Friday, September 14, 2007

ಶ್ರಾವಣ ಮುಗಿದ ಮೇಲೊಂದು ಸಂಜೆ

ಶ್ರಾವಣ ಮುಗಿಯಿತು,
ಗೌರಿ
ಬರುವ ಸಮಯ
ಆದರೂ ಬರಲಿಲ್ಲ
ಮಳೆ.

ಆಗಸದಿ ಕಿಕ್ಕಿರಿದ ಮೋಡ,
ಕಂಬಳಿ ಕವುಚಿದಂತೆ;
ಮೂರುದಿನದಿಂದ
ಒಂದೇ ಸಮ
ಧಗೆ,
ಮೂಗುಬ್ಬಸ;

ಅಲ್ಲಲ್ಲಿ ಮಿಂಚು -
ಒಳಗೆಲ್ಲೋ
ಮಿಡಿಯುವ ಕವಿತೆ
ಮೂಡಲೊಲ್ಲದು ಏಕೊ -
ನಡುವೆ ಸಣ್ಣನೆ ಗುಡುಗು,
ಮಳೆರಾಯ ನಕ್ಕಂತೆ -
ಆಹ! ಒಳ್ಳೆಯ ಉಪಮೆ -
ಆಗೊಮ್ಮೆ - ಈಗೊಮ್ಮೆ
ಬೀಸಿ ಬಹ ತಂಗಾಳಿ
ಆದರೂ
ಮಳೆಗೆ ಸಮನೇ ಹೇಳಿ!
ಮಾತು ಕೊಟ್ಟ ಮಳೆ
ಬರಲೇ ಬೇಕಲ್ಲ,
ಗೌರಿಯ ತಣಿಸಲಲ್ಲದಿದ್ದರೂ,
ಕಾವ್ಯದ ತಂತ್ರಕ್ಕಾದರೂ!

ಕಾಯುತ್ತೇನೆ,
ಹನಿಗಣ್ಣ ಮುಗಿಲಲಿ ನೆಟ್ಟು
ನೋಡುತ್ತೇನೆ;
ಮನದಿ ಮೂಡಿದ್ದನ್ನು
ಮುಂದಿರುವ ಕಾಗದದಿ
ಗೀಚುತಿದೆ ಪೆನ್ನು.
ಗುಡುಗಿಗೆಚ್ಚೆತ್ತ ಮಗು
ಅಳು ನಿಲಿಸಿ ನೋಡುತಿದೆ,
ಬರೆವ ಕಾಗದದ ಮೇಲವನ ಕಣ್ಣು;
ಅವಗೀಗ ಆಟದ ಸಮಯ.
ನೂರು ನಲ್ಗಬ್ಬಗಳ-
ನೊಮ್ಮೆಲೇ ಚಿಮ್ಮಿಸುವ ಹಾಲುನಗು-
ಮೊಗದಲ್ಲಿ
ಎರಡು ಹಲ್ಲು,
ಬಾಯ್ತುಂಬ ಜೊಲ್ಲು,
ಅಳು-ನಗು
ಬೆರೆತ ಮಳೆಬಿಲ್ಲು.

ಅರೆ ಇವನ!
ಕಾಗದವ ಕಸಗೊಂಡು
ನಗುತ ಓಡುವ ಪೋರ,
ಪುಟ್ಟ ಕೈಗಳಲಿದ್ದ ನನ್ನ ಕವನ,
ಸರ್ರ ಹರಿಯಿತು
ಮನೆಯ ತುಂಬಿ ಸುರಿಯಿತು
ಕೇಕೆ!
ಹೊರಗೆ ಧೋ... ಮಳೆ!

- ೧೩/೦೯/೨೦೦೭

Saturday, August 11, 2007

ನೀನು ೨

ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರ

ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಿ ಬರಬಹುದು,
ಅಥವ ಇಲ್ಲಿಂದೆನ್ನನುದ್ಧರಿಸಿಕೊಳಬಹುದು;
ಎರಡೂ ಪಾವನ!

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

- ೨೯/೦೧/೨೦೦೭

Sunday, August 5, 2007

ನೀನು ೧

ಅರೆ!
ನೀ ಯಾವಾಗ ಬಂದೆ?
ಬಂದದ್ದು ತಿಳಿಯಲೆ ಇಲ್ಲ!
ಬರುತಿರುವ ಸುದ್ದಿ ತಿಳಿಸುವುದಿರಲಿ,
ಕದವಾದರೂ ತಟ್ಟಿ ಬರಬಾರದೇ?
ತೆರೆದ ಬಾಗಿಲು ನಿಜ; ಹಾಗೆಂದು...
ಇರಲಿ ಬಿಡು, ತಮಾಷೆಗಂದೆ,
ನೀನು ಬಂದದ್ದೆ ಸಂತಸವೆನಗೆ.

ಹಗಲು ದುಡಿತದ
ನೆರಳು
ಕವಿದ ಕಾರಿರುಳಿನಲಿ
ಹೊರಳಾಟಳ ನಡುವೆ ಸಣ್ಣ ಜೊಂಪು;
ಕ್ಷಣದ ಸುಖ -
ನಿದ್ದೆ,
ಮಂಪರಲಿ ಹಿತ -
ವಾಗಿ ತೀಡುತ್ತಿರುವ ಮಲಯವಾತ
ಹೊತ್ತು ತಂದಿಹ ಪಾರಿಜಾತ
ಕುಸುಮದ ಕಂಪು;
ಚಿಲಪಿಲ ಹಕ್ಕಿಗೊರಳಿನ ಇಂಪು;
(ನಿನ್ನೊಡನೆ ತಂದುದೇನು?)
ದೂರದ ಮಸೀದಿಯಲಿ ಐದರ ನಮಾಜು,
ದೇಗುಲದಿ ಸುಬ್ಬಲಕ್ಷ್ಮಿಯು ಉಲಿವ
ಸುಪ್ರಭಾತ,
ದಿನವು ಆಗುವುದೆನಗೆ ಜೋಗುಳದ ಗೀತ.

ಕಣ್ತೆರೆದು ನೋಡೆ,
ನೀ
ಎಂದಿನಿಂದಲು ಇಲ್ಲೆ ಇದ್ದಂತೆ
ಸವ್ವಾರಿ ನಡೆಸಿದ್ದೆ ನನ್ನ ಮೇಲೆ;
ಹೊರಗೆ
ಬೀದಿಯ ತುಂಬ
ಹೊಸ ಚಿಗುರಿನೊಗರು,
ಹುರಿಯೆದ್ದ ಕಾಮನ ಬಿಲ್ಲು
ಮೆರವಣಿಗೆ ಹೊರಟಿತ್ತು ನೂರು ನೂರು;
ಮನೆಯ ಮುಂದೆಲ್ಲ
ನೂರ್ ಬಣ್ಣಗಳ ರಂಗೋಲೆ;
ಊರೆಲ್ಲ ಧರಿಸಿತ್ತು ಹಬ್ಬಗಳ ಮಾಲೆ.
ಈ ವಸಂತದ ಸಂತ -
ಸದ ಯಾವ ಕ್ಷಣದಲ್ಲಿ,
ಯಾವ ಮಾಯೆಯಲಿ ನೀ
ಹೊಕ್ಕು ಬಂದೆ?

ಎಂದಿನಿಂದಲು ನೀನಿಲ್ಲೆ
ಇದ್ದದ್ದೆ ನಿಜವಿರಬೇಕು;
ಇಲ್ಲದಿದ್ದರೆ,
ನೀನು ಕದ ದೂಡಿ ಒಳಬಂದರೂ
ಏಳದಿಹ ಕತ್ತೆ
ಆಸಾಮಿ ನಾನಲ್ಲ.
ಅಥವ
ನೀನು ಕಾಲಲಿ ಬೆಕ್ಕನಿಟ್ಟು ನಡೆದಿರಬೇಕು.

ಇರಲಿ,
ನಿನಗೀ ಸವಾರಿ ಖುಶಿ ತಂದಿತಷ್ಟೆ?
ನೀ ಸುಖದ ಸವ್ವಾರಿ ನಡೆಸಿರಲು
ಮನದೊಳೊಸರಿದ ಬೆಚ್ಚನೆಯ
ಚೊಚ್ಚಲನುಭವಕೊಂದು ರೂಪವ ಕೊಡಲು
ಹುಡುಕಿರಲು
ಕಂಡಳಾ ಸೊಗಸುಗಾತಿ;
ಅವಳ ಕೆನ್ನೆಯ ಕೆಂಪು
ನುಡಿಯಿಂಪು, ಮೈಸೊಂಪು,
ಕಣ್ಣಂಗಳದ ತುಂಬ ಬೆಳದಿಂಗಳು.

ನೀನಂತು ಮತ್ತೇರಿ ತೂಗುತಿದ್ದೆ;
ಮರದೆದೆಯ ಹದಗೊಳಿಸಿ,
ಹೂವಂತೆ ಮಿದುಗೊಳಿಸಿ,
ಮಡಗಿಸಿದೆ ಅದನವಳ ಕಾಲಡಿಯಲಿ.
ನಿನ್ನ ಮಾಯೆಯೆ ಮಾಯೆ!
ಮಡಗಿದ್ದು, ಕಾಲಡಿಗೆ ಸಿಲುಕಿ ನಲುಗಿರುವಾಗ
ತಡೆವ ಕಡುಕಠೋರತೆ ಹನಿಸಿ ಹೂವೆದೆಗೆ,
ಕಾದೆ,
ಸುಮವಜ್ರಸಮವೆನ್ನಿಸಿ!
ಏನಿದೀ ಹುಡುಗಾಟ?
ಮಗುವನೂ ಜಿಗುಟಿ ತೊಟ್ಟಿಲ ತೂಗುವಾಟ!

ಪೊರೆಯಲಿನ್ನೊಂದು ಕೈ
ಮೈ-ಮನಗಳೊಡನಾಟ;
ಅಮೃತವಾಗಿತ್ತಿಲ್ಲಿ
ಕಾಳಕೂಟ!

ಅಂತೂ
(ನಾ ನಿನ್ನ ಹೊತ್ತೆನೋ, ನೀನೆನ್ನ ಹೊತ್ತೆಯೋ)
ಮುನ್ನೆಡೆದಿರಲು
ಹಾದಿಬದಿ ಮರವೆಲ್ಲ ಕೆಂದಳಿರು,
ಹೂ-ಹಸಿರು,
ಹಣ್ಣ ಸವಿದಿಹ ಹಕ್ಕಿ,
ಅಂಕದೊಳಗಾಡುತಿಹ ಹೂ ಮಕ್ಕಳು;
ಹಿಮ್ಮೇಳ - ಮುಮ್ಮೇಳ
ಬೆಳ್ಗೊಡೆಯ ನೆರಳಡಿಗೆ
ಮುಗಿದಿರಲು ಅರ್ಧ ದಾರಿ,
ಏಕೋ ಸಣ್ಣಗೆ ಸುಸ್ತು;
ನಿಂತೆ
ಒಂದರೆಗಳಗೆ;
ಮೇಳಗಳ ಸದ್ದಿಲ್ಲ,
ದೂರದಲಿ ಕೂಗಿತ್ತು ಒಂಟಿ ಕಾಗೆ.
ತಲೆಯೆತ್ತಿ ನೋಡಿದರೆ
ಮೇಲೆ ಬೆಳ್ಗೊಡೆ
ಬಿಸಿಲು,
ಮಧ್ಯಾಹ್ನ ಒಂದೊ ಎರಡೋ!
ಕುರಿತ ಊರಿನ್ನು ನಾಲ್ಕೈದು ತಾಸಿರಬೇಕು.
ಇದ್ದಕಿದ್ದಂತೆ ನೀನೆಲ್ಲಿ ಹೊರಟೆ?
ಅಥವ
ನೀನಿಲ್ಲೆಂದು ಹೇಳಬರುವುದೂ ಇಲ್ಲ;
ಇಲ್ಲೆ ನಗುತಿವೆ ಪಾರಿಜಾತದರಳು.

