Sunday, December 29, 2019

ಕೊನೆಗೊಂಡ ಸದಾಚಾರ-ಸೌಶೀಲ್ಯಗಳ ಯುಗ


ಶ್ರೀಗಳ ಸಮ್ಮುಖ ನಮ್ಮ ಪಾಲಿಗೆ ಬಹುಸಾಮಾನ್ಯವೆಂಬಂತಿದ್ದದ್ದು ನನ್ನ ಎಳವೆಯಲ್ಲಿ. ಚನ್ನಪಟ್ಟಣಕ್ಕೆ ಬಂದ ಎಲ್ಲ ಸ್ವಾಮಿಗಳಿಗೂ ನಮ್ಮ ತಾತನವರದ್ದೇ ಆತಿಥ್ಯ, ಊರಿನ ರಾಮದೇವರ ಗುಡಿಯಲ್ಲಿ ವಾಸ್ತವ್ಯ ಎಂದು ನನ್ನ ನೆನಪು. ಅವರು ಊರಿಗೆ ಬಂದ ದಿನ ಸಂಜೆ ಸಾಮಾನ್ಯವಾಗಿ ನಮ್ಮ ತಾತನವರ ಮನೆಗೆ ಭೇಟಿ - ದೊಡ್ಡ ಮನೆ, ಅಲ್ಲೊಂದು ಪುಟ್ಟ ಸಭೆ ನಡೆಯುತ್ತಿತ್ತು. ಶ್ರೀಗಳ ಆಶೀರ್ವಚನ - ಅದೇ ವಿದ್ಯುತ್ಕಾಂತಿಯ ಮಾಸದ ನಗೆ, ಸ್ವಗತದ ಶೈಲಿಯ ಮೃದುಗಂಭೀರವಾಣಿ, ಫಲಮಂತ್ರಾಕ್ಷತೆ, ನಗೆಮೊಗದ ಕುಶಲಪ್ರಶ್ನೆ - ಈ ಕ್ರಮ ಬಹುತೇಕ ನಮ್ಮ ತಾತನವರು ಬದುಕಿರುವ ತನಕ ತಪ್ಪಿದ್ದಿಲ್ಲ. ಆಮೇಲೆ ಊರಿನ ಸಂಪರ್ಕ ತಪ್ಪಿ ದಶಕಗಳೇ ಕಳೆದುವು. ಮಾಧ್ಯಮಗಳ ಮೂಲಕವಷ್ಟೇ ಶ್ರೀಗಳ ಪರೋಕ್ಷಸಂಪರ್ಕ. ಎಷ್ಟೋ ದಶಕಗಳನಂತರ ಮೊನ್ನೆಮೊನ್ನೆ ಶ್ರೀಗಳ ನೇರ ದರ್ಶನ ಬೆಂಗಳೂರಿನಲ್ಲಿ, ಸರಿಯಾಗಿ 18 ದಿನದ ಕೆಳಗೆ, 11/12/2019ರಂದು, ಶ್ರೀ ವಿದ್ಯಾಪ್ರಸನ್ನತೀರ್ಥರ ಐವತ್ತನೇ ಪುಣ್ಯದಿನದ ಸ್ಮರಣೆಯಲ್ಲಿ. ಪ್ರಸನ್ನತೀರ್ಥರೊಡನಿನ ಅರವತ್ತೈದು ವರ್ಷಕ್ಕೂ ಹಿಂದಿನ ತಮ್ಮ ನೆನಪುಗಳನ್ನು ಹೆಕ್ಕಿ ತೆಗೆದು ಹಂಚಿಕೊಂಡರು, ತಮಿಳುನಾಡಿನ ಯಾವುದೋ ಹಳ್ಳಿಯ ಹೆಸರು ಕೂಡ ಶ್ರೀಗಳ ನೆನಪಿನಲ್ಲಿತ್ತು. ಆ ದಿನ ಶ್ರೀಗಳನ್ನು ನೋಡಿದವರಿಗೆ ಅದೇ ಕೊನೆಯ ದರ್ಶನವಾಗಬಹುದೆಂಬ ಊಹೆ ಖಂಡಿತಾ ಇರಲಿಕ್ಕಿಲ್ಲ. ಶ್ರೀಗಳ ಅದಮ್ಯಚೇತನಕ್ಕೆ 88 ಇನ್ನೂ ಕಿರಿಯವಯಸ್ಸು. ಬಿಡುವಿಲ್ಲದ ಕಾರ್ಯಕ್ರಮದ ಕಾರಣದಿಂದ, ಈ ಕಾರ್ಯಕ್ರಮದ ಅರ್ಧದಲ್ಲೇ ಉಡುಪಿಗೆ ಹೊರಡಬೇಕಾಗಿ ಬಂದ ಕಾರಣವನ್ನು ಸಭೆಗೆ ವಿವರಿಸಿ "ಸಭೆಯ ಅನುಮತಿ ಪಡೆದು ಪ್ರಯಾಣ ಬೆಳಸುತ್ತೇವೆ" ಎಂದ ಶ್ರೀಗಳ ಸೌಜನ್ಯ ಬೆರಗಾಗಿಸಿತು.

ಕಳೆದ ವರ್ಷವೋ ಏನೋ, ಪ್ರಯಾಣದಲ್ಲಿ ಬೆನ್ನಿಗೆ ಪೆಟ್ಟಾಗಿ, ಎದ್ದು ನಿಲ್ಲುವುದೇ ದುಸ್ತರವಾಗಿ, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾಗ್ಯೂ ಎರಡೇ ದಿನದಲ್ಲಿ ಕೂಡಿದ ಮಟ್ಟಿಗೆ ನಿತ್ಯಕರ್ಮಾನುಷ್ಠಾನವನ್ನು ರೂಢಿಸಿಕೊಂಡರೆಂದು ಕೇಳಿದ್ದೇನೆ. ಸಾಂಪ್ರದಾಯಿಕ ಸನ್ಯಾಸಿಯೊಬ್ಬನಿಗೆ ನಿತ್ಯಕರ್ಮಾನುಷ್ಠಾನ ಅದೆಷ್ಟು ಮುಖ್ಯವೆಂದು ಸಂಪ್ರದಾಯವನ್ನು ಬಲ್ಲವರೆಲ್ಲರೂ ಅರಿತ ವಿಷಯ. ಇದು ಸನ್ಯಾಸಿಗಳಿಗೆಲ್ಲ ಮಾದರಿಯಾಗಬಹುದಾದ ವಿಶ್ವೇಶತೀರ್ಥರ ಇಚ್ಛಾಶಕ್ತಿ.

ಸಾಂಪ್ರದಾಯಿಕ ಸನ್ಯಾಸದ ಚೌಕಟ್ಟಿನೊಳಗೇ ಸಾಮಾಜಿಕಸುಧಾರಣೆಗಾಗಿ ತುಡಿದ ಈ ಚೇತನ, ಕೇಳಿದ ಕಟಕಿಗಳೆಷ್ಟು, ಎದುರಿಸಿದ ವಿರೋಧವೆಷ್ಟು, ಅನುಭವಿಸಿದ ನಿರ್ಲಜ್ಜ ವೈಯಕ್ತಿಕ ಭರ್ತ್ಸನೆಗಳೆಷ್ಟು? ರಾಜಕೀಯಸ್ಥನೆಂದರು, ಪೊಲಿಟಿಕಲ್ ಗಿಮಿಕ್ ಎಂದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿದರು, ಆಡಬಾರದ್ದನ್ನಾಡಿದರು - ಈ ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಸಮುದಾಯದ ಯತಿಗಡಣವಿರಲಿ, ಬ್ರಾಹ್ಮಣಸಮಾಜದ, ಇಡೀ ಹಿಂದೂ ಸಮಾಜದ ಯತಿಸಮುದಾಯವೂ ನಿರ್ಲಿಪ್ತಮೌನ ವಹಿಸಿದಾಗ್ಯೂ, ತಾವೂ ಸ್ವತಃ ನಿರ್ಲಿಪ್ತರಾಗಿ ತಾವು ಸರಿಯೆಂದು ಅರಿತದ್ದನ್ನು ನಡೆಸಿಕೊಂಡು ಹೋದ ದೃಢತೆ ಸ್ವಾಮಿಗಳದ್ದು.

ಸ್ವಚ್ಛತೆ, ಸದಾಚಾರ, ಸಂಯಮ, ಸೌಶೀಲ್ಯಗಳ ಒಂದು ಯುಗ ಇಂದಿಗೆ ಮುಗಿದಿದೆ. ಆ ಯುಗದ ಒಂದು ಭಾಗದಲ್ಲಿ ನಾವೂ ಜೀವಿಸಿದ್ದೆವೆಂಬ ಸಾರ್ಥಕತೆ ನಮಗುಳಿದಿದೆ, ಆ ಸಾರ್ಥಕತೆಗೆ ಮುಕ್ಕಾಗದಂತೆ ಬದುಕುವ ಹೊಣೆಗಾರಿಕೆಯೂ!  ನೆಚ್ಚಿದ ತತ್ತ್ವಕ್ಕೆ ಕಟ್ಟಿ ನಿಲ್ಲುವ ಆ ದೃಢತೆ, ಗುಬ್ಬಚ್ಚಿಯಂತಹ ಪುಟ್ಟ ದೇಹದಲ್ಲಿ ಸದಾ ಪುಟಿಯುವ ಆ ಚೈತನ್ಯ, ಆ ಮಗುವಿನಂತಹ ನಗೆ - ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ.

ಈ ಚೇತನ ನಮ್ಮ ಹಿಂದೆ ಸದಾ ಬೆಂಗಾವಲಾಗಿರಲಿ ಎಂಬ ಹಾರೈಕೆಯೊಂದಿಗೆ 🙏🙏🙏

Friday, September 6, 2019

ಪ್ರಾದೇಶಮಾತ್ರವಸನಂ

ಯಾವುದೋ ತರಲೆ ಚರ್ಚೆಯ ನಡುವೆ, ವಿದ್ವನ್ಮಿತ್ರರಾದ ಶ್ರೀ ರಂಗನಾಥಪ್ರಸಾದರಿಗೆ "ನೀವು ದೇಶದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ" ಎಂದೆ.  ಅದು ಬೇರೆಯೇ ತಮಾಷೆಯ ಹಿನ್ನೆಲೆ, ಸದ್ಯಕ್ಕಿಲ್ಲಿ ಅಪ್ರಸ್ತುತ.  ಅದಕ್ಕವರು ಹೀಗೆ ಹೇಳಿದರು - "ದೇಶ ಎಂದರೆ ಪ್ರದೇಶ ಎಂಬ ಅರ್ಥವೂ ಇದೆ. ಪ್ರದೇಶದಿಂದ ಪ್ರಾದೇಶ! ಈಚೆಗೆ ನೀವು ಪದ್ಯಪಾನಕ್ಕೆ ಬಂದಿಲ್ಲ. ಅಲ್ಲೊಂದು ಸಮಸ್ಯೆ ಹೀಗಿತ್ತು: "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ" - ತಾಕತ್ತಿದ್ದರೆ ಪರಿಹರಿಸಿ ನೋಡೋಣ"  ಈ ಬಗೆಯ ಹಾಸ್ಯಸಲ್ಲಾಪಗಳು ನಮ್ಮಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ.

"ಪ್ರಾದೇಶಮಾತ್ರವಸನ" ಎಂದರೆ ದೇಹದ 'ಆ' ಪ್ರದೇಶವನ್ನಷ್ಟೇ ಮುಚ್ಚುವಷ್ಟು ಚಿಕ್ಕ ಬಟ್ಟೆ ಎಂದು ವಿಶೇಷಾರ್ಥ - "ಆ ಸತಿಯು 'ಪ್ರದೇಶ'ವನ್ನಷ್ಟೇ ಮುಚ್ಚುವಷ್ಟು ಬಟ್ಟೆಯನ್ನು ಧರಿಸಿದಳಲ್ಲವೇ?" ಎಂಬುದು ಈ ಸಾಲಿನ ಅರ್ಥ.  ಕ್ಷಮಿಸಿ, ಸ್ವಲ್ಪ ಮಡಿಯವರಿದ್ದರೆ ಇನ್ನು ಮುಂದೆ ಓದುವ ಅಗತ್ಯವಿಲ್ಲ, ಆದರಿದು ವಿದ್ವದ್ವಿನೋದ ಎಂಬ ದೃಷ್ಟಿಯುಳ್ಳವರು ಮುಂದುವರೆಯಬಹುದು :) ಇದೊಂದು ಸಮಸ್ಯಾಪೂರಣದ ಪ್ರಶ್ನೆ.  ಸಮಸ್ಯಾಪೂರಣದ ಹಿನ್ನೆಲೆ ಅರಿಯದವರಿಗಾಗಿ ಇದೊಂದು ಚಿಕ್ಕ ವಿವರಣೆ.  ಅವಧಾನಕಲೆಯಲ್ಲಿ ಸಮಸ್ಯಾಪೂರಣವೆನ್ನುವುದು ಒಂದು ವಿಭಾಗ.  ಇಲ್ಲಿ ಅವಧಾನಿಗೆ ಪೃಚ್ಛಕನು (ಅವಧಾನಿಗೆ ಸರದಿಯ ಮೇಲೆ ಪ್ರಶ್ನೆ ಕೇಳುವ ಎಂಟೋ ಹತ್ತೋ ನೂರೋ ಸಾವಿರವೋ ಮಂದಿಯಲ್ಲಿ ಒಬ್ಬ) ತಾನು ರಚಿಸಿದ/ರಚಿಸಲೆಳಸುವ ಪದ್ಯದ ಸಾಲೊಂದನ್ನು  ಕೊಡುತ್ತಾನೆ.  ಈ ಸಾಲು ಸಾಮಾನ್ಯವಾಗಿ ಅರ್ಥಹೀನವೋ ಅಸಂಬದ್ಧವೋ ಅಸಂಭವವವೋ ಕೆಲವೊಮ್ಮೆ ಅಶ್ಲೀಲವೋ ಆಗಿದ್ದು, ಇದನ್ನು 'ಸಮಸ್ಯೆ' ಎನ್ನುತ್ತಾರೆ - ಉದಾ: "ಸತ್ತವಳೆದ್ದೋಡಿ ಪೋದಳ್"; "ದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್"; ಅಥವಾ "ಬ್ರಾಹ್ಮಣ ಕಾಗೆಮಾಂಸವ ತಿಂಬುದೇನಾಶ್ಚರ್ಯಂ" ಹೀಗೆ.  ನಿರ್ದಿಷ್ಟ ಛಂದಸ್ಸಿನಲ್ಲಿರುವ ಆ ಪದ್ಯದ ಉಳಿದ ಮೂರೋ ನಾಲ್ಕೋ ಐದೋ ಸಾಲುಗಳನ್ನು ಛಂದೋನಿಯಮಗಳಿಗೆ ಭಂಗವಾಗದಂತೆ ರಚಿಸಿ, ಪದ್ಯ ಪೂರ್ಣಗೊಳಿಸಿ, ಈ 'ಸಮಸ್ಯೆ'ಯ ಸಾಲಿಗೆ ಒಂದು ಸುಸಂಬದ್ಧತೆಯನ್ನ, ಅರ್ಥವನ್ನ ತಂದುಕೊಟ್ಟು, ಅದರಲ್ಲಿ ಮೇಲ್ನೋಟಕ್ಕೆ ಕಾಣುವ ಅಶ್ಲೀಲತೆಯನ್ನು ತೊಡೆದು ಹಾಕುವುದು ಅವಧಾನಿಯ ಕೆಲಸ.  ಅದನ್ನಾತ ಸುತ್ತಿಗೊಂದು ಸಾಲಿನಂತೆ ಮೂರೋ ನಾಲ್ಕೋ ಸುತ್ತುಗಳಲ್ಲಿ ಮಾಡಿ ಮುಗಿಸುವುದಲ್ಲದೇ, ಕೊನೆಯಲ್ಲಿ ಇಡೀ ಪದ್ಯವನ್ನು ನೆನಪಿನಿಂದ ಹೇಳುತ್ತಾನೆ, ಅದಾದಮೇಲೆ ಪೃಚ್ಛಕ ಅದೇ ಸಮಸ್ಯೆಯ ಸಾಲನ್ನೊಳಗೊಂಡ ತನ್ನ ಪದ್ಯವನ್ನೂ ಹೇಳುತ್ತಾನೆ.  ಮೇಲಿನ ಉದಾಹರಣೆಯಲ್ಲಿ, ಸತ್ತವಳು ಎದ್ದೋಡಿಹೋಗಲು ಹೇಗೆ ಸಾಧ್ಯ.  ಆದರೆ "ಅತ್ತೆಯ ಕಾಟಕೆ ಬೇಸತ್ತವಳೆದ್ದೋಡಿ ಪೋಗಲು" ಸಾಧ್ಯವಲ್ಲವೇ?  ಹಾಗೆಯೇ ಪರಮ ಅಹಿಂಸಾವಾದಿಗಳಾದ ಜೈನರು "ದನಮಂ ಕಡಿಕಡಿದು ಬಸದಿಗೆಳೆ"ಯುವುದು ಅಸಾಧ್ಯವಿರಬಹುದು, ಆದರೆ "ಚಂದನಮಂ ಕಡಿಕಡಿದು ಬಸದಿಗೆಳೆ"ಯುವುದು ಸಾಧ್ಯ.  ಸಮಸ್ಯಾಪೂರಣವು ಹೀಗಿರುತ್ತದೆ.  ಪ್ರಖ್ಯಾತವಾದ ಕವಿರತ್ನಕಾಳಿದಾಸ ಸಿನಿಮಾದಲ್ಲಿ ಡಿಂಡಿಮನೆಂಬ ಕವಿ ಒಂದು ಸಾಲು ಹೇಳುತ್ತಾನಲ್ಲ - "ಕಮಲೇ ಕಮಲೋತ್ಪತ್ತಿಃ" - ಇದು ಅಂಥದ್ದೊಂದು ಸಮಸ್ಯೆಯ ಸಾಲು.  ಅದನ್ನು ಆಮೇಲೆ ಕಾಳಿದಾಸನು ಹೇಗೆ ಪೂರೈಸುತ್ತಾನೆಂಬುದನ್ನು ನೀವು ಬಲ್ಲಿರಿ.

ಇರಲಿ, ಈಗ ಪ್ರಸ್ತುತ ಸಮಸ್ಯೆಗೆ ಬಂದರೆ, ಹಿರಿಯರಾದ ರಂಗನಾಥರು ಹೋಗಿ ಹೋಗಿ ನಮ್ಮಂತಹ ಚಿಕ್ಕವರಿಗೆ ಇಂಥದ್ದೊಂದು ಸಾಲನ್ನು ಕೊಟ್ಟು, ಬಿಡಿಸಿರೆಂದರೆ ಏನು ಹೇಳಬೇಕು?  ಆದರೆ ಹಿರಿಯರು 'ತಾಕತ್ತ'ನ್ನೇ ಚುಚ್ಚಿ ನುಡಿದ ಮೇಲೆ ಮಾನಿಸದಿರಲು ಸಾಧ್ಯವೇ? ಅದರಿಂದಾಗಿ ಈ ಕೆಳಗಣ ಪೂರಣವನ್ನು ಮಾಡಿದೆ:

ಆದೇಶ ಬಂದುದು ಕಣಾ ಪಿರಿಯಜ್ಜನಿಂದಂ
ವಾದಕ್ಕಣಂಗುಡದೆ ಪೂರಯಿಸೆಂದಿದಂ ಪೋ
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

('ಹಿರಿಯಜ್ಜ'ನಿಂದ ಆದೇಶ ಬಂದಿದೆ, ವಾದವಿಲ್ಲದೇ ಈ ಸಾಲನ್ನು ಪೂರೈಸೆಂದು - ಇದನ್ನು ಬಿಟ್ಟು ಇನ್ನೇನು ತಾನೆ ಹೇಳಲಿ (ಪೋ), ಬಾಧಿಸುವ ಮದನನು ಉಟ್ಟದ್ದನ್ನೇ ಸೆಳೆಯುತ್ತಿರಲು ಆ ಸತಿ ಮತ್ತೇನು ಮಾಡಿಯಾಳು... "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ".  ಇದು ಪೂರಣ)

ಮೇಲಿನದ್ದನ್ನು ನಿಜಕ್ಕೂ ಸಮಸ್ಯಾಪೂರಣವೆನ್ನಲಾಗದು.  ಸಾಲಿನಲ್ಲಿರುವ ಅಸಂಬದ್ಧ ಅಶ್ಲೀಲತೆ ಹಾಗೆಯೇ ಇದೆ - ಪೃಚ್ಛಕರು ಹೇಳಿದ್ದನ್ನೇ ನಾನೂ ಒಪ್ಪಿ ಹೂಂಗುಟ್ಟಿದ್ದೇನಷ್ಟೇ; ಹೋಗಲಿ ಅದು ಪತಿಪತ್ನಿಯರ ಸಲ್ಲಾಪವರ್ಣನೆಯೆನ್ನೋಣವೇ, ಪದ್ಯದ ಸಂದರ್ಭವೂ ಹಾಗೆಂದು ಸೂಚಿಸದು.  ಆದ್ದರಿಂದ ಪದ್ಯವು ಆ ಅಶ್ಲೀಲತೆಯನ್ನು ತೊಡೆಯಲು ಏನೂ ಮಾಡಿಲ್ಲ.  ನಾನೇನು ಅವಧಾನಿಯೇ? ನೀವು ಹೇಗೆ ಕೊಟ್ಟಿರೋ ಹಾಗೇ ಹೇಳಿದ್ದೇನಪ್ಪಾ ಎನ್ನುವ ಧೋರಣೆ ಇಲ್ಲಿನದು.  ಆದರೆ ಸಮಸ್ಯೆಯೆಂದ ಮೇಲೆ ಅದು ಬಗೆಹರಿಯಬೇಕು ತಾನೆ?  'ಸತಿ' ಹಾಗೆ ಮಾಡಲು ತಕ್ಕ ಸಂದರ್ಭವಾದರೂ ಇದ್ದರೆ ಸತಿಯ ಆ ನಡುವಳಿಕೆಗೆ ತಕ್ಕ ಹಿನ್ನೆಲೆಯೊದಗಿ ಆ ಅಶ್ಲೀಲತೆ ಸ್ವಲ್ಪ ತೊಲಗಬಹುದಲ್ಲವೇ?  ಈ ದೃಷ್ಟಿಯ ಪೂರಣ ಈ ಕೆಳಗಿನದು:

ಆ ದೇಶದಿಂ ಮರಳಿ ಬಂದಿಹ ನಲ್ಲನಂ ಕಂ
ಡಾಮೋದದೊಳ್ ಮಿಗುತೆ ಪೆರ್ಚಿದ ನಲ್ಮೆ ಕಾಡಲ್
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಯಾವುದೋ ದೇಶಕ್ಕೆ ಹೋಗಿದ್ದ ನಲ್ಲನು ಮನೆಗೆ ಮರಳಿದ್ದಾನೆ.  ಆತನನ್ನು ಕಂಡ ಸತಿಗೆ ಬಲು ಹಿಗ್ಗಾಗಿದೆ; ಅದುವರೆಗೆ ತಡೆದಿದ್ದ ಬಯಕೆಗಳು ಉಕ್ಕೇರಿ ಕಾಡತೊಡಗಿವೆ... ಮುಂದಿನದ್ದು ಮೇಲೇ ವಿವರಿಸಿದಂತೆ)

ಸಮಸ್ಯಾಪೂರಣಗಳು ಹೀಗಿರಬಾರದೆಂದೇನಿಲ್ಲ.  ಸಾಲಿನಲ್ಲಿ ಕಾಣುವ ಅಸಂಬದ್ಧತೆಯಿಲ್ಲದಿದ್ದರೆ ಆಯಿತು.  ಮೇಲಿನ ಪೂರಣದಲ್ಲಿ ಸತಿಯ ಆ ನಡುವಳಿಕೆಗೆ ಸಹಜವೆನಿಸಿದ ಒಂದು ಸಂದರ್ಭವೊದಗಿ, ಆ ಚೌಕಟ್ಟಿನಲ್ಲಿ ಕೊನೆಯ ಸಾಲು ಸುಸಂಬದ್ಧವೆನಿಸಿದೆ.  ಈ ದೃಷ್ಟಿಯಿಂದ ಮೇಲಿನದು ಒಪ್ಪಬಹುದಾದ ಸಮಸ್ಯಾಪೂರಣವೇ.  ಆದರೆ ಸಾಮಾನ್ಯವಾಗಿ ಸಮಸ್ಯಾಪೂರಣಗಳು ಇಷ್ಟು ಸೀದಾಸಾದಾ ಆಗಿ, ಪೇಲವವಾಗಿರುವುದಿಲ್ಲ, ಇನ್ನಷ್ಟು ಚಮತ್ಕಾರದಿಂದ ಕೂಡಿರುತ್ತದೆ.  ಸಮಸ್ಯೆಯ ಸಾಲಿನ ಮೊದಲ ಪದಕ್ಕೆ ಹಿಂದೆ ಒಂದೋ ಎರಡೋ ಅಕ್ಷರಗಳನ್ನು ಸೇರಿಸುವುದರ ಮೂಲಕ ಬಹುಚಮತ್ಕಾರವಾಗಿ ಇಡೀ ಸಾಲಿನ ಅರ್ಥವನ್ನೇ ಬದಲಿಸಿ, ಪದ್ಯದ ಸಂದರ್ಭವನ್ನೇ ಬದಲಿಸಿಬಿಡಬಹುದು (ಮೇಲಿನ ಉದಾಹರಣೆಯಲ್ಲಿ ಸತ್ತವಳ್-ಬೇಸತ್ತವಳ್; ದನಮಂ-ಚಂದನಮಂ ನೋಡಿದಿರಲ್ಲ).  ಹೀಗೆ ಬದಲಾವಣೆಗೊಳಗಾಗುವ ಪದಕ್ಕೆ ಕೀಲಕಪದವೆನ್ನುತ್ತಾರೆ.  ಇಡೀ ಪದ್ಯದ ಅರ್ಥಪಲ್ಲಟಕ್ಕೆ ಇದು ಕೀಲಿ ಕೈ ಇದ್ದಂತೆ.  ಇದೇ ಸಾಲನ್ನು ಬಳಸಿಕೊಂಡ ಕೆಳಗಿನ ಪೂರಣವನ್ನು ನೋಡಿ - ಮಡಿಮಡಿಯೆಂದರೆ ಅಚ್ಚ ಮಡಿ - ಸ್ನಾನಮಾಡಿಕೊಂಡು ಓದಬೇಕಾದ್ದು, ಈ ಪೂರಣ :)

ಗೋದಾನ ವಸ್ತ್ರ ಧರಣೀ ಧನಧಾನ್ಯ ಮುಂಕೊಂ
ಡಾ ದಾನಕರ್ಮ ಮುಗಿಯಲ್ ಪತಿಪತ್ನಿಯರ್ ಮ
ತ್ತಾ ದೇವಗಂ ನಮಿಸಿ ಪೊನ್ನುಡೆಯುಟ್ಟೆನಲ್ ವಿ-
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಪತಿಪತ್ನಿಯರು ಯಾವುದೋ ಹೋಮವನ್ನೋ ವ್ರತ/ಪೂಜೆಯನ್ನೋ ಮಾಡುತ್ತಿದ್ದಾರೆ.  ಗೋದಾನ, ವಸ್ತ್ರದಾನವೇ ಮೊದಲಾದ ದಾನಕರ್ಮ ಮುಗಿದಿದೆ.  "ಈಗ ಪತಿಪತ್ನಿಯರು ಜರತಾರಿ ಬಟ್ಟೆ (ಪೊನ್ನುಡೆ)ಯನ್ನುಟ್ಟು ಬಂದು ದೇವರಿಗೆ ನಮಸ್ಕರಿಸಿ" ಎಂದು ಪುರೋಹಿತರು ಆದೇಶಿಸುತ್ತಾರೆ.  ಆ 'ವಿಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ?" - ಹಾಗೆ ವಿಪ್ರನು ಆದೇಶಿಸಿದ ವಸ್ತ್ರವನ್ನೇ (ವಿಪ್ರಾದೇಶಮಾತ್ರವಸನಂ) ಆ ಸತಿಯು ತೊಟ್ಟಳು - ಇಲ್ಲಿ ಪ್ರಾದೇಶವು ವಿಪ್ರಾದೇಶವಾಯಿತು)

ಸಾಮಾನ್ಯವಾಗಿ ಅವಧಾನದಲ್ಲಿ ಬರುವುದು ಇಂತಹ ಪೂರಣಗಳು.  

ಅಂದಹಾಗೆ, ಈ ಪದ್ಯವು ವಸಂತತಿಲಕ ಎಂಬ ಛಂದಸ್ಸಿನಲ್ಲಿದೆ - "ಶ್ರೀವೇಂಕಟಾಚಲಪತೇ ತವಸುಪ್ರಭಾತಂ" ವೆಂಕಟೇಶಸುಪ್ರಭಾತ ಕೇಳಿದ್ದೀರಲ್ಲ, ಅದೇ ಛಂದಸ್ಸು.  ಅಥವಾ ನೃಸಿಂಹನ ಭಕ್ತರಾದರೆ "ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ" ಎನ್ನಿ, ಅದೂ ಇದೇ ಛಂದಸ್ಸು.  ಅಥವಾ ಶಿವಭಕ್ತರಾದರೆ "ವಾರಾಣಸೀಪುರಪತೇ ತವಸುಪ್ರಭಾತಂ" ಎಂದೂ ಹೇಳಬಹುದು.

ಚಿತ್ರಕೃಪೆ: ಅಂತರ್ಜಾಲ

Wednesday, August 21, 2019

ಕನ್ನಡಕೆ ಹೋರಾಡು ಕನ್ನಡವ ಕಾಪಾಡು ಕನ್ನಡದ ಕಂದಾ...











