ನನ್ನ ಇತರ ಬ್ಲಾಗುಗಳು
ಶೀರ್ಷಿಕೆಗಳು
- ೦೧. ಒಳಹೋಗುವ ಮುನ್ನ ಒಂದು ನಿಮಿಷ... (1)
- ೦೨. ಕವನಗಳು (32)
- ೦೩. ಅನುವಾದಿತ (12)
- ೦೪. ಹನಿ-ಮಿನಿ; ಚೂರು-ಚುಟುಕ (5)
- ೦೫. ಕೆಲವು ವಚನಗಳು (4)
- ೦೫. ಲಹರಿ (1)
- ೦೬. ಪ್ರಚಲಿತ (14)
- ೦೭. ಲಹರಿ (15)
- ೦೮. ಭಾಷೆ (16)
- ೦೯. ಪ್ರವಾಸ (2)
- ೧೦. ಚುಚ್ಚಿದ್ದು - ಕಚ್ಚಿದ್ದು (9)
- ೧೧. ವಿಚಾರ (4)
- ೧೨. ನಾಟಕ/ಮಾತು-ಕತೆ/ಪ್ರಹಸನ... (1)
- ೧೩. ವ್ಯಕ್ತಿಗಳು (6)
- ೧೪. ಅರ್ಥಚಿಂತನೆ (2)
- ೧೫. ಪುಸ್ತಕ (2)
- ೧೬. ಕಾವ್ಯದ ಕುಣಿತ (ಪ್ರಾಸ ಛಂದಸ್ಸು ಇತ್ಯಾದಿ) (3)
- ೧೭ ಪಾಕ (2)
- ೧೮ ಸಂಗೀತರಚನೆಗಳು (3)
- ೧೯. ಭಾರತೀಯಕಾವ್ಯಮೀಮಾಂಸೆ (1)
- ೨೦. ಹಬ್ಬ-ಹರಿದಿನ (1)
- ೯೮. ಇತ್ಯಾದಿ... (6)
- ೯೯. ಇತರ ಬ್ಲಾಗ್ ಬರಹ ಸೇರ್ಪಡೆಗಳು (6)
Saturday, October 24, 2015
ಪುಸ್ತಕಗಳು, ರಂಗುಗಳು ಮತ್ತು ಒಂದು ಕಪ್ಪು ಚಾ
:
ಅವನು, ಸಾಟಿಯಿಲ್ಲದ
ಮಹಾ ಪುಸ್ತಕವಂತೆ!
ನಾನೊಪ್ಪಲಾರೆ,
ಒಳಗೇ ಗೊಣಗಿಕೊಳ್ಳುತ್ತೇನೆ, ಖಂಡಿತಾ,
"ಹೆಚ್ಚಂದ್ರೆ, ಅವನೊಂದು ಚಂದದ ಮುನ್ನುಡಿಯಷ್ಟೇ"
ಹೆಸರೇ ಕೇಳದ
ಮಾಯದ ರಂಗೊಂದು
ಸಿಗದೇ
ಅಳಿಸಿಹಾಕಿದ ಚಿತ್ರ!
ಮುರಿದ ಬಣ್ಣದ ಕಡ್ಡಿಗಳು -
ತುಂಬಬಲ್ಲವೆ ರಂಗು?
ಇರುಳ ಗಾಳಿಗೆ ಸುಯ್ಯುವ
ಮಣ್ಣ ಘಂಟೆಗಳು
ಆಗೀಗ
ಗಾಳಿಮುತ್ತಿನ ಸುಖಕೆ
ಕಿಣಿಗುಡುತಿವೆ
ಮತ್ತೆ, ಮುರಿದ ಕಪ್ಪು -
ಸುಮ್ಮನಿದೆ - ಮಾತಿಲ್ಲ ಕತೆಯಿಲ್ಲ.
ನಾನೇ ರೆಪ್ಪೆಬಡಿದು, ಪಿಸುಗುತ್ತೇನೆ
"ಇನ್ನೊಂದು ಕಪ್ಪು ಟೀ ಸಿಕ್ಕೀತಾ!"
:
:
ಮೂಲ:
Books, Shades & A Cuppa Tea
:
He, the Book
an Opus of sort!
I differ,
I beg,
mumble alone to conclude,
"He's just an interesting Prologue"
A sketch undone
in quest of a shade
"Razzmatazz",
a tinge I never heard!!
Can they,
the broken crayons
still color?
Chimes, the earthy ones
shrilled through
the night air!
Once a while
they kiss,
"Lucky Winds"
And then,
that broken cup
said nothing much.
I wink, I whisper
"Another cuppa tea please"!
https://www.facebook.com/roopa.satish.56/posts/10208193570221404
Tuesday, April 7, 2015
ದಕ್ಷಿಣಾಯಣ
ಛೇ ಛೇ, ಇದೇನು? ಲಲಿತಪ್ರಬಂಧ ಅಂತ ಬರೆಯಲು ಹೋಗಿ ದಕ್ಷಿಣಾಯಣದಂಥ "ಅನಿಷ್ಟ"ದ ವಿಷಯ ಹೇಳ್ತಿದಾನಲ್ಲ ಅಂತ ಮೂಗು ಮುರಿಯಬೇಡಿ. ಅದೂ ನಿಜವೇ ಅನ್ನಿ. ಉತ್ತರಾಯಣವಾದರೆ ಅದೊಂದುರೀತಿ - ಪುಣ್ಯಕಾಲ - ಸತ್ತರೆ ಸ್ವರ್ಗಪ್ರಾಪ್ತಿ. ರಾಜ್ಯ-ಸಂಸಾರಗಳ ವ್ಯಾಮೋಹಗಳನ್ನೇ ಗೆದ್ದ ಭೀಷ್ಮನಂಥಾ ಭೀಷ್ಮನೇ "ಅದೇನೇ ಆಗಲಿ, ಸತ್ತರೆ ಮಾತ್ರ ಉತ್ತರಾಯಣ ಪುಣ್ಯಕಾಲದಲ್ಲೇ" ಅಂತ, ಮೈಯೆಲ್ಲಾ ಚುಚ್ಚಿಕೊಂಡ ಬಾಣಗಳು ಜೀವ ತೆಗೆಯುತ್ತಿದ್ದರೂ ಹಲ್ಲು ಕಚ್ಚಿ (ಅದರೊಡನೆ ಜೀವವನ್ನೂ ಕಚ್ಚಿ ಹಿಡಿದು) ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾಯಲಿಲ್ಲವೇ ಪಾಪ, ಸಾಯೋದಿಕ್ಕೆ - ಹದಿನೆಂಟು ದಿನ! ಉತ್ತರಾಯಣ ಪುಣ್ಯಕಾಲದಲ್ಲಿ ಸಾಯೋ ಗಮ್ಮತ್ತೇ ಅದು ಅಂತಾರಪ್ಪ, ಬದುಕಿರುವವರು. ಸ್ವರ್ಗದ ಬಾಗಿಲು ತೆಗೆದಿರುತ್ತೆ. ಇಲ್ಲಿಂದ ರೊಯ್ಯನೆ ಹಾರಿದರೆ ನೇರ ಸ್ವರ್ಗದ ತೆರೆದಬಾಗಿಲ ಮೂಲಕ ತೂರಿ ಒಳಹೋಗಿಬಿಡಬಹುದು. ಅಪ್ಪಿತಪ್ಪಿ ಇಂದ್ರನೇನಾದರೂ ಸಿಂಹಾಸನ ಬಿಟ್ಟು ಯಾತಕ್ಕಾದರೂ ಎದ್ದು ಹೋಗಿದ್ದರೆ ನೇರ ಸಿಂಹಾಸನದ ಮೇಲೇ ಕುಕ್ಕರಿಸಿದರೂ ಸೈಯೇ. ಒಮ್ಮೆ ಸಿಂಹಾಸನ ಸಿಕ್ಕಮೇಲೆ ಮುಗೀತಲ್ಲ. ಆಮೇಲೆ ಇಂದ್ರ ವಾಪಸು ಬಂದಾಗ ನೋಡಿಕೊಳ್ಳೋಣ. ಖುರ್ಚಿ ಬಿಡಿಸುವುದೇನು ಹುಡುಗಾಟವೇ? ನಮ್ಮ ಆಂಧ್ರದಲ್ಲೇ ಹಿಂದೊಂದು ಕಾಲದಲ್ಲಿ ಎಂ ಟಿ ರಾಮರಾವುಗಾರು ಪಾಪ ಅದೇಕೋ ಅಮೇರಿಕಾಕ್ಕೆ ಹೀಗೆ ಹೋಗಿ ಹಾಗೆ ಬರೋವಷ್ಟರಲ್ಲಿ ಅವರ ಮುಖ್ಯಮಂತ್ರಿ ಸೀಟೇ ಗುಳುಂ ಆಗಿರಲಿಲ್ಲವೇ? ಆಮೇಲೆ ಎಷ್ಟೆಷ್ಟು ತಿಪ್ಪರಲಾಗ ಹಾಕಿದರೂ ಅಂಥಾ ಕೃಷ್ಣವೇಷಧಾರೀ ರಾಮನಿಗೇ ಏನೂ ಮಾಡಲು ಆಗಲಿಲ್ಲವೆಂದಮೇಲೆ ಒಬ್ಬ ಯಃಕಶ್ಚಿತ್ ಇಂದ್ರ, ಏನು ಮಾಡಾನು! ಅಲ್ಲದೇ, ಅದೇನೋ ಮಾನವರ ಕಾಲಪ್ರಮಾಣಕ್ಕಿಂತ ದೇವತೆಗಳ ಕಾಲಪ್ರಮಾಣ ನೂರಾರು ಪಟ್ಟು ಹೆಚ್ಚಂತೆ. "ಬ್ರಹ್ಮಶೌಚ" ಅನ್ನೋ ಮಾತೇ ಇದೆಯಲ್ಲ - ನಿಮಗೆ ಅದರ ಕತೆ ಗೊತ್ತಿಲ್ಲವೆಂದರೆ ಅದನ್ನೂ ಕೇಳಿಬಿಡಿ. ಬ್ರಹ್ಮದೇವನು ಒಮ್ಮೆ ಶೌಚಕ್ಕೆ ಹೋಗಬೇಕಾಯಿತಂತೆ, ಇನ್ನೇನು ಬಾಗಿಲು ತೆರೆದು ಒಳಹೋಗಬೇಕು, ಆಗ ವರದಿಗಾರನೊಬ್ಬ ಬಂದು ಒಪ್ಪಿಸಿದನಂತೆ "ಸ್ವಾಮಿ, ರಾವಣ ಜನನವಾಯಿತು" ಸರಿ ಎಂದ ಬ್ರಹ್ಮದೇವನು ಒಳಗೆ ಹೋದನಂತೆ, ಮತ್ತೆ ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಮತ್ತೆ ವರದಿಗಾರ ಪ್ರತ್ಯಕ್ಷ - "ಸ್ವಾಮೀ, ರಾವಣ ಸಂಹಾರವಾಯಿತು". ಇದು ನೋಡಿ ಬ್ರಹ್ಮಶೌಚದ ಕಾಲಪ್ರಮಾಣ. ಹೀಗೇ ’ಒಂದೈದು ನಿಮಿಷ’ ಎಲ್ಲೋ ಹೊರಹೋಗಿರುವ ಇಂದ್ರ ವಾಪಸು ಬರಬೇಕಾದರೆ ನಮ್ಮ ಅಳತೆಯಲ್ಲಿ ಅದೆಷ್ಟು ವರ್ಷ ಲೆಕ್ಕ ಹಾಕಿಕೊಳ್ಳಿ ಆ ಐದು ನಿಮಿಷಕ್ಕೆ. ಅಷ್ಟು ವರ್ಷವಂತೂ ಇಂದ್ರನ ಖುರ್ಚಿ ನಿಮ್ಮದಾಯಿತಲ್ಲ. ಆ ಇಂದ್ರಪದವಿ, ಅಪ್ಸರೆಯರ ನೃತ್ಯ, ಸೋಮಪಾನ, ದೇವಗುರು ಬೃಹಸ್ಪತಿಯಿಂದ ಸ್ವಸ್ತಿವಾಚನ, ಅಷ್ಟದಿಕ್ಪಾಲಕರೆಲ್ಲ ನಿಮ್ಮ ಮುಷ್ಠಿಯಲ್ಲಿ! ಇಂದ್ರ ತಿರುಗಿ ಬಂದಮೇಲೆ ನೋಡಿಕೊಳ್ಳೋಣ ಬಿಡಿ. ಬಂದಮೇಲೂ ಅವನೇನು ಮಾಡಲು ಸಾಧ್ಯ? ನೀವೇನು ಬ್ರಹ್ಮನೋ ಶಿವನೋ ಕೊಟ್ಟ ಮೋಸದ ವರದ ಬಲದಿಂದ ಅಲ್ಲಿ ಹೋಗಿ ಕುಳಿತಿಲ್ಲವಲ್ಲ - ಅದರ ಲೂಪ್ ಹೋಲುಗಳನ್ನು ಹಿಡಿದು ನಿಮ್ಮನ್ನ ಮಟ್ಟಹಾಕಲಿಕ್ಕೆ; ಅಥವಾ ನೀವೇನು ಆ ಅವಿವೇಕಿ ರಾಕ್ಷರಂತೆ ದೇವರಾಜನ ಮೇಲೆ ದಂಡೆತ್ತಿ ಹೋಗಿಲ್ಲ, ಬಲಪ್ರಯೋಗ ಮಾಡಲಿಲ್ಲ. ನೀವು ಭೂಲೋಕದಿಂದ ತೂರಿ ಬಂದಾಗ ಅಲ್ಲಿ ಸೀಟು ಖಾಲಿಯಿತ್ತು, ಹೋಗಿ ಕುಳಿತಿರಿ - ಅದೇನು ಸರ್ವೀಸು ಬಸ್ಸು ಕೆಟ್ಟುಹೋಯಿತೇ, ಟವಲು ಹಾಸಿ ಸೀಟು ಹಿಡಿದಿಡಲಿಕ್ಕೆ; ಯಾರಿಗೆ ಸಿಗುತ್ತೋ ಅವರು ಕೂರುತ್ತಾರಪ್ಪ. ಅಲ್ಲದೇ ನೀವಲ್ಲಿ ಹೋಗಿ ಕುಳಿತಿದ್ದು ಸ್ವತಃ ನಿಮ್ಮದೇ ಪುಣ್ಯಫಲದಿಂದ - ಮತ್ತೆ? ಮೊದಲಾಗಿ ಸಾಯುವುದೇ ಅತ್ಯಂತ ಪುಣ್ಯದ ಕೆಲಸ ಈ ಕಾಲಕ್ಕೆ, ಇನ್ನು ಉತ್ತರಾಯಣ ಪುಣ್ಯಕಾಲದಲ್ಲಿ ಸಾಯುವುದೇನು ಕಡಿಮೆ ಪುಣ್ಯವೇ? ಶ್ರೀ ಕೃಷ್ಣಪರಮಾತ್ಮನೇ ಹೇಳಿಲ್ಲವೇ? "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ" - ನೀವು ನಿಮ್ಮ ಪುಣ್ಯದ ಫಲವನ್ನು ಅನುಭವಿಸಿಯೇ ತೀರಬೇಕು; ಅದನ್ನು ಇಂದ್ರನೂ ತಡೆಯುವಂತಿಲ್ಲ, ಹರಿಹರಬ್ರಹ್ಮರೂ ತಡೆಯುವಂತಿಲ್ಲ. ಹಾಗೆಯೇ ಇಂದ್ರನೂ ತನ್ನ ಕರ್ಮಫಲವನ್ನು ಅನುಭವಿಸಬೇಕಲ್ಲ! ಅಲ್ಲ, ಹೇಳಿ ಕೇಳಿ ಇದು ಉತ್ತರಾಯಣ ಪುಣ್ಯಕಾಲ, ಸ್ವರ್ಗದ ಬಾಗಿಲು ಹಾಗೆ ಹಾರಹೊಡೆದಿದೆ; ಭೂಮಿಯಿಂದ ಯಾವ ಪುಣ್ಯಜೀವಿಯಾದರೂ ಯಾವಾಗಲಾದರೂ ಉಲ್ಕೆಯಂತೆ ರೊಯ್ಯನೆ ಬಂದು ತನ್ನ ಸಿಂಹಾಸನದಲ್ಲಿ ಕುಕ್ಕರಿಸಿಬಿಡಬಹುದು, ಈಗ ಮೈಯೆಲ್ಲಾ (ಸಾವಿರ) ಕಣ್ಣಾಗಿ ಸಿಂಹಾಸನ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂಬ ಪರಿಜ್ಞಾನವೇ ಇಲ್ಲದೇ ತನ್ನ ಸೀಟು ಬಿಟ್ಟು ಎದ್ದು ಹೋಗಿದ್ದು ಅವನ ಕರ್ಮವಲ್ಲದೇ ಮತ್ತೇನು? ಆಕ್ಸಿಡೆಂಟುಗಳು ಆಗಲು ಒಂದು ಕ್ಷಣ ಸಾಕು ಸ್ವಾಮಿ - ಒಂದು ಮಾನವಕ್ಷಣ, ದೇವಕ್ಷಣವಲ್ಲ. ಅಂಥಾದ್ದರಲ್ಲಿ ದೇವಲೆಕ್ಕದಲ್ಲಿ ನಿಮಿಷಗಟ್ಟಲೆ ಸೀಟು ಬಿಟ್ಟುಹೋಗುವುದೆಂದರೆ, ಬೇಜವಾಬ್ದಾರಿಯ ಪರಮಾವಧಿಯಲ್ಲವೇ. ನಮ್ಮಲ್ಲಿ ಯಾವ ಮಂತ್ರಿಯಾದರೂ ಆ ಮೂರ್ಖತನ ಮಾಡುತ್ತಾನೆಯೇ? ಅದಕ್ಕೇ ಇಂದ್ರನಿಗೂ "ಅವಶ್ಯಮನುಭೋಕ್ತವ್ಯಂ... ". ಅಥವಾ ಅವನಿಗೆ ಕನ್ನಡ ಅರ್ಥವಾಗುವುದಾದರೆ "ಮಾಡಿದ್ದುಣ್ಣೋ ಮಹರಾಯ" ಅನ್ನಲೂ ಬಹುದು.ತಡೀರಿ, ದಕ್ಷಿಣಾಯಣದ ಬಗ್ಗೆ ಹೇಳಹೊರಟು ಉತ್ತರಾಯಣದ ಬಗೆಗೇ ಹೇಳುತ್ತಿದ್ದಾನಲ್ಲ ಎಂದು ನೀವು ಮೂಗು (ನಿಮ್ಮದೇ) ಮುರಿಯುತ್ತಿದ್ದೀರೆಂದು ನನಗೆ ಗೊತ್ತು. ಅದ್ಯಾರೋ ಒಬ್ಬ ಹುಡುಗ ಪರೀಕ್ಷೆಗೆ ಹೋದನಂತೆ. ತೆಂಗಿನ ಮರದ ಬಗ್ಗೆ ಪ್ರಬಂಧ ಉರುಹಚ್ಚಿಕೊಂಡು ಹೋಗಿದ್ದ. ಆದರೆ ಅವನ ದುರದೃಷ್ಟಕ್ಕೆ ಅಲ್ಲಿ ಕೇಳಿದ್ದು ಹಸುವಿನ ಬಗ್ಗೆ ಪ್ರಬಂಧ. ಏನು ಮಾಡುವುದು. ಪ್ರಬಂಧವನ್ನಂತೂ ಬರೆಯಬೇಕಲ್ಲ. ಸುಮ್ಮನೇ ಹಸುವಿಗೆ ಎರಡು ಕಣ್ಣು, ಎರಡು ಕಿವಿ, ಕೊಂಬು, ನಾಲ್ಕು ಕಾಲು, ಕೆಚ್ಚಲು, ಹಾಲು ಕರೆಯುತ್ತೆ ಎಂದರೆ ಮುಗಿಯಿತೇ, ಪೇಜು ತುಂಬಬೇಕಲ್ಲ. ಲಕ್ಷಣವಾಗಿ ಎರಡು ಪೇಜು ತಾನು ಉರುಹಚ್ಚಿಕೊಂಡು ಹೋದ ತೆಂಗಿನ ಮರದ ಪ್ರಬಂಧವನ್ನೇ ಬರೆದ. ಕೊನೆಯಲ್ಲಿ "ಇಂಥ ಅದ್ಭುತವಾದ ಕಲ್ಪವೃಕ್ಷದಂಥ ತೆಂಗಿನ ಮರಕ್ಕೆ ಹಸುವನ್ನು ಕಟ್ಟಿ ಹಾಲು ಕರೆಯುತ್ತಾರೆ. ಇದು ಹಸುವಿನ ಪ್ರಬಂಧ" ಎಂದು ಬರೆದ. ನನ್ನ ಪ್ರಬಂಧದ ಕತೆಯೂ ಇಷ್ಟೇ ಎಂದು ನೀವು ಯೋಚಿಸುತ್ತಿರಲಿಕ್ಕೆ ಸಾಕು. ಅಲ್ಲವೇ ಮತ್ತೆ, ಉತ್ತರಾಯಣದಲ್ಲಾದರೆ ಮೇಲೆ ಹೇಳಿದ ಮಹಿಮೆಯೆಲ್ಲಾ ಇದೆ. ಪುರಾಣಗಳೇ ಇದನ್ನು ಸಾರುತ್ತಿವೆ. ದಕ್ಷಿಣಾಯಣದಲ್ಲೇನಿದೆ. ದಕ್ಷಿಣಾಯಣದಲ್ಲಿ ಸತ್ತರೆ ನೇರ ನರಕವೇ ಗಟ್ಟಿ. ಅದರಲ್ಲೂ ಈ ಕಲಿಗಾಲದಲ್ಲಂತೂ, ಸಾಯುವವರು ಮತ್ತು ಪಾಪಿಗಳ ಸಂಖ್ಯೆಗಳೆರಡೂ ಮುಗಿಲುಮುಟ್ಟಿರುವುದರಿಂದ ನರಕಕ್ಕೆ ಹೋಗುವ ದಾರಿ ಮೊದಲಿನಷ್ಟು ಸಲೀಸಲ್ಲವಂತೆ. ಆ ಟ್ರಾಫಿಕ್ ಜಾಮಿನಲ್ಲಿ ತೆವಳಿಕೊಂಡು (ಮೊದಲೇ ದಕ್ಷಿಣಾಯಣ, ಮಳೆ ಛಳಿ ಬೇರೆ), ಆ ಮಳೆಯಲ್ಲಿ ನೆನೆದುಕೊಂಡು - ಬೇಡಾ ಫಜೀತಿ. ಕೊನೆಯಲ್ಲಿ ಸಿಕ್ಕುವ ಆ ನರಕವನ್ನು ರಸ್ತೆಯಲ್ಲೇ ತೋರಿಸಿಬಿಡುತ್ತಾರೆ. ಬೆಂಗಳೂರಿನ ರಸ್ತೆಗಳಲ್ಲಿ ಪೀಕ್ ಅವರಿನಲ್ಲಿ ತೆವಳಿ ಅಭ್ಯಾಸವಿರುವ ಸುಮಾರು ಆತ್ಮಗಳು ಹಾಗೂ ಹೀಗೂ ಈ ದಾರಿಯನ್ನು ಸವೆಸಿ ಯಶಸ್ವಿಯಾಗಿ ನರಕವನ್ನು ಸೇರಿಬಿಡುತ್ತವಾದರೂ ಈ ಅಭ್ಯಾಸವಿಲ್ಲದ ಅದೆಷ್ಟೋ ಆತ್ಮಗಳು ಪಾಪ, ಈ ಕೊನೆಗಾಣದ ಹಾದಿ ಸವೆಸಲಾಗದೇ ಅತ್ತ ನರಕವೂ ಇಲ್ಲದೇ ಇತ್ತ ಭೂಮಿಯೂ ಇಲ್ಲದೇ ಬೆಂತರಗಳಾಗಿ ಅಲೆದಾಡುತ್ತವಂತೆ. ಅಂದಮೇಲೆ ಯಾರಿಗೆ ಬೇಕು ಹೇಳಿ ದಕ್ಷಿಣಾಯಣದ ಸಹವಾಸ. ಇಲ್ಲ, ನೀವು ಅಪ್ಪೀತಪ್ಪಿ ಪುಣ್ಯವನ್ನೇ ಗಂಟುಕಟ್ಟಿಕೊಂಡಿದ್ದೀರೆನ್ನಿ; ಅದಕ್ಕೇ ನಿಮಗೆ ಸ್ವರ್ಗಕ್ಕೇ ಟಿಕೇಟೂ ಸಿಕ್ಕಿದೆಯೆನ್ನಿ. ಆ ದಾರಿಯಲ್ಲೇನೋ ಈ ಪರಿಯ ಟ್ರಾಫಿಕ್ ಜಾಮ್ ಇಲ್ಲ. ಹೇಳಿದೆನಲ್ಲ, ಇಲ್ಲಿಂದ ಜೀವ ಎಗರಿದರೆ ರೊಯ್ಯನೇ ನೇರ ಸ್ವರ್ಗಕ್ಕೇ! ಆದರೇನು? ಹಾಳು ದಕ್ಷಿಣಾಯಣ, ಸ್ವರ್ಗದ ಬಾಗಿಲು ಮುಚ್ಚಿದೆ. ಹಾಗಾಗಿ, ಇಲ್ಲಿಂದ ಬಿಟ್ಟ ಬಾಣದಂತೆ ಹೊರಟ ನೀವು ಹೋಗಿ ಸ್ವರ್ಗದ ಮುಚ್ಚಿದ ಬಾಗಿಲಿಗೆ ಅಪ್ಪಳಿಸುವುದೂ, ಮತ್ತೆ ತ್ರಿಶಂಕುವಿನಂತೆ ಭೋಂಕನೆ ತಲೆ ಕೆಳಗಾಗಿ ಭುವಿಗೆ ಬೀಳುವುದೂ ತಪ್ಪದೇ ತಪ್ಪದು. ಅಂತರಾಳದಲ್ಲೇ ನಿಮಗಾಗಿ ಒಂದು ಬದಲೀ ಸ್ವರ್ಗ ನಿರ್ಮಿಸಿಕೊಡಲು ಈ ಕಾಲದಲ್ಲಿ ವಿಶ್ವಾಮಿತ್ರನೂ ಇಲ್ಲ, ನೀವು ತ್ರಿಶಂಕುವೂ ಅಲ್ಲ!
ಸರಿಹೋಯ್ತು. ಹರಟೆಯ ಭರದಲ್ಲಿ ನಾವೀಗಾಲೇ ಪರಲೋಕಯಾತ್ರೆ ಕೈಗೊಂಡೇ ಬಿಟ್ಟಿದ್ದೇವೆಂಬ ಹುರುಪಿನಲ್ಲಿ ಮಾತಾಡುತ್ತಿದ್ದೇನೆ ನೋಡಿ. ಪರಲೋಕಯಾತ್ರೆಯ ಗಡಿಬಿಡಿಯಲ್ಲಿರುವವರು ಯಾರಾದರೂ ಹೀಗೆ ಲೋಕಾಭಿರಾಮ ಹರಟುತ್ತಿರಲು ಸಾಧ್ಯವೇ? ಅಥವ ಲೋಕಾಭಿರಾಮವಾದ ಹರಟೆ ಹೊಡೆಯುವ ಮನಸ್ಥಿತಿಯುಳ್ಳವರು ಪರಲೋಕಯಾತ್ರೆಯ ಬಗೆಗೆ ಯೋಚಿಸುವುದಾದರೂ ಸಾಧ್ಯವೇ? ಅಂಥವರು ಎಲ್ಲೋ ಎಂದೋ ಒಬ್ಬಿಬ್ಬರಿರಬಹುದು, ವೇದಕಾಲದ ನಚಿಕೇತನಂಥವರು. ಇತರರು, ಸತ್ತಮೇಲೂ ಸ್ವರ್ಗಭೋಗಕ್ಕಾಗಿ ಉತ್ತರದಿಕ್ಕಿನ ಕನಸು ಕಾಣುತ್ತಿದ್ದರೆ, ಈ ಹುಚ್ಚು ಹುಡುಗ ಜ್ಞಾನ ಸಂಪಾದನೆ ಮಾಡಬೇಕೆಂದು, ಬದುಕಿದ್ದಾಗಲೇ ದಕ್ಷಿಣ ದಿಕ್ಕಿನೆಡೆ ನಡೆದ. ಅತ್ತಕಡೆ ಯಮಧರ್ಮರಾಯ ಅವಧಿಮೀರಿದ ಆತ್ಮಗಳನ್ನು ದಸ್ತಗಿರಿ ಮಾಡಿಕೊಂಡು ಬರಲು ಹುಡುಕಿಕೊಂಡು ಭೂಲೋಕದಲ್ಲಿ ಅಲೆದಾಡುತ್ತಿದ್ದರೆ, ಈ ಪುಣ್ಯಾತ್ಮ ಯಮನನ್ನೇ ಹುಡುಕಿಕೊಂಡು ಯಮಸದನಕ್ಕೇ ಬಂದ; ಮೂರು ದಿನ ಮನೆಯ ಬಾಗಿಲಲ್ಲೇ ಝಂಡಾ ಹಾಕಿದ. ಎದೆಗಾರಿಕೆ ಎಂದರೆ ಇದಪ್ಪ - ಯಮಧರ್ಮನೇ ಅಲುಗಿಹೋದನಲ್ಲ! ನಿನಗೆ ಬೇಕಾದಷ್ಟು ಸಂಪತ್ತು ಕೊಡುತ್ತೇನೆ, ತೆಗೆದುಕೊಂಡು ಜಾಗ ಖಾಲಿ ಮಾಡು ಅಂದರೂ, ಉಹ್ಹೂಂ... ಹುಡುಗನದು ಒಂದೇ ಹಟ. "ನಿನ್ನ ಸಂಪತ್ತೂ ಬೇಡ ಏನೂ ಬೇಡ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು, ಸಾಕು" - ಪಟ್ಟು ಎಂದರೆ ಪಟ್ಟು, ನಕ್ಷತ್ರಿಕಂದೇ ಪಟ್ಟು ಅಂತಾರಲ್ಲ ಹಾಗೆ. ಅಂಥಾ ಯಮನಿಗೂ ಒಂದು ಕ್ಷಣ ಸಾಕಾಗಿಹೋಗಿರಬೇಕು. ಕೊನೆಗೂ ಯಮನಿಂದ ಸಾವಿನ ರಹಸ್ಯ ತಿಳಿದು, ಬದುಕಿಗೆ ಹಿಂದಿರುಗಿದ ಹುಡುಗ, ಬರಿಗೈಯಲ್ಲಿ! ಈ ಹುಚ್ಚಿಗೇನು ಹೇಳೋಣ ಸ್ವಾಮಿ? ಅಲ್ಲಾ, ಬದುಕು ಬದುಕಲು ಸಾವಿನ ರಹಸ್ಯ ಬೇಕೇ? ನಾವಾಗಿದ್ದರೆ ಯಮನ ಮೊದಲನೇ ಆಫರನ್ನೇ ಒಪ್ಪಿಕೊಂಡು ಕೈತುಂಬಾ ಸಂಪತ್ತಿನ ದಕ್ಷಿಣೆ ಹೊತ್ತು ಮರಳುತ್ತಿರಲಿಲ್ಲವೇ?