ಸರಿ, ಇನ್ನು ನಡೆಯೋಣ,
ತಾಸೆರಡು ತಾಸಿನಲಿ ಕಂತೀತು ಸುಡುಬಿಸಿಲು
ಹರಡೀತು ಹೊನ್ನ ಹೊನಲು.
ಹಾದಿಬದಿಯಲ್ಲೊಂದು ಹೊಂಗೆ ಮರವಿದೆಯಂತೆ
ಹಿತವಂತೆ ಅದರ ನೆರಳು.

- ೨೧/೦೧/೨೦೦೭

Sunday, July 29, 2007

ಪದ್ದಕ್ಕ ಸತ್ತ ಸುದ್ದಿ

ಮಕರ
ಸಂಕ್ರಮಣದ ಮರುದಿನ
ಕರಿ ಹರಿದಿತ್ತು
ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;
ಆರು
ಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿ
ಯಾರ;
ಗುಣುಗುಣಿಸಿ ಕರೆದಿತ್ತುಫೋನು.

ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,
ಕೆಲಸದ ಕರೆಯನು ಬಿಟ್ಟು.
ಕೆಲಸದ್ದಂತೂ ಇರಲಿಕ್ಕಿಲ್ಲ,
ಅದಕೆ ಮೊಬೈಲಿದೆಯಲ್ಲ.
ಹಬ್ಬದ ಸಡಗರ ಖಂಡಿತ ಅಲ್ಲ,
ನೆನ್ನೆಯೆ ಮುಗಿದಿತ್ತೆಲ್ಲ!
ಮತ್ತೇನೀ ಕರೆ
ಬೆಳಗಿನ-
ಮಂಗಳ ವೇಳೆಯಲಿ?

ಕೊನೆಪಟ್ಟಿಯಲ್ಲಿಹರನೊಮ್ಮೆ ಮನ ನೆನೆದಿತ್ತು,
ಛೆ ಛೆ! ಮಂಗಳಮಸ್ತು!
ನಡುಗುಗೈಯನು ಪಿಡಿದು ನುಡಿದಿತ್ತು ಗ್ರಾಹಿ,
ದೂರದಿಂ ತಂದ ಸುದ್ದಿ;
ಪದ್ದಕ್ಕ ಸತ್ತರಂತೆ.
ಸುದ್ದಿ ಬರ
ಸಿಡಿಲೇನು ಆಗಿರಲಿಲ್ಲ;
ನೂರರ ವೃದ್ಧೆ ಪದ್ದಕ್ಕ
ಇದ್ದದ್ದೆ ಗೊತ್ತಿರಲಿಲ್ಲ.
ತುಂಬು ಜೀವ,ಇದ್ದಾಗೊಮ್ಮೆ ನೋಡಿ ಬರಬೇಕಿತ್ತು;
ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ;
ದಶರಾತ್ರ
ಜ್ಞಾತಿ
ಹತ್ತು ದಿನ
ಸೂತಕವಿರಬೇಕು.

ಅಣ್ಣ ನಡುಗುತ್ತಿದ್ದರು.
ಕೊರೆವ ಚಳಿ,
ಕಾಯಿಸಲು
ಗ್ಯಾಸಿಲ್ಲ, ಲೈಟಿಲ್ಲ, ನೀರಿನ್ನೂ ಬಂದಿಲ್ಲ;
ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು
ಹೊರಗೆ ಹೊರಡುವ ಮುನ್ನ,
ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ
ಮಂಗಳವಾರ
ರೇಡಿಯೋ ಮೊಳಗಿತ್ತು ನಾದಸ್ವರ.
ಹೊರಗೆ ಬೀದಿಯ ಮೇಲೆ ಹೂವು ಮಾರುತ್ತಿತ್ತು;
ಹಾಲೂ ಬಂತು, ಪೇಪರೂ ಬಂತು.
ಏಳಕ್ಕೆ ಎದ್ದ ಮಗು ಆಟವಾಡುತ್ತಿತ್ತು,
ಸಂದ ನೂರರ ಹರಕೆ ತುಂಬಿದಂತೆ.

- ೧೭/೦೧/೨೦೦೭

Sunday, July 22, 2007

ಕಾವ್ಯ ಎಂದರೆ...

ಶತಮಾನಗಳಿಂದ ಕನ್ನಡ ಕಾವ್ಯ ನಡೆದುಬಂದ ದಾರಿಯನ್ನು ಸುಮ್ಮನೆ ಸ್ಥೂಲವಾಗಿ ಗುರುತಿಸುವ ಪ್ರಯತ್ನ ಈ ಕವನ. ಹಾಗೆಂದು ಎಲ್ಲ ಕಾಲಘಟ್ಟದಲ್ಲಿ ಬರುವ ಎಲ್ಲ ಪ್ರಾತಿನಿಧಿಕ ಮಾದರಿಗಳನ್ನು/ಕವಿಗಳನ್ನು ಈ ಕವನ ಒಳಗೊಳ್ಳುವುದಿಲ್ಲ, ಅದು ಈ ಕವನದ ಉದ್ದೇಶವೂ ಅಲ್ಲ. ಕೇವಲ, ಕಾವ್ಯ ನಡೆದು ಬಂದ ದಾರಿಯನ್ನು ನನಗೆ ತೋರಿದಂತೆ ಚಿತ್ರಿಸುವುದಷ್ಟೇ ಈ ಕವನದ ಉದ್ದೇಶ.

ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಭಾಷೆ, ಶೈಲಿ, ಪ್ರತಿಮೆಗಳ ಮಾದರಿಯನ್ನೇ ಬಳಸಿಕೊಳ್ಳುವ, ಹಾಗೂ ಆಯಾ ಕಾಲಘಟ್ಟದಲ್ಲಿ ಅತಿಯೆನ್ನಿಸುವಷ್ಟು ಎದ್ದು ಕಾಣುವ ಅಂಶಗಳನ್ನು ಬಳಸುವ ಮೂಲಕ ಆಯಾ ಕಾಲದ ಕಾವ್ಯವನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. ಇದು ಕೆಲವೊಮ್ಮೆ ವಿಡಂಬನೆಯ ರೂಪವನ್ನು ತಳೆದಿರುವುದೂ ಇದೆ. ಆದರೆ ಇದರ ಅರ್ಥ ಆ ಕಾಲಘಟ್ಟದಲ್ಲಿ ಬಂದ ಕಾವ್ಯ ಜೊಳ್ಳು ಅಥವ ಹಾಸ್ಯಾಸ್ಪದ ಎಂದಲ್ಲ; ನಮಗೆ ತೀರ ಪ್ರಿಯರಾದವರ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ತಮಾಷೆ ಮಾಡುವ ರೀತಿ ಎಂದಿಟ್ಟುಕೊಳ್ಳಬಹುದು.

=========
ಕಾವ್ಯ ಎಂದರೆ...
=========
(೧)
ಕವಿರಾಜಮಾರ್ಗಮೆಸೆದಿರೆ,
ಕವಿಕುಳಾಶ್ರಯ ಕಲ್ಪತರುವೆನಿಪ
ಭೂಪಾಲ ಕುಳಮಿರಲ್,
ಕವಿ ಮೇಘ ಸಂಘರ್ಷಣೋಜ್ಜನಿತ
ಕಾವ್ಯ ವಿದ್ಯುಲ್ಲತಾ ಪ್ರಭಾವಳಯಂ;
ಕಾವ್ಯ ವರ್ಷಂ;
ಕವಿಮತ್ತವಾರಣ ಪರಸ್ಪರಾಭಿಸಂಘಟ್ಟನೋತ್ಪಾದಿತಾರುಣ ಸಲಿಲ ಸಮ್ಮಿಶ್ರಿತ
ಕಾವ್ಯ ಸರಸ್ವತೀ ಸರಿತ್ಪ್ರವಾಹಂ.

(೨)
ಕಾವ್ಯಪ್ರಯೋಜನಂ
ವಾರ್ಧಕಮನೈದಿ ಬರಲೊಂದು ಸೊಗಂ;
ಕಂದನ ರಗಳೆಯದೊಂದು ಮುದಂ;
ಭಾಮಿನಿಯ ನಲ್ವಾತಿನ ಸೊಗಕೇಂ ಸಮನೈ?
ಕೇಳದೋ,
ವೀರನಾರಯಣಕುವರಂ ಪೇಳುತಿಹ
ಭಾರತದ ಚಾರು ಕತೆಯಂ.

(೩)
ಅನುಭವದ ಮಂಟಪದಿ
ನುಡಿಯ ಸ್ಫಟಿಕ ಶಲಾಕೆಯಲುಗೆ
ತೊಳಗಿದ ಮಾಣಿಕದ ದೀಪ್ತಿ
ತೋರಿದ್ದು
ಶೂನ್ಯ
ಸಿಂಹಾಸನ.
ಕೊನೆಗುಳಿದದ್ದು
ಸಿಂಹಾಸನವೂ ಅಲ್ಲ!
ಮಾಡು ಸಿಕ್ಕಲಿಲ್ಲ,
ಮಾಡಿನ ಗೂಡೂ ದಕ್ಕಲಿಲ್ಲ;
ನಾಮ
ಸಂಕೀರ್ತನೆಗೆ ಆದಿಕೇಶವ - ವಿಠಲ.

(೪)
ಹೊಂಬಿಸಿಲು,
ಹೂ - ಹಣ್ಣು,
ಹೆಣ್ಣ ಕುರುಳಿನ ಲಾಸ್ಯ;
ಹಿತವಾಗಿ ಅಲ್ಲಲ್ಲಿ ಹೊಕ್ಕು ಹೊರಡುವ ಹಾಸ್ಯ;
ಕವಿಶೈಲದಲಿ ಕುಳಿತು ಧ್ಯಾನಿಸಿ ನೋಡೆ
ಬಾನಿನಲಿ ನರ್ತಿಸುವ ಹೊನ್ನ ನವಿಲು;
ಒಮ್ಮೊಮ್ಮೆ ಕಾರಿರುಳು,
ಜೀರಿಡುವ ಮಲೆ - ಕಾನು
ರುದ್ರ ಭೀಷಣ ಭೀಷ್ಮ ಸಹ್ಯಾದ್ರಿ;
ಮಹಾ ಮೇಘ ರಂಜಿತ ರುಂದ್ರ ಗಗನ, ಘನ ನೀಲ;
ಮರುಕ್ಷಣವೆ ಮಳೆ,
ಗುರುಕೃಪೆಯೆ ಇಳೆಗೆ ಸುರಿದಂತೆ;
ಮಲೆ ದೇವ ನಗುವಂತೆ
ತೀಡುತಿಹ ತಂಗಾಳಿ
ಯಲಿ
ಮಿಂದು ಪಾವನ
ಯದುಶೈಲ.

