Sunday, October 4, 2009

ದ್ವೈತಮು ಸುಖಮಾ...

ಸ್ನೇಹಿತರ ವಲಯದಲ್ಲಿ ಈ ವಿಷಯ ಒಮ್ಮೆ ಚರ್ಚೆಗೆ ಬಂತು. ತ್ಯಾಗರಾಜರು ಜನ್ಮತಃ ಅದ್ವೈತಿಗಳಾಗಿದ್ದಾಗ್ಯೂ ತಮ್ಮ ಕೃತಿಗಳಲ್ಲಿ ದ್ವೈತವನ್ನೇ ಎತ್ತಿ ಹಿಡಿದಿದ್ದಾರೆಯೇ?

ಮೊದಲಿಗೆ, ದ್ವೈತ-ಅದ್ವೈತಗಳ ಚರ್ಚೆಯೇ ಆಧ್ಯಾತ್ಮದ ಅತ್ಯುನ್ನತ ಸ್ತರಕ್ಕೆ ಸಂಬಂಧಿಸಿದ್ದು. ಸಾಧಕನು ಆ ಸ್ತರವನ್ನು ಮುಟ್ಟುವವರೆಗೂ, ಅದರಲ್ಲೂ ವ್ಯಾವಹಾರಿಕ ಸ್ತರದಲ್ಲಂತೂ ಇವರಡರ ನಿಲುವಿನಲ್ಲೂ ಆತನಿಗೆ ಹೆಚ್ಚೇನು ವ್ಯತ್ಯಾಸ ಕಾಣದು. ಶಂಕರರು "ಭಜಗೋವಿಂದಂ" ಎಂದರೂ, ಮಧ್ವರು "ಪ್ರೀಣಯಾಮೋ ವಾಸುದೇವಂ" ಎಂದರೂ ಆ ನಮನವು ಮುಟ್ಟುವುದು ಕೇಶವನನ್ನೇ. ಅನುಸಂಧಾನವು ಬೇರೆಯಿರಬಹುದು, ಗಮ್ಯದೃಷ್ಟಿ ಬೇರೆಯಿರಬಹುದು, ಆದರೆ ಇವು ಸಾಧಕನಿಗೆ ಬಿಟ್ಟಿದ್ದಲ್ಲವೇ? ಹೀಗಾಗಿ, ಇನ್ನೂ ಆಧ್ಯಾತ್ಮಸಾಧನೆಯ ತಳದ ಮೆಟ್ಟಿಲಲ್ಲೆಲ್ಲೋ ಇರುವ, ಅಥವ ಶ್ರೀ ರಾಮಾನುಜರು ಹೇಳುವಂತೆ "ಅನಾದಿ ಪಾಪವಾಸನಾಮಹಾರ್ಣವಾಂತರ್ನಿಮಗ್ನ"ರಾದ, "ಕರ್ಮಪಾಶಪ್ರಗ್ರಥಿತ"ರಾದ ನಮಗೆ, ನಮ್ಮ ಈಗಿನ ಮಟ್ಟದಲ್ಲಿ ಈ ಚರ್ಚೆ ಎಷ್ಟು ಪ್ರಸ್ತುತ ಎಂಬ ಬಗ್ಗೆಯೇ ನನಗೆ ಸಂದೇಹವಿದೆ.

