Saturday, May 23, 2020

ಸಮರಸವೇ ಜೀವನ...

ಇತ್ತೀಚಿಗೆ ಫೇಸ್ಬುಕ್/ಇತರ ಮೀಡಿಯಾಗಳಲ್ಲಿ ಒಂದು ಟ್ರೆಂಡ್ ಗಮನಿಸಿದ್ದೇವೆ.  ಯಾರೋ ಒಬ್ಬಾತ/ಕೆ, ಬ್ರಾಹ್ಮಣ ಎಂದಿಟ್ಟುಕೊಳ್ಳಿ.  ತಾವು ಬ್ರಾಹ್ಮಣರೆಂದು ಹೇಳಿಕೊಂಡು ತಮ್ಮ ಮನೆಯಲ್ಲಿ ಮಾಡಿದ ಕೆಲವು ಆಹಾರಪದಾರ್ಥಗಳನ್ನು ಮಾರುವ ಜಾಹೀರಾತು ಹಾಕಿಕೊಳ್ಳುತ್ತಾರೆ - ಅದು ಅವರ ವಾಲ್/ಇನ್ನಾವುದೋ ಗುಂಪಿನಲ್ಲಿ.  ಅದಕ್ಕೆ ಎಂದೂ ಇಲ್ಲದ ಪ್ರತಿರೋಧ, ಹಾಹಾಕಾರ ಹೂಹೂಕಾರಗಳೂ, ವಾದ-ಪ್ರತಿವಾದಗಳೂ, ಔಟ್ ರೇಜುಗಳೂ ಏಳುತ್ತವೆ, ಹಠಕ್ಕೆ ಬಿದ್ದವರಂತೆ ಆಕೆಯ/ಆತನ ಬೆಂಬಲಕ್ಕೆ ನಿಂತ ಅನೇಕರು ಆ ಜಾಹೀರಾತು ಪೋಸ್ಟನ್ನು ಹಂಚಿಕೊಂಡು ಆ ಮಾರಾಟ ಅಧಿಕವಾಗುವಂತೆ ನೋಡಿಕೊಳ್ಳುತ್ತಾರೆ.  ಇರಲಿ, ಇಂತಹ ಮಾರಾಟಕ್ಕೆ ನಿಂತವರು ಸಾಮಾನ್ಯವಾಗಿ ಜೀವನೋಪಾಯಕ್ಕಾಗಿ ಸಣ್ಣ ಗೃಹೋದ್ಯಮ ಕೈಗೊಂಡವರೇ ಆಗಿರುತ್ತಾರಾದ್ದರಿಂದ ನಮ್ಮ ತಕ್ಷಣದ ಭಾವುಕತೆ/ಸಾಮಾಜಿಕ ಕಳಕಳಿಗಳು ಒಂದು ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಿತು, ಇಷ್ಟುಮಟ್ಟಿಗೆ ಈ 'ಗಲಾಟೆ' ಒಳ್ಳೆಯದೇ ಆಯಿತು.

ಇದರಾಚೆಗೆ ಇದು ಕೆಲವು ಗಂಭೀರ ಚಿಂತನೆಗಳನ್ನು ಹುಟ್ಟಿಹಾಕುತ್ತವೆ/ಹುಟ್ಟಿಹಾಕಬೇಕು.  ಇದನ್ನು ಪರಿಶೀಲಿಸುವ ಮೊದಲು, ಎದ್ದಿರುವ ತಕರಾರುಗಳನ್ನು ನೋಡೋಣ:
  1. ಬ್ರಾಹ್ಮಣರು ಈಗ್ಗೆ ಸಾವಿರಾರು ವರ್ಷಗಳಿಂದ ಉಳಿದೆಲ್ಲ ವರ್ಗಗಳನ್ನು (!!!) ತುಳಿಯುತ್ತಲೇ ಬಂದಿದ್ದಾರೆ, ಅದರಲ್ಲೂ ಸಮಾಜದ ಕಟ್ಟಕಡೆಯ ವರ್ಗ ಬ್ರಾಹ್ಮಣರಿಂದ ತುಳಿಯಲ್ಪಟ್ಟಿದೆ.
  2. ಹೀಗೆ ತುಳಿಯುತ್ತ ತುಳಿಯುತ್ತಲೇ ಇವತ್ತು ಕೇವಲ ನಾಲ್ಕೇ ಪರ್ಸೆಂಟ್ ಇರುವ ಈ ವರ್ಗ ದೇಶದ ಬಹುಪಾಲು ಆರ್ಥಿಕ, ರಾಜಕೀಯ, ಸಾಮಾಜಿಕ ಸಂಪನ್ಮೂಲಗಳನ್ನು ನಿಯಂತ್ರಿಸುತ್ತಿದೆ.  ಇದು ಆ ವರ್ಗದ 'ಸೋಷಿಯಲ್ ಕ್ಯಾಪಿಟಲ್'
  3. ಬ್ರಾಹ್ಮಣವರ್ಗಕ್ಕೆ ಈ ಸೋಷಿಯಲ್ ಕ್ಯಾಪಿಟಲ್ ಇರುವುದರಿಂದ ಅವರು ಬಡವರಾಗಿದ್ದರೂ ಸುಲಭವಾಗಿ ಮೇಲೆ ಬರಲು ಸಾಧ್ಯ, ಉಳಿದವರಿಗೆ (ಅವರೆಷ್ಟೇ ಶ್ರೀಮಂತರಾಗಿದ್ದರೂ ಈ ಸಾಧ್ಯತೆಯಿಲ್ಲ)
  4. ಬ್ರಾಹ್ಮಣ ಎನ್ನುವ ಜಾತಿಸೂಚನೆಯೇ ಆ ಸೋಶಿಯಲ್ ಕ್ಯಾಪಿಟಲ್ಲಿನ ಒಂದು ಭಾಗ.
  5. ತಮಗಿರುವ ಈ 'ಅಕ್ರಮ' ಅಡ್ವಾಂಟೇಜನ್ನು ಬಳಸುವುದರ ಮೂಲಕ ಇತರರನ್ನು ಅವಕಾಶಗಳಿಂದ ವಂಚಿಸಿದಂತಾಗುವುದರಿಂದ, To be fair, ಬ್ರಾಹ್ಮಣರು ಈ ಸೋಷಿಯಲ್ ಕ್ಯಾಪಿಟಲ್ ಆದ ತಮ್ಮ ಹೆಸರನ್ನು ಎಲ್ಲೂ ಬಳಸಬಾರದು.
  6. ಆದ್ದರಿಂದ ಬ್ರಾಹ್ಮಣರು ಜಾತಿಯ ಹೆಸರಿನಲ್ಲಿ ಸಂಘಟಿತರಾಗುವುದು, ಜಾತಿಯ ಹೆಸರಿನಲ್ಲಿ ವ್ಯಾಪಾರವ್ಯವಹಾರಗಳನ್ನು ಮಾಡುವುದು, ಜಾತಿಯ ಬ್ರಾಂಡುಗಳನ್ನು ಪ್ರಮೋಟ್ ಮಾಡುವುದು, ಜಾತಿಸಂಬಂಧಿತ ಯಾವುದೇ ಕೆಲಸಗಳನ್ನು ಮಾಡುವುದು ಸಾಮಾಜಿಕ ಅನ್ಯಾಯ.

