"ಪ್ರೀತಿಯ ಸರೂ,
"ಹತ್ತು ವರ್ಷದಿಂದ ನಾವು ಮಾತಾಡುತ್ತಲೇ ಇದ್ದೇವೆ, ನೀನೀಗ ಅಮ್ಮನ ಮನೆಗೆ ಹೋಗಿರುವಾಗಲೂ ದಿನಾ ಮಾತಾಡುತ್ತೇವೆ - ಅದೇ ಊಟ ತಿಂಡಿ ಮುನಿಸು - ದಿನದ ಮಾತಷ್ಟೇ, ಎದುರಾಬದುರಾ ಮನದ ಮಾತು ಹೊರಬರುವುದೇ ಇಲ್ಲ ನೋಡು. ಅದಕ್ಕೇ ಇದನ್ನ ಬರೆಯಲು ಕುಳಿತಿದ್ದೇನೆ, ಇದನ್ನು ನೀನೆಂದೂ ನೋಡಲಾರೆಯೆಂಬ ಭರವಸೆಯೇ ಇದಕ್ಕೆ ಸ್ಫೂರ್ತಿ; ಅಕಸ್ಮಾತ್ ನೋಡಿದೆಯೋ, ನಾನಲ್ಲೇ ನಾಚಿಕೆಗೇ ಸತ್ತೆ - ಅದ್ಯಾವುದೋ ಹಳೆಯಕಾಲದ ಯಕ್ಷ, ಪತ್ನಿಗೆ ಮೇಘಸಂದೇಶ ಕಳಿಸಿದನಂತೆ. ಮೋಡಕ್ಕೆ ಮಾತು ಬರುವುದಿಲ್ಲವೆಂಬುದು ಅವನಿಗೂ ಗೊತ್ತು ನೋಡು.
"ನೀನು ಮಕ್ಕಳನ್ನೂ ಕರಕೊಂಡು, ಇವತ್ತು ಹೋಗಿ ನಾಳೆ ಬರುತ್ತೇನೆಂದು ತೌರಿಗೆ ಹೋದೆ. ನಿಮ್ಮನ್ನು ಬಸ್ಸು ಹತ್ತಿಸಿ ಬಂದು ಟೀವಿ ಹಾಕಿದರೆ ಪ್ರಧಾನಿಗಳ ಭಾಷಣ ಮೊಳಗುತ್ತಿತ್ತು. ಇಪ್ಪತ್ತೊಂದು ದಿನಗಳ ಲಾಕ್ ಡೌನ್! "ಅಯ್ಯೋ ಶಿವನೇ..." ತಲೆಗೆ ಕೈಹೊತ್ತು ಕುಳಿತೆ. ಇಪ್ಪತ್ತೊಂದು ದಿನಕ್ಕೆ ನೀನೂ ತಯಾರಿರಲಿಲ್ಲ, ನಾನೂ! ಓಡಿ ಹೋಗಿ ವಾಪಸ್ ಕರೆದುಕೊಂಡು ಬಂದುಬಿಡಲಾ ಅಂತ ಹುಚ್ಚುಯೋಚನೆ. ಪಾಪ "ತೌರಸುಖ"ಕ್ಕೆ ನಾನೇಕೆ ಕಲ್ಹಾಕಲಿ, ಅಲ್ವಾ? ನಾಳೆಯಿಂದ ಆಫೀಸೂ ಇಲ್ಲ. ನಿನ್ನ ಕಲಕಲ, ದಡಬಡ, ವಟವಟ ಏನೂ ಇಲ್ಲ; ಇಡೀ ಮನೆಯಲ್ಲಿ ಒಬ್ಬನೆಂದರೆ ಒಬ್ಬನೇ - ಇದ್ದಕ್ಕಿದ್ದಂತೆ ಖುಶಿಯಿಂದ "ಹುರ‍್ರೇ..." ಎಂದು ಕೂಗಬೇಕೆನಿಸಿ ಕ್ಷಣ ತಡೆದೆ, ಮರುಕ್ಷಣವೇ ಯಾರೂ ಇಲ್ಲವೆಂಬುದು ಗಮನಕ್ಕೆ ಬಂದು ಕೂಗಿಯೂ ಬಿಟ್ಟೆ. "ಏನಾಯ್ತ್ರೀ ಮುಕುಂದ್ರಾವ್?" ಅಂತ ಎದುರ್ಮನೆಯ ತರ್ಲೆ ಮುದುಕ ಬಾಗಿಲು ತಟ್ಟುತ್ತಾನೆಂದು