲಿ ಹೇಳಿದೆ, ರಾಮ-ಆಂಜನೇಯರು ಸೇರಿದುದು ಕಿಷ್ಕಿಂಧೆಯಲ್ಲಿ ಎಂದು.  ಕಿಷ್ಕಿಂಧೆಯಿರುವುದು ಕನ್ನಡ ದೇಶದಲ್ಲಿ.  ಆದ್ದರಿಂದ ಅವರು ಕನ್ನಡದಲ್ಲಿಯೇ ಮಾತಾಡಿರಬೇಕು.
ಪ್ರಶ್ನೆ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಎನ್ನುತ್ತೀರಾ?
ಉತ್ತರ: ಹಾಗೆನ್ನುತ್ತೇನೆ
ಪ್ರಶ್ನೆ: ಅಲ್ಲ ಸ್ವಾಮಿ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ.  ಅಲ್ಲಿ ಕನ್ನಡ ಇತ್ತೇ?
ಉತ್ತರ: ಅಯೋಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತುಕೊಂಡಿರಬೇಕು.  ನಿಮ್ಮ ಅಭಿಪ್ರಾಯವೇನು?
ಪ್ರಶ್ನೆ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕ್ತವಾಗಿದೆ.  ಅವರಿಬ್ಬರೂ ಸಂಸ್ಕೃತದಲ್ಲಿಯೇ ಮಾತಾಡಿದರೆಂದು ಹೇಳುವುದಾದರೆ, ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆಂದು ಹೇಳಬೇಕಾಗುತ್ತಲ್ಲ:
ಉತ್ತರ: ಹಾಗೆಯೇ ಹೇಳೋಣ.  ಅಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ
ಪ್ರಶ್ನೆ: ಏನು ಸ್ವಾಮಿ?  ಇದು ಹೇಗೆ ಹೊಂದಾವಣೆಯಾಗುತ್ತದೆ?  ರಾಮನಿಗೆ ಸಂಸ್ಕೃತ ಬರುತ್ತಿದ್ದಿರಬಹುದು.  ಆಂಜನೇಯ ಶುದ್ಧ ಕಪಿ.  ಅದಕ್ಕೆ ಸಂಸ್ಕೃತ ಬರೋಣವೆಂದರೇನು?
ಉತ್ತರ: ಸ್ವಾಮಿ, ನೀವು ಆಂಜನೇಯನು ಸಮುದ್ರ ಹಾರಿದ ಕಪಿಯೆಂಬುದನ್ನು ಮರೆತುಬಿಟ್ಟಿದ್ದೀರಿ.  ನಿಮ್ಮಂಥವರ ದೃಷ್ಟಿ ಒಂದು.  ಬೇರೆ ಇನ್ನೊಂದು ದೃಷ್ಟಿಯುಂಟು.  ರಾಮನೂ ಹನುಮಂತನೂ ದೈವಾಂಶದಿಂದುಂಟಾದವರು.  ಅವರಿಗೆ ಭಾಷೆ ಕಲಿತುಕೊಳ್ಳುವುದು ಅಸಾಧ್ಯವೇ?  ಅವರಿಬ್ಬರೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದಿ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ ಶಕ್ತಿಯಿದ್ದವರು.  ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತುಕೊಳ್ಳಬಲ್ಲವರು.
ಪ್ರಶ್ನೆ: ಹಾಗಾದರೆ ಏನು ನಿಷ್ಕರ್ಷೆ?
ಉತ್ತರ: ನಿಷ್ಕರ್ಷೆ ಇಷ್ಟು: ಅವರಿಬ್ಬರೂ ತಮಗಿಬ್ಬರಿಗೂ ಬರುತ್ತಿದ್ದ ಯಾವುದೋ ಭಾಷೆಯಲ್ಲಿ ಮಾತನಾಡಿದರು.  ಇಲ್ಲಿ ನಮಗೆ ಮುಖ್ಯವಾದದ್ದು ಅವರು ಯಾವ ಭಾಷೆಯಲ್ಲಿ ಮಾತನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು.  ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ ಯಾವುದು?  ಅದನ್ನು ಯಾವ ಮರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು?  ಇದು ನಮಗೆ ಮುಖ್ಯ.  ಭಾಷೆಯ ಪ್ರಶ್ನೆ ಇಲ್ಲಿ ಸಂಪೂರ್ಣವಾಗಿ ಅಸಂಗತ. 

ಈ ಪ್ರಸಂಗವನ್ನು ಉಲ್ಲೇಖಿಸಿದ ಡಿವಿಜಿ, ಕೊನೆಯದಾಗಿ ಹೇಳುವ ಕಿವಿಮಾತೆಂದರೆ, "ಕಾವ್ಯೋಪಾಸನೆಯ ನಡುನಡುವೆ ಇಂಥ ತರ್ಕಗಳನ್ನೆತ್ತಬಾರದು" ಮತ್ತು ಇಷ್ಟನ್ನು ಹೇಳಿ ಸುಮ್ಮನಾಗದೇ "ಇಂಥ ಪ್ರಶ್ನೆಗಳನ್ನೆತ್ತುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ" ಎಂದು ಹೇಳಿ ಮಾತು ಮುಗಿಸುತ್ತಾರೆ.  ಇದು ಕುರಿತೇಟಾಗಿ ನನ್ನನ್ನೇ ಕುರಿತು ಹೇಳಿದ ಮಾತೆಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ.  ನಾನೋ, ಕಾವ್ಯ-ಸಾಹಿತ್ಯಗಳು ಹೊಟ್ಟೆ ತುಂಬಿಸವೆಂಬ ಸತ್ಯವನ್ನು ’ಆ’ ಕಾಲಕ್ಕೇ ಮನಗಂಡು, ಕೆರಿಯರಿಗಾಗಿ ಅಕೌಂಟೆನ್ಸಿಯನ್ನೇ ಆಯ್ಕೆ ಮಾಡಿಕೊಂಡವನು; ಲೆಕ್ಕಾಚಾರಕ್ಕೆ ದುಃಖವೇಕೆ ಹೇಳಿ.  ಅಕೌಂಟೆನ್ಸಿಯನ್ನು ಕಣ್ಣೀರು ಸುರಿಸುತ್ತಾ ಕಲಿಯಬೇಕೇ, ಸ್ವಲ್ಪ ನಕ್ಕರೆ ಮುತ್ತುದುರಿಯೋಗುವುದೇ ಎಂಬ ದೃಷ್ಟಿಯಿಂದ ಒಮ್ಮೆ "ಒಂದು ನಾಮದ ಅಯ್ಯಂಗಾರರು ಮೂರು ವಡೆ ತಿಂದರೆ ಮೂರು ನಾಮದ ಅಯ್ಯಂಗಾರರು ಎಷ್ಟು ವಡೆ ತಿನ್ನುತ್ತಾರೆ" ಎಂಬಂತಹ ಪೂರ್ ಜೋಕನ್ನು ಹೇಳಿ ಅಕೌಂಟೆನ್ಸಿ ಪ್ರಾಧ್ಯಾಪಕರ ಕೆಂಗಣ್ಣಿಗೆ ಗುರಿಯಾದೆ.  ಪಾಪ, ಅಯ್ಯಂಗಾರರು ವಡೆ ತಿನ್ನುವಲ್ಲಿ ಅವರ ತಕರಾರಿಲ್ಲ, ಆದರೆ ನಾಮದ ಸಂಖ್ಯೆಗೂ ವಡೆ ತಿನ್ನುವ ಸಾಮರ್ಥ್ಯಕ್ಕೂ ಏನು ಸಂಬಂಧ ಎನ್ನುವುದು ಅವರ ಅವರ ಸಿಡುಕಿಗೆ ಕಾರಣ.  ನಾಮದ ಬದಲು ಮುದ್ರೆ ಗಂಧಗಳನ್ನೇ ಹೇಳಿದ್ದರೂ ಅವರು ಇಷ್ಟೇ ಸಿಟ್ಟಿಗೇಳುತ್ತಿದ್ದರೆಂಬುದು ಸತ್ಯ.  ಸರಿಯೇ, ಜೋಕಿನಲ್ಲಾದರೂ ಒಂದು ತರ್ಕವಿರಬೇಡವೇ?  "ಇಂಥಾ ತರ್ಕಹೀನ ಜೋಕು ಮಾಡಬೇಕಾದರೆ ಹೋಗಿ ಸಾಹಿತ್ಯದ ಕ್ಲಾಸಿಗೆ ಸೇರಿಕೋ, ನನ್ನ ಕ್ಲಾಸಿಗೆ ಬರಬೇಡ" ಎಂದು ಎಚ್ಚರಿಕೆ ನುಡಿದರು. ಜೋಕಿಗೆ ತರ್ಕವೇಕೆ ಎಂಬುದು ನನ್ನ ಪ್ರಶ್ನೆ, ಅಕೌಂಟೆನ್ಸಿಯಲ್ಲಿ ಜೋಕೇಕೆ ಎಂಬುದು ಅವರ ಪ್ರಶ್ನೆ.  ಒಟ್ಟಿನಲ್ಲಿ ಈ ಇಬ್ಬರೂ ಮಹನೀಯರ ಮಾತುಗಳಿಂದ ನನಗೆ ತಿಳಿದದ್ದು - ಸಾಹಿತ್ಯಕ್ಕೂ (ಅದರಲ್ಲೂ ಕಾವ್ಯಕ್ಕೂ) ತರ್ಕಕ್ಕೂ ಸಂಬಂಧವಿಲ್ಲ, ಇರಬಾರದು (ಅದು ಇರಬೇಕಾದ್ದೇನಿದ್ದರೂ ಅಕೌಂಟೆನ್ಸಿಯಲ್ಲಿ).

ಆದರೆ ನಮ್ಮ ಸಧ್ಯದ ಉದ್ದೇಶ, ಹನುಮಂತನು ಕನ್ನಡಿಗನೋ ಅಲ್ಲವೋ ಎಂಬುದನ್ನು ಗೊತ್ತುಹಚ್ಚುವುದೇ ಹೊರತು ಕಾವ್ಯೋಪಾಸನೆಯಲ್ಲ.  ಆದ್ದರಿಂದ ರಾಮಾಯಣ ನಿಜವೋ ಎಂಬ ನಮ್ಮ ಅನುಮಾನವನ್ನು ಪಕ್ಕಕ್ಕಿಟ್ಟಷ್ಟೇ ಶಿಸ್ತಿನಿಂದ ರಾಮಾಯಣದ ಕಾವ್ಯೋಪಾಸನೆಯ ಚಪಲವನ್ನೂ ಪಕ್ಕಕ್ಕಿಟ್ಟುಬಿಡೋಣ.  ಹನುಮಂತನ ಕನ್ನಡತನದ ವಿಷಯವನ್ನು ಪರಿಶೀಲಿಸುವುದಕ್ಕೆ ಮೊದಲು, ಮೇಲಿನ ಸಂಭಾಷಣೆಯಲ್ಲಿ ನನ್ನ ಗಮನಸೆಳೆದ ಮತ್ತೊಂದು ಅಂಶವನ್ನು ಹೇಳಿಬಿಡಬೇಕು, ಅದೆಂದರೆ ಆ ಡಿವಿಜಿಯವರ ಆ ಅಸಂಗತ ಜಿಜ್ಞಾಸುಮಿತ್ರರ ಪ್ರಶ್ನೆ - "ಕಪಿಗೆ ಸಂಸ್ಕೃತ ಬರೋಣವೆಂದರೇನು".  