ಈಗ, ಈ ನಾಲ್ಕು ಪರ್ಸೆಂಟ್ ಜಾತಿ, ದೇಶದ ಉಳಿದ 96 ಪರ್ಸೆಂಟ್ ಜಾತಿಗಳನ್ನು ಸಾವಿರಾರುವರ್ಷಗಳಿಂದ ತುಳಿದುಕೊಂಡು ಬಂತು ಎಂಬುದು ರೋಚಕ ಕತೆ - ಇದರಲ್ಲಿ ಸ್ವಲ್ಪ ತಥ್ಯವಿಲ್ಲದಿಲ್ಲ - ಅದು ಎಷ್ಟು ಏನು ಎಂಬುದು ಮಾತ್ರ ಚರ್ಚಾರ್ಹ.  ಆದರೂ, ಸಾವಿರಾರು ವರ್ಷಗಳಲ್ಲದಿದ್ದರೂ, ಇತಿಹಾಸದ ಯಾವುದೋ ಘಟ್ಟದಲ್ಲಿ ಕೆಲಕಾಲ ಬ್ರಾಹ್ಮಣರು ಶ್ರೇಷ್ಠತೆಯ ವ್ಯಸನವನ್ನು ಮೆರೆದದ್ದೂ, ಇತರ ಹಲವರನ್ನು ತುಳಿದದ್ದೂ, ಅನೇಕ ಬ್ರಾಹ್ಮಣರು ಜಮೀನ್ದಾರಿ, ಜಹಗೀರಿ, ಉಂಬಳಿಗಳನ್ನು ಹೊಂದಿದ್ದುದೂ ಸತ್ಯ (ಅದು ಒಟ್ಟಾರೆ ಬ್ರಾಹ್ಮಣರ ಶೇಕಡಾ ಎಷ್ಟು, ಕಾಲದಿಂದ 'ಬಡಬ್ರಾಹ್ಮಣ'ನೆಂದೇ ಕರೆಯಲ್ಪಡುವ ಇತರ ಬಹುತೇಕ ಬ್ರಾಹ್ಮಣರ ಕತೆಯೇನು, ಇದನ್ನು ಸದ್ಯಕ್ಕೆ ಪಕ್ಕಕ್ಕಿಡುವಾ).  ಈ 'ಸತ್ಯ'ವನ್ನು ಹತ್ತುಪಟ್ಟು ಹಿಗ್ಗಲಿಸಿ ರೋಚಕವಾಗಿ ಬರೆದ ಇತಿಹಾಸವನ್ನು ಓದಿದ ಹೊಸತಲೆಮಾರಿನ ಬ್ರಾಹ್ಮಣರು ಬಹಳಷ್ಟು ಜನ ನಿಜಕ್ಕೂ ಪಶ್ಚಾತ್ತಾಪದಿಂದ ತಪಿಸಿ, ಪ್ರಾಯಶ್ಚಿತ್ತವಾಗಿ ವೈಯಕ್ತಿಕವಾಗಿ/ಸಾಮಾಜಿಕ ಮಟ್ಟದಲ್ಲಿ ಒಂದಿಲ್ಲೊಂದು ಕ್ರಮಗಳನ್ನು ಕೈಗೊಂಡಿರುವ ಸತ್ಯವನ್ನೂ ಮರೆಯದಿರೋಣ (ಸುಮ್ಮನೇ ಆಧುನಿಕ 'ಸೆಕ್ಯುಲರ್'ಗಳಲ್ಲಿ ಬ್ರಾಹ್ಮಣರ ಸಂಖ್ಯೆಯನ್ನೊಮ್ಮೆ ನೋಡಿ).  ಹಾಗೆಯೇ ತೀರ ಇತ್ತೀಚಿನ ಇತಿಹಾಸದವರೆಗೂ ಕಂಡುಬರುತ್ತಿದ್ದ ಅಸಹ್ಯವೆನಿಸುವ ಅಸ್ಪೃಶ್ಯತೆಯ ಆಚರಣೆ ಈಗಿನ ಬ್ರಾಹ್ಮಣತಲೆಮಾರಿನಲ್ಲಿ ಇಲ್ಲವೇ ಇಲ್ಲವೆನಿಸುವಷ್ಟು ಕಡಿಮೆಯಾಗಿದೆಯೆಂಬುದನ್ನೂ ಗಮನದಲ್ಲಿಡೋಣ.  ಇನ್ನು ಈ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮೀಸಲಾತಿಯಿದೆ.  ಅದರ ಮೂಲಧ್ಯೇಯ ನ್ಯಾಯವೇ ಆಗಿದ್ದರೂ ಅದರ ಜಾರಿ, ಬಳಕೆಗಳಲ್ಲಿ ಹಲವು ಅಪಸವ್ಯಗಳಿವೆಯೆಂಬುದನ್ನೂ ಸದ್ಯಕ್ಕೆ ಮರೆತು, ಅದನ್ನು ಅನೇಕ ಮಂದಿ ಬ್ರಾಹ್ಮಣರು ಗೊಣಗುತ್ತಲೇ ಒಪ್ಪಿಕೊಂಡಿದ್ದಾರೆಂಬುದನ್ನು ಗಮನದಲ್ಲಿಡೋಣ.  ವಿರೋಧವಿಲ್ಲವೆಂದಲ್ಲ, ಅದು ಯಾವುದಕ್ಕೂ ಸಹಜವೇ.  ಸರ್ಕಾರದ ಅಧಿಕಾರಸ್ಥಾನಗಳಲ್ಲಿ 60% ಬ್ರಾಹ್ಮಣರೇ ಎನ್ನಲಾಗುತ್ತದೆ (ಗೊತ್ತಿಲ್ಲ).  ಹೀಗಿರುವಾಗ ನಿಜಕ್ಕೂ ಮನಸ್ಸು ಮಾಡಿದ್ದರೆ ಬ್ರಾಹ್ಮಣರಿಗೆ 'ಬೇಡ'ವೆಂದು ಆರೋಪಿಸಲಾಗುತ್ತಿರುವ ಈ ಮೀಸಲಾತಿಯನ್ನು ಇರಗೊಡಿಸುತ್ತಿದ್ದರೇ, ತಮ್ಮ ನರಿಬುದ್ಧಿಯನ್ನುಪಯೋಗಿಸಿ ಕಲ್ಲು ಹಾಕಬೇಕಿತ್ತಲ್ಲವೇ?  ಬದಲಿಗೆ ಅದು ಮುಂದುವರೆಯುತ್ತಲೇ ಇದೆ.  ಹೀಗಿದ್ದರೆ ಒಂದೋ ಈ 60% ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಾರೆಂಬುದು ಸುಳ್ಳಿರಬೇಕು, ಅಥವಾ ಆ ಬ್ರಾಹ್ಮಣರು ನಿಜಕ್ಕೂ ಆರೋಪಿಸಿದಷ್ಟು ಕೆಟ್ಟವರಲ್ಲವೆನ್ನಬೇಕು.  ಅಥವಾ ಉಳಿದ 40% ಅಧಿಕಾರಸ್ಥರಿಗೆ 'ಅಂಜಿ' ಸುಮ್ಮನಿರಬಹುದೇ?  ಹಾಗಿದ್ದರೂ ಈ ಅಂಜುಕುಳಿಗಳಿಂದ, ಈ ಆರೋಪಿಸುವಂತಹ ತೊಂದರೆಯಿರಲಾರದೆಂದಂತಾಯಿತಲ್ಲ.

ಇರಲಿ, ಈ ಸೋಷಿಯಲ್ ಕ್ಯಾಪಿಟಲ್ ವಿಷಯ ಒಮ್ಮೆ ನೋಡೋಣ.  ಅದಕ್ಕೂ ಮುಂಚೆ ನಿಜವಾದ ಕ್ಯಾಪಿಟಲ್ ವಿಷಯ.  ದೇಶದ ಒಟ್ಟು ಸಂಪತ್ತಿನ ಶೇಕಡಾ 30, ಶೇಕಡಾ 1ರಷ್ಟು ಜನದ ಕೈಲಿದೆಯೆನ್ನುತ್ತದೆ ಒಂದು ಅಂದಾಜು.  ಅದೇ ಒಟ್ಟು ಜನಸಂಖ್ಯೆಯ ಶೇಕಡಾ 50ಕ್ಕೆ, ಸಂಪತ್ತಿನ ಕೇವಲ ಶೇಕಡಾ 8ರಷ್ಟಿದೆಯಂತೆ.  ಉಳಿದ ಶೇ. 62ರಷ್ಟು ಸಂಪತ್ತು ಶೇಕಡಾ 49ರಷ್ಟು ಜನದ ಕೈಲಿದೆಯಂತೆ. 

ಈಗ, ಈ 30% ಸಂಪತ್ತನ್ನು ಹೊಂದಿರುವ ಶೇಕಡಾ 1ರಷ್ಟು ಜನ (ಅಂದರೆ ಸು. 1.3 ಕೋಟಿ) ಜನ ಬ್ರಾಹ್ಮಣರೆಂದುಬಿಡಬಹುದೇ?  ಈ ಬಗೆಗಿನ ಅಂಕಿ-ಅಂಶಗಳಂತೂ ನನ್ನ ಬಳಿಯಿಲ್ಲ.  ಭಾರತದ ಮೊದಲ ಹತ್ತು ಅತಿಶ್ರೀಮಂತರಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ.  ಭಾರತದ ಅರವತ್ತೋ ಎಪ್ಪತ್ತೋ ಬಿಲಿಯನೇರುಗಳ ಪಟ್ಟಿಯಲ್ಲಿ ನನಗೆ ಜಾತಿ ಪತ್ತೆಹಚ್ಚಲು ಆಗದ ಒಂದು ಐದಾರು ಜನ ಬಿಟ್ಟರೆ ಉಳಿದವರೆಲ್ಲಾ ಬನಿಯಾ, ಪಾರ್ಸಿ, ಕಾಯಸ್ಥ, ಮುಸ್ಲಿಮ್, ಕ್ರಿಶ್ಚಿಯನ್, ನಾಡಾರ್ ಇತ್ಯಾದಿ (ಎಂದರೆ, ಈ ಗೊತ್ತಾಗದ ಮಂದಿಯನ್ನು ಬ್ರಾಹ್ಮಣರೆಂದೇ ಇಟ್ಟುಕೊಳ್ಳೋಣ - ಗರಿಷ್ಟ 10%).  ಈ ಲೆಕ್ಕದಲ್ಲಿ, ಒಟ್ಟು 30% ಸಂಪತ್ತು ಹೊಂದಿರುವ ಮೊದಲ 1% ಜನರಲ್ಲಿ 10%ನಷ್ಟು ಬ್ರಾಹ್ಮಣರು ಎಂದರೆ, ಒಟ್ಟು ಜನಸಂಖ್ಯೆಯ 0.1% ಮಾತ್ರ ಈ 'ಅತಿಶ್ರೀಮಂತ'ರ ಪಟ್ಟಿಯಲ್ಲಿ ಬರುವವರೆಂದಾಯಿತು.  ಒಟ್ಟು ಶೇ.4 ಇರುವ ಬ್ರಾಹ್ಮಣರಲ್ಲಿ 01% ಅತಿಶ್ರೀಮಂತರೆಂದರೆ ಉಳಿದ 3.9% ಸುಮಾರು ಶ್ರೀಮಂತರ ಪಟ್ಟಿಯಲ್ಲಿ ಬರಬಹುದೇ? (ಅದೇ 62% ಸಂಪತ್ತು ಹೊಂದಿರುವ 49% ಜನ ಇದ್ದಾರಲ್ಲ ಅಲ್ಲಿ).  ಖಂಡಿತಾ ಇರಲಿಕ್ಕಿಲ್ಲ, ಏಕೆಂದರೆ ಬ್ರಾಹ್ಮಣರಲ್ಲಿ ಬಡವರು, ಕಡುಬಡವರು ಇದ್ದಾರೆ, ಕಾಲದಿಂದ ಇದ್ದಾರೆ - ದಿನದ ಒಪ್ಪತ್ತು ಊಟಕ್ಕೂ ಕಷ್ಟಪಡುವ ಬ್ರಾಹ್ಮಣರ ಕುಟುಂಬಗಳು ಅನೇಕವಿವೆ; ಬ್ರಾಹ್ಮಣದಿವಾನರು, ಅಮಲ್ದಾರರು, ಜಮೀನ್ದಾರರು, ಮಂತ್ರಿಮಹಾಮಂತ್ರಿಗಳು ಇದ್ದ ಕಾಲದಲ್ಲೂ ಸಾಮಾನ್ಯಬ್ರಾಹ್ಮಣ 'ಬಡಬ್ರಾಹ್ಮಣ'ನೇ; ದೆಲ್ಲಿಯಲ್ಲಿ ಅನೇಕ ಬ್ರಾಹ್ಮಣರು ಶೌಚಾಲಯಗಳಲ್ಲಿ ಕೆಲಸ ಮಾಡುತ್ತಾರೆ, ಸೈಕಲ್ ರಿಕ್ಷಾ ತುಳಿಯುತ್ತಾರೆ, ಆಟೋ ಓಡಿಸುತ್ತಾರೆ (ಇವನ್ನೆಲ್ಲ ಬ್ರಾಹ್ಮಣರು ಮಾಡುತ್ತಿದ್ದಾರಲ್ಲ, ಮಾಡಬೇಕಾಗಿ ಬಂದಿದೆಯಲ್ಲ ಎಂಬ ದುಃಖ ನನ್ನದಲ್ಲ, ನೂರಾರು ವರ್ಷಗಳಿಂದ ಇತರ ಸಮುದಾಯದವರೂ ಮಾಡುತ್ತಿದ್ದಾರೆ, ಇಲ್ಲಿ ಇದನ್ನು ಹೇಳುವ ಉದ್ದೇಶ ಅಂಕಿಸಂಖ್ಯೆಗಳ ತರ್ಕಕ್ಕಷ್ಟೇ), ಹಾಗೇ ದೇಶದಾದ್ಯಂತ ಮೂರುಕಾಸು ಸಂಬಳ ತೆಗೆದುಕೊಂಡು ಗುಡಿಗಳಲ್ಲಿ ಕೆಲಸ ಮಾಡುವ ಬ್ರಾಹ್ಮಣರಿದ್ದಾರೆ (ಕರ್ನಾಟಕವೊಂದರಲ್ಲೇ ಇಂಥವು ಸುಮಾರು 35000 ಗುಡಿಗಳಿವೆ), ಈ ಪ್ರಸ್ತುತ ಜಾಹೀರಾತು ಕೊಟ್ಟ ಹಿರಿಯ ಮಹಿಳೆಯಂಥವರು ಲೆಕ್ಕವಿಲ್ಲದಷ್ಟಿದ್ದಾರೆ, ಹಪ್ಪಳ ಸಂಡಿಗೆ ಹುಳಿಪುಡಿ ಮಾರಿ ಬದುಕುವವರು.  ಇವರೆಲ್ಲರೂ ಈ ಎರಡನೆಯ ಗುಂಪಿನಲ್ಲಿ ಬರುತ್ತಾರೆನ್ನಲು ಸಾಧ್ಯವಿಲ್ಲ.  ಶೇಕಡಾ 8% ಸಂಪತ್ತನ್ನು ಹೊಂದಿರುವ ಶೇ 50 ಕಡುಬಡವರ ಗುಂಪಿನಲ್ಲೇ ಇವರು ಇರಬೇಕು, ಅಲ್ಲವೇ?  ಇವರ ಸಂಖ್ಯೆ ಎಷ್ಟಾದರೂ ಇರಲಿ, ಇವರಲ್ಲಿ ಬಹುಪಾಲು ಜನ ಅಸಹಾಯಕರು, ಅನಕ್ಷರಸ್ಥರು, ಪೌರೋಹಿತ್ಯವನ್ನೂ ಅರಿಯದ ಜನ, ಎಲ್ಲೋ ಪರಿಚಾರಿಕೆಯೋ, ಅಡುಗೆಯೋ, ಸುತ್ತುಗೆಲಸವೋ ಮಾಡಿಕೊಂಡು ಬದುಕುವವರು, ಅನೇಕ ಮಹಿಳೆಯರು ಅವರಿವರ ಮನೆಗಳಲ್ಲಿ ಅಡುಗೆ ಪಾತ್ರೆ ಇತ್ಯಾದಿ ಮಾಡಿಕೊಂಡು, ಹಪ್ಪಳಸಂಡಿಗೆ ಮಾಡಿಕೊಂಡು ಕಾಲ ಹಾಕುವವರು.  ಮೇಲೆ ಕಾಣಿಸಿದ ಶೇ. 0.1% ಶ್ರೀಮಂತಬ್ರಾಹ್ಮಣರು ಬಂದು ಈ ಕಡುಬಡವರಿಗೆ ಯಾವ ಸಹಾಯವನ್ನೂ ಮಾಡಿದಂತಿಲ್ಲ (ಯಾವತ್ತಿಗೂ ಮಾಡಿದ್ದಿಲ್ಲ).  ಇವರ ಸೋ ಕಾಲ್ಡ್ 'ಸೋಶಿಯಲ್' ಕ್ಯಾಪಿಟಲ್ ಇವರನ್ನು ಮೇಲೆತ್ತಿಲ್ಲ.   ಇಂಥವರಲ್ಲಿ ಬಹುಪಾಲು ಜನ, ಆಪತ್ತಿನಲ್ಲಿ ಒಬ್ಬರ ಕಡೆ ಕೈಚಾಚದೇ ತಮಗೆ ತಿಳಿದದ್ದೇನನ್ನೋ ಮಾಡಿಕೊಂಡು 'ಅಂಬಲಿಯೋ ತುಂಬೇಸೊಪ್ಪೋ ಕುಡಿದಾದರೂ' ಸ್ವಾಭಿಮಾನದಿಂದ ಬದುಕಲೆಳಸುವವರು.  ಇವರೇನು ಭಿಕ್ಶೆಯೆತ್ತುವವರಲ್ಲ, ಸರ್ಕಾರದಿಂದ ಸವಲತ್ತು ಕೇಳುವವರಲ್ಲ, ತಮ್ಮ ಹಪ್ಪಳ-ಸಂಡಿಗೆ ತೆಗೆದುಕೊಂಡು ಸಹಾಯ ಮಾಡಿರೆಂದು ಬೇಡುವವರಲ್ಲ.  ತಮ್ಮಲ್ಲಿರುವ ಸರಕು/ಸೇವೆಯನ್ನು ಮಾರಾಟಕ್ಕಿಟ್ಟಿದ್ದಾರೆ - 'ಬ್ರಾಹ್ಮಣರು ಮಾಡಿದ' ಆಹಾರಪದಾರ್ಥಗಳಿಗೆ ನಿರ್ದಿಷ್ಟ ಸಮುದಾಯದಿಂದ ಬೇಡಿಕೆಯಿದೆಯೆಂಬುದನ್ನು ಬಲ್ಲರು, ತಮ್ಮ ಸೀಮಿತವಲಯದಿಂದಾಚೆಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ.  ಇದನ್ನು ಮೆಚ್ಚಿ ಬೆನ್ನು ತಟ್ಟುವ ಬದಲು ಅಲ್ಲಿ 'ಸೋಷಿಯಲ್ ಕ್ಯಾಪಿಟಲ್' ಹುಳುಕನ್ನರಸಿದರೆ ಏನೆನ್ನಬೇಕು?  ಕಾಲದಿಂದ ನಮ್ಮಲ್ಲಿ ಕಸುಬಿಗೂ ಜಾತಿಗೂ ಸಂಬಂಧವಿದೆ, ಮತ್ತು ಸಮಾಜ ಅದನ್ನು ಹಾಗೆಯೇ ಒಪ್ಪಿದೆ ಕೂಡ - ಮದುವೆ ಮುಂಜಿಗೆ ಪುರೋಹಿತರು, ಬಟ್ಟೆ ಒಗೆಯಲು ಅಗಸರು, ಕ್ಷೌರಮಾಡಲು, ವಾಲಗ ಊದಲು ಕ್ಷೌರಿಕರು ಹೀಗೆ.  ಇದು ತಪ್ಪೋ ಸರಿಯೋ ಎಂಬುದು ಬೇರೆಯ ವಿಚಾರ, ಒಂದು ಕಸುಬನ್ನು ಈಗ ಇನ್ನೊಬ್ಬರು ಮಾಡಬಹುದೆಂಬುದೂ ಬೇರೆಯ ವಿಚಾರ, ಆದರೆ ಈ ಕೆಲಸಗಾರರು ನಮ್ಮನಿಮ್ಮಷ್ಟು ಓದಿದವರಾಗಲೀ ಸೋಷಿಯಲ್ ಕ್ಯಾಪಿಟಲ್ಲಿನ ಬಗೆಗೆ ಭಾಷಣ ಬಿಗಿಯುವವರಾಗಲೀ ಅಲ್ಲ - ಅವರಿಗೆ ಅವತ್ತಿನ ತುತ್ತಿನ ಚೀಲ ತುಂಬುವುದು ಮುಖ್ಯ, ಅದಕ್ಕೆ ತಮ್ಮಲ್ಲಿರುವ ಕಸುಬನ್ನು ಮುಂದಿಟ್ಟು ದುಡಿಯುತ್ತಾರೆ, ಗೌರವದಿಂದ ದುಡಿಯುತ್ತಾರೆ.  ಪೌರೋಹಿತ್ಯ, ಅಡುಗೆ ಮೊದಲಾದ ಕೆಲಸಗಳಿಗೆ ಬ್ರಾಹ್ಮಣರು ಕಾಲದಿಂದ ಹೆಸರಾಗಿದ್ದಾರೆ (ಅವರು ಶುಚಿಯಾಗಿ ಮಾಡುತ್ತಾರೆ, ಪರಿಶುದ್ಧ ಇತ್ಯಾದಿ ನಾನು ಹೇಳುತ್ತಿಲ್ಲ), ಅದು ಅವರ ಕುಲಕಸುಬು, ಅದನ್ನು ಬೇಡುವ ನಿರ್ದಿಷ್ಟ ಸಮುದಾಯಗಳಿವೆ.  ಆ ಸಮುದಾಯಗಳು ಬ್ರಾಹ್ಮಣರವೂ ಇರಬಹುದು, ಇತರರದ್ದೂ.  ಬೇಡುವವರು ಅವರು, ಮಾರುವವರು ಇವರು, ನಮ್ಮ ಗಂಟೇನು ಹೋಯಿತು?  ಜೊತೆಗೆ ಅದು ಒಂದು ಬ್ರಾಂಡ್ ಕೂಡ - ನಿರ್ದಿಷ್ಟ ಜಾತಿ-ಪಂಗಡಗಳು ನಿರ್ದಿಷ್ಟರೀತಿಯ ತಿನಿಸುಗಳಿವೆ ಪ್ರಸಿದ್ಧವಾಗಿವೆ, ಬೇಕಾದವರು ಅವುಗಳನ್ನು ಸವಿಯುವ ಅವಕಾಶ ಈಗ ಇದೆ, ಅದನ್ನು ಅವರು ಬಳಸಿಕೊಳ್ಳುತ್ತಾರೆ.  ಈ ಮೊದಲು ಲಿಂಗಾಯತರ, ಗೌಡರ ತಿನಿಸುಗಳು ಪ್ರಸಿದ್ಧವಿರಲಿಲ್ಲ, ಈಗ ಅವೂ ಮಾರುಕಟ್ಟೆಗೆ ಬಂದಿವೆ, ಆ ಬ್ರಾಂಡನ್ನು ಅವರು ಬೆಳೆಸಿದ್ದಾರೆ.  ಬೇಕಾದವರು ಕೊಂಡು ತಿನ್ನುತ್ತಾರೆ. 

