Wednesday, March 31, 2021

(Like+Comment) = Lament

ಇದೊಂದು ವಿಶಿಷ್ಟರೀತಿಯ ಪ್ರಬಂಧ - ಲಲಿತಪ್ರಬಂಧವೇನೋ ಹೌದು (ಯಾವುದನ್ನು ಒರಟರು ಹರಟೆಯೆಂಬ ರೂಕ್ಷನಾಮದಿಂದ ಕರೆಯುತ್ತಾರೋ ಅದು), ಆದರೆ ಸ್ವಲ್ಪ ಟೆಕ್ನಿಕಲ್ ಜಾತಿಯದು.  ಟೆಕ್ನಿಕಲ್ ಏನೆಂದಿರಾ?  ಈ ಪ್ರಬಂಧ ಅರ್ಥವಾಗಬೇಕಾದರೆ ನಿಮಗೆ ಸ್ವಲ್ಪವಾದರೂ ಟೆಕ್ನಾಲಜಿಯ, ಅರ್ಥಾತ್, ಫೇಸ್ಬುಕ್ಕಿನ ಪರಿಚಯವಿರಬೇಕು.  ಫೇಸ್ಬುಕ್ ಯಾವ ಮಹಾ ಟೆಕ್ನಾಲಜಿ ಎಂದು ಮೂಗು ಮುರಿಯಬೇಡಿ, ನೀವೇನೋ ಫೇಸ್ಬುಕ್ಕಿನಲ್ಲಿ 'ಪಂಟ'ರೇ ಇರಬಹುದು.  ಆದರೆ ಕಂಪ್ಯೂಟರಿನ ಪರಿಚಯವೂ ಇರದ 'ರಿಪ್ ವ್ಯಾನ್ ವಿಂಕಲು'ಗಳೂ ಈ ಪ್ರಬಂಧವನ್ನೋದಬಹುದೆಂಬ ಭ್ರಮೆಯಿಂದ ಇದೊಂದು ಪೂರ್ವಸೂಚನೆಯನ್ನು ಕೊಡಬೇಕಾಯಿತು.  ನೋಡಿ, 'ರಿಪ್ ವ್ಯಾನ್ ವಿಂಕಲ'ರು ಎಂದು ವ್ಯಕ್ತಿವಾಚಕ ಬಹುವಚನ ಹಾಕಬೇಕಿತ್ತು.  ಫೇಸ್ಬುಕ್ಕಿಗರು, ಫೇಸ್ಬುಕ್ಕಿನಲ್ಲಿಲ್ಲದವರನ್ನು ಮನುಷ್ಯರೆಂದು ಪರಿಗಣಿಸುವ ಸಂಪ್ರದಾಯವೇ ಇಲ್ಲವಷ್ಟೇ - ನಾನೂ ಫೇಸ್ಬುಕ್ಕಿನಲ್ಲೇ ಏಗಿ ಏಗಿ ಅಭ್ಯಾಸದಿಂದ ವಸ್ತುವಾಚಕವನ್ನೇ ಬಳಸಿಬಿಟ್ಟೆ.  ಸಜ್ಜನರಾದ 'ರಿಪ್ ವ್ಯಾನ್ ವಿಂಕಲ'ರು ಕ್ಷಮಿಸುತ್ತಾರೆಂಬ ಗಟ್ಟಿ ನಂಬಿಕೆ ನನ್ನದು.
 
ಹಳೆಯಕಾಲದ್ದೊಂದು ರಿವಾಜು ನೆನಪಾಗುತ್ತದೆ.  ಮೊದಲೆಲ್ಲಾ ಮದುವೆ ಇತ್ಯಾದಿಗಳಿಗೆ ಲಗ್ನಪತ್ರಿಕೆ ಕೊಡುವುದರ ಜೊತೆ ಇನ್ನೊಂದು ವಿಚಿತ್ರ ಸಂಪ್ರದಾಯ ಬೆಳೆದುಬಂದಿತ್ತು - ಒಂದು ವೈಯಕ್ತಿಕ ಪತ್ರವನ್ನೂ ಅದರ ಜೊತೆ ಇಡುವುದು.  ಲಗ್ನಪತ್ರಿಕೆ 'ಸಾಮಾನ್ಯ' ಒಕ್ಕಣೆ - ಆಹ್ವಾನಿತರನ್ನು ನಿರ್ದಿಷ್ಟವಾಗಿ ಕುರಿತದ್ದಲ್ಲ.  ಆದ್ದರಿಂದ, ಲಗ್ನಪತ್ರಿಕೆಯನ್ನು ತೆಗೆದುಕೊಂಡು ಹೋಗಿ ವೈಯಕ್ತಿಕವಾಗಿ ಬಂಧುಮಿತ್ರರಿಗೆ ಕೊಟ್ಟು ಮುಖತಃ ಕರೆದು ಬರುವುದು ವಾಡಿಕೆ - ನೀವೇ ಹೋಗಿ ಕರೆಯದೇ ಲಗ್ನಪತ್ರಿಕೆಗೆ ಬೆಲೆಯಿಲ್ಲ (ಹಾಗೆಂದು ವೈಯಕ್ತಿಕ ಭೇಟಿಯನ್ನೇ ನಂಬಿಕೊಂಡು ಲಗ್ನಪತ್ರಿಕೆಯಿಲ್ಲದೇ ಕೈಯಲ್ಲಾಡಿಸಿಕೊಂಡು ಹೋದಿರೋ, ನೀವು ಬದುಕಿರುವ ಪರ್ಯಂತ ನಿಮಗೆ ಮೂತಿ ತಿವಿತ ಗ್ಯಾರಂಟಿ - "ನೋಡು, ಅಷ್ಟು ದೊಡ್ಡದಾಗಿ ಮದುವೆ ಮಾಡಿದ, ಯೋಗ್ಯತೆಗೆ ಒಂದು ಲಗ್ನಪತ್ರಿಕೆ ಪ್ರಿಂಟ್ ಹಾಕಿಸಲಿಲ್ಲ").  ಹೀಗಾಗಿ ಲಗ್ನಪತ್ರಿಕೆ ಪ್ರಿಂಟ್ ಹಾಕಿಸಿ, ಮುಖತಃ ಹೋಗಿ ಲಗ್ನಪತ್ರಿಕೆ ಕೊಟ್ಟು ಕರೆದು ಬರುವುದು ಕ್ರಮ.  ಆದರೆ ಒಂದೊಂದು ಬಡಾವಣೆಗೆ ಹೋಗುವುದು ಒಂದೊಂದು ಊರಿಗೆ ಹೋಗಿ ಬಂದಂತಾಗುವ ಕಾಲದಲ್ಲಿ ಒಬ್ಬರೋ ಇಬ್ಬರೋ ಎಷ್ಟೆಂದು ಓಡಾಡಲಾಗುವುದು.  ಹೀಗೆ ಕೆಲವೆಡೆ ಹೋಗಲಾಗದಿದ್ದಾಗ ಈ ವೈಯಕ್ತಿಕಪತ್ರಗಳು ವೈಯಕ್ತಿಕಭೇಟಿಯ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡುತ್ತಿದ್ದುವು - "ನಾವೇ ಬರಲಾಗಲಿಲ್ಲ, ಕ್ಷಮಿಸಿ, ಒಂದು ವಾರ ಮುಂಚಿತವಾಗಿ ಬಂದು ಮುಂದೆ ನಿಂತು ಮದುವೆ ನಡೆಸಿಕೊಡಬೇಕು" ಇತ್ಯಾದಿ ಇತ್ಯಾದಿ.  ಅಷ್ಟಾದರೂ "ನೋಡಿದೆಯಾ, ಬಂದು ಕರೆಯೋಕ್ಕಾಗಲಿಲ್ಲ, ಒಂದು ಲೆಟರ್ ಬರೆದು ಬಿಸಾಕಿದ್ದಾನೆ" ಎನ್ನುವ ಕೊಂಕುಗಳೂ ಬರುತ್ತಿದ್ದುವು, ಇರಲಿ.  ಆಮೇಲಾಮೇಲೆ ಈ ವೈಯಕ್ತಿಕಪತ್ರಗಳು ಲಗ್ನಪತ್ರಿಕೆಯ ಅವಿಭಾಜ್ಯ ಅಂಗವಾಗತೊಡಗಿದುವು - ಪೋಸ್ಟಿನಲ್ಲೇ ಕಳಿಸಲಿ, ಎದುರಿಗೇ ಕರೆಯಲಿ ಲಗ್ನಪತ್ರಿಕೆಯ ಜೊತೆಗೆ ವೈಯಕ್ತಿಕಪತ್ರವೂ ಇರಬೇಕು.  ಅದಿಲ್ಲದೇ ಬರೀ ಲಗ್ನಪತ್ರಿಕೆ ಕೊಟ್ಟರೆ 'ಅವಮಾನ' - ಹೀಗೆಲ್ಲ ಆಗತೊಡಗಿತು.  ಆಮೇಲಾಮೇಲೆ ಈ ವೈಯಕ್ತಿಕಪತ್ರ ಎಂಬುದು ಎಷ್ಟೊಂದು ದೊಡ್ಡ ಫಾರ್ಮಾಲಿಟಿ ಆಗಿಬಿಟ್ಟಿತೆಂದರೆ, ಅದನ್ನೂ ಕೈಬರಹದ ಅಚ್ಚಿನಲ್ಲೇ ಪ್ರಿಂಟ್ ಮಾಡಿಸಿ ಆಹ್ವಾನಿತರ ಹೆಸರನ್ನು ಮಾತ್ರ ಕೈಯಲ್ಲಿ ಬರೆದು ಲಗ್ನಪತ್ರಿಕೆಯ ಜೊತೆ ಇಟ್ಟು ಕಳುಹಿಸಿದ್ದನ್ನೂ ನಾನು ನೋಡಿದ್ದೇನೆ (ತೀರ 'ಮರ್ಯಾದೆ'ಯುಳ್ಳವರಿಗೆ ಆ ಅಚ್ಚಾದ ಕೈಬರಹದ ಪತ್ರದ ಜೊತೆಗೆ ಇನ್ನೊಂದು ಕೈಬರಹದ ಪತ್ರ - ಲಗ್ನಪತ್ರಿಕೆಯೊಡನೆ ಎರಡೆರಡು ಪತ್ರ).
 
ನಾನು ಮದುವೆಗಳಿಗೆ ಕರೆಸಿಕೊಳ್ಳುವುದು, ಕರೆಯುವುದು, ಹೋಗುವುದು ಎಲ್ಲವೂ ಇತ್ತೀಚಿಗೆ ತೀರ ಕಡಿಮೆಯಾಗಿಬಿಟ್ಟಿರುವುದರಿಂದ ಆ ಸಾಮಾಜಿಕ ರಿವಾಜುಗಳಿಗೆ ನಾನೇ 'ರಿಪ್ ವ್ಯಾನ್ ವಿಂಕಲ್' ಆಗಿಬಿಟ್ಟಿದ್ದೇನೆ.  ಈಗ ಈ ಪದ್ಧತಿ ಇದೆಯೋ ಇಲ್ಲವೋ ಗೊತ್ತಿಲ್ಲ - ಇಲ್ಲದಿದ್ದರೆ ಭಾರ ಕಳೆಯಿತು.  ಇರಲಿ, ಈಗ ಈ ವಿಷಯ ಬಂದದ್ದೇಕೆಂದರೆ, ಈ ಫೇಸ್ಬುಕ್ಕಿನ ಲೈಕು ಕಾಮೆಂಟುಗಳೂ ಫೇಸ್ಬುಕ್ ಬಂಧುಮಿತ್ರರ ನಡುವೆ ಅಂಥದ್ದೇ ಒಂದು ಗಂಭೀರವಾದ ರಿವಾಜಾಗಿಬಿಟ್ಟಿದೆ ಎಂದು ಹೇಳುವುದಕ್ಕೆ.
 
ಇಷ್ಟಕ್ಕೂ 'ಲೈಕ್' ಎಂದರೇನು?  ಇಷ್ಟ ಎಂದು ತಾನೆ?  ಒಂದು ಪೋಸ್ಟನ್ನೋ ಕಾಮೆಂಟನ್ನೋ ನೋಡಿ ಲೈಕೊತ್ತಿದರೆ ಅದು ನಮಗೆ ಇಷ್ಟವಾಯಿತು ಎಂದರ್ಥ.  ಆದ್ದರಿಂದ ಇಷ್ಟವಾದ್ದಕ್ಕೆ ಮಾತ್ರ ಲೈಕೊತ್ತುತ್ತೇನೆ, ಇಲ್ಲವೆಂದುದಕ್ಕೆ ಲೈಕೊತ್ತುವ ಜುಲುಮೆ ಏಕೋ ಎನ್ನುತ್ತೀರಾ?  ನೀವು ಫೇಸ್ಬುಕ್ ಎಂಬ 'ಸೊಫೆಸ್ಟಿಕೇಟೆಡ್' ಸಮಾಜದಲ್ಲಿ ಇರಲಿಕ್ಕೇ ನಾಲಾಯಕು - ನನಗೇನಾದರೂ ಅಧಿಕಾರವಿದ್ದಿದ್ದರೆ ನಿಮ್ಮನ್ನು ಫೇಸ್ಬುಕ್ ಸಾಮ್ರಾಜ್ಯದಿಂದಲೇ ಗಡೀಪಾರು ಮಾಡಿಬಿಡುತ್ತಿದ್ದೆ.  ನೀವು ಇಷ್ಟವಾದದ್ದಕ್ಕೆ ಮಾತ್ರ ಲೈಕೊತ್ತುತ್ತೇನೆ ಎಂದರೆ, ನೀವು ಲೈಕೊತ್ತದುದು ನಿಮಗೆ ಇಷ್ಟವಾಗಲಿಲ್ಲ ಎಂದು ತಾನೆ ಅರ್ಥ?  ಹಾಗೆ ನಿಮಗಿಷ್ಟವಾಗಲಿಲ್ಲವೆಂಬ ವಿಷಯವನ್ನು ಇನ್ನೊಬ್ಬರ ಮುಖಕ್ಕೇ ಹೇಳಲು ನಿಮಗಿರುವ ಅರ್ಹತೆಯಾದರೂ ಏನು?  ಅದು ಹೇಗೆ ನೀವು ಇನ್ನೊಬ್ಬರನ್ನು 'ಜಡ್ಜ್' ಮಾಡುತ್ತೀರಿ?  ನಾವು ನಮ್ಮ ಸುಖಕ್ಕೆ ಬರೆಯುವವರು, ನಿಮ್ಮನ್ನು ಮೆಚ್ಚಿಸಲು ಅಲ್ಲ.  ಒಂದು ಪೋಸ್ಟ್ ಹಾಕಲು ಎಷ್ಟು ಪರಿಶ್ರಮವಿರುತ್ತದೆ ಗೊತ್ತಾ?  ನಿಮ್ಮದೊಂದು ಜುಜುಬಿ ಲೈಕಿನಿಂದ ಅದಕ್ಕೆ ಕಿಂಚಿತ್ ಗೌರವವನ್ನಾದರೂ ಸೂಚಿಸಿದಂತಾದೀತೇ?  ಲೈಕೊತ್ತುವುದು ಕೇವಲ ಸೌಜನ್ಯವಷ್ಟೇ.  ಅದನ್ನೂ ಮಾಡದವರು ಫೇಸ್ಬುಕ್ಕಿನಲ್ಲಿ ಇರಬೇಕೇಕೆ?
 
ಈ ವಾಗ್ದಾಳಿಯಿಂದ ಬೆಚ್ಚಿ ಬೆವೆತು ಸುಧಾರಿಸಿಕೊಳ್ಳುತ್ತಿದ್ದೀರಾ?  ಸುಧಾರಿಸಿಕೊಳ್ಳುತ್ತಾ ಕೇಳಿ, ಸಮಾಧಾನವಾಗಿ ಹೇಳುತ್ತೇನೆ.  ಲೈಕೆಂದರೆ ಕೇವಲ ಇಷ್ಟಮುದ್ರೆಯಲ್ಲ, ಅದರ ಪರಿಣಾಮಗಳು ಎಷ್ಟೋ ಇವೆ.  ನೀವು ಲೈಕೊತ್ತಿದರೆ ಫೇಸ್ಬುಕ್ ನೀವು ಲೈಕೊತ್ತಿದ ವಿಷಯವನ್ನು ನಿಮ್ಮ ಮಿತ್ರವಲಯದಲ್ಲಿ ಟಾಂ ಟಾಂ ಹೊಡೆಯುತ್ತದೆ.  ಅದರಿಂದ ನಿಮ್ಮ ಮಿತ್ರರೂ ಆ ಪೋಸ್ಟನ್ನು ಓದುತ್ತಾರೆ.  ಅವರು ಲೈಕೊತ್ತಿದರೆ ಮತ್ತೆ ಟಾಂ ಟಾಂ.  ಹೀಗೆ ಆ ಪೋಸ್ಟೋ ಕಾಮೆಂಟೋ ಹೆಚ್ಚು ಚಾಲ್ತಿಗೆ ಬರುತ್ತದೆ.  ಅನೇಕರು ಅದನ್ನು ಶೇರ್ ಮಾಡಲೂ ಬಹುದು.  ಅದು ವ್ಯಾಪಾರವ್ಯವಹಾರಕ್ಕೆ ಸಂಬಂಧಿಸಿದ ಪೋಸ್ಟಾಗಿದ್ದರೆ ಹಾಕಿದವನಿಗೆ ವ್ಯಾಪಾರಲಾಭ, ಯಾವುದಾದರೂ ಸ್ಪರ್ಧೆಗೆ ಸಂಬಂಧಿಸಿದ್ದಾಗಿದ್ದರೆ ಆತ/ಆಕೆ ಅದರಲ್ಲಿ ಗೆಲ್ಲಬಹುದು, ಇನ್ನೇನಿಲ್ಲದಿದ್ದರೂ ಆ ಪೋಸ್ಟು ಹತ್ತು ಜನರ ಕಣ್ಣಿಗೆ ಬಿದ್ದು ಪ್ರಸಿದ್ಧವಾಗಬಹುದು - "ಏನಕೇನಪ್ರಕಾರೇಣ (ಏನೇನೋ ಮಾಡಿ) ಪ್ರಸಿದ್ಧಪುರುಷೋ ಭವ" ಎಂಬ ಸುಭಾಷಿತವೇ ಇರುವಾಗ, ನಿಮ್ಮ ಲೈಕಿನಿಂದ ಕೂತಹಾಗೇ ಒಬ್ಬರ ಪ್ರಸಿದ್ಧಿ ಹೆಚ್ಚಾಗುವುದಾದರೆ ಒಂದು ಲೈಕು ಬಿಚ್ಚಿದರೆ ನಿಮ್ಮ ಗಂಟೇನು ಹೋಗುತ್ತದೆ?  ಈ ಮೇಲೆ ಹೇಳಿದ ಲಾಭವೇನೂ ಇಲ್ಲದಿದ್ದರೂ 'ತುಂಬಾ' ಲೈಕು ಅದೊಂದು ರೀತಿ ಖುಷಿಕೊಡುವ ವಿಷಯ.  ನಾವೆಲ್ಲಾ ಮಕ್ಕಳಾಗಿದ್ದಾಗ 'ಟಿಕ್ಕಿ' ಆಟ ಆಡುತ್ತಿದ್ದೆವು.  ಸಿಗರೇಟು ಪ್ಯಾಕನ್ನು ಹರಿದು ಪಕ್ಕಗಳನ್ನು ತೆಗೆದುಹಾಕಿ, ಉಳಿದ ಎರಡು ತುಂಡುಗಳನ್ನು ಒಂದರಮೇಲೊಂದು ಅಡ್ಡಡ್ಡ ಮಡಚಿ ಒಂದರೊಳಗೊಂದು ಸಿಕ್ಕಿಸಿ ಬಿಲ್ಲೆ ಮಾಡುವುದು.  ಬಚ್ಚಿಯೋ ಪಚ್ಚಿಯೋ ಏನೋ ಒಂದು ಆಟದಲ್ಲಿ ಅದನ್ನೇ ಪಣವಾಗಿಟ್ಟು ಆಡುವುದು.  ಯಾರ ಬಳಿ ಹೆಚ್ಚು ಹೆಚ್ಚು ಟಿಕ್ಕಿಯಿರುತ್ತದೋ ಅವನೇ ಬೀದಿಗೆಲ್ಲಾ ಸಾಹುಕಾರ.  ಬೇರೆ ಬೀದಿಯ ಸಾಹುಕಾರರು ಈ ಸಾಹುಕಾರನನ್ನು ಹುಡುಕಿ ಬರುತ್ತಿದ್ದರು, ವಿಶೇಷಗೌರವದಿಂದ ಮಾತಾಡಿಸುತ್ತಿದ್ದರು.  ಈ ಶ್ರೀಮಂತವರ್ಗದ ಅಟಾಟೋಪವೇನು, ಚೊಣ್ಣವನ್ನು ಬಿಗಿದು ಕಟ್ಟಿ ಟೊಂಕದ ಮೇಲೆ ಕೈಯಿಟ್ಟು ಮೊಗವೆತ್ತಿ ನಿಲ್ಲುವ ಭಂಗಿಯೇನು?  ಟಿಕ್ಕಿಯಿಲ್ಲದ 'ಬಡವ'ರು ಇವರ ಕಣ್ಣಿಗೇ ಬೀಳುತ್ತಿರಲಿಲ್ಲ.  ತಾವೂ ಈ ಟಿಕ್ಕಿ ಸಂಗ್ರಹಿಸಿ 'ಧನಿಕ'ರಾಗಲು, ನಾಲ್ಕು ಜನರ ನಡುವೆ ತಲೆಯೆತ್ತಿ "ನಾವು ಸಮ ನಿಮಗೆಂಬ" ಹಮ್ಮು ತೋರಲು, ಬಳಸಿ ಬಿಸಾಕಿದ ಸಿಗರೇಟು ಪ್ಯಾಕಿಗಾಗಿ 'ಬಡ'ಹುಡುಗರು ಅಲೆಯದ ಬೀದಿಯಿಲ್ಲ (ಇರಲಿ, ನಾನೂ ಒಂದು ಕಾಲಕ್ಕೆ ಈ ಬಡತನದ ಬೇಗೆಯನ್ನು ಅನುಭವಿಸಿದವನೇ).  ಅದೇನೇ ಇರಲಿ, ಈ ಟಿಕ್ಕಿಸಂಪತ್ತು ಕೊಡುತ್ತಿದ್ದ ಧನ್ಯತೆ, ಆತ್ಮವಿಶ್ವಾಸ ಅಷ್ಟಿಷ್ಟಲ್ಲ.  ಅದೇ ರೀತಿ ಈ ಲೈಕ್ ಸಂಪತ್ತು ಕೂಡ.  ದಿನದ ಕೊನೆಯಲ್ಲಿ ನಾನೂ ಇಷ್ಟು ಲೈಕ್ ಸಂಪಾದಿಸಿದೆ ನೋಡು ಎಂಬ ಧನ್ಯತೆಯಂಥದ್ದೇನೋ ಬರುತ್ತದಂತೆ - ಅಂತೆ ಕಂತೆ ಏಕೆ? ಬರುತ್ತದೆ, ನನಗೂ - ಸುಳ್ಳೇಕಾಡಬೇಕು?  ಆದರೆ ಲೈಕುಗಳ ರಾಶಿ ನನಗೂ ಸಂತಸವನ್ನೇ ತರುತ್ತದಾದರೂ ಅದರ ಬಗ್ಗೆ ನನಗೆ ಲೋಭವೇನೂ ಇಲ್ಲ.  ಲಕ್ಷಗಟ್ಟಲೆ ಹಣವನ್ನೇ ಕೊಟ್ಟು ಕಳೆದುಕೊಂಡಿರುವ ನನಗೆ ಲೈಕು 'ಕೊಟ್ಟು' ಕಳೆದುಕೊಳ್ಳುವೆನೆಂಬ ಭಯವಿಲ್ಲ.  ಆದರೆ ಅದನ್ನು ನಾನು ಸಾಬೀತುಗೊಳಿಸಲಾರೆ, ಏಕೆಂದರೆ ನನ್ನ ಬಳಿ ಹಣ ಸಾಲಪಡೆದು ಪಂಗನಾಮ ತಿದ್ದಿದಂಥವರಾರೂ ಇದುವರೆಗೂ ಲೈಕುಗಳ ಸಾಲ ಕೇಳಿಲ್ಲ.  ಕೇಳಿದ್ದಿದ್ದರೆ ನನ್ನ ಬಳಿ ಸಂಗ್ರಹವಾದದ್ದನ್ನು ಮೊಗೆಮೊಗೆದು ಕೊಟ್ಟೇನು, ನಾನೂ ಅಲೋಭಿಯೆಂದು ತೋರಿಸಿಯೇನು - ನಾಮ ಬೀಳುತ್ತದೆಂಬ ಭಯ ನನಗಿಲ್ಲ.  ಕುಮಾರವ್ಯಾಸನೇ ಹೇಳಿಲ್ಲವೇ? "ನಾಮಧಾರಿಗಳತುಳಬಲರೆಂದ"; ಅಷ್ಟೇಕೆ, ದಾಸರೂ ಹಾಡಿಲ್ಲವೇ - "ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ".  ಲೈಕಿನ ಸಂಚಯದಿಂದ ಬರುವ ಧನ್ಯತೆಯೇ, ಲೈಕಿನ ಭಾರೀ ಕಡಕೊಟ್ಟು ನಾಮ ತಿದ್ದಿಸಿಕೊಳ್ಳುವುದರಿಂದಲೂ ಬರಬಹುದೇನೋ - ದಾಸರು ಬಲ್ಲರು, ಕುಮಾರವ್ಯಾಸ ಬಲ್ಲ.
 
ಇರಲಿ, ಲೈಕುಗಳ ವಿಷಯದಲ್ಲಿ ಕೆಲವರಾದರೂ ನನ್ನಷ್ಟು ಸ್ಥಿತಪ್ರಜ್ಞರಲ್ಲ ಎಂದು ಹೇಳಲೇ ಬೇಕಾಗಿದೆ.  ಕೆಲವರಿಗೆ ಲೈಕೆನ್ನುವುದು ತಮ್ಮ ಹಕ್ಕು - ಸ್ನೇಹದ ಪಟ್ಟಿಯಲ್ಲಿ ನೀವಿರುವುದಕ್ಕಾಗಿ ಅವರಿಗೆ ನೀವು ಕೊಡುವ ಬಾಡಿಗೆ - ಲೈಕು ಹಾಕದವರನ್ನು ಸ್ನೇಹದ ಪಟ್ಟಿಯಿಂದ ತೆಗೆದುಬಿಡುತ್ತೇನೆ ಎಂದು ಬಾರಿಬಾರಿಗೂ ಧಮಕಿ ಹಾಕುತ್ತಲೇ ಇರುತ್ತಾರೆ.  ತಡೆಯಿರಿ, ಅವರೂ ನಿಮ್ಮ ಸ್ನೇಹದ ಪಟ್ಟಿಯಲ್ಲಿದ್ದಾರಲ್ಲ - ಹೌದು, ಅವರು ಆ ವಿಷಯದಲ್ಲಿ ನಿಸೂರು.  ನಿಮ್ಮ ಲೈಕಿನ ಋಣ ಮಡಗಿಕೊಳ್ಳುವವರಲ್ಲ.  ನೀವು ಸ್ನೇಹಿತರ ಪಟ್ಟಿಯಲ್ಲಿದ್ದೂ ಲೈಕಿನ ಕಪ್ಪ ಸಲ್ಲಿಸದಿದ್ದರೆ ನೀವೂ ಲೈಕಿನಿಂದ ವಂಚಿತರಾಗುತ್ತೀರಷ್ಟೇ.  ಹೀಗೆ ಕೊಡುಕೊಳ್ಳುವಿಕೆಯಿಲ್ಲದ ನಿಸ್ಸಾರಸಂಬಂಧದಿಂದ ಪ್ರಯೋಜನವಾದರೂ ಏನು.  ಆದ್ದರಿಂದ ನೀವು ಒಂದಾನೊಂದು ದಿನ ಸ್ನೇಹದ ಪಟ್ಟಿಯಿಂದ ಕಿತ್ತೊಗೆಯಲ್ಪಡಬಹುದು ಕೂಡ.  ಕೆಲವರಂತೂ ದಿನದ ಕೊನೆಯಲ್ಲಿ ಬಂದ ಲೈಕುಗಳಷ್ಟನ್ನೂ ಕೊಂಡೊಯ್ದು ಬ್ಯಾಂಕಿಗೆ ಜಮೆ ಮಾಡುತ್ತಾರೆ ಎಂದು ಮಿತ್ರರೊಬ್ಬರ ಅಂಬೋಣ.  ಯಾವಾಗಲೂ ಹಣದ ಲೆಕ್ಕದಲ್ಲೇ ತೊಡಗಿರುವವರನ್ನು Money-minded ಎನ್ನುತ್ತಾರೆ.  ನೀವು ಈ ಜನರನ್ನು Like-minded ಎಂದು ಕರೆದರೆ ಅವರೇನೂ ಬೇಸರಿಸಲಾರರು - "ಸಮಾನದುಃಖವ್ಯಸನೇಷು ಸಖ್ಯಮ್" ಅಲ್ಲವೇ?  ನಿಮ್ಮ like-mindednessಗೆ ಸಂತಸವನ್ನೇ ಪಟ್ಟಾರು.  ವ್ಯಕ್ತಿಗಳಿರಲಿ, ಕೆಲವು ಗ್ರೂಪುಗಳಲ್ಲಿ ಅಡ್ಮಿನ್ನುಗಳೇ ಸದಸ್ಯರ ಪರವಾಗಿ ಲೈಕುಗಳ ಯಾಚನೆಯಲ್ಲಿ ತೊಡಗಿರುವುದೂ ಬಹುಸಾಮಾನ್ಯ ನೋಟ.  ಯಾರಿಗಾದರೂ ಒಂದು ನೂರು ಲೈಕು ಬಂತೋ - ಅಡ್ಮಿನ್ನುಗಳು ಧುತ್ತನೆ ಪ್ರತ್ಯಕ್ಷ - "ನೀವೂ ಉಳಿದವರ ಪೋಸ್ಟು ನೋಡಿ, ಲೈಕು ಮಾಡಿ.  ನೀವೊಬ್ಬರೇ ಲೈಕು ಹಾಕಿಸಿಕೊಂಡರೆ ಹೇಗೆ" - ಎಗ್ಗಿಲ್ಲದ ಉಪದೇಶ ನಿಮ್ಮ ಲೈಕುಗಳ ತಟ್ಟೆಗೆ ಬೀಳುತ್ತದೆ.  ಏನು ಮಾಡುತ್ತೀರಿ?  ಸವಿಯುವಂತಿಲ್ಲ ಬಿಡುವಂತಿಲ್ಲ - ಆ ಕ್ಷಣಕ್ಕೆ ನಿಮಗೆ "ಈ ಫೇಸ್ಬುಕ್ಕಿನವರು ಲೈಕಾಟನೆಯನ್ನು ಕೂಡಲೇ ಬ್ಯಾನ್ ಮಾಡಬೇಕು" ಎನಿಸಿದರೆ ಅಚ್ಚರಿಯೇನಲ್ಲ.  
 
ಒಂದು ಲೈಕಿಗೆ ಇಷ್ಟೊಂದೇ?  ಅಡೇಂಗಪ್ಪ, ಒಂದು ಲೈಕ್ ತಾನೆ, ಹೋದರೆ ಹೋಗಲಿ ಬಿಡು, ಕೊಟ್ಟುಬಿಡೋಣ ಎಂಬ ನಿಲುವಿಗೆ ಬರುತ್ತೀರೆನ್ನಿ, ಕೊನೆಗೆ - ವಚನೇ ಕಾ ದರಿದ್ರತಾ ಎಂದ ಸುಭಾಷಿತಕಾರ ಈಗಿದ್ದಿದ್ದರೆ ವಚನಕ್ಕಿಂತ ಸುಲಭವಾದ ಲೈಕಿನ ಕುರಿತು ಧಾರಾಳವಾಗಿ "ಲೈಕೇ ಕಾ ದರಿದ್ರತಾ" ಎನ್ನುತ್ತಿದ್ದನೇನೋ.  ಆದರೆ ತಡೆಯಿರಿ, ಹೀಗೆ ಮುಗುಮ್ಮಾಗಿ ಲೈಕೊತ್ತಿ ಪಾರಾಗಲೆಳಸುವ ಅತಿಬುದ್ಧಿವಂತರು ನೀವೊಬ್ಬರೇ ಅಲ್ಲ.  ಅಂತಹ ಲೈಕುಗಳು ಎಷ್ಟೋ ಬರುತ್ತವೆ - ಹೀಗಾಗಿ ಲೈಕೆಂದರೆ "ಇಷ್ಟವಾಯಿತು" ಎನ್ನುವ ಅರ್ಥ ಹೋಗಿ, "ನೋಡಿದೆ" ಎನ್ನುವ ಮುಗುಂ ಅರ್ಥ ಬಂದುಬಿಟ್ಟಿದೆ.  "ನೋಡಿದೆ, ಇದಕ್ಕೆ ನನ್ನ ಮಾತಿಲ್ಲ - ನಿನ್ನಂತಹ ಮೂರ್ಖರ ಜೊತೆ ಮಾತು ತಾನೆ ಏಕೆ" ಎಂದು ಮುಂತಾಗಿ ಹಿಗ್ಗಲಿಸಿದ ಅರ್ಥಗಳೂ ಇವೆ.  ಅದು ಇಷ್ಟಪಟ್ಟಿದ್ದರ ತದ್ವಿರುದ್ಧ, ಒಂದು ರೀತಿ ಶೀತಲವಾದ ಪ್ರತಿಕ್ರಿಯೆ.  ಹೀಗಾಗಿ, ನೀವೇನಾದರೂ ಲೈಕೊತ್ತಿ ಸುಮ್ಮನಾದರೆ, ಇಷ್ಟವಾಯಿತೆನ್ನುವುಕ್ಕಿಂತ ಇಷ್ಟವಾಗಲಿಲ್ಲ ಎಂಬ ಸಂದೇಶವನ್ನೇ ರವಾನಿಸುತ್ತೀರಿ, ನೆನಪಿರಲಿ.  (ಅದು ಹಾಳಾಗಲೆಂದರೆ, ನಿಮ್ಮನ್ನು ಮೀರಿಸಿದ ಎಷ್ಟೋ ಜನ ಬೃಹಸ್ಪತಿಗಳು ಲೈಕೊತ್ತಿ, ಕಾಮೆಂಟೂ ಮಾಡಿ ಅದು ನಮ್ಮ ಗಮನಕ್ಕೆ ಬಂತೆಂಬುದನ್ನು ಖಾತ್ರಿಪಡಿಸಿಕೊಂಡ ಮೇಲೆ ಲೈಕ್ ಮತ್ತು ಕಾಮೆಂಟ್ ಎರಡನ್ನೂ 'ಗಾಯಬ್' ಮಾಡಿ ಲೈಕ್ ಈಸಿಕೊಂಡ ನಮ್ಮನ್ನೇ ಕೋಡಂಗಿಯನ್ನಾಗಿಸಿ, ತಾವು ಮಾತ್ರ ಕೊಟ್ಟು ಕಿತ್ತುಕೊಂಡ ವೀರಭದ್ರರಾಗಿಬಿಡುತ್ತಾರೆ).  ಇನ್ನೆಷ್ಟೋ ಜನ ಈ ಲೈಕೊತ್ತುವ ಕ್ರಿಯೆಗೆ ಅದೆಷ್ಟು ಒಗ್ಗಿಹೋಗಿದ್ದಾರೆಂದರೆ ಸತ್ತ ಸುದ್ದಿಗೂ ಶಿವಾ ಎಂದು ಲೈಕೊತ್ತಿಬಿಡುತ್ತಾರೆ.  ಆದ್ದರಿಂದ ತಿಳಿದುಕೊಂಡುಬಿಡಿ, ಲೈಕ್ ಎನ್ನುವುದು ಒಂದು ರೀತಿ 'ನಾಮ್ ಕೇ ವಾಸ್ತೇ' ಲಗ್ನಪತ್ರಿಕೆಯಿದ್ದಂತೆ.  ಅದಕ್ಕೆ ಬೆಲೆ ಬರಬೇಕಾದರೆ ಅದರೊಂದಿಗೆ ಕಾಮೆಂಟಿನ ಒಗ್ಗರಣೆಯಿರಲೇ ಬೇಕು.
 
ಸರಿ, ಒಂದು ಲೈಕು ಒಂದು ಕಾಮೆಂಟು ಇಷ್ಟೇ ತಾನೆ ಎಂದು ಹೊರಟುಬಿಡಬೇಡಿ - ಒಕ ಪಾಟ್ಟು ಒಕ ಫೈಟ್ಟು ಎಂಬ ಫಾರ್ಮ್ಯುಲ ಹಾಕೋಕ್ಕೆ ಇದೇನು ಮಸಾಲೆ ಸಿನಿಮಾ ಕೆಟ್ಟುಹೋಯಿತೇ?  ನಿಮ್ಮ ಲೈಕು ಯಾರಿಗೆ, ಕಾಮೆಂಟು ಯಾರಿಗೆ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ.  ನಿಮ್ಮ ಲೈಕು-ಕಾಮೆಂಟುಗಳ ಮೊದಲ ಹಕ್ಕುದಾರರು ಪೋಸ್ಟನ್ನು ಹಾಕಿದವರು, ಆಮೇಲೆ ಕಾಮೆಂಟು ಹಾಕಿದವರು.  ನೀವೇನಾದರೂ ಕಾಮೆಂಟಿಗೆ ಲೈಕು ಹಾಕಿ ಪೋಸ್ಟಿಗೆ ಲೈಕು ಹಾಕಲಿಲ್ಲವೋ, ಅದನ್ನು ಪೋಸ್ಟುದಾರರು ಕಂಡುಹಿಡಿದರೋ ಮುಗಿಯಿತು ನಿಮ್ಮ ಕತೆ (ಎಷ್ಟೋ ವೇಳೆ ಮೂಲ ಪೋಸ್ಟಿಗಿಂತ ಕಾಮೆಂಟಿಗೆ ಹೆಚ್ಚು ಲೈಕುಗಳು, ಪ್ರತಿಕ್ರಿಯೆಗಳು ಬಂದುಬಿಡುತ್ತವೆ.  ಆಗಿನ ಸನ್ನಿವೇಶ ನೋಡುವಂತಿರುತ್ತದೆ).  ಆದ್ದರಿಂದ, ನಿಮ್ಮ 'ಲೈಕಾಮೆಂಟ್' (ಲೈಕ್+ಕಾಮೆಂಟ್) ಕಾರ್ಯಕ್ರಮ ಹೀಗಿರಲಿ - ಮೊದಲು ಪೋಸ್ಟಿಗೆ ಲೈಕು, ಆಮೇಲೆ ಪೋಸ್ಟಿಗೆ ಕಾಮೆಂಟು, ಆಮೇಲೆ ಪೋಸ್ಟುದಾರರು ಮೆಚ್ಚಿರುವ ಕಾಮೆಂಟುಗಳಿಗೆ ಲೈಕು, ಆಮೇಲೆ ಆ ಕಾಮೆಂಟುಗಳಿಗೆ ಕಾಮೆಂಟು (ಉತ್ತರ) - ಆಮೇಲೆ ಪೋಸ್ಟುದಾರರು ಲೈಕಿಸದ ಕಾಮೆಂಟುಗಳಿಗೆ ಲೈಕು ಹಾಕುವುದೋ, ಕಾಮೆಂಟು ಹಾಕುವುದೋ ನಿಮ್ಮ ಒಲವಿಗೆ ಬಿಟ್ಟಿದ್ದು.  "ಆಯ್ತು, ಇನ್ನು ಮೇಲೆ ಹಾಗೇ ಮಾಡುತ್ತೇನೆ" ಎಂದಿರಾ?  ಈ ಫೇಸ್ಬುಕ್ ಎನ್ನುವ ವ್ಯವಸ್ಥೆ ನಿಮ್ಮನ್ನು ಅಷ್ಟು ನಿಸೂರಾಗಿರಲು ಬಿಡುವುದಿಲ್ಲ, ತಿಳಿದುಕೊಳ್ಳಿ.  ನೀವು ಲೈಕು ಕಾಮೆಂಟು ಹಾಕಬೇಕಾದರೆ ಆ ಪೋಸ್ಟುಗಳು ನಿಮ್ಮ ಫೀಡಿನಲ್ಲಿ ಕಾಣಬೇಕಷ್ಟೆ?  ನಿಮ್ಮ ಫೀಡಿನಲ್ಲಿ ನೀವು ಯಾವುದನ್ನು ಮೊದಲು ನೋಡಬೇಕು, ಯಾವುದನ್ನು ಆಮೇಲೆ ಎಂದು ನಿರ್ಧರಿಸಲು ಫೇಸ್ಬುಕ್ ನಿಮಗೊಂದು ಆಯ್ಕೆಯನ್ನೇನೋ ಕೊಡುತ್ತದೆ.  ಆದರೆ ನೀವು ಎಲ್ಲ ಅಂಶಗಳನ್ನೂ ಆಯ್ಕೆ ಮಾಡಲಾಗುವುದಿಲ್ಲ.  ಅಂತಿಮವಾಗಿ ನೀವು ಏನನ್ನು ಎಷ್ಟು ಕಾಲಕ್ಕೊಮ್ಮೆ ಎಷ್ಟು ನೋಡುತ್ತೀರೆಂಬುದನ್ನು ನಿರ್ಧರಿಸುವುದು ಫೇಸ್ಬುಕ್ಕೇ.  ನಿಮ್ಮ ದುರದೃಷ್ಟಕ್ಕೆ ಈ 'ಲೈಕಾಶಿ'ಗಳ (ಲೈಕನ್ನು ಆಶಿಸುವವರ) ಪೋಸ್ಟನ್ನು ನಿಮಗೆ ಹುಣ್ಣಿಮೆ ಅಮಾವಾಸ್ಯೆಗೊಂದು ಸಲ ಮಾತ್ರ ತೋರಿಸಬೇಕೆಂದು ಫೇಸ್ಬುಕ್ಕು ನಿರ್ಧರಿಸಿದ್ದರೆ, ಆ ಹುಣ್ಣಿಮೆ ಅಮಾವಾಸ್ಯೆಯಂದು ಅಂತಹ ನೂರಾರು ಜನರ ಪೋಸ್ಟನ್ನು ಯಾವುದೋ ಕ್ರಮದಲ್ಲಿ ಅದು ನಿಮ್ಮ ಮುಂದೊಡ್ಡಿದರೆ, ನೀವು ಲೈಕಿನ ಕಪ್ಪ ಸಲ್ಲಿಸಬೇಕಾದ ಪೋಸ್ಟು ನಿಮ್ಮ ಕಣ್ಣಿಗೆ ಬೀಳದಿರುವ ಅಪಾಯವೇ ಹೆಚ್ಚು.  ಅದರಲ್ಲಿ ನಿಮ್ಮದೇನೂ ತಪ್ಪಿಲ್ಲ, ಆದರೂ ನಿಮಗೆ 'ದುರಹಂಕಾರಿ', 'ಸ್ವಪ್ರತಿಷ್ಠ', 'ಉನ್ನತಭ್ರೂ', 'ಊರ್ಧ್ವನಾಸಿ' ಮೊದಲಾದ ಬಿರುದುಗಳು ತಪ್ಪಿದ್ದಲ್ಲ.  ಇಷ್ಟಾಯ್ತು, ಅಕಸ್ಮಾತ್ ಆ ಪೋಸ್ಟು ನಿಮ್ಮ ಕಣ್ಣಿಗೆ ಬಿತ್ತು, ಓದಿ ನಿಜಕ್ಕೂ ಖುಶಿಯಾಯಿತು, ಆ ಆನಂದಾತಿರೇಕವನ್ನು ಅವರೊಂದಿಗೇ ನೇರವಾಗಿ ಹಂಚಿಕೊಳ್ಳೋಣ ಎಂದು ಇನ್ ಬಾಕ್ಸಿಗೆ ಹೊರಟಿರೋ, ಎಚ್ಚರ!  ಇನ್ಬಾಕ್ಸಿಗೆ ಹೋಗುವ ಮೊದಲು, ಪಬ್ಲಿಕ್ಕಾಗಿ ಆ ಪೋಸ್ಟಿಗೆ ಲೈಕು ಕಾಮೆಂಟುಗಳ ಶಿಷ್ಟಾಚಾರ ಪೂರೈಸಿದ್ದೀರೋ ಮೊದಲು ನೋಡಿಕೊಳ್ಳಿ.  ನೀವು ಅಲ್ಲಿ ಹೊರಗೆ ಹಾಕಿರುವ ಕಾಮೆಂಟು, ಇಲ್ಲಿ ಇನ್ಬಾಕ್ಸಿನಲ್ಲಿ ಕೊಡಮಾಡಲಿರುವ ಕಾಂಪ್ಲಿಮೆಂಟಿಗಿಂತ ಯಾವ ರೀತಿಯಲ್ಲೂ ಕಡಿಮೆಯಿರದಿರಲಿ.  ಇಲ್ಲದಿದ್ದರೆ "ಹೊರಗೆ ಮಾತ್ರ ಪೋಸ್ಟನ್ನ ನೋಡೇ ಇಲ್ಲ ಅಂತ ತೋರಿಸಿಕೊಳ್ಳುವುದು, ನೋಡಿದರೂ ಏನೋ ಕಾಟಾಚಾರಕ್ಕೆ ಕಾಮೆಂಟ್ ಹಾಕುವುದು, ಇನ್ಬಾಕ್ಸಿನಲ್ಲಿ ಮಾತ್ರ ಹಾಡುವುದೇನು, ಹೊಗಳುವುದೇನು..." ಎಂಬ ಭರ್ಜಿ ಸಳ್ಳನೆ ನಿಮಗಾಗಿ ಕಾದಿರುತ್ತದೆ.  ಈ ಭರ್ಜಿಗಳು ಒಂದು ರೀತಿ ಕಟ್ಟುಹಾವಿನ ಕಡಿತವಿದ್ದಂತೆ - ಕಡಿದದ್ದು ನಿಮಗೇ ಆದರೂ, ಕಂಡಲ್ಲದೇ ವಿಷವೇರುವವರೆಗೂ ಗೊತ್ತೇ ಆಗುವುದಿಲ್ಲ,
 
ಇವಿಷ್ಟು, ನೀವು ಬೇರೆಯವರ ಪೋಸ್ಟುಗಳಿಗೆ ಹಾಕಬೇಕಾದ ಲೈಕು ಕಾಮೆಂಟುಗಳ ವಿಷಯವಾದರೆ, ಇನ್ನು ನಿಮ್ಮದೇ ಪೋಸ್ಟುಗಳಿಗೆ ಬರುವ ಲೈಕು ಕಾಮೆಂಟುಗಳನ್ನು ಹೇಗೆ 'ಸ್ವೀಕರಿಸ'ಬೇಕೆಂಬುದು ಬೇರೆಯದೇ ಪಾಠ.  ಅದರಲ್ಲೇನಿದೆ?  ನಾನದನ್ನು ಸಂತೋಷದಿಂದಲೇ ಸ್ವೀಕರಿಸುತ್ತೇನಲ್ಲ ಎಂದು ಹೇಳಿ ಮತ್ತೊಮ್ಮೆ ಫೇಸ್ಬುಕ್ ಎಟಿಕೆಟ್ಟುಗಳ ಕುರಿತ ನಿಮ್ಮ ಅಜ್ಞಾನವನ್ನು ಬಯಲಾಗಿಸದಿರಿ.  ನೀವು ನಿಮ್ಮೊಳಗೆ ಹೇಗೆ ಸ್ವೀಕರಿಸುತ್ತೀರೆಂಬುದು ಮುಖ್ಯವಲ್ಲ.  ಅದನ್ನು ಸಾರ್ವಜನಿಕವಾಗಿ ಹೇಗೆ ಅಭಿವ್ಯಕ್ತಿಸುತ್ತೀರೆಂಬುದು ಮುಖ್ಯ.  ಈಗಾಗಲೇ ನಿಮಗೆ ಅರ್ಥವಾಗಿರಬಹುದಾದಂತೆ (ಅರ್ಥವಾಗಿಲ್ಲದಿದ್ದರೆ ದೇವರು ನಿಮ್ಮನ್ನು ಕಾಪಾಡಲಿ), ಲೈಕೆಂಬುದು ಸೌಜನ್ಯ, ಕಾಮೆಂಟೆಂಬುದು ಔದಾರ್ಯ - ನಿಮಗೆ ಬರುವ ಅಮೂಲ್ಯವಾದ ಉಡುಗೊರೆ.  ಅದಕ್ಕೆ ಪ್ರತಿಯಾಗಿ ಒಂದು ಲೈಕೆನ್ನುವುದು ನೀವು ತೋರಬಹುದಾದ ಕನಿಷ್ಟತಮ ಸೌಜನ್ಯ (ನೆನಪಿರಲಿ, ಲೈಕೆಂದರೆ ಇಷ್ಟವೆಂದಲ್ಲ, ನೋಡಿದ್ದೇನೆ ಎಂದಷ್ಟೇ).  ನೀವು ನೋಡಿಯೂ ಲೈಕಿಸದಿದ್ದರೆ, ನೋಡಿಯೂ ನೋಡದಂತಿರುವುದರಷ್ಟೇ ಅವಮಾನ.  ಅದರಲ್ಲೂ ಹಿಂದಿನ ಮುಂದಿನ ಕಾಮೆಂಟುಗಳಿಗೆ ಲೈಕೊತ್ತಿ ಮಧ್ಯದ್ದೊಂದು ಕಾಮೆಂಟನ್ನು ಗಮನಿಸದಿರುವುದು ಅಕ್ಷಮ್ಯ.  ಕಣ್ತಪ್ಪಿತು ಎನ್ನುವುದು ಕುಂಟುನೆವವಷ್ಟೇ.  ಆದ್ದರಿಂದ ನಿಮಗೆ ಬಂದ ಕಾಮೆಂಟು ಅದೇನೇ ಇರಲಿ - ನೀವು ಪರಬ್ರಹ್ಮವಸ್ತುವಿನ ಬಗ್ಗೆ ಗಂಭೀರವಾಗಿ ಬರೆದ ಪೋಸ್ಟಿಗೆ, ಕುಡುಕನೊಬ್ಬ ಬಾಟ್ಲಿಯುದ್ದಕ್ಕೂ ಮೈಬೊಗ್ಗಿಸುತ್ತಿರುವ ಇಮೋಜಿಯೇ ಬರಲಿ - ಮೊದಲು ಅದಕ್ಕೊಂದು ಲೈಕೊತ್ತಿಬಿಡಿ.  ಕೆಲವೊಮ್ಮೆ ಹೀಗೂ ಆಗುತ್ತದೆ.  ಎಷ್ಟೋ ಬಾರಿ ಕಾಮೆಂಟೊಂದನ್ನು ನೋಡಿ ಅದಕ್ಕೆ ಉತ್ತರಿಸುವ ಹುಕಿಯಲ್ಲಿ ಉತ್ತರಿಸಿಬಿಡುತ್ತೀರಿ, ಲೈಕೊತ್ತುವುದನ್ನು ಮರೆತುಬಿಡುತ್ತೀರಿ.  ಅದೂ ಅಕ್ಷಮ್ಯವೇ - ನೆನಪಿರಲಿ, ಕಾಮೆಂಟಿಲ್ಲದ ಲೈಕು ಖಾಲಿ ಲಗ್ನಪತ್ರಿಕೆಯಾದರೆ, ಲೈಕಿಲ್ಲದ ಕಾಮೆಂಟು ಲಗ್ನಪತ್ರಿಕೆಯಿಲ್ಲದೇ ಬೇಕಾಬಿಟ್ಟಿ ಕರೆದು ಬಂದಂತೆ.  ಅದನ್ನು ಎಂದಿಗೂ ಮಾಡಬೇಡಿ.
 