ಕನ್ನಡ ಹೋರಾಟದ ಹೆಸರಿನಲ್ಲಿ, ಕನ್ನಡದ ಹಿತಾಸಕ್ತಿಯನ್ನು ಮೂರಾಬಟ್ಟೆ ಮಾಡಲು ಕಾಲದಿಂದಲೂ ಒಳಗೂ ಹೊರಗೂ ಕಾದುನಿಂತ ಶಕ್ತಿಗಳಿಗೆ ಗ್ರಾಸವಾಗುವಂತಹ ಇಂಥದ್ದೊಂದು ಘಟನೆ ನಡೆಯಬಾರದಿತ್ತು.  ಮೊನ್ನೆ ಬೆಂಗಳೂರಿನ ಮಾರವಾಡಿ ಸಮುದಾಯದ ಖಾಸಗೀ ಧಾರ್ಮಿಕ/ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಹಿಂದೀ ಬ್ಯಾನರುಗಳನ್ನು ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುವ ಗುಂಪೊಂದು ಹರಿದುಹಾಕಿದ್ದು, ಅದನ್ನು ವಿರೋಧಿಸಿ ಕನ್ನಡದ ಎಳೇ ಸಂಸದರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದೂ, ಅದಕ್ಕೆ ವಿರುದ್ಧವಾಗಿ ಭುಗಿಲೆದ್ದ ಪ್ರತಿಭಟನೆಗಳೂ, ಎರಡೂ ಬಣಗಳೂ ತಂತಮ್ಮ ಸಮರ್ಥನೆಗಾಗಿ ಮುಂದೂಡ್ಡುತ್ತಿರುವ ಹಾಸ್ಯಾಸ್ಪದ ವಾದಗಳೂ, ಅವುಗಳ ಹಿಂದಿರುವ ರಾಜಕೀಯ ಹುನ್ನಾರಗಳೂ - ಬೇಡವಾಗಿತ್ತು.  ಅಂತಿಮವಾಗಿ ಇವರೆಲ್ಲ ಸೇರಿ ಸೆಳೆಯಲೆತ್ನಿಸುತ್ತಿರುವುದು ಕನ್ನಡಮ್ಮನ ಜೀರ್ಣವಸ್ತ್ರವನ್ನಷ್ಟೇ, ಇದು ಸಂಕಟದ ವಿಷಯ.

ವಿಷಯದ ವಿಶ್ಲೇಷಣೆಗೆ ತೊಡಗುವ ಮೊದಲು, ಆದದ್ದನ್ನೊಮ್ಮೆ ಪರಿಶೀಲಿಸೋಣ.  ಬೆಂಗಳೂರಿನ ಗಣೇಶ ಬಾಗ್ ನಲ್ಲಿ ಮಾರವಾಡಿ ಜೈನಸಮುದಾಯದವರು ಚಾತುರ್ಮಾಸ್ಯ ಸಮಾರಂಭದ ಸಲುವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ - ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಅವರ ಗುರುಗಳನ್ನು ಸ್ವಾಗತಿಸಿ ರಸ್ತೆ ಕಮಾನನ್ನು ನಿರ್ಮಿಸಿದ್ದಾರೆ, ಮತ್ತು ಅವರ ಸಮುದಾಯಕ್ಕೇ ಸೀಮಿತವಾದ ಸಮಾರಂಭವಾದ್ದರಿಂದ ಸಹಜವಾಗಿಯೇ ಅವರ ಮಾತೃಭಾಷೆಯಲ್ಲಿ ಸ್ವಾಗತವಾಕ್ಯಗಳನ್ನು ಬರೆದಿದ್ದಾರೆ.  ಇದೊಂದು ಸಮುದಾಯದ ಒಳಗಣ ಸಂಭ್ರಮದ ಸಮಾರಂಭ, ಅಷ್ಟು ಮಟ್ಟಿಗೆ ವೈಯಕ್ತಿಕ ಕಾರ್ಯಕ್ರಮ ಕೂಡ.

ಆದರೆ ಇದಾವುದನ್ನೂ ಲೆಕ್ಕಿಸದ ಕೆಲವರು ’ಹೋರಾಟ’ಗಾರರು ಕೇವಲ ದೊಡ್ಡದೊಡ್ಡ ಅಕ್ಷರಗಳ ಹಿಂದೀ ಬ್ಯಾನರನ್ನು ಮಾತ್ರ ಗಮನಿಸಿ, ಸ್ಥಳಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ - ವಿಡಿಯೋ ನೋಡಿದರೆ ಇವರು ಬಳಸಿದ ಭಾಷೆಯೂ ತೀರ ವೈಯಕ್ತಿಕವಾಗಿದೆ.  ಅಲ್ಲಿದ್ದ ಇಬ್ಬರೇ ಇಬ್ಬರು ಸೆಕ್ಯುರಿಟಿಗಳು ವಿನಯವಾಗಿಯೇ ತಮಗೆ ತಿಳಿದ ಸಮಜಾಯಿಸಿ ನೀಡಲೆತ್ನಿಸಿದ್ದಾರೆ.  ಸ್ವಾಮೀಜಿ ಬರುತ್ತಿದ್ದಾರೆ ಎಂದೇನೋ ಹೇಳಿದ ಹಾಗಿದೆ.  ಅದಕ್ಕೆ ಗಲಾಟೆ ಮಾಡುತ್ತಿದ್ದವರಲ್ಲೊಬ್ಬ "ಅವನ್ಯಾವನೋ ಮುಚ್ಕೊಂಡ್ ಬಂದಿರೋ ಸ್ವಾಮಿ... " ಎಂದು ಅಸಹ್ಯವಾಗಿ ಮಾತಾಡಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.  ಅಷ್ಟಾದ ಮೇಲೆ, ಸೆಕ್ಯುರಿಟಿಗಳು ನಿಸ್ಸಹಾಯಕವಾಗಿ ನೋಡುತ್ತಿದ್ದಂತೆಯೇ ಈ ಜನ ಮೇಲೆ ಹತ್ತಿ ಬ್ಯಾನರುಗಳನ್ನು ಕಿತ್ತುಹಾಕಿದ್ದೂ, ಗುರುಗಳ ಚಿತ್ರವನ್ನು ಚೂರಿಯಲ್ಲಿ ಹರಿದು ಕೆಳಗೆಳೆದದ್ದೂ, ಬ್ಯಾನರನ್ನು ಕಾಲಿನಲ್ಲಿ ಹೊಸಕಿದ್ದೂ - ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿರುವ ಅಂಶ.

ಹೀಗೆ ತಮ್ಮ ಧರ್ಮಗುರುಗಳ ಭಾವಚಿತ್ರಕ್ಕಾದ ಅಪಚಾರದಿಂದ, ತಮ್ಮ ಖಾಸಗೀ ಕಾರ್ಯಕ್ರಮದಲ್ಲಿ ಆದ ದಾಂದಲೆಯಿಂದ ನೊಂದು ಜೈನಸಮಾಜದವರು ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ, ಮತ್ತು ಸಹಜವಾಗಿಯೇ ಪೋಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ.

ಸಧ್ಯಕ್ಕೆ ಕನ್ನಡದ ಪರ-ವಿರೋಧವಾಗಿ ಹಾರಾಡುತ್ತಿರುವ ಹಲವು ಕಾಮೆಂಟುದಾರರಿಗೆ ಮೇಲಿನ ಘಟನಾವಳಿಗಳು ಪೂರ್ಣ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.  ಇರಲಿ, ಸಧ್ಯಕ್ಕೆ ಇದನ್ನು ನಾವೂ ತಾತ್ಕಾಲಿಕವಾಗಿ ಮರೆತು ಆನಂತರ ನಡೆದದ್ದನ್ನು ಒಮ್ಮೆ ನೋಡೋಣ.  ಕನ್ನಡ-ಕನ್ನಡತನದ ಬಗ್ಗೆ ತಮ್ಮ ಬಾಲಿಶ ಹೇಳಿಕೆಗಳಿಗೆ ಪ್ರಸಿದ್ಧರಾದ 'ಸೆಂಟ್ರಲ್' ಸ್ಕೂಲಿನ ಎಳೇ ವಿದ್ಯಾರ್ಥಿ ಸಂಸದರೊಬ್ಬರು "ಕೆಲವು ರೌಡಿ ಶಕ್ತಿಗಳಿಂದ ನಮ್ಮ ಜೈನಬಂಧುಗಳ ಮೇಲೆ ಹಲ್ಲೆಯಾಗಿರುವುದು ನೋವುಂಟುಮಾಡಿದೆ, ಆದರೆ ಅವರು ಬೆಂಗಳೂರಿನಲ್ಲಿ ಉರ್ದೂ ಬಳಕೆಯ ಬಗ್ಗೆ ಚಕಾರವೆತ್ತುವುದಿಲ್ಲ.  ಕರ್ನಾಟಕಕ್ಕೆ ತಮ್ಮ ಕೊಡುಗೆ ನೀಡಿರುವ ಈ ಶಾಂತಿಪ್ರಿಯ ಸಮುದಾಯದ ಮೇಲೆ ನಡೆದ ಹಲ್ಲೆ ನ್ಯಾಯವಾದ ಕನ್ನಡಿಗರಿಗೆ, ಕನ್ನಡ ಹೋರಾಟಗಾರರಿಗೆ ಕಳಂಕ ತಂದಿದೆ" ಎಂದು ಹೇಳಿಕೆ ನೀಡಿದ್ದಾರೆ.  ಮೇಲೆ ವಿವರಿಸಿದ ಹಿನ್ನೆಲೆಯನ್ನರಿಯದೇ, ಹೋರಾಟಗಾರರೇ ಅಪ್ಲೋಡ್ ಮಾಡಿದ ವಿಡಿಯೋವನ್ನು ನೋಡದೆಯೇ ಈ ಹೇಳಿಕೆಯನ್ನಷ್ಟೇ ನೋಡಿದವರಿಗೆ (ಅದೂ ಈ ಸಂಸದರ ಈ ಹಿಂದಿನ ಕನ್ನಡವಿರೋಧೀ ನಿಲುವುಗಳನ್ನು ಗಮನಿಸಿದವರಿಗೆ), ಭಾಷೆಯ ವಿಷಯದಲ್ಲಿ ಧರ್ಮವನ್ನು ಬೆರೆಸಿ ಒಡಕುತಂದೊಡ್ಡುವ ಟಿಪಿಕಲ್ ಹೇಳಿಕೆಯಂತೆ ತೋರಿ ಅಸಹ್ಯ ಹುಟ್ಟಿಸುವುದರಲ್ಲಿ, ಈ ಸಂಸದರ ಬಗ್ಗೆ ಸಿಟ್ಟು ತರಿಸುವುದರಲ್ಲಿ ಅನುಮಾನವಿಲ್ಲ (ನನಗೂ ಇದನ್ನೋದಿದ ಕೂಡಲೇ ಬಂದದ್ದು ಅದೇ ಭಾವ - ಈಗ ಇದರ ಬಗ್ಗೆ ಗಲಭೆಯೆಬ್ಬಿಸುತ್ತಿರುವವರಿಗೆ ಬೇಕಾದ್ದೂ ಅದೇ).  ಆದರೆ ಅದೃಷ್ಟವೋ ದುರದೃಷ್ಟವೋ, ಈ ಸಲ, ಈ ಸಂಸದರ ಹೇಳಿಕೆಯಲ್ಲಿ ಹುರುಳಿದೆಯೆಂಬುದು ಮೇಲಿನ ಘಟನೆಯನ್ನು ಪರಿಶೀಲಿಸಿದ, ವಿಡಿಯೋ ನೋಡಿದ ಯಾರಿಗಾದರೂ ಮನದಟ್ಟಾಗದಿರದು.  ಇದು ನಿಜಕ್ಕೂ ಭಾಷೆಗೆ ಸಂಬಂಧಪಟ್ಟ ವಿಷಯವಲ್ಲ, ಬದಲಿಗೆ ಹಾಗೆ ತಪ್ಪುತಿಳಿದು ಸಮುದಾಯವೊಂದರ ಧಾರ್ಮಿಕ ಭಾವನೆಗಳ ಮೇಲೆ ನಡೆಸಿದ ಹಲ್ಲೆ ಎಂಬುದು ಸ್ಪಷ್ಟವಾಗಿಯೇ ಕಾಣುತ್ತದೆ.

ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬ ಮಾತಿಗೆ ಎರಡಿಲ್ಲ - ಕನ್ನಡದೊಂದಿಗೇ ಹಾಸುಹೊಕ್ಕಾಗಿ ಜೊತೆವಾಳುತ್ತಿರುವ ತುಳು ಕೊಡವ ಕೊಂಕಣಿಗಳನ್ನೂ ಸೇರಿಸಿ ಪಲವುಂ ಕನ್ನಡಂಗಳ್ ಎನ್ನಿ ಬೇಕಾದರೆ.  ಆದರೆ ಕನ್ನಡವು ಈ ನಾಡಿಗರ ಹಲವು ಅಸ್ಮಿತೆಗಳಲ್ಲಿ ಒಂದಷ್ಟೇ, ಅದೇ ಎಲ್ಲವೂ ಅಲ್ಲ.  ಪ್ರತಿವ್ಯಕ್ತಿಗೂ ಹಲವು ಅಸ್ಮಿತೆಗಳಿರುತ್ತವೆ - ಭಾಷೆ, ದೇಶ, ಊರು, ಜಾತಿ, ಧರ್ಮ, ಉದ್ಯೋಗ, ಲಿಂಗ, ಕೊನೆಗೆ ನಿಮ್ಮ ಗೆಳೆಯರ ಗುಂಪೂ ಒಂದು ಅಸ್ಮಿತೆಯೇ.  ಇದಾವುದಕ್ಕೆ ಪೆಟ್ಟು ಬೀಳುವುದನ್ನೂ ವ್ಯಕ್ತಿ ಸಹಿಸಲಾರ.  ಯಾವಯಾವ ಅಸ್ಮಿತೆಗೆ ಎಲ್ಲೆಲ್ಲಿ ಬೆಲೆ ಕೊಡಬೇಕೆಂಬುದನ್ನು ಅರಿತಾತ ಗೆದ್ದ - ಹಾಗೆ ಅರಿತ ಸಮುದಾಯ ಗೆದ್ದಿತು, ನಾಡು ಗೆದ್ದಿತು.  ಬದಲಿಗೆ ಒಂದು ಅಸ್ಮಿತೆ ಮೆರೆಯಬೇಕಾದೆಡೆ ಇನ್ನಾವುದೋ ಅಸ್ಮಿತೆಯನ್ನು ತಂದು ಹೇರುವುದು ಇಲ್ಲಿನ ಅಸ್ಮಿತೆಯನ್ನು ತುಳಿಯುವುದು ದೊಡ್ಡ ಅಪಚಾರ.  ಮೊನ್ನೆ ಬೆಂಗಳೂರಿನಲ್ಲಾದದ್ದೂ ಅಂಥದ್ದೇ ಒಂದು.  ಕನ್ನಡ ನೆಲದಲ್ಲಿ ಕನ್ನಡ ಅಸ್ಮಿತೆ - ಯಾವಾಗ? ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಸಂವಹನಗಳಲ್ಲಿ, ಸಾರ್ವಜನಿಕ ಉದ್ಯೋಗಗಳಲ್ಲಿ - ಖಾಸಗಿಯ ವಿಷಯ ಬೇರೆ.  ಕನ್ನಡನಾಡಿನ ದಾರ್ಶನಿಕರಲ್ಲೊಬ್ಬರಾದ ಡಿವಿಜಿಯವರ ಮನೆಮಾತು ತಮಿಳು; ಬೀದಿಯಲ್ಲಿ ಆಡುತ್ತಿದ್ದುದು ಪಕ್ಕಾ, ಮುಲಕನಾಡು ಬ್ರಾಹ್ಮಣರ ತೆಲುಗು, ವರಕವಿ ಬೇಂದ್ರೆ ಮರಾಠಿಗರು, ಕನ್ನಡಕ್ಕೊಬ್ಬನೇ ಕೈ ಕೈಲಾಸಂ ತಮಿಳರು.  ಇವರಾರೂ ಖಾಸಗೀ ಜೀವನದಲ್ಲಿ ತಂತಮ್ಮ ಅಸ್ಮಿತೆಗಳನ್ನು ಬಿಟ್ಟುಕೊಡಲೂ ಇಲ್ಲ, ಸಾರ್ವಜನಿಕ ಜೀವನದಲ್ಲಿ ಅವುಗಳನ್ನು ಮೆರೆಸಲೂ ಇಲ್ಲ.  ಬದಲಿಗೆ ತಂತಮ್ಮ ’ಅನ್ಯ’ ಹಿನ್ನೆಲೆಗಳ ಹೊರತಾಗಿಯೂ ಕನ್ನಡದ ’ಗುರುತಾಗಿ’ ಮೆರೆದರು.  ಅಷ್ಟೇಕೆ?  ಕನ್ನಡದ ಬಲುದೊಡ್ಡ ಹೆಗ್ಗುರುತು, ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಹುಟ್ಟಿದ್ದು ತಮಿಳುನಾಡಿನಲ್ಲಿ, ತಮಿಳರ ಆ ಕಾಲದ ಆರಾಧ್ಯದೈವ ಎಮ್ ಜಿ ಆರ್ ಮಲಯಾಳದವರು, ಮತ್ತೊಬ್ಬ ಆರಾಧ್ಯದೇವತೆ ಪುರಚ್ಚಿ ತಲೈವಿ ಜಯಲಲಿತಾ ನಮ್ಮ ಮಂಡ್ಯದ ಹೆಣ್ಣುಮಗಳು.  ಇನ್ನು ತಮಿಳು ಸಿನಿಮಾ ರಸಿಕರ ಹೃದಯಸಿಂಹಾಸನದಲ್ಲಿ ಕುಳಿತ 'ಸದಾಹಸಿರು' (ever green) ಹೀರೋ ರಜನೀಕಾಂತ್ ಅಂತೂ ಕನ್ನಡನಾಡಿನಲ್ಲೇ ಬೆಳೆದ ಮರಾಠಿಗರು.  ’ನಮ್ಮ’ ರಾಜಕುಮಾರರ ಪ್ರೀತಿಯ ಗೆಳೆಯನಾಗಿದ್ದ ಇವರು, ಈಗಲೂ ಇಲ್ಲಿಗೆ ಬಂದಾಗ ಶುದ್ಧವಾದ ಕನ್ನಡದಲ್ಲೇ ಮಾತಾಡುತ್ತಾರೆ, ಕೇವಲ ಮಾತಷ್ಟೇ ಏಕೆ, ಅವರು ಓದಿದ ತ್ರಿವೇಣಿ, ಗಟ್ಟಿ ಮೊದಲಾದ ಕಾದಂಬರಿಕಾರರಿಂದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.  ಅವರನ್ನು ಪ್ರೀತಿಸಲು ನಮಗೆ, ಕನ್ನಡಿಗರಿಗೆ ಇನ್ನೇನು ಬೇಕು?  ಹಾಗೆಂದು ಅವರು ತಮಿಳು ವಿರೋಧಿಯೇ?  ತಮಿಳಿನ ಹಿತಾಸಕ್ತಿಯ ವಿಷಯ ಬಂದಾಗ ನಿರ್ದಾಕ್ಷಿಣ್ಯವಾಗಿ ತಮಿಳಿನ ಪರ ವಹಿಸಿ ನಿಲ್ಲುವುದು ಇದೇ ’ತಲೈವ’ರೇ.  ಹಲವು ಅಸ್ಮಿತೆಗಳೆಡೆಗೆ ವ್ಯಕ್ತಿಯೊಬ್ಬ ಇಟ್ಟುಕೊಳ್ಳಲೇಬೇಕಾದ ವಿವೇಕ ಇದು.

ಇನ್ನು ಭಾಷೆಗೂ ಧರ್ಮಕ್ಕೂ ಬಿಡಿಸಲಾಗದ ನಂಟು.  ನಾವು ಇನ್ನೆಷ್ಟೇ ಕನ್ನಡವಂತರಾಗಿರಲಿ, ದಾಸರಪದಗಳನ್ನು ಹಾಡಿಕೊಂಡೇ ಕುಣಿಯಲಿ ವಿಷ್ಣುಸಹಸ್ರನಾಮವನ್ನೋ ಲಲಿತಾಸಹಸ್ರನಾಮವನ್ನೋ ಕನ್ನಡಕ್ಕೆ ಅನುವಾದಿಸಿ ಅರ್ಚಿಸುತ್ತೇನೆಂದರೆ ಆ ವಿಷ್ಣುವೋ ಲಲಿತೆಯೋ ನಿಮ್ಮ ಮೊರೆಯನ್ನು ಕೇಳುವುದೇ ಇಲ್ಲ - ಆಗಮೋಕ್ತಪೂಜೆಯೆಂದರೆ ಸಂಸ್ಕೃತವೇ ಬೇಕು (ಆಗಮೋಕ್ತ ಪೂಜೆಯೇ ಏಕೆ ಬೇಕು ಎನ್ನುವುದಾದರೆ, ಅದು ಬೇರೆಯ ವಿಷಯ, ಅವರವರ ನಂಬಿಕೆಗೆ ಬಿಟ್ಟದ್ದು, ನಮ್ಮ ಚರ್ಚೆಯಲ್ಲ); ಮುಸಲ್ಮಾನರು ಕಾಬಾ ಕಡೆ ತಿರುಗಿ ಕನ್ನಡದಲ್ಲಿ ನಮಾಜು ಮಾಡಲಾಗುವುದಿಲ್ಲ, ಅರಬ್ಬಿಯೇ ಬೇಕು; ಹಾಗೇ ಪಂಡರಿಯ ವಿಟ್ಠಲನಿಗೆ ಮರಾಠಿಯ ಅಭಂಗ, ತಿರುಪತಿಯ ತಿಮ್ಮನಿಗೆ ಅನ್ನಮಯ್ಯನ ತೆಲುಗು ಗೀತೆಗಳು, ಶ್ರೀರಂಗದ ರಂಗನಿಗೆ ತಮಿಳಿನ ಪಾಶುರಗಳು (ನಾನಂತೂ ಈ ಪಾಶುರಗಳ ನಾದಾನುಭಾವಕ್ಕೆ ಮರುಳಾಗಿ ಇದನ್ನು ಅಭ್ಯಸಿಸಲಿಕ್ಕಾದರೂ ಶುದ್ಧವಾಗಿ ತಮಿಳು ಕಲಿಯಬೇಕೆಂದು ಆಸೆಪಟ್ಟವನು).  ಹೀಗಿರುವಾಗ ಭಾಷೆಯೆನ್ನುವುದು ಆಯಾ ಧಾರ್ಮಿಕಸಮುದಾಯಗಳ ಆಚರಣೆಯ ಭಾಗವೇ ಆಗಿಬಿಡುತ್ತದೆ.  ಅನೇಕವೇಳೆ ಆಯಾ ಸಮುದಾಯಗಳಲ್ಲಿ ಬಹುಸಂಖ್ಯಾತರ ಭಾಷೆಯೇ ಆ ಧರ್ಮದ ಭಾಷೆಯೂ ಆಗಿಬಿಡುತ್ತದೆ.  ಉದಾಹರಣೆಗೆ, ಅಯ್ಯಂಗಾರರ ಪಂಗಡವನ್ನು ತೆಗೆದುಕೊಳ್ಳಿ - ಈ ಪಂಗಡ ಮೂಲತಃ ತಮಿಳುನಾಡಿನದು, ಆದರೆ ಈ ಪಂಗಡಕ್ಕೆ ಸೇರಿದ ಜನ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ - ಕರ್ನಾಟಕ, ಅಂಧ್ರಗಳಲ್ಲೂ ಹರಡಿದ್ದಾರೆ.  ಮನೆಮಾತು ಸಾಮಾನ್ಯವಾಗಿ ತಮಿಳು, ಪೂಜೆಯ ಬಹುಭಾಗ ತಮಿಳು.  ಬೇರೆಬೇರೆ ಪ್ರಾಂತ್ಯಕ್ಕೆ ಸೇರಿದ ಅಯ್ಯಂಗಾರರು ಭೆಟ್ಟಿಯಾದಾಗ ಪರಸ್ಪರ ಕುಶಲ ವಿಚಾರಿಸುವುದೂ ಸಾಮಾನ್ಯವಾಗಿ ತಮಿಳಿನಲ್ಲೇ.  ಆದ್ದರಿಂದ ತಮಿಳು ಅಯ್ಯಂಗಾರ್ ಧರ್ಮದ ಭಾಷೆ.  ಹಾಗೇ ಮಾಧ್ವಬ್ರಾಹ್ಮಣರದ್ದು ಸಾಮಾನ್ಯವಾಗಿ ಕನ್ನಡ ಭಾಷೆ.  ಪೂಜೆಯಲ್ಲಿ ಕನ್ನಡದ ಪಾತ್ರವೇನಿಲ್ಲದಿದ್ದರೂ ಮಾಧ್ವಮತದ ಸಂಸ್ಕೃತೇತರ ಧಾರ್ಮಿಕಸಾಹಿತ್ಯವಿರುವುದು ಬಹುಮಟ್ಟಿಗೆ ಕನ್ನಡದಲ್ಲೇ - ಹರಿದಾಸಸಾಹಿತ್ಯದಲ್ಲಿ.  ಕನ್ನಡನಾಡಿನ ಹೊರಗೆ ತಮಿಳುನಾಡಿನಲ್ಲಿ ಆಂಧ್ರದಲ್ಲಿ ನೆಲೆಸಿದ ಮಾಧ್ವರೂ ಅವರದ್ದೇ ಪ್ರಭೇದದ ವಿಚಿತ್ರವಾದ ಕನ್ನಡವನ್ನೇ ಆಡುತ್ತಾರೆ.  ಅವರ ಧರ್ಮಗುರುಗಳು ನೂರಕ್ಕೆ ನೂರು ಕನ್ನಡಿಗರು.  ಅವರು ತಮ್ಮ ಹೊರರಾಜ್ಯದ ಶಿಷ್ಯರನ್ನು ಭೇಟಿಮಾಡಲು ಹೋದಾಗ ಅಲ್ಲಿ ಕನ್ನಡದ ಸ್ವಾಗತಫಲಕಗಳು ರಾರಾಜಿಸುತ್ತದೆ.  ಹೀಗೇ ಇವತ್ತಿನ ಮಾರವಾಡೀ ಜೈನಸಮುದಾಯದ ಭಾಷೆ ಗುಜರಾಥೀ, ರಾಜಾಸ್ತಾನೀ, ಹಿಂದೀ - ಅದು ಅವರ ಧರ್ಮದ ಭಾಷೆ.  ಇಲ್ಲಿ ಅವರ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿ ಅವರ ಗುರುಗಳನ್ನಿಲ್ಲಿಗೆ ಕರೆಸಿದಾಗ ಸಹಜವಾಗಿಯೇ ಅವರ ಧರ್ಮದ ಭಾಷೆ ಬಳಸಲ್ಪಡುತ್ತದೆಯೇ ಹೊರತು, ಈ ನೆಲದ ಭಾಷೆಯಲ್ಲ.  ’ತಮ್ಮವರು’ ಇಲ್ಲಿಗೆ ಬಂದಾಗ ಇವರು ಅವರಿಗೆ ಸ್ವಾಗತ ಕೋರಬೇಕಾದ್ದು ತಮ್ಮೆಲ್ಲರ ಭಾಷೆಯಲ್ಲೇ ಹೊರತು ಕನ್ನಡದಲ್ಲಲ್ಲ.  ಹಾಗಿದ್ದರೆ ಕನ್ನಡನಾಡಿನ ಜೈನರ ಕತೆ? ಎಂದರೆ, ಅದನ್ನು ಅವರೇ ಕೇಳುತ್ತಿಲ್ಲ, ನಾವೇಕೆ ತಲೆಕೆಡಿಸಿಕೊಳ್ಳಬೇಕು?  ಕನ್ನಡನಾಡಿನಲ್ಲಿ ಜೈನರೂ ಇದ್ದಾರೆ, ಜೈನಗುರುಗಳೂ ಇದ್ದಾರೆ, ಅವರು ಕನ್ನಡದಲ್ಲೇ ವ್ಯವಹರಿಸುತ್ತಾರೆ - ಆದರೆ ಧರ್ಮದ ವಿಷಯಕ್ಕೆ ಬಂದರೆ ಅವರೇನು ಪಂಪರನ್ನರನ್ನೋದಿ ಧರ್ಮವನ್ನು ಕಲಿಯುವುದಿಲ್ಲ.  ಅವರ ಆಕರವೇ ಬೇರೆ, ಅದರ ಭಾಷೆಯೇ ಬೇರೆ - ಅದು ಅವರ ವೈಯಕ್ತಿಕ ವಿಷಯ.  ನಾವು ಸಾರ್ವಜನಿಕರು, ನಮಗೆ ಅವರ ವೈಯಕ್ತಿಕ ಆಚರಣೆಗಳಲ್ಲಿ ಪ್ರವೇಶವಿಲ್ಲ.  ಒಟ್ಟಿನಲ್ಲಿ ಮೇಲೆ ವಿವರಿಸಿದ ಘಟನೆಯಲ್ಲಿ ಭಾಷೆ ಯಾವ ದೃಷ್ಟಿಯಿಂದಲೂ ಕನ್ನಡದ ಅಸ್ಮಿತೆಯ ವಿಷಯವಾಗಿರಲಿಲ್ಲ, ಬದಲಿಗೆ ಅವರ ಧಾರ್ಮಿಕ ಆಚರಣೆಯ ಅಸ್ಮಿತೆಯ ವಿಷಯವಾಗಿತ್ತು.  ಈ ದೃಷ್ಟಿಯಿಂದ ಆ ಹಲ್ಲೆ ದುರಾಚಾರವೇ ಸರಿ.  ಇನ್ನು, ಯಾವ ಧರ್ಮಕ್ಕೇ ಸೇರಿರಲಿ, ಗುರುಗಳೊಬ್ಬರ ಚಿತ್ರವನ್ನು ಕಾಲಿಗೆ ಹಾಕಿ ತುಳಿದದ್ದು ಅಪಚಾರ - ಭಾಷಾತೀತವಾಗಿ ಅಪಚಾರ.

