Saturday, August 11, 2018

ಬೆಳಕಿನ ಹಾಡು (ಸಂ: ಕಾಂತಿಕಾವ್ಯಮ್) - ನವೀನ ಗಂಗೋತ್ರಿಯವರ ಅನುವಾದ

ವಿದ್ವನ್ಮಿತ್ರರಾದ ಶ್ರೀ Naveen Gangotriಯವರು, ದೀಪಾವಳಿಯನ್ನು ಕುರಿತ ನನ್ನ "ಬೆಳಕಿನ ಹಾಡು" ಪದ್ಯವನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಈಗ್ಗೆ ಮೂರುವರ್ಷದ ಹಿಂದಿನ ಅನುವಾದವಿದು, ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ್ದೆ, ಕಳೆದುಹೋಗಬಾರದೆಂದು ಇಲ್ಲಿ ಸೇರಿಸಿಡುತ್ತಿದ್ದೇನೆ (ನನ್ನ ಮೂಲಪದ್ಯದ ಕೊಂಡಿ ಇಲ್ಲಿದೆ

ಪುಟ್ಟ ಕುಟುಂಬವೊಂದರ typical ಹಬ್ಬದ ಸಂಭ್ರಮವನ್ನು ಮನೆಮಟ್ಟಿನ ಭಾಷೆಯಲ್ಲಿ ಚಿತ್ರಿಸುವ ಈ ಕವನವು ಸಂಸ್ಕೃತದಂಥಾ ಔಪಚಾರಿಕ, ಗ್ರಾಂಥಿಕ ಭಾಷೆಯಲ್ಲಿ ಇಷ್ಟು ಸೊಗಸಾಗಿ ಬರಬಹುದೇ ಎಂಬ ಬೆರಗು ನನ್ನದು! Falling in love all over again ಅಂತಾರಲ್ಲಾ, ಹಾಗೆ ನನ್ನ ಪದ್ಯದೊಡನೆ ನಾನೇ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ

ಅವರೇನೋ ಇದನ್ನು ಭಾವಾನುವಾದವೆಂದು ಹೇಳಿಕೊಂಡಿದ್ದಾರೆ, ಭಾವಾನುವಾದವೆಂದರೆ ಕೇವಲ ಸಾರಭೂತವಾದ, ಸಂಗ್ರಹಾನುವಾದವೆಂಬ ನಂಬಿಕೆಯಿರುವಾಗ ಇದಂತೂ ಪದಶಃ ಅಕ್ಷರಶಃ ಭಾವಾನುವಾದವೇ! ಮೂಲಪದ್ಯದ ಒಂದೊಂದು ಪದದ ಭಾವವನ್ನೂ ಗ್ರಹಿಸಿ ಅದನ್ನು ಯಥಾವತ್ತಾಗಿ ಸಂಸ್ಕೃತದಲ್ಲಿ ಮೂಡಿಸುವುದಲ್ಲದೇ ಅಕ್ಷರಗಳ ನಾದವನ್ನೂ ಕೂಡಿದಮಟ್ಟಿಗೂ ಹಿಡಿದಿಡುವ ಪ್ರಯತ್ನವನ್ನು ಇಲ್ಲಿನ ಒಂದೊಂದು ಸಾಲಿನಲ್ಲೂ ಕಾಣಬಹುದು. ಈ ಪುನಸೃಷ್ಟಿ ಕೇವಲ ಭಾಷಾಪಟುತ್ವದಿಂದ ಆಗುವಂಥದ್ದಲ್ಲ - ಒಬ್ಬ ಸ್ವತಃ ಕವಿಗಷ್ಟೇ ಸಾಧ್ಯವಾಗುವ ಕೆಲಸವೆಂಬುದು ನನ್ನ ಅನಿಸಿಕೆ! ಈ ಪ್ರಯತ್ನದಲ್ಲಿ ಇವರು ಸೃಷ್ಟಿಸುವ ಉಜ್ವಲ ಸಮಸ್ತಪದಗಳು; ಪದ್ಯದ ಉತ್ಸಾಹವರ್ಧನೆ-ಪ್ರಶಮನಗಳಿಗಾಗಿ ಮೂಲದಲ್ಲಿ ಬಳಸಿರುವ "ರಗಳೆ" ಛಂದಸ್ಸಿನ ವಿವಿಧ ಪ್ರಭೇದಗಳಿಗನುಗುಣವಾಗಿ ಅರ್ಥಪೂರ್ಣವಾಗಿ ಬಳಸುವ, ಅವೇ ಭಾವಗಳನ್ನು ಬಿಂಬಿಸುವ ಛಂದಸ್ಸುಗಳು - ಇವು ಬಹಳ ಖುಷಿಕೊಡುವಂಥದ್ದು.

