Showing posts with label ೧೪. ಅರ್ಥಚಿಂತನೆ. Show all posts
Showing posts with label ೧೪. ಅರ್ಥಚಿಂತನೆ. Show all posts

Friday, August 5, 2016

ಸವಿಯಬಾರದ ಹಣ್ಣು...

ಇತ್ತೀಚಿಗೆ ಕನ್ನಡದ್ದೇ ಪದಗಳನ್ನು ಬಳಸಬೇಕೆಂಬ ಪ್ರಚಾರದಡಿಯಲ್ಲಿ ಟೊಮ್ಯಾಟೋ ಮತ್ತು ಕ್ಯಾರೆಟ್ ಗಳಿಗೆ ಗೂದೆಹಣ್ಣು ಮತ್ತು ಕೆಂಗೆಣಸು ಎಂಬ ಹೆಸರು ಬಳಸಿ ಎಂದು ಹೇಳಲಾಗುತ್ತಿದೆ.  ಹೀಗೆ ಕರೆಕೊಡುವ ವಿಡಿಯೋ ತುಣುಕೊಂದು ಇಲ್ಲಿದೆ. 

https://www.facebook.com/TheKachaguli/videos/1063052510445410/

ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ.  ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ.  ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ.  ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ.  ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.

ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ.  ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ.  ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.

ಗೂದೆ ಎನ್ನುವ ಪದಕ್ಕೆ ಕನ್ನಡದಲ್ಲಿ ಅಷ್ಟು ಬಾಯಿಚಪ್ಪರಿಸುವ ಅರ್ಥವೇನಿಲ್ಲ.  ಕೆಲವೊಮ್ಮೆ ಮಲದ್ವಾರದಲ್ಲಿ ದುರ್ಮಾಂಸ ಬೆಳೆದು, ಮಲವಿಸರ್ಜನೆಯ ಸಮಯದಲ್ಲಿ ಹೊರಬಂದುಬಿಡುತ್ತದೆ; ಇದನ್ನು ಕೈಯಿಂದ ಒಳತಳ್ಳಬಹುದು - ಅಸಾಧ್ಯ ನೋವಾಗುತ್ತದೆಂಬುದು ಅನುಭವಿಸಿದವರ ನುಡಿ.  ಇದನ್ನು ಮೂಲವ್ಯಾಧಿ (anal prolapse/piles/fistula) ಎನ್ನುತ್ತಾರೆ.  ಹೀಗೆ ಹೊರಬರುವ ಕೆಂಪನೆಯ ಭಾಗವೇ ಗೂದೆ.  ಅದಕ್ಕೇ ಈ ರೋಗಕ್ಕೆ ಗೂದೆರೋಗ ಎಂದೂ ಹೆಸರು.  ಕೆಲವು ಜಾತಿಯ ಮಂಗಗಳಲ್ಲಿ ಪೃಷ್ಠಭಾಗವು ಕೆಂಪಗೆ ಊದಿ ಹೊರಚಾಚಿಕೊಂಡಂತಿರುತ್ತದೆ.  ಸಂಗಾತಿಯನ್ನು ಆಕರ್ಷಿಸಲು ಇದು ಸಹಕಾರಿ ಎಂದು ಪ್ರಾಣಿಶಾಸ್ತ್ರಜ್ಞರ ಅಂಬೋಣ.  ಇದನ್ನು ಮಂಗನಗೂದೆ ಎನ್ನುತ್ತಾರೆ. 

ಸೊಗಸಾಗಿ ರಸತುಂಬಿ ನಳನಳಿಸುವ ಟೊಮ್ಯಾಟೋ ವಿಷಯ ಬರೆಯಹೋಗಿ ಇದನ್ನು ವಿವರಿಸಬೇಕಾಯಿತು ನೋಡಿ, ಇರಲಿ, ಈಗ ಟೊಮ್ಯಾಟೋ ವಿಷಯಕ್ಕೆ ಬರೋಣ.  