ಇಷ್ಟಾಗಿ ಒಟ್ಟಾರೆ ಏನು?  ಮೊದಲು ಲೈಕು, ಆಮೇಲೆ ತಪ್ಪದೇ ಕಾಮೆಂಟು, ಫೀಡಿನಲ್ಲಿ ಬರದಿದ್ದರೂ ಆಯಾ ಪ್ರೊಫೈಲುಗಳಿಗೆ ಹುಡುಕಿಕೊಂಡು ಹೋಗಿ ಅದನ್ನು ಮಾಡಿಬಂದರಾಯಿತು ಎನ್ನಬಹುದು.  "ಸಾಲದ ಕಣಿವೆಗೆ ನೀಲದ ಬಾವಿ" ಎಂಬ ವೇದವಾಕ್ಯದಂತೆ (ಇದು ವೇದವಾಕ್ಯವೇ ಎಂಬುದಕ್ಕೆ, "ಗಾದೆಮಾತು ವೇದಕ್ಕೆ ಸಮ" ಎಂಬ ಇನ್ನೊಂದು ವೇದವಾಕ್ಯವೇ ಪ್ರಮಾಣ), ಮೊದಲು ಒಂದು ಲೈಕ್ ಇದ್ದ ಜಾಗದಲ್ಲಿ ಈಗ ಲೈಕು, ಲವ್ವು, ಅಪ್ಪುಗೆ, ನಗೆ, 'ವಾವ್'ಕಾರ, ದುಃಖ, ಕೋಪ ಹೀಗೆ ಏಳು ಆಯ್ಕೆಗಳು - ಅಗ್ನಿಗೆ ಸಪ್ತಜಿಹ್ವನೆಂಬುದೊಂದು ಹೆಸರು.  ಈ ಏಳು ಉರಿನಾಲಿಗೆಗಳಲ್ಲಿ ಯಾವುದು ನಿಮ್ಮನ್ನು ನೆಕ್ಕುತ್ತದೆಯೋ ತಿಳಿಯುವುದಿಲ್ಲ.  ಯಾರಾದರೂ ಹೊಸ ಕಾರು ಕೊಂಡೆನೆಂದು ಹಾಕಿದಾಗ ನೀವು ದುಃಖದ ಪ್ರತಿಕ್ರಿಯೆ ಹಾಕಿದರೆ ಹೇಗಿರುತ್ತದೆ?  ಅಥವಾ ಬಿದ್ದೆನೆಂದು ಹೇಳಿಕೊಂಡಾಗ ನೀವು ಹಹ ಎಂದು ಹಲ್ಲು ಕಿರಿದರೆ?  ಅಷ್ಟೆಲ್ಲ ತಲೆಕೆಡಿಸಿಕೊಳ್ಳುವುದೇಕೆ, ಲೈಕ್ ಎಂದರೆ ನೋಡಿದ್ದೇನೆ ಎಂದು ಅರ್ಥ ತಾನೇ, ಇತರ ಪ್ರತಿಕ್ರಿಯೆಗಳ ಗೋಜಿಗೆ ಹೋಗದೇ ಲೈಕ್ ಹಾಕುವುದು ಸೇಫು ಎಂದಿರಾ?  ಬಹಳಷ್ಟು ಜನ ಹಾಗೇ ಅಂದುಕೊಂಡು, ಯಾರಾದರೂ ಸತ್ತ ಸುದ್ದಿಗೂ ಲೈಕ್ ಒತ್ತುತ್ತಾರೆ.  ಲವ್ ಒತ್ತಿ ಕೆಳಗಡೆ ಓಂ ಶಾಂತಿ ಎಂದೋ ಹರಿ ಓಂ ಎಂದೋ ಕಾಮೆಂಟಿಸಿದವರಿದ್ದಾರೆ.  ಪೋಸ್ಟುಗಳೂ ಕೆಲವೊಮ್ಮೆ ಅಂಥದ್ದೇ ಬರುತ್ತವೆನ್ನಿ.  ಯಾರೋ ಒಬ್ಬ ಭೂಪ, ಶವಯಾತ್ರೆಯಲ್ಲಿ ಚಟ್ಟಕ್ಕೆ ಹೆಗಲು ಕೊಟ್ಟ ಸೆಲ್ಫೀ ತೆಗೆದು ಹಾಕಿದ್ದ.  ಅದಕ್ಕೆ ಲವ್ ಒತ್ತಿ ಕೆಳಗಡೆ "Congratulations" ಎಂದು ಹಾಕಿದ್ದ ಒಬ್ಬ ಸನ್ಮಿತ್ರ - ಅವನ ತಪ್ಪೇ?  ಇವೆಲ್ಲಾ ತಮಾಷೆಯ ಪ್ರಸಂಗಗಳಾದುವು.  ಕೆಲವೊಮ್ಮೆ ನೀವು ಎಷ್ಟೇ ಗಂಭೀರವಾಗಿದ್ದರೂ ನೇಣುಹಾಕಿಕೊಂಡ (hang ಆದ) ನಿಮ್ಮ ಕಂಪ್ಯೂಟರೋ, ಆಮೆಯ ಭೂತ ಮೈಹೊಕ್ಕ ನಿಮ್ಮ ಇಂಟರ್ನೆಟ್ಟೋ ನಿಮ್ಮನ್ನು ಇನ್ನಿಲ್ಲದ ಪೇಚಿಗೆ ಸಿಕ್ಕಿಸಿಬಿಡುತ್ತದೆ.  ನನಗೇ ಒಮ್ಮೆ ಹಾಗಾಯಿತು.  ಯಾರೋ ಸತ್ತ ಸುದ್ದಿ ಬಂತು - ಪಾಪ ಹಿರಿಯರು.  ವಾಡಿಕೆಯಂತೆ ದುಃಖದ ಮುದ್ರೆ ಹಾಕಿ ಕೆಳಗೆ ಕಾಮೆಂಟು ಮಾಡಬೇಕೆಂದು ಹೋದೆ.  ಕರ್ಸರು "ಹಹ್ಹಾ" ಎನ್ನುವ ಮುದ್ರೆಯ ಬಳಿ ಬರುತ್ತಿದ್ದಂತೆಯೇ ನನ್ನ ಹೆಗಲ ಮೇಲೆ ಕೂತಿದ್ದ ಶನಿಗೆ ಅದೇನೆನ್ನಿಸಿತೋ, ಬೆರಳನ್ನು ಅಲ್ಲೇ ಕುಕ್ಕಿಸಿಬಿಡುವುದೇ?  ಕಣ್ಣೀರಿಳಿಸುವ ಮುದ್ರೆಯ ಜಾಗದಲ್ಲಿ ಪಕಪಕನೆ ನಗುವ ಮುದ್ರೆ ಕಂಡೊಡನೆ ಅಯ್ಯಯ್ಯೋ ಎಂದು ಮತ್ತೆ ಸರಿಮಾಡಲು ಹೋಗುತ್ತೇನೆ, ಬ್ರೌಸರ್ ಜಪ್ಪಯ್ಯ ಎನ್ನದೇ ಹಾಗೇ ಪಕಪಕನೆ ನಗುತ್ತಾ ನಿಂತೇ ಬಿಟ್ಟಿದೆ.  ಸತ್ತವರೋ ಹಿರಿಯರು.  ನಾನೂ ಹಾಗೆಲ್ಲಾ ಸತ್ತದ್ದಕ್ಕೆ ಪಕಪಕ ನಗುವಷ್ಟು ಕಿರಿಯನೇನಲ್ಲ.  ಪೋಸ್ಟ್ ಹಾಕಿದವರು ನನಗೆ ಅಷ್ಟೇನು ಸಲುಗೆಯವರೂ ಅಲ್ಲ.  ಎಂತಹ ಸನ್ನಿವೇಶ!  ಸರಿ, ಮತ್ತೆ ಟಾಸ್ಕ್ ಮ್ಯಾನೇಜರಿಗೆ ಹೋಗಿ ಆ ದರಿದ್ರ ಬ್ರೌಸರನ್ನು ಕೊಂದುಹಾಕಿ ಮತ್ತೆ ಹೊಸ ಬ್ರೌಸರ್ ತೆರೆದು, ಫೇಸ್ಬುಕ್ಕಿಗೆ ಲಾಗಿನ್ ಆಗಿ, ನನ್ನ ಆಕ್ಟಿವಿಟಿ ಲಾಗಿಗೆ ಹೋಗಿ ಆ ಪಕಪಕ ಪ್ರತಿಕ್ರಿಯೆಯನ್ನು ಹುಡುಕಿ ಸರಿಮಾಡುವ ಹೊತ್ತಿಗೆ ನನಗೆ ನಾನೇ ಹರಿ ಓಂ ಹಾಕಿಕೊಳ್ಳುವಂತಾಗಿಬಿಟ್ಟಿತ್ತು.
 
ಇಷ್ಟೆಲ್ಲ ಕೇಳಿ, ಈ ಲೈಕು ಕಾಮೆಂಟುಗಳ ಸಹವಾಸವಷ್ಟೇ ಏಕೆ, ಫೇಸ್ಬುಕ್ಕಿನ ಸಹವಾಸವೇ ಬೇಡ, ಹೋಗಿಬಿಡುತ್ತೇನೆ ಎಂದಿರಾ?  ನಿಮಗೆ "ಈಸಬೇಕು ಇದ್ದು ಜೈಸಬೇಕು" ಎಂಬ ದಾಸವಾಣಿಯಲ್ಲಿ ನಂಬಿಕೆಯಿಲ್ಲ.  ಎಲ್ಲಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ.  ಸರಿ, ಆಯಿತು, ಹೋಗುವುದೇ ಆದರೆ ಹೋಗುತ್ತೇನೆ ಹೋಗುತ್ತೇನೆ ಎಂದು ನೂರು ಬಾರಿ ಹೇಳದೇ ಸದ್ದಿಲ್ಲದೇ ಹೋಗಿಬಿಡಿ, ನೀವು ಇದ್ದದ್ದು ಹೇಗೋ ಹೋದದ್ದೂ ಯಾರಿಗೂ ತಿಳಿಯುವುದಿಲ್ಲ - 'ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ದಕ್ಕುವುದೆ ನಿನಗೆ ಜಸ' ಎಂದ ಮಂಕುತಿಮ್ಮನ ಮಾತು ನೆನಪಿದೆಯಷ್ಟೇ?  ನಾನಂತೂ ಹಾಗೆಲ್ಲ ಹೇಳುವುದೂ ಇಲ್ಲ, ಹೋಗುವುದೂ ಇಲ್ಲ - ಅಯ್ಯೋ, "ಇದಕಾರಂಜುವರು ಇದಕಾರಳುಕುವರು"?  ಇಷ್ಟಕ್ಕೂ ಹೋಗಿ ಮಾಡುವುದೇನಿದೆ ಹೇಳಿ?  ಮತ್ತೊಂದು ಅವತಾರದಲ್ಲಿ ಮರಳಿ ಬರುವುದಷ್ಟೇ?  ಬದಲಿಗೆ ಇಲ್ಲೇ ಇದ್ದು ಹೋರಾಡಿ ಜೈಸೋಣ.  ಹೋರಾಟ ಏನೆಂದಿರಾ?  ನಾನೂ ಮೊದಲೆಲ್ಲ ಈ ಲೈಕು ಕಾಮೆಂಟುಗಳ ರಾಜಕೀಯದ ಬಗ್ಗೆ ಬಹುವಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.  ನನ್ನ ಲೈಕು ಕಾಮೆಂಟುಗಳನ್ನು, ಅವುಗಳ ಅನುಪಸ್ಥಿತಿಯನ್ನು ಸಮಾಜ ಹೇಗೆ ತೆಗೆದುಕೊಳ್ಳುತ್ತದೆ ಎಂಬ ಅರಿವಿರಲಿಲ್ಲ, ಅಂಥದ್ದನ್ನು ನಾನು ಹೇಗೆ ತೆಗೆದುಕೊಳ್ಳಬೇಕು ಎಂಬುದೂ ಗೊತ್ತಿರಲಿಲ್ಲ.  ಆಮೇಲೆ ಗಮನಿಸತೊಡಗಿದೆ.  ನನ್ನದೇ ಕೆಲವರು ಸನ್ಮಿತ್ರರಿದ್ದಾರೆ.  ಕೆಲವರು ನಾನು ಹಾಕುವ ಯಾವ ಪೋಸ್ಟಿಗೂ ಲವ್ವೋ ಲೈಕೋ ಒತ್ತುತ್ತಾರೆಯೇ ಹೊರತು ಜಪ್ಪಯ್ಯ ಎಂದರೂ ಕಾಮೆಂಟು ಹಾಕುವುದಿಲ್ಲ.  ಇನ್ನು ಕೆಲವರಿದ್ದಾರೆ, ಲೈಕು ಹಾಕುತ್ತಾರೆಯೇ ಶಿವಾಯಿ ಅದರಾಚಿಗಿನ ಯಾವ ಭಾವವನ್ನೂ ತೋರಿಸುವುದೇ ಇಲ್ಲ.  ಅಲ್ಲಪ್ಪಾ, ಇವರು ಲವ್ ಹಾಕುವುದು ಬೇಡ ಪಕಪಕನೆ ನಕ್ಕಾದರೂ ಬಿಡಬಾರದೇ ಅತ್ಲಾಗೆ ಎನ್ನಿಸುತ್ತದೆ - "ನಕ್ಕಾರ ನಕ್ಕುಬಿಡು ಹೊನಲು ಬರಲಿ" ಎಂದು ಹಾಡೋಣವೆನಿಸುತ್ತದೆ.  ಆದರೇನು ಅದಕ್ಕೂ ಸತ್ತ ಮೋರೆಯ ಲೈಕೇ ಬರುವುದು ತಾನೆ? ಅದಕ್ಕೆ ಹಾಡು ಬೇರೆ ಕೇಡು ಎನಿಸಿ ಸುಮ್ಮನಾಗುತ್ತೇನೆ.  ಆದರೂ ಎಷ್ಟು ದಿನ ಸುಮ್ಮನಿರುವುದು, ಫೇಸ್ಬುಕ್ ಸಮಾಜವೇ ತಂತಮ್ಮ ಲೈಕಿಗಾಗಿ ಹೋರಾಡುತ್ತಿರುವಾಗ ನಾವೂ ಜಾಗೃತರಾಗಬೇಡವೇ?  ನಾನೂ ಈ ಸನ್ಮಿತ್ರರುಗಳ ಮೇಲೆ ಫೇಸ್ಬುಕ್ ನ್ಯಾಯಾಲಯದಲ್ಲಿ ದಾವೆ ಹೂಡಬೇಕೆಂದಿದ್ದೇನೆ.  ನನ್ನ ಫಿರ್ಯಾದಿಗೆ, ಈ ಬರಹಕ್ಕೆ ಬೀಳುವ ನಿಮ್ಮ ಲೈಕು ಕಾಮೆಂಟುಗಳ ಬೆಂಬಲವೇ ಆಧಾರ.  ಎಲ್ಲರೂ ಧಾರಾಳವಾಗಿ ಲೈಕುಗಳನ್ನು ನೀಡಿ ಈ ಕೇಸನ್ನು ಗೆಲ್ಲಿಸಿ, ಫೇಸ್ಬುಕ್ ಸಮಾಜದ ಶ್ರೇಯಸ್ಸಿಗೆ ಕಾರಣರಾಗಬೇಕೆಂದು ಈ ಮೂಲಕ ತಮ್ಮಲ್ಲಿ ಪ್ರಾರ್ಥಿಸುತ್ತೇನೆ.

Wednesday, March 24, 2021

ನಾಯಟ್ಟಿರೆ ಜೀವ ಬಾಯ್ಗೆ ಬಂದಂತಕ್ಕುಂ

ನಾನು ನಮ್ಮ ಬೀದಿ ಕೊನೆಯಲ್ಲಿರುವ ಟೈಲರ್ ಅಂಗಡಿ ಹಾಸಿ ಹೋಗುವುದನ್ನು ಬಿಟ್ಟು ಐದಾರು ವರ್ಷಗಳೇ ಆಯಿತು.  ಕಾರಣವೇನೋ ಬಲು ದೊಡ್ಡದೇ - ಆ ಅಂಗಡಿಯ ಎದುರಿಗೆ ಯಾವಾಗಲೂ ಒಂದು ಕರೀ ನಾಯಿ ಕುಳಿತಿರುತ್ತದೆ.  ನೀವೇನಾದರೂ ಆ ದಾರಿಯಾಗಿ ಬೈಕಿನಲ್ಲಿ ಹೋದರೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ.  ಸುಮಾರು ಒಂದು ಮುನ್ನೂರು ಅಡಿ ದೂರದಿಂದಲೇ ಗಮನಿಸತೊಡಗುವ ಅದು, ನೀವು ಒಂದು ಸರಿಯಾದ ಅಳವಿಗೆ ಬರುವವರೆಗೆ ಕಾದಿದ್ದು, ಅಳವಿಗೆ ಬಂದ ಕೂಡಲೇ ಎದ್ದು ಅಟ್ಟಿಸಿಕೊಂಡು ಬರುತ್ತದೆ.  ಎಷ್ಟೋ ವೇಳೆ ಅವಿತು ಕುಳಿತಿದ್ದು ಅನಿರೀಕ್ಷಿತ ದಾಳಿ ಮಾಡುತ್ತದೆ.  ಅರರೇ ಇದೇನಿದು ಎಂದು ನೀವು ಸಾವರಿಸಿಕೊಂಡು ಏಯ್ಯೇಯ್ಯೇಯ್ಯೇಯ್ ಎನ್ನುತ್ತಾ ಕಾಲುಗಳನ್ನು ಮೇಲೆತ್ತಿಕೊಂಡು ಥಕಥೈ ಮಾಡುತ್ತಾ ವೇಗವಾಗಿ ಬೀದಿ ಕೊನೆ ಸೇರುವವರೆಗೂ ಅಟ್ಟಿಯೇ ಅಟ್ಟುತ್ತದೆ.  ಎಷ್ಟೋ ಬಾರಿ ಇನ್ನೇನು ನಿಮ್ಮ ಕಾಲಿಗೆ ಬಾಯಿ ಹಾಕಿಯೇ ಬಿಟ್ಟಿತು ಎನಿಸಿ ಜೀವ ಬಾಯಿಗೆ ಬರುತ್ತದೆ.  

ಅದು ವಾಸ್ತವದಲ್ಲಿ ಒಂದು ನಾಯಿಯಲ್ಲ, ನಾಯಿಪರಂಪರೆ.  ಮೊದಲು ಅಟ್ಟಾಡಿಸುತ್ತಿದ್ದ ಕರೀ ನಾಯಿ ಈಗಿಲ್ಲ, ಹೀಗೇ ಯಾವುದೋ ಕಾರನ್ನು ಅಟ್ಟಿಸಿಕೊಂಡು ಹೋಗಿ ಅದರ ಚಕ್ರಕ್ಕೆ ಸಿಕ್ಕಿ ಸತ್ತಿತು.  ಈಗ ಅದರ ಮಗನೋ ಮಗಳೋ ಆ ಕೆಲಸವನ್ನು ವಂಶಪಾರಂಪರ್ಯವಾಗಿ ಮುಂದುವರೆಸುತ್ತಿದೆ.  ಇದು ಆ ಹಿಂದಿನ ನಾಯಿಯದೇ ಪಡಿಯಚ್ಚು, ತಕ್ಷಣಕ್ಕೆ ನೋಡಿದರೆ ಅದೇ ನಾಯಿ ಅನಾದಿಕಾಲದಿಂದ ಇದೆ ಎನ್ನಿಸುವುದು ಸಹಜ.

ಓಡುವ ವಸ್ತುಗಳನ್ನು ಅಟ್ಟಿಸಿಕೊಂಡು ಬರುವ ಸ್ವಭಾವ ಕೆಲವು ಪ್ರಾಣಿಗಳಲ್ಲಿ ಸಹಜವಾಗಿಯೇ ಬಂದಿರುತ್ತದೆ, it is an instinct. ಹಾಗೆಯೇ ಯಾವುದಾದರೂ ಅಟ್ಟಿಸಿಕೊಂಡು ಬಂದಾಗ ಎದ್ದುಬಿದ್ದು ಓಡುವುದೂ ಎಲ್ಲ ಪ್ರಾಣಿಗಳಿಗೆ ಸಹಜವಾಗಿ ಬರುವ instinctಏ. ನೀವು ಅನಿಮಲ್ ಪ್ಲಾನೆಟ್ಟಿನಲ್ಲಿ ನೋಡಿರಬಹುದು - ಎಷ್ಟೋ ಬಾರಿ ಅದು ಅಟ್ಟಿದ್ದಕ್ಕೆ ಇದು ಓಡುತ್ತಿದೆಯೋ ಇದು ಓಡಿದ್ದಕ್ಕೆ ಅದು ಅಟ್ಟುತ್ತಿದೆಯೋ ಗೊತ್ತಾಗುವುದೇ ಇಲ್ಲ. ನಾಯಿಗಳ ವಿಷಯದಲ್ಲಂತೂ ಇದು ಕುರಿತೇಟು. ನೀವು ಎಷ್ಟೇ ಶಿಸ್ತಾಗಿ, ಡೀಸೆಂಟಾಗಿ, ಟ್ರಿಮ್ಮಾಗಿ ಅಲಂಕರಿಸಿಕೊಂಡು ಎಷ್ಟೇ ಘನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದರೂ ಒಂದು ನಾಯಿ ಭೌಗುಟ್ಟಿ ಅಟ್ಟಿಸಿಕೊಂಡು ಬಂದಿತೆನ್ನಿ, ಹತ್ತು ನಾಯಿಗಳು ಅನುಸರಿಸುತ್ತವೆ. ನಿಮ್ಮ ಘನಗಂಭೀರಗಳು ಹಾರಿಹೋಗಿ, ನಿಮ್ಮ ಬಾಯಿಂದ "ಏಯ್ ಏಯ್ ಏಯ್" ಎಂಬ ಗಾಬರಿಯ ಉದ್ಗಾರ ಹೊಮ್ಮತೊಡಗುತ್ತದೆ, ಬೈಕಿನ ವೇಗ ನಿಮಗರಿಯದಂತೆಯೇ ವಿಪರೀತ ಹೆಚ್ಚುತ್ತದೆ, ನಿಮ್ಮ ಕಾಲುಗಳು ತಾವಾಗೇ ಮೇಲೆದ್ದು, ಬೈಕ್ ಓಡಿಸುತ್ತಿದ್ದಂತೆಯೇ ಥಕಥೈ ಮಾಡತೊಡಗುತ್ತೀರಿ. ಹಾಗೂ ಹೀಗೂ ಒಂದು ವೇಗದಲ್ಲಿ ಅದರ ಏರಿಯಾದಿಂದ ಪಾರಾಗಿಬಿಟ್ಟರೆ ಅದು ಇನ್ನು ಅಟ್ಟುವುದಿಲ್ಲ, ನೀವು ಬಚಾವ್. ಆದರೆ ಒಂದು ಸಲ ಅದರಿಂದ ಪಾರಾದ ಮೇಲೆ ಕ್ಷಣಕಾಲ ನಿಮ್ಮ ಮೇಲೆ ನಿಮಗೇ ಅಸಹ್ಯ ಹುಟ್ಟಿಬಿಡುತ್ತದೆ - ನಿಮಗಿಲ್ಲಿ ಪ್ರಾಣಸಂಕಟವಾದರೆ ಅಲ್ಲೆಲ್ಲೋ ದೂರದಿಂದ ನಿಮ್ಮ ಪಜೀತಿಯನ್ನು ನೋಡಿದವರು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. (ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಜೊತೆಗಾರ ರಘುವನ್ನು ಬೀದಿ ನಾಯಿಯೊಂದು ಹೀಗೇ ಅಟ್ಟಾಡಿಸುತ್ತಾ ಬರಲು ಅವನು ಥೇಟ್ ನಾಟಕಶೈಲಿಯಲ್ಲಿ "ಕಾಪಾಡೀ, ಯಾರಾದ್ರೂ ಕಾಪಾಡೀ" ಎಂದು ಕೂಗುತ್ತಾ ಓಡುತ್ತಿದ್ದುದನ್ನು ನೋಡಿ ಸಿಕ್ಕಾಪಟ್ಟೆ ನಕ್ಕು ಮಜಾ ತೆಗೆದುಕೊಂಡಿದ್ದೇವೆ; ಮುಂದೊಮ್ಮೆ ನಮ್ಮ ನೆಂಟರ ಮನೆಯ ನಾಯಿಯೊಂದು, ಪಾಪ, ಸ್ನೇಹದಿಂದ ಹತ್ತಿರ ಬಂದದ್ದಕ್ಕೆ ನಾನು ಹೆದರಿ ಓಡಿ, ಅದು ನನ್ನನ್ನು ಕಳ್ಳನೆಂದೇ ತಿಳಿದು, ಅವರ ಮೂರೂ ಮಹಡಿಯ ಮೂಲೋಕದಲ್ಲೂ ನನ್ನನ್ನು ಅಟ್ಟಾಡಿಸಿ ಕೊನೆಗೆ ನಾನು ಅಡುಗೆಮನೆಯ ವೈಕುಂಠದ ಮರೆಹೊಕ್ಕು ಬಚಾಯಿಸಿಕೊಂಡಾಗಲೇ ಆ ಪ್ರಾಣಸಂಕಟ ಹೇಗಿರುತ್ತೆ ಎಂಬುದು ಅರಿವಿಗೆ ಬಂದದ್ದು). ಇರಲಿ, ನಿಮ್ಮನ್ನು ಬೈಕಿನಲ್ಲಿ ಅಟ್ಟಿಸಿಕೊಂಡು ಬಂದ (ಅಲ್ಲಲ್ಲ, ಬೈಕಿನಲ್ಲಿದ್ದ ನಿಮ್ಮನ್ನು ಅಟ್ಟಿಸಿಕೊಂಡು ಬಂದ) ಆ ನಾಯಿಯಿಂದ ಪಾರಾದ ಮೇಲೆ ನಿಮ್ಮಲ್ಲಿ ಬರುವ ಮೊದಲ ಯೋಚನೆ - ಥತ್ ದರಿದ್ರದ್ದು ನನ್ನನ್ನೇ ಹೀಗೆ ಅಟ್ಟಾಡಿಸಿಬಿಟ್ಟಿತಲ್ಲ, ಎಷ್ಟು ಘನವಾಗಿ ನನ್ನಷ್ಟಕ್ಕೆ ನಾನು ಹೋಗುತ್ತಿದ್ದೆ, ನನ್ನನ್ನೇ ಬೆದರಿಸಿಬಿಟ್ಟಿತಲ್ಲ, ಹೀಗೆ ತಕಥೈ ಮಾಡಿಸಿ ನನ್ನ ಮರ್ಯಾದೆ ತೆಗೀತಲ್ಲ - ಎಷ್ಟೋ ಸಲ ಆ ಸಮಯದಲ್ಲಿ ಕೈಯಲ್ಲೊಂದು ಕವಣೆ ಕಲ್ಲಿರಬಾರದಿತ್ತೇ ಎನಿಸಿದ್ದಿದೆ. ತೆಗೆದು ಒಂದು ಬೀರಿದರೆ ಬಡ್ಡಿಮಗಂದು ಇನ್ನೊಂದ್ ಸಲ ಇನ್ನೊಬ್ಬರನ್ನ ಅಟ್ಟಬಾರದು; ಅಥವಾ ಹಾಗೆ ಅಟ್ಟಿಸಿಕೊಂಡು ಬಂದ ತಕ್ಷಣ ಬೈಕ್ ನಿಲ್ಲಿಸಿ ಅದರ ಮೇಲೇ ತಳ್ಳಿಬಿಡಬೇಕು, ಸಿಕ್ಕಿ ಸಾಯಲಿ - ಹೀಗೆಲ್ಲಾ ಕ್ರೂರ ಯೋಚನೆಗಳು ಹರಿಯುತ್ತವೆ. ಆದರೆ ಏನೇ ಆಗಲಿ ಅವೆಲ್ಲಾ ಆ ಕ್ಷಣದಲ್ಲಿ ಉಕ್ಕುವ ಯೋಚನೆಗಳಷ್ಟೇ. ಹಾಗೆಲ್ಲ ನಾಯಿಗಳಿಗೆ ಹೊಡೆಯಲು ಮನಸ್ಸೂ ಬರುವುದಿಲ್ಲ - ಅವು ಎಷ್ಟೇ ಅಟ್ಟಾಡಿಸಲಿ ಅವು ಬೀದಿಯಲ್ಲಿದ್ದರೆ ಒಂದು ಬಗೆಯ ಧೈರ್ಯ. ಕಳ್ಳರನ್ನು ಹಿಡಿಯುತ್ತವೋ ಅವರ ಬಿಸ್ಕೆಟ್ಟಿಗೆ ಬಾಲ ಅಲ್ಲಾಡಿಸುತ್ತವೋ ಒಟ್ಟಿನಲ್ಲಿ ಬೊಗಳುತ್ತವೆ, ಎಚ್ಚರ ಕೊಡುತ್ತವೆ, ಅದೇ ಒಂದು ಭರವಸೆ ಮನಸ್ಸಿಗೆ. ಅಲ್ಲದೇ ನಿಮ್ಮ ಕ್ರೂರ ಆಲೋಚನೆಗಳೆಲ್ಲಾ ಪ್ರಾಯೋಗಿಕವಾಗಿ ಸಾಧ್ಯವಾಗುವಂಥವೂ ಅಲ್ಲ. ಹಾಗೊಂದು ವೇಳೆ ನೀವೇನಾದರೂ ಮಾಡಿದರೆ ಕ್ರುಯೆಲ್ಟಿ ಫಾರ್ ಅನಿಮಲ್ಸ್ ಎಂದು ನಿಮ್ಮನ್ನು ಒಳತಳ್ಳಿದರೂ ಅಚ್ಚರಿಯಿಲ್ಲ.  

ನಿಮ್ಮ ಚಿಂತನೆಯೇನೇ ಇರಲಿ, ಹೀಗೆ ಅಟ್ಟಿಸಿಕೊಂಡು ಬಂದಾಗ ಗಾಬರಿಯಾಗಿ ಬೈಕಿನ ಮೇಲೇ ತಕಥೈ ಮಾಡುವುದಿದೆಯಲ್ಲ, ಅದು ಬಹಳ ಅಪಾಯ - ನಿಮ್ಮ ತಕ್ಷಣದ instinctನಿಂದಾಗಿ ನಿಮ್ಮ ಗಮನವೆಲ್ಲಾ ನಾಯಿಯಿಂದ ತಪ್ಪಿಸಿಕೊಳ್ಳುವುದರ ಕಡೆಯೇ ಇರುವುದರಿಂದ ಹಿಂದೆ ಮುಂದೆ ಏನು ಬರುತ್ತಿದೆ ಎಂಬುದರ ಅರಿವು ತಪ್ಪಿ ಹೋಗಿರುತ್ತದೆ, ಬೈಕಿನ ಆಯ ತಪ್ಪಿ ಬೀಳಬಹುದು, ಹಿಂದಿನಿಂದ ಟಿಪ್ಪರೊಂದು ನಿಮ್ಮ ಮೈಮೇಲೆ ಹರಿದು ಸಾವೇ ಸಂಭವಿಸಬಹುದು.  ಅಟ್ಟುತ್ತಿದ್ದ ನಾಯಿಗಳೇನೋ ಓಡಿಹೋಗಿಬಿಡುತ್ತವೆ, ಅಥವಾ ಸುತ್ತಲ ಜನ ಸೇರಿ ಕಲ್ಲು ಹೊಡೆದು ಓಡಿಸಲೂ ಬಹುದು.  ಆದರೆ ಹೋದ ಜೀವವಂತೂ ಮರಳಿ ಬರುವುದಿಲ್ಲವಷ್ಟೇ?  ತಾವು ಹೀಗೆ ಮಾಡುವುದರಿಂದ ನಿಮ್ಮ ಜೀವ ಹೋಗಬಹುದೆಂದು ಅವಕ್ಕೆ ತಿಳಿದಿರುವುದಿಲ್ಲ ಕೂಡ.  ಮೊದಲೇ ಹೇಳಿದಂತೆ ಅಟ್ಟುವುದು ಅವುಗಳ ಸ್ವಭಾವ - ಅಪಾಯದ ಅರಿವಿರಬೇಕಾದ್ದು ನಿಮಗೆ, ನಿಮ್ಮ ಜೀವ ನಿಮ್ಮ ಕೈಯಲ್ಲಿ, ಅಲ್ಲವೇ?  ಈಗಂತೂ ಕಾರ್ಪೊರೇಷನ್ನಿನವರ ಬೇಜವಾಬ್ದಾರಿಯಿಂದಾಗಿ ಎಲ್ಲೆಂದರಲ್ಲಿ ಹಿಂಡುಗಟ್ಟಿ ಅಟ್ಟಾಡಿಸಿ ದಾಳಿಮಾಡುವ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.  ಆದ್ದರಿಂದ ಈ ಕೆಳಗಿನ ಕೆಲವು ಅಭ್ಯಾಸಗಳನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಿ:

1) ನೀವು ಹೋಗುವುದು ನಿಮ್ಮ ಮಾಮೂಲು ರಸ್ತೆಯಾಗಿದ್ದರೆ ಎಲ್ಲಿ ನಾಯಿಯಿರುತ್ತದೆ ಅನ್ನೋದು ನಿಮಗೆ ಗೊತ್ತಿರಲೇ ಬೇಕು.  ಆ ರಸ್ತೆ ಬಿಟ್ಟು ಪಕ್ಕದ ರಸ್ತೆಯಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

2) ಸಾಮಾನ್ಯವಾಗಿ ನೀವು ಆಕಡೆ ಈಕಡೆ ಹೊರಳಿ ತಪ್ಪಿಸಿಕೊಳ್ಳಬಾರದು, ಅಂತಹ ಆಯಕಟ್ಟಿನ ಜಾಗದಲ್ಲೇ ಅವು ಹೊಂಚಿ ನಿಲ್ಲುತ್ತವೆಂಬುದನ್ನು ಗಮನದಲ್ಲಿಡಿ.  ಅಂತಹ ದಾರಿಗಳನ್ನು ಅವಾಯ್ಡ್ ಮಾಡಿ (ನಮ್ಮ ಬೀದಿಯ ಟೈಲರಂಗಡಿಯಿಂದ ರಸ್ತೆಯ ಕೊನೆ ಸುಮಾರು ಇನ್ನೂರು ಅಡಿ; ಆ ಅಂಗಡಿಗೆ ಇನ್ನೂರು ಅಡಿ ಮೊದಲು ಪಕ್ಕದ ರಸ್ತೆಗೆ ತಿರುಗುವ ದಾರಿ.  ಇಲ್ಲಿಂದ ಅಲ್ಲಿಗೆ ಸುಮಾರು ನಾನೂರು ಅಡಿ ಎಲ್ಲಿಯೂ ಹೊರಳಲು ದಾರಿಯಿಲ್ಲ.  ಈ ನಾನೂರು ಅಡಿಯಲ್ಲೇನಾದರೂ ಸಿಕ್ಕಿದಿರೋ, ದಾಳಿ ಗ್ಯಾರಂಟಿ)

3) ನೀವು ಆ ರಸ್ತೆಯಲ್ಲೇ ಹೋಗಬೇಕೆಂದಿಟ್ಟುಕೊಳ್ಳಿ, ಅಥವಾ ಅದು ಅಪರಿಚಿತ ರಸ್ತೆ.  ಅಲ್ಲೆಲ್ಲಾದರೂ ನಾಯಿಯಿದೆಯೇ, ಒಂದು 300-350 ಅಡಿ ದೂರದಿಂದಲೇ ಗುರುತಿಸಲು ಪ್ರಯತ್ನಿಸಿ.  ಇದ್ದರೆ, ಉಪಾಯವಾಗಿ ಪಕ್ಕದ ರಸ್ತೆಗೆ ಜಾರಿಕೊಳ್ಳಿ.

4) ಪಕ್ಕದಲ್ಲೆಲ್ಲೂ ರಸ್ತೆಯಿಲ್ಲವೇ?  ಏಕಾಯೇಕಿ ಅದರ ಕಣ್ಣಿಗೆ ಕಾಣುವಂತೆ ನುಗ್ಗಬೇಡಿ.  ಬೇರೊಂದು ದೊಡ್ಡ ವಾಹನ ಬರುತ್ತಿದ್ದರೆ ಅದರ ಮರೆಯಲ್ಲೇ ಸಾಗಿ, ಬಚಾವಾಗಿ.

5) ಅದರ ಮುಂದೆಯೇ ಹೋಗಬೇಕೇ?  ಉದ್ವೇಗಕ್ಕೊಳಗಾಗಬೇಡಿ.  ದೂರದಿಂದಲೇ ನಿಮ್ಮ ವಾಹನವನ್ನು ನಿಧಾನಗೊಳಿಸಿ, ಹಗೂರವಾಗಿ ಎಡಬದಿಗೆ ತೆಗೆದುಕೊಳ್ಳಿ.  ನೀವು ಹೆದರಿಲ್ಲ, ಓಡುತ್ತಿಲ್ಲ ಎಂದು ಅದಕ್ಕೆ ಮನದಟ್ಟಾಗುವುದು ಮುಖ್ಯ.  ಅದರ ಗಮನಸೆಳೆಯುವ ಯಾವ ಚಲನೆಯನ್ನೂ ಮಾಡದೇ ಆತ್ಮವಿಶ್ವಾಸದಿಂದ ನಿಮ್ಮಷ್ಟಕ್ಕೆ ನೀವು ಮುಂದುವರೆಯಿರಿ, ಅನೇಕ ಬಾರಿ ಅದು ನಿಮ್ಮನ್ನು ಅಟ್ಟದೇ ಸುಮ್ಮನಿದ್ದುಬಿಡುತ್ತದೆ.  ನೀವು ಬಚಾವು.

6) ಹಾಗೂ ಒಂದು ವೇಳೆ ಅಟ್ಟಲು ತಯಾರಾಗುತ್ತಿದೆಯೇ? ಗಾಡಿಯನ್ನು ನಿಧಾನಗೊಳಿಸಿ ಅದರ ಮುಂದೆ ನಿಲ್ಲಿಸಿಬಿಡಿ.  ಎಷ್ಟೋ ಬಾರಿ "ಏಯ್, ರಾಮೂ, ಚುಚ್ಚುಚ್ಚುಚ್ಚೂ..." ಎಂಬ ಪರಿಚಯದ ಉದ್ಗಾರವೋ, ಒಂದೆರಡು ಬಿಸ್ಕಿಟೋ ನಿಮಗದರ ವಿಶ್ವಾಸವನ್ನು ಸಂಪಾದಿಸಿಕೊಡಬಲ್ಲುದು.  ಅದಕ್ಕೆ ಸಲ್ಲಬೇಕಾದ್ದನ್ನು ಸಲ್ಲಿಸಿ ನಿರಾಳವಾಗಿ ಮುಂದುವರೆಯಿರಿ.

ಇವಿಷ್ಟು, ನಾಯಿಗಳ ವಿಷಯದಲ್ಲಂತೂ ಸತ್ಯಸ್ಯಸತ್ಯ.  ಬೇರೆ ಪ್ರಾಣಿಗಳಿಗೂ ಇದೇ ಅನ್ವಯಿಸುತ್ತದೋ ಏನೋ.  ಸಿಂಹಗಳ ವಿಷಯ ಗೊತ್ತಿಲ್ಲ.

ಕೊನೆಯದಾಗಿ ಒಂದು ಮಾತು - ಹೆಲ್ಮೆಟ್ಟಿಲ್ಲದೇ ರಸ್ತೆಗಿಳಿಯಲೇ ಬೇಡಿ.  ಮೇಲಿನಂತಹ ಸಂದರ್ಭದಲ್ಲಿ ಹೆಲ್ಮೆಟ್ಟಿಲ್ಲದೇ ನೀವೇನಾದರೂ ಕೆಳಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.  ಕಾನೂನಿಗಾಗಿ ಅಲ್ಲ, ಹಿಡಿದು ದಂಡ ಹಾಕುವ ಪೋಲೀಸರಿಗಾಗಿ ಅಲ್ಲ, ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಯಾವಾಗಲೂ ಹೆಲ್ಮೆಟ್ ಧರಿಸಿ.


Sunday, March 7, 2021

ಸರಸ್ವತೀಪ್ರಸಾದ

ಆಚಾರ್ಯರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಮೊನ್ನೆ ಇದ್ದಕ್ಕಿದ್ದಂತೆ ಕರೆಮಾಡಿ "ಹೇಗೆ ನಡೆದಿದೆ ಅಭ್ಯಾಸ?" ಎಂದರು. ದಿನದ ಇಪ್ಪತ್ನಾಲ್ಕು ಗಂಟೆಗಳ ಒಂದೊಂದು ಗಂಟೆಯ ಸ್ಲಾಟಿನಲ್ಲಿ ಒಂದೊಂದು ಅಭ್ಯಾಸ-ಅಭಾಸಗಳಲ್ಲಿ ಮುಳುಗಿರುವ ನಾನು, ಇವರು ಯಾವ ಅಭ್ಯಾಸದ ಬಗೆಗೆ ಕೇಳುತ್ತಿದ್ದಾರೆಂದು ತಿಳಿಯದೇ ಕ್ಷಣಕಾಲ ತಬ್ಬಿಬ್ಬಾದೆ - ಏಕೆಂದರೆ ಆ ಕ್ಷಣಕ್ಕೆ ನಾನು ಬ್ಯಾಂಕ್ ಸಾಲಕ್ಕೆ ಏನೇನು ಡಾಕ್ಯುಮೆಂಟುಗಳನ್ನು ಕೊಡಬೇಕೆಂಬುದರ ಅಭ್ಯಾಸದಲ್ಲಿ ಮುಳುಗಿದ್ದೆ. ಇನ್ನೊಂದು ಗಂಟೆಯಲ್ಲಿ ಕಛೇರಿ ಕರೆಯೊಂದರಲ್ಲಿ ಪ್ರಾಜೆಕ್ಟ್ ಡೆಡ್ಲೈನ್ ಮೀರಿದ್ದಕ್ಕಾಗಿ ಗ್ರಾಹಕನಿಗೆ ಏನೇನು ಸಬೂಬು ಹೇಳಬೇಕೆನ್ನುವ ಅಭ್ಯಾಸ ಆರಂಭವಾಗಬೇಕಿತ್ತು. ಯಾವ ಅಭ್ಯಾಸದ ಬಗೆಗೆ ಕೇಳುತ್ತಿರಬಹುದು ಎಂಬ ಗೊಂದಲದಲ್ಲೇ "ಯಾವ ಅಭ್ಯಾಸ ಸಾರ್" ಎಂದು ಕೇಳಿದೆ. "ನಿಮ್ಮ ರನ್ನನ ಅಭ್ಯಾಸ ಹೇಗೆ ಸಾಗಿದೆಯಪ್ಪಾ?" ಎಂದು ಕೇಳಿದರು. ಹಳಗನ್ನಡಪದ್ಯಗಳನ್ನು ಛಂದೋಬದ್ಧವಾಗಿ, ಆದರೆ ರಸ ಕೆಡದಂತೆ, ಕೂಡಿದಮಟ್ಟಿಗೂ ರಸಸ್ಫುರಣೆಯಾಗುವಂತೆ ಓದುವ ಬಗೆಯನ್ನು ಕುರಿತು ಬರೆಯಬೇಕೆಂಬುದು ನನ್ನ ಬಹುದಿನಗಳ ಆಶೆ. ಇದ್ದುದರಲ್ಲಿ ಸ್ವಲ್ಪ ಚಿಕ್ಕದಾಗಿರುವ, ರುಚಿಯಾಗಿಯೂ ಇರುವ ರನ್ನನ ಗದಾಯುದ್ಧವನ್ನೇ ಇದಕ್ಕಾಗಿ ಆರಿಸಿಕೊಳ್ಳಬಾರದೇಕೆ ಎನ್ನುವ ಹುಚ್ಚು ಆಲೋಚನೆಯನ್ನು ಶಾಸ್ತ್ರಿಗಳೂ ಸೇರಿದಂತೆ ಗುರುಸಮಾನರಾದ ಒಂದಿಬ್ಬರು ಹಿರಿಯರೊಡನೆ ಹಂಚಿಕೊಂಡೂ ಇದ್ದೆ. ಅದನ್ನವರು ಮೆಚ್ಚಿ ಪ್ರೋತ್ಸಾಹಿಸಿದ್ದಲ್ಲದೇ ಅದು ಕಷ್ಟದ ಕೆಲಸವೆಂದು ಎಚ್ಚರಿಸಿ, "ಒಂದು ಆಶ್ವಾಸವನ್ನು ಬರೆದುಕೊಂಡು ಬನ್ನಿ, ಹೇಗಾಗುತ್ತದೆ ನೋಡೋಣ" ಎಂದು ಹೇಳಿದ್ದರು. ಈ 'ಕಷ್ಟದ ಕೆಲಸ'ಕ್ಕಾಗಿ ನಾನು ಗಂಭೀರ ಅಭ್ಯಾಸದಲ್ಲಿ ತೊಡಗಿದ್ದೇನೆಂದು ಅವರ ಭಾವನೆ. ನಾವೋ, ಲೀಲಾಮಾತ್ರಜೀವರಷ್ಟೇ? "ಇಂದು ಇಂದಿಗೆ ನೆನ್ನೆ ನೆನ್ನೆಗೆ ಇರಲಿ ನಾಳೆಯು ನಾಳೆಗೆ" ಎಂಬ ಲೆಕ್ಕದಲ್ಲಿ ಇದ್ದುಬಿಡುವವರು.  ಆಗಾಗ್ಗೆ ಇಂತಹ ಎಚ್ಚರಿಕೆಗಳು ಬರದಿದ್ದರೆ ಲೀಲೆಯಲ್ಲೇ ಮುಳುಗಿ ತೂಕಡಿಕೆ ಆವರಿಸಿಬಿಡುತ್ತದೆ, ಕೈಲಾಸಂ ಹೇಳುವಂತೆ "ಬ್ರಹ್ಮನಿಗಪ್ನಾನೇ, ಸರಸ್ವತಿ ನನ್ ಸೊಸೆ" ಎಂಬ ಭ್ರಮೆ ಮುಸುಕಿದರೂ ಅಚ್ಚರಿಯಿಲ್ಲ. ಸಂಕೋಚದಿಂದಲೇ "ಕೆಲವು ಟಿಪ್ಪಣಿಗಳನ್ನು ಮಾಡಿಕೊಂಡಿದ್ದೇನೆ ಸಾರ್, ತಮ್ಮೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕಾದ್ದು ಹಲವಿವೆ. ಒಮ್ಮೆ ಒಂದಷ್ಟು ತಯಾರಿಸಿಕೊಂಡು ಬರುತ್ತೇನೆ" ಎಂದೆ. "ಆಗಲಿ ಆಗಲಿ ಮಾಡಿ, ನಿಧಾನಿಸಬೇಡಿ ಇವೆಲ್ಲಾ ಹಿಡಿದ ಉತ್ಸಾಹದಲ್ಲೇ ಮಾಡಬೇಕಾದಂಥವು" ಎಂದವರು "(ರನ್ನನ ಪದ್ಯವೊಂದನ್ನು ನೆನಪಿಸಿ) ಆ ಪದ್ಯದ ಬಗ್ಗೆ ನೀವು ಹೇಳಿದ ವ್ಯಾಖ್ಯಾನ ಸರಿಯಲ್ಲ, ಈ ವಿಷಯವನ್ನ ಹಲವರು ವಿದ್ವಾಂಸರು ಚಿಂತಿಸಿದ್ದಾರೆ, ನಾನೂ ಆಮೇಲೆ ಅದರ ಬಗ್ಗೆ ಮತ್ತೆ ಸಾಕಷ್ಟು ಪರಿಶೀಲಿಸಿದೆ, ನೀವೊಮ್ಮೆ ಬನ್ನಿ ಸಾವಕಾಶವಾಗಿ ವಿವರಿಸುತ್ತೇನೆ" ಎಂದರು. ಯಾವಾಗಲೋ, ತಿಂಗಳ ಹಿಂದೆ ಯಾವುದೋ ಓದಿನ ಮಧ್ಯೆ, ರನ್ನನ ಪದ್ಯವೊಂದಕ್ಕೆ ಇದುವರೆಗೆ ಬಂದ ವ್ಯಾಖ್ಯಾನ ಸಮರ್ಪಕವಾಗಿಲ್ಲವೆನಿಸಿತ್ತು. ಅದನ್ನೇ ಹಿಂದೆಮುಂದೆ ನೋಡದೇ ಅವರೆದುರಿಗೂ ಒದರಿಬಿಟ್ಟಿದ್ದೆ. ಅದಕ್ಕವರು ನನ್ನ ಅಭಿಪ್ರಾಯ ಹೇಗೆ ಸರಿಯಲ್ಲವೆಂಬುದನ್ನು ಅಲ್ಲಿಯೇ ಸಮಾಧಾನವಾಗಿ ವಿವರಿಸಿದ್ದರು ಕೂಡ. ಅದಾದ ಮೇಲೆ ನಾನದನ್ನು ಮರೆತೇಬಿಟ್ಟಿದ್ದೆ. ಆದರೆ ಆ ಪ್ರಶ್ನೆಯನ್ನು ಬಹುಗಂಭೀರವಾಗಿ ತೆಗೆದುಕೊಂಡಿದ್ದ ಅವರು ಮತ್ತಷ್ಟು ಅಧ್ಯಯನದೊಂದಿಗೆ ಇನ್ನಷ್ಟು ವಿವರಣೆಗಳನ್ನು ನೀಡಲು ಕಾದಿದ್ದರು. ಮತ್ತೆ ಮುಂದುವರೆದು "ತೀನಂಶ್ರೀಯವರ ಅಪ್ರಕಟಿತಬರಹಗಳ ಸಂಕಲನವೊಂದು ಹೊರಬಂದಿದೆ ನೋಡಿ, 'ಮಾತು-ಮಥನ" ಅಂತ; ಅದರಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಅವರು ಬರೆಯಬೇಕೆಂದು ಟಿಪ್ಪಣಿ ಮಾಡಿಕೊಂಡು, ತಮಗೇ ತೃಪ್ತಿಯಾಗಲಿಲ್ಲವೆಂದು ಬರೆಯದೇ ಬಿಟ್ಟ ಬರಹಗಳ ಸಂಕಲನವಿದು; ಅವರು ಸಂಪೂರ್ಣ ಆಧಾರವಿಲ್ಲದೇ ಎಂದೂ ಏನನ್ನೂ ಪ್ರಕಟಿಸಿದವರಲ್ಲ, ಹಾಗಾಗಿ ಅವರು ಬರೆದದ್ದೇ ಕಡಿಮೆ, ಅದಕ್ಕೇ ಅದೆಷ್ಟೋ ನಿಜಕ್ಕೂ ಉತ್ಕೃಷ್ಟ ಬರಹಗಳು ನಮ್ಮ ಕೈತಪ್ಪಿ ಹೋದುವು. ಅವರ ಕಾಲಾನಂತರ ಅವರ ಮಕ್ಕಳು ಅವನ್ನೆಲ್ಲಾ ಒಗ್ಗೂಡಿಸಿ ಪ್ರಕಟಿಸಿ ಉಪಕಾರ ಮಾಡಿದ್ದಾರೆ. ನಾನೀಗ ಅದನ್ನೇ ಓದುತ್ತಿದ್ದೆ, ನಿಮ್ಮ ನೆನಪಾಯಿತು. ಇದನ್ನು ನೀವು ಓದತಕ್ಕದ್ದು. ಅಂಗಡಿಗಳಲ್ಲಿ ಸಿಗುತ್ತೆ, ವಿಚಾರಿಸಿ. ಸಿಗದಿದ್ದರೆ ನನ್ನ ಹತ್ತಿರ ಬನ್ನಿ, ಜೆರಾಕ್ಸ್ ಮಾಡಿಸಿಕೊಂಡು ಕೊಡುವಿರಂತೆ. ಇದನ್ನು ಓದುವ ಸುಖ, ಕಳೆದುಕೊಳ್ಳಬಾರದ್ದು" ಎಂದರು. ಇಂಥದ್ದೊಂದು ಕೃಪೆಗೆ ಹಿಗ್ಗಾಗದಿದ್ದೀತೇ? "ಆಗಲಿ ಸಾರ್, ಈ ಪುಸ್ತಕವನ್ನು ಅಂಗಡಿಯಲ್ಲಿ ವಿಚಾರಿಸುತ್ತೇನೆ, ಸಿಗದಿದ್ದರೆ ತಮ್ಮಲ್ಲಿಗೆ ಬಂದು ಪ್ರತಿಮಾಡಿಕೊಳ್ಳುತ್ತೇನೆ" ಎಂದೆ. "ಆಗಲಿ, ಹೇಗಿದ್ದರೂ ಬಂದಂತೂ ಬನ್ನಿ, ನಿಮಗೆ ಇನ್ನೊಂದು ಪುಸ್ತಕ ಕೊಡುತ್ತೇನೆಂದು ತುಂಬಾ ಹಿಂದೆಯೇ ಪ್ರಾಮಿಸ್ ಮಾಡಿದ್ದೆ, ಮುಧೋಳದ ರನ್ನಪ್ರತಿಷ್ಠಾನದವರು ಪ್ರಕಟಿಸಿದ್ದು, ಅದು ನನ್ನ ಕಡೆಯೇ ಬಾಕಿ ಉಳಿದುಹೋಗಿದೆ. ಅದನ್ನು ತೆಗೆದುಕೊಂಡ ಹಾಗೂ ಆಯಿತು, ಒಮ್ಮೆ ಬಂದು ಹೋಗಿ" ಎಂದರು.
 