ಈ ಕತೆ ಹೇಳುತ್ತಿರುವಾಗಲೇ ನನಗನ್ನಿಸಿದ್ದು, ನಾವು ದಿನನಿತ್ಯ ಬಳಸುವ ’ದಕ್ಷಿಣೆ’ ಅನ್ನೋ ಪದದ ಮೂಲ ಈ ಕತೆಯೇ ಇರಬಹುದೇ? ಮನೆಗೆ ಬಂದ ಬ್ರಾಹ್ಮಣ ವಟುವನ್ನು ಮೂರುದಿನ ಕಾಯಿಸಿದ್ದಕ್ಕಾಗಿ ಯಮನಿಗೆ ತುಂಬ ಪಶ್ಚಾತ್ತಾಪವಾಯಿತಂತೆ. ಅದಕ್ಕೆ ಪ್ರತಿಯಾಗಿ ಮೂರು ವರಗಳನ್ನು ಕೋರಿಕೋ ಎಂದನಂತೆ. ಮೊದಲ ಎರಡು ವರ ಹೇಗೋ ಸಂದಿತು, ಆದರೆ ಕೊನೆಯ ವರವಾಗಿ ಇವನು ಹುಟ್ಟು ಸಾವಿನ ರಹಸ್ಯ ತಿಳಿಸು ಎಂದು ಕೇಳಿದಾಗ ಮಾತ್ರ ಯಮನಿಗೆ ತೀರ ಪೇಚಾಟಕ್ಕಿಟ್ಟುಕೊಂಡಿತಂತೆ. ಮಾನವಮಾತ್ರನಿಗೆ ಈ ರಹಸ್ಯವನ್ನು ಹೇಳಿಬಿಟ್ಟರೆ ಅದು ರಹಸ್ಯವಾಗಿ ಉಳಿಯುವುದೆಂತು? ವರವನ್ನಂತೂ ಕೊಟ್ಟಾಗಿದೆ, ಕೊಟ್ಟ ಮಾತಿನಿಂದ ಹಿಂದೆಗೆಯುವಂತಿಲ್ಲ, ಅದರಲ್ಲೂ ಸಾಕ್ಷಾತ್ ಧರ್ಮದೇವತೆ! ಅದಕ್ಕೇ ಅದನ್ನು ಮರೆಯಿಸಲು ಹುಡುಗನನ್ನು ಹೇಗೋ ಪುಸಲಾಯಿಸಿ ಕಳಿಸಲು ಅಪಾರ ಸಂಪತ್ತಿನ ದಕ್ಷಿಣೆಯನ್ನಿಟ್ಟನಂತೆ. ಆದರೆ ಈ ಹುಡುಗ ಮೊಂಡು ಆಸಾಮಿ - ನಮ್ಮಲ್ಲಿರುವ ಹಲವು ಖಡಕ್ ಆಫೀಸರುಗಳಂತೆ. ದಕ್ಷಿಣೆಯನ್ನು ಕೈಯಿಂದಲೂ ಮುಟ್ಟ; ಕಿಸೆಯಲ್ಲೂ ಹಾಕಗೊಡ! ಕೊನೆಗೂ ವಿಧಿಯಿಲ್ಲದೇ ಯಮ ಬಾಯಿಬಿಡಬೇಕಾಯಿತು (ಬಾಯ್ಬಾಯಿ ಬಿಡಬೇಕಾಯಿತೆನ್ನುವುದು ಪಾಠಾಂತರ). ಅದೇನೇ ಇರಲಿ, ಕಾಂಚಾಣದಿಂದ ಕಾರ್ಯಸಿದ್ಧಿ - ಕೆಲಸವನ್ನು ಆಗಮಾಡಿಕೊಳ್ಳಲು ಆಗಲೂ ದಕ್ಷಿಣೆಯಿಡುತ್ತಿದ್ದರು ಅನ್ನೋದಂತೂ ಸಾಬೀತಾಯಿತಲ್ಲ! ಬಹುಶಃ ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿಧಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು. ಇದು ಕೆಲಸಮಾಡುವ ರೀತಿಯೂ ಹಾಗೇ. ಮೊದಲು ದಕ್ಷಿಣೆ, ಆಮೇಲೆ ಸಂಬಂಧಪಟ್ಟವರಿಂದ ಅದಕ್ಕೆ ’ಉತ್ತರ’; ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ? ಮತ್ತೆ ಈ ದಕ್ಷಿಣೆಯ ಪ್ರಭಾವವೂ ಅಷ್ಟೇ, ಅಲೌಕಿಕ. ದಕ್ಷಿಣೆ ಪಡೆದವರ ಮೈಭಾಷೆಯನ್ನೊಮ್ಮೆ ನೀವು ಅವಲೋಕಿಸಬೇಕು. ಸಾಮಾನ್ಯವಾಗಿ ಜಡ ಸಂಪನ್ನವಾಗಿರುವ ಮೈಮನಗಳ ಕಣಕಣವೂ ನೀವು ಹನಿಸಿದ ದಕ್ಷಿಣೆಯ ಕಾಯಕಲ್ಪದಿಂದ ಹುರಿಗೊಳ್ಳುತ್ತದೆ, ಕಾರ್ಯೋತ್ಸಾಹ ಪುಟಿದೇಳುತ್ತಿರುತ್ತದೆ. ದಕ್ಷಿಣಾದರ್ಶನದ ಮುಂಚೆ ಆ ಅರೆಮುಚ್ಚಿದ ಕಣ್ಣುಗಳಲ್ಲಿ ತುಂಬಿ ತೊನೆಯುತ್ತಿದ್ದ ನಿಮ್ಮ ಬಗೆಗಿನ ದಿವ್ಯನಿರ್ಲಕ್ಷ್ಯ ಈಗ ಮಂಗಮಾಯವಾಗಿ ಅದರ ಜಾಗದಲ್ಲಿ ದಾಕ್ಷಿಣ್ಯಪರತೆ (ದಕ್ಷಿಣೆಯು ತುಂಬಿದ ಧನ್ಯತಾ ಭಾವ) ತುಂಬಿ ತುಳುಕುತ್ತಿರುತ್ತದೆ. ಕಿರಿದ ಹಲ್ಲುಗಳ ಕಾಂತಿ ಎಲ್ಲೆಲ್ಲೂ ಹರಡುತ್ತದೆ (ಅದನ್ನು ನೋಡಿ "ವದಸಿ ಯದಿ ಕಿಂಚಿದಪಿ ದಂತ ರುಚಿ ಕೌಮುದೀ ಹರತಿ ಧರ ತಿಮಿರಮತಿ ಘೋರಂ" ಎಂದು ನೀವು ಹಾಡಿದರೂ ತಪ್ಪಿಲ್ಲ). ಅದುವರೆಗೂ ಮೌನಕಠೋರವಾಗಿದ್ದ ಆತನ ದನಿ, ಈಗ ಕೋಕಿಲಧ್ವನಿಯಾಗಿದೆ. ಮಹಿಷಗಮನಕ್ಕೀಗ ನವಿಲಿನ ನಾಟ್ಯದ ಕಸುವು ದಕ್ಕಿದೆ. ಆ ಅರಳಿದ ಮೊಗದಾವರೆಯನ್ನು ನೋಡಿ ಅದನ್ನು ಅರಳಿಸಿದ ಬಾಲ ಸೂರ್ಯ ನೀವೇನೋ ಎಂದು ಒಂದು ಕ್ಷಣ ನೀವು ವಿವಂಚನೆಗೊಳಗಾಗುತ್ತೀರಿ, ಆದರೆ ನಿಮಗೆ ತಿಳಿದಿರಲಿ, ಅದು ನೀವಲ್ಲ, ನಿಮ್ಮ ಪರ್ಸು. ಅದರ ತಾಖತ್ತು ನಿಮಗೇ ಇಷ್ಟುದಿನ ತಿಳಿದಿರಲಿಕ್ಕಿಲ್ಲ. ಕೇವಲ ಅದರ ಸಾನ್ನಿಧ್ಯದಿಂದಲೇ ನಿಮ್ಮ ಫೈಲುಗಳಿಗೆ ಎಂದಿಲ್ಲದ ಸಂಚಲನೆ ದೊರಕುತ್ತದೆ. ಭಾಗ್ಯವಂತನ ಮನೆಯಲ್ಲಿ ಒಂದರೆಕ್ಷಣವೂ ಇರಲೊಲ್ಲದ ದರಿದ್ರ ಲಕ್ಷ್ಮಿಯಂತೆ ಹರಿದು ಜೀರ್ಣಗೊಂಡ ಆ ನಿಮ್ಮ ಫೈಲು ಆತನ ಟೇಬಲನ್ನು ಬಿಟ್ಟು ತೊಲಗುತ್ತದೆ. ಆದರೆ ಮರೆಯದಿರಿ. ಈ ಹಳೇ ಫೈಲುಗಳ ಮೈಲೇಜು ಹಳೇ ಗಾಡಿಗಳ ಮೈಲೇಜಿಗಿಂತಲೂ ತೀರ ಕಡಿಮೆ. ಟೇಬಲ್ಲು ಟೇಬಲ್ಲಿನಲ್ಲೂ ನಿಂತು ನಿಮ್ಮತ್ತ ತಿರುಗಿ ಕೈಯಲ್ಲಾಡಿಸಿಬಿಡುತ್ತದೆ. ನಿಮ್ಮ ಪರ್ಸಿನಲ್ಲಡಗಿದ ಆ ಬಾಲಸೂರ್ಯ, ಇಂಥಾ ಹಲವಾರು ತಾವರೆಗಳನ್ನರಳಿಸಬೇಕು - ನಿಮ್ಮ ಪರ್ಸು ಹತ್ತಾರು ನಿಲುಗಡೆಗಳಲ್ಲಿ ನಿಮ್ಮ ಆಯಾಸಗೊಂಡ ಫೈಲಿಗೆ ಊರುಗೋಲಾಗಬೇಕು. ಹೀಗೆ ನಿಂತೂ ನಿಂತೂ ಅಂತೂ ಇಂತೂ ಕೊನೆಯ ಘಟ್ಟ ಮುಟ್ಟಿದಮೇಲಷ್ಟೇ ನಿಮ್ಮ ಫೈಲಿಗೆ ಮುಕ್ತಿ, ನಿಮ್ಮ ಕಾರ್ಯಸಿದ್ಧಿ. ಇದಕ್ಕಾಗಿ ನೀವು ಈ ದಕ್ಷಿಣೆಯೆಂಬ ದೇವಕಾರ್ಯಕ್ಕೆ ಅದೆಷ್ಟು ಕೃತಜ್ಞರಾಗಿದ್ದರೂ ಸಾಲದು.
ಹೀಗೆ ನಿಮ್ಮ ಸಕಲ ಕಾರ್ಯಗಳಿಗೂ ಉತ್ತರಮುಕ್ತಿದಾಯಕವಾದ ದಕ್ಷಿಣೆಗೆ ದಕ್ಕಬೇಕಾದ ನೈತಿಕ ಮಾನ ಸನ್ಮಾನಗಳು ಮಾತ್ರ ದಕ್ಕಲಿಲ್ಲವೆಂಬುದೇ ದುಃಖದ ವಿಷಯ. ದಕ್ಷಿಣದಿಂದ ಉತ್ತರಕ್ಕೆ ಒಂದು ಹೈ-ಸ್ಪೀಡ್ ರಸ್ತೆಯಂತೆ ಕೆಲಸಮಾಡುವ ದಕ್ಷಿಣೆಗೆ "ಲಂಚ" ಎಂಬ ಕೆಟ್ಟ ಹೆಸರು ಬಂದು ಬಡಿದಿದೆ. ಇದರ ಹೆಸರೆತ್ತಲೂ ಜನ ಹಿಂದುಮುಂದು ನೋಡುತ್ತಾರೆ - ಎಷ್ಟೆಂದರೆ ಕನ್ನಡದ ಹೋಟೆಲುಗಳಿಗೆ ಹೋಗಿ ರಾಜಾರೋಷವಾಗಿ ಲಂಚ್ ತಿಂದು ಬರುವವರೂ ಲಂಚದ ಹೆಸರನ್ನು ಮಾತ್ರ ಬಾಯಿಬಿಟ್ಟು ಹೇಳುವುದಿಲ್ಲ (ಕೈ ಚಾಚಿ ತೆಗೆದುಕೊಳ್ಳುವುದಿಲ್ಲ ಅಂತ ಹೇಳಲಾಗುವುದಿಲ್ಲ, ಅದು ಬೇರೆ ವಿಷಯ). ಅದಕ್ಕೇ ಈ ’ಅನಿಷ್ಟ’ ಹೆಸರನ್ನು ವ್ಯವಹಾರದಿಂದ ಆದಷ್ಟೂ ದೂರವಿಡಲು ಮಾಮೂಲು, ಕೈಬೆಚ್ಚಗೆ, ’ನೋಡಿಕೊಳ್ಳುವುದು’, ಸುವಿಧಾ, ’ಮೇಲೆ’, ಟೇಬಲ್ ಕೆಳಗೆ, ಎಕ್ಸ್ಟ್ರಾ, ಚಿಲ್ಲರೆ ದಕ್ಷಿಣೆಯಾದರೆ ’ಕಾಫಿಗೆ’, ಭಾರೀ (ಪ್ರ)ದಕ್ಷಿಣೆಯಾದರೆ ’ಸ್ಕ್ಯಾಮ್’... ಹೀಗೆ ಏನೇನೋ ಹೆಸರುಗಳಿಂದ ಕರೆಯುತ್ತಾರೆ - ತಮ್ಮ ಭಾಗ್ಯದೇವತೆಯನ್ನೇ ಜರಿಯುತ್ತಾರೆ! ಇನ್ನು ಗುರುದಕ್ಷಿಣೆಯ ವಿಷಯವಂತೂ ಕೇಳಲೇ ಬೇಡಿ. ಫೀಸು, ಕ್ಯಾಪಿಟೇಶನ್ನು, ಬಿಲ್ಡಿಂಗ್ ಫಂಡು, ಡೆವಲಪ್ ಮೆಂಟ್, ಡೊನೇಶನ್ನು, ದೇಣಿಗೆ ಹೀಗೆ ನಾನಾ ವೇಷ ತಾಳಿ ಕಾಡುತ್ತದೆ. ವರದಕ್ಷಿಣೆಯೋ, ಅದರ ಹೆಸರೆತ್ತಿದರೆ ನಿಮಗೆ ಜೈಲೇ ಗಟ್ಟಿ. ಅದೆಲ್ಲ ಹೋಗಲಿ, ಪೌರೋಹಿತ್ಯಕ್ಕೆ ಸಹಜವಾಗಿಯೇ ಬರುವ ಸಂಭಾವನೆಯನ್ನೂ ದಕ್ಷಿಣೆಯೆಂದು ಕರೆಯಲು ಮುಜುಗರ ಪಡುತ್ತಿದ್ದ ಹಿರಿ ತಲೆಗಳನ್ನು ನೋಡಿದ್ದೇನೆ. ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಅಥವ ಹಾಗಾದರೂ ಇವತ್ತು ದಕ್ಷಿಣೆಯೆಂಬ ಪದಕ್ಕೆ ಕಳೆದುಹೋದ ಮರ್ಯಾದೆಯನ್ನು ಸಂಪಾದಿಸಿಕೊಡುವ ಇರಾದೆಯಿದ್ದಿರಬಹುದು ಆ ಹಿರಿಯರಿಗೆ.
ಆದರೇನು? ನೀವು ಎಷ್ಟೇ ಮುಜುಗರ ಪಟ್ಟರೂ, ಹೇವರಿಸಿಕೊಂಡರೂ, ಹೆಸರು ಮರೆಸಿದರೂ ಈ ಲಂಚತತ್ತ್ವ ಮಾತ್ರ ನಿಮ್ಮ ಕೈಬಿಡುವುದಿಲ್ಲ. ನೀವದನ್ನು ದಕ್ಷಿಣೆಯೆನ್ನಿ, ಲಂಚವೆನ್ನಿ, ಮರ್ಯಾದೆಯೆನ್ನಿ ಅಥವಾ ಅದೊಂದು ಅಸಹ್ಯ ವಿಷಯವೆಂಬಂತೆ ಕೈಬಾಯಿ ಸನ್ನೆಯಲ್ಲೇ ಸೂಚಿಸಿ, ಅದು ಮಾತ್ರ ಕರ್ಮಯೋಗಿಯಂತೆ ನಿರ್ಲಿಪ್ತವಾಗಿ ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತದೆ. ಸ್ವತಃ ತಾನು ಯಾವುದಕ್ಕೂ ಅಂಟದಿದ್ದರೂ ಕೊಡುಕೊಳ್ಳುವರನ್ನು ಅಂಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತದೆ - ಲಂಚಗಾರ ಮತ್ತು ಲಂಚಿಗರ (ವೈಯಾಕರಣಿಗಳು ಮನ್ನಿಸಬೇಕು) ಮಧ್ಯೆ ಅದೊಂದು ಅವಿನಾಭಾವ ಸಂಬಂಧವನ್ನೇರ್ಪಡಿಸುತ್ತದೆ. ಕೊಟ್ಟ ಮೇಲೆ ಕೆಲಸ ಮುಗಿಯುವವರೆಗೂ ಅವನನ್ನು ಇವನು ಬಿಡ, ಇವನನ್ನು ಅವನು ಬಿಡ. ಹೀಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಬಾಂಧವ್ಯ ಬೆಸೆಯುವ ದಿವ್ಯ ಬಂಧನವಾಗಿ ಕೆಲಸಮಾಡುತ್ತದೆ ಈ ದಕ್ಷಿಣೆ (ಮುಂದೆ ಅದು ಬೇರೆಯೇ ಬಂಧನವಾಗಬಹುದು, ಆದರೇನು). ಕಾರ್ಯಸಾಧನೆಗೆ ಈ ಬಂಧ-ಬಾಂಧವ್ಯಗಳೇ ಅಲ್ಲವೇ ಮುಖ್ಯ? ಬಂಧನವಿಲ್ಲದೇ ಜಗತ್ತು ನಡೆಯುವುದುಂಟೇ. ಆದ್ದರಿಂದ ಲಂಚವೆನ್ನುವುದು ಈ ಜಗತ್ತನ್ನು ಒಗ್ಗೂಡಿಸಿ ಮುನ್ನಡೆಸುವ ಅದ್ಭುತ ಶಕ್ತಿಯೆಂದರೆ ತಪ್ಪೇನು? ಈ ಜಗದ್ಭವ್ಯ ಶಕ್ತಿಯನ್ನು ಕುರಿತು ಚಿಂತಿಸುವುದು ಬಿಟ್ಟು ಒಣವೇದಾಂತ, ಲೋಕಾಂತರಗಳ ಚಿಂತೆ ನಮಗೇಕೆ ಹೇಳಿ. ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ. ಸುಮ್ಮನೇ ಸ್ವರ್ಗ, ನರಕ, ಉತ್ತರ ದಕ್ಷಿಣ ಎಂದೆಲ್ಲಾ ಲೋಕದಿಂದ ಲೋಕಕ್ಕೆ ಅಲೆಯುತ್ತಿದ್ದ ನಮ್ಮ ಮಾತು, ದಕ್ಷಿಣೆ-ಲಂಚದ ವಿಷಯ ಬಂದ ಕೂಡಲೇ ಹೇಗೆ ಈ ನೆಲಕ್ಕೆ ಅಂಟಿ ನಿಂತಿತು ನೋಡಿ. ಇಂಥಾ ಜೀವನ್ಮುಖೀ ಶಕ್ತಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೆ ತಾನೇ ತೀರೀತು? ಅದಕ್ಕೇ ನಾನಂತೂ ನಿರ್ಧರಿಸಿಬಿಟ್ಟಿದ್ದೇನೆ - ಪರ(ಲೋಕ) ಚಿಂತೆ ನಮಗೆ ಏಕಯ್ಯಾ ನಮ್ಮ(ಲೋಕದ) ಚಿಂತೆ ನಮಗೆ ಸಾಲದೇ ಎಂದು ಇಹಲೋಕದ ಬಗ್ಗೆ ಚಿಂತಿಸುವುದೇ ಆದರೆ, ಮೊದಲು ಕೈಮುಗಿಯಬೇಕಾದ್ದು ಈ ಲೋಕದ ಸ್ಥಿತಿಕಾರಕ ಶಕ್ತಿಯಾದ ದಕ್ಷಿಣಾಮೂರ್ತಿಗೆ - ದಕ್ಷಿಣಾಮೂರ್ತಿಯೇ ಆದಿಗುರುವೇ!