ನೀವೇನೇ ಹೇಳಿ, ನನಗೇನೋ ಈ ಪ್ರಶ್ನೆಯ ಧ್ವನಿ ಒಂದು ಚೂರೂ ಹಿಡಿಸಲಿಲ್ಲ.  "ಕಪಿಗೆ ಸಂಸ್ಕೃತ ಬರೋಣವೆಂದರೇನು?"  ಹಾಗೆಂದರೇನು?  ಕನ್ನಡವಾದರೆ ಮಾತ್ರ ಕಪಿಗೆ ತಕ್ಕ ಭಾಷೆಯೆಂದೋ?  ಕೊನೆಯ ಪಕ್ಷ ಅಯೋಧ್ಯೆಯ ಕಪಿಗಳಾದರೂ ಸಂಸ್ಕೃತ ಮಾತನಾಡಲಾರವೆಂದೋ?  ಅಥವಾ ಮನುಷ್ಯ ಮಾತ್ರ ಸಂಸ್ಕೃತವನ್ನು ಮಾತಾಡಬಲ್ಲನೆಂದೋ?  ಮನುಷ್ಯರು ತಾನೆ ಎಲ್ಲರೂ ಎಲ್ಲಿ ಸಂಸ್ಕೃತ ಮಾತಾಡುತ್ತಾರೆ?  ನಮ್ಮ ಟೀವಿ ’ಹ್ಯಾಂಕರು’ಗಳನ್ನು ನೋಡಿ (ಇದು ಹಾಂಕರ್ - honker - ಇರಬೇಕೆಂದು ನನ್ನ ಅನುಮಾನ) - ನೆಟ್ಟಗೆ ಕನ್ನಡವನ್ನೇ ಮಾತನಾಡುವುದಿಲ್ಲ ಪಾಪ - ಕೀಚ್ ಕೀಚೆಂದು ಶಬ್ದವನ್ನೇನೋ ಮಾಡುತ್ತಾರೆ, ಅದು ಯಾವ ಭಾಷೆಯೋ ಯಾರಿಗೆ ಗೊತ್ತು?  ಆದ್ದರಿಂದ ಈ ರೀತಿ ಶ್ರೇಷ್ಠತೆಯ ವ್ಯಸನದ ಪ್ರಶ್ನೆಯ ಬದಲು ನೆಟ್ಟಗೆ, "ಕಪಿ ಮಾತಾಡುತ್ತದೆಯೇ" ಎಂದು ಕೇಳಿ, ಅದೊಂದು ಪ್ರಶ್ನೆ, ಪರಿಶೀಲಿಸಬಹುದಾದಂಥದು - ಕಪಿ ಸಂಸ್ಕೃತ ಮಾತಾಡುತ್ತದೆಯೇ ಎಂಬ ಧೋರಣೆ ಬೇಡ, ಮಾತಾಡುವ ಕಪಿಯಾದರೆ ಯಾವ ಭಾಷೆಯನ್ನೂ ಮಾತಾಡೀತು, ಮನಸ್ಸು ಮಾಡಿದರೆ.  ಸರಿ, "ಕಪಿ ಎಲ್ಲಾದರೂ ಮಾತಾಡುವುದು ಉಂಟೇ" ಎಂದೇ ಕೇಳಿದಿರೋ? ಏಕಿರಬಾರದು?  ಕಪಿಗಳಿರಲಿ, ಸಿಂಹ, ಆನೆ, ನರಿ, ಕಾಗೆಗಳೇ ಮೊದಲಾದ ಅನೇಕ ಪಶುಪಕ್ಷಿಗಳೂ ಮಾತಾಡುತ್ತಿದ್ದುವೆಂಬುದನ್ನು ನಾವು ಪಂಚತಂತ್ರವೇ ಮೊದಲಾದ ಪ್ರಾಚೀನ ಸಾಹಿತ್ಯದಲ್ಲಿ, ಪುರಾಣ (ಕೇವಲ ನಮ್ಮ ಪುರಾಣವಷ್ಟೇ ಅಲ್ಲ, ಜೈನ, ಬೌದ್ಧ ಪುರಾಣಗಳಲ್ಲಿಯೂ), ಇತ್ಯಾದಿಗಳಲ್ಲಿ ನೋಡುತ್ತೇವಲ್ಲ.  ಮಾತು ಹಾಗಿರಲಿ, ಗಜೇಂದ್ರಮೋಕ್ಷದಲ್ಲಿ, ಮೊಸಳೆಯ ಬಾಯಿಗೆ ಸಿಕ್ಕಿದ ಗಜರಾಜನು ವಿಧವಿಧವಾಗಿ ಛಂದೋಬದ್ಧವಾದ ಶ್ಲೋಕಗಳಿಂದ ಆರ್ತವಚನಗಳಿಂದ ಮಹಾವಿಷ್ಣುವನ್ನು ಸ್ತುತಿಸುವುದಿಲ್ಲವೇ?  ಅದು ಬೇಡ, ನಮ್ಮ ಅಜ್ಜಿಯರು ನಮಗೆ ಹೇಳಿದ ಕತೆಗಳಲ್ಲಿ ಬರುವ ನರಿಯಣ್ಣನೇನು ಕಡಿಮೆ ಮಾತುಗಾರನೇ?  ಮಾತಾಡುವ ಚಪಲಕ್ಕೆ ಬಿದ್ದು ಜೀವವನ್ನೇ ತೆತ್ತ ಮಾತುಗಾರ ಆಮೆಯ ಕತೆ ನಮಗೆ ಗೊತ್ತಿಲ್ಲವೇ?  ಅಷ್ಟೇಕೆ, ರಾಮಾಯಣದಲ್ಲೇ ಗೃಧ್ರರಾಜನಾದ ಸಂಪಾತಿಯೂ ಆತನ ತಮ್ಮ ಜಟಾಯುವೂ ಮಾತನಾಡುವುದಿಲ್ಲವೇ?  ಅಯ್ಯೋ, ಇದೆಲ್ಲಾ ಕಂತೆ ಪುರಾಣ, ನಡೆದ ಘಟನೆಯಲ್ಲ ಎಂದು ಮೂಗು ಮುರಿಯಬೇಡಿ.  ನಿಮ್ಮ ಅಪನಂಬಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿ ಪಕ್ಕಕ್ಕಿಟ್ಟೇ ನೀವು ನನ್ನ ಜೊತೆ ಬಂದಿರುವುದು, ಇಲ್ಲೀಗ ಅದನ್ನು ಮತ್ತೆ ಬಿಚ್ಚಬೇಡಿ.  ಮೊದಲೆಲ್ಲಾ ಪಶುಪಕ್ಷಿಗಳು ಮಾತನಾಡುತ್ತಿದ್ದುವೆಂಬುದರ ಪಳಿಯುಳಿಕೆಯಾಗಿ ನೋಡಿ, ಗಿಳಿ ಇವತ್ತಿಗೂ ಮಾತನಾಡುತ್ತದೆ (ಹೇಳಿಕೊಟ್ಟದ್ದನ್ನಷ್ಟೇ ನುಡಿಯುತ್ತದೆ ಹೌದು, ಆದರೆ ನುಡಿಯುತ್ತದಲ್ಲ); ನಾಯಿ ಬಹುತೇಕ ಮಾತನ್ನೇ ಹೋಲುವ ಧ್ವನಿಗಳನ್ನು ಮಾಡುತ್ತದೆ, ಬೆಕ್ಕೂ ಕೆಲಮಟ್ಟಿಗೆ ಹಾಗೆಯೇ.  