ಮೂಲದ ಭಾವಮುದ್ರೆಯು ಸಂಸ್ಕೃತದ ಭಾಷೆ-ಲಯಗಳಲ್ಲಿ ಸಂಸ್ಕೃತದ ಸ್ವಭಾವಗೌರವಗಳಿಗೆ ತಕ್ಕಂತೆ ಸೊಗಸಾಗಿ ಒಡಮೂಡಿವೆ. ಕೆಲವೆಡೆಯಂತೂ ಅನುವಾದವು ಮೂಲವನ್ನು ಮಿಂಚಿ ನಿಂದಿವೆ. ಉದಾಹರಣೆಗೆ, "ಪ್ರಭಾವಲೀಪೂರ್ಣಸುದೀಪರಾಜಃ" ಎಂಬ ಭಾಗ. ಚುಕ್ಕಿ ಬೆಳಕ ಚೆಲ್ಲುವಲ್ಲಿ, ಹಕ್ಕಿ ಹಾಡು ಮೂಡುವಲ್ಲಿ ತನ್ನ ಹೊಳೆವ ಮೈ ಮುರಿಯುತ್ತಾ ಎದ್ದದ್ದು ಯಾವುದು? ದೀಪಗಳರಾಜನಾದ ದೀಪಾವಳಿಯೇ. ಹೊಳೆವ ಮೈಯಿನ ಬೆಳಕಿನ ಹಬ್ಬ ಎಂಬ ದೇಸೀ ಭಾವನೆಯು ಸಂಸ್ಕೃತದ ಗಾಂಭೀರ್ಯದಲ್ಲಿ "ಪ್ರಭಾವಲೀಪೂರ್ಣ ಸುದೀಪರಾಜ"ನಾಗಿದೆ - ಅಷ್ಟೇ ಅಲ್ಲ; ಆ ಬೆಳಗಿನ ಜಾವದಲ್ಲಿ ದಿನನಿತ್ಯವೂ ಎದ್ದು ಝಗಝಗಿಸುವವನು ಪ್ರಚಂಡಪ್ರಭನಾದ ದೀಪಗಳ ರಾಜ ಸಾಕ್ಷಾತ್ ಸೂರ್ಯನೇ. ಆ ರೀತಿಯಲ್ಲೂ "ಪ್ರಭಾವಲೀಪೂರ್ಣ ಸುದೀಪರಾಜ" ಎಂಬ ಪ್ರಯೋಗ ಸಾರ್ಥಕವಾಗಿದೆ. ಮೂಲದಲ್ಲಿಲ್ಲದ ಶ್ಲೇಷೆಯಿದು. ಹಾಗೆಯೇ ಮತ್ತೊಂದು ಕಲ್ಪನೆ, ""ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ" ಎಂಬ ಭಾಗದ್ದು. "ಏಳುಬಣ್ಣದಿಂದ್ರಚಾಪ ಬೆಳಕ ಸೆಳೆದು ಬಿಟ್ಟಿತೇಂ" (ಏಳುಬಣ್ಣದ ಇಂದ್ರಚಾಪವು ಬೆಳಕಿನ ಬಾಣ ಬಿಟ್ಟಿತೇ) ಎಂದು ನಾನು ಕಲ್ಪಿಸಿದ್ದರೆ, ಅನುವಾದಕರು ಬೆಳಕನ್ನೇ ಹುರಿಮಾಡಿ ಇಂದ್ರಚಾಪಕ್ಕೆ ಕಟ್ಟಿಬಿಟ್ಟಿದ್ದಾರೆ (ಸಮಂತತಃ ಕಿಂ ವಿಗುಣೀಕೃತಾದ್ಯುತಿಃ - ಗುಣ = ಹುರಿ).