Monday, August 25, 2014
ಹೋಗಿ ಬನ್ನಿ ಅನಂತಮೂರ್ತಿ... ವಿದಾಯ.
ಅವರನ್ನಂಟಿಕೊಂಡ ವಿವಾದಗಳೇನೇ ಇರಲಿ, ನಾವು ಕಂಡ ಅತ್ಯಂತ ಸಂವೇದನಶೀಲ ವ್ಯಕ್ತಿ/ಸಾಹಿತಿಗಳಲ್ಲೊಬ್ಬರು ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತುಗಳಿಲ್ಲ. ಮಾಸ್ತಿಯವರನಂತರ ಅನಂತಮೂರ್ತಿ ಕನ್ನಡ ಕತೆಗಳ ಪ್ರಪಂಚದಲ್ಲಿ ಕಡೆಗಣಿಸಲಾಗದ ಹೆಸರು. ಅವರ ಕತೆಗಳು ಹೊಸ ಕತೆಗಾರರಿಗೆ ಹಿರಿಯಣ್ಣನ ಮೇಲ್ಪಂಕ್ತಿಯಂತೆ ಕಂಡರೆ, ಸೂಕ್ಷ್ಮ ಓದುಗನನ್ನು ಹಲವು ಬಗೆಗಳಲ್ಲಿ ಆವರಿಸುತ್ತವೆ. ಅವುಗಳಲ್ಲಿ ನನಗೆ ಬಹು ಇಷ್ಟವಾಗುವ ಅಂಶಗಳೆಂದರೆ, ಪಾತ್ರಗಳ ಒಳತೋಟಿ - ಸನ್ನಿವೇಶಕ್ಕೆ ಸಹಜವಾಗಿ ಅವು ಮೂಡುವ ಪರಿ, ತತ್ತ್ವ, ತರ್ಕ, ಕಲಾತ್ಮಕತೆಗಳ ಆಡಂಬರವಿಲ್ಲದೆಯೂ ಕಲಾತ್ಮಕವಾಗಿ ಅವು ಚಿತ್ರಿತವಾಗುವ, ಕ್ರಿಯೆ ಪಡೆದುಕೊಳ್ಳುವ ರೀತಿ. ತಾವು ಹುಟ್ಟಿ ಬೆಳೆದ ಬ್ರಾಹ್ಮಣ ಸಮುದಾಯ, ಅದರ ನಿಂತ ನೀರಿನಂಥ ವ್ಯವಸ್ಥೆ, ಆಚರಣೆಗಳು, ಬಿಡಿಸಲಾಗದಂತೆ ಬೆಸೆದ ಒಳಿತು-ಕೆಡಕುಗಳು ಮತ್ತು ಅದೇ ಪರಿಸರದಲ್ಲಿ ಮತ್ತದರ ಹೊರಗೆ ಎದುರಾಗುವ ಸಂಕೀರ್ಣ ಸಂದರ್ಭಗಳು ಬಹುಶಃ ಅವರಲ್ಲಿ ಹಲವು ದ್ವಂದ್ವಗಳನ್ನು ಸೃಷ್ಟಿಸಿದಂತೆನಿಸುತ್ತದೆ. ಅದಕ್ಕೆಂದೇ ಅನಂತಮೂರ್ತಿಯವರಲ್ಲಿ ಹೊತ್ತಿ ಉರಿಯುವ ಬಂಡಾಯಗಾರನನ್ನು ಕಾಣೆವು, ಅಥವ ಕೊನೆಯಲ್ಲಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬೀಳುವ ಸಂಪ್ರದಾಯಶರಣನನ್ನೂ. ಈ ಬಂಡಾಯಗಾರ ತಣ್ಣಗೆ ಉರಿಯುವಂಥವನು; ಭಾಷಣ ಮಾಡುವವನಲ್ಲ, ಪ್ರತಿಭಟನೆಯನ್ನು ತಣ್ಣನೆಯ ಕ್ರಿಯೆಯಿಂದಲೇ ದಾಖಲಿಸುವವನು, ಸುಡುತ್ತಲೇ ಶಾಖದೊಳಗಣ ತಂಪಿಗಾಗಿ ಹಂಬಲಿಸುವಂಥವನು, ತಂಪಿನೊಳಗಣ ಬಿಸುಪನ್ನು ಕಂಡು ಬೆಚ್ಚುವವನು. ತಮ್ಮಲ್ಲೇ ಬೆಳೆದ ಈ ದ್ವಂದ್ವಗಳನ್ನು ಕತೆಯ ಹಲವು ಪಾತ್ರಗಳಾಗಿ ಹಂಚಿ ರೂಪಿಸುವ ಅನಂತಮೂರ್ತಿಯವರ ರೀತಿ ಬಲು ಸೊಗಸು. ಆ ಪಾತ್ರಗಳು ತಮ್ಮ ನಡುವೆ ನಡೆಸುವ ಸಂವಾದ ವಿವಾದ ಕ್ರಿಯೆ ಪ್ರತಿಕ್ರಿಯೆಗಳು ಒಟ್ಟಂದದಲ್ಲಿ ಒಂದೇ ವ್ಯಕ್ತಿಯ ಒಳತೋಟಿಯಂತೆ ಕಾಣುವುದು, ಇದೇ ಕಾರಣಕ್ಕಿರಬೇಕು. ಇದೇ ದ್ವಂದ್ವಗಳು ಅನಂತಮೂರ್ತಿಯವರನ್ನು ಅವರ ನಿಜಜೀವನದಲ್ಲೂ ನೆರಳಂತೆ ಹಿಂಬಾಲಿಸಿರುವುದನ್ನು ಕಾಣುತ್ತೇವೆ. ಸಂವೇದನೆಗಳು ಹೆಚ್ಚು ಸೂಕ್ಷ್ಮಗೊಂಡಂತೆ ದ್ವಂದ್ವಗಳೂ ಹೆಚ್ಚುವುದು ಸಹಜವೇನೋ.
ನನ್ನ ಚಿಂತನೆಯ, ಯೌವನದ ದಿನಗಳನ್ನು ರೂಪಿಸಿದ ಹಿರಿಮೆ ಅನಂತಮೂರ್ತಿ, ತೇಜಸ್ವಿ, ಲಂಕೇಶರದು. ಆದ್ದರಿಂದಲೇ ನನಗವರು ಹೊಸ ಬದುಕಿನ, ಹೊಸ ಚಿಂತನೆಗಳ, ಸ್ವತಂತ್ರಶೀಲತೆಯ ಪ್ರತೀಕ. ಅವರನ್ನು ಅವರ ಬದುಕಿನ ಉಚ್ಛ್ರಾಯದ ದಿನಗಳಲ್ಲಿ ಕಂಡು ಓದಿ ಬೆಳೆದ ನನಗೆ "ಹಿರಿಯರು" "ಅಗಲಿದ ವೃದ್ಧರು" ಎಂದೆಲ್ಲಾ ಹೇಳಲು ಮನಸ್ಸು ತಡೆಯುತ್ತದೆ. ಬದುಕನ್ನು ತಮ್ಮಾಣತಿಯಂತೆಯೇ ಕುಣಿಕುಣಿದು ಬದುಕಿ, ಬದುಕಿನ ಕೊನೆ ಹನಿಯನ್ನೂ ಸವಿದು ತೀರಿದವರಿಗೆ "ಅಂತಿಮ ನಮನ"ಕ್ಕಿಂತ "ಪ್ರೀತಿಯ ವಿದಾಯ" ಎನ್ನುವುದು ಹೆಚ್ಚು ಆಪ್ಯಾಯಮಾನ. ಈ ಮೂವರಲ್ಲಿ ಕೊನೆಯವರಾಗಿ ಅನಂತಮೂರ್ತಿ ಈಗ ನಮ್ಮನ್ನು ಅಗಲಿದ್ದಾರೆ - ಮಿಶ್ರ ಸಂವೇದನೆಗಳೊಂದಿಗೆ ನಮ್ಮನ್ನು ಬಿಟ್ಟು. ಅನಂತಮೂರ್ತಿಯವರನ್ನು ಹತ್ತಿರದಿಂದ ಕಂಡು ಒಡನಾಡಿದವರು, ಅವರಲ್ಲಿ ಪಾಠ ಕೇಳಿದವರು, ಕೇಳದಿದ್ದರೂ ಪ್ರೀತಿಯ ಅನಂತು ಮೇಷ್ಟ್ರಾಗಿ ಸ್ವೀಕರಿಸಿದ ಅನೇಕ ಏಕಲವ್ಯ ಶಿಷ್ಯರು ಅವರಬಗ್ಗೆ ಭಾವುಕತೆಯಿಂದ, ಗದ್ಗದಿತರಾಗಿ ಮಾತಾಡುತ್ತಾರೆ. ಇವೆಲ್ಲ ’ಪ್ರಗತಿಪರ’ ’ಬುದ್ಧಿಜೀವಿ’ ಮನಸ್ಸುಗಳು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡುವ ಒರಟು ಅಭ್ಯಾಸವೂ ಇತ್ತೀಚಿಗೆ ಬಂದುಬಿಟ್ಟಿದೆ. ಆದರೆ ಈ ಪ್ರೀತಿ, ಅಸ್ಮಿತೆಗಳು ವ್ಯಕ್ತಿಯೊಬ್ಬನ ಕೇವಲ ಚಾಣಾಕ್ಷತೆಯಿಂದ, ರಾಜಕೀಯ/ಸಾಮಾಜಿಕ ’ಪ್ರಗತಿಪರತೆ’ಯಿಂದ, ಯಾವುದೋ ಸಿದ್ಧಾಂತದ ಮೇಲ್ಮೆಯಿಂದ, ಮೇಸ್ಟ್ರುಗಿರಿಯಿಂದ, ಲಾಬಿಯಿಂದ ಅಥವಾ ಸಾಹಿತ್ಯದ ಜನಪ್ರಿಯತೆಯಿಂದ ಬರುವುದಲ್ಲವೆಂಬುದನ್ನು ನೆನಪಿನಲ್ಲಿಡಬೇಕು. ಭಾಷಣಗಳಲ್ಲಿ ಚಪ್ಪಾಳೆಯಿಕ್ಕುವುದು ಬೇರೆ, ಪ್ರೀತಿಯಿಂದ ನೆನೆಯುವುದು ಬೇರೆ. ಗತಿಸಿದ ಮೇಷ್ಟ್ರ ಬಗೆಗಿನ ಸಾವಿರ ಬೆಚ್ಚನೆ ನೆನಪುಗಳಿವೆ ಅವರ ಮೆಚ್ಚುಗರಲ್ಲಿ. ಹಾಗೇ ಅವರ ನಿಷ್ಠುರ ನಿಲುವಿನಿಂದಾಗಿ ಅವರನ್ನ ಕಾಯಾ ವಾಚಾ ಮನಸಾ ದ್ವೇಷಿಸುತ್ತಿದ್ದ, ಅವರ ಸಾವನ್ನೂ ಸಂಭ್ರಮಿಸುವ ಸಮೂಹವೂ ಇದೆ. ಇದಂತೂ ಒಂದು ರೋಗಗ್ರಸ್ತ ಮನಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ. ಎಷ್ಟೊ ಸಮಯ ಅಗತ್ಯವೇ ಇಲ್ಲದೆಡೆಯಲ್ಲೂ ಅವರ ಹೆಸರು ಎಳೆಯಲ್ಪಡುತ್ತಿತ್ತು, ಯಾರನ್ನಾದರೂ ಹೊಗಳಬೇಕಿದ್ದರೂ ತೆಗಳಿಕೆಗೆ ಅನಂತಮೂರ್ತಿಯೇ ಬೇಕು ಎಂಬಂಥ ಪರಿಸ್ಥಿತಿಯೂ ಏರ್ಪಟ್ಟಿತ್ತು. ಅಷ್ಟಾದರೂ ಎಲ್ಲೋ ಒಂದುಕಡೆ ಈ ಅಸಹನೆಗೆ ರವೆಯಷ್ಟಾದರೂ ತಥ್ಯ ಕಾರಣವಿಲ್ಲದಿಲ್ಲ. ಹಲವು ವಿಷಯಗಳಲ್ಲಿ ನಿಷ್ಠುರ ನಿಲುವು ತಾಳುತ್ತಿದ್ದ ಅನಂತಮೂರ್ತಿ, ಮತ್ತೆ ಕೆಲವು ವಿಷಯಗಳು ಕಂಡೂ ಕಾಣದಂತೆ ಇರುತ್ತಿದ್ದರೆಂಬುದು ಅಸಹನೀಯವಾಗುತ್ತಿತ್ತು. ಅವರ ’ಸಮಾಜಪರ’ ’ಸಾಮಾಜಿಕನ್ಯಾಯುತ’ ನಿಲುವುಗಳು ಹಲವು ಬಾರಿ ಅಷ್ಟೇನು ಸಾಮಾಜಿಕ ನ್ಯಾಯದ್ದಾಗಿ ಕಾಣುತ್ತಲೇ ಇರಲಿಲ್ಲ. ಅನೇಕವೇಳೆ ಅವರ ನಿಲುವುಗಳಲ್ಲಿ ಕಣ್ಣಿಗೇ ಹೊಡೆಯುವ ವಿರೋಧಾಭಾಸಗಳು ಇರುತ್ತಿದ್ದುವು. ಈ ಸಮಯದಲ್ಲೆಲ್ಲಾ ಅವರ ಚಿನ್ಮೌನ ಕೂಡ ಹೊತ್ತಿ ಉರಿಯುತ್ತಿದ್ದ ಅಸಹನೆಗೆ ತುಪ್ಪ ಹೊಯ್ಯುತ್ತಿತ್ತು. ಅನಂತಮೂರ್ತಿ-ಗಾಂಧಿ-ಕಸಬರನ್ನು ಒಟ್ಟಿಗೇ ದ್ವೇಷಿಸುವ ಜನವಿರುವಂತೆಯೇ ಈ ಮೂವರನ್ನೂ ಒಟ್ಟಿಗೇ ಪ್ರೀತಿಸುವ ಜನರೂ ಇರುವುದು, ಆ ಕಳವಳಕಾರೀ ಸಾಮಾಜಿಕ ಬೆಳವಣಿಗೆ, ಅನಂತಮೂರ್ತಿಯವರ ಗಮನಕ್ಕೆ ಬರಲೇ ಇಲ್ಲ. ಕಸಬನಂಥವರ ಮೇಲಿನ ದ್ವೇಷ ಅನಂತಮೂರ್ತಿಯಂಥವರ ಮೇಲಿನ ಅಸಹನೆಯಾಗಿ ಪರಿಣಮಿಸುತ್ತಿದ್ದುದನ್ನೂ, ಅನಂತಮೂರ್ತಿಯವರ ಮೇಲಿನ ಪ್ರೀತಿ ಕಸಬನಂಥವರ ಮೇಲಿನ ಪ್ರೀತಿಯಾಗಿ ಚಲಾವಣೆಗೊಳ್ಳುತ್ತಿದ್ದುದನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಹೀಗಾಗಿ ಯಾವುದೋ ಮಟ್ಟದಲ್ಲಿ ಅನಂತಮೂರ್ತಿ ಅವರದಲ್ಲದ ದ್ವೇಷಕ್ಕೆ ಅವರದಲ್ಲದ ಪ್ರೀತಿಗೆ ಪಕ್ಕಾಗುತ್ತಾ ಹೋದರು. ಅಥವ ಇದು ಅನಂತಮೂರ್ತಿಯವರ ವೈಯಕ್ತಿಕ ನಿಲುವೆನ್ನುವುದಕ್ಕಿಂತ ಅವರು ಗುರುತಿಸಿಕೊಂಡ, ಈಗಾಗಲೇ ಒಂದು ಕಟ್ಟರ್ ’ಪಂಥ’ವೇ ಆಗಿ ಬೆಳೆದ ರಾಜಕೀಯ ಸಿದ್ಧಾಂತದ ಅನಿವಾರ್ಯ dynamics ಕೂಡ ಇರಬಹುದೆಂದು ನಾನು ಚಿಂತಿಸುತ್ತೇನೆ. ಆ ದೃಷ್ಟಿಯಿಂದ ಉಳಿದ ಹಲವು ಪ್ರಗತಿಪರರಂತೆಯೇ ಅನಂತಮೂರ್ತಿಯವರೂ ತಾವೇ ನೀರೆರೆದು ಬೆಳೆಸಿದ ಪಂಥವನ್ನು ಪ್ರಶ್ನಿಸಿಕೊಳ್ಳುವ critical insider ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರೋ ಎನ್ನುವ ಅನುಮಾನ ಕಾಡುತ್ತದೆ. ಬದಲಾದ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಸಮತೋಲನದ ಗುರುತ್ವಬಿಂದು (center gravity) ಬದಲಾಗಿದ್ದು ಅವರಿಗೆ ತಿಳಿಯಲೇಯಿಲ್ಲವೆನಿಸುತ್ತದೆ. ಏಕೆಂದರೆ ತಮ್ಮ ಜೀವನವೆಲ್ಲಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಅದನ್ನು ಮೀರುತ್ತಾ ಗಟ್ಟಿಗೊಳ್ಳುತ್ತಾ ಬಂದ ಈ ಸಮಾಜವಾದಿ, ತಾವೇ ಮತ್ತೊಂದು ಬದಲೀ ವ್ಯವಸ್ಥೆಯ ಭಾಗವಾಗತೊಡಗಿದ್ದನ್ನೂ ಮತ್ತು ಆ ವ್ಯವಸ್ಥೆಯೇ ಮತ್ತೊಂದೆಡೆಯಿಂದ ಅದೇ ಹಲವು ಬಗೆಯ ವೈಪರೀತ್ಯಗಳಿಗೆಡೆಗೊಡತೊಡಗಿದ್ದನ್ನು ಗಮನಿಸದೇ ಹೋದರೇ? ಇಲ್ಲದಿದ್ದರೆ ಅವರು ಎಲ್ಲೋ ಒಂದೆಡೆ ಅದನ್ನೂ ಮೀರಲೆತ್ನಿಸುತ್ತಿರಲಿಲ್ಲವೇ? ಅಥವ ಅಷ್ಟುಹೊತ್ತಿಗಾಗಲೇ ಅವರ ಸುತ್ತ ರೂಪುಗೊಂಡಿದ್ದ ಆ ಪ್ರಭಾವಳಿ, ಗೌರವ, ಪ್ರೀತಿಗಳು ಅನಂತಮೂರ್ತಿಯವರೊಳಗಿದ್ದ ಬಂಡಾಯಗಾರನನ್ನು ಮೆತ್ತಗಾಗಿಸಿತ್ತೇ? ಈ ಹಲವು ಪ್ರಶ್ನೆಗಳನ್ನಿಟ್ಟು ಅವರೊಡನೆ ಚರ್ಚಿಸಬೇಕೆಂದು ಎಷ್ಟೋಬಾರಿ ಅಂದುಕೊಂಡಿದ್ದಿದೆ. ಅದು ಸಾಧ್ಯವಾಗುತ್ತಿದ್ದಿತೋ, ಇಲ್ಲವೋ - ಒಟ್ಟಿನಲ್ಲಿ ಈಗಂತೂ ಅವರಿಲ್ಲ. ಬಹುಶಃ ಅವರಲ್ಲಿ ಉತ್ತರವಿದ್ದಿರಬಹುದು, ಕೇವಲ ಭರ್ತ್ಸನೆ, ಬೆದರಿಕೆ, ವೈಯಕ್ತಿಕ ನಿಂದನೆಗಳನ್ನು ಬಿಟ್ಟು ನಿಜದ ಪ್ರಶ್ನೆಗಳೇ ಅವರ ವಿರೋಧಿಗಳಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆದುರಾಗಲಿಲ್ಲವೇನೋ. ಪ್ರಶ್ನೆಗಳಂತೂ ಇವೆ. ಉತ್ತರಗಳೂ ಖಂಡಿತ ಇವೆ. ಆದರೆ ಸಮಾಧಾನದಿಂದ ಕೂತು, ಪರಸ್ಪರ ಅನುಮಾನಗಳಿಲ್ಲದೇ ಚರ್ಚಿಸಿ ’ಅರ್ಥಮಾಡಿಕೊಳ್ಳುವುದು’ ಸಾಧ್ಯವಾದರೆ! ಅನಂತ ಸರಳತೆ ಸಜ್ಜನಿಕೆ ಸನ್ನಡತೆಗಳ ಮೂರ್ತಿಗೆ ಅದು ನಿಜವಾದ ಶ್ರದ್ಧಾಂಜಲಿಯಾಗಬಹುದು.