(೫)
ಯೋನಿತಳದಿಂದೆಳೆದು
ಎದೆಹೊಕ್ಕು ಹೊರಡುವ ನಾಳ,
ವೈತರಣಿ;
ಎದೆಯಾಳದುದ್ವೇಗ,
ಮತಿ ವಿಚಾರ - ವಿಕಾರ
ಕಲಮಲಿಸಿ
ತೊಳಸಿ
ಹೊರನುಗ್ಗಿರಲು
ಪೈಪಿನ ತುದಿಗೆ
ನವರಂಧ್ರ ಝಾಲರಿಯಿಟ್ಟು
ಕಾರಂಜಿ
ತೋರಿಸುವ ಕಸರತ್ತು;
ಕೆಲವೊಮ್ಮೆ
ಧಾತು ಸಾಲದೆ
ಹೊರಟ ಮಾತೂ ಹರಡಿ
ಜರಡಿ
ಬಿದ್ದ
ಪೈಪಿನ ತುದಿಗೆ
ಸೊರಗಿದ ಬುಗ್ಗೆ.

(೬)
ಧಿಕ್ಕಾರ...
ತಳೆದ ಮುಖವಾಡಕ್ಕೆ,
ಒಣಹುಲ್ಲ ಮಾಡಕ್ಕೆ,
ನನಗೆ, ನಿನಗೆ, ಅದಕೆ, ಇದಕೆ;
ನೂರು ಕಣ್ಣು ಮಣ್ಣಲ್ಲಿ ಹುದುಗಿರುವಾಗ,
ಕಾವ್ಯ?!
ಪುಟಗೋಸಿ, ಮಣ್ಣಂಗಟ್ಟಿ.
ಎಲ್ಲಿ ಹುಡುಕುವೆ ನೀನು?
ಕಾವ್ಯವಿರುವುದು ನಿನ್ನ ಪೆನ್ನಲಲ್ಲೋ ಅಣ್ಣ,
ಮಣ್ಣಿನಲ್ಲಿ.
ಎಸೆ ಪೆನ್ನು,
ಹಿಡಿ ಮಣ್ಣು;
ತೊಡೆ,
ಹಣೆಗೆ...
ಕಣ್ಣು ಬಸೆದಿರುವ ಬಿಸಿ
ನೆತ್ತರನೆ ಮಸಿ ಮಾಡಿ
ಬರೆ,
ಮುಟ್ಟಿ ನೋಡಿಕೊಳ್ಳೋಹಾಗೆ.
ಬಂಡೇಳು! ಬಂಡೇಳು!!
ಓ ಏಳು ಬಂಡೆಯೆ ಏಳು.
ಒಂದೆರಡಾದರೂ ಬೀಳದಿರೆ ತಲೆ,
ವ್ಯರ್ಥ ಕಾಣೋ ನಿನ್ನ ಲೇಖನ ಕಲೆ!

(೭)
ವರುಷ ವರುಷಗಳಿಂದ
ಹರಿದಿಹಳು ಕಾವ್ಯಧುನಿ,
ರಕ್ತೆ, ಶ್ಯಾಮಲೆ, ಅಮಲೆ,
ಮಲಿನೆ, ಶುದ್ಧಸ್ಫಟಿಕೆ,
ವಿವಿಧ ವರ್ಣೆ;
ಈ-ಮೈಲು ಎಸ್ಸೆಮ್ಮೆಸ್ಸುಗಳ
ವೇಗದಬ್ಬರದಲ್ಲೂ
ಕೆಲವೊಮ್ಮೆ ಸುವ್ಯಕ್ತೆ,
ಕೆಲವೊಮ್ಮೆ ಲುಪ್ತೆ.

- ೦೮/೦೫/೨೦೦೬

Sunday, July 15, 2007

ನಗಬಹುದು ಹೀಗೂ

ಸಂಜೆಗಪ್ಪು ಬಸಿದಿತ್ತು ಧರೆಗೆ ಮುಗಿ-
ದಿರಲು ಹಗಲ ಸಂತೆ;
ಎದೆಯಾಳದಿಂದ ಕಿರುಚಿಂತೆಯೆದ್ದು ಎದೆ-
ಯೆಲ್ಲ ತುಂಬಿದಂತೆ.

ರವಿಯ ಹಗಲು ಮುಗಿದಿತ್ತು ರಾತ್ರಿಗಾ
ರಜನಿಧರನ ಪಾಳಿ;
ಅವ ಬರುವವರೆಗು ಕಾರಿರುಳ ರಾಜ್ಯದೊಳ-
ಗಾರು ದಿಕ್ಕು ಹೇಳಿ!

ಇರುಳುಗಪ್ಪ ತಿಳಿಗೊಳಿಸೆ ಮಿನುಗುತಿವೆ
ಕೋಟಿ ಚುಕ್ಕೆ ನಭದಿ;
ಮಿಣುಕು ಹಣತೆ ಮನೆ ಬೆಳಗುತಿಹುದು
ನಸುಬೆಳಕ ಸುತ್ತ ಹರಡಿ.

ಬೆಳಕ ನಡುವೆ ಕತ್ತಲೆಯ ರಾಜ್ಯ ನಲಿ-
ವುಗಳ ನಡುವೆ ನೋವು;
ಮಿನುಗಿರುವ ಚುಕ್ಕೆ, ಬೆಳಗಿರುವ ದೀಪ;
ನಗಬಹುದು ಹೀಗೂ ನಾವು!

- ೨೮/೦೫/೨೦೦೪

Sunday, July 8, 2007

ಹೀಗೇ...

ಕೆಲವೊಮ್ಮೆ
ಹೀಗೇ...
ಎಲ್ಲ ಖಾಲಿ ಖಾಲಿ;
ಬರೆಯ ಹೊರಟ ಕವನ,
ಕನಸು-ಕನವರಿಕೆ;
ಮಧುರ ಮದ-

ಕದನ ಕುತೂಹಲಕೆ
ತೆರೆದ
ಹರನ ಫಣಾನಲಕೆ
ಕಾಮ-
ದಹನ.
ಅಖಂಡ ಸುಖಕೆ
ಕುದಿದ
ಪುರುಪಿತಗೆ ದಕ್ಕಿದ್ದು
ಅಕಾಲ ವೃದ್ಧಾಪ್ಯ;

ಮಸಕು-ಮಂಕು
ಬೂದಿ
ಎರಚಿದಂತೆಲ್ಲೆಲ್ಲು,
ಬಯಲು,
ಬಾನು
(ಎಲ್ಲಪ್ಪಾ ಮಳೆ!)
ಉಸ್... ತೆವಳುವ
ಬೇವಾರ್ಸಿ
ತುಂಡು ಮೋಡ;
ಸ್ಥಬ್ಧ-
ಚಿತ್ರಕೆ ಚೌಕಟ್ಟು
ಹಿಡಿದ
ಎತ್ತರದ ಗವಾಕ್ಷ;

ಹಲ್ಲಳಿದ,
ಬಾಯ್-
ಮೊಸರೆಂದೂ ಆಗದ,
ಕೈ
ಕೆಸರ ಸಾರಿಸುತ್ತಾನೆ
ಮುದುಕ,
ನಾಲ್ಕು ಗೋಡೆಗಳ ನಡುವೆ.
ಧಗೆ ಒಳಗೆ,
ಇಣುಕಿದರೆ
ಬಿಸಿಲ ಬಿಸಿ ಹೊರಗೆ,
ಮೋಟಾರು, ಕಾರಖಾನೆ
ಹೊಗೆ,
ಬೆಂಕಿ - ಬಂದೂಕು
ಗದ್ದಲದ ಗೊಂದಲದ
ಬಯಲ ಬಂದೀಖಾನೆ

ರಕ್ಕಸ ಗಡಿ-
ಯಾರ;
ಗಂಟೆ, ನಿಮಿಷ, ಸೆಕೆಂಡು ಮುಳ್ಳಿಗೆ,
ಕಾಲಚಕ್ರದ ಹಲ್ಲಿಗೆ
ಸಿಕ್ಕಿ ಸಂದವರು - ನಿಂದವರು;
ಚಿರಸುಖದ
ಕಲ್ಪನೆಯ ಕುರುಡಾನೆ
ಬಯಸಿ
ಬಸವಳಿದವರು,
ನಾವು - ನೀವು.

- ೨೨/೦೫/೨೦೦೪

Monday, July 2, 2007

ಶೂನ್ಯಲಿಂಗ

ಹಿಮಗಿರಿಯ
ಮೃತ್ಯು
ಕಂದರ ಶಿಖರಗಳ ದಾರಿ
ಸವೆಯಿಸಲು ನೀ ಕಾಣ್ಬೆ
ಅಮರ
ಲಿಂಗ.

ಶಿರ
ಶಿಖರದಿಂದುದಿಸಿ
ಜಗವೆಲ್ಲವನು ಪೊರೆಯೆ ಹರಿದಿಹಳು
ನೋಡಲ್ಲಿ, ಪ್ರಾಣ ಗಂಗಾ...

ನಟ್ಟಿರುಳ ಕೊನೆಗೆ
ಕಡುಗತ್ತಲೆಯ ಕತ್ತರಿಸಿ
ಬೆಳಗಾಯಿತದೋ ಅಲ್ಲಿ
ಪೂರ್ವರಂಗ;
ಆ ಮಹಾ ರವಿರೂಪ,
ಧರೆಯ ಕಾಯ್ವ ಪ್ರತಾಪ
ಅದುವೆ
ಜ್ಯೋತಿರ್ಲಿಂಗ ವಿಸ್ಫುಲಿಂಗ.

ಜಲಲಿಂಗ
ಜ್ವಲಲಿಂಗ
ಹರಹಿನಂಬರ
ಲಿಂಗ
ಧರಿಸಿಹುದು ರೂಪ-
ರಸ
ವಿವಿಧ ಭಾವ;

ರೂಪ ರಸ ನಾದಗಳ
ನಾಮ ಗುಣ ಭೇದಗಳ
ನಡುವಿನಂತರ್ಭಾವ...
ಶೂನ್ಯ
ಭಾವ.

ಗುಣ, ರೂಪ, ಸ್ಪರ್ಷ
ಜಗ-
ದೆಲ್ಲ ಭಾವದ-
ಭಾವ;
ಅಸ್ತಿತ್ವದಂಚಿಡಿದ
ನಾಸ್ತಿತ್ವ
ಕಾಣ-
ದೋ...
ಶೂನ್ಯ
ಲಿಂಗದ
ಮಹಾವಿರ್ಭಾವ
ಭಾವ!