ಕಾದೆ. ಯಾರೂ ಬರಲಿಲ್ಲ. ಕಾಫಿ ಮಾಡಿಕೊಳ್ಳೋಣವೆಂದು ಅಡುಗೆಮನೆಗೆ ಹೋದೆ. ಅಡುಗೆಮನೆ ಚೊಕ್ಕಟವಾಗಿತ್ತು. ಸ್ಟೊವ್ ಪಕ್ಕದಲ್ಲೇ ಇದ್ದ ಪ್ಲಾಸ್ಕಿನಲ್ಲಿ ನೀ ಮಾಡಿಟ್ಟು ಹೋದ ಕಾಫಿ ಬಿಸಿಬಿಸಿಯಾಗಿ ಪರಿಮಳಬೀರುತ್ತಿತ್ತು. ದಿನಬೆಳಗಾದರೆ ಜಗಳಾಡುತ್ತಿದ್ದರೂ ನೀನಿಲ್ಲದ ಮನೆಯ ಬಗ್ಗೆ, ನೀನಿಲ್ಲದ ನನ್ನ ಬಗ್ಗೆ ಇಷ್ಟು ಯೋಚಿಸುತ್ತೀಯಲ್ಲೇ! ಒಂದು ಕಪ್ ಕಾಫಿ ಬಗ್ಗಿಸಿಕೊಂಡು ಬಂದು ಕೂತೆ. ಗಂಟಲಲ್ಲಿಳಿಯುತ್ತಿದ್ದ ಬಿಸಿಬಿಸಿ ಕಾಫಿಯೊಡನೆ ಅದೊಂದು ಬಗೆಯ ದಿವ್ಯಮೌನ ಮೈಮನಗಳನ್ನಾವರಿಸತೊಡಗಿತು. ಕಾಫಿ ಗುಟುಕರಿಸುತ್ತಾ ತುಸು ಹೊತ್ತು ನನ್ನಿಷ್ಟದ ಕಾದಂಬರಿ ಓದಿದೆ. ಹೊಟ್ಟೆ ಚುರುಗುಟ್ಟತೊಡಗಿತು. ಕರೆದು ಬಡಿಸಲು ನೀನಿಲ್ಲವೆಂಬುದು ನೆನಪಾಗಿ ಅಡುಗೆಮನೆಗೆ ಹೋದರೆ ನನ್ನಿಷ್ಟದ ಬಿಸಿಬೇಳೆಭಾತ್, ಪಚ್ಚಡಿ! ಅರೇ, ಮಧ್ಯಾಹ್ನ ಊಟದಲ್ಲಿ ಇದಿರಲಿಲ್ಲ ಅಲ್ವೇನೇ? ಹೋಗುವಾಗ ಮಾಡಿಟ್ಟು ಹೋದೆಯಾ? ತಟ್ಟೆಗೊಂದಿಷ್ಟು ಹಾಕಿಕೊಂಡು ಬೆಡ್ರೂಮಿಗೆ ಬಂದೆ. ಒಗೆದ ಶೀಟು ಹಾಸಿ ಓರಣವಾಗಿದ್ದ ಮಂಚ ಕರೆಯಿತು. ಮಂಚದ ಮೇಲೇ ಕುಳಿತು ಟೀವಿ ನೋಡುತ್ತಾ ತಿಂದೆ (ನೀನಿದ್ದಿದ್ದರೆ ಎಷ್ಟು ರಂಪ ಮಾಡಿರುತ್ತಿದ್ದೆ ನೆನಪಿಸಿಕೋ). ನೀನಿಲ್ಲದ ಅರಾಜಕತೆಯನ್ನು ಇಷ್ಟೂ ಅನುಭವಿಸದಿದ್ದರೆ ಹೇಗೆ? ತಟ್ಟೆಯನ್ನ ಸಿಂಕಿಗೆ ಹಾಕದೇ ಅಲ್ಲೇ ಪಕ್ಕಕ್ಕಿಟ್ಟೆ. ಜೋರು ವಾಲ್ಯೂಮಿನಲ್ಲಿ ನನ್ನಿಷ್ಟದ ಮಿಡ್ನೈಟ್ ಶೋ ನೋಡುತ್ತಾ ನಿದ್ದೆಗೆ ಜಾರಿದೆ - ಮಂಚಕ್ಕೆಲ್ಲಾ ನಾನೊಬ್ಬನೇ, ತಲೆಬದಿಗೆ ಕಾಲು ಹಾಕಿದರೂ ಕೇಳುವವರಿಲ್ಲ. ಎಂತಹ ಸೊಗಸಾದ ನಿದ್ದೆ ಅಂತೀಯಾ?