ಅನಂತಮೂರ್ತಿಯವರ ಬಗೆಗೆ ನೆನೆಸಿಕೊಳ್ಳಲು ನನಗೆ ವೈಯಕ್ತಿಕ ಆಪ್ತ ಅನುಭವಗಳಿಲ್ಲ. ಅಥವ ದ್ವೇಷಿಸುವ ಧಾರ್ಮಿಕ/ಸಾಮಾಜಿಕ ಕಾರಣಗಳೂ ಇಲ್ಲ. ನನ್ನ ನೆಚ್ಚಿನ ಕತೆಗಾರ ಅನಂತಮೂರ್ತಿ ಮಾತ್ರ ಹಿಂದಿನಂತೆಯೇ ಇನ್ನು ಮುಂದೆಯೂ ನನ್ನ ಜೊತೆಯಿರುವರೆಂಬುದಂತೂ ನಿಜ, ನನ್ನ ಪುಸ್ತಕದ ಕಪಾಟಿನಲ್ಲಿ, ನನ್ನ ಓದಿನ ನೆನಪುಗಳಲ್ಲಿ, ಸ್ಫೂರ್ತಿಯಲ್ಲಿ. ಅದೇಕೋ ಮೊನ್ನೆ ಅನಂತಮೂರ್ತಿಯವರು ಕೊನೆಯ ಕ್ಷಣಗಳನ್ನೆಣಿಸುತ್ತಿದ್ದ ಸುದ್ದಿ ತಿಳಿದಾಗ ನನಗೆ ನೆನಪಾದದ್ದು, ವಿಪರೀತ ಕಾಡತೊಡಗಿದ್ದು ಅವರು ಕುಮಾರಗಂಧರ್ವರ ಬಗ್ಗೆ ಬರೆದ ಒಂದು ಕವನ. ಮೊದಲೇ ಹೇಳಿದಂತೆ ನಾನು ವೈಯಕ್ತಿಕವಾಗಿ ಅನಂತಮೂರ್ತಿಯವರನ್ನು ಬಲ್ಲವನಲ್ಲ, ಆದರೆ ಅವರು ನನ್ನೊಡನೆ ಅಷ್ಟು ಆಪ್ತವಾಗಿ ಮಾತನಾಡಿದ್ದು ಈ ಕವನದ ಮೂಲಕವೇ, "ಸಂತೆಯಿಂದ ಸುಸ್ತಾಗಿ ಬಂದ ಶೆಟ್ಟಿ"ಯಂಥ ಆ ಗಂಧರ್ವ ಈ ಮೂರ್ತಿಯನ್ನು ಮಾತಾಡಿಸಿದಷ್ಟೇ ಆಪ್ತತೆಯಿಂದ. ಅವರ ಸಾವಿನ ಸುದ್ದಿ ಬಂದಾಗ, ಅವರ ಈ ಕವನ ಓದಬೇಕೆಂದು ತುಂಬಾ ಅನ್ನಿಸಿತು. ನನ್ನ ಲೈಬ್ರರಿಗೆ ದೂರವಿದ್ದೆ. ಗೆಳೆಯ ರಾಜೇಂದ್ರನ ಬಳಿ ಹೇಳಿ ತರಿಸಿಕೊಂಡು ಒಮ್ಮೆ ಏಕಾಂತದಲ್ಲಿ ಕುಳಿತು ಓದಿಕೊಂಡೆ. ಗಂಧರ್ವನ ಜಾಡು ಹಿಡಿದು ಹೊರಟ ಅನಂತಮೂರ್ತಿ ಮುಗುಳ್ನಕ್ಕು ಕೈಬೀಸಿದರು.
ಈ ಕವನದ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಬಹುದು:
http://youtu.be/hPrOY1EC7oI
Monday, August 11, 2014
ಅಪೀಲು
ಸಾಸಿವೆಯನೆಲ್ಲಿಂದ ತರಲಿ ದೊರೇ!
ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?
ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.
ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).
ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.
Friday, August 8, 2014
ಸಾಂತ್ವನ
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ
ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.
ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.
Tuesday, January 14, 2014
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು
ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ
ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ
ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ
ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?
ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು
Sunday, May 5, 2013
ಶತಮಾನಂ ಭವತಿ - ಪುಸ್ತಕ ಬಿಡುಗಡೆ ಸಮಾರಂಭ
ಅದಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಈ ತಂಡ ಸಾಕಷ್ಟು ಬೆಳೆದಿದೆ - ಸಂಖ್ಯೆಯಲ್ಲಿ, ಹುಮ್ಮಸಿನಲ್ಲಿ, ಅನುಭವದಲ್ಲಿ, ಆತ್ಮೀಯತೆಯಲ್ಲಿ. ಆರ್ಕುಟ್ಟಿನಲ್ಲಿ ಕುಡಿಯೊಡೆದ ಬಳ್ಳಿ, ಫೇಸ್ ಬುಕ್ಕನ್ನು ಬಳಸಿ ಕತೆ-ಕವನಗಳ ಸೀಮೆಯನ್ನು ಮೀರಿ ಇನ್ನೂ ಅನೇಕ ಸಾಂಸ್ಕೃತಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಹಬ್ಬಿದ್ದರೂ ಮೂಲತಃ ಕವಿಗಳೆಂದೇ ತಮ್ಮನ್ನು ಗುರ್ತಿಸಿಕೊಳ್ಳುವ ಇಚ್ಛೆ ಈ ಉತ್ಸಾಹಿಗಳಿಗೆ. ಕಾವ್ಯಸಂಚಾರದ ಹೆಸರಲ್ಲಿ ಆಗಿಂದಾಗ್ಗೆ ಮೈಸೂರು, ಮಂಗಳೂರು ಹೀಗೆಲ್ಲ ಸಂಚಾರ ಕೈಗೊಳ್ಳುವ ಈ ತಂಡ, ಸ್ಥಳೀಯ ಸಂಸ್ಥೆಗಳೊಡನೆ ಬೆರೆತು ಸಾಹಿತ್ಯಕ-ಸಾಂಸ್ಕೃತಿಕ ವಿನಿಮಯದಲ್ಲಿ ಪಾಲ್ಗೊಳ್ಳುತ್ತದೆ.
ಪ್ರೀತಿತುಂಬಿದ ಈ ಉತ್ಸಾಹೀ ಕವಿಸಮೂಹದ ಮತ್ತೊಂದು ಹೆಜ್ಜೆ - ನೂರು ಕವಿಗಳ ನೂರು ಕವನಗಳನ್ನೊಳಗೊಂಡ ಎರಡನೆಯ ಕವನಸಂಕಲನ "ಶತಮಾನಂ ಭವತಿ" ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕವನ ಸಂಕಲನವನ್ನು ನಾನು ಸಂಪಾದಿಸಿರುವೆನಾಗಿ, ಕವಿತೆಯ ತೇರಿಗೆ ನನ್ನದೂ ಒಂದು ದವನ.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದೂವರೆ ವರ್ಷದ ನಂತರ ಮತ್ತೆ ಕಬ್ಬಿಗವಕ್ಕಿಗಳ ಕಲರವ ತುಂಬಲಿದೆ. ಇದು ಸಂತೋಷದ ವಿಷಯ. ಬಹುಕಾಲದ ನಂತರ ಬ್ಲಾಗ್ ಲೋಕದ ಹಲಕೆಲವು ಮಿತ್ರರನ್ನು ಭೇಟಿಮಾಡುವ ಹಿಗ್ಗು ನನಗೆ. ನೀವೂ ಬನ್ನಿ.
ದಿನಾಂಕ: ೧೨/೦೫/೨೦೧೩, ಭಾನುವಾರ
ಸಮಯ: ಸಂಜೆ ೫.೩೦
Thursday, November 29, 2012
ಅವಧಾನಕಲೆ
ಸಂಖ್ಯಾಬಂಧ: ೫ X ೫ ರ ಚೌಕವೊಂದರಲ್ಲಿ ಹೇಗೇ ಕೂಡಿದರೂ ಒಂದೇ ಮೊತ್ತ ಬರುವಂತೆ ಒಂದು ಬಂಧವನ್ನು ಪೃಚ್ಛಕ ಮೊದಲೇ ರಚಿಸಿಕೊಂಡು ಬಂದಿರುತ್ತಾನೆ. ಕಾರ್ಯಕ್ರಮದ ಮೊದಲಲ್ಲಿ ಅವಧಾನಿಗೆ ಈ ಮೊತ್ತವನ್ನಷ್ಟೇ ಆತ ಕೊಡುತ್ತಾನೆ. ಆಮೇಲೆ ಮಧ್ಯ ಮಧ್ಯ ಮನಬಂದಾಗ ಈ ಬಂಧದ ಒಂದು ನಿರ್ದಿಷ್ಟ ಮನೆಯಲ್ಲಿ ಬರುವ ಸಂಖ್ಯೆಯನ್ನು ಕೇಳುತ್ತಾನೆ. ಉದಾಹರಣೆಗೆ, ಮೂರನೆಯ ಸಾಲಿನ ನಾಲ್ಕನೆಯ ಮನೆಯಲ್ಲಿ ಬರುವ ಸಂಖ್ಯೆ ಎಷ್ಟು? ಅವಧಾನಿ ಮನಸ್ಸಿನಲ್ಲೇ ಬಂಧವನ್ನು ರಚಿಸಿಕೊಂಡು ಆಯಾ ಮನೆಯಲ್ಲಿ ಬರುವ ಸಂಖ್ಯೆಯನ್ನು ಪೃಚ್ಛಕನು ಕೇಳಿದಾಗಲೆಲ್ಲಾ ಹೇಳಬೇಕಾಗುತ್ತದೆ. ಅದನ್ನು ಪೃಚ್ಛಕನು ಪ್ರೇಕ್ಷಕರಿಗೆ ಮಾತ್ರ ಕಾಣುವಂತೆ ಬಂಧದಲ್ಲಿ ಬರೆಯುತ್ತಾ ಹೋಗುತ್ತಾನೆ. ಕೊನೆಯಲ್ಲಿ ಅವುಗಳನ್ನು ಕೂಡಿದಾಗ ಮೊದಲು ನೀಡಿದ ಮೊತ್ತ ಬಂದಿರಬೇಕು.
Wednesday, February 1, 2012
ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)
ಸುಮ್ಮನೆ ಒಂದು ಸಲ ನೆನಪಿಸಿಕೊಳ್ಳೋಣ. ಲಘುವನ್ನೇ ಬಳಸಿ ಎರಡು, ಮೂರು, ನಾಲ್ಕು, ಐದು ಮತ್ತು ಏಳು ಮಾತ್ರೆಗಳ ಗುಂಪಿರುವಂತೆ ಸಾಲುಗಳನ್ನು ರಚಿಸಿದೆವು, ಹಾಗೇ ಗುರುವನ್ನೇ ಬಳಸಿ ಎರಡು, ನಾಲ್ಕು ಮತ್ತು ಆರು ಮಾತ್ರೆಗಳ ಗುಂಪಿರುವಂತೆಯೂ ಸಾಲುಗಳನ್ನು ರಚಿಸಿದೆವು.
ಆದರೆ ನಾವು ಯಾವಾಗಲೂ ಬರೀ ಲಘುವಿನಲ್ಲಿ ಅಥವಾ ಬರೀ ಗುರುವಿನಲ್ಲಿ ಮಾತಾಡುತ್ತೀವಾ? ಖಂಡಿತಾ ಇಲ್ಲ. ನಮ್ಮ ಮಾತಲ್ಲಿ ಲಘು-ಗುರು ಎರಡೂ ರೀತಿಯ ಅಕ್ಷರಗಳು ಇದ್ದೇ ಇರುತ್ತವೆ ಅಲ್ಲವೇ? ಹಾಗೇ ಪದ್ಯದಲ್ಲೂ ಕೂಡ. ಯಾವುದೇ ಪದ್ಯವಾದರೂ ಲಘು-ಗುರುಗಳ ಮಿಶ್ರಣ. ಕೆಲವು ಅಕ್ಷರ ತುಂಡು (ಲಘು), ಕೆಲವಕ್ಕೆ ಎಳೆತ (ಗುರು). ಮೊದಲು ಮಾಡಿದೆವಲ್ಲ, ಮೂರು, ನಾಲ್ಕು, ಐದು, ಏಳು ಇತ್ಯಾದಿ ಲಯಬದ್ಧ ಗುಂಪು? ಅಲ್ಲಿ ಬರೀ ಲಘು ಅಥವ ಬರೀ ಗುರು ಬಳಸುವ ಬದಲು, ಲಘು ಮತ್ತು ಗುರು ಎರಡನ್ನೂ ಬೇರೆಬೇರೆ ರೀತಿಗಳಲ್ಲಿ ಬಳಸಿ ಬೇರೆ ಬೇರೆ ಲಯಗಳನ್ನು ಸೃಷ್ಟಿಸಬಹುದು.
