"ಏನು ಸರ್ ನಿಮ್ಮ ಮಗಳನ್ನು ಸಂಗೀತದ ಕ್ಲಾಸ್ ಗೆ ಕಳುಹಿಸೋದು ನಿಲ್ಲಿಸಿ ಬಿಟ್ರಿ"
"ಇನ್ನೇನ್ರೀ ಮತ್ತೆ ಯಾವಾಗ್ಲೂ “ನಿಮಪದಪ ನಿಮಪದಪ” ಅನ್ನೋ ಸಂಗೀತ ಹೇಳಿ ಕೊಡ್ತಾರೆ ಅಲ್ಲಿಂದ ಮುಂದಕ್ಕೆ ಹೋಗಲ್ಲ ಅಂತಾರೆ"
ಹೀಗೊಂದು ಚಟಾಕಿ ಹಾರಿಸಿದರು, ಮಿತ್ರ Ramaprasad Konanurರು. ಸಂಗೀತದ ಸರಳೆವರಸೆ ವಿಷಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಚಟಾಕಿಯಿದು. ಹೌದು ಮತ್ತೆ, ಸಂಗೀತದ ಹೆಸರಿನಲ್ಲಿ ಮಕ್ಕಳಿಗೆ ಅಪ್ಪ ಅಮ್ಮಂದಿರ ಬಗ್ಗೆ ಹಾಗೆಲ್ಲ ಹೇಳಿಕೊಟ್ಟರೆ ಹೇಗೆ? ಅಪ್ಪ ಅಮ್ಮಂದಿರು ಸುಮ್ಮನಿದ್ದುಬಿಡುತ್ತಾರಾ? ಬದಲಿಗೆ ಆ ಸಂಗೀತದ ಮೇಷ್ಟ್ರು ಇದನ್ನು ಪ್ರಯತ್ನಿಸಬಹುದಿತ್ತು:
ಸರಿ, ನೀದಪಾ; ಸರಿಸರಿ ನೀsss ದಪಾ: ನೀಸರಿ ನೀss ದಪಾ; ನೀsss ಸರಿಸರಿ ನೀsದಪಾ; ನೀsss ನೀsss ನೀsss ನೀದಪಾ
ಆಗ ಅಪ್ಪ ಅಮ್ಮ ಸಂಗೀತ ಬಿಡಿಸುತ್ತಿರಲಿಲ್ಲ, ಹುಡುಗಿಯೇ ಬಿಟ್ಟು ಹೋಗುತ್ತಿದ್ದಳು. ಹೋದರೆ ಹೋದಳು, ಅದಕ್ಕೆ ಅಷ್ಟೇನು ತಲೆ ಕೆಡಿಸಿಕೊಳ್ಳಬೇಕಿಲ್ಲ; ಆದರೆ ಅದಕ್ಕೆ ಉತ್ತರವಾಗಿ ಹುಡುಗಿಯೇ "ದಪ್ಪದಪ್ಪದಪದಪಾ ದಪಾ, ದಪದಪದಪ ದಪದಪದಪ ದಪದಪ" ಎಂದು ಕೊಡಲು (ಹೇಳಿಕೊಡಲು), ಶುರುಮಾಡಿದರೆ, 'ದಾರಿದಾರಿ'ಯಲ್ಲಿ? ಆಮೇಲೆ "ಪಾದ, ನೀಪಾದ, ಸಾssರಿ ನೀಪಾದ, ಸಾರಿಸಾರಿ ನೀಪಾದ, ಸದಾ ನೀಪಾದ, ದಾಸ ನೀಪಾದ ದಾಸದಾಸ" ಎಂದು 'ಪರಿಪರಿ'ಯಾಗಿ ಬೇಡುವ ಪರಿಸ್ಥಿತಿಯುಂಟಾಗಿಬಿಟ್ಟರೆ ಮೇಷ್ಟರಿಗೆ? ಎಷ್ಟಾದರೂ ಮೇಷ್ಟರು, 'ವರಸೆ'ಯ ಅನಂತಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಅರಿತವರು, ಸ್ವಲ್ಪ 'ನಿಧಾನಿ'ಸಿದರು, ಬಚಾವಾದರು.