ಇಲ್ಲಿ "ದಲಿತರು ಮಾಡಿದ ಅಡುಗೆ" ಎಂದು ಜಾಹೀರಾತು ಬಂದರೆ ತಿನ್ನುತ್ತೀರೋ ಎನ್ನುವ ಕುಚೇಷ್ಟೆಯ ಪ್ರಶ್ನೆ ಬರುತ್ತದೆ.  ಕಾಲದಿಂದ ದಲಿತರನ್ನು ಅಸ್ಪೃಶ್ಯರನ್ನಾಗಿ ನೋಡಿಕೊಂಡು ಬಂದವರು ಅವರು ಮಾಡಿದ್ದನ್ನು ತಿನ್ನುತ್ತೀರೋ ಎನ್ನುವ ತರಲೆಯ ಪ್ರಶ್ನೆಯಿದು.  ಇದಕ್ಕೆ "ದಲಿತರು ಇದುವರೆಗೂ ಆ ಬ್ರಾಂಡನ್ನು ಮಾರಿಯೇ ಇಲ್ಲ, ನಮಗೆ ಹೇಗೆ ಗೊತ್ತು" ಎನ್ನುವ ಕುರುಡು ಉತ್ತರ ಕೊಡಲಾರೆ.  ಹೌದು, ಈ ಸಾಮಾಜಿಕ 'ಸ್ಟಿಗ್ಮಾ' ಇವತ್ತಿಗೂ ಇದೆ.  ದಲಿತರ ಖಾನಾವಳಿ ಎಂದಿದ್ದರೆ ಉಳಿದ ಹಲವರು ಹೋಗಲಾರರು, ಇದನ್ನು ಒಪ್ಪಲೇಬೇಕು.  ಆದರೆ ಆ ಕಾರಣಕ್ಕೆ, ಕಾಲದಿಂದ ಇದನ್ನೇ ಕಸುಬಾಗಿ ಉಳ್ಳವರು ತಮ್ಮ ಕಸುಬನ್ನು ಬ್ರಾಂಡ್ ಆಗಿ ಮುಂದಿಡಬಾರದೆಂದರೆ, ಅದರಿಂದ ದಲಿತಖಾನಾವಳಿ ಬೆಳೆದೀತೇ?  ಗೌಡರ, ಲಿಂಗಾಯತರ, (ಅಷ್ಟೇಕೆ, ಬ್ರಾಹ್ಮಣರ) ಖಾನಾವಳಿಗೂ ಎಲ್ಲರೂ ಹೋಗುವುದಿಲ್ಲ, ಅವರವರ ಆಯ್ಕೆ ಅದು.  ಹಾಗೆಂದು ಹೊಸಹೊಸ ಬ್ರಾಂಡುಗಳು ಬರುವುದೇನೂ ನಿಂತಿಲ್ಲವಲ್ಲವೇ?  ಇದೂ ಕಾಲಕ್ರಮದಲ್ಲಿ ಹಾಗೆಯೇ ನಿಲ್ಲಬಹುದು.  ದಲಿತರೂ ಇತರ ಹಲವು ಉದ್ಯಮಗಳಂತೆ ಅದನ್ನೂ ಕೈಕೊಳ್ಳಲು ಉತ್ತೇಜಿಸುವುದರಲ್ಲಿ ಅರ್ಥವಿದೆಯೇ ವಿನಾ ಇನ್ನಾವುದನ್ನೋ ತಡೆದುಹಾಕುವುದರಲ್ಲಲ್ಲ ಅಲ್ಲವೇ?  ವೈಯಕ್ತಿಕವಾಗಿ ನನಗೆ ಯಾರೊಡನೆ ಉಣ್ಣಬೇಕೆಂಬ ಯಾವ ಆಯ್ಕೆಯೂ ನಿಷೇಧವೂ ಇಲ್ಲ - ನನ್ನೊಡನೆ ಉಣ್ಣಲು ಅವರಿಗೆ ನಿಷೇಧವಿಲ್ಲದಿದ್ದರೆ ಆಯ್ತು, ನಗುನಗುತ್ತಾ ಉಣ್ಣುತ್ತೇನೆ, ನನ್ನಂಥವರು ಸಾವಿರಾರು ಜನ ಇದ್ದಾರೆಂದು ಬಲ್ಲೆ.  ಅಷ್ಟೇಕೆ, ನಮ್ಮನಮ್ಮ ಕಛೇರಿಗಳಲ್ಲಾಗಲೀ ಹೋಟೆಲುಗಳಲ್ಲಾಗಲಿ ನಮ್ಮ ಪಕ್ಕ ಕುಳಿತು ಉಣ್ಣುವವರು ಯಾರು, ಬಡಿಸುವವರು ಯಾರು, ಅಡುಗೆ ಮಾಡುವವರು ಯಾರು ಇದನ್ನು ನಾವು ನೋಡುತ್ತೇವೆಯೇ?  ಆ ಯೋಚನೆಯಾದರೂ ಬರುತ್ತದೆಯೇ? ಈ ಬದಲಾವಣೆಯನ್ನು ಗಮನಿಸದೇ ಇನ್ನೂ ಎಷ್ಟು ಕಾಲ ಇಂದಿಗೆ ಅಪ್ರಸ್ತುತವಾದ, ಯಾವುದೋ ತಾತನಕಾಲದ ಸಮಾಜವಿಜ್ಞಾನದ ಪಠ್ಯವನ್ನೇ ಒಪ್ಪಿಸುತ್ತಾ ಕೂರುವುದು?  ಅಲ್ಲವೇ?