ಮರುದಿನ ಸಂಜೆ ಆರೂವರೆಗೆ ಕರೆಮಾಡಿ, "ಪುಸ್ತಕ ಎಲ್ಲೂ ಸಿಗಲಿಲ್ಲ.  ನಿಮ್ಮಲ್ಲಿಗೇ ಬಂದು ತೆಗೆದುಕೊಳ್ಳುವೆ, ಈಗ ಬರಲೇ" ಎಂದೆ. "ಇಷ್ಟುಹೊತ್ತಿನ ಮೇಲೆ ಹೇಗಪ್ಪಾ, ವಿರಾಮವಾಗಿ ಮಾತಾಡಲು ಒಂದಷ್ಟು ಸಮಯವಿಟ್ಟುಕೊಂಡು ಬನ್ನಿ.  ಆರಕ್ಕೇ ಬಂದರೆ ಒಳ್ಳೆಯದು" ಎಂದರು. ಸರಿ, ಮರುದಿನ ಸಂಜೆ ಆರಕ್ಕೆ ನಾನು ಅವರ ಮನೆಯಲ್ಲಿರುವುದೆಂದು ಆಯಿತು.  ಅವರು ಆರೆಂದರೆ ಸರಿಯಾಗಿ ಆರಕ್ಕೆ ತಯಾರಾಗಿ ಕಾದು ಕುಳ್ಳಿರುವವರೇ. ನನಗೋ, ಎಂದಿನಂತೆ ಮರುದಿನ ಹೊರಗೆ ಯಾವುದೋ ಕೆಲಸದ ಒತ್ತಡದಲ್ಲಿ ಸಿಲುಕಿ, ಆರುಗಂಟೆಗೆ ಅಲ್ಲಿರುವುದಾಗಲಿಲ್ಲ. ಆರೂಕಾಲಕ್ಕೆ ಕರೆಮಾಡಿ, ಬಲುಸಂಕೋಚದಿಂದ 'ಹೀಗೆ ಏನೋ ತೊಂದರೆಯಾಗಿದೆ, ಸಮಯಕ್ಕೆ ಬರುವುದಾಗುತ್ತಿಲ್ಲ, ತುಂಬ ತಡವಾಗಬಹುದು...' ಎನ್ನುತ್ತಿದ್ದಂತೆ ಅವರು ನಕ್ಕು "ಹಹ್ಹ... 'ಶ್ರೇಯಾಂಸಿ ಬಹುವಿಘ್ನಾನಿ', ಆಯ್ತು, ಎಲ್ಲಾ ಮುಗಿಸಿಕೊಂಡೇ ಬನ್ನಿ" ಎಂದರು. ನಮಗೆ ಈ ಸೂಕ್ಷ್ಮಗಳು ಎಲ್ಲಿ ಅರ್ಥವಾಗಬೇಕು?  "ಇವತ್ತಾಗದಿದ್ದರೆ ನಾಳೆ ಬರಬಹುದೇ" ಎಂದೆ. ಮನಸ್ಸಿಲ್ಲದೇ "ನಾಳೆ ಬರುತ್ತೀರಾ... ಸ್ಸರಿ, ಬನ್ನಿ" ಎಂದರು. ಫೋನೇನೋ ಇಟ್ಟೆ. ಆದರೆ "ಶ್ರೇಯಾಂಸಿ ಬಹುವಿಘ್ನಾನಿ" ಎಂಬ ಮಾತು ಬಲು ಕೊರೆಯತೊಡಗಿತು. ಅದನ್ನವರು ಸುಮ್ಮನೇ ತಮಾಷೆಯ ಪ್ರತಿಕ್ರಿಯೆಯಾಗಿ ಹೇಳಿದ್ದರೂ, ಯಾರೋ ಹೇಗೋ ಮಾತಿನಲ್ಲಿ ಉರುಳಿಬಿಡುವ ಸುಭಾಷಿತದ ತುಂಡಾಗಿರಲಿಲ್ಲ ಆ ಮಾತು. ಹಿರಿಯರ ಅಪ್ರಜ್ಞಾಪೂರ್ವಕವಾದ ಮಾತಿನಲ್ಲೂ ಒಂದು ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆನ್ನುವುದು ನನ್ನ ಅನುಭವ.  ಇಲ್ಲಿ 'ಶ್ರೇಯಸ್ಸು' ಯಾರದು? ಅದಕ್ಕೆ ವಿಘ್ನಗಳನ್ನು ತಂದೊಡ್ಡಿಕೊಳ್ಳುತ್ತಿರುವವನು ಯಾರು? ಬಂದದ್ದನ್ನು ನಿವಾರಿಸಿಕೊಳ್ಳುವ ಮನಸ್ಸು ಮಾಡದವನು ಯಾರು, ದೈವ ಒಲಿದು ಬಾಗಿಲಮುಂದೆ ನಿಂತು "ನಿನ್ನ ಶ್ರೇಯಸ್ಸಿಗಾಗಿ ಏನೋ ತಂದಿದ್ದೇನೆ ತೊಗೋ" ಎಂದರೆ 'ನಾಳೆ ಬಾ' ಎನ್ನುವುದಕ್ಕಿಂತ ಮೂರ್ಖತನವಿದೆಯೇ? ಇದ್ದ ಕಡೆಯಿಂದ ಬಿಟ್ಟ ಬಾಣದಂತೆ ಮನೆಸೇರುವವರೆಗೆ ಇಷ್ಟು ಆಲೋಚನೆಗಳು. ಮನೆಗೆ ಬಂದೊಡನೆ ಮುಖತೊಳೆದುಕೊಂಡು ಅವರ ಮನೆಗೆ ಹೊರಟೆ. ತಡವಾಗಿದೆ, ಹಿರಿಯರಿಗೆ ತೊಂದರೆಯಾಗಬಹುದು, ಆದರೆ ಅದನ್ನವರು ತೆಗೆದುಕೊಳ್ಳುತ್ತಾರೆ ಎಂಬ ಭಂಡತನದೊಂದಿಗೆ ಮತ್ತೊಮ್ಮೆ ಕರೆ ಮಾಡಿ ಹೇಳಿದೆ "ಸಾರ್ ವಿಘ್ನನಿವಾರಣೆಯಾಯಿತು ಇನ್ನು ಹತ್ತು ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ". ಅದಕ್ಕವರು "ಓಹೋ ಬರುತ್ತಿದ್ದೀರಾ, ಒಳ್ಳೇದು ಹಾಗಿದ್ದರೆ, ಬನ್ನಿ ಬನ್ನಿ. ನಾನು ವಾಕಿಂಗಿಗೆ ಬಂದಿದ್ದೇನೆ, ಇನ್ನು ಹತ್ತು ನಿಮಿಷದಲ್ಲಿ ಮನೆಯಲ್ಲೇ ಇರುತ್ತೇನೆ ಬನ್ನಿ" ಎಂದರು. "ಅಯ್ಯೋ ವಾಕಿಂಗಿಗೆ ಹೊರಟಿರಾ?  ಹಾಗಿದ್ದರೆ ತೊಂದರೆ ಬೇಡ ಸಾರ್, ನಿಧಾನಕ್ಕೆ ಬನ್ನಿ, ನಾನು..." ಎನ್ನುತ್ತಿದ್ದಂತೆಯೇ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿದ ಅವರು "ಇಲ್ಲ ಇಲ್ಲ, ಬಂದುಬಿಡಿ, ಕಾಯುವುದು ಬೇಡ. An assignment taken is an assignment to be finished; it must be finished promptly; ಇವತ್ತು ಇವತ್ತಿಗೆ, ನಾಳೆ ಹೇಗೋ ಯಾರಿಗೆ ಗೊತ್ತು? ಇದು ಮುಗಿದುಬಿಡಲಿ, ನೀವು ಬಂದುಬಿಡಿ" ಎಂದರು.
 
ಮನೆಗೆ ಹೋಗುವ ಹೊತ್ತಿಗೆ ಗುರುಗಳು ಮೇಜಿನ ಮುಂದೆ ಕೂತು ಏನನ್ನೋ ಬರೆಯುತ್ತಿದ್ದರು. ನಮಸ್ಕಾರ ಸಾರ್ ಎಂದೆ. ತಲೆಯನ್ನೂ ಎತ್ತದೇ "ಬನ್ನಿ ಬನ್ನಿ, ಇದೇನೋ ಕರಡು ತಿದ್ದುವುದು ಅನಿರೀಕ್ಷಿತವಾಗಿ ಬಂತು, ಹತ್ತೇ ನಿಮಿಷದಲ್ಲಿ ಮುಗಿಸಿಬಿಡುತ್ತೇನೆ ಕುಳಿತುಕೊಳ್ಳಿ" ಎಂದರು. ನಮಸ್ಕರಿಸಿ ಕೂರುತ್ತಿದ್ದಂತೆ ಏನೋ ನೆನೆದುಕೊಂಡವರಂತೆ ಪೆನ್ನನ್ನು ಕೆಳಗಿಟ್ಟು ಎದ್ದು ಒಳನಡೆದರು. ಹೊರಬರುತ್ತಾ ಅವರ "ರನ್ನಕವಿ ಕೃತಿಗಳು" ಪುಸ್ತಕವನ್ನು ತಂದು ಕೈಲಿಟ್ಟು "ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ; ನೋಡುತ್ತಿರಿ, ಬಂದೆ" ಎಂದು ಹೇಳಿ ದೊಡ್ಡ ಭಾರ ಕಳೆದವರಂತೆ ಬರೆಯಲು ಕುಳಿತರು.
 
ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ
 
ಹೇಳಿದಂತೆ ಹತ್ತೇ ನಿಮಿಷದಲ್ಲಿ ಬರೆದು ಮುಗಿಸಿ ತಲೆಯೆತ್ತಿ ಹಸನ್ಮುಖಿಯಾಗಿ ಆರಾಮವಾಗಿ ಕೂರುತ್ತಾ ಹೇಳಿದರು "ಮತ್ತೇನು ಸಮಾಚಾರ? ನೀವು ಆ ಪದ್ಯದ ಬಗೆಗೆ ಹೇಳಿದಮೇಲೆ ನಾನೂ ಮತ್ತೊಮ್ಮೆ ಪರಿಶೀಲಿಸಿದೆ, ಈಗಲೂ ಅದನ್ನೇ ಓದುತ್ತಿದ್ದೆ."  ತಮ್ಮ ಮೇಜಿನ ಕಡೆ ಕೈ ತೋರಿಸಿದರು. ಅಲ್ಲಿ ರನ್ನನ ಹಲವು ಆವೃತ್ತಿಗಳು, ಅದರ ಬಗೆಗೆ ಬಂದ ಹಲವು ಲೇಖನ/ಕೃತಿಗಳನ್ನೊಳಗೊಂಡ ಎಂಟು ಹತ್ತು ಪುಸ್ತಕಗಳಿದ್ದುವು - ಅಷ್ಟೂ, ನಾನು ಸುಮ್ಮನೇ ಸಂದೇಹವಾಗಿ ಕೇಳಿದ ಒಂದು ಪದ್ಯದ ಅರ್ಧ ಸಾಲಿಗಾಗಿ! ಅಧ್ಯಯನವೆಂದರೇನು, ಅದರ ಗಂಭೀರತೆಯೇನೆಂಬುದನ್ನು ಕುರಿತು ಪಾಠ ಹೇಳುವಂತಿತ್ತು ಆ ದೃಶ್ಯ. "ತೀನಂಶ್ರೀಯವರ ಮಾತು-ಮಥನ ನೋಡಿ ಇಲ್ಲಿದೆ.  ಅವರು ಬರೆದಿಟ್ಟುಕೊಂಡು ಪ್ರಕಟಿಸದೇ ಬಿಟ್ಟ ಟಿಪ್ಪಣಿಗಳು ಇವು.  ತೊಗೊಳ್ಳಿ but you must return it to me, ಯಾಕೆ ಅಂದ್ರೆ ಇದನ್ನು ನಾನು ಬಹಳ ಓದುತ್ತೇನೆ, ನನ್ನ ಮೇಜಿನ ಮೇಲೇ ಇರುತ್ತೆ ಇದು; ಇದನ್ನು ಓದುವ ಸುಖ ಬಹಳ ದೊಡ್ಡದು" ಎಂದು ಹೇಳಿ ತೀನಂಶ್ರೀಯವರ ಪುಸ್ತಕವನ್ನು ಕೊಟ್ಟರು.  
 
ಇದನ್ನು ಓದುವ ಸುಖ ಬಹಳ ದೊಡ್ಡದು


ಆಮೇಲೆ ಆ ಪದ್ಯ ಕುರಿತು, ಮತ್ತೆ ಇನ್ನೂ ಹಲವು ವಿಷಯ ಕುರಿತು ಸುಮಾರು ಅರ್ಧ ಗಂಟೆ ಮಾತಾಯಿತು. ಮಾತಿನ ಮಧ್ಯೆ ಅದೆಷ್ಟು ಬಾರಿ ಎದ್ದು ಲೈಬ್ರರಿಗೆ ಹೋದರೋ, ಅದೆಷ್ಟು ಪುಸ್ತಕಗಳನ್ನು ತಂದು ತಂದು ತೋರಿಸಿದರೋ. "ಅಂದ ಹಾಗೆ ನೀವು ಅವತ್ತು ಒತ್ತು ಇಳಿ ದೀರ್ಘಗಳ ಬಗೆಗೆ ಕೇಳಿದ್ದಿರಲ್ಲ? ಇರಿ ಬಂದೆ" ಎಂದು ಮತ್ತೊಮ್ಮೆ ಲೈಬ್ರರಿಗೆ ಹೋಗಿ ಪುಸ್ತಕವೊಂದನ್ನು ಹಿಡಿದು ಬಂದು, "ಇಲ್ಲಿ ನೋಡಿ, ನಿಮಗೋಸ್ಕರವೇ ಎತ್ತಿಟ್ಟಿದ್ದೆ ಈ ಪುಸ್ತಕವನ್ನ (ಟಿ ಕೇಶವಭಟ್ಟರು ಬರೆದ 'ಸಂಶೋಧನರತ್ನಮಾಲಿಕೆ') ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು. ಇದರಲ್ಲಿ ಮುಖ್ಯವಾಗಿ 'ಅಕ್ಷರಸಂಜ್ಞಾಕಾರ'ದ ಅಧ್ಯಾಯವನ್ನು ಜೆರಾಕ್ಸ್ ತೆಗೆಸಿಕೊಂಡು ಪುಸ್ತಕವನ್ನು ನನಗೆ ವಾಪಸು ಕೊಡಿ" ಎಂದರು. 
 
ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು

"ಅನಂತರಂಗಾಚಾರ್ಯರೂ ಈ ಬಗ್ಗೆ ಬಹುವಿಸ್ತಾರವಾಗಿ ಬರೆದಿದ್ದಾರೆ. ಲೋಚನ ಪತ್ರಿಕೆಯಲ್ಲಿ ಬಲು ಹಿಂದೆ ಪ್ರಕಟವಾಗಿತ್ತು. ನನ್ನ ಬಳಿ ಅದರ ಕಟ್ಟೇ ಇದೆ. ಲೇಖನದ ಸಂಚಿಕೆಗಳನ್ನ ಹುಡುಕಿ ಎತ್ತಿಟ್ಟಿರುತ್ತೇನೆ, ನೀವು ಇನ್ನೊಮ್ಮೆ ಬಂದಾಗ ಕೊಡುತ್ತೇನೆ" ಎಂದರು. ಮತ್ತಿನ್ನೊಂದು ಬಾರಿ ಒಳಗೆದ್ದು ಹೋಗಿ ಪುಸ್ತಕವೊಂದನ್ನು ಹಿಡಿದು ಬಂದಾಗ ನಾನು ತಡೆಯಲಾಗದೇ ಸಂಕೋಚದಿಂದ "ಸಾರ್ ನಿಮ್ಮನ್ನು ತುಂಬಾ ಓಡಾಡಿಸುತ್ತಿದ್ದೇನೆನಿಸುತ್ತಿದೆ" ಎಂದೆ. "ಛೇ, ಹಾಗೇನಿಲ್ಲ" ಎನ್ನುತ್ತಾ ತಾವು ತಂದಿದ್ದ ಡೈರಿಯನ್ನು ಬಿಡಿಸಿ "ಎಲ್ಲಿ, ಯಾವಯಾವ ಪುಸ್ತಕ ಕೊಟ್ಟಿದ್ದೇನೆ ಹೇಳಿ" ಎಂದು ಕೇಳಿ ಕೊಟ್ಟ ಪುಸ್ತಕಗಳ ಹೆಸರು ಬರೆದುಕೊಂಡು, ದಿನಾಂಕ ಬರೆದುಕೊಂಡು "ರನ್ನನದು ಮಾತ್ರ ನಿಮಗೇ.  ಉಳಿದೆರಡನ್ನು ಒಂದು ವಾರ ಇಟ್ಟುಕೊಳ್ಳಿ ಪರವಾಗಿಲ್ಲ, ಆಮೇಲೆ ತಂದುಕೊಟ್ಟುಬಿಡಿ" ಎಂದು ಮತ್ತೊಮ್ಮೆ ಹೇಳಿದರು. ಆ ಹಳೆಯಕಾಲದ ಕಟ್ಟುನಿಟ್ಟು, ಸರಳತೆ, ಅಕ್ಕರೆ, ಉತ್ಸಾಹ, ಹಕ್ಕಿನಿಂದ ಕರೆದು ಬಡಿಸುವ ವಾತ್ಸಲ್ಯ, ಬೆರಳು ತೋರಿಸಿ ಕಟ್ಟು ಮಾಡುವ ಅಧಿಕಾರ - ಪ್ರೊ. ನಿಸಾರರು ಮಾಸ್ತಿಯವರನ್ನು ಕುರಿತು ಹೇಳಿದ "ಸಂದ ಜೀವನದೊಂದು ರೀತಿ" ಕಣ್ಣಮುಂದೆಯೇ ಕಾಣಿಸಿ ಹನಿಗಣ್ಣಾಯಿತು.
 
ಕೊನೆಗೆ ಹೊರಟು ನಿಂತು ರಾಘವಾಂಕ ನಮಸ್ಕರಿಸಿದಾಗ "ರಾಘವಾಂಕ, ಹೇಗಿದ್ದೀಯೋ ಅಣ್ಣ, ಚೆನ್ನಾಗಿ ಓದು, ಬರಿ" ಎಂದು ನನ್ನೆಡೆಗೆ ತಿರುಗಿ "ಮಗನಿಗೆ ಒಳ್ಳೆಯ ಸಂಸ್ಕಾರ ಕೊಡುತ್ತಿದ್ದೀರಿ, ಅದು ಸಂತೋಷ" ಎಂದರು. ನಾನು ಸಂಕೋಚದೊಡನೆ "ನನ್ನದೇನಿಲ್ಲ ಸಾರ್, ಅವನು ಆಯ್ಕೆ ಅವನ ಬದುಕು ಅಷ್ಟೇ" ಎಂದರೆ "ಇಲ್ಲ ಇಲ್ಲ ಹಾಗೆನ್ನಬೇಡಿ, ನೀವು ಪ್ರಯತ್ನಪಟ್ಟು ಕೊಡುವುದೇನು ಇಲ್ಲ. ಅದು ತಾನಾಗೇ ನಿಮ್ಮಿಂದ ಬರುವಂಥದ್ದು. ನನ್ನ ಚಿಕ್ಕಂದಿನಲ್ಲೂ ನಮ್ಮ ತಂದೆಯವರು ತಮ್ಮಷ್ಟಕ್ಕೆ ಪದ್ಯಗಳನ್ನು ಹೇಳುತ್ತಿದ್ದರು, ನನ್ನಿಂದಲೂ ಆಗೀಗ ಹೇಳಿಸುತ್ತಿದ್ದರು. ನನಗೆ ತಾನಾಗೇ ಭಾಷೆಯಲ್ಲಿ ಆಸಕ್ತಿ ಬಂತು. ಆಮೇಲೆ ಮೈಸೂರಿಗೆ ಬಂದಮೇಲಂತೂ ಎಂತೆಂತಹ ಮೇಷ್ಟ್ರುಗಳು - ಕುವೆಂಪು, ತೀನಂಶ್ರೀ, ಡಿಎಲ್ಲೆನ್ - ಇವರಿಂದ ಪಾಠ ಕೇಳುವುದೇನು ಸಾಮಾನ್ಯದ ಮಾತೇ? ಬಲುದೊಡ್ಡ ಭಾಗ್ಯ, ಸುವರ್ಣಯುಗ ಅದು" ಎನ್ನುತ್ತಾ ಹನಿಗಣ್ಣಾದರು.  ಭಾರತೀಯ ಅಳತೆಯಲ್ಲಿ ಇಪ್ಪತ್ನಾಲ್ಕು ನಿಮಿಷಕ್ಕೆ ಒಂದು ಗಳಿಗೆಯೆನ್ನುತ್ತಾರೆ. ಆ ಲೆಕ್ಕದಲ್ಲಿ ನಾವಂದು ಕಳೆದ ಆ ಎರಡು ಗಳಿಗೆಗಳು ಬದುಕಿನ ಅಮೃತಗಳಿಗೆಗಳು. ಎಂದೂ ಇಲ್ಲದ ಧನ್ಯತೆಯೊಡನೆ ಬೀಳ್ಕೊಂಡೆವು.
 
ರನ್ನ ಒಂದುಕಡೆ "ಸಹಸ್ರಮುಖಪ್ರಸಾರಿತಸರಸ್ವತೀಸರಿತ್ಪ್ರವಾಹನಿವಹ"ದ ಬಗೆಗೆ ಹೇಳುತ್ತಾನೆ. ಆದರೆ ಆತ ಆ ಹೋಲಿಕೆಯನ್ನು ತರುವುದು ರಣಭೂಮಿಯಲ್ಲಿ ಸಹಸ್ರಮುಖದಿಂದ ಹರಿಯುತ್ತಿರುವ ರಕ್ತಪ್ರವಾಹದ ಭೀಭತ್ಸವನ್ನು ತೋರಿಸುವ ಸಲುವಾಗಿ. ಆದರೆ ಜ್ಞಾನವಾಹಿನಿ ಸರಸ್ವತಿ ಸ್ವಭಾವತಃ ಸಹಸ್ರಮುಖಿಯೇ "ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ" - ಆಕೆಗೆ ಸಾವಿರಾರು ಮೊಲೆಗಳು, ಸಾವಿರಾರು ಧಾರೆಗಳು. ಒಂದೊಂದು ಧಾರೆಯದು ಒಂದೊಂದು ಸ್ವಾದ. ಅದಾವುದೋ ಪ್ರಸನ್ನತೆಯಿಂದ ಒಮ್ಮೊಮ್ಮೆ ವಾತ್ಸಲ್ಯವುಕ್ಕಿ, ತನ್ನ ಸುತ್ತಲೇ ಹರಿಯುವ ಅಮೃತಧಾರೆಗಳ ಪರಿವೆಯಿಲ್ಲದೇ ಅಲ್ಲೆಲ್ಲೋ ಮಣ್ಣಾಟದಲ್ಲಿ ಮೈಮರೆತಿರುವ ಪಾಮರಶಿಶುವನ್ನೂ ಆಕೆ ಬರಸೆಳೆದು ಅಂಥವು ಒಂದೆರಡು ಧಾರೆಗಳನ್ನು ಮಗುವಿನೆಡೆಗೆ ಹರಿಸುವುದುಂಟು. ಪುಟ್ಟ ಹೊಟ್ಟೆಗೆಷ್ಟು ತಾನೆ ಬೇಕು?  ಅದು ಸರಸ್ವತೀಪ್ರಸಾದ - ಅಯಾಚಿತ, ಅದೃಷ್ಟ, ಆಸ್ವಾದ್ಯ.

Saturday, January 30, 2021

ಹಿಂದೀ ರಾಷ್ಟ್ರಭಾಷೆ - ದೊಡ್ಡರಂಗೇಗೌಡರಿಗೊಂದು ಪ್ರತಿಕ್ರಿಯೆ

 
ದೊಡ್ಡರಂಗೇಗೌಡರು ಕ್ಷಮೆ ಕೇಳಿದ್ದಾರೆ.  ಮೊದಲು, "ರಾಷ್ಟ್ರಭಾಷೆ"ಯಾದ ಹಿಂದಿಯನ್ನು ಒಪ್ಪಬಾರದೇಕೆಂದು ಕೇಳಿದರು; ಆಮೇಲೆ ಅದಕ್ಕೆ ವ್ಯಾಪಕವಿರೋಧ ವ್ಯಕ್ತವಾದಾಗ ನಿಜಕ್ಕೂ ನೊಂದ ಗೌಡರು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ "ಎಲ್ಲ ಭಾಷೆಯೂ ಒಂದೇ ಸಮ" ಎಂದು ಹೇಳುತ್ತಲೇ, ಕನ್ನಡವನ್ನು ಹಾಡಿ ಹೊಗಳುತ್ತಲೇ, ಗಂಟೆಗಟ್ಟಲೆ ಇಂಗ್ಲಿಷಿನ ಗುಮ್ಮ ತೋರಿಸಿದರು (ಹಿಂದಿಯ ಹೇರಿಕೆಯ ವಿಷಯ ಬಂದಾಗ "ನಾನು ಯಾವ ಹೇರಿಕೆಯನ್ನೂ ವಿರೋಧಿಸುತ್ತೇನೆ" ಎಂದು ಹೇಳಿ ತಾವು ಸೃಷ್ಟಿಸಿದ ನಿಜವಾದ ಸಮಸ್ಯೆಯನ್ನು ಮಾತ್ರ ಮರೆತರು); ಆದರೆ ಸಂದರ್ಶನದುದ್ದಕ್ಕೂ ಅವರು ಕನ್ನಡದ ಬಗೆಗೆ ಇಂಗ್ಲಿಷಿನ ಬಗೆಗೆ ಹೇಳಿದ್ದೆಲ್ಲವೂ ಅಕ್ಷರಶಃ ನಿಜವೇ ಆಗಿತ್ತು; ತಮ್ಮ ಬಗೆಗೆ ತಮ್ಮ ಕನ್ನಡಾಭಿಮಾನದ ಬಗೆಗೆ ಹೇಳಿಕೊಂಡಿದ್ದರಲ್ಲೂ ನನಗಂತೂ ಅನುಮಾನವಿಲ್ಲ.  ಆದರೂ ಯಾವ ವಿಷಯಕ್ಕೆ ವಿವಾದ ಆರಂಭವಾಯಿತೋ ಅದೊಂದರ ಬಗೆಗೆ ಮಾತ್ರ ಮಾತಾಡದಿದ್ದುದು ಜಾಣಮರೆವೋ, ನಿಜಕ್ಕೂ ಅವರೇ ಹೇಳುವಂತೆ ವಿವಾದದ ಮೂಲವನ್ನು ಗ್ರಹಿಸುವಲ್ಲಿ ಅವರು ವಿಫಲರಾದರೋ ತಿಳಿಯಲಿಲ್ಲ.  ಆಮೇಲೆ ಅವರು ಬರೆದ ಕ್ಷಮಾಯಾಚನೆಯ ಪತ್ರದಲ್ಲೂ "ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ" ಎಂಬ ಒಕ್ಕಣೆ, ಅವರ ಈ ಗ್ರಹಿಕೆಯ ವೈಫಲ್ಯವನ್ನೇ ಧ್ವನಿಸುತ್ತಿತ್ತು (ಈ ವೈಫಲ್ಯವೂ ಸೂಕ್ಷ್ಮ ನೋಟಕ್ಕಷ್ಟೇ ಸಿಕ್ಕುವಂಥದ್ದು. ಅದಿಲ್ಲದಿದ್ದರೆ ಮೇಲ್ನೋಟಕ್ಕೆ ಕಾಣುವುದು ತಮ್ಮ ತಪ್ಪೊಪ್ಪಿಕೊಳ್ಳದೇ ಸುಮ್ಮನೇ ಕಾಟಾಚಾರಕ್ಕೆ ಕ್ಷಮೆ ಕೋರಿದ ಹಟಮಾರಿ ಧೋರಣೆಯೇ!). "ನೋಯಿಸಿದ್ದರೆ, ಕ್ಷಮೆ ಯಾಚಿಸುತ್ತೇನೆ" - ನಿಜಕ್ಕೂ ತಮ್ಮ ಮಾತು ಕನ್ನಡಿಗರ ಮನ ನೋಯಿಸಿರುವುದು ಗೌಡರಿಗೆ ಅರ್ಥವಾಗಿಲ್ಲವೇ?  "ಹಿಂದಿ ರಾಷ್ಟ್ರಭಾಷೆ" ಎಂಬ ಧೂರ್ತ ಸುಳ್ಳನ್ನೇ ಗೌಡರು ನಿಜವೆಂದು ನಂಬಿದ್ದಾರೆಯೇ?  ಒಂದೋ ಇದು ಅಕ್ಷಮ್ಯ ಧೂರ್ತತನವಿರಬೇಕು, ಅಥವಾ ಮುಗ್ಧತೆಯಿರಬೇಕು.  ಆರೂವರೆ ಕೋಟಿ ಕನ್ನಡಿಗರ ಧ್ವನಿಯಾಗಿ ನಿಲ್ಲಬೇಕಾದ ವ್ಯಕ್ತಿಗೆ ಇವೆರಡೂ ಸಲ್ಲ!

ಗೌಡರ ವೈಯಕ್ತಿಕ ಪರಿಚಯ ನನಗಿಲ್ಲ.  ಆದರೆ ಅವರ ಮಾತು ಕತೆ ಬರಹಗಳಿಂದ ಅವರಲ್ಲೊಬ್ಬ ಸರಳ ಸಜ್ಜನ ಸುಸಂಸ್ಕೃತ ಸಂವೇದನಶೀಲವ್ಯಕ್ತಿಯಿರುವುದಂತೂ ಸ್ಪಷ್ಟವಾಗಿ ಕಾಣುತ್ತದೆ.  ಇದುವರೆಗೂ ಇತರ ಅನೇಕ 'ಸಾಯಿತಿ'ಗಳಂತೆ ಯಾವ ಅಡಾವುಡಿಗಳನ್ನೂ ಮಾಡಿಕೊಂಡವರಲ್ಲ - ಅವರಲ್ಲನೇಕರು ಈಗಾಗಲೇ ಸಮ್ಮೇಳನಾಧ್ಯಕ್ಷತೆಯ ದಂಡಿಗೆಯ ಮೇಲೂ ಕೂತು ಹೋಗಿರುವಾಗ, ಆ ಸ್ಥಾನಕ್ಕೆ ಋಜುಸ್ವಭಾವದ, ವಿವಾದಕ್ಕಂಜುವ, ವಿವಾದವಾದರೆ ನಿಜಕ್ಕೂ ನೋಯುವ, ಅವರೇ ಹೇಳುವಂತೆ (ಸತ್ಯವೂ ಆಗಿರುವಂತೆ) "ಅಂತರಾಳದಿಂದ ಕನ್ನಡವನ್ನು ಆರಾಧಿಸು"ತ್ತಾ, "ಕನ್ನಡವನ್ನೇ ತಲೆಯ ಮೇಲೆ ಹೊತ್ತು ಮೆರೆಸು"ವ ಗೌಡರು ಆ ಸ್ಥಾನಕ್ಕೆ ಎಷ್ಟೋ ಎಷ್ಟೆಷ್ಟೋ ಅರ್ಹರಂತೆ ಕಾಣುತ್ತಾರೆಂಬುದರಲ್ಲಿ ಸಂಶಯವಲ್ಲ.   ಗೌಡರದು ನಿಜಕ್ಕೂ ಕನ್ನಡದ ಜೀವ.  ಆದರೆ ಹಿಂದೀ ರಾಷ್ಟ್ರಭಾಷೆ ಎಂದರೆ ಕನ್ನಡಿಗರಿಗೆ ನೋವೇಕಾಗಬೇಕು ಎಂಬುದು ಏಕೋ ಗೌಡರಿಗೆ ಅರಿವಾದಂತಿಲ್ಲ.  ಇದು ಅವರ ಮುಗ್ಧತೆಯೂ ಇರಬಹುದು.  ಆದರೂ ಕನ್ನಡದ ಮಣ್ಣಿನಲ್ಲೇ ಹುಟ್ಟಿ ಬೆಳೆದು, ಕನ್ನಡದ ಚಳುವಳಿಗಳಲ್ಲಿ ಭಾಗವಹಿಸಿ, ಕನ್ನಡಿಗರಾಗಿಯೇ ಬದುಕುತ್ತಿರುವ ಗೌಡರಿಗೆ ಹಿಂದೀ ಭೂತಗಳು ಕಾಲದಿಂದ ಕನ್ನಡಕ್ಕೆ ಮಾಡುತ್ತಲೇ ಬಂದಿರುವ ಅನ್ಯಾಯ ಕಾಣಲಿಲ್ಲವೆಂದರೆ ನಂಬುವುದು ಕಷ್ಟ - ಅದರಲ್ಲೂ ಸಮ್ಮೇಳನಾಧ್ಯಕ್ಷರಾಗಿರುವ ಅವರ ಈ ಮಾತು ಹಿಂದೀ ಹಿತಾಸಕ್ತಿಗಳಿಗೆ ಹಾಸಿಗೆ ಹಾಸಿಕೊಡುವಂತೆ ಇದ್ದಾಗ, ಅದು ಯಾರನ್ನಾದರೂ ರೊಚ್ಚಿಗೆಬ್ಬಿಸುವುದು ಸಹಜ.  ಅವರು ಸಂದರ್ಶನದಲ್ಲಿ ಅನುಮಾನಿಸಿದಂತೆ, ಈ ಪ್ರತಿಭಟನೆಗಳ ಹಿಂದೆ 'ಹುನ್ನಾರ'ವಿರಲೂ ಸಾಧ್ಯ, ಆದರೆ ಹುನ್ನಾರಕ್ಕೂ ಹೊರತಾದ ಸಾತ್ತ್ವಿಕ ರೋಷವಿದೆಯೆಂಬುದನ್ನು ಸಂವೇದನಶೀಲರಾದ ಗೌಡರು ಮನಗಂಡರೆ ಕನ್ನಡದ ಮನಸ್ಸಿಗೆ ಎಷ್ಟೋ ಹಾಯೆನ್ನಿಸುತ್ತದೆ.  ಸಮಸ್ಯೆಯನ್ನು ಕೂಡಿದ ಮಟ್ಟಿಗೂ ವಸ್ತುನಿಷ್ಠವಾಗಿ ವಿವರಿಸಲೆತ್ನಿಸುತ್ತೇನೆ, ಆದರೂ ಅಲ್ಲಲ್ಲಿ ಕೋಪ, ವ್ಯಂಗ್ಯ ಕಟಕಿಗಳು ಕಂಡುಬಂದಲ್ಲಿ, ಅದು ಅನಿವಾರ್ಯ, ಅದಕ್ಕಾಗಿ ಗೌಡರಲ್ಲಿ ಮೊದಲೇ ಕ್ಷಮೆಯಾಚಿಸಿ ನನ್ನ ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಇರಲಿ, ಗೌಡರೇನೋ ಕನ್ನಡದೇವಿಯನ್ನು ತಲೆಯ ಮೇಲೆ ಹೊತ್ತು ತಿರುಗುವವರು, ಗುಡಿಯಲ್ಲಿಟ್ಟು ಆರಾಧಿಸುವವರು - ಹಿಂದೀ ರಾಷ್ಟ್ರಭಾಷೆಯಾಗಿ ನಮ್ಮ ಮೇಲೆ ಸವಾರಿ ಮಾಡಿದರೆ ಅವರಿಗೆ ಏನೂ ಅನ್ನಿಸಲಿಕ್ಕಿಲ್ಲ.  ಆದರೆ ನಾವು ನೆಲದ ಜನ, ನಮಗೆ ಕನ್ನಡದೇವಿಯ ಪೂಜೆಗೀಜೆ ಬರಾಕಿಲ್ಲ.  ನಾವೇನಿದ್ದರೂ ಹಸಿವಾದಾಗ ಅಮ್ಮನ ಎದೆ ನೋಡುವವರು, ದಣಿದಾಗ ಅಮ್ಮನ ತೊಡೆಗೆ ತಲೆಯಾನಿಸುವವರು, ನೊಂದಾಗ ಕಣ್ಣು ಮೂಗು ಸುರಿಸಿಕೊಂಡು ಅಮ್ಮನ ಸೆರಗಿಗೆ ಮೊಗವೊಡ್ಡುವವರು.  ಆದ್ದರಿಂದ ನಮ್ಮಮ್ಮ ಚೆನ್ನಾಗಿ, ಗಟ್ಟಿಮುಟ್ಟಾಗಿ ಆರೋಗ್ಯವಾಗಿರುವುದು ನಮಗೊಳ್ಳೆಯದು, ನಾವು ಹಾಗಿರುವುದು ಅವಳಿಗೊಳ್ಳೆಯದು ಅಷ್ಟೆ.  ಇವಳನ್ನ ಕರೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ಕೂಡಿಹಾಕಿ, ದಿನಬೆಳಗಾದರೆ ಪಂಪ ರನ್ನ ಕುಮಾರವ್ಯಾಸ ಕುವೆಂಪು ದೊಡ್ಡರಂಗೇಗೌಡ ಎಂದು ಅರ್ಚನೆ ಹಾಡುತ್ತಾ, ನಮಗೆ ಅನ್ನ ಹಾಕಲು ಮಾತ್ರ ಇನ್ನಾವಳೋ ಅಮ್ಮನನ್ನು ಕರೆತಂದು ಕೂರಿಸಿದರೆ, ಸ್ವಾಮಿ, ನಿಮಗೆ ಹೇಗನ್ನಿಸುವುದೋ, ನಮಗೆ ಮಾತ್ರ ತಬ್ಬಲಿಗಳಾದಂತೆ ಅನ್ನಿಸುತ್ತದೆ.  ಎಲ್ಲೋ ಪರನಾಡಿನಲ್ಲಿ ತಬ್ಬಲಿತನ ಕಾಡಿದರೆ ಒಂದು ರೀತಿ, ನಮ್ಮ ನೆಲದಲ್ಲೇ ನಾವೇ ತಬ್ಬಲಿಗಳಾಗುವುದಿದೆಯಲ್ಲ, ಅದು ಶತ್ರುವಿಗೂ ಬರಬಾರದ ಪಾಡು.  ಸುಶಿಕ್ಷಿತಕವಿಗಳಾದ ತಮಗೆ ಆದಿಕವಿ ಪಂಪನ ಪರಿಚಯವಿರಲೇಬೇಕು.  ಆದಿಪುರಾಣದಲ್ಲಿ ಆತ ಬಾಹುಬಲಿಯ ತಮ್ಮಂದಿರಿಂದ ಈ ಮಾತನ್ನು ಹೇಳಿಸುತ್ತಾನೆ:

"ಪಿಱಿಯಣ್ಣಂ ಗುರು ತಂದೆಯೆಂದೆಱಗುವಂ ಮುನ್ನೆಲ್ಲಂ, ಇಂತೀಗಳ್ ಆಳರಸೆಂಬೊಂದು ವಿಭೇದಮಾದೊಡೆ ಎಱಕಂ ಛಿಃ ಕಷ್ಟಮಲ್ತೇ? ವಸುಂಧರೆಗಯ್ಯಂ ದಯೆಗಯ್ಯೆ ಮುಂಪಡೆದುದರ್ಕೆ, ಇಂತೀತನೊಳ್ ತೊಟ್ಟ ಕಿಂಕರಭಾವಂ ನಮಗೆ ಅಕ್ಕಿಗೊಟ್ಟುಮಡಗೂೞುಣ್ಬಂದಮಂ ಪೋಲದೇ" - ಭರತಚಕ್ರವರ್ತಿ ತನ್ನ ತಮ್ಮಂದಿರಿಗೆ "ಬನ್ನಿಂ, ಎಱಗಿಂ ಚಕ್ರೇಶಪಾದಾಬ್ಜದೊಳ್" ಎಂದು ಬರೆಸಿ ಕಳಿಸಿದ ಪತ್ರಕ್ಕೆ ತಮ್ಮಂದಿರ ಪ್ರತಿಕ್ರಿಯೆ ಇದು.  ಏನೋ, ಹಿರಿಯಣ್ಣ, ಗುರು, ತಂದೆ ಎಂದು ನಮಿಸುವುದಾದರೆ ಒಂದು ರೀತಿ.  ಆದರೆ ಆಳು-ಅರಸ ಎಂಬ ಭಾವನೆಯಿಂದ ತಲೆವಾಗುವುದು ಕಷ್ಟವಲ್ಲವೇ?  ನಮಗೆ ರಾಜ್ಯ ಕೊಟ್ಟಿದ್ದು ನಮ್ಮಪ್ಪ, ಪಡೆದವರು ನಾವು.  ಇವತ್ತು ಅದೇ ರಾಜ್ಯವನ್ನು ಅವನ ಪದತಲದಲ್ಲಿಟ್ಟು ಅವನಿಗೆ ಕೈಮುಗಿದು ನಿಲ್ಲಬೇಕೆಂದರೆ, ನಮ್ಮ ಅಕ್ಕಿಯನ್ನೇ ಕೊಟ್ಟು, ಅವನು ಉಂಡು ಮಿಕ್ಕ ತಂಗಳುಣ್ಣುವಂತಲ್ಲವೇ?" - ಇದು ಭರತನ ತಮ್ಮಂದಿರ ಅಳಲು.  ಇದಕ್ಕೆ ಭರತನೇನೂ ಉತ್ತರಿಸಲಿಲ್ಲವೆನ್ನಿ.  ಆಮೇಲೆ ಭರತನ ಕತೆ ಏನಾಯಿತೆಂಬುದನ್ನೂ, ಇವತ್ತಿನ ಸಂದರ್ಭಕ್ಕೆ ಇದರ ಪ್ರಸ್ತುತತೆಯನ್ನೂ, ಕಾವ್ಯಸೂಕ್ಷ್ಮವನ್ನು ತಿಳಿದವರಾದ ತಮಗೆ ವಿವರಿಸಬೇಕಿಲ್ಲವೆಂದು ಭಾವಿಸುತ್ತೇನೆ.

ಇರಲಿ, ಅಲಂಕಾರದ ಭಾಷೆಯಲ್ಲಿ ಮಾತಾಡಿದ್ದು ಸಾಕು.  ನೇರವಾಗಿ ಕೇಳುತ್ತೇನೆ, ತಾವು ಉತ್ತರ ಹೇಳುತ್ತೀರೋ ಬಿಡುತ್ತೀರೋ, ಆದರೆ ಉತ್ತರಿಸುವುದು ತಮ್ಮ ನೈತಿಕ ಹೊಣೆಯೆಂಬುದಷ್ಟು ನಿಮಗೆ ಅರ್ಥವಾದರೆ ಸಾಕು; ಏಕೆಂದರೆ ಒಬ್ಬ ವ್ಯಕ್ತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ಏನೇ ಆದರೂ ನಾವು ತಲೆಕೆಡಿಸಿಕೊಳ್ಳುವವರಲ್ಲ, ಜನಪ್ರಿಯಸಾಹಿತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ನಮಗೆ ಕಳವಳ ಮೂಡಿಸಬಲ್ಲುವಾದರೂ ಹೇಗೋ ಕಡೆಗಣಿಸಿ ಇರಬಲ್ಲೆವು (ಎಷ್ಟೆಷ್ಟೋ ಸಾಹಿತಿಗಳ ಎಂತೆಂಥದೋ ಬಡಬಡಿಕೆಯನ್ನು ಕಡೆಗಣಿಸಿಲ್ಲವೇ), ಆದರೆ ಕನ್ನಡಸಾಹಿತ್ಯಸಮ್ಮೇಳನಾಧ್ಯಕ್ಷರಾಗಿ, ಸಮಸ್ತಕನ್ನಡಿಗರ ಮುಖವಾಣಿಯಾದ ದೊಡ್ಡರಂಗೇಗೌಡರು ಆಡುವ ಮಾತಿದೆಯಲ್ಲ, ಅದು ನಮ್ಮೆಲ್ಲರ ಧ್ವನಿ.  ಆ ಧ್ವನಿಯಲ್ಲಿ ನಮ್ಮದಲ್ಲದ ಮಾತನ್ನಾಡುವುದು ವಿಶ್ವಾಸದ್ರೋಹ! ಅಲ್ಲವೇ? ಹಿಂದೀ ಈ ದೇಶದ ರಾಷ್ಟ್ರಭಾಷೆಯಲ್ಲ, ಅದು ಕೇವಲ ಕೇಂದ್ರಸರ್ಕಾರದ ಆಡಳಿತಭಾಷೆ (ಅದರಲ್ಲೂ ಸೀಮಿತವಲಯಕ್ಕೆ ಮಾತ್ರ) ಎಂಬ ವಿಷಯ ತಮಗೆ ನಿಜಕ್ಕೂ ತಿಳಿದಿರಲಿಲ್ಲವೇ?  ತಾವು ತಿಳಿದಿದ್ದೂ ಸುಳ್ಳು ಹೇಳಿರಲಾರಿರಿ ಎಂಬುದು ನಮ್ಮ ನಂಬಿಕೆ.  ತಿಳಿದಿರಲಿಲ್ಲವೆಂದರೆ ಆಶ್ಚರ್ಯ!  ಹೋಗಲಿ, ಈಗಲಾದರೂ ತಿಳಿಯಿರಿ.  ತಿಳಿದ ಮೇಲಾದರೂ ತಮ್ಮ ತಪ್ಪು ತಿಳುವಳಿಕೆಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿ, ನಿಲುವು ತಿದ್ದಿಕೊಳ್ಳಿ - ಅದಿಲ್ಲದ ಕ್ಷಮಾಯಾಚನೆ ಕೇವಲ ಕಾಟಾಚಾರವೆನಿಸಿಕೊಂಡು, ರೋಷವನ್ನೇ ಹೆಚ್ಚಿಸುತ್ತದೆ.  ಈ ಬರಹವನ್ನೊಮ್ಮೆ ದಯವಿಟ್ಟು ಓದಿ ನೋಡಿ - https://nannabaraha.blogspot.com/2020/09/blog-post_15.html.

ಇನ್ನೊಂದು ವಿಷಯ - ನಿಮ್ಮ ಮಾತನ್ನು ಪತ್ರಿಕೆಯವರು ತಿರುಚಿಯೋ ಸಂಕ್ಷಿಪ್ತಗೊಳಿಸಿಯೋ ಇರುವ ಸಾಧ್ಯತೆಯನ್ನೂ ನಾನು ಅಲ್ಲಗಳೆಯುತ್ತಿಲ್ಲ.  ಅಕಸ್ಮಾತ್ ನಿಮ್ಮ ಮಾತನ್ನು ಅವರು ತಿರುಚಿದ್ದಾರೆಂದರೆ, ನೀವು ಏನು ಹೇಳಿದಿರಿ, ಅವರು ಹೇಗೆ ವರದಿ ಮಾಡಿದ್ದಾರೆ ಎಂಬ ವಿವರಣೆಯನ್ನಾದರೂ ನೀವು ನೀಡಬೇಕಾಗುತ್ತದೆ.  ಬದಲಿಗೆ ಸುಮ್ಮನೇ "ತಿರುಚಿದ ವರದಿ" ಎಂದರೆ ಅದಕ್ಕೆ ಅರ್ಥವೇ ಇಲ್ಲ.  ನಿಮ್ಮಿಂದ ಆ ಸ್ಪಷ್ಟನೆಯಿಲ್ಲದಿದ್ದರೆ ಪತ್ರಿಕೆಯಲ್ಲಿ ವರದಿಯಾಗಿರುವುದೇ ಯಥಾವತ್ ನಿಮ್ಮ ಮಾತೆಂದು ನಾವು ತಿಳಿಯುವುದು, ಅದನ್ನಾಧರಿಸಿ ಪ್ರತಿಕ್ರಿಯಿಸುವುದು ಸಹಜ.  ಮೊನ್ನಿನ ನಿಮ್ಮ ಸಂದರ್ಶನದಲ್ಲಿ ನೀವಾ ಕೆಲಸ ಮಾಡಬಹುದಿತ್ತು, ಅದೇಕೋ ಮಾಡಲಿಲ್ಲ.  ಈಗಿನ ನನ್ನ ಈ ಪ್ರತಿಕ್ರಿಯೆಯೂ ಆ ಪತ್ರಿಕಾವರದಿಗಳನ್ನಾಧರಿಸಿದ್ದೇ.  ಪತ್ರಿಕಾವರದಿಯ ಪ್ರಕಾರ ನೀವು ಹೇಳಿದ್ದು ಇದು - "ಹಿಂದೀ ನಮ್ಮ ರಾಷ್ಟ್ರಭಾಷೆ.  ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ".  ಇದೆಂತಹ ತರ್ಕ ಸ್ವಾಮಿ?  ಇಲ್ಲಿ ಕನ್ನಡಕ್ಕೆ ಸ್ಥಾನಮಾನವಿದೆ, ಉತ್ತರದಲ್ಲಿ ಹಿಂದಿಗೆ ಸ್ಥಾನಮಾನವಿದೆ, ಆದ್ದರಿಂದ ಹಿಂದಿ ನಮ್ಮ ರಾಷ್ಟ್ರಭಾಷೆ ಹೇಗೆ?  ಅಲ್ಲಿ ಹಿಂದಿಗೆ ಸ್ಥಾನಮಾನವಿದ್ದರೆ ಅದು ಅವರ ನೆಲದ ಭಾಷೆ, ಅದರ ಗೌರವ ಅದಕ್ಕೆ.  ಅದು ನಮ್ಮ ರಾಷ್ಟ್ರಭಾಷೆ ಏಕಾದೀತು?