ಇಲ್ಲಿ ನೋಡಿ (ಇದನ್ನು ಜೋರಾಗಿ ಹೇಳಿ):
ಬಳಸಿ ಬಳಸಿ ನುಡಿಯ ಬೇಡ ನೇರ ನುಡಿಯ ನೂ (ತಕಿಟ ತಕಿಟ ತಕಿಟ ತಕಿಟ ತಾತ ತಕಿಟ ತಾ ಎಂಬಂತೆ) [ಬಳಸಿ (UUU) ಬಳಸಿ (UUU) ನುಡಿಯ (UUU) ಬೇಡ ( _U) ನೇರ ( _U) ನುಡಿಯ (UUU) ನೂ - ಇಲ್ಲಿ ಮೂರುಮೂರು ಮಾತ್ರೆಯ ಜೊತೆ ಬಂದಿದೆ, ಆದರೆ ಕೆಲವು ಗುಂಪುಗಳಲ್ಲಿ ಎಲ್ಲವೂ ಲಘು, ಕೆಲವರಲ್ಲಿ ಲಘು-ಗುರುಗಳ ಮಿಶ್ರಣ]
ಗಣಪತಿ ಬಪ್ಪಾ ಬಂದಾ ನೋಡೂ (ತಕತಕ ತಾತಾ ತಾತಾ ತಾತಾ ಎಂಬಂತೆ) [ಗಣಪತಿ (UUUU) ಬಪ್ಪಾ ( _ _ ) ಬಂದಾ ( _ _ ) ನೋಡೂ ( _ _ ) - ನಾಲ್ಕುನಾಲ್ಕು ಮಾತ್ರೆಯ ಜೊತೆ, ಲಘು-ಗುರುಗಳ ಮಿಶ್ರಣ]
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ (ತಾತಕಿಟ ತಾತಕಿಟ ತಾತಕಿಟ ತಾತಾ ಎಂಬಂತೆ) [ತೂಕಡಿಸಿ ( _UUU) ತೂಕಡಿಸಿ ( _UUU) ಬೀಳದಿರು ( _UUU) ತಮ್ಮಾ ( _ _ ) - ಐದೈದು ಮಾತ್ರೆಗಳ ಜೊತೆ, ಲಘು ಗುರುಗಳ ಸೊಗಸಾದ ಮಿಶ್ರಣ ಇಲ್ಲಿ]
ಶಾಲೆಯಲಿ ನೀ ಓತ್ಲ ಹೊಡೆದರೆ ನಾಕು ಬಾರಿಸಿ ಬಿಡುವೆನು (ತಾತಕಿಟತಾ ತಾತಕಿಟತಕ ತಾತತಾಕಿಟ ತಕಿಟತಾ ಎಂಬಂತೆ) [ಶಾಲೆಯಲಿ ನೀ ( _UUU _) ಓತ್ಲ ಹೊಡೆದರೆ ( _U UUUU) ನಾಕು ಬಾರಿಸಿ ( _U _UU) ಬಿಡುವೆನು (UUUU) - ಏಳೇಳು ಮಾತ್ರೆಯ ಜೊತೆ, ಲಘು-ಗುರುಗಳ ಹದವಾದ ಮಿಶ್ರಣ ಇಲ್ಲಿದೆ]
ಗೆಳೆಯರೇ, ಇಷ್ಟು ಓದಿದಮೇಲೆ, ಹಾಡಿದ ಮೇಲೆ, ನಿಮಗೆ ಮಾತ್ರೆ-ಲಯದ ಮರ್ಮ ಅರ್ಥವಾಗಿರಬೇಕು. ಇನ್ನು ವಿಜೃಂಭಿಸಿ. ೧-೨ (ಲಘು-ಗುರು) ಗಳನ್ನು ವಿವಿಧ ರೀತಿಯಲ್ಲಿ ಬಳಸಿ ಎರಡೋ ಮೂರೋ ನಾಲ್ಕೋ ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಲಯದಲ್ಲಿ ಸಾಲುಗಳನ್ನು ರಚಿಸಿ. ನೆನಪಿರಲಿ, ಇದು ಕಾವ್ಯವಾಗಬೇಕಿಲ್ಲ, (ಕಾವ್ಯವಾದರೂ ತಪ್ಪಲ್ಲ) ಒಟ್ಟಿನಲ್ಲಿ ಲಯಬದ್ಧವಾದ, ಅರ್ಥಬದ್ಧವಾದ ಸಾಲುಗಳು ಬಂದರೆ ಸರಿ.
ಮತ್ತೆ ನೆನಪಿಸುತ್ತೇನೆ, ಬರೀ ಯಾಂತ್ರಿಕವಾಗಿ ಲಘು ಗುರುಗಳನ್ನು ಲೆಕ್ಕಹಾಕಿ ಬರೆಯಬೇಡಿ. ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.
ಇದು ನಿಮ್ಮ ಹಿಡಿತಕ್ಕೆ ಸಿಕ್ಕಿದ ಮೇಲೆ ಮುಂದೆ ನೋಡೋಣ.
Tuesday, January 17, 2012
ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 2: ಮಾತ್ರೆ-ಗಣ (ಮುಂದುವರೆದಿದೆ)
ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.
ಈ ಸಾಲುಗಳನ್ನು ಜೋರಾಗಿ ಓದಿ:
ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)
ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)
ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)
ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)
ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)
ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.
ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)
ಈಗ ಈ ಸಾಲುಗಳನ್ನು ಜೋರಾಗಿ ಓದೋಣ.
ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)
ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)
ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)
ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.
ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ
ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.
ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.
ಈ ಸರಣಿಯ ಮುಂದಿನ ಬರಹ ಇಲ್ಲಿದೆ.
Monday, January 9, 2012
ಚೊಚ್ಚಿಲ ಕಂದನನ್ನು ಕಾಯುತ್ತಾ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.
ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ
ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್
ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್
ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ
ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?
Saturday, January 7, 2012
ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 1: ಲಘು-ಗುರು
ಆದರೆ ನನ್ನ ಈ ಲೇಖನ ಸರಣಿಯ audience ಈ ಗಂಭೀರ ವಿದ್ಯಾರ್ಥಿಗಳೂ ಅಲ್ಲ - ಈಗಷ್ಟೇ ಪದ್ಯರಚನೆಗೆ ಕೈಹಾಕಿ, ನವ್ಯ ಕವನಗಳ ಮಾದರಿಯ ಗದ್ಯರೂಪದ ಪದ್ಯಗಳನ್ನು ಬರೆಯುತ್ತಾ, ಛಂದಸ್ಸು, ಹಳಗನ್ನಡ ಇವುಗಳ ಗಂಧಗಾಳಿಯೂ ಇಲ್ಲದಿದ್ದರೂ ಛಂದೋಬದ್ಧವಾಗಿ ರಚಿಸಬೇಕೆಂಬ ಆಸಕ್ತಿ, ಆದರೆ ಲಘು-ಗುರುಗಳ ಮಾತ್ರೆ ನುಂಗಲು ಹೇವರಿಕೆ ಇವೆರಡೂ ಸಮಾನವಾಗಿ ಸಮ್ಮಿಳಿತವಾಗಿರುವ ಉತ್ಸಾಹೀ ಕವಿ ಕಿಶೋರರಿಗೆ, ಕಿಶೋರ ಕವಿಗಳಿಗೆ ಈ ಸರಣಿ ಅರ್ಪಿತ. ಅದಕ್ಕೆಂದೇ ತೀರ ತೀರ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಛಂದೋಪ್ರಪಂಚದ ಕೆಲವು ಹೊಳಹುಗಳನ್ನಷ್ಟೇ ಕಾಣಿಸುವುದು ಈ ಸರಣಿಯ ಉದ್ದೇಶ. ಇದರಿಂದ ಕಾವ್ಯಕ್ಕೆ ಲಯಪ್ರಾಸಗಳೂ ರುಚಿಕರ ವ್ಯಂಜನ ಹೌದೆಂಬ ವಿಷಯ ಉತ್ಸಾಹೀ ಓದುಗರ ಮನಕ್ಕೆ ಹತ್ತಿದರೆ, ಛಂದಸ್ಸನ್ನು ಗಂಭೀರವಾಗಿ ಅಧ್ಯಯನಮಾಡಬೇಕೆಂಬ ಹುಕ್ಕಿ ಬಂದರೆ, ನಾನು ಧನ್ಯ. ಒಮ್ಮೆ ಇದು ಬಂದಮೇಲೆ ಮೇಲ್ಕಾಣಿಸಿದ ಪುಸ್ತಕ-ಜಾಲತಾಣಗಳಿದ್ದೇ ಇವೆ; ಜೊತೆಗೆ ಅಪಾರ ಸಾಹಿತ್ಯವೂ ಇದೆ.
ಸರಣಿಯ ಹೆಸರೇ ಸೂಚಿಸುವಂತೆ ಕಾವ್ಯದ ಕುಣಿತದ ಭಾಗವನ್ನು ತೋರಿಸುವುದೇ ಈ ಸರಣಿಯ ಉದ್ದೇಶ. ಕುಣಿತ ಎಂಬುದರ ಬದಲು ನಡಿಗೆಯೆಂಬುದು ಹೆಚ್ಚು ಗಂಭೀರವಾಗಿರುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ, "ಹೌದು, ಅದಕ್ಕೇ ನಡಿಗೆಯ ಬದಲು ಕುಣಿತ ಆದದ್ದು" ಎಂಬುದು ನನ್ನ ಉತ್ತರ. ಮೊದಲೇ ಹೇಳಿದಂತೆ ಕಾವ್ಯದ ಗಂಭೀರ ನಡಿಗೆಯನ್ನೂ ಗಜಗಮನವನ್ನೂ ತೋರಿಸುವ ಅನೇಕ ಪ್ರೌಢಾತಿಪ್ರೌಢ ಗ್ರಂಥಗಳು ಈಗಾಗಲೇ ಇವೆ. ಆದರೆ ಆಡುವ ಮಕ್ಕಳಿಗೆ ಬ್ರಹ್ಮಸೂತ್ರದಿಂದೇನು ಪ್ರಯೋಜನ?
ಮೊದಲೇ ಹೇಳಿದಂತೆ ಈ ಸರಣಿ ಕೇವಲ ಆರಂಭಿಕರಿಗೋಸ್ಕರ. ಪರಿಭಾಷೆಯನ್ನು ಆದಷ್ಟು ಕಡಿಮೆಗೊಳಿಸುವುದು ಇಲ್ಲಿ ಉದ್ದೇಶ. ಹಾಗೂ ಬಳಸಿದ ಪರಿಭಾಷೆಯಲ್ಲಿ ಸೂಕ್ಷ್ಮ ಅದಲುಬದಲು (interchange) ಆಗಲೂ ಬಹುದು. ಈ ಸರಣಿಯಲ್ಲಿ ಒಂದೊಂದು ಲೇಖನವೂ ಒಂದೊಂದು ಹೊಸ ವಸ್ತು-ವಿಷಯವನ್ನೊಳಗೊಂಡಿರುತ್ತದೆ. ಬರೆದಿದ್ದಕ್ಕೆ ತಕ್ಕಷ್ಟು ಉದಾಹರಣೆಗಳನ್ನೂ ಕೊಡುತ್ತೇನೆ. ಇದರ ಉದ್ದೇಶ ಸುಮ್ಮನೇ ಬರೆದು ಮರೆಯುವುದಲ್ಲ. ಆಸಕ್ತರು ತಾವೂ ಆಯಾ ಪ್ರಕಾರದಲ್ಲಿ ಪದ್ಯವನ್ನು ರಚಿಸಲು ಪ್ರಯತ್ನಿಸಬಹುದು. ನಿಜಕ್ಕೂ ಇದೊಂದು ಆಟದಂತೆ, ಹರಟೆ ಕಟ್ಟೆಯಂತೆ ಚೇತೋಹಾರಿಯಾಗಬೇಕೆಂದು ನನ್ನ ಆಸೆ. ಇಲ್ಲಿ ನೀವು ಮಾಮೂಲಾಗಿ ಹರಟಿದರೂ ಅಡ್ಡಿಯಿಲ್ಲ, ಒಬ್ಬರು ಇನ್ನೊಬ್ಬರ ಕಾಲೆಳೆದರೂ ಅಡ್ಡಿಯಿಲ್ಲ, ಆದರೆ ಒಂದೇ ಒಂದು ಶರತ್ತೆಂದರೆ ಹರಟಿದರೂ ಪದ್ಯದಲ್ಲೇ ಹರಟಬೇಕು, ಕಾಲೆಳೆದರೂ ಪದ್ಯದಲ್ಲೇ ಕಾಲೆಳೆಯಬೇಕು, ಒದ್ದರೂ ಪದ್ಯದಲ್ಲೇ ಒದೆಯಬೇಕು [:)]
ಇನ್ನು ಮುಂದುವರೆಯೋಣ. ಮೊದಲಿಗೆ, ಛಂದಸ್ಸು ಅಂದ್ರೆ ಏನು? ಛಂದಸ್ಸು ಅಂದ್ರೆ, ಕವನಕ್ಕೆ ಬೇಕಾದ ಲಯ, ಪ್ರಾಸಗಳ ಕಟ್ಟುಪಾಡು. ಅರೇ, ಒಂದು ನಿಮಿಷ! ಈ ಲಯ ಅಂದ್ರೆ ಏನಪ್ಪಾ?!!
ಈ ಕೆಳಗಿನ ಸಾಲುಗಳನ್ನು ನೋಡಿ (ಜೋರಾಗಿ ಹೇಳಿ, ಬೇಕಿದ್ರೆ ಕೈ ಚಪ್ಪಾಳೆ ಹಾಕಿಕೊಂಡು ಹೇಳಿ):
ಅನಂತದಿಂ ದಿಗಂತದಿಂ
ಅನಂತದಾ ದಿಗಂತದಿಂ|
ಏನಿದು ಧೂಳೀ ಓಹೋ ಗಾಳೀ
ಸುರ್ರನೆ ಬಂತೈ ಸುಂಟರಗಾಳೀ|
ಆಟಕ್ಕುಂಟೂ ಲೆಕ್ಕಕ್ಕಿಲ್ಲಾ|
ಬಂದಾ ಬಂದಾ ಸಣ್ ತಮ್ಮಣ್ಣಾ|
ಬೇಕೇ ಬೇಕೂ
ನ್ಯಾಯಾ ಬೇಕೂ|
ಲಗ್ಗ ಲಗಾ ಲಗಾ ಲಗಾ
ಲಗ್ಗ ಲಗಡಿ ಲಗಾ ಲಗಾ|
ಇಲ್ಲೊಂದು ಕುಣಿತದ ಸ್ಥಿತಿ ಕಾಣುತ್ತದೆ ಅಲ್ಲವೇ? ಅದೇ ಲಯ/rhythm. ಅದು ಹೇಗೆ ಬಂತು? ಹೇಗೆ ಅಂದ್ರೆ, ಕೆಲವು ಅಕ್ಷರಗಳು ಚಿಕ್ಕವು, ಕೆಲವು ಉದ್ದ; ಕೆಲವಕ್ಕೆ ಕಡಿಮೆ ಕಾಲ ತೆಗೆದುಕೊಂಡರೆ ಕೆಲವಕ್ಕೆ ಜಾಸ್ತಿ ಕಾಲ. ಅದಕ್ಕೇ ಅಲ್ಲೊಂದು ಕುಣಿತದ ಲಯ ಮೂಡಿಬರುತ್ತದೆ. ಅನೇಕ ವೇಳೆ ನಮಗೆ ಅರಿವಿಲ್ಲದೇ ನಾವು ಲಯಬದ್ಧವಾಗಿ ಮಾತಾಡಿಬಿಡುತ್ತೇವೆ. ಇನ್ನು ಮೇಲಿನ ಉದಾಹರಣೆ ತಗೊಂಡ್ರೆ, "ಅನಂತ" ಅನ್ನೋ ಪದಾನೇ ನೋಡಿ. ಅ ಎನ್ನುವ ಅಕ್ಷರದ ಎರಡರಷ್ಟು ಸಮಯ ನಂ ಅನ್ನುವ ಅಕ್ಷರಕ್ಕೆ ಬಂತು; ಹಾಗೇ ತ ಎಂಬ ಅಕ್ಷರವು ಅ ಎಂಬ ಅಕ್ಷರದಷ್ಟೇ ಸಮಯ ತೆಗೆದುಕೊಂಡಿತು. ಹೀಗೆ ಒಂದು ಎರಡರಷ್ಟು ಸಮಯ ತೆಗೆದುಕೊಳ್ಳುವ ಅಕ್ಷರಗಳನ್ನು ಯಾವುದೋ ಕ್ರಮದಲ್ಲಿ ಜೋಡಿಸಿದರೆ ಅಲ್ಲಿ ಲಯ ಮೂಡುತ್ತದೆ. ಉದಾಹರಣೆಗೆ ಲ(2)ಗ್ಗ(1) = 3; ಲ(1)ಗಾ(2) = 3; ಲ(1)ಗಾ(2) = 3; ಲ(1)ಗಾ(2) = 3 ಇಲ್ಲಿ ಮೂರುಮೂರಕ್ಷರದ 123,123,123,123 ಎನ್ನುವ ಲಯವನ್ನು ಕಾಣುತ್ತೇವಲ್ಲವೇ (ಮತ್ತೆ ಜೋರಾಗಿ ಓದಿ ನೋಡಿ)?