ಇದು ಒಂದುಕಡೆಗಾದರೆ, ತ್ಯಾಗರಾಜಸ್ವಾಮಿಗಳಂಥ ಅನುಭಾವಿಗಳ, ಜೀವನ್ಮುಕ್ತರ ವಿಷಯದಲ್ಲೂ ಈ ಚರ್ಚೆ ಅಪ್ರಸ್ತುತವೆಂದೇ ನನ್ನ ಅನಿಸಿಕೆ. ತ್ಯಾಗರಾಜರಂತೂ ತಮ್ಮ ಕೃತಿಗಳಲ್ಲೆಲ್ಲೂ 'ತತ್ತ್ವ' ವಿಚಾರವನ್ನು ಚರ್ಚಿಸಿದ್ದಾಗಲಿ, ದ್ವೈತವೋ ಅದ್ವೈತವೋ ಅಥವ ಮತ್ತಾವುದೋ ಒಂದು ನಿಲುವನ್ನು ತಳೆದಿದ್ದಾಗಲಿ ಕಾಣೆ. ತಮ್ಮ ಕೃತಿಗಳುದ್ದಕ್ಕೂ ಅವರು ಪ್ರತಿಪಾದಿಸುವ ಏಕೈಕ ನಿಲುವೆಂದರೆ ಭಕ್ತಿ - ಅದಕ್ಕೆ ಸಂವಾದಿಯಾಗಿ ಬರುವ ಆತ್ಮನಿವೇದನೆ. ಈ ಭಕ್ತಿಕೂಡ ಭಾವಪ್ರಪಂಚದಿಂದ ಹೆಕ್ಕಿ ತೆಗೆದ ರತ್ನವೇ ಹೊರತು ಶಾಸ್ತ್ರದ ಮೊಸರು ಕಡೆದು ಪಡೆದ ನವನೀತವಲ್ಲ. ಆ ಭಕ್ತಿಯೂ ಅದೆಷ್ಟು ಉತ್ಕೃಷ್ಟ ಮಟ್ಟದ್ದೆಂದರೆ, ಅವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಭಾವವನ್ನು ಮರೆತು ಇತರರ ಸಂಗೀತರಚನೆಗಳಂತೆ ಕೇವಲ ಸಂಗೀತದ ಸೊಬಗನ್ನು ಆಸ್ವಾದಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಭಕ್ತಿಯ ಮೂಲ ಅಗತ್ಯವೇ ದ್ವೈತದ ಸ್ಥಿತಿ, ಒಪ್ಪೋಣ. ಆದರೆ ಅದು ಶ್ರೀ ಮಧ್ವರ ಸಂಪೂರ್ಣ, ಅವಿಚ್ಛಿನ್ನ ದ್ವೈತದ ಪ್ರತಿಪಾದನೆಯಲ್ಲ. ತ್ಯಾಗರಾಜರು ಭಕ್ತಿಯನ್ನು ಪ್ರತಿಪಾದಿಸಿದರೂ ಮಾಧ್ವ ಮಹಾಪ್ರಮೇಯಗಳಾದ ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ಪಂಚಭೇದ, ತಾರತಮ್ಯ, ಮೋಕ್ಷದಲ್ಲೂ ನಿರ್ಬಾಧಿತವಾಗಿ ಉಳಿಯುವ ಜೀವೇಶಭೇದದ ಸ್ಥಿತಿ ಇತ್ಯಾದಿ ತಾಂತ್ರಿಕ ವಿವರ (jargon)ಗಳನ್ನು ಎಲ್ಲೂ ಒಪ್ಪಿ ಪ್ರತಿಪಾದಿಸಿದಂತೆ ಕಾಣೆ. ಬದಲಿಗೆ ಈ ಕೆಳಗಿನ ಸಾಲುಗಳನ್ನು ನೋಡಿ

ಅನ್ನಿ ನೀವನುಚು ಎಂಚಿನವಾಣಿಕಿ ಆಶ್ರಮಭೇದಮುಲೇಲ
ಕನ್ನುಕಟ್ಟು ಮಾಯಲನಿ ಎಂಚುವಾಣಿಕಿ ಕಾಂತಲ ಭ್ರಮಲೇಲ ದಶರಥ ಬಾಲ ೧

(ಎಲ್ಲಾ ನೀನೇ ಎಂದು ತಿಳಿದವನಿಗೆ ಆಶ್ರಮಭೇದವೇಕೆ, (ಸರ್ವವೂ) ಕಣ್ಣುಕಟ್ಟು, ಮಾಯೆ ಎಂದು ಅರಿತವನಿಗೆ ಹೆಣ್ಣಿನ ಭ್ರಮೆಯೇಕೆ)

ಇರಲಿ, ಚರ್ಚೆಯಂತೂ ಬಂತು. ಪ್ರಶ್ನೆಯನ್ನೆತ್ತಿದ ಮಿತ್ರರು ತಮ್ಮ ಅಭಿಪ್ರಾಯಕ್ಕೆ ಉದಾಹರಣೆಯಾಗಿ ಪ್ರಸ್ತುತ ಪಡಿಸಿದ್ದು "ದ್ವೈತಮು ಸುಖಮಾ..." ಎಂಬ ಕೃತಿಯನ್ನು. ರೀತಿಗೌಳ ರಾಗದಲ್ಲಿರುವ ಈ ಕೃತಿ ಹೀಗಿದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧

ಈ ಪ್ರಶ್ನೆಯನ್ನೆತ್ತುವವರೆಲ್ಲ ಸಾಮಾನ್ಯವಾಗಿ ಮುಂದೊಡ್ಡುವ ಕೃತಿಯೇ ಇದು. ಸ್ವಯಂಸ್ಪಷ್ಟವಾಗಿರುವ ಈ ಕೃತಿಯನ್ನು ಮತ್ತಷ್ಟು ತಿಳಿಗೊಳಿಸಿ ಹೇಳಬೇಕಾದರೆ, ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿಯಾದ ಪರಮಾತ್ಮನನ್ನು ಕೇಳುತ್ತಾರೆ ತ್ಯಾಗರಾಜರು, "ದ್ವೈತವು ಸುಖವೋ ಅದ್ವೈತವೋ, ವಿಸ್ತಾರವಾಗಿ ತಿಳಿಸು"

"ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿ"ಯೊಂದು ಜೀವಾತ್ಮಕ್ಕಿಂತ ಪ್ರತ್ಯೇಕ ಅಸ್ಥಿತ್ವಹೊಂದಿದೆಯಿಂದು ಹೇಳಿದಂತಾಯಿತಲ್ಲವೇ? ಅದರಲ್ಲೂ "ದ್ವೈತಮು ಸುಖಮಾ, ಅದ್ವೈತಮು ಸುಖಮಾ" ಎಂಬ ಪಲ್ಲವಿಯ ಹಿನ್ನೆಲೆಯಲ್ಲಿ ಈ ಚರಣ ವ್ಯಂಗ್ಯಾತ್ಮಕವಾಗಿ ದ್ವೈತವನ್ನೇ ಧ್ವನಿಸುವುದಿಲ್ಲವೇ - ಇದು ಸಾಹಿತ್ಯದಲ್ಲೂ ಪ್ರವೃತ್ತಿಯಿರುವ ಮಿತ್ರರ ಪ್ರಶ್ನೆ.

ಇರಬಹುದು, ತ್ಯಾಗರಾಜರು ದ್ವೈತವನ್ನೇ ಸರಿಯೆಂದಲ್ಲಿ ಅಚ್ಚರಿಯೇನಿದೆ? ಅವರು ಅಷ್ಟು ತೀವ್ರವಾಗಿ ಪ್ರತಿಪಾದಿಸುವ ಭಕ್ತಿ, ದ್ವೈತಚಿಂತನೆಯಲ್ಲದೇ ಮತ್ತೇನು? ದ್ವೈತಭಾವವಿಲ್ಲದೆ ಭಕ್ತಿ ಸಾಧ್ಯವೇ?

ಆದರೆ ಹೀಗೆ ಅವರು ದ್ವೈತವನ್ನೋ ಅದ್ವೈತವನ್ನೋ ಪ್ರತಿಪಾದಿಸಿದ್ದಾರೆಂದು ಸಾಧಿಸುವಮೊದಲು ಪಲ್ಲವಿಯಯನ್ನು ಮತ್ತೊಮ್ಮೆ ಗಮನಿಸುವುದು ಸೂಕ್ತ. ಅದರ ಸೂಕ್ಷ್ಮ ಅವಗಾಹನೆ ಮತ್ತೊಂದು ದೃಷ್ಟಿಕೋನವನ್ನು ತೆರೆದಿಡುತ್ತದೆ. "ದ್ವೈತಮು ಸುಖಮಾ, ಅದ್ವೈತಮು ಸುಖಮಾ" - ಗಮನಿಸಬೇಕಾದ ಅಂಶವೆಂದರೆ, "ಸುಖಮಾ" ಎನ್ನುವ ಪ್ರಯೋಗ. ದ್ವೈತವು ಸರಿಯೋ ಅದ್ವೈತವೋ ಎಂಬುದನ್ನು ಸಾಧಿಸುವ ಇರಾದೆ ತ್ಯಾಗರಾಜರಿಗಿದ್ದಲ್ಲಿ, "ದ್ವೈತಮು ತರಮಾ, ಅದ್ವೈತಮು ತರಮಾ" (ಅಥವಾ "ನಿಜಮಾ") ಎಂದು ಬಳಸುತ್ತಿದ್ದರೇನೋ! ಆಗ, ಮುಂದೆ ಬರುವ ಚರಣ ದ್ವೈತವೇ ಸತ್ಯವೆಂಬ ನಿಲುವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತಿತ್ತು. ಆದರೆ "ಸುಖಮಾ" ಎಂಬ ಬಳಕೆಯಿಂದ, ಸರಿ-ತಪ್ಪಿನ ಪ್ರಶ್ನೆಗಿಂತ, ರಾಮಭಕ್ತಿಗೆ ಯಾವ ಭಾವ ಹೆಚ್ಚು ಸುಖ ಎಂಬ ಚಿಂತನೆಯಷ್ಟೇ ಸ್ಫುಟಗೊಳ್ಳುತ್ತದೆ. ಕೇವಲ ಇದೊಂದು ಪದವನ್ನು ಬಳಸುವ ಮುನ್ನ ತ್ಯಾಗರಾಜರು ಇಷ್ಟೆಲ್ಲ ಯೋಚಿಸಿದ್ದಿರಬೇಕೆಂದು ನಾನು ಹೇಳಹೊರಟಿಲ್ಲ. ಆದರೆ ಭಾವವು ಭಾಷೆಯಲ್ಲಿ ರೂಪುಗೊಳ್ಳುವ ಪರಿಯನ್ನಷ್ಟೇ ವಿವರಿಸಹೊರಟಿದ್ದು. ಕವಿಯೊಬ್ಬ ತನ್ನ ಭಾವಲಹರಿಗೆ ಮಾತಿನ ರೂಪ ಕೊಡುವಾಗ ಭಾವಕ್ಕೆ ತಕ್ಕುದಾದ ಹಲವು ಪದಗಳು ಮೂಡಿ ನಿಲ್ಲುತ್ತವೆ. ಮನದಲ್ಲಿ ಮೂಡಿದ ಭಾವಕ್ಕೆ ಅತ್ಯುಚಿತವಾದ ಪದದ ಆಯ್ಕೆ ಕವಿಯಲ್ಲಿ ತಾನೇ ತಾನಾಗಿ ನಡೆಯುತ್ತದೆ - ಇದೊಂದು ಭಾವದ ವ್ಯಾಪಾರ, ಬುದ್ಧಿಯದಲ್ಲ. ಈ ಸಂದರ್ಭಕ್ಕೆ "ಸುಖಮಾ" ಮತ್ತು "ತರಮಾ" ಎರಡೂ ಪದಗಳು ಒಂದೇ ಭಾವದ ಸೂಚಕ ಖಂಡಿತಾ ಅಲ್ಲ. ಆದ್ದರಿಂದ ಕವಿಗೆ ಇಷ್ಟು ಸಹಜವಾಗಿ "ಸುಖಮಾ" ಎಂಬ ಪದ ಮನದಲ್ಲಿ ಹೊಳೆದಿರಬೇಕಾದರೆ, ಅವರ ಮನದಲ್ಲಿ ದ್ವೈತಾದ್ವೈತಗಳ ಸರಿ-ತಪ್ಪುಗಳ ವಿಮರ್ಶೆಗಿಂತಾ ಆ ನಿಲುವುಗಳ ಭಕ್ತಿಸೌಖ್ಯವೇ ಚಿಂತನೆಯ ವಸ್ತುವಾಗಿದ್ದಿರಬೇಕೆನ್ನುವುದು ಸಹಜ. ಅಂತಿಮವಾಗಿ ದ್ವೈತವು ನಿಜವೋ ಅದ್ವೈತವೋ ಅದು ತ್ಯಾಗರಾಜರಿಗೆ ಮುಖ್ಯವಲ್ಲ. ಬದಲಿಗೆ, ಯಾವ ಮಾರ್ಗದಲ್ಲಿ ಭಕ್ತಿ ಹೆಚ್ಚು ತೀವ್ರ, ನಿಶ್ಕಲ್ಮಶ, ಸುಖ - ಇದು ಅವರ ಪ್ರಶ್ನೆಯೆನಿಸುತ್ತದೆ.