ಕಾಗೆಯಂತೂ, ಮಾತನ್ನು ಮರೆತರೂ ಬುದ್ಧಿವಂತಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ (ಉದಾಹರಣೆಗೆ ಈಸೋಪನ ಕಾಗೆಯನ್ನೇ ನೋಡಿ). ಇವೆಲ್ಲದರ ಅರ್ಥವೇನು?  ಒಂದಾನೊಂದು ಕಾಲದಲ್ಲಿ ಪಶುಪಕ್ಷಿಗಳೂ ಮಾತಾಡುತ್ತಿದ್ದುವು.  ಕಾಲಕ್ರಮೇಣ, ಪರಿಸರದ ಒತ್ತಡದಿಂದಲೋ, ಮಾತಿನ ನಿರರ್ಥಕತೆಯನ್ನು ಅರಿತೋ ನಿಧಾನವಾಗಿ ಮಾತು ಮರೆತು ಮೌನವಾದುವು - ಮೊದಲು ಗಂಡು ಪ್ರಾಣಿಗಳು, ಆನಂತರ ವಿಧಿಯಿಲ್ಲದೇ ಹೆಣ್ಣು ಪ್ರಾಣಿಗಳು.  ಪಶುಪಕ್ಷಿಗಳ ಈ ಮೌನ ವಿವೇಕವನ್ನು ಗುರುತಿಸುವ ವಿವೇಕ ಮನುಷ್ಯನಲ್ಲಿ ಇಲ್ಲವೆಂದಲ್ಲ - "ಮಾತಿಲ್ಲಿ ಮೈಲಿಗೆ, ಆನಂದವೇ ಪೂಜೆ, ಮೌನವೆ ಮಹಾಸ್ತೋತ್ರ" ಎಂದು ಕಂಡುಕೊಂಡ, "Heard Melodies Are Sweet, but Those Unheard Are Sweeter" ಎಂದು ಉದ್ಗರಿಸಿದ, "ಮೋಕ್ಷಾನಂದದ ಜೀವನ್ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ" ಎಂದು ಬೆರಗುಗೊಂಡ ಕವಿಗಳಿದ್ದಾರೆ; ಉಪವಾಸದಂತೆಯೇ ಮೌನವನ್ನೂ ವ್ರತವಾಗಿ ಉಪದೇಶಿಸುವ ಶಾಸ್ತ್ರಗಳಿವೆ,  ಆದರೆ ಮಾನವನೇಕೋ ಇನ್ನೂ ಇತರ ಪ್ರಾಣಿಪಕ್ಷಿಗಳಂತೆ ಮೌನದ ಮರೆಹೊಕ್ಕಿಲ್ಲ.  ಟೀವಿ ಯಾಂಕರುಗಳು ಮೌನವನ್ನು ತಳೆಯದಿದ್ದರೂ ಭಾಷೆಯನ್ನು ಬಹುಮಟ್ಟಿಗೆ ಮರೆತಿದ್ದಾರೆಂಬುದು ನಿಜ, ಆದರೆ ನಾನಿಲ್ಲಿ ಮಾತಾಡುತ್ತಿರುವುದು ಇಡೀ ಮನುಕುಲದ ವಿಷಯ.  ಇರಲಿ, ಮಾತು ಎಲ್ಲೆಲ್ಲಿಗೂ ಹೋಯಿತು - ಕಪಿಯ ವಿಷಯ ನೋಡಿ, ತಾನೂ ಮರ್ಕಟನಂತೆ ಎಲ್ಲೆಲ್ಲಿಗೋ ಹೋಗಿಬಿಡುತ್ತದೆ.  ಹೀಗೆ ಎಲ್ಲಿಂದ ಎಲ್ಲಿಗೋ ಹೋಗಿಬಿಡುವ ಮಾತಿನ ಈ ಸ್ವಭಾವವೇ, ಮರ್ಕಟಗಳು ಮಾತಾಡುತ್ತಿದ್ದುವು ಎಂಬುದಕ್ಕೆ ಮತ್ತೊಂದು ಸಾಕ್ಷಿ.  ಅದೇನೇ ಇರಲಿ, ಒಟ್ಟಿನಲ್ಲಿ ಹನುಮಂತನು ಮಾತಾಡುತ್ತಿದ್ದ ಎಂಬುದಂತೂ ಸಾಬೀತಾದ ಹಾಗಾಯಿತಲ್ಲ, ಸಧ್ಯಕ್ಕೆ ಉಳಿದ ಮಾತು ಬಿಡೋಣ.

ಹನುಮಂತನು ಮಾತಾಡುತ್ತಿದ್ದನೆಂಬುದೇನೋ ಆಯಿತು, ಅದಕ್ಕೆ ರಾಮಾಯಣವೇ ಸಾಕ್ಷಿ; ಆದರೆ ಆತ ಕನ್ನಡಿಗನೆನ್ನುವುದಕ್ಕೆ ಆಧಾರವೇನು?  ಹನುಮಂತನೂ ಇತರ ಕಪಿಗಳೂ ಇದ್ದುದು ನಮ್ಮ ಕನ್ನಡನಾಡಿನ ಕಿಷ್ಕಿಂಧೆಯಲ್ಲಿ (ದೇಶದ ಇತರ ಭಾಗಗಳಲ್ಲೂ ಕಪಿಗಳಿದ್ದುವೆಂಬುದೇನೋ ಸರಿ, ಆದರೆ ನಾವಿಲ್ಲಿ ಮಾತಾಡುತ್ತಿರುವುದು ಕನ್ನಡ ನಾಡಿನ ಕಪಿಗಳ ಬಗ್ಗೆ, ಕಪಿಶ್ರೇಷ್ಠನಾದ ಹನುಮಂತನ ಬಗ್ಗೆ).  ಆಗೇನೋ ಈಗಿನಂತೆ ಹೊರನಾಡ ವಲಸಿಗರ ಹಾವಳಿ ಅಷ್ಟಿಲ್ಲದುದರಿಂದ ಆ ಕಪಿಗಳು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಇಲ್ಲೇ ಸಾಮ್ರಾಜ್ಯ ಕಟ್ಟಿಕೊಂಡು ಇದ್ದ ಸ್ಥಳೀಯ ಕಪಿಗಳೇ ಎಂಬುದರಲ್ಲಿ ಸಂಶಯ ಪಡುವಂಥದ್ದೇನಿಲ್ಲ.  ಇನ್ನು ಹನುಮಂತನೂ ಅವರಲ್ಲೊಬ್ಬನೇ ಆದ್ದರಿಂದ ಆತನು ಕನ್ನಡಿಗನೇ ಎಂದೂ ನಿಸ್ಸಂಶಯವಾಗಿ ಹೇಳಬಹುದು.  ಆದರೆ ಈ ಸಂಶೋಧಕರಿದ್ದಾರಲ್ಲ, ಮಹಾ ಸಂಶಯದ ಗುಂಪಿಗೆ ಸೇರಿದ ಪ್ರಾಣಿಗಳಿವರು.  ಎಲ್ಲವೂ ಹೀಗೇ ಎಂದು ಒಂದು ನಿಶ್ಚಯಕ್ಕೆ ಬಂದಿರುವುದನ್ನು "ಇದು ಹೀಗಿರಬಾರದೇಕೆ" ಎನ್ನುವ ಒಂದು ಕ್ಷುಲ್ಲಕ ಪ್ರಶ್ನೆಯಿಂದ ಕಲಕಿಬಿಡುತ್ತಾರೆ.  ಹನುಮಂತನ ಸಾಗರೋಲ್ಲಂಘನವೇ ಸುಳ್ಳು, ಲಂಕೆಯೆಂಬುದು ನಾವು ತಿಳಿದಂತೆ ಸಿಂಹಳದ್ವೀಪ ಅಲ್ಲವೇ ಅಲ್ಲ, ವಾಸ್ತವದಲ್ಲಿ ರಾಮನು ಗೋದಾವರೀ ನದಿಯನ್ನು ದಾಟಿದ್ದೇ ಇಲ್ಲ ಎಂದೆಲ್ಲಾ ಸಂಶೋಧನೆಗಳನ್ನು ಹರಿಯಬಿಟ್ಟಿದ್ದಾರೆ.  ಹಾಗಿದ್ದರೆ ಕಿಷ್ಕಿಂಧೆಯೂ ಋಷ್ಯಮೂಕವೂ ಎಲ್ಲಿಯೋ ಹೋಯಿತಲ್ಲ, ಇನ್ನು ನಮ್ಮ ಹನುಮನ ಕನ್ನಡತನ ನಿಲ್ಲುವುದೆಂತು?  ಆದರೆ ನಾವು ಕನ್ನಡಿಗರು ಅಷ್ಟು ನಿರಾಶರಾಗಬೇಕಿಲ್ಲ.  ಹನುಮನು ಕನ್ನಡಿಗನೇ ಎನ್ನುವುದಕ್ಕೆ ರಾಮಾಯಣದಲ್ಲೇ ಅಂತರ್ಗತವಾದ ಬಲವಾದ ಪುರಾವೆಯೊಂದಿದೆ. ಈ ಕಾವ್ಯ ಎನ್ನುವುದಿದೆಯಲ್ಲಾ, ಅದು ಒಂದು ಅದ್ಭುತವಸ್ತು.  ಶಕ್ತವಾದ ಕಾವ್ಯ, ಆಯಾ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದರೆ, ಆ ಪಾತ್ರದ ವ್ಯಕ್ತಿತ್ವ, ಗುಣಸ್ವಭಾವಗಳು ಸಂಶಯಕ್ಕೆಡೆಯೇ ಇಲ್ಲದಂತೆ ಅಚ್ಚಾಗಿ ಮೂಡಿಬಿಟ್ಟಿರುತ್ತದೆ, ಅದಕ್ಕೆ ಇನ್ನೆಷ್ಟೇ ವೇಷ ಹಾಕಿದರೂ, ಬಣ್ಣ ಬಳಿದರೂ ಅವುಗಳ ಮೂಲಭೂತ ಗುಣಲಕ್ಷಣಗಳು ಮರೆಯಾಗಲಾರವು - ರಾವಣನು ಸನ್ಯಾಸಿಯ ವೇಷದಲ್ಲಿದ್ದರೂ ಆತನ ಕಪಟ ಮರೆಯಾಗುವುದಿಲ್ಲ; ರಾಮನು ವನವಾಸಿಯಾದರೂ ಆತನ ಚಕ್ರವರ್ತಿಸಹಜವಾದ ಧೀರಗಂಭೀರ ಲಕ್ಷಣಗಳೂ ಮರೆಯಾಗವು.  ಹನುಮನೂ ಈ ನಿಯಮಕ್ಕೆ ಹೊರತೇನಲ್ಲ.  ಲಂಕೆ ಎಲ್ಲಿಯಾದರೂ ಇರಲಿ, ಕಿಷ್ಕಿಂಧೆ-ಋಷ್ಯಮೂಕಗಳು ಎಲ್ಲಿಯಾದರೂ ಇರಲಿ, ಹನುಮಂತನ ಸ್ವಭಾವಚಿತ್ರಣದಲ್ಲಿ ಆತನ ವ್ಯಕ್ತಿತ್ವದ ಇತರ ಆಯಾಮಗಳೊಂದಿಗೆ ಆತನ ಕನ್ನಡತನವೂ ಅಚ್ಚೊತ್ತಿದೆ - ಯಾವ ನವೀನ ಸಂಶೋಧನೆಗಳೂ ಅಳಿಸಲಾಗದ ಗುರುತು ಇದು.  ನಾನಿಲ್ಲಿ ಪರಿಶೀಲಿಸಹೊರಟಿದ್ದು ಇದನ್ನೇ.

ಹನುಮಂತನು ರಾಮನೊಡನೆ ನಿರರ್ಗಳವಾಗಿ, ಕಿಂಚಿತ್ತೂ ಅಪಶಬ್ದವಿಲ್ಲದೇ ಮಾತಾಡುತ್ತಾನೆಂಬ ಮಾತು ರಾಮಾಯಣದಲ್ಲಿ ಬರುತ್ತದೆ ನೋಡಿ (ನ ಕಿಂಚಿದಪಶಬ್ದಿತಮ್). ಇಷ್ಟು ನಿರರ್ಗಳವಾಗಿ ಮಾತಾಡುವ ಹನುಮಂತನನ್ನು ನೋಡಿ ರಾಮ, ಈತನು ವೇದವೇದಾಂಗಗಳನ್ನು ಹೃದ್ಗತಮಾಡಿಕೊಂಡ ಬಹುವ್ಯಾಕರಣಪಂಡಿತನೇ ಇರಬೇಕೆಂದು ಲಕ್ಷ್ಮಣನಿಗೆ ಹೇಳುತ್ತಾನೆ. ನಿರರ್ಗಳವಾಗಿ ಅಪಶಬ್ದವಿಲ್ಲದೇ ಮಾತಾಡಲು ವೇದಜ್ಞಾನ, ಸಮಸ್ತವ್ಯಾಕರಣಜ್ಞಾನವಿರಬೇಕೆಂದರೆ ಆ ಭಾಷೆ ಯಾವುದು? ಸಹಜವಾಗಿಯೇ ಸಂಸ್ಕೃತ!
