Sunday, August 8, 2010

ಕಿ ರಂ ನಾಗರಾಜ್ ಇನ್ನಿಲ್ಲ !


ದಿಗ್ಭ್ರಮೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನೆನ್ನೆ ಸಂಜೆಯಷ್ಟೇ ಗೆಳೆಯ ಶ್ರೀಕಾಂತರೊಡನೆ ಮಾತಾಡುತ್ತಾ ಮಾತು ಕಿ ರಂ ಬಗ್ಗೆ ತಿರುಗಿತ್ತು. ಶ್ರೀಕಾಂತ್ ಆಗಷ್ಟೇ ಸುಚಿತ್ರಾ ಚಲನಚಿತ್ರ ಸೊಸೈಟಿಯ ಆವರಣದಲ್ಲಿ ನಡೆದ "ಮತ್ತೆ ಬಂತು ಶ್ರಾವಣ" ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಕಾರ್ಯಕ್ರಮ ಸುಮಾರು ೭.೩೦ ಕ್ಕೆ ಮುಗಿದಿದೆ. ಕಾರ್ಯಕ್ರಮ ಮುಗಿದ ನಂತರ ಇನ್ನೊಬ್ಬ ಗೆಳೆಯ ಸತ್ಯ ಅವರಿಗೆ ಕಿ ರಂ ಅವರನ್ನು ಪರಿಚಯಿಸಿದ್ದಾರೆ, ಅವರೊಂದಿಗೆ ಮಾತಾಡಿದ ಶ್ರೀಕಾಂತ್ ಮನೆಗೆ ಬಂದೊಡನೆ gtalkನಲ್ಲಿ ನನ್ನೊಡನೆ ಮಾತಾಡುತ್ತಾ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ಆಗಿನ್ನೂ ರಾತ್ರಿ ೮.೩೦. ಮಾತು ಕಿ ರಂ ಅವರ ಕಾವ್ಯಾಸಕ್ತಿಯ ಬಗ್ಗೆ, ಕನ್ನಡದೆಡೆಗೆ ಅವರ ನಿಲುವಿನ ಬಗ್ಗೆ ಸಾಗಿದೆ, ಹೀಗೇ ಸುಮಾರು ಎರಡು ಗಂಟೆ ಹರಟಿದ್ದೇವೆ. ಅದಾದನಂತರ ಗೆಳೆಯ ಜಯಂತರ ಬ್ಲಾಗನ್ನೋದುತ್ತಾ ಅಲ್ಲಿ ಸಿಕ್ಕಿದ "ಅವಧಿ"ಯ ಲಿಂಕ್ ಹಿಡಿದು ಅಲ್ಲಿಗೆ ಹೋದರೆ ಕಿ ರಂ - ಲಂಕೇಶರಬಗ್ಗೆ ಒಂದು ಫೋಟೋ ಲೇಖನ. ಮತ್ತೆ ತುಸುಹೊತ್ತಿನ ಬಳಿಕ ಬೇರಾವುದೋ ಕವನದ ಲಿಂಕ್ ಅನುಸರಿಸಿ "ಕೆಂಡಸಂಪಿಗೆ" ಈ-ಪತ್ರಿಕೆಗೆ ಹೋದರೆ ಅಲ್ಲಿ ಕಿ ರಂ ಬಗೆಗೆ ಮತ್ತೊಂದು ಲೇಖನ, ಅಬ್ದುಲ್ ರಶೀದರಿಂದ. ಅದೇಕೋ ಮನಸ್ಸಿನಲ್ಲಿ ಕಿ ರಂ ಏನಾದರೂ ಸತ್ತುಹೋದರೋ ಎಂಬ ಭಾವನೆ ಬಂದು ಹೋಯಿತು. ಎಷ್ಟೆಂದರೆ ಈ ಲೇಖಕ್ಕೆ "ಕಿ ರಂ ಕ್ಷೇಮವಷ್ಟೇ" ಎಂದು ಕಾಮೆಂಟ್ ಹಾಕಹೊರಡುವಷ್ಟು. ಲೇಖನವೂ ಶ್ರದ್ಧಾಂಜಲಿಯಂತೆಯೇ ಇತ್ತು. ಆದರೆ ಅದು ಶ್ರದ್ಧಾಂಜಲಿಯಾಗಿರಲಿಲ್ಲ, ಅದು ಪ್ರಕಟವಾದ ಸಮಯ ಶುಕ್ರವಾರ ಮಧ್ಯರಾತ್ರೆ; ನಾನು ನೋಡುತ್ತಿದ್ದದ್ದು almost ಭಾನುವಾರ ಬೆಳಗಿನ ಜಾವ.