ಅದ್ವೈತ ಚಿಂತನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ತ್ಯಾಗರಾಜರಿಗೆ, ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿದೆ. ಆದರೆ ಭಾವುಕ ಮನಸ್ಸೇಕೋ ಇದನ್ನೊಲ್ಲದು. ನಾನೀನೆಂಬ ಭೇದವಳಿದ ಅದ್ವೈತದ ಅರಿವಿನಲ್ಲಿ ಏನಿದೆ? ಏನೂ ಇಲ್ಲ. ಭಕ್ತನೂ ಇಲ್ಲ, ಭಕ್ತಿಯೂ ಇಲ್ಲ. "ರಾಮಭಕ್ತಿಸಾಮ್ರಾಜ್ಯ"ದಲ್ಲಿ ಓಲಾಡುವ ಕವಿಯ ಮನಸ್ಸಿಗೆ, ಈ ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತ ಸಿದ್ಧಿ ಹೇಗೆ ತಾನೇ ರುಚಿಸೀತು? ಈ ಪರಮಾತ್ಮ-ಜೀವಾತ್ಮ ಭೇದ ತೋರುವ ಮಾಯಾ ಪ್ರಪಂಚದಲ್ಲಿ ಭಕ್ತಿಯೂ ಮಾಯೆಯೇ ಹೌದು, ಉತ್ಕಟ ಭಕ್ತಿ, ಯಥಾರ್ಥ ಜ್ಞಾನಕ್ಕೆ, ತನ್ಮೂಲಕ ಅದ್ವೈತದ ಸಿದ್ಧಿಗೆ ದಾರಿ - ಇರಬಹುದು. ಆದರೆ ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ. ಆದ್ದರಿಂದ ಭಕ್ತಿಯು ಮಾಯೆಯೆನ್ನುವುದಾದರೆ ಅದ್ವೈತದ 'ವಾಸ್ತವ'ಕ್ಕಿಂತ ದ್ವೈತಸ್ಥಿತಿಯ 'ಮಾಯೆ'ಯೇ ಸುಖವಲ್ಲವೇ? ಇದು, ನನಗನ್ನಿಸುವ ಮಟ್ಟಿಗೆ ಈ ರಚನೆಯ ಕವಿಸಮಯ.