"ಬೆಳಗ್ಗೆ ಆಟೊಮ್ಯಾಟಿಕ್ಕಾಗಿ ಶುರುವಾದ ರೇಡಿಯೋ ಚಿತ್ರಗೀತೆ ಹಾಡುತ್ತಿತ್ತು.
"ನನ್ನವಳು ನನ್ನೆದೆಯ ಹೊನ್ನಾಡನಾಡುವಳು
ಬೆಳಗುಗೆನ್ನೆಯ ಚೆಲುವೆ ನನ್ನ ಮಡದಿ...
"ನನಗೆ ಧಿಗ್ಗನೆ ಎಚ್ಚರ. ಆಗಲೇ ಬೆಳಗ್ಗೆ ಏಳೂಮುಕ್ಕಾಲು. ಲೇಟಾಯ್ತು ಅಂತ ಒಂದು ಕ್ಷಣ ಗಾಬರಿಯಾದರೂ, ಲಾಕ್ ಡೌನ್, ಬೇಗ ಎದ್ದೇಳುವ ಕೆಲಸವಿಲ್ಲ ಅಂತ ನೆನಪಾಗಿ ಮಗ್ಗುಲು ಬದಲಿಸಿದೆ. ಅಭ್ಯಾಸಬಲದಿಂದೆಂಬಂತೆ ಹಾಗೇ ಪಕ್ಕಕ್ಕೆ ಕೈ ಚಾಚಿದೆ - ಎಂದಿನ ನಿನ್ನ ಚಿರಪರಿಚಿತವಾದ ಸ್ಪರ್ಶ ಕೈಗೆಟುಕಲಿಲ್ಲ (ಎಂಥಾ ಹಿತವಿತ್ತೇ ಅದರಲ್ಲಿ!). ದಿನಾ ಇಷ್ಟುಹೊತ್ತಿಗೆ ದೊಡ್ಡ ಮಗ್ಗಿನ ತುಂಬ ಟೀ ತುಂಬಿಕೊಂಡು ಬಂದು, ಪಕ್ಕ ಕುಳಿತು ನನ್ನನ್ನೆಚ್ಚರಿಸುತ್ತಿದ್ದಿ, ಇಬ್ಬರೂ ಒಟ್ಟಿಗೇ ಕುಳಿತು ಒಂದೇ ಮಗ್ಗಿನಲ್ಲಿ ಟೀ ಹೀರುತ್ತಿದ್ದೆವು (ನೀನೂ ಮಳ್ಳಿಯೇ ಇದ್ದೀಯೆ ಬಿಡು. ದಿನಾ ಜಗಳ ಕಾದರೂ ಇದೊಂದು ಮಾತ್ರಾ ಹಕ್ಕಿನಂತೆ ಉಳಿಸಿಕೊಂಡು ಬಂದಿದ್ದೀ ಇಷ್ಟು ವರ್ಷವಾದರೂ! ನಾನೂ ದಿನಾ ಇದಕ್ಕಾಗೇ ಎದುರು ನೋಡ್ತೀನಿ). ಇವತ್ತು ಈ ಕ್ರಮ ತಪ್ಪಿಹೋಗಿ, ದಿನವೇ ಶುರುವಾಗಲಿಲ್ಲವೇ ಸರೂ! ಕೊನೆಗೊಮ್ಮೆ ಹೊಟ್ಟೆ ಚುರುಗುಟ್ಟತೊಡಗಿದಾಗ ಹೇಗೋ ಎದ್ದೆ. ಸ್ನಾನ ಸುರುವಿಕೊಂಡು, ನೆನ್ನೆಯದೇ ಉಳಿದ ಅಡುಗೆಯನ್ನು ತಿಂದೆ. ಮಧ್ಯಾಹ್ನದ ಊಟದ ಚಿಂತೆ ಆಗಲೇ ಕಾಡತೊಡಗಿತು. ಅಲ್ಲ, ನನಗೇನು ಅನ್ನ-ಸಾರು ಮಾಡಿಕೊಳ್ಳಲು ಬರೊಲ್ಲವೆನ್ನಬೇಡ - ಚಪಾತಿ ದೋಸೆಗಳು ನನ್ನ ಕೈಲೂ ಚಂದ್ರಮಂಡಲವೇ ಆಗುತ್ತವೆ, ರಾಗಿಮುದ್ದೆ ಭೂಗೋಳವೇ ಆಗುತ್ತದೆ, ದೋಸೆಯೊಂದು ಮಾತ್ರ ಕಾವಲಿಯನ್ನಪ್ಪಿ, ಎಬ್ಬಿದರೆ ಹರಕಂಗಿಯಾಗುತ್ತದೆ. ಏನೀಗ? ಯಾರು ತಿನ್ನಬೇಕು ಹೇಳು, ನಾನು ತಾನೆ? ನೋಡಿ ನಗಲು ನೀನೂ ಇಲ್ಲವಲ್ಲ.
