Sunday, September 12, 2010

ಪರಪ್ಪನ ಅಗ್ರಹಾರ

ಇಲ್ಲ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಗೆಗಿನ ಲೇಖನವಲ್ಲ ಇದು.

ಗೂಗಲ್ ಬಝ್ ನಲ್ಲಿ ಗೆಳೆಯ ಬರತ್ ಕುಮಾರ್ "ಪರಪ್ಪನ ಅಗ್ರಹಾರ"ದ ಮೂಲದ ವಿಶ್ಲೇಷಣೆ ಮಾಡಿದ್ದರು. ಅವರ ಪ್ರಕಾರ:

ಪಾರ್ = ನೋಡಿಕೊಳ್ಳು = look after.... ಪಾರ್ + ಅಪ್ಪ => ಎಲ್ಲರನ್ನು ನೋಡಿಕೊಳ್ಳುವ ಅಪ್ಪ ==> ದೇವರು
ಪಾರಪ್ಪ = ದೇವರು = ಕಡವ

ಅದಕ್ಕೆ ಹಂಸಾನಂದಿಗಳ ಪ್ರತಿಕ್ರಿಯೆ ಹೀಗಿತ್ತು:

ಪಾರು (ಮಾಡುವ, ಗಾಣಿಸುವ) ಅಪ್ಪ -> ದಾಟಿಸುವ ಅಪ್ಪ = ದೇವರು
ಹೀಗಿರಬಾರದೇಕೆ ? ಪಾರು ಅನ್ನೋದಕ್ಕೆ ತಮಿಳಿನಲ್ಲಿ ನೋಡು ಅನ್ನುವ ಅರ್ಥವಿದ್ದರೂ, ಕನ್ನಡದ ಆಡು ಮಾತಿನ ಬಳಕೆಯಲ್ಲಿ ಅದು ಇರುವುದು ನನಗೆ ನೆನಪಿಗೆ ಬರುತ್ತಿಲ್ಲ.

ಇದೇ ರೀತಿ ಪಾರ್ವ, ಹಾರುವ -ಇಲ್ಲೂ ದಾಟು ಅನ್ನುವ ಅರ್ಥವೇ ಇರುವುದನ್ನೂ ಗಮನಿಸಬಹುದು.

ಇದಕ್ಕೆ ನನ್ನ ಪ್ರತಿಕ್ರಿಯೆ ಇದಾಗಿತ್ತು:

ಪಾರು ಅನ್ನುವುದಕ್ಕೆ ಕನ್ನಡದಲ್ಲೂ ನೋಡು (rather (ಕೊನೆಮುಟ್ಟಿಸುವಂತೆ) ನೋಡಿಕೋ, take care) ಅನ್ನುವುದೇ ಅರ್ಥ (ಪಾರು+ಪತ್ತೆ=ಪಾರುಪತ್ತೆ/ಪಾರುಪತ್ಯೆ). ತಮಿಳಿನಲ್ಲೂ ಇದು ಇದೇ ಅರ್ಥದಲ್ಲಿ ಬಳಕೆಯಲ್ಲಿದ್ದು ಅಮೇಲಾಮೇಲೆ ನೋಡು ಎನ್ನುವ ಸಾಮಾನ್ಯಾರ್ಥವೂ ದಕ್ಕಿದಂತೆ ತೋರುತ್ತದೆ.

ಇನ್ನು ಅಪ್ಪ ಅನ್ನುವುದು ಅದರ ಹಿಗ್ಗಿಸಿದ ಅರ್ಥದಲ್ಲಿ ದೇವರು ಎಂದಾದರೂ ಅದನ್ನು ಅಷ್ಟು ಹಿಗ್ಗಿಸುವ ಅಗತ್ಯವೇ ಇಲ್ಲ ಎನ್ನಿಸುತ್ತದೆ. ಪಾರು + ಅಪ್ಪ = ಪಾರುಪತ್ತೇದಾರ, ಯಜಮಾನನ ಅಗ್ರಹಾರ, sounds more practical interpretation

ಈ ಚರ್ಚೆ ನನ್ನಲ್ಲೆಬ್ಬಿಸಿದ ಆಲೋಚನಾತರಂಗಗಳ ಲೇಖನರೂಪವೇ ಇದು.

ಪಾರು (=ನಾಮಪದ: ಗಡಿ/ಸೀಮೆ; ಕ್ರಿಯಾಪದ: ಗಡಿದಾಟು) ಎನ್ನುವುದು ಪಾರ ಎನ್ನುವ ಸಂಸ್ಕೃತ ಶಬ್ದದಿಂದ ಬಂದಂತೆನಿಸುತ್ತದೆ. ಇದು ಸಂಸ್ಕೃತದ "ಪರ್" ಧಾತುವಿನಿಂದ ಬಂದಿರಬೇಕು. ಪರ ಅಂದರೆ, ಹೊರಗಿನದ್ದು. ಪಾರ = "ಸ್ವ" ವನ್ನು "ಪರ"ದಿಂದ ಬೇರ್ಪಡಿಸುವ ಸೀಮಾರೇಖೆ/ಗಡಿ (ವರ-ವಾರ; ಭರ-ಭಾರ; ಧರ-ಧಾರ ಇತಿವತ್); ಅಪಾರ = ಪಾರವಿಲ್ಲದ್ದು, ಬಹುಪಾರ = ಅನೇಕ ಗಡಿಯುಳ್ಳದ್ದು/ವಿಸ್ತಾರವಾದ ಗಡಿಯುಳ್ಳದ್ದು; ವ್ಯಾಪಾರ (ವಿ+ಆಪಾರ) = ಗಡಿಯಾಚಿನ ವ್ಯವಹಾರ (ಆಮದು), ಇತ್ಯಾದಿ ಸಂಸ್ಕೃತ ಪದಗಳನ್ನು ಗಮನಿಸಿ.

ಮನುಷ್ಯನ ಮೂಲಭೂತ ಅಡಚಣೆ/ಪರಿಮಿತಿಯೇ ವೇಗ. ಈ ಅಡಚಣೆಯೇ ಅವನ ಮಿತಿ/ಪಾರ. ಅದನ್ನು ದಾಟಬೇಕಾದರೆ ಮೇಲೆ ನೆಗೆಯಬೇಕು. ಆದ್ದರಿಂದ ಈ ಲಂಘನೆಯೇ "ಪಾರು"/"ಹಾರು" ಆಗಿರಬೇಕು. (ಪಾರ್ವ/ಹಾರುವ ಗಮನಿಸಿ. ಅದರ ಅರ್ಥ "ಹಾರಾಡು"ವವನಲ್ಲ, ಬದಲಿಗೆ ದಾಟುವವನು) ಆದ್ದರಿಂದ ಪಾರು ಎಂಬುದಕ್ಕೆ ಗಡಿದಾಟುವಂತೆ ನೆಗೆ/ದಾಟು ಎಂಬ ಅರ್ಥವಿದ್ದು, ಅದರಲ್ಲಿ ಬಲವೂ ವೇಗವೂ ಸೇರಿರುವುದರಿಂದ ಮುಂದೆ ಪಾರು ಎಂಬ ಪದಕ್ಕೆ ವೇಗವಾಗಿ ಚಲಿಸು ಎಂಬ ಅರ್ಥ ದೊರಕೊಂಡಂತೆ ತೋರುತ್ತದೆ. ಆದ್ದರಿಂದಲೇ ಕೇವಲ ನೆಗೆತವಲ್ಲದ ಹಕ್ಕಿಯ ಸ್ವಚ್ಛಂದ ಹಾರಾಟವೂ "ಪಾರು"/"ಹಾರು" ಎಂದೇ ಸೂಚಿತವಾಯಿತು. ಇನ್ನು ತೆಲುಗಿನ ಪಾರು = ಬಹುವೇಗವಾಗಿ ಓಡು ಎಂಬ ಪ್ರಯೋಗವನ್ನೂ ಗಮನಿಸಬಹುದು. ಇಲ್ಲೆಲ್ಲಾ ಒತ್ತು ಗಮ್ಯವನ್ನು ತಲುಪುವುದೇ.

ಅದೇನೇ ಇರಲಿ, ಹೀಗೆ ಗಮ್ಯವನ್ನು ತಲುಪಿಸುವ (ಕಾಣಿಸುವ) ಜವಾಬ್ದಾರಿಗೆ ಕನ್ನಡದಲ್ಲಿ "ಪಾರಗಾಣಿಸು", "ಪಾರುಪತ್ತೆ ನೋಡು" ಇತ್ಯಾದಿ ಬಳಕೆಯಿದೆ. ಜವಾಬ್ದಾರಿ ನಿರ್ವಹಿಸುವುದಕ್ಕೆ "ನೋಡಿಕೋ, ನೋಡು" ಎಂಬ ಬಳಕೆ ತಮಿಳಿನಲ್ಲೂ ಇರುವುದರಿಂದ ಕನ್ನಡದ ಪಾರಗಾಣು ಎನ್ನುವದಕ್ಕೆ ಸಮಾನಾರ್ಥಕವಾದ "ಪಾರಂಗಾಮಿಚ್ಚು/ಪಾರಂಗಾಣ್" ಎಂಬ ಬಳಕೆ ಮುಂದೆ ಚುಟುಕಾಗಿ "ಪಾತ್ತುಕೋ/ಪಾರ್" ಎಂದಾದಂತೆಯೂ, ಅದರ "ನೋಡಿಕೋ (look after)" ಎನ್ನುವ ಅರ್ಥದಿಂದ ಮುಂದೆ ಪಾತ್ತುಕೋ ಎನ್ನುವುದರ ಧಾತುವಾದ "ಪಾರ್" ಎನ್ನುವುದಕ್ಕೆ ನೋಡು ಎಂಬ ಸಾಮಾನ್ಯಾರ್ಥ ಬಂದಂತೆಯೂ ಕಾಣುತ್ತದೆ.