ಟೊಮ್ಯಾಟೋ ಭಾರತದ ಸ್ಥಳೀಯ ಹಣ್ಣಲ್ಲ.  ಆದ್ದರಿಂದಲೇ ಇದಕ್ಕೊಂದು ಸ್ಥಳೀಯ ಹೆಸರಿಲ್ಲ.  ಇದನ್ನು ಭಾರತಕ್ಕೆ ತಂದಿದ್ದು ಪೋರ್ತುಗೀಸರು, ಹದಿನಾರು-ಹದಿನೇಳನೆಯ ಶತಮಾನದ ಸುಮಾರಿಗೆ.  ಎಲ್ಲ ವಿದೇಶೀ ವಸ್ತುಗಳ ವಿಷಯದಲ್ಲಾಗುವಂತೆ ಇದನ್ನೂ ಸ್ಥಳೀಯರು ಅನುಮಾನ ಅಸಹ್ಯಗಳಿಂದಲೇ ನೋಡಿದರು.  ಹೀಗಾಗಿ ತಿಪ್ಪೆಯ ಮೇಲೆ ಬೆಳೆಯುವ ಈ ಹಣ್ಣು ಅವರಿಗೆ ಪೃಷ್ಠದಿಂದ ಹೊರಚಾಚಿದ ದುರ್ಮಾಂಸದಂತೆ ಅಸಹ್ಯಕರವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ.  ಗೂದೆಹಣ್ಣು ಹೆಸರು ಪ್ರಚಾರ ಮಾಡುವವರಿಗೆ ಬಹುಶಃ ಇದರ ಅರಿವಿಲ್ಲವೇನೋ.  ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಉದಾಹರಣೆಗೆ ಇಡ್ಲಿಯನ್ನು rice cake, backed rice ball ಎಂಬ ಏನೇ ಹೆಸರಿನಿಂದ ಕರೆದರೂ ಅದು ಇಡ್ಲಿಯಾಗುವುದಿಲ್ಲ, ಇಡ್ಲಿ ಇಡ್ಲಿಯೇ.  ಹಾಗೆಯೇ ದ್ವಿಚಕ್ರವಾಹನವು ಸ್ಕೂಟರ್ ಆಗುವುದಿಲ್ಲ, ಅದು ಸೈಕಲ್ ಕೂಡ ಆಗಬಹುದು, ಆದರೆ ಸ್ಕೂಟರ್ ಸ್ಕೂಟರೇ, ಸೈಕಲ್ ಸೈಕಲೇ.  ತಮಿಳನ್ನು ಬಿಟ್ಟು ಭಾರತದ ಬೇರೆಲ್ಲ ಭಾಷೆಗಳಲ್ಲೂ ಈ ಹಣ್ಣಿಗೆ ಟೊಮ್ಯಾಟೋ ಅಥವ ಅದರ ವಿವಿಧ ರೂಪಗಳೇ ಹೆಸರು - ತಮೋಟ, ತಮಾಟ, ತಮಾಟರ್, ತಮೇಟೋ ಕಾಯಿ ಹೀಗೆ.  ತಮಿಳಿನಲ್ಲಿ ಇದನ್ನು ತಕ್ಕಾಳಿ ಎನ್ನುತ್ತಾರೆ ಆದರೆ ಅದೂ ಪ್ರಾಚೀನವಾದ ಹೆಸರೇನಲ್ಲ - ತಕ್+ಆಳ್+ಇ = ಆಳಿಗೆ ತಕ್ಕ ಪುಷ್ಠಿ ಕೊಡುವುದು ಎಂಬಂಥದ್ದೇನೋ ಅರ್ಥದಲ್ಲಿ ಅದನ್ನು ಹಾಗೆ ಕರೆಯುತ್ತಾರೆ.

ಟೊಮ್ಯಾಟೋ ನಮಗೆ ಟೊಮ್ಯಾಟೋ ಎಂದೇ ಪರಿಚಿತವಾದ ವಿದೇಶೀ ತರಕಾರಿ, ಅದು ಹಾಗಿರುವುದೇ ಚೆನ್ನ.  ನಮ್ಮವರೂ ಮೊದಮೊದಲು ಗೂದೆಹಣ್ಣು ಎಂಬ ಅಸಹ್ಯ ಹೆಸರನ್ನಿಟ್ಟು ಅಪಹಾಸ್ಯ ಮಾಡಿದರೂ ಆಮೇಲಾಮೇಲೆ ಅದನ್ನು ಅಪ್ಪಿ-ಕೊಂಡಿಲ್ಲವೇ?  ಈಗಂತೂ ಟೊಮ್ಯಾಟೋ ಯಾವುದೇ ಅಡುಗೆ ಮನೆಯ ಬಹುಮುಖ್ಯ ತರಕಾರಿಗಳಲ್ಲೊಂದು.  ಸೊಗಸಾದ ಟೊಮ್ಯಾಟೋ ಗೊಜ್ಜನ್ನು ಗೂದೆಹಣ್ಣಿನ ಗೊಜ್ಜು ಎಂದು ಕಲ್ಪಿಸಲಾದರೂ ಆಗುತ್ತದೆಯೇ, ಹಾಗೆ ಕಲ್ಪಿಸಿದರೆ ಆ ಗೊಜ್ಜು ಗಂಟಲಲ್ಲಿ ಇಳಿಯಬಹುದೇ?