ಸಂಗೀತದ ಸ್ವರಸಂಜ್ಞೆಗಳ ಅರ್ಥಸಾಧ್ಯತೆಗಳು ನಮ್ಮ ಹಾಸ್ಯಪ್ರಜ್ಞೆಯನ್ನೆಂತೋ ಅಂತೇ ಗಂಭೀರ ವಾಗ್ಗೇಯಪ್ರತಿಭೆಯನ್ನೂ ಸಾಕಷ್ಟೇ ಕೆಣಕಿದೆ. ತ್ಯಾಗರಾಜರ ಪ್ರಖ್ಯಾತ "'ಸಾಮನಿಗಮ'ಜ ಸುಧಾಮಯ" ಎಂಬ ಸಾಲು, ಪ್ರಖ್ಯಾತವಾದ "ವಲಜಿ" ರಾಗಮಾಲಿಕಾವರ್ಣದ "'ಪದಸ'ರೋಜಮುಲನೇ ನಮ್ಮಿ" ಎಂಬ ಚರಣ, ಬಾಲಮುರಳೀಕೃಷ್ಣರ "ಓಂಕಾರಪ್ರಣವ" ಷಣ್ಮುಖಪ್ರಿಯ ವರ್ಣದ "'ಪದನೀ'ರಜಮುಲೇ ನಮ್ಮಿತಿ" ಎಂಬ ಚರಣ - ಕೂಡಲೇ ನೆನಪಾಗುವಂಥದ್ದು. ಮತ್ತೆ, ರಾಮಸ್ವಾಮಿದೀಕ್ಷಿತರ ತೋಡಿರಾಗದ "ಸರಿಗಾನಿ ದಾನಿ ಪಾಮರಿನಿ ನೀಪದ" ಎಂಬ ರಚನೆ, ಸಂಪೂರ್ಣ ಸ್ವರಸಂಕೇತಾಕ್ಷರಗಳಿಂದಲೇ ನಿರ್ವಹಿಸಲ್ಪಟ್ಟದ್ದು. ಅಂಥದ್ದೇ ಮತ್ತೊಂದು ಪ್ರತಿಭಾಪೂರ್ಣ ರಚನೆ ಬಾಲಮುರಳೀಕೃಷ್ಣರ ತೋಡಿರಾಗದ "ಮಾ ಮಾನಿನಿ ನೀ ಧಾಮಗನಿ ನೀ ದಾಸರಿನಿಗಾದಾ". ಇದಂತೂ ಹಲವು ಮನೋಜ್ಞವಾದ ಅರ್ಥಪೂರ್ಣವಾದ ಸ್ವರಾಕ್ಷರಪದಪ್ರಯೋಗಗಳಿಂದ ಕೂಡಿದೆ - ಉದಾ: "ಸರಿಗಾನಿ ದಾರಿಮಾರಿ ಗದಾಧರಿ ನೀ ನಿಗಗನಿ ನೀ ಮಗನಿ ಸಾಮನಿಗಮ ಗರಿಮಗನಿ". ಒಂದುಕಡೆ, ಇರುವ ಏಳೇ ಅಕ್ಷರಗಳಲ್ಲಿ ಅರ್ಥಪೂರ್ಣವಾದ ಪದಗಳನ್ನು, ಭಾವಪೂರ್ಣವಾದ ವಾಕ್ಯಗಳನ್ನು ರಚಿಸುವುದು; ಮತ್ತೊಂದೆಡೆ, ಆ ಅಕ್ಷರಸಂಯೋಜನೆ ಆ ರಾಗದ ಸ್ವರೂಪಕ್ಕೆ ಸಹಜವಾಗಿ ಇರುವಂತೆ ರಾಗಪ್ರವಾಹದ ಅಂದಗೆಡದಂತೆ ನೋಡಿಕೊಳ್ಳುವುದು - ಇದು ಹಗ್ಗದಮೇಲಿನ ನಡಿಗೆಯೇ ಸರಿ. ಇಷ್ಟಾಗಿಯೂ ಇತ್ತ 'ಮಾತೂ' ಅತ್ತ 'ಧಾತು'ವೂ ಸಂಪೂರ್ಣ ರುಚಿಸದಿರುವ ಸಾಧ್ಯತೆಯೇ ಹೆಚ್ಚು.
ಸಂಗೀತದ ತಾಂತ್ರಿಕಾಂಶವೇ ಸಾಹಿತ್ಯವಾಗಿ 'ಮಾತು' ಆಗಿ ಮಿಂಚುವ ಪರಿಯಿದು. ಸಾಹಿತ್ಯದ ತಾಂತ್ರಿಕಾಂಶವೂ ಕವಿಯ ಪ್ರತಿಭಾವಿಶೇಷದಿಂದ ಸ್ವತಃ ಸಾಹಿತ್ಯವಾಗಿ ಮಿಂಚುವುದೂ ಉಂಟು. ರನ್ನನ ಈ ಸಾಲನ್ನು ನೋಡಿ:
ಗುರುವಂ ಲಘುಸಂಧಾನದಿ
ನರನಿಸೆ ಗುರುಲಘುವಿಮಿಶ್ರಿತಂ ದೊರಕೊಳಲ್ ತ-
ದ್ಗುರು ತಚ್ಛಂದೋವೃತ್ತಿಗೆ
ದೊರೆಯೆನಿಸಿರ್ದುದು ಮನಕ್ಕೆ ದುರ್ಯೋಧನನಾ