ಈ ಭಾಷಾಸಾಮ್ಯಗಳನ್ನು ಗಮನಿಸಿದಾಗ ತಮಿಳಿನ ಪಾರ್ ಎನ್ನುವುದರ ಇವತ್ತಿನ ಅರ್ಥ "ನೋಡು" ಮೂಲತಃ ಕನ್ನಡದಿಂದ ತಮಿಳಿಗೆ ಹೋದಂತೆಯೂ, ಹಾರು ಎನ್ನುವ ಅರ್ಥ ಕನ್ನಡ/ತೆಲಗು ದ್ರಾವಿಡಮೂಲದ್ದಾದರೂ ಭೌತಿಕ ಪದ ಸಂಸ್ಕೃತ ಮೂಲದಿಂದ ದ್ರಾವಿಡಕ್ಕೆ ಬಂದಂತೆಯೂ ಕಾಣುತ್ತದೆ.

ಅಷ್ಟಾದರೂ ಇಲ್ಲೇ ಹುಟ್ಟಿ ಬೆಳೆದು ನೆಲೆನಿಂದ "ಪಾರಪ್ಪ/ಪರಪ್ಪ" ನಮ್ಮವನೇ ಎನ್ನಲಡ್ಡಿಯಿಲ್ಲ. ಆದರೆ ಪರಪ್ಪನ ಅಗ್ರಹಾರ ನಮ್ಮದೆಂದರೆ ಮಾತ್ರ ತುಸು ಇರುಸುಮುರುಸಾಗಬಹುದೇನೋ.

3 comments:

sunaath said...

ಉತ್ತರ ಕರ್ನಾಟಕದಲ್ಲಿ ‘ಪರಶುರಾಮ’ ಎನ್ನುವ ಹೆಸರುಳ್ಳ ವ್ಯಕ್ತಿಯನ್ನು ಪರಸಪ್ಪ, ಪರಪ್ಪ ಎಂದೆಲ್ಲ ಕರೆಯುವ ರೂಢಿ ಇದೆ. ಪರಪ್ಪನ ಅಗ್ರಹಾರವು ಮೂಲತಃ ಪರಶುರಾಮ ಎನ್ನುವ ವ್ಯಕ್ತಿಯ ಹೆಸರಿನಿಂದ ಬಂದಿರಬಹುದು.

Srikanth said...

ಕ್ಷಾತ್ರ ಸಂತತಿಯನ್ನು ವಿನಾಶ ಮಾಡಲು ಅವತರಿಸಿದ ಪರಶುರಾಮ->ಪರಸಪ್ಪ->ಪರಪ್ಪನಿಗೆ ಬ್ರಾಹ್ಮಣ ಕೇರಿಯಾದ ಈ ಅಗ್ರಹಾರವಿರುವುದು ಅತ್ಯಂತ ಸಮಂಜಸವೆನಿಸಿತು.

ಹಾಗೆ,ಈ Rapper ಪರಪ್ಪ, ಅಗ್ರಹಾರಕ್ಕೆ ಕಾರಣ ವಾಗಿರಬಹುದೆ :

http://en.wikipedia.org/wiki/PaRappa_the_Rapper

Subrahmanya said...

ಅಂತೂ ಒಂದು ಪದ ಇಷ್ಟೆಲ್ಲಾ ಚಿಂತನೆಗೆ ಕಾರಣವಾಯಿತಲ್ಲ..ಅದೇ ಸಂತೋಷ.
ಪಾರ್ ಎಂಬುದನ್ನು ತಮಿಳಿನ ’ಪಾರಂಗು’ (=ನೋಡು, ಇತ್ಯಾದಿ) ವಿನಿಂದ ತರುವ ಬದಲು ನಿಮ್ಮ ( ಮತ್ತು ಹಂಸಾನಂದಿಗಳು) ವಿವರಣೆಯಂತೆ ನೋಡುವುದೇ ಲೇಸನಿಸುತ್ತದೆ. ಅಥವ ಪರಮೇಶಪ್ಪ ಎನ್ನುವವನಿಗೂ ಸಂಬಂಧಿಸಿರಬಹುದೆ ? ಪರಶುರಾಮನೂ ಆಗಿರಬಹುದು.