ಚಿತ್ರದಲ್ಲಿ: ನವವ್ಯಾಕರಣಪಂಡಿತ, ಪುಸ್ತಕಧಾರಿ - ಆನೆಗುಂದಿ(ಕಿಷ್ಕಿಂಧೆ)ಯ ಅವತಾರತ್ರಯ ಹನುಮ

ಎಂದರೆ ಔತ್ತರೇಯನಾದ ರಾಮನೊಡನೆ ಹನುಮಂತನು ಆತನ ಭಾಷೆಯಾದ ಸಂಸ್ಕೃತದಲ್ಲೇ ಮಾತಾಡಿರಬೇಕು. ಕನ್ನಡಿಗರನ್ನು ಬಿಟ್ಟು ಬೇರೆ ಯಾರು ಇತರರೊಡನೆ ಅವರವರ ಭಾಷೆಯಲ್ಲೇ ಮಾತಾಡುತ್ತಾರೆ? ಹನುಮಂತನು ತೆಲುಗನಾಗಿದ್ದರೆ ತೆಲುಗಿನಲ್ಲೇ ಮಾತಾಡುತ್ತಿದ್ದ, ಮರಾಠಿಯವನಾಗಿದ್ದರೆ ಮರಾಠಿಯಲ್ಲೇ, ತಮಿಳನಾಗಿದ್ದರೆ, ಸ್ವತಃ ರಾಮನನ್ನೇ ತಮಿಳಿನಲ್ಲಿ ಮಾತಾಡುವಂತೆ ಮಾಡಿಬಿಡುತ್ತಿದ್ದನೇನೋ, ಅಲ್ಲವೇ? - ಇನ್ನು ಮಲಯಾಳಿಯೇ ಆಗಿದ್ದರೆ ಅವನು ಕಿಷ್ಕಿಂಧೆಯಲ್ಲೇಕಿರುತ್ತಿದ್ದ?  ಅಯೋಧ್ಯೆಯಲ್ಲೊಂದು ಲಂಕೆಯಲ್ಲೊಂದು 'ಚಾಯಕ್ಕಡ'ವನ್ನೇ ತೆರೆದಿರುತ್ತಿರಲಿಲ್ಲವೇ? ಇರಲಿ. ಹೊರಗಿನವರನ್ನು ಅಷ್ಟು ಕಷ್ಟಪಡಿಸದೇ ಅವರ ಭಾಷೆಯಲ್ಲೇ ಮಾತಾಡುವ ಔದಾರ್ಯ ತೋರುವವರು ನಾವು ಮಾತ್ರ ಎಂದಷ್ಟೇ ನಾನು ಹೇಳಹೊರಟಿದ್ದು. ಆದ್ದರಿಂದ ರಾಮನೊಡನೆ ಅವನದೇ ಭಾಷೆಯಾದ ಸಂಸ್ಕೃತದಲ್ಲಿ ಮಾತಾಡಿದ ಹನುಮಂತನು ಉದಾರಚರಿತನಾದ ಕನ್ನಡಿಗನೇ ಎಂಬುದರಲ್ಲಿ ಅನುಮಾನವೇ ಇಲ್ಲ.

ನಾನೀ ವಿಷಯವನ್ನು ವಿವರಿಸಿದಾಗ ಮಿತ್ರರೊಬ್ಬರಿಗೆ ಅನುಮಾನ.  ಹನುಮಂತನು ಸಂಸ್ಕೃತದಲ್ಲಿ ಮಾತಾಡುತ್ತಿದ್ದಿರಬೇಕು ಎಂಬ ಊಹೆಗೆ ಆಧಾರವೇನು? ರಾಮನು ಸಂಸ್ಕೃತದವನಿದ್ದಿರಬೇಕೆಂಬುದು ತಾನೆ? ಆದರೆ ರಾಮನು ಸಂಸ್ಕೃತದಲ್ಲಿ ಮಾತನಾಡುತ್ತಿದ್ದನೆಂದು ಭಾವಿಸುವುದು ಹೇಗೆ? ಕೋಸಲದೇಶದ/ಅಯೋಧ್ಯೆಯ ಭಾಷೆ ಯಾವುದು?  ಅಥವಾ ಭಾರತದಲ್ಲಿ ಈಗ ಹಿಂದೀ ರಾಷ್ಟ್ರೀಯ ಭಾಷೆಯೆಂದು ವಾದಿಸುವಂತೆ ಆಗ ಸಂಸ್ಕೃತ ರಾಷ್ಟ್ರೀಯ ಭಾಷೆಯಾಗಿತ್ತು ಎನ್ನಲು ಆಗ ಆಖಂಡ ಭಾರತದ ಕಲ್ಪನೆಯೇ ಇರಲಿಲ್ಲವಲ್ಲ. ರಾಮನು ಉತ್ತರದಿಂದ ದಕ್ಷಿಣಕ್ಕೆ ನಂತರ ಲಂಕೆಗೆ ಸಂಚರಿಸುವಾಗ ಯಾವ ಭಾಷೆಯಲ್ಲಿ ಸಂವಹಿಸುತ್ತಿದ್ದ. ಲಂಕೆಯಲ್ಲಿ ಸಹ ಸಂಸ್ಕೃತವಿತ್ತೆ?  ಇವು ಅವರ ಹಲವು ಅನುಮಾನಗಳು