ಆಮೇಲೆ, ಹಿಂದೀಗೆ ಉತ್ತರಭಾರತದಲ್ಲಿ ಸ್ಥಾನಮಾನವಿದೆ ಎಂದಿರಲ್ಲ, ಯಾವ ಹಿಂದೀ ಅದು?  ಬ್ರಜಭಾಷೆಯೋ ಅವಧಿಯೋ ಮೈಥಿಲಿಯೋ ಕಡೀಬೋಲೋ ಹರಿಯಾಣವಿಯೋ ರಾಜಾಸ್ತಾನಿಯೋ ಭೋಜ್ಪುರಿಯೋ ಪಂಜಾಬಿಯೋ ಗುಜರಾಥಿಯೋ, ಅಥವಾ ಸಂಸ್ಕೃತದಿಂದ ಯಥೇಚ್ಛವಾಗಿ ಪದಗಳನ್ನು ಎರವಲು ತೆಗೆದುಕೊಂಡು 'ಶುದ್ಧ್ ಹಿಂದೀ'ಎಂದು ಮಾರಲ್ಪಡುತ್ತಿರುವ, ಎಲ್ಲೂ ಯಾರೂ ಉಪಯೋಗಿಸದ 'ರಾಜ್ಭಾಷಾ' ಹಿಂದಿಯೋ?  ಈ ಕೊನೆಯ ಹಿಂದೀ, ತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳಲು ಉತ್ತರದ ಹಿಂದೀವಾಲಾಗಳು ಸಂವಿಧಾನಕರ್ತರ ಮೇಲೆ ಒತ್ತಡ ಹೇರಿ, ಸಂವಿಧಾನದ ಮುಖಾಂತರ ಹುಟ್ಟಿಹಾಕಿದ ಹಿಂದೀ ಎಂಬುದನ್ನು ತಿಳಿಯಿರಿ.  ಈ ಪ್ರಣಾಳಶಿಶುವಿಗೆ ಭದ್ರವಾದ ಬೇರೇ ಇಲ್ಲ.

ಅದಿರಲಿ, "ಇಂಗ್ಲಿಷ್ ಒಪ್ಪುವ ನಾವು ಹಿಂದೀ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು?" ಎಂಬ ಮಾತನ್ನು ನೀವು ಕೇಳಿದಿರಲ್ಲ - ಈಚಿಗೆ ಈ ರೀತಿಯಲ್ಲಿ ಮಾತಾಡುತ್ತಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕನ್ನಡಿಗಮಂದಿ ಬಹಳವೇ ಹೆಚ್ಚಾಗಿದ್ದಾರೆ ಬಿಡಿ, ಆದರೆ ತಮ್ಮಿಂದ ಆ ಪ್ರಶ್ನೆ ಬಂತಲ್ಲ - ಒಂದು ಕ್ಷಣ ನೀವು ಕನ್ನಡದ ಧ್ವನಿಯೋ ಅಥವಾ ಕನ್ನಡಿಗರ ಕಿವಿಯಿರಿಯುವ ಹಿಂದಿಗರ ಧ್ವನಿಯೋ ಎಂದು ಸಂಶಯವುಂಟಾದದ್ದು ಸುಳ್ಳಲ್ಲ.  ಆದರೂ ಈ ಪ್ರಶ್ನೆ ಸ್ವತಃ ನಿಮ್ಮದಲ್ಲದಿರಬಹುದು, ಈಚೀಚಿಗೆ ಎದ್ದಿರುವ "ಇಂಗ್ಲಿಷ್ ಮಾತ್ರ ಏಕೆ ಬೇಕು, ಹಿಂದಿ ಏಕೆ ಬೇಡ" ಎಂಬ ಕೂಗಿಗೆ ನೀವೂ ಮರುಳಾಗಿರಬಹುದು.  ಮೊನ್ನಿನ ಸಂದರ್ಶನದಲ್ಲೂ ತಾವು ಅದನ್ನೇ ಸಮರ್ಥಿಸಿಕೊಂಡಿರಿ ಕೂಡ.  ಈ ಪ್ರಶ್ನೆ ಬೇರಾರಿಂದಲೋ ಅಲ್ಲ, ನಿಯೋಜಿತ ಸಮ್ಮೇಳನಾಧ್ಯಕ್ಷರಿಂದ ಬಂದಿರುವುದರಿಂದ ಅದಕ್ಕೊಂದು ಸಾರ್ವಜನಿಕತೆಯಿದೆ, ಅದನ್ನು ಉತ್ತರಿಸಬೇಕಾದ್ದು ಕನ್ನಡಿಗನಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ, ಹೀಗೆ.

ಹಿಂದೀ ಏಕೆ ಒಪ್ಪಿಕೊಳ್ಳಬಾರದು?  ಒಪ್ಪಿಕೊಳ್ಳಬಾರದೆಂದು ನಾವಾರೂ ಹೇಳುತ್ತಿಲ್ಲ, ಹಿಂದೀ ಒಂದೇ ಏಕೆ, ತಮಿಳು ತೆಲಗು ಮಲಯಾಳ ಮರಾಠಿ ಗುಜರಾಥಿ ರಾಜಾಸ್ಥಾನಿ ಕಾಶ್ಮೀರಿ ಮೈಥಿಲಿ ಅವಧಿ ಉರ್ದೂ ಎಲ್ಲವನ್ನೂ ಒಪ್ಪೋಣ.  ಏಕಲ್ಲ, ಅವೆಲ್ಲವೂ ನಮ್ಮ ಸೋದರಭಾಷೆಗಳೇ.  ಒಳ್ಳೆಯದು ಕನ್ನಡದಲ್ಲಿರುವಂತೆ, ಇಂಗ್ಲಿಷಿನಲ್ಲಿರುವಂತೆ ಈ ಭಾಷೆಗಳಲ್ಲೂ ಇವೆ.  ನನಗೆ ನೂರು ಭಾಷೆ ಕಲಿಯಲು ಸಾಧ್ಯವಾದರೆ ನನಗೆ ಸಂತೋಷವೇ.  ನನ್ನನ್ನೂ ಸೇರಿ ಬಹಳಷ್ಟು ಜನ ಕನ್ನಡಿಗರಿಗೆ ಕನ್ನಡ, ಇಂಗ್ಲಿಷು, ಹಿಂದಿ, ತಮಿಳು, ತೆಲಗು ಈ ಐದು ಭಾಷೆಗಳು ಸಾಕಷ್ಟೇ ಚೆನ್ನಾಗಿ ಬರುತ್ತವೆ.  ಕೆಲವರಿಗೆ ಮಲಯಾಳ ಮರಾಠಿಗಳೂ ಸ್ವಲ್ಪ ದೇಶ ಸುತ್ತಿದವರಿಗೆ ಪಂಜಾಬಿ ಬೆಂಗಾಲಿಗಳೂ, ವಿದೇಶವನ್ನೂ ಸುತ್ತಿದವರಿಗೆ ರಶಿಯನ್, ಜರ್ಮನ್, ಫ್ರೆಂಚುಗಳೂ ಬರುವುದುಂಟು (ಅಂದ ಹಾಗೆ ನಮ್ಮ ವಿಶ್ವವಿದ್ಯಾಲಯಗಳಲ್ಲೂ ಫ್ರೆಂಚ್ ಮೊದಲಾದ ವಿದೇಶೀ ಭಾಷೆಗಳನ್ನು ಕಲಿಯುವ ಅವಕಾಶವಿದೆ, ಯಾರೂ ಇದನ್ನು 'ವಿರೋಧಿ'ಸಿ ಗಲಾಟೆ ಮಾಡಿದ್ದಿಲ್ಲ).  ಏಕೆಂದರೆ ಹೀಗೆ ಕಲಿತವರು ತಮ್ಮ ಸ್ವಂತ ಆಸಕ್ತಿಯಿಂದ, ಕೆಲವೊಮ್ಮೆ ಅಗತ್ಯಗಳಿಂದ ಕಲಿತವರೇ ಹೊರತು ಯಾರೂ ಅವನ್ನು ತಲೆಯ ಮೇಲೆ ಹೇರಿದ್ದಿಲ್ಲ.  ಆ ದೃಷ್ಟಿಯಿಂದ ಹಿಂದಿಯನ್ನು ಒಪ್ಪುವುದರಲ್ಲಿ ನಮಗೆ ಯಾವ ಅಡ್ಡಿಯೂ ಇಲ್ಲ.  ಆದರೆ ಇವಾವುದೂ ಹೇರಿಕೆಯೆನಿಸದ್ದು, ಹಿಂದೀ ಮಾತ್ರ ಹೇರಿಕೆಯೇಕಾಗುತ್ತದೆ?  ಏಕೆಂದರೆ ನಮ್ಮ ಶಿಕ್ಷಣದಲ್ಲಿ, ದಿನಬಳಕೆಯಲ್ಲಿ, ಆಡಳಿತದ ವ್ಯವಹಾರದಲ್ಲಿ, ಹಿಂದಿಗೆ/ಹಿಂದಿಯವರಿಗೆ ನೀಡುವ (ಇತರರಿಗೆ ನಿರಾಕರಿಸಲಾಗುವ) ವಿಶೇಷ ಸವಲತ್ತುಗಳಲ್ಲಿ ಕೇಂದ್ರಾಡಳಿತವೂ ಅದರ ಬಾಲವಾಗಿರುವ ರಾಜ್ಯಾಡಳಿತಗಳೂ ಹಿಂದಿಯನ್ನು ಗಿಡುಕಿ ಗಿಡುಕಿ ತುಂಬುತ್ತಿರುವುದಕ್ಕೆ, ಮತ್ತದರಿಂದ ನಮ್ಮ ಅನ್ನದ ಅವಕಾಶಗಳು ನಮ್ಮ ಕೈತಪ್ಪಿ ಹಿಂದಿಯವರ ಕೈಗೆ ಸುಲಭವಾಗಿ ಸೇರುತ್ತಿರುವುದಕ್ಕೆ, ಹಿಂದೀ ಹೇರಿಕೆಯೆನ್ನಿಸುವುದು.  ನಾವು ಒಪ್ಪಲಾರದ್ದು ಅದನ್ನು.  

ಭಾಷೆ ಕಲಿಸಿದರೆ ಅದು ಹೇರಿಕೆ ಹೇಗೆ ಎನ್ನುತ್ತೀರಾ?  ಅದು ಕೇವಲ ಒಂದು ಭಾಷೆಯನ್ನು ಕಲಿಯುವ ಅಥವಾ ಬಿಡುವ ವಿಷಯವಲ್ಲ ಸ್ವಾಮಿ.  ನಿಮಗಿದು ತಿಳಿಯದೆಂದು ನಾವು ನಂಬಲಾರೆವು, ಆದರೂ ಉದಾಹರಣೆ ಕೊಡುತ್ತೇನೆ.  ಯಾವುದೋ ಕೇಂದ್ರಸಂಸ್ಥೆಯ ಉದ್ಯೋಗಪರೀಕ್ಷೆಯಿದೆಯೆಂದುಕೊಳ್ಳಿ - ದೇಶದ ಎಲ್ಲರೂ ಭಾಗವಹಿಸಬಹುದಾದ್ದು.  ಎಲ್ಲರಿಗೂ ತೆರೆದ ಪರೀಕ್ಷೆ ಎಂದ ಮೇಲೆ ಅದರಲ್ಲಿ ಗೆಲ್ಲುವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕಷ್ಟೇ?  ಸಮಾನಾವಕಾಶ ಹೇಗೆ ಬರುತ್ತದೆ?  ಪರೀಕ್ಷೆಯನ್ನು ಎಲ್ಲರೂ ಅವರವರ ಭಾಷೆಯಲ್ಲಿ ಎದುರಿಸಲು ಅವಕಾಶ ಮಾಡಿಕೊಡುವುದರಿಂದ.  ಆಗ ಏನಾಗುತ್ತದೆ?  ಕೆಲಸ/ವಿಷಯ ಬಲ್ಲವನು ಪಾಸಾಗುತ್ತಾನೆ, ಬಾರದವನು ಫೈಲ್ ಆಗುತ್ತಾನೆ.  ಹೌದು ತಾನೆ?  ಅದು ಸಾಧ್ಯವಿಲ್ಲವೇ?  ಬೇಡ, ಪರೀಕ್ಷೆಯನ್ನು ಎಲ್ಲರೂ ಇಂಗ್ಲಿಷಿನಲ್ಲೇ ಬರೆಯಲಿ - ಏಕೆಂದರೆ ಇಂಗ್ಲಿಷ್ ಇಲ್ಲಿನ ಯಾವುದೋ ಒಂದು ಸಮುದಾಯದ ಭಾಷೆಯಲ್ಲ - ಅದು ಎಲ್ಲರಿಗೂ ಸಮಾನದೂರ, ಸಮಾನ ಹತ್ತಿರ.  ಇಂಗ್ಲಿಷ್ ಬಲ್ಲವರು ಬರೆದು ಪಾಸಾಗುತ್ತಾರೆ, ಇಂಗ್ಲಿಷ್ ಬರದವರು ಫೈಲ್ ಆಗುತ್ತಾರೆ (ಕೆಲಸ ಗೊತ್ತಿದ್ದೂ ಇಂಗ್ಲಿಷ್ ಬರದವನೂ ಫೈಲ್ ಆಗುತ್ತಾನೆ ಹೌದು, ಅದು ಅನ್ಯಾಯ - ಆದರೆ ಆ ಅನ್ಯಾಯವೂ ಎಲ್ಲ ಭಾಷಿಕರಿಗೂ ಸಮಾನವಾಗಿರುತ್ತದಲ್ಲ - ಅವನು ಕನ್ನಡಿಗನಿರಲಿ, ಹಿಂದಿಯವನಿರಲಿ, ತಮಿಳನಿರಲಿ, ಕಾಶ್ಮೀರಿಯಿರಲಿ). ಇಂಗ್ಲಿಷ್ ಇವರಾರ ಭಾಷೆಯೂ ಅಲ್ಲವಾದ್ದರಿಂದ ಯಾವುದೋ ಒಂದು ಭಾಷಾಸಮುದಾಯಕ್ಕೆ ಅದು ಹೆಚ್ಚುವರಿ ಅನುಕೂಲವನ್ನು ಒದಗಿಸುವುದಿಲ್ಲ. ಸರಿ, ಇದರಿಂದ ಇಂಗ್ಲಿಷ್ ಕಲಿಯದವರಿಗೆ ಅನ್ಯಾಯವಂತೂ ಆಗುತ್ತದಲ್ಲ ಎಂದರೆ, ಅದಕ್ಕೆ ಉಪಾಯವಿಲ್ಲ, ಏಕೆಂದರೆ ನ್ಯಾಯವಾಗಿ ಎಲ್ಲರೂ ಅವರವರ ಭಾಷೆಯಲ್ಲಿ ಬರೆಯುವ ಅವಕಾಶವನ್ನಂತೂ ನೀವು ಕೊಡಲಿಲ್ಲವಲ್ಲ (ಹಾಗಿದ್ದರೆ ಇಂಗ್ಲಿಷೇ ಯಾಕೆ, ಸಂಸ್ಕೃತ ಏಕಲ್ಲ, ಫ್ರೆಂಚ್ ಏಕಲ್ಲ ಇತ್ಯಾದಿ ವಿತಂಡವಾದಗಳೂ ಬಂದದ್ದಿದೆ, ಸದ್ಯಕ್ಕೆ ಅದು ಪಕ್ಕಕಿರಲಿ, ಇಂಗ್ಲಿಷ್ ಏಕೆ ಎನ್ನುವುದನ್ನು ಆಮೇಲೆ ಉತ್ತರಿಸೋಣ).  ಈಗ ಇಂಗ್ಲಿಷ್ ಬದಲು ನೀವು ಹಿಂದಿಯಲ್ಲಿ ಬರೆಯಲು ಅವಕಾಶ ಕೊಟ್ಟರೆ ಏನಾಗುತ್ತದೆ?  ಮೊದಲಿದ್ದಂತೆ ಕೆಲಸ/ವಿಷಯಜ್ಞಾನವೊಂದೇ ಪಾಸ್/ಫೈಲ್ ಆಗಲು ಮಾನದಂಡವಾಗಿ ಉಳಿಯುವುದಿಲ್ಲ.  ಕೆಲಸವೂ ಗೊತ್ತಿದ್ದು ಹಿಂದಿಯೂ ಗೊತ್ತಿದ್ದವನು ಪಾಸ್ ಆಗುತ್ತಾನೆ, ಕೆಲಸ ಗೊತ್ತಿದ್ದೂ ಹಿಂದಿ ಗೊತ್ತಿಲ್ಲದವನು ಫೈಲ್ ಆಗುತ್ತಾನೆ.  ಆದರೆ ಅನ್ಯಾಯವೆಂದರೆ, ಹಿಂದಿ ಗೊತ್ತಿಲ್ಲದ ಕನ್ನಡಿಗ ಕೆಲಸದೊಡನೆ ಹಿಂದಿಯನ್ನೂ ಕಲಿತು ಬರಬೇಕಾಗುತ್ತದೆ, ಅದೇ ಹಿಂದಿ ಮಾತೃಭಾಷೆಯಾಗಿರುವವ ಈ ಹೆಚ್ಚುವರಿ ಪ್ರಯತ್ನವಿಲ್ಲದೇ ಕೇವಲ ಕೆಲಸವನ್ನಷ್ಟೇ ಇನ್ನೂ ಚೆನ್ನಾಗಿ ಕಲಿತು ಮೊದಲಿನವನಿಗಿಂತ ಸುಲಭವಾಗಿ ಪಾಸಾಗುತ್ತಾನೆ.  ಇದು ಒಂದು ಭಾಷಾಸಮುದಾಯಕ್ಕೆ, ಉಳಿದವರಿಗಿಲ್ಲದ ಹೆಚ್ಚುವರಿ ಸೌಲಭ್ಯ ಕೊಟ್ಟಂತಾಯಿತಷ್ಟೇ? ಇದನ್ನೇ ನೀವು ದೇಶದಾದ್ಯಂತ ಮಾಡಿದಾಗ, ಎಲ್ಲೆಡೆಯೂ ಅವರೇ ವಿಜೃಂಭಿಸುತ್ತಾರೆ.  ಹಿಂದಿ ಬರದವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯಾಗುತ್ತದೆ.  ಈ ದೇಶ ನಮ್ಮೆಲ್ಲರದೂ ಎಂದ ಮೇಲೆ, ಯಾವುದೋ ಒಂದು ಭಾಷಾಸಮುದಾಯದವರ ಭಾಷೆ ಕಲಿತರಷ್ಟೇ ನಮಗೆ ಬದುಕು ಎನ್ನುವ ಪರಿಸ್ಥಿತಿ ಇರುವುದು ಯಾವ ಸೀಮೆ ನ್ಯಾಯ?  ಹಿಂದಿಯ ಬದಲು ಕನ್ನಡದಲ್ಲೇ ಬರೆಯುವ ಅವಕಾಶ ಕೊಡಿ, ಇಂಗ್ಲಿಷೂ ಇರಲಿ.  ಉಳಿದವರು ಇದಕ್ಕೆ ಒಪ್ಪುತ್ತಾರಾ?  ಬೇಡ, ಕನ್ನಡವನ್ನೇ ರಾಷ್ಟ್ರಭಾಷೆಯೆಂದು ಘೋಷಿಸಿ?  ಉಳಿದವರು ಒಪ್ಪುತ್ತಾರಾ?  ಇದಕ್ಕೆ ಒಪ್ಪಲಿಲ್ಲವೆಂದ ಮೇಲೆ ಹಿಂದೀ ಏಕೆ?

ಇನ್ನೊಂದು ಉದಾಹರಣೆ ಕೊಡುತ್ತೇನೆ.  ಬ್ಯಾಂಕು-ಪೋಸ್ಟಾಫೀಸು.  ಇವು ಕೇಂದ್ರಸರ್ಕಾರದ ಆಡಳಿತಕ್ಕೆ ಅಥವಾ ಕೇಂದ್ರಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟುವು.  ಆಡಳಿತ ನಿಮ್ಮದಿರಬಹುದು, ಆದರೆ ಅದನ್ನು ಬಳಸುವವರು ನಾವಷ್ಟೇ? ಈ ನೆಲದ ಜನ.  ಎಂದ ಮೇಲೆ ನಮ್ಮ ಜೊತೆ ವ್ಯವಹಾರ ಮಾಡಲು ನೀವು ಯಾವ ಭಾಷೆ ಬಳಸಬೇಕು?  ನಮ್ಮ ಭಾಷೆಯನ್ನೋ ನಿಮ್ಮ ಭಾಷೆಯನ್ನೋ?  ಸಂಪರ್ಕಭಾಷೆ ಇಂಗ್ಲಿಷಿದೆ (ಇಂಗ್ಲಿಷ್ ಏಕೆ ಎನ್ನುವ ಪ್ರಶ್ನೆಯನ್ನು ಸ್ವಲ್ಪ ತಡೆದಿಟ್ಟುಕೊಳ್ಳಿ ಸದ್ಯಕ್ಕೆ, ಆಮೇಲೆ ಅದನ್ನು ನೋಡುವಾ), ಕೇಂದ್ರದ ಭಾಷೆ ಹಿಂದಿ ಇದೆ (ಅದು ಹಿಂದಿ ಏಕಾಗಬೇಕೋ, ಇರಲಿ ಸದ್ಯಕ್ಕೆ ಅದನ್ನೂ ಒಪ್ಪುವಾ), ಈ ನೆಲದ ವ್ಯವಹಾರದ ಭಾಷೆ ಕನ್ನಡ ಇದೆ.  ಕಾಲದಿಂದಲೂ ಈ ಸಂಸ್ಥೆಗಳ ಎಲ್ಲಾ ಫಾರ್ಮುಗಳಲ್ಲಿ ಈ ಮೂರೂ ಭಾಷೆಗಳೂ ಇರುತ್ತಿದ್ದುವು.  ಆಮೇಲೆ ನೋಡಿದರೆ ಇದ್ದಕ್ಕಿದ್ದಂತೆ ಕನ್ನಡವೇ ಮಾಯ!  ಕನ್ನಡ ಬಿಟ್ಟು ಬೇರೇನೂ ಬಾರದ ಹಳ್ಳಿಯ ಅರ್ಜಿ ತುಂಬ ಬೇಕಾದರೆ ಏನು ಮಾಡಬೇಕು?  ನಿಮ್ಮ ಹಿಂದೀ ಹುಸಿ ರಾಷ್ಟ್ರೀಯತೆಗೆ ಬಲಿಯಾಗಬೇಕೇ?  ಅಥವಾ ಯಾವುದೋ ಮೂಲೆ ಕೊಂಪೆಯಲ್ಲಿದ್ದು, ಜೀವನದಲ್ಲಿ ಹೊರಗೆಲ್ಲೂ ಹೋಗುವ ಅಗತ್ಯವೇ ಇಲ್ಲದಿದ್ದರೂ ನೀವು ಕೊಡುವ ಬ್ಯಾಂಕ್ 'ಸೇವೆ'ಯನ್ನು ಸ್ವೀಕರಿಸುವುದಕ್ಕೋಸ್ಕರ ನಿಮ್ಮ ಭಾಷೆ ಕಲಿಯಬೇಕೇ?  ಬೇಡ, ನಮಗೆ ನಿಮ್ಮ ಬ್ಯಾಂಕೇ ಬೇಡ, ಅದನ್ನು ರಾಜ್ಯಾಡಳಿತಕ್ಕೆ ಕೊಡಿ, ಪೋಸ್ಟಾಫೀಸನ್ನು ರಾಜ್ಯಾಡಳಿತಕ್ಕೆ ಕೊಡಿ, ರಾಜ್ಯ ನಮ್ಮೊಡನೆ ಕನ್ನಡದಲ್ಲೇ ವ್ಯವಹರಿಸಲಿ, ಆದೀತೇ?  ಕನ್ನಡದ ಪ್ರಜೆಯೊಬ್ಬನಿಗೆ ಹಿಂದಿ ಬರುತ್ತದೆಂದು, ಹಿಂದಿ ಬರಲೇಬೇಕೆಂದು ನೀವು ನಿರೀಕ್ಷಿಸುವುದಾದರೂ ಯಾವ ಆಧಾರದ ಮೇಲೆ?  ಇನ್ನು ಈ ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಮೇಲಿನದೇ ಗೋಳು.  ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಉತ್ತರಿಸಬಹುದು, ನೋಡಿದರೆ ಎಲ್ಲೆಲ್ಲೂ ಹಿಂದಿಯವರೇ! ಇವರಂತೂ ನಾವು ಇಂಗ್ಲಿಷಿನಲ್ಲಿ ಮಾತಾಡಿದರೂ ಮುಖಮುಖ ನೋಡುತ್ತಾರೆ, ಕನ್ನಡದಲ್ಲಿ ಮಾತಾಡಿದರೆ ನಾಯಿಯಂತೆ ನಡೆಸಿಕೊಳ್ಳುತ್ತಾರೆ.  ಇದಂತೂ ನಾವು ದಿನಬೆಳಗಾದರೆ ನೋಡುತ್ತಿರುವ ವಾಸ್ತವವೇ ಆಗಿಬಿಟ್ಟಿವೆ ಈಗ.  ಹಿಂದಿ ಏಕೆ ಒಪ್ಪಬಾರದು ಎನ್ನುವುದಕ್ಕೆ ಕಾರಣ ತಿಳಿಯಿತೇ ಈಗಾದರೂ?  ಮೊದಲಾದರೆ, ಸ್ವಲ್ಪ ಇಂಗ್ಲಿಷಾದರೂ ಗೊತ್ತಿದ್ದರೆ ಹೇಗೋ ಎಲ್ಲಾದರೂ ಬಚಾಯಿಸಿಕೊಳ್ಳಬಹುದೆನ್ನುವ ಸ್ಥಿತಿಯಿತ್ತು - ಮತ್ತು ಇದು ಭಾರತದಾದ್ಯಂತ ಎಲ್ಲ ಭಾಷಿಕರಿಗೂ ಒಂದೇ ಆದ ಸ್ಥಿತಿಯಾಗಿತ್ತು.  ಆದರೆ ನಿಮ್ಮ ಹಿಂದೀ ಪ್ರಭುವಿಗೆ, ಈ ಇಂಗ್ಲಿಷನ್ನಾದರೂ ಏಕೆ ಕಲಿಯಬೇಕು ಎನ್ನುವ ಸೋಮಾರಿತನ.  ಒಂದು ಹೆಚ್ಚುವರಿ ಭಾಷೆಯನ್ನೂ ಕಲಿಯದೇ ಕೇಂದ್ರಸರ್ಕಾರಗಳ ಉದ್ಯೋಗ ತನ್ನ ತಟ್ಟೆಗೆ ಬೀಳಬೇಕೆಂಬ ಧೋರಣೆ.  ಅವನಿಗಾದರೆ ಕೆಲಸ ಬಂದರೆ ಸಾಕು, ಇನ್ನೊಂದೇ ಒಂದು ಹೆಚ್ಚುವರಿ ಪ್ರಯತ್ನವಿಲ್ಲದೇ ಕೆಲಸವು ಅವನ ಬುಟ್ಟಿಗೆ ಬೀಳುವುದು.  ಆದರೆ ಇದೇ ಕೆಲಸಕ್ಕೆ ಕನ್ನಡಿಗರು ಪ್ರಯತ್ನಿಸಬೇಕಾದರೆ ಅವರು ಹಿಂದಿಯನ್ನಾದರೂ ಕಲಿಯಲೇ ಬೇಕು, ಹಿಂದಿಯೇ ಮಾತೃಭಾಷೆಯಾಗಿರುವವರೊಡನೆ (ಜೊತೆಗೆ ಹಿಂದಿಗರ ಸ್ವಜನಪಕ್ಷಪಾತದೊಡನೆ) ಪೈಪೋಟಿ ಮಾಡಬೇಕು!  ಈಗಂತೂ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಹಿಂದಿಗರದ್ದೇ ಹಾವಳಿ, ಸ್ವಜನಪಕ್ಷಪಾತ.  ಎಲ್ಲರೂ ಬೆಂಗಳೂರಿಗೆ ದಾಳಿಯಿಡುವರೇ (ನಾನು ಅವರನ್ನು ಟೀಕಿಸುತ್ತಿಲ್ಲ, ಹಾಗಾಗಲು ಅವಕಾಶ ಮಾಡಿಕೊಟ್ತ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇನೆ), ಕಂಪನಿಗಳಲ್ಲಿ, ಅಂಗಡಿಯಲ್ಲಿ, ಮಾಲ್ ಗಳಲ್ಲಿ, ಅಪಾರ್ಟ್ಮೆಂಟುಗಳಲ್ಲಿ ಎಲ್ಲ ಕಡೆಯೂ ಅವರೇ.  ಅವರ ಸೇವೆಗಾಗಿ ಅವರ ಭಾಷೆಯನ್ನೇ ಮಾತಾಡುವ ವಾಚ್ಮನ್ನುಗಳು, ಡೆಲಿವರಿ ಬಾಯ್ ಗಳು ಎಲ್ಲರೂ ಉತ್ತರದಿಂದಲೇ ಅಮದಾಗಬೇಕು.  ಹಿಂದೀ ಕಲಿಕೆಯೆನ್ನುವುದು ಕೇವಲ ಒಂದು ಭಾಷೆಯ ಕಲಿಕೆಗೆ ಸಂಬಂಧಿಸಿದ್ದಲ್ಲ ಎಂಬುದು ಅರ್ಥವಾಯಿತೇ?  ಬೇಡ, ನಾವೂ ಯಾವ ಭಾಷೆಯನ್ನೂ ಕಲಿಯುವುದಿಲ್ಲ, ಕೆಲಸ ಬಂದರಾಯಿತೋ ಇಲ್ಲವೋ?  ನಮಗೂ ಕನ್ನಡದಲ್ಲೇ ಪರೀಕ್ಷೆ ಬರೆಸಿ ಬ್ಯಾಂಕ್ ಕೆಲಸ ಕೊಡಿ.  ಆಗುತ್ತದೆಯೋ?  ಆಗುವುದಿಲ್ಲವೆಂದ ಮೇಲೆ ಹಿಂದಿಯ ಪುಂಗಿ ಬಂದ್ ಆಗಲಿ.

ಇನ್ನೊಂದು ಮಾತನ್ನು ಸೂಚಿಸಿ ಮುಂದಿನ ಅಂಶಕ್ಕೆ ಹೋಗುತ್ತೇನೆ.  ತಾವು ಫೆಬ್ರವರಿ 26ರಂದು ಕೂರುತ್ತೀರಲ್ಲ, ಅದೇ ಪೀಠವನ್ನು ಈಗ್ಗೆ ಅರವತ್ನಾಲ್ಕು ವರ್ಷಗಳ ಹಿಂದೆ ಮಹನೀಯರೊಬ್ಬರು ಅಲಂಕರಿಸಿದ್ದರು - "ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿ ಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ!" ಎಂದು ಗುಡುಗಿದ್ದ ಚೇತನವದು.  ಅದೇನು ಖಾಲಿ ಗುಡುಗಾಗಿರಲಿಲ್ಲ ಬಿಡಿ.  ಮೈಸೂರು ವಿಶ್ವವಿದ್ಯಾಲಯದ ತಮ್ಮ ಆಡಳಿತಾವಧಿಯಲ್ಲಿ ಇನ್ನಿಲ್ಲದಂತೆ ಕನ್ನಡದ ಕೆಲಸವನ್ನು ಮಾಡಿದರು, ಕನ್ನಡವೆಂಬ ಹೆಸರಿಗೆ ತಾವೇ ಬದಲೀ ಹೆಸರಾದರು.  ಯಾರೆನ್ನುವಿರಾ?  ತಮಗೆ ಅಪರಿಚಿತರಿರಲಾರರು - ಅವರೇ ಕುವೆಂಪು, ಅವರೂ ಕವಿಗಳೇ, ರಾಷ್ಟ್ರಕವಿ.  ಅವರು ಹಿಂದಿ ಹೇರಿಕೆಯ ಬಗೆಗೆ ಏನು ಹೇಳಿದ್ದಾರೆ ಗೊತ್ತೇ?  "ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು.  ಇದನ್ನು ಕನ್ನಡಿಗರು ಪ್ರತಿಭಟಿಸಿ ವಿಫಲಗೊಳಿಸಬೇಕು... ಈ ವಿಷಯದಲ್ಲಿ ಹೆಜ್ಜೆಹೆಜ್ಜೆಗೂ ಎಚ್ಚರ ಬೇಕು; ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗಯುಗಗಳ ಅಂಧಕಾರಫಲವನ್ನು ಅನುಭವಿಸಬೇಕಾದೀತು.  ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ"  ಅವತ್ತೇ ಆ ಕವಿ ಮುಂಗಾಣಿಸಿದ ಅಪಾಯ ಇವತ್ತು ಸಾಕ್ಷಾತ್ ಮೈವೆತ್ತು ನಿಂತಿದ್ದರೂ ಈ ಕವಿ ಅದನ್ನು ಕಾಣುತ್ತಿಲ್ಲವೆಂದರೆ, ರವಿ ಕಾಣದ್ದನ್ನು ಕವಿ ಕಂಡನೆಂಬ ಮಾತನ್ನು ನಂಬುವುದಾದರೂ ಹೇಗೆ ಸ್ವಾಮಿ?

ಈಗ ಬಹುಚರ್ಚಿತ ಪ್ರಶ್ನೆ, ಗಲಭೆಯೆಬ್ಬಿಸಿ ಆ ಗಲಭೆಯ ನಡುವೆ ಹಿಂದಿಯನ್ನು ತೂರಿಸುವುದಕ್ಕಾಗಿಯೇ ಎಬ್ಬಿಸಿದ ಪ್ರಶ್ನೆ "ಗುಲಾಮಗಿರಿಯ ಸಂಕೇತವಾದ ಇಂಗ್ಲಿಷ್ ಮಾತ್ರ ಬೇಕು ನಮ್ಮದೇ ಭಾಷೆಯಾದ ಹಿಂದಿ ಏಕೆ ಬೇಡ".  ನನಗೇನೋ ಇಂಗ್ಲಿಷ್ ಬೇಡ ಸ್ವಾಮಿ, ನನ್ನ ಮಗನನ್ನು ಒಂದು ಹಂತದವರೆಗೂ ಕನ್ನಡಮಾಧ್ಯಮದಲ್ಲೇ ಓದಿಸಿದ್ದೇನೆ (ಪಠ್ಯಪುಸ್ತಕದಲ್ಲಿ ಯಾರಿಗೂ ಅರ್ಥವಾಗದ, ಇತ್ತ ಕನ್ನಡವೂ ಅಲ್ಲದ, ಅತ್ತ ಸಂಸ್ಕೃತವೂ ಅಲ್ಲದ, ಇತ್ತ ಇಂಗ್ಲಿಷೂ ಅಲ್ಲದ ದರಿದ್ರಭಾಷೆಯಿದ್ದಾಗ್ಯೂ).  ಆದ್ದರಿಂದ ತಾವೊಂದು ಸವಾಲನ್ನು ಸ್ವೀಕರಿಸಿ.  ರಾಜ್ಯದ ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿಬಿಡಿ.  ಇಂಗ್ಲಿಷ್ ಮಾಧ್ಯಮ ಬೇಡ.  ಅಷ್ಟೇಕೆ, ಪಠ್ಯಕ್ರಮದಿಂದ ಇಂಗ್ಲಿಷ್ ಭಾಷೆಯನ್ನೇ ಕಿತ್ತೊಗೆದುಬಿಡಿ - ಆದರೆ ನಾಲ್ಕೇ ಶರತ್ತು: 

  1. ರಾಜ್ಯದ ಎಲ್ಲ ಪಠ್ಯಪುಸ್ತಕಗಳನ್ನೂ ಪರಿಶೋಧಿಸಿ, ಕೊನೆಯಪಕ್ಷ ಈಗ್ಗೆ ನಲವತ್ತು ವರ್ಷಗಳ ಹಿಂದೆ ಎಷ್ಟು ಶುದ್ಧವಿತ್ತೋ ಅಷ್ಟೇ ಶುದ್ಧ ಭಾಷೆಯಲ್ಲಿ, ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಪಠ್ಯಗಳನ್ನು ಬರೆಸಬೇಕು.  
  2. ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಕೆಲಸಕ್ಕೆ ಸೇರಬೇಕೆಂದರೆ ಅವರ ವಿದ್ಯಾರ್ಹತೆಗೆ ತಕ್ಕ ಕೆಲಸದ ಖಾತ್ರಿ ನೀವು ನೀಡಬೇಕು - ಸರ್ಕಾರೀ ಸಂಸ್ಥೆಯಲ್ಲಾಗಲಿ ಖಾಸಗಿಯಲ್ಲಾಗಲಿ (ಕನ್ನಡದಲ್ಲಿ ಓದಿದವರೆಂಬ ರಿಯಾಯಿತಿಯೇನೂ ಬೇಡ - ಈಗಿನಂತೆಯೇ ಅವರ ಯೋಗ್ಯತೆ ನೋಡಿಯೇ ಕೆಲಸ ಕೊಡಲಿ (ಸರ್ಕಾರದ ಕೆಲಸಗಳು ಯೋಗ್ಯತೆಯ ಮೇಲೆ ಸಿಗುವುದು ನಿಂತು ಯಾವುದೋ ಕಾಲವಾಯಿತು, ಅದಿರಲಿ).  ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಕೆಲಸ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.
  3. ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಓದು ಮುಂದುವರೆಸಬೇಕೆಂದರೆ ಉನ್ನತವಿದ್ಯಾಭ್ಯಾಸಕ್ಕೆ ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನೀವು ಪ್ರವೇಶ ಕೊಡಿಸಬೇಕು.  ಕನ್ನಡದಲ್ಲಿ ಓದಿದ ಮಕ್ಕಳೆಂಬ ರಿಯಾಯಿತಿಯೇನು ಬೇಡ - ಈಗ ಮಾಡುವಂತೆಯೇ, ಅವರ ಅಂಕ ಯೋಗ್ಯತೆ ನೋಡಿಯೇ ಪ್ರವೇಶ ಕೊಡಲಿ. ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಪ್ರವೇಶ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.  
  4. ಬರೆದುಕೊಡುತ್ತೇನೆ, ಅಲ್ಲಿ ಉನ್ನತಶಿಕ್ಷಣದ ಭಾಷೆ ಇಂಗ್ಲಿಷೇ ಇರುತ್ತದೆ (ನಿಮ್ಮ ಹಿಂದಿಯೂ ಅಲ್ಲ).  ಆಗ ನಮ್ಮ ಮಕ್ಕಳು ಓದಿದ ಈ ಭಾಷೆಯಿಂದ ಆ ಭಾಷೆಗೆ ದಾಟಿಕೊಳ್ಳುವುದಕ್ಕೆ ಸಕಲ ಸಹಾಯವನ್ನೂ ನೀವು ಒದಗಿಸಿ ಕೊಡಬೇಕು.  ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಅವರಿಗೆ ಯಾವ ತೊಂದರೆಯೂ ಆಗಬಾರದು.

ಇದು ಸಾಧ್ಯವಿಲ್ಲವೇ?  ಹಾಗಿದ್ದರೆ ಇಂಗ್ಲಿಷ್ ಗುಮ್ಮ ತೋರಿಸುವುದನ್ನು ನಿಲ್ಲಿಸಿ, ಜನ ಇಂಗ್ಲಿಷ್ ಶಾಲೆಗಳಿಗೆ ಏಕೆ ಹೋಗುತ್ತಾರೆಂಬುದನ್ನು ಅರ್ಥ ಮಾಡಿಕೊಳ್ಳಿ, ಅದು ಗುಮ್ಮನೆಂದು ಗೊತ್ತಿದ್ದೂ ಅನಿವಾರ್ಯವಾಗಿ ಅದರ ಜೊತೆ ಬದುಕುತ್ತಿದ್ದೇವೆ, ಹಿಂದಿಯೊಡನೆ ಆ ಬಾಳಾಟದ ಅಗತ್ಯ ನಮಗಿಲ್ಲ.  ಅಥವಾ ಬೇಡ, ಇಂಗ್ಲಿಷಿನ ಜಾಗೆಯಲ್ಲಿ ಹಿಂದಿಯೇ ಬಂದು ಕೂರಲಿ, ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿ ಹಿಂದೀ ಶಾಲೆಗಳನ್ನೇ ತೆರೆಯಿರಿ (ಮೇಲ್ಕಂಡ ನಾಲ್ಕೂ ಶರತ್ತುಗಳನ್ನೂ ಪೂರೈಸುವುದಾದರೆ).  ಕುವೆಂಪು ಇಂಗ್ಲಿಷನ್ನು ಕನ್ನಡದ ಮಕ್ಕಳ ಪಾಲಿನ ಪೂತನಿಯೆಂದು ಕರೆದರು.  ಇರಲಿ, ನಾವು ಉಣಬೇಕಾದ್ದು ಪೂತನಿಯ ಮೊಲೆವಾಲನ್ನೇ ಎಂದು ಖಾತ್ರಿಯಿದ್ದ ಮೇಲೆ ನಮಗೆ ಇಂಗ್ಲಿಷ್ ಪೂತನಿಯ ಹಾಲಾದರೇನು ಹಿಂದೀ ಪೂತನಿಯ ಹಾಲಾದರೇನು?  ಹೇಳಿ, ಇಂಗ್ಲಿಷ್ ಕೊಡುವುದಷ್ಟನ್ನೂ ಹಿಂದಿಯಿಂದ ಕೊಡಿಸುವಿರಾ?  ಸತ್ಯವಾದ ಮಾತು ಏನೆಂದು ಗೊತ್ತೇ?  ಇಂಗ್ಲಿಷಿನ ಪೂತನಿ ವಿಷದ ಹಾಲೂಡಿ ಕೊಲ್ಲುತ್ತಾಳೆ.  ಆದರೆ ಈಕೆಯಿದ್ದಾಳಲ್ಲ, ಅವಳ ಬಳಿ ಊಡಲು ಹಾಲೇ ಇಲ್ಲ, ಅಸಲಿಗೆ ಮೊಲೆಯೇ ಇಲ್ಲ.  ಬದಲಿಗೆ ಮಕ್ಕಳನ್ನು ಹರಿದು ತಿನ್ನುವ ಬಾಯಷ್ಟೇ ಇರುವುದು. ಈಕೆಯನ್ನು ತಾಟಕಿಯೆನ್ನುವುದೇ ಸರಿಯೇನೋ.  ಇರಲಿ, ನಾನು ಹಾಗೆನ್ನಲಾರೆ, ಏಕೆಂದರೆ ನನಗೆ ಇಂಗ್ಲಿಷಿನ ಬಗೆಗಾಗಲೀ ಹಿಂದೀ ಬಗೆಗಾಗಲೀ ದ್ವೇಷವಿಲ್ಲ.  ಅದನ್ನು ಮುಂದೊತ್ತಿ ಬೇಳೆ ಬೇಯಿಸಿಕೊಳ್ಳುವವರು ಮಾಡುವ ಉಪದ್ವ್ಯಾಪಗಳಿಗೆ ಭಾಷೆಯನ್ನೇಕೆ ದೂರುವುದು.  ಅಲಂಕಾರದ ಮಾತು ಬೇಡ, ನೇರವಾದ ಮಾತಿನಲ್ಲಿ ಹೇಳುತ್ತೇನೆ.  ಜನ ಉತ್ತಮ ಉದ್ಯೋಗಾವಕಾಶಗಳಿಗಾಗಿ ಇಂಗ್ಲಿಷ್ ಕಲಿಯುತ್ತಾರೆಯೇ ಹೊರತು ಯಾವುದೋ ಹೇರಿಕೆಯಿಂದಲ್ಲ (ಕನ್ನಡಕ್ಕೆ ಸದ್ಯದಲ್ಲಿ ಆ ಶಕ್ತಿಯಿಲ್ಲ ಎನ್ನುವುದೇ ನಮ್ಮ ಅಳಲಾಗಿದೆ - ಅದು ಕನ್ನಡದ ನಿಶ್ಶಕ್ತಿಯಲ್ಲ, ಕನ್ನಡಿಗರ ಅಸಹಾಯಕತೆ ಸದ್ಯಕ್ಕೆ), ಆದರೆ ಏನು ಕಂಡು ಜನ ಹಿಂದೀ ಕಲಿಯಲು ಹೋಗಬೇಕು?  ಬದಲಿಗೆ ಹಿಂದೀ ಮಂದಿಯೇ ನಮ್ಮಲ್ಲಿಗೆ ಬಂದು ನಮ್ಮ ಉದ್ಯೋಗಾವಕಾಶಗಳನ್ನು ಕಬಳಿಸುತ್ತಿದ್ದಾರೆ!  ಆ ಅವಕಾಶಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ನಾವು ಹಿಂದೀ ಕಲಿತು ಅವರೊಡನೆ ಪೈಪೋಟಿ ಮಾಡಬೇಕೇನು? ಕಲಿಯುವುದಾದರೆ, ನಮ್ಮೊಡನೆ ಬದುಕಿ ಬಾಳಲು ಅವರು ಕನ್ನಡ ಕಲಿಯಬೇಕು.  ಅವರ "ಭಯ್ಯಾ, ಏಕ್ ಮಸಾಲಾ ಡೋಸಾ ದೇನಾ, ಏಕ್ ಈಡ್ಲೀ ಔರ್ ವಡಾ ದೇನಾ"ಗಳನ್ನು ಅರಿತು ಅವರ ಸೇವೆ ಮಾಡುವುದಕ್ಕೋಸ್ಕರ ನಾವೇಕೆ ಹಿಂದೀ ಕಲಿಯಬೇಕು?