ಹಾಂ, ದಲಿತರ ಕ್ಯಾಂಟೀನು ನಡೆಯುತ್ತದೆಯೇ ಎಂಬ ಪ್ರಶ್ನೆ ಕೇಳುವವರಿಗೆ ಒಂದು ಪ್ರತಿಪ್ರಶ್ನೆಯಿದೆ.  ದಲಿತರ ಕ್ಯಾಂಟೀನು, ಕಾಫೀಬಾರುಗಳು ಕೊನೆಯ ಪಕ್ಷ ನಗರಪ್ರದೇಶಗಳಲ್ಲಾದರೂ, ನಡೆಯುವುದಿಲ್ಲವೆಂಬುದು ಸತ್ಯವೆಂದಾದರೆ ಅದು ನಿಜಕ್ಕೂ ದುಃಖದ ವಿಷಯ.  ಖಟ್ಟರ್ ಜಾತಿವಾದಿಗಳು ದಲಿತರ ಹೋಟೆಲಿನಲ್ಲಿ ಕಾಫಿ ಕುಡಿಯುವುದಿಲ್ಲ, ಇರಲಿ ಇವರನ್ನು ಸದ್ಯಕ್ಕೆ ಪಕ್ಕಕ್ಕಿಡೋಣ, ಇದು ನಿಧಾನಕ್ಕೆ ಬರಬೇಕಾದ ಪರಿವರ್ತನೆ.  ನಾನು ಕುಡಿಯುತ್ತೇನೆ; ನನ್ನಂತೆ ಯೋಚಿಸುವ ಸಾವಿರಾರು ಜನರಿದ್ದಾರೆ, ಅವರು ಕುಡಿಯುತ್ತಾರೆ; ಇನ್ನು ಹಿಂದೂ ಸಮಾಜದ ಹೊರಗಿರುವ (ಮತ್ತು ಈ ಜಾತೀಯತೆಯ ಕಾರಣಕ್ಕಾಗಿಯೇ ಹಿಂದೂಗಳನ್ನು ದೂರುವ) ಇತರ ಸಮುದಾಯಗಳವರು ದೇಶದಲ್ಲಿ ಶೇಕಡಾ 25ರಷ್ಟಿದ್ದಾರೆ. ಅವರಿಗೆ ಇಲ್ಲಿ ಕುಡಿಯಲು ಖಂಡಿತಾ ತೊಂದರೆಯಿರಬಾರದು; ಇನ್ನು ಸ್ವತಃ ದಲಿತರ ಜನಸಂಖ್ಯೆಯೇ ಸುಮಾರು 15%ಗೂ ಮಿಕ್ಕಿದೆ (ಅವರ ನಡುವೆ ಜಾತೀಯತೆಯ ಕಟ್ಟಲೆಗಳು ಇರಲಾರದೆಂದೇ ಭಾವಿಸಿದ್ದೇನೆ - ಏಕೆಂದರೆ ಇದುವರೆಗಿನ 'ನರೇಟಿವ್ಸ್' ಪ್ರಕಾರ ಜಾತೀಯತೆ ಚಾಲ್ತಿಯಲ್ಲಿರುವುದು ಬ್ರಾಹ್ಮಣ, ಲಿಂಗಾಯತ, ಗೌಡ ಮೊದಲಾದ 'ಮುಂದುವರಿದ' ಜಾತಿಗಳಲ್ಲಿ ಮಾತ್ರವಷ್ಟೇ) ಆದ್ದರಿಂದ ತಮ್ಮ ಹೋಟೆಲುಗಳು ನಡೆಯಲು ಅವರ ಬೆಂಬಲವಂತೂ ಖಂಡಿತಾ ಇದ್ದೇ ಇರುತ್ತದೆ.  ಇನ್ನು ಖಟ್ಟರ್ ಜಾತ್ಯತೀತರು? ಫೇಸ್ಬುಕ್ಕಿನಲ್ಲಿ ಇವರ ಹುಯ್ಲುಗಳನ್ನು ನೋಡಿದರೆ ಅವರ ಸಂಖ್ಯೆಯೂ ಕಡಿಮೆಯೇನಲ್ಲ.  ಜಾತಿವಾದದಾಚೆಗೆ ಇಷ್ಟೊಂದು ಜನರಿದ್ದೂ ದಲಿತರ ಹೋಟೆಲು ನಡೆಯುವುದಿಲ್ಲವೆನ್ನುವುದಾದರೆ, ಈ ಜಾತ್ಯತೀತತೆ ಹುಸಿಯೇ?  "ನಾನು ಜಾತಿವಾದಿ" ಎಂದು ನೇರವಾಗಿಯೇ ಹೇಳಿಕೊಳ್ಳುವ ದುಷ್ಟ ಖಟ್ಟರ್ ಮನಸ್ಥಿತಿಗಿಂತಲೂ ಇಂತಹ ಢೋಂಗೀ ಮನಸ್ಥಿತಿ ಹೆಚ್ಚು ಅಪಾಯಕಾರಿಯಲ್ಲವೇ?