ತ್ಯಾಗರಾಜರು ಅದೆಂಥಾ ಮೃದುಮನದ, ಹದನುಡಿಯ ಕವಿಯೆಂದರೆ, ಅವರೆಲ್ಲೂ ಈ ತತ್ತ್ವ-ಸಿದ್ಧಾಂತಗಳ ಒಣಚರ್ಚೆಯ ಗೊಡವೆಗೆ ಹೋಗುವುದೇ ಇಲ್ಲ. ಈ ರೀತಿಯ ತತ್ತ್ವದ ಇಬ್ಬಂದಿಗಳು ಎದುರಾದಾಗೆಲ್ಲಾ ಅವರು ಕಂಡುಕೊಳ್ಳುವುದು ತಾರ್ಕಿಕನ ಪರಿಹಾರವಲ್ಲ, ಕವಿಯ ಪರಿಹಾರವನ್ನು. ಈ ಸಾಲುಗಳನ್ನು ನೋಡಿ:

ಎವರನಿ ನಿರ್ಣಯಿಂಚಿರಿರಾ ನಿನ್ನೆಟ್ಲಾರಾಧಿಂಚಿರಿರಾ, ನರವರು ಪ
ಶಿವುಡನೋ ಮಾಧವುಡನೋ ಕಮಲ ಭವುಡನೋ ಪರಬ್ರಹ್ಮಮನೋ ನಿ ಅ.ಪ

ಶಿವಮಂತ್ರಮುನಕು ಮಾಜೀವಮು ಮಾಧವ ಮಂತ್ರಮುನಕು ರಾಜೀವಮು ಈ
ವಿವರಮುದೆಲಿಸಿನ ಘನುಲಕು ಮ್ರೋಕ್ಕೆದ ವಿತರಣಗುಣ ತ್ಯಾಗರಾಜವಿನುತ ನಿ ೧

(ನಿನ್ನನ್ನು ಯಾರೆಂದು ನಿರ್ಣಯಿಸಿದರು (ಕೊನೆಗೆ)? ಶಿವನೆಂದೋ, ಮಾಧವನೆಂದೋ, ಕಮಲಭವನೆಂದೋ ಅಥವಾ ಪರಬ್ರಹ್ಮವೆಂದೋ?

"ನಮಶ್ಶಿವಾಯ" ಎಂಬ ಶಿವಮಂತ್ರದ ಜೀವಾಕ್ಷರ "ಮ". ಹಾಗೇ "ನಮೋ ನಾರಾಯಣಾಯ" ಎಂಬ ನಾರಾಯಣಮಂತ್ರದ ಜೀವಾಕ್ಷರ "ರಾ" (ಈ ಅಕ್ಷರಗಳನ್ನು ತೆಗೆದರೆ ಆ ಮಂತ್ರಗಳು ವಿರುದ್ಧಾರ್ಥವನ್ನೇ ಕೊಡುತ್ತವೆ, ಆದ್ದರಿಂದ). ಈ ಎರಡು ಜೀವಾಕ್ಷರಗಳು ಕೂಡಿ ಆದದ್ದೇ "ರಾಮ". ಈ ಮರ್ಮವನ್ನು ತಿಳಿದ ಮಹಾತ್ಮರನ್ನು ವಂದಿಸುತ್ತೇನೆ)

ತಮ್ಮ ಮನೋರಾಜ್ಯಕ್ಕೆ ಪ್ರಸ್ತುತವಲ್ಲದ ಸೈದ್ಧಾಂತಿಕ ಚರ್ಚೆಗಳಿಂದ ಅದೆಷ್ಟು ಸೊಗಸಾಗಿ ತಮ್ಮನ್ನು ಹೊರಪಡಿಸಿಕೊಳ್ಳುತ್ತಾರೆ, ನೋಡಿ. ಭಕ್ತಿಯೋ, ಭಕ್ತನ ಉದ್ಧಾರವೋ ಅಲ್ಲದ ಬೇರಾವ ವಿಚಾರವೂ ಅವರಿಗೆ ಹೊಲ್ಲ. ತಾನಾಯಿತು, ರಾಮನಾಯಿತು, ರಾಮಭಕ್ತಿಯಾಯಿತು. ಆಗೀಗ ತನಗೆ ಸರಿಕಂಡ ಸರಳ ತತ್ತ್ವವನ್ನು ಜನಕ್ಕೆ ಬೋಧಿಸುವುದುಂಟು, ಅದೂ ಸ್ವಗತದ ಧಾಟಿಯಲ್ಲಿ. ಪುರಂಧರ-ಕನಕರೇ ಮೊದಲಾದವರಲ್ಲಿ ಕಾಣಬರುವ ತತ್ತ್ವಬೋಧನೆಯ ಬಿರುಸೂ ಕಟುವೂ ಕಾಣಬರುವುದಿಲ್ಲ ತ್ಯಾಗರಾಜರಲ್ಲಿ. ಬೋಧಿಸಿದ್ದೆಲ್ಲಾ ಸರಳ, ನೇರ, ಚಿಕ್ಕ-ಚೊಕ್ಕ. ಈ ಸಾಲುಗಳನ್ನು ನೋಡಿ:

"ತುರಕವೀದಿಲೋ ವಿಪ್ರುನಿಕಿ ಪಾನಕ ಪೂಜ ಚೇಸಿ ಏಮಿ ಚೇಯಕುಂಡಿ ಏಮಿ"

(ತುರಕಬೀದಿಯಲ್ಲಿ ವಿಪ್ರರಿಗೆ ಪಾನಕಪೂಜೆ ಮಾಡಿ ಏನು ಮಾಡದಿದ್ದರೆ ಏನು?)

ಮತ್ತೆ ಇದು;

"ಬಹುಜನ್ಮಂಬುನಿ ವಾಸನಯುತುಲೈ ಅಹಿವಿಷಸಮವಿಷಯಾಕೃಷ್ಟುಲೈ
ಬಹಿರಾನನುಲೈ ತ್ಯಾಗರಾಜು ಭಜಿಯಿಂಚೇ ಶ್ರೀ ರಾಮುನಿ ತೆಲಿಯಕ (ಯಜ್ಞಾದುಲು ಸುಖಮನುವಾರಿಕಿ ಸಮಮಜ್ಞಾನುಲು ಗನ ಲೇ)"

(ಬಹುಜನ್ಮದ ವಾಸನೆಹೊಂದಿ, ಹಾವಿನ ವಿಷದಂಥ ವಿಷಯಗಳಿಂದ ಆಕರ್ಷಿತರಾಗಿ, ಅಂತ್ರರ್ದೃಷ್ಟಿಯನ್ನು ಕಳೆದುಕೊಂಡು ಶ್ರೀ ರಾಮನನ್ನು ತಿಳಿಯದೇ, ಯಜ್ಞಾದಿಗಳೇ ಸುಖವೆನ್ನುವರಂಥ ಅಜ್ಞಾನಿಗಳು ಇಲ್ಲ)

ಇನ್ನು ಮಂತ್ರ-ತಂತ್ರ, ಶಾಸ್ತ್ರ-ಸಂಪ್ರದಾಯಗಳ ಗೋಜಲಂತೂ ದೂರವೇ ಉಳಿಯಿತು. ಈ ಗೋಜಿನ ಪ್ರಶ್ನೆಗೆ ತ್ಯಾಗರಾಜರ ಉತ್ತರ "ಮನಸು ಸ್ವಾಧೀನಮೈನ ಘನುನಿಕಿ ಮರಿ ಮಂತ್ರ ತಂತ್ರಮುಲೇಲ" (ಮನಸು ಸ್ವಾಧೀನವಿರುವ ಮಹಾತ್ಮನಿಗೆ ಮತ್ತೆ ಮಂತ್ರತಂತ್ರಗಳೇಕೆ)

ಆದ್ದರಿಂದ ತ್ಯಾಗರಾಜರ ಕೃತಿಗಳಲ್ಲಿ ಶಾಸ್ತ್ರ-ಸಿದ್ಧಾಂತಗಳ ಪ್ರತಿಪಾದನೆಯನ್ನರಸುವುದಕ್ಕಿಂತ ಅಮೃತಪ್ರಾಯವಾದ "ಸ್ವರರಾಗಸುಧಾರಸಯುತ ಭಕ್ತಿ"ಯ ಸೊಬಗನ್ನು ಆಸ್ವಾದಿಸುವುದೇ ಹೆಚ್ಚು ಸುಖವಲ್ಲವೇ?

11 comments:

Susheel Sandeep said...

ಭಕ್ತಿ,ಸಂಗೀತ,ದ್ವೈತ-ಅದ್ವೈತ ಗಳಂಥ ಸೂಕ್ಷ್ಮ ವಿಚಾರಗಳಿದ್ದರೂ ಯಾವುದೇ controversyಗೆ ಒಳಗಾಗದಂಥ ಉತ್ತಮ ಬರಹ ಕೊಟ್ಟಿದೀರಿ :)

ಸಾಕಷ್ಟು ವಿಷಯಗಳ ಬಗ್ಗೆ ತೀರ ಸರಳವಾಗಿ ಅರ್ಥವಾಗುವ ಹಾಗೆ ಬರೆವ ನಿಮ್ಮ ಶೈಲಿ ಸೂಪರ್

sunaath said...

ತ್ಯಾಗರಾಜರ ಕೃತಿಗಳ ಕನ್ನಡ ಅನುವಾದವನ್ನು ನೀವು ಅಲ್ಲಿಯೇ ಕೊಟ್ಟಿದ್ದರೆ, ನನಗೆ ಅನುಕೂಲವಾಗುತ್ತಿತ್ತು!

Santhosh Mugoor (ಸಂk) said...

neevu heLida vicharagaLa (saMgeeta,dvaita,advaita..etc) bagge nanna jnaanakkiMta ajnaanavE hecchu
!
adare nimma baraha nannalli hosa prashnegaLannu kaMDita huTTu haakide. asTe allade yaavude vicharavannu ella maggalugaLimda nODuva nimma pari bahaLa hiDisitu.

guruve said...