ಇರಲಿ, ಇದು ಹೇಗೂ ಜಾತಿ/ಧರ್ಮದ ವಿಷಯ ಬಂದುಬಿಟ್ಟಿರುವುದರಿಂದ ಮೇಲೆ ಸಂಸದರ ಹೇಳಿಕೆಯ ಇನ್ನೊಂದು ಭಾಗವನ್ನೂ ಪರಿಶೀಲಿಸುವುದೊಳ್ಳೆಯದು.  ಹೌದಲ್ಲವೇ?  ಇದೇ ಜಾಗದಲ್ಲಿ ಯಾವುದಾದರೂ ಉರ್ದು ಹೋರ್ಡಿಂಗ್ ಇದ್ದಿದ್ದರೆ ಪ್ರತಿಕ್ರಿಯೆಗಳು, ದಾಂಧಲೆಗಳು ಹೀಗೇ ಇರುತ್ತಿದ್ದುವಾ?  ಇಲ್ಲ, ಇವರಿಗೆ ಮಾಡಿದಿರಲ್ಲ ಅವರಿಗೂ ಮಾಡಿ ಎಂಬುದು ಎಷ್ಟುಮಾತ್ರಕ್ಕೂ ನನ್ನ ಸವಾಲಲ್ಲ.  ನಾನು ಮೇಲೇ ವಿವರಿಸಿದಂತೆ ಧರ್ಮ, ಅದಕ್ಕೆ ಸಂಬಂಧಿಸಿದ ಆಚರಣೆ, ಅದರೊಡನೆ ಹಾಸುಹೊಕ್ಕಾದ ಭಾಷೆ ಇವಿಷ್ಟೂ ಆ ಧಾರ್ಮಿಕಸಮುದಾಯದ ವೈಯಕ್ತಿಕವಿಷಯ - ಅದು ಮುಸಲ್ಮಾನರಾದರೂ ಜೈನರಾದರೂ ಅಯ್ಯಂಗಾರರಾದರೂ ಅಷ್ಟೇ.  ಆದರೂ, ಅಹಿಂಸೆಯನ್ನೇ ಆಚರಣೆಯನ್ನಾಗಿ ಮಾಡಿಕೊಂಡು, ಒಬ್ಬರ ಹಂಗಿಲ್ಲದೇ ಪರರಾಜ್ಯವೊಂದರಲ್ಲಿ ತಮ್ಮ ಜೀವನ ಕಟ್ಟಿಕೊಂಡು ಅಲ್ಲಿನ ಜನರೊಂದಿಗೆ ಬೆರೆತು ಬದುಕುತ್ತಿರುವ ಸಮುದಾಯವೊಂದರ ಖಾಸಗೀ ಆಚರಣೆಯಲ್ಲಿ ಬಳಸಿದ ಭಾಷೆಗೆ ಕಿಡಿಕಿಡಿಯಾದ ಹೋರಾಟಗಾರರು, ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಜನರ ನಡುವೆಯೇ ಬದುಕಿದ್ದೂ ಕನ್ನಡ ಮಾತಾಡಲೊಲ್ಲದ, ಕಲಿಯಲೊಲ್ಲದ, ಧಾರ್ಮಿಕವಲ್ಲದ ಸಂವಹನದಲ್ಲೂ ಉರ್ದೂವಿಗೇ ಪ್ರಾಧಾನ್ಯ ಕೊಡುವ, ಕೊನೆಗೆ ಚುನಾವಣಾಪ್ರಚಾರಗಳಲ್ಲೂ ಉರ್ದೂವನ್ನೇ ಬಳಸುವ, ಉರ್ದೂ ಶಾಲೆಗಳಲ್ಲೇ ತಮ್ಮ ಮಕ್ಕಳಿಗೆ ಕಲಿಸುವ ಸಮುದಾಯಗಳ ಮೇಲೂ ಹೀಗೆ 'ಕ್ರಮ' ಕೈಗೊಳ್ಳುವ ಧೈರ್ಯ ತೋರುತ್ತಿದ್ದರೇ?  ಕನ್ನಡ'ಕ್ರಿಯೆ' ದುರ್ಬಲರ ಮೇಲೆ ಎತ್ತಿದ ಕೋಲಾಗಬಾರದಲ್ಲವೇ?  ಇದು ಯಾರನ್ನೂ ಕಾಡುವ ಪ್ರಶ್ನೆ.

ಇವಿಷ್ಟೂ ಈ ನಿರ್ದಿಷ್ಟ ಘಟನೆಗೆ ಸಂಬಂಧಿಸಿದ ಮಾತಾಯಿತು.  ಆದರೆ ಇದನ್ನು ವಿರೋಧಿಸುತ್ತಿರುವವರಾಗಲೀ ಸಮರ್ಥಿಸುತ್ತಿರುವವರಾಗಲೀ ತಂತಮ್ಮ ರಾಜಕೀಯ ಅಜೆಂಡಾಗಳಿಗನುಗುಣವಾಗಿ ಅದನ್ನು ಮಾಡುತ್ತಿದ್ದಾರೆಯೇ ವಿನಾ ಘಟನೆಯ ಗುಣಾವಗುಣಗಳನ್ನು ಆಧರಿಸಿ ಅಲ್ಲವೆನ್ನುವುದು ಸ್ಪಷ್ಟ.  ಉದಾಹರಣೆಗೆ, ಈ ದಾಂಧಲೆ ಮಾರವಾಡಿಗಳ ಮೇಲಲ್ಲದೇ ಮೇಲೆ ವಿವರಿಸಿದಂತೆ ಬೇರೆ ಇನ್ನೊಂದು ಧರ್ಮದವರ ಮೇಲಾಗಿದ್ದಿದ್ದರೆ ಆ ಹೋರಾಟಗಾರರ ಬಗೆಗಿನ 'ವಿರೋಧ' ಇಷ್ಟೇ ಪ್ರಮಾಣದಲ್ಲಿರುತ್ತಿತ್ತೇ?  ಈ ವಿರೋಧದಲ್ಲಿ, ಕೇಂದ್ರದ ಹಿಂದೀ-ಪರ ನೀತಿಯಿಂದ ಆ ಪಕ್ಷದ ಹಿಂಬಾಲಕರಲ್ಲಿ ಇದ್ದಕ್ಕಿದ್ದಂತೆ ಜಾಗೃತವಾದ ಹಿಂದೀಪ್ರೇಮದ ಪಾತ್ರವೆಷ್ಟು?  ಈಗ ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸಂಪುಟ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಘಟನೆ ನಡೆದಿರಬೇಕಾದರೆ ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ, ಅಧಿಕಾರದಿಂದ ನಿರ್ಗಮಿಸಿದವರ ಪಾತ್ರವೇನೂ ಇರಲಿಕ್ಕಿಲ್ಲವಷ್ಟೇ?  ಬಿಜೆಪಿ ಬದಲು ರಾಜ್ಯದಲ್ಲಾಗಲೀ ಕೇಂದ್ರದಲ್ಲಾಗಲೀ ಬೇರೆ ಸರ್ಕಾರವಿದ್ದಿದ್ದರೆ ಸಮೀಕರಣ ಬದಲಾಗುತ್ತಿದ್ದಿತೇ?  ಹೀಗೆ ಹಲವು ಲೆಕ್ಕಾಚಾರಗಳಾಚೆಗೆ ಕನ್ನಡದ ಅಸ್ಮಿತೆ-ಹೋರಾಟವನ್ನು ನೋಡುವುದು ಇಂದಿನ ಅಗತ್ಯ.  ಈ ಹೋರಾಟಗಳೂ, ಆ ಹೋರಾಟದ ಪ್ರತಿಭಟನೆಗಳೂ ವಸ್ತುನಿಷ್ಠವಾಗಿರಬೇಕಾದ್ದು ಬಹುಮುಖ್ಯ.  ಮೊನ್ನೆ ಕಳೆದ ತಿಂಗಳು ಹಂಪಿಯ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವನ್ನು ನೆಲಸಮ ಮಾಡಲಾಯಿತು.  ಕನ್ನಡದ ಸಾಂಸ್ಕೃತಿಕ ಪರಂಪರೆಗೆ ವ್ಯಾಸರಾಜರ ಕೊಡುಗೆ ಸಾಮಾನ್ಯದ್ದೇ?  ಇಂತಿದ್ದರೂ ಒಂದೇ ಒಂದು ಕನ್ನಡಪರಸಂಘಟನೆ ಕಮಕ್ ಕಿಮಕ್ ಎಂದುದನ್ನು ನೋಡಲಿಲ್ಲ - ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಶನ್ ಆಗಲಿಲ್ಲ; ಹೋಗಲಿ ಸನಾತನ ಸಂಸ್ಕೃತಿಯನ್ನು ಎತ್ತಿಹಿಡಿದರೆಂಬ ಕಾರಣಕ್ಕಾದರೂ ಒಂದೇ ಒಂದು ಹಿಂದೂ ಸಂಘಟನೆ ಈ ಅನಾಹುತದ ಬಗ್ಗೆ ಚಕಾರವೆತ್ತಲಿಲ್ಲ.  ಕೊನೆಯ ಪಕ್ಷ ಬ್ರಾಹ್ಮಣರ ಗುರುವೆಂಬ ಕಾರಣಕ್ಕಾಗಿ ಒಂದೇ ಒಂದು ಬ್ರಾಹ್ಮಣಸಂಘಟನೆ ಇದರ ಬಗ್ಗೆ ಉಸಿರೆತ್ತಲಿಲ್ಲ.  ಇದೆಂತಹ ಕನ್ನಡ ಕಳಕಳಿ?  ಇದೆಂತಹ ಹಿಂದೂ ಜಾಗೃತಿ?  ಇದೆಂತಹ ಬ್ರಾಹ್ಮಣ ಒಗ್ಗಟ್ಟು?

ಇರಲಿ.  ಕನ್ನಡಪರ ಹೋರಾಟಕ್ಕೆ ಅದರದ್ದೇ ಆದ ಗೌರವಾನ್ವಿತ ಇತಿಹಾಸವಿದೆ - ಕನ್ನಡವನ್ನು ಕನಸಿದ ಹಲವು ಮಹಾನ್ ಚೇತನಗಳ ಶ್ರಮ-ಮುಂಗಾಣ್ಕೆಗಳು ಇದರಲ್ಲಿವೆ; ಹಾಗೆಯೇ ಸ್ವಾತಂತ್ರ್ಯಪೂರ್ವದಿಂದಲೂ ಕನ್ನಡದೆಡೆಗೆ ಮಲತಾಯಿ ಧೋರಣೆಯನ್ನೇ ತಳೆದಿರುವ ಉತ್ತರದ ಹಿಂದೀವಾಲಾಗಳ ಅಡಾವುಡಿಗೂ ಅದರ ವಿರುದ್ಧದ ಪ್ರತಿಭಟನೆಗಳಿಗೂ ಅಷ್ಟೇ ದೀರ್ಘ ಇತಿಹಾಸವಿದೆ.  ಈ ನಾಡಿಗೆ ಇದಾವುದೂ ಹೊಸದಲ್ಲ - ಮೊದಲೆಲ್ಲಾ ಪ್ರತಿಭಟನೆಗಳಲ್ಲಿ ಎಲ್ಲ ಕನ್ನಡಿಗರೂ ಮನಸಾರೆ ದನಿಗೂಡಿಸದಿದ್ದರೂ ಒಡಕು ದನಿಗಳಂತೂ ಬಹಳವಿರಲಿಲ್ಲ.  ಹೆಚ್ಚೆಂದರೆ ಕನ್ನಡ ಹೋರಾಟಗಾರರು ಕನ್ನಡವನ್ನೇ ಸರಿಯಾಗಿ ಮಾತಾಡದ ಬಗ್ಗೆ, ಕನ್ನಡದ ಹೆಸರಿನಲ್ಲಿ ನಡೆಯುವುದೆನ್ನಲಾದ ರೋಲ್ಕಾಲುಗಳ ಬಗ್ಗೆ ಗೊಣಗಾಟವಿರುತ್ತಿತ್ತು (ಅನೇಕ ವೇಳೆ ಅದು ಸರಿಯೂ ಕೂಡ).  ಆದರೆ ಈಗೀಗಂತೂ ಕನ್ನಡದ ಹೋರಾಟವನ್ನೇ ಹೀಯಾಳಿಸುವುದು, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿಂದೀ ಪ್ರೇಮದ ಹೊಳೆಯನ್ನೇ ಹರಿಸುವುದು, ಹಿಂದೀವಿರೋಧಕ್ಕೆ ಪ್ರತಿಯಾಗಿ ಇಂಗ್ಲಿಷ್ ಬೆರ್ಚಪ್ಪನನ್ನು ತೋರಿಸುವುದು, ತುಳುವರನ್ನ ಕೊಡವರನ್ನ ಕನ್ನಡದ ಮೇಲೆ ಎತ್ತಿಕಟ್ಟುವುದು - ಛೇ, ರಾಜಕೀಯಸಿದ್ಧಾಂತವೊಂದರ ಸಮರ್ಥನೆಗೋಸ್ಕರ ಇಷ್ಟೆಲ್ಲಾ ಸರ್ಕಸುಗಳು, ನಮ್ಮ ಕಾಲ ಮೇಲೇ ನಾವು ಕಲ್ಲೆತ್ತಿಹಾಕಿಕೊಳ್ಳುವ ವಿಚಾರಹೀನತೆ ಬೇಕಾ ಎನ್ನಿಸುತ್ತದೆ.  ಇದು ಕನ್ನಡದ ಮಟ್ಟಿಗಂತೂ ನಲ್ಮೆಯ ವಿಷಯವಲ್ಲ.

ಕನ್ನಡಕ್ಕೆ ಹೊರಗಿನ ಶತ್ರುಗಳಂತೂ ಇದ್ದೇ ಇದ್ದಾರೆ, ಒಳಗಿನಿಂದಲೂ ಘಾತಿಸುವ ಶಕ್ತಿಗಳು ಬುದಬುದನೆ ಹುಟ್ಟಿಕೊಳ್ಳುತ್ತಿರುವ ಈ ವಿಷಮಸಂದರ್ಭದಲ್ಲಿ ಕನ್ನಡಪರ ಹೋರಾಟ ಕೇವಲ ತೋಳ್ಬಲದ ಮಟ್ಟದಲ್ಲಿ ಉಳಿದಿಲ್ಲ, ಬದಲಿಗೆ ಅಲ್ಲಿಂದ ಮೇಲೇರಿ ಬೌದ್ಧಿಕಮಟ್ಟವನ್ನು ಮುಟ್ಟಿದೆಯೆಂಬುದನ್ನು ನಮ್ಮ ಕನ್ನಡಪರಸಂಘಟನೆಗಳು ಅರಿತುಕೊಳ್ಳುವುದು ಕನ್ನಡದ ದೃಷ್ಟಿಯಿಂದ ಕ್ಷೇಮ. ಈಗ ಎಷ್ಟು ಎಚ್ಚರವಿದ್ದರೂ ಸಾಲದು!  ಹೋರಾಟವೆಂದರೆ ಕೇವಲ ಕೈ ಮಾಡುವುದಲ್ಲ - ಹೋರಾಟದ ಪರಿಣಾಮ ಕಾಣಬೇಕು.  ಹಾಗಾಗಬೇಕೆಂದರೆ ಅಧಿಕಾರಸ್ಥರು ಮಣಿಯಬೇಕು.  ಅಧಿಕಾರಸ್ಥರು ಮಣಿಯುವುದು ತೋಳ್ಬಲಕ್ಕಲ್ಲ, ಜನಾಭಿಪ್ರಾಯಕ್ಕೆ.  ಆದರೆ, ನಗುವವರ ಮುಂದೆ ಎಡವಿಬಿದ್ದಂತೆ ಕಾಣುವ ಮೇಲಿನ ಘಟನೆಯಂತಹ ಅನ್ಯಾಯಗಳು ಕನ್ನಡಪರ ಜನಾಭಿಪ್ರಾಯವನ್ನು ಕ್ಷಣಾರ್ಧದಲ್ಲಿ ಮಣ್ಣುಗೂಡಿಸಬಲ್ಲುವು.  ಹೋರಾಡುವುದೇ ಆದರೆ ವಿಷಯಕ್ಕೇನು ಕೊರತೆ - ಕನ್ನಡಿಗರಿಗೆ ಉದ್ಯೋಗಾವಕಾಶವಿಲ್ಲ, ಭಾಷಾಗುಂಪುಗಾರಿಕೆ ನಡೆಯುತ್ತಿದೆ (ನಮ್ಮ ಘನ ಸಂಸದರು "ಕನ್ನಡಿಗರಿಗೆ ಪಂಜಾಬಿನಲ್ಲಿ ಕೆಲಸ ಸಿಗುತ್ತಲ್ಲ" ಎಂದು ಆಣಿಮುತ್ತನ್ನುದುರಿಸಿದ್ದರು ಮೊನ್ನೆ - ಪ್ರತಿಭಟಿಸಬೇಕಾದ್ದು ಇಂಥದ್ದನ್ನು), ಸದ್ದಿಲ್ಲದೇ ಹಿಂದಿಯನ್ನು ನಮ್ಮ ಪಠ್ಯಗಳಲ್ಲಿ ವಿಮಾನನಿಲ್ದಾಣಗಳಲ್ಲಿ, ಬ್ಯಾಂಕುಗಳಲ್ಲಿ, ಪೋಸ್ಟಾಫೀಸುಗಳಲ್ಲಿ ನುಗ್ಗಿಸಲಾಗುತ್ತಿದೆ,  ಹಿಂದೀವಾಲಾಗಳೇ ಹೆಚ್ಚಿರುವ ಕಂಪನಿಗಳಲ್ಲಿ, ಅಂಗಡಿಮುಂಗಟ್ಟುಗಳಲ್ಲಿ ಕನ್ನಡವನ್ನು ಕೇಳುವವರಿಲ್ಲವಾಗಿದೆ; 'ಪಾಶ್' ಎನ್ನಿಸಿಕೊಳ್ಳುವ ಮಾಲುಗಳಲ್ಲಿ ಕನ್ನಡದ ಮನೋರಂಜನೆಯಿಲ್ಲ, ಕನ್ನಡದ ಫಲಕಗಳಿಲ್ಲ, ಕೊನೆಗೆ ಅಲ್ಲಿ ಕನ್ನಡಿಗ ಅನಾಥಶಿಶುವಾದರೆ ಅದನ್ನು ಗಮನಿಸುವವರೂ ಇಲ್ಲ.  ಕನ್ನಡದ ಬೋರ್ಡು ಇರಲೇಬೇಕೆಂಬ ಕಾಟಾಚಾರಕ್ಕಾಗಿ ಗೂಗಲ್ ಟ್ರಾನ್ಸ್ಲೇಟರ್ ಸಹಾಯದಿಂದ ಅಸಹ್ಯ ಬೋರ್ಡುಗಳನ್ನು ಹಾಕುತ್ತಾರೆ (ಪಡವಲಕಾಯಿ = ಹಾವಿನ ಸುವಾಸನೆ, ಹೀಗೆ).  ಕನ್ನಡದ ಬಗೆಗೆ ಇಂತಹ ಬೇಕಾಬಿಟ್ಟಿ ಧೋರಣೆಯನ್ನು ವಿರೋಧಿಸಬೇಕಾದ್ದು.  ನಮ್ಮ ಹೋರಾಟವಿರಬೇಕಾದ್ದು ಸರ್ಕಾರದ, ಉತ್ತರದ ಸಂಸ್ಥೆಗಳ ಸಾರ್ವಜನಿಕ ಕನ್ನಡವಿರೋಧಿ ನೀತಿಯ ಬಗೆಗೆ - ಯಾವುದೋ ಧಾರ್ಮಿಕಸಮುದಾಯವೊಂದರ ಖಾಸಗೀ ಕಾರ್ಯಕ್ರಮದ ಬಗೆಗಲ್ಲ.

ಕನ್ನಡದ ಆಳ್ಮೆಗೆ, ಬಾಳ್ಮೆಗೆ ಇವತ್ತು ಬೇಕಾದ್ದು ಎರಡು - ಒಂದು, ಭಾಷೆಯ ಅರಿವನ್ನು, ಶುದ್ಧತೆಯನ್ನು, ಸೌಂದರ್ಯವನ್ನು ಕಾಪಿಟ್ಟುಕೊಳ್ಳುವುದು, ಅದರ ಘನತೆಯನ್ನರಿತು ಬಳಸುವುದು, ಕನ್ನಡಿಗರೆಲ್ಲರ ಹೊಣೆ ಇದು, ಜೊತೆಗೆ ಕನ್ನಡನುಡಿಯನ್ನರಿತ ವಿದ್ವಾಂಸರ ವಿಶೇಷ ಹೊಣೆ ಕೂಡ.  ಇದು ಕನ್ನಡಕ್ಕೆ ಒಳಗಿನಿಂದ ಕಸುವು ತುಂಬುವ ಕೆಲಸ.  ಆದರೆ ಕನ್ನಡ ಹೋರಾಟವೆಂದರೆ ಕನ್ನಡವನ್ನು ಸರಿಯಾಗಿ ಕಲಿತು ಮಾತಾಡುವುದಷ್ಟೇ ಅಲ್ಲ (ಹಾಗೆನ್ನುವವರು, ಹಿಂಬಾಲಕರಿಂದ ಹಾಗೆನ್ನಿಸುವವರು, ಕನ್ನಡತನದ ನೆಲೆಯರಿಯದ ರಾಜಕೀಯಸ್ಥರು ಮಾತ್ರ).  ಹೀಗಾಗಿ ಎರಡನೆಯ ಕೆಲಸ, ಕನ್ನಡವನ್ನು ಸುತ್ತಲಿಂದ ಕಾದು ರಕ್ಷಿಸಿಕೊಳ್ಳುವುದು, ಹೊರಗಣ ದಾಳಿಯಿಂದ, ಒಳಗಣ ದಾಳಿಯಿಂದ ಕಾಪಿಟ್ಟುಕೊಳ್ಳುವುದು.  ಇದು ಮೊದಲ ಕೆಲಸದಂತೆ ಬಾಯ್ಮಾತಿನ ಕೆಲಸವಲ್ಲ, ಕಾರ್ಯಕ್ಷಮತೆ ಬೇಡುವಂಥದ್ದು, ಗಂಟಲ ಬಲ, ಕೆಲವೊಮ್ಮೆ ತೋಳ್ಬಲವನ್ನೂ ಬೇಡುವಂಥದ್ದು.  ಮೊದಲನೆಯ ಕೆಲಸ ಮಾಡುವವರು ಎರಡನೆಯದನ್ನು ಮಾಡಲಾರರು, ಎರಡನೆಯವರು ಮೊದಲನೆಯದನ್ನು.  ಎರಡೂ ಶಕ್ತಿಗಳು ಪರಸ್ಪರರನ್ನು ಹೀಯಾಳಿಸುತ್ತಾ ಶತ್ರುವಿಗೆ ಅನುಕೂಲ ಮಾಡುವುದರ ಬದಲು, ಪರಸ್ಪರ ಕೈಹಿಡಿದು ನಡೆದಾಗ ಮಾತ್ರ ಕನ್ನಡದ ಉಳಿವು ಬೆಳವು ಸಾಧ್ಯ.  ಇನ್ನೊಂದು ಚರ್ಚೆಯಲ್ಲಿ ಮಿತ್ರರೊಬ್ಬರು ಕೇಳಿದರು "ಕನ್ನಡ ಹೋರಾಟದ ಪರಂಪರೆಯ ಬಗೆಗೆ ಹೇಳುತ್ತೀರಿ, ಈಗಿನ 'ವೋರಾಟ'ಗಾರರು ಆ ಪರಂಪರೆಗೆ ಸೇರಿದವರು ಅನ್ಸುತ್ತಾ?  ಅಂತಹ ಅನಾಗರಿಕರನ್ನು ನೀವು ಸಪೋರ್ಟ್ ಮಾಡುತ್ತೀರಾ/ಮಾಡಬೇಕಾ?".  ನನ್ನ ಉತ್ತರ ಇಷ್ಟು - "ಕನ್ನಡದ ಹೋರಾಟದಲ್ಲಿ 'ನಾಗರೀಕತೆ' ಕಡಿಮೆಯಾಗುತ್ತದೆನ್ನಿಸಿದ್ದರೆ ಅದಕ್ಕೆ ಕಾರಣ ನಿಮ್ಮಂತಹ 'ಸುಸಂಸ್ಕೃತ'ರ ಅನುಪಸ್ಥಿತಿ.  ಅನುಪಸ್ಥಿತಿಯೇ ದೊಡ್ಡ ಧಕ್ಕೆಯೆಂದರೆ, ಇನ್ನು ಮುಂದುವರೆದು ಕನ್ನಡದ ವಿರುದ್ಧವಾಗಿಯೇ ಕೆಲಸ ಮಾಡುವುದು ಇನ್ನಷ್ಟು ದೊಡ್ಡ ಧಕ್ಕೆ.  ಯಾರಿಗೆ ಗೊತ್ತು, ನೀವು ಹೋರಾಟದಲ್ಲಿದ್ದು ಅದಕ್ಕೆ ದಿಶಾನಿರ್ದೇಶನವನ್ನು ನೀಡಿದ್ದರೆ, ಮೇಲೆ ವಿವರಿಸಿದ ಘಟನೆ ನಡೆಯುತ್ತಲೇ ಇರಲಿಲ್ಲವೇನೋ?  ಸುಸಂಸ್ಕೃತರು ಹೊರನೆಡೆದ ಮೇಲೆ ಹೋರಾಟದಲ್ಲಿ 'ಸಂಸ್ಕೃತಿ' ಉಳಿಯುವುದಾದರೂ ಹೇಗೆ?  ಇವತ್ತಿದ್ದು ನಾಳೆ ಹೋಗುವ ಒಂದು ನಾಯಕತ್ವವನ್ನು ಸಮರ್ಥಿಸಿಕೊಳ್ಳುವ ಹುಚ್ಚಿನಲ್ಲಿ, ಇಲ್ಲದ ಹಿಂದೀ ಪ್ರೇಮವನ್ನು ಸೂಸುತ್ತಾ ಇಲ್ಲದ ವಿತಂಡವಾದಗಳನ್ನು ಹೂಡುತ್ತಾ ಕನ್ನಡವನ್ನು ಬೀಳುಗಳೆವ ಬದಲು, ಮರಳಿ ಬನ್ನಿ, ಕನ್ನಡ ಹೋರಾಟವನ್ನು ಕೈಹಿಡಿದು ನಡೆಸಿ, ಅದಕ್ಕೆ 'ಸಂಸ್ಕೃತಿ'ಯ ಕಸುವು ತುಂಬಿ.

Sunday, July 21, 2019

ಹೌದು, ನಾವು ಮಾಧ್ವರು - ಏನೀಗ?

ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳುತ್ತಿದ್ದುದುಂಟು.  ಮೊನ್ನೆ ಹಂಪಿಯ ಆನೆಗೊಂದಿಯಲ್ಲಾದ ಘಟನೆ ಈ ಮೇಲೆ ಹೇಳಿದ ಕಪ್ಪು ಪ್ರೊಫೈಲ್ ಘಟನೆಗಳಿಗಿಂತ ಏನೂ ಕಡಿಮೆಯಿರಲಿಲ್ಲ, ಅಥವಾ ಅವಕ್ಕಿಂತ ಒಂದೋ ಎರಡೋ ಹತ್ತೋ ಪಾಲು ಹೆಚ್ಚಿನದೇ ಎಂದರೂ ತಡೆದೀತು.  ಆದರೂ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳಲಿಲ್ಲವೇ?  ಹೀಗೆ ಯೋಚಿಸಿದಾಗ ಹೊಳೆದ ಉತ್ತರ, ನಾವೇಕೆ ಮುಖ ಕಪ್ಪು ಮಾಡಿಕೊಳ್ಳಬೇಕು, ನಾಚುವ ಕೆಲಸ ಮಾಡಿದವರು ಮುಖ ಕಪ್ಪುಮಾಡಿಕೊಳ್ಳಬೇಕಾದ್ದು.  ವ್ಯಾಸರಾಜರು ನಮ್ಮ ಹೆಮ್ಮೆ, ಅದನ್ನು ಮೆರೆಸುವುದೇ ಆದದ್ದಕ್ಕೆ ಸರಿಯಾದ ಪ್ರತಿಭಟನೆ.  ನನ್ನ ಈ ಹಮ್ಮಿಗೆ, ಹೆಮ್ಮೆಗೆ ಮೊನ್ನೆ ಜುಲೈ ೧೮ರಂದು ನಡೆದ ಅನಾಚಾರವನ್ನು ಮಾಧ್ವಸಮುದಾಯವು ನಿಭಾಯಿಸಿದ ರೀತಿ ಪುಷ್ಟಿಯನ್ನೊದಗಿಸಿದೆ.

೨೦೧೯ರ ಜುಲೈ ೧೯ ಒಂದು ಅವಿಸ್ಮರಣೀಯ ದಿನ.  ಸಾವಿರವೆರಡುಸಾವಿರ ಜನದ ಇಚ್ಛಾಶಕ್ತಿ, ಆರಂಭದಲ್ಲಿ ಅಸಾಧ್ಯವೆನಿಸಿದ್ದನ್ನು ಸಾಧ್ಯವೆನಿಸಿದ ದಿನ - ಹಿಂದಿನ ದಿನವಷ್ಟೇ ನಾಮಾವಶೇಷವಾಗಿದ್ದ ಐತಿಹಾಸಿಕಸ್ಮಾರಕವೊಂದನ್ನು (ಉದ್ದೇಶಪೂರ್ವಕವಾಗಿ ನಾನದನ್ನು ಬೃಂದಾವನವೆನ್ನುವ ಬದಲು ಸ್ಮಾರಕವೆಂದೇ ಕರೆಯುತ್ತೇನೆ) ಹಿಂದಿದ್ದಂತೆಯೇ ಯಥಾವತ್ತಾಗಿ ಕಟ್ಟಿ ನಿಲ್ಲಿಸಿದ ದಿನ.  ಭಾವನೆಗಳ ತೀವ್ರತೆಯು ಕ್ರಿಯೆಯಾಗಿ ಮಾರ್ಪಟ್ಟಾಗ ಅದು ಕೇವಲ Destructive ಆಗಿ ಮಾತ್ರವಲ್ಲ, ನಿಜವಾದ ಅರ್ಥದಲ್ಲಿ Constructive ಆಗಿ ಕೂಡ ಕೆಲಸ ಮಾಡಬಲ್ಲುದೆಂದು ತೋರಿಸಿಕೊಟ್ಟ ದಿನ.  ಹಲವು ಭ್ರಮೆಗಳು, ಹಲವು ಮುಖವಾಡಗಳು ಕಳಚಿಬಿದ್ದ ದಿನ, ಹಾಗೆಯೇ ಹಲವು ಆಶಾಕಿರಣಗಳು ಮೂಡಿದ ದಿನವೂ ಹೌದು.