ಈ ಆರ್ಥಿಕ 'ಕೆಳವರ್ಗ'ದ ಬ್ರಾಹ್ಮಣರ ವಿಷಯ ಬಿಡಿ.  ನಮ್ಮಂತಹ ಕೆಳಮಧ್ಯಮವರ್ಗದವರಿಗಾದರೂ ಈ ಸೋಶಿಯಲ್ ಕ್ಯಾಪಿಟಲ್ ಎನ್ನುವುದು ಹೇಗೆ ಕೆಲಸ ಮಾಡಿದೆಯೆಂಬುದನ್ನು ನೋಡೋಣ.  ನಾನೂ ಕಾಲೇಜು ಕಲಿಯುತ್ತಿದ್ದಾಗ ಈ ಸೋಷಿಯಲ್ ಕ್ಯಾಪಿಟಲ್ ಬಗೆಗೆ ಭಾರೀ ತಲೆಕೆಡಿಸಿಕೊಂಡಿದ್ದೆ, ನಮ್ಮ ಪೂರ್ವಜರಿಂದ ಆಗಿತ್ತೆನ್ನಲಾದ ತಪ್ಪುಗಳಿಗೆ ತುಂಬಾ ಬೇಸರಪಟ್ಟಿದ್ದೆ.  ಜಾತಿ ಹೇಳಿಕೊಳ್ಳುವುದು ನಿರ್ಲಜ್ಜತೆಯೆಂಬುದೇ ನನ್ನ ನಿಲುವಾಗಿತ್ತು.  ಕಾಲೇಜಿಗೆ ಅರ್ಜಿ ತುಂಬುವಾಗ ಜಾತಿ, ಧರ್ಮ ಕಲಮುಗಳನ್ನು ಖಾಲಿಬಿಟ್ಟು ದೇಶ ಮಾತ್ರ ತುಂಬಿದೆ.  ಕ್ಲರ್ಕ್ ಕರೆದು ಬೈದು ಅದನ್ನು ತುಂಬಲು ಹೇಳಿದ.  ನಾನು ಜಾತಿ-ಜಾತ್ಯತೀತ ಎಂದೆಲ್ಲ ಭಾಷಣ ಕುಟ್ಟಲು ನೋಡಿದೆ.  "ಜಾತಿಯನ್ನು ಮುಚ್ಚಿಟ್ಟು ಫ್ರೀಶಿಪ್ಪು ಸ್ಕಾಲರ್ಶಿಪ್ಪು ಹೊಡೆಯಲು ನೋಡ್ತಿದೀಯಾ, ನಿಮ್ಮಪ್ಪ ಗೊತ್ತು ನನಗೆ" ಎಂದು ಮತ್ತಷ್ಟು ಉಗಿದು ಆ ಕಲಮುಗಳನ್ನು ತುಂಬಿಸಿದ.  ಆಗ ಹೋಗಲಿ, ಈಗಲೂ ಕೆಲವು ಆನ್ ಲೈನ್ ಫಾರ್ಮುಗಳನ್ನು ತುಂಬಿನೋಡಿ - ಜಾತಿ-ಧರ್ಮ ಕಲಮುಗಳು ಕಡ್ಡಾಯ.  ದುಃಖದ ವಿಷಯವೆಂದರೆ ಜಾತ್ಯತೀತ, ಧರ್ಮನಿರಪೇಕ್ಷವೆಂದು ಹೇಳಿಕೊಳ್ಳುವ ಸರ್ಕಾರವೇ ನಿಮ್ಮನ್ನು ಜಾತಿಯ ಹೊರತಾದ ಒಬ್ಬ ವ್ಯಕ್ತಿಯಾಗಿ ಪರಿಗಣಿಸುವುದೇ ಇಲ್ಲ. 

