Monday, January 9, 2012

ಚೊಚ್ಚಿಲ ಕಂದನನ್ನು ಕಾಯುತ್ತಾ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ವಿವಿಧ ಛಂದಸ್ಸುಗಳಲ್ಲಿ "ಚೊಚ್ಚಿಲ ಬಸಿರಿನ" ಬಗ್ಗೆ ಪದ್ಯಗಳನ್ನು ರಚಿಸುವ ಆಹ್ವಾನವಿತ್ತು. ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲವೆನ್ನುವುದೇನೋ ನಿಜ. ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರ್)ಉಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ-ಬುಡುಬುಡಿಕೆ’ಕಂಡುಬಂದರೆ ತಾಯಂದಿರು ಮನ್ನಿಸಿ.
ಪಂಚಮಾತ್ರಾ ಚೌಪದಿ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.

ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ

ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್

ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್

ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಕೊ: ಗೆಳೆಯ ಚಂದ್ರಮೌಳಿಯವರು ಮೇಲಿನ ಉತ್ಫಲಮಾಲಾ ವೃತ್ತದ ಎರಡನೆಯ ಸಾಲಿನಲ್ಲಿ ಮೂರಕ್ಷರ ಹೆಚ್ಚಾಗಿ ಬಂದಿದೆಯೆಂಬುದನ್ನು ಗಮನಿಸಿದರು. ಇದನ್ನು ಸರಳವಾಗಿ ಸರಿಪಡಿಸಬಹುದಾದರೂ, ಅದೇಕೋ ಇದನ್ನು ಸರಿಪಡಿಸಲು ಮನಸ್ಸೊಪ್ಪುತ್ತಿಲ್ಲ. ಈ ಹೆಚ್ಚಿನ ಗಣವನ್ನು ಗರ್ಭಸ್ಥ ಶಿಶುವಿನ ಪ್ರತೀಕವೆಂದು ಹಾಗೆಯೇ ಉಳಿಸಿಕೊಳ್ಳುತ್ತೇನೆ:

ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ

ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?

ಪದ್ಯದಲ್ಲೊಂದು ಗಣ ಮೀರಿದರೆ ಛಂದಸ್ಸು ಕೆಡುವುದು, ನಿಜ. ಕಾಲಿಗೆ ಐದೇ ಬೆರಳಾದರೂ ಅಪರೂಪಕ್ಕೆ ಆರು ಬೆರಳಿರುವುದಿಲ್ಲವೇ? ಅದೇನು ಚಂದ್ರಹಾಸನ ಅಂದಗೆಡಿಸಿತೇ? ಮೀರಿದ ಭಾರವು ಬಸಿರಿನ ಶೋಭೆಯನ್ನು ಹೆಚ್ಚಿಸುವುದಲ್ಲದೇ ಕೆಡಿಸುವುದೇ? ಬ್ರಹ್ಮಾದಿಗಳೇ ಮರೆತು ಬೆರಳಿನ ಲೆಕ್ಕವನ್ನು ಹೆಚ್ಚು ಕಡಿಮೆ ಮಾಡುವಾಗ ಮರೆವು ಮನುಜನಿಗೆ ಸಹಜವಲ್ಲವೇ? :)

13 comments:

ಚುಕ್ಕಿಚಿತ್ತಾರ said...

ಮ೦ಜುನಾಥರೆ..
ನಿಮ್ಮ ಮಗುವಿನ ಬಸಿರನ್ನು ನೀವೆ ಅನುಭವಿಸಿದ್ದೀರೇನೋ.. ಅನ್ನುವಷ್ಟು ಸು೦ದರವಾಗಿ ನಿಮ್ಮ ಕಲ್ಪನಾಸ್ವಾತ೦ತ್ರ್ಯವನ್ನು ಉಪಯೋಗಿಸಿಕೊ೦ಡಿದ್ದೀರ..! ಉತ್ಫಲಮಾಲಾ ದಲ್ಲಿಯ ಭಾವನೆ ಪ್ರತೀ ಬಸಿರಿನಲ್ಲಿಯೂ ಕಾಣಿಸಿಕೊಳ್ಳುವುದೇನೋ ನಿಜ.. ಇದೊ೦ದು ತರದ ಸ೦ತಸದ ಬೇಗುದಿ ಅನ್ನಬಹುದೇನೊ..?

ರಾಘವೇಂದ್ರ ಜೋಶಿ said...

ಈಗಷ್ಟೇ ನಿಮ್ಮ ಎರಡೂ ಬರಹಗಳನ್ನು ನೋಡಿದೆ.
ಗುರು-ಲಘುಗಳ ಪಾಠ ಚೆಂದ ಇದೆ.
ಕವಿತೆಗೆ ಒಲಿಯುವ ತಾಕತ್ತು ಎಲ್ಲಿಂದ ಉದ್ಭವವಾಗುತ್ತದೆ?ಎನ್ನುವ ಪ್ರಶ್ನೆಗೆ ಒಂದು ಅಕಾಡೆಮಿಕ್ ಉತ್ತರವಾಗಿ ನಿಮ್ಮ ಬರಹಗಳಿವೆ.
No doubt,it's interesting!

sunaath said...

ಕಲ್ಪನೆಯೇ OK, ಸ್ವಾನುಭವ ಯಾಕೆ? ಎನ್ನುವದು ಈಗ ಅರ್ಥವಾಯಿತು. ಕನ್ನಡದ ಜಾನಪದ ದ್ವಿಪದಿಯೊಂದರಲ್ಲಿ ಪ್ರಸವವೇದನೆಯ ಬಗೆಗೆ ಅತ್ಯಂತ ಸುಂದರ ವರ್ಣನೆ ಹೀಗಿದೆ:
"ಮಗ ನಿನ್ನ ಹಡೆವಾಗ
ಮುಗಿಲಿಗೇರ್ಯಾವೊ ಜೀವ!’
‘ಮುಗಿಲಿಗೆ ಏರುವವು ಜೀವ’ದ ಶ್ಲೇಷೆ ಅದ್ಭುತವಾಗಿದೆ. Agony and Ecstasy of the childbirth ಅನ್ನು ಇಷ್ಟು ಸಮರ್ಥವಾಗಿ ವರ್ಣಿಸಿದ್ದನ್ನು ನಾನು ಬೇರೆಲ್ಲೂ ನೋಡಿಲ್ಲ.

Keshav.Kulkarni said...

ಅಹಾ! ತುಂಬಾ ಚೆನ್ನಾಗಿವೆ!

ಸೀತಾರಾಮ. ಕೆ. / SITARAM.K said...

ತಮ್ಮ ಕಲ್ಪನಾಸ್ವಾತಂತ್ರವನ್ನ ಸದುಪಯೋಗಿಸಿ, ತಮ್ಮ ಕಾವ್ಯ ಚತುರತೆಯಲ್ಲಿ ಹಲವಾರು ಪ್ರಾಕಾರದಲ್ಲಿ ಮೊದಲ ತಾಯ್ತನದ ತಯಭಾವ ಅದ್ಭುತವಾಗಿ ಹೊಸೆದಿದ್ದಿರಾ...

Subrahmanya said...

Wonderfull !

Badarinath Palavalli said...

ಮೇಸ್ಟ್ರೇ ನಮಸ್ಕಾರ,

ನಿಮ್ಮ ಕನ್ನಡ ಪಾಠಗಳಿಂದ ನಮಗೆ ಬಹಳ ಉಪಯೋಗಗಳಾಗುತ್ತಿವೆ.

ಈ ಪೋಸ್ಟ್ ಸಹ ನಮಗೆ ಉಪಯುಕ್ತ.

ನನ್ನ ಬ್ಲಾಗಿಗೂ ಬನ್ನಿರಿ.

Manjunatha Kollegala said...

ಚುಕ್ಕಿ ಚಿತ್ತಾರ,

ಕವಿಯ ಲಹರಿಗೆ ನೈಜತೆಯ authentication ಕೊಟ್ಟಿದ್ದಕ್ಕೆ ಧನ್ಯವಾದ.

Manjunatha Kollegala said...

RJ, Glad that you found it interesting. "ಕವಿತೆಗೆ ಒಲಿಯುವ ತಾಕತ್ತು" ಎಷ್ಟು ಸುಂದರವಾಗಿ ಕವಿತೆ ಹುಟ್ಟುವುದರ ’ಇನ್ನೊಂದು’ ಆಯಾಮವನ್ನು ತೋರಿಸಿದಿರಿ! ಕವಿತೆಯನ್ನು ಒಲಿಸಿಕೊಳ್ಳುವ ತಾಕತ್ತು ಕವಿಯಲ್ಲಿದೆಯೇ ಅನ್ನೋದೇ ಸಾಮಾನ್ಯ ಪ್ರಶ್ನೆ, ಆದರೆ ಕವಿತೆಗೇ ಕವಿಯನ್ನು ಒಲಿಯುವ ತಾಕತ್ತು ಇರಬೇಕು ಅನ್ನೋದು ಅದರ ಇನ್ನೊಂದು ಮುಖ. ಈ ತಾಕತ್ತು ಕವಿತೆಗೆ ಕವಿಯ passion ನಿಂದಲೇ ಬರೋದು ಅನ್ನೋದು ನನ್ನ ಅನಿಸಿಕೆ.

Manjunatha Kollegala said...

ಸುನಾಥರೇ, "ಕಲ್ಪನೆಯೇ ಓಕೆ, ಸ್ವಾನುಭವ ಯಾಕೆ"? ಧನ್ಯವಾದ. ಜನಪದ ಸಾಹಿತ್ಯ ತನ್ನ ಮಿಂಚಿನಂಥಾ ಕಾವ್ಯಗುಣದಿಂದ ಮನಸೆಳೆಯುವುದು ಸುಳ್ಳಲ್ಲ. ಶಿಷ್ಟ ಕಾವ್ಯವೂ ’ಜನ’ಪದದ ’ಸಂಸ್ಕೃತ’ರೂಪವೇ ತಾನೆ.

Manjunatha Kollegala said...

ಕೇಶವ್, ಸೀತಾರಾಮ,

ಧನ್ಯವಾದ. ಬರುತ್ತಿರಿ.

Manjunatha Kollegala said...

Subhrahmanya, thanks for liking it.

Manjunatha Kollegala said...

ಬದರೀನಾಥರೇ, ಧನ್ಯವಾದ. ನನ್ನ ಕನ್ನಡ ’ಪಾಠ’ಗಳಿಂದ ಕಿಂಚಿತ್ತಾದರು ಉಪಯೋಗವಾಗುವುದಾದರೆ ನಾನು ಧನ್ಯ.