ಹಾಗೆಯೇ "ಬಂದಳಿವಳು ಸರಸರ; ಚಂದವವಳ ಸಡಗರ" ಎಂಬಲ್ಲಿನ ’ಇವಳು’ ಎಂಬ ತುಸು ನಾಚಿಕೆಯ ಸಂಕೋಚದ ವಿಶೇಷಾರ್ಥ ಸಂಸ್ಕೃತದಲ್ಲೂ ಎಷ್ಟು ಮುದ್ದಾಗಿ ಒಡಮೂಡಿದೆ ನೋಡಿ ("ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್"). ಇಯಂ ಎಂಬ ಸಂಸ್ಕೃತದ ಸಾಮಾನ್ಯ ಸರ್ವನಾಮಕ್ಕೆ ಕನ್ನಡದ ’ಇವಳು’ ಎಂಬ ವಿಶೇಷಾರ್ಥವು ಸಂಸ್ಕೃತಸಾಹಿತ್ಯದಲ್ಲಿದೆಯೋ ಇಲ್ಲವೋ ತಿಳಿಯದು, ಆದರೆ ಈ ಶ್ಲೋಕವನ್ನೋದುವ ಕನ್ನಡಿಗರಿಗೆ ಮಾತ್ರ ಸಂಭ್ರಮದಿಂದ ಬರುವ ’ಇವಳು’ ಕಣ್ಣಿಗೆ ಕಟ್ಟುವುದಂತೂ ಖಂಡಿತ. ಇನ್ನು ಅಪ್ಪಟ ಕನ್ನಡ ಪದಗಳಾದ ಸುರುಬತ್ತಿ, ಚಕ್ಕುಲಿ, ಪುಳಿಯೋಗರೆ, ಕೋಸಂಬರಿ, ಒಬ್ಬಟ್ಟುಗಳು ಸಂಸ್ಕೃತದ ಜಾಯಮಾನಕ್ಕೆ ಭಂಗತರದೇ ಸುರ್ಸುರುಶಬ್ದಕುಂಡ, ಶಷ್ಕುಲೀ, ಪುಲೀಯೋಗಾರ, ಕೋಸಂಬರಿ, ಓಬ್ಬಟ್ಟುಗಳಾಗಿ ಅನುವಾದದಲ್ಲಿ ಒಡಮೂಡಿವೆ.

ನನ್ನ ಕವನವೊಂದಕ್ಕೆ ದೊರೆತ ಅತ್ಯುತ್ತಮ ಮೆಚ್ಚುಗೆಯಾಗಿ ನಾನಿದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇಂಥದ್ದೊಂದು ಅದ್ಭುತ ಅನುವಾದಕ್ಕಾಗಿ ಶ್ರೀ ನವೀನರಿಗೆ ಧನ್ಯವಾದವನ್ನು ಸೂಚಿಸುತ್ತಾ, ಮೂಲವನ್ನೂ ಅನುವಾದವನ್ನೂ ಒಟ್ಟಿಗೇ ಸವಿಯಲು ಅನುವಾದವಾಗುವಂತೆ ಎರಡನ್ನೂ ಒಟ್ಟಿಗೇ ಇಲ್ಲಿ ಪ್ರಕಟಿಸುತ್ತಿದ್ದೇನೆ:

ಬೆಳಕಿನ ಹಾಡು (ಸಂ: ಕಾಂತಿಕಾವ್ಯಮ್)
========================
ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

>> ತತಃ ಸುತಾರಾಗಣಮುಕ್ತಭಾಭಿಃ ಶಕುಂತಿಶಬ್ದಾಯಿತಸುಪ್ರಭಾತೇ
>> ತಮೋ ವಿನಿಘ್ನನ್ನುದತಿಷ್ಠದೇಷಃ ಪ್ರಭಾವಲೀಪೂರ್ಣಸುದೀಪರಾಜಃ ||೧||

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

>> ಸ್ನಾನಾಲಯೇ ತತ್ರ ಜಲಂ ವಿದುನ್ವತ್ ಕ್ವಥನ್ನದತ್ತಚ್ಚ ರವಂ ತನೋತಿ
>> ಹಸ್ತಸ್ಥಿತೋಷ್ಣೀಕೃತತೈಲಪಾತ್ರಾ ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್ ||೨||

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

>> ಚಲತ್ಕರಾಭ್ಯಾಮಭಿಲೇಪಯಂತೀ ತೈಲೇನ ಕಾಯಂ ಮುಖಮುತ್ತಮಾಂಗಮ್
>> ಮಾಽಕಾರಯತ್ ಸಾ ಸುಖಿತಂ ಪ್ರಸನ್ನಂ ಹಿತೋಷ್ಣಸಂವೇದನದಾನಶೀಲಾ ||೩||

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

>> ತಪಜ್ಜಲಂ ಜೀವಮಿಮಂ ಹಿನಸ್ತಿ ಕ್ರಂದನ್ನಹೋ ಸೋಢುಮಥಾಸ್ತಿ ಕೋ ಹಿ
>> ಫೇನಾವಲಿಪ್ತೇ ನಯನೇ ದ್ರವೇತೇ ಮುಕ್ತಿಸ್ಸಮಾಯಾಚ್ಚ ಕಥಂಚಿದಂತೇ || ೪ ||