ಆದರೆ ಅದಕ್ಕೆ ಸಮಾಧಾನ ನೀಡುವುದು ಕಷ್ಟವೇನಲ್ಲ.  ಅಖಂಡಭಾರತದ ಕಲ್ಪನೆ ಏಕಿರಲಿಲ್ಲ? ಈಗಿಗಿಂತಲೂ ಹೆಚ್ಚಾಗಿಯೇ ಇತ್ತು - ಆಸೇತುಹಿಮಾಚಲಪರ್ಯಂತ ಭರತವರ್ಷದ ಕಲ್ಪನೆ. ಇನ್ನು ರಾಷ್ಟ್ರೀಯಭಾಷೆ ಎನ್ನುವ ಒಂದು ರಾಜಕೀಯ ಪರಿಕಲ್ಪನೆಯಿತ್ತೋ ಇಲ್ಲವೋ, ಆದರೆ ಉಚ್ಚಕುಲದ ಕ್ಷತ್ರಿಯರೆಲ್ಲ ಸಂಸ್ಕೃತ ಮಾತಾಡುತ್ತಿದ್ದರು ಎಂಬುದಂತೂ ತಿಳಿದದ್ದೇ.  ಕಾಳಿದಾಸನ ನಾಟಕಗಳಲ್ಲೂ ನೋಡಬಹುದು - ಕ್ಷತ್ರಿಯರಾಜರ ಪಾತ್ರಗಳು ಸಂಸ್ಕೃತದಲ್ಲೂ, ಸೇವಕ/ಸ್ತ್ರೀಪಾತ್ರಗಳು ಪ್ರಾಕೃತದಲ್ಲಿಯೂ ಸಂಭಾಷಿಸುತ್ತವೆ.  ಅಯೋಧ್ಯೆಯ ಭಾಷೆ ಅವಧಿಯೋ ಅಥವಾ ಸಂಸ್ಕೃತದ ಯಾವುದೋ ಪ್ರಾಕೃತರೂಪವೋ ಇದ್ದೀತು. ಆದರೆ ಉಚ್ಚಕ್ಷತ್ರಿಯಕುಲದಲ್ಲಿ ಜನಿಸಿದ ಚಕ್ರವರ್ತಿ ರಾಮನು ಸಂಸ್ಕೃತದಲ್ಲಲ್ಲದೇ ಬೇರೆ ಭಾಷೆಯಲ್ಲಿ ಮಾತಾಡುವುದುಂಟೇ? ಅಲ್ಲದೇ ಹನುಮಂತನು ಮಾತಾಡಿದ್ದು ಯಾವುದೋ ಸಂಸ್ಕೃತೇತರ ಭಾಷೆಯಾಗಿದ್ದರೆ ಅಲ್ಲಿ ಅಪಶಬ್ದಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ (ಇವತ್ತಿಗೂ ನಮ್ಮ ಟೀವಿಯವರನ್ನು ನೋಡಿ, ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ ತಮ್ಮ ಭಾಷಾಪ್ರಯೋಗದ ಬಗ್ಗೆ). ಆದರೆ ಹನುಮಂತನು ಬಹಳ ಜಾಗರೂಕನಾಗಿ, ಒಂದಿನಿತೂ ಅಪಪ್ರಯೋಗವಿಲ್ಲದೇ, ಸ್ಪಷ್ಟವಾಗಿ, ವ್ಯಾಕರಣಬದ್ಧನಾಗಿ ಮಾತಾಡುತ್ತಾನೆ; ಮತ್ತದನ್ನು ರಾಮನು ಗಮನಿಸಿ ಮೆಚ್ಚುತ್ತಾನೆ ಕೂಡ. ’ಶುದ್ಧತೆ’, ಸ್ಪಷ್ಟತೆ, ವ್ಯಾಕರಣಗಳ ಬಗ್ಗೆ ಇಷ್ಟು ಗಮನ ಕೊಡಬೇಕಾದ ಭಾಷೆ ಯಾವುದು? ಸಂಸ್ಕೃತ ತಾನೆ? ಅದನ್ನವನು ರಾಮನ ಬಳಿ ಮಾತಾಡುತ್ತಾನೆ. ನಾವು ಇನ್ನೊಬ್ಬರ ಬಳಿ ಅವರ ಭಾಷೆ ಮಾತಾಡುವಾಗ ನಮ್ಮ ವ್ಯಾಕರಣಪ್ರಜ್ಞೆ ಇನ್ನಷ್ಟು ಜಾಗೃತವಾಗಿರುತ್ತದೆ, ಎಲ್ಲಿ ತಪ್ಪು ಮಾಡಿಬಿಡುತ್ತೇವೋ ಎಂದು. ಆದ್ದರಿಂದ ಆಗ ಹನುಮಂತ ಮಾತಾಡಿದ್ದು ರಾಮನ ಭಾಷೆಯಾದ ಸಂಸ್ಕೃತವನ್ನೇ ಎಂದು ಸುಲಭವಾಗಿ ಊಹಿಸಬಹುದು.  ಹೀಗೆ ರಾಮನೊಡನೆ ಅವನ ಭಾಷೆಯಲ್ಲೇ ಮಾತಾಡುವ ಔದಾರ್ಯ ತೋರಬೇಕಾದರೆ ಹನುಮನು ಕನ್ನಡಿಗನೇ ಎಂಬುದು ಸ್ಪಷ್ಟವಾಯಿತಲ್ಲ.

ಇನ್ನು ಲಂಕೆಯಲ್ಲಿ ಸಂಸ್ಕೃತವಿತ್ತೇ ಎಂಬ ಪ್ರಶ್ನೆಯೇ ಪ್ರಸ್ತುತವಲ್ಲ, ಏಕೆಂದರೆ ರಾಮ ಯಾವತ್ತೂ ಲಂಕೆಗೆ ಹೋಗಿ ಕೂತು ಮಾತಾಡಿದ್ದೇ ಇಲ್ಲ. ಯುದ್ಧದಲ್ಲಿ ಮಾತನಾಡುವುದು ಭಾಷೆಯಲ್ಲ, ಬಾಣ.  ಹನುಮಂತ ಮಾತ್ರ ಲಂಕೆಗೆ ಹೋಗಿದ್ದು, ಸಂಧಾನ ಮಾಡಿದ್ದು ಎಲ್ಲ ಹೌದು. ಅಲ್ಲಿ ಯಾವ ಭಾಷೆ ಮಾತಾಡಿದ? ಗೊತ್ತಿಲ್ಲ (ತಮಿಳಿನಲ್ಲೇ ಮಾತಾಡಿರಬಹುದು - ಅವನು ಕನ್ನಡಿಗನೇ ಎಂಬ ವಾದಕ್ಕೆ ಇದರಿಂದ ಮತ್ತಷ್ಟು ಪುಷ್ಟಿ ಸಿಕ್ಕಿತಲ್ಲ!)