ಆದರೂ ಕಿರಂ ಬಗ್ಗೆ ಇದೇನು ಇಷ್ಟೊಂದು ಇವತ್ತು ಎನಿಸಿ ಕಿ ರಂ ನಾಗರಾಜ್ ಎಂದು ಗೂಗಲಿಸಿದವನಿಗೆ ಭಾರಿ ಶಾಕ್ ಕಾದಿತ್ತು, ಕಿ ರಂ ನಾಗರಾಜ್ ಇನ್ನಿಲ್ಲ! ಅವತ್ತು update ಆದ ವೆಬ್ ಪುಟಗಳ ಸಂಖ್ಯೆ ೪, ಅದರಲ್ಲಿ ಸಾವಿನ ಸುದ್ದಿ ಹೊತ್ತದ್ದು ಒಂದೇ ಪುಟ, ಆಗಷ್ಟೇ ಎರಡು-ಮೂರು ಗಂಟೆಗಳ ಹಿಂದೆ ಪ್ರಕಟವಾದದ್ದು

ಕನ್ನಡದ ಹಿರಿಯ ವಿಮರ್ಶಕ, ಚಿಂತಕ ಕಿ ರಂ ನಾಗರಾಜ್ ಬಗ್ಗೆ, ಅವರ ಕಾವ್ಯಪ್ರೀತಿಯಬಗ್ಗೆ, ಮಾತಿನಲ್ಲೇ ರನ್ನ ಪಂಪ ಬೇಂದ್ರೆಯರನ್ನು ಪುನಃಸೃಷ್ಟಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ ಬರೆಯುವ ಅವರ ಸಾವಿರಾರು ಶಿಷ್ಯರಿದ್ದಾರೆ. ಕಿ ರಂ ಕಾವ್ಯದ ಬಗ್ಗೆ ಮಾತಾಡಿದರೆ ಅದೊಂದು ಬೇರೆಯೇ ಲೋಕವಿದ್ದಂತೆ ಎನ್ನುವ ಗೆಳೆಯ ಸತ್ಯರಿಗಂತೂ ಕಿ ರಂ ಅಂದರೆ ದೇವರೇ ಸರಿ. ಅವರನ್ನು ಪರಿಚಯಿಸಿಕೊಡುವಂತೆ ಸತ್ಯರಿಗೆ ಅನೇಕಬಾರಿ ದುಂಬಾಲು ಬಿದ್ದಿದ್ದೇನೆ. ಆದರೂ ನನ್ನದೇ ಸೋಮಾರಿತನವೋ ಅದೇನೋ, ಅದೇಕೋ ಆಗಿಬರಲಿಲ್ಲ. ಕಿ ರಂ ಬಾಯಲ್ಲಿ ಕಾವ್ಯ ಕೇಳುವ ಪುಣ್ಯ ಕೊನೆಗೂ ಒದಗಲಿಲ್ಲ, ಇನ್ನು ಒದಗುವುದೂ ಇಲ್ಲ. ಜೀವನದಲ್ಲಿ ಹೀಗೇ ಅನೇಕ ಬಸ್ಸುಗಳನ್ನು ಮಿಸ್ ಮಾಡಿಕೊಂಡಿದ್ದೇನೆ.

ಎರಡೋ ಮೂರೋ ವರ್ಷಗಳ ಹಿಂದೆ ಬಿ ಪಿ ವಾಡಿಯ ರಸ್ತೆಯಲ್ಲಿ ಬ್ಲಾಗ್ ಬರಹಗಾರರ ಪುಟ್ಟದೊಂದು ಸಮಾವೇಶ ಜರುಗಿತು. ಆಗ ಅಲ್ಲಿಗೆ ಬಂದ ಕಿ ರಂ ತಮ್ಮ ಚಿಕ್ಕ ಭಾಷಣದಲ್ಲಿ ಕನ್ನಡ ಲಿಪಿ ಸುಧಾರಣೆಯ ಬಗ್ಗೆ ಮಾತಾಡಿದರು. ಆ ಬಗ್ಗೆ ಅವರ ನಿಲುವುಗಳು ನನಗೆ ಸರಿಬೀಳಲಿಲ್ಲ, ಜೊತೆಗೆ ತುಸು ಆಶ್ಚರ್ಯವನ್ನೂ ತಂದಿತು. ಪ್ರಶ್ನೆಗಳನ್ನು ರೂಪಿಸಿಕೊಂಡು ಎದ್ದು ನಿಂತು ಪ್ರಸ್ತುತಪಡಿಸುವಷ್ಟರಲ್ಲಿ ಮಾತು ಮುಗಿಸಿದ ಕಿ ರಂ ಕೂಡಲೇ ಹೊರಟುಬಿಟ್ಟಿದ್ದರು.

ಈ ಬಗ್ಗೆ ಈಗ ೫-೬ ಗಂಟೆಗಳ ಹಿಂದಷ್ಟೇ ಶ್ರೀಕಾಂತರೊಡನೆ ಮಾತಾಡುತ್ತಾ ನಗೆಯಾಡಿದ್ದೆ. ಕಿ ರಂ ಎದುರು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಬೇಕೆಂದಿದ್ದೆ. ಇವತ್ತು ಕಿ ರಂ ಈ ಲೋಕವನ್ನೇ ಬಿಟ್ಟು ಹೊರಟುಬಿಟ್ಟಿದ್ದಾರೆ, ನನ್ನ ಪ್ರಶ್ನೆಗಳು ಹಾಗೆಯೇ ಉಳಿದಿವೆ.