- ೦೩/೦೮/೨೦೦೩

ಹಿನ್ನೆಲೆ: ಈ ಕವನದ ಹಿನ್ನೆಲೆ ಒಂದು ಕನಸು - ಅಮರನಾಥ ಅಥವ ಕೈಲಾಸನಾಥ ಯಾತ್ರೆಯಂಥದೇ ಒಂದು ಯಾತ್ರೆ (ನಾನೇನೂ ಅಂಥ ಧಾರ್ಮಿಕ ವ್ಯಕ್ತಿಯಲ್ಲ - ಆಶ್ಚರ್ಯ!). ಕೈಲಾಸಪರ್ವತವೇ ಶಿವಲಿಂಗವಾಗಿ ಪೂಜೆಗೊಳ್ಳುವಂತೆ (ಹೌದಾ? I am not sure), ಇದೂ... ಶೂನ್ಯಲಿಂಗ! ಹಿಮಾಲಯದ ಚೇತೋಹಾರಿ ಗಿರಿ ಕಣಿವೆಗಳನ್ನು ದಾಟಿ ಶೂನ್ಯಲಿಂಗದ "ದರ್ಶನ"ಕ್ಕೆ ಬರುತ್ತೇವೆ, ಅಲ್ಲೇನಿದೆ! ವಿಚಿತ್ರವಾಗಿ ಒಂದರ ಮುಂದೊಂದು ಚಾಚಿಕೊಂಡಿರುವ ಎರಡು ಮೂರು ಹಿಮಬೆಟ್ಟಗಳು, ಕೆಳಗೆ "ಆ..." ಎಂದು ಬಾಯ್ದೆರೆದಿರುವ ಕಣಿವೆ - ಚೇತೋಹಾರಿ ದೃಶ್ಯ! ಅಲ್ಲೆಲ್ಲಾ "ಜೈ ಭೋಲೇ ನಾಥ್" ಘೋಷಿಸುತ್ತಾ ನರ್ತಿಸುವ ಸಾಧು, ಗೋಸಾಯಿಗಳು, ಹೂ ಹಣ್ಣು ಪೂಜಿಸುವ ಭಕ್ತರು; ಅರೆ! ಆದರೆ ಲಿಂಗ ಎಲ್ಲಿ? ಹಾಗೆ ವಿಚಿತ್ರವಾಗಿ ಚಾಚಿಕೊಂಡಿರುವ ಬಂಡೆಗಳಲ್ಲಿ ಒಂದಕ್ಕೂ ಲಿಂಗದ ಹೋಲಿಕೆಯೂ ಇಲ್ಲ! ಸ್ವಲ್ಪ ಹಿಂದೆ ಬಂದು ಮೇಲೇರಿ, ಇಡೀ landscape ಗಮನಕ್ಕೆ ತಂದುಕೊಂಡು ನೋಡಿದರೆ, ಅದೋ, ಅಲ್ಲಿ, ಆ ವಿಚಿತ್ರವಾಗಿ ಚಾಚಿಕೊಂಡಿರುವ ಕೋಡುಬಂಡೆಗಳ ನಡುವಣ ಅಗಾಧ ಶೂನ್ಯವೇ ಲಿಂಗಾಕಾರವಾಗಿ ನಿಂತಿದೆ! ಇದು "ದರ್ಶನ"

ಈ ಕನಸು ಕೇವಲ ಕನಸು ಮಾತ್ರವಾಗದೆ, ಆಳವಾದ ಆಧ್ಯಾತ್ಮಿಕ ಅರ್ಥಗಳನ್ನೊಳಗೊಂಡಿರುವಂತೆ ಅನಿಸಿತು. It felt like a wonderful symbolization of the Indian mysticism. ಆ ಅನುಭವದ ಫಲವೇ ಈ ಕವನ. ಅನುಭವ ಎಷ್ಟರಮಟ್ಟಿಗೆ ಚಿತ್ರಿತವಾಗಿದೆಯೋ ಗೊತ್ತಿಲ್ಲ!

Sunday, June 24, 2007

ಬಿನ್ನಪ

ಬದುಕು,
ಕಳೆದ ಶತ
ಮಾನ
ಹಾನಿಗಳ, ಕುಳಿ-ದೊಗರುಗಳ
ಹರಿದ ದಾಂಬರು ರಸ್ತೆ.

ಓ ತಂದೆ,
ಕ್ಷಮಿಸು ನೀನೆನ್ನ
ನು
ದ್ಧರಿಸಬೇಕೆಂದೆಲ್ಲ ಬೇಡಬಂದಿಲ್ಲ:
ಮೊಳಕಾಲನೂರಿ
ನಿನ್ನೆಡೆಗೆ ತಲೆಬಾಗಿ
ತಪ್ಪೊಪ್ಪಿ ಮರುಹುಟ್ಟು ಪಡೆವ ತುಡಿತಕ್ಕಷ್ಟು
ಕಿವಿಯಾಗಿಬಿಡು, ಸಾಕು;

ಮಸಗಿರುವ ಪೊರೆ ಹರಿದು
ಹೊಸ ಜಗಕೆ ಕಣ್ಭಿಡಲು
ತುಡಿಯುತಿಹ ಫಣಿಗೆ
ಒರೆಗಲ್ಲಾಗಿಬಿಡು, ಸಾಕು.

ನೆನ್ನೆಗಳ ಹೆಡೆಯಡಿಗೆ ಮಿಡುಕುತಿವೆ ನಾಳೆಗಳು,
ತೊಡೆದುಬಿಡು ಪಡಿನೆಳಲ, ನಗಲಿ ನಾಳೆ;
ಕುಳಿ-ದೊಗರುಗಳ ಮುಚ್ಚಿ,
ಮೇಲೆ ದಾಂಬರು ಹೊಚ್ಚಿ
ಸಲಿಸು ಯಾನ ಸಲೀಸು
ಉಳಿದರ್ಧಕೆ.

ಬೆಳಗುವಾತ್ಮಹ್ಯೋತಿ
ಮಸಿ ಮಸಗಿ ಕುಂದದಿರೆ
ನಿತ್ಯ ತೈಲವನೆರೆದು ಪೋಷಿಸು ದೊರೆ.

ಮತ್ತೆ ಹೊಸ ಪೊರೆ-ಮಸುಕು,
ಮುಖವಾಡಗಳ ಮುಸುಕು
ಬೆಳೆಯಗೊಡದಿರು
ಸಾಕು
ಮತ್ತೇನು ಬೇಕು.

- ೨೯/೦೯/೨೦೦೨

Saturday, June 16, 2007

ಬಂದಿ

ಬೇ
ಸತ್ತು ಕವುಚಿಹ ನೀಲ ವ್ಯೋಮ ಮಂಡಲ
ಕೆಳಗೆ ಎತ್ತ ನೋಡಿದರತ್ತ ಬಟ್ಟ ಬಯಲು;
ನಡುವೆ ನೆಟ್ಟಿಹ ಸೊಟ್ಟ ಗೂಟ
ಅದ ಸುತ್ತುತಿದೆ
ಮೋಟುಗಾಲಿನ ಕತ್ತೆ ಹಗಲು ಇರುಳು.
ಒಂದು, ಎರಡು... ಆರು... ಏಳು...
ಅನಂತ ಸುತ್ತು
ಸಂಕೋಚಶೀಲ ವರ್ತುಲ, ಶೂನ್ಯ.

ಸುತ್ತಿ ಹೊರಟವರೆಲ್ಲ ಮತ್ತಿಲ್ಲಿ ಬಂದವರೆ!
ಊರೂರು ತಿರುಗಿ
ದರು
ನಮ್ಮೂರು ವಾಸಿ-
ಯಾಗದ ರೋಗ-
ಹಿಡಿದ ಮನೆ.

ಆರು - ಹತ್ತು
ಆಯದ ವಸತಿ,
ಮಾಯದ ಗಾಯದಂತಷ್ಟೊಂದು ಕಿವಿ ಮೂಗು ನಾಲಗೆ
ಸಹಸ್ರಾಕ್ಷ ಭಿತ್ತಿ
ಒತ್ತೊತ್ತಿ
ಉಸಿರು ಹತ್ತಿ, ಗಬ್ಬು
ಅಪಸ್ಮಾರ,
ಬಯಲ ವಿಸ್ತಾರ, ಸ್ವಚ್ಛಂದ ಸ್ವೈರ ಕಾತರ
ಜಗ್ಗುತಿದೆ
ಹಗ್ಗ ಹರಿ
ದತ್ತ ಸ್ವಾತಂತ್ರ್ಯ
ವರ್ತುಳವ ಸೀಳಿ
ಧೂಳಿಸಿ ಗೋಡೆ - ಮಾಡುಗಳ,
ನೆಟ್ಟ ಗೂಟವ ಕಿತ್ತು
ಬಯಲಲ್ಲಿ ಮರುಳಂತೆ ಓಡಬೇಕು;

ಇನ್ನು ಅಲ್ಲಲ್ಲಿ ಹಲ್ಕಿರಿಯುತಿಹ
ನೂರೆಂಟು ಮೊಗ-
ವಾಡಗಳ ಮುಸುಡು
ಕಿತ್ತು ಹೋಗುವ ಹಾಗೆ
ಸರೀ ಕತ್ತೆ ಕೂಗನು ಒಮ್ಮೆ ಕೂಗಬೇಕು;

ಎದೆಯೊಳಗೆ ಧಿಮಿಗುಡುವ
ನೂರೆಂಟು ಹಾಡು, ನುಡಿ,
ರಾಗ ಲಯಗಳ, ತಾಳ
ಭೇತಾಳದೂಳುಗಳ
ಗೋಳುಗಳ ಮೇಳೈಸಿ ಹಾಡಬೇಕು;

ಹಾಡಿ, ಕೂಗಿ, ದನಿ ಮಾಗಿ
ಹಣ್ಣಾಗಿ, ಹನಿಗಟ್ಟಿ, ಕಿವಿಗೆ ಸವಿಜೇನಾಗಿ,
ಬಾನು ಬಯಲುಗಳೆಲ್ಲ...
ಒತ್ತಿ ಬರುತಿದೆ
ಭಿತ್ತಿ
ಸುಸ್ತು...

- ೧೨/೦೭/೧೯೯೮

ಹೀಗೊಂದು ಗುಲಾಬಿ

ನಿಮ್ಮ ಮನೆ ಬಿರುಮುಳ್ಳ
ಗುಲಾಬಿ ಪೊದೆ
ಯಾಳದಲಿ
ದಿನ ಬೆಳಗಾದರೆ ನೀ ಚಿಮ್ಮಿಸುವ
ಹೂ ಮುಗುಳು, ಮುಳುಗು-
ವನ ಹುಲ್ಲು ಕಡ್ಡಿ.
ಮುಳ್ಳು-ಕಡ್ಡಿ
ಗಳ ಸರಿಸಿ ತರಚಿ-
ಕೊಂಡು ಮೈ - ಕೈ
ಚಾಚಿ ಎಟಕಿಸಿಕೊಳ್ಳುವಾಟ
ಸುಲಭವೇನಲ್ಲ.