ಈ ಅಕಾರ್ಯವನ್ನು ಮಾಡಿದ್ದು ನಿಧಿಗಾಗಿಯೋ, ರಾಜಕೀಯಕಾರಣಕ್ಕೋ, ಅಥವಾ ಇನ್ನಾವುದಕ್ಕೋ ಎಂಬುದನ್ನು ಚರ್ಚಿಸಲು ಇದು ಸಮಯವಲ್ಲ, ಅದೇನಿದ್ದರೂ ತನಿಖೆಗೆ ಬಿಟ್ಟ ವಿಷಯ - ಅಂಥದ್ದೊಂದು ನಡೆದರೆ.  ಆದರೆ ಮನಸ್ಸನ್ನು ಕಾಡುವುದು ಅದಲ್ಲ.  ಹದಿನೆಂಟನೆಯ ತಾರೀಖು ಬೆಳಬೆಳಗ್ಗೆ ಈ ಸುದ್ದಿ ಬಂದಾಗ ಒಂದು ಕ್ಷಣ ಅದುರಿ ಹೋಗಿಬಿಟ್ಟೆ.  ಆಣೆ ಮಾಡಿ ಹೇಳುತ್ತೇನೆ, ವ್ಯಾಸರಾಯರು ’ನಮ್ಮ ಜಾತಿ’ಯವರು, ಮಾಧ್ವಗುರುಗಳು, ಧಾರ್ಮಿಕ ಆಚಾರ್ಯರು ಎಂಬ ಕಾರಣಕ್ಕಾದ ದಿಗ್ಭ್ರಮೆಯಲ್ಲ ಅದು (ಜಾತಿಯ ವಿಷಯವನ್ನು ನಾನು ಇವತ್ತಿನಷ್ಟು ಯಾವತ್ತೂ ತಲೆ ಕೆಡಿಸಿಕೊಂಡದ್ದೇ ಇಲ್ಲ) - ಯಾರೋ ಪಾರ್ಲಿಮೆಂಟನ್ನೋ ವಿಧಾನಸೌಧವನ್ನೋ ಮಹಾತ್ಮರ ಸಮಾಧಿಯನ್ನೋ ಇನ್ನಾವುದೋ ಮಹತ್ವದ ಸ್ಮಾರಕವನ್ನೋ ಉಡಾಯಿಸಿಬಿಟ್ಟಿದ್ದಾರೆಂಬ ಸುದ್ದಿ ಬಂದಿದ್ದರೆ ಆಗುತ್ತಿದ್ದಷ್ಟೇ ದಿಗ್ಭ್ರಮೆಯದು.  ಒಬ್ಬ ತಾರ್ಕಿಕರಾಗಿ, ದಾರ್ಶನಿಕರಾಗಿ ವಿದ್ವಲ್ಲೋಕದಲ್ಲಿ ವ್ಯಾಸತೀರ್ಥರ ಮಹತ್ತ್ವವೇನೆಂಬುದನ್ನು ವಿದ್ವಲ್ಲೋಕವು ಬಲ್ಲುದು, ಅದರ ಚರ್ಚೆ ಇಲ್ಲಿ ಅಗತ್ಯವಿಲ್ಲ.  ಆದರೆ ಕರ್ನಾಟಕದ ಸಾಂಸ್ಕೃತಿಕ ಸಾಹಿತ್ಯಕ ಲೋಕಕ್ಕೆ ಶ್ರೀ ವ್ಯಾಸರಾಜರ ಕೊಡುಗೆಯೇನೆಂಬುದು ಕನ್ನಡಿಗರೆಂದುಕೊಳ್ಳುವವರೆಲ್ಲರ ಹೆಮ್ಮೆಯ ವಿಷಯವಾಗಬೇಕಿತ್ತು.  ಸ್ವತಃ ಹರಿದಾಸರಾಗಿ, ಕನಕಪುರಂದರರ ಗುರುಗಳಾಗಿ ವ್ಯಾಸರಾಜರು ಕರ್ನಾಟಕದ ಭಕ್ತಿಪಂಥಕ್ಕೆ ಹರಿದಾಸಪಂಥಕ್ಕೆ ನೀಡಿದ ಮಾರ್ಗದರ್ಶನ, ಕರ್ನಾಟಕಸಾಮ್ರಾಜ್ಯ ವಿಜಯನಗರದ ಉಚ್ಛ್ರಾಯಸ್ಥಿತಿಯಲ್ಲಿ ರಾಜಗುರುವಾಗಿ, ಧಾರ್ಮಿಕನಾಯಕನಾಗಿ ಸಮಾಜವನ್ನು ಮುನ್ನೆಡೆಸುವಲ್ಲಿ ವ್ಯಾಸರಾಜರು ವಹಿಸಿದ ಪಾತ್ರ, ಅನ್ಯಾದೃಶ.  ಇಂತಿರುವಾಗ, ಹದಿನಾರನೆಯ ಶತಮಾನದ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ರಾಜಕೀಯಕ್ಷೇತ್ರಗಳಲ್ಲಿ ಆಢ್ಯರಾದ ವ್ಯಾಸರಾಜರ ಬೃಂದಾವನ ಐನೂರು ವರ್ಷಗಳಿಂದ ಮಳೆ ಬಿಸಿಲು ಗಾಳಿಗಳಿಗೆ ತನ್ನನ್ನೊಡ್ಡಿಕೊಂಡು ಬಟಾಬಯಲಿನಲ್ಲಿ, ಕೇಳುವವರಿಲ್ಲದ ಕಾಡಿನಲ್ಲಿ ನಿಂತಿದೆ.  ಇದರ ಬಗ್ಗೆ ನಮಗಾರಿಗೂ ದುಃಖವಿಲ್ಲ, ಏಕೆಂದರೆ ಸನ್ಯಾಸಿಗೆ ಬದುಕಿನಲ್ಲಾಗಲೀ ಸಾವಿನಲ್ಲಾಗಲೀ ಯಾವ ವೈಭವವೂ ಹೇಳಿದ್ದಲ್ಲ - ಆಗೆಲ್ಲಾ ಬೃಂದಾವನಗಳನ್ನು ಹೀಗೆ ಬಯಲಿನಲ್ಲಿ ಕಟ್ಟಿ ಬಿಟ್ಟುಬಿಡುತ್ತಿದುದೇ ಪರಿಪಾಠ - ವಿಜಯನಗರದ ಪತನವಾಗಿ ದಕ್ಷಿಣದಲ್ಲಿ ಅನ್ಯಧರ್ಮೀಯರ ದಾಳಿ ಹೆಚ್ಚಾಗುವವರೆಗೂ ಬೃಂದಾವನಗಳಿಗೊಂದು ಕಟ್ಟಡ, ಮೇಲ್ಛಾವಣಿ ಕಟ್ಟುವ ಪರಿಪಾಠವೇ ಇರಲಿಲ್ಲ.  ವ್ಯಾಸರಾಜರದ್ದೂ ಈ ರೂಢಿಗೆ ಹೊರತಲ್ಲ.  ಅನಂತವೈಭವಗಳ ನಡುವೆಯೂ ವೈರಾಗ್ಯದ, ಶುದ್ಧಸನ್ಯಾಸದ ಬದುಕನ್ನು ಬದುಕಿದವರು ವ್ಯಾಸರಾಜರು - ಅದೇನು ಇಂದಿನಂತೆ ಕಾವಿಯ ಮರೆಯಲ್ಲಿ ಕಚ್ಚೆಹರಿಯುವ ಢೋಂಗಿ ಸನ್ಯಾಸವಲ್ಲ; "ಮೂತ್ರದ ಮನೆಗಾಗಿ ಗಾತ್ರ ಬಳಲಿಸಿ, ಮದನಸೂತ್ರಬೊಂಬೆಯು ಎನಿಸಿ, ನೇತ್ರದಿಂದ ಪಾತ್ರದವಳನು ನೋಡಿ ಸ್ತೋತ್ರಮಾಡುತ ಹಿಗ್ಗಿ, ರಾತ್ರಿ ಹಗಲೂ ಕೆಟ್ಟ ವಾರ್ತೆಯಲ್ಲಿರುವ" ಸನ್ಯಾಸವಲ್ಲ ಅವರದ್ದು - "ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸತ್ವದಿರವ" ಎಂದು ಗುರುಗಳಾದ ಶ್ರೀಪಾದರಾಜರಿಂದಲೇ ಹೊಗಳಿಸಿಕೊಂಡ ಸನ್ಯಾಸವದು.  ಹೀಗಾಗಿ, ಬದುಕಿನುದ್ದಕ್ಕೂ ಬಂದ ಸನ್ಯಾಸ ಸಾವಿನಲ್ಲೂ ಕಂಡರೆ ಅಸಹಜವೇನಲ್ಲ.  ಅದಕ್ಕಾಗಿಯೇ ವ್ಯಾಸರಾಜರದ್ದೂ ಬಯಲ ಬೃಂದಾವನ.  ರಾಜಗುರುಗಳೆಂಬ ಹೆಗ್ಗಳಿಕೆಯ ಒಂದೇ ಸಂಕೇತವಾಗಿ ಇದೊಂದು ಬೃಂದಾವನದ ಮುಂದೆ ಮಾತ್ರ ಎರಡು ಕಂಬಗಳದ್ದೊಂದು ಚಪ್ಪರ, ಉಳಿದ ಬೃಂದಾವನಗಳಿಗಿಲ್ಲದ್ದು (ಅದೂ ಬೃಂದಾವನದ ಮೇಲಲ್ಲ, ಮುಂದೆ!) - ಅದು ಬಿಟ್ಟರೆ ಉಳಿದದ್ದು ಬಯಲು.  ಇಂತಿರುವ ಬೃಂದಾವನವು ಕಳೆದ ಐನೂರು ವರ್ಷಗಳಲ್ಲಿ, ಅದೂ ಅನ್ಯಧರ್ಮೀಯರ ದಾಳಿಗಳ ಉತ್ತುಂಗ ಸ್ಥಿತಿಯಲ್ಲೂ ಯಾವ ಸಣ್ಣ ದಾಳಿಗೂ ಒಳಗಾಗದೇ ನಿಂತಿರುವುದು ಅಚ್ಚರಿಯೇನಲ್ಲ - ಒಬ್ಬ ಸನ್ಯಾಸಿಯ ಸಮಾದಿಯಲ್ಲಿ ದುಡ್ಡು ಕಾಸು ಏನೂ ಸಿಗುವುದಿಲ್ಲ, ಅಲ್ಲಿ ಸಿಗುವುದೆಲ್ಲಾ ಸಾಲಿಗ್ರಾಮಗಳೆಂಬ ’ಕೆಲಸಕ್ಕೆ ಬಾರದ’ ಕಲ್ಲಿನ ಚೂರುಗಳು ಎಂಬ ವಿಷಯ ಆಗಿನ ದಾಳಿಕೋರರಿಗೆ ತಿಳಿದಿತ್ತು (ಅಷ್ಟರಮಟ್ಟಿಗೆ ಅವರೂ ಒಂದು ರೀತಿ ಸಂಸ್ಕೃತಿವಂತರಾಗಿದ್ದರು, ತಿಳಿದವರಾಗಿದ್ದರು), ಈಗಿನ ದಾಳಿಕೋರರಿಗೆ ತಿಳಿದಿಲ್ಲ ಅಷ್ಟೇ ವ್ಯತ್ಯಾಸ.

ಇರಲಿ, ಇಂಥದ್ದೊಂದು ಸುದ್ದಿ ಬೆಳಬೆಳಗ್ಗೆ ಬಂದು ಬಡಿದಾಗ ಇಡೀ ನಾಡು ದಿಗ್ಭ್ರಮೆಗೊಳಗಾಗಬಹುದೆಂದೆಣಿಸಿದ್ದೆ, ಸುದ್ದಿಮಾಧ್ಯಮಗಳು ಈ ಬಗ್ಗೆ ದಪ್ಪ ದನಿಯಲಿ ಬಿತ್ತರಿಸಿ, ವಿಶೇಷ ಪ್ಯಾನಲ್ ಡಿಸ್ಕಶನ್ನುಗಳನ್ನೇರ್ಪಡಿಸಬಹುದೆಂದೆಣಿಸಿದ್ದೆ, ಪತ್ರಿಕೆಗಳು ಈ ಸುದ್ದಿಯನ್ನು ದಪ್ಪಕ್ಷರಗಳಲ್ಲಿ ಛಾಪಿಸಿ ಸಂಪಾದಕೀಯ ಬರೆಯಬಹುದೆಂದೆಣಿಸಿದ್ದೆ, ಸರ್ಕಾರವು ತಕ್ಷಣ ಕಾರ್ಯಪ್ರವೃತ್ತವಾಗಿ ಸ್ಥಳವನ್ನು ತೆರವುಗೊಳಿಸಿ, ಕಾಯಲು ಪೋಲೀಸರನ್ನು ನಿಯಮಿಸಿ, ಉನ್ನತಮಟ್ಟದ ತನಿಖೆಯ ದಳವನ್ನು ರೂಪಿಸಿ, ಎರಡು ದಿನದೊಳಗೆ ದುಷ್ಕರ್ಮಿಗಳನ್ನು ಹೆಡಮುರಿಗೆ ಕಟ್ಟಿ ತರುತ್ತಾರೆಂದೆಣಿಸಿದ್ದೆ, ತಾನೇ ನಿಂತು, ಪುರಾತತ್ತ್ವ ಇಲಾಖೆಯೊಡನೆ ಕೈಜೋಡಿಸಿ, ನಶಿಸಿಹೋದ ಸ್ಮಾರಕವನ್ನು ಪುನಾರೂಪಿಸುತ್ತಾರೆಂದೆಣಿಸಿದ್ದೆ, ಹಿಂದೂಧರ್ಮದ ಪರಮಾಶ್ರಯವೆಂದು ಬಿಂಬಿಸಿಕೊಳ್ಳುವ ಪಕ್ಷದ ಆಡಳಿತವಿರುವ ಕೇಂದ್ರಸರ್ಕಾರವು ಈ ಸಂಬಂಧ ತಕ್ಕರೀತಿಯಲ್ಲಿ ರಾಜ್ಯಸರ್ಕಾರಕ್ಕೆ ಸ್ಪಂದಿಸಿ ತನಿಖೆಯ, ಪುನರ್ನಿರ್ಮಾಣದ ಮೇಲುಸ್ತುವಾರಿ ವಹಿಸಬಹುದೆಂದೆಣಿಸಿದ್ದೆ (ನಾವು ಆಶಿಸಿದ್ದ ’ರಾಮರಾಜ್ಯ’ದ ಒಂದು ಸೆಳಕಲ್ಲವೇ ಅದು).  ಅಯ್ಯೋ, ಇಲ್ಲ - ಅದಾವುದೂ ಆಗಲಿಲ್ಲ.  ನಾನೇ ಕೆಲಶತಮಾನಗಳ ಕಾಲ ಬಂಡೆಯಡಿಯಲ್ಲಿದ್ದೆನೆಂದು (having lived under the rock) ನಿಧಾನಕ್ಕೆ ಅರಿವಿಗೆ ಬಂದಿತು. ಎಂದೂ ಟೀವಿಯನ್ನೇ ನೋಡದವನು ಟೀವಿಯ ಮುಂದೆ ಕುಳಿತರೆ, ದಿನವಿಡೀ ರಿಸಾರ್ಟುಗಳಲ್ಲಿ ಕಳೆದುಹೋಗಿರುವ ಜನಪ್ರತಿನಿಧಿಗಳ ಬಗ್ಗೆ ’ಸ್ಪೀಕರು’ ಕಿತ್ತುಹೋಗುವಂತೆ ಬಡಕೊಳ್ಳುತ್ತಿದ್ದುವೇ ಶಿವಾಯಿ, ಹಂಪಿಯಲ್ಲಾದ ಘಟನೆಯ ಬಗ್ಗೆ ಒಂದು ಚಕಾರವಿಲ್ಲ!  ಯಾವುದೋ ಒಂದು ಚಾನಲ್ ಮಾತ್ರ "ಉತ್ತರಾಧಿ ಮತ್ತು ರಾಯರ ಮಠಗಳ ನಡುವೆ ಕಾದಾಟ, ವ್ಯಾಸರಾಜರ ಸಮಾಧಿ ಧ್ವಂಸ" ಎಂಬ ತಲೆಬುಡವಿಲ್ಲದ, ಅಸಂಬದ್ಧ ನ್ಯೂಸ್ ಕ್ಯಾಪ್ಸೂಲನ್ನು ಸ್ಕ್ರೀನಿನ ಕೆಳಭಾಗದಲ್ಲಿ ಬಿತ್ತರಿಸುತ್ತಿತ್ತು.  ಆಮೇಲೇಕೋ ಅದರಲ್ಲಿ ಸಾಕಷ್ಟು ಟಿ ಆರ್ ಪಿ ಕಮಾಯಿ ಕಾಣದ್ದರಿಂದ ಅದನ್ನು ಕೈಬಿಟ್ಟಿತು.  ಮರುದಿನ ವೃತ್ತಪತ್ರಿಕೆಗಳಲ್ಲಿ ಕಣ್ಣೊಡೆಯುವಷ್ಟು ದಪ್ಪಕ್ಷರಗಳಲ್ಲಿ, ಕಣ್ಣಿಗೆ ರಾಚುವ ಬಣ್ಣಗಳಲ್ಲಿ ಪ್ರಕಟವಾಗಿತ್ತು ಸುದ್ದಿ - ರಾಜ್ಯಸರ್ಕಾರದ ಕ್ಷಣಗಣನೆ, ಜನಪ್ರತಿನಿಧಿಗಳ ನಂಗಾನಾಚ್, ಸ್ಪೀಕರ್ ತಿಪ್ಪರಲಾಗ ಇತ್ಯಾದಿ ಇತ್ಯಾದಿ.  ಅದು ಬಿಟ್ಟರೆ ಇನ್ನೆಲ್ಲೋ ಆದ ತ್ರಿವಳಿ ಕೊಲೆ, ಕಲ್ಲು ಎತ್ತಿ ಹಾಕಿ ಕೊಲೆ, ಸರಗಳ್ಳತನ, ಅಪಹರಣ, ಅತ್ಯಾಚಾರ ಇತ್ಯಾದಿ ಇತ್ಯಾದಿಗಳಿಂದ ಯಥಾಪ್ರಕಾರ ಪತ್ರಿಕೆಗಳು ತುಂಬಿಹೋಗಿ, ಕೆಲವು ಪತ್ರಿಕೆಗಳಲ್ಲಿ ಮಾತ್ರ ವ್ಯಾಸರಾಜರ ಈ ಪ್ರಕರಣ ಅಂತಹ ಇತರ ಹಲವು ಕ್ರೈಮ್ ಸುದ್ದಿಗಳೊಂದಿಗೆ ಫುಟ್ ಬೋರ್ಡಿನಲ್ಲಿ ಅರೆಕಾಲೂರಿ ಪಯಣಿಸುತ್ತಿತ್ತು. 

ಇನ್ನು ಸರ್ಕಾರದ ಕಡೆ ನೋಡಿದರೆ, ಸರ್ಕಾರವೇ ಕೋಮಾದಲ್ಲಿದೆ, ಅದರ ವಾರಸುದಾರರು ನನಗಿಷ್ಟು ನಿನಗಿಷ್ಟು ಎಂಬ, ಬೆಂದಮನೆಯ ಗಳ ಹಿರಿಯುವ ಲೆಕ್ಕಾಚಾರದಲ್ಲಿದ್ದಾರೆ.  ಇನ್ನು ಅದ್ಯಾವಾಗಲೋ ಸತ್ತ ಬ್ರಾಹ್ಮಣ ಸನ್ಯಾಸಿಯ ಸಮಾದಿಯ ಬಗ್ಗೆ ಅಳಲು ಯಾರಿಗೆ ಬಿಡುವು?  ಸರಿ, ರಾಜ್ಯಸರ್ಕಾರವನ್ನು ದೂಷಿಸಿ ಫಲವಿಲ್ಲ, ಹೋಗಲಿ, ಕೇಂದ್ರದಲ್ಲಾದರೂ 'ನಮ್ಮದೇ' ಸರ್ಕಾರವಿದೆಯಲ್ಲ (ಕಣ್ಣಿಗೆ ಮಸಗಿದ್ದ ಸೆಕ್ಯುಲರ್ ಪೊರೆ ಬಲವಂತವಾಗಿ ಕಳಚಿದ್ದರಿಂದ ಹಿಂದೂವಾದಿಯಾಗಿಬಿಟ್ಟಿದ್ದೆ ನೋಡಿ), ಹೀಗೆಂದುಕೊಂಡು ಕೇಂದ್ರಸರ್ಕಾರದೆಡೆ ನೋಡಿದರೆ, ಆಯಾಯಾ ಸಂದರ್ಭಕ್ಕೆ ತಕ್ಕಂತೆ ಬಸವಣ್ಣನವರ ಬಗ್ಗೆ, ರಾಮಾನುಜರ ಬಗ್ಗೆ, ಮಧ್ವಾಚಾರ್ಯರ ಬಗ್ಗೆ ಹೇಳಿಕೊಟ್ಟ ಮಾತುಗಳನ್ನು ಗಿಣಿಪಾಠವೊಪ್ಪಿಸುವ ಕೇಂದ್ರನಾಯಕರಾರೂ ಕೊನೆಯ ಪಕ್ಷ ತಲೆಯೆತ್ತಿಯೂ ನೋಡುತ್ತಿರಲಿಲ್ಲ.  ಯಾರಾದರೂ ತೇಜಸ್ವಿ ಸೂರ್ಯನಿಗೆ ತಿಳಿಸಿ ಸಹಾಯ ಮಾಡಲು ಕೇಳಿ, ಯಾರಾದರೂ ಪರಿಚಯವಿರುವವರು ಸುಬ್ರಮಣ್ಯಂ ಸ್ವಾಮಿಗೆ ತಿಳಿಸಿ, ಪೇಜಾವರರು ತಮ್ಮ ಪ್ರಭಾವವುಪಯೋಗಿಸಿ ಮೋದಿಯವರೊಡನೆ ಮಾತಾಡಲಿ ಎಂದು 'ನಮ್ಮವರು' ಹೊಯ್ಕೊಂಡದ್ದೇ ಬಂತು.  ಇಂಥದ್ದೊಂದು ಘಟನೆಯನ್ನು ಯಾರಾದರೂ ಯಾರಿಗಾದರೂ ತಿಳಿಸಬೇಕೇ, ಅವರಿಗೆ ತಿಳಿದಿರುವುದಿಲ್ಲವೇ, ಅವರ ಮೌನಕ್ಕೆ ಏನರ್ಥ ಇವನ್ನು ಅರಿಯಲಾರದ ನಮ್ಮದೇ ಮುಗ್ಧತೆಗೆ ಸಂಕಟವಾಯಿತು.  ಅನ್ಯಾಯವಾಗಿರುವುದು ನಮಗೆ, ನಾವು ಸಹಾಯ ಯಾಚಿಸಬೇಕಿಲ್ಲ, ಆಗಬೇಕಾದ್ದನ್ನು ಡಿಮ್ಯಾಂಡ್ ಮಾಡಿ ಪಡೆಯಬೇಕಾದ್ದು, ವ್ಯವಸ್ಥೆ ಯಾರಪ್ಪನ ಆಸ್ತಿಯೂ ಅಲ್ಲ ಎಂಬ ಅರಿವೇ ನಮ್ಮಿಂದ ಎಗರಿಹೋಗಿರುವುದು ಕಂಡು ದುಃಖವಾಯಿತು.  ಅಷ್ಟಾದಮೇಲೂ ಏನು?  ನಮ್ಮ ದಕ್ಷಿಣ ಬೆಂಗಳೂರಿನ ಸಂಸದರೊಬ್ಬರು ಸಂಸತ್ತಿನಲ್ಲಿ ಎದ್ದು ನಿಂತು "ಕರ್ನಾಟಕದ ಹದಿನಾರನೆಯ ಶತಮಾನದ ಸಂತರೊಬ್ಬರ" ಬಗ್ಗೆ ಒಂದು ಸಾಲಿನ ಪರಿಚಯ ಹೇಳಿ, ಇನ್ನೊಂದು ಸಾಲಿನಲ್ಲಿ, ಅವರ ಬೃಂದಾವನವು ನಾಶವಾಗಿರುವುದರ ಕುರಿತು ತಿಳಿಸಿ, ಮೂರನೆಯ ಸಾಲಿನಲ್ಲಿ ಇದಕ್ಕೆ ತಕ್ಕ ಪರಿಹಾರ ಬೇಕೆಂದು ಒಪ್ಪಿಸಿದರು.  ಮಂತ್ರಿಯೊಬ್ಬರು "ಸೂಕ್ತಕ್ರಮ ಕೈಗೊಳ್ಳಲಾಗುವುದು" ಎಂಬ ಒಂದು ಸಾಲಿನ ರೊಟೀನ್ ಭರವಸೆಯನ್ನು ನೀಡಿದರು.  ಹೇಳಿದವರಲ್ಲಾಗಲೀ, ಕೇಳಿದವರಲ್ಲಾಗಲೀ, ಉತ್ತರಿಸಿದವರಲ್ಲಾಗಲೀ ನಡೆದ ಘಟನೆಯ ಗಂಭೀರತೆಯ ಕಿಂಚಿತ್ತು ನೆರಳೂ ಕಾಣಲಿಲ್ಲ.  ಆ ರೊಟೀನ್ ಭರವಸೆ ಕೊನೆಗೇನಾಯಿತೆಂಬ ಬಗ್ಗೆ ಯಾರಿಗೂ ಗೊತ್ತಿಲ್ಲ.  ಆದರೆ ಸಂಸತ್ತಿನಲ್ಲಿ ನಮ್ಮ ಬಗೆಗೂ ಒಂದು ಸಾಲನ್ನಾದರೂ ಹೇಳಿದ ಈ ಅಮೋಘ ಸಾಧನೆಯ ಬಗೆಗೆ ನಮ್ಮವರು ಆ ತರುಣಸಂಸದರನ್ನು ಇನ್ನಿಲ್ಲದಂತೆ ಕೊಂಡಾಡಿದರು. 

ಇವೆಲ್ಲಾ ಸರ್ಕಾರ, ಮಾಧ್ಯಮ, ವ್ಯವಸ್ಥೆಗಳ ವಿಷಯವಾಯಿತಲ್ಲ. ಫೇಸ್ಬುಕ್ಕು ಟ್ವಿಟರುಗಳಾದರೂ ಈ ಸುದ್ಧಿಯಿಂದ ತುಂಬಿಹೋಗಬಹುದೆಂದೆಣಿಸಿದ್ದೆ - ಅದೂ ಇಲ್ಲ!  ಫೇಸ್ಬುಕ್ಕಿನಲ್ಲೂ ಈ ಸುದ್ದಿ ಅಂತಹ ಸಂಚಲನವನ್ನುಂಟುಮಾಡಿದಂತೆ ಕಾಣಲಿಲ್ಲ - ಕೊನೆಗೆ "ಕೃಷ್ಣಾ ನೀ ಬೇಗನೆ ಬಾರೋ" ಎಂಬ ಹಾಡಿಗೆ ತಲೆದೂಗುವ ಮನಸ್ಸುಗಳೂ ಈ ದುರಂತಕ್ಕೆ ಬಹುದೊಡ್ಡ ರೀತಿ ಸ್ಪಂದಿಸಿದ್ದು ಕಾಣಲಿಲ್ಲ.

ಇಷ್ಟಾಗುವಾಗ ಇತ್ತ, ಮಹಾತ್ಮರಾದ ವ್ಯಾಸರಾಜರ ಬೃಂದಾವನ ಕಳಚಿಕೊಂಡು, ಒಳಗಿನ ಕುಣಿ ತೋಡಿಸಿಕೊಂಡು ಬಿದ್ದಿತ್ತಲ್ಲ, ಅದನ್ನು ನೋಡಿ ವಿಲಗುಟ್ಟಿದವರು, ಅನ್ನ ಬಿಟ್ಟವರು, ಕಣ್ಣೀರಿಟ್ಟವರು, ಬಿಟ್ಟ ಕೆಲಸ ಬಿಟ್ಟು ಸ್ಥಳಕ್ಕೆ ದೌಡಾಯಿಸಿದವರು ಇದೇ ಸೋ ಕಾಲ್ಡ್ 'ಜಗಳಗಂಟ' ಮಾಧ್ವರು.  ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅಂದು ಹಲವು ಸಂಪ್ರದಾಯಸ್ಥ ಮಾಧ್ವಕುಟುಂಬಗಳಲ್ಲಿ ಒಲೆ ಹಚ್ಚಿಲ್ಲ.  ಸುದ್ದಿ ಕೇಳಿ ನಂಬಲಾರದೇ ತತ್ತರಿಸಿದವರೆಷ್ಟೋ, ದಿಗ್ಭ್ರಮೆಯಿಂದ ಕುಸಿದು ಕುಳಿತವರೆಷ್ಟೋ! ಅಲ್ಲಿಗೆ ಧಾವಿಸಲಾಗದವರು ಮನೆಯಲ್ಲಿ ತುಪ್ಪದ ದೀಪ ಹಚ್ಚಿ ಅಖಂಡ ಪಾರಾಯಣ, ಸಚ್ಛಾಸ್ತ್ರಶ್ರವಣಗಳಲ್ಲಿ ತೊಡಗಿದರು.  ಮನೆಮನೆಯಲ್ಲೂ ಸೂತಕದ ಛಾಯೆ, ಆತಂಕ, ದುಗುಡ.  ಇವರ ಪಾಲಿಗೆ ಅಲ್ಲಿ ಉರುಳಿದುದು ಕೇವಲ ಜುಜುಬಿ "ಕರ್ನಾಟಕದ ಸಾಂಸ್ಕೃತಿಕಸ್ಮಾರಕ"ವಾಗಿರಲಿಲ್ಲ, ಸಮಸ್ತಮಾಧ್ವರ ಶ್ರದ್ಧಾಕೇಂದ್ರದ ಗೋಪುರವಾಗಿತ್ತು, ಅವರ ಅಸ್ಮಿತೆಯ ಪ್ರತೀಕವಾಗಿತ್ತು; ಇವತ್ತಿಗೂ ವ್ಯಾಸರಾಜರ ಪರಂಪರೆಯ ಸ್ವಾಮಿಗಳು ವ್ಯಾಸರಾಜರ ಪ್ರತಿನಿಧಿಗಳಾಗಿ ಒಂದು ಮುಹೂರ್ತಕಾಲ ಪರಂಪರಾಗತ ’ಸಿಂಹಾಸನ’ದ ಮೇಲೆ ಕುಳಿತು ’ರಾಜದರ್ಬಾರು’ ನೀಡುತ್ತಾರೆ.  ವಂದಿಮಾಗಧರು "ರಾಜಾಧಿರಾಜ... ಗಜಗಹ್ವರ ಕರ್ಣಾಟಕಸಿಂಹಾಸನಗತಪ್ರಭೋ" ಎಂದು ಪರಾಕು ಕೂಗುತ್ತಾರೆ.  ಇಂದಿನ ಅನೇಕ ಜಗದ್ಗುರುಗಳ ಆಧುನಿಕ ಅಡ್ಡಪಲ್ಲಕ್ಕಿ ಉತ್ಸವದಂಥದ್ದಲ್ಲ ಇದು - ವಿಜಯನಗರದ ಕಾಲದಿಂದ ಬೆಳೆದುಬಂದ ಸಂಪ್ರದಾಯ.  ಇದು ಮಾಧ್ವಸಮುದಾಯದ ಹೆಮ್ಮೆ.  ಆದ್ದರಿಂದ ಅಲ್ಲಿನ ಘಟನೆ ಇಡೀ ಮಾಧ್ವಸಮುದಾಯದ ಎದೆಗೆ ಬಿದ್ದ ಏಟಾಗಿತ್ತು.  ಮೊದಲ ಕೆಲಗಂಟೆಗಳ ದಿಗ್ಭ್ರಮೆ, ಯಾರು ಮಾಡಿದರು, ಏಕೆ, ಹೇಗೆ ಇತ್ಯಾದಿ ಪ್ರಶ್ನೆಗಳು ಸುಳಿದು ನೆಲ ಕಚ್ಚಿದಮೇಲೆ, ಕಂಡಕಂಡ ಕಲ್ಲುಗಳಿಗೆಲ್ಲಾ (ರಾಜಕಾರಣಿಗಳಿಗೆ, ಅಧಿಕಾರಸ್ಥರಿಗೆ ಎಂದು ಓದಿಕೊಳ್ಳಿ) ಮೊರೆಯಿಟ್ಟು, ಮೌನದ ಪ್ರತ್ಯುತ್ತರ ಸಿಕ್ಕಮೇಲೆ ಮೇಲೆ ಆದ ಜ್ಞಾನೋದಯ, ಇದು ತಮ್ಮದೇ, ಕೇವಲ ತಮ್ಮದೇ ನಷ್ಟ, ಇನ್ನಾರೂ ಇದರ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ ಎಂಬುದು. 

ವಿಕಾರವಾಗಿ ಗುಳಿ ತೆರೆದುಕೊಂಡು ಬಿದ್ದಿದ್ದ ಬೃಂದಾವನದ ಅವಶೇಷ ತಮ್ಮದೇ ಎದೆಬಗೆದು ಕಿತ್ತಿಟ್ಟಂತೆ, ಉಸಿರಿಗೆ ಹಪಹಪಿಸುವಂತೆ ಮಾಡಿತ್ತು.  ಸುಮಾರು ಸಾವಿರ ಎರಡುಸಾವಿರ ಜನ ಮಾಧ್ವಬಂಧುಗಳು (ಆರು ಸಾವಿರ ಎಂಬ ವರದಿಯಿದೆ, ತಿಳಿಯದು) ಅಲ್ಲಿ ಸೇರಿ ಬೃಂದಾವನ ಪುನರ್ನಿರ್ಮಾಣ ಮಾಡುತ್ತೇವೆಂದು ಘೋಷಿಸಿದಾಗ ಮೊದಲು ನನಗೆ ಗಾಬರಿಯಾಯಿತು - ಎಲಾ ಇಂತಹ ಒಂದು ದುಷ್ಕೃತ್ಯ ನಡೆದಿದೆ, ಪೋಲೀಸರು ಇನ್ನೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ, ಇಷ್ಟೊಂದು ಜನ ಇಲ್ಲಿ ಸೇರಿ ಹೀಗೆ ಸರಿದಾಡಿದರೆ ಸಾಕ್ಷಿಗಳು ನಾಶವಾಗುವುದಿಲ್ಲವೇ, ಬೃಂದಾವನ ಕಟ್ಟಿಬಿಟ್ಟರೆ ತನಿಖೆಗೆ ಏನು ಕುರುಹು ಉಳಿಯುತ್ತದೆ, ತಪ್ಪಿತಸ್ಥರು ಆರಾಮವಾಗಿ ತಪ್ಪಿಸಿಕೊಂಡುಬಿಡುವುದಿಲ್ಲವೇ ಎಂಬುದು ನನ್ನ ಚಿಂತೆ.  ಆದರೆ ಬೃಂದಾವನದ ನಿರ್ಮಾಣಕಾರ್ಯ ಆರಂಭವಾಗಿ ಮೊದಲ ಸುತ್ತು ಮುಗಿಯುತ್ತಿದ್ದಂತೆ ಒಂದು ವಿಷಯ ಮನದಟ್ಟಾಯಿತು - ಇದು ಆಗಬೇಕಾದ್ದೇ ಹೀಗೆ.  ಇದು ಇಡೀ ಸಮುದಾಯದ ನೋವಿನ ಪ್ರಶ್ನೆ - ಅದು ತನ್ನ ಎದೆಯಲ್ಲಾದ ಬಹುದೊಡ್ಡ ದೊಗರನ್ನು ತುರ್ತಾಗಿ ಸರಿಪಡಿಸಿಕೊಳ್ಳುತ್ತಿದೆ - ಅಂತಿಮವಾಗಿ ಇದೇ ಸತ್ಯ - ಇದರ ಮುಂದೆ ಯಾವುದೋ ಸಂಸ್ಕೃತಿ, ಐತಿಹಾಸಿಕ ಸ್ಮಾರಕ ಈ ಮಾತೆಲ್ಲಾ ಬರೀ ಮಣ್ಣಂಗಟ್ಟಿ.  ಇದು ಬಗೆಹರಿಯುತ್ತಿದ್ದಂತೆ ನನ್ನಲ್ಲೆದ್ದಿದ್ದ ಪ್ರಶ್ನೆಗಳು ಅದೆಷ್ಟು ಬಾಲಿಶವೆಂದು ಮನದಟ್ಟಾಯಿತು - ಏಕೆಂದರೆ ತನಿಖೆ ಯಾವ ಹಾದಿ ಹಿಡಿಯುತ್ತದೆಂಬುದು ಎಲ್ಲರಿಗೂ ತಿಳಿದ ವಿಷಯ, ಅದಕ್ಕೋಸ್ಕರ, ಧ್ವಂಸಗೊಂಡ ಈ ದೊಗರನ್ನು ತೆರೆದಿಟ್ಟುಕೊಂಡು ಕಾಯುವುದು ಅಪಾರ ನೋವಿನ ವಿಷಯ.  ಇನ್ನು ಈ 'ಸಾಂಸ್ಕೃತಿಕ' ಆಘಾತವನ್ನು ಇಡೀ ನಾಡು 'ಸಹಿಸಿ'ಕೊಂಡ ರೀತಿ ಕಣ್ಣಮುಂದೆಯೇ ಇದೆ.  ಇನ್ನುಳಿದದ್ದೇನು? ನಮ್ಮ ನೋವು, ಅದು ನಮಗೆ ಹೆಚ್ಚು - ನಾವು ಸರಿಪಡಿಸಿಕೊಳ್ಳಬೇಕಾದ್ದು ಅದನ್ನೇ, ಮತ್ತು ಅದನ್ನು ಸರಿಪಡಿಸಿಕೊಳ್ಳಬೇಕಾದವರೂ ನಾವೇ - ಅದಷ್ಟೇ ಸತ್ಯ.  ಇದಾದಮೇಲೆ ಇನ್ನೂ ಒಂದು ಪ್ರಶ್ನೆ, ಆತಂಕ ಕಾಡಿತು.  ಈಗೆಲ್ಲಾ ಭಕ್ತಿಯ ಅಬ್ಬರವೆಂದರೆ ಅತಿರೇಕದ ಪ್ರತಿಕ್ರಿಯೆಯಷ್ಟೇ.  ಆಗಲೇ "ವ್ಯಾಸರಾಜರಿಗೆ ವೈಭವೋಪೇತವಾದ ಬೃಂದಾವನವನ್ನು ನಿರ್ಮಾಣ ಮಾಡೋಣ" ಎಂಬಂತಹ ಮಾತುಗಳು ಕೇಳಿಬಂದಾಗ, ’ವೈಭವೋಪೇತ’ ಬೃಂದಾವನದ ಹೆಸರಿನಲ್ಲಿ ಇವರೆಲ್ಲ ಸೇರಿ ಕಣ್ಣಿಗೆ ರಾಚುವಂತೆ ಆಧುನಿಕ ಡಬ್ಬವನ್ನೆಲ್ಲಿ ನಿರ್ಮಿಸಿಬಿಡುತ್ತಾರೋ, ಅದರ ಪಾವಿತ್ರ್ಯಕ್ಕೆ, ಹಳಮೆಗೆ, ಐತಿಹಾಸಿಕತೆಗೆ ಎಲ್ಲಿ ಧಕ್ಕೆಯಾಗಿಬಿಡುತ್ತದೆಯೋ ಎಂಬ ಚಿಂತೆಯಿದ್ದಿತು.  ಆದರೆ ಪುನರ್ನಿರ್ಮಾಣಕಾರ್ಯ ಮುಂದುವರೆದಂತೆ, ನನ್ನ ಚಿಂತೆ ಎಷ್ಟು ನಿರಾಧಾರವಾದುದೆಂದು ಅರಿವಾಯಿತು. 

ಎಷ್ಟು ಅಚ್ಚುಕಟ್ಟಾಗಿ, ಯಾವ ಪುರಾತತ್ವ ಇಲಾಖೆಯ ಕೆಲಸಕ್ಕೂ ಕಡಿಮೆಯಿಲ್ಲದಂತೆ, ಚೆಲ್ಲಿಬಿದ್ದಿದ್ದ ಕಲ್ಲುಗಳನ್ನು ಅದದೇ ಕ್ರಮದಲ್ಲಿ ಎತ್ತಿ ಜೋಡಿಸಿ, ಭಗ್ನವಾಗಿದ್ದೆಡೆ ಅದರ ಮೂಲವಾಸ್ತುವಿಗೆ ಒಂದಿನಿತೂ ಧಕ್ಕೆ ಬರದಂತೆ ಪುನರ್ನಿರ್ಮಿಸಿದ್ದಾರೆ.  ಭಕ್ತಿಯ ಭರದಲ್ಲಿ 'ವೈಭವೋಪೇತವಾದ' ಹೊಸದೊಂದು ಬೃಂದಾವನವನ್ನೇ ನಿರ್ಮಿಸಿದ್ದರೆ ಯಾರೂ ತಡೆಯುತ್ತಿರಲಿಲ್ಲ, "ಪುರಾತನ ಸ್ಮಾರಕ"ವೊಂದು ನಾಶವಾಗಿದ್ದಕ್ಕೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.  ಆದರೆ ಆ ಎದೆಬಗೆವ ನೋವಿನಲ್ಲೂ ಸ್ಮಾರಕದ ಪುರಾತನತೆಯನ್ನೂ, ಆ ಹಳೆಮೆಯ ಪಾವಿತ್ರ್ಯವನ್ನೂ ಮನಸ್ಸಿನಲ್ಲಿಟ್ಟುಕೊಂಡು ಪೊರೆದದ್ದು, ಇದ್ದುದನ್ನು ಇದ್ದಂತೆಯೇ ಪುನರ್ನಿರ್ಮಿಸಿದ್ದು ನಮ್ಮದೇ ಸಾಂಪ್ರದಾಯಿಕ ವಿವೇಕ. 



ಇಪ್ಪತ್ನಾಲ್ಕಕ್ಕೂ ಹೆಚ್ಚು ಗಂಟೆ ಅನ್ನ ನಿದ್ರೆಯ ಹಂಗು ತೊರೆದು ಕೈಗೊಂಡ ಕೆಲಸ ಪೂರ್ತಿಗೊಂಡನಂತರ ಮರುದಿನ ಸಂಜೆಯ ಹೊತ್ತಿಗೆ ಊಟಕ್ಕೆ ಕುಳಿತ ಆ ಮೊಗಗಳಲ್ಲಿ ಅರಳಿದ್ದ ಸಂತಸ, ಸಂತೃಪ್ತಿ, ಧನ್ಯತೆ ಅದಾವ ಬೆಲೆ ಕೊಟ್ಟರೆ ತಾನೆ ಸಿಕ್ಕೀತು?  ಬಹುಕಾಲದನಂತರ  ಆ ಮುಖಗಳಲ್ಲಿ ಕಂಡುಬಂದ ಒಮ್ಮತದ ಭಾವ, ಆ ಒಗ್ಗಟ್ಟು ಹೀಗೇ ಇದ್ದರೆ ಸಾಕು.  ಈ ಸರ್ಕಾರಗಳಾಗಲೀ, ವ್ಯವಸ್ಥೆಯಾಗಲೀ, ಸಮಾಜವಾಗಲೀ ನಮ್ಮನ್ನು ಲೆಕ್ಕಕ್ಕೇ ಇಡದಿದ್ದರೂ ಅವರಾರ ಹಂಗೂ ಇಲ್ಲದೇ ನಾವು ಮೇಲೇಳಬಲ್ಲೆವು, ಬಾಳಬಲ್ಲೆವು ಎಂಬುದನ್ನು ಇಂದು ಮತ್ತೊಮ್ಮೆ ಪ್ರಪಂಚಕ್ಕೆ ತೋರಿದರು ಇಲ್ಲಿ ನೆರೆದ ಜನ - ಒಂದು ಹೋರಾಟವಿಲ್ಲ, ಕೂಗಾಟ ಚೀರಾಟಗಳಿಲ್ಲ, ಒಂದು ಕಟ್ಟಡಕ್ಕೆ ಕಲ್ಲು ಬೀಳಲಿಲ್ಲ, ಒಂದು ಸಾರ್ವಜನಿಕ ಆಸ್ತಿ ಧ್ವಂಸವಾಗಲಿಲ್ಲ (ಯಾರೋ ಒಬ್ಬರು ’ಮಾನವತಾವಾದಿಗಳು’ "ಬ್ರಾಹ್ಮಣ್ಯದ ಹೇರಿಕೆ" ಎನ್ನುತ್ತಿದ್ದರು.  ಅದು ಇದೇ ಇರಬೇಕು ಬಹುಶಃ!), ಸರ್ಕಾರದ ನೆರವಿಗೆ ಕಾಯಲಿಲ್ಲ - ನಮ್ಮ ನಷ್ಟ, ನಮ್ಮ ನೋವು, ನಮ್ಮ ಪರಿಹಾರ, ನಾವು ಕಂಡುಕೊಂಡೆವಷ್ಟೇ.  "ನೋಡಿದಿರಾ, ಇದೇ ಹಿಂದೂ ಸಂಸ್ಕೃತಿಯ ಮಹತ್ತು" ಎಂದು ಒಬ್ಬರು ಮಹಿಳಾರಾಜಕಾರಣಿ ಉಬ್ಬುತ್ತಿದುದೂ ಗಮನಕ್ಕೆ ಬಂತು.  ಅವರಿಗೆ ವಿನಮ್ರನಾಗಿ ಹೇಳುವುದಿಷ್ಟೇ "ತಮ್ಮ ಶ್ಲಾಘನೆಗೆ ಧನ್ಯವಾದಗಳು, ಆದರೆ ಕ್ಷಮಿಸಿ ಮೇಡಂ, ನೀವು ಹೇಳಿದ ಹಿಂದೂ ಸಂಸ್ಕೃತಿಯ ಮಹತ್ತಾಗಲೀ ಅಥವಾ ಆ ಇನ್ನೊಬ್ಬರು ಹೇಳುವ ವಿಶ್ವಮಾನವತ್ವ/ಭ್ರಾತೃತ್ವಗಳಾಗಲೀ ನಮ್ಮ ಸಹಾಯಕ್ಕೆ ಬರಲಿಲ್ಲ, ಬದಲಿಗೆ ಎರಡೂ ಸುರಕ್ಷಿತ ದೂರದಲ್ಲಿ ನಿಂತು ತಮಾಷೆ ನೋಡುತ್ತಿದ್ದುವು; ನಮ್ಮ ಮನೆಯ ದುರಂತವನ್ನು ನಾವು ತೆಪ್ಪಗೆ, ನಮಗೆ ತಿಳಿದಂತೆ ನಿಭಾಯಿಸಿಕೊಂಡೆವಷ್ಟೇ - ಇದಕ್ಕೆ ಇಷ್ಟಕ್ಕಿಂತ ಹೆಚ್ಚಿನ ಬಣ್ಣ ಬೇಡ"  ಇನ್ನೇನು, ವಿಶ್ವಭ್ರಾತೃತ್ವದ ಬಗ್ಗೆ, ಹಿಂದೂ ಏಕತೆಯ ಬಗ್ಗೆ, ಬ್ರಾಹ್ಮಣರ ಒಗ್ಗಟ್ಟಿನ ಬಗ್ಗೆ, ಕನ್ನಡತನದ ಬಗ್ಗೆ ಬೇಕಷ್ಟು ರಾಜಕೀಯ ಭಾಷಣ ಕುಟ್ಟಬಹುದು, ಬೇಡವೆಂದವರಾರು, ಆದರೆ ವ್ಯಾಸರಾಯರನ್ನು ದಯವಿಟ್ಟು ಅದರಿಂದ ದೂರವಿಟ್ಟುಬಿಡಿ - ಏಕೆಂದರೆ ಅವರು ನಮ್ಮವರು, ಕೇವಲ ನಮ್ಮವರು, ಮಾಧ್ವರ ಗುರುಗಳು.  ನಮ್ಮ ಗುರುಗಳು, ನಮ್ಮ ಹೆಮ್ಮೆ.  

ಓ, ಈ ನಿಲುವು ನಮಗೆ ಜಾತಿವಾದಿಯ ಪಟ್ಟವನ್ನೋ, ಹಿಂದುತ್ವವಿರೋಧಿಯ ಪಟ್ಟವನ್ನೋ, ಬ್ರಾಹ್ಮಣ ಒಗ್ಗಟ್ಟಿನ ವಿರೋಧಿಯ ಪಟ್ಟವನ್ನೋ ತಂದೀಯಬಹುದು - ಅಡ್ಡಿಯೇನು?  ನಾವು ಅದಾವುದೂ ಅಲ್ಲವೆಂಬುದು ನಮಗೆ ತಿಳಿದಿರುವಂತೆಯೇ, ಯಾವಯಾವುದೋ ಇಸಮ್ಮಿನ ಮುಸುಕಿನಡಿಯಲ್ಲಿ ಜಾತೀಯತೆಯ ಹೊಲಸುಣ್ಣುವುದಕ್ಕಿಂತ ಪ್ರಾಮಾಣಿಕವಾಗಿ ನೇರವಾಗಿ ನಮ್ಮ ಜಾತಿಯ ತಳಿಗೆಯಲ್ಲಿ ಅನ್ನವುಂಡು ಇತರರನ್ನು ಗೌರವಿಸುವುದು ಎಷ್ಟೋ ಮೇಲು.  ಹೀಗಾಗಿ, "ಹೌದು, ನಾವು ಮಾಧ್ವರು... ಏನೀಗ?"

ಹಾಗೆಯೇ ಬೃಂದಾವನವನ್ನು ಒಡೆದ ಮನಸ್ಸುಗಳಿಗೊಂದು ಮಾತು.  ಶ್ರೀ ವ್ಯಾಸರಾಜರಂತಹ ಮಹಾನ್ ಚೇತನಗಳು ಅವಿನಾಶಿ, ಅವರ ಚೇತನವಿರಲಿ, ಕೊನೆಗೆ ಅವರ ಬೃಂದಾವನದ ಒಂದು ಕಲ್ಲನ್ನೂ ನೀವು ಕೊಂಕಿಸಲಾಗಲಿಲ್ಲ.  ವ್ಯಾಸರಾಜರಂತಹ ಪುಣ್ಯಜೀವರನ್ನು ಮುಟ್ಟಿದ ನಿಮ್ಮ ಕೈ ಪಾವನವಾಯಿತು, ಹೋಗಿಬನ್ನಿ.

Sunday, July 14, 2019

ಹಿರಿದೆಂಬ ಹದ

ಹಿರಿದೆಂದು ಬಾಗಿದೊಡೆ

ಪದಧೂಳಿ ಕಣ್ಣ ಹೊಕ್ಕಿತ್ತು ನೋಡಾ

ಕಣ್ಣೊಳಗಣ ಕಸವ ಕಿರಿದೆಂಬುದೆಂತೋ ಮಾನಿಸಲದಿನ್ನೆಂತೋ

ಹಿರಿದಪ್ಪೊಡೆ ಕಪ್ಪುರದ ಉರಿಯಂತಿರಬೇಕು

ಹಿರಿದಪ್ಪೊಡೆ ಸಿರಿಗಂಧದ ಮರನಂತಿರಬೇಕು

ಹಿರಿದಪ್ಪೊಡೆ ಸುರಿದು ಪೊರೆವ ಗಗನದಂತಿರಬೇಕು

ಹಿರಿದಪ್ಪೊಡೆ ಹರನೊಲುಮೆ ಶಿರದೊಳಿಪ್ಪಂತಿರಬೇಕು

ನೋವ ಹುಣ್ಣಿಂಗೆರಗುವ ನೊಣನು ಹಿರಿದೆಂಬೊಡದರ ನೊಣಹು ಹಿರಿದಪ್ಪುದೇ

ತನ್ನ ಹುಣ್ಣನೆ ನೆಕ್ಕಿ ನೇವರಿಸುವ ಹಿರಿನೊಣನ

ನೆಗಹಿ ತಿಪ್ಪೆಗೆ ಸಲಿಸೆಂದ ನೋಡಾ ನಮ್ಮ ದಮ್ಮಪುರದ ಮಂಜೇಶನು



Monday, July 8, 2019

ಶಿವನ ಸಂಕಟ

ಸಂಸ್ಕೃತದಲ್ಲೊಂದು ಸುಂದರವಾದ ಪದ್ಯವಿದೆ:

ಪ್ರಣಯಕುಪಿತಾಂ ದೃಷ್ಟ್ವಾ ದೇವೀಂ ಸಸಂಭ್ರಮವಿಸ್ಮಿತ
ಸ್ತ್ರಿಭುವನಗುರುರ್ಭೀತ್ಯಾ ಸದ್ಯಃಪ್ರಣಾಮಪರೋಽಭವತ್ |
ನಮಿತಶಿರಸೋ ಗಂಗಾಲೋಕೇ ತಯಾ ಚರಣಾಹತಾ
ವವತು ಭವತಸ್ತ್ರ್ಯಕ್ಷಸ್ಯೈತದ್ವಿಲಕ್ಷಮವಸ್ಥಿತಮ್ ||

ಯಾವುದೋ ಪ್ರಣಯಕಲಹದಲ್ಲಿ ದೇವಿ ಪಾರ್ವತಿ ಕುಪಿತಳಾಗಿದ್ದಾಳೆ, ಅದನ್ನು ಸಂಭ್ರಮವಿಸ್ಮಯಗಳಿಂದ ವೀಕ್ಷಿಸುವ ಶಂಕರನು ಭಯವನ್ನಭಿನಯಿಸುತ್ತಾ ಆಕೆಯನ್ನು ರಮಿಸಲು ಅವಳ ಕಾಲಿಗೇ ಬಿದ್ದಿದ್ದಾನೆ (Acting over smart ಎಂದರೆ ಇದೇ ಇರಬೇಕು).  ಹೋಗಲಿ, ಇದರಿಂದ ಸತಿಯ ಕೋಪ ಇಳಿಯಬೇಕಲ್ಲವೇ?  ಶಿವನ ಗ್ರಹಚಾರ, ಮೊದಲೇ ಕೋಪಗೊಂಡಿರುವ ಪಾರ್ವತಿಗೆ ಆತನ ಬಾಗಿದ ತಲೆಯ ಮೇಲೆ ಮನೆಮಾಡಿದ್ದ ಗಂಗೆ ಕಣ್ಣಿಗೆ ಬೀಳಬೇಕೇ?  ಸರಿ, ಕೋಪ ಇನ್ನಷ್ಟು ಕೆರಳಿ, ತಲೆವಾಗಿದ ಶಿವನನ್ನೇ ಒದ್ದುಬಿಟ್ಟಿದ್ದಾಳೆ (ಬೇಕಿತ್ತೇ ಇದು?) ಆ ಮುಕ್ಕಣ್ಣನಿಗೆ ಒದಗಿದ ಇಂತಹ ವಿಲಕ್ಷಣಸ್ಥಿತಿ ನಮ್ಮನ್ನು ಕಾಪಾಡಲಿ :) ಇದು ಪದ್ಯದ ಭಾವಾರ್ಥ.

ಈ ಪದ್ಯದ ಮೂಲ ನನಗೆ ತಿಳಿಯದು.  ಹರಿಣೀ ಛಂದಸ್ಸಿನಲ್ಲಿರುವ ಈ ಸೊಗಸಾದ ಪದ್ಯವನ್ನು ಅದೇ ಛಂದಸ್ಸಿನಲ್ಲಿ ಅನುವಾದಿಸಲು ಯತ್ನಿಸಿದ್ದೇನೆ.  ಈ ಛಂದಸ್ಸಿನಲ್ಲಿ ಸರಿಯಾಗಿ ಮಧ್ಯದಲ್ಲಿ ಎಡೆಬಿಡದೇ ಬರುವ ಗುರ್ವಕ್ಷರಗಳು (ದೀರ್ಘಾಕ್ಷರಗಳು) ಕನ್ನಡದ ಜಾಯಮಾನಕ್ಕೆ ಸ್ವಲ್ಪ ತೊಡಕು, ಆದರೂ ಪ್ರಯತ್ನವಷ್ಟೇ:

ಪ್ರಣಯದೆಡೆಯೊಳ್ ಕೋಪಂಗೊಂಡಾ ಶಿವಾನಿಯನೋಡುತಂ
ವಿನಯಭಯದೊಳ್ ಕಾಲೊಳ್ ಬೀಳಲ್ ಚರಾಚರನಾಯಕಂ
ಕನಲುತೊದೆವಳ್ ಮತ್ತಂ ಗಂಗಾವಿಳಾಸವ ಕಾಣಲೀ
ತ್ರಿಣಯನನಿಗಾದೀ ವೈಚಿತ್ರ್ಯಂ ಸದಾ ಪೊರೆಗೆ ಸರ್ವರಂ

ಇದೇನನ್ಯಾಯ, ಜಗಜ್ಜನನಿ, ಮಹಾದೇವಿ ಹೀಗೆ ಮನುಷ್ಯಮಾತ್ರರಂತೆ ಕೋಪಕ್ಕೆ ಪಕ್ಕಾಗುವುದುಂಟೇ, ಅದರಲ್ಲೂ ಕಾಲಿಗೆ ಬಿದ್ದ ಮಹಾದೇವ ಶಂಕರನಿಗೆ ಒದೆಯುವುದೆಂದರೇನು? ಎಂತಹ ಅಪಚಾರ? - ಈ ತರ್ಕಕ್ಕೆಲ್ಲ ಇಲ್ಲಿ ತಾವಿಲ್ಲ.  ಮಹಾದೇವದೇವಿರನ್ನೂ ನಮ್ಮ ಮಟ್ಟಕ್ಕಿಳಿಸಿಕೊಂಡು ನಮ್ಮ ಲೀಲೆಗಳನ್ನು ಅವರಿಂದಾಡಿಸಿ ನೋಡುವುದರಲ್ಲೇ ಮನುಷ್ಯನ ಆನಂದವಿರುವುದು ಅಲ್ಲವೇ?  ಇದೊಂದು ಮುದ್ದಾದ ಪ್ರಣಯಕಲಹ ಎನ್ನುವುದಷ್ಟು ನಮಗೆ ಮುಖ್ಯ.


"ಪಾರ್ವತೀಪರಮೇಶ್ವರರ ಪ್ರಣಯಕಲಹ" - ಎಲ್ಲೋರಾ ಗುಹಾದೇವಾಲಯದ ಶಿಲ್ಪ

ಆದರೂ ಏನೇ ಹೇಳಿ, ಈ ಪದ್ಯವನ್ನೋದಿದಾಗ ಅಂತಃಕರಣವುಕ್ಕಿ ಬರುವುದು ಶಿವನ ಮೇಲಲ್ಲ, ಗಂಗೆಯ ಮೇಲೆ.  ಈ ಗಂಗೆ ಸಹನಾಮೂರ್ತಿ, ಪ್ರೇಮಮೂರ್ತಿ ಬಿಡಿ. ನಿಜಕ್ಕೂ ಮಹಾಸತಿಯೆಂದರೆ ಆಕೆಯೇ. ನೋಡಿ, ಬಗ್ಗಿದಾಗೊಮ್ಮೆ ತಲೆಯ ಮೇಲೆ ಗಂಗೆಯನ್ನು ಕಂಡಾಕ್ಷಣಕ್ಕೇ ಪಾರ್ವತಿಗೆ ಸವತಿಮಾತ್ಸರ್ಯವುಕ್ಕಿ, ಕಾಲಿಗೆ ಬಿದ್ದದ್ದು ಗಂಡನೆಂಬುದನ್ನೂ ನೋಡದೇ ಒದ್ದೇಬಿಟ್ಟಳು. ಆದರೆ ಇದೇ ಪಾರ್ವತಿ ದಿನದ ಇಪ್ಪತ್ನಾಲ್ಕು ಗಂಟೆಯೂ ಶಿವನ ಅರ್ಧದೇಹವನ್ನೇ ಆಕ್ರಮಿಸಿಕೊಂಡಿರುವಳಲ್ಲಾ, ಅದನ್ನು ನೋಡಿಯೂ ಆ ಗಂಗೆ ಸುಮ್ಮನಿರುತ್ತಾಳಲ್ಲಾ, ಒಮ್ಮೆಯಾದರೂ ಪತಿಯ ಪಕ್ಕಕ್ಕೆ ಬರುವ ಭಾಗ್ಯವೇ ಇಲ್ಲದೇ, ಯಾವುದೇ ಫಾಯದೆಯಿಲ್ಲದೇ ಇಪ್ಪತ್ನಾಲ್ಕು ಗಂಟೆಯೂ ಶಿವಶಿವೆಯರ ಆಶ್ಲಿಷ್ಟಚೇಷ್ಟೆಗಳಿಗೆಲ್ಲಾ ಮೂಕಸಾಕ್ಷಿಯಾಗಿ ಸುಮ್ಮನೇ ಶಿವನ ತಲೆಯ ಮೇಲೆ ಕೂತಿರುವುದು ಯಾವ ಸುಖಕ್ಕಾಗಿ? ಅವನು ಕಾಲಿಗೆ ಬಿದ್ದ, ಗೌರಿ ಒದ್ದಳು. ಆದರೆ ತನ್ನನ್ನು ತಲೆಯಮೇಲಿರಿಸಿಕೊಂಡೇ ಇಷ್ಟೆಲ್ಲಾ ಆಟವಾಡುವ ಶಿವನನ್ನು ಗಂಗೆ ಮನಸ್ಸು ಮಾಡಿದ್ದರೆ ಮುಳುಗಿಸಿಯೇಬಿಡಬಹುದಿತ್ತಲ್ಲವೇ? ಹಾಗೆ ಮಾಡದೇ ಸುಮ್ಮನೇ ಜಟೆಯ ಒಂದು ಮೂಲೆಯಲ್ಲಿ ಈ ಗಂಗಾಮಾತೆ ಕುಳಿತು ತಪಸ್ಸು ಮಾಡುತ್ತಿರುವುದು ಏತಕ್ಕಾಗಿ? ಇದೀಗ ನಿಜವಾದ platonic love ಅಂದರೆ.  ನನ್ನ ಕೇಳಿದರೆ ಅಂತಹ ತುಂಬು ಪ್ರೇಮವೇ ಗಂಗೆಗೆ ಆ ಪಾವನತ್ವವನ್ನು ಕೊಟ್ಟಿರುವುದು.  ಆ ಪರಮಪಾವನೆಯು ಗೌರಿಯ ಕಾಲ್ಸೋಕಿ ಗೌರಿಯ ಪಾದವೇ ಪಾವನವಾಯಿತೆನ್ನಲು ಅಡ್ಡಿಯೇನು?  ಜಗತ್ತಿಗೇ ಸೌಭಾಗ್ಯದಾತೆಯಾದ ಗೌರಿಯು ಗಂಗೆಯ ಅಳಲನ್ನು ಕಾಣದೆ ಹೋದಳೇ?  ಆ ತ್ಯಾಗಮಯಿಯ ಪ್ರೇಮವೇ ಈ ಶಿವಶಿವೆಯರ ಪ್ರಣಯೋತ್ಸವವನ್ನೂ ಪೊರೆಯುತ್ತಿದೆಯೆಂದರೆ ಅತಿಶಯವೇನು?  ಆದ್ದರಿಂದ ನಮ್ಮನ್ನು ಪೊರೆಯಬೇಕಾದ್ದು ಶಿವನ ಈ ವಿಚಿತ್ರಸ್ಥಿತಿಯಲ್ಲ, ಗಂಗೆಯ ಅಳವರಿಯದ ಪ್ರೇಮ.

ಅದೇ ಲಹರಿಯನ್ನು ಕಟ್ಟಿಕೊಡುವ ಮತ್ತೆರಡು ಪದ್ಯಗಳು, ವಾರ್ಧಕಷಟ್ಪದಿಯಲ್ಲಿ:

ಕುದಿವ ಕೋಪದ ಶಿವೆಯನೊಲಿಸೆ ಮಣಿವನ ಶಿರದಿ
ನದಿಸತಿಯ ಕಂಡು ಕಡುಮುಳಿದು ಶಂಕರಶಿರವ
ನೊದೆಯೆ ಹಾ ಪರಮಪಾವನೆಯ ಸೋಂಕಿದ ಚರಣ ಪರಮಪಾವನವಾದುದೈ
ಒದೆವಳಾ ಗೌರಿ ದರ್ಶನಮಾತ್ರದೊಳ್ ಗಂಗೆ
ಯೊದೆವಳೇಂ ಪತಿದೇಹದರ್ಧವಾಂತಿಹ ಸತಿಯ
ಮದನಚೇಷ್ಟೆಗಳನನುಗಾಲ ಕಾಣುತ ಸುದತಿ ಪರಮಶಾಂತಿಯನಳಿದಳೇಂ

ಕನಲಿದಳೆ ಕೊರಗಿದಳೆ ಮರುಗಿದಳೆ ಸೊರಗಿದಳೆ
ಮುನಿದು ಶಿವಶಿರವ ಧೀಂಕಿಡುತ ಪುಡಿಗಟ್ಟಿದಳೆ
ಪ್ರಣಯವಂಚಿತೆಗಂಗೆಯಳಲ ಕಾಣಳೆ ಗೌರಿ ಜಗದ ಮಂಗಳದಾತೆಯು
ಮುನಿಯ ತೆರದೊಳದೇಕೆ ತಪಗೈವಳೀ ತಪ
ಸ್ವಿನಿ ಜಹ್ನುಸುತೆಯಿವಳ ಕಿನಿಸಿರದ ಪ್ರೇಮಸೌ
ಜನಿಯಲ್ತೆ ಶಿವೆಯ ಪ್ರಣಯೋತ್ಸವವ ಪೊರೆವುದಾ ಪ್ರೇಮಮಯಿ ಪೊರೆಯಲೆಮ್ಮಂ

Saturday, May 4, 2019

ನಮ್ಮ ಮೋಜುಗಳೀಗ ಮುಗಿದಿಹುದು






































ಇದು William Shakespeare ಕವಿಯ ಖ್ಯಾತ "Our Revels now are ended" ಸಾಲುಗಳ ಭಾವಾನುವಾದ (ದ ಟೆಂಪೆಸ್ಟ್ ನಾಟಕದಿಂದ):
:
ನಮ್ಮ ಮೋಜುಗಳೀಗ ಮುಗಿದಿಹುದು. ಈ ನಟರು,
ಮೊದಲೆ ಹೇಳಿದ ಹಾಗೆ, ಬರಿ ಗಾಳಿಗೊಂಬೆಗಳು;
ಕರಗಿ ಹೋದರು ತೆಳ್ಪು ಗಾಳಿಯೊಳತೆಳ್ಪಾಗಿ;
ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್
ಉನ್ನತ ಸ್ತಂಭಗಳ್, ಭವ್ಯ ಪ್ರಾಕಾರಗಳ್
ದಿವ್ಯಗೋಪುರಗಳ್, ಅಷ್ಟೇಕೆ ಈ ನೆಲವನೆಯೆ
ತನ್ನೆಲ್ಲ ಸಿರಿಗೂಡಿ ಇಗೊ ಕರಗಲಿಹುದಿನ್ನು,
ಗುರುತೊಂದನುಳಿಸದೆಲೆ ಕರಗಿದೀ ಯಕ್ಷಕಿ-
ನ್ನರಲೋಕದಂತೆವೋಲ್. ಕನಸಿನಂತೆನಿಸುವೀ
ಆಳಬಾಳ್ ಅತಿ ಕಿರಿದು, ಸುತ್ತುವರಿದಿದೆ ದೀರ್ಘ
ನಿದ್ರಾ ಸುಷುಪ್ತಿಯೊಳ್ 
:
- ೦೯/೧೦/೨೦೧೮
:
ಮೂಲ:
Our revels now are ended
:
Our revels now are ended. These our actors,
As I foretold you, were all spirits and
Are melted into air, into thin air:
And, like the baseless fabric of this vision,
The cloud-capp'd towers, the gorgeous palaces,
The solemn temples, the great globe itself,
Yea, all which it inherit, shall dissolve
And, like this insubstantial pageant faded,
Leave not a rack behind. We are such stuff
As dreams are made on, and our little life
Is rounded with a sleep.
:
ಕೆಲವು ಟಿಪ್ಪಣಿಗಳು:

ಗಾಳಿಗೊಂಬೆಗಳು
ಮೂಲದಲ್ಲಿ "spirits" ಎಂಬ ಪದವಿದೆ.  ಇದಕ್ಕೆ ಸೂಕ್ಷ್ಮರೂಪ, ಚೇತನ, ಶಕ್ತಿ, ಹೀಗೆ ಹಲವು ರೀತಿ ಅನುವಾದ ಮಾಡಬಹುದು.  ಆದರೆ ಇಲ್ಲಿ ಅವುಗಳನ್ನು ನಿರ್ದೇಶಿಸಿ Melted into air ಎನ್ನುತ್ತಾನೆ ಕವಿ.  ಅದನ್ನೇ ಮುಂದೆ ಸೂಚಿಸಲು dissolve ಎಂಬ ಪದವನ್ನು ಬಳಸುವುದನ್ನೂ ಗಮನಿಸಬಹುದು. ಹೀಗೆ ಕರಗಿಹೋಗಬೇಕಾದರೆ ಅವು ಕೇವಲ ಕಣ್ಣಿಗೆ ಕಾಣದ ಶಕ್ತಿ/ಚೇತನದಂತಲ್ಲದೇ ಸ್ಪಷ್ಟವಾಗಿ ಕಣ್ಣಿಗೆ ಕಾಣುವ ರೂಪ ಧರಿಸಿರಬೇಕಷ್ಟೇ.  ಇಲ್ಲಿರುವ ಜನ, ಬೆಟ್ಟಗುಡ್ಡ, ಅರಮನೆ, ದೇವಾಲಯ ಎಲ್ಲವೂ ಪ್ರಾಸ್ಪರನ ಮಾಯಾಸೃಷ್ಟಿ.  ಅವು ಕೇವಲ ಗಾಳಿಯಲ್ಲಿ ಕಾಣುವ ಚಿತ್ರಗಳಲ್ಲ, ಸತ್ಯವೇನೋ ಎಂಬಂತೆ ಭಾಸವಾಗುವ ಸ್ಪಷ್ಟವಾದ ರೂಹುಗಳು.  ಆದರೆ ಸತ್ಯವಲ್ಲ.  ಅವು ಮಾಯಾಬಲದಿಂದ ಕಣ್ಣಿಗೆ ಕಾಣುವ ರೂಪ ಧರಿಸಿದ್ದುವು - ಆದ್ದರಿಂದ ಅವುಗಳನ್ನು ಗಾಳಿಗೊಂಬೆಗಳೆಂದು ಅನುವಾದಿಸಲಾಗಿದೆ.

ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್
ಮೂಲದಲ್ಲಿ "baseless fabric of this vision"  ಎಂದಿದೆ.  vision ಎಂದರೆ ಸ್ವಪ್ನದಂತಹ ಕಾಣ್ಕೆ.  ನೋಡಲು ಸತ್ಯವೆಂಬಂತೆಯೇ ಇರುತ್ತದೆ, ಆದರೆ ಅದು ಮಾಯೆ.  ಕೇವಲ ಮಾಯೆಯೆಂದು ಅನುವಾದಿಸಿದರೂ ಸಾಕು, ಆದರೆ ಈ ಸಂದರ್ಭದಲ್ಲಿ, ಪ್ರಾಸ್ಪರೋ ಒಂದು ಮಾಯದಾಟದ ಪ್ರದರ್ಶನವನ್ನೇ ನೀಡುತ್ತಿದ್ದಾನೆ, ಆದ್ದರಿಂದ vision ಎಂಬುದು "ಮಾಯದಾಟ" ಎಂದು ತರ್ಜುಮೆಯಾಯಿತು.  ಇನ್ನು baseless ಎಂಬುದು ಹಲವು ಅರ್ಥಚ್ಛಾಯೆಗಳನ್ನೊಳಗೊಂಡಿದೆ.  ಇಲ್ಲಿ ಕಾಣುತ್ತಿರುವ ಯಾವುದಕ್ಕೂ ಬುಡವಿಲ್ಲ ಎಂದು ಅರ್ಥೈಸಬಹುದಾದರೂ, ಇಲ್ಲಿ ಕಾಣುತ್ತಿರುವುದೆಲ್ಲವೂ ನಿರಾಧಾರ, ಗಟ್ಟಿಯಾದ ವಸ್ತುವಿಲ್ಲ, ಕೇವಲ ರೂಹುಗಳಷ್ಟೇ ಎಂಬುದು ಕವಿಯ ಭಾವ - insubstantial (ಹುರುಳಿಲ್ಲದ, ಅವಾಸ್ತವ) ಎಂಬ ಪದವನ್ನು ಕವಿಯೇ ಮುಂದೆ ಬಳಸುತ್ತಾನೆ.  ಒಟ್ಟಿನಲ್ಲಿ ಇಲ್ಲಿ ಕಾಣುತ್ತಿರುವ ಕತೆ ಕೇವಲ ಕಂಡು ಮರೆಯಾಗುವ ದೃಶ್ಯಾವಳಿಗಳ ನೆಯ್ಗೆ.  ಅದಕ್ಕೇ ನೆಯ್ಗೆಯ ಪರಿಭಾಷೆಯ ಹಾಸುಹೊಕ್ಕು ಎಂಬ ಪದವನ್ನು ಬಳಸಿದ್ದೇನೆ.  ಬಟ್ಟೆಯನ್ನು ನೇಯುವಾಗ ದಾರಗಳು ಉದ್ದುದ್ದಕ್ಕೆ, ಅಡ್ಡಡ್ಡಕ್ಕೆ ಒಂದರೊಳಗೊಂದು ಹೆಣೆದುಕೊಳ್ಳುತ್ತವೆ.  ಒಂದು ಹಾಸು, ಮತ್ತೊಂದು ಹೊಕ್ಕು.  ಅವೆರಡರ ಬಿಗಿಯಾದ ಬಂಧ ನಮಗೆ ಬಟ್ಟೆಯನ್ನು ನೀಡುತ್ತದೆ.  ಆದರೆ ಹಾಸಿಲ್ಲದ ಹೊಕ್ಕೋ, ಹೊಕ್ಕಿಲ್ಲದ ಹಾಸೋ ಕೇವಲ ದಾರದ ಜೊಂಪೆಯನ್ನಷ್ಟೇ ನೀಡಬಲ್ಲುದು, ಅದೂ ಕೈಯಲ್ಲಿ ನಿಲ್ಲುವುದಲ್ಲ.  ಈ ಮಾಯದಾಟದ ದೃಶ್ಯಾವಳಿಗಳೂ ಹಾಗೆಯೇ, ಬುಡವಿಲ್ಲದ್ದು.  ಅದಕ್ಕೇ "ಹಾಸಿರದ ಹೊಕ್ಕೆನಿಸುವೀ ಮಾಯದಾಟದೊಲ್"

ಈ ನೆಲವನೆಯೆ
ನೆಲವನೆ = ನೆಲ+ಮನೆ, ನಮ್ಮೆಲ್ಲರ ಮನೆಯಾದ ಈ ನೆಲವೇ (ಭೂಮಿಯೇ) ಕರಗಲಿದೆ ಎನ್ನುವುದು ಭಾವ. ಇಂಗ್ಲಿಷಿನ ಮೂಲದಲ್ಲಿ "the great globe itself" ಎಂದಿದೆ. ಇದನ್ನು ಭೂಮಿ, ಭೂಗೋಳ, ಭುವನ, ಪ್ರಪಂಚ ಎಂದು ಸುಲಭವಾಗಿ ಅನುವಾದಿಸಬಹುದು, ಆದರೆ ಅಲ್ಲೊಂದು ಸೂಕ್ಷ್ಮವಿದೆ. ಕವಿಯು ಪ್ರಪಂಚ ಎನ್ನುವುದಕ್ಕೆ ಅನೇಕ ಪದಗಳನ್ನು ಬಳಸಬಹುದಿತ್ತು ಆದರೆ "the great globe" ಎಂದೇ ಹೇಳುವುದರಲ್ಲಿ ಇನ್ನೊಂದು ಸಾರ್ಥಕತೆಯಿದೆ - The Globe ಎನ್ನುವುದು ಆ ನಾಟಕ ಪ್ರದರ್ಶಿತವಾಗುತ್ತಿದ್ದ ರಂಗಮಂದಿರವೂ ಹೌದು. The Globeನ ರಂಗಭೂಮಿಯ ಮೇಲೆ ನಿಂತುಕೊಂಡು ಪ್ರಾಸ್ಪರೋ "the great globe itself, Yea, all which it inherit, shall dissolve" ಎಂದು ನುಡಿಯುವ ಸಂದರ್ಭವನ್ನು ಊಹಿಸಿಕೊಳ್ಳಿ - ಅದು ಸಮಯಸ್ಫೂರ್ತಿಯಿಂದ ಬಂದ ಸಾಲು. ಕವಿಯ ಉದ್ದೇಶ "ಈ ಪ್ರಪಂಚ" ಎಂದು ಹೇಳುವುದೇ ಆದರೂ ಅಲ್ಲಿ ಕುಳಿತು ನೋಡುವ ಪ್ರೇಕ್ಷರಿಗೆ ಪ್ರಪಂಚದೊಂದಿಗೆ ತಾವು ಕುಳಿತು ವೀಕ್ಷಿಸುತ್ತಿರುವ ಗ್ಲೋಬ್ ನಾಟಕಮಂದಿರವೂ ಮನಸ್ಸಿಗೆ ಬರಬೇಕು. ಅದೇನೇ ಇರಲಿ, ಅದನ್ನು ಕನ್ನಡಕ್ಕೆ ಅದರ ಎರಡೂ ಅರ್ಥಗಳೊಂದಿಗೆ ಅನುವಾದಿಸುವುದು ಕಷ್ಟ. ಅದಕ್ಕೇ ಇರಬೇಕು, ಕುವೆಂಪು, ಎ ಎನ್ ಮೂರ್ತಿರಾಯರೂ ಸೇರಿದಂತೆ ಅನೇಕ ಅನುವಾದಕರು ಈ ಎರಡನೆಯ ಸೂಕ್ಷ್ಮಾರ್ಥವನ್ನು ಅನುವಾದದಿಂದ ಕೈಬಿಟ್ಟಿದ್ದಾರೆ.  ನಾನು, ಈ ಎರಡನೆಯ ಅರ್ಥವನ್ನು ತರಲಾಗದಿದ್ದಾರೂ ಅದರ ಛಾಯೆಯಾದರೂ ಬರಲಿ ಎಂದು ನೆಲವನೆ (ನೆಲ+ಮನೆ), ನಮ್ಮ ಮನೆಯಾಗಿರುವ ಈ ನೆಲ, ಭೂಮಿ, ಪ್ರಪಂಚ ಎಂಬರ್ಥ ಬರುವಂತೆ ಅನುವಾದಿಸಿದೆ. ಅಲ್ಲಿ ಮನೆ ಎಂಬ ಪದ ನೀವೀಗ ಕುಳಿತು ನಾಟಕ ನೋಡುತ್ತಿರುವ ರಂಗಮಂದಿರವೂ ಆಗಬೇಕು, ಉಳಿದದ್ದನ್ನು ಅವನ ನಟನೆ ತೋರಿಸಬೇಕು - ಅನುವಾದಕನ ಅಲ್ಪತೃಪ್ತಿ :)

ಯಕ್ಷಕಿನ್ನರಲೋಕದಂತೆವೋಲ್
ಮೂಲದಲ್ಲಿ "like this insubstantial pageant" ಎಂದಿದೆ.  insubstantial ಎಂದರೆ substance (ವಸ್ತು) ಇಲ್ಲದ, ಭೌತಿಕ ಅಸ್ತಿತ್ವವಿಲ್ಲದ, ಕೇವಲ ರೂಪಮಾತ್ರದ ಎಂದರ್ಥ.  ಪ್ರಾಸ್ಪರೋ ಇಲ್ಲಿ ಸೃಷ್ಟಿಸಿರುವ ಪ್ರದರ್ಶನ (pageant) ಒಂದು ಮಾಯಾಸೃಷ್ಟಿ, ಭೌತಿಕ ಅಸ್ತಿತ್ವವಿಲ್ಲದ್ದು.  ತನ್ನ ಮಾಯಾಶಕ್ತಿಯಿಂದ ಒಂದು ಕಿನ್ನರಲೋಕವನ್ನೇ ಸೃಷ್ಟಿಸಿದ್ದಾನೆ ಪ್ರಾಸ್ಪರೋ.  ಆದ್ದರಿಂದ ಇದು "ಯಕ್ಷಕಿನ್ನರಲೋಕ" (ನೋಡಿ: An unsubstantial faery place = ಅಲೌಕಿಕವಾದ ಯಕ್ಷ ಕಿನ್ನರ ಲೋಕ - "To the Cucoo" by William Wordsworth)

Thursday, May 2, 2019

ಬೈದು ಬೈದೇ ಹೃದಯದಲ್ಲಿ ಮನೆಮಾಡಿದ ಕಲ್ಚರ್ಡ್ ಕಮೆಡಿಯನ್

























"ಈ ಊರಲ್ಲಿ, ಸಾವ್ಕಾರ್ರ್ ಮನೆ ಎಷ್ಟದಾವೆ...?"

"ಅಗೋ... ಅಲ್ ಕಾಣ್ತಾದಲ್ಲ, ಆ ಬೀದಿ..."

"ಹೂ, ಅದೇ ಬೀದಿ? ನಾವ್ ಬಂದಿದ್ದು..."

"ಅದೇ ಬೀದೀಲ್ ಬಂದ್ರೇನು?... ಆ ಬೀದೀಲಿರೋರೆಲ್ಲಾ ಸಾವ್ಕಾರ್ರೇ ವೋಗತ್ಲಾಗೆ..."

"ಮತ್ತೆ, ಆ ಬೀದೀಗೆ ಪುರುಂದರದಾಸರ ಬೀದಿ ಅಂತ ಹೆಸ್ರಿಟ್ಟಿದಾರೆ..."

"ನಿನ್ ಹೆಣಾ, ಅಯೋಗ್ಯ್ **ಮಗ್ನೇ... ಆ ಬೀದೀಲಿ ಈವಾಗಿರೋ ಶ್ರೀಮಂತ್ರೆಲ್ಲಾ ಬೀದೀಗ್ ಬಂದಾಗ, ದಾಸ್ರು ಬಂದ್ಹಾಂಗ್ ಬಂದ್ರು... ಆಮೇಲೆ ಅದೇನ್ ಮಾಡಿದ್ರೋ ಯೆಂಗ್ ಮಾಡಿದ್ರೋ, ಅಂತ್ಕೂ ಎಲ್ಲಾ ಶ್ರೀಮಂತ್ರಾಗಿ ಮಾಡೀಮೇಲೆ ಮಾಡಿ ಕಟ್ಟಿಸ್ಕೊಂಡು, ಮಾಡಿ ವಳಕ್ಕೆ... ಅವ್ರ್ ಹೋದ್ರು, ದಾಸರಿಗೆ ಬೀದಿ ತಿರ್ಗಾಡಾಕ್ ಬಿಟ್ರು"

"ಬೀದಿ ಮಾತ್ರಾ ದಾಸ್ರುದ್ದು, ಮನೆಯೆಲ್ಲಾ ಶ್ರೀಮಂತ್ರುದ್ದು"

****************************************************************************************************
"ಅಲ್ರೀ, ಬಿಕ್ಸಾ ಬೇಡುದ್ರೆ, ಕೆಲ್ಸಾ ಮಾಡ್ಕಂಡ್ ತಿನ್ನೂ ಅಂತೀರ, ಕೆಲ್ಸಾ ಕೇಳುದ್ರೆ ಬಿಕ್ಸಾ ಬೇಡ್ಕಂಡ್ ತಿನ್ನೂ ಅಂತೀರ; ಕೆಲ್ಸಾ ಕೊಡಲ್ಲಾ, ಬಿಕ್ಸಾ ಆಕಲ್ಲ... ಬಡಬಗ್ರು ಹೊಟ್ಗೇನ್ ಮಣ್ ತಿನ್ಬೇಕೇನ್ರೀ?"

*****************************************************************************************************

ಪಶ್ಚಾತ್ತಾಪ ನಾಟಕದ ಈ ಡಯಲಾಗುಗಳಿಂದ ನನಗೆ ಪರಿಚಿತರಾದವರು ಮಾಸ್ಟರ್ ಹಿರಣ್ಣಯ್ಯ. ಕೇಳಿದ ಸುಮಾರು ಮೂವತ್ತು ಮೂವತ್ತೆರಡು ವರ್ಷಗಳ ಮೇಲೂ ಈ ಸಂಭಾಷಣೆಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಕ್ಯಾಸೆಟ್ ರೆಕಾರ್ಡರಿನ ಕಾಲ ಅದು. ಒಂಬತ್ತನೆಯದೋ ಹತ್ತನೆಯದೋ ತರಗತಿ ಓದುತ್ತಿದ್ದೆ. ಈ ಕ್ಯಾಸೆಟ್ ನಾಟಕವನ್ನು ನಾವು ಎಷ್ಟು ಬಾರಿ ಕೇಳಿದ್ದೆವೆಂದರೆ, ಆಗೆಲ್ಲಾ ಇಡೀ ಪಶ್ಚಾತ್ತಾಪ ನಾಟಕ ಬಾಯಿಗೇ ಬರುತ್ತಿತ್ತು.

ಎರಡೇ ದಶಕಗಳ ಹಿಂದೆ, ಸಂಸಾರದ ಜೊತೆ ಮಕ್ಕಳ ಜೊತೆ ಕೂತು ಕೇಳಲು/ನೋಡಲು ತುಸು ಮುಜುಗರವೆನಿಸುವಷ್ಟು ಎಗ್ಗುಸಿಗ್ಗಿಲ್ಲದ ಬೈಗಳ ಮಾಸ್ಟರ್ ಹಿರಣ್ಣಯ್ಯ ಸಹ, ಆಮೇಲಾಮೇಲೆ ರಂಗಭೂಮಿ/ಸಿನಿಮಾರಂಗಗಳು ತಳೆದ ಅಸಹ್ಯ ಅವತಾರಗಳ ಹಿನ್ನೆಲೆಯಲ್ಲಿ ಎಷ್ಟೋ ಮೇಲೆನಿಸತೊಡಗಿ, ನಿಜಕ್ಕೂ ನಿಜಕ್ಕೂ ಕಲ್ಚರ್ಡ್ ಕಮೆಡಿಯನ್ ಎನಿಸತೊಡಗಿದ್ದು ಕನ್ನಡ ಕಲಾರಂಗದ ವಿಪರ್ಯಾಸವೇ ಸರಿ. ಆದರೆ ಇವೆಲ್ಲ ತಕರಾರುಗಳಾಚೆಗೂ - ಅನೇಕವೇಳೆ ಏಕತಾನವೆನಿಸುವಷ್ಟು ಬಡಬಡ ಮಾತಿನ ಶೈಲಿಯಲ್ಲೇ - ತಮಗನ್ನಿಸಿದ ಸತ್ಯವನ್ನು ನಿರ್ಭೀತಿಯಿಂದ ಹೇಳುತ್ತಾ, ತಮ್ಮದೇ ರೀತಿಯಲ್ಲಿ ಸಮಾಜದ, ಸರ್ಕಾರಗಳ ಓರೆಕೋರೆಗಳನ್ನು ಕಲಾಮಾಧ್ಯಮದ ಮೂಲಕ ತಿದ್ದುವ ಪ್ರಯತ್ನ ನಡೆಸಿದ ಹಿರಣ್ಣಯ್ಯ ತಮ್ಮ ಆ ದಾರಿಯಲ್ಲಿ ಜನರ ಹೃದಯದಲ್ಲಿ ಒಂದು ವಿಚಿತ್ರ ಪ್ರೀತಿಯನ್ನು ಗಳಿಸಿಕೊಂಡುಬಿಟ್ಟರು. ಇದರಿಂದ ಸರ್ಕಾರ ಸಮಾಜಗಳು ಎಷ್ಟು ಎಚ್ಚೆತ್ತುಕೊಂಡುವೋ, ಆದರೆ ಸರ್ಕಾರವನ್ನೇ ಎದುರುಹಾಕಿಕೊಂಡು ದಕ್ಕಿಸಿಕೊಳ್ಳುವ ಕೆಚ್ಚೆದೆ, ಫ್ರೀಪಾಸುಗಳನ್ನು ನೀಡಿ ಗಣ್ಯ-ಪ್ರಭಾವಿಗಳನ್ನು ಮುಂದಿನ ಸಾಲುಗಳಲ್ಲೇ ಕೂರಿಸಿಕೊಂಡು ಉಗಿದು ಉಪ್ಪುಹಾಕುವ ಭಂಡಧೈರ್ಯದ ಹಿರಣ್ಣಯ್ಯ ಒಂದು ರೀತಿಯಲ್ಲಿ ಜನರ ಹತಾಶೆಯ, ಸಿಟ್ಟಿನ, ಬೇಸರಿಕೆಯ, ಬೈಗಳಿಗೆ ದನಿಯಾದರು, ಬಹುಶಃ ಆ ಕಾರಣಕ್ಕೇ ಜನಕ್ಕೆ ಅಚ್ಚುಮೆಚ್ಚಾದರು. "ಹದಿನಾರ್ ಜೊತೆ ಸೊಲ್ಲಾಪುರದ್ ಚಪ್ಲಿ ಅರಿಯೋವರ್ಗೂ ಹೊಡೆ"ಯುವ ಅವರದೇ ನಾಲಿಗೆಯಲ್ಲಿ "ಎಲೆ ಅಡಿಕೆ ಸುಣ್ಣ ಹೊಗೆಸೊಪ್ಪು ಎಲ್ಲಾ ಹಾಕ್ಕೊಂಡು ಕ್ಯಾಕರಿಸಿ ಅಗಿದು ಉಗಿ"ಯುವ ಮಾತಿನ ಶೈಲಿ ಅದು. "ಮಾಸ್ಟರ್ ಹಿರಣ್ಣಯ್ಯ ಕಣಯ್ಯ, ಹ್ಯಾಗ್ ಬೈತಾನೆ ಗೊತ್ತಾ, ಅಯ್ಯಪ್ಪಾ... ಮಾನವಿದ್ದೋರು ಯಾರಾದ್ರೂ ನೇಣ್ಹಾಕ್ಕೋಬೇಕು ಬಡ್ಡಿಮಗಂದು..." ಎಂಬ ತಮಾಷೆ ತುಂಬಿದ ಮೆಚ್ಚುಗೆಗೆ ಪಾತ್ರರಾದವರು ಹಿರಣ್ಣಯ್ಯ. ಸುಶಿಕ್ಷಿತ ರಂಗಾಸಕ್ತರಿಂದ ಹವ್ಯಾಸೀ ರಂಗಭೂಮಿ ಚಾಲನೆಗೊಂಡು, ಹವ್ಯಾಸೀ ರಂಗಪ್ರಯೋಗಗಳು ಸುಶಿಕ್ಷಿತರ ನಡುವೆ ಜನಪ್ರಿಯಗೊಳ್ಳುತ್ತಾ ವೃತ್ತಿರಂಗಭೂಮಿ ಅಸಾಧ್ಯ ಟೀಕೆಗೆ, ಹೀಗಳಿಕೆಗೆ, ಅಪಹಾಸ್ಯಕ್ಕೆ ಒಳಗಾಗಿ, ಇನ್ನೊಂದೆಡೆ ಸಿನಿಮಾ ಮಾಧ್ಯಮದ ಅಬ್ಬರದಿಂದ ಇಡೀ ವೃತ್ತಿರಂಗಭೂಮಿಯೇ ನಿತ್ರಾಣಗೊಂಡು ನೆಲಕಚ್ಚಿದ್ದ ಕಾಲದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ವಿನೂತನ ಸಾಮಾಜಿಕ ರಾಜಕೀಯ ಪ್ರಯೋಗಗಳಿಂದ ವೃತ್ತಿರಂಗಭೂಮಿಗೆ ಒಂದಷ್ಟು ಜೀವ, ಒಂದಷ್ಟು ಪ್ರಸ್ತುತತೆ ತುಂಬಿದರು. ರಂಗಪ್ರಯೋಗಗಳಿಗಷ್ಟೇ ಸೀಮಿತಗೊಂಡಿದ್ದ ಅನೇಕ ಹಳೆಯ ಹೊಸ ನಾಟಕಗಳನ್ನು ಧ್ವನಿಸುರುಳಿಯ ಮೂಲಕ ಮತ್ತೆ ಜನಪ್ರಿಯಗೊಳಿಸಿದರು.

