Sunday, July 8, 2007

ಹೀಗೇ...

ಕೆಲವೊಮ್ಮೆ
ಹೀಗೇ...
ಎಲ್ಲ ಖಾಲಿ ಖಾಲಿ;
ಬರೆಯ ಹೊರಟ ಕವನ,
ಕನಸು-ಕನವರಿಕೆ;
ಮಧುರ ಮದ-

ಕದನ ಕುತೂಹಲಕೆ
ತೆರೆದ
ಹರನ ಫಣಾನಲಕೆ
ಕಾಮ-
ದಹನ.
ಅಖಂಡ ಸುಖಕೆ
ಕುದಿದ
ಪುರುಪಿತಗೆ ದಕ್ಕಿದ್ದು
ಅಕಾಲ ವೃದ್ಧಾಪ್ಯ;

ಮಸಕು-ಮಂಕು
ಬೂದಿ
ಎರಚಿದಂತೆಲ್ಲೆಲ್ಲು,
ಬಯಲು,
ಬಾನು
(ಎಲ್ಲಪ್ಪಾ ಮಳೆ!)
ಉಸ್... ತೆವಳುವ
ಬೇವಾರ್ಸಿ
ತುಂಡು ಮೋಡ;
ಸ್ಥಬ್ಧ-
ಚಿತ್ರಕೆ ಚೌಕಟ್ಟು
ಹಿಡಿದ
ಎತ್ತರದ ಗವಾಕ್ಷ;

ಹಲ್ಲಳಿದ,
ಬಾಯ್-
ಮೊಸರೆಂದೂ ಆಗದ,
ಕೈ
ಕೆಸರ ಸಾರಿಸುತ್ತಾನೆ
ಮುದುಕ,
ನಾಲ್ಕು ಗೋಡೆಗಳ ನಡುವೆ.
ಧಗೆ ಒಳಗೆ,
ಇಣುಕಿದರೆ
ಬಿಸಿಲ ಬಿಸಿ ಹೊರಗೆ,
ಮೋಟಾರು, ಕಾರಖಾನೆ
ಹೊಗೆ,
ಬೆಂಕಿ - ಬಂದೂಕು
ಗದ್ದಲದ ಗೊಂದಲದ
ಬಯಲ ಬಂದೀಖಾನೆ

ರಕ್ಕಸ ಗಡಿ-
ಯಾರ;
ಗಂಟೆ, ನಿಮಿಷ, ಸೆಕೆಂಡು ಮುಳ್ಳಿಗೆ,
ಕಾಲಚಕ್ರದ ಹಲ್ಲಿಗೆ
ಸಿಕ್ಕಿ ಸಂದವರು - ನಿಂದವರು;
ಚಿರಸುಖದ
ಕಲ್ಪನೆಯ ಕುರುಡಾನೆ
ಬಯಸಿ
ಬಸವಳಿದವರು,
ನಾವು - ನೀವು.

- ೨೨/೦೫/೨೦೦೪

8 comments:

Anonymous said...

ಮತ್ತೊಂದು ಉತ್ತಮ ಕವನ. ಕೆ.ಎಸ್.ಮಂಜುನಾಥ್ ಅವರ ಇನ್ನಿತರ ಕವನಗಳಲ್ಲಿ ಕಾಣಬಹುದಾದ charateristic pathos and expression of desperation, ಈ ಕವನದಲ್ಲಿಯೂ ಸಹ ಏದ್ದು ಕಾಣುತ್ತಿದೆ.

'ನೀನು' ಕವನ ಬರೆದಾಗ ಕಾಕತಾಲೀಯವಾಗಿ ಕೇಳುತ್ತಿದ್ದ ಕೃತಿ 'ಗಮನಶ್ರಮ' ರಾಗದಲ್ಲಿ ಇದ್ದಹಾಗೆ, ಈ ಕವನ ರಚಿಸಿಸುವಾಗ 'ಕದನ ಕುತೂಹಲ' ರಾಗ ಆಲಿಸುತ್ತಿದ್ದಿರೇನು?

'ಬಯಲ ಬಂದೀಖಾನೆ' --- ಆಹಾ !!! ಬಹಳವಾಗಿ ರುಚಿಸಿದ oxymoronical expression.


