Saturday, June 16, 2007

ಹೀಗೊಂದು ಗುಲಾಬಿ

ನಿಮ್ಮ ಮನೆ ಬಿರುಮುಳ್ಳ
ಗುಲಾಬಿ ಪೊದೆ
ಯಾಳದಲಿ
ದಿನ ಬೆಳಗಾದರೆ ನೀ ಚಿಮ್ಮಿಸುವ
ಹೂ ಮುಗುಳು, ಮುಳುಗು-
ವನ ಹುಲ್ಲು ಕಡ್ಡಿ.
ಮುಳ್ಳು-ಕಡ್ಡಿ
ಗಳ ಸರಿಸಿ ತರಚಿ-
ಕೊಂಡು ಮೈ - ಕೈ
ಚಾಚಿ ಎಟಕಿಸಿಕೊಳ್ಳುವಾಟ
ಸುಲಭವೇನಲ್ಲ.

ಸುಳಿಗಣ್ಣು, ಮಾತು,
ಸುಳಿಗುರುಳಿನುರುಳುಗಳು
ಬಿಗಿಯುವವು, ಸೆಳೆಯುವವು ಸುಳಿಯಾಳಕೆ;
ಸುಳಿಯೆಂಬುದೆಲ್ಲಕೂ ಸೆಳೆತ ಸಹಜವೆ ತಾನೆ,
ದಕ್ಕದ್ದಕ್ಕೆ, ದಕ್ಕಿಯೂ
ತೆಕ್ಕೆಯಲಿ ಮಿದುವಾಗಿ ಸಿಕ್ಕದ್ದಕ್ಕೆ,
ಸೆಳೆದಷ್ಟೂ ಮರೆಯ ಮೊರೆ ಹೊಕ್ಕಿದ್ದಕ್ಕೆ.

ನಸುಬಿರಿದು ನಳನಳಿಪ ಚೆಂಗುಲಾಬಿ,
ದಳದಳವ ತೆರೆದರೂ ತೆರೆಯದ ರಹಸ್ಯ
ಏಳು ಸುತ್ತಿನ ಕೋಟೆ.
ಲಗ್ಗೆಯಿಟ್ಟಿದ್ದಾನೆ ಪೋರ,
ಎದೆತುಂಬ ನೂರೆಂಟು ಕನಸ ಪೂರ.

ನುಗ್ಗುತಾನೆ, ಪೊದೆಯೊಳಗೆ ಕೈ ಚಾಚಿ
ಬಗ್ಗುತಾನೆ;
ಮುಂದೆ, ಇನ್ನೂ ಮುಂದೆ,
ಇನ್ನು ಚೂರೇ ಚೂರು.
ಮುಗ್ಗರಿಸಿ ಬಿದ್ದು, ಕೈ ತರಚಿ ಮೈ ಪರಚಿ,
ಕೊನೆಗೂ ಸಿಕ್ಕಿತು, ರಾಜ್ಯ
ಗೆದ್ದ ಕಳೆ ಮೊಗದಲ್ಲಿ
ಹೊರಬಿದ್ದು ನೋಡುತಾನೆ;
ಬಟ್ಟಿ, ಮೈ, ಮುಖ, ಕಣ್ಣು, ಕಿವಿ, ಮೂಗು, ಎದೆ-
ಯಾಳ ಗಾಯ, ರಾಮಾ ರಕ್ತ!
ಹೆಚ್ಚಿತೋ ಗುಲಾಬಿ ಬಣ್ಣ?
ಮುಳ್ಳಿನೊಡನಾಟದಲಿ, ನಡೆದ ಸೆಣೆಸಾಟದಲಿ
ಚೆಂಗುಲಾಬಿಯ ಹೂವು ಚೂರು ಚೂರು!
ಎದೆಯ ಕನಸುಗಳೆಲ್ಲ ನುಚ್ಚು ನೂರು.

- ೧೮/೦೬/೧೯೯೮

No comments: