ಇದೇನು, ಭಾನುವಾರ ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ, ಇವನಿಗೇನು ಬಂತು ಎಂದುಕೊಳ್ಳುತ್ತಿದ್ದೀರೋ. ಅಂದುಕೊಳ್ಳಿ, ನನಗೇನೂ ಅಚ್ಚರಿಯಿಲ್ಲ, ಬೇಸರವೂ ಇಲ್ಲ. ದಿನನಿತ್ಯದ ಗಡಿಬಿಡಿಯ ಬದುಕಿನಲ್ಲಿ ಟಾಯ್ಲೆಟ್ಟಿನಲ್ಲಿ ಒಂದರ್ಧ ಗಂಟೆಯಷ್ಟೇ ಕೂತು ಎದ್ದು ಬರುವುದಾಗಿರುತ್ತದೆ, ಭಾನುವಾರವೂ ಕೆಲಕಾಲ ನಿರಾಳವಾಗಿ ಕೂರಬಾರದೆಂದರೆ ಹೇಗೆ?
ಹಿರಿಯರಾದ ಭೈರವಿ ಕೆಂಪೇಗೌಡರ ಅದ್ಭುತ ಗಾಯನವನ್ನು ಧ್ವನಿಮುದ್ರಿಸಬೇಕೆಂದು ಆಗಿನ ಗ್ರಾಮಾಫೋನ್ ಸಂಸ್ಥೆ ಅವರಲ್ಲಿ ವಿನಂತಿಸಿತಂತೆ. "ಎಷ್ಟು ಸಮಯ ಹಾಡಬೇಕು?" - ಕೆಂಪೇಗೌಡರ ಪ್ರಶ್ನೆ. "ಐದು ನಿಮಿಷ" - ಗ್ರಾಮಾಫೋನ್ ಕಂಪನಿಯ ಉತ್ತರ. "ನಾನು ಲಹರಿಗೆ ಬರುವುದಕ್ಕೇ ಅರ್ಧಗಂಟೆ ಬೇಕು, ಆಗೊಲ್ಲ" ಎಂದು ಉತ್ತರಿಸಿ ಎದ್ದು ನಡೆದರಂತೆ ಕೆಂಪೇಗೌಡರು. ಸಂಗೀತವೇನೋ "ನಾಭಿ ಹೃತ್ಕಂಠರಸನ ನಾಸಾದುಲಯಂದು" ಬರುವಂಥದ್ದು. ಅದಕ್ಕೇ ಲಹರಿಗೆ ಬರುವುದಕ್ಕೆ ಅರ್ಧಗಂಟೆ ಬೇಕೆಂದರೆ, ಶೌಚವೆಂಬುದು ಅದಕ್ಕಿಂತ 'ಮೂಲ'ಭೂತ ವಿಚಾರ - ಮನೋಧರ್ಮವೊಂದಕ್ಕೇ ಅಲ್ಲ, ದೇಹಧರ್ಮಕ್ಕೂ ಸಂಬಂಧಿಸಿದ್ದು - ಅಡಿಗರು ಹೇಳುವಂತೆ "ಪಾತಾಳದಾಳದಿಂದೆದ್ದುಬರುವ ವಿಕಾರ"ವೆಂದೇ ಇಟ್ಟುಕೊಳ್ಳೋಣ. ಅದಕ್ಕೇನು ಕಡಿಮೆ ಸಮಯ ಬೇಕಾದೀತೇ? ಬ್ರಹ್ಮಶೌಚದ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಕೇಳಿ, ಹೇಳುತ್ತೇನೆ:
ಬಿಡುವಿಲ್ಲದೇ ಜಗತ್ಸೃಷ್ಟಿಯಲ್ಲಿ ತೊಡಗಿದ್ದ ಬ್ರಹ್ಮದೇವರಿಗೆ ಇದ್ದಕ್ಕಿದ್ದಂತೆ 'ವಿಸರ್ಜನೆ'ಯ ಲಹರಿ ಬಂದು ಎದ್ದು ಹೊರಟರಂತೆ. ಇನ್ನೇನು ಶೌಚಗೃಹದೊಳಗೆ ಕಾಲಿಡಬೇಕು, ಅಷ್ಟರಲ್ಲಿ ಪರಿಚಾರಕನು ಬಂದು "ರಾಮಜನನವಾಯಿತು ಸ್ವಾಮಿ" ಎಂದು ಸುದ್ದಿ ಮುಟ್ಟಿಸಿದನಂತೆ. ಸರಿ ಎಂದು ಬ್ರಹ್ಮದೇವರು ಒಳಗೆ ಹೋದರು. ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಸರಿಯಾಗಿ ಮತ್ತೊಬ್ಬ ಪರಿಚಾರಕ ಸುದ್ದಿ ಮುಟ್ಟಿಸಿದನಂತೆ. "ರಾಮಪಟ್ಟಾಭಿಷೇಕವಾಯಿತು ಸ್ವಾಮಿ". ಬ್ರಹ್ಮ ನಿರ್ಲಿಪ್ತನಾಗಿ, ಅದಕ್ಕೂ "ಸರಿ" ಎಂದು ಹೇಳಿ, ಮತ್ತೆ ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡನಂತೆ. ನೋಡಿ, ರಾಮ ಹುಟ್ಟಿದಾಗ ಒಳಹೋದ ಬ್ರಹ್ಮ ಹೊರಬರುವ ಹೊತ್ತಿಗೆ ಇಡೀ ರಾಮಾಯಣವೇ ಮುಗಿದುಹೋಗಿತ್ತು. ಇದು ಬ್ರಹ್ಮಶೌಚ. ಇಡೀ ಜಗತ್ತಿನ ಸೃಷ್ಟಿಯ ಹೊಣೆಹೊತ್ತ ಬ್ರಹ್ಮನೇ ಶೌಚದಲ್ಲಿ ದಶಕವೆರಡು ದಶಕಗಳನ್ನೇ ಕಳೆಯಬಹುದಾದರೆ ಅಂತಹ ಯಾವ ಹೊಣೆಯೂ ಇಲ್ಲದ ಹುಲುಮಾನವರು ಇನ್ನೆಷ್ಟು ದಶಕಗಳನ್ನು ಶತಕಗಳನ್ನು ಕಳೆಯಬಾರದು. ರಾಮಾಯಣದಂತೆ ಇದೊಂದು ಶೌಚಾಯನವೇ ಆದೀತು. ಆದರೆ ನನ್ನ ಈ ಚಿಂತನೆಗೆ ಚಿಂತನೆಯೆಂದು ಕರೆದಿದ್ದೇನೆಯೇ ಹೊರತು ಶೌಚಾಯನವೆಂದಿಲ್ಲ. ರಸಾಯನಕ್ಕೆ ಪ್ರಾಸಗೊಡುವ ಪದವನ್ನು ಇದಕ್ಕೆ ಹೊಂದಿಸಿ, ರಸಾಯನದ ರುಚಿ ಕೆಡಿಸಲಾರೆ. ಶೌಚಪುರಾಣವೆಂದರೂ ನಡೆಯುತ್ತಿತ್ತು (ಅಷ್ಟೇಕೆ, ಸರಿಯಾದ ಸಮಯದಲ್ಲಿ ತಕ್ಕ ಎಡೆ ಸಿಕ್ಕದೇ ಕೈಮೀರಿದರೆ ಉದ್ದಕ್ಕೂ 'ಶೌಚಚರಿತೆ'ಯೂ ಆದೀತು, ’ಉಚ್ಚಾಟ’ನೆಯೂ ಆದೀತು). ಶೌಚವೇನೋ ಪುರಾತನವಾದದ್ದೇ, ಪುರಾಣವೆನಿಸಿಕೊಳ್ಳಲು ಬೇಕಾದ ಹಳಮೆ ಅದಕ್ಕಿದೆ, ನಮ್ಮಲ್ಲಿ ಶೌಚವು ಚಿಂತನೆಯ ವಿಷಯವಾದದ್ದು ಇತಿಹಾಸದಲ್ಲಿ ತೀರ ಇತ್ತೀಚಿಗೆ, ಒಂದೆರಡು ಗಂಟೆಗಳ ಹಿಂದೆ ಎನ್ನಿ.
ನೋಡಿ, ಏನೋ ಹೇಳಲು ಹೋಗಿ ಏನೋ ಹೇಳತೊಡಗಿದೆ. ನಿಮ್ಮ ತಕರಾರು ಶೌಚದ ಬಗೆಗಾಗಲೀ ಅವರವರ ಮನೆಯಲ್ಲಿ ಅವರವರು ಶೌಚಕ್ಕಾಗಿ ತೆಗೆದುಕೊಳ್ಳುವ ಸಮಯದ ಬಗೆಗಾಗಲೀ ಅಲ್ಲವೆಂದು ನನಗೆ ಗೊತ್ತು. ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ ಎಂಬುದು ನಿಮ್ಮ ತಕರಾರು ಅಲ್ಲವೇ? ಅದನ್ನೇ ಹೇಳಲು ಹೊರಟೆ, ಆದರೆ ಈ ಶೌಚವೆಂಬುದು ಭಾವನಾತ್ಮಕವಿಷಯ ನೋಡಿ, ಅದರ ಸಮರ್ಥನೆಗಿಳಿದುಬಿಟ್ಟೆ, ಇರಲಿ. ವಿಷಯಕ್ಕೆ ಬರೋಣ. ನಮ್ಮಲ್ಲಿ ಇದೊಂದು ದೊಡ್ಡ ಮೌಢ್ಯ, ದೈವಚಿಂತನೆಗೂ ಶೌಚಚಿಂತನೆಗೂ ಅದು ಹೇಗೋ ಥಳಕು ಹಾಕುವುದು. ಶೌಚದಲ್ಲಿ ದೈವಚಿಂತನೆ ಮಾಡಬಾರದೆಂದಾಗಲೀ, ದೈವಸಾನ್ನಿಧ್ಯದಲ್ಲಿ ಶೌಚಚಿಂತನೆ (ಕೊನೆಯಪಕ್ಷ ಚಿಂತೆ, ಕೆಲವೊಮ್ಮೆ ಅನಿವಾರ್ಯವಾಗಿ) ಮಾಡಬಾರದೆಂದಾಗಲೀ ಇದೆಯೇ? ಶೌಚಾಶೌಚಗಳು ಪ್ರಕೃತಿವ್ಯಾಪಾರ, ಪರಮಾತ್ಮನಿಂದಲೇ ನಿರ್ಮಿಸಲ್ಪಟ್ಟಂಥವು. ಚಿಂತನೆಯನ್ನೇನೋ ಮಾಡದಿದ್ದೇವು, ಆದರೆ ಚಿಂತೆ? ನಮ್ಮ ಕೈಯಲ್ಲಿದೆಯೇ? ಬಂದರೆ ಮುಗಿಯಿತು. ದೈವಕ್ಕೆ ಅಪಚಾರವಾಗದಂತೆ ಅಲ್ಲಿಂದ ಕಳಚಿಕೊಳ್ಳುವುದು ಹೇಗೆಂಬ ಚಿಂತೆ ಬಾಧಿಸದೇ ಬಿಟ್ಟೀತೇ? ಪರಮಾತ್ಮನೇನೋ ಭಯಕೃದ್ಭಯನಾಶನ, ಹೌದು. ಆದರೆ ಈ ಕ್ಷಣಕ್ಕಂತೂ ಆತ ಭಯಕೃತ್ ಅಷ್ಟೇ. ಭಯನಾಶನನೂ ಹೌದೆಂಬ ಮಾತು ನಮ್ಮ ಪ್ರಜ್ಞೆಯ ಮೇಲ್ಪದರದಲ್ಲಿದೆಯೇ ವಿನಾ ನಂಬಿಕೆಯಾಗಿ ಬೇರು ಬಿಟ್ಟಿಲ್ಲ; ಅವಸರವನ್ನು ರೂಪಿಸಿದ ಪರಮಾತ್ಮನು ಅದಕ್ಕೊಂದು ದಾರಿಯನ್ನೂ ಕಲ್ಪಿಸುತ್ತಾನೆಂದು ಮನಸ್ಸು ನಂಬಲೊಲ್ಲದು. ನಂಬಿದರೂ ಆ ಮನಸ್ಸಿನ ಹಿಡಿತದಲ್ಲಿಲ್ಲದ ದೇಹ ನಂಬಲೊಲ್ಲದು. ತನ್ನದೆಂಬುದನ್ನೆಲ್ಲವನ್ನೂ ಕೈಬಿಟ್ಟು "ಮಾನಾಭಿಮಾನ ನಿನ್ನದೋ" ಎಂದು ದ್ರೌಪದಿಯಂತೆ ಎರಡೂ ಕೈಗಳನ್ನು ಎತ್ತಲೊಲ್ಲದು. ಬದಲಿಗೆ ಎರಡು ಬೆರಳನ್ನಷ್ಟೇ ಎತ್ತುತ್ತದೆ. ಬಾಧೆಗೊಳಪಟ್ಟ ದೇಹದ್ದು ದ್ವೈತಚಿಂತನೆ - ಪರಮಾತ್ಮನೇ ಬೇರೆ, ಈ ಸಂಕಟವೇ ಬೇರೆ, ನೀನೇ ಬೇಗ ಮುಕ್ತಿಯ ದಾರಿ ಹುಡುಕಿಕೋ ಎನ್ನುತ್ತದೆ. ಏನು ಮಾಡುತ್ತೀರಿ? ಪರಮಾತ್ಮನನ್ನು ಈ ವಿಷಯದಲ್ಲಿ ದೂರುವಂತಿಲ್ಲ. ಪ್ರಕೃತಿ ಪರಮಾತ್ಮನ ಸೃಷ್ಟಿ, ಅದರ ವಿಕೃತಿ ನಮ್ಮದೇ ಸೃಷ್ಟಿಯಷ್ಟೇ? ದೇಹದಲ್ಲೇನೋ ಹೊರದಾರಿಯನ್ನು ಪರಮಾತ್ಮನು ಅಚ್ಚುಕಟ್ಟಾಗಿ ನಿರ್ಮಿಸಿ ಕೈತೊಳೆದುಕೊಂಡಿದ್ದಾನೆ (ಮತ್ತೆ? ಕೈ ತೊಳೆಯಬೇಡವೇ). ಆದರೆ ಅಲ್ಲಿ 'ಹೋಗ'ಬಾರದು ಇಲ್ಲಿ ಹೋಗಬಾರದು ಎಂಬ ಕಟ್ಟುಪಾಡು ನಮ್ಮದೇ ಸೃಷ್ಟಿ. ಪ್ರಾಣಿಗಳನ್ನು ಮೀರಿದೆವೆಂಬ ಹಮ್ಮು ನಮಗಿದೆಯಲ್ಲವೇ? ಅದಕ್ಕೇ ನಮಗಿದು ಶಿಕ್ಷೆ. ಆಯ್ತು, ಹಾಗೂ, ಪರಮಾತ್ಮನೇ ನೀಡಿರುವ ಬುದ್ಧಿಯನ್ನೂ ವಿವೇಕವನ್ನೂ ಉಪಯೋಗಿಸಿ, ಹೇಗೋ ಶೌಚಾಲಯವನ್ನು ಕಂಡುಹಿಡಿದು (ದೇವರ ದಯದಿಂದ ಅದು ಖಾಲಿಯೂ ಇದ್ದು), ಹೋಗಿ ಕೂತೆವೆನ್ನಿ. ಆ 'ಮೋಕ್ಷ'ಕ್ಕೆ ಇನ್ನಾವ ಮೋಕ್ಷ ಸಾಟಿ? "ಅಬ್ಬಾ, ಕಾಪಾಡಿದೆಯಲ್ಲ ಪರಮಾತ್ಮ" ಎಂಬ ಉದ್ಗಾರ ಆ ಶೌಚದಲ್ಲೂ ಹೊಮ್ಮಿದರೆ ತಪ್ಪೇ? ಆತ ಸರ್ವಾಂತರ್ಯಾಮಿಯಲ್ಲವೇ? ಶಿಷ್ಯರೆಲ್ಲರಿಗೂ ವ್ಯಾಸರಾಜರು ಒಂದೊಂದು ಬಾಳೆಯ ಹಣ್ಣನ್ನು ನೀಡಿ "ಯಾರೂ ಇಲ್ಲದೆಡೆ ತಿಂದು ಬನ್ನಿ" ಎಂದಾಗ, ಮೂರ್ಖಪಂಡಿತರು ಶೌಚದಲ್ಲಿ ಗುಟ್ಟಾಗಿ ತಿಂದು ಬಂದರಂತೆ, ಆದರೆ ಅಲ್ಲಿಯೂ ಪರಮಾತ್ಮನು ಇದ್ದಾನೆಂದು ಮನಗಂಡ ಕನಕದಾಸರು ಹಣ್ಣನ್ನು ತಿನ್ನದೇ ಬಂದರಲ್ಲವೇ? ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಇಲ್ಲೂ ಸ್ಮರಿಸಿದರೆ ತಪ್ಪೇನು? ಪುರಂದರದಾಸರೇ ಹೇಳಿಲ್ಲವೇ?
ಗಂಧವ ಪೂಸಿ ತಾಂಬೂಲ ಮೆಲುವಾಗ ಕೃಷ್ಣಾ ಎನಬಾರದೇ, ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ, ಕೃಷ್ಣಾ ಎನಬಾರದೇ?
"ಶೌಚದಲ್ಲಿರುವಾಗೊಮ್ಮೆ ಕೃಷ್ಣಾ ಎನಬಾರದೇ" ಎಂದಿಲ್ಲ ಒಪ್ಪೋಣ, ಆದರೆ ಅದೇ ಕೃತಿಯಲ್ಲಿ ಹೇಳಿದ್ದಾರಲ್ಲ
ದುರಿತರಾಶಿಗಳನು ತರಿದು ಬಿಸಾಡಲು, ಕೃಷ್ಣಾ ಎನಬಾರದೆ, ಸದಾ
ಗರುಡವಾಹನ ಸಿರಿಪುರಂದರವಿಠಲನ್ನ ಕೃಷ್ಣಾ ಎನಬಾರದೇ?
"ಸದಾ" ಕೃಷ್ಣಾ ಎನ್ನಬೇಕೆಂದಿರುವಾಗ, ಶೌಚಕಾಲವೂ ಆ ಸದಾಕಾಲದಲ್ಲೇ ಬರುತ್ತದಲ್ಲವೇ? ಅದರಲ್ಲೂ "ದುರಿತರಾಶಿಗಳನ್ನು ತರಿದು ಬಿಸಾಡಲು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಶೌಚವೆಂಬುದೇನು ಕಡಿಮೆ ದುರಿತರಾಶಿಯೇ? ಸಂಕಟಬಂದಾಗ ವೆಂಕಟರಮಣನಲ್ಲದೇ ಇನ್ನಾರು ನೆನಪಿಗೆ ಬಂದಾರು? ಶೌಚವೆಂತಹ ಸಂಕಟ ಎಂದಿರಾ? ಮೂಲವ್ಯಾಧರನ್ನು (ಮೂಲವ್ಯಾಧಿಯಿಂದ ಬಾಧೆಪಡುವವರನ್ನು) ಕೇಳಿ ನೋಡಿ, ಗೊತ್ತಾದೀತು. ಇನ್ನೊಂದು ಕತೆ ನೆನಪಾಗುತ್ತಿದೆ, ಹೇಳಿ, ಆಮೇಲೆ ಹೆಚ್ಚು ಸತಾಯಿಸದೇ ವಿಷಯಕ್ಕೆ ಬಂದುಬಿಡುತ್ತೇನೆ. ಭಕ್ತಶಿರೋಮಣಿ ಹನುಮಂತನಿಗೂ ಈ ಶೌಚದ ಮಡಿವಂತಿಕೆಯ ಮೌಢ್ಯ ಮೆಟ್ಟಿಕೊಂಡಿತ್ತಂತೆ (ಆತನಿಗೆ ಪುರಂದರದಾಸರ ಹಾಡಿನ ಪರಿಚಯವಿದ್ದಿರಲಿಕ್ಕಿಲ್ಲ, ಆ ಕಾಲಕ್ಕೆ). ಯಾರೋ ಪಾಪ ಒಬ್ಬ ಶೌಚಪೀಡಿತ, ಶೌಚಕ್ಕೆ ಕುಳಿತಿದ್ದನಂತೆ. ಒಳಗಿನ ಬೇಗೆ, ಪಾಪ ಏನು ಸಂಕಟವಾಯಿತೋ, ಮುಕ್ಕುವಾಗೊಮ್ಮೆ "ರಾಮಾ... ರಾಮರಾಮಾ..." ಎಂದು ಉದ್ಗರಿಸಿದನಂತೆ. ಆಂಜನೇಯನಿಗೆ ಈ ರಾಮನಾಮಸ್ಮರಣೆ ಕಿವಿಗೆ ಬಿತ್ತಂತೆ. ಮಾರುತಿ, "ಯತ್ರಯತ್ರ ರಘುನಾಥಕೀರ್ತನಂ ತತ್ರತತ್ರ ಕೃತ ಮಸ್ತಕಾಂಜಲಿಂ" ತಾನೇ? ಹೋಗಿ ನೋಡುತ್ತಾನೆ, ನೋಡುವುದೇನಿದೆ? ಈ ಪಾಪಿ ಶೌಚದಲ್ಲಿ ಕುಳಿತು ರಾಮನಾಮಸ್ಮರಣೆ ಮಾಡುತ್ತಿದ್ದಾನೆ! ಸಿಟ್ಟು ಬರದಿರುತ್ತದೆಯೇ ಆ ರಾಕ್ಷಸಾಂತಕನಿಗೆ? ಮುಷ್ಠಿ ಬಿಗಿದು ತಲೆಗೆ ಒಂದೇಟು ಅಪ್ಪಳಿಸಿದನಂತೆ. ಆ ಸೀನ್ ಅಲ್ಲಿಗೆ ಕಟ್ ಆಗಿದೆ. ಆ ಶೌಚಿಯ ಗತಿ ಏನಾಯಿತೋ ಆ ಕತೆ ಹೇಳುವುದಿಲ್ಲ. ಬಹುಶಃ ಒಳಗೆ ಕಟ್ಟಿಕೊಂಡಿದ್ದೆಲ್ಲಾ ಒಂದೇಟಿಗೆ ಹೊರಬಂದು, ಶೌಚಬಾಧೆಯಿಂದ ಮುಕ್ತಿ ದೊರಕಿರಲೂ ಬಹುದು, ಆತ ಕೃತಜ್ಞನಾಗಿ (ಕಣ್ಣೀರಿನಲ್ಲೇ ಕೈ ತೊಳೆದುಕೊಂಡು) ಮನೆಗೆ ಹಿಂದಿರುಗಿರಲೂ ಬಹುದು. ಇರಲಿ, ಕತೆಯ ಮುಂದಿನ ಸೀನು ಸ್ವಾರಸ್ಯಕರವಾಗಿದೆ. ಮಾರುತಿ, ಒಡೆಯನ ಸೇವೆಯಲ್ಲಿ ಲೀನನಾಗಿದ್ದಾನೆ. ರಾಮನಿಗೆ ಎಣ್ಣೆತಿಕ್ಕಿ ಅಭ್ಯಂಜನ ಮಾಡಿಸುವ ಕೆಲಸ. ತಲೆಗೆ ಎಣ್ಣೆ ತಿಕ್ಕಲು ಕೈಯಲ್ಲಿ ಎಣ್ಣೆ ಹಾಕಿಕೊಂಡು ಆ ಮೃದುಕುಟಿಲಕೇಶರಾಶಿಯನ್ನು ತುಸುತುಸುವೇ ಸರಿಸುತ್ತಿದ್ದಾನೆ; ಕೈಗೇನೋ ದೊಡ್ಡ ಗುಬುಟೊಂದು ಸಿಕ್ಕಿದಂತಾಗಿ ಬೆಚ್ಚುತ್ತಾನೆ; ಇದೇನೆಂದು ಕೂದಲು ಸರಿಸಿ ನೋಡುತ್ತಾನೆ, ರಾಮನ ತಲೆಯ ಮೇಲೆ ಅಷ್ಟು ದಪ್ಪ, ಇಷ್ಟುದ್ದ ಬೋರೆ!. ಹನುಮನಿಗೆ ದುಃಖ ಕೋಪಗಳೆರಡೂ ಒಟ್ಟಿಗೇ ಉಂಟಾಗುತ್ತದೆ. "ಪ್ರಭೂ, ನಿನ್ನ ತಲೆಯ ಮೇಲೆ ಹೀಗೆ ಹೊಡೆದವನನ್ನು ಇಲ್ಲವೆನಿಸಿಬಿಡುತ್ತೇನೆ ಹೇಳು ಯಾರದು" ಎನ್ನುತ್ತಾನೆ ಹಲ್ಲು ಕಡಿಯುತ್ತಾ. ರಾಮ ಹೇಳುತ್ತಾನೆ "ನನಗೂ ಗೊತ್ತಿಲ್ಲಪ್ಪಾ ಬೆಳಗ್ಗೆ ಯಾರೋ ಭಕ್ತ ನನ್ನ ಸ್ಮರಣೆ ಮಾಡಿದ. ಆನಂದದಿಂದ ಕಣ್ಮುಚ್ಚಿದೆ, ಮರುಕ್ಷಣವೇ ತಲೆಯ ಮೇಲೆ ಯಾರೋ ಬಲವಾಗಿ ಗುದ್ದಿದಂತಾಯಿತು, ಮಾರುತೀ ಎಂದು ಚೀರಿದ್ದೊಂದೇ ನೆನಪು. ಪಾಪ ಆ ನನ್ನ ಭಕ್ತನಿಗೆ ಅದಾವ ಪಾಪಿ ಹೊಡೆದನೋ, ನನ್ನ ತಲೆ ಅಸಾಧ್ಯವಾಗಿ ನೋಯುತ್ತಿದೆ". ಇದನ್ನು ಕೇಳಿದ ಮಾರುತಿಗೆ, ಜ್ಞಾನೋದಯವಾಗಿ ತನ್ನ ಅಕಾರ್ಯಕ್ಕೆ ಬಹುವಾಗಿ ಪಶ್ಚಾತ್ತಾಪಪಟ್ಟನಂತೆ, ಇದು ಕತೆ. ಇದು ನಿಜವೇ ಇರಬೇಕು. ಏಕೆಂದರೆ, ಆಮೇಲೆ ಸ್ವತಃ ನಾನೇ ಅದೆಷ್ಟೋ ಎಂಥೆಂಥದ್ದೋ ಸಂದರ್ಭಗಳಲ್ಲಿ ರಾಮಾ ಎಂದಿದ್ದೇನೆ, ರಾಮರಾಮಾ ಎಂದಿದ್ದೇನೆ. ಮಾರುತಿ ನನಗೆಂದೂ ಹೊಡೆದದ್ದಿಲ್ಲ. ಬಾಷ್ಪವಾರಿಪರಿಪೂರ್ಣಲೋಚನನಾಗಿ ಆಶೀರ್ವದಿಸಿರಬೇಕೆಂದೇ ನನ್ನ ನಂಬಿಕೆ.
ಓ, ದೈವಚಿಂತನೆಯ ಬಗ್ಗೆ ನಿಮ್ಮದೇನು ತಕರಾರಿಲ್ಲವೇ? ತಕರಾರೇನಿದ್ದರೂ ಶೌಚಚಿಂತನೆಯ ಬಗೆಗೇ? ಸರಿ ಬಿಡಿ. ನನಗೇನು ಚಿಂತನೆಗೆ ಶೌಚವೇ ಆಗಬೇಕೆಂದೇನಿಲ್ಲ. ಅಥವಾ ಶೌಚ ಆಗಬಾರದೆಂಬ ಮಡಿವಂತಿಕೆಯೂ ಇಲ್ಲ. ಎಲ್ಲೋ ಈ ವಿಷಯ ಬಂತು, ಚಿಂತನೆ ಹರಿಯಿತಷ್ಟೇ, ಇರಲಿ, ಅದೇಕೆ ಬಂದಿತೆಂದರೆ, ಮಿತ್ರರೊಬ್ಬರು, ಪಬ್ಲಿಕ್ ಟಾಯ್ಲೆಟುಗಳಲ್ಲಿ ನಮನಮೂನೆ ಹಾಡುಗಳನ್ನು ಹಾಡುತ್ತಾ ಕುಳಿತವರ ಬಗ್ಗೆ ಒಂದು ನಗೆಬರಹ ಬರೆದಿದ್ದರು. ಯಾರೋ ಒಬ್ಬ ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಕುಳಿತು "ಓ... ಮೇಘವೇ, ಮೇಘವೇ ಓಡಿಬಾ" ಎಂದು ಹಾಡುತ್ತಿದ್ದನಂತೆ. ಇನ್ನೊಬ್ಬ ಯಾರೋ "ಓ ಮಲೆನಾಡಿನ ಮೈಸಿರಿಯೇ" ಎಂದು ಹಾಡುತ್ತಿದ್ದನಂತೆ. ಇವರು ಹೀಗೆ ಹಾಡುತ್ತಿದ್ದರೆ ಹೊರಗಿರುವವರು ಏನೆಂದು ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ಮಿತ್ರರ ಅಳಲು. ಅದಕ್ಕೆ ನನಗೆನಿಸಿದ್ದು, ಅಲ್ಲಿಂದ (ಶೌಚಾಲಯದಿಂದ) ಹೊಮ್ಮುವ ಹಾಡುಗಳಿಗೆ ಅರ್ಥ ಕಲ್ಪಿಸಹೊರಡುವುದು ವ್ಯರ್ಥಶ್ರಮ. ಅವರಿಬ್ಬರೂ ಬಹುಶಃ ಉಳಿದವರನ್ನೂ ಹಾಡಲು ಪ್ರೇರೇಪಿಸಿ ಟಾಯ್ಲೆಟ್ಟಿನ ಪ್ರಶಾಂತವಾತಾವರಣವನ್ನು ಕದಡಲು ಯತ್ನಿಸುತ್ತಿದ್ದರೆನಿಸುತ್ತದೆ. ಇಂಥವರಿಗೆ ಮೌನವೇ ಪ್ರತ್ಯುತ್ತರ. ಅದಕ್ಕೇ ನನ್ನ ಮಿತ್ರರಿಗೆ ಸಲಹೆ ಕೊಟ್ಟೆ - ನೀವೂ ಮೌನವಾಗಿಯೇ ಪ್ರತ್ಯುತ್ತರ ನೀಡಬೇಕಿತ್ತು "ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು... ಕೋಪಿಸಲು, ನಿಂದಿಸಲು, ಮೌನವ ಮೀರುವನೇನು"
ಕೆಲವೊಮ್ಮೆ ಹೀಗಾಗುತ್ತದೆ. ತಮಾಷೆಯಲ್ಲ, ಹಿರಿಯರೊಬ್ಬರು (ಎಲ್ಲಿ ಹೋದರೂ ಹಾಡುವ ಅಭ್ಯಾಸ ಬಿಡದವರು) ಒಮ್ಮೆ ಟಾಯ್ಲೆಟ್ಟಿನಿಂದ ಹಾಡುತ್ತಿದ್ದರು "ಏನಿದೀ ಗ್ರಹಚಾರವೋ... ಏನಿದೀ ವನವಾಸವೋ... ಏನ ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ..."
ಅವರು ಹಾಡುತ್ತಿದ್ದುದೇನೋ ಪಾಪ, ಅಷ್ಟನ್ನೇ. ಅವರ ಕಷ್ಟವೇನೋ ಯಾರಿಗೆ ಗೊತ್ತು! ಆದರೆ ಈ ಕಿಡಿಗೇಡಿ ಮನ ಬಿಡಬೇಕಲ್ಲ, ಹಾಡಿನ ಮುಂದಿನ ಚರಣವನ್ನು ಆ ಸಂದರ್ಭದಲ್ಲಿ ಅನ್ವಯಿಸಿಬಿಟ್ಟಿತು, ಕಲ್ಪಿಸಿಕೊಂಡು ನಗು ತಡೆಯಲಾಗಲಿಲ್ಲ
"ಕಾಲ ಕಾಲಕೆ ತಿಂದು ತೇಗಿ
ಕಾಲ ಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ
ಅಲೆವ ಗತಿಯಿದು ಬಂದಿತೋ"
ಸದ್ಯ, ನನ್ನ ನಗೆ ಆ ಹಿರಿಯರಿಗೆ ತಲುಪಲಿಲ್ಲ, ಅಷ್ಟಕ್ಕೆ ನಾನು ಬಚಾವು. ನಗೆ ಕೊಲ್ಲುವಂತೆ ಹಗೆ ಕೊಲ್ಲದು. ಇಂತಹ ಸಂದರ್ಭದಲ್ಲಿ ನಗೆಯೆನ್ನುವುದು ಆತ್ಮಹತ್ಯೆಗೆ ಅದ್ಭುತ ಸಾಧನ. ಒಮ್ಮೆ ಹೀಗಾಯಿತು, ಕೆಲವು ದಶಕಗಳ ಹಿಂದೆ. ನಾನು ನನ್ನ ಸ್ಥೂಲದೇಹಿ ಮಿತ್ರನೊಬ್ಬನೊಡನೆ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಅಲ್ಲೆಲ್ಲ ತೂಕ ನೋಡುವ ಮಿಶಿನ್ನುಗಳಿದ್ದುವಲ್ಲ - ನನ್ನ ಮಿತ್ರನಿಗೆ ತೂಕ ನೋಡಿಕೊಳ್ಳೋಣವೆನಿಸಿತು. ನೋಡಿದರೆ ಎಪ್ಪತ್ತು ಕಿಲೋ ತೋರಿಸುತ್ತಿತ್ತು! ಕಾರ್ಡಿನ ಹಿಂದೆ ರೋಗಬಾಧೆ ಎಂಬ ಒಂದು ಪದದ ಭವಿಷ್ಯ ಬೇರೆ. ಪಾಪ ಈತ ಭೂಮಿಗಿಳಿದು ಹೋದ. ಅರವತ್ತೈದಿದ್ದನಂತೆ. ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದನಂತೆ, ಐದು ಕಿಲೋ ಇಳಿದಿರಬೇಕೆಂದು ಅವನೆಣಿಕೆ. ಇಲ್ಲಿ ನೋಡಿದರೆ ಐದು ಕಿಲೋ ಹೆಚ್ಚಾಗಿತ್ತು. ಸಹಜವಾಗಿಯೇ ಮಂಕಾಗಿದ್ದ. ಬಸ್ ಬರುವುದಕ್ಕೆ ಇನ್ನೂ ಒಂದು ಗಂಟೆಯ ಕಾಲವಿತ್ತು. ಆರು ಗಂಟೆಯ ಪಯಣ ಬೇರೆ. ಯಾವುದಕ್ಕೂ ಇರಲಿ ಒಮ್ಮೆ ಟಾಯ್ಲೆಟ್ಟಿಗೆ ಹೋಗಿ ಬಂದುಬಿಡುತ್ತೇನೆ ಎಂದು, ಬ್ಯಾಗುಗಳನ್ನು ನನ್ನ ಕೈಗೆ ಕೊಟ್ಟು ಹೋದ. ಹೋದವನು ಹತ್ತೇ ನಿಮಿಷದಲ್ಲಿ ಬಂದನೆನ್ನಿ. ಮತ್ತೆ ಸುತ್ತಾಡುತ್ತಾ ಅದೇ ತೂಕ ಹೇಳುವ ಮೆಶಿನ್ನಿನ ಬಳಿ ಬಂದೆವು. ಇವನಿಗೆ ಅದೇನೋ ಅನುಮಾನ, ಮಶೀನು ಕೆಟ್ಟಿರಬೇಕು, ಮತ್ತೊಮ್ಮೆ ನೋಡುವೆ ತಡಿ ಎಂದು ಮತ್ತೆ ನೋಡಿದ. ಏನಾಶ್ಚರ್ಯ! ಈಗ ಆ ಯಂತ್ರ, 55 ಕಿಲೋ ತೋರಿಸುತ್ತಿತ್ತು - ಹಿಂದೆ ತೋರಿಸಿದ್ದಕ್ಕಿಂತ ಏಕ್ ದಂ 15 ಕಿಲೋ ಕಡಿಮೆ! ಅದೂ ಕೇವಲ ಹದಿನೈದಿಪ್ಪತ್ತು ನಿಮಿಷಗಳ ಅಂತರದಲ್ಲಿ!! ಇಪ್ಪತ್ತು ನಿಮಿಷದಲ್ಲಿ ಹದಿನೈದು ಕಿಲೋ ಇಳಿಸುವ ಯಾವ ಕೆಲಸವನ್ನೂ ಆತ ಮಾಡಿದ್ದಿಲ್ಲ, ಟಾಯ್ಲೆಟ್ಟಿಗೆ ಹೋಗಿ ಬಂದದ್ದನ್ನು ಬಿಟ್ಟು. ಈಗ ಇದು ಟಾಯ್ಲೆಟ್ಟಿನ ಮಹಿಮೆಯಲ್ಲದೇ ಮತ್ತೇನು? ನಗೆ ಕೊಲ್ಲುವಂತೆ ಹಗೆ ಕೊಲ್ಲದು ನೋಡಿ. ಜೀವರಕ್ಷಕವಾದ ವಿವೇಕ ಮತ್ತೊಮ್ಮೆ ನನ್ನ ಕಿಸುಬಾಯನ್ನು ಮುಚ್ಚಿಸಿ ನನ್ನನ್ನು ಕಾಪಾಡಿತು. ಒಳಗೇ ನಕ್ಕುಕೊಂಡು ಸುಮ್ಮನಾದೆ. ಇವನಿಗೋ ಅನುಮಾನ, ಮಶೀನು ಇವನಂದುಕೊಂಡದ್ದಕ್ಕಿಂತ ಕಡಿಮೆ ತೋರಿಸುತ್ತಿತ್ತು. ಇನ್ನೊಂದರಲ್ಲಿ ಒಮ್ಮೆ ನೋಡಿಬಿಡೋಣ ಎಂದವನನ್ನು, ಬೇಡ ನಡೆ ಬಸ್ಸು ಬಂತು, ಇದು ಸರಿಯಾಗಿದೆ ಎಂದು ದಬ್ಬಿಕೊಂಡು ಹೋದದ್ದಾಯಿತು. ಅಲ್ಲದೇ ಈ ಬಾರಿಯ ಭವಿಷ್ಯಚೀಟಿಯಲ್ಲಿ "ಪ್ರಣಯಲಾಭ" ಎಂದು ಬೇರೆ ಬರೆದಿತ್ತು. ಸುಕಾಸುಮ್ಮನೇ ಆ ಖುಷಿಯನ್ನೇಕೆ ಹಾಳುಗೆಡವಬೇಕು ಎಂಬ ಮಾತಿಗೆ ಸೋತು ಸುಮ್ಮನಾದನೆನ್ನಿ. ಅದೇನೇ ಇರಲಿ, ಅಂದು ನನಗೊಂದು ಹೊಸ ಅರಿವಂತೂ ಮೂಡಿತು. ಟಾಯ್ಲೆಟು ತೂಕ ಇಳಿಸುವಲ್ಲಿಯೂ ಭಾರೀ ಸಹಕಾರಿ ಎಂಬುದೇ ಆ ಅರಿವು. ಸರ್ಕಾರವೇಕೆ "ಟಾಯ್ಲೆಟ್ಟಿನಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯಿರಿ, ತೂಕವಿಳಿಸಿ ಆರೋಗ್ಯವಂತರಾಗಿರಿ" ಎಂಬ ಘೋಷಣೆಯನ್ನು ಜಾರಿಗೆ ತರಬಾರದು? "ಶೌಚವೇ ಆರೋಗ್ಯ; ಆರೋಗ್ಯವೇ ಭಾಗ್ಯ" ಎಂಬ ಘೋಷಣೆಯೊಂದಿಗೆ ಶೌಚಭಾಗ್ಯ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು. ಶೌಚದಲ್ಲಿಯೇ ಹೆಚ್ಚುಹೆಚ್ಚು ಸಮಯ ಕಳೆದವರನ್ನು ಗುರುತಿಸಿ "ಶೌಚಶ್ರೀ" ಪ್ರಶಸ್ತಿ ನೀಡುವ ಬಗೆಗೂ ಯೋಚಿಸಬಹುದು.
ನೀವೇನೇ ಹೇಳಿ, ಈ ಟಾಯ್ಲೆಟ್ ಎನ್ನುವುದು ಒಂದು ರೀತಿ ತಪೋಭೂಮಿಯಿದ್ದಂತೆ. ಅಲ್ಲಿ ಮಾಡಿದ ಯಾವ ಕೆಲಸವೂ ಬೇಗ ಕೈಗೂಡುತ್ತದೆಂಬ ನಂಬಿಕೆಯಿದೆ. ಅನೇಕರು ಅದಕ್ಕೇ ಟಾಯ್ಲೆಟ್ಟಿನಲ್ಲೇ ಯಜ್ಞಯಾಗಾದಿಗಳನ್ನೂ ಮಾಡುವ ಅಭ್ಯಾಸವಿಟ್ಟುಕೊಂಡಿದ್ದಾರೆ - ಅಂತಹ ಸಿದ್ಧಯಾಜ್ಞಿಕರು ಆರಣಿಯನ್ನೂ ಸಮಿತ್ತನ್ನೂ ಜೇಬಿನಲ್ಲೇ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಶೌಚಕುಂಡವನ್ನು ಕಂಡೊಡನೆಯೇ ಆರಣಿಯನ್ನು ಮಥಿಸಿ ಯಜ್ಞೇಶ್ವರನನ್ನು ಆಮಂತ್ರಿಸಿ, ಸಮಿತ್ತನ್ನು ಬಾಯಲ್ಲಿ ನಿಧಾನಿಸಿ, ಅಗ್ನಿಸ್ಪರ್ಶಮಾಡಿ, ಪೂರ್ಣಶ್ವಾಸೋಚ್ಛ್ವಾಸದೊಡನೆ ಧೂಮೋತ್ಪಾಟನ ಮಾಡಿ ಯಜ್ಞವನ್ನು ಪೂರ್ಣಗೊಳಿಸುತ್ತಾರೆ. ಇದು ಧೀಶಕ್ತಿಯನ್ನುದ್ದೀಪಿಸಿ, ಚಿಂತನಕ್ರಮವನ್ನು ಚುರುಕುಗೊಳಿಸುತ್ತದೆನ್ನುತ್ತಾರೆ. ಬೇರೆಲ್ಲೂ ಹೊಳೆಯದ ಅದ್ಭುತ ಚಿಂತನೆಗಳು ಪರಿಹಾರಗಳೂ ಅಲ್ಲಿ ಹೊಳೆದು ಯುರೇಕಾ ಎಂದು ಕೂಗಿಕೊಳ್ಳುತ್ತಾ, ಇದ್ದದ್ದು ಇದ್ದಂತೆಯೇ ಎದ್ದು ಓಡಿಹೋದವರೂ ಇದ್ದಾರೆ. ತೀರಾ, ಬಾಗಿಲನ್ನೂ ವಾಪಸು ಮುಚ್ಚದೇ ಹಾಗೆ ಓಡಿಹೋಗುವವರ ಅನಾಗರೀಕತೆ ಕೆಲವೊಮ್ಮೆ ಸಿಟ್ಟು ತರಿಸುತ್ತದೆ, ಇರಲಿ. ಆದರೆ ಜ್ಞಾನದ ’ಸೆಳವು’ ಅಂಥದ್ದು. ಅಷ್ಟಲ್ಲದೇ ಅದನ್ನು ಜ್ಞಾನಮಂಟಪವೆಂದರೇ ಹಿರಿಯರು? ಕಲೆಯೂ ಒಂದು ಜ್ಞಾನಶಾಖೆಯಷ್ಟೇ? ಆದ್ದರಿಂದ ಟಾಯ್ಲೆಟ್ಟಿನಲ್ಲಿ ಸಂಗೀತಾಭ್ಯಾಸವೂ ಶೀಘ್ರಫಲಪ್ರದವೆಂದು ಕೆಲವರಿಗೆ ಅನಿಸಿದ್ದರೆ ಅಚ್ಚರಿಯೇನಿಲ್ಲ.
ನನ್ನ ಎಳವೆಯಲ್ಲಿ, ಕೊಳ್ಳೇಗಾಲದಲ್ಲಿ ಒಂದು ವಠಾರದ ಮನೆಯಲ್ಲಿದ್ದೆವು. ಆಗ ನನಗಿನ್ನೂ ಮೂರೋ ನಾಲ್ಕೋ ವರ್ಷ, ಇನ್ನೂ ಸ್ಕೂಲಿಗೆ ಹೋಗುತ್ತಿದ್ದಿಲ್ಲ. ಸಾಲಾಗಿ ಇದ್ದ ಐದೋ ಆರೋ ಮನೆಗಳ ಕೊನೆಯಲ್ಲಿ ಕಾಮನ್ ಟಾಯ್ಲೆಟು. ನಮ್ಮ ಮನೆ ಆ ಸಾಲಿನ ಇನ್ನೊಂದು ತುದಿಯಲ್ಲಿ. ದಿನಾ ಬೆಳಗ್ಗೆ ನನ್ನನ್ನು ಟಾಯ್ಲೆಟ್ಟಿಗೆ ಕರೆದೊಯ್ಯುವ ಕೆಲಸ ನಮ್ಮ ತಂದೆಯವರದ್ದು. ನಮ್ಮ ತಂದೆಯವರಿಗೆ ರೇಡಿಯೋ ಕೇಳುವ ಹುಚ್ಚು. ಅವರ ಬಳಿ, ಕೈಯಲ್ಲಿ ಹೊತ್ತೊಯ್ಯಬಹುದಾದ ಟ್ರಾನ್ಸಿಸ್ಟರ್ ಒಂದಿತ್ತು. ಹಾಗಾಗಿ ನನ್ನನ್ನು ಕರೆದೊಯ್ಯಬೇಕಾದರೂ ಒಂದು ಕೈಯಲ್ಲಿ ನನ್ನ ಕೈ, ಇನ್ನೊಂದರಲ್ಲಿ ಟ್ರಾನ್ಸಿಸ್ಟರು ಹಿಡಿದೇ ಒಯ್ಯುತ್ತಿದ್ದರು. ರೇಡಿಯೋದವರ ಸಮಯಪ್ರಜ್ಞೆಯಂತೆ ಸಂದರ್ಭಪ್ರಜ್ಞೆಯೂ ಅದ್ಭುತವಾದದ್ದು. ಯಾವ ಸ್ಟೇಶನೋ ನೆನಪಿಲ್ಲ, ದಿನಾ ಆ ಸಮಯಕ್ಕೆ ಸರಿಯಾಗಿ ನಾದಸ್ವರ ವಾದನ. ವಠಾರದ ಜನ ಕಾಮೆಂಟು ಮಾಡುತ್ತಿದ್ದರು. "ಮೇಷ್ಟ್ರು ನೋಡು, ಮಗನನ್ನ ಒಳ್ಳೆ ರಾಜಕುಮಾರನ ರೀತಿ ನೋಡಿಕೊಳ್ಳುತ್ತಾರೆ. ಟಾಯ್ಲೆಟ್ಟಿಗೆ ಕರೆದೊಯ್ಯಬೇಕಾದರೂ ಮಂಗಳವಾದ್ಯ ತಾಳಮೇಳಗಳ ಸಮೇತ ಕರೆದೊಯ್ಯುತ್ತಾರೆ" ಎಂದು! ನನಗೆ ಹೋಗುವಾಗಲೂ ವಾಲಗ, ಬರುವಾಗಲೂ ವಾಲಗ! "ತಾಳಮೇಳಬಿರುದಾವಳಿ ಸಹಿತಲಿ ಪೌರವೀಧಿಯಲಿ ಮೆರೆಯುತ" ಬರುವ ಅನುಭವ. ಚಡ್ಡಿ ಹಾಕಿಕೊಳ್ಳುವ ವಸ್ತ್ರಸೇವೆ ನಡೆಯುತ್ತಿದ್ದುದು ಮನೆಗೆ ಮರಳಿದ ಮೇಲೆ.
ಹೀಗೆ ಶೌಚಕಾಲದಲ್ಲಿ ತಾನಾಗಿಯೇ ಸಾಕಷ್ಟು ಸಂಗೀತದ ಗಲಾಟೆ ಇದ್ದುದರಿಂದ ಟಾಯ್ಲೆಟ್ಟಿನಲ್ಲಿ ಹಾಡುವ ಅಭ್ಯಾಸ ನನಗಂತೂ ಬರಲಿಲ್ಲ. ಬಂದಿದ್ದರೆ, ಯಾರಿಗೆ ಗೊತ್ತು, ದೊಡ್ಡ ಸಂಗೀತಗಾರನೇ ಆಗುತ್ತಿದ್ದೆನೇನೋ. ಆದರೆ ಕೆಲವರು ಪಬ್ಲಿಕ್ ಟಾಯ್ಲೆಟ್ಟಿನಲ್ಲೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡುತ್ತಾರೆಂದರೆ ಅವರ ಸಂಗೀತಾಸಕ್ತಿ ಮೆಚ್ಚಬೇಕಾದ್ದೇ. ಆದ್ದರಿಂದ ಟಾಯ್ಲೆಟ್ಟಿನಲ್ಲಿ ಹಾಡಲು ಅನುಕೂಲವಾದ ಕೆಲವು ಹಾಡುಗಳ ಪಟ್ಟಿ ಸುಲಭವಾಗಿ ಸಿಗುವಂತಿದ್ದರೆ ಸಾಧಕರಿಗೆ ಅನುಕೂಲವಾಗಬಹುದೇನೋ. ಅವರವರ ಆಸಕ್ತಿಗೆ ತಕ್ಕಂತೆ ಈ ಕೆಲವು ಹಾಡುಗಳನ್ನು ಅಭ್ಯಸಿಸಬಹುದು:
ರೊಮ್ಯಾನ್ಸ್ ಪ್ರಿಯರಿಗೆ:
ಈ ಸಮಯ ಆನಂದಮಯಾ
ನೂತನ ಬಾಳಿನ ನವೋದಯಾ
ಶ್ರುತಿ ಸೇರಿದೆ, ಹಿತವಾಗಿದೆ, ಬಾಳೆಲ್ಲ ಹಗುರಾಗಿದೇ...
ಸುತ್ತಮುತ್ತ ಯಾರು ಇಲ್ಲ...
ಆಕಾಶದಿಂದ ಧರೆಗಿಳಿದ ರಂಭೇ
ಇವಳೇ ಇವಳೇ, ಚಂದನದ ಗೊಂಬೆ
ಬಾರೇ ಬಾರೇ ಚೆಂದದ ಚೆಲುವಿನ ತಾರೆ
ಬಾರೇ ಬಾರೇ ಒಲವಿನ ಚಿಲುಮೆಯ ಧಾರೆ

ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೇ ಒಳಗೆ ವೇದನೆ ಇಳಿದು ಬಾ ಬಾಲೆ
ಬಳ್ಳಿಯೊಂದು ಬಳುಕುತಿದೆ...ಆಹಾ... ಆಹಾ ನಡೆಯುತ್ತಿದೆ
ಆಜಾ ಅಹಹ ಆಜಾ ಅಹಹ ಆಜ ಆಜ ಆಜ ಆಜ ಆಜಾ...
ಭಾವಗೀತೆ ಪ್ರಿಯರಿಗೆ:
ಅನಂತದಿಂ ದಿಗಂತದಿಂ
ನೋಡೆನೋಡೆ ಮೂಡಿತೊಂದು ಮೋಡಗೋಪುರ
ಗಿರಿಯ ಬಿತ್ತರ, ಶಿಖರದೆತ್ತರ
ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೇ (ಇಳಿದು ಬಾ)
ಹೊನ್ನ ಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸೀ...