ಇನ್ನು ಕೆಂಗೆಣಸು (carrot) ಎನ್ನುವುದೂ ಇತ್ತೀಚಿಗೆ ಕನ್ನಡ ಉತ್ಸಾಹಿಗಳು ಕಟ್ಟಿದ ಪದವಷ್ಟೇ.  ಪ್ರಾಚೀನಸಾಹಿತ್ಯದಲ್ಲಾಗಲೀ ಅಥವ ಜನಬಳಕೆಯಲ್ಲಾಗಲೀ carrot ಎಂಬುದಕ್ಕೆ ಕೆಂಗೆಣಸು ಎಂಬ ಬಳಕೆಯಿಲ್ಲ.  ಹೊಸ ಪದ ಕಟ್ಟುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕೆ ಅರ್ಥವನ್ನೂ ನೋಡಬೇಕಲ್ಲ?  ಕೆಂಪು + ಗೆಣಸು = ಕೆಂಗೆಣಸು; ಆದರೆ, ಕ್ಯಾರಟನ್ನು ಯಾವುದಕ್ಕಾದರೂ ಹೋಲಿಸುವುದೇ ಆದರೆ, ಅದು ಗೆಣಸಿಗಿಂತಾ ಮೂಲಂಗಿಗೇ ಹತ್ತಿರ.  carrot ನೋಡಲು ಕೆಂಪಾಗಿದ್ದ ಮಾತ್ರಕ್ಕೆ ಅದನ್ನು ಕೆಂಗೆಣಸು ಎನ್ನಲು ಆಗುವುದಿಲ್ಲ, ಗೆಣಸಿಗೂ ಕ್ಯಾರಟಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ - ರೂಪ, ಗುಣ, ಸ್ವಭಾವ ಎಲ್ಲದರಲ್ಲೂ. ಅದೇನೇ ಇರಲಿ ಕ್ಯಾರಟ್ ಭಾರತದ ಸ್ಥಳೀಯ ತರಕಾರಿಯೇ, ಹೊರಗಿನದೇನಲ್ಲ.  ಭಾರತದ ವಿವಿಧಭಾಗಗಳಲ್ಲಿ ಇದರ ಬೇರೆಬೇರೆ ಜಾತಿಗಳು ಬೆಳೆಯುತ್ತವೆ.  ಸಂಸ್ಕೃತದಲ್ಲಿ ಇದಕ್ಕೆ ಗರ್ಜರ ಎನ್ನುತ್ತಾರೆ.  ಅದೇ ಪ್ರಾಕೃತದಲ್ಲಿ ಗಜ್ಜರ ಆಗಿ, ಹಿಂದೀ ಮುಂತಾದ ಉತ್ತರ ಭಾಷೆಗಳಲ್ಲಿ ಗಾಜರ್ ಆಗಿಯೂ ಮತ್ತೆ ಕನ್ನಡದಲ್ಲಿ ಗಜ್ಜರಿ ಆಗೂ ಬಳಕೆಯಲ್ಲಿದೆ.  ಹಾಗೇ ನೆಲದೊಳಗೆ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳನ್ನೆಲ್ಲಾ ಸಂಸ್ಕೃತದಲ್ಲಿ ಮೂಲ/ಮೂಲಕ ಎಂಬ ಹೆಸರಿನಿಂದ ಗುರುತಿಸುವುದು ವಾಡಿಕೆ - ಮೂಲಕ, ಚಾಣಕ್ಯಮೂಲಕ, ದೀರ್ಘಮೂಲಕ, ನೇಪಾಳಮೂಲಕ - ಹೀಗೆ, ಕ್ಯಾರಟು, ಮೂಲಂಗಿ, ಗೆಣಸು, ಎಲ್ಲವೂ ಒಂದಿಲ್ಲೊಂದು ’ಮೂಲ’ಕವೇ.  ಇದೇ ಹಿಂದಿಯಲ್ಲಿ ಮೂಲೀ ಆಗಿ ಬರಬರುತ್ತಾ ಕೇವಲ ಮೂಲಂಗಿ ಎಂಬ ಒಂದು ತರಕಾರಿಗೆ ಮಾತ್ರ ಹೆಸರಾಗಿ ನಿಂತಿತು.  ಹಾಗೇ ಮೂಲಕ ಎನ್ನುವುದು ದ್ರಾವಿಡದಲ್ಲಿ ಮೂಲಗೈ ಆಗಿ ಮೂಳಂಗಿ ಆಗಿ (ಇಟ್ಟಿಗೆ > ಇಟ್ಟಂಗಿ; ಹಚ್ಚಿಗೆ > ಹಚ್ಚಂಗಿ ಆದಹಾಗೆ) - ಕೊನೆಗೆ ಮೈಯುದ್ದಕ್ಕೂ ಮುಳ್ಳಿನಂತೆ ಸಣ್ಣಸಣ್ಣ ಬೇರುಗಳಿರುವುದರಿಂದ ಮುಳ್ಳಂಗಿ ಆಯಿತು.  ಆಮೇಲೆ ಅದೇ ಹಿಂದಿಯ ಮೂಲೀ ಪ್ರಭಾವದಿಂದ ಮೂಲಂಗಿಯಾಗಿ ಬಳಕೆಗೆ ಬಂತು.  ಮುಳ್ಳಂಗಿ ದ್ರಾವಿಡಭಾಷೆಗಳಲ್ಲಿ ಬಹುಕಾಲದಿಂದ ಬಳಕೆಯಲ್ಲಿರುವ ಪದ.  ವಿಶಾಲಾರ್ಥದಿಂದ ಅರ್ಥವು ಕುಗ್ಗಿ ಒಂದು ವಸ್ತುವಿಗೇ ಸೀಮಿತವಾಗುವ ಉದಾಹರಣೆಯಿದು.