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

>> ವಾಸೋ ನವಂ ತತ್ಸುಮನಂ ನವೀನಂ ಗಂಧೋ ನವೋ ನೂತನಮಸ್ತಿ ತೇಜಃ
>> ನಮನ್ತತೋನಾಥಮನಾಥಪಾಲಂ ಲೀಲಾಸ್ಫುಟತ್-ಸ್ಫೋಟಕಮಾದದಾತಿ || ೫ ||

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

>> ಉಚ್ಚೈಃ ಶಿಶುಃ ಕ್ರಂದತಿ ಶಬ್ದಭೀತಃ ಸುಪುತ್ರಕೇ ಫೋಟರತೇ ಬಹಿಷ್ಠೇ
>> ಅಸ್ಯಾಯಿದಂ ಸುರ್ಸುರುಶಬ್ದಕುಂಡಂ ಕಾಲಃ ಸಮೇತಃ ಪರಿಪಾತುಮತ್ತುಮ್ ||೬ ||

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

>> ಆಯಾಸಾಪಗಮಪ್ರಸಿದ್ಧವಿಫುಲಾನನ್ನಾದಿಕಾನಾದರಾತ್
>> ಪಲ್ಯಾದೀನಥಶಷ್ಕುಲೀಪರಿಯುತಂ ತದ್ರಾಜತಂ ರಾಯತಮ್
>> ಲಾಲಾಗ್ರಂಥಿವಿಭೇದಪೇಶಲಪುಲೀಯೋಗಾರಕೋಸಂಬರೀಮ್-
>> ಓಬ್ಬಟ್ಟಾದಿಸುರಾಜಸಗ್ಧಿಸಮಗಾನ್ ಭುಕ್ತ್ವಾ ರಮಸ್ವಾಧುನಾ ||೭||

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

>> ದಿಗಂತವಿಶ್ರಾಂತರವಿಂ ಕೃತಶ್ರಮಮ್ ದಿನಾಂತಕಾಲೇ ಕಿರಣಾ ವ್ಯಭೂಷಯನ್
>> ತದಂಗತೋ ತೋಯಕಣಾ ಪತಂತ್ಯಮೀ ಸ್ವವಾಸಸಾ ರಾತ್ರಿರಿಳಾಮವಾರಯತ್ ||೮ ||

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ

>> ಅಹೋ ವಿಭಾಭಾಸಿತಭೂರಭೂದಿಯಂ ನಭೋಭವದ್ವರ್ಣಚಯಾನುಲೇಪಿತಮ್
>> ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ ||೯ ||

ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

>> ಸಿತಶ್ರಿಯೋ ನಿಷ್ಕ್ರಮಿತಾ ಕ್ರಮಾದಿಮೇ ಸಿತೇತರಾ ಲೋಹಿತಪೀತನೀಲಕಾಃ
>> ಸ ಕಲ್ಪವೃಕ್ಷೋ ಕಿಮು ಪುಷ್ಪಿತಃ ಸ್ವತೋ ತಮಸ್ಸುರಾರಾಜಿತರಾಗರಂಜನಾತ್ ||೧೦||

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

>> ಮಂದಂಮಂದಂ ನುದತಿ ಪವನೇ ಪರ್ವಣಿ ಕ್ಲಾಂತಿಮಾಪ್ತೇ
>> ಖಾದಂಖಾದಂ ನಿಶಿತದುಚಿತಂ ಭಕ್ಷ್ಯಭೋಜ್ಯಂಸುಭೋಜ್ಯಂ
>> ತತ್ರಶ್ರಾಂತ್ಯಾ ಮುದಿತಮನಸಾ ತಲ್ಪಮಾರುಹ್ಯ ಸಾಕ್ಷಾತ್
>> ಭದ್ರಾಂನಿದ್ರಾಂ ಪಿಹಿತನಯನೋ ಪ್ರೀತಿಭಾರಃ ಸಮೇತಿ ||೧೧||

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

>> ಇತಿ ದೀಪಾವಲೀನಾಮಾ ಶಾಂತಿಮಾಪ್ನೋತಿ ಸೂತ್ಸವಃ
>> ವಿಕಿರನ್ಕಾಂತಿಮಾಮೋದಂ ಲೋಕೇ ಸರ್ವತ್ರ ಭಾಸತೇ || ೧೨ ||