ಇಷ್ಟಾಗಿಯೂ ಹನುಮಂತನು ಕನ್ನಡಿಗನೆನ್ನುವುದು ಮನದಟ್ಟಾಗಲಿಲ್ಲವೇ?  ಸರಿ, ಇನ್ನೊಂದು ಬಲವಾದ ಪುರಾವೆ ಕೊಡುತ್ತೇನೆ ನೋಡಿ.  ಇಡೀ ರಾಮಾಯಣದಲ್ಲಿ ಎಲ್ಲೂ ಆತ ಕನ್ನಡದವನು ಎಂಬ ಸೂಚನೆಯಿಲ್ಲ, ಅದು ಹೋಗಲಿ, ಹನುಮಂತ ಎಲ್ಲಿಯೂ ತಾನು ಕನ್ನಡದವನು ಎಂದು ಹೇಳಿಕೊಂಡದ್ದಾಗಲೀ ಕನ್ನಡದಲ್ಲಿ ಮಾತಾಡಿದ್ದಾಗಲೀ ಇಲ್ಲ. ನವವ್ಯಾಕರಣಪಂಡಿತನಾದ ಹನುಮಂತ ಹೋಗಲಿ ಇತರ ಕಪಿಗಳೂ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುವಾಗಲೂ ಕನ್ನಡವಿಲ್ಲ! ಹನುಮಂತ ಮತ್ತಿತರ ಕಪಿಗಳು ಕನ್ನಡಿಗರೇ ಎನ್ನಲು ಇದು ದೊಡ್ಡ ಸುಳುಹು - ಇದ್ದೂ ಇಲ್ಲದಂತೆ ಕಂಡೂ ಕಾಣದಂತೆ ಅರಿತೂ ಅರಿಯದಂತೆ ಇರುವುದು. ಇದು ನಮ್ಮಲ್ಲಿ, ಕನ್ನಡಿಗರಲ್ಲಿ, ಇವತ್ತಿಗೂ ಎದ್ದು ಕಾಣುವ ಗುಣಲಕ್ಷಣವಲ್ಲವೇ?

ನಮ್ಮ ಸಾಫ್ಟ್ ವೇರ್ ಕಂಪನಿಗಳಲ್ಲಿ ಈಗಲೂ ನೋಡಿ - ತಮಿಳನು ಇನ್ನೊಬ್ಬ ತಮಿಳನನ್ನು ಪಕ್ಕನೆ ಗುರುತಿಸಿಬಿಡುತ್ತಾನೆ, ತೆಲುಗರು ತೆಲುಗರನ್ನು, ಮರಾಠಿಗರು ಮರಾಠಿಗರನ್ನು - ಅದೇನು ಮುಖಲಕ್ಷಣದಿಂದಲೋ, ಮೈಭಾಷೆಯಿಂದಲೋ ಅಥವಾ ವಾಸನೆಯಿಂದ ಗುರುತಿಸುತ್ತಾರೋಪ್ಪ. ಅವರಿಬ್ಬರೇ ಇರಲಿ, ಅಥವಾ ಒಂದು ಗುಂಪಿನಲ್ಲಿರಲಿ, ಅವರು ಪರಸ್ಪರ ಮಾತಾಡುವುದು ತಮ್ಮ ಭಾಷೆಯಲ್ಲೇ - ಗುಂಪಿನಲ್ಲಿ ಬೇರೆಬೇರೆ ಭಾಷೆಯ ಇತರರೂ ಇದ್ದರೂ ಅವರಿಗದು ಅಲಕ್ಷ್ಯ. ಅದೇ ಜಾಗದಲ್ಲಿ ಇಬ್ಬರು ಕನ್ನಡಿಗರಿದ್ದರೆನ್ನಿ - ಅವರು ಹಾಗೆ ಮಾಡಿಯಾರೇ?  ಖಂಡಿತಾ ಇಲ್ಲ.  ಇತರರಿದ್ದಾಗ ನಾವು ನಮ್ಮ ಭಾಷೆಯಲ್ಲಿ ಮಾತಾಡಿಕೊಂಡರೆ ಅವರನ್ನು ಹೊರಗಿಟ್ಟಂತಾಗುವುದಿಲ್ಲವೇ?  ಆದ್ದರಿಂದ ಗುಂಪಿನಲ್ಲಂತೂ ಅವರು ಬಳಸುವುದು ಗುಂಪಿನ ರಾಷ್ಟ್ರೀಯಭಾಷೆಯಾದ ಹಿಂದಿಯನ್ನೇ, ಪರಸ್ಪರರನ್ನು ಉದ್ದೇಶಿಸಿ ಮಾತಾಡುವಾಗಲೂ! ಇನ್ನು ಗುಂಪಿಲ್ಲದೇ ತಾವಿಬ್ಬರೇ ಇದ್ದಾಗಲೂ ಅವರು ಮಾತಾಡುವುದು ಕನ್ನಡದಲ್ಲಲ್ಲ, ಇಂಗ್ಲಿಷಿನಲ್ಲಿ. ಅಷ್ಟೇಕೆ, ಎಷ್ಟೋ ಬಾರಿ ವರ್ಷಗಟ್ಟಲೇ ಜೊತೆಯಲ್ಲೇ ಕೆಲಸ ಮಾಡಿದ್ದರೂ ಅವರಿಬ್ಬರಿಗೂ ಪರಸ್ಪರರು ಕನ್ನಡಿಗರೆಂಬ ವಿಷಯ ಗೊತ್ತಾಗುವುದೇ ಇಲ್ಲ. ಹೊರಗಿನವರೊಬ್ಬರು "ಏ ಭೀ ಆಪ್ ಕೇ ಹೈ, ಕನ್ನಡ್ ಹೈ" ಎಂದು ಪರಿಚಯ ಮಾಡಿಕೊಟ್ಟಾಗಲೇ ಗೊತ್ತಾಗುವುದು.  ಆಗಲೂ ಏನು, ಇತರ ಭಾಷಿಕರಂತೆ ಹಾ ಹೂ ಎಂದು ಉದ್ರೇಕ ತೋರುವುದಿಲ್ಲ - "ಓ... ಹೌದಾ" ಎಂಬ ಉದ್ಗಾರ, ಮತ್ತು ಹೆಚ್ಚೆಂದರೆ ಒಂದು ಮುಗುಳ್ನಗೆ, ಅಷ್ಟೇ.  ಆಮೇಲಿನಿಂದ ಇಬ್ಬರೇ ಇದ್ದಾಗ ಗುಟ್ಟಿನಲ್ಲಿ ಮಾತಾಡುವುದಕ್ಕಷ್ಟೇ ಕನ್ನಡ. ಹೊರಗಡೆ ಇಂಗ್ಲಿಷು ಅಥವಾ ರಾಷ್ಟ್ರೀಯಭಾಷೆಯಾದ ಹಿಂದಿಯೇ.

ಈಗಲಾದರೂ ತಿಳಿಯಿತೇ, ಹನುಮನು ಕನ್ನಡಕುಲಪುಂಗವನೇ ಎಂದು?  ಇಲ್ಲವೇ?  ನನಗೆ ತಿಳಿಯಿತು ಬಿಡಿ - ತಾವು ಹದಿನಾರಾಣೆ ಕನ್ನಡಿಗರೇ ಸರಿ, ನನ್ನಂತೆ.