ಈಗ ಇಂಗ್ಲಿಷ್ ಅಷ್ಟೊಂದು ಪ್ರತಿರೋಧವಿಲ್ಲದೇ ಇಲ್ಲೇಕೆ ನೆಲೆಯೂರಿತು, ಹಿಂದಿಗೇಕೆ ಪ್ರತಿರೋಧ ಎಂಬುದನ್ನಷ್ಟು ವಿವರಿಸುತ್ತೇನೆ.  ಇಂಗ್ಲಿಷರ ಬರುವಿಕೆಗೆ ಮುಂದೆ ನಾವು ನಮ್ಮಷ್ಟಕ್ಕೆ ನಮ್ಮ ಕಸುಬು ಮಾಡಿಕೊಂಡಿದ್ದೆವು, ಹೌದಲ್ಲೋ?  ಆಮೇಲೆ ಇಂಗ್ಲಿಷರು ಬಂದರು, ನಿಧಾನಕ್ಕೆ ನೆಲೆಯೂರಿದರು.  ಬಂದವರೇನು ಹಿಂದಿಯವರಂತೆ "ರಾಷ್ಟ್ರೀಯತೆ"ಯ ಸೋಗಿನಲ್ಲಿ ಕನ್ನಡವನ್ನು ಬೀಳುಗಳೆಯುವ ಅವಿವೇಕ ಮಾಡಲಿಲ್ಲ.  ಅವರ ಉದ್ದೇಶ ಎರಡು - ಒಂದು ಇಲ್ಲಿ ತಳವೂರಿ ಆಡಳಿತ ನಡೆಸುವುದು, ಇನ್ನೊಂದು, ಕ್ರೈಸ್ತಧರ್ಮವನ್ನು ಹರಡುವುದು.  ಈ ಕೆಲಸ ಸುಸೂತ್ರವಾಗಿ ಆಗಬೇಕೆಂದರೆ ಇಲ್ಲಿಯ ಭಾಷೆ ಕಲಿಯುವುದರ ಅಗತ್ಯ ಮನಗಂಡರು, ದೇಶಭಾಷೆಗಳನ್ನು ಕಲಿತರು.  ಅನೇಕ ಆಂಗ್ಲಮಹನೀಯರು ದೇಶೀಯ ನುಡಿಗಳಿಗೆ ಸಲ್ಲಿಸಿದ ಕೊಡುಗೆ ಅಪಾರ (ಅದರಿಂದ ಅವರು ಮಾಡಿದ ಹಾನಿಯೂ ಅಪಾರ, ಇರಲಿ, ಅದಕ್ಕೇ ಕುವೆಂಪು ಇಂಗ್ಲಿಷನ್ನು ನಮ್ಮ ಪಾಲಿನ ಪೂತನಿ ಎಂದದ್ದು).  ಇದೊಂದು ಹಂತ.  ತಮ್ಮ ಆಡಳಿತ ವ್ಯಾಪಾರ ವಹಿವಾಟು ನಡೆಸಬೇಕಾದರೆ ಅವರಿಗೆ ನಿಷ್ಠೆಯಿಂದಿದ್ದು ಅವರೊಡನೆ ಅವರದೇ ಭಾಷೆಯಲ್ಲಿ ಸಂವಹನ ನಡೆಸುವ, ಅವರ ಲೆಕ್ಕ ವ್ಯವಹಾರ ಆಡಳಿತವನ್ನು ನೋಡಿಕೊಳ್ಳುವ ಕೆಲಸಗಾರರ ಸೈನ್ಯ ಅವರಿಗೆ ಅಗತ್ಯವಿತ್ತು (ಹಾಗೆಯೇ ಜನರ ತಲೆ ತಿರುಗಿಸಿ, ಇಲ್ಲಿನದೆಲ್ಲ ಕೀಳು ಎಂಬ ಭಾವನೆಯನ್ನು ಬಿತ್ತಿ, ಮತಾಂತರ ಮಾಡುವ ಅಗತ್ಯ ಕೂಡ).  ಅದಕ್ಕಾಗಿ ಅವರು ಇಂಗ್ಲಿಷ್ ಶಾಲೆಗಳನ್ನು ತೆರೆದರು, ಇಂಗ್ಲಿಷ್ ಕಲಿಸಿ ತಮಗೆ ಬೇಕಾದ ಕಾರಕೂನರ ಪಡೆಯನ್ನು ತಯಾರಿಸಿಕೊಳ್ಳತೊಡಗಿದರು, ಅವರು ಕೊಡುವುದು ಒಳ್ಳೆಯ 'ಕೆಲಸ' ಎಂದು ಪರಿಗಣಿತವಾಯಿತು, ಒಳ್ಳೆಯ ಕೆಲಸ, ಕೈತುಂಬಾ ಸಂಬಳ.  ಜನ ತಾವಾಗೇ ದೇಸೀ ಕಸುಬುಗಳನ್ನು ಬಿಟ್ಟು ಕೆಲಸ-ಹಣ ಸಿಗುವೆಡೆಗೆ ದೌಡಾಯಿಸತೊಡಗಿದರು.  ಹೀಗೆ ಸರ್ಕಾರೀ ಕೆಲಸವೆಂಬುದು ಪ್ರತಿಷ್ಠೆಯ ಮಾತಾಗತೊಡಗಿತು.  ಕೊನೆಗೆ ಇಂಗ್ಲಿಷರು ದೇಶ ಬಿಟ್ಟು ಹೋಗುವ ಹೊತ್ತಿಗೆ ಸರ್ಕಾರೀ ಕೆಲಸವೆನ್ನುವುದು ಬಹುಜನರ ಬಹುದೊಡ್ಡ ಕನಸಾಗಿತ್ತು.  ಅವರೇನೋ ಹೋದರು, ಪ್ರಜಾಪ್ರಭುವಿನ ಕೈಗೆ ಆಡಳಿತ ಬಂದಮೇಲೆ ಆಡಳಿತದ ಭಾಷೆಯೂ ನಮ್ಮನಮ್ಮ ಭಾಷೆಯಾಗಬೇಕಿತ್ತಷ್ಟೇ?  ಆದರೆ ಭಾರತದಂತಹ ಅಗಾಧ ದೇಶ ಶತಮಾನಗಳ ಕಾಲ ಇಂಗ್ಲಿಷರ ಆಡಳಿತದಲ್ಲಿದ್ದಾಗ ಸಹಜವಾಗಿಯೇ ಇಂಗ್ಲಿಷ್ ಆಡಳಿತಭಾಷೆಯಾಗಿತ್ತು.  ಮತ್ತು ಇಡೀ ದೇಶ ಇಂಗ್ಲಿಷರ ಆಡಳಿತದಲ್ಲಿದ್ದುದರಿಂದ ಬಹುಸುಲಭವಾಗಿ ಇಂಗ್ಲಿಷ್ ಸಂಪರ್ಕಭಾಷೆಯೂ ಆಗಿತ್ತು.  ಅವರನಂತರ ಬಂದ ಭಾರತೀಯ ಆಡಳಿತಗಾರರೂ ಬಂದರು.  ಆಡಳಿತಗಾರರು ರಾತ್ರೋರಾತ್ರೆ ಬದಲಾಗಬಹುದು, ಆದರೆ ಶತಮಾನಗಳಿಂದ ಬಂದ ವ್ಯವಸ್ಥೆ ರಾತ್ರೋರಾತ್ರೆ ಬದಲಾಗುವುದಿಲ್ಲವಷ್ಟೇ?  ಕಾರಣವೂ ಇಲ್ಲದ ಬದಲಾವಣೆಯಾದರೂ ಏಕೆ ಬೇಕು.  ಹೊಸ ಆಡಳಿತಗಾರರೂ ಇಂಗ್ಲಿಷ್ ಬಲ್ಲವರೇ ಆದ್ದರಿಂದ ರಾಜ್ಯರಾಜ್ಯಗಳ ನಡುವಣ ಸಂವಹನಕ್ಕೆ ಈಗಾಗಲೇ ಸಂಪರ್ಕಭಾಷೆಯಾಗಿ ಭದ್ರವಾಗಿ ನೆಲೆಯೂರಿದ್ದ ಇಂಗ್ಲಿಷೇ ಮುಂದುವರೆಯಬೇಕಾದ್ದು ಸರಳ, ಸಹಜ ಹಾಗೂ ವಿವೇಕದ ಮಾರ್ಗ.  ಅಲ್ಲದೇ ಆಮೇಲೆ ಅಭಿವೃದ್ಧಿಯಾದ ವ್ಯಾಪಾರ ವ್ಯವಹಾರಗಳೆಲ್ಲಾ ಈಗಾಗಲೇ ಬಲವಾಗಿ ಬೇರೂರಿದ್ದ ಇಂಗ್ಲಿಷಿನಲ್ಲಿ ಸರಾಗವಾಗಿ ನಡೆಯುತ್ತಿತ್ತು. ಪ್ರಪಂಚದ ಹಲವು ದೇಶಗಳಲ್ಲಿ ಕಾಲನಿಗಳನ್ನು ಹೊಂದಿದ್ದ ಇಂಗ್ಲಿಷ್ ಸಹಜವಾಗಿಯೇ ಅಂತಾರಾಷ್ಟ್ರೀಯ ಭಾಷೆಯಾಗಿ ಸಹ ಬೆಳೆದಿತ್ತು.  ಹೊರರಾಷ್ಟ್ರಗಳ ಕಂಪನಿಗಳೂ ಇಲ್ಲಿಗೆ ಕಾಲಿಟ್ಟಮೇಲಂತೂ  ಇಂಗ್ಲಿಷ್ ಇದ್ದುದರಿಂದ ವ್ಯವಹಾರ ಸಲೀಸಾಯಿತು.  ಯಾರೂ ಇದು ಬೇಡ ಎನ್ನಲಿಲ್ಲ, ಎನ್ನುವಂತೆಯೂ ಇರಲಿಲ್ಲ - ಇಂಗ್ಲಿಷನ್ನು ಬೇಡವೆಂದು ಅವಕಾಶದಿಂದ ಯಾರು ವಂಚಿತರಾಗುತ್ತಾರೆ?  ಹೀಗೆ ಇಂಗ್ಲಿಷ್ ಆಡಳಿತ ಕೊಡಮಾಡಿದ ಅವಕಾಶಗಳು, ಅದರಿಂದ ಇಂಗ್ಲಿಷಿಗೆ ಸಿಕ್ಕ ವಿಪರೀತಪ್ರಾಮಖ್ಯ ದೇಶಭಾಷೆಗಳ ಕತ್ತು ಹಿಸುಕತೊಡಗಿತೇ ಹೊರತು, ಇಲ್ಲಿನ ಭಾಷೆಗಳ ಕತ್ತು ಹಿಸುಕಿ ಯಾರೂ ಇಂಗ್ಲಿಷನ್ನು ಹೇರಿದ್ದಲ್ಲ.  ಆದ್ದರಿಂದ ಈಗಾಗಲೇ ದೇಶದಾದ್ಯಂತ ಸಂಪರ್ಕಭಾಷೆಯಾಗಿ ಇಂಗ್ಲಿಷ್ ಬೆಳೆದು ಬಂದಿದೆಯೆಂಬ ವಾಸ್ತವವನ್ನೊಪ್ಪಿ, ಕೇವಲ ಸರ್ಕಾರ ಮತ್ತು ಜನಸಾಮಾನ್ಯನ ನಡುವಣ ಸಂವಹನಕ್ಕಷ್ಟೇ ಆಯಾ ದೇಶಭಾಷೆಯನ್ನು ಬಳಸತೊಡಗಿದ್ದರೆ ಬದುಕು ಎಷ್ಟೋ ಹಸನಾಗುತ್ತಿತ್ತು - ಆಗ ಹೇಗಿರುತ್ತಿತ್ತು?  ಸರ್ಕಾರ ಕನ್ನಡಿಗನೊಡನೆ ಕನ್ನಡದಲ್ಲಿ, ತಮಿಳನೊಡನೆ ತಮಿಳಿನಲ್ಲಿ, ಹಿಂದಿಯವನೊಡನೆ ಹಿಂದಿಯಲ್ಲಿ ಮಾತಾಡುತ್ತಿತ್ತು, ಬೇರೆಬೇರೆ ಭಾಷೆಯ ರಾಜ್ಯಗಳು ಪರಸ್ಪರರೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದುವು, ಹಿಂದೀ ರಾಜ್ಯಗಳು ಪರಸ್ಪರ ಹಿಂದಿಯಲ್ಲಿ ಮಾತಾಡುತ್ತಿದ್ದುವು, ಕೇಂದ್ರಸರ್ಕಾರ ರಾಜ್ಯಸರ್ಕಾರಗಳೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿತ್ತು - ಹಿಂದಿಗೆ ಇತರ ಭಾಷೆಗಳಂತೆಯೇ ಅದಕ್ಕೆ ಸಲ್ಲಬೇಕಾದಷ್ಟೇ ಪ್ರಾಮುಖ್ಯ ಸಲ್ಲುತ್ತಿತ್ತು.  ಆದರೆ ನಮ್ಮ ರಾಷ್ಟ್ರನಾಯಕರ ತಲೆ ಹೊಕ್ಕಿದ್ದ ಹಿಂದೀಪಾರಮ್ಯದ ಭೂತ ಈ ವಿವೇಕಕ್ಕೆ ಕಿವಿಗೊಡಬೇಕಲ್ಲ.  ಹಿಂದಿಗೆ 'ರಾಷ್ಟ್ರೀಯತೆ'ಯ ಮೊಗವಾಡ ತೊಡಿಸಿದರು.  ಜನಸಾಮಾನ್ಯರ ಅನುಕೂಲಕ್ಕಾಗಿ ಇಂಗ್ಲಿಷಿನ ಜಾಗದಲ್ಲಿ ದೇಶಭಾಷೆಗಳನ್ನು ಬಲಪಡಿಸುವ ಬದಲು ಈಗಾಗಲೇ ಬೇರೂರಿದ್ದ ಇಂಗ್ಲಿಷನ್ನು ಕಿತ್ತು ಹಾಕಿ ಹಿಂದಿಯನ್ನು ಕೃತಕವಾಗಿ ತಂದಿಕ್ಕುವ ಅವಿವೇಕದ ಕೆಲಸಕ್ಕೆ ಕೈ ಹಾಕಿದರು.  ಬೀಜ ನೆಟ್ಟು ಸಸಿ ಬೆಳೆಸಿ ಮರವಾಗಿಸಬಹುದು, ಮರವನ್ನೇ ಕಿತ್ತೊಗೆದು ಆ ಜಾಗದಲ್ಲಿ ಇನ್ನೊಂದು ಮರ ನೆಡಲಾಗುತ್ತದೆಯೇ ಸ್ವಾಮಿ?

ಕನ್ನಡದ ಒಗ್ಗಟ್ಟನ್ನು ಒಡೆಯಲು ಹಿಂದೀವಾಲಾಗಳು ಇನ್ನೊಂದು ಅಸಹ್ಯಕೆಲಸ ಮಾಡುತ್ತಿದ್ದಾರೆ.  ಕನ್ನಡದ ಸೋದರಭಾಷೆಗಳಾದ ತುಳು ಕೊಡವ ಇತ್ಯಾದಿಗಳನ್ನು ಎತ್ತಿಕಟ್ಟುವುದು - "ಹಿಂದೀ ಹೇರಿಕೆ ಎನ್ನುತ್ತೀರಲ್ಲ, ಕನ್ನಡದ್ದೂ ಹೇರಿಕೆಯಾಗುತ್ತಿಲ್ಲವೋ" ಎಂಬ ರೀತಿಯ ವಿತಂಡವಾದಗಳನ್ನು ಹರಿಯಬಿಡುವುದು.  ಇದನ್ನೂ ಇಲ್ಲೇ ಉತ್ತರಿಸಿಬಿಡುವುದು ಸೂಕ್ತ.  ಈ ಕನ್ನಡದ ಸೋದರಭಾಷೆಯ ಸಮುದಾಯಗಳ ಬಗೆಗೆ, ಆಯಾ ಪ್ರದೇಶಗಳ ಬಗೆಗೆ ಕರ್ನಾಟಕದ ಆಡಳಿತಗಳು ಕಾಲದಿಂದಲೂ ಅವಜ್ಞೆ ತೋರಿಕೊಂಡೇ ಬಂದಿರುವುದು ಸತ್ಯವೇ - ಇದನ್ನು ಕೇವಲ ತುಳುವರು ಕೊಡವರಲ್ಲ, ಕನ್ನಡಿಗರೆಲ್ಲರೂ ಕೂಡಿಯೇ ಪ್ರತಿಭಟಿಸಬೇಕಾದ್ದು.  ಆದರೆ ಭಾಷೆಯ ವಿಷಯಕ್ಕೆ ಬಂದರೆ, ಕನ್ನಡವು ಹಿಂದಿಯಂತೆ ಖಿಚಡಿ ಭಾಷೆಯೂ ಅಲ್ಲ, ತುಳು ಕೊಡವ ಪ್ರದೇಶಗಳಲ್ಲಿ ಈಗಾಗಲೇ ಇರುವ ಬಳಕೆಗಳನ್ನು ಕಿತ್ತುಹಾಕಿ ಹಿಂದಿಯಂತೆ ಆಡಳಿತಗಳು ಕನ್ನಡವನ್ನು ಈ ಪ್ರದೇಶಗಳಲ್ಲಿ ಹೊಸದಾಗಿ ಮುಂದೊತ್ತಿಯೂ ಇಲ್ಲ.  ಈಗ ಹೇಗಿದೆಯೋ ಆ ಭಾಷಾವ್ಯವಸ್ಥೆ ಕಾಲದಿಂದ ಇದ್ದೇ ಇದೆ.  ಇನ್ನು ಉದ್ಯೋಗಾವಕಾಶಗಳಲ್ಲಿ ಕನ್ನಡ ಬರುವುದಿಲ್ಲವೆಂಬ ಕಾರಣಕ್ಕೆ ತುಳು/ಕೊಡವರು ವಂಚಿತರಾಗುವ ಕಾರಣವೂ ಇಲ್ಲ - ಅಷ್ಟೇಕೆ, ಮೈಸೂರಿನ ಭಾಗದಲ್ಲಿ ತುಳುವರು, ಹುಬ್ಳಿ ಧಾರವಾಡದ ಕಡೆಯವರೂ, ಆಕಡೆಯಲ್ಲಿ ಇಲ್ಲಿಯವರು ಧಾರಾಳವಾಗಿ ಕಾಣಸಿಗುತ್ತಾರೆ, ಮತ್ತು ಆಯಾ ಸ್ಥಳೀಯರೊಂದಿಗೆ ಹಾಲುಸಕ್ಕರೆಯಂತೆ ಬೆರೆತುಕೊಂಡೇ ಇದ್ದಾರೆ.  ಇನ್ನೂ ತುಳುನಾಡು ಕನ್ನಡಕ್ಕೆ ನೀಡಿರುವ ಸಾಹಿತಿಪ್ರತಿಭೆಗಳು ಕಡಿಮೆಯೇನಲ್ಲ - ಸೇಡಿಯಾಪು, ಗೋವಿಂದಪೈ, ಮಂಗೇಶರಾಯರು, ಕೈಯ್ಯಾರ, ಇವರಾರಿಗೂ ತುಳು/ಕೊಡವ ಅಸ್ಮಿತೆಗಳು ತಮ್ಮ ಕನ್ನಡ ಅಸ್ಮಿತೆಯೊಡನೆ ಪೈಪೋಟಿ ನಡೆಸಿವೆಯೆಂದು ಅನ್ನಿಸಿದ್ದೇ ಅಲ್ಲ.

ಹುನ್ನಾರಗಳು ಎಲ್ಲಿವೆಯೆಂದು ಅರ್ಥವಾಯಿತಲ್ಲ.  ಒಮ್ಮೆ ಕನ್ನಡದ ಸದ್ದಡಗಿ, ಹಿಂದಿಯ ದಾರಿ ಸುಗಮವಾಗಿಬಿಡಲಿ, ಆಗ ನೋಡಿ, ಈ ಇಂಗ್ಲಿಷ್ ಗುಮ್ಮ, ಕನ್ನಡವು ಸೋದರಭಾಷೆಗಳ ಮೇಲೆ ನಡೆಸುವ 'ದೌರ್ಜನ್ಯ' ಎಲ್ಲ ಕೂಗುಗಳೂ ನಿಂತೇ ಹೋಗುತ್ತವೆ.  ಅಲ್ಲಿಗೆ ನಿಜವಾದ ಕಳಕಳಿಯೇನು ಹೇಳಿ ಸ್ವಾಮಿ? ತಮ್ಮ ಕನ್ನಡಪ್ರೇಮ, ಇಂಗ್ಲಿಷಿನ ವಿರುದ್ಧದ ಕಳಕಳಿ ಇದಾವುದರ ಬಗೆಗೂ ಯಾವ ಅನುಮಾನವೂ ಇಲ್ಲ.  ಆದರೆ ಸ್ವಾತಂತ್ರ್ಯ ಬಂದಂದಿನಿಂದ ಉತ್ತರದ ಹಿಂದೀವಾಲಾಗಳು ದಕ್ಷಿಣವನ್ನು ಹಣಿಯಲು, ಹಿಂದಿಯ ಆಧಿಪತ್ಯ ಸ್ಥಾಪಿಸಲು ಏನೇನು ಮಾಡುತ್ತಿವೆಯೆಂಬುದು ನಿಮಗೆ ತಿಳಿಯದಿಲ್ಲ, ತಾವೇ ಸ್ವತಃ ಚಳುವಳಿಗಳಲ್ಲಿ ಭಾಗವಹಿಸಿದವರು, ದಶಕಗಳ ಇತಿಹಾಸವಿರುವ ಕನ್ನಡಚಳುವಳಿಯ ಸ್ವರೂಪವನ್ನು ಅರಿತವರು - ಏನೂ ತಿಳಿಯದವರಂತೆ ಮಾತಾಡಬೇಡಿ, ಯಾರುಯಾರೋ ದುರುದ್ದೇಶಪೂರಿತವಾಗಿ ಹರಿಯಬಿಟ್ಟಿರುವ ಸುಳ್ಳುಗಳನ್ನು ವಿತಂಡವಾದಗಳನ್ನು ಸಮರ್ಥಿಸಬೇಡಿ.  ಸಮ್ಮೇಳನಾಧ್ಯಕ್ಷಪೀಠವೆಂಬುದು ಕನ್ನಡಿಗರ ಅಸ್ಮಿತೆ ಅಭಿಮಾನಗಳ ಪ್ರತೀಕ - ಯಾರೋ ದೊರೆಮಗ ತಟ್ಟೆಯಲ್ಲಿಟ್ಟು ಕೊಟ್ಟ ತಾಂಬೂಲವಲ್ಲ.  ಸಮ್ಮೇಳನದ ಅಧ್ಯಕ್ಷರು ಸಮಸ್ತಕನ್ನಡಿಗರ ಮುಖವಾಣಿ, ಯಾವುದೋ ಒಡ್ಡೋಲಗದ ವಂದಿಮಾಗಧರಲ್ಲ.  ಕನ್ನಡದ ಹಿತಾಸಕ್ತಿಗೆ ಮಾರಕವಾದ ನಿಲುವು ತಳೆದಿರುವ ದೊಡ್ಡರಂಗೇಗೌಡರು ಅಧ್ಯಕ್ಷಸ್ಥಾನವನ್ನು ತಿರಸ್ಕರಿಸಬೇಕೆಂದು ಹಲವರು ಹೇಳುತ್ತಾರೆ, ಅದು ಎಷ್ಟುಮಾತ್ರಕ್ಕೂ ಸರಿಯಲ್ಲ.  ನೀವಾಡಿದ ಮಾತುಗಳನ್ನು, ಅದರಿಂದಾದ ಘಾತವನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ, ಮತ್ತು ಅದು ಸಮ್ಮೇಳನದ ಅಧ್ಯಕ್ಷಪೀಠದಿಂದ ಮಾತ್ರ ಸಾಧ್ಯ.  ನೀವು "ಯಾವ ಹೇರಿಕೆಯನ್ನೂ ಸಮರ್ಥಿಸುವುದಿಲ್ಲ, ಕನ್ನಡವೇ ಶ್ರೇಷ್ಠ, ಇಂಗ್ಲಿಷ್ ಗುಮ್ಮ" ಎಂದುಬಿಟ್ಟ ಮಾತ್ರಕ್ಕೆ ಹಿಂದಿ ರಾಷ್ಟ್ರಭಾಷೆ ಎಂಬ ನಿಮ್ಮ ನಿಲುವು ಬದಲಾಯಿತೇ?  ನೀವು ಹಿರಿಯರು, ಕ್ಷಮೆಯಾಚಿಸಬೇಕಿಲ್ಲ (ಗಟ್ಟಿ ನಿಲುವು ನಿರ್ಧಾರಗಳಿಲ್ಲದ ಖಾಲಿ ಕ್ಷಮಾಯಾಚನೆಯಿಂದ ಪ್ರಯೋಜನವೂ ಇಲ್ಲ).  ಆಗಿರುವ ಅನಾಹುತವನ್ನು ಸರಿಪಡಿಸುವ ಅವಕಾಶ ನಿಮ್ಮ ಕೈಲಿದೆ.  ಹಿಂದೀ ರಾಷ್ಟ್ರಭಾಷೆಯೆಂಬ ಈ ರಾಷ್ಟ್ರೀಯ ಸುಳ್ಳನ್ನು ಮುಕ್ತಕಂಠದಿಂದ ಖಂಡಿಸಿ, ಕನ್ನಡದ ನೆಲ-ಜಲ-ಅಧಿಕಾರಗಳಲ್ಲಿ ಹಿಂದಿಯ ಬಾಲವನ್ನು ತೂರಿಸದೇ ತೆಪ್ಪಗಿರಬೇಕೆಂದು ಕೇಂದ್ರದ ಹಿಂದೀ ಆಡಳಿತಗಳಿಗೆ, ಅಧಿಕಾರಸ್ಥರಿಗೆ, ರಾಜಕಾರಣಿಗಳಿಗೆ ಅಧ್ಯಕ್ಷಪೀಠದಿಂದ ಖಡಕ್ ಸಂದೇಶ ಕೊಡಿ - ನಿಮ್ಮ ಮೇಲಿನ ಗೌರವ ನೂರ್ಮಡಿಯಾಗುತ್ತದೆ.

Tuesday, January 5, 2021

ಲಲಿತವೃತ್ತ - ಪರಿಚಯ


ನಾಗಚಂದ್ರನ ರಾಮಚಂದ್ರಚರಿತಪುರಾಣದಿಂದ ಈ ಸುಂದರವಾದ ಪದ್ಯವನ್ನು ಇಂದು ಬೆಳಗ್ಗೆ, ಮಿತ್ರರಾದ Nanjunda Bomlapura ನೆನಪಿಸಿದರು.  ಈ ಪದ್ಯದ ಛಂದಸ್ಸು "ಲಲಿತವೃತ್ತ".  ಈ ವೃತ್ತವೇ ಅಪರೂಪದ್ದು, ಅದರಲ್ಲೂ ಇಲ್ಲಿ ಕಾಣಿಸಿದ ಪದ್ಯ ಇನ್ನೂ ಅಪರೂಪದ್ದು - ಏಕೆಂದು ವಿವರಿಸುತ್ತೇನೆ:

ಮೊದಲನೆಯದಾಗಿ ಈ ವೃತ್ತವು ಬಹುದೀರ್ಘವಾದ ಪಾದಗಳನ್ನು ಹೊಂದಿದ್ದು ಬಳಕೆಗೆ ತೊಡಕೆನಿಸಬಹುದಾದ್ದರಿಂದಲೋ ಏನೋ, ಕವಿಗಳಲ್ಲಿ ಇದರ ಬಳಕೆ ಕಡಿಮೆ.  ಆದರೆ ಬಹುಸುಂದರವಾದ ಲಯವಿನ್ಯಾಸವನ್ನು ಹೊಂದಿದೆಯಾದ್ದರಿಂದ ಕವಿಗಳು ಅಪರೂಪಕ್ಕೆ ಇದನ್ನು, ಏಕತಾನವನ್ನು ಮುರಿಯುವುದಕ್ಕೋಸ್ಕರ, ಬಳಸುತ್ತಾರೆ.  ಉದಾಹರಣೆಗೆ ರುದ್ರಭಟ್ಟನ ಜಗನ್ನಾಥವಿಜಯಕಾವ್ಯದಿಂದ ಈ ಪದ್ಯವನ್ನು ನೋಡಬಹುದು:

ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ
ರಸ್ಥಲಪರಿಸ್ಫುರಿತಕೌಸ್ತುಭವಿಭೂಷಣರುಚಿಸ್ತಬಕಿತಾಖಿಳನಭಂ ದಿವಿಜಕಾಂತಾ
ಹಸ್ತಚಮರಾನಿಳಮುಹುಸ್ತರಳಿತಪ್ರಥಿತವಸ್ತುಚಯಕುಂಡಲವಿಮಂಡಿತಕಪೋಲಂ
ಧ್ವಸ್ತದಿತಿಜಂ ನತನಮಸ್ತವಿಬುಧಂ ಭುವನವಿಸ್ತರಣಪಾದನೆಸೆದಂ ಫಣಿಪತಲ್ಪಂ (1-50)

ಇದನ್ನು ಹೀಗೆ ಓದಿದರೆ, ಅರ್ಥವಾಗುವುದಿರಲಿ, ಅದರ ಲಯಸೌಂದರ್ಯವೂ ದಕ್ಕುವುದಿಲ್ಲ.  ಇದನ್ನು ಸ್ವಲ್ಪ ವಿಶ್ಲೇಷಿಸಿ, ಹೇಗೆ ಓದಬಹುದೆಂಬುದನ್ನೂ ನೋಡೋಣ.  

[ಲಯ ಮಾತ್ರೆ ಗಣ ಮೊದಲಾದ ವಿಷಯಗಳ ಪರಿಚಯವಿಲ್ಲದವರಿಗಾಗಿ ಇಲ್ಲೊಂದಷ್ಟು ಸಂಕ್ಷಿಪ್ತ ವಿವರಣೆಯಿದೆ, ತಿಳಿದವರು ಇದನ್ನು ದಾಟಿಕೊಂಡು ಮುಂದುವರೆಯಬಹುದು:

ಮಾತ್ರಾಕಾಲ/ಮಾತ್ರೆ ಎಂದರೆ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲಾವಧಿ.

ಒಂದು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಲಘು ಎನ್ನುತ್ತಾರೆ, ಇದನ್ನು "U" ಎಂದು ಗುರುತಿಸುತ್ತಾರೆ.  ಹ್ರಸ್ವಾಕ್ಷರಗಳಾದ ಅ, ಇ, ಉ, ಕ, ಗಿ, ಯ ಇತ್ಯಾದಿಗಳು ಒಂದು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಲಘು ಅಕ್ಷರಗಳು.

ಮೇಲಿನದರ ಎರಡರಷ್ಟು, ಎಂದರೆ ಎರಡು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಗುರು ಎನ್ನುತ್ತಾರೆ, ಇದನ್ನು "-" ಎಂದು ಗುರುತಿಸುತ್ತಾರೆ.  ದೀರ್ಘಾಕ್ಷರಗಳಾದ ಆ, ಈ, ಊ, ಕಾ, ಗೀ, ಯಾ ಇತ್ಯಾದಿಗಳು ಎರಡು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಗುರು ಅಕ್ಷರಗಳು. 

ಪದ್ಯವೊಂದನ್ನು ಲಯಬದ್ಧವಾಗಿ ಓದುವಾಗ ಮೂರು ಮೂರು, ನಾಲ್ಕುನಾಲ್ಕು, ಐದೈದು (ಎರಡು+ಮೂರು), ಏಳೇಳು (ಮೂರು+ಎರಡು+ಎರಡು) ಹೀಗೆ ಅನೇಕ ಮಾತ್ರಾಕಾಲಗಳ ಲಯಗಳನ್ನು ಕಾಣಬಹುದು, ಉದಾಹರಣೆಗೆ, ತಕಿಟ (3), ತಝಂ (3), ತಕತಕ (4), ತಧೀಂತ (4), ತಕ ತಕಿಟ (5), ತಕ ಧೀಂತ (5), ತಕಿಟ ತಕ ತಕ (7), ತಝಂ ತಾ ತಕ (7) ಹೀಗೆ.  ಇವಕ್ಕೆ ಮಾತ್ರಾಗಣಗಳು ಎನ್ನುತ್ತಾರೆ.

ಮಾತ್ರಾಗಣಗಳಂತೆಯೇ ಪದ್ಯವನ್ನು ಮೂರುಮೂರು ಅಕ್ಷರಗಳ ಗುಂಪಾಗಿಯೂ ಮಾಡಬಹುದು.  ಉದಾಹರಣೆಗೆ "ಅವಳೇ ಬಂದಳು ಹೂವಿನಾ ನಗೆಯ ನಕ್ಕೆನ್ನತ್ತ ಕೈ ಚಾಚುತಾ"  ಈ ಸಾಲನ್ನು ನೋಡಿ.  ಇದನ್ನು ಮೂರು ಮೂರು ಅಕ್ಷರದ ಗುಂಪಾಗಿ ಮಾಡಿದರೆ "ಅವಳೇ | ಬಂದಳು | ಹೂವಿನಾ | ನಗೆಯ | ನಕ್ಕೆನ್ನ | ತ್ತ ಕೈ ಚಾ | ಚುತಾ" ಈ ಮೂರುಮೂರಕ್ಷರಗಳ ಗುಂಪನ್ನು ಗಮನಿಸಿದರೆ ಒಂದೊಂದು ಗುಂಪಿನ ಉಚ್ಚಾರಣೆಯ ಕಾಲಾವಧಿಯೂ ಬೇರೆಬೇರೆ ಇದೆ.  ಉದಾಹರಣೆಗೆ ಅವಳೇ ಎಂಬುದು ಹ್ರಸ್ವ, ಹ್ರಸ್ವ, ಮತ್ತು ದೀರ್ಘ (ಎಂದರೆ ಲಘು+ಲಘು+ಗುರು 1+1+2 = 4) ನಾಲ್ಕು ಮಾತ್ರೆಯ ಕಾಲ.  ಬಂದಳು ಎನ್ನುವುದು ಗುರು+ಲಘು+ಲಘು (2+1+1 = 4), ಇದೂ ನಾಲ್ಕು ಮಾತ್ರೆಯ ಕಾಲವೇ (ಮೇಲೆ ಮಾತ್ರಾಗಣದ ಲೆಕ್ಕದಲ್ಲಾದರೆ ಇವೆರಡೂ ಒಂದೇ ಎನ್ನಬಹುದಿತ್ತು), ಆದರೆ ಅವಳೇ ಎನ್ನುವುದಕ್ಕೂ ಬಂದಳು ಎನ್ನುವುದಕ್ಕೂ ಲಯದಲ್ಲಿ ವ್ಯತ್ಯಾಸವಿದೆ, ಅಕ್ಷರಗಣ ಈ ಲಯವಿನ್ಯಾಸವನ್ನೂ ಗಮನಕ್ಕೆ ತೆಗೆದುಕೊಳ್ಳುವುದರಿಂದ ಇಲ್ಲಿ ಅವಳೇ ಎನ್ನುವುದೂ ಬಂದಳು ಎನ್ನುವುದೂ ಬೇರೆಬೇರೆಯೆಂದೇ ನೋಡಬೇಕು.  ಹೀಗೆ ಮೇಲಿನ ಅಕ್ಷರಗಳ ಗುಂಪು ನೋಡಿದರೆ, ಎಲ್ಲವೂ ಮೂರಕ್ಷರಗಳೇ ಆದರೂ ಅವುಗಳ ಉಚ್ಚಾರಣೆಯ ಕಾಲಾವಧಿ ಬೇರೆ, ಮತ್ತು ಆ ಅಕ್ಷರಗಳಲ್ಲಿ ಲಘು-ಗುರು ಬಂದಿರುವ ಸ್ಥಾನಗಳೂ ಬೇರೆ.  ಹೀಗೆ ಬೇರೆಬೇರೆ ಲಯವಿನ್ಯಾಸವಿರುವ ಮೂರಕ್ಷರದ ಎಂಟು ಬಗೆಯ ವಿನ್ಯಾಸ ಸಾಧ್ಯ.  ಆ ಒಂದೊಂದು ವಿನ್ಯಾಸಕ್ಕೂ ಒಂದೊಂದು ಹೆಸರಿದೆ ಹೀಗೆ (ನೆನಪಿರಲಿ "U" ಎಂದರೆ ಲಘು, ಒಂದು ಮಾತ್ರೆ; "-" ಎಂದರೆ ಗುರು, ಎರಡು ಮಾತ್ರೆ)

U - - = ಯಗಣ (ಉದಾ: ಸುರೇಶಂ, ಗಣೇಶಂ)
- - - = ಮಗಣ (ಉದಾ: ಗೌರೀಶಂ, ದೇವೇಂದ್ರಂ)
- - U = ತಗಣ (ಉದಾ: ಗೌರೀಶ, ದೇವೇಂದ್ರ)
- U - = ರಗಣ (ಉದಾ: ಶಂಕರಂ, ಭಾಸ್ಕರಂ)
U - U = ಜಗಣ (ಉದಾ: ಸುರೇಶ, ಗಣೇಶ)
- U U = ಭಗಣ (ಉದಾ: ಶಂಕರ, ಭಾಸ್ಕರ)
U U U = ನಗಣ (ಉದಾ: ಸಲಿಗೆ, ಬೆಸುಗೆ)
U U - = ಸಗಣ (ಉದಾ: ಕಮಲಾ, ವಿಮಲಾ)

ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲುಸುಲಭ - ಅದಕ್ಕೇ ಒಂದು ಪ್ರಾಚೀನಸೂತ್ರವಿದೆ - "ಯಮಾತಾರಾಜಭಾನಸಲಗಂ".  ಇದರ ಪ್ರತಿಯೊಂದು ಅಕ್ಷರವನ್ನೂ ಹಿಡಿದು ಮೂರುಮೂರಾಗಿ ಗುಂಪು ಮಾಡುತ್ತಾ ಹೋದರೆ, ಯಮಾತಾ, ಮಾತಾರಾ, ತಾರಾಜ, ರಾಜಭಾ, ಜಭಾನ, ಭಾನಸ, ನಸಲ, ಸಲಗಂ ಎಂಬ ಬೇರೆಬೇರೆ ಮಾತ್ರಾಕಾಲದ ಗುಂಪುಗಳು ಸಿಗುತ್ತವೆ.  ಗಮನಿಸಿ, ಅದರ ವಿನ್ಯಾಸ ಮೇಲೆ ವಿವರಿಸಿದಂತೆಯೇ ಇದೆ.  ಮತ್ತು ಪ್ರತಿಯೊಂದು ಗುಂಪಿನ ಮೊದಲಕ್ಷರವೇ ಆ ಗಣದ ಹೆಸರು (ಯಮಾತಾ, ಯಗಣ U - -; ಮಾತಾರಾ, ಮಗಣ - - - ; ತಾರಾಜ, ತಗಣ - - U ಹೀಗೆ ಮೇಲಿನ ಪಟ್ಟಿಗೆ ಹೋಲಿಸುತ್ತಾ ಹೋಗಬಹುದು)

ಪದ್ಯಸೌಧವನ್ನು ಕಟ್ಟಲು ನಾವು ಬಳಸಬಹುದಾದ ಇಟ್ಟಿಗೆಗಳು ಎರಡು ರೀತಿಯವು - 

ಒಂದನೆಯದು - ಮೊದಲು ವಿವರಿಸಿದಂತೆ 3, 4, 5, 7 ಮಾತ್ರೆಗಳ ಮಾತ್ರಾಗಣಗಳನ್ನು ಬಳಸಿ ಪದ್ಯ ಕಟ್ಟ ಬಹುದು (ಇಲ್ಲಿ ಗಣವೊಂದರಲ್ಲಿ ಅಕ್ಷರ ಎಷ್ಟೇ ಇರಬಹುದು, ಮಾತ್ರಾಕಾಲ ಸರಿಯಿದ್ದರೆ ಆಯಿತು); ಮಾತ್ರಾಗಣಗಳನ್ನು ಬಳಸಿ ಕಟ್ಟಿದ ಛಂದಸ್ಸುಗಳನ್ನು ಮಾತ್ರಾಗಣ ಛಂದಸ್ಸುಗಳೆನ್ನುತ್ತಾರೆ.  ಇವಕ್ಕೆ ತಕಿಟ ತಕಿಟ, ತಕತಕಿಟ ತಾತಕಿಟ, ತಕಿಟ ತಕತಕ, ಇತ್ಯಾದಿ ನಿರ್ದಿಷ್ಟ ಲಯವಿರುತ್ತದೆ (ಷಟ್ಪದಿ, ಕಂದ, ರಗಳೆ ಮೊದಲಾದುವು ಈ ಜಾತಿಗೆ ಸೇರಿದುವು); 

ಅಥವಾ ಎರಡನೆಯದು - ಆಮೇಲೆ ವಿವರಿಸಿದಂತೆ ಮೂರು ಮೂರು ಅಕ್ಷರಗಳ (ಯಾವುದೇ ಮಾತ್ರಾಕಾಲದ) ಅಕ್ಷರಗಣಗಳನ್ನು ಬಳಸಿ ಕಟ್ಟಬಹುದು.   ಅಕ್ಷರಗಳನ್ನು ಬಳಸಿ ಕಟ್ಟಿದ ಪದ್ಯಗಳನ್ನು ಅಕ್ಷರಗಣದ ಛಂದಸ್ಸುಗಳು, ಅಥವಾ ವೃತ್ತಗಳು ಎನ್ನುತ್ತಾರೆ.  ಬೇರೆಬೇರೆ ಅಕ್ಷರಗಣಗಳ ಚಿತ್ರವಿಚಿತ್ರವಾದ ಸಂಯೋಜನೆಗಳಿಂದ ಬೇರೆಬೇರೆ ವೃತ್ತಗಳನ್ನು ಪಡೆಯಬಹುದು.  ಮೇಲಿನ ಮಾತ್ರಾಗಣದಂತೆ ಇವಕ್ಕೆ ಇಷ್ಟಿಷ್ಟೇ ಮಾತ್ರೆಗಳ ಒಂದೇ ಸಮನಾದ ಏಕತಾನದ ಲಯವಿರುವುದಿಲ್ಲ, ಬದಲಿಗೆ ವಿವಿಧ ಅಕ್ಷರಗಣಗಳ ಲಯಗಳು ಸೇರಿ ಆ ವೃತ್ತಕ್ಕೇ ವಿಶಿಷ್ಟವಾದ ಒಂದು ಲಯ ಉತ್ಪನ್ನವಾಗುತ್ತದೆ - ಉದಾಹರಣೆಗೆ "ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಂ" ಎನ್ನುವುದನ್ನೂ "ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ" ಎನ್ನುವುದನ್ನೂ ಜೋರಾಗಿ ಹೇಳಿಕೊಂಡು ನೋಡಿ.  ಎರಡೂ ಬೇರೆಬೇರೆ ಅಕ್ಷರಗಣಗಳಿಂದಾದ ಬೇರೆಬೇರೆ ವೃತ್ತಗಳು, ಎರಡಕ್ಕೂ ಬೇರೆಬೇರೆಯಾದ ಲಯವಿದೆ (ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಘರಾ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ - ಈ ಆರು ಪ್ರಸಿದ್ಧಕರ್ಣಾಟಕವೃತ್ತಗಳೆಂದು ಹೆಸರಾಗಿವೆ, ಕನ್ನಡದಲ್ಲಿ ಇವುಗಳ ಬಳಕೆ ವ್ಯಾಪಕವಾಗಿದೆ.  ಹಾಗೆಯೇ ಮಂದಾಕ್ರಾಂತ, ವಸಂತತಿಲಕ, ಶಿಖರಿಣೀ ಮೊದಲಾದ ಅನೇಕ ಪ್ರಸಿದ್ಧವೃತ್ತಗಳು ಸಂಸ್ಕೃತದಲ್ಲಿ ಬಳಕೆಯಲ್ಲಿವೆ)

ಇನ್ನು ಮುಖ್ಯಲೇಖನವನ್ನು ನೋಡೋಣ]

ಲಲಿತವೃತ್ತ ಮೂಲತಃ ಅಕ್ಷರಗಣವೃತ್ತ - 30 ಅಕ್ಷರಗಳ (ಮೂರುಮೂರು ಅಕ್ಷರಗಳ ಹತ್ತು ಗಣಗಳ) ವೃತ್ತ.  ಭಜಸನ ಗಣಗಳು ಎರಡಾವರ್ತಿ ಬಂದು ಕೊನೆಯಲ್ಲಿ ಭಗಣವೂ ಯಗಣವೂ ಬರುವಂಥದ್ದು (ಗಣಗಳ ವಿವರಣೆಗೆ ಮೇಲೆ []ರಲ್ಲಿ ವಿವರಣೆಯನ್ನು ನೋಡಿ).  ಭಜಸನಭಜಸನಭಯ ಈ ಗಣಗಳ ವಿನ್ಯಾಸವನ್ನು ಮೇಲೆ ವಿವರಿಸಿದ ಯಮಾತಾರಾಜಭಾನಸಲಗಂ ಎಂಬ ಸೂತ್ರದ ಸಹಾಯದಿಂದ ತೋರಿಸುವುದಾದರೆ:

ಭಾನಸ | ಜಭಾನ | ಸಲಗಂ | ನಸಲ | ಭಾನಸ | ಜಭಾನ | ಸಲಗಂ | ನಸಲ | ಭಾನಸ | ಯಮಾತಾ - ಇದು ಈ ವೃತ್ತದ ವಿನ್ಯಾಸ.  ಇದನ್ನೇ ಸೇರಿಸಿ ಬರೆದಾಗ:

"ಭಾನಸಜಭಾನಸಲಗಂನಸಲಭಾನಸಜಭಾನಸಲಗಂನಸಲಭಾನಸಯಮಾತಾ" ಹೀಗಾಗುತ್ತದೆ.  ಲಯ ದೊರಕಲಿಲ್ಲವೇ?  ಇದನ್ನು ಐದೈದು ಮಾತ್ರೆಗಳಾಗಿ ವಿಂಗಡಿಸಿ ಜೋರಾಗಿ ಓದಿಕೊಳ್ಳಿ:

"ಭಾನಸಜ ಭಾನಸಲ ಗಂನಸಲ ಭಾನಸಜ ಭಾನಸಲ ಗಂನಸಲ ಭಾನಸಯ ಮಾತಾ" 

ಈಗ ಐದೈದು ಮಾತ್ರೆಯ ಸೊಗಸಾದ ಮಾತ್ರಾಗಣವಿನ್ಯಾಸವನ್ನೂ ಕಾಣಬಹುದು.  ಅಕ್ಷರಗಣವೃತ್ತವಾಗಿದ್ದೂ ಮಾತ್ರಾಗಣವಿನ್ಯಾಸದ ಲಯಸೌಂದರ್ಯವನ್ನೂ ಒಳಗೊಂಡ ಅಪರೂಪದ ವೃತ್ತವಿದು.  ಈಗ ಇದೇ ರೀತಿ ಮೇಲಿನ ಜಗನ್ನಾಥವಿಜಯದ ಸಾಲನ್ನು ವಿಂಗಡಿಸಿ ಲಯವನ್ನು ಗಮನಿಸಿ.  "ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ" - ಈ ಸಾಲನ್ನು ಲಯಬದ್ಧವಾಗಿ ಹೀಗೆ ವಿಂಗಡಿಸಬಹುದು:

ಶ್ರೀಸ್ತನಸು ಕುಂಕುಮರ ಜಸ್ತತಿವಿ ಲೇಪನಗ ಭಸ್ತಿಪರಿ ರಂಜಿತನಿ ಜೋನ್ನತವಿ ಶಾಲೋ

ಈ ವೃತ್ತದ ಇನ್ನೊಂದು ವಿಶೇಷವೆಂದರೆ, ಎಲ್ಲ ವೃತ್ತಗಳಲ್ಲೂ ಆದಿಪ್ರಾಸ (ಪಾದದ ದ್ವಿತೀಯಾಕ್ಷರದ ಪ್ರಾಸ)ವಷ್ಟೇ ಇದ್ದರೆ ಇಲ್ಲಿ ಆದಿಪ್ರಾಸವೇ ಪಾದದೊಳಗೂ ಅನುಪ್ರಾಸವಾಗಿ ಬರುತ್ತದೆ.  ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸಸ್ಥಾನಗಳು - ಎಂದರೆ ಈ ಜಾಗದಲ್ಲಿ ಒಂದೇ ಅಕ್ಷರ ಬರಬೇಕು).  ಇದನ್ನು ಮೇಲಿನ ಸಾಲಿನಲ್ಲಿ ಗಮನಿಸಬಹುದು (" * " ಚಿಹ್ನೆಯಿಂದ ಗುರುತಿಸಲಾಗಿದೆ)

ಶ್ರೀ*ಸ್ತ*ನ | ಸುಕುಂಕು | ಮರಜ | *ಸ್ತ*ತಿವಿ | ಲೇಪನ | ಗಭ*ಸ್ತಿ* | ಪರಿರಂ | ಜಿತನಿ | ಜೋನ್ನತ | ವಿ ಶಾಲೋ

ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸವಾಗಿರುವುದನ್ನು ಗಮನಿಸಬಹುದು.  ಈಗಿದನ್ನು ಇಡೀ ಪದ್ಯದಲ್ಲಿ ಗಮನಿಸಿ:

ಶ್ರೀ*ಸ್ತ*ನಸುಕುಂಕುಮರಜ*ಸ್ತ*ತಿವಿಲೇಪನಗಭ*ಸ್ತಿ*ಪರಿರಂಜಿತನಿಜೋನ್ನತವಿ ಶಾಲೋ
ರ*ಸ್ಥ*ಲಪರಿಸ್ಫುರಿತಕೌ*ಸ್ತು*ಭವಿಭೂಷಣರುಚಿ*ಸ್ತ*ಬಕಿತಾಖಿಳನಭಂ ದಿವಿಜಕಾಂತಾ
ಹ*ಸ್ತ*ಚಮರಾನಿಳಮುಹು*ಸ್ತ*ರಳಿತಪ್ರಥಿತವ*ಸ್ತು*ಚಯಕುಂಡಲವಿಮಂಡಿತಕಪೋಲಂ
ಧ್ವ*ಸ್ತ*ದಿತಿಜಂ ನತನಮ*ಸ್ತ*ವಿಬುಧಂ ಭುವನವಿ*ಸ್ತ*ರಣಪಾದನೆಸೆದಂ ಫಣಿಪತಲ್ಪಂ

ಎಲ್ಲ ಪ್ರಾಸಸ್ಥಾನಗಳಲ್ಲೂ ಚಾಚೂ ತಪ್ಪದೇ ಸ್ತ ಅಥವಾ ಸ್ಥ ಅಕ್ಷರಗಳು ಬಂದಿರುವುದನ್ನು ಗಮನಿಸಬಹುದು.

ಅದು ಸರಿ, 2, 10 ಮತ್ತು 18ನೆಯ ಅಕ್ಷರಗಳೇ ಏಕೆ ಎಂದರೆ, ಮೇಲಿನ ಸಾಲನ್ನೇ ಅದರ ಐದೈದರ ಮಾತ್ರಾಕಾಲದ ಲಯದನ್ವಯ ಇಟ್ಟು ಒಂದೊಂದು ಸಾಲಿನಲ್ಲಿ ಎರಡೆರಡು ಗಣಗಳನ್ನಿಟ್ಟು ನೋಡಿದರೆ ಅದರ ಮರ್ಮ ತಿಳಿಯುತ್ತದೆ:
 

ಶ್ರೀ*ಸ್ತ*ನಸು ಕುಂಕುಮರ
ಜ*ಸ್ತ*ತಿವಿ ಲೇಪನಗ
ಭ*ಸ್ತಿ*ಪರಿ ರಂಜಿತನಿ ಜೋನ್ನತವಿ ಶಾಲೋ
ರ*ಸ್ಥ*ಲಪ ರಿಸ್ಫುರಿತ
ಕೌ*ಸ್ತು*ಭವಿ ಭೂಷಣರು
ಚಿ*ಸ್ತ*ಬಕಿ ತಾಖಿಳನ ಭಂದಿವಿಜ ಕಾಂತಾ

ಮೇಲಿನ ಸಾಲುಗಳನ್ನು ಗಮನಿಸಿದರೆ, ಪ್ರತಿಸಾಲಿನಲ್ಲೂ ಆದಿಪ್ರಾಸವು (ಎರಡನೆಯ ಅಕ್ಷರ) ಮೂಡಿರುವುದನ್ನು ಗಮನಿಸಬಹುದಲ್ಲವೇ?  ನಿರ್ದಿಷ್ಟವಾಗಿ ಪಾದದ 2, 10 ಮತ್ತು 18ನೆಯ ಅಕ್ಷರಗಳಲ್ಲೇ ಪ್ರಾಸಸ್ಥಾನವನ್ನಿಟ್ಟಿರುವುದಕ್ಕೆ ಇದೇ ಕಾರಣ - ಕೇವಲ ಅಕ್ಷರಗಣದ ಲೆಕ್ಕದಲ್ಲ, ಮಾತ್ರಾಗಣದ ಲಯವನ್ನನುಸರಿಸಿದರೂ ಪ್ರತಿ ಗಣದಲ್ಲೂ ಪ್ರಾಸಸೌಂದರ್ಯವು ಎದ್ದು ತೋರಲಿ ಎಂಬುದು ಉದ್ದೇಶ (ಮೇಲೆ ಮೂಡಿದ ಆರು ಸಾಲುಗಳ ಪದ್ಯ ಬಹುತೇಕ ಕುಸುಮಷಟ್ಪದಿಯನ್ನೇ ಹೋಲುತ್ತದೆ, ಆದರೆ ತಾಂತ್ರಿಕವಾಗಿ ಕುಸುಮಷಟ್ಪದಿಯಲ್ಲ, ಅದರ ಲಕ್ಷಣಗಳು ಬೇರೆ).

ಈ ಸುಂದರವಾದ ವೃತ್ತವನ್ನು ಅನೇಕ ಕವಿಗಳು ಏಕತಾನವನ್ನು ಮುರಿಯುವುದಕ್ಕೆ, ಲಯವರ್ಧನೆಗಾಗಿ ಉಪಯೋಗಿಸುತ್ತಾರೆಂದು ಹೇಳಿದೆ.  ರನ್ನನ ಗದಾಯುದ್ಧದಿಂದ ಇದೇ ವೃತ್ತದ ಒಂದು ಪದ್ಯ 

ತಾರಕನಖಂ ನವಸರೋರುಹದಳಾಂಘ್ರಿತಳ ಚಾರುಘನನಾಭಿ ಪುಳಿನಸ್ಥಳ ನಿತಂಬಂ
ಹಾರಲತಿಕಾಕೃತಿ ವಿಹಾರ ನಿಬಿಡಸ್ಪುರದುರೋಜಯುಗಳಂ ಮದನಪಾಶನಿಭ ಹಸ್ತಂ
ಸ್ಮೇರವದನಂ ಚಳಚಕೋರನಯನಂ ಚಿಕುರ ಚಾರು ರಮಣೀಯ ಮೃದುಕುಂತಳಕಳಾಪಂ
ಚಾರು ರುಚಿಸೂತ್ರ ಸುಕುಮಾರಮೆಸೆಗುಂ ಹೃದಯಹಾರಿ ಪೊಗೞಲ್ಕರಿದುಮಾ ಸತಿಯ ರೂಪಂ (8-57)

ಇಲ್ಲೂ ಮೇಲೆ ಹೇಳಿದ ಎಲ್ಲ ನಿಯಮಗಳೂ ಪಾಲಿತವಾಗಿರುವುದನ್ನು ಕಾಣಬಹುದು (ಅಕ್ಷರಗಣ, ಮಾತ್ರಾಗಣ, ಆದಿಪ್ರಾಸ, ಒಳಪ್ರಾಸಗಳು ಇತ್ಯಾದಿ).