ಅಂದರೆ ಅಕ್ಷರಗಳನ್ನು ನುಡಿಯುವ ಕಾಲಾವಧಿಯೇ ಲಯಕ್ಕೆ ಮೂಲ ಎಂದಾಯಿತು. ಈ ಕಾಲಾವಧಿಯನ್ನೇ ಮಾತ್ರಾಕಾಲ ಅಂತೀವಿ. ಮಾತ್ರೆ ಎಂದರೆ ಒಂದು ಚಿಟಿಕೆ ಹಾಕುವಷ್ಟು ಕಾಲ (ಮಾತ್ರೆ ಅಂದ್ರೆ tablet ಅನ್ಕೊಂಡೀರಿ ಮತ್ತೆ [:)] ).
ಈ ಅಕ್ಷರಗಳನ್ನು ಎಲ್ಲೂ ನಿಲ್ಲಿಸದೇ ಜೋರಾಗಿ ಹೇಳಿ ನೋಡಿ:
ಅ, ಇ, ಉ, ಋ, ಎ, ಒ
ಕ, ಖ, ಗ, ಘ, ಙ, ಯ, ರ, ಲ, ವ...
ಇವನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲವಷ್ಟೇ ಬೇಕಾಗುವುದು. ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಲಘು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( U ) ಎಂದು ಸೂಚಿಸುತ್ತೇವೆ.
ಇನ್ನು ಇವನ್ನು ಜೋರಾಗಿ ಹೇಳಿ:
ಆ, ಈ, ಊ, ೠ, ಏ, ಐ, ಓ, ಔ, ಅಂ, ಅಃ,
ಕಾ, ಖಾ, ಗಾ, ಘಾ, ಗೀ, ಮೀ, ಯೂ, ಲೇ, ರೌ...
ಇವನ್ನು ಹೇಳಲು ಮೇಲಿನ ಎರಡರಷ್ಟು ಕಾಲ ಬೇಕಾಗುವುದು (ಎರಡು ಚಿಟಿಕೆಯಷ್ಟು ಎನ್ನೋಣ). ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಗುರು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( _ ) ಎಂದು ಸೂಚಿಸುತ್ತೇವೆ.
ಗಮನಿಸಿ: ಯಾವುದಾದರೂ ಒತ್ತಕ್ಷರದ ಹಿಂದಿರುವ ಅಕ್ಷರ ಸಹಜವಾಗಿಯೇ ಎಳೆಯುತ್ತದೆ. ಉದಾಹರಣೆಗೆ, ಅಣ್ಣ. ಇಲ್ಲಿ ಅ ಎನ್ನುವುದು ಒಂದೇ ಚಿಟುಕೆಯಲ್ಲಿ ಪೂರೈಸುವ ಅಕ್ಷರವಾದರೂ ಮುಂದೆ ಣ್ಣ ಇರುವುದರಿಂದ ಅ ಎಂಬ ಅಕ್ಷರ ಆ ಎಂಬಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.
ಈ ಪದಗಳನ್ನು ಜೋರಾಗಿ ಹೇಳಿ ನೋಡಿ: ಅಣ - ಅಣ್ಣ, ಹಿಗು - ಹಿಗ್ಗು; ಬಕ - ಭಕ್ಷ್ಯ - ಇಲ್ಲೆಲ್ಲಾ ಮೊದಲನೆಯ ಪದದಲ್ಲಿ ಅ ಎನ್ನುವ ಅಕ್ಷರ ಮಾಮೂಲಾಗೇ ಬಂತು. ಎರಡನೆಯ ಪದಗಳಲ್ಲಿ ಅ ಎನ್ನುವುದು ಎರಡರಷ್ಟು ಸಮಯ ತೆಗೆದುಕೊಂಡಿತು.
ಆದ್ದರಿಂದ ಒತ್ತಕ್ಷರದ ಹಿಂದಿನ ಅಕ್ಷರವು ಲಘುವಾಗಿದ್ದರೂ ಅದನ್ನು ಗುರುವೆಂದೇ ಲೆಕ್ಕಹಾಕಬೇಕು
ಈ ಸರಣಿಯ ಮುಂದಿನ ಬರಹ ಇಲ್ಲಿದೆ.
Wednesday, December 21, 2011
ಹಾಯ್ಕುಗಳು
ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.
ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:
"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.
"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.
"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.
ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.
"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).
ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.
ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:
ನನ ನನನ
ನನ ನನ ನನನ
ನನ ನನನ
(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)
ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.
ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ (ಮತ್ತೆ ಮೊದಲೇ ಹೇಳಿದಂತೆ, ಇವನ್ನು ನಿಜಾರ್ಥದಲ್ಲಿ ಹಾಯ್ಕು ಎನ್ನಲಾಗುವುದಿಲ್ಲ, ಏಕೆಂದರೆ ಹಾಯ್ಕೊಂದರಲ್ಲಿ ಮುಖ್ಯವಾಗಿ ಇರಲೇ ಬೇಕಾದ ಆ ಒಂದು ಕ್ಷಣವನ್ನು, ಸಾರ್ಥಕಕ್ಷಣವನ್ನು ಚಿತ್ರಪಟದಂತೆ ಹಿಡಿದಿಡುವ ಪಂಚ್ ಲೈನ್ ಇಲ್ಲಿಲ್ಲ - ಕೇವಲ ಹಾಯ್ಕಿನ ಭೌತಿಕ ರೂಪವನ್ನಷ್ಟೇ ಗಮನಿಸುವುದು):
ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು
ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ
ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?
ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!
ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!
ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!
ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ
ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!
ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು
ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್
ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!
ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!
ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ
ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.
ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು
ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು
ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು
ಒಂದಷ್ಟು ಸೀರಿಯಸ್ ಹಾಯ್ಕುಗಳು:
ಎಲೆ ಹುಳಕೆ
ಕಪ್ಪೆ ಹಾರಲು ತಡೆ
ಆಡುವ ಹೆಡೆ
ತುಟಿ ಚಾಚಿದೆ
ಮುತ್ತೆಲ್ಲೋ ಉದುರಿದೆ
ಮೆದೆಯ ಸೂಜಿ
ಒಂದು ಎರಡು
ಬಾಳೆಲೆಯ ಹರಡು
ಚುರುಗುಟ್ಟಿದೆ
ಹುಲಿ ಹಸಿದು
ನೆಗೆದಿದೆ; ಗೋವಿಗೋ
ಕರು ಯೋಚನೆ
ರವಿ ಮುಳುಗಿ
ಗಡಂಗು ಕರೆದಿದೆ
ಖಾಲಿ ಜೇಬು
ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣೊರಸಿದೆ
ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣರಸಿದೆ
ಎಂಜಲು ರೊಟ್ಟಿ
ತುಪ್ಪದೊಳಗೆ ಬಿತ್ತು
ಕೇಜಿ ಐನೂರು
Tuesday, November 29, 2011
ಭಾವಸಿಂಚನ - ಪುಸ್ತಕ ಬಿಡುಗಡೆ ಸಮಾರಂಭ
ಆ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ (ಚಿತ್ರ ಕೃಪೆ, ತಂಡದ ಸದಸ್ಯರು)
ಆಸಕ್ತರು ಈ ಪುಸ್ತಕಗಳನ್ನು ಬೆಂಗಳೂರಿನ ಸಪ್ನಾ ಪುಸ್ತಕ ಮಳಿಗೆ ಮತ್ತಿತರ ಕಡೆಗಳಲ್ಲಿ ಪಡೆಯಬಹುದು. ಯಾವುದೇ ಕನ್ನಡ ಪುಸ್ತಕದ ಖರೀದಿಯೊಂದಿಗೆ ಈ ಪುಸ್ತಕ ಉಚಿತವಾಗಿ ದೊರೆಯುತ್ತದೆ ಎಂದು ಸಮುದಾಯದ ಪ್ರಕಟಣೆ ಹೇಳುತ್ತದೆ.
Monday, November 21, 2011
ಕೆಲವು ವಚನಗಳು
ಕಾಗೆ ಕರುಬಿ ಮಾವಿನ ಚಿಗುರುಂಬೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.
(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ
Sunday, November 20, 2011
ಭಾವಸಿಂಚನ - ಕವಿಗಳಲ್ಲದವರ ಕವನಗಳು
Thursday, October 27, 2011
ಬೆಳಕಿನ ಹಾಡು
Wednesday, October 12, 2011
ಹೂರಣದಿ ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು
Sunday, October 2, 2011
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು
"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ ಸವಾಲಿತ್ತು. ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:
ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.
ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
ಅನುಮಾನವಿನಿತಿಲ್ಲ ಜೀಯನೊಲವಿನೊಳು
ಧನವದುವೆ ಕೌರವನ ಮಾನಧನ ನಂಬಿಕ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.
ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
ಮನೆಗೆ ಹಿರಿಗಂಬದಾಲಂಬ ಸೊಗಸು
ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.
ಜನಕಗಲ್ಲದೆ ಶುನಕಕಹುದೆ ರಾಮನ ನಂಟು
ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ-
ತನ ದೊಡ್ಡತನದಲ್ಲಿ ಶೋಭಿಸಿಹುದು
ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.
Friday, September 23, 2011
ಪ್ರಭಾತ ಚತುರ್ಮುಖ
(೧)
ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
ಸಾರೆ ಗಗನಾಂಗನೆಯ ಕೆಂಪು ಕದಪು|
ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
ಕೋರಿದುವು ಮಂಗಳದ ಮುಂಬೆಳಗನು||
(೨)
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||
(೩)
ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
ರಂಗೋಲಿ ನಗುತಲಿವೆ ಅಂಗಳದೊಳು|
ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
ಮುಂಗಡೆಯೆ ಸಾಗುತಿದೆ ಏನು ಬೇಕು?
(೪)
ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
ಗಾಗೆ ಜಗವೆದ್ದು ಚಡಪಡಿಸುತಿಹುದು|
ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||
Friday, September 9, 2011
ದ್ವೈತ - ಅದ್ವೈತ: ಒಂದು ಚಿಂತನೆ
ಇನ್ನು ದ್ವೈತದ ವಿಷಯಕ್ಕೆ ಬಂದರೆ, ಇದೂ ಮೂಲತಃ ದ್ವೈತಸಿದ್ಧಾಂತವೆಂದು ಕರೆಯಲ್ಪಟ್ಟದ್ದಲ್ಲ. ಇದರ ಮೂಲ ಹೆಸರು "ತತ್ವವಾದ". ದ್ವೈತಿಗಳು ಅದ್ವೈತ ಸಿದ್ಧಾಂತವನ್ನು ಮಾಯಾವಾದವೆಂದು ನಿರ್ದೇಶಿಸುತ್ತಾರೆ (ಜಗತ್ತು ಮಾಯೆಯೆಂಬುದರಿಂದ). ಅದಕ್ಕೆ ಪ್ರತಿಯಾಗಿ ಈ ವಾದದ ಮುಖ್ಯನಿಲುವು ಸತ್ಯತ್ವ. ಬ್ರಹ್ಮನಷ್ಟೇ ಅಲ್ಲ, ಬ್ರಹ್ಮನಿಂದ ನಿರ್ಮಿತವಾದ ಜಗತ್ತೂ, ಅವುಗಳ ನಡುವಿನ ಸಾಮ್ಯ, ವೈಷಮ್ಯ, ತಾರತಮ್ಯಗಳೂ, ಸ್ವರೂಪ-ಸ್ವಭಾವಗಳೂ ಸತ್ಯ ಹಾಗೂ ನಿತ್ಯವೆಂದೇ ಸಾರುವುದರಿಂದ ಇದು ತತ್ವವಾದ. ಈ ತತ್ತ್ವವಾದವೇ ಆರ್ಷೇಯದರ್ಶನವೆಂದೂ, ಕಾಲಕ್ರಮದಲ್ಲಿ ಬೇರೆಬೇರೆ ಸಿದ್ಧಾಂತಗಳ ವಿಜೃಂಭಣೆಯಿಂದ ತತ್ವವಾದದ ಬೆಳಕು ಮರೆಯಾಯಿತೆಂದೂ, ಮುಂದೆ ಹದಿಮೂರನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರು (ಇವರ ಆಶ್ರಮನಾಮ ಪೂರ್ಣಪ್ರಜ್ಞತೀರ್ಥರು; ಬಳಿತ್ಥಾಸೂಕ್ತದ ಮಧ್ವ ಆಧವೇ ಎಂಬ ವಾಕ್ಯದಿಂದ ಮಧ್ವಾಚಾರ್ಯರೆಂದು ಪ್ರಸಿದ್ಧಿ - "ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ") ಈ ಮರೆಯಾಗಿದ್ದ ತತ್ವವಾದವನ್ನು ಪುನರುಜ್ಜೀವಿಸಿ ಪ್ರಚುರಗೊಳಿಸಿದರೆಂದೂ ದ್ವೈತ ಸಂಪ್ರದಾಯ ನಂಬುತ್ತದೆ. ಆದ್ದರಿಂದ ಇದಕ್ಕೆ ಪೂರ್ಣಪ್ರಜ್ಞದರ್ಶನವೆಂದೂ ಹೆಸರು. ೧೩-೧೪ನೆಯ ಶತಮಾನದ ಮಾಧವಾಚಾರ್ಯರ "ಸರ್ವದರ್ಶನ ಸಂಗ್ರಹ"ದಲ್ಲೂ ಈ ದರ್ಶನ ಪೂರ್ಣಪ್ರಜ್ಞದರ್ಶನವೆಂದೇ ಕರೆಯಲ್ಪಟ್ಟಿದೆ. ದ್ವೈತಸಿದ್ಧಾಂತವೆಂಬ ಹೆಸರು ಮೇಲಿನ ಆತ್ಮೈಕತ್ವದ (ಅದ್ವೈತದ) ಪ್ರತಿಯಾಗಿ ಬಳಕೆಗೆ ಬಂದ ವ್ಯವಹಾರವಿರಬೇಕು. ಶಂಕರರ ಸೂತ್ರಭಾಷ್ಯಗಳಲ್ಲೂ ದ್ವೈತಿಗಳ ಉಲ್ಲೇಖ ಬಂದಿದ್ದರೂ ಸ್ಪಷ್ಟವಾಗಿಯೇ ಅದು ಮಧ್ವಸಿದ್ಧಾಂತದ ಉಲ್ಲೇಖವಲ್ಲ, ಬದಲಿಗೆ ಅದು ಸಾಂಖ್ಯ ಮತ್ತು ಯೋಗದರ್ಶನಗಳನ್ನು ಕುರಿತದ್ದು (ದ್ವೈತಿನೋ ಹಿ ತೇ ಸಾಂಖ್ಯಾ ಯೋಗಾಶ್ಚ - ಸೂತ್ರ ಭಾಷ್ಯ.೨.೧.೩). ದ್ವೈತವೆಂಬಲ್ಲಿ ಒತ್ತು ಎರಡು ಎಂಬ ಸಂಖ್ಯೆಯ ಮೇಲಲ್ಲ, ಬದಲಿಗೆ ನಾನಾತ್ವದ ಮೇಲೆ.