"ಇವತ್ತಿಗೆ 21 ದಿನವೇ ಮಾರಾಯ್ತಿ. ಬದುಕು ಬೇಸರವಾಗಿದೆ. ಆಣೆ ಮಾಡಿ ಹೇಳುತ್ತೇನೆ, ನೀನಿಲ್ಲದೇ ಇಪ್ಪತ್ತೊಂದು ದಿನ ಕಳೆದೆನಾ ಅಂತ ನನಗೇ ನಂಬಲಾಗುತ್ತಿಲ್ಲ. ಸಾಯ್ಲಿ ಆ ಕೊರೋನಾ - ಹೇಗೋ ಸದ್ಯ, ನಾಳೆ ಒಮ್ಮೆ ಬಂದು ಸೇರಿಬಿಡು ಪುಣ್ಯಾತ್ಗಿತ್ತಿ. ನೀನು ಏನು ಮಾಡಿಹಾಕಿದರೂ ಕಮಕ್ಕಿಮಕ್ಕೆನ್ನದೇ, ಚಪ್ಪರಿಸಿಕೊಂಡು ತಿನ್ನುತ್ತೇನೆ. "ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು" ಒಟ್ಟಿಗೆ ಟೀ ಕುಡಿದುಕೊಂಡು ಬದುಕಿಬಿಡೋಣ. ಮೊನ್ನೆ ಅಂಗಡಿಗೆ ಹೋದಾಗ ಶಾವಿಗೆ, ದ್ರಾಕ್ಷಿ ಗೋಡಂಬಿ ಎಲ್ಲಾ ತಂದಿಟ್ಟಿದ್ದೇನೆ. ನೀನು ಮನೆ ಸೇರುವ ಹೊತ್ತಿಗೆ ನಿನ್ನಿಷ್ಟದ ಶಾವಿಗೆ ಪಾಯಸ ಮಾಡಿಟ್ಟಿರುತ್ತೇನೆ.
ಇಂತಿ ನಿನ್ನ
ಮುಕುಂದ"
ಪತ್ರ ಬರೆದು ದಿಂಬಿನಡಿಯಿಟ್ಟ ಮುಕುಂದ ಟಿವಿ ಹಚ್ಚಿದ. ಪ್ರಧಾನಿಗಳು ಮತ್ತೊಮ್ಮೆ ಮಾತಾಡುತ್ತಿದ್ದರು: "ದೇಸ್ ವಾಸಿಯೋಂ, ತೀನ್ ಮೈ ತಕ್ ಲಾಕ್ ಡೌನ್ ಔರ್ ಬಢಾನಾ ಪಡೇಗಾ... " ದಸಕ್ಕನೆ ಕುಸಿದು ಕುಳಿತ ಮುಕುಂದ. ಮುಂದಿನದು ಕೇಳಲಾಗಲಿಲ್ಲ. ತಲೆಕೊಡವಿ ರೇಡಿಯೋ ಹಚ್ಚಿದ. ಮಿರ್ಜಾಘಾಲಿಬ್ ನ ಗೀತೆಯೊಂದು ತೇಲಿ ಬರುತ್ತಿತ್ತು:
"ಏ ನ ಥೀ ಹಮಾರಿ ಕಿಸ್ಮತ್ ಕಿ ವಿಸಾಲ್-ಏ-ಯಾರ್ ಹೋತಾ
ಅಗರ್ ಔರ್ ಜೀತೇ ರೆಹತೇ ಯಹೀ ಇಂತೆಜಾರ್ ಹೋತಾ"

ಈ ಬರಹ ದಿನಾಂಕ 22-04-2020ರ ಉದಯವಾಣಿಯ "ಅವಳು" ಪುರವಣೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಪ್ರಕಟವಾಗಿದೆ. ಪ್ರಕಟಿತ ಬರಹವನ್ನು ಇಲ್ಲಿ ನೋಡಬಹುದು:
No comments:
Post a Comment