ಇನ್ನು ನಂಜುಂಡರು ತೋರಿದ ನಾಗಚಂದ್ರನ ಪದ್ಯ ಇನ್ನೂ ಅಪರೂಪ - ಏಕೆಂದರೆ, ಇದು ಲಲಿತವೃತ್ತವೆಂದೇ ಸೂಚಿಸಲ್ಪಟ್ಟಿದ್ದರೂ, ಬಹುತೇಕ ಲಲಿತವೃತ್ತದ ಅಕ್ಷರಗಣವಿನ್ಯಾಸವನ್ನೇ ಅನುಸರಿಸಿದ್ದರೂ ಪದ್ಯದ ಹಲವೆಡೆ ಅಕ್ಷರಗಣಗಳನ್ನು ಗಾಳಿಗೆ ತೂರಿ, ಕೇವಲ ಮಾತ್ರಾಗಣವಿನ್ಯಾಸವನ್ನಷ್ಟೇ ಕವಿ ಲಕ್ಷ್ಯದಲ್ಲಿಟ್ಟುಕೊಂಡಿದ್ದಾನೆ.  ಹೀಗಿದ್ದರೂ ಪದ್ಯದ ಮತ್ತೊಂದು ಲಕ್ಷಣವಾದ ಐದೈದರ ಮಾತ್ರಾಲಯಕ್ಕಾಗಲೀ ಮಧ್ಯಪ್ರಾಸಗಳಿಗಾಗಲೀ ಒಂದಿನಿತೂ ಭಂಗ ಬಂದಿಲ್ಲ.  ಇದನ್ನಿಲ್ಲಿ ವಿವರವಾಗಿ ನೋಡಬಹುದು:

ಮೂಲಪದ್ಯ:
ತುಂಗಕುಚಕುಂಭಯುಗವಂಗಜಗಜಂ ಮೊಗವಡಂಗಳೆದುದೆನಿಸೆ ವಿಗತಾಂಚಲಮಪಾಂಗಂ
ಮೀಂಗೆಳೆಸುವಿಂದುಕಿರಣಂಗಳೆನೆ ಕರ್ಣಯುಗಳಂಗಳವತಂಸ ಮಣಿಯಂ ಬಳಸೆ ಘರ್ಮೋ
ದಂಗಳಿರೆ ನೊಸಲೊಳೆಳದಿಂಗಳಮರ್ದಿನ ಪನಿಯ ಪಾಂಗನೊಳಕೊಂಡು ನಳಿದೋಳ್ ನಲಿದು ನೀಳು
ತ್ತಂಗಭವಪಾಶಮೆನೆ ಪಿಂಗದರೆವುದು ಘಟ್ಟಿಯಂ ಗಡಣದಿಂ ಘಟ್ಟಿವಳ್ತಿಯರ ತಂಡಂ

ಐದೈದರ ಮಾತ್ರಾವಿನ್ಯಾಸ ಮತ್ತು ಒಳಪ್ರಾಸ (ಪ್ರಾಸಾಕ್ಷರವನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂ**ಕುಚ | ಕುಂಭಯುಗ | ವಂ**ಜಗ | ಜಂ ಮೊಗವ | ಡಂ**ಳೆದು | ದೆನಿಸೆ ವಿಗ | ತಾಂಚಲಮ | ಪಾಂಗಂ
ಮೀಂ*ಗೆ*ಳೆಸು | ವಿಂದುಕಿರ | ಣಂ**ಳೆನೆ | ಕರ್ಣಯುಗ | ಳಂ**ಳವ | ತಂಸ ಮಣಿ | ಯಂ ಬಳಸೆ | ಘರ್ಮೋ
ದಂ**ಳಿರೆ | ನೊಸಲೊಳೆಳ | ದಿಂ**ಳಮ | ರ್ದಿನ ಪನಿಯ | ಪಾಂ**ನೊಳ | ಕೊಂಡು ನಳಿ | ದೋಳ್ ನಲಿದು | ನೀಳು
ತ್ತಂ**ಭವ | ಪಾಶಮೆನೆ | ಪಿಂ**ದರೆ | ವುದು ಘಟ್ಟಿ | ಯಂ **ಡಣ | ದಿಂ ಘಟ್ಟಿ | ವಳ್ತಿಯರ | ತಂಡಂ

ಅಕ್ಷರಗಣವಿಭಾಗ (ಛಂದೋಭಂಗವಾಗಿರುವ ಗಣಗಳನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂಗಕು | ಚಕುಂಭ | ಯುಗವಂ | ಗಜಗ | ಜಂ ಮೊಗ | ವಡಂಗ | *ಳೆದುದೆನಿ* | ಸೆ ವಿಗ | ತಾಂಚಲ | ಮಪಾಂಗಂ
ಮೀಂಗೆಳೆ | ಸುವಿಂದು | ಕಿರಣಂ | ಗಳೆನೆ | ಕರ್ಣಯು | ಗಳಂಗ | ಳವತಂ | ಸ ಮಣಿ | ಯಂ ಬಳ | ಸೆ ಘರ್ಮೋ
ದಂಗಳಿ | *ರೆ ನೊಸಲೊ* | ಳೆಳದಿಂ | ಗಳಮ | *ರ್ದಿನ ಪನಿ* | ಯ ಪಾಂಗ | ನೊಳಕೊಂ | ಡು ನಳಿ | ದೋಳ್ ನಲಿ | ದು ನೀಳು
ತ್ತಂಗಭ | ವಪಾಶ | ಮೆನೆ ಪಿಂ | ಗದರೆ | *ವುದು ಘ* | ಟ್ಟಿಯಂ ಗ | ಡಣದಿಂ | *ಘಟ್ಟಿ* | ವಳ್ತಿಯ | ರ ತಂಡಂ

  • ಐದೈದು ಮಾತ್ರೆಯ ಲಯವನ್ನೂ ಒಳಪ್ರಾಸವನ್ನೂ ಪದ್ಯವು ಉಳಿಸಿಕೊಂಡಿದ್ದರೂ ಮೂರಕ್ಷರದ ಗಣವಿಭಾಗ ಮಾಡಿದಾಗ ಹಲವೆಡೆ ಛಂದೋಭಂಗವಾಗಿರುವುದನ್ನು ಗಮನಿಸಬಹುದು.  
  • ಮೊದಲ ಸಾಲಿನ 7ನೆಯ ಗಣದಲ್ಲಿ ಮೂರಕ್ಷರದ ಸಗಣವು (ಸಲಗಂ ಎಂಬಂತೆ) ಬರುವುದರ ಬದಲು ನಾಲ್ಕು ಲಘು ಅಕ್ಷರಗಳು ("ಳೆದುದೆನಿ") ಬಂದಿವೆ;
  • ಮೂರನೆಯ ಸಾಲಿನ ಎರಡನೆಯ ಗಣದಲ್ಲಿ ಮೂರಕ್ಷರದ ಜಗಣವು (ಜಭಾನ ಎಂಬಂತೆ) ಬರುವುದರ ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ("ರೆ ನೊಸಲೊ") ಬಂದಿದೆ.  
  • ಅದೇ ಸಾಲಿನ ಐದನೆಯ ಗಣದಲ್ಲಿ ಮೂರಕ್ಷರದ ಭಗಣದ (ಭಾನಸ ಎಂಬಂತೆ) ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ಬಂದಿದೆ ("ರ್ದಿನ ಪನಿ");
  • ಕೊನೆಯ ಸಾಲಿನ ಐದನೆಯ ಗಣವು ಮೂರಕ್ಷರದ್ದೇ ಆದರೂ ಅಲ್ಲಿ ಬರಬೇಕಾದ  ಭಗಣದ (ಭಾನಸ ಎಂಬಂತೆ) ಬದಲು ಸಗಣ (ಸಲಗಂ ಎಂಬಂತೆ) ಬಂದಿದೆ.  
  • ಅದೇ ಸಾಲಿನ 8ನೆಯ ಗಣದಲ್ಲಿ ನಗಣ (ನಸಲ ಎಂಬಂತೆ) ಬರಬೇಕಿತ್ತು.  ಅದು ಮೂರು ಲಘುಗಳ ಗಣ.  ಬದಲಿಗೆ ಅಲ್ಲಿ ಒಂದು ಗುರು ಮತ್ತು ಒಂದು ಲಘುವಿನ "ಘಟ್ಟಿ" ಎಂದು ಬಂದಿದೆ.


ಇದು ಒಂದು ಕಡೆಯಾಗಿದ್ದರೆ ಲಿಪಿಕಾರನ ದೋಷವೆಂದು ತರ್ಕಿಸಬಹುದಿತ್ತು.  ಆದರೆ ಇಷ್ಟೂ ಕಡೆ ಅಕ್ಷರಗಣದ ನಿಯಮಗಳು ಭಂಗವಾಗಿರುವುದರಿಂದ ಕವಿ ತಾನೇ ಸ್ವಾತಂತ್ರ್ಯವಹಿಸಿ ಹೀಗೆ ಮಾಡಿದ್ದಾನೆಂದು ತರ್ಕಿಸಬೇಕಾಗುತ್ತದೆ.  ಪ್ರಾಚೀನಕವಿಗಳು ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ.  ಆದ್ದರಿಂದ ಇದು ಅಪರೂಪದ್ದೆನಿಸಿಕೊಳ್ಳುತ್ತದೆ.

ಒಟ್ಟಿನಲ್ಲಿ, ಲಲಿತವೃತ್ತವು ಅಕ್ಷರಗಣದ ಲಯವೈವಿಧ್ಯವನ್ನೂ, ಮಾತ್ರಾಗಣದ ಏಕರೂಪತೆಯನ್ನೂ ಮೇಳೈಸಿಕೊಂಡಿರುವ, ಅಕ್ಷರಗಣ-ಮಾತ್ರಾಗಣ ಎರಡೂ ಲಯಗಳಿಗೂ ತಕ್ಕ ಪ್ರಾಸವಿನ್ಯಾಸವನ್ನೂ ಹೊಂದಿರುವ ಅಪರೂಪದ ವೃತ್ತ.

Sunday, January 3, 2021

ಮಾತಲ್ಲದ ಮಾತಿಗೆ ಅರ್ಥವಲ್ಲದ ಅರ್ಥ

 


"ಏನು ಸರ್ ನಿಮ್ಮ ಮಗಳನ್ನು ಸಂಗೀತದ ಕ್ಲಾಸ್ ಗೆ ಕಳುಹಿಸೋದು ನಿಲ್ಲಿಸಿ ಬಿಟ್ರಿ"
"ಇನ್ನೇನ್ರೀ ಮತ್ತೆ ಯಾವಾಗ್ಲೂ “ನಿಮಪದಪ ನಿಮಪದಪ” ಅನ್ನೋ ಸಂಗೀತ ಹೇಳಿ ಕೊಡ್ತಾರೆ ಅಲ್ಲಿಂದ ಮುಂದಕ್ಕೆ ಹೋಗಲ್ಲ ಅಂತಾರೆ"

ಹೀಗೊಂದು ಚಟಾಕಿ ಹಾರಿಸಿದರು, ಮಿತ್ರ Ramaprasad Konanurರು.  ಸಂಗೀತದ ಸರಳೆವರಸೆ ವಿಷಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಚಟಾಕಿಯಿದು.  ಹೌದು ಮತ್ತೆ, ಸಂಗೀತದ ಹೆಸರಿನಲ್ಲಿ ಮಕ್ಕಳಿಗೆ ಅಪ್ಪ ಅಮ್ಮಂದಿರ ಬಗ್ಗೆ ಹಾಗೆಲ್ಲ ಹೇಳಿಕೊಟ್ಟರೆ ಹೇಗೆ?  ಅಪ್ಪ ಅಮ್ಮಂದಿರು ಸುಮ್ಮನಿದ್ದುಬಿಡುತ್ತಾರಾ?  ಬದಲಿಗೆ ಆ ಸಂಗೀತದ ಮೇಷ್ಟ್ರು ಇದನ್ನು ಪ್ರಯತ್ನಿಸಬಹುದಿತ್ತು:

ಸರಿ, ನೀದಪಾ; ಸರಿಸರಿ ನೀsss ದಪಾ: ನೀಸರಿ ನೀss ದಪಾ; ನೀsss ಸರಿಸರಿ ನೀsದಪಾ; ನೀsss ನೀsss ನೀsss ನೀದಪಾ

ಆಗ ಅಪ್ಪ ಅಮ್ಮ ಸಂಗೀತ ಬಿಡಿಸುತ್ತಿರಲಿಲ್ಲ, ಹುಡುಗಿಯೇ ಬಿಟ್ಟು ಹೋಗುತ್ತಿದ್ದಳು.  ಹೋದರೆ ಹೋದಳು, ಅದಕ್ಕೆ ಅಷ್ಟೇನು ತಲೆ ಕೆಡಿಸಿಕೊಳ್ಳಬೇಕಿಲ್ಲ; ಆದರೆ ಅದಕ್ಕೆ ಉತ್ತರವಾಗಿ ಹುಡುಗಿಯೇ "ದಪ್ಪದಪ್ಪದಪದಪಾ ದಪಾ, ದಪದಪದಪ ದಪದಪದಪ ದಪದಪ" ಎಂದು ಕೊಡಲು (ಹೇಳಿಕೊಡಲು), ಶುರುಮಾಡಿದರೆ, 'ದಾರಿದಾರಿ'ಯಲ್ಲಿ?  ಆಮೇಲೆ "ಪಾದ, ನೀಪಾದ, ಸಾssರಿ ನೀಪಾದ, ಸಾರಿಸಾರಿ ನೀಪಾದ, ಸದಾ ನೀಪಾದ, ದಾಸ ನೀಪಾದ ದಾಸದಾಸ" ಎಂದು 'ಪರಿಪರಿ'ಯಾಗಿ ಬೇಡುವ ಪರಿಸ್ಥಿತಿಯುಂಟಾಗಿಬಿಟ್ಟರೆ ಮೇಷ್ಟರಿಗೆ?  ಎಷ್ಟಾದರೂ ಮೇಷ್ಟರು, 'ವರಸೆ'ಯ ಅನಂತಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಅರಿತವರು, ಸ್ವಲ್ಪ 'ನಿಧಾನಿ'ಸಿದರು, ಬಚಾವಾದರು.

ಸಂಗೀತದ ಸ್ವರಸಂಜ್ಞೆಗಳ ಅರ್ಥಸಾಧ್ಯತೆಗಳು ನಮ್ಮ ಹಾಸ್ಯಪ್ರಜ್ಞೆಯನ್ನೆಂತೋ ಅಂತೇ ಗಂಭೀರ ವಾಗ್ಗೇಯಪ್ರತಿಭೆಯನ್ನೂ ಸಾಕಷ್ಟೇ ಕೆಣಕಿದೆ.  ತ್ಯಾಗರಾಜರ ಪ್ರಖ್ಯಾತ "'ಸಾಮನಿಗಮ'ಜ ಸುಧಾಮಯ" ಎಂಬ ಸಾಲು, ಪ್ರಖ್ಯಾತವಾದ "ವಲಜಿ" ರಾಗಮಾಲಿಕಾವರ್ಣದ "'ಪದಸ'ರೋಜಮುಲನೇ ನಮ್ಮಿ" ಎಂಬ ಚರಣ, ಬಾಲಮುರಳೀಕೃಷ್ಣರ "ಓಂಕಾರಪ್ರಣವ" ಷಣ್ಮುಖಪ್ರಿಯ ವರ್ಣದ "'ಪದನೀ'ರಜಮುಲೇ ನಮ್ಮಿತಿ" ಎಂಬ ಚರಣ - ಕೂಡಲೇ ನೆನಪಾಗುವಂಥದ್ದು.  ಮತ್ತೆ, ರಾಮಸ್ವಾಮಿದೀಕ್ಷಿತರ ತೋಡಿರಾಗದ "ಸರಿಗಾನಿ ದಾನಿ ಪಾಮರಿನಿ ನೀಪದ" ಎಂಬ ರಚನೆ, ಸಂಪೂರ್ಣ ಸ್ವರಸಂಕೇತಾಕ್ಷರಗಳಿಂದಲೇ ನಿರ್ವಹಿಸಲ್ಪಟ್ಟದ್ದು.  ಅಂಥದ್ದೇ ಮತ್ತೊಂದು ಪ್ರತಿಭಾಪೂರ್ಣ ರಚನೆ ಬಾಲಮುರಳೀಕೃಷ್ಣರ ತೋಡಿರಾಗದ "ಮಾ ಮಾನಿನಿ ನೀ ಧಾಮಗನಿ ನೀ ದಾಸರಿನಿಗಾದಾ".  ಇದಂತೂ ಹಲವು ಮನೋಜ್ಞವಾದ ಅರ್ಥಪೂರ್ಣವಾದ ಸ್ವರಾಕ್ಷರಪದಪ್ರಯೋಗಗಳಿಂದ ಕೂಡಿದೆ - ಉದಾ: "ಸರಿಗಾನಿ ದಾರಿಮಾರಿ ಗದಾಧರಿ ನೀ ನಿಗಗನಿ ನೀ ಮಗನಿ ಸಾಮನಿಗಮ ಗರಿಮಗನಿ".  ಒಂದುಕಡೆ, ಇರುವ ಏಳೇ ಅಕ್ಷರಗಳಲ್ಲಿ ಅರ್ಥಪೂರ್ಣವಾದ ಪದಗಳನ್ನು, ಭಾವಪೂರ್ಣವಾದ ವಾಕ್ಯಗಳನ್ನು ರಚಿಸುವುದು; ಮತ್ತೊಂದೆಡೆ, ಆ ಅಕ್ಷರಸಂಯೋಜನೆ ಆ ರಾಗದ ಸ್ವರೂಪಕ್ಕೆ ಸಹಜವಾಗಿ ಇರುವಂತೆ ರಾಗಪ್ರವಾಹದ ಅಂದಗೆಡದಂತೆ ನೋಡಿಕೊಳ್ಳುವುದು - ಇದು ಹಗ್ಗದಮೇಲಿನ ನಡಿಗೆಯೇ ಸರಿ.  ಇಷ್ಟಾಗಿಯೂ ಇತ್ತ 'ಮಾತೂ' ಅತ್ತ 'ಧಾತು'ವೂ ಸಂಪೂರ್ಣ ರುಚಿಸದಿರುವ ಸಾಧ್ಯತೆಯೇ ಹೆಚ್ಚು.

ಸಂಗೀತದ ತಾಂತ್ರಿಕಾಂಶವೇ ಸಾಹಿತ್ಯವಾಗಿ 'ಮಾತು' ಆಗಿ ಮಿಂಚುವ ಪರಿಯಿದು.  ಸಾಹಿತ್ಯದ ತಾಂತ್ರಿಕಾಂಶವೂ ಕವಿಯ ಪ್ರತಿಭಾವಿಶೇಷದಿಂದ ಸ್ವತಃ ಸಾಹಿತ್ಯವಾಗಿ ಮಿಂಚುವುದೂ ಉಂಟು.  ರನ್ನನ ಈ ಸಾಲನ್ನು ನೋಡಿ:

ಗುರುವಂ ಲಘುಸಂಧಾನದಿ
ನರನಿಸೆ ಗುರುಲಘುವಿಮಿಶ್ರಿತಂ ದೊರಕೊಳಲ್ ತ-
ದ್ಗುರು ತಚ್ಛಂದೋವೃತ್ತಿಗೆ
ದೊರೆಯೆನಿಸಿರ್ದುದು ಮನಕ್ಕೆ ದುರ್ಯೋಧನನಾ

ಗುರುವಾದ ದ್ರೋಣನನ್ನು ಲಘುವಾಗಿ ಪರಿಗಣಿಸಿ ಅರ್ಜುನನು ಬಾಣಗಳಿಂದ ಹೊಡೆಯಲು ಆ ಗುರುವಿನ ಶರೀರ ಗುರುಲಘುಮಿಶ್ರಿತವಾದ ಛಂದೋರೂಪದಂತೆ (ಪದ್ಯದಂತೆ) ದುರ್ಯೋಧನನಿಗೆ ಕಂಡಿತಂತೆ.  ಪ್ರತಿಭೆಯೇ ಸರಿ, ಆದರೆ ರಣಭೂಮಿಯ ಘೋರಸನ್ನಿವೇಶದಲ್ಲಿ, ಏಕಾಂಗಿಯಾಗಿ ಮಿಡುಕುತ್ತಾ ಕುದಿಯುತ್ತಾ ರಣಭೂಮಿಯುದ್ದಕ್ಕೂ ತನ್ನ ಸೋಲಿನ ನಿಶಾನೆಗಳನ್ನೇ ಕಾಣುತ್ತಾ ಬಂಧುಮಿತ್ರರ ಕಳೇಬರಗಳನ್ನು ಕಾಣುತ್ತಾ, ತುಳಿಯುತ್ತಾ, ಎಡವುತ್ತಾ, ಎಣೆಯಿಲ್ಲದ ದುಃಖದಿಂದ ಪರಿತಪಿಸುತ್ತಾ ಆ ರಣಭೂಮಿಯಲ್ಲಿ ನಡೆದು ಬರುತ್ತಿದ್ದ ದುರ್ಯೋಧನನಿಗೆ, "ಶರಜಾಲಜರ್ಜರಿತಗಾತ್ರತ್ರಾಣ"ನಾಗಿ ಸತ್ತು ಬಿದ್ದಿರುವ ಗುರುವಿನ ಶರೀರ ಗುರುಲಘುವಿಮಿಶ್ರಿತವಾದ ಪದ್ಯದಂತೆ ಕಂಡಿತಲ್ಲಾ (ಆ ಸಮಯದಲ್ಲೂ ದುರ್ಯೋಧನನಿಗೆ ವ್ಯಾಕರಣ-ಛಂದಸ್ಸುಗಳ ನೆನಪಾಯಿತಲ್ಲಾ), ಅದೀಗ ತಮಾಷೆಯೇ ಸರಿ, ಕ್ರೂರ ತಮಾಷೆ.  ಇಲ್ಲಿ ಕವಿಯ ಪ್ರತಿಭೆಗೆ ತಲೆದೂಗಬೇಕೋ, ದುರ್ಯೋಧನನ ಅಪ್ರಸ್ತುತಪ್ರಸಂಗಕ್ಕೆ ತಲೆಯ ಮೇಲೆ ಕೈ ಹೊರಬೇಕೋ ಓದುಗನಿಗೆ-ಕೇಳುಗನಿಗೆ ಬಿಟ್ಟ ವಿಷಯ.  ಪ್ರಸಂಗಾವಧಾನವಿಲ್ಲದ ಪ್ರತಿಭೆ ರಸಾಭಾಸವನ್ನೂ ಉಂಟುಮಾಡಬಹುದಷ್ಟೇ?  ಅದೇನೇ ಇರಲಿ, ಪ್ರತಿಭೆ ಈ ರೂಪದಲ್ಲೂ ಇರಬಹುದೆಂಬುದಂತೂ ಗಮನಿಸಬೇಕಾದ ಮಾತು.

ಇದೇ ಪ್ರತಿಭೆ ಸಹಜಸುಂದರ ಹಾಸ್ಯವೇ ಆಗಿ ಹೊಮ್ಮುವ ಪರಿಯನ್ನೂ ನೋಡಿಬಿಡಿ.  ಭಾಮಿನಿ (ಷಟ್ಪದಿ)ಯ ಲಕ್ಷಣವನ್ನು ವಿವರಿಸುತ್ತಾ ಲಾಕ್ಷಣಿಕರಾದ ಅ ರಾ ಮಿತ್ರ ಹೀಗೆ ಹೇಳುತ್ತಾರೆ:

ಇವಗೆ ಭಾಮಿನಿ ಹುಚ್ಚು ಒಂದೇ
ಸಮನೆ 'ಮಾತ್ರೆ'ಗಳೇಳ ಕೊಡುತಿರಿ
ಕ್ರಮವ ತಪ್ಪದೆ ಮೂರು ನಾಲ್ಕರ ತೆರದಿ ಏಳು ಸಲ
ಸಮೆಯದಿರೆ ಮತ್ತೊಂದು ಮಂಡಲ
ಹವಣಿಸುತ ಬರೆ ಲೇಸು ಕೇಳಿರಿ
ಬೆವರಬೇಡಿರಿ 'ಕೊನೆಗೆ ಗುರು'ಕೃಪೆಯಿರಲು ಬದುಕುವನು

ಅಲ್ಲವೇ ಮತ್ತೆ?  ಮೂರು-ನಾಲ್ಕರ ಡೋಸುಗಳಲ್ಲಿ ಏಳೇಳು ಮಾತ್ರೆಗಳನ್ನು ಎರಡು ಮಂಡಲ ಕೊಟ್ಟರೆ ತಾನೆ ಭಾಮಿನಿಯ ಹುಚ್ಚು ಬಿಡುವುದು? ಅದೂ ಕೊನೆಗೆ ಗುರುಕೃಪೆಯಿದ್ದರೆ ಮಾತ್ರ (ಭಾಮಿನೀಷಟ್ಪದಿಯ ಲಕ್ಷಣ - ಮೂರು+ನಾಲ್ಕರ ಏಳೇಳು ಗಣಗಳು ಮತ್ತು ಒಂದು ಗುರು - ಇಷ್ಟಾದರೆ ಭಾಮಿನೀಷಟ್ಪದಿಯ ಒಂದು ಮಂಡಲ (ಪಾದ)ವಾಯಿತು; ಅಂಥದ್ದೇ ಇನ್ನೊಂದು ಮಂಡಲವಾದರೆ ಪೂರ್ಣಷಟ್ಪದಿ).

ಇದೇ ಅರಾ ಮಿತ್ರರು ತಮ್ಮ "ಪಂಡಿತನ ಸಂಕಟ" ಎಂಬ ಲಲಿತಪ್ರಬಂಧವೊಂದರಲ್ಲಿ, ಹುಚ್ಚಾಸ್ಪತ್ರೆಗೆ ಎಳೆತರಲ್ಪಟ್ಟ ವ್ಯಾಕರಣಪಂಡಿತರೊಬ್ಬರ ಸಂಕಟವನ್ನು ಡಾಕ್ಟರ ದೃಷ್ಟಿಯಿಂದ ಚಿತ್ರಿಸುತ್ತಾರೆ.  ಪಂಡಿತರು ತಮ್ಮ ಸಂಕಟವನ್ನು ಗಂಟೆಗಟ್ಟಲೆ ವ್ಯಾಕರಣದ ಭಾಷೆಯಲ್ಲೇ ವರ್ಣಿಸಿದ್ದನ್ನು ಕೇಳಿ ತಲೆಕೆಟ್ಟು ಸುಸ್ತಾಗಿ ರಾತ್ರಿ ಮನೆಗೆ ಬಂದ ಡಾಕ್ಟರು, ಆ ಕತೆಯನ್ನು ತನ್ನ ತಂದೆಯ ಬಳಿ ಹೇಳುತ್ತಾರೆ.  ಹಿರಿಯರಾದ ತಂದೆ ತಮ್ಮ ಅನುಭವದಿಂದ ನಾಲ್ಕು ಮಾತು ಹೇಳಿಯಾರು ಎನ್ನುವ ಆಸೆ ಡಾಕ್ಟರರದ್ದು.  ಆ ತಂದೆಯೋ ನಿವೃತ್ತ ಛಂದಶ್ಶಾಸ್ತ್ರಪಂಡಿತರು.  ಅವರು ಹೇಳುತ್ತಾರೆ "ಏನು ಮಾಡೋದು ಮಗು, ಪಾಪ ಗ್ರಹಚಾರ.  ಆತನನ್ನು ನಾನು ಬಲ್ಲೆ... ವ್ಯಾಕರಣ ಎಂದರೆ ಪ್ರಾಣ ಅವರಿಗೆ... ಆದರೆ ಅವರ ದಾಂಪತ್ಯಜೀವನದಲ್ಲಿ 'ಸಾಂಗತ್ಯ'ವಿಲ್ಲ,  ಅವರ ಬದುಕು ಲಲಿತ ಅಥವಾ ಸರಳರಗಳೆಯ ಹಾಗೆ ಉತ್ಸಾಹದಿಂದ ಸಾಗಲಿಲ್ಲ.  ಎಷ್ಟಾದರೂ ಅವರು 'ಗುರು'ಗಳಲ್ಲವೇ?  ಅವರ ಹೆಂಡತಿ ಕೂಡ ಅಲ್ಪಪ್ರಾಣಗಳ ಹಾಗೆ ಅವರನ್ನು ಅಷ್ಟು ಲಘುವೆಂದು ಎಣಿಸಬಾರದಿತ್ತು.  ಒಟ್ಟಿನಲ್ಲಿ ಮದುವೆಯಾದಂದಿನಿಂದ ಭಾಮಿನೀಷಟ್ಪದಿ ಅವರಿಗೆ ಒಗ್ಗಲಿಲ್ಲ" - ಈ ಮಾತನ್ನು ಕೇಳಿ ಮಗನಿಗೆ ಬಂದದ್ದು ನಿದ್ದೆಯಲ್ಲ, ಮೂರ್ಛೆ!

ಇರಲಿ, ಇವೆಲ್ಲ ಗಂಭೀರವಾದ ಸಾಹಿತ್ಯಸಂಗೀತಪ್ರತಿಭೆಯ ಮಾತಾಯಿತು.  ಅದರಾಚೆಗೂ ಪ್ರತಿಭೆಯೆಂಬುದು ಮಾತಲ್ಲದ ಮಾತಿಗೆ, ಅರ್ಥವಲ್ಲದ ಅರ್ಥವನ್ನು ಜೋಡಿಸಿ ನೋಡಿ ಹಿಗ್ಗುತ್ತಲೇ, ರೋಮಾಂಚಗೊಳ್ಳುತ್ತಲೇ ಇರುತ್ತದೆ.  ಬೆಕ್ಕುಗಳು ಜಗಳಾಡುವಾಗ ಕಿರುಚುವುದು ಮಗುವಿನ ಅಳುವಿನಂತೆಯೇ ಕೇಳುತ್ತದೆ. ನಡುರಾತ್ರಿಯ ನೀರವಮೌನದಲ್ಲಿ ಸುತ್ತಮುತ್ತ ಯಾರೂ ಇಲ್ಲದಿರುವಾಗ ಬೆಕ್ಕುಗಳು ಕಿರುಚಲು ಶುರುಮಾಡಿದರೆ, ಪ್ರೇತಶಿಶುವೊಂದರ ಅಳುವನ್ನು ಕೇಳಿದಂತಾಗಿ ರಕ್ತ ಹೆಪ್ಪುಗಟ್ಟುವುದು ಖಂಡಿತ.  ಊರ ಕಡೆಯ, ಚಿಕ್ಕಂದಿನ ನೆನಪುಗಳು ಯಾವಾಗಲೂ ರೋಮಾಂಚಕ.  ನಾಯಿಗಳು ಕೆಲವೊಮ್ಮೆ ಅಳುತ್ತವಲ್ಲ.  ಅದಕ್ಕೆ ಹಲವು ವ್ಯಾಖ್ಯಾನಗಳಿದ್ದುವು.  ಹೊರಗೆ ನಾಯಿಯೊಂದು ಅಳುತ್ತಿದ್ದರೆ, ಅದು ಮೇಲೆ ನೋಡಿಕೊಂಡು ಅಳುತ್ತಿದೆಯೋ ನೆಲ ನೋಡಿಕೊಂಡು ಅಳುತ್ತಿದೆಯೋ ನೋಡಲು ಹೇಳುತ್ತಿದ್ದರು.  ಮೇಲೆ ನೋಡಿಕೊಂಡು ಅಳುತ್ತಿದ್ದರೆ ಅದರ ಕಣ್ಣಿಗೆ ದೆವ್ವ ಕಾಣಿಸುತ್ತಿದೆಯೆಂದರ್ಥ, ಅಳುವಿನ ಜೊತೆಗೆ ಭಯ ತುಂಬಿದ ಬೊಗಳುವಿಕೆಯೂ ಸೇರಿರುತ್ತದಂತೆ.  ನೆಲ ನೋಡಿಕೊಂಡು ಅಳುತ್ತಿದ್ದರೆ ಯಾರೋ ಸಾಯುತ್ತಾರೆ ಎಂದರ್ಥವಂತೆ.  ಯಾರ ಮನೆಯ ಮುಂದೆ ಅಳುತ್ತದೆಯೋ ಅವರಿಗೆ ಒಳಗೇ ಪುಕಪುಕ; ಅದರಲ್ಲೂ ಯಾರಾದರೂ ವಯಸ್ಸಾದವರೋ, ರೋಗಿಷ್ಟರೋ, ಸಾಯಲು ಬಾಕಿಯಿರುವವರು ಮನೆಯಲ್ಲಿದ್ದರಂತೂ ಮುಗಿದೇ ಹೋಯಿತು - "ದರಿದ್ರದ್ದು ನಮ್ಮನೇ ಮುಂದೇನೇ ಅಳ್ತಿದೆ, ಓಡಿಸೋ ಅತ್ಲಾಗೆ" ಎನ್ನುವ ಉದ್ಗಾರ ಸಾಮಾನ್ಯ.  ಒಂದು ನಾಯಿಯಂತೂ "ಅವ್ವೊವ್ವೋssssss" ಎಂದು ಸ್ಪಷ್ಟಾಕ್ಷರಗಳೊಂದಿಗೆ ಅಳುತ್ತಿತ್ತು.  ಮನೆಯ ಬಳಿ ಅಲ್ಲೆಲ್ಲೋ ಮರದ ಮೇಲೆ ಗೂಬೆಯೊಂದು ಇದ್ದಕ್ಕಿದ್ದ ಹಾಗೆ ಕೂಗಲು ಶುರುಮಾಡುತ್ತಿತ್ತು.  "ಗೂsss" ಎಂದೊಂದು ಪ್ಲುತ, ಅದರ ಹಿಂದೆಯೇ "ಗುಗ್ಗುಗುಗೂsss" ಎಂಬೊಂದು ಉದ್ಗಾರ.  ಇದು ಪುನರಾವರ್ತನೆಯಾಗುತ್ತಿದ್ದರೆ ಯಾವುದೋ ಸಾವಿನ ಕರೆಯಂತೆ ಕೇಳುತ್ತಿತ್ತು.  ನಮ್ಮ ತಂದೆ ಉದ್ಗರಿಸುತ್ತಿದ್ದರು - "ಓಹೋ ಇದು 'ಗೂ... ಗುತ್ತಿಸುಡೂ' 'ಗುತ್ತಿಸುಡೂ' ಅಂತ ಕೂಗ್ತಿದೆ.  ಯಾರೋ 'ಠಾ' ಅಂತಾರೆ ಇಷ್ಟರಲ್ಲೇ" (ಕೈಲಾಸಂ ತಾವರೆಕೆರೆಯ ಗಡFಖಾನರು ನೋಡಿದ್ದ ಗೂಬೆಯೊಂದು "ಮುದ್ದೂ... ಮುದ್ದೂ... ಐಸಾ ಅಲ್ಡಾಯಿಸ್ತಿತ್ತು").

ನಮ್ಮ ತಂದೆ, ತಮ್ಮ ಬಾಲ್ಯಕಾಲದ್ದೊಂದು ನೆನಪನ್ನು ಯಾವಾಗಲೂ ಹೇಳುತ್ತಿದ್ದರು.  ಬೀದಿಕೊನೆಯ ಮುದುಕಿಯೊಂದು ಸತ್ತಾಗ, ಆ ಶವವನ್ನು ಅಲಂಕರಿಸಿ ಚಟ್ಟದಲ್ಲಿ ಕೂರಿಸಿ ಬ್ಯಾಂಡ್ ಸೆಟ್ಟಿನೊಂದಿಗೆ ಶವಯಾತ್ರೆಯಲ್ಲಿ ಹೊತ್ತೊಯ್ಯುತ್ತಿದ್ದರೆ, ಬ್ಯಾಂಡ್ ಸೆಟ್ಟಿನ ಸಂಗೀತದ ಲಯಕ್ಕೆ ತಕ್ಕ ಹಾಗೆ ಚಟ್ಟದಲ್ಲಿ ಕುಳಿತ ಹೆಣ ಅಡ್ಡಡ್ಡ ತಲೆಯಾಡಿಸುತ್ತಿದ್ದುದು ನೋಡಿ ಈ ಹುಡುಗನಿಗೆ ಹೊಳೆದದ್ದು - "ಬರೋದಿಲ್ಲs ನಾsನೂss... ಯಮಲೋsಕಕ್ಕೆs, ಬರೋದಿಲ್ಲs ನಾsನೂsss..." (ಸಂಗೀತ ಬಲ್ಲವರು ಬೇಕಿದ್ದರೆ ಇದನ್ನು ಆನಂದಭೈರವಿ ರಾಗ ಮಿಶ್ರಚಾಪುತಾಳದಲ್ಲಿ ಹಾಡಿಕೊಂಡು ಆನಂದಿಸಬಹುದು - "ಸಗಾರಿಗ್ಗs ಮಾsಪಾss... ಮಪಗಾsರಿsಸs ಸಗಾರಿಗ್ಗs ಮಾsಪಾsss") ಎಂದು ಆ ಮುದುಕಿ ತಲೆಯಾಡಿಸುತ್ತಿದೆಯಂತೆ, ಅದೇ ಹಾಡನ್ನೇ ಬ್ಯಾಂಡ್ ಸೆಟ್ಟಿನವರು ಬಾರಿಸುತ್ತಿರುವುದಂತೆ

ಪ್ರತಿಭೆ ವಂಶವಾಹಿನಿಯಲ್ಲೇ ಹರಿಯುತ್ತದೆ ಎಂಬುದು ಸುಳ್ಳಲ್ಲ ನೋಡಿ.  ನಾನೂ ಸುಮಾರು ಅದೇ ವಯಸ್ಸಿನಲ್ಲಿ ಅಂಥದ್ದೇ ಶವಯಾತ್ರೆಗಳನ್ನು ಕಂಡವನೇ, ಬ್ಯಾಂಡ್ ಸೆಟ್ಟನ್ನು ಕೇಳಿದವನೇ.  ಬ್ಯಾಂಡ್ ಸೆಟ್ಟಿನ "ಡಡ್ಡಡ್ಡ... ಡಡ್ಡಡ್ಡ...ಡಡ್ಡಡ್ಡ... ಡಡ್ಡಡ್ಡ..." ಎಂಬ ಗತ್ತಿನ ಲಯ, "ನಂದಲ್ಲ... ನಂದಲ್ಲ... ನಂದಲ್ಲ... ನಂದಲ್ಲ..." ಎಂದು ಆ ಸತ್ತವರ ಮನದ ಹಾಡಾಗಿ ನನಗೆ ಕೇಳುತ್ತಿದ್ದುದು ಆಶ್ಚರ್ಯವಲ್ಲ.

ತಡೆಯಿರಿ, ಪ್ರತಿಭೆಯೆಂಬುದು ಈ ರೀತಿ ಕೆಟ್ಟ, ಅಪಶಕುನದ ಹಾದಿಯಲ್ಲೇ ಹರಿಯಬೇಕೆಂದಿಲ್ಲ.  ಅಲ್ಲೆಲ್ಲೋ ಆಕಾಶದಲ್ಲಿ ಗರುಡಪಕ್ಷಿಯನ್ನು ಕಂಡರೆ ಅದು ಕ್ಷೇಮಕಾರಿ, ಲಕ್ಷ್ಮೀನಾರಾಯಣನ ಸನ್ನಿಧಾನ.  ಅದು "ಕರ್ರ್ರಾ..." ಎಂದು ಕೂಗಿದರೆ ಶ್ರದ್ಧಾಳುಗಳ ಕಿವಿಗೆ "ಕೃಷ್ಣಾ..." ಎಂದು ಕೇಳಿಸುತ್ತದೆ, ಕೆಲವರಿಗಂತೂ "ನಾರಾಯ್ಣಾ, ನಾರ್ಣಾ..." ಎಂದೂ ಕೇಳಿಸುತ್ತದೆ, ಕೈ ತಾನಾಗಿಯೇ ಮುಗಿಯುತ್ತದೆ.  ಏನಾದರೂ ಮಾತಾಡುವಾಗ ಹಲ್ಲಿ ಲೊಚಗುಟ್ಟಿತೆನ್ನಿ "ನೋಡಿದ್ಯಾ, ನಿಜವಂತೆ" ಎಂದು ಹಿಗ್ಗುತ್ತಾ ಆ ಲೊಚಗುಡುವಿಕೆಯ ಲಯಕ್ಕೆ ಸರಿಯಾಗಿ "ಕೃಷ್ಣ ಕೃಷ್ಣ ಕೃಷ್ಣ" ಎಂದು ನೆಲಕ್ಕೆ ಬೆರಳ ತುದಿ ಕುಟ್ಟುತ್ತಾರೆ.  ಇನ್ನು ಮಾತೃಸ್ವರೂಪಿಯಾದ ಹಸುವಿನ ಕೂಗಂತೂ ಜಗದ ತಾಯ್ತನವನ್ನೆಲ್ಲ ಒಟ್ಟುಮಾಡಿ ಕರೆದಂತೆ "ಅಂಬಾsss" ಎಂದೇ ಕೇಳುತ್ತದೆ.  "ಕನ್ನಡ ಗೋವಿನ ಮುದ್ದಿನ ಕರು"ಗಳಂತೂ ಇನ್ನೂ ಸ್ಪಷ್ಟವಾಗಿ "ಅಮ್ಮಾsss" ಎನ್ನುತ್ತವೆ.

ಪಶುಪಕ್ಷಿಗಳ ಎಲ್ಲ ಧ್ವನಿಗಳಿಗೂ ಹೀಗೆ 'ಮಾತು' ಆರೋಪಿಸಲು ಸಾಧ್ಯವೋ ಅಲ್ಲವೋ, ಆದರೆ ಇವೆಲ್ಲ ಸಂಗೀತವೇ.  ಸಂಗೀತದ ಒಂದೊಂದು ಸ್ವರಕ್ಕೂ ಒಂದೊಂದು ಪಶುಪಕ್ಷಿಯ ಹೆಸರನ್ನು ಕೊಟ್ಟಿರುವುದು ಸುಮ್ಮನೇ ಅಲ್ಲ.  ಆದರೆ ಅದೇನೇ ಇರಲಿ, ಈ ಧ್ವನಿವೈವಿಧ್ಯವನ್ನು ಒಟ್ಟಾರೆ ಸಂಗೀತವೆಂದೇ ಕರೆಯಬಹುದಿರಲಿ, ಒಂದೊಂದೇ ಪ್ರಾಣಿಯನ್ನೋ ಪಕ್ಷಿಯನ್ನೋ ಹಿಡಿದರೆ, ಕೋಗಿಲೆಯ 'ಸಂಗೀತ'ವನ್ನು ಆಸ್ವಾದಿಸಿದಂತೆ ಕಾಗೆಯ ’some'ಗೀತವನ್ನೂ ಗಾರ್ದಭಗಾನವನ್ನೂ ಆಸ್ವಾದಿಸಬರುವುದೋ, ಹೇಳಲಾಗದು.  ಕೋಕಿಲಾರವ, ಕೀರವಾಣಿ ಮುಂತಾದ ರಾಗಗಳಂತೆ ಕಾಕವಾಣಿ, ಗಾರ್ದಭಧ್ವನಿ ಇತ್ಯಾದಿ ರಾಗಗಳನ್ನು ಯಾರೂ ರೂಪಿಸಿದಂತಿಲ್ಲ.  ಹಂಸಧ್ವನಿ, ಹಂಸನಾದ, ಮಯೂರಧ್ವನಿಯಂತಹ ಸುಶ್ರಾವ್ಯರಾಗಗಳಿಗೆ ಆ ಹೆಸರಿಟ್ಟವರು ಆಯಾ ಪಕ್ಷಿಗಳ ಧ್ವನಿಯನ್ನು ನಿಜಕ್ಕೂ ಆಲಿಸಿ ಸವಿದು ಈ ರಾಗಗಳಿಗೆ ಆ ಹೆಸರಿಟ್ಟರೋ, ಅಥವಾ ಸೌಂದರ್ಯಕ್ಕೆ ಸೆರಗು ಹೊದಿಸಿದಂತೆ ರಾಗಸೌಂದರ್ಯವನ್ನು ಈ ಕರ್ಕಶಧ್ವನಿಯ ಸುಂದರಪಕ್ಷಿಗಳ ಹೆಸರುಗಳ ಹಿಂದೆ ಬೈತಿಡುವ ತಂತ್ರವೋ ಯಾರಿಗೆ ಗೊತ್ತು?

ಅದಿರಲಿ, ಬಹುಕಾಲದ ಹಿಂದೆ, ನಮ್ಮ ಮನೆಯ ಮುಂದಿದ್ದ ಜೋಪಡಿಗಳಲ್ಲಿ ಎರಡು ಹುಂಜಗಳಿದ್ದುವು.  ಸಾಮಾನ್ಯವಾಗಿ ಹುಂಜಗಳು "ಕೊಕ್ಕೊಕೋsಕೋss" ಎಂದು ಕೂಗುತ್ತವಷ್ಟೇ?  ಇಲ್ಲಿ ಒಂದು ಹುಂಜ ಅದಕ್ಕೆ ಇನ್ನೊಂದಿಷ್ಟು ನಾದವನ್ನು ಸೇರಿಸಿ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗುತ್ತಿತ್ತು.  ಆದರೆ ಅದೇನೋ ಪಾಪ ಕಕಾರವು ಸ್ಪಷ್ಟವಾಗಿ ಹೊರಡದೇ ಆ ದನಿಯಲ್ಲಿ ಅನೇಕ ಅಕ್ಷರಸಾಧ್ಯತೆ ಕೇಳಬರುತ್ತಿತ್ತು.  ಅದು ಹೀಗೆ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗಿದರೆ ನನಗಂತೂ "ವೆಂಕಟೇsಶಾsss" ಎಂದು ಕೂಗಿದಂತೆಯೇ ಕೇಳುತ್ತಿತ್ತು ("ರಂಗನಾsಥಾsss" ಎಂದು ಕರೆದಂತಿತ್ತೆಂದು ನಮ್ಮ ಚಿಕ್ಕಪ್ಪನವರ ವಾದ, ಇರಲಿ - "ಶಂಭುಲಿಂsಗಾsss" ಎಂದು ಕೂಗುತ್ತಿತ್ತೆಂದು ಯಾರೂ ವಾದಹೂಡಲಿಲ್ಲ, ಯಾವುದೋ ಒಂದು ಹೆಸರು, ನಾಮಸ್ಮರಣೆಗೆ- "ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ" ಅಲ್ಲವೇ?).

ಇನ್ನೊಂದು ಹುಂಜ, ಇದರ ಉಚ್ಚಾರಣೆಯೇನೋ ಸ್ಪಷ್ಟವಾಗಿತ್ತು, ಆದರೆ ಇತರ ಹುಂಜಗಳಿಗಿಂತ ವಿಚಿತ್ರವಾದ ಲಯವನ್ನನುಸರಿಸಿ ಕೂಗುತ್ತಿತ್ತು.  ಹುಂಜಗಳು ಸಾಮಾನ್ಯವಾಗಿ "ಕೊಕ್ಕೊಕೋsಕೋsss", ಎಂದೋ "ಕೋಕೋsಕೋsss" ಎಂದೋ ಕೂಗುತ್ತವೆ; ಕೆಲವು ಸಹನೆಗೆಟ್ಟ ಹುಂಜಗಳು "ಕೊಕ್ಕೊಕೋs" ಎಂದೋ  "ಕೋsಕೋss" ಎಂದೋ "ಹ್ರಸ್ವಾವರ್ತದಲ್ಲಿ ನುಡಿದು ಸುಮ್ಮನಾಗುತ್ತವೆ.  ಕೆಲವೊಮ್ಮೆ ತೀರ ಬೇಸರದಲ್ಲಿ "ಕೋss" ಎಂಬ ಪ್ಲುತಸ್ವರವನ್ನಷ್ಟೇ ನುಡಿದು, ಕೊಂಡರೆ ಕೊಳ್ಳಲಿ ಬಿಟ್ಟರೆ ಬಿಡಲಿ ಎಂದು ಸುಮ್ಮನಾಗುವುದೂ ಉಂಟು.  ಆದರೆ ಈ ಹುಂಜ ಮಾತ್ರ ಈ ಯಾವ ಸಾಂಪ್ರದಾಯಿಕ ಲಯವನ್ನೂ ಅನುಸರಿಸದೇ "ಕೊಕ್ಕೊಕೊ ಕೊಕ್ಕೋss" "ಕೊಕ್ಕೊಕೊ ಕೊಕ್ಕೋss" ಎಂದು ಕೂಗುತ್ತಿತ್ತು.  ಹೀಗೆ ಇದು ಬೆಳಗಿನ ಜಾವದಲ್ಲಿ ಕೂಗುತ್ತಿದ್ದರೆ, ಅರೆನಿದ್ದೆಯಲ್ಲಿದ್ದ ನಮಗೆ, ಆ "ಕೊಕ್ಕೊಕೊ ಕೊಕ್ಕೋss" ಎಂಬ ಕರೆಯಲ್ಲಿ, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ "ಅರ್ಥಮನರ್ಥಮ್" ಎಂಬ ಸ್ಪಷ್ಟವಾದ ಘೋಷವಾಣಿಯೇ ಕೇಳುತ್ತಿತ್ತು.

ಪ್ರತಿದಿನ ಜೋಪಡಿಯ ಶೃಂಗವನ್ನೇರಿ, ಕೊರಳುಬ್ಬಿಸಿ ಒಮ್ಮೆ "ಅರ್ಥಮನರ್ಥಮ್" ಎಂದು ಕೂಗುವುದು; ಕೊರಳು ಕೊಂಕಿಸಿ, ಎಲ್ಲಿಂದಲಾದರೂ ಪ್ರತಿವಾದಿಮಲ್ಲರು ಬರಬಹುದೇ ಎಂಬ ಗತ್ತಿನಲ್ಲಿ ಹತ್ತೂ ದಿಕ್ಕುಗಳನ್ನು ನೋಡಿ, ಮತ್ತೊಮ್ಮೆ "ಅರ್ಥಮನರ್ಥಮ್" ಭೇರಿ ಮೊಳಗಿಸುವುದು;  ಮತ್ತೊಮ್ಮೆ ದಶದಿಗ್ದರ್ಶನ, ಮತ್ತೊಮ್ಮೆ ಭೇರಿ - ಹೀಗೆ ಪ್ರತಿದಿನ ಬೆಳಗಿನ ಜಾವ, ಆಮೇಲೆ ಜನರಲ್ಲಿ ಆಧ್ಯಾತ್ಮಪ್ರಜ್ಞೆ ಖಿಲವಾಗಿ ಲೌಕಿಕಪ್ರಜ್ಞೆ ವಿಜೃಂಭಿಸುತ್ತಿದೆಯೆಂದೆನ್ನಿದಾಗಲೆಲ್ಲ ಒಮ್ಮೊಮ್ಮೆ, ವೇದಾಂತಭೇರಿಯನ್ನು ಬಾರಿಸುತ್ತಿದ್ದ ಹುಂಜ ಯಾವಾಗಲೋ ಒಂದು ದಿನ, ನಮ್ಮ ಅರಿವಿಗೇ ಬಾರದಂತೆ, ಕೂಗುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು.  ಪಾಪ ಯಾವ 'ಅನರ್ಥ' ಅದಕ್ಕೆ ಸಂಭವಿಸಿತ್ತೋ - ಸದೇಹಮುಕ್ತಿಯಂತೂ ದೊರೆತಿರಲಾರದು. 