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವಾ ಹೊಯ್ದಾ ನುಣ್ಣನೆ ಎರಕಾವಾ ಹೊಯ್ದಾ...
ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ಕಂಪು
ಆಗು ಗೆಳೆಯ ಆಗು, ನೀನು ಭರವಸೆಯಾ ಪ್ರವಾದಿ
ಹತಾಶೆಯಲ್ಲೇನಿದೇ, ಬರಿ ಶೂನ್ಯ ಬರೀ ಬೂದಿ
'ಸೋಗಪಾಟ್ಟು' ಪ್ರಿಯರಿಗೆ

(ಸೋಗಪಾಟ್ಟು (ತ) = ಶೋಕದ ಹಾಡಿಗೆ ನಾವು ಪಡ್ಡೆಗಳು ಇಟ್ಟಿದ್ದ ಹೆಸರು):
ಏನಿದೀ ಗ್ರಹಚಾರವೋ ಏನಿದೀ ವನವಾಸವೋ
ಏನು ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ
ನಿನದೇ ನೆನಪು ದಿನವೂ ಮನದಲ್ಲಿ
ನೋಡುವಾ ಆಸೆಯೂ ತುಂಬಿದೇ ನನ್ನಲಿ
ಒಲವಿನಾ ಪ್ರಿಯಲತೇ ಅವಳದೇ ಚಿಂತೇ...
ಅಹಹಾ ಅಹಹಾ... ವಿರಹಾ... ನೂರು ನೂರು ತರಹಾ
Happy-go-lucky ಮನೋಧರ್ಮವುಳ್ಳವರಿಗೆ:
ಸುಹಾನಾ ಸಫರ್ ಔರ್ ಎ ಮೌಸಮ್ ಹಸೀನ್
ಹಮೇ ಡರ್ ಹೈ ಹಮ್ ಖೋ ನಜಾಯೇಂ ಕಹೀಂ
ಆಡಿಸಿ ನೋಡು ಬೀಳಿಸಿ ನೋಡೂ
ಉರುಳಿ ಹೋಗದು
ನಗುನಗುತಾ ನಲೀ ನಲೀ ಏನೇ ಆಗಲಿ
ಎಲ್ಲಾ ದೇವನಾ ಕಲೆಯೆಂದೇ ನೀ ತಿಳೀ ಅದರಿಂದಾ ನೀ ಕಲಿ
ಎಲ್ಲೆಲ್ಲೂ ಊಟವನ್ನೇ ಕನಸುವವರಿಗೆ:
ಶ್ರಾದ್ಧದೂಟ ಸುಮ್ಮನೇ ನೆನೆಸಿಕೊಂಡ್ರೆ ಜುಮ್ಮನೇ
ವಿವಾಹಭೋಜನವಿದು, ವಿಚಿತ್ರಭಕ್ಷ್ಯಗಳಿವು
ಬೀಗರಿಗೌತಣವಿದು ದೊರಕೊಂಡಿತೆನಗೆ ಬಂದು
ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಾ
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೇ
ವಿಠಲನಾಮ ತುಪ್ಪವ ಬೆರೆಸೀ ಬಾಯ ಚಪ್ಪರಿಸಿರೋ
ಶಾಸ್ತ್ರೀಯಸಂಗೀತವನ್ನು ಅಭ್ಯಾಸ ಮಾಡುವವರಿಗೆ:
ನಿನ್ನುಕ್ಕೋಓ ರೀಈಈಈಈಈಈ ಯುಉಉಉ ನ್ನಾಅಅಅ ನುವುವು ರಾಅಅಅ
ಕಾವಾ ವಾ ಕಂದಾ ವಾ...
ಮರಿಯಾದಗಾದುರಾಆಆ...
ಟಾಯ್ಲೆಟ್ಟಿನಲ್ಲೂ ತತ್ತ್ವಚಿಂತನೆ ಮಾಡುವ ಅನುಭಾವಿಗಳಿಗೆ:
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ
ಮನುಜಶರೀರವಿದೇನು ಸುಖಾ
ಎಲುಬು ರಕ್ತಮಾಂಸಗಳ ಮೇಲೆ ಚರ್ಮದ ಹೊದಿಕೆ
ಒಳಗೆ ಮಲಮೂತ್ರಾದಿ ಕ್ರಿಮಿಗಳಿಹವೋ
ಪರಚಿಂತೆ ನಮಗೆ ಏಕೆ ಅಯ್ಯಾ
ನಮ್ಮ ಚಿಂತೆ ನಮಗೆ ಸಾಲದೇ
ನಿಜ, ಹೊರಗೆ ಕಾದಿರುವವರ ಚಿಂತೆ ನಮಗೇಕೆ, ಅವರವರ ಚಿಂತೆ ಅವರವರಿಗೆ. ನೆರೆಯವರ ದುಃಖಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ. ಕಾದವರು ಬೇಕಾದರೆ "ಕಾದಿರುವೇ ಏಏಏಏ ಏಏಏಏ ಏಏಏಏ ನಿನಗಾಗಿ" ಎಂದೋ, "ಬಾ ಬಾರೋ ಬಾರೋ ರಣಧೀರಾ ಆಆಆಆ ಆಆಆಆ ಆಆಆಆ" ಎಂದೋ "ಜಾಡಿಸಿ ವದಿ ಅವನನು... " ಎಂದೋ ಬೇಕಾದ್ದನ್ನು ಹಾಡಿಕೊಂಡಿರಲಿ. ಹೊರಗೆ ನಿಂತು ಹಾಡುತ್ತಾ ಜನದ ಕಣ್ಣಿಗೆ ಬಿದ್ದು ನಗೆಪಾಟಲಾಗುವವರು ಅವರೇ... ನಮಗೇನು?
ಸರಿ, ವಿಷಯವೇನು ಹೇಳು ಎಂದಿರಾ? ಸರಿ ಹೋಯ್ತು. ಚಿಂತನೆಯೆಂದು ಆಗಲೇ ಹೇಳಿದೆನಲ್ಲ. ಚಿಂತನೆಗೂ ಒಂದು ಸಮಯಮಿತಿಯಿದೆ ದೇವ್ರೂ. ಯುಗವೆಲ್ಲಾ ಶೌಚದಲ್ಲೇ ಕುಳಿತಿರಲು ನಾನೇನು ಚತುರ್ಮುಖಬ್ರಹ್ಮನೇ? ನನಗೆ ಇರುವುದು ಒಂದೇ ಮುಖ, ಅದೇ ನಾಲ್ಕು ದಿಕ್ಕುಗಳನ್ನೂ ನೋಡಬೇಕು, ಹೊಟ್ಟೆಪಾಡು ಆಗಬೇಕು. ದಿನವೆಲ್ಲಾ ಇಲ್ಲೇ ಕುಳಿತಿದ್ದರೆ ಹೊಟ್ಟೆಪಾಡು ನಡೆಯುವುದು ಹೇಗೆ, ಹೊಟ್ಟೆಗೇ ಇಲ್ಲದಿದ್ದರೆ ಶೌಚದ ಗತಿಯೇನು?. ಸರಿ, ಬರುತ್ತೇನೆ, ಇನ್ನೊಮ್ಮೆ ವಿರಾಮವಾಗಿ ಸಿಕ್ಕೋಣ. ನಮಸ್ಕಾರ.

2 comments:
good writing.
ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕೂ ನಕ್ಕೂ ಸಾಕಾಯಿತು.
ಚೆನ್ನಾಗಿ ಬರೆದಿದ್ದೀರಿ ಸರ್
Post a Comment