- ಹರಿಃ ಪರತರಃ
- ಸತ್ಯಂ ಜಗತ್
- ತತ್ತ್ವತೋ ಭೇದಃ
- ಜೀವಗಣಾಃ ಹರೇರನುಚರಾಃ
- ನೀಚೋಚ್ಛ ಭಾವಂ ಗತಾಃ
- ಮುಕ್ತಿಃ ನೈಜ ಸುಖಾನುಭೂತಿಃ, ಅಮಲಾ
- ಭಕ್ತಿಶ್ಚ ತತ್ಸಾಧನಂ
- ಅಕ್ಷಾದಿ ತ್ರಿತಯಂ ಹಿ ಪ್ರಮಾಣಂ
- ಅಖಿಲಾಮ್ನಾಯೈಕ ವೇದ್ಯೋ ಹರಿಃ
- ಹರಿಯೇ ಪರದೈವ;
- ಜಗತ್ತು ಸತ್ಯ;
- ಭೇದವು ಬ್ರಹ್ಮ-ಜಗತ್ತುಗಳ ಸ್ವಭಾವ (ತತ್ವ)ದಲ್ಲೇ ಇದೆ. ಆಚಾರ್ಯರು ಪಂಚಭೇದಗಳನ್ನು ನಿರೂಪಿಸುತ್ತಾರೆ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡ;
- ಸಕಲಜೀವರೂ ಹರಿಯ ಅನುಚರರು (ಇಲ್ಲಿ ಅನುಚರ ಅನ್ನುವುದನ್ನು ಅದರ ನಿಜ ಅರ್ಥದಲ್ಲಿ ಬಳಸಲಾಗಿದೆ, ಹರಿಯ ಅನುವರ್ತಿ, ವಶವರ್ತಿ, ಅಧೀನ ಎಂಬ ಅರ್ಥದಲ್ಲಿ, ಜೊತೆಗಾರರು ಎಂಬರ್ಥದಲ್ಲಲ್ಲ);
- ಮೇಲೆ ಹೇಳಿದ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡಗಳಲ್ಲಿ ಕೇವಲ ಭೇದವಷ್ಟೇ ಅಲ್ಲ ತಾರತಮ್ಯ ಕೂಡ ಇದೆ; ಒಂದು ಮತ್ತೊಂದಕ್ಕೆ ಸಮನಲ್ಲ (ಅಸಮಭವ ಕಾಗಿನೆಲೆಯಾದಿಕೇಶವರಾಯ - ಕನಕದಾಸರು);
- ಕುಂದಿಲ್ಲದ (flawless) ನೈಜ ಸುಖಾನುಭೂತಿಯೇ ಮುಕ್ತಿ (ಇಲ್ಲಿ ನೈಜ ಎನ್ನುವುದನ್ನು ಜೀವದ ಸ್ವಭಾವಕ್ಕೆ ನಿಜವಾದ (ತಕ್ಕುದಾದ) ಎಂದು ಅರ್ಥೈಸಲಾಗುತ್ತದೆ. ಅಂದರೆ ಮುಕ್ತಿ ಸಹ ಎಲ್ಲ ಜೀವರಿಗೂ ಒಂದೇ ಅಲ್ಲ, ಬೇರೆಬೇರೆ - ಅದರ ನೆಲೆ ಬೇರೆ, ಆಳ-ಅಗಲಗಳು ಬೇರೆ, ತೀವ್ರತೆ ಬೇರೆ ಇತ್ಯಾದಿ) ಆದ್ದರಿಂದ ಮೇಲೆ ಹೇಳಿದ ಭೇದವೂ ತಾರತಮ್ಯವೂ ಮುಕ್ತಿಯಲ್ಲೂ ಇರುತ್ತದೆ. ಜೀವರು ಮಾತ್ರ ಮುಕ್ತಿಯೋಗ್ಯರು, ಜಡವಲ್ಲ. ಮತ್ತೆ ಜೀವರಲ್ಲಿ ಅವರವರ ಸ್ವಾಭಾವಿಕ ಭೇದಕ್ಕನುಗುಣವಾಗಿ (ತತ್ತ್ವತೋ ಭೇದಃ) ಅವರವರ ಮುಕ್ತಿಯೋಗ್ಯತೆಯೂ ನಿರ್ಧರಿತವಾಗುತ್ತದೆ. ಮತ್ತೆ ಇದರಲ್ಲಿ ಸತ್ವ, ರಜಸ್ ತಮೋಗುಣಗಳ ವರ್ಗೀಕರಣ ಬರುತ್ತದೆ, ಮತ್ತು ಅದಕ್ಕನುಗುಣವಾಗಿ ಜೀವವೊಂದು ತಮೋಯೋಗ್ಯವೋ, ನಿತ್ಯಸಂಸಾರಿಯೋ ಅಥವಾ ಮುಕ್ತಿಯೋಗ್ಯವೋ ಇರಬಹುದು ("ಸಾತ್ವರಿಗೆ ಸುಖ; ಸಂಸಾರ ಮಿಶ್ರರಿಗೆ; ಅಧಮ ಜನರಿಗಪಾರ ದುಃಖಗಳೀವ" - ಹರಿಕಥಾಮೃತಸಾರ, ಜಗನ್ನಾಥದಾಸರು);
- ಹೀಗೆ ಮುಕ್ತಿಯೋಗ್ಯವಾದ ಜೀವಿಗೆ ಮುಕ್ತಿ ತಾನೇತಾನಾಗಿ ದೊರೆಯುವುದಿಲ್ಲ. ಅದಕ್ಕೆ ಹರಿಕೃಪೆ ಬೇಕು. ಅದಕ್ಕಿರುವ ಮಾರ್ಗವೆಂದರೆ, ಭಕ್ತಿ (ಹರಿಯ ಗುಣಗಳ ಜ್ಞಾನದಿಂದ ಭಕ್ತಿಯ ಹುಟ್ಟು - ಜ್ಞಾನಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ; ದೀನಜನಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀಕೃಷ್ಣ ನೋಡಿ ತಾ ನಲಿಯೆ - ವ್ಯಾಸರಾಜರು)
- ಇದಕ್ಕೆ ಪ್ರಮಾಣವೇನು? ಅಕ್ಷಾದಿ ತ್ರಿತಯಂ ಹಿ. ಅಂದರೆ ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಈ ಮೂರೇ ಪ್ರಮಾಣ. ಇಲ್ಲೂ ಆಗಮೈಕಪ್ರಮಾಣವೆನ್ನುವ ಬದಲು ಪ್ರತ್ಯಕ್ಷ ಮತ್ತು ಆಗಮಗಳಿಗೆ ಸಮಾನ ಪ್ರಾಮುಖ್ಯ ಕಲ್ಪಿಸಿದ್ದಾರೆ ಆಚಾರ್ಯರು. ಪ್ರತ್ಯಕ್ಷ ಮತ್ತು ಆಗಮಪ್ರಮಾಣಗಳಲ್ಲಿ ವಿರೋಧವಿರದು ಎಂದು ಅಭಿಪ್ರಾಯ. ಮತ್ತೂ ವಿರೋಧ ಕಂಡುಬಂದರೆ ಲೌಕಿಕ ವಿಷಯಗಳಲ್ಲಿ ಪ್ರತ್ಯಕ್ಷವೂ ಅಲೌಕಿಕ ವಿಷಯಗಳಲ್ಲಿ ಆಗಮವೂ ಪ್ರಾಮುಖ್ಯವನ್ನು ಪಡೆಯುವುದು (ಇದು ನನ್ನ ಊಹೆ, ತಿಳಿದವರು ತಿದ್ದಬೇಕು). ಹಾಗೆ ಯಾವುದೇ ಪ್ರತ್ಯಕ್ಷವಿಷಯವನ್ನೋ ಆಗಮವಾಕ್ಯವನ್ನೋ ಪ್ರಮಾಣವೆಂದು ಒಪ್ಪಿಕೊಳ್ಳುವ ಮೊದಲು ಆ "ಪ್ರಮಾಣ" ಶುದ್ಧವಿರಬೇಕು (ಬೇರೆಬೇರೆ ಪ್ರತ್ಯಕ್ಷ ಪ್ರಮಾಣಗಳಲ್ಲಿ ವಿರೋಧಾಭಾಸವಿರಬಾರದು; ಹಾಗೇ ಆಗಮವಾಕ್ಯಗಳ "ಪ್ರಮಾಣ"ಗಳಲ್ಲಿ ವಿರೋಧಾಭಾಸವಿರಬಾರದು. ಅಪೌರುಷೇಯವಾದ ವೇದವಾಕ್ಯಗಳಲ್ಲಿ ವಿರೋಧವಿರಲು ಸಾಧ್ಯವಿಲ್ಲ, ಆದರೆ ಮೇಲ್ನೋಟಕ್ಕೆ ಕಾಣಬರುವ ವಿರೋಧಾಭಾಸಗಳನ್ನು ಅನುಮಾನ ಮತ್ತು ಬೇರೆ ಪ್ರಮಾಣಗಳ ಮೂಲಕ ಸಮನ್ವಯಿಸಿಕೊಳ್ಳಬೇಕು, ಸಮನ್ವಯವೊದಗುವಂತೆ ಅರ್ಥೈಸಬೇಕು).
- ಹರಿಯೇ ಸಕಲ ವೇದಪ್ರತಿಪಾದ್ಯನಾದ, ಸತ್ಯಸ್ವರೂಪನಾದ ಬ್ರಹ್ಮ.
Tuesday, September 6, 2011
Sunday, August 14, 2011
ವಂದೇ ಮಾತರಂ (ತಾಯೇ ಬಾಗುವೆ)
ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶಾಮಲಾಂ ಮಾತರಂ
ವಂದೇ ಮಾತರಂ...
ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ವಂದೇ ಮಾತರಂ...
====================
ಇದರ ಕನ್ನಡ ಅವತರಣಿಕೆ ಇಲ್ಲಿದೆ. ಮೂಲದ ಸೊಬಗನ್ನು, ಅಷ್ಟೇ ತುಸುಮಾತುಗಳಲ್ಲಿ ಕನ್ನಡದಲ್ಲಿ ಹಿಡಿದಿಡುವುದು ಕಷ್ಟವೇ ಸರಿ. ಆದರೂ ಮೂಲದ ಭಾವವನ್ನಾದರೂ ಹಿಡಿದಿಟ್ಟಿದ್ದೇನೆನಿಸುತ್ತದೆ. ಭಾವಾನುವಾದದ ಅನುಕೂಲಕ್ಕಾಗಿ, ಮೂಲದ ದ್ವಿತೀಯಾ ವಿಭಕ್ತಿಯನ್ನು ("ಅನ್ನು") ಕನ್ನಡದಲ್ಲಿ ಸಂಬೋಧನೆಯಾಗಿ ಬದಲಿಸಿಕೊಂಡಿದ್ದೇನೆ. ಗೆಳೆಯ ಭರತಕುಮಾರರು ಗೂಗಲ್ ಬಜ಼್ ನಲ್ಲಿ "ನಲ್ನೀರು ನಲ್ವಣ್ಣು ತಾಯಿಯೇ ಬಾಗುವೇ ತಾಯಿಯೇ" ಎಂದು ಹೇಳಿ ಸುಮ್ಮನಾಗಿದ್ದರು. ಇಲ್ಲಿನ ಅನುವಾದಕ್ಕೆ ಈ ಒಂಟಿ ಸಾಲೇ ಸ್ಫೂರ್ತಿ. ಇದಕ್ಕಾಗಿ ಭರತಕುಮಾರರಿಗೆ ಧನ್ಯವಾದ.
ತಾಯೇ ಬಾಗುವೆ
ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...
ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ
ತಾಯೇ ಬಾಗುವೆ...
ಇದರ ಧ್ವನಿಮುದ್ರಿಕೆಯನ್ನು ಸ್ವಾತಂತ್ರ್ಯದಿನಾಚರಣೆಯ ಈ ದಿನವೇ ಪ್ರಕಟಿಸಬೇಕೆಂದಿದ್ದೆ, ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಪ್ರಕಟಿಸುತ್ತೇನೆ.
ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ಟಿಪ್ಪಣಿ - ೧೯/೦೯/೨೦೧೮
=================
ಮೇಲಿನ ಅನುವಾದದಲ್ಲಿ ಮೂಲಕ್ಕೆ ಹತ್ತಿರವಲ್ಲದ ಒಂದು ಸಾಲನ್ನು ಗಮನಿಸಬೇಕು - "ಮುಂಜಾವದ ಬಿಳಿ ಸೋನೆಯ ಚುಮಚುಮವೇ" ಮೂಲದಲ್ಲಿರುವುದು "ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ" (ತುಂಬು ಬೆಳುದಿಂಗಳಿಂದ ಪುಳಕಿತವಾದ ಇರುಳುಗಳನ್ನು ಹೊಂದಿರುವವಳೇ). "ಬೆಳುದಿಂಗಳ ರಾತ್ರಿ"ಯು ಅನುವಾದದಲ್ಲಿ "ಮುಂಜಾವದ ಬಿಳಿ ಸೋನೆಯ ಚುಮಚುಮ" ಆಗಿದ್ದು ವಿಚಿತ್ರ, ಆದರೆ ಸ್ವಾರಸ್ಯದ ವಿಷಯ - ಯಾವುದೋ ಒಂದು ಲಹರಿಯಲ್ಲಿ ಬಂದ ಅನುವಾದವದು; ಮೂಲದ ಅರ್ಥ-ಭಾವಗಳಿಗಿಂತ ನನ್ನದೇ ಆ ಕ್ಷಣದ ಲಹರಿಯನ್ನಾಧರಿಸಿ ಹೊಮ್ಮಿದ್ದು. ಅದಕ್ಕೆ ತಕ್ಕಂತೆ ಮೂಲದಿಂದ ಚಿಕ್ಕದೊಂದು ಬದಲಾವಣೆಯನ್ನು ಮಾಡಿಕೊಂಡೆನೆಂದು ನೆನಪು. ದಿನಾ ಬೆಳಗಿನ ಜಾವ ರೇಡಿಯೋದಿಂದ ಬಿತ್ತರಗೊಳ್ಳುತ್ತಿದ್ದ ವಂದೇಮಾತರಂ ನನ್ನ ಬಾಲ್ಯಕಾಲದ ಬೆಳಗಿನ ಜಾವದ ಮಧುರ ನೆನಪುಗಳಲ್ಲೊಂದು. ಇದನ್ನು ಅನುವಾದಿಸುವಾಗ ಆ ನೆನಪಿನ ಲಹರಿಯೇ ನನ್ನ ಮನದಲ್ಲಿದ್ದುದು. ಯಾಮಿನಿಯು ಇರುಳ್ವೆಣ್ಣಾಗುವುದಕ್ಕಿಂತ ಸುಂದರ ಮುಂಬೆಳಗಿನ ಯಾಮವಾಗುವುದು, ಜ್ಯೋತ್ಸ್ನೆಯ ಜಾಗವನ್ನು ಬೆಳಗಿನ ಜಾವದ ಬೆಳ್ಳನೆಯ ಹಿಮದ ಜವನಿಕೆಯು ತುಂಬುವುದೂ ಹೆಚ್ಚು ಸೊಗಸಾಗಿ ಕಂಡಿತ್ತು. "ಪುಲಕಿತ" ಶಬ್ದವು ಅದಕ್ಕಿಂತ ಇಲ್ಲೇ ಹೆಚ್ಚು ಸಾರ್ಥಕವಾಗುವುದೆಂದೂ, ಈ ಪ್ರತಿಮೆಯು ಮೂಲಪ್ರತಿಮೆಗಿಂತ ಕವಿಯ ಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ಧ್ವನಿಸಬಹುದೆಂದೂ ಎನಿಸಿ ಮೇಲ್ಕಂಡ ಮಾರ್ಪಾಟು ಮಾಡಿಕೊಂಡೆ. ಆಮೇಲೆ ಅದರ ಬಗ್ಗೆ ಹೆಚ್ಚು ಚಿಂತಿಸಹೋಗಿರಲಿಲ್ಲ. ಆದರೆ ಮೊನ್ನೆ ಅದರ ಇಂಗ್ಲಿಷ್ ಅನುವಾದವನ್ನು ಮಾಡಿದಾಗ (ಅನುವಾದವು ಈ ಬರಹದ ಕೊನೆಯಲ್ಲಿದೆ), ಅದೂ ಈ ಕನ್ನಡಾನುವಾದದ ಜಾಡನ್ನೇ ಹಿಡಿದುದನ್ನು ಗಮನಿಸಿ ನನ್ನ ಗಮನ ಸೆಳೆದವರು ವಿದ್ವನ್ಮಿತ್ರರಾದ ಶ್ರೀ ಶ್ರೀಕಾಂತಮೂರ್ತಿ. ಅಂತೆಯೇ ಇಂಗ್ಲಿಷ್ ಅನುವಾದವನ್ನು ತಿದ್ದಿದೆ, ಆದರೆ ಕನ್ನಡದ ಅನುವಾದ ಆಗ ಅದು ಬಂದ ಹಾಗೆಯೇ ನನಗೆ ಹೆಚ್ಚು ಪ್ರಿಯವೆನಿಸಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ. ಆದರೆ ಮೂಲಕ್ಕನುಗುಣವಾಗಿ ತಿದ್ದಿದ ಅನುವಾದ ಇಲ್ಲಿದೆ (ಎರಡನೆಯ ಚರಣದ ಮೊದಲ ಸಾಲನ್ನು ಗಮನಿಸಿ):
ತಾಯೇ ಬಾಗುವೆ
ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...
ಬೆಳುದಿಂಗಳ ಹಾಲ್ಜೊನ್ನದ ಚುಮಚುಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ
ತಾಯೇ ಬಾಗುವೆ...