ನನಗೆ ತ್ಯಾಗರಾಜರ ಕೀರ್ತನೆಗಳು ಅಲ್ಪ ಸ್ವಲ್ಪ ಅರ್ಥವಾಗಿರುವಂತೆ, ಅವರ ಕೀರ್ತನೆಗಳಲ್ಲಿ ಭಕ್ತಿ ಪ್ರಧಾನವೇ ಹೆಚ್ಚು. ತರ್ಕ, ವಾದ, ಬುದ್ಧಿವಾದ, ತತ್ವ, ಸಾಮಾಜಿಕ ಚಿತ್ರಣಗಳು ಇವುಗಳು ಸುಳಿಯುವುದು ಕಡಿಮೆಯೇ ಎನ್ನಬಹುದು. ಇವುಗಳನ್ನು ದಾಸರ ಪದಗಳಲ್ಲಿ ನಾವು ಹೇರಳವಾಗಿಯೇ ಕಾಣಬಹುದು..

ನಿಮ್ಮ ವಿಚಾರ ಸರಣಿ ಚೆನ್ನಾಗಿ ಮೂಡಿದೆ.. :)

Vivekanand P V said...

ಪ್ರಿಯ ಮಂಜು,

ಪ್ರಕಾಂಡ ವೇದಾಂತಿಯೊಬ್ಬರು ನನಗೆ ಕೇಳಿದ ಪ್ರಶ್ನೆ: ಜ್ಞಾನವಾದ ಮೇಲೆ ನಂಬಿಕೆಯುಳಿಯಲು ಸಾಧ್ಯವೇ? ಎಷ್ಟೋ ಕಾಲದ ನಂತರ ನನಗೆ ಹೊಳೆದದ್ದು, ವೇದಾಂತಿಗೆ ಸಾಧ್ಯವಿಲ್ಲದಿದ್ದರೂ ಕವಿಗೆ ಸಾಧ್ಯವೆಂದು.

ಕವಿ ಪ್ರತಿಭೆಯು ನಮ್ಮ ಆಲಂಕಾರಿಕ ಶಿರೋಮಣಿಗಳೆಂದಂತೆ ಬ್ರಹ್ಮ ಸೃಷ್ಟಿಯ ಸ್ತರದಂತೆ ಅಥವಾ ಕೆಲವೊಮ್ಮೆ ಇನ್ನೂ ಗಹನವೂ ಆಪ್ಯಾಯನವೂ ಆದದ್ದು. ಅದು ಲೌಕಿಕವಾದ ಸಮಸ್ತ ತರ್ಕ-ಖಂಡನ-ಮಂಡನಗಳ ಪರಿಧಿಯನ್ನು ದಾಟಿ ರಸಾನುಭವಕ್ಕೆ ಕೊಂಡೊಯ್ಯುವ ಮುದ್ದು-ಮೆಟ್ಟಿಲು.

ಅಪ್ಪಟ ಶಾಂಕರ ವೇದಾಂತಿಗಳೂ ಲೌಕಿಕ ವ್ಯವಹಾರದಲ್ಲಿ ದ್ವೈತವನ್ನೇ ಒಪ್ಪಬೇಕಲ್ಲವೆ? ಜ್ಞಾನದ ಪರಮೌನ್ನತ್ಯದಲ್ಲಿ ಅದ್ವೈತವೋ ದ್ವೈತವೋ ಎಂಬ ತಗಾದೆಯಲ್ಲದೇ ಲೌಕಿಕಕ್ಕಲ್ಲ.

ಅದೇನೇ ಇದ್ದರೂ ಆಸ್ವಾದಕ್ಕೆ ತರ್ಕದ ಹಂಗಿಲ್ಲವಲ್ಲ? ಅದರಲ್ಲೂ ತ್ಯಾಗರಾಜರಂಥ ಸಂಗೀತರ್ಷಿಗಳ ಅನುಭಾವಕ್ಕೆ ಅವರ ಕಾವ್ಯ-ಸಾಂಗೀತಿಕ ಪ್ರತಿಭೆಗೆ ಒಣತರ್ಕದ ಹಂಗೇಕೆ?

--------

ನಿಮ್ಮ ಬರೆವಣಿಗೆಯ ಬಗ್ಗೆ ಇನ್ನೇನು ಹೇಳಲಿ? ಇರಲಿ. ಒಂದೇ ತಕರಾರು. ಕೃತಿಯ ಅನುವಾದವಿಲ್ಲದ್ದು. ತೆಲುಗು ಬರದ ನಮ್ಮಂಥವರಿಗೆ ತಿಳಿಗನ್ನಡದ ಅನುವಾದವು ಅಪೇಕ್ಷಣೀಯ.

ತ್ಯಾಗರಾಜರ ಸುಧಾರಸದಂತೆ ನಿಮ್ಮ ಆಲೋಚನಾರಸವೂ ಮಧುರವಾಗಿದೆ. ನಮ್ಮ ತೃಷೆಯಿನ್ನೂ ಹಿಂಗಿಲ್ಲ.

ಪ್ರೀತಿಯಿಂದ,
ವಿವೇಕಾನಂದ

Manjunatha Kollegala said...