Monday, December 28, 2020

ಜನಗಣಮನ: ವಿವಾದ-ನಿರ್ವಿವಾದ


ನಮ್ಮ ರಾಷ್ಟ್ರಗೀತೆ "ಜನಗಣಮನ" ಮತ್ತದನ್ನು ಸುತ್ತುವರಿದ ವಿವಾದದ ಮೇಲೆ ಬೆಳಕು ಚೆಲ್ಲುವ ಲೇಖನವೊಂದನ್ನು ಮಿತ್ರರಾದ ದಿಲೀಪ್ ಕುಮಾರ್ ಕೆಲದಿನದ ಹಿಂದೆ ಹಂಚಿಕೊಂಡಿದ್ದರು.  ಐದು ಚರಣಗಳಲ್ಲಿರುವ ಈ ಗೀತೆಯ ಮೊದಲ ಚರಣವನ್ನಷ್ಟೇ ನಮ್ಮ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದ್ದೇವೆ.  ಈ ಗೀತೆಯನ್ನು ಮೂಲತಃ ಬ್ರಿಟನ್ನಿನ ಚಕ್ರವರ್ತಿ ಐದನೆಯ ಜಾರ್ಜ್ ದೊರೆಯನ್ನು ಸ್ವಾಗತಿಸಲೋಸುಗ ರಚಿಸಿದ್ದೆಂದೂ, ಇದನ್ನು ರಚಿಸಿದ್ದಕ್ಕೇ ಆನಂತರದ ದಿನಗಳಲ್ಲಿ ಟಾಗೂರರಿಗೆ ನೊಬೆಲ್ ಪಾರಿತೋಷಕವೂ ಮತ್ತೆ ಕೆಲದಿನಗಳಾದ ಮೇಲೆ ನೈಟ್ ಹುಡ್ (knighthood) ಪದವಿಯೂ ದೊರಕಿತೆಂದೂ ಒಂದು ಆರೋಪ ಬಹುಕಾಲ ಈ ಗೀತೆಯನ್ನು ಸುತ್ತಿಕೊಂಡಿತ್ತು.  ಈಗಲೂ ಆಗೀಗ ತಲೆಯೆತ್ತುತ್ತಿರುತ್ತದೆ.  ಈ ವಿವಾದದ ಮೇಲೆ ಅಚ್ಚುಕಟ್ಟಾಗಿ ಬೆಳಕು ಚೆಲ್ಲುವ ಆ ಲೇಖನದಲ್ಲಿ ಒಂದು ಭಾಗ ನನ್ನ ಗಮನ ಸೆಳೆಯಿತು.  ಅದು ಹೀಗಿದೆ:

=========================================================================
"ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಟಿಸಲು (ಸಂಘಟಿಸಲು?) ಬ್ರಿಟಿಷ್ ಸರಕಾರ ಅಡ್ಡಿಮಾಡಿದಾಗ ಮುಂಬೈ ಪ್ರಾಂತ್ಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಾಧಿನಾಯಕನ ಪೂಜೆಯನ್ನು ಪ್ರಾರಂಭಿಸಿದ್ದರು. ೧೮೯೮ರಲ್ಲಿ ಬ್ರಿಟಿಷ್ ಸರಕಾರ ತಿಲಕರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ಬಂಧಿಸಿತು. ರವೀಂದ್ರರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ತಿಲಕರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದರು. ಆಗ ರವೀಂದ್ರರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(೧೯೦೧). ಇದನ್ನು ಶ್ರೀ ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಬೆಂಗಳೂರು ೨೦೦೭). ಇದರಲ್ಲಿರುವ ನೂರು ದೇಶಭಕ್ತಿಗೀತೆಗಳು ರವೀಂದ್ರರ ಉಜ್ವಲ ಸ್ವಾಭಿಮಾನ, ದೇಶಾಭಿಮಾನಗಳಿಗೆ ನಿದರ್ಶನಗಳಾಗಿವೆ.  ರವೀಂದ್ರರು ತಿಲಕರ ಗಣಾಧಿನಾಯಕನನ್ನು ಜನಗಣದ ಮನದ ಅಧಿನಾಯಕನಾಗಿಸಿದರು.

...

"‘ಜನಗಣಮನ’ದ ಬಗ್ಗೆ ಅಪಪ್ರಚಾರಗಳೂ ಇದ್ದುವು. ಅದನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೆಂದೂ ಅದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂದೂ ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ರವೀಂದ್ರರು ಬೆಲೆಕೊಡಲಿಲ್ಲ. ಅವರ ಆತ್ಮೀಯರೊಬ್ಬರಿಗೆ ಬರೆದ ಪತ್ರದಲ್ಲಿ “ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ” ಎಂದು ಹೇಳಿದ್ದಾರೆ."
=========================================================================

ತಿಲಕರ ಗಣನಾಯಕನೇ ರವೀಂದ್ರರ ಜನಗಣಮನದ ಅಧಿನಾಯಕನೆನ್ನುವ ಅಭಿಪ್ರಾಯಕ್ಕೆ ಲೇಖಕರ ಆಕರವೇನೋ ನನಗೆ ತಿಳಿಯದು.  ತಿಲಕರು ರಾಜದ್ರೋಹದ ಆಪಾದನೆಯ ಮೇಲೆ ಬಂಧನಕ್ಕೊಳಗಾಗಿದ್ದು ನಿಜ, ರವೀಂದ್ರರು ಹಲವು ರೀತಿಯಲ್ಲಿ ತಿಲಕರ ಬೆಂಬಲಕ್ಕೆ ನಿಂತದ್ದೂ ನಿಜ.  ತಿಲಕರ ಗಣೇಶೋತ್ಸವದ ಬಗ್ಗೆ ರವೀಂದ್ರರ ಅಭಿಪ್ರಾಯ ಎಂತಿತ್ತೋ ತಿಳಿಯದು, ಆದರೆ ದೇಶವನ್ನು ಒಗ್ಗೂಡಿಸುವ ಮಹದಾಶಯವುಳ್ಳ ಅದನ್ನವರು ಬೆಂಬಲಿಸಿದ್ದಿರಲು ಸಾಕು.  ಆದರೆ ತಿಲಕರ ಗಣಾಧಿನಾಯಕನನ್ನೇ ರವೀಂದ್ರರು ಜನಗಣಮನದ ಅಧಿನಾಯಕನಾಗಿಸಿದರು ಎನ್ನುವುದು ಊಹೆಯೆನ್ನದೇ ವಿಧಿಯಿಲ್ಲ - ಏಕೆಂದರೆ ಹಾಗೆ ಹೇಳಲು ಬೇಕಾದ ಉಲ್ಲೇಖಗಳಾಗಲೀ, ಜನಗಣಮನ ಗೀತೆಯಲ್ಲಾಗಲೀ ಯಾವ ಸೂಚನೆಯೂ ಕಂಡುಬರುವುದಿಲ್ಲ.  ಜನ'ಗಣ'ಮನ 'ಅಧಿನಾಯಕ' ಎಂಬ ಎರಡೇ ಪದಪ್ರಯೋಗದ ಸಾಮ್ಯದಿಂದ ರವೀಂದ್ರರ ಜನಗಣಮನ ಅಧಿನಾಯಕನನ್ನು ತಿಲಕರ ಗಣೇಶನೆಂದು ಅರ್ಥೈಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ.  ಇದರ ವಿಶ್ಲೇಷಣೆಗೆ ತೊಡಗುವ ಮೊದಲು, ರವೀಂದ್ರರ ಮೂಲ ಬೆಂಗಾಲೀ ಗೀತೆಯ ಪೂರ್ಣಪಾಠವನ್ನು ನೋಡೋಣ (ಸುಲಭವಾಗಿ ಅರ್ಥವಾಗಲೆಂದು ಮೂಲಬೆಂಗಾಲೀ ಉಚ್ಚಾರಣೆಯನ್ನು ಕೂಡಿದ ಮಟ್ಟಿಗೂ ಹಿಂದೀ/ಸಂಸ್ಕೃತ ಉಚ್ಚಾರಣೆಗೆ ಪರಿವರ್ತಿಸಿದ್ದೇನೆ, ಅರ್ಥ ಬದಲಾಗಬಹುದೆನಿಸಿದ ಕಡೆ ಮೂಲ ಬೆಂಗಾಲೀ ಪದಗಳನ್ನು ಹಾಗೇ ಉಳಿಸಿಕೊಂಡಿದ್ದೇನೆ):


ಜನಗಣಮನ ಅಧಿನಾಯಕ ಜಯ ಹೇ, ಭಾರತ ಭಾಗ್ಯವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ, ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ, ಉಚ್ಚಲ ಜಲಧಿ ತರಂಗ
ತವ ಶುಭನಾಮೇ ಜಾಗೇ, ತವ ಶುಭ ಆಶಿಶ ಮಾಗೇ
ಗಾಹೇ ತವ ಜಯಗಾಥಾ

ಜನಗಣ ಮಂಗಳದಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಅಹರಹ ತವ ಆಹ್ವಾನ ಪ್ರಚಾರಿತ, ಸುನಿ ತವ ಉದಾರವಾಣಿ
ಹಿಂದು ಬೌದ್ಧ ಸಿಖ ಜೈನ, ಪಾರಸಿಕ ಮುಸಲ್ಮಾನ ಕ್ರಿಸ್ತಾನಿ
ಪೂರವ ಪಶ್ಚಿಮ ಆಸೇ, ತವ ಸಿಂಹಾಸನ ಪಾಶೇ
ಪ್ರೇಮಹಾರ ಜಯಗಾಥಾ

ಜನಗಣ ಐಕ್ಯ ವಿಧಾಯಕ ಜಯ ಹೇ, ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಪತನ ಅಭ್ಯುದಯ ಬಂಧುರ ಪಂಥಾ, ಯುಗಯುಗ ಧಾವಿತ ಜಾತ್ರೀ
ಹೇ ಚಿರಸಾರಥಿ, ತವ ರಥಚಕ್ರೇ ಮುಖರಿತ ಪಥ ದಿನರಾತ್ರೀ
ದಾರುಣ ವಿಪ್ಲವ ಮಾಝೇ, ತವ ಶಂಖಧ್ವನಿ ಬಾಜೇ
ಸಂಕಟದುಃಖ ತ್ರಾತಾ

ಜನಗಣ ಪಥ ಪರಿಚಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಘೋರತಿಮಿರಘನನಿಬಿಡನಿಶೀಥೇ ಪೀಡಿತ ಮೂರ್ಛಿತ ದೇಶೇ
ಜಾಗ್ರತ ಛಿಲ ತವ ಅವಿಚಲ ಮಂಗಲ ನತನಯನೇ ಅನಿಮೇಶೇ
ದುಃಸ್ವಪ್ನೇ ಆತಂಕೇ, ರಕ್ಷಾ ಕರಿಲೇ ಅಂಕೇ
ಸ್ನೆಹಮಯೀ ತುಮಿ ಮಾತಾ

ಜನಗಣದುಃಖತ್ರಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ರಾತ್ರಿ ಪ್ರಭಾತಿಲ ಉದಿಲ ರವಿಚ್ಛವಿ, ಪೂರ್ವ ಉದಯಗಿರಿ ಭಾಲೇ
ಗಾಹೆ ವಿಹಂಗಮ ಪುಣ್ಯ ಸಮೀರಣ, ನವಜೀವನರಸ ಢಾಲೇ
ತವ ಕರುಣಾರುಣ ರಾಗೇ, ನಿದ್ರಿತಭಾರತ ಜಾಗೇ
ತವಚರಣೇ ನತ ಮಾಥಾ

ಜಯ ಜಯ ಜಯ ಹೇ, ಜಯ ರಾಜೇಶ್ವರ, ಭಾರತ ಭಾಗ್ಯವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ

ಮೊದಲಿಗೆ, ತಿಲಕರ ಗಣನಾಥ ಯಾವ ಅಮೂರ್ತಕಲ್ಪನೆಯೂ ಇಲ್ಲ.  ದೇಶದ ಬಹುತೇಕರ ಮನೆಮನೆಗಳಲ್ಲೂ ಪೂಜಿಸಲ್ಪಡುವ ಆನೆಮೊಗದ, ಡೊಳ್ಳುಹೊಟ್ಟೆಯ 'ಗಣಪತಿಬಪ್ಪ'ನೇ ಈತ.  ಜನ ಸೇರಲು ಸರ್ಕಾರ ಹಾಕಿದ ನಿರ್ಬಂಧವನ್ನು ಮುರಿಯುವ ಸಲುವಾಗಿ, ಗಣೇಶನ ನೆಪದಿಂದ ಜನರು ಹೊರಬಂದು ಒಂದಾಗಬೇಕೆಂಬ ಉದ್ದೇಶದಿಂದ ತಿಲಕರು ಆರಂಭಿಸಿದ್ದು ಸಾರ್ವಜನಿಕ ಗಣೇಶೋತ್ಸವ.  ಇದಕ್ಕಿದ್ದ ರಾಜಕೀಯಕಾರಣಗಳನ್ನು ಬಿಟ್ಟರೆ ಇದಕ್ಕೆ ಇನ್ನಾವ ಆಧ್ಯಾತ್ಮಿಕ ಕಾರಣಗಳೂ ಇರಲಿಲ್ಲ.  ಆದರೆ ರವೀಂದ್ರರ ಅಮೂರ್ತಕಲ್ಪನೆಯ "ಜನಗಣಮನದ ಅಧಿನಾಯಕ" ಮೂರ್ತರೂಪದಲ್ಲಾಗಲಿ, ಸಂಕೇತಗಳಲ್ಲಾಗಲಿ, ಕಲ್ಪನೆಗಳಲ್ಲಾಗಲಿ ತಿಲಕರ ಗಣೇಶನನ್ನು ಹೋಲುವುದೇ ಇಲ್ಲ.

ಇಷ್ಟಕ್ಕೆ ಪ್ರತಿಕ್ರಿಯೆ ಬರೆಯುತ್ತಾ, ರಾಷ್ಟ್ರಗೀತೆಯ ಸುತ್ತಣ ವಿವಾದವನ್ನೂ ಇನ್ನಷ್ಟು ವಿವರವಾಗಿ ವಸ್ತುನಿಷ್ಠವಾಗಿ ಪರಿಶೀಲಿಸುವ ಅಗತ್ಯವಿದೆಯೆನಿಸಿತು.  ಅದರ ಫಲವೇ ಪ್ರಸ್ತುತ ಲೇಖನ.  ಮೊದಲನೆಯದಾಗಿ, ಇದರ 'ರಾಷ್ಟ್ರಗೀತೆ'ಯ ಆಯಾಮವನ್ನು ಬದಿಗಿಟ್ಟರೆ, ಇಡೀ ಗೀತೆ ಒಂದು ಉಜ್ವಲವಾದ, ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಅದನ್ನು ಆಮೇಲೆ ಪರಿಶೀಲಿಸೋಣ.  ಇದನ್ನು ಸುತ್ತುವರಿದ ವಿವಾದ ಮೂಲಲೇಖನದ ಮುಖ್ಯವಸ್ತುವಾದ್ದರಿಂದ ಅದನ್ನು ಮೊದಲು ಪರಿಶೀಲಿಸೋಣ.

ಇದು ಜಾರ್ಜ್ ದೊರೆಯನ್ನು ಕುರಿತ ಸ್ತುತಿ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತ ಕವಿ, ಹಾಗೆ ಪ್ರಶ್ನೆ ಕೇಳಿದವರದ್ದು "ಅಪರಿಮಿತಮೌಢ್ಯ" ಎಂದಿದ್ದಾರೆಂದು ಮೂಲಲೇಖನ ತಿಳಿಸುತ್ತದೆ (“ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ”).  ಈ ಅನುವಾದದ ಆಕರ ತಿಳಿದಿಲ್ಲ, ಆದರೆ 'ವಿರೋಧಿ'ಗಳದು 'ಅಪರಿಮಿತಮೌಢ್ಯ' ಎಂದು ಕರೆದು ವೈಯಕ್ತಿಕ ದಾಳಿ ಮಾಡುವುದು ಕವಿಯ ಉದ್ದೇಶವಾಗಿರಲಿಲ್ಲವೆಂಬುದು, ಕವಿಯ ಇದೇ ಮಾತಿನ ಇಂಗ್ಲಿಷ್ ಅನುವಾದವನ್ನು ನೋಡಿದರೆ ತಿಳಿದುಬಿಡುತ್ತದೆ - 1939ರ ಮಾರ್ಚ್ 19ರ ತಮ್ಮ ಪತ್ರವೊಂದರಲ್ಲಿ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ" - ಎರಡೂ ಅನುವಾದಗಳ ಸೂಕ್ಷ್ಮವ್ಯತ್ಯಾಸ ಗಮನಿಸಿ) - Purvasa, Phalgun, 1354, p738.  ರವೀಂದ್ರರಿಗೆ ಹೀಗೆನ್ನಿಸಲೂ ಕಾರಣವಿದೆ, ಅದನ್ನು ಆಮೇಲೆ ನೋಡೋಣ.  ಸದ್ಯಕ್ಕಂತೂ ಅಪರಿತಮೌಢ್ಯದ ಶಂಕೆಗೊಳಗಾಗದೇ, ಈ ಗೀತೆ ಯಾವ ರೀತಿಯಲ್ಲಾದರೂ ಜಾರ್ಜ್ ದೊರೆಗೆ ಅನ್ವಯಿಸುವುದೇ ಎಂಬುದನ್ನೊಮ್ಮೆ ಪರಿಶೀಲಿಸೋಣ.

ಮೊದಲಿಗೆ, ದೇಶ-ಭಾಷೆಗಳು ಬಹಳ ಭಾವನಾತ್ಮಕವಾದ ವಿಷಯಗಳು, ಮತ್ತು ಈ ಭಾವನೆಯಲ್ಲಿ ಅತ್ಯುತ್ಕಟವಾದ ಭಾವನೆ ತಾಯಿಯನ್ನು ಕುರಿತದ್ದು.  ದೇಶವನ್ನಾಗಲೀ ಭಾಷೆಯನ್ನಾಗಲೀ ಹೆಣ್ಣಿಗೆ, ಮಾತೆಗೆ ಹೋಲಿಸುವುದೇ ಸಾಮಾನ್ಯವಾಗಿ ಎಲ್ಲೆಡೆಯೂ ಪ್ರಚಲಿತವಿರುವ ರೂಢಿ.  ಭಾರತದಲ್ಲಿರಲಿ, ಪಾಶ್ಚಾತ್ಯರಲ್ಲೂ ದೇಶವೊಂದನ್ನು ಕುರಿತು ಮಾತಾಡುವಾಗ 'her' ಎನ್ನುವ ಸರ್ವನಾಮವನ್ನು ಬಳಸುವರೇ ನಿನಾ 'him' ಎಂಬುದನ್ನಲ್ಲ; ಹಾಗೆಯೇ ಮನೆಮಾತು ತಾಯ್ನುಡಿ, ಮಾತೃಭಾಷೆ, Mother-tongue ಎನ್ನಿಸಿಕೊಳ್ಳುತ್ತದೆಯೇ ಹೊರತು ತಂದೆನುಡಿ, ಪಿತೃಭಾಷೆ, Father-tongue ಎನ್ನುವುದಿಲ್ಲ.  ಸ್ವದೇಶವು ತಾಯ್ನೆಲ, ಮಾತೃಭೂಮಿ Mother-land ಆಗುತ್ತದೆಯೇ ಹೊರತು ಹೊರತು ತಂದೆನೆಲ, ಪಿತೃಭೂಮಿ Father-land ಆಗುವುದಿಲ್ಲ.  ಭಾಷಿಕವಾಗಿಯೂ, ಭಾವನಾತ್ಮಕವಾಗಿಯೂ ನೆಲ-ನುಡಿಗಳು ಹೆಣ್ಣು.  ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ ಎನ್ನುವುದೇ ಈ ನೆಲದ ಭಾವ.  ಹೀಗಿರುವಾಗ "ಭಾರತ ಭಾಗ್ಯವಿಧಾತ"ನ (ಆತ ತಂದೆಯೂ ಅಲ್ಲ, ವಿಧಾತ, ಸ್ವಾಮಿ, ಪ್ರಭು), ಈ ನೆಲದ ಭಾವಕ್ಕೆ ಹೊರಗು.  ಆದ್ದರಿಂದ ಅದೆಷ್ಟೇ ಉಜ್ವಲವಾದ ದೇಶಭಕ್ತಿಯಿಂದ ಕೂಡಿದ್ದರೂ ಅದು ಈ ನೆಲದ ಬಗ್ಗೆ "ವಂದೇ ಮಾತರಂ" ಉದ್ದೀಪಿಸಬಲ್ಲ ಉತ್ಕಟಭಾವನೆಗಳನ್ನು ಉದ್ದೀಪಿಸಲಾರದು.

ಇನ್ನು ಜನಗಣದೊಡನೆ ಆ "ಜನಗಣಮನ ಅಧಿನಾಯಕ"ನ ಸಂಬಂಧವನ್ನು ನೋಡಿ - ಆತ "ಭಾರತ ಭಾಗ್ಯವಿಧಾತ" - ಭಾರತದ ಭಾಗ್ಯವನ್ನು ದಯಪಾಲಿಸುವವನು, ಭಾರತದ ಹಣೆಬರಹ ಬರೆಯುವ ವಿಧಾತ, ಬ್ರಹ್ಮ.  ನಮ್ಮ ಭಾಗ್ಯವನ್ನು ಆತ ದಯಪಾಲಿಸುತ್ತಾನೆಯೇ ಹೊರತು, ನಮ್ಮ ಭಾಗ್ಯದಲ್ಲಿ ಆತ ಪಾಲ್ಗೊಳ್ಳಲಾರ.  ಅವನು ದೊರೆ - ಇಡೀ ದೇಶ, ಜನಸಮುದಾಯಗಳು, ನದಿಸಾಗರಗಳು ಅವನ ಶುಭನಾಮವನ್ನು ನೆನೆಸಿಕೊಂಡು ಏಳುತ್ತದೆ, ಆತನ ಉದಾರವಾಣಿಯನ್ನು ಕೇಳಿ ಸಕಲಜನರೂ ಆತನ "ಸಿಂಹಾಸನ"ದ ಸುತ್ತ ನೆರೆಯುತ್ತಾರೆ, ಆತನಿಗೆ ಪ್ರೇಮದಿಂದ ಜಯಕಾರ ಹಾಕುತ್ತಾರೆ, ಯುಗಯುಗಗಳಿಂದ ಏರಿಳಿತದ ಹಾದಿಯಲ್ಲಿ ಸಾಗಿರುವ ಜನಜಾತ್ರೆಗೆ ಹಗಲಿರುಳು ದಾರಿತೋರುವುದು ಆ ಚಿರಸಾರಥಿಯ ರಥದ ಚಕ್ರಗಳು, ಅವನ ಶಂಖಧ್ವನಿ ನಮ್ಮ ಸಕಲ ಸಂಕಟವಿಪ್ಲವಗಳಿಂದಲೂ ಮೇಲೆತ್ತುವ ಮಹಾಶಕ್ತಿ; "ಘೋರಾಂಧಕಾರದಲ್ಲಿ ಮೂರ್ಛಿತವಾಗಿ ಮಲಗಿರುವ ಈ ದೇಶ"ವನ್ನು ಮೇಲೆಬ್ಬಿಸಲು ಆತನ ಮಂಗಲದೃಷ್ಟಿಯೇ ಬೇಕು.  ಇಂತಿರುವ ಹೀಗೆ ಜನಗಣದ ದುಃಖತ್ರಾಯಕನಾದ ಭಾರತಭಾಗ್ಯವಿಧಾತನು ಅವರನ್ನು ತೊಡೆಯಮೇಲಿರಿಸಿಕೊಂಡು ಸಲಹುವ ತಾಯಿಯೂ ಆಗಿದ್ದಾನೆ (ತಾಯಿಲ್ಲದ ತಬ್ಬಲಿಗಳಿಗೆ ತಂದೆಯೇ ತಾಯಿಯಷ್ಟೇ? ಆದರೇನು, ತಂದೆಯೆಂಬ, ವಿಧಾತನೆಂಬ, ದೊರೆಯೆಂಬ ಭಾವದಲ್ಲಿ ಇದೊಂದು ಸಣ್ಣ ಆಯಾಮವಷ್ಟೆ).  ರಾತ್ರೆ ಕಳೆದು ಉದಯಾದ್ರಿಯ ಹಣೆಯ ಮೇಲೆ ಮೂಡುವ ಭಾಸ್ಕರ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಬೀಸುವ ತಂಗಾಳಿ ಎಲ್ಲವೂ ಆತನ ಕರಣುರಾರುಣರಾಗವನ್ನೇ ಹಾಡುತ್ತಾ, ಈ "ನಿದ್ರಿಸುತ್ತಿರುವ ಭಾರತ"ವನ್ನು ಎಚ್ಚರಿಸುತ್ತಿವೆ.  ಇಂತಹ ಭಾರತಭಾಗ್ಯವಿಧಾತನಾದ "ರಾಜೇಶ್ವರ"ನ ಚರಣಗಳಿಗೆ ನಾವು ತಲೆವಾಗುತ್ತಾ ಜಯಗೀತೆ ಹಾಡುತ್ತೇವೆ.

ಗೀತೆಯುದ್ದಕ್ಕೂ ಈ ಭಾರತಭಾಗ್ಯವಿಧಾತ ಮತ್ತು ಭಾರತದ (ಭಾರತನಿವಾಸಿಗಳಾದ ನಮ್ಮ) ಸಂಬಂಧ ತಾಯಿ ಮಕ್ಕಳ ಹೊಕ್ಕುಳಬಳ್ಳಿ ಸಂಬಂಧವಲ್ಲ, ಅಲ್ಲಿ ಸಲುಗೆಯಿಲ್ಲ, ಆತ್ಮೀಯತೆಯಿಲ್ಲ, ಅಪ್ಪುಗೆಯಿಲ್ಲ, ಅದರಿಂದಲೇ ನಮ್ಮ ಹಕ್ಕಾಗಿ ಬರುವ 'ನನ್ನದು' ಎನ್ನಿಸುವ ಯಾವ ಭಾವವೂ ಇಲ್ಲ, ಬದಲಿಗೆ ಆ ಸಂಬಂಧ - ದೇವ ಮತ್ತು ಹುಲುಮನುಜರದ್ದು, ರಾಜ-ಪ್ರಜೆಗಳದ್ದು, ಯಜಮಾನ-ಸೇವಕರದ್ದು; ಆತನ 'ವಿಧಾಯಕ'ತೆ, ಆತನ ಸಿಂಹಾಸನ, ಆತನ ರಥಚಕ್ರ, ಆತನ ಶಂಖಧ್ವನಿ, ಆತನ ರಾಜೇಶ್ವರ ಪದವಿ - ಇದನ್ನಲ್ಲದೇ ಬೇರೇನನ್ನೂ ಸೂಚಿಸುವುದಿಲ್ಲ.  ನಮ್ಮ ಭಾಗ್ಯಸರ್ವಸ್ವವೂ ಅವನ ಕೈಯಲ್ಲಿದೆ, ಅವನ ದಯೆಯಿಂದ ಬದುಕು ಸಾಗುತ್ತಿದೆ.  ನಾವು ಆತನ ಪಾದಗಳಿಗೆ ಹಣೆಯೊತ್ತಿ, ಜಯಗೀತೆ ಹಾಡುತ್ತ ಬದುಕುತ್ತೇವೆ.  ಇಂತಹ ಶರಣಾಗತಿಗೆ ನಿಷ್ಠೆಗೆ ಅರ್ಹನಾದ ಆ "ಭಾಗ್ಯವಿಧಾತ" ಒಂದೋ ಆ ಪರಮಾತ್ಮನಿರಬೇಕು, ಅಥವಾ ಈ ದೇಶವನ್ನಾಳುವ ದೊರೆಯಿರಬೇಕು.  ಈ ಗೀತೆಯಲ್ಲಿ ದೇಶದ ಪ್ರಸಕ್ತಿಯಿರದಿದ್ದರೆ ಅದೊಂದು ದೇವಪ್ರಾರ್ಥನೆಯ ಗೀತೆಯೆಂದು ಸುಲಭವಾಗಿ ಅರ್ಥೈಸಬಹುದಿತ್ತು - ವಾಸ್ತವದಲ್ಲಿ ಇದು ಪ್ರಾರ್ಥನಾಗೀತೆಯೇ - ಈ ಗೀತೆಯನ್ನು ಬ್ರಹ್ಮಸಮಾಜವು ಬ್ರಹ್ಮಗೀತೆಯೆಂದು ಅಂಗೀಕರಿಸಿ ಪ್ರಕಟಿಸಿದೆ, ಅಲ್ಲದೇ ಮೇಲಿನ ಲೇಖನದಲ್ಲೂ ವಿವರಿಸಿದಂತೆ, ರವೀಂದ್ರರ ಹಲವು ಪ್ರಾರ್ಥನಾಗೀತೆಗಳು ಇದೇ ತಂದೆ-ಈಶ ಭಾವವನ್ನು ಹೊರಸೂಸುತ್ತವೆ.  ಅವರ ಅಂತಹ ಒಂದೆರಡು ಮನೋಜ್ಞವಾದ ಪ್ರಾರ್ಥನಾಗೀತೆಗಳನ್ನು ಇಲ್ಲಿ ಕೇಳಬಹುದು:

https://youtu.be/YgFMeVceP34 (ಪಾದಪ್ರಾಂತೇ ರಖೋ ಸಬಕೆ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)
https://youtu.be/KfzkYf-2vaU (ಬಹೆ ನಿರಂತರ ಅನಂತ - ಡಾ. ಬಾಲಮುರಳೀಕೃಷ್ಣ)
https://youtu.be/I7Nj2G4g4hQ (ತುಮಿ ಆಮದೆರ್ ಪಿತಾ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)

ಒಂದು ದೈವಪ್ರಾರ್ಥನೆಯಾಗಿ "ಜನಗಣಮನ" ಒಂದು ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ ಇಲ್ಲಿ ದೇಶದ ಪ್ರಸಕ್ತಿಯೂ ಇದ್ದು, ಇದೊಂದು ದೇಶಭಕ್ತಿಗೀತೆಯೆಂದೇ ಖ್ಯಾತವಾಗಿದೆ.  ರವೀಂದ್ರರೂ ಈ ಗೀತೆಯನ್ನು ಬರೆದ ಹಿನ್ನೆಲೆಯನ್ನು ವಿವರಿಸುತ್ತಾ ಇದೊಂದು ದೇಶಭಕ್ತಿಗೀತೆಯೆಂದೇ ಹೇಳಿಕೊಂಡಿದ್ದಾರೆ (ಅದನ್ನು ಆಮೇಲೆ ನೋಡೋಣ).  ಆದರೆ ವಿಧಾಯಕ (ವಿಧಿಸುವವನು, ಶಾಸಿಸುವವನು, ಅಧಿಪತಿ), ಸಿಂಹಾಸನ, ರಾಜೇಶ್ವರ ಮೊದಲಾದ ಪದಪ್ರಯೋಗಗಳು ಇದನ್ನು ದೇಶಭಕ್ತಿಗೀತೆಯೆನ್ನುವುದಕ್ಕಿಂತ ಒಬ್ಬ ಚಕ್ರವರ್ತಿಗೆ ದೇಶದ ಭಕ್ತಿಯನ್ನು ನಿಷ್ಠೆಯನ್ನು ಸೂಚಿಸುವ ಗೀತೆಯನ್ನಾಗಿಸಿದೆಯೆಂದರೆ ಸುಳ್ಳಾಗಲಾರದು.  ಸಹಜವಾಗಿಯೇ ಆ ಚಕ್ರವರ್ತಿ, ರಾಜೇಶ್ವರ ಯಾರು ಎಂಬ ಪ್ರಶ್ನೆ ಬರುತ್ತದೆ.  ಈಗ, ಈ ಪ್ರಶ್ನೆಯನ್ನು ಇನ್ನಷ್ಟು ದಟ್ಟವಾಗಿಸಿ, ಅದನ್ನು ಐದನೆಯ ಜಾರ್ಜ್ ದೊರೆಗೆ ಕಟ್ಟಲು ಕಾರಣವಾದ ಸನ್ನಿವೇಶಗಳನ್ನು ನೋಡೋಣ:

1911 - ಆಗಿನ್ನೂ ಪೂರ್ಣಸ್ವರಾಜ್ಯದ ಬೇಡಿಕೆ ಶುರುವಾಗಿರಲಿಲ್ಲ.  ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯದ ಅಧೀನರಾಷ್ಟ್ರವಾಗಿ ಮಾಡಿ 'ಡೊಮಿನಿಯನ್' ಸ್ಥಾನಮಾನ ನೀಡಿ ಒಂದು ಮಟ್ಟದ ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಯನ್ನು ಭಾರತದ ಸ್ವಾತಂತ್ರ್ಯಚಳುವಳಿಯ ನಾಯಕರು ಮುಂದಿಟ್ಟಿದ್ದರು.  ಇದರಿಂದ ಭಾರತ ಬಹುಮಟ್ಟಿಗೆ ಸ್ವತಂತ್ರವಾಗುವುದಾದರೂ ಅದು ಬ್ರಿಟನ್ನಿನ ಧ್ವಜದಡಿಯಲ್ಲಿ, ಹೆಸರಿನಲ್ಲಾದರೂ ಬ್ರಿಟನ್ ಅರಸೊತ್ತಿಗೆಗೆ ಅಧೀನವಾಗಿ ಬದುಕಬೇಕಿತ್ತು.  ಬ್ರಿಟಿಷರ ಆಡಳಿತವು ತೊಲಗಿ ಅಷ್ಟರಮಟ್ಟಿಗಾದರೂ ಸ್ವಾತಂತ್ರ್ಯ ದೊರಕಲಿ ಸದ್ಯಕ್ಕೆ ಎಂಬುದು ರಾಷ್ಟ್ರನಾಯಕರ ಇರಾದೆಯಾಗಿತ್ತು.  ಆದ್ದರಿಂದ ಯಾವುದು ಹೇಗೇ ಇರಲಿ, ಸದ್ಯಕ್ಕಂತೂ ಬ್ರಿಟಿಷ್ ಅರಸೊತ್ತಿಗೆಗೆ ನಿಷ್ಠವಾಗಿರುವುದು ಕಾಂಗ್ರೆಸ್ಸಿಗೆ ಅನಿವಾರ್ಯವಾಗಿತ್ತು.  1911ರ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿದ್ದ ಪರಿಸ್ಥಿತಿ ಇದು.  ಇದಲ್ಲದೇ ಇದೇ ಸುಮಾರಿನಲ್ಲಿ ಮತ್ತೆರಡು ಮಹತ್ವದ ಬೆಳವಣಿಗೆಗಳಾದುವು.  ಜೂನ್ 22ರಂದು ಐದನೆಯ ಜಾರ್ಜ್ ಬ್ರಿಟಿಷ್ ಸಾಮ್ರಾಜ್ಯದ ದೊರೆಯಾಗಿ, ಭಾರತದ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿದ.  ಡಿಸೆಂಬರ್ 12ರಂದು ಕಲ್ಕತ್ತಾದ ಕೊರೊನೇಶನ್ ಮೈದಾನದಲ್ಲಿ ಅದ್ದೂರಿಯಾದ ದರ್ಬಾರ್ ಸಮಾರಂಭ ನಡೆಯಿತು.  ದೇಶದ ಎಲ್ಲ ರಾಜರು, ಗಣ್ಯರು ಸೇರಿದಂತೆ ಸಾವಿರಾರು ಜನ ನೂತನ ಚಕ್ರವರ್ತಿ-ಚಕ್ರವರ್ತಿನಿಯರೆದುರು ನಡುಬಾಗಿಸಿ ಮುಜುರೆ ಮಾಡಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ತಮ್ಮ ನಿಷ್ಠೆ ಪ್ರದರ್ಶಿಸಿದರು.  ಇದೇ ಸಂದರ್ಭಕ್ಕೆ ಪೂರ್ವಭಾವಿಯಾಗಿ, ರವೀಂದ್ರರ ಮಿತ್ರನಾದ ಬ್ರಿಟಿಷ್ ಉನ್ನತ ಅಧಿಕಾರಿಯೊಬ್ಬ, ಭಾರತಕ್ಕೆ ಆಗಮಿಸಲಿರುವ ಜಾರ್ಜ್ ಚಕ್ರವರ್ತಿಗಾಗಿ ಒಂದು ಸ್ವಾಗತಗೀತೆಯನ್ನು ಬರೆಯಲು ಸಾಧ್ಯವೇ ಎಂದು ರವೀಂದ್ರರನ್ನು ಕೇಳಿದ್ದ (ಇದು, ಅದಾದ ಅನೇಕ ವರ್ಷಗಳನಂತರ, 1937ರಲ್ಲಿ, ರವೀಂದ್ರರೇ ತಮ್ಮ ಪತ್ರವೊಂದರಲ್ಲಿ ನೀಡಿರುವ ವಿವರಣೆ - ಅವರ ಪೂರ್ಣವಿವರಣೆಯನ್ನು ಆಮೇಲೆ ನೋಡೋಣ).   ರವೀಂದ್ರರು ಈ ಬೇಡಿಕೆಯನ್ನು ಒಪ್ಪಿದರೋ ಬಿಟ್ಟರೋ, ಗೀತೆಯನ್ನಂತೂ ಬರೆದರು - ಅದೇ, "ಜನಗಣಮನದ ಅಧಿನಾಯಕನಾದ ಭಾರತಭಾಗ್ಯವಿಧಾತ"ನಿಗೆ ಜಯವನ್ನು ಹಾಡುವ ಪ್ರಸ್ತುತ ಗೀತೆ.  ಮೇಲಿನ ದರ್ಬಾರ್ ನಡೆದ ಎರಡೇ ವಾರಗಳನಂತರ ಡಿಸೆಂಬರ್ 27ರಂದು ಕಲ್ಕತ್ತಾದಲ್ಲೇ ನಡೆದ 26ನೆಯ ಕಾಂಗ್ರೆಸ್ ಅಧಿವೇಶನದ ಎರಡನೆಯ ದಿನ, ಕಲಾಪದ ಆರಂಭದಲ್ಲಿ ಈ ಗೀತೆಯನ್ನು ಪ್ರಾರ್ಥನಾಗೀತೆಯಾಗಿ ಹಾಡಿದರು ಕೂಡ (ಆ ದಿನ ಅವರೊಟ್ಟಿಗೆ ದನಿಗೂಡಿಸಿದ್ದು ಅವರ ಅಕ್ಕನ ಮಗಳಾದ, ಖ್ಯಾತ ಮಹಿಳಾವಾದಿ ಸರಳಾದೇವಿ ಚೌಧುರಾಣಿ).  ಆನಂತರ ಬಂದಿದ್ದ ಶುಭಸಂದೇಶಗಳನ್ನು ಓದಲಾಯಿತು ಮತ್ತು ನೂತನ ಚಕ್ರವರ್ತಿ-ಚಕ್ರವರ್ತಿನಿಯರಿಗೆ ನಿಷ್ಠಾಪೂರ್ಣಸ್ವಾಗತವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಲಾಯ್ತು.  ತದನಂತರ ಚಕ್ರವರ್ತಿ-ಚಕ್ರವರ್ತಿನಿಯರನ್ನು ಸ್ವಾಗತಿಸುವ (ಇದೇ ಸರಳಾದೇವಿಯವರ ಪತಿ, ಪಂಜಾಬಿನ ಪತ್ರಕರ್ತ, ಕಾಂಗ್ರೆಸ್ ನಾಯಕ ರಾಂ ಭುಜ್ ಚೌಧುರಿಯವರು ರಚಿಸಿದ) "ಬಾದಶಾಹ್ ಹಮಾರಾ" ಎಂಬ ಗೀತೆಯನ್ನು ಹಾಡಲಾಯಿತು.

ಮೇಲಿನದು ಭಾರತೀಯಪತ್ರಿಕೆಗಳ ಮತ್ತು ಕಾಂಗ್ರೆಸ್ ಅಧಿವೇಶನದ ವಾರ್ಷಿಕವರದಿ.  ಪಾಶ್ಚಾತ್ಯಪತ್ರಿಕೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದೇ ವರದಿ ಮಾಡಿದುವು:

"The Bengali poet Rabindranath Tagore sang a song composed by him specially to welcome the Emperor." (Statesman, 28 December 1911)

"The proceedings began with the singing by Rabindranath Tagore of a song specially composed by him in honour of the Emperor." (Englishman, 28 December 1911) 

ಈ ಗೀತೆಯನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೋ ಇಲ್ಲವೋ, ಕಾಂಗ್ರೆಸ್ಸಿಗಾಗಿಯೇ ಬರೆದರೋ ಇಲ್ಲವೋ, ಕೊನೆಗೆ ಅವರೇ ಹಾಡಿದರೋ ಇಲ್ಲವೋ, ಆದರೆ ರಚನೆಯಾದ ಕೆಲವೇ ದಿನಗಳಲ್ಲಿ ಅದು ಉಪಯೋಗಿಸಲ್ಪಟ್ಟ ಸಂದರ್ಭ, ಮತ್ತು ಈಗಾಗಲೇ ವಿವರಿಸಿದಂತೆ ಗೀತೆಯ ಹೂರಣ, ಭಾಷೆ, ಭಾವ, ಅದು ಐದನೆಯ ಜಾರ್ಜ್ ದೊರೆಯನ್ನು ಕುರಿತದ್ದೇ ಎಂಬ ಸ್ಪಷ್ಟ ಅಭಿಪ್ರಾಯವನ್ನು ರೂಪಿಸಿಬಿಟ್ಟಿತು.  ಕವಿಗೆ ಅದನ್ನು ಮೀರಿದ ಉನ್ನತ ಉದ್ದೇಶವೊಂದಿದ್ದರೆ, ಅದು ಕೇವಲ ಕಾವ್ಯಸತ್ಯವಾಗಿ, ರವೀಂದ್ರರ ಸಾಹಿತ್ಯವನ್ನರಿತ ದೇಶಭಕ್ತ ಸಹೃದಯರಿಗಷ್ಟೆ ಅರಿವಿಗೆ ಬರುವಂಥದ್ದಾಗಿತ್ತೇ ಹೊರತು, ಕಾವ್ಯಸೂಕ್ಷ್ಮವನ್ನರಿಯದ ಜನಸಾಮಾನ್ಯರ, ರಾಜಕೀಯಸ್ಥರ ಅರಿವಿಗೆ ಸುತರಾಂ ಬರುವಂಥದ್ದಾಗಿರಲಿಲ್ಲ, ಏಕೆಂದರೆ ಗೀತೆಯು ಮೇಲ್ನೋಟಕ್ಕೇ ತೋರುತ್ತಿದ್ದ ಅಭಿಪ್ರಾಯ ಸ್ಪಷ್ಟವಿತ್ತು.  ಕುತೂಹಲದ ಅಂಶವೆಂದರೆ, ತಮ್ಮ ದೇಶಭಕ್ತಿಯ ಪರಿಕಲ್ಪನೆಗಳಿಗೇ ಧಕ್ಕೆತರುವಂತಿದ್ದ ಈ ಪತ್ರಿಕಾವರದಿಗಳನ್ನು ಕುರಿತ ಟಾಗೋರರ ಮೌನ.

ಇದಾಗಿ ಎರಡು ವರ್ಷಗಳಲ್ಲಿ ಅವರ ಗೀತಾಂಜಲಿ ಇಂಗ್ಲಿಷ್ ಅನುವಾದಕ್ಕಾಗಿ ನೊಬೆಲ್ ಪ್ರಶಸ್ತಿಯೂ, ಮತ್ತೆರಡು ವರ್ಷಗಳಲ್ಲಿ 1915ರಲ್ಲಿ ಬ್ರಿಟಿಷ್ ಸರ್ಕಾರದ ಅತ್ಯುನ್ನತ ನಾಗರಿಕಗೌರವವಾದ 'ನೈಟ್ ಹುಡ್' ಟಾಗೋರರಿಗೆ ದೊರೆಯಿತು.  ರವೀಂದ್ರರು ಚಕ್ರವರ್ತಿಯನ್ನು ಹೊಗಳಿದ್ದಕ್ಕಾಗಿಯೇ ಅವರಿಗೆ ಈ ಗೌರವ ಸಂದಿತು ಎನ್ನುವುದು ನನ್ನ ವಾದವಂತೂ ಅಲ್ಲ, ಖಂಡಿತಾ ಅಲ್ಲ.  ಅದೇ ನಿಜವಾಗಿದ್ದರೆ ಇನ್ನೂ ಸ್ಪಷ್ಟವಾಗಿಯೇ ಚಕ್ರವರ್ತಿಯನ್ನು ಹಾಡಿ ಹೊಗಳಿದ ಅನೇಕರಿಗೆ, ಮೇಲಿನ ಉದಾಹರಣೆಯಲ್ಲೇ ರಾಂ ಭುಜ್ ಚೌಧುರಿಯವರಿಗೂ ಇದು ಸಲ್ಲಬಹುದಿತ್ತು.  ಆದ್ದರಿಂದ ಇದು ಸ್ಪಷ್ಟವಾಗಿಯೇ ಕಾಕತಾಳೀಯವಷ್ಟೇ, ಆದರೆ ಮಹತ್ವಪೂರ್ಣವಾಗಿ ಎದ್ದು ಕಾಣುವ ಕಾಕತಾಳೀಯ - ದೇಶಕಂಡ ಮಹೋನ್ನತ ವ್ಯಕ್ತಿತ್ವ, ಅಪ್ರತಿಮ ದೇಶಭಕ್ತ, ಕವಿ ಟಾಗೋರ ಬೆಂಬಲ ಬ್ರಿಟಿಷ್ ಚಕ್ರಾಧಿಪತ್ಯಕ್ಕಿದೆಯೆನ್ನುವ ಅಭಿಪ್ರಾಯ ಮೂಡಿದರೆ ಅದು ಹಗುರವಾದ ಮಾತಲ್ಲ - ಅದು ಚಕ್ರಾಧಿಪತ್ಯಕ್ಕೆ ಅಮೂಲ್ಯವಾದದ್ದು.  ಆದ್ದರಿಂದ ಈ ಹಿನ್ನೆಲೆಯಲ್ಲಿ ನೈಟ್ ಹುಡ್ ಪದವಿಯನ್ನು ನೋಡುವವರಿಗೆ ಸಹಜವಾಗಿಯೇ ಅಲ್ಲಿ ಕೇವಲ ಕಾಕತಾಳೀಯಕ್ಕಿಂತ ಹೆಚ್ಚಿನದು ಕಂಡರೆ ಅಚ್ಚರಿಯೇನಿಲ್ಲ.

ಇವಿಷ್ಟು ವಿಷಯದ ಒಂದು ಮುಖವಾಯಿತು.  ಈಗ ಇದರ ಇನ್ನೊಂದು, ಮೊದಲಿನದ್ದಕ್ಕಿಂತ ಮುಖ್ಯವಾದ, ಮುಖವನ್ನು ಈಗ ನೋಡೋಣ.  ಮೇಲೆ ವಿವರಿಸಿದ್ದೆಲ್ಲ ಈ ಗೀತೆಯು (ಬಹುಶಃ ಟಾಗೋರರ ಉದ್ದೇಶವನ್ನೂ ಮೀರಿ), ಐದನೆಯ ಜಾರ್ಜ್ ಚಕ್ರವರ್ತಿಯ ಸ್ತುತಿಯೆಂದು ಬಿಂಬಿತವಾಗಲು ಕಾರಣವಾದ ಸಂದರ್ಭಗಳನ್ನು ಕುರಿತದ್ದು.  ಆದರೆ ನಿಜಕ್ಕೂ ಈ ಗೀತೆ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದೇ ಎಂಬುದರ ಸತ್ಯವನ್ನೀಗ ಪರಿಶೀಲಿಸಬೇಕಿದೆ.  ಮೊದಲಿಗೆ ಈ ಗೀತೆ ದೇಶಭಕ್ತಿಗೀತೆಯಾದರೂ ಮೇಲೆ ವಿವರಿಸಿದಂತೆ ಒಂದು ವಿಭಿನ್ನವಾದ ದೇಶಭಕ್ತಿಗೀತೆಯೆಂಬುದನ್ನು ನೆನಪಿನಲ್ಲಿಡಬೇಕು.  ಇಲ್ಲಿ ದೇಶದ ಬಗೆಗಿರುವುದು ಭಕ್ತಿಯಲ್ಲ, ಕಳಕಳಿ, ಕಾಳಜಿ, ವಿಹ್ವಲತೆ - ಭಕ್ತಿ, ದೇಶವನ್ನು ಅನವರತ ಕೈಹಿಡಿದು ಪೊರೆಯುವ, ಮುನ್ನಡೆಸುವ ಪರಮಪಿತನ ಬಗೆಗೆ.  ಭಗವಂತನನ್ನು ದೇವದೇವನನ್ನು ಪುರುಷರೂಪದಲ್ಲಿ, ಪ್ರಭುವಿನ ರೂಪದಲ್ಲಿ ಆರಾಧಿಸುವ ಕಲ್ಪನೆ ನಮಗೆ ಹೊಸದಲ್ಲವಾದರೂ, ದೇಶಭಕ್ತಿಯ ಸಂದರ್ಭದಲ್ಲಿ ಇದು ಹೊಸ ಕಲ್ಪನೆ.  ಆದರೆ ರವೀಂದ್ರರಿಗೆ ಇದು ಹೊಸ ಕಲ್ಪನೆಯೇನಲ್ಲ.  ಬ್ರಹ್ಮಸಮಾಜಿಗಳಾದ ರವೀಂದ್ರರ ಅನೇಕ ಪದ್ಯಗಳಲ್ಲಿ ಉನ್ನತಾಸನದಲ್ಲಿ ಮಂಡಿಸಿದ, ದೊರೆಗಳ ದೊರೆಯಾದ, ಜಗತ್ತಿನ ತಂದೆಯಾದ ಪರಮಪುರುಷನ ಕಲ್ಪನೆ, ಆತನ ಸಿಂಹಾಸನ, ಸ್ವರ್ಣರಥ, ಶಂಖನಾದ, ಭಯಹುಟ್ಟಿಸುವ ಖಡ್ಗ, ಪೊರೆಯುವ ಮಂದಹಾಸ, 'ಮಗ'ನನ್ನು ಹುಡುಕಿಕೊಂಡು ಹಟ್ಟಿಯ ಬಾಗಿಲಿಗೇ ಬಂದುಬಿಡುವ ಪರಮ ಔದಾರ್ಯ ಇವೆಲ್ಲವೂ ಧಾರಾಳವಾಗಿ ಬರುತ್ತವೆ.  ಉದಾಹರಣೆಗೆ, ಅವರ ಖ್ಯಾತ ಗೀತಾಂಜಲಿ ಸಂಕಲನದಿಂದ ಅವರೇ ಅನುವಾದಿಸಿದ ಕೆಲವು ಸಾಲುಗಳನ್ನು ನೋಡಬಹುದು (ಓದುಗರ ಅನುಕೂಲಕ್ಕಾಗಿ ಸ್ಥೂಲವಾಗಿ ಕನ್ನಡಕ್ಕೆ ಅನುವಾದಿಸಿದ್ದೇನೆ):

I was singing all alone in a corner, and the melody caught your ear.
You came down and stood at my cottage door.
(ನಾನು ನನ್ನಷ್ಟಕ್ಕೆ ಅಲ್ಲೊಂದು ಮೂಲೆಯಲಿ ಹಾಡುತಿದ್ದೆ; ಹಾಡು ನಿನ್ನ ಕಿವಿಮುಟ್ಟಿತು.  
ನೀನೋ ನನ್ನ ಗುಡಿಸಿಲ ಬಾಗಿಲಿಗೇ ಬಂದು ನಿಂತೆ)

...