ಹಿರಣ್ಣಯ್ಯನವರನ್ನು ನೀವು ಇನ್ನಿಷ್ಟೇ ಟೀಕಿಸಬಹುದು, ವಿಮರ್ಶಿಸಬಹುದು, ಆದರೆ ಅವರ ನಾಟಕಗಳನ್ನು ಕೇಳಿ ನೋಡಿ ನಕ್ಕು ಮೆಚ್ಚಿ ಹಗುರಾಗದಿರಲು ಸಾಧ್ಯವೇ ಇಲ್ಲ.

ಇಷ್ಟಾಗಿಯೂ ನರಸಿಂಹಮೂರ್ತಿಗಳು (ಅವರ ಮೂಲನಾಮ), ತಮ್ಮ ಹೆಸರಿನಿಂದಲ್ಲ, ತಮ್ಮ ತಂದೆ ದಿ. ಕೆ ಹಿರಣ್ಣಯ್ಯನವರ ಹೆಸರಿನಿಂದ ತಮ್ಮ ಜನಪ್ರಿಯತೆಯನ್ನು ಕಟ್ಟಿಕೊಂಡದ್ದು, ತಂದೆಯವರ ಕೀರ್ತಿಯನ್ನೂ ಮೀರುವಷ್ಟು ಜನಪ್ರಿಯತೆಯನ್ನು ಸ್ವತಃ ಸಂಪಾದಿಸಿಕೊಂಡ ಮೇಲೂ "ಮಾಸ್ಟರ್ ಹಿರಣ್ಣಯ್ಯ"ನವರಾಗಿಯೇ ಉಳಿದದ್ದು ಕುತೂಹಲಕರ.

ಇಂಥದ್ದೊಂದು ಪ್ರತಿಭೆ ಇಂದು ನಮ್ಮೊಡನಿಲ್ಲವೆಂಬುದು ನೋವಿನ ವಿಷಯ, ವೃತ್ತಿರಂಗಭೂಮಿಯಲ್ಲಿ ಅವರು ಖಾಲಿ ಮಾಡಿ ಹೋದ ಜಾಗ ತುಂಬ ದೊಡ್ಡದು, ತುಂಬಲಾರದ್ದು.

ನಮ್ಮೆಲ್ಲರ ಅಚ್ಚುಮೆಚ್ಚಿನ ಕಲ್ಚರ್ಡ್ ಕಮೆಡಿಯನ್ ಗೆ ವಿದಾಯ

🙏🙏🙏

Saturday, January 19, 2019

ಉಪಮೆಯೆಂಬಿದರಂತೆವೋಲ್...

 

"ಉಪಮೆಯೆಂಬಿದರಂತೆವೋಲ್..." ಏನು? "ಪೆರತೊಂದಲಂಕಾರಮಿಲ್ಲಂ" ಎಂದು ಪೂರ್ಣಗೊಳಿಸೋಣವೇ?  "ಇರ್ಕುಂ ಪಲವುಂ ಅಲಂಕಾರಂಗಳ್" ಎನ್ನೋಣವೇ?

ಇದು ಅಲಂಕಾರವಿಷಯಕವಾದ ಲೇಖನವೇನೋ ಹೌದು, ಆದರೆ ಹೊಸದೇನಿಲ್ಲವೆಂದು ಸ್ಪಷ್ಟಪಡಿಸಿಬಿಡುತ್ತೇನೆ.  ಕಾವ್ಯಾಲಂಕಾರಗಳ ಅತಿಪ್ರಾಥಮಿಕ ಪರಿಚಯವುಳ್ಳವರೂ ಕೊನೆಯ ಪಕ್ಷ ಕೇಳಿಯೇ ಇರಬಹುದಾದ ಅಲಂಕಾರ, ಉಪಮಾಲಂಕಾರ.  ಈ ಅತಿಪರಿಚಯದ ಕಾರಣದಿಂದಲೇ (ಅಥವಾ ಇತರ ಅಲಂಕಾರಗಳ ಅತ್ಯಲ್ಪ ಪರಿಚಯದ ಕಾರಣದಿಂದಲೇ) ಉಪಮಾಲಂಕಾರವು ತಪ್ಪಾಗಿ ಗುರುತಿಸಲ್ಪಡುವುದೂ, ಇತರ ಅಲಂಕಾರಗಳು ಅದಾವುದೋ ದೂರದ ಸಾದೃಶ್ಯದಿಂದ ಉಪಮೆಯೆಂದು ಗುರುತಿಸಲ್ಪಡುವುದೂ ಸಾಮಾನ್ಯರಲ್ಲಿ ಸಾಮಾನ್ಯ.  ಆ ಗೊಂದಲವನ್ನು ನಿವಾರಿಸುವುದಷ್ಟೇ ಈ ಲೇಖನದ ಗುರಿ.  ಈ ಲೇಖನದ ಸಂದರ್ಭವೆಂದರೆ ’ವಾಗರ್ಥ’ದಲ್ಲಿ ಬಂದ ಒಂದು ಪ್ರಶ್ನೆ - "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಇಲ್ಲಿರುವ ಅಲಂಕಾರ ಯಾವುದೆಂಬುದು ಪ್ರಶ್ನೆ.  ಪಂಪಭಾರತದ ದ್ವಿತೀಯಾಶ್ವಾಸದಲ್ಲಿ ಬರುವ ಈ ಸಾಲಿನಲ್ಲಿ (ಅರ್ಥದ ಹರಿವಿನಲ್ಲಿ ಸ್ವಲ್ಪ ಶೈಥಿಲ್ಯವಿದೆ, ಆದರೆ ಅದು ಆ ಸಂದರ್ಭಕ್ಕೆ ತಕ್ಕಂತೆಯೇ ಇದೆ, ಅದನ್ನು ಮುಂದೆ ವಿವರಿಸುತ್ತೇನೆ) "ನೊಳವಿಂಗೆ ಕುಪ್ಪೆ ವರಂ" ಎಂಬ ಲೋಕೋಕ್ತಿಯನ್ನು ಆಧರಿಸಿದ ಈ ಮಾತು, ಲೋಕೋಕ್ತ್ಯಲಂಕಾರವೆಂದು ಗುರುತಿಸಲ್ಪಡುತ್ತದೆ.  ಆದರೆ ಚರ್ಚೆಯಲ್ಲಿ ಇದನ್ನು ನೋಡಿದವರಲ್ಲಿ ಬಹುತೇಕ ಎಲ್ಲರೂ ಇದನ್ನು ಉಪಮಾಲಂಕಾರವೆಂದೇ ಭಾವಿಸಿದ್ದು ಕಂಡುಬಂದಿತು - ಇಲ್ಲಿ "ವೊಲ್" ಎಂಬ ’ಉಪಮಾವಾಚಕ’ ಬಂದಿದೆಯೆಂಬ ಕಾರಣಕ್ಕೆ.  ಈ ಗೊಂದಲದ ನಿವಾರಣೆಗಾಗಿ ಅಲ್ಲಿ ಬರೆದದ್ದನ್ನು ಮತ್ತೆ ಪರಿಷ್ಕರಿಸಿ ಇಲ್ಲಿ ಲೇಖನರೂಪದಲ್ಲಿ ಕೊಡುತ್ತಿದ್ದೇನೆ.

ಉಪಮಾನ ಉಪಮೇಯ ಉಪಮಾವಾಚಕ ಮತ್ತು ಸಮಾನಧರ್ಮಗಳು ಉಪಮಾಲಂಕಾರದ ಮುಖ್ಯಲಕ್ಷಣಗಳೆಂಬುದೇನೋ ನಿಜ, ಆದರೆ ಅಂತೆ/ವೋಲ್/ತೆರದಿ ಎಂದು ಬಂದದ್ದೆಲ್ಲಾ ಉಪಮಾಲಂಕಾರವಾಗುವುದಿಲ್ಲ, ಏಕೆಂದರೆ ಅಲಂಕಾರವು ಅರ್ಥಾನುಸಾರಿಯಾದದ್ದು, ಸಂದರ್ಭಾನುಸಾರಿಯಾದದ್ದು, ಮತ್ತು ಒಂದಷ್ಟು ಕಲ್ಪನೆಗೂ ಕೆಲಸ ಕೊಡುವಂಥದ್ದು (ಸ್ವಾರಸ್ಯವೇ ಇಲ್ಲದ, ಕಲ್ಪನೆಗೆ ಅವಕಾಶವೇ ಇಲ್ಲದ ನೇರ ’ವಾಸ್ತವ’ವಾದರೆ ಅಂತೆ/ವೋಲ್/ತೆರದಿ ಇದ್ದಾಗ್ಯೂ ಅವು ಅಲಂಕಾರವೇ ಆಗದೆಯೂ ಇರಬಹುದು).  ಜೊತೆಗೆ ಅಂತೆ/ವೋಲ್ ಎಂಬುದನ್ನು ಎರಡು ವಸ್ತು/ವಿಷಯಗಳ ಹೋಲಿಕೆಗಷ್ಟೇ ಬಳಸುವುದಿಲ್ಲ, ಎರಡು ಕ್ರಿಯೆಗಳು, ಎರಡು ಸನ್ನಿವೇಶಗಳು, ದೃಷ್ಟಾಂತ, ಗಾದೆ ಮೊದಲಾದ ಹಲವು ಕಡೆ ಬಳಸುತ್ತೇವೆ, ಆದರೆ ಅವೆಲ್ಲವೂ ಉಪಮೆಯಾಗುವುದಿಲ್ಲ, ಬೇರೆಬೇರೆ ಅಲಂಕಾರಗಳಾಗುತ್ತವೆ.  ಮತ್ತು ಉಪಮೆಗೆ ಅಂತೆ/ವೋಲ್ ಬರಲೇಬೇಕೆಂದೂ ಇಲ್ಲ, ಅದಿಲ್ಲದೆಯೂ ಉಪಮಾಲಂಕಾರಯುಕ್ತ ವಾಕ್ಯಗಳು ಸಾಧ್ಯ.  ಇವುಗಳನ್ನೊಂದಷ್ಟನ್ನು ಈ ಲೇಖನದಲ್ಲಿ ನೋಡಬಹುದು.  ಅಲಂಕಾರಗಳು ವ್ಯಾಕರಣವಿಷಯದಂತೆ ನಿಸ್ಸಂದಿಗ್ಧವಾದುವಲ್ಲ, ಸುಮಾರು ನೂರು-ನೂರಿಪ್ಪತ್ತು ಅಲಂಕಾರಗಳನ್ನೂ, ಒಂದೊಂದರಲ್ಲೂ ಹಲವು ಉಪಪ್ರಭೇದಗಳನ್ನೂ ಲಾಕ್ಷಣಿಕರು ಗುರುತಿಸುತ್ತಾರೆ, ವ್ಯತ್ಯಾಸಗಳು ಬಹು ಸೂಕ್ಷ್ಮ - ಒಂದೇ ಸನ್ನಿವೇಶದಲ್ಲಿ ಇಬ್ಬರು ಲಾಕ್ಷಣಿಕರಿಗೆ ಬೇರೆಬೇರೆ ಸೂಕ್ಷ್ಮಗಳು ಗೋಚರಿಸಿದರೆ, ಮತ್ತು ಅವರದನ್ನು ಬೇರೆ ಬೇರೆಯಾಗಿ ನಿರ್ದೇಶಿಸಿದರೆ ಅಚ್ಚರಿಯೇನಲ್ಲ, ಆದ್ದರಿಂದ ಅಲಂಕಾರಗಳ ವಿಷಯದಲ್ಲಿ ಇದಮಿತ್ಥಂ ಎನ್ನುವಂತೆ ಹೇಳುವುದು ಕಷ್ಟ - ಹೀಗಾಗಿ ಸ್ಥೂಲವಾಗಿ, ಈ ಮೇಲಿನ ಸಂದರ್ಭಕ್ಕೆ ಪ್ರಸ್ತುತವೆನಿಸುವಷ್ಟನ್ನು ಮಾತ್ರ ವಿವರಿಸಲೆತ್ನಿಸುತ್ತೇನೆ.

ಉಪಮೆಯ ಮುಖ್ಯ ಲಕ್ಷಣವೇನು?  ಒಂದು ಉಪಮಾನವಿರಬೇಕು (ಯಾವುದಕ್ಕೆ ಹೋಲಿಸುತ್ತೇವೋ ಅದು, ಪ್ರಸಿದ್ಧವಸ್ತು), ಒಂದು ಉಪಮೇಯ (ವರ್ಣಿಸಲ್ಪಡುತ್ತಿರುವ, ಹೋಲಿಸಲ್ಪಡುವ, ಪ್ರಸ್ತುತವಸ್ತು), ಉಪಮಾವಾಚಕ (ಅಂತೆ/ವೋಲ್/ತೆರದಿ ಇತ್ಯಾದಿ) ಮತ್ತು ಸಮಾನಧರ್ಮ (ಉಪಮಾನ ಮತ್ತು ಉಪಮೇಯ ಎರಡರ ನಡುವಿನ ಸಮಾನಧರ್ಮ).  ಉದಾಹರಣೆಗೆ "ಮಗುವಿನ ಪಾದವು ಗುಲಾಬಿಯ ದಳದಂತೆ ಕೆಂಪಗಿದೆ" ಎನ್ನುವುದನ್ನು ನೋಡಿ.  ಇಲ್ಲಿ ಗುಲಾಬಿಯ ದಳವು ಪ್ರಸಿದ್ಧವಸ್ತು, ಹೋಲಿಕೆಗೆ ಬಳಸಿದ್ದು, ಉಪಮಾನ.  ಮಗುವಿನ ಪಾದ ವರ್ಣಿಸಲ್ಪಡುತ್ತಿರುವ ಪ್ರಸ್ತುತವಸ್ತು, ಉಪಮೇಯ.  "ಅಂತೆ" ಎನ್ನುವುದು ಉಪಮಾವಾಚಕ, ಮತ್ತು ಕೆಂಪು ಎರಡೂ ವಸ್ತುಗಳಲ್ಲಿರುವ ಸಮಾನಧರ್ಮ.  ಇದು ಉಪಮಾಲಂಕಾರ.  ಇಲ್ಲಿ ಮಗುವಿನ ಪಾದದ ಕೆಂಪನ್ನು ಗುಲಾಬಿ ದಳದ ಕೆಂಪಿಗೆ ಹೋಲಿಸಲಾಗಿದೆ.  ಇದು ಕೇವಲ ಹೋಲಿಕೆಯೇ ಹೊರತು ತದ್ವತ್ ಅದೇ ಅಲ್ಲ.  ಗುಲಾಬಿ ದಳದ ಕೆಂಪು ಹಲವು ಛಾಯೆಗಳಲ್ಲಿರಬಹುದು, ಹಾಗೆಯೇ ಮಗುವಿನ ಪಾದದ ಕೆಂಪೂ.  ಈ ಎರಡರ ನಡುವಣ ವ್ಯತ್ಯಾಸವನ್ನು ನಮ್ಮ ಕಲ್ಪನೆ ತುಂಬುತ್ತದೆ - ಕೆಲವೊಮ್ಮೆ ಇದು ಸುಳ್ಳುಸುಳ್ಳೇ ಹೋಲಿಕೆಯೂ ಇರಬಹುದು, ಆದರೆ ಕವಿಯ ಕಲ್ಪನೆಯಲ್ಲಿ ಇದು ನಿಜ.  ಇದು ಅಲಂಕಾರದ ಕೆಲಸ.  ಬದಲಿಗೆ, "ಅವನ ರಕ್ತದಂತೆಯೇ ನನ್ನ ರಕ್ತವೂ ಕೆಂಪಗಿದೆ" ಎನ್ನುವ ಮಾತನ್ನು ನೋಡಿ.  ಇಲ್ಲಿಯೂ "ಅಂತೆ" ಎಂಬ ಉಪಮಾವಾಚಕವನ್ನೂ ಒಳಗೊಂಡು ಉಪಮಾಲಂಕಾರದ ನಾಲ್ಕೂ ಅಂಶಗಳೂ ಇವೆಯಲ್ಲವೇ?.  ಹಾಗಿದ್ದರೆ ಇದನ್ನೂ ಉಪಮಾಲಂಕಾರವೆನ್ನಬಹುದೇ?  ಇಲ್ಲ, ಇದು ಅಲಂಕಾರವೇ ಅಲ್ಲ.  ಏಕೆಂದರೆ ರಕ್ತದ ಬಣ್ಣವು ಕೆಂಪೇ ಎಂಬುದೂ ಇಬ್ಬರ ರಕ್ತದಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಬುದೂ (ಪ್ರಯೋಗಾಲಯದಲ್ಲಿ ಕಂಡುಹಿಡಿಯುವ ವ್ಯತ್ಯಾಸ ಬೇರೆ) ಸರ್ವವಿದಿತ.  ಹೋಲಿಸುತ್ತಿರುವ ಎರಡೂ ವಸ್ತುಗಳೂ ಒಂದೇ ಆದ್ದರಿಂದ ಅಲ್ಲಿ ಹೋಲಿಕೆಗೆ ಅವಕಾಶವೇ ಇಲ್ಲ - ಆದ್ದರಿಂದ ಅದೊಂದು ವಾಸ್ತವಿಕ ಸ್ಥಿತಿಯ ಹೇಳಿಕೆಯಷ್ಟೇ, ಇಲ್ಲಿ ಕವಿಯ/ಸಹ್ರ‍್ದಯನ ಕಲ್ಪನೆಗೆ ಯಾವ ಅವಕಾಶವೂ ಇಲ್ಲ, ಅದೇ "ಸಂಜೆಯ ಸೂರ್ಯ ರಕ್ತದಂತೆ ಕೆಂಪಗಿದ್ದಾನೆ" ಎಂದರೆ?  ಇದೀಗ ಅಲಂಕಾರ, ಏಕೆಂದರೆ ರಕ್ತ ಮತ್ತು ಸೂರ್ಯನ ಕೆಂಪು ಸಮಾನಧರ್ಮ, ಹೌದು, ಆದರೆ ಎರಡೂ ತದ್ವತ್ ಒಂದೇ ಅಲ್ಲ, ಸೂರ್ಯನ ಕೆಂಪು ರಕ್ತವರ್ಣವೂ ಇರಬಹುದು, ಗುಲಾಬಿ ರಂಗಿರಬಹುದು, ಕಿತ್ತಳೆಯ ಬಣ್ಣವೂ ಇರಬಹುದು, ಆದರೆ ಸುಮಾರು ಹತ್ತಿರವೆನ್ನಿಸುವ ಸಾಮ್ಯವಿದೆ, ಆದ್ದರಿಂದ ಹೋಲಿಸಲು ಅವಕಾಶವಿದೆ, ಇದು ಅಲಂಕಾರ, ಉಪಮಾಲಂಕಾರ.  ಇವನು ನಾಯಿಯಂತೆ ಬೊಗಳುತ್ತಾನೆ" ಎನ್ನುವಲ್ಲಿ ಇವನ ಮಾತು ಮತ್ತು ನಾಯಿಯ ಬೊಗಳಿಕೆ ಒಂದೇ ಅಲ್ಲ, ಆದರೆ ಹೋಲಿಕೆಯಿದೆ, ಆದ್ದರಿಂದ ಇದು ಉಪಮಾಲಂಕಾರ. 

ಮೇಲೆ ತೋರಿಸಿದ ಉದಾಹರಣೆಗಳಲ್ಲಿ ಉಪಮಾಲಂಕಾರದ ನಾಲ್ಕೂ ಅಂಶಗಳೂ (ಉಪಮಾನ, ಉಪಮೇಯ, ಉಪಮಾವಾಚಕ ಮತ್ತು ಸಮಾನಧರ್ಮ) ಸ್ಪಷ್ಟವಾಗಿರುವುದರಿಂದ ಇಂಥವನ್ನು ಪೂರ್ಣೋಪಮೆಯೆನ್ನುತ್ತಾರೆ.  ಅಲಂಕಾರವಾದರೂ ಹೀಗೆ ವಾಕ್ಯದ ಎಲ್ಲ ಅಂಶಗಳನ್ನೂ ಬಿಡಿಸಿಬಿಡಿಸಿ ಹೇಳಿದರೆ ಅದು ರುಚಿಸುವುದೇ?  "ಗುಂಡನ ಮುಖ ಇಂಗುತಿಂದ ಮಂಗನ ಮುಖದಂತಾಯಿತು" ಎಂದರೆ ಒಂದಷ್ಟು ನಗೆ ಬರುತ್ತದೆ, ಅದೇ "ಮಂಗವು ಇಂಗನ್ನು ತಿಂದಾಗ ಅದರ ಒಗಚಿಗೆ ಮಂಗವು ಮುಖವನ್ನು ಹುಳ್ಳಗೆ ಕಿವುಚಿಕೊಳ್ಳುತ್ತದೆ.  ಮಂಗದ ಮುಖವೇ ಹಾಸ್ಯಾಸ್ಪದ, ಇನ್ನು ಅದು ಹಾಗೆ ಕಿವುಚಿಕೊಂಡಾಗ ಇನ್ನೆಷ್ಟು ಹಾಸ್ಯಾಸ್ಪದವಿರಬಹುದು; ಗುಂಡನೂ ಮುಖ ಕಿವುಚಿದಾಗ ಅದು ಆ ಇಂಗು ತಿಂದ ಮಂಗನ ಮುಖದಂತೆಯೇ ಹಾಸ್ಯಾಸ್ಪದವಾಯಿತು" ಎಂದು ವಿವರಿಸಿದರೆ ಹೇಗಾದೀತು?  ನಗುವಿನ ಜಾಗೆಯಲ್ಲಿ ಅಳು ಬಂದೀತು.  ಒಂದಷ್ಟು ಹೇಳಿ ಉಳಿದದ್ದನ್ನು ಕೇಳುಗರ ಕಲ್ಪನೆಗೆ ಬಿಡುವುದೇ ಹೆಚ್ಚು ರುಚಿ.  ಉದಾಹರಣೆಗೆ "ಇವಳ ಮುಖ ಚಂದ್ರನಂತೆ ಕಾಂತಿಯುಕ್ತವಾಗಿದೆ" ಎಂದು ಬಿಡಿಸಿಬಿಡಿಸಿ ಹೇಳುವ ಬದಲು "ಇವಳ ಮುಖ ಚಂದ್ರನಂತಿದೆ" ಎಂದು ನೋಡಿ.  ಇವಳು ಮತ್ತು ಚಂದ್ರ ಉಪಮಾನ ಉಪಮೇಯಗಳಾದುವು, ಅಂತೆ ಎಂಬ ಉಪಮಾವಾಚಕವೂ ಬಂತು.  ಆದರೆ ಇವಳ ಮುಖಕ್ಕೂ ಚಂದ್ರನಿಗೂ ಏನು ಸಮಾನಧರ್ಮ?  ಅದು ಈ ವಾಕ್ಯದಲ್ಲಿ ಬಂದಿಲ್ಲ.  ಆದರೆ ಕೇಳುವವರು, ಚಂದ್ರನಲ್ಲಿ ಎದ್ದು ಕಾಣುವ ಲೋಕಪ್ರಸಿದ್ಧವಾದ ಸೌಂದರ್ಯವನ್ನು ಇಲ್ಲಿ ಅರ್ಥೈಸಿಕೊಳ್ಳುತ್ತಾರೆ - ಚಂದ್ರನಂತೆ ಗುಂಡಗಿದೆ, ಚಂದ್ರನಂತೆ ಕಾಂತಿಯುಕ್ತವಾಗಿದೆ, ಚಂದ್ರನಂತೆ ತಂಪಾಗಿದೆ ಇತ್ಯಾದಿ (ಕಿಡಿಗೇಡಿಗಳು "ಚಂದ್ರನಂತೆ ಕಲೆಗಳಿಂದ ತುಂಬಿದೆ, ಮುಳ್ಳುಮುಖ" ಎಂದೂ ಅರ್ಥೈಸಬಹುದು ಎಂಬುದನ್ನು ಗಮನಿಸಿ - "ಈಕೆ ಸಾಕ್ಷಾತ್ ಕೋಗಿಲೆಯೇ" ಎಂದರೆ ಕೋಕಿಲಕಂಠವುಳ್ಳವಳು ಎಂಬುದು ನಾವು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವ ರೀತಿ.  ಆದರೆ ಕೋಗಿಲೆಯ ಬಣ್ಣದವಳು ಎಂದೂ ಆಗಬಹುದಲ್ಲ)  ಹೀಗೆ ಹಲವು ವ್ಯಾಖ್ಯಾನಗಳಿಗೆಡೆಗೊಡುವುದರಿಂದ ಈ ವಾಕ್ಯದ ರುಚಿ ಹೆಚ್ಚು.  ಹೀಗೆ ಸಮಾನಧರ್ಮವನ್ನು ಬಚ್ಚಿಟ್ಟು ಹೇಳಿದಂತೆಯೇ ಉಪಮಾವಾಚಕವನ್ನೂ ಮುಚ್ಚಿಟ್ಟು ಹೇಳಬಹುದು - "ಇವಳ ಮುಖದ್ದು ಚಂದ್ರಕಾಂತಿ".  ಇಲ್ಲಿ ಇವಳ ಮುಖ ಎಂಬ ಉಪಮೇಯವಿದೆ, ಚಂದ್ರ ಎಂಬ ಉಪಮಾನವಿದೆ, ಕಾಂತಿ ಎಂಬ ಸಮಾನಧರ್ಮವಿವೆ, ಆದರೆ "ಅಂತೆ" ಎಂಬ ಉಪಮಾವಾಚಕವೇ ಇಲ್ಲ.  ಉಪಮಾವಾಚಕವಿಲ್ಲದಿದ್ದರೂ ಎರಡು ವಸ್ತುಗಳ ನಡುವಣ ಹೋಲಿಕೆಯಿರುವುದರಿಂದ ಇದು ಉಪಮಾಲಂಕಾರವೇ.  ಹೀಗೆ ಉಪಮಾವಾಕ್ಯದಲ್ಲಿ ಸಮಾನಧರ್ಮವನ್ನೋ, ಉಪಮಾವಾಚಕವನ್ನೋ ಕೈಬಿಟ್ಟು ಹೇಳಿದರೆ ಅಂಥವನ್ನು ಲುಪ್ತೋಪಮೆ ಎನ್ನುತ್ತಾರೆ - ಅದೇನೇ ಇರಲಿ, ಹೋಲಿಕೆಯಿರುವುದು ಮುಖ್ಯ (ಹಾಗೆ ಹೋಲಿಕೆಯನ್ನೇ ಕೈಬಿಟ್ಟು ಎರಡೂ ಒಂದೇ ಎಂಬಂತೆ ಹೇಳಿದರೆ, ಅದು ರೂಪಕಾಲಂಕಾರವಾಗಿಬಿಡುತ್ತದೆ  - ಇವಳದ್ದು ಚಂದರ್ಮುಖ, ಅವನದ್ದು ಕಿನ್ನರಕಂಠ ಇತ್ಯಾದಿ - ಇಲ್ಲಿ ಮುಖವೂ ಚಂದ್ರನೂ ಒಂದೇ ಎಂಬಂತೆ, ಅವನ ದನಿಯೂ ಕಿನ್ನರಧ್ವನಿಯೂ ಒಂದೇ ಎಂಬಂತೆ ಹೇಳಲಾಗಿದೆ).