ಇನ್ನು ಮೈಯೆಲ್ಲಾ ಗಂಟುಗಂಟಾಗಿರುವ (ಗೆಣ್ಣುಗಳಿಂದ ತುಂಬಿರುವ)ದಕ್ಕೆ ಗೆಣಸು (ಗಿಣ್ > ಗೆಣ್ > ಗೆಣಸು).  ಉರುಟುರುಟಾಗಿ ಗೆಣ್ಣುಗಳಿಂದ ತುಂಬಿರುವ ಗೆಣಸಿನ ರೂಪವೇ ಬೇರೆ, ಸಪೂರವಾಗಿ ನೇರವಾಗಿರುವ ಕ್ಯಾರಟ್ಟಿನ ರೂಪವೇ ಬೇರೆ.  ಅದು ರೂಪದಲ್ಲಿ ಗೆಣಸಿಗಿಂತ ಮೂಲಂಗಿಗೇ ಹತ್ತಿರ.  ನೆಲದಲ್ಲಿ ಬೆಳೆಯುವ ಹಲವು ’ಮೂಲಂಗಿ’ಗಳಲ್ಲಿ (ಮೂಲ ಅಥವಾ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳಲ್ಲಿ) ಗರ್ಜರ (ಗಜ್ಜರಿ) ಸಹ ಒಂದು.  ಆದ್ದರಿಂದ ’ಮೂಲ’ಸಂಬಂಧದ ಹೆಸರು ಇದಕ್ಕೂ ಹತ್ತುತ್ತದೆ.  ಆದ್ದರಿಂದಲೇ ತಮಿಳಿನಲ್ಲಿ ಕ್ಯಾರೆಟ್ಟಿಗೆ ಮಂಜಳ್ ಮೂಲಂಗಿ (ಹಳದಿ/ಕೇಸರಿ ಮೂಲಂಗಿ) ಎಂಬ ನಿರ್ದೇಶನವೂ ಇದೆ.  ಕ್ಯಾರೆಟ್ಟಿಗೂ ಮೂಲಂಗಿಗೂ ಎಷ್ಟೋ ವ್ಯತ್ಯಾಸವಿದ್ದರೂ ಆ ವ್ಯತ್ಯಾಸವು ತೀರ ಕ್ಯಾರೆಟ್ಟು ಗೆಣಸುಗಳ ನಡುವಿನಷ್ಟಲ್ಲ.  ಆದ್ದರಿಂದ ಕರೆಯುವುದೇ ಆದರೆ, ಕೆಂಗೆಣಸು ಎಂದು ತಪ್ಪಾಗಿ ಕರೆಯುವುದಕ್ಕಿಂತ ಕೆಂಪುಮೂಲಂಗಿ ಎನ್ನುವುದು ಎಷ್ಟೋ ವಾಸಿ, ಆದರೆ ಮೂಲಂಗಿಯಲ್ಲೇ ಕೆಂಪುಮೂಲಂಗಿ ಕೂಡ ಈಗಾಗಲೇ ಇದೆ!  ಇಷ್ಟೆಲ್ಲಾ ತಾಪತ್ರಯಗಳ ಬದಲು ಈಗಾಗಲೇ ಇರುವ ಗಜ್ಜರಿ ಎನ್ನುವ ಹೆಸರೇ ಸೊಗಸಾಗಿದೆಯಲ್ಲವೇ, ಮೊದಲೇ ಹೇಳಿದಂತೆ ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಅದು ಇಲ್ಲಿ ಬಂದು, ಈ ಭಾಷೆಯ ಜಾಯಮಾನಕ್ಕೆ ಹೊಂದಿಕೊಂಡು ನೆಲೆಯೂರುತ್ತದೆ.  ಕ್ಯಾರಟ್ ಕೂಡ ಬಳಸುತ್ತಾ ಬಳಸುತ್ತಾ ಕನ್ನಡದ ಪದವೇ ಆಗಿದೆ.

