Saturday, May 4, 2019

ನಮ್ಮ ಮೋಜುಗಳೀಗ ಮುಗಿದಿಹುದು






































ಇದು William Shakespeare ಕವಿಯ ಖ್ಯಾತ "Our Revels now are ended" ಸಾಲುಗಳ ಭಾವಾನುವಾದ (ದ ಟೆಂಪೆಸ್ಟ್ ನಾಟಕದಿಂದ):
:
ನಮ್ಮ ಮೋಜುಗಳೀಗ ಮುಗಿದಿಹುದು. ಈ ನಟರು,
ಮೊದಲೆ ಹೇಳಿದ ಹಾಗೆ, ಬರಿ ಗಾಳಿಗೊಂಬೆಗಳು;
ಕರಗಿ ಹೋದರು ತೆಳ್ಪು ಗಾಳಿಯೊಳತೆಳ್ಪಾಗಿ;
ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್
ಉನ್ನತ ಸ್ತಂಭಗಳ್, ಭವ್ಯ ಪ್ರಾಕಾರಗಳ್
ದಿವ್ಯಗೋಪುರಗಳ್, ಅಷ್ಟೇಕೆ ಈ ನೆಲವನೆಯೆ
ತನ್ನೆಲ್ಲ ಸಿರಿಗೂಡಿ ಇಗೊ ಕರಗಲಿಹುದಿನ್ನು,
ಗುರುತೊಂದನುಳಿಸದೆಲೆ ಕರಗಿದೀ ಯಕ್ಷಕಿ-
ನ್ನರಲೋಕದಂತೆವೋಲ್. ಕನಸಿನಂತೆನಿಸುವೀ
ಆಳಬಾಳ್ ಅತಿ ಕಿರಿದು, ಸುತ್ತುವರಿದಿದೆ ದೀರ್ಘ
ನಿದ್ರಾ ಸುಷುಪ್ತಿಯೊಳ್ 
:
- ೦೯/೧೦/೨೦೧೮
:
ಮೂಲ:
Our revels now are ended
:
Our revels now are ended. These our actors,
As I foretold you, were all spirits and
Are melted into air, into thin air:
And, like the baseless fabric of this vision,
The cloud-capp'd towers, the gorgeous palaces,
The solemn temples, the great globe itself,
Yea, all which it inherit, shall dissolve
And, like this insubstantial pageant faded,
Leave not a rack behind. We are such stuff
As dreams are made on, and our little life
Is rounded with a sleep.
:
ಕೆಲವು ಟಿಪ್ಪಣಿಗಳು:

ಗಾಳಿಗೊಂಬೆಗಳು
ಮೂಲದಲ್ಲಿ "spirits" ಎಂಬ ಪದವಿದೆ.  ಇದಕ್ಕೆ ಸೂಕ್ಷ್ಮರೂಪ, ಚೇತನ, ಶಕ್ತಿ, ಹೀಗೆ ಹಲವು ರೀತಿ ಅನುವಾದ ಮಾಡಬಹುದು.  ಆದರೆ ಇಲ್ಲಿ ಅವುಗಳನ್ನು ನಿರ್ದೇಶಿಸಿ Melted into air ಎನ್ನುತ್ತಾನೆ ಕವಿ.  ಅದನ್ನೇ ಮುಂದೆ ಸೂಚಿಸಲು dissolve ಎಂಬ ಪದವನ್ನು ಬಳಸುವುದನ್ನೂ ಗಮನಿಸಬಹುದು. ಹೀಗೆ ಕರಗಿಹೋಗಬೇಕಾದರೆ ಅವು ಕೇವಲ ಕಣ್ಣಿಗೆ ಕಾಣದ ಶಕ್ತಿ/ಚೇತನದಂತಲ್ಲದೇ ಸ್ಪಷ್ಟವಾಗಿ ಕಣ್ಣಿಗೆ ಕಾಣುವ ರೂಪ ಧರಿಸಿರಬೇಕಷ್ಟೇ.  ಇಲ್ಲಿರುವ ಜನ, ಬೆಟ್ಟಗುಡ್ಡ, ಅರಮನೆ, ದೇವಾಲಯ ಎಲ್ಲವೂ ಪ್ರಾಸ್ಪರನ ಮಾಯಾಸೃಷ್ಟಿ.  ಅವು ಕೇವಲ ಗಾಳಿಯಲ್ಲಿ ಕಾಣುವ ಚಿತ್ರಗಳಲ್ಲ, ಸತ್ಯವೇನೋ ಎಂಬಂತೆ ಭಾಸವಾಗುವ ಸ್ಪಷ್ಟವಾದ ರೂಹುಗಳು.  ಆದರೆ ಸತ್ಯವಲ್ಲ.  ಅವು ಮಾಯಾಬಲದಿಂದ ಕಣ್ಣಿಗೆ ಕಾಣುವ ರೂಪ ಧರಿಸಿದ್ದುವು - ಆದ್ದರಿಂದ ಅವುಗಳನ್ನು ಗಾಳಿಗೊಂಬೆಗಳೆಂದು ಅನುವಾದಿಸಲಾಗಿದೆ.

ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್
ಮೂಲದಲ್ಲಿ "baseless fabric of this vision"  ಎಂದಿದೆ.  vision ಎಂದರೆ ಸ್ವಪ್ನದಂತಹ ಕಾಣ್ಕೆ.  ನೋಡಲು ಸತ್ಯವೆಂಬಂತೆಯೇ ಇರುತ್ತದೆ, ಆದರೆ ಅದು ಮಾಯೆ.  ಕೇವಲ ಮಾಯೆಯೆಂದು ಅನುವಾದಿಸಿದರೂ ಸಾಕು, ಆದರೆ ಈ ಸಂದರ್ಭದಲ್ಲಿ, ಪ್ರಾಸ್ಪರೋ ಒಂದು ಮಾಯದಾಟದ ಪ್ರದರ್ಶನವನ್ನೇ ನೀಡುತ್ತಿದ್ದಾನೆ, ಆದ್ದರಿಂದ vision ಎಂಬುದು "ಮಾಯದಾಟ" ಎಂದು ತರ್ಜುಮೆಯಾಯಿತು.  ಇನ್ನು baseless ಎಂಬುದು ಹಲವು ಅರ್ಥಚ್ಛಾಯೆಗಳನ್ನೊಳಗೊಂಡಿದೆ.  ಇಲ್ಲಿ ಕಾಣುತ್ತಿರುವ ಯಾವುದಕ್ಕೂ ಬುಡವಿಲ್ಲ ಎಂದು ಅರ್ಥೈಸಬಹುದಾದರೂ, ಇಲ್ಲಿ ಕಾಣುತ್ತಿರುವುದೆಲ್ಲವೂ ನಿರಾಧಾರ, ಗಟ್ಟಿಯಾದ ವಸ್ತುವಿಲ್ಲ, ಕೇವಲ ರೂಹುಗಳಷ್ಟೇ ಎಂಬುದು ಕವಿಯ ಭಾವ - insubstantial (ಹುರುಳಿಲ್ಲದ, ಅವಾಸ್ತವ) ಎಂಬ ಪದವನ್ನು ಕವಿಯೇ ಮುಂದೆ ಬಳಸುತ್ತಾನೆ.  ಒಟ್ಟಿನಲ್ಲಿ ಇಲ್ಲಿ ಕಾಣುತ್ತಿರುವ ಕತೆ ಕೇವಲ ಕಂಡು ಮರೆಯಾಗುವ ದೃಶ್ಯಾವಳಿಗಳ ನೆಯ್ಗೆ.  ಅದಕ್ಕೇ ನೆಯ್ಗೆಯ ಪರಿಭಾಷೆಯ ಹಾಸುಹೊಕ್ಕು ಎಂಬ ಪದವನ್ನು ಬಳಸಿದ್ದೇನೆ.  ಬಟ್ಟೆಯನ್ನು ನೇಯುವಾಗ ದಾರಗಳು ಉದ್ದುದ್ದಕ್ಕೆ, ಅಡ್ಡಡ್ಡಕ್ಕೆ ಒಂದರೊಳಗೊಂದು ಹೆಣೆದುಕೊಳ್ಳುತ್ತವೆ.  ಒಂದು ಹಾಸು, ಮತ್ತೊಂದು ಹೊಕ್ಕು.  ಅವೆರಡರ ಬಿಗಿಯಾದ ಬಂಧ ನಮಗೆ ಬಟ್ಟೆಯನ್ನು ನೀಡುತ್ತದೆ.  ಆದರೆ ಹಾಸಿಲ್ಲದ ಹೊಕ್ಕೋ, ಹೊಕ್ಕಿಲ್ಲದ ಹಾಸೋ ಕೇವಲ ದಾರದ ಜೊಂಪೆಯನ್ನಷ್ಟೇ ನೀಡಬಲ್ಲುದು, ಅದೂ ಕೈಯಲ್ಲಿ ನಿಲ್ಲುವುದಲ್ಲ.  ಈ ಮಾಯದಾಟದ ದೃಶ್ಯಾವಳಿಗಳೂ ಹಾಗೆಯೇ, ಬುಡವಿಲ್ಲದ್ದು.  ಅದಕ್ಕೇ "ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್"

ಈ ನೆಲವನೆಯೆ
ನೆಲವನೆ = ನೆಲ+ಮನೆ, ನಮ್ಮೆಲ್ಲರ ಮನೆಯಾದ ಈ ನೆಲವೇ (ಭೂಮಿಯೇ) ಕರಗಲಿದೆ ಎನ್ನುವುದು ಭಾವ. ಇಂಗ್ಲಿಷಿನ ಮೂಲದಲ್ಲಿ "the great globe itself" ಎಂದಿದೆ. ಇದನ್ನು ಭೂಮಿ, ಭೂಗೋಳ, ಭುವನ, ಪ್ರಪಂಚ ಎಂದು ಸುಲಭವಾಗಿ ಅನುವಾದಿಸಬಹುದು, ಆದರೆ ಅಲ್ಲೊಂದು ಸೂಕ್ಷ್ಮವಿದೆ. ಕವಿಯು ಪ್ರಪಂಚ ಎನ್ನುವುದಕ್ಕೆ ಅನೇಕ ಪದಗಳನ್ನು ಬಳಸಬಹುದಿತ್ತು ಆದರೆ "the great globe" ಎಂದೇ ಹೇಳುವುದರಲ್ಲಿ ಇನ್ನೊಂದು ಸಾರ್ಥಕತೆಯಿದೆ - The Globe ಎನ್ನುವುದು ಆ ನಾಟಕ ಪ್ರದರ್ಶಿತವಾಗುತ್ತಿದ್ದ ರಂಗಮಂದಿರವೂ ಹೌದು. The Globeನ ರಂಗಭೂಮಿಯ ಮೇಲೆ ನಿಂತುಕೊಂಡು ಪ್ರಾಸ್ಪರೋ "the great globe itself, Yea, all which it inherit, shall dissolve" ಎಂದು ನುಡಿಯುವ ಸಂದರ್ಭವನ್ನು ಊಹಿಸಿಕೊಳ್ಳಿ - ಅದು ಸಮಯಸ್ಫೂರ್ತಿಯಿಂದ ಬಂದ ಸಾಲು. ಕವಿಯ ಉದ್ದೇಶ "ಈ ಪ್ರಪಂಚ" ಎಂದು ಹೇಳುವುದೇ ಆದರೂ ಅಲ್ಲಿ ಕುಳಿತು ನೋಡುವ ಪ್ರೇಕ್ಷರಿಗೆ ಪ್ರಪಂಚದೊಂದಿಗೆ ತಾವು ಕುಳಿತು ವೀಕ್ಷಿಸುತ್ತಿರುವ ಗ್ಲೋಬ್ ನಾಟಕಮಂದಿರವೂ ಮನಸ್ಸಿಗೆ ಬರಬೇಕು. ಅದೇನೇ ಇರಲಿ, ಅದನ್ನು ಕನ್ನಡಕ್ಕೆ ಅದರ ಎರಡೂ ಅರ್ಥಗಳೊಂದಿಗೆ ಅನುವಾದಿಸುವುದು ಕಷ್ಟ. ಅದಕ್ಕೇ ಇರಬೇಕು, ಕುವೆಂಪು, ಎ ಎನ್ ಮೂರ್ತಿರಾಯರೂ ಸೇರಿದಂತೆ ಅನೇಕ ಅನುವಾದಕರು ಈ ಎರಡನೆಯ ಸೂಕ್ಷ್ಮಾರ್ಥವನ್ನು ಅನುವಾದದಿಂದ ಕೈಬಿಟ್ಟಿದ್ದಾರೆ.  ನಾನು, ಈ ಎರಡನೆಯ ಅರ್ಥವನ್ನು ತರಲಾಗದಿದ್ದಾರೂ ಅದರ ಛಾಯೆಯಾದರೂ ಬರಲಿ ಎಂದು ನೆಲವನೆ (ನೆಲ+ಮನೆ), ನಮ್ಮ ಮನೆಯಾಗಿರುವ ಈ ನೆಲ, ಭೂಮಿ, ಪ್ರಪಂಚ ಎಂಬರ್ಥ ಬರುವಂತೆ ಅನುವಾದಿಸಿದೆ. ಅಲ್ಲಿ ಮನೆ ಎಂಬ ಪದ ನೀವೀಗ ಕುಳಿತು ನಾಟಕ ನೋಡುತ್ತಿರುವ ರಂಗಮಂದಿರವೂ ಆಗಬೇಕು, ಉಳಿದದ್ದನ್ನು ಅವನ ನಟನೆ ತೋರಿಸಬೇಕು - ಅನುವಾದಕನ ಅಲ್ಪತೃಪ್ತಿ :)

ಯಕ್ಷಕಿನ್ನರಲೋಕದಂತೆವೋಲ್
ಮೂಲದಲ್ಲಿ "like this insubstantial pageant" ಎಂದಿದೆ.  insubstantial ಎಂದರೆ substance (ವಸ್ತು) ಇಲ್ಲದ, ಭೌತಿಕ ಅಸ್ತಿತ್ವವಿಲ್ಲದ, ಕೇವಲ ರೂಪಮಾತ್ರದ ಎಂದರ್ಥ.  ಪ್ರಾಸ್ಪರೋ ಇಲ್ಲಿ ಸೃಷ್ಟಿಸಿರುವ ಪ್ರದರ್ಶನ (pageant) ಒಂದು ಮಾಯಾಸೃಷ್ಟಿ, ಭೌತಿಕ ಅಸ್ತಿತ್ವವಿಲ್ಲದ್ದು.  ತನ್ನ ಮಾಯಾಶಕ್ತಿಯಿಂದ ಒಂದು ಕಿನ್ನರಲೋಕವನ್ನೇ ಸೃಷ್ಟಿಸಿದ್ದಾನೆ ಪ್ರಾಸ್ಪರೋ.  ಆದ್ದರಿಂದ ಇದು "ಯಕ್ಷಕಿನ್ನರಲೋಕ" (ನೋಡಿ: An unsubstantial faery place = ಅಲೌಕಿಕವಾದ ಯಕ್ಷ ಕಿನ್ನರ ಲೋಕ - "To the Cucoo" by William Wordsworth)

3 comments:

sunaath said...

ನೀವು ನೀಡಿದ ಟಿಪ್ಪಣಿಗಳಿಂದಾಗಿ, ನೀವು ಬಳಸಿದ ಪದಗಳ ಔಚಿತ್ಯ ಮನದಟ್ಟಾಯಿತು. ಶೇಕ್ಸಪಿಯರನ ಮೂಲಕ್ಕೆ ಕುಂದಾಗದಂತೆ ಭಾಷಾಂತರಿಸಿದ್ದಿರಿ. ಆದರೆ ನನ್ನ ಮನದಲ್ಲಿ ಒಂದು ಸಂದೇಹ ಉಳಿದಿದೆ. ಶೇಕ್ಸಪಿಯರನ ಈ ನಾಟಕದ ಇಂಗ್ಲಿಶ್ ಭಾಷೆ ನಮಗೆ ಸ್ವಲ್ಪ ಎಡಚಾಗುತ್ತದೆ. ಆದರೆ, ಆತ ಬರೆದ ಕಾಲದ ನೋಡುಗರಿಗೆ ಹಾಗೆ ಇರಲಿಕ್ಕಿಲ್ಲ. ಅಲ್ಲದೆ, ನಟರು ತಮ್ಮ ಅಭಿನಯದ ಮೂಲಕ ಅರ್ಥವನ್ನು ಸ್ಪಷ್ಟ ಮಾಡಲು ಅವಕಾಶವಿದ್ದೇ ಇರುತ್ತದೆ. ಹೀಗಿರಲು, ಕನ್ನಡದ ಅನುವಾದವು ಎಡಚಾಗುವ ಅವಶ್ಯಕತೆ ಇದೆಯೆ? ಈ ಅನುವಾದವನ್ನು ಇನ್ನಿಷ್ಟು ಸರಳವಾಗಿ ಮಾಡಲು ಸಾಧ್ಯವಿತ್ತೆ? ನಿಮ್ಮ ಅನುವಾದಕ್ಕೆ ನೂರಕ್ಕೆ ನೂರರಷ್ಟು ಗುಣಗಳನ್ನು ಕೊಟ್ಟೇ, ಈ ಪ್ರಶ್ನೆಯನ್ನು ನಿಮಗೆ ಕೇಳುತ್ತಿದ್ದೇನೆ.

Manjunatha Kollegala said...

ಸುನಾಥರೇ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆ ಬಹಳ ಪ್ರಸ್ತುತವಾದದ್ದು, ಹಲವು ಅನುವಾದಕರನ್ನು ಕಾಡಿದ್ದು. ಇದೇ ಪ್ರಶ್ನೆಯು ಆಧುನಿಕ ಕವಿ/ಅನುವಾದಕರಿಂದ ಸರಳಗನ್ನಡದಲ್ಲಿ ಸೊಗಸಾದ ಅನುವಾದಗಳು ಮೂಡಿಬರಲೂ ಕಾರಣವಾಯಿತು. ಸರಿ, ಹಳೆಯಕಾಲದ ಶೇಕ್ಸ್ಫಿಯರನ್ನು ಹೊಸಗಾಲದ ಕನ್ನಡ ಓದುಗರಿಗೆ ತಲುಪಿಸಿದ್ದಾಯಿತು, ಅಷ್ಟುಮಟ್ಟಿಗೆ ಹೊಸ ಅನುವಾದಗಳು ಯಶಸ್ವಿಯೂ ಆದುವು. ಆದರೆ ನಿಮ್ಮ ಮೂಲಪ್ರಶ್ನೆ - ಕನ್ನಡ ಅನುವಾದವು ಎಡಚಾಗುವ ಅವಶ್ಯಕತೆ ಇದೆಯೇ - ಹಾಗೆಯೇ ಉಳಿಯಿತು. ಅದನ್ನಿಷ್ಟು ಪರಿಶೀಲಿಸುವ ಅಗತ್ಯವಿದೆಯೆನ್ನಿಸುತ್ತದೆ.

ಈ ಪ್ರಶ್ನೆಯನ್ನು ಇನ್ನಷ್ಟು ವಿಶಾಲವಾದ ಸಂದರ್ಭದಲ್ಲಿ ಇಟ್ಟು ನೋಡಿದರೆ, ಕೇವಲ ಹಳೆಯ ಇಂಗ್ಲಿಷಿನ ಅನುವಾದವೇ ಏಕೆ, ಹಳಗನ್ನಡದ ಮೂಲಪಠ್ಯವನ್ನೂ ಹೊಸ ಕಾಲದ ಕನ್ನಡಕ್ಕೆ ಅನುವಾದಿಸುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಯೇಳುತ್ತದೆ - "ಪಂಪನ ಮರು ಓದು" ಇತ್ಯಾದಿಯಾಗಿ ಹೊಸ ಕಾಲದ ಅನೇಕ ಸಾಹಿತಿಗಳು ಮಾತಾಡುತ್ತಿದ್ದಾರೆ. ಅಂತಹ ಪ್ರಯತ್ನಗಳೂ ಸಾಕಷ್ಟು ನಡೆದಿದಿವೆ, ಉದಾಹರಣೆಗೆ ಕುವೆಂಪು ರಾಮಾಯಣದ ಸರಳ 'ಅನುವಾದ' ರಾಮಾಯಣದರ್ಶನಂ ವಚನಚಂದ್ರಿಕೆ (ದೇಜಗೌ).