ಈ ಲೇಖನವನ್ನು ಓದಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು.

ಪ್ರೀತಿಯ ವಿವೇಕ್, ಅನುವಾದದ ಕೊರತೆಯ ಬಗ್ಗೆ ಇತರ ಓದುಗರೂ ಹೇಳಿದ್ದರು. ಲೇಖನದಲ್ಲಿ ಬಳಸಿದ ತೆಲುಗು ಸಾಲುಗಳು ಬಹುತೇಕ ಕನ್ನಡವನ್ನೇ ಹೋಲುತ್ತಿದ್ದುದರಿಂದ ಅನುವಾದದ ಅಗತ್ಯವಿಲ್ಲವೆನಿಸಿತ್ತು. ಆದರೆ ಈಗ ಅನುವಾದಗಳನ್ನೂ ಕೊಟ್ಟಿದ್ದೇನೆ.

ತಮ್ಮ ಮಾತು ಸರಿ. ಮೇಲಾಗಿ, if ignorance is bliss, why deny that?

Narendra P. Sastry said...
This comment has been removed by the author.
Narendra P. Sastry said...

good article Manjunath... added to what you said, Advaitha is never against to any thing...including bhakthi...for advaithins bhakthi etc are means for purification of mind which are always engaged in mundane matters...

also you have rightly mentioned, in the song, there is no discussion on whether dwaitha is right or advaitha is right...it is all about which is more blissful, it is ones own choice

if one wants reality, want to know only the KARANA by which all KARYA has emerged, for they find more bliss in knowing...so for them we can say JnAna is more blissful, but at the same time, it is not right to assume one who is after jnAna is against to bhakthi...

Arun Kumar S said...

ನಮಸ್ಕಾರ ಮ೦ಜು..... ಪ್ರಶ್ನೆಯನ್ನು ಎತ್ತಿದ ನಿಮ್ಮ ಮಿತ್ರರಿಗೆ ನನ್ನ ದನ್ಯವಾದವನ್ನು ತಿಳಿಸಿ. ತ್ಯಾಗರಾಜರ ಕೀರ್ತನೆಗಳು ಆಲಿಸುತ್ತಿದ್ದರೆ ಭಕ್ತಿ ಭಾವದ ಹೊರತು ಮತ್ತೆ ಏನು ಮನಸ್ಸಿಗೆ ಬರುವಿದಿಲ್ಲ, ನಿಮ್ಮ ಈ ಬರಹವನ್ನು ಒದಿದ ನ೦ತರ........ ತ್ಯಾಗರಾಜರ ಎಲ್ಲಾ ಕೀರ್ತನೆಗಳಲ್ಲು ಇ೦ತಹ ವಿಚಾರಧಾರೆ ಇರಬಹುದು ಎ೦ಬ ಕುತೂಹಲ ಆಗುತ್ತಿದೆ..

ದನ್ಯವಾದ ಮ೦ಜು

ಪ್ರಭು ಮೂರ್ತಿ said...

ತ್ಯಾಗರಾಜರ ಈ ’ದ್ವೈತಮು ಸುಖಮಾ’ ಕೃತಿಯ ಪೂರ್ಣಪಾಠ ಗೊತ್ತಿಲ್ಲ... ಆದರೆ ಅವರಿಗೆ ಸುಮಾರು ನೂರು ವರ್ಷ ಪೂರ್ವದವರಾದ ವಿಜಯದಾಸರು ರಚಿಸಿರುವ
’ಭಕುತಿ ಸುಖವೂ ರಂಗ ಮುಕುತಿ ಸುಖವೋ’
ಕೀರ್ತನೆಯ ಛಾಯೆ ಪಲ್ಲವಿಯ ಮಟ್ಟಿಗಾದರೂ ಕಾಣುತ್ತದೆ.

ನಿಮ್ಮ ಮಾತು, "ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ." ತುಂಬಾ ಸೊಗಸಾಗಿದೆ. ಒಳ್ಳೆಯ ಲೇಖನ!

ಪ್ರಭು ಮೂರ್ತಿ

Manjunatha Kollegala said...

ಪ್ರಭು ಅವರೇ,

ತಮ್ಮ ನುಡಿಗಳಿಗೆ ನಾನು ಋಣಿ. ಕೀರ್ತನೆಯ ಪೂರ್ಣಪಾಠ ಲೇಖನದಲ್ಲೇ ಇದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧


ನಿಜ, ವಿಜಯದಾಸರ ಆ ಕೃತಿಯಲ್ಲಿ ಇದೇ ಭಾವದ ಛಾಯೆ ಸ್ವಲ್ಪಮಟ್ಟಿಗಾದರೂ ಇದೆ. ತ್ಯಾಗರಾಜರ ಮೇಲೆ ದಾಸಸಾಹಿತ್ಯದ ಪ್ರಭಾವ ಇಲ್ಲದಿಲ್ಲ. ಅದು ಸರ್ವವೇದ್ಯ.