Sunday, September 12, 2010

ಪರಪ್ಪನ ಅಗ್ರಹಾರ

ಇಲ್ಲ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಗೆಗಿನ ಲೇಖನವಲ್ಲ ಇದು.

ಗೂಗಲ್ ಬಝ್ ನಲ್ಲಿ ಗೆಳೆಯ ಬರತ್ ಕುಮಾರ್ "ಪರಪ್ಪನ ಅಗ್ರಹಾರ"ದ ಮೂಲದ ವಿಶ್ಲೇಷಣೆ ಮಾಡಿದ್ದರು. ಅವರ ಪ್ರಕಾರ:

ಪಾರ್ = ನೋಡಿಕೊಳ್ಳು = look after.... ಪಾರ್ + ಅಪ್ಪ => ಎಲ್ಲರನ್ನು ನೋಡಿಕೊಳ್ಳುವ ಅಪ್ಪ ==> ದೇವರು
ಪಾರಪ್ಪ = ದೇವರು = ಕಡವ

ಅದಕ್ಕೆ ಹಂಸಾನಂದಿಗಳ ಪ್ರತಿಕ್ರಿಯೆ ಹೀಗಿತ್ತು:

ಪಾರು (ಮಾಡುವ, ಗಾಣಿಸುವ) ಅಪ್ಪ -> ದಾಟಿಸುವ ಅಪ್ಪ = ದೇವರು
ಹೀಗಿರಬಾರದೇಕೆ ? ಪಾರು ಅನ್ನೋದಕ್ಕೆ ತಮಿಳಿನಲ್ಲಿ ನೋಡು ಅನ್ನುವ ಅರ್ಥವಿದ್ದರೂ, ಕನ್ನಡದ ಆಡು ಮಾತಿನ ಬಳಕೆಯಲ್ಲಿ ಅದು ಇರುವುದು ನನಗೆ ನೆನಪಿಗೆ ಬರುತ್ತಿಲ್ಲ.

ಇದೇ ರೀತಿ ಪಾರ್ವ, ಹಾರುವ -ಇಲ್ಲೂ ದಾಟು ಅನ್ನುವ ಅರ್ಥವೇ ಇರುವುದನ್ನೂ ಗಮನಿಸಬಹುದು.

ಇದಕ್ಕೆ ನನ್ನ ಪ್ರತಿಕ್ರಿಯೆ ಇದಾಗಿತ್ತು:

ಪಾರು ಅನ್ನುವುದಕ್ಕೆ ಕನ್ನಡದಲ್ಲೂ ನೋಡು (rather (ಕೊನೆಮುಟ್ಟಿಸುವಂತೆ) ನೋಡಿಕೋ, take care) ಅನ್ನುವುದೇ ಅರ್ಥ (ಪಾರು+ಪತ್ತೆ=ಪಾರುಪತ್ತೆ/ಪಾರುಪತ್ಯೆ). ತಮಿಳಿನಲ್ಲೂ ಇದು ಇದೇ ಅರ್ಥದಲ್ಲಿ ಬಳಕೆಯಲ್ಲಿದ್ದು ಅಮೇಲಾಮೇಲೆ ನೋಡು ಎನ್ನುವ ಸಾಮಾನ್ಯಾರ್ಥವೂ ದಕ್ಕಿದಂತೆ ತೋರುತ್ತದೆ.