ಇಂಥಲ್ಲೆಲ್ಲಾ ನಾವು ಅನುವಾದದಿಂದ ಏನು ಸಾಧಿಸಬಯಸುತ್ತೇವೆಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಮುಖ್ಯವೆನಿಸುತ್ತದೆ - ಅರ್ಥವೇ, ಭಾಷೆಯೇ, ಭಾವವೇ, ಸಂದರ್ಭವೇ? ಕೇವಲ ಅರ್ಥವನ್ನಷ್ಟೇ ಅನುವಾದಿಸಬೇಕೆಂದಿದ್ದರೆ ಬರೆಯ ಸಾರಾಂಶವನ್ನಷ್ಟೇ ಹೇಳಿದರೆ ಆಯಿತಲ್ಲ, ಅನುವಾದದ ಅಗತ್ಯವೇ ಬರುವುದಿಲ್ಲ. ರಾಮನು ಹುಟ್ಟಿ, ಸೀತೆಯನ್ನು ಮದುವೆಯಾಗಿ, ಆನಂತರ ತಾಯಿಯ ದುರಾಸೆಯಿಂದ, ಪಿತೃವಾಕ್ಯಪರಿಪಾಲನೆಗಾಗಿ ತಮ್ಮ ಮತ್ತು ಹೆಂಡತಿಯೊಡನೆ ಕಾಡುಪಾಲಾಗಿ, ಆನಂತರ ರಾವಣನಿಂದ ಸೀತಾಪಹರಣವಾಗಿ, ರಾಮನು ವಾನರಸಖ್ಯದಿಂದ ಸಮುದ್ರಕ್ಕೆ ಸೇತುವೆ ಕಟ್ಟಿ ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದು, ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷಿಕ್ತನಾದನು - ಇಷ್ಟರಲ್ಲಿ ಇಡೀ ರಾಮಾಯಣದ ಕತೆ ಬಂದುಬಿಟ್ಟಿತು, ಆದರೆ ರಾಮಾಯಣದ ಕಾವ್ಯ ಬರಲಿಲ್ಲ. ಅಥವಾ ಮೂಲಶ್ಲೋಕವನ್ನೇ ತೆಗೆದು ವಾಕ್ಯವಾಕ್ಯಗಳನ್ನೇ ಅನುವಾದಿಸಿದರೂ ಅನುವಾದವಾಗುವುದಿಲ್ಲ, ಪದಪದ ಅನುವಾದಿಸಿದರಂತೂ ಭಾವವೇ ಕಳೆದುಹೋಗುವ ಅಪಾಯವೂ ಉಂಟು. ಮೂಲದಲ್ಲಿ ಕವಿ ಬಳಸುವ ಪದಕ್ಕೆ ಅದೆಂಥದೋ ಧ್ವನಿಶಕ್ತಿಯಿರುತ್ತದೆ - ಅದು ಆ ಪದದ ವಿನ್ಯಾಸದಿಂದ ಬಂದದ್ದಿರಬಹುದು, ಅರ್ಥದಿಂದ ಬಂದದ್ದಿರಬಹುದು, ಆ ಪದವನ್ನು ಬಳಸಿದ ಸಂದರ್ಭದಿಂದ, ಅಥವಾ ಕೊನೆಗೆ ಉಚ್ಚಾರಣಾವಿಧಾನದಿಂದಲೂ ಬಂದದ್ದಿರಬಹುದು. ಅನುವಾದಕನು ಅದಕ್ಕೆ ತಕ್ಕ ಪದವನ್ನು ತನ್ನ ಭಾಷೆಯಲ್ಲಿ ಆಯ್ದುಕೊಳ್ಳುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಮೂಲದ ಒಂದು ಪದಕ್ಕೆ ತನ್ನ ಮುಂದೆ ಬಂದು ನಿಲ್ಲುವ ಹತ್ತು ಪದಗಳಲ್ಲಿ ಪರಮಾಯಿಶಿಯಾದ ಒಂದನ್ನು ಜಾಗರೂಕವಾಗಿ ಆಯಬೇಕಾಗುತ್ತದೆ. ಹೀಗೆ ಮಾಡುವಾಗ ಅದು ಮೂಲಕ್ಕೆ ಸರ್ವವಿಧದಲ್ಲೂ ಹತ್ತಿರವಿರಬೇಕಷ್ಟೇ ಅಲ್ಲ, ಮೂಲವನ್ನು ಮೀರಿನಿಲ್ಲಬಾರದೆಂಬ ಎಚ್ಚರವೂ ಇರಬೇಕಾಗುತ್ತದೆ (ಕವಿಗಿಂತ ಅನುವಾದಕನು ಶಕ್ತಕವಿಯಾದಾಗ ಹೀಗಾಗುವ ಅಪಾಯ ಹೆಚ್ಚು) ಹೀಗಿರುವಾಗ, ಅನುವಾದದಲ್ಲಿ ಅರ್ಥವಾಗುವುದು ಮಾತ್ರ ಮುಖ್ಯ ಎನ್ನುವ ಮಾತು ನಿಲ್ಲಲಾರದು. ಮೂಲಪಠ್ಯ ಎಷ್ಟು ಹಳೆಯದು, ಅದು "ಆ ಕಾಲದ" ಜನಕ್ಕೆ ಎಷ್ಟು ಹತ್ತಿರವಾಗಿತ್ತು ಎಂಬುದರೊಂದಿಗೇ ಈ ಕಾಲದ ಅದೇ ಭಾಷೆಯ ಜನಕ್ಕೆ ಎಷ್ಟು ದೂರವಿದೆಯೆಂಬುದನ್ನೂ ಅನುವಾದಕ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದು 'ಈಗಿನ' ಜನಕ್ಕೆ ಅಷ್ಟು 'ದೂರ'ವಿರುವುದರಿಂದಲೇ ಅದಕ್ಕೊಂದು 'ಕ್ಲಾಸಿಕಲ್' ಸ್ಪರ್ಷವಿದೆ. ಅದನ್ನೇ ನಮ್ಮ ಭಾಷೆಯಲ್ಲಿ ತರಬೇಕಾದರೆ ನಮ್ಮ ಅನುವಾದದ ಭಾಷೆಯೂ 'ಈಗಿನ' ಭಾಷೆಯಿಂದ ಅಷ್ಟೇ ಹಳಮೆಯನ್ನು ಕಾಯ್ದುಕೊಂಡರೆ ಮೂಲದ 'ತೂಕ' ಇಲ್ಲಿಯೂ ಬರಲು ಸಾಧ್ಯ - ಇದು ಬಹುಮಟ್ಟಿಗೆ ನನ್ನ (ಹಾಗೂ ಇತರ ಹಿರಿಯ/ಹಿಂದಿನ ತಲೆಮಾರಿನ ಅನುವಾದಕರ) ದೃಷ್ಟಿ. ಜೊತೆಗೆ, ಮೂಲದಲ್ಲಿ ಲಯ, ಛಂದಸ್ಸುಗಳ ಬಳಕೆಯಿದ್ದರೆ ಅಂಥವನ್ನೇ ಇಲ್ಲೂ ತರುವಲ್ಲಿ ಈ ಭಾಷಾಶಿಸ್ತು ಬಹಳ ಸಹಕಾರಿ. ಉದಾಹರಣೆಗೆ ಇದೇ ಪದ್ಯವನ್ನು 'ಹೊಸಗನ್ನಡ'ದಲ್ಲಿ ಹೀಗೆ ಅನುವಾದಿಸಬಹುದು ನೋಡಿ:

ನಮ್ಮ ಮೋಜುಗಳು ಈಗ ಮುಗಿದಿವೆ, ಈ ನಟರು
ಮೊದಲೇ ಹೇಳಿದಹಾಗೆ ಬರಿ ಗಾಳಿಗಳು ಮತ್ತೆ
ಎಲ್ಲರೂ ಗಾಳಿಯೊಳಗೆ ಗಾಳಿಯಾಗಿ ಕರಗಿಹೋದರು
ಮತ್ತೆ, ಈ ಬುಡವಿಲ್ಲದ ಕನಸಿನಂತೆ
ಮೋಡದ ಟೋಪಿಯ ಕಂಬಗಳು, ಭಾರೀ ಅರಮನೆಗಳು
ಪವಿತ್ರ ಗುಡಿಗಳು, ಈ ಪ್ರಪಂಚವೇ
ಹೂಂ, ಅದರೊಡನೆ ಇದ್ದುದೆಲ್ಲ, ಕರಗಿಹೋಗಬೇಕು
ಮತ್ತೆ, ಒಂದು ಕುರುಹೂ ಬಿಡದೇ
ಖಾಲಿ ನಾಟಕ ಕರಗಿಹೋದಹಾಗೆ.
ನಾವು ಕನಸಿನಂತಹ ವಸ್ತುಗಳಿಂದ ಮಾಡಲ್ಪಟ್ಟವರು
ನಮ್ಮ ಚಿಕ್ಕ ಬದುಕು ನಿದ್ದೆಯಿಂದ ಸುತ್ತುವರಿದಿದೆ.

ಈ ಅನುವಾದದಲ್ಲೂ ಮೂಲದ ಲಯವಿಲ್ಲ, ಭಾಷೆಯ ಬಳುಕಿಲ್ಲ, ಬಳಸಿದ ಪದಗಳಲ್ಲಿ ಮೂಲದ ತೂಕವೂ, ನವುರೂ, ಚೆಲುವೂ ಇಲ್ಲ. ಅರ್ಥ ಮಾತ್ರ ಸರಿಸುಮಾರು ಮೂಲವನ್ನೇ ಹೋಲುತ್ತದೆ. ನಮ್ಮ ಉದ್ದೇಶ ಅಷ್ಟೇ ಆದರೆ, ಇದನ್ನು ಅನುವಾದವೆಂದು ಒಪ್ಪಬಹುದು. ಆದರೆ ಅನುವಾದದ ಉದ್ದೇಶ ಇಷ್ಟಕ್ಕೆ ಸೀಮಿತವಾಗದು.

ಕೆಲವರ್ಷಗಳ ಹಿಂದೆ ಸರಿಸುಮಾರು ಇದೇ ವಿಷಯದ ಬಗ್ಗೆ (ಹಳಗನ್ನಡದಿಂದ ಹೊಸಗನ್ನಡಕ್ಕೆ ತರುವ ಬಗ್ಗೆ) ಫೇಸ್ಬುಕ್ಕಿನಲ್ಲೊಂದು ಚರ್ಚೆ ನಡೆದಿತ್ತು. ಅದು ನಿಮಗೆ ಅಸಕ್ತಿಯುಂಟುಮಾಡಬಹುದೆಂದು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ:

https://www.facebook.com/ksmanjunatha/posts/10153058356744500?comment_id=10155026469779500&comment_tracking=%7B%22tn%22%3A%22R0%22%7D

Anonymous said...

ಚೆನ್ನಾಗಿದೆ. ಮುಂದುವರೆಸಿ