ಇರಲಿ, ಈ ಟೆಕ್ನಿಕಲ್ ವಿಷಯವನ್ನು ಬದಿಗಿಡೋಣ.  ಜಾತಿಯನ್ನು ಹೇಳಿಕೊಳ್ಳುವುದು, ಅದರಲ್ಲೂ ಬ್ರಾಹ್ಮಣರು, ನಿರ್ಲಜ್ಜವೆನ್ನೋಣ.  ಬದಲಿಗೆ "ಸೋಷಿಯಲ್ ಕ್ಯಾಪಿಟಲ್ (ಸೋ.ಕ್ಯಾ)" ಜಾತಿಯೆಂದುಕೊಳ್ಳೋಣ.  ನಾನು ಹುಟ್ಟಿದ್ದು ಈ ಸೋ.ಕ್ಯಾ ಜಾತಿಯಲ್ಲಿ.  ನಮ್ಮಪ್ಪ 100+ ಸಂಬಳದ ಟೀಚರು.  ಸಹಜವಾಗಿಯೇ ನಾನು ಓದಿದ್ದು ಸರ್ಕಾರೀ ಶಾಲೆಯಲ್ಲಿ - 'ಎಲ್ಲ' ಜಾತಿಯ ಹುಡುಗರೂ ಅಲ್ಲಿಗೆ ಬರುತ್ತಿದ್ದರು.  ಇವತ್ತಿಗೂ, ಆಗಿನ ನನ್ನ ಮಿತ್ರರಲ್ಲಿ ತಮ್ಮ ಜಾತಿಲಾಂಛನಗಳನ್ನು ಹಣೆಗೆ ಹಚ್ಚಿಕೊಂಡು ಬರುತ್ತಿದ್ದ ಒಬ್ಬಿಬ್ಬರನ್ನು ಬಿಟ್ಟರೆ ಮಿಕ್ಕ ಯಾರ ಜಾತಿಯೂ ನನಗೆ ಗೊತ್ತಿಲ್ಲ, ನಮ್ಮ ಬುದ್ಧಿಗೆ ಅದು ಹೊಳೆಯುತ್ತಲೂ ಇರಲಿಲ್ಲ.  ಮುಂದೆ ನಮ್ಮ ತಂದೆಯವರು ಬೋಧಿಸುತ್ತಿದ್ದ ಶಾಲೆಗೆ ಸೇರಿದೆ.  ಅಲ್ಲಿ ಸುಮಾರು ಅರ್ಧದಷ್ಟು ಜನ ದಲಿತಸಮುದಾಯಕ್ಕೆ ಸೇರಿದ ಮಕ್ಕಳು.  ಸೋ.ಕ್ಯಾ.ದವರು ನಾವೊಂದಿಬ್ಬರು, ಉಳಿದವರು ಇತರರು.  ನಮ್ಮಲ್ಲಿ ಆಗೀಗ ಜಗಳವಾಗುತ್ತಿದ್ದುದುಂಟು, ಅವು ಬಾಲಿಶಕಾರಣಗಳಿಗೇ ವಿನಾ ಜಾತಿಗೆ ಸಂಬಂಧಿಸಿದ್ದು ಎಂದೂ ಆಗಿರಲಿಲ್ಲ.  ಇವರಲ್ಲಿ ಕೆಲವರು ನನಗೆ ತುಂಬಾ ಸ್ನೇಹಿತರೂ ಆಗಿದ್ದರು, ನನ್ನನ್ನು ಬೇರೆ ಜಗಳಗಳಿಂದ ರಕ್ಷಿಸುತ್ತಿದ್ದರು ಕೂಡ :)  ನಮ್ಮ ತಂದೆ ಬೇಕೆಂದೇ ನಮ್ಮ ತರಗತಿಗೆ ಬೋಧಿಸುತ್ತಿರಲಿಲ್ಲ - ಮೇಷ್ಟರ ಮಗನೆಂಬ ಇನ್ನೊಂದು ಸೋಷಿಯಲ್ ಕ್ಯಾಪಿಟಲ್ಲನ್ನು ನನಗೆ ಕೊಡುವುದು ಅವರಿಗೆ ಇಷ್ಟವಿರಲಿಲ್ಲ.  ಮೇಷ್ಟರುಗಳಲ್ಲೂ ಅನೇಕ ದಲಿತವರ್ಗದ ಮೇಷ್ಟ್ರುಗಳಿದ್ದರು, ಅವರಲ್ಲಿ ಹಲವರು ಒಳ್ಳೆಯ ಮೇಷ್ಟರುಗಳೂ ಆಗಿದ್ದರು.  ಕೆಲಸಕ್ಕೆ ಬರದ ಮೇಷ್ಟ್ರುಗಳೂ ಕೆಲವರು ಇದ್ದರು, ಅಂಥವರು ಇತರ ವರ್ಗಗಳಲ್ಲೂ ಇದ್ದರು ಕೂಡ.  ಮೇಷ್ಟರುಗಳು ನಮ್ಮನ್ನು ಹೊಡೆಯುತ್ತಿದ್ದುದೂ ಉಂಟು, ಆದರೆ ಜಾತಿಯ ಕಾರಣಕ್ಕೆ ಹೊಡೆದದ್ದು ನನಗೆ ಯಾವತ್ತೂ ನೆನಪಿಲ್ಲ.  ಏಳನೆಯ ತರಗತಿಯಲ್ಲಿ ಒಬ್ಬ ಹುಡುಗಿ ತರಗತಿಗೆ ಮೊದಲ ರ್ಯಾಂಕ್ ಬಂದಳು.  ಬಹಳ ಬುದ್ಧಿವಂತೆಯಾದ ಆಕೆ ಸೋ.ಕ್ಯಾ.ಜನಾಂಗಕ್ಕೆ ಸೇರಿದವಳಾಗಿರಲಿಲ್ಲ.  ನಾನು ಎರಡನೆಯವನಾಗಿ ಬಂದೆ.  ಆದರೆ ಯಾರೂ ಇದಕ್ಕಾಗಿ ಲಿಂಗತಾರತಮ್ಯ, ಸಾಮಾಜಿಕಬಂಡವಾಳ ಮೊದಲಾಗಿ ಗಲಭೆ ಮಾಡಿದ ನೆನಪಿಲ್ಲ (ಆಗೆಲ್ಲಾ ಯಾರಿಗೂ ಇದರ ಪರಿಚಯವೇ ಇಲ್ಲದಿದ್ದುದರಿಂದ ಜೀವನ ಧಗೆಯಿಲ್ಲದೇ ಸಾಗಿತೆನ್ನಬಹುದು).  ಮನೆಯಲ್ಲಿ ನಮ್ಮ ತಂದೆ ನನ್ನನ್ನು ಬೈದರು, ಸರಿಯಾಗಿ ಓದದಿದ್ದುದಕ್ಕಾಗಿ.

ಹೈಸ್ಕೂಲಿನಲ್ಲಿ ನಾನು ಮರೆಯಲೇ ಆಗದ, ಮರೆಯಬಾರದ ಅಧ್ಯಾಪಕರೊಬ್ಬರ ಹೆಸರಿದೆ.  ಆಕೆಯ ಹೆಸರು ದೊಡ್ಡಮ್ಮ 🙏, ನಮ್ಮ ಕನ್ನಡ ಟೀಚರಾಗಿದ್ದರು (ಈಗಲೂ ಇಲ್ಲಿ ಫೇಸ್ಬುಕ್ಕಿನಲ್ಲಿರಬಹುದಾದ ನನ್ನ ಮಿತ್ರರು ಇದನ್ನು ದೃಢೀಕರಿಸಬಹುದು).  ಈ ಅಕ್ಕರೆತುಂಬಿದ ಮಹಿಳೆ, ಅದೇ ದಲಿತವರ್ಗಕ್ಕೆ ಸೇರಿದವರಾಗಿದ್ದರು.  ಇವತ್ತೇನಾದರೂ ನನಗೆ ಶಾಸ್ತ್ರೀಯ ಕನ್ನಡದಲ್ಲಿ ಅಲ್ಪಸ್ವಲ್ಪ ಆಸಕ್ತಿಯಿದ್ದರೆ, ಅದು ಆಕೆಯ ಋಣ.  ಬಹುಶಃ ಬದುಕಿನಲ್ಲಿ ಮೊದಲ ಬಾರಿಗೆ ಕನ್ನಡವನ್ನು ಅಷ್ಟು ಗಂಭೀರವಾಗಿ ಗತ್ತಿನಿಂದ ಮಾತಾಡಬಹುದೆಂದು ಅರಿತದ್ದು ಆಕೆಯ ಮಾತನ್ನು ಕೇಳಿದ ಮೇಲೇ.  ಕನ್ನಡದ ಮೇರುಕೃತಿಗಳನ್ನು ಓದಲು ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು.  ದೊಡ್ಡ ವಿದುಷಿಯೇನಲ್ಲ, ಆದರೆ ಬಹಳ ಅಕ್ಯಾಡೆಮಿಕ್ ಮನೋವೃತ್ತಿಯವರಾಗಿದ್ದ ಆಕೆ, ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಆಗದಿದ್ದರೆ ಅದನ್ನು ಪ್ರಾಂಜಲವಾಗಿ ಒಪ್ಪಿಕೊಂಡು ಮರುದಿನ ತಿಳಿದು ಬಂದು ತಿಳಿಸುತ್ತಿದ್ದರು (ದುರದೃಷ್ಟವಶಾತ್ ಗಂಭೀರ ಮಾನಸಿಕ ತೊಂದರೆಗೊಳಗಾಗಿ ಎರಡು ದಶಕಗಳ ಹಿಂದೆ ಆಕೆ ತೀರಿಕೊಂಡರೆಂದು ಕೇಳಿದೆ).  ನೋಡಿ, ನನ್ನ ಬಳಿಯಿರುವ ಈ 'ಸಾಮಾಜಿಕ ಬಂಡವಾಳ' ಆಕೆಯ ಪ್ರಸಾದ.  ಆದರೆ ಈ 'ಬಂಡವಾಳ' ನನ್ನ ಅಂತರಂಗವನ್ನು ಶ್ರೀಮಂತಗೊಳಿಸಿತಾಗಲೀ, ನನ್ನ ಜೀವನಕ್ಕೆ ಕಸುಬಿಗೆ ಯಾವುದೇ ರೀತಿಯೂ ಸಹಾಯ ಮಾಡಲಿಲ್ಲವೆಂಬುದನ್ನು ನೆನಪಿನಲ್ಲಿಡೋಣ. 