ಇನ್ನು ಅಪ್ಪ ಅನ್ನುವುದು ಅದರ ಹಿಗ್ಗಿಸಿದ ಅರ್ಥದಲ್ಲಿ ದೇವರು ಎಂದಾದರೂ ಅದನ್ನು ಅಷ್ಟು ಹಿಗ್ಗಿಸುವ ಅಗತ್ಯವೇ ಇಲ್ಲ ಎನ್ನಿಸುತ್ತದೆ. ಪಾರು + ಅಪ್ಪ = ಪಾರುಪತ್ತೇದಾರ, ಯಜಮಾನನ ಅಗ್ರಹಾರ, sounds more practical interpretation

ಈ ಚರ್ಚೆ ನನ್ನಲ್ಲೆಬ್ಬಿಸಿದ ಆಲೋಚನಾತರಂಗಗಳ ಲೇಖನರೂಪವೇ ಇದು.

ಪಾರು (=ನಾಮಪದ: ಗಡಿ/ಸೀಮೆ; ಕ್ರಿಯಾಪದ: ಗಡಿದಾಟು) ಎನ್ನುವುದು ಪಾರ ಎನ್ನುವ ಸಂಸ್ಕೃತ ಶಬ್ದದಿಂದ ಬಂದಂತೆನಿಸುತ್ತದೆ. ಇದು ಸಂಸ್ಕೃತದ "ಪರ್" ಧಾತುವಿನಿಂದ ಬಂದಿರಬೇಕು. ಪರ ಅಂದರೆ, ಹೊರಗಿನದ್ದು. ಪಾರ = "ಸ್ವ" ವನ್ನು "ಪರ"ದಿಂದ ಬೇರ್ಪಡಿಸುವ ಸೀಮಾರೇಖೆ/ಗಡಿ (ವರ-ವಾರ; ಭರ-ಭಾರ; ಧರ-ಧಾರ ಇತಿವತ್); ಅಪಾರ = ಪಾರವಿಲ್ಲದ್ದು, ಬಹುಪಾರ = ಅನೇಕ ಗಡಿಯುಳ್ಳದ್ದು/ವಿಸ್ತಾರವಾದ ಗಡಿಯುಳ್ಳದ್ದು; ವ್ಯಾಪಾರ (ವಿ+ಆಪಾರ) = ಗಡಿಯಾಚಿನ ವ್ಯವಹಾರ (ಆಮದು), ಇತ್ಯಾದಿ ಸಂಸ್ಕೃತ ಪದಗಳನ್ನು ಗಮನಿಸಿ.

ಮನುಷ್ಯನ ಮೂಲಭೂತ ಅಡಚಣೆ/ಪರಿಮಿತಿಯೇ ವೇಗ. ಈ ಅಡಚಣೆಯೇ ಅವನ ಮಿತಿ/ಪಾರ. ಅದನ್ನು ದಾಟಬೇಕಾದರೆ ಮೇಲೆ ನೆಗೆಯಬೇಕು. ಆದ್ದರಿಂದ ಈ ಲಂಘನೆಯೇ "ಪಾರು"/"ಹಾರು" ಆಗಿರಬೇಕು. (ಪಾರ್ವ/ಹಾರುವ ಗಮನಿಸಿ. ಅದರ ಅರ್ಥ "ಹಾರಾಡು"ವವನಲ್ಲ, ಬದಲಿಗೆ ದಾಟುವವನು) ಆದ್ದರಿಂದ ಪಾರು ಎಂಬುದಕ್ಕೆ ಗಡಿದಾಟುವಂತೆ ನೆಗೆ/ದಾಟು ಎಂಬ ಅರ್ಥವಿದ್ದು, ಅದರಲ್ಲಿ ಬಲವೂ ವೇಗವೂ ಸೇರಿರುವುದರಿಂದ ಮುಂದೆ ಪಾರು ಎಂಬ ಪದಕ್ಕೆ ವೇಗವಾಗಿ ಚಲಿಸು ಎಂಬ ಅರ್ಥ ದೊರಕೊಂಡಂತೆ ತೋರುತ್ತದೆ. ಆದ್ದರಿಂದಲೇ ಕೇವಲ ನೆಗೆತವಲ್ಲದ ಹಕ್ಕಿಯ ಸ್ವಚ್ಛಂದ ಹಾರಾಟವೂ "ಪಾರು"/"ಹಾರು" ಎಂದೇ ಸೂಚಿತವಾಯಿತು. ಇನ್ನು ತೆಲುಗಿನ ಪಾರು = ಬಹುವೇಗವಾಗಿ ಓಡು ಎಂಬ ಪ್ರಯೋಗವನ್ನೂ ಗಮನಿಸಬಹುದು. ಇಲ್ಲೆಲ್ಲಾ ಒತ್ತು ಗಮ್ಯವನ್ನು ತಲುಪುವುದೇ.

