Sunday, March 18, 2007

ಹುಟ್ಟು

ಮನದಲೆಲ್ಲೋ ಬಿತ್ತಿ ಬೆಳೆದ ಭಾವದ ಬೀಜ
ಮೊಳೆತು ಜೀವವ ಪಡೆದು ಮಿಸುಕತೊಡಗಿದರೊಮ್ಮೆ
ಹಿತವಾದ ನೋವು, ನರಳಿಕೆ, ಪುಳಕ.
:
ಯಾವುದೋ ಅನುಭವದ ಮಿಲನಕ್ಕೆ ಫಲಗೊಂಡು
ಭಾವದಂಕುರವಾಗಿ ಬೆಳೆದು ಮೈ ಕೈ ತುಂಬಿ
ಬಗೆಯ ಬಸಿರನ್ನೊದೆದು ಹೊರಬರಲು ತುಡಿಯುತಿಹ
ಹೊಸ ಜೀವಕೊಂದು ರೂಪವ ಕೊಡಲು ನುಡಿಗಾಗಿ ತಡಕಾಟ, ತಿಣುಕಾಟ.
:
ಮೈಮನವ ಬಿಗಿಯುವಾಯಾಸ ನೋವಿನ ಕೊನೆಗೆ
ಹೊರಬೀಳ್ವ ಶಿಶು ಏನಾದರಾಗಿದ್ದೀತು!
ಗಂಡೊ, ಹೆಣ್ಣೋ, ಕುಂಟೊ, ಕುರುಡೋ, ಅಥವ ಸತ್ತು ಹುಟ್ಟಿದ್ದೋ!
:
ಹುಟ್ಟಿದ್ದು ತುಂಬುಚಂದಿರನಂಥ ಮುದ್ದು ಮಗುವಾದರೆ
ದಕ್ಕೀತು ನೊಂದ ನೋವಿಗು, ಬೆಂದ ಬೇಗುದಿಗು, ನರಳಿಕೆಗು
ಅರ್ಥ - ಸುಖದ ಅಂತ
:
- ೧೧/೦೪/೧೯೯೬

3 comments:

ಜಯಂತ ಬಾಬು said...

ಅಂತ ಸುಖವೋ ದುಖ:ವೋ ..ಹೊರಬಂದೊಮ್ಮೆ ನಕ್ಕಾಗ ಅಪರಿಮಿತ ಆನಂದ..ಅದೆನೋ ಎದೆ ಭಾರ ಕೆಳಗಿಸಿದಂತ ಅನುಭವ.ಕವನ ಮೂಡುವ ಬಗ್ಗೆ ಸೊಗಸಾದ ಮನಮುಟ್ಟುವ ಕವನ ಸಾರ್

Manjunatha Kollegala said...

ಧನ್ಯವಾದಗಳು ಜಯಂತ್ ರವರೇ

Alemari said...

ನಿಮ್ಮ ಒಡಲಲ್ಲಿ ಇನ್ನೆಷ್ಟು ಬೀಜಗಳು ಹುದುಗವೆಯೋ? ನಿಮ್ಮನ್ನು ನಿರಂತರವಾಗಿ ಕಾಡುವ ಉಪಮೆ ಇದು ಎನ್ನಿಸುತ್ತಿದೆ. ಒಂದರ ಹಿಂದೆ ಇನ್ನೊಂದು ಬೀಜ, ಆದರೆ ಎರಡು ವಿಭಿನ್ನ ಅನುಭವಗಳ ಹುಟ್ಟು. ಕೀಪ್‌ ಇಟ್‌ ಅಪ್‌.