ಗುರುವಾದ ದ್ರೋಣನನ್ನು ಲಘುವಾಗಿ ಪರಿಗಣಿಸಿ ಅರ್ಜುನನು ಬಾಣಗಳಿಂದ ಹೊಡೆಯಲು ಆ ಗುರುವಿನ ಶರೀರ ಗುರುಲಘುಮಿಶ್ರಿತವಾದ ಛಂದೋರೂಪದಂತೆ (ಪದ್ಯದಂತೆ) ದುರ್ಯೋಧನನಿಗೆ ಕಂಡಿತಂತೆ. ಪ್ರತಿಭೆಯೇ ಸರಿ, ಆದರೆ ರಣಭೂಮಿಯ ಘೋರಸನ್ನಿವೇಶದಲ್ಲಿ, ಏಕಾಂಗಿಯಾಗಿ ಮಿಡುಕುತ್ತಾ ಕುದಿಯುತ್ತಾ ರಣಭೂಮಿಯುದ್ದಕ್ಕೂ ತನ್ನ ಸೋಲಿನ ನಿಶಾನೆಗಳನ್ನೇ ಕಾಣುತ್ತಾ ಬಂಧುಮಿತ್ರರ ಕಳೇಬರಗಳನ್ನು ಕಾಣುತ್ತಾ, ತುಳಿಯುತ್ತಾ, ಎಡವುತ್ತಾ, ಎಣೆಯಿಲ್ಲದ ದುಃಖದಿಂದ ಪರಿತಪಿಸುತ್ತಾ ಆ ರಣಭೂಮಿಯಲ್ಲಿ ನಡೆದು ಬರುತ್ತಿದ್ದ ದುರ್ಯೋಧನನಿಗೆ, "ಶರಜಾಲಜರ್ಜರಿತಗಾತ್ರತ್ರಾಣ"ನಾಗಿ ಸತ್ತು ಬಿದ್ದಿರುವ ಗುರುವಿನ ಶರೀರ ಗುರುಲಘುವಿಮಿಶ್ರಿತವಾದ ಪದ್ಯದಂತೆ ಕಂಡಿತಲ್ಲಾ (ಆ ಸಮಯದಲ್ಲೂ ದುರ್ಯೋಧನನಿಗೆ ವ್ಯಾಕರಣ-ಛಂದಸ್ಸುಗಳ ನೆನಪಾಯಿತಲ್ಲಾ), ಅದೀಗ ತಮಾಷೆಯೇ ಸರಿ, ಕ್ರೂರ ತಮಾಷೆ. ಇಲ್ಲಿ ಕವಿಯ ಪ್ರತಿಭೆಗೆ ತಲೆದೂಗಬೇಕೋ, ದುರ್ಯೋಧನನ ಅಪ್ರಸ್ತುತಪ್ರಸಂಗಕ್ಕೆ ತಲೆಯ ಮೇಲೆ ಕೈ ಹೊರಬೇಕೋ ಓದುಗನಿಗೆ-ಕೇಳುಗನಿಗೆ ಬಿಟ್ಟ ವಿಷಯ. ಪ್ರಸಂಗಾವಧಾನವಿಲ್ಲದ ಪ್ರತಿಭೆ ರಸಾಭಾಸವನ್ನೂ ಉಂಟುಮಾಡಬಹುದಷ್ಟೇ? ಅದೇನೇ ಇರಲಿ, ಪ್ರತಿಭೆ ಈ ರೂಪದಲ್ಲೂ ಇರಬಹುದೆಂಬುದಂತೂ ಗಮನಿಸಬೇಕಾದ ಮಾತು.
ಇದೇ ಪ್ರತಿಭೆ ಸಹಜಸುಂದರ ಹಾಸ್ಯವೇ ಆಗಿ ಹೊಮ್ಮುವ ಪರಿಯನ್ನೂ ನೋಡಿಬಿಡಿ. ಭಾಮಿನಿ (ಷಟ್ಪದಿ)ಯ ಲಕ್ಷಣವನ್ನು ವಿವರಿಸುತ್ತಾ ಲಾಕ್ಷಣಿಕರಾದ ಅ ರಾ ಮಿತ್ರ ಹೀಗೆ ಹೇಳುತ್ತಾರೆ:
ಇವಗೆ ಭಾಮಿನಿ ಹುಚ್ಚು ಒಂದೇ
ಸಮನೆ 'ಮಾತ್ರೆ'ಗಳೇಳ ಕೊಡುತಿರಿ
ಕ್ರಮವ ತಪ್ಪದೆ ಮೂರು ನಾಲ್ಕರ ತೆರದಿ ಏಳು ಸಲ
ಸಮೆಯದಿರೆ ಮತ್ತೊಂದು ಮಂಡಲ
ಹವಣಿಸುತ ಬರೆ ಲೇಸು ಕೇಳಿರಿ
ಬೆವರಬೇಡಿರಿ 'ಕೊನೆಗೆ ಗುರು'ಕೃಪೆಯಿರಲು ಬದುಕುವನು
ಅಲ್ಲವೇ ಮತ್ತೆ? ಮೂರು-ನಾಲ್ಕರ ಡೋಸುಗಳಲ್ಲಿ ಏಳೇಳು ಮಾತ್ರೆಗಳನ್ನು ಎರಡು ಮಂಡಲ ಕೊಟ್ಟರೆ ತಾನೆ ಭಾಮಿನಿಯ ಹುಚ್ಚು ಬಿಡುವುದು? ಅದೂ ಕೊನೆಗೆ ಗುರುಕೃಪೆಯಿದ್ದರೆ ಮಾತ್ರ (ಭಾಮಿನೀಷಟ್ಪದಿಯ ಲಕ್ಷಣ - ಮೂರು+ನಾಲ್ಕರ ಏಳೇಳು ಗಣಗಳು ಮತ್ತು ಒಂದು ಗುರು - ಇಷ್ಟಾದರೆ ಭಾಮಿನೀಷಟ್ಪದಿಯ ಒಂದು ಮಂಡಲ (ಪಾದ)ವಾಯಿತು; ಅಂಥದ್ದೇ ಇನ್ನೊಂದು ಮಂಡಲವಾದರೆ ಪೂರ್ಣಷಟ್ಪದಿ).
ಇದೇ ಅರಾ ಮಿತ್ರರು ತಮ್ಮ "ಪಂಡಿತನ ಸಂಕಟ" ಎಂಬ ಲಲಿತಪ್ರಬಂಧವೊಂದರಲ್ಲಿ, ಹುಚ್ಚಾಸ್ಪತ್ರೆಗೆ ಎಳೆತರಲ್ಪಟ್ಟ ವ್ಯಾಕರಣಪಂಡಿತರೊಬ್ಬರ ಸಂಕಟವನ್ನು ಡಾಕ್ಟರ ದೃಷ್ಟಿಯಿಂದ ಚಿತ್ರಿಸುತ್ತಾರೆ. ಪಂಡಿತರು ತಮ್ಮ ಸಂಕಟವನ್ನು ಗಂಟೆಗಟ್ಟಲೆ ವ್ಯಾಕರಣದ ಭಾಷೆಯಲ್ಲೇ ವರ್ಣಿಸಿದ್ದನ್ನು ಕೇಳಿ ತಲೆಕೆಟ್ಟು ಸುಸ್ತಾಗಿ ರಾತ್ರಿ ಮನೆಗೆ ಬಂದ ಡಾಕ್ಟರು, ಆ ಕತೆಯನ್ನು ತನ್ನ ತಂದೆಯ ಬಳಿ ಹೇಳುತ್ತಾರೆ. ಹಿರಿಯರಾದ ತಂದೆ ತಮ್ಮ ಅನುಭವದಿಂದ ನಾಲ್ಕು ಮಾತು ಹೇಳಿಯಾರು ಎನ್ನುವ ಆಸೆ ಡಾಕ್ಟರರದ್ದು. ಆ ತಂದೆಯೋ ನಿವೃತ್ತ ಛಂದಶ್ಶಾಸ್ತ್ರಪಂಡಿತರು. ಅವರು ಹೇಳುತ್ತಾರೆ "ಏನು ಮಾಡೋದು ಮಗು, ಪಾಪ ಗ್ರಹಚಾರ. ಆತನನ್ನು ನಾನು ಬಲ್ಲೆ... ವ್ಯಾಕರಣ ಎಂದರೆ ಪ್ರಾಣ ಅವರಿಗೆ... ಆದರೆ ಅವರ ದಾಂಪತ್ಯಜೀವನದಲ್ಲಿ 'ಸಾಂಗತ್ಯ'ವಿಲ್ಲ, ಅವರ ಬದುಕು ಲಲಿತ ಅಥವಾ ಸರಳರಗಳೆಯ ಹಾಗೆ ಉತ್ಸಾಹದಿಂದ ಸಾಗಲಿಲ್ಲ. ಎಷ್ಟಾದರೂ ಅವರು 'ಗುರು'ಗಳಲ್ಲವೇ? ಅವರ ಹೆಂಡತಿ ಕೂಡ ಅಲ್ಪಪ್ರಾಣಗಳ ಹಾಗೆ ಅವರನ್ನು ಅಷ್ಟು ಲಘುವೆಂದು ಎಣಿಸಬಾರದಿತ್ತು. ಒಟ್ಟಿನಲ್ಲಿ ಮದುವೆಯಾದಂದಿನಿಂದ ಭಾಮಿನೀಷಟ್ಪದಿ ಅವರಿಗೆ ಒಗ್ಗಲಿಲ್ಲ" - ಈ ಮಾತನ್ನು ಕೇಳಿ ಮಗನಿಗೆ ಬಂದದ್ದು ನಿದ್ದೆಯಲ್ಲ, ಮೂರ್ಛೆ!
ಇರಲಿ, ಇವೆಲ್ಲ ಗಂಭೀರವಾದ ಸಾಹಿತ್ಯಸಂಗೀತಪ್ರತಿಭೆಯ ಮಾತಾಯಿತು. ಅದರಾಚೆಗೂ ಪ್ರತಿಭೆಯೆಂಬುದು ಮಾತಲ್ಲದ ಮಾತಿಗೆ, ಅರ್ಥವಲ್ಲದ ಅರ್ಥವನ್ನು ಜೋಡಿಸಿ ನೋಡಿ ಹಿಗ್ಗುತ್ತಲೇ, ರೋಮಾಂಚಗೊಳ್ಳುತ್ತಲೇ ಇರುತ್ತದೆ. ಬೆಕ್ಕುಗಳು ಜಗಳಾಡುವಾಗ ಕಿರುಚುವುದು ಮಗುವಿನ ಅಳುವಿನಂತೆಯೇ ಕೇಳುತ್ತದೆ. ನಡುರಾತ್ರಿಯ ನೀರವಮೌನದಲ್ಲಿ ಸುತ್ತಮುತ್ತ ಯಾರೂ ಇಲ್ಲದಿರುವಾಗ ಬೆಕ್ಕುಗಳು ಕಿರುಚಲು ಶುರುಮಾಡಿದರೆ, ಪ್ರೇತಶಿಶುವೊಂದರ ಅಳುವನ್ನು ಕೇಳಿದಂತಾಗಿ ರಕ್ತ ಹೆಪ್ಪುಗಟ್ಟುವುದು ಖಂಡಿತ. ಊರ ಕಡೆಯ, ಚಿಕ್ಕಂದಿನ ನೆನಪುಗಳು ಯಾವಾಗಲೂ ರೋಮಾಂಚಕ. ನಾಯಿಗಳು ಕೆಲವೊಮ್ಮೆ ಅಳುತ್ತವಲ್ಲ. ಅದಕ್ಕೆ ಹಲವು ವ್ಯಾಖ್ಯಾನಗಳಿದ್ದುವು. ಹೊರಗೆ ನಾಯಿಯೊಂದು ಅಳುತ್ತಿದ್ದರೆ, ಅದು ಮೇಲೆ ನೋಡಿಕೊಂಡು ಅಳುತ್ತಿದೆಯೋ ನೆಲ ನೋಡಿಕೊಂಡು ಅಳುತ್ತಿದೆಯೋ ನೋಡಲು ಹೇಳುತ್ತಿದ್ದರು. ಮೇಲೆ ನೋಡಿಕೊಂಡು ಅಳುತ್ತಿದ್ದರೆ ಅದರ ಕಣ್ಣಿಗೆ ದೆವ್ವ ಕಾಣಿಸುತ್ತಿದೆಯೆಂದರ್ಥ, ಅಳುವಿನ ಜೊತೆಗೆ ಭಯ ತುಂಬಿದ ಬೊಗಳುವಿಕೆಯೂ ಸೇರಿರುತ್ತದಂತೆ. ನೆಲ ನೋಡಿಕೊಂಡು ಅಳುತ್ತಿದ್ದರೆ ಯಾರೋ ಸಾಯುತ್ತಾರೆ ಎಂದರ್ಥವಂತೆ. ಯಾರ ಮನೆಯ ಮುಂದೆ ಅಳುತ್ತದೆಯೋ ಅವರಿಗೆ ಒಳಗೇ ಪುಕಪುಕ; ಅದರಲ್ಲೂ ಯಾರಾದರೂ ವಯಸ್ಸಾದವರೋ, ರೋಗಿಷ್ಟರೋ, ಸಾಯಲು ಬಾಕಿಯಿರುವವರು ಮನೆಯಲ್ಲಿದ್ದರಂತೂ ಮುಗಿದೇ ಹೋಯಿತು - "ದರಿದ್ರದ್ದು ನಮ್ಮನೇ ಮುಂದೇನೇ ಅಳ್ತಿದೆ, ಓಡಿಸೋ ಅತ್ಲಾಗೆ" ಎನ್ನುವ ಉದ್ಗಾರ ಸಾಮಾನ್ಯ. ಒಂದು ನಾಯಿಯಂತೂ "ಅವ್ವೊವ್ವೋssssss" ಎಂದು ಸ್ಪಷ್ಟಾಕ್ಷರಗಳೊಂದಿಗೆ ಅಳುತ್ತಿತ್ತು. ಮನೆಯ ಬಳಿ ಅಲ್ಲೆಲ್ಲೋ ಮರದ ಮೇಲೆ ಗೂಬೆಯೊಂದು ಇದ್ದಕ್ಕಿದ್ದ ಹಾಗೆ ಕೂಗಲು ಶುರುಮಾಡುತ್ತಿತ್ತು. "ಗೂsss" ಎಂದೊಂದು ಪ್ಲುತ, ಅದರ ಹಿಂದೆಯೇ "ಗುಗ್ಗುಗುಗೂsss" ಎಂಬೊಂದು ಉದ್ಗಾರ. ಇದು ಪುನರಾವರ್ತನೆಯಾಗುತ್ತಿದ್ದರೆ ಯಾವುದೋ ಸಾವಿನ ಕರೆಯಂತೆ ಕೇಳುತ್ತಿತ್ತು. ನಮ್ಮ ತಂದೆ ಉದ್ಗರಿಸುತ್ತಿದ್ದರು - "ಓಹೋ ಇದು 'ಗೂ... ಗುತ್ತಿಸುಡೂ' 'ಗುತ್ತಿಸುಡೂ' ಅಂತ ಕೂಗ್ತಿದೆ. ಯಾರೋ 'ಠಾ' ಅಂತಾರೆ ಇಷ್ಟರಲ್ಲೇ" (ಕೈಲಾಸಂ ತಾವರೆಕೆರೆಯ ಗಡFಖಾನರು ನೋಡಿದ್ದ ಗೂಬೆಯೊಂದು "ಮುದ್ದೂ... ಮುದ್ದೂ... ಐಸಾ ಅಲ್ಡಾಯಿಸ್ತಿತ್ತು").
ನಮ್ಮ ತಂದೆ, ತಮ್ಮ ಬಾಲ್ಯಕಾಲದ್ದೊಂದು ನೆನಪನ್ನು ಯಾವಾಗಲೂ ಹೇಳುತ್ತಿದ್ದರು. ಬೀದಿಕೊನೆಯ ಮುದುಕಿಯೊಂದು ಸತ್ತಾಗ, ಆ ಶವವನ್ನು ಅಲಂಕರಿಸಿ ಚಟ್ಟದಲ್ಲಿ ಕೂರಿಸಿ ಬ್ಯಾಂಡ್ ಸೆಟ್ಟಿನೊಂದಿಗೆ ಶವಯಾತ್ರೆಯಲ್ಲಿ ಹೊತ್ತೊಯ್ಯುತ್ತಿದ್ದರೆ, ಬ್ಯಾಂಡ್ ಸೆಟ್ಟಿನ ಸಂಗೀತದ ಲಯಕ್ಕೆ ತಕ್ಕ ಹಾಗೆ ಚಟ್ಟದಲ್ಲಿ ಕುಳಿತ ಹೆಣ ಅಡ್ಡಡ್ಡ ತಲೆಯಾಡಿಸುತ್ತಿದ್ದುದು ನೋಡಿ ಈ ಹುಡುಗನಿಗೆ ಹೊಳೆದದ್ದು - "ಬರೋದಿಲ್ಲs ನಾsನೂss... ಯಮಲೋsಕಕ್ಕೆs, ಬರೋದಿಲ್ಲs ನಾsನೂsss..." (ಸಂಗೀತ ಬಲ್ಲವರು ಬೇಕಿದ್ದರೆ ಇದನ್ನು ಆನಂದಭೈರವಿ ರಾಗ ಮಿಶ್ರಚಾಪುತಾಳದಲ್ಲಿ ಹಾಡಿಕೊಂಡು ಆನಂದಿಸಬಹುದು - "ಸಗಾರಿಗ್ಗs ಮಾsಪಾss... ಮಪಗಾsರಿsಸs ಸಗಾರಿಗ್ಗs ಮಾsಪಾsss") ಎಂದು ಆ ಮುದುಕಿ ತಲೆಯಾಡಿಸುತ್ತಿದೆಯಂತೆ, ಅದೇ ಹಾಡನ್ನೇ ಬ್ಯಾಂಡ್ ಸೆಟ್ಟಿನವರು ಬಾರಿಸುತ್ತಿರುವುದಂತೆ!
ಪ್ರತಿಭೆ ವಂಶವಾಹಿನಿಯಲ್ಲೇ ಹರಿಯುತ್ತದೆ ಎಂಬುದು ಸುಳ್ಳಲ್ಲ ನೋಡಿ. ನಾನೂ ಸುಮಾರು ಅದೇ ವಯಸ್ಸಿನಲ್ಲಿ ಅಂಥದ್ದೇ ಶವಯಾತ್ರೆಗಳನ್ನು ಕಂಡವನೇ, ಬ್ಯಾಂಡ್ ಸೆಟ್ಟನ್ನು ಕೇಳಿದವನೇ. ಬ್ಯಾಂಡ್ ಸೆಟ್ಟಿನ "ಡಡ್ಡಡ್ಡ... ಡಡ್ಡಡ್ಡ...ಡಡ್ಡಡ್ಡ... ಡಡ್ಡಡ್ಡ..." ಎಂಬ ಗತ್ತಿನ ಲಯ, "ನಂದಲ್ಲ... ನಂದಲ್ಲ... ನಂದಲ್ಲ... ನಂದಲ್ಲ..." ಎಂದು ಆ ಸತ್ತವರ ಮನದ ಹಾಡಾಗಿ ನನಗೆ ಕೇಳುತ್ತಿದ್ದುದು ಆಶ್ಚರ್ಯವಲ್ಲ.
ತಡೆಯಿರಿ, ಪ್ರತಿಭೆಯೆಂಬುದು ಈ ರೀತಿ ಕೆಟ್ಟ, ಅಪಶಕುನದ ಹಾದಿಯಲ್ಲೇ ಹರಿಯಬೇಕೆಂದಿಲ್ಲ. ಅಲ್ಲೆಲ್ಲೋ ಆಕಾಶದಲ್ಲಿ ಗರುಡಪಕ್ಷಿಯನ್ನು ಕಂಡರೆ ಅದು ಕ್ಷೇಮಕಾರಿ, ಲಕ್ಷ್ಮೀನಾರಾಯಣನ ಸನ್ನಿಧಾನ. ಅದು "ಕರ್ರ್ರಾ..." ಎಂದು ಕೂಗಿದರೆ ಶ್ರದ್ಧಾಳುಗಳ ಕಿವಿಗೆ "ಕೃಷ್ಣಾ..." ಎಂದು ಕೇಳಿಸುತ್ತದೆ, ಕೆಲವರಿಗಂತೂ "ನಾರಾಯ್ಣಾ, ನಾರ್ಣಾ..." ಎಂದೂ ಕೇಳಿಸುತ್ತದೆ, ಕೈ ತಾನಾಗಿಯೇ ಮುಗಿಯುತ್ತದೆ. ಏನಾದರೂ ಮಾತಾಡುವಾಗ ಹಲ್ಲಿ ಲೊಚಗುಟ್ಟಿತೆನ್ನಿ "ನೋಡಿದ್ಯಾ, ನಿಜವಂತೆ" ಎಂದು ಹಿಗ್ಗುತ್ತಾ ಆ ಲೊಚಗುಡುವಿಕೆಯ ಲಯಕ್ಕೆ ಸರಿಯಾಗಿ "ಕೃಷ್ಣ ಕೃಷ್ಣ ಕೃಷ್ಣ" ಎಂದು ನೆಲಕ್ಕೆ ಬೆರಳ ತುದಿ ಕುಟ್ಟುತ್ತಾರೆ. ಇನ್ನು ಮಾತೃಸ್ವರೂಪಿಯಾದ ಹಸುವಿನ ಕೂಗಂತೂ ಜಗದ ತಾಯ್ತನವನ್ನೆಲ್ಲ ಒಟ್ಟುಮಾಡಿ ಕರೆದಂತೆ "ಅಂಬಾsss" ಎಂದೇ ಕೇಳುತ್ತದೆ. "ಕನ್ನಡ ಗೋವಿನ ಮುದ್ದಿನ ಕರು"ಗಳಂತೂ ಇನ್ನೂ ಸ್ಪಷ್ಟವಾಗಿ "ಅಮ್ಮಾsss" ಎನ್ನುತ್ತವೆ.
ಪಶುಪಕ್ಷಿಗಳ ಎಲ್ಲ ಧ್ವನಿಗಳಿಗೂ ಹೀಗೆ 'ಮಾತು' ಆರೋಪಿಸಲು ಸಾಧ್ಯವೋ ಅಲ್ಲವೋ, ಆದರೆ ಇವೆಲ್ಲ ಸಂಗೀತವೇ. ಸಂಗೀತದ ಒಂದೊಂದು ಸ್ವರಕ್ಕೂ ಒಂದೊಂದು ಪಶುಪಕ್ಷಿಯ ಹೆಸರನ್ನು ಕೊಟ್ಟಿರುವುದು ಸುಮ್ಮನೇ ಅಲ್ಲ. ಆದರೆ ಅದೇನೇ ಇರಲಿ, ಈ ಧ್ವನಿವೈವಿಧ್ಯವನ್ನು ಒಟ್ಟಾರೆ ಸಂಗೀತವೆಂದೇ ಕರೆಯಬಹುದಿರಲಿ, ಒಂದೊಂದೇ ಪ್ರಾಣಿಯನ್ನೋ ಪಕ್ಷಿಯನ್ನೋ ಹಿಡಿದರೆ, ಕೋಗಿಲೆಯ 'ಸಂಗೀತ'ವನ್ನು ಆಸ್ವಾದಿಸಿದಂತೆ ಕಾಗೆಯ ’some'ಗೀತವನ್ನೂ ಗಾರ್ದಭಗಾನವನ್ನೂ ಆಸ್ವಾದಿಸಬರುವುದೋ, ಹೇಳಲಾಗದು. ಕೋಕಿಲಾರವ, ಕೀರವಾಣಿ ಮುಂತಾದ ರಾಗಗಳಂತೆ ಕಾಕವಾಣಿ, ಗಾರ್ದಭಧ್ವನಿ ಇತ್ಯಾದಿ ರಾಗಗಳನ್ನು ಯಾರೂ ರೂಪಿಸಿದಂತಿಲ್ಲ. ಹಂಸಧ್ವನಿ, ಹಂಸನಾದ, ಮಯೂರಧ್ವನಿಯಂತಹ ಸುಶ್ರಾವ್ಯರಾಗಗಳಿಗೆ ಆ ಹೆಸರಿಟ್ಟವರು ಆಯಾ ಪಕ್ಷಿಗಳ ಧ್ವನಿಯನ್ನು ನಿಜಕ್ಕೂ ಆಲಿಸಿ ಸವಿದು ಈ ರಾಗಗಳಿಗೆ ಆ ಹೆಸರಿಟ್ಟರೋ, ಅಥವಾ ಸೌಂದರ್ಯಕ್ಕೆ ಸೆರಗು ಹೊದಿಸಿದಂತೆ ರಾಗಸೌಂದರ್ಯವನ್ನು ಈ ಕರ್ಕಶಧ್ವನಿಯ ಸುಂದರಪಕ್ಷಿಗಳ ಹೆಸರುಗಳ ಹಿಂದೆ ಬೈತಿಡುವ ತಂತ್ರವೋ ಯಾರಿಗೆ ಗೊತ್ತು?
ಅದಿರಲಿ, ಬಹುಕಾಲದ ಹಿಂದೆ, ನಮ್ಮ ಮನೆಯ ಮುಂದಿದ್ದ ಜೋಪಡಿಗಳಲ್ಲಿ ಎರಡು ಹುಂಜಗಳಿದ್ದುವು. ಸಾಮಾನ್ಯವಾಗಿ ಹುಂಜಗಳು "ಕೊಕ್ಕೊಕೋsಕೋss" ಎಂದು ಕೂಗುತ್ತವಷ್ಟೇ? ಇಲ್ಲಿ ಒಂದು ಹುಂಜ ಅದಕ್ಕೆ ಇನ್ನೊಂದಿಷ್ಟು ನಾದವನ್ನು ಸೇರಿಸಿ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗುತ್ತಿತ್ತು. ಆದರೆ ಅದೇನೋ ಪಾಪ ಕಕಾರವು ಸ್ಪಷ್ಟವಾಗಿ ಹೊರಡದೇ ಆ ದನಿಯಲ್ಲಿ ಅನೇಕ ಅಕ್ಷರಸಾಧ್ಯತೆ ಕೇಳಬರುತ್ತಿತ್ತು. ಅದು ಹೀಗೆ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗಿದರೆ ನನಗಂತೂ "ವೆಂಕಟೇsಶಾsss" ಎಂದು ಕೂಗಿದಂತೆಯೇ ಕೇಳುತ್ತಿತ್ತು ("ರಂಗನಾsಥಾsss" ಎಂದು ಕರೆದಂತಿತ್ತೆಂದು ನಮ್ಮ ಚಿಕ್ಕಪ್ಪನವರ ವಾದ, ಇರಲಿ - "ಶಂಭುಲಿಂsಗಾsss" ಎಂದು ಕೂಗುತ್ತಿತ್ತೆಂದು ಯಾರೂ ವಾದಹೂಡಲಿಲ್ಲ, ಯಾವುದೋ ಒಂದು ಹೆಸರು, ನಾಮಸ್ಮರಣೆಗೆ- "ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ" ಅಲ್ಲವೇ?).
ಇನ್ನೊಂದು ಹುಂಜ, ಇದರ ಉಚ್ಚಾರಣೆಯೇನೋ ಸ್ಪಷ್ಟವಾಗಿತ್ತು, ಆದರೆ ಇತರ ಹುಂಜಗಳಿಗಿಂತ ವಿಚಿತ್ರವಾದ ಲಯವನ್ನನುಸರಿಸಿ ಕೂಗುತ್ತಿತ್ತು. ಹುಂಜಗಳು ಸಾಮಾನ್ಯವಾಗಿ "ಕೊಕ್ಕೊಕೋsಕೋsss", ಎಂದೋ "ಕೋಕೋsಕೋsss" ಎಂದೋ ಕೂಗುತ್ತವೆ; ಕೆಲವು ಸಹನೆಗೆಟ್ಟ ಹುಂಜಗಳು "ಕೊಕ್ಕೊಕೋs" ಎಂದೋ "ಕೋsಕೋss" ಎಂದೋ "ಹ್ರಸ್ವಾವರ್ತದಲ್ಲಿ ನುಡಿದು ಸುಮ್ಮನಾಗುತ್ತವೆ. ಕೆಲವೊಮ್ಮೆ ತೀರ ಬೇಸರದಲ್ಲಿ "ಕೋss" ಎಂಬ ಪ್ಲುತಸ್ವರವನ್ನಷ್ಟೇ ನುಡಿದು, ಕೊಂಡರೆ ಕೊಳ್ಳಲಿ ಬಿಟ್ಟರೆ ಬಿಡಲಿ ಎಂದು ಸುಮ್ಮನಾಗುವುದೂ ಉಂಟು. ಆದರೆ ಈ ಹುಂಜ ಮಾತ್ರ ಈ ಯಾವ ಸಾಂಪ್ರದಾಯಿಕ ಲಯವನ್ನೂ ಅನುಸರಿಸದೇ "ಕೊಕ್ಕೊಕೊ ಕೊಕ್ಕೋss" "ಕೊಕ್ಕೊಕೊ ಕೊಕ್ಕೋss" ಎಂದು ಕೂಗುತ್ತಿತ್ತು. ಹೀಗೆ ಇದು ಬೆಳಗಿನ ಜಾವದಲ್ಲಿ ಕೂಗುತ್ತಿದ್ದರೆ, ಅರೆನಿದ್ದೆಯಲ್ಲಿದ್ದ ನಮಗೆ, ಆ "ಕೊಕ್ಕೊಕೊ ಕೊಕ್ಕೋss" ಎಂಬ ಕರೆಯಲ್ಲಿ, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ "ಅರ್ಥಮನರ್ಥಮ್" ಎಂಬ ಸ್ಪಷ್ಟವಾದ ಘೋಷವಾಣಿಯೇ ಕೇಳುತ್ತಿತ್ತು.
ಪ್ರತಿದಿನ ಜೋಪಡಿಯ ಶೃಂಗವನ್ನೇರಿ, ಕೊರಳುಬ್ಬಿಸಿ ಒಮ್ಮೆ "ಅರ್ಥಮನರ್ಥಮ್" ಎಂದು ಕೂಗುವುದು; ಕೊರಳು ಕೊಂಕಿಸಿ, ಎಲ್ಲಿಂದಲಾದರೂ ಪ್ರತಿವಾದಿಮಲ್ಲರು ಬರಬಹುದೇ ಎಂಬ ಗತ್ತಿನಲ್ಲಿ ಹತ್ತೂ ದಿಕ್ಕುಗಳನ್ನು ನೋಡಿ, ಮತ್ತೊಮ್ಮೆ "ಅರ್ಥಮನರ್ಥಮ್" ಭೇರಿ ಮೊಳಗಿಸುವುದು; ಮತ್ತೊಮ್ಮೆ ದಶದಿಗ್ದರ್ಶನ, ಮತ್ತೊಮ್ಮೆ ಭೇರಿ - ಹೀಗೆ ಪ್ರತಿದಿನ ಬೆಳಗಿನ ಜಾವ, ಆಮೇಲೆ ಜನರಲ್ಲಿ ಆಧ್ಯಾತ್ಮಪ್ರಜ್ಞೆ ಖಿಲವಾಗಿ ಲೌಕಿಕಪ್ರಜ್ಞೆ ವಿಜೃಂಭಿಸುತ್ತಿದೆಯೆಂದೆನ್ನಿದಾಗಲೆಲ್ಲ ಒಮ್ಮೊಮ್ಮೆ, ವೇದಾಂತಭೇರಿಯನ್ನು ಬಾರಿಸುತ್ತಿದ್ದ ಹುಂಜ ಯಾವಾಗಲೋ ಒಂದು ದಿನ, ನಮ್ಮ ಅರಿವಿಗೇ ಬಾರದಂತೆ, ಕೂಗುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು. ಪಾಪ ಯಾವ 'ಅನರ್ಥ' ಅದಕ್ಕೆ ಸಂಭವಿಸಿತ್ತೋ - ಸದೇಹಮುಕ್ತಿಯಂತೂ ದೊರೆತಿರಲಾರದು.
1 comment:
"ನಮಪ ನಿಮಗ ಸರಿ, ನಿಮಪ ನಮಗ ಸರಿ.."
Post a Comment