ಸುಳಿಗಣ್ಣು, ಮಾತು,
ಸುಳಿಗುರುಳಿನುರುಳುಗಳು
ಬಿಗಿಯುವವು, ಸೆಳೆಯುವವು ಸುಳಿಯಾಳಕೆ;
ಸುಳಿಯೆಂಬುದೆಲ್ಲಕೂ ಸೆಳೆತ ಸಹಜವೆ ತಾನೆ,
ದಕ್ಕದ್ದಕ್ಕೆ, ದಕ್ಕಿಯೂ
ತೆಕ್ಕೆಯಲಿ ಮಿದುವಾಗಿ ಸಿಕ್ಕದ್ದಕ್ಕೆ,
ಸೆಳೆದಷ್ಟೂ ಮರೆಯ ಮೊರೆ ಹೊಕ್ಕಿದ್ದಕ್ಕೆ.

ನಸುಬಿರಿದು ನಳನಳಿಪ ಚೆಂಗುಲಾಬಿ,
ದಳದಳವ ತೆರೆದರೂ ತೆರೆಯದ ರಹಸ್ಯ
ಏಳು ಸುತ್ತಿನ ಕೋಟೆ.
ಲಗ್ಗೆಯಿಟ್ಟಿದ್ದಾನೆ ಪೋರ,
ಎದೆತುಂಬ ನೂರೆಂಟು ಕನಸ ಪೂರ.

ನುಗ್ಗುತಾನೆ, ಪೊದೆಯೊಳಗೆ ಕೈ ಚಾಚಿ
ಬಗ್ಗುತಾನೆ;
ಮುಂದೆ, ಇನ್ನೂ ಮುಂದೆ,
ಇನ್ನು ಚೂರೇ ಚೂರು.
ಮುಗ್ಗರಿಸಿ ಬಿದ್ದು, ಕೈ ತರಚಿ ಮೈ ಪರಚಿ,
ಕೊನೆಗೂ ಸಿಕ್ಕಿತು, ರಾಜ್ಯ
ಗೆದ್ದ ಕಳೆ ಮೊಗದಲ್ಲಿ
ಹೊರಬಿದ್ದು ನೋಡುತಾನೆ;
ಬಟ್ಟಿ, ಮೈ, ಮುಖ, ಕಣ್ಣು, ಕಿವಿ, ಮೂಗು, ಎದೆ-
ಯಾಳ ಗಾಯ, ರಾಮಾ ರಕ್ತ!
ಹೆಚ್ಚಿತೋ ಗುಲಾಬಿ ಬಣ್ಣ?
ಮುಳ್ಳಿನೊಡನಾಟದಲಿ, ನಡೆದ ಸೆಣೆಸಾಟದಲಿ
ಚೆಂಗುಲಾಬಿಯ ಹೂವು ಚೂರು ಚೂರು!
ಎದೆಯ ಕನಸುಗಳೆಲ್ಲ ನುಚ್ಚು ನೂರು.

- ೧೮/೦೬/೧೯೯೮

Tuesday, June 12, 2007

ಮನೆಗೆ ಗೋಡೆಗಳಿಲ್ಲ

ಬಾಗಿಲಂತೂ ಮಜಬೂತು,
ಅಂದದ ಕೆತ್ತನೆ, ಚಂದದ ಕುಸುರಿ,
ತೇಗದ ಮರ ಬಿಡು, ಭಾರಿ ದುಬಾರಿ.

ಅರೆ!
ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?
ಒಳಗೆ ಬಾ ಗೆಳೆಯಾ.
ನಗಬೇಡ,
ಈ ನನ್ನ ಮನೆಗೆ ಗೋಡೆಗಳಿಲ್ಲ!

ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;
ಎಡಕಿಹುದು ಮಂಚ, ಅಲ್ಲಿಯೆ ಪ್ರಣಯದಾಟ.
ಏನಯ್ಯ ಬಾಯ್ಬಿಡುವೆ, ಹೇಳಲಿಲ್ಲವೆ?
ನಮ್ಮ ಮನೆಗೆ ಗೋಡೆಗಳಿಲ್ಲ.

ಊಟ-ತಿಂಡಿ, ಜಳಕ,
ಶೃಂಗಾರ, ರತಿಯ ಪುಳಕ,
ಉಂಡು ಮಲಗೋ ತನಕ

ಮಾರಾ-ಮಾರಿ, ಜಗಳ-ಕದನ,
"ಅದಿಲ್ಲ-ಇದಿಲ್ಲ"ಗಳ ಅನುದಿನದ ಕಾಷ್ಟ-ವ್ಯಸನ,
ಇಲ್ಲಿ ಎಲ್ಲವು ಮುಕ್ತ, ನೋಡುಗರಿಗೆ.

ಯಾಕಯ್ಯ ಸಂಕೋಚ?
ಕೂಡು, ಇದು ನಿಮ್ಮ ಮನೆಯೇ
ಅಂತ ತಿಳಿ.
ತುಸು ವಿಶ್ರಮಿಸಿಕೋ ಕೂತು.
ಕೇಳಿಲ್ಲವೇ ಮಾತು?
"ಎಲ್ಲರ ಮನೆ ದೋಸೆ ತೂತು"
ಇಲ್ಲಿ ಹೊಸದಿನ್ನೇನಿದ್ದೀತು?

ತೆರೆದ ಮನೆ ನೋಡು, ನಮ್ಮಂತೆಯೇ ಇಲ್ಲಿ
ವಾಸ್ತವ್ಯ ಹೂಡಿಹವು ಹಾವು-ಹಲ್ಲಿ.
ಗೋಡೆಯಿಲ್ಲದ ಮೇಲೆ ಬಾಗಿಲೇಕೆಂದೆಯಾ?
ತಾತನ ಕಾಲದ್ದೋ ಅದು,
'ಮನೆ'ತನದ ಮರ್ಯಾದಿ!

ಮನದಂತೆಯೇ ನನ್ನ ಮನೆಯ ಬಾಗಿಲು ಕೂಡ,
ಸದಾ ತೆರೆದದ್ದೇ, ಮಾನವರ ಸ್ವಾಗತಕ್ಕೆ.
ಆದರೂ ಒಮ್ಮೊಮ್ಮೆ ಜಂತುಗಳೂ ಕೂಡ
ನುಸುಳುವುದೂ ಉಂಟು ಬಾಗಿಲ ಮುಖಾಂತರವೇ!
ಹಾಗೆಂದು ಬಾಗಿಲನು ಮುಚ್ಚಿಬಿಡಲಾದೀತೇ?
ನೆಗಡಿ ಬಂತೆಂದು ಮೂಗನೇ ಕೊಯ್ಯುವಂತೆ!

ಮನೆಗೆ ಗೋಡೆಗಳಿಲ್ಲವೆಂದು ಚಿಂತಿಸಬೇಡ,
ನೆರೆಹೊರೆಯ ಗೋಡೆಗಳೆ ನಮ್ಮವೂ ಕೂಡ.
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ.

ಹೊರಟೇಬಿಟ್ಟೆಯಾ? ಆಯ್ತು, ಬಾರೋ ಆಗಾಗ.
ಏನೆಂದೆ?... ಸಿಕ್ಕೇ ಸಿಗುವೆನು, ನನಗೆ ಮತ್ತಾವ ಜಾಗ?
"ಕತ್ತೆ ಸತ್ತರೆ ಹಾಳು ಗೋಡೆ" ಅನ್ನುವೆಯಾ?
ಆ ಮಾತುಗಳಿಗಿಲ್ಲಿ ಅರ್ಥವಿಲ್ಲ;
ನಮ್ಮ ಮನೆಗೆಲ್ಲಿಯೂ ಗೋಡೆಗಳೆ ಇಲ್ಲ!

- ೦೩/೦೬/೧೯೯೮

ದ್ರೋಣ

ಅರವತ್ತರಂಚಿನ ಅಸಹಾಯ
ಕತೆ,
ಹತಾಶೆ, ನಿಶ್ಶಕ್ತಿ,
(ರಾಜಗಾಂಭೀರ್ಯ?)
ಏನೆಲ್ಲ ಮೆರೆದಿತ್ತು ಆ ಮಂದ
ಗಮನದಲ್ಲಿ!

ಮಣಗಟ್ಟಲೆ ಬಂಗಾರದಂಬಾರಿ
ಮುದಿಯೊಡಲ ಜಗ್ಗಿದರೂನೂ
ಜಗ್ಗದೆಯೆ ನಡೆದಿದ್ದೆ,
ಹೊಣೆಹೊತ್ತ ಮನೆಯ ಹಿರಿ ಜೀವದಂತೆ.
ಭೇರಿ, ತುತ್ತೂರಿ, ನಗಾರಿ,
ಪಟಾಸು, ಕಾಡತೂಸುಗಳ
ಜನಾರಣ್ಯ ನಿರ್ಘೋಷ
ಕೂ
ಎದೆಗೆಡದೆ ಸಾಗಿದ್ದೆ,
ಧೀರ, ಪ್ರಶಾಂತ, ಸ್ಥಿತಪ್ರಜ್ಞ.

ಶಸ್ತ್ರ ಸನ್ಯಾಸ ನೀನೇನೂ ತಳೆದಿರಲಿಲ್ಲ
(ಯುದ್ಧ ಮೊದಲೇ ಇಲ್ಲ!);
ಆದರೂ ತನ್ನ ವಿದ್ಯುತ್ಖಡ್ಗವನು ಹಿರಿದು ಕಾದಿದ್ದನಲ್ಲ
ಅವಿವೇಕಿ ದುಷ್ಟ
ದ್ಯುಮ್ನ;
ಹಾರಿಸಿಯೇ ಬಿಟ್ಟನಲ್ಲ, ನಿಮಿಷಾರ್ಧದಲಿ ಪ್ರಾಣ.

ದ್ರೋಣ,
ನಾವೋ, ಹಿಂದುಮುಂದರಿವಿರದ;
ಚಾರ-ಅಪಚಾರ, ಆಯ-ಅಪಾಯಗಳ ತಿಳಿವಿರದ-
ನಾಗರಿಕ ಜೀವಿಗಳು.
ಮೆರೆಸುವೆವು ಮುಂದೆಯೂ
ನಮ್ಮೆಲ್ಲ ಸಾಧನೆಯ, ನಿಮ್ಮೆಲ್ಲ ವೇದನೆಯ
ಜಂಬೂ ಸವಾರಿ.
ಚಿನ್ನದಂಬಾರಿ
ಹೊತ್ತು ಸಾಗಲಿದೆ ಮತ್ತೊಂದು ಗಜ ಗಮನ.
ಕ್ಷಮಿಸಿಬಿಡು ಅಜ್ಜ,
ನಿನಗಿದೋ ಕೊನೆಯ ನಮನ.