I had gone a-begging from door to door in the village path, when thy golden chariot
appeared in the distance like a gorgeous dream and I wondered who was this King of all
kings!
(ಬೀದಿ ತಿರಿಯಹೊರಟವನಿಗೆ ಅಲ್ಲಿ, ದೂರದಲ್ಲಿ ನಿನ್ನ ಹೊಂದೇರ ಗಾಲಿ ಕಂಡಿತು, ದಿವ್ಯಾದ್ಭುತಸ್ವಪ್ನದಂತೆ.  ನನಗೆ ಬೆರಗು - ಯಾರೀ ರಾಜರ ರಾಜ!)

...

The chariot stopped where I stood... Then of a sudden thou didst hold out
thy right hand and say ‘What hast thou to give to me?’

Ah, what a kingly jest was it to open thy palm to a beggar to beg!

(ರಥ ಪಕ್ಕದಲ್ಲೇ ನಿಂತಿತು... ಇದ್ದಕ್ಕಿದ್ದಂತೆ ನೀನೇ ಕೈಚಾಚಿದೆ, ಕೇಳಿದೆ "ಏನು ಕೊಡುತ್ತೀ ನನಗೆ?"

ಆಹ, ತಿರುಕನಲ್ಲೆ ತಿರಿಯಬರುವ ದೊರೆಯ ಆಟವೆಂಥದೋ!)

... 

The night darkened... some said the king was to come. We laughed and said ‘No, it cannot be!’
(ಇರುಳುಗತ್ತಲೇರಿತು...  ಕೆಲರೆಂದರು, ದೊರೆ ಬರುವುದು ಬಾಕಿಯಿದೆ.  ನಮಗೆ ನಗು "ಇಲ್ಲ, ಸಾಧ್ಯವಿಲ್ಲ!)

...

The night was still dark when the drum sounded... We pressed our hands on our hearts and
shuddered with fear. Some said, ‘Lo, there is the king’s flag!’
(ಮತ್ತೂ ಕತ್ತಲಾಯಿತು, ನಗಾರಿ ಶಬ್ದ... ಬೆಚ್ಚಿ ಎದೆಯೊತ್ತಿಕೊಂಡೆವು.  ಕೆಲರೆಂದರು, 'ಅಗೋ ರಾಜಧ್ವಜ!)

...

The king has come—but where are lights, where are wreaths? Where is the throne to seat
him? Oh, shame! Oh utter shame! Where is the hall, the decorations? Someone has said,
‘Vain is this cry! Greet him with empty hands, lead him into thy rooms all bare!’
Open the doors, let the conch-shells be sounded! in the depth of the night has come the
king of our dark, dreary house. 

(ದೊರೆ ಬಂದಿಹನು - ಆದರೆ ದೀವಟಿಗೆಯೆಲ್ಲಿ, ಹಾರವೆಲ್ಲಿ?  ಕುಳ್ಳಿರಿಸಲು ಸಿಂಹಾಸನವೆಲ್ಲಿ?  ಓಹ್ ಮುಜುಗರವೇ! ಎಂಥ ನಾಣ್ಗೇಡು!  ಸಭಾಂಗಣವೆಲ್ಲಿ, ಎಲ್ಲಿ ಅಲಂಕಾರ?
ಒಬ್ಬರೆಂದರು "ವೃಥಾ ಅಳುವುದೇಕೆ? ಬರಿಗೈಯಲ್ಲೇ ಬರಮಾಡಿಕೊಳ್ಳಿ, ನಿಮ್ಮ ಬರಿಗೋಣೆಗವನ ಕರೆದೊಯ್ಯಿರಿ!"
ಬಾಗಿಲ ತೆರೆಯಿರಿ, ಶಂಖಧ್ವನಿ ಮೊಳಗಲಿ!  ನಟ್ಟಿರುಳೊಳು ದೊರೆ ಬಂದಿದ್ದಾನೆ, ನಮ್ಮ ಮಬ್ಬುಗತ್ತಲ ಕೋಣೆಗೆ)

...

I thought I should ask of thee—but I dared not—the rose wreath thou hadst on thy neck.
Thus I waited for the morning, when thou didst depart, to find a few fragments on the bed.
(ಬೇಡೋಣವೆಂದಿದ್ದೆ, ನಿನ್ನ ಕೊರಳನಲಂಕರಿಸಿದ್ದ ಆ ಗುಲಾಬಿ ಮಾಲೆಯನ್ನು - ಅಂಜಿ ಸುಮ್ಮನಾದೆ.
ಕಾದೆ - ಬೆಳಗ್ಗೆ ನೀ ಹೋದ ಮೇಲೆ ಹಾಸಿಗೆಯ ಮೇಲುದುರಿರುವ ಕೆಲವು ಪಕಳೆಗಳನ್ನಾಯಲು)

...

Ah me, what is it I find? What token left of thy love? It is no flower, no spices, no vase of
perfumed water. It is thy mighty sword, flashing as a flame, heavy as a bolt of thunder.
(ಆಹ್, ನನಗೆ ಕಂಡದ್ದಾದರೂ ಏನು?  ನೀ ನನಗಾಗಿ ಬಿಟ್ಟುಹೋದ ಪ್ರೀತಿಯ ಕಾಣಿಕೆ!  ಹೂವಲ್ಲ, ಗಂಧವಲ್ಲ, ತೀರ್ಥವೂ ಅಲ್ಲ.  
ಬೆಂಕಿಯುಗುಳುವ, ಸಿಡಿಲ ತೂಕದ ನಿನ್ನ ಬಲು ಖಡ್ಗ!)

...

I sit and muse in wonder, what gift is this of thine.
(ಬೆರಗುವಡೆದು ಚಿಂತಿಸುತ್ತಿದ್ದೇನೆ, ಇದೆಂಥ ಉಡುಗೊರೆಯಪ್ಪ ನಿನ್ನದು)

"ಜನಗಣಮನ" ಗೀತೆಯಲ್ಲಿ ಸ್ತುತಿಸಲ್ಪಟ್ಟ "ಭಾರತಭಾಗ್ಯವಿಧಾತ" ಈ ದೊರೆ - ಯಾವುದೋ ಮರ್ತ್ಯಲೋಕದ ಚಕ್ರವರ್ತಿಯಲ್ಲ.  ಮೇಲಿನದು ಒಂದು ಉದಾಹರಣೆಯಷ್ಟೇ.  ಈ ಕಲ್ಪನೆ ರವೀಂದ್ರರ ಸಾಹಿತ್ಯದಲ್ಲಿ ವಿಪುಲವಾಗಿ ದೊರೆಯುತ್ತದೆ.  ಅದರ ಪರಿಚಯವಿದ್ದವರಿಗೆ ಇದು ಹೊಸದಲ್ಲ.  

ರವೀಂದ್ರರು ಬೆಂಗಾಲದ ವಿಭಜನೆಯನ್ನು ಪ್ರತಿಭಟಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಸ್ವಾತಂತ್ರ್ಯಚಳುವಳಿಗಾರರನೇಕರ 'ರಾಷ್ಟ್ರೀಯತೆ'ಯ ಕಲ್ಪನೆಯನ್ನು ಅನೇಕ ವೇಳೆ ಕಟುವಾಗಿ ಟೀಕಿಸಿದರೂ ದೇಶದ ದಾಸ್ಯವನ್ನು ಕಂಡು ಬಹುವಾಗಿ ಮರುಗಿದವರು.  ಈ 'ದೈನ್ಯ', ಅದರಿಂದ ದೇಶವನ್ನು ಮೇಲೆತ್ತಲು ದೇವದೇವನಿಗೆ ಕಳಕಳಿಯ ಮೊರೆ ಇವು ರವೀಂದ್ರರ ಬರಹಗಳಲ್ಲಿ ಪದೇಪದೇ ಕಾಣುತ್ತವೆ (ಇದೇ ಭಾವ ಮೇಲೆ ನೋಡಿದ "ಜನಗಣಮನ" ಗೀತೆಯಲ್ಲೂ ಮಡುಗಟ್ಟಿದೆ).  ಮುಂದೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ನಾವು ಮೇಲೆ ಚರ್ಚಿಸಿದ ಅದೇ 'ನೈಟ್ ಹುಡ್' ಪದವಿಯನ್ನು ಅದೇ ಬ್ರಿಟಿಷ್ ಸರ್ಕಾರದ ಮುಖಕ್ಕೆ ಬಿಸಾಕಿದ ಧೀಮಂತವ್ಯಕ್ತಿತ್ವದ ಅಸೀಮ ದೇಶಭಕ್ತ, ದಾರ್ಶನಿಕ, ಮರ್ತ್ಯದ ದೊರೆಯೊಬ್ಬನಿಗೆ ಜೈಕಾರ ಹಾಕುತ್ತಾನೆಂಬುದು ನಿಜಕ್ಕೂ ಯೋಚನೆಗೆ ದಕ್ಕುವ ವಿಷಯವಲ್ಲ.  ಸುಮಾರು ಇದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, 1937ರಲ್ಲಿ, ಪುಲಿನ್ ಬಿಹಾರಿ ಸೇನ್ ಎಂಬುವರಿಗೆ ಬರೆದ ಪತ್ರದಲ್ಲಿ ರವೀಂದ್ರರು ಹೀಗೆ ಹೇಳುತ್ತಾರೆ - "A certain high official in His Majesty's service, who was also my friend, had requested that I write a song of felicitation towards the Emperor. The request simply amazed me. It caused a great stir in my heart. In response to that great mental turmoil, I pronounced the victory in Jana Gana Mana of that Bhagya Bidhata [ed. God of Destiny] of India who has from age after age held steadfast the reins of India's chariot through rise and fall, through the straight path and the curved. That Lord of Destiny, that Reader of the Collective Mind of India, that Perennial Guide, could never be George V, George VI, or any other George. Even my official friend understood this about the song. After all, even if his admiration for the crown was excessive, he was not lacking in simple common sense (ಪ್ರಭುಗಳ ಸೇವೆಯಲ್ಲಿರುವ ಉನ್ನತ ಅಧಿಕಾರಿಯೊಬ್ಬರು, ನನ್ನ ಮಿತ್ರರೂ ಕೂಡ, ಚಕ್ರವರ್ತಿಯನ್ನು ಸ್ವಾಗತಿಸುವ ಗೀತೆಯೊಂದನ್ನು ಬರೆಯಲು ನನ್ನನ್ನು ಕೋರಿದರು.  ಈ ಕೋರಿಕೆ ನನ್ನನ್ನು ಅಚ್ಚರಿಗೊಳಿಸಿತು.  ನನ್ನ ಹೃದಯವನ್ನು ಕಲಕಿಬಿಟ್ಟಿತು.  ಈ ಒಳತೋಟಿಗುತ್ತರವಾಗಿ ನಾನು, ಎಷ್ಟೆಷ್ಟೋ ಏಳುಬೀಳಿನ ಅಂಕುಡೊಂಕಿನ ದಾರಿಯಲ್ಲೂ ಯುಗಯುಗಗಳಿಂದ ಭಾರತದ ರಥವನ್ನು ನಡೆಸುತ್ತಾ ಕರೆದೊಯ್ಯುತ್ತಿರುವ, ಭಾರತಭಾಗ್ಯವಿಧಾತನ ಜಯಗೀತೆಯನ್ನು ಹಾಡಿದೆ.  ಆ ಭಾಗ್ಯವಿಧಾತ, ಜನಗಣಮನದ ಅಧಿನಾಯಕ, ಚಿರಸಾರಥಿ ಖಂಡಿತಾ ಐದನೆಯ ಜಾರ್ಜೋ ಆರನೆಯ ಜಾರ್ಜೋ ಇನ್ನಾವ ಜಾರ್ಜೋ ಆಗಿರಲು ಸಾಧ್ಯವಿಲ್ಲ.  ನನ್ನ ಆ ಅಧಿಕಾರಿಮಿತ್ರರೂ ಆ ಗೀತೆಯ ವಿಷಯದಲ್ಲಿ ಇದನ್ನು ಅರಿತರು.  ಚಕ್ರವರ್ತಿಗಳ ವಿಷಯದಲ್ಲಿ ಅವರ ಭಕ್ತಿ ಏನೇ ಇರಲಿ, ಆತನಿಗೆ ಸಾಮಾನ್ಯಜ್ಞಾನವಂತೂ ಇದ್ದೇ ಇತ್ತು)" 

ಮತ್ತೆ 1939ರ ಮಾರ್ಚ್ 19ರ ತಮ್ಮ ಇನ್ನೊಂದು ಪತ್ರ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ") - Purvasa, Phalgun, 1354, p738.

ಅದೇನೇ ಇರಲಿ, ಮೇಲಿನ ಎರಡೂ ಸ್ಪಷ್ಟನೆಗಳು ಬಂದದ್ದು ಮೇಲಿನ ವಿವಾದ ಸೃಷ್ಟಿಯಾದ ಎಷ್ಟೋ ವರ್ಷಗಳನಂತರ, ಸ್ವತಃ ಐದನೆಯ ಜಾರ್ಜ್ ದೊರೆ ಗತಿಸಿದಮೇಲೆ.  ಬಹುಶಃ ಈ ವಿವರಣೆಯನ್ನು ಟಾಗೋರರು ಇಪ್ಪತ್ತು ವರ್ಷಗಳ ಹಿಂದೆಯೇ ನೀಡಿದ್ದರೆ ಆ ಮಾತು ಬೇರೆಯೇ ಇರುತ್ತಿತ್ತೇನೋ.  ಆದರೆ ಇಷ್ಟು ವರ್ಷಕಾಲದ ಅವರ ಮೌನಕ್ಕೆ ನಿಜಕ್ಕೂ ವಿವರಣೆಯಿಲ್ಲ.  ಅಥವಾ, ಟಾಗೋರರ ಆಗಿನ ಮೌನಕ್ಕೆ ಆ ಕಾಲದ ರಾಜಕೀಯಸನ್ನಿವೇಶವೇ ಕಾರಣವಿರಬಹುದೆಂದು ಊಹಿಸುವುದರಲ್ಲಿ ತಪ್ಪೇನಿಲ್ಲ.  ಹೇಳಿಕೇಳಿ, ಭಾರತವು ಬ್ರಿಟಿಷರಿಂದ ಡೊಮಿನಿಯನ್ ಸ್ಥಾನಮಾನ ಕೇಳುತ್ತಿದ್ದ ಕಾಲ, ಸಹಜವಾಗಿಯೇ ಚಕ್ರಾಧಿಪತ್ಯಕ್ಕೆ ತಗ್ಗಿಬಗ್ಗಿ ನಡೆಯಬೇಕಾದ ರಾಜಕೀಯ ಅನಿವಾರ್ಯತೆಯಿದ್ದ ಕಾಲ; ಇನ್ನೂ ಅನೇಕ ಮುಂಚೂಣಿ ನಾಯಕರು ಇದೇ ರಾಜಕೀಯಕಾರಣಕ್ಕಾಗಿಯೇ ಬ್ರಿಟಿಷರನ್ನು ಅದೆಷ್ಟೋ ವಿಷಯಗಳಲ್ಲಿ ಬೆಂಬಲಿಸಿದ ಉದಾಹರಣೆಯೂ ಇದೆ.  ಹೀಗಿದ್ದಾಗ, ದೇಶದ ಹಿತದೃಷ್ಟಿಯಿಂದಲೇ ಮೌನವಹಿಸುವುದು ಲೇಸೆಂದು ಆಗ ಗುರುದೇವರು ಭಾವಿಸಿದ್ದರೆ ಅಚ್ಚರಿಯೇನಿಲ್ಲ.  ಜನಗಣಮನದಂತಹ ಅರ್ಥಸಂದಿಗ್ಧವುಳ್ಳ ಗೀತೆಯನ್ನು ರಚಿಸಿದ್ದೂ ಈ ಸನ್ನಿವೇಶಕ್ಕೆ ಕಟ್ಟುಬಿದ್ದೇ ಇರಬಹುದು.  ಆದರೆ ಮೇಲ್ಕಂಡ ಸ್ಪಷ್ಟನೆ ನೀಡುವ ಹೊತ್ತಿಗೆ ಕಾಲ ಬದಲಾಗಿತ್ತು - ಭಾರತದ ಸ್ವಾತಂತ್ರ್ಯಚಳುವಳಿ ಬ್ರಿಟಿಷ್ ಚಕ್ರಾಧಿಪತ್ಯದ ಮುಲಾಜನ್ನು ಕಿತ್ತೊಗೆದು, ಡೊಮಿನಿಯನ್ ಸ್ಥಾನಮಾನದ ಬೇಡಿಕೆಯನ್ನು ಕೈಬಿಟ್ಟು, ಪೂರ್ಣಸ್ವರಾಜ್ಯದ ಹಕ್ಕೊತ್ತಾಯವನ್ನು ಸ್ಥಾಪಿಸಿ ಸಂಪೂರ್ಣಸ್ವಾತಂತ್ರ್ಯದೆಡೆ ದಾಪುಗಾಲಿಕ್ಕುತ್ತಿದ್ದ ಕಾಲವದು.  ಆದ್ದರಿಂದ ಈಗ ಸ್ಪಷ್ಟನೆ ನೀಡಲು ಸಕಾಲವೆಂದು ಟಾಗೂರರು ಭಾವಿಸಿದ್ದಿರಬಹುದು. 

ಇವಿಷ್ಟನ್ನೂ ಪರ್ಯಾಲೋಚಿಸಿದ ಮೇಲೆ ನಮಗೆ ತೋರುವುದಿಷ್ಟು.  ರವೀಂದ್ರರ ಸಾಹಿತ್ಯದ ಸಂದರ್ಭ, ಧಾರ್ಮಿಕ-ಆಧ್ಯಾತ್ಮಿಕ ಹಿನ್ನೆಲೆ, ಮತ್ತು ಅವರದ್ದೇ ಇತರ ಹಲವು ಪ್ರಾರ್ಥನಾಪದ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನಗಣಮನ ಪೂರ್ಣಗೀತೆಯನ್ನು ಪರಿಶೀಲಿಸಿದಾಗ ಗೀತೆಯ ಉದಾತ್ತಕಲ್ಪನೆ, ಈ ನೆಲದ ಜನಗಣಮನವನ್ನು ಅನುಗಾಲವೂ ಕೈಹಿಡಿದು ನಡೆಸುವ ಪರಮಪಿತನ ಸ್ತುತಿಯೆಂಬ ವಿಷಯ ಮನದಟ್ಟಾಗುತ್ತದೆ.  ಇದನ್ನು ಬ್ರಹ್ಮಸಮಾಜವು 'ಬ್ರಹ್ಮ'ಪ್ರಾರ್ಥನೆಯೆಂದು ಅಂಗೀಕರಿಸಿ ತನ್ನ ಸಂಕಲನದಲ್ಲಿ ಪ್ರಕಟಿಸಿರುವುದೂ ಈ ಅಂಶವನ್ನು ದೃಢಪಡಿಸುತ್ತದೆ.  ಇಂತಿರುವಾಗ ಇದು ಯಾವನೋ ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವೆಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಇದು ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವಾದುದೇನೋ ಹೌದು - ಯಾರಿಗೆ? ಮೇಲೆ ವಿವರಿಸಿದ ಎಲ್ಲ ಹಿನ್ನೆಲೆಗಳನ್ನೂ ಅರಿತವರಿಗೆ.  ಆದರೆ ಹಾಗೆ ಕೂಲಂಕಷವಾಗಿ ವಿಷಯವನ್ನು ಅರಿತವರು, ಪರಿಶೀಲಿಸಬಲ್ಲವರು ಎಷ್ಟು ಮಂದಿ? ಪರಮಾತ್ಮನನ್ನು ಪೂಜಿಸುವ ಧಾರ್ಮಿಕ ವಿಷಯ ಬೇರೆ, ಆದರೆ ದೇಶವೆಂದರೆ ಮಾತೆ ಎಂಬ ಕಲ್ಪನೆಯನ್ನೇ ಹೊಂದಿರುವ ಎಷ್ಟು ಜನಕ್ಕೆ "ಜನಗಣಮನ ಅಧಿನಾಯಕ"ನ ಅಮೂರ್ತಕಲ್ಪನೆ ಮನಸ್ಸಿಗೆ ಹೊಗಬಲ್ಲುದು?  ರಥ, ಚಕ್ರ, ಚಕ್ರೇಶ್ವರ, ಶಂಖಧ್ವನಿ, ಸಿಂಹಾಸನ ಮುಂತಾದ ಸಂಕೇತಗಳು ಯಾವುದೋ ರಾಜನದ್ದಲ್ಲ, ಪರಮಪಿತನನ್ನು ಕುರಿತದ್ದೆಂಬುದನ್ನು ಎಷ್ಟು ಜನ ಅರಿಯಬಲ್ಲರು?  ಜನಾಭಿಪ್ರಾಯಗಳು ರೂಪುಗೊಳ್ಳುವುದು ಸೂಕ್ಷ್ಮಪರಿಶೀಲನೆಗಳಿಂದಲ್ಲ, ಕಣ್ಣಿಗೆ ಕಾಣುವ ಸ್ಥೂಲಸನ್ನಿವೇಶಗಳ ಆಧಾರದ ಮೇಲೆ.  ಆ ಸ್ಥೂಲಸನ್ನಿವೇಶಗಳು ಸ್ಪಷ್ಟವಾಗಿವೆ - ದೊರೆಯ ಪಟ್ಟಾಭಿಷೇಕ ಕೆಲವೇ ತಿಂಗಳ ಹಿಂದೆ ಆಗಿದೆ, ಎರಡೇ ವಾರದ ಹಿಂದೆ ಕಲ್ಕತ್ತಾದಲ್ಲಿ ಚಕ್ರವರ್ತಿಯ ದರ್ಬಾರು ನಡೆದಿದೆ - ಅದರಲ್ಲಿ ಇಡೀ ದೇಶದ ಗಣ್ಯಾತಿಗಣ್ಯರು ನಡುಬಗ್ಗಿಸಿ ಚಕ್ರವರ್ತಿಗೆ ಮುಜುರೆ ಮಾಡಿ ನಿಷ್ಠೆತೋರಿದ್ದಾರೆ.  ದೊರೆಗೆ ನಿಷ್ಠವಾದ ಕಾಂಗ್ರೆಸ್ ಅಧಿವೇಶನದಲ್ಲಿ ಹೊಸದಾಗಿ ರಚಿತವಾದ ಪ್ರಾರ್ಥನಗೀತೆಯೊಂದನ್ನು ಸ್ವತಃ ರವೀಂದ್ರರೇ ಹಾಡಿದ್ದಾರೆ (ಅಂಥದ್ದೊಂದು ಸ್ವಾಗತಗೀತೆಯನ್ನು ರಚಿಸಬೇಕೆಂಬ ಕೋರಿಕೆ ಅವರಿಗೆ ಬ್ರಿಟಿಷರ ಕಡೆಯಿಂದಲೇ ಬಂದಿದೆ - ಅವರದನ್ನು ಪುರಸ್ಕರಿಸಿಲ್ಲವಾದರೂ ಸ್ಪಷ್ಟವಾಗಿ ತಿರಸ್ಕರಿಸಿಲ್ಲ, ಗೀತೆಯನ್ನೇನೋ ರಚಿಸಿದ್ದಾರೆ).  ಆ ಗೀತೆಯ ಉನ್ನತಾರ್ಥವೇನೇ ಇರಲಿ, ಮೇಲ್ನೋಟಕ್ಕೆ ಅದರ ಹೂರಣವಂತೂ (ಹಿನ್ನೆಲೆಯನ್ನರಿಯದ ಬಹುಪಾಲು ಜನಕ್ಕೆ) ದೊರೆಯನ್ನು ಸ್ತುತಿಸುವಂತೆಯೇ ಕಾಣುತ್ತದೆ.  ಈ ಗೀತೆಯಾದೊಡನೆಯೇ ದೊರೆಗೆ ನಿಷ್ಠವಾಗಿರುವ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ, ಮತ್ತು ಅದರ ಬೆನ್ನಲ್ಲೇ ದೊರೆಯನ್ನು ಸ್ವಾಗತಿಸಿಕೊಂಡಾಡುವ ಸ್ವಾಗತಗೀತೆಯನ್ನು ಹಾಡಲಾಗುತ್ತದೆ.  ಆಂಗ್ಲಪತ್ರಿಕೆಗಳು "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದು ವರದಿ ಮಾಡುತ್ತವೆ.  ಹೀಗೆ ಸ್ಪಷ್ಟವಾಗಿಯೇ 'ದಾರಿ ತಪ್ಪಿಸುವ' ವರದಿ ಬಂದಾಗಲೂ, ಅದನ್ನು ನಿರಾಕರಿಸಿ ಗಟ್ಟಿಯಾಗಿ ಸ್ಪಷ್ಟನೆ ನೀಡಬಹುದಾದ ಒಬ್ಬರೇ ವ್ಯಕ್ತಿ, ಟಾಗೋರರು ಮೌನವಹಿಸುತ್ತಾರೆ.  ಇದಾಗಿ ಎರಡೇ ವರ್ಷಕ್ಕೆ ನೊಬೆಲ್ ಪ್ರಶಸ್ತಿಯೂ ನಾಲ್ಕೇ ವರ್ಷಕ್ಕೆ ನೈಟ್ ಪದವಿಯೂ ಕೂಡ ದೊರೆಯುತ್ತದೆ, ಇದು ಸಹಜವಾಗಿಯೇ ಈ ಮೌನಕ್ಕೆ ವಿಶೇಷಾರ್ಥವನ್ನು ಹಚ್ಚುತ್ತದೆಯಷ್ಟೇ?  (ಆಮೇಲಿನ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರು ಆ ಪದವಿಯನ್ನು ಮರಳಿಸುತ್ತಾರೆಂಬುದೇನೋ ನಿಜವೇ, ಆದರೆ ಅದು ಸರ್ಕಾರದ ಅವತ್ತಿನ ದುರಾಚಾರಕ್ಕೆ ಪ್ರತಿಭಟನೆಯಾಗುತ್ತದೆಯೇ ಹೊರತು, ಮೂಲವಿವಾದವನ್ನೇನೂ ಸರಿಪಡಿಸುವುದಿಲ್ಲ).  ಇಷ್ಟೆಲ್ಲ ಇರುವಾಗ, ಇದು ಐದನೇ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದಿರಬೇಕೆನ್ನುವ ಜನಾಭಿಪ್ರಾಯ ರೂಪುಗೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಇಷ್ಟಕ್ಕೂ ಈ ಅಭಿಪ್ರಾಯದಲ್ಲೂ ಎಳ್ಳಷ್ಟಾದರೂ ಸತ್ಯವಿಲ್ಲದಿಲ್ಲ.  ಗೀತೆಯಲ್ಲಿ ಕವಿಯ ಉದಾತ್ತಕಲ್ಪನೆಯೇನೇ ಇರಲಿ, ಗೀತೆಗೆ ನಿಮಿತ್ತವಾದದ್ದು ಮಾತ್ರ ಭಾರತಕ್ಕೆ ಬರಲಿದ್ದ ಚಕ್ರವರ್ತಿಯೇ ಎಂಬುದರಲ್ಲಿ ಸುಳ್ಳೇನಿಲ್ಲವಲ್ಲ.  ಆತನ ಸ್ವಾಗತಕ್ಕಾಗಿ ಗೀತೆಯೊಂದನ್ನು ರಚಿಸಿರೆಂಬ ಕೋರಿಕೆ ಬರದಿದ್ದರೆ ಬಹುಶಃ ರವೀಂದ್ರರು ಈ ಗೀತೆಯನ್ನು ರಚಿಸುತ್ತಲೇ ಇರಲಿಲ್ಲವಷ್ಟೇ?  ಅದನ್ನು ಕಾಂಗ್ರೆಸ್ ಅಧಿವೇಶನದಲ್ಲಿ (ದೊರೆಗೆ ನಿಷ್ಠೆಯನ್ನು ಸೂಚಿಸುವ ಸಂದರ್ಭದಲ್ಲಿ) ಹಾಡಿದ್ದೂ ಸಹ, ಆ ಗೀತೆಯನ್ನು ಇದೇ ಸಂದರ್ಭಕ್ಕಾಗಿ ಬರೆದದ್ದೆಂಬುದನ್ನು ಸ್ಪಷ್ಟಪಡಿಸುತ್ತದೆ.  ಕವಿಗೆ ದೊರೆಯನ್ನು ಸ್ತುತಿಸುವ ಉದ್ದೇಶವಿಲ್ಲದಿರಬಹುದು, ಅಂಥದ್ದೊಂದು ಕೋರಿಕೆಯಿಂದ ತಮಗಾದ ನೋವನ್ನು ಪ್ರತಿಭಟನೆಯ ರೂಪದಲ್ಲಿ ತುಂಬಿ, ದೊರೆಯ ನೆವದಲ್ಲಿ "ಜನಗಣಮನ ಅಧಿನಾಯಕ"ನನ್ನೇ ಸ್ತುತಿಸಿರಬಹುದು - ಅತ್ತ ದೊರೆಗೆ ಇದು ತನ್ನನ್ನೇ ಕುರಿತದ್ದೆನ್ನುವ ಸಂತಸವಾದರೆ ಇತ್ತ ನಮಗೆ ನಮ್ಮೆಲ್ಲರನ್ನೂ ಕೈಹಿಡಿದು ಮುನ್ನೆಡೆಸುತ್ತಿರುವ ಮಹಾಶಕ್ತಿಯ ಸ್ತುತಿಯೆಂಬ ಸಮಾಧಾನ.  ಆದರೆ ಅದಕ್ಕಾಗಿ ಕವಿ ಬಳಸಿದ ಸಂದಿಗ್ಧ ಕಲ್ಪನೆಗಳು (ಎರಡೂ ಅರ್ಥ ಕೊಡಬಹುದಾದ ಕಲ್ಪನೆಗಳು), ಕವಿಯ ಉದಾತ್ತ ಉದ್ದೇಶವನ್ನಾಗಲಿ, ಕವಿಯನ್ನು ತುಂಬಿದ್ದ ನೋವನ್ನಾಗಲೀ ಬಹುಜನರಿಗೆ ಮುಟ್ಟಿಸಲಿಲ್ಲ.  ಬದಲಿಗೆ ಜನ, ದೊರೆಯೇ ಆ "ಜನಗಣಮನ ಅಧಿನಾಯಕ"ನೆಂದು ತಿಳಿಯುವ ಅಪಾಯವನ್ನೇನೂ ಅದು ತಪ್ಪಿಸಲಿಲ್ಲ.  ಹೀಗಾಗಿ, ಗೀತೆಯು ತಾತ್ತ್ವಿಕವಾಗಿ ಭಾರತದ ಭಾಗ್ಯವಿಧಾತನನ್ನೇ ಸ್ತುತಿಸಿದ್ದರೂ, ವಾಸ್ತವದಲ್ಲಿ ಆ ಪದ್ಯ ಹುಟ್ಟಿದ್ದು ದೊರೆಯ ನಿಮಿತ್ತದಿಂದಲೇ ಎಂಬುದನ್ನು ಅಲ್ಲಗಳೆಯಲಾಗದು.  ಆದರೆ ಪ್ರಸಕ್ತ ರಾಜಕೀಯಸನ್ನಿವೇಶ ಟಾಗೂರರ ಬಾಯಿ ಕಟ್ಟಿತ್ತೆಂದುಕೊಳ್ಳಬಹುದು.

ಇಷ್ಟು ಹೇಳಿದ ಮೇಲೆ ಕೊನೆಯದಾಗಿ, ರಾಷ್ಟ್ರಗೀತೆಯಾಗಿ ಈ ಗೀತೆಯನ್ನೊಮ್ಮೆ ಪರಿಶೀಲಿಸುವುದು ಅಪ್ರಸ್ತುತವಾಗಲಿಕ್ಕಿಲ್ಲ.  ರಾಷ್ಟ್ರಗೀತೆಯೊಂದು ಹೇಗಿರಬೇಕು?  

  1. ಎದೆ ಸೆಟೆಸಿ ತಲೆಯೆತ್ತಿ ಗತ್ತಿನಿಂದ ಹಾಡುವಂತಿರಬೇಕು; 
  2. ತೀರ ನಿಧಾನವೂ ಅಲ್ಲದ, ವೇಗವೂ ಅಲ್ಲದ ಕವಾಯತಿನ ಲಯಕ್ಕೆ ತಕ್ಕಂತಹ ವೇಗ, ಸಂಗೀತ ಹೊಂದಿರಬೇಕು; 
  3. ಆ ಸಂದರ್ಭಕ್ಕೆ ತಕ್ಕಂತಹ ಹೆಮ್ಮೆಯ ಭಾವವನ್ನು ಹೊಮ್ಮಿಸುವ ಸಂಗೀತ, ಮತ್ತು ಅದಕ್ಕೆ ಒಪ್ಪುವ ಸಾಹಿತ್ಯವಿರಬೇಕು; 
  4. ಆ ನೆಲಜಲಗಳ, ಜನದ, ಸಿರಿಸಂಪತ್ತಿನ, ವೀರ್ಯಶೌರ್ಯಗಳ, ತ್ಯಾಗಬಲಿದಾನಗಳ ವೈಶಿಷ್ಟ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುವಂತಿರಬೇಕು, 
  5. ಜೊತೆಗೆ ತನ್ನ ದೇಶದ ಬಗ್ಗೆ ಆತ್ಮೀಯಭಾವ ಉಕ್ಕುವಂತಿರಬೇಕು.

ಈ ಐದು ಅಂಶಗಳಲ್ಲಿ ಮೊದಲ ಮೂರಂಶಗಳು ಸಂಗೀತಕ್ಕೆ ಸಂಬಂಧಿಸಿದುವು.  ಸಾಹಿತ್ಯವೊಂದು ಸಂಗೀತಕ್ಕೊಪ್ಪುವಂತಿದ್ದರಾಯಿತು.  ಉಳಿದುದನ್ನು ಸಂಗೀತ ನೋಡಿಕೊಳ್ಳುತ್ತದೆ.  ನಮ್ಮ ರಾಷ್ಟ್ರಗೀತೆಯ ಸಂಗೀತ ಅಂತಹ ಗುಣವನ್ನು ಹೊಂದಿದೆಯೆನ್ನುವುದು ನಿರ್ವಿವಾದ.  ಆದರೆ ನೆನಪಿರಲಿ, ಅಂತಹ ಸಂಗೀತವನ್ನು ಯಾವ ಗೀತೆಗೂ ಮಾಡಬಹುದು, ಮತ್ತು ಅಂತಹ ಸಂಗೀತಕ್ಕೆ ತಕ್ಕ ಭಾವವನ್ನು ಇನ್ನೂ ಸಮರ್ಥವಾಗಿ ಒದಗಿಸಬಲ್ಲ ಗೀತೆಗಳು ಹೇರಳವಾಗಿವೆ.  ಇನ್ನು ನಾಲ್ಕನೆಯ ಅಂಶಕ್ಕೆ ಬಂದರೆ ನನಗೆ ಥಟ್ಟನೆ ನೆನಪಾಗುವುದು ಪಂಜೆಮಂಗೇಶರಾಯರ "ನಮ್ಮ ನಾಡಿದು ನಮ್ಮದು, ನಮ್ಮ ಕನ್ನಡನಾಡಿದು" ಎಂಬ ಗೀತೆ, ಯಾವುದೇ ನಾಡಿನ ಹೆಮ್ಮೆಯ ಗೀತೆಯಾಗಬಲ್ಲ ಗೀತೆಯಿದು.  ಆದರೆ ಜನಗಣಮನ ಗೀತೆಯಲ್ಲಿ ಕಾಣುವುದು ಶೌರ್ಯವೀರ್ಯ, ತ್ಯಾಗಬಲಿದಾನಗಳ ಹೆಮ್ಮೆಯ ಭಾವವಲ್ಲ, ಬದಲಿಗೆ ಈಗಾಗಲೇ ವಿವರಿಸಿದಂತೆ ಇಲ್ಲಿ ಕಾಣಬರುವುದೆಲ್ಲ "ನಮ್ಮದೇನಿದೆ, ಎಲ್ಲ ನಿನ್ನದೇ, ಬಿದ್ದಿರುವ ನಮ್ಮನ್ನು ಮೇಲೆತ್ತಿ ಮುನ್ನಡೆಸಿ ಕಾಪಾಡು, ನಿನಗೆ ಜಯವಾಗಲಿ" ಎಂಬ ರೀತಿಯ ದೈನ್ಯಭಾವವಷ್ಟೇ.  ರಾಷ್ಟ್ರಗೀತೆಯಾಗಿ ಕೇವಲ ಮೊದಲ ಚರಣವನ್ನಷ್ಟೇ ಅಂಗೀಕರಿಸಿದೆ ಎಂಬ ಅಂಶವನ್ನು ಗಮನದಲ್ಲಿರಿಸಿದರೂ "ದೇಶದ ಸಕಲಪ್ರಾಂತ್ಯಗಳೂ, ಸಕಲ ನದಿಸಾಗರಗಳೂ ನಿನ್ನ ಶುಭನಾಮವನ್ನೇ ನೆನೆಯುತ್ತಿವೆ, ನಿನ್ನ ಕೃಪೆಗಾಗಿ ಕಾಯುತ್ತಿವೆ, ನಮ್ಮ ಭಾಗ್ಯವಿಧಾತನಾದ ನಿನಗೆ ಜಯವಾಗಲಿ" ಎನ್ನುವ ಭಾವವಷ್ಟೇ ಇಲ್ಲಿಯೂ ಕಾಣುವುದು.  ದೇಶವಾಸಿಗಳ ನರನಾಡಿಗಳಲ್ಲಿ ರಾಷ್ಟ್ರೀಯತೆಯ ಕೆಚ್ಚು ಕಿಚ್ಚುಗಳನ್ನು ಹೊತ್ತಿಸಿದ ನೂರಾರು ಗೀತೆಗಳ ಮುಂದೆ ಈ ಭಾವ ಪೇಲವವೆನಿಸಿದರೆ ಅಚ್ಚರಿಯೇನಿಲ್ಲ.  ಇನ್ನು ಕೊನೆಯದಾದ ಆತ್ಮೀಯಭಾವವೂ ಅಷ್ಟೇ.  ತಾಯೊಲುಮೆಗಿಂತ ಆತ್ಮೀಯಭಾವವೇ?  ಆದರೆ ದೊರೆ-ಸೇವಕ, ಪ್ರಭು-ಪ್ರಜೆ, ನಮ್ಮೆಲ್ಲರ ಮನಗಳ ಅಧಿನಾಯಕ ಮುಂತಾದ ಭಾವಗಳಲ್ಲಿ ತಾಯೊಲುಮೆಯ ಆತ್ಮೀಯತೆ ಹೇಗೆ ತಾನೆ ಸ್ಫುರಿಸೀತು?  ಹೋಗಲಿ, ಭಕ್ತಿಭಾವದಿಂದಲಾದರೂ ಈ ಆತ್ಮೀಯತೆ ಸ್ಫುರಿಸಬಹುದೇ ಎಂದರೆ, ಶಿವ, ವಿಷ್ಣು, ಕಾಳಿ, ಮಾರಿ-ಮಸಣಿ, ಜಕ್ಕಿಣಿ-ಭೂತಪ್ಪಗಳನ್ನು ಕಂಡರಿಸಿದ ಮೂರ್ತಕಲ್ಪನೆಯ ಮನಸ್ಸಿಗೆ ಬ್ರಹ್ಮಸಮಾಜದ ಸುಶಿಕ್ಷಿತ ಉಚ್ಚಬೌದ್ಧಿಕಸಮುದಾಯಕ್ಕಷ್ಟೇ ಪರಿಚಿತವಾದ ಈ ನಿರಾಕಾರ, ಕಲ್ಪನಾತೀತ "ಅಧಿನಾಯಕ" ಆತನ ರಥ, ಚಕ್ರ, ಶಂಖಧ್ವನಿ, ಸಿಂಹಾಸನ ಇವುಗಳ ಸಾಂಕೇತಿಕತೆ, ಅಮೂರ್ತಕಲ್ಪನೆಗಳು ಆತ್ಮೀಯತೆಯನ್ನು ಉಕ್ಕಿಸಿಯಾವು ಹೇಗೆ?  ಅಥವಾ ಇವೆಲ್ಲವನ್ನೂ ದೇಶಕ್ಕೆ ಲಗತ್ತಿಸಿ ಕಲ್ಪಿಸಿಕೊಳ್ಳುವುದಾದರೂ ಹೇಗೆ?

ಇಲ್ಲಿ ವಂದೇಮಾತರಂ ಸಣ್ಣದೊಂದು ಹೋಲಿಕೆ ಬೇಡುತ್ತದೆ.  ವಂದೇಮಾತರಂ ವಿಷಯ ಹಾಗಲ್ಲ.  ಅದು ತಾಯ್ದೇವಿಯ ವಿವಿಧ ಆಯಾಮಗಳ ಮೂರ್ತಕಲ್ಪನೆ.  ಅಲ್ಲಲ್ಲಿ ಬರುವ ಅಮೂರ್ತ ಕಲ್ಪನೆಗಳೂ ದೇಶದ ಸಾಮಾನ್ಯರ ಕಲ್ಪನಾಪರಿಧಿಗೆ ಹೊರತೇನಲ್ಲ.  ಕೋಟಿಕೋಟಿಕಂಠಕಲಕಲನಿನಾದಕರಾಲೆಯಾದ ಬಹುಬಲಧಾರಿಣಿ, ತಾರಿಣಿಯ ಪರಿಚಯ ಹೇಗೋ, ವಿದ್ಯಾ, ಧರ್ಮ, ಮರ್ಮಸ್ವರೂಪೆಯ ಪರಿಚಯ ಹೇಗೋ ಸುಜಲೆ, ಸುಫಲೆ, ಮಲಯಜಶೀತಲೆ, ಸಸ್ಯಶ್ಯಾಮಲೆ, ಶುಭ್ರಜ್ಯೋತ್ಸ್ನಾಪುಲಕಿತಯಾಮಿನಿ, ಫುಲ್ಲಕುಸುಮಿತಧ್ರುಮದಳಶೋಭಿನಿ, ಸುಹಾಸಿನಿ, ಸುಮಧುರಭಾಷಿಣಿಯಾದ ರಾಷ್ಟ್ರಮಾತೆಯ ಕಲ್ಪನೆಯೂ ಭಾರತೀಯರಿಗೆ ಹೊಸದಲ್ಲ.  ಆದರೆ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸುವಲ್ಲಿ ಎದುರಾದ ಮುಖ್ಯ ತೊಡಕೆಂದರೆ, ಇಲ್ಲಿ ಹಿಂದೂ ದೇವತೆಯೊಬ್ಬಳ ಮೂರ್ತಕಲ್ಪನೆಯಿರುವುದರಿಂದ ರಾಷ್ಟ್ರಗೀತೆಯ ಹೆಸರಿನಲ್ಲಿ ಆಕೆಗೆ ತಲೆವಾಗುವುದು ತಮ್ಮ ಧರ್ಮವಿರುದ್ಧ ಎಂದು ಮುಸ್ಲಿಮರು ತಕರಾರು ತೆಗೆದದ್ದು.  ಆದರೆ ಬಂಗಾಳದ ವಿಭಜನೆಯವರೆಗೂ ಈ ಗೀತೆಯನ್ನು ಹಿಂದೂ ಮುಸ್ಲಿಮರಿಬ್ಬರೂ ಕೂಡಿಯೇ ಹಾಡುತ್ತಿದ್ದರೆಂಬುದೂ, ಇಡೀ ದೇಶವನ್ನು ಒಗ್ಗೂಡಿಸುವಲ್ಲಿ ಈ ಗೀತೆ ಸಹಾಯಮಾಡಿತ್ತೆಂಬುದೂ ಇತಿಹಾಸ.  ಇರಲಿ, ಆದರೂ ಈ ತಕರಾರಿನಲ್ಲಿ ತಥ್ಯವಿಲ್ಲದಿಲ್ಲ.  ಗೀತೆಯ ಮೊದಲ ಚರಣವನ್ನು ಬಿಟ್ಟರೆ ಉಳಿದದ್ದು ಕಾಳಿಕಾಮಾತೆಯ ಮೂರ್ತಿಪೂಜೆಯೇ.  ಆದ್ದರಿಂದ ಅದಕ್ಕೆ ವಿರೋಧವೊದಗಿದ್ದರೆ ಸಹಜವೇ.  ಆದರೆ ರಾಷ್ಟ್ರೀಯಗೀತೆಯಾಗಿ ಚಾಲ್ತಿಯಲ್ಲಿರುವುದು ಕೇವಲ ಮೊದಲ ಚರಣವಷ್ಟೇ?  ಅಲ್ಲಿ ಯಾವ ಮೂರ್ತಿಪೂಜೆಯೂ, ಹಿಂದೂ ದೇವತೆಯ ಸ್ತುತಿಯೂ ಇಲ್ಲವಲ್ಲ?  ಅಲ್ಲಿರುವುದೆಲ್ಲಾ ಒಳ್ಳೆಯ ನೀರು, ಹಣ್ಣು, ಗಾಳಿ, ಸಸ್ಯಸಂಪತ್ತಿನಿಂದ ತುಂಬಿದ ತಾಯ್ನೆಲದ ಸ್ತುತಿಯಷ್ಟೇ.  ತಾಯ್ನೆಲ ಎಲ್ಲರಿಗೂ ಸಮಾನವಾಗಿ ಪೂಜ್ಯವಷ್ಟೆ?  ಅದಕ್ಕಾದರೂ ಯಾವ ಧಾರ್ಮಿಕ ತೊಡಕೂ ಇರಬಾರದಷ್ಟೇ?  ಆದರೂ ಇದಕ್ಕೆ ವಿರೋಧವಂತೂ ತಪ್ಪಲಿಲ್ಲ.  ಸ್ವಲ್ಪ ನಿರುಕಿಸಿ ನೋಡಿದರೆ ಈ ವಿರೋಧಕ್ಕೆ ಅಸಲಿ ಕಾರಣ ಮೇಲೆ ಹೇಳಿದ ವಿಗ್ರಹಪೂಜೆಯಲ್ಲ, ಬೇರೆಯೇ!  ಈ ಗೀತೆ ಬಂಕಿಮಚಂದ್ರರ ಆನಂದಮಠದಲ್ಲಿ, ಮುಸ್ಲಿಮ್ ದುರಾಕ್ರಮಣಕಾರರ ವಿರುದ್ಧ ಹಿಂದೂ ಸಾಧುಗಳು ಒಗ್ಗೂಡುತ್ತಿದ್ದ ಸಂದರ್ಭದಲ್ಲಿ ಬರುವುದು, ಆದ್ದರಿಂದ ಇದು "ಮುಸ್ಲಿಮರ ವಿರುದ್ಧವಾದುದು" ಎನ್ನುವ ಗ್ರಹಿಕೆ ಈ ವಿರೋಧಕ್ಕೆ ಕಾರಣ.  ಆದರೆ ನಿಜಕ್ಕೂ ಈ ಗ್ರಹಿಕೆಯಲ್ಲಿ ತಥ್ಯವುಂಟೇ ಎಂಬುದು ನಾವೆಲ್ಲರೂ ಪರಿಶೀಲಿಸಿಕೊಳ್ಳಬೇಕಾದ ಅಂಶ.  ದುರಾಕ್ರಮಣಕಾರರ ವಿರುದ್ಧದ ಭಾವನೆಗಳನ್ನು ಒಂದು ಸಮುದಾಯದ ವಿರುದ್ಧದ ಭಾವನೆಗಳಾಗಿ ಗ್ರಹಿಸಬೇಕೇ?  ಪ್ರಾರ್ಥನಾಪದ್ಯವಾಗಿ ಬಂದ ಗೀತೆಯ ಒಂದು ಭಾಗವನ್ನು (ಅದರ ಪ್ರಾರ್ಥನೆಯ ಅಂಶಗಳನ್ನು ಕಡೆಗಣಿಸಿ) ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಹುದಾದರೆ, ಕಾದಂಬರಿಯೊಂದರಲ್ಲಿ ಬಂದ ಗೀತೆಯ ಒಂದು ಭಾಗವನ್ನು (ತನ್ನಷ್ಟಕ್ಕೇ ಯಾವ ಧಾರ್ಮಿಕವಿರೋಧಕ್ಕೂ ಎಡೆಗೊಡದ ಭಾಗವನ್ನು) ಅದರ ಕಾದಂಬರಿ ಸಂದರ್ಭದ ಹಿನ್ನೆಲೆಯನ್ನು ಕಡೆಗಣಿಸಿ ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಾರದೇಕೆ?  ಇರಲಿ, ಇದು ಬಗೆಹರಿಯಲಾರದ ಪ್ರಶ್ನೆ.  ವಂದೇಮಾತರಂನಂತಹ ಹೃದ್ಯಮನೋಹರವಾದ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡುವ ಭಾಗ್ಯ ನಮಗೆ ಬರಲಿಲ್ಲವೆಂದು ನಿಡುಸುಯ್ಯಬಹುದಷ್ಟೇ.

ಅದೇನೇ ಇರಲಿ ರಾಷ್ಟ್ರಗೀತೆ ಯಾವುದಿರಬೇಕು, ಯಾವುದಿರಬಾರದೆಂದು ಚರ್ಚಿಸುವ ಉದ್ದೇಶ ಈ ಲೇಖನದ್ದಲ್ಲ, ಮತ್ತು ಅಂತಹ ಸಂದರ್ಭವೂ ಈಗಿಲ್ಲ; ರಾಷ್ಟ್ರಗೀತೆಯೆಂಬುದು ಹಾಗೆಲ್ಲ ಮನಬಂದಂತೆ ಬದಲಿಸಬರುವಂಥದ್ದೂ ಅಲ್ಲ.  ಜನಗಣಮನ ಗೀತೆಯ ಸಾಹಿತ್ಯಕ, ಐತಿಹಾಸಿಕವಿಶ್ಲೇಷಣಗಳೇನೇ ಇರಲಿ, ಅದಕ್ಕೆ ಅತ್ಯುನ್ನತಗೌರವ ಸಲ್ಲಲು ಅದು ನಮ್ಮ ರಾಷ್ಟ್ರಗೀತೆಯೆನ್ನುವ ಒಂದೇ ಕಾರಣ ಸಾಕು - ನಮ್ಮ ಎರಡಿಲ್ಲದ ಗೌರವ ಅದಕ್ಕೆ ಮೀಸಲು.  ಇದರೊಡನೆ ಗೀತೆಯಲ್ಲಿ ಅಂತರ್ಗತವಾಗಿರುವ ಉನ್ನತಭಾವವೂ ಮನಸ್ಸಿಗೆ ಬಂದರೆ ಈ ಗೌರವ ಇಮ್ಮಡಿಯಾದೀತು

ಜನಗಣಮಂಗಲದಾಯಕ ಜಯಹೇ ಭಾರತಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯಜಯಜಯಜಯಹೇ

ವಂದೇಮಾತರಂ