'ರಕ್ಕಸ ಗಡಿ-
ಯಾರ;' --- ಎಂದು ಪದ ಬಿಡಿಸುವಾಗ 'Devil's limit' ಅನ್ನುವ ಭಾವ ನಿಮ್ಮ ಮನದಲ್ಲಿ ಇದ್ದಿತೆ? ಗಡಿಯಾರವನ್ನು ಸಮಯೋಚಿತವಾಗಿ ಬಿಡಿಸಿದ್ದೀರ ಇಲ್ಲಿ.

ಅಂತ್ಯದಲ್ಲಿ 'ಕಲ್ಪನೆಯ ಕುರುಡಾನೆ' ಮತ್ತು ಪ್ರಥಮಾರ್ಧದಲ್ಲಿ 'ಮಧುರ ಮದ' ಎಂದು ಪೋಣಿಸುವಾಗ ಸಾಮ್ಯವನ್ನು ಕಲ್ಪಿಸುವ idea ಬಹಳ natural ಆಗಿ ಮೂಡಿ ಬಂದಿದೆ.

ಕವನದ ಶೀರ್ಷಿಕೆ 'ಹೀಗೇ' ಯಾಕೆ ಎಂಬುದು ತಿಳಿಯಲಿಲ್ಲ. ಇನ್ನೂ effective ಆಗಿ ಇರುವ title ಕೊಡಬಹುದಿತ್ತೇನೋ.

Manjunatha Kollegala said...

ವಿಮರ್ಶೆಗೆ ಧನ್ಯವಾದ, ಶ್ರೀಕಾಂತ್. ಸಂಗೀತಕ್ಕೂ ಈ ಕವನಕ್ಕೂ ಅಂಥಾ ಯಾವ ಸಂಬಂಧವೂ ಇದ್ದಂತಿಲ್ಲ, infact, ಇದರ ವಸ್ತು ಬದುಕಿನ ಅಸಾಂಗತ್ಯ.

ಅಂದಹಾಗೆ, ಒಂದು ವಿಷಯ. "ಕಲ್ಪನೆಯ ಕುರುಡಾನೆ" ಮೂಲತಃ ನನ್ನದಲ್ಲ, ಕವಿ ಚಂದ್ರಕಾಂತ ಕುಸನೂರರದು. ಕವನದ flowನಲ್ಲಿ ಇದು ಸಹಜವಾಗಿ ಬಂತು, ಬಳಸಿದೆ. ಆದರೆ, ಕುಸನೂರರ ಕವನದಲ್ಲಿ ಇದು ಬೇರೆಯೇ ಅರ್ಥದಲ್ಲಿ ಬಂದಿದೆ, ಹಾಗಾಗಿ ಪದ ಒಂದೇ ಆದರೂ ಅದರ ಪರಿಕಲ್ಪನೆ ಬೇರೆಯೇ.

Susheel Sandeep said...

ಓದ್ತಾನೆ ಇದೀನಿ ಈ ಕವನವನ್ನ!
ಪ್ರತಿಯೊಂದು ಬಾರಿ ಓದಿದಾಗಲೂ ಬದುಕಿನ ಖಾಲಿತನದ ಆಳ ಮತ್ತಷ್ಟು ಆಳವಾಗಿ ಗೋಚರಿಸುತ್ತಿದೆ! ಅದ್ಭುತ ಪದಪ್ರಯೋಗ-ವಿಂಗಡನೆ.
'ನಿಜಸ್ಥಿತಿಗೆ ಹಿಡಿದ ಚೌಕಟ್ಟಿಲ್ಲದ ಕನ್ನಡಿಯಂತಿರುವ ಸ್ತಬ್ಧಚಿತ್ರ' ನಿಮ್ಮ ಈ ಕವನ!

Manjunatha Kollegala said...

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದ ಸುಶೀಲ್. keep coming

loop said...

:) Awesome poetry!
A sense of impending nothing :)

Manjunatha Kollegala said...

Thanks Indira, for your comment. Impending nothing? hmm... maybe :)

ಜಯಂತ ಬಾಬು said...

ಬಂದಿಯ ಬಂಧನ ಕಳಚಿದ್ದಕ್ಕೋ ..."ಹೀಗೆ" :)

Manjunatha Kollegala said...

@ ಜಯಂತ್,
ಕಳಚದಿದ್ದಕ್ಕೆ?