- ೨೫/೧೨/೧೯೯೭

[ಈ ಸುಮಾರಿನಲ್ಲಿ ವಿದ್ಯುದಾಘಾತಕ್ಕೆ ಸಿಕ್ಕೆ ಸತ್ತ ಮೈಸೂರು ದಸರಾ ಮೆರವಣಿಗೆಯ ಆನೆ 'ದ್ರೋಣ'ನಿಗೊಂದು ಚರಮ ಗೀತೆ]

Monday, June 11, 2007

ಗೆಳೆತನ

[ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ]

"ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು"
ಬಿಳಿಲು ಕಟ್ಟಿಹ ನೆಳಲ ತೊಟ್ಟಿಲಲಿ ತೂಗುತಿರೆ
ಸವಿನಿದ್ದೆ - ಏನೇನೊ ಕನಸುತಿಹೆನು.
ನನ್ನ ನೆಚ್ಚಿನ ಮರದ ತುಂಬೆಲ್ಲ ಹಕ್ಕಿಗಳು
ಜೋಗುಳವ ಹಾಡುತಿರಲೆಷ್ಟು ಸೊಗಸು!

ಹೌದೋ ಮಾರಾಯ
ಆದರೊಂದ ಮರೆತಿಹೆ ನೀನು
(ಕವಿಯ ಮಾತನು ನೆಚ್ಚಿ ಕಣ್ಮುಚ್ಚಿ ಕುಳಿತವನು);
ಮರವೆಂದ ಮೇಲೆ ಹಕ್ಕಿಗಳಂತೆಯೇ ಅಲ್ಲಿ
ಹಾವೂ ಉಂಟು, ಹಲ್ಲಿಯೂ ಉಂಟು.
ಇರುವೆ ಗೆದ್ದಲಿಗಂತು ಲೆಕ್ಕವಿಲ್ಲ.
ಕೂತವನ ಬುಡಕೇ ಗೆದ್ದಲು ಹಿಡಿಯಬಹುದಂತೆ,
ಪುಟಗೋಸಿ ಮರವಿನ್ನು ಯಾವ ಲೆಕ್ಕ?
(ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ)
ನೀನಂತು ನಿದ್ದೆಯಲಿ ಮೈಮರೆತು ಬಿದ್ದಿರಲು
ಬೇರಿಗೇ ಗೆದ್ದಲಂಟಿದ್ದು ಗೊತ್ತಾದೀತಾದರೂ ಹೇಗೆ?

ಬೇರಳಿದ ಮರ ನಿನ್ನ ಮೇಲೇ ಧೊಪ್ಪನೆ ಬಿದ್ದು
ಮರದೊಡನೆಯೀ ನೀನೂ ಅ'ಮರ'ನಾಗುವ ಮುನ್ನ
ಎದ್ದೇಳೋ ಮಹನೀಯ!
ಗೆದ್ದಲ ಬಡಿ,
ಔಷಧ ಹೊಡಿ.

"ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು ಜೀವನ್ಮೃತ"
ಮೃತಿಯನೈದುವ ಮುನ್ನ ಎಚ್ಚೆತ್ತು ಮೈ ಕೊಡಹು,
"ತಸ್ಮಾತ್ ಜಾಗ್ರತ ಜಾಗ್ರತ"

- ೧೬/೦೫/೧೯೯೭

Sunday, March 25, 2007

ಹಗೆ

ಮತ್ತೊಂದು ಅನುವಾದ; ಮೂಲ James Stephens:

ಆವೊತ್ತು ಸಿಕ್ಕಿದ್ದ ಅವನು,
ನಾನು
ದಿಟ್ಟಿಸಿದೆ, ಬಿಗಿದ ತುಟಿ, ಸಿಟ್ಟು, ಕಿರುಗಣ್ಣ
ನೆಟ್ಟ ನೋಟವ ತೂರಿ ಅವನ ಮುಖದೊಳಗೆ;
ಪಕ್ಕಕ್ಕೆ ಸರಿದು ಕಾಲ್ದೆಗೆಯಲಿರುವಷ್ಟರಲಿ, ಆ ನನ್ನ ಹಗೆಗಾರ -
ಕಲ್ಲೆದೆಯ ಕಾಡಾಡಿ - ನುಡಿದ:
"ಮುಂದೊಂದು ದಿನ, ಇಂದು ಹಿಂದಾದಂದು,
ನಮ್ಮೆಲ್ಲ ಅಸ್ತ್ರ ಪ್ರತ್ಯಸ್ತ್ರಗಳ ಬತ್ತಳಿಕೆ ಬರಿದಾದಂದು
ನಮಗನ್ನಿಸೀತು, ನಾವಿಷ್ಟೊಂದು ದ್ವೇಷಿಸುತ್ತೀವೇಕೆ,
ಸಿಕ್ಕೀತೆ ಹೇಳು ನೆಪವೊಂದಾದರೂ ಅದಕೆ?
ನಮ್ಮ ಹಗೆಯೇ ದೊಡ್ಡ ಒಗಟಂತೆ ಕಂಡೀತು"

ಇಷ್ಟು ಹೇಳಿದ ಅವನು
ಹಿಂದಿರುಗಲಿಲ್ಲ;
ಕಾದ,
ತಿಳೀಯಲು ನನ್ನ ಮನದ ಸೊಲ್ಲ.
ನಾ
ಒಂದು ಕ್ಷಣ ತಡೆದರೂ
ಪ್ರಿಯೆಯ ಮುದ್ದಿಸುವಂತೆ
ನಾನವನ ಮುದ್ದಿಸಿಯೇ ಬಿಡಬಹುದೆನಿಸಿ ಭಯವಾಗಿ...
ಥಟ್ಟನೇ ಓಡಿದೆನು ಅತ್ತ ಜರುಗಿ.

- ೦೬/೦೪/೧೯೯೭

ಮೂಲ:
Hate

My enemy came nigh,
And I
Stared fiercely in his face.
My lips went withing back in grimace,
And stern I watched him with a narrow eye.
Then, as I turned away, my enemy,
That bitter heart and savage, said to me:
"Someday, when this is past,
When all the arrows that we have are cast,
We may ask one another why we hate,
And fail to find a story to relate.
It may seem to us then a mystery
That we should hate each other."

Thus said he,
And did not turn away,
Waiting to hear what I might have to say;
But I fled quickly, fearing if I stayed
I might have kissed him as I would a maid.

Sunday, March 18, 2007

ಹುಟ್ಟು

ಮನದಲೆಲ್ಲೋ ಬಿತ್ತಿ ಬೆಳೆದ ಭಾವದ ಬೀಜ
ಮೊಳೆತು ಜೀವವ ಪಡೆದು ಮಿಸುಕತೊಡಗಿದರೊಮ್ಮೆ
ಹಿತವಾದ ನೋವು, ನರಳಿಕೆ, ಪುಳಕ.
:
ಯಾವುದೋ ಅನುಭವದ ಮಿಲನಕ್ಕೆ ಫಲಗೊಂಡು
ಭಾವದಂಕುರವಾಗಿ ಬೆಳೆದು ಮೈ ಕೈ ತುಂಬಿ
ಬಗೆಯ ಬಸಿರನ್ನೊದೆದು ಹೊರಬರಲು ತುಡಿಯುತಿಹ
ಹೊಸ ಜೀವಕೊಂದು ರೂಪವ ಕೊಡಲು ನುಡಿಗಾಗಿ ತಡಕಾಟ, ತಿಣುಕಾಟ.
:
ಮೈಮನವ ಬಿಗಿಯುವಾಯಾಸ ನೋವಿನ ಕೊನೆಗೆ
ಹೊರಬೀಳ್ವ ಶಿಶು ಏನಾದರಾಗಿದ್ದೀತು!
ಗಂಡೊ, ಹೆಣ್ಣೋ, ಕುಂಟೊ, ಕುರುಡೋ, ಅಥವ ಸತ್ತು ಹುಟ್ಟಿದ್ದೋ!
:
ಹುಟ್ಟಿದ್ದು ತುಂಬುಚಂದಿರನಂಥ ಮುದ್ದು ಮಗುವಾದರೆ
ದಕ್ಕೀತು ನೊಂದ ನೋವಿಗು, ಬೆಂದ ಬೇಗುದಿಗು, ನರಳಿಕೆಗು
ಅರ್ಥ - ಸುಖದ ಅಂತ
:
- ೧೧/೦೪/೧೯೯೬

Friday, March 9, 2007

ಬೀಜ - ಶಕ್ತಿ

ಬಹಳ ವರುಷಗಳಿಂದ ಕೊಳೆಯುತಿದೆ ಈ ಬೀಜ!
ಕೊಳೆಯುತಿದೆ ಎಂದೆನೆ? ಕರಗುತಿರಬಹುದೇನೊ
(ವ್ಯತ್ಯಾಸ ಬಹಳಿಲ್ಲ!).
:
ಇಹುದು ಇದಕೂ ಕೂಡ,
..........ಎಲ್ಲರೊಲು ಮೊಳೆದೆದ್ದು ಚಿಗುರೊಡೆದು ಬೆಳೆಯುವಾಸೆ!
..........ಮೈ ತುಂಬ ಹಸುರುಟ್ಟು, ತಲೆತುಂಬ ಹೂ ಮುಡಿದು,
..........ಹೀಚು ಮಿಡಿ ಹಣ್ಣುಗಳ ತಳೆಯುವಾಸೆ;
..........ಪಾತಳಕೆ ಬೇರಿಳಿಸಿ, ಜಗ್ಗದೆಯೆ ತಳವೂರಿ ನಿಲ್ಲುವಾಸೆ;
..........ಆಗಸಕೆ ತಲೆಯೆತ್ತಿ, ರೆಂಬೆಕೈಗಳ ಚಾಚಿ
..........ಜಗದ ವಿಸ್ತಾರವನು ಗೆಲ್ಲುವಾಸೆ.
:
ಆದರೇನಾಯ್ತಿದಕೆ?
..........ಬೇರಿಳಿಯಲೆಡೆಯಿಲ್ಲ, ತಳವೆಲ್ಲ ಕಲ್ಲು;
..........ಕೈ ಚಾಚೆ ತೆರಪಿಲ್ಲ, ಕಾಂಕ್ರೀಟೆ ಎಲ್ಲೆಲ್ಲು;
..........ಗಾಳಿ ಬಿಸಿಲಿಗು ರೇಷನ್ (ಮೋಸವದರಲ್ಲು!)
:
ಯಾವ ಚೇತನವೊ ಇದು? ಹೂಬಳ್ಳಿ? ನೆರಳ ಮರ?
ಅಥವ ಈ ಬೋನ್ಸಾಯಿಯಲಿ ವ್ಯಕ್ತಿತ್ವವನೆ ಮರೆತು
ಆಗುವುದೊ ಕುಬ್ಜತರ!