ಇನ್ನೊಬ್ಬರು ಮೇಷ್ಟರಿದ್ದರು, ಲಿಂಗಾಯತರು.  ನಮಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು.  ಸ್ಥೂಲಕಾಯದ, ಅನಾರೋಗ್ಯದ ಆತ ನಮಗೆ ಸ್ಪೆಶಲ್ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಾರೆಂಬ ಕಾರಣಕ್ಕೆ ನನಗವರನ್ನು ಕಂಡರೆ ಆಗುತ್ತಿರಲಿಲ್ಲ.  ಅವರ ಕ್ಲಾಸಿಗೇ ಹೋಗುತ್ತಿರಲಿಲ್ಲ.  ಅದೇ ಕಾರಣಕ್ಕೆ ಅವರಿಗೆ ನನ್ನ ಮೇಲೂ ಬಹಳ ಸಿಟ್ಟು.  ಆದರೆ ಹೀಗೆ 'ಅನಗತ್ಯ'ವಾದ ಸ್ಪೆಶಲ್ ಕ್ಲಾಸುಗಳನ್ನು ತೆಗೆದುಕೊಂಡು ಅವರು ಮಾಡುತ್ತಿದ್ದುದೇನೆಂದರೆ, ನಮಗೆ ಸಿಲಬಸಿನಲ್ಲಿ ಇದ್ದ ಇಲ್ಲದ ಇಂಗ್ಲಿಷ್ ವ್ಯಾಕರಣವನ್ನೆಲ್ಲ ಅಚ್ಚುಕಟ್ಟಾಗಿ ಉದಾಹರಣೆ ಸಹಿತ ಪಾಠ ಮಾಡಿ, ನೋಟ್ಸ್ ಬರೆಸುತ್ತಿದ್ದರು.  ಉದ್ದಕ್ಕೂ ಅವರ ಅವಕೃಪೆಗೆ ಒಳಗಾಗಿಯೇ ಬಂದ ನನಗೆ ಅದರ ನಿಜವಾದ ಬೆಲೆ ತಿಳಿದದ್ದು ಹೈಸ್ಕೂಲ್ ಮುಗಿಸಿದ ಮೇಲೆಯೇ.  ಆ ರಜೆಯಲ್ಲಿ, ಅವರಿವರಿಂದ ಆಗಾಗ ನೋಟ್ಸ್ ಕಡ ಪಡೆದು ರಫ್ ನೋಟಿನಲ್ಲಿ ಗೀಚಿಟ್ಟಿದ್ದ ಇಡೀ ವ್ಯಾಕರಣದ ನೋಟ್ಸನ್ನು ನೀಟಾಗಿ ಪುನರ್ನಿರ್ಮಿಸಿದೆ, ರಜೆಯಲ್ಲಿ ಭದ್ರವಾಗಿ ಇಂಗ್ಲಿಷ್ ಕಲಿತೆ.  ಹೀಗೆ ನನ್ನ ಕಸುಬಿಗೆ ಅತ್ಯಗತ್ಯವಾದ ಕ್ಯಾಪಿಟಲು, ಅವರ ಭಿಕ್ಷೆ 🙏 ಅದನ್ನು ನೀವು ಸೋಶಿಯಲ್ ಕ್ಯಾಪಿಟಲ್ ಎನ್ನುತ್ತೀರೋ ಇನ್ನಾವ ಕ್ಯಾಪಿಟಲ್ ಎನ್ನುತ್ತೀರೋ ನನಗೆ ತಿಳಿಯದು.

ಇನ್ನು ಸರ್ಕಾರದ ಕೆಲಸವಾಗಲೀ ಸವಲತ್ತುಗಳಾಗಲೀ ಎಂದಿಗೂ ಸಿಕ್ಕಿದ್ದಿಲ್ಲ.  ಖಾಸಗೀ ಕೆಲಸಗಳಲ್ಲಿ ನನ್ನ ಜಾತಿಯನ್ನು ಯಾರೂ ಕೇಳಿದ್ದಿಲ್ಲ.  ಆದ್ದರಿಂದ ನನಗೆ ತಿಳಿದ ಮಟ್ಟಿಗೆ ನನಗೆ ಸಹಾಯ ಮಾಡಿದ್ದು ನಾನು ಕಲಿತ ಕಸುಬೇ ಹೊರತು 'ಜಾತಿ' ಎಂಬ ಸೋಶಿಯಲ್ ಕ್ಯಾಪಿಟಲ್ ಅಲ್ಲ.  ಸುಮಾರು ಇದೇ ರೀತಿಯ ನೂರಾರು ಕತೆಗಳಿರುತ್ತವೆಂಬುದನ್ನು ಬಲ್ಲೆ.    ಪರಿಸ್ಥಿತಿ ಹೀಗಿರುವಾಗ, ಬೇರೆಲ್ಲಾ ಕ್ಯಾಪಿಟಲುಗಳಿಂದಲೂ ವಂಚಿತರಾಗಿ ಕುಲಕಸುಬೊಂದನ್ನೇ ಬಲ್ಲ ಒಂದಷ್ಟು ಜನ ಹೊಟ್ಟೆಪಾಡಿಗಾಗಿ (ಬಂಗಲೆ ಕಟ್ಟಿಕೊಳ್ಳುವುದಕ್ಕೇನು ಅಲ್ಲ) ತಮ್ಮ 'ಸೋಶಿಯಲ್ ಕ್ಯಾಪಿಟಲ್' ಬಳಸಿಕೊಂಡರೆ ನಾವು ಕರುಬುವುದು ಬೇಡ, ಸಮಾಜಕ್ಕೆ ಹೊರೆಯಾಗದೇ ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳುತ್ತಿದ್ದಾರಲ್ಲ ಎಂದು ಸಂತೋಷ ಪಡೋಣ.  ಇದೇ ಶ್ರಮವನ್ನು, ಹಾಗೆ ಉಪಯೋಗಿಸಿಕೊಳ್ಳಲು ಕ್ಯಾಪಿಟಲ್ ಇಲ್ಲದವರಿಗೆ ಹೇಗೆ ತುಂಬಬಹುದೆಂಬುದರ ಕಡೆ ಹರಿಸಿದರೆ ಇನ್ನೂ ಒಳ್ಳೆಯದಾದೀತು.

----------

ಇದರ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ

3 comments:

sunaath said...

ಒಳ್ಳೆಯ ಬರಹ. ನನಗೂ ಸಹ ನನ್ನ ಗೆಳೆಯರನೇಕರ ಜಾತಿ ಇಂದಿಗೂ ಗೊತ್ತಿಲ್ಲ. ತಿಳಿದುಕೊಳ್ಳುವ ಉತ್ಸುಕತೆಯೂ ಇಲ್ಲ!

hknayak said...

ಬರಹ ಚೆನ್ನಾಗಿದೆ, ತುಂಬ ಇಷ್ಟವಾಯಿತು. ತರ್ಕ ತುಂಬ ವಿಸ್ತಾರವಾದರೂ ವಿಷಯ ಸಂಗ್ರಹಣೆ ಮತ್ತು ಮಂಡನೆ ಬಹಳ ಸಮಂಜಸವಾಗಿದೆ.👌👌

hknayak said...

ತಾವು ನನ್ನ ಕೆಲವು ಹಳೆಯ ನೆನಪುಗಳನ್ನು ಓದಬಹುದು.🙏🙏