ಅದೇನೇ ಇರಲಿ, ಹೀಗೆ ಗಮ್ಯವನ್ನು ತಲುಪಿಸುವ (ಕಾಣಿಸುವ) ಜವಾಬ್ದಾರಿಗೆ ಕನ್ನಡದಲ್ಲಿ "ಪಾರಗಾಣಿಸು", "ಪಾರುಪತ್ತೆ ನೋಡು" ಇತ್ಯಾದಿ ಬಳಕೆಯಿದೆ. ಜವಾಬ್ದಾರಿ ನಿರ್ವಹಿಸುವುದಕ್ಕೆ "ನೋಡಿಕೋ, ನೋಡು" ಎಂಬ ಬಳಕೆ ತಮಿಳಿನಲ್ಲೂ ಇರುವುದರಿಂದ ಕನ್ನಡದ ಪಾರಗಾಣು ಎನ್ನುವದಕ್ಕೆ ಸಮಾನಾರ್ಥಕವಾದ "ಪಾರಂಗಾಮಿಚ್ಚು/ಪಾರಂಗಾಣ್" ಎಂಬ ಬಳಕೆ ಮುಂದೆ ಚುಟುಕಾಗಿ "ಪಾತ್ತುಕೋ/ಪಾರ್" ಎಂದಾದಂತೆಯೂ, ಅದರ "ನೋಡಿಕೋ (look after)" ಎನ್ನುವ ಅರ್ಥದಿಂದ ಮುಂದೆ ಪಾತ್ತುಕೋ ಎನ್ನುವುದರ ಧಾತುವಾದ "ಪಾರ್" ಎನ್ನುವುದಕ್ಕೆ ನೋಡು ಎಂಬ ಸಾಮಾನ್ಯಾರ್ಥ ಬಂದಂತೆಯೂ ಕಾಣುತ್ತದೆ.

ಈ ಭಾಷಾಸಾಮ್ಯಗಳನ್ನು ಗಮನಿಸಿದಾಗ ತಮಿಳಿನ ಪಾರ್ ಎನ್ನುವುದರ ಇವತ್ತಿನ ಅರ್ಥ "ನೋಡು" ಮೂಲತಃ ಕನ್ನಡದಿಂದ ತಮಿಳಿಗೆ ಹೋದಂತೆಯೂ, ಹಾರು ಎನ್ನುವ ಅರ್ಥ ಕನ್ನಡ/ತೆಲಗು ದ್ರಾವಿಡಮೂಲದ್ದಾದರೂ ಭೌತಿಕ ಪದ ಸಂಸ್ಕೃತ ಮೂಲದಿಂದ ದ್ರಾವಿಡಕ್ಕೆ ಬಂದಂತೆಯೂ ಕಾಣುತ್ತದೆ.

ಅಷ್ಟಾದರೂ ಇಲ್ಲೇ ಹುಟ್ಟಿ ಬೆಳೆದು ನೆಲೆನಿಂದ "ಪಾರಪ್ಪ/ಪರಪ್ಪ" ನಮ್ಮವನೇ ಎನ್ನಲಡ್ಡಿಯಿಲ್ಲ. ಆದರೆ ಪರಪ್ಪನ ಅಗ್ರಹಾರ ನಮ್ಮದೆಂದರೆ ಮಾತ್ರ ತುಸು ಇರುಸುಮುರುಸಾಗಬಹುದೇನೋ.