ಆದರೊಂದಿನಿಮನವಿ ಕೇಳೊ ಅಣ್ಣ,
..........ಬರಿ ಬೀಜವಲ್ಲಿದು, ಅದಮ್ಯ ಚೈತನ್ಯ!
..........ಕಲ್ಲುಗಳ ಹೇರಿ, ಜಲ್ಲಿಗಳ ಕೂರಿ, ಅದುಮಿ ಇಡುತಿಹೆನೆಂಬ
..........ಭ್ರಮೆ ಬೇಡವಿನ್ನ.
..........ಈ ಕಲ್ಲು ಕಟ್ಟುಗಳ ತೂರಿ ಆಸ್ಫೋಟಿಸುವ ದಮ್ಮಿದೆ,
..........ಈ ಬೀಜದಗ್ನಿ ಗರ್ಭಕ್ಕೆ!
..........(ಅಂಥಾ ಅನಾಹುತಕೆ ಅವಕಾಶವೇಕೆ?)
..........ತೆಗೆದುಬಿಡು ನಿನ್ನೆಲ್ಲ ಅಡ್ಡಿ ಆತಂಕಗಳ, ಚೈತನ್ಯವುಕ್ಕೆ,
..........ಮೊಳೆಯಲದು, ಬೆಳೆಯಲದು, ಹಸಿರುಟ್ಟು ನಲಿಯಲದು,
..........ನೀಡಲಿ ಕೃತಜ್ಞತೆಯ ಸ್ನೇಹಮಯ ತಂಗಾಳಿ, ನೆರಳು, ಹೂ-ಹಣ್ಣುಗಳ...
..........ಇನ್ನೂ ಬೇಕೆ?!
:
- ೧೦/೦೩/೧೯೯೪
:
ಮನೆಯ ಮುಂದೆ ಕಲ್ಲು ಚಪ್ಪಡಿಯಡಿ ಅರ್ಧ ಮೊಳೆತು ಕರಗುತ್ತಿದ್ದ ಮೊಳಕೆಯೊಂದನ್ನು ನೋಡಿ ಅನಿಸಿದ್ದು.

Wednesday, March 7, 2007

ಮರಳು ಜೇನಳೂ ಮತ್ತು ಪಾದ್ರಿಯೂ

ಇದು W.B.Yeats ಕವಿಯ ಕವನವೊಂದರ ಭಾವಾನುವಾದ:
:
ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆಯೀಗ ಸೊರಗಿ ಬಿದ್ದಿಹುದು,
ನರಗಳಿನ್ನೇನು ಬತ್ತುವುವು;
ಸ್ವರ್ಗ ಸೌಧದಲಿ ಬದುಕಿನ್ನಾದರು
ಏತಕೀ ಕೊಳಕು ಕೂಪವು"
:
"ಕೊಳಕಿಗು ಥಳಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"
:
"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿದೇ ಇಲ್ಲದ ಒಂದೇ ವಸ್ತುವ
ಹೊಲೆವುದು ತಾನೇ ಎಲ್ಲಿ?"
:
- ೧೯೯೧/೯೨ ರ ಒಂದು ದಿನ
:
ಮೂಲ:
Crazy Jane Talks with the Bishop
:
I met the Bishop on the road
And much said he and I.
"Those breasts are flat and fallen now,
Those veins must soon be dry;
Live in a heavenly mansion
Not in some foul sty'.
:
"Fair and foul are near of kin,
And fair needs foul" I cried.
"My friends are gone, but that's a truth
Nor grave nor bed denied,
Learn'd in bodily lowliness
And in the heart's pride.
:
"A woman can be proud and stiff
When on love intent;
But love has pitched his mansion in
The place of excrament;
For nothing can be sole or whole
That has not been rent?"
:
ಕೆಲವು ಪದಗಳ ಅರ್ಥ:
Sty = ಹಂದಿಗೂಡು, ದೊಡ್ಡಿ, ರೊಪ್ಪ, ಕೊಂಪೆ, ಕೂಪ
Kin = ನಂಟು, ಸಂಬಂಧ.
Lowliness = ತಗ್ಗಿನ ಸ್ಥಿತಿ, ನಿಮ್ನತೆ, ಹೀನತನ, (philosophically) ನಮ್ರತೆ
be stiff = ಸೆಡೆತುಕೊ, ಬಿಗಿಯಾಗು, ಬಿಗಿ ಹಿಡಿ
Excrament = ವಿಸರ್ಜಿತ ವಸ್ತು, ಮಲ-ಮೂತ್ರ, ಹೊಲಸು.
Rent = (p.p. of "rend") ಹರಿದ, ಸೀಳಿದ, ಛಿದ್ರವಾದ.

Monday, March 5, 2007

ಕೋಗಿಲೆಗೆ

ಇದು Wordsworthಕವಿಯ ಕವನವೊಂದರ ಭಾವಾನುವಾದ:
:
ಓ ಸಂತಸದ ಹೊಸ ಬರವೆ! ನಿನ್ನ ನಾನಾಲಿಸಿಹೆ,
ಆಲಿಸುತ್ತಲೆ ಮನದಿ ಮುದಗೊಳುತಿಹೆ.
ಓ ಕುಕಿಲೇ! ಕರೆಯಲೇ ನಿನ್ನೊಂದು ಹಕ್ಕಿಯೆಂದು,
ಅಥವ ಅಲೆದಾಡುತಿಹ ಬರಿಯ ದನಿಯೆಂದು?
:
ಹುಲ್ಲ ಹಾಸಿನ ಮೇಲೆ ಬರಿದೆ ನಾ ಮಲಗಿರಲು
ಕೇಳಿಬರುವುದು ನಿನ್ನ ಇಪ್ಪರಿಯ ಕುಕಿಲು,
ಬೆಟ್ಟದಿಂ ಬೆಟ್ಟಕ್ಕೆ ಚಲಿಪಂತೆ ತೋರುತಲಿ,
ಒಮ್ಮೆ ದೂರದಲೆಲ್ಲೋ, ಮತ್ತಿಲ್ಲೆ ಪಕ್ಕದಲಿ.
:
ರವಿಯ ಕಿರಣದ ಕಾಂತಿ ಸುಮಗಳಿಂ ನಳನಳಿಪ
ಬರಿ ಕಣಿವೆಗಾಗಿಯೇ ಹಾಡುತಿದ್ದರು ನೀನು
ನನಗಾಗಿ ಹೊತ್ತೊಯ್ದು ತರುತಿರುವೆ ಸುಸ್ವಪ್ನ
ಲೋಕದ ಹೊಂಗತೆಯ ಮಧುರ ಕ್ಷಣಗಳನು.
:
ಮೂರ್ಮೆ ಸ್ವಾಗತ ನಿನಗೆ ಓ ವರ್ಷ ಮಿತ್ರನೆ!
ಆಗಿರುವೆ ನೀನೆನಗೆ ಇಂದಿಗೂ ಕೂಡ
ಹಕ್ಕಿಯಲ್ಲ, ಒಂದಗೋಚರದ ವಸ್ತು,
ಒಂದು ದನಿ, ಎಂದಿಗೂ ಬಿಡಿಸಲಾಗದ ಗೂಢ;
:
ಶಾಲೆಯೋದುತ್ತಿದ್ದ ನನ್ನೆಳವೆ ದಿನಗಳಲಿ
ನಾ ಕೇಳುತಿದ್ದದ್ದು; ಅದೆ ಸೊಲ್ಲು
ಹುಡುಕಲೆನ್ನೆಳೆದದ್ದು ನೂರಾರು ದಿಕ್ಕಿನಲಿ
ಪೊದೆಗಳಲಿ, ಮರಗಳಲಿ, ಆಗಸದಲೆಲ್ಲೆಲ್ಲು.
:
ನಿನ್ನ ಕಾಣುವ ಬಯಕೆ ಹೊತ್ತು ನಾ ಅಂಡಲೆದೆ,
ಕಾಡಿನಲಿ, ಸಿರಿಹಸುರ ಬನಗಳಲ್ಲಿ;
ನೀ ಎಂದೂ ಕಾಣ್ಪಡದೆ, ಬಯಕೆಯಾಗೇ ಉಳಿದೆ
ಕೆಡೆದೆನ್ನ ಕಾತರ ನಿರೀಕ್ಷೆಗಳಲಿ.
:
ಆದರೂ ಈ ಬಯಲ ವಿಸ್ತಾರದಲಿ ಮಲಗಿ
ಇಂದಿಗೂ ನಾ ನಿನ್ನ ಕೇಳಬಲ್ಲೆ;
ಆ ಸೊಗದ ದಿನಗಳನು ಪಡೆವವರೆಗೂ ತಿರುಗಿ
ನಿನ್ನ ಇನಿದನಿಯ ನಾನಾಲೈಸಬಲ್ಲೆ.
:
ಓ ದಯವಡೆದ ಹಕ್ಕಿಯೇ! ನಾವು ದಿನ ದಿನ ಬದುಕ
ಸವೆಯಿಸುವ ಈ ಭೂಮಿಯಾಗುವುದು ಮತ್ತೊಮ್ಮೆ
ತಾನಲೌಕಿಕವಾದ ಯಕ್ಷ ಕಿನ್ನರ ಲೋಕ;
ಅದೆ ನಿನಗೆ ತಕ್ಕ ಮನೆ, ಅದುವೆ ಹೆಮ್ಮೆ!
:
- ೧೯೯೧ ರ ಒಂದು ದಿನ
:
ಮೂಲ:
To the Cuckoo
:
O blithe New-comer! I have heard,
I hear thee and rejoice.
O cuckoo! Shall I call thee Bird,
Or but a wandering Voice?
::
While I am lying on the grass
Thy twofold shout I hear,
From hill to hill it seems to pass
At once far off, and near.
:
Though babling only to the vale,
Of sunshine and of flowers,
Thou bringst unto me a tale
Of visionary hours
:
Thrice welcome darling of the spring!
Even yet thou art to me
No bird, but an invisible thing
A voice, a mystery;
:
The same whom in my school-boy days
I listened to; that cry
Which made me look a thousand ways
In bush, and tree, and sky.
:
To seek thee did I often rove
Through woods and on green;
And thou wert still a hope, a love;
Still longed for, never seen.
:
And I can listen to thee yet;
Can lay upon the plain
And listen, till I do beget
That golden time again
:
O blessed bird! the earth we pace
Again appears to be
An unsubstantial faery place;
That is fit home for thee!

Friday, March 2, 2007

ಕಿಚ್ಚು

ಇದು ೧೭-೧೮ ವರ್ಷದ ಹಿಂದೆ ಬರೆದ ಕವನ, ಅಥವ ಕವನ ಎಂದು ಹೇಳಿಕೊಳ್ಳಬಹುದಾದ ಮೊದಲ ಬರಹ (ಅಥವ ನನ್ನ ಸಂಗ್ರಹದಲ್ಲಿರುವ ಮೊದಲ ಕವನ ಅನ್ನಬಹುದು), ನಗಬೇಡಿ.

ಕಿಚ್ಚು

ಊಟದ ನಂತರ ಸಣ್ಣ ನಿದ್ದೆ
ಮುಗಿದು, ನೋಡುತ್ತೇನೆ,
ಸೂರ್ಯ ಆಗಲೇ ಆ ಕಾಡು ಗುಡ್ಡದ ಹಿಂದೆ!
ಏನು ಕೆಂಪು ಇವೊತ್ತು! ಹೊಗೆ!!

ಅರೆ! ಅದು ಸೂರ್ಯ ಅಲ್ಲ!
(ಕಾಡು ಸಿಗರೇಟು ಸೇದುತ್ತಿದೆಯೆ?)
ಅಷ್ಟರಲ್ಲಿ ಕೇಳಿಸಿತು ಎದೆ ಸೀಳುವ ಚೀರು,
ಸಾವಿನ ತಣ್ಣನೆ ಕೂಗು!
ಓಹೋ! ಆಗಿದ್ದಿಷ್ಟೆ.

ಕಾಡು ಸತ್ತಿದೆ, ಅದಕ್ಕೆ ಬೆಂಕಿಯಿಟ್ಟಿದ್ದಾರೆ.
ಪಾಪ. ಕಾಡು ಆಗಲೇ ಬಡವಾಗಿತ್ತು;
ಮಕ್ಕಳ ಸಾಕಲು ಸವೆದೂ ಸವೆದೂಊ.
ಈಗ, ಆ ಕಾಡು ಸತ್ತಿದೆ.

ಅಯ್ಯೋ! ಕಾಡು ಸತ್ತಿದೆ,
ಅದಕ್ಕೆ ಬೆಂಕಿಯಿಟ್ಟಿದ್ದಾರೆ... ಮಕ್ಕಳು!


- ೦೫/೦೭/೧೯೯೦

Thursday, March 1, 2007

ಒಳಹೋಗುವ ಮುನ್ನ ಒಂದು ನಿಮಿಷ...

ಅಂತೂ ಕೊನೆಗೊಮ್ಮೆ ಈ ಪುಟಕ್ಕೆ ಬಂದು ಮುಟ್ಟಿದ್ದೇನೆ. ಬ್ಲಾಗ್ ಒಂದನ್ನು ರೂಪಿಸುವ, ಮನಕ್ಕೆ ತೋಚಿದ್ದನ್ನು ಅಲ್ಲಿ ದಾಖಲಿಸುತ್ತಾ ಹೋಗುವ ಆಲೋಚನೆಯೇನೋ ಬಹಳ ದಿನದಿಂದ ಇತ್ತು. ಆದರೆ ಜನ್ಮಜಾತವಾದ ಸೋಮಾರಿತನ ಇದನ್ನು ಮುಂದೂಡುತ್ತಲೇ ಇತ್ತು. ಬ್ಲಾಗು ಭಾವಕ್ಕೆ ಕಾಯಬಹುದು, ಭಾವ ಬ್ಲಾಗಿಗೆ ಕಾಯುತ್ತದೆಯೇ? ಪಂಪ ರನ್ನ ಕುಮಾರವ್ಯಾಸರಿಗೆ ಬ್ಲಾಗುಗಳೇ ಇತ್ತೆ? ಕುಮಾರವ್ಯಾಸನದಂತೂ ಬ್ಲಾಗಿರಲಿ, "ಪಲಗೆ ಬಳಪವನ್ನೂ ಪಿಡಿಯದೊಂದಗ್ಗಳಿಕೆ" (ಈ ಅಗ್ಗಳಿಕೆ ನಮಗೂ ಸಾಕಷ್ಟೇ ಇದೆ ಎನ್ನಿ. "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ನಾವು). ಇರಲಿ, as usual ವಿಷಯ ಮತ್ತೆಲ್ಲಿಗೋ ಹೋಯಿತು. ಒಟ್ಟಾರೆ ಬ್ಲಾಗಿಗೆ ಕಾಯದೇ ಬರಹ ಬೆಳೆಯುತ್ತಿತ್ತು, ಅದಕ್ಕೆ ಮುಂಚಿನಿಂದ ಗೀಚಿದ್ದೂ ಒಂದಷ್ಟಿತ್ತು. ಆದ್ದರಿಂದ ಸಧ್ಯಕ್ಕೆ ಹೊಸದೊಂದನ್ನು ದಾಖಲಿಸುವ ಮುನ್ನ, ಹಳೆಯದನ್ನೆಲ್ಲ ಇಲ್ಲಿ ತಂದು ಜೋಡಿಸಿಡುವ ಕೆಲಸ ಬಾಕಿ.
:
ನನ್ನ ಕವನಗಳ ಕಡತ ತೆರೆಯುವ ಮುನ್ನ ಒಂದು ಮಾತು. ಇದುವರೆಗೂ ನಾನು ಬರೆದಿದ್ದು ಬೆರಳೆಣಿಕೆಯಷ್ಟೇ ಕವನಗಳಾದರೂ, ಅವುಗಳನ್ನು ಬರೆದ ಕಾಲಾವಧಿ ಮಾತ್ರ ಸಾಕಷ್ಟು ದೀರ್ಘವೆಂದೇ ಹೇಳಬೇಕು. ಸುಮಾರು ೧೫-೧೮ ವರ್ಷಗಳಿಂದ ಬರೆದ ಕೆಲವೇ ಕವನಗಳನ್ನು ಇಲ್ಲಿ ದಾಖಲಿಸಲು ಯತ್ನಿಸುತ್ತೇನೆ (ತೀರ ಹಸಿ ಹಸಿ, ವೈಯಕ್ತಿಕವೆನ್ನಿಸಿದ ಕೆಲವನ್ನು ಹೊರತು ಪಡಿಸಿ).
:
ಲೇಖಕನೊಬ್ಬ ಹಲ ವರ್ಷಗಳ ಅವಧಿಯಲ್ಲಿ ಬರೆದ ಎಲ್ಲ ಬರಹಗಳನ್ನು ಅವುಗಳನ್ನು ಬರೆದ ಅನುಕ್ರಮದಲ್ಲೇ ಜೋಡಿಸಿಟ್ಟರೆ, ಆ ಸಂಕಲನ ಅವನು ಈ ವರ್ಷಗಳಲ್ಲಿ ವೈಯಕ್ತಿಕವಾಗಿ, ಸಾಹಿತ್ಯಕವಾಗಿ ಬೆಳೆದುಬಂದ ದಾರಿಯನ್ನು ಗುರ್ತಿಸುತ್ತವಾ ಎಂಬ ಕುತೂಹಲ ನನಗಿದೆ. ಬರಹಗಳು ಪರೋಕ್ಷವಾಗಿ ಯಾವುದೋ ರೀತಿಯಿಂದ ಬರಹಗಾರನೊಬ್ಬನ ಜೀವನ/ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಎಂದು ಎಲ್ಲೊ ಓದಿದ ನೆನಪು. ಆದರೆ ಅವು ಕವಿಯ ವ್ಯಕ್ತಿತ್ವವನ್ನಾಗಲಿ, ಅವನ ಜೀವನದ ಘಟನೆಗಳನ್ನಾಗಲಿ ಯಥಾವತ್ತಾಗಿ ಚಿತ್ರಿಸುತ್ತವೆಂದು ಖಂಡಿತ ಒಪ್ಪಲಾರೆ. ಇಲ್ಲಿ ಕಾಣುವ ಬರಹಗಳಿಗೆ ಪೂರ್ವಭಾವಿಯಾಗಿ ಇದನ್ನು ಸೂಚಿಸಬೇಕೆನ್ನಿಸಿತು.
:
ಕವಿ ತಾನೇ ಅನುಭವಿಸಿದ್ದರ ಜೊತೆಗೆ, ಎಲ್ಲೋ ನೋಡಿದ್ದು, ಕೇಳಿದ್ದು, ಚಿಂತಿಸಿದ್ದು, ಭಾವಿಸಿದ್ದು, ಪರಿಭಾವಿಸಿದ್ದು, ಪರಿತಪಿಸಿದ್ದು ಈ ಎಲ್ಲ ಯಾವ ಯಾವುದೋ ಹದದಲ್ಲಿ ಪಾಕಗೊಳ್ಳುತ್ತವೆ, ಆತನ ಬರಹದಲ್ಲಿ - ಎಷ್ಟೋ ಬಾರಿ ನೈಜವೆನಿಸುವ ಮಟ್ಟಿಗೆ. ಇದರಲ್ಲಿ ಕವಿಯ ಯೋಚನಾಲಹರಿಯ ಕೆಲವು ಹೊಳಹುಗಳನ್ನು ಮಾತ್ರ ಕಾಣಬಹುದಷ್ಟಲ್ಲದೇ ಸಾಕ್ಷಾತ್ ಕವಿಯನ್ನೇ ಕಾಣಬಯಸುವುದು ವ್ಯರ್ಥ. ಇನ್ನು ಕವಿಯ ಬುದ್ಧಿ ಭಾವಗಳಲ್ಲಿ ರೂಪುತಳೆದ ಈ ಶಿಶು, ಓದುಗನ ದೃಷ್ಟಿಕೋನದಲ್ಲಿ ಬೇರೆಯ ನಿಲುವನ್ನೇ ತಳೆಯುತ್ತದೆ. ಪು.ತಿ.ನ.ರವರ ಸಾಲೊಂದು ನೆನಪಾಗುತ್ತದೆ; "ಬರೆಯುವವನದಲ್ಲ ಕವಿತೆ, ಹಾಡುವವನದು" (ಪದಗಳು ಸರಿಯಾಗಿ ನೆನಪಿಲ್ಲ). ಹೀಗಾಗಿ, ಕಾವ್ಯದ ನಿರೂಪಣೆಗೆ ಸಹೃದಯನ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು. ಎಷ್ಟೊ ಬಾರಿ ಇದರಲ್ಲಿ ಓದುಗ ತನ್ನನ್ನೇ ಕಂಡುಕೊಳ್ಳುತ್ತಾನೆ. ಹೀಗೆ, ಕಾವ್ಯ ಕವಿ-ಓದುಗನ ನಡುವೆ ಒಂದು ಮೌನ ಸಂವಾದವನ್ನೇರ್ಪಡಿಸುತ್ತದೆ. ಕವಿಯ ಮನದಲ್ಲಿ ಮಿಡಿದ ಒಂದು ನಾದದ ಒಂದು ಎಳೆ, ಓದುಗನ ಮನದಲ್ಲೂ ಸಮಶ್ರುತಿ ಮಿಡಿದರೆ ಕಾವ್ಯದ ಹುಟ್ಟು ಸಾರ್ಥಕ ಎಂದು ನನ್ನ ಅನಿಸಿಕೆ. ಎಲ್ಲೋ ಎಂದೋ ಇದ್ದು ಸಂದು ಹೋದ ಘಾಲಿಬನಾಗಲೀ, ಕನಕ-ಕಬೀರರಾಗಲೀ, ವ್ಯಾಸ-ವಾಲ್ಮೀಕಿಗಳಾಗಲೀ ದೇಶ ಕಾಲಗಳಾಚಿನಿಂದ ನಮ್ಮೆದೆಯನ್ನು ಮುಟ್ಟುವುದು, ಮಾತಾಡಿಸುವುದು, ಹೀಗೆ.
:
ಬ್ಲಾಗನ್ನು ತುಂಬುವ ಮುನ್ನ ನನ್ನ ಮನದಲ್ಲಿ ಮೂಡಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು, ಬರಹ ತುಸು ಉದ್ದವೆನಿಸಿದ್ದರೆ ಕ್ಷಮಿಸಿ. ಇನ್ನು ಶೀರ್ಷಿಕೆಗಳಿಗೆ.