ಉಪಮಾವಾಚಕವಿದ್ದುದೆಲ್ಲಾ ಅಲಂಕಾರವಾಗಲಾರದೆಂಬುದನ್ನೂ, ಉಪಮಾಲಂಕಾರವೆಂದರೆ ಅಂತೆ/ವೋಲ್ ಇರಲೇಬೇಕೆಂದಿಲ್ಲವೆಂಬುದನ್ನೂ ನೋಡಿದೆವಲ್ಲ.  ಈಗ ಅಂತೆ/ವೋಲ್ ಇದ್ದೂ ಅದು ಉಪಮಾಲಂಕಾರವಾಗದೇ ಬೇರೊಂದು ಅಲಂಕಾರವಾಗಬಹುದೇ ಎಂಬುದನ್ನೂ ನೋಡೋಣ. ಉಪಮಾಲಂಕಾರದಲ್ಲಿ ಹೋಲಿಕೆ ಎರಡು ವಸ್ತು/ಕ್ರಿಯೆ/ವಿಷಯಗಳ ಬಗೆಗಿರುತ್ತದೆ.  ಬದಲಿಗೆ ಆ ಹೋಲಿಕೆ ಯಾವುದೋ ದೃಷ್ಟಾಂತಕ್ಕೋ, ಗಾದೆಗೋ ಇದ್ದರೆ?  ಅಲ್ಲಿ ಹೋಲಿಕೆಯಿದ್ದರೂ ಅದು ಉಪಮಾಲಂಕಾರವಾಗುವುದಿಲ್ಲ ಇನ್ನೇನೋ ಅಲಂಕಾರವಾಗುತ್ತದೆ - ಉದಾಹರಣೆಗೆ "ಈ ವೈಭವವೆಲ್ಲಾ ನೀರ ಮೇಲಣ ಗುಳ್ಳೆಯಂತೆ" ಎನ್ನುವ ಮಾತನ್ನು ಗಮನಿಸಿ.  ಇಲ್ಲಿಯೂ ಉಪಮಾನ ಉಪಮೇಯ ಉಪಮಾವಾಚಕಗಳಿವೆ, ಎರಡರ ನಡುವಣ ಸಮಾನಧರ್ಮವಾದ 'ನಶ್ವರತೆ' ಊಹೆಯಿಂದ ದಕ್ಕುತ್ತದೆ.  ಉಪಮಾವಾಚಕವಾದ "ಅಂತೆ" ಇದೆ, ಸಮಾನಧರ್ಮ ಲೋಪವಾಗಿದೆ, ಆದ್ದರಿಂದ ಇದು ಲುಪ್ತೋಪಮೆ ಎನ್ನಬಹುದೇ?  ಅಲ್ಲ, ಹೋಲಿಕೆ ಎರಡು ವಸ್ತು/ವಿಷಯಗಳ ಬಗೆಗಲ್ಲ, ಬದಲಿಗೆ ಒಂದು ಹೋಲಿಕೆಗೊಳಪಟ್ಟ ವಿಷಯ ಮತ್ತೊಂದು, ಹೋಲಿಸಲು ಬಳಸುತ್ತಿರುವ ಲೋಕಪ್ರಸಿದ್ಧವಾದ ಒಂದು ದೃಷ್ಟಾಂತ - ನೀರಮೇಲಣ ಗುಳ್ಳೆ ಎನ್ನುವುದು ನಮಗೆಲ್ಲರಿಗೂ ತಿಳಿದ ದೃಷ್ಟಾಂತ - ಅದು ಶಾಶ್ವತವಲ್ಲ ಎನ್ನುವುದು ಲೋಕಾನುಭವ.  ನೀರಮೇಲಣ ಗುಳ್ಳೆಯ ದೃಷ್ಟಾಂತವನ್ನು ಬಳಸಿ, ವೈಭವದ ನಶ್ವರತೆಯನ್ನು ತಿಳಿಸಲು ಯತ್ನಿಸುತ್ತಿದೆ ಈ ವಾಕ್ಯ.  ಆದ್ದರಿಂದ ಇದು ದೃಷ್ಟಾಂತಾಲಂಕಾರ.  ಇದೇ ರೀತಿ "ಕನ್ನಡಕ್ಕೆ ಯತಿಯಿಲ್ಲ, ಕೋಣನಿಗೆ ಮತಿಯಿಲ್ಲ", ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಈ ವಾಕ್ಯಗಳನ್ನು ನೋಡಬಹುದು.  ಇಲ್ಲಿ ಕೋಣನಿಗೆ ಮತಿಯಿಲ್ಲದ ಲೋಕಾನುಭವದೊಂದಿಗೆ ಕನ್ನಡಕ್ಕೆ ಯತಿಯಿಲ್ಲದ ಸಂಗತಿಯನ್ನು ಹೋಲಿಸಲಾಗಿದೆ, ಉಪ್ಪಿಗಿಂತ ರುಚಿಯಿಲ್ಲವೆಂಬ ಲೋಕಾನುಭವದೊಂದಿಗೆ ತಾಯಿಗಿಂತ ಬಂಧುವಿಲ್ಲವೆಂಬ ಸಂಗತಿಯನ್ನು ಹೋಲಿಸಲಾಗಿದೆ.  ಎರಡೂ ವಾಕ್ಯಗಳಲ್ಲಿ ಉಪಮೇಯವು ಪ್ರಸಿದ್ಧವಾದ ಒಂದು ದೃಷ್ಟಾಂತವಾಗಿದೆ.

ಹಾಗೆಯೇ ಇಂತಹ ಹೋಲಿಕೆಯು ಸಾರ್ವಜನಿಕವಾಗಿ ಪ್ರಸಿದ್ಧವಾದ ಒಂದು ಗಾದೆ/ಲೋಕೋಕ್ತಿಯೊಡನೆ ಬಂದರೆ ಅದು ಲೋಕೋಕ್ತ್ಯಲಂಕಾರವೆನಿಸುತ್ತದೆ.  ಉದಾಹರಣೆಗೆ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಕ್ಕಿತಂತೆ, ಹಾಗಾಯ್ತು ನಿನ್ನ ಕೆಲಸ" ಎನ್ನುವ ಮಾತನ್ನು ನೋಡಿ.  ಇಲ್ಲಿ ಎದುರಾಳಿಯ ಯಾವುದೋ ಕೆಲಸ (ಆತನಿಗೆ ಸಹಜವಲ್ಲದ ಕೆಲಸ) ನಮ್ಮ ದೃಷ್ಟಿಯಲ್ಲಿದೆ.  ಅದು ಉಪಮೇಯ.  ಅದಕ್ಕೆ ಉಪಮಾನ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಕ್ಕಿತು" ಎನ್ನುವ ಗಾದೆ/ಲೋಕೋಕ್ತಿ.  "ಹಾಗೆ" ಎನ್ನುವ ಉಪಮಾವಾಚಕವೂ, ಅಸಹಜತೆಯ/ಅಕಾಲಿಕತೆಯ ಸಮಾನಧರ್ಮವೂ ಇದೆ.  ಆದರೆ ಇಲ್ಲಿ ಉಪಮಾನವು ಒಂದು ಲೋಕೋಕ್ತಿ(ಗಾದೆ)ಯಾಗಿರುವುದರಿಂದ ಇದು ಲೋಕೋಕ್ತ್ಯಲಂಕಾರ.  ನಮ್ಮ ಉದಾಹರಣೆಯಲ್ಲಿರುವ ವಾಕ್ಯ "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರವೆಂಬಂತೆ) ಎಂಬುದೂ ಒಂದು ಲೋಕಪ್ರಸಿದ್ಧವಾದ ಗಾದೆಯನ್ನು ಹೋಲಿಕೆಗಾಗಿ ತೆಗೆದುಕೊಳ್ಳುವುದರಿಂದ ಇದು ಲೋಕೋಕ್ತ್ಯಲಂಕಾರ (ಈ ಸಾಲಿನ ಇನ್ನೊಂದು ಸ್ವಾರಸ್ಯವನ್ನು ಆನಂತರ ವಿವರಿಸುತ್ತೇನೆ).

ಮೇಲಿನ ಉದಾಹರಣೆಯಲ್ಲಿ ಲೋಕದಲ್ಲಿ ಪ್ರಚಲಿತವಾದ ಗಾದೆಯೊಂದನ್ನು ಬಳಸಿದ್ದರಿಂದ ಅದು ಲೋಕೋಕ್ತ್ಯಲಂಕಾರವಾಯಿತು.  ಅದೇ, ಗಾದೆಯ ಬದಲಿಗೆ ಲೋಕಪ್ರಸಿದ್ಧವಾದ ಯಾವುದಾದರೂ ವಿದ್ಯಮಾನವನ್ನು ಗಾದೆಯಂತೆ ಕವಿ ಬಳಸಿದ್ದಿದ್ದರೆ, ಅದು ಅರ್ಥಾಂತರನ್ಯಾಸಾಲಂಕಾರವಾಗುತ್ತಿತ್ತು.  ಉದಾಹರಣೆಗೆ "ಅಂಥಾ ಸೊಗಸಾದ ಸಂಗೀತ, ಇವನು ಮಾತ್ರ ಹೇಗೆ ಜಪ್ಪೆಂದು ಕೂತಿದ್ದ ಅಂತೀನಿ - ಗುಂಡುಕಲ್ಲು ಎಲ್ಲಾದರೂ ತಲೆದೂಗುತ್ಯೇ?" ಇದು ಅರ್ಥಾಂತರನ್ಯಾಸ.  ಅದೇ "ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ" ಎಂದಿದ್ದರೆ ಅದು ಲೋಕೋಕ್ತ್ಯಲಂಕಾರವಾಗುತ್ತಿತ್ತು.  ಅರ್ಥಾಂತರನ್ಯಾಸಕ್ಕೆ ಇನ್ನೊಂದು ಸೊಗಸಾದ ಉದಾಹರಣೆ ನೀಡಬಹುದು, ನಾಗಚಂದ್ರನ ಪಂಪರಾಮಾಯಣದಲ್ಲಿ ಈ ಸಾಲು ಬರುತ್ತದೆ "ಅನ್ಯಾಂಗನಾಸ್ಮೃಹೆಯಂ ತಾಳ್ದಿದನಲ್ತೆ ಕಾಲವಶದಿಂ ಲಂಕೇಶ್ವರಂ ವಿಸ್ಮಯಾವಹಮಲ್ತು ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ?" (ಲಂಕೇಶ್ವರನು ಕಾಲವಶದಿಂದ ಪರಸ್ತ್ರೀಯಲ್ಲಿ ಮೋಹಿತನಾದನಲ್ಲವೇ?  ಸಮುದ್ರವೂ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದಲ್ಲ ಹಾಗೆ).  ಇಲ್ಲಿ ರಾವಣನು ಸಮುದ್ರದಂಥವನು, ಗಂಭೀರ, ತನ್ನ ಮಿತಿಯನ್ನು ಮೀರದವನು, ಪರಸ್ತ್ರೀಯರ ಕಡೆಗೆ ಕಣ್ಣೆತ್ತಿಯೂ ನೋಡದವನು.  ರಾವಣನ ಸ್ವಭಾವವು ಉಪಮೇಯ, ಸಮುದ್ರದ ಸ್ವಭಾವವು ಉಪಮಾನ.  ಆದರೆ ಸಮುದ್ರ ಕೆಲವೊಮ್ಮೆ ತನ್ನ ಸ್ವಭಾವವನ್ನು ಹೇಗೆ ಮೀರುತ್ತದೆಯೋ ಹಾಗೆಯೇ ರಾವಣನು ತನ್ನ ಸ್ವಭಾವವನ್ನು ಮೀರಿದ್ದಾನೆ (ಅಲ್ಲಿಯೂ ಹೋಲಿಕೆಯನ್ನು ಬಿಟ್ಟುಕೊಟ್ಟಿಲ್ಲ).  ಇಲ್ಲಿ ಸಮುದ್ರಸ್ವಭಾವದ ಲೋಕಪ್ರಸಿದ್ಧ ವಿದ್ಯಮಾನವನ್ನು ರಾವಣಸ್ವಭಾವದ ಚಿತ್ರಣಕ್ಕೆ ಬಳಸಿಕೊಂಡಿರುವುದರಿಂದ ಇದು ಅರ್ಥಾಂತರನ್ಯಾಸ.  ಅನ್ವೀಕ್ಷಿಕೀ ವಿದ್ಯೆಯು ಅವನಿಗೆ ಪರಿಪರಿಯಾಗಿ ಬುದ್ಧಿ ಹೇಳಿದರೂ ಕೇಳದೇ ರಾವಣನು ಈ ಕಾರ್ಯವನ್ನು ಕೈಗೊಂಡನೆನ್ನುತ್ತದೆ ಪದ್ಯ.  ಆದ್ದರಿಂದ ಆ ಸನ್ನಿವೇಶವನ್ನು ವಿವರಿಸಲು ಕವಿ "ಗೋರ್ಕಲ್ಲ ಮೇಲೆ ಮಳೆವೊಯ್ದಂತೆ ಅನ್ವೀಕ್ಷಿಕೆಯ ಬುದ್ಧಿವಾದ ವಿಫಲವಾಯಿತು" ಎನ್ನಬಹುದಿತ್ತು.  ಹಾಗೆಂದಿದ್ದರೆ, ಗೋರ್ಕಲ್ಲ ಮೇಲೆ ಮಳೆವೊಯ್ದಂತೆ ಎಂಬ ಗಾದೆಯನ್ನು ಬಳಸಿದ್ದರಿಂದ ಅದು ಲೋಕೋಕ್ತ್ಯಲಂಕಾರವಾಗುತ್ತಿತ್ತೇ? "ಗೋರ್ಕಲ್ಲ ಮೇಲೆ ಮಳೆ ಸುರಿದಂತೆ" ಎನ್ನುವುದು ಸರ್ವಜ್ಞನ ಮಾತು, ನಾಗಚಂದ್ರನ ಕಾಲಕ್ಕೆ ಆ ಲೋಕೋಕ್ತಿಯಿತ್ತೋ ಇರಲಿಲ್ಲವೋ ತಿಳಿಯದು.  ಆದ್ದರಿಂದ ಒಂದುವೇಳೆ ನಾಗಚಂದ್ರನು ಅದನ್ನು ತಾನಾಗೆಯೇ ಬಳಸಿದ್ದರೂ ಅದು ಅರ್ಥಾಂತರನ್ಯಾಸವಾಗಿಯೇ ಉಳಿಯುತ್ತಿತ್ತೇನೋ, ಸರ್ವಜ್ಞನಲ್ಲಿಯೂ ಅದು ಅರ್ಥಾಂತರನ್ಯಾಸವೇ.  ಅದೇ ವಾಕ್ಯವನ್ನು ಈಗ ನಾನು ಬಳಸಿದರೆ, ಅದು ಲೋಕೋಕ್ತ್ಯಲಂಕಾರವಾಗುತ್ತದೆ, ಏಕೆಂದರೆ ಸಧ್ಯಕ್ಕೆ ಅದೊಂದು ಗಾದೆಯಾಗಿಯೇ ಪ್ರಸಿದ್ಧವಾಗಿದೆ.

ಇದಿಷ್ಟು ಅಲಂಕಾರದ ವಿಷಯವಾಯಿತು.  ಈಗ ನಮ್ಮ ಉದಾಹರಣೆಯ ಸಾಲಿನಲ್ಲೊಂದು ಸ್ವಾರಸ್ಯವಿದೆಯೆಂದೆನಲ್ಲ, ಅದಕ್ಕೆ ಮರಳೋಣ.  ಇದು ಪಂಪಭಾರತದ ದ್ವಿತೀಯಾಶ್ವಾಸದ್ದು.  ಪೂರ್ಣಪದ್ಯ ಇಲ್ಲಿದೆ:

ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
ದಳವೊಡನೋದಿದೊಂದು ಬೆರಗಿಂಗೆ ಕೊಲಲ್ಕೆನಗಾಗದೀ ಸಭಾ
ವಳಯದೊಳೆನ್ನನೇಱಿಸಿದ ನಿನ್ನನನಾಕುಳಮೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ

ಇದು, ದ್ರುಪದನಿಂದ ಅಪಮಾನಿತನಾದ ದ್ರೋಣನು ರೋಷದಿಂದ ನುಡಿಯುವ ಮಾತು.  "ಖಳನೇ, ನೊಣಕ್ಕೆ ಕುಪ್ಪೆಯೇ ವರವೆಂಬಂತೆ (ನಿನ್ನ ಯೋಗ್ಯತೆಯಾಯ್ತು), ನಿನ್ನ ಅಳವು (ಶಕ್ತಿ) ನನ್ನವರೆಗೂ (ನನ್ನಷ್ಟು) ಉಂಟೋ?  ಒಡನೆ ಓದಿದೆವೆಂಬ ಕಾರಣಕ್ಕೆ ನಿನ್ನನ್ನು ಕೊಲ್ಲಲಿಚ್ಛಿಸುವುದಿಲ್ಲ, ಆದರೆ ಹೀಗೆ ಸಭಾಮಧ್ಯದಲ್ಲಿ ನನ್ನನ್ನು ಅಪಮಾನಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ಕಟ್ಟಿಹಾಕಿಸದಿದ್ದರೆ ನಾನು ಮೀಸೆ ಹೊತ್ತೇನು ಪ್ರಯೋಜನ"  ಇದು ಈ ಪದ್ಯದ ಭಾವಾರ್ಥ.  ಅಲಂಕಾರವಿಷಯಕವಾಗಿ ಈ ಸಾಲಿನಲ್ಲಿರುವ ಸ್ವಾರಸ್ಯವನ್ನು ಗಮನಿಸಿ.  "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಇದು ನಮ್ಮ ಅವಗಾಹನೆಗೆ ಬೇಕಾದ ಭಾಗ. ಇಲ್ಲಿ ಎರಡು ಭಾಗಗಳಿವೆ.  ಮೊದಲನೆಯದು "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರ ಎಂಬಂತೆ).  ಇನ್ನೊಂದು ಭಾಗ "ಆಂಬರಮುಂಟೆ ನಿನ್ನದೊಂದಳವು?" (ಆಂಬರಂ = ನನ್ನವರೆಗೂ, ನನ್ನಷ್ಟು, ನನ್ನ ಮಟ್ಟಕ್ಕೆ - ಉಂಟೇ ನಿನ್ನ ಅಳವು (ಶಕ್ತಿ)?).  ಇಲ್ಲಿ ಹೋಲಿಸುತ್ತಿರುವುದು (ಉಪಮೇಯ) ಯಾವುದಕ್ಕೆ? "ನೊಳವಿಂಗೆ ಕುಪ್ಪೆ ವರಂ" (ನೊಣಕ್ಕೆ ಕುಪ್ಪೆಯೇ ವರ) ಎಂಬ ಗಾದೆಗೆ.  ಉಪಮಾವಾಚಕವೂ ಬಂದಿದೆ "ಎಂಬವೊಲ್" (ಎನ್ನುವಂತೆ).  ಸಮಾನಧರ್ಮ (ಕುಪ್ಪೆಯಲ್ಲಿ ವಿವರಿಸುವ ಕೀಳು ಬುದ್ಧಿ), ಇಲ್ಲಿ ಕಾಣಿಸುವುದಿಲ್ಲ, ಹೋಲಿಕೆಯಿಂದ ನಾವೇ ಅರಿಯಬೇಕು.  ಸರಿ, ಆದರೆ ಹೋಲಿಕೆಯಲ್ಲಿ ಮುಖ್ಯ ಭಾಗವಾದ ಉಪಮೇಯ ಎಲ್ಲಿ? ಮುಂದಿನ ಭಾಗವನ್ನು ಉಪಮೇಯವೆನ್ನಲಾಗುವುದಿಲ್ಲ - ನೊಣಕ್ಕೆ ಕುಪ್ಪೆಯೇ ವರ ಎಂಬ ಮಾತಿಗೂ, ನಿನ್ನ ಶಕ್ತಿ ನನ್ನಷ್ಟಿದೆಯೇ ಎಂಬ ಮಾತಿಗೂ ಎಲ್ಲಿಯ ಸಂಬಂಧ?  ನೊಣಕ್ಕೆ ಕುಪ್ಪೆಯೇ ವರ ಎಂದರೆ ಅದರ ಮುಂದೆ "ನೀನು ಅಂಥವನು" ಎಂದೋ "ನಿನ್ನ ಯೋಗ್ಯತೆಯೇ ಅಷ್ಟು" ಎಂದೋ ಬರಬೇಕಿತ್ತು.  ಅಂಥವನಾದ ನೀನು ನನ್ನ ಸಮವೆಂದು ಭಾವಿಸಿದೆಯಾ ಎನ್ನುವುದು ಆಮೇಲಿನ ಮಾತು.  ಆದರೆ ಹೋಲಿಕೆಯ ಮುಖ್ಯಭಾಗವಾದ ಉಪಮೇಯವೇ ಇಲ್ಲಿಂದ ಎಗರಿಹೋಗಿದೆ.  ಮಾತಿನ ಬಂಧ ಶಿಥಿಲವಾಗಿದೆ.  ಇದೇನಿದು?  ಪಂಪ ಇಲ್ಲಿ ಎಡವಿದನೇ?  ಅಲ್ಲ, ಪಂಪ ಹಾರಿದ್ದಾನೆ, ಅದು ಆತನ ದೌರ್ಬಲ್ಯವಲ್ಲ, ಮಹತ್ತು.  ಅಲ್ಲಿನ ಸನ್ನಿವೇಶ ನೋಡಿ.  ದ್ರುಪದನಿಂದ ಭಾರೀ ದೊಡ್ಡ ಅಪಮಾನಕ್ಕೀಡಾಗಿದ್ದಾನೆ ದ್ರೋಣ, ಅನಿರೀಕ್ಷಿತವಾದ, ಊಹೆಗೇ ದಕ್ಕದ ಅಪಮಾನ ಅದು.  ಈ ಹಟಾತ್ ಅಪಮಾನದಿಂದ ಅವನ ರಕ್ತ ಕುದಿಯುತ್ತಿದೆ, ಹಲ್ಲುಗಳು ಕಟಕಟಿಸುತ್ತಿದೆ, ಮಾತು ತೊದಲುತ್ತಿದೆ.  ಇನ್ನು ವಾಕ್ಯಗಳು ಸುಸಂಬದ್ಧವಾಗಿ ಬರುವುದುಂಟೇ?  ಒಂದು ಮಾತು ಬಂದರೆ ಸಾಕು, ಉಳಿದದ್ದನ್ನು ಎದುರಾಳಿ ಅರ್ಥಮಾಡಿಕೊಳ್ಳಬೇಕು.  ಬದಲಿಗೆ ಆ ಸನ್ನಿವೇಶದಲ್ಲಿ ಸುಸಂಬದ್ಧವಾಗಿ ಮಾತಾಡುವುದೇ ಕೃತಕ, ಇದನ್ನು ಸೂಕ್ಷ್ಮಜ್ಞನಾದ ಕವಿ ಬಲ್ಲ.  ಅದಕ್ಕೇ ಸಿಟ್ಟಿನಿಂದ ಏದುಸಿರುಬಿಡುತ್ತಿದ್ದ ದ್ರೋಣನಿಂದ "ನೊಳವಿಂಗೆ ಕುಪ್ಪೆ ವರಮೆಂಬವೊಲ್" (ನೊಣಕ್ಕೆ ಕುಪ್ಪೆಯೇ ವರ ಎಂಬಂತೆ) ಎಂದು ಹೇಳಿಸಿ ಉಳಿದದ್ದನ್ನು ನಮಗೇ ಬಿಟ್ಟುಬಿಡುತ್ತಾನೆ.  ಆದ್ದರಿಂದ "ನೊಳವಿಂಗೆ ಕುಪ್ಪೆ ವರಮೆಂಬವೊಲ್" ಎಂಬುದಕ್ಕೆ "ನಿನ್ನ ಕೊಳೆತನಮಾಯ್ತು" ಎಂದು ನಾವೇ ಸೇರಿಸಿ ಓದಿಕೊಂಡರೆ ಅಲ್ಲಿಗೆ ಲೋಕೋಕ್ತ್ಯಲಂಕಾರವು ಪೂರ್ಣವಾಯಿತು.  "ಆಂಬರಮುಂಟೆ ನಿನ್ನದೊಂದಳವು?" ಎನ್ನುವುದೇನಿದ್ದರೂ ಮುಂದಿನ ಮಾತು, ಮೇಲೆ ಹೇಳಿದ ಲೋಕೋಕ್ತ್ಯಲಂಕಾರದ ಒಂದು ಭಾಗವಲ್ಲ.  ಓದುವಾಗ, ದ್ರೋಣನ ಮನಸ್ಥಿತಿಯ ಉದ್ವೇಗವು ನಮಗೆ ಅರ್ಥವಾಗಬೇಕಾದರೆ "ನೊಳವಿಂಗೆ ಕುಪ್ಪೆ ವರಮೆಂಬವೊಲ್" ಎಂದಮೇಲೆ ಅಲ್ಲೊಂದೆರಡು ಕ್ಷಣ ವಿರಾಮ ಕೊಟ್ಟು, ಉಸಿರು ಸಂಬಾಳಿಸಿಕೊಂಡು (ಸ್ವಲ್ಪ ಸಮಾಧಾನವೂ ಮಾಡಿಕೊಂಡು :) )ಮುಂದಿನ ಭಾಗ "ಆಂಬರಮುಂಟೆ ನಿನ್ನದೊಂದಳವು?" ಎಂಬುದನ್ನೋದಬೇಕು - ಆಗ ಪದ್ಯದ ಭಾವ ನಮಗೆ ದಕ್ಕುತ್ತದೆ.

ಕೊ: ಇಷ್ಟು ವಿವರಿಸಿದ ಮೇಲೆ, "ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು?" ಎಂಬ ಮೇಲಿನ ವಾಕ್ಯವು ಹೀನೋಪಮೆಯಿರಬಹುದೇ ಎಂಬ ಪ್ರಶ್ನೆ ಬಂತು.  ಇದು ಲೋಕೋಕ್ತ್ಯಲಂಕಾರವೆಂಬುದನ್ನು ಮೇಲೆಯೇ ವಿವರಿಸಿದೆ.  ಆದರೆ ಪ್ರಶ್ನೆಯೆದ್ದಿರುವುದರಿಂದ ಹೀನೋಪಮೆಯೆಂದರೇನೆಂಬುದನ್ನೂ ಒಮ್ಮೆ ತಿಳಿದುಬಿಡೋಣ.  ಹೀನೋಪಮೆ ಎನ್ನುವುದು ಒಂದು ರೀತಿ ವಿಫಲವಾದ ಉಪಮೆಯೆನ್ನಬಹುದು - ಸಾಮಾನ್ಯವಾಗಿ ಚಿರಪರಿಚಿತವಾದ ಮತ್ತು ಮಹತ್ತಾದ ಒಂದಕ್ಕೆ, ಅಪರಿಚಿತವಾದ ಮಹತ್ತಲ್ಲದ ಇನ್ನೊಂದನ್ನು ಹೋಲಿಸಿ ಹೇಳುವುದು, ಚಿಕ್ಕದನ್ನು ದೊಡ್ಡದರ ಮಟ್ಟಕ್ಕೇರಿಸುವುದು ಉಪಮಾಲಂಕಾರದ ಲಕ್ಷಣವಲ್ಲವೇ? ಉದಾಹರಣೆಗೆ, ಅಮೆಜಾನ್ ನದಿಯನ್ನು ಕುರಿತು ಹೇಳುವಾಗ, "ಈ ನದಿ ಸಾಗರದಂತಿದೆ" ಎನ್ನುತ್ತೇವೆ, ಇದು ಸಾಮಾನ್ಯವಾದ ಉಪಮಾಲಂಕಾರ, ನದಿಯ ’ದೊಡ್ಡ’ತನವನ್ನು ಹಿಗ್ಗಿಸಿ ಸಾಗರದ ದೊಡ್ಡತನದೊಂದಿಗೆ ಹೋಲಿಸುವುದು. ಆದರೆ ಅದೇ ನದಿಯನ್ನು ಕುರಿತು ಹೇಳುತ್ತಾ "ಸಾಗರವು ಈ ನದಿಯಂತೆಯೇ ಇದೆ" ಎಂದರೆ ಏನಾಗುತ್ತದೆ? ವಾಕ್ಯದ ಭೌತಿಕಾರ್ಥದಲ್ಲಿ ಎರಡೂ ಒಂದೇ, ಎರಡರಲ್ಲೂ ನದಿ ಮತ್ತು ಸಾಗರದ ಗಾತ್ರವೇ ಹೋಲಿಕೆಗೆ ಬಂದದ್ದು.  ಆದರೆ ಮೊದಲ ವಾಕ್ಯದಲ್ಲಿ ನದಿಯ ’ದೊಡ್ಡ’ತನವು ಸಾಗರದೊಂದಿಗೆ ಹೋಲಿಸಲ್ಪಟ್ಟು ಹಿಗ್ಗಿದರೆ, ಇಲ್ಲಿ ಸಾಗರದ ಗಾತ್ರವೇ ನದಿಯ ಗಾತ್ರಕ್ಕೆ ಹೋಲಿಸಲ್ಪಟ್ಟು ಕುಗ್ಗಿಯೋಯಿತು.  ಮೊದಲಾಗಿ ನದಿಯ ಮುಂದೆಯೇ ನಿಂತು, ಅದರ ಮಹತ್ವದ ಬಗೆಗೆ ಮಾತಾಡುವುದು ಬಿಟ್ಟು, ಸಾಗರದ ಬಗೆಗೆ ಮಾತಾಡುತ್ತಿದ್ದೇವೆ (ಎಂದರೆ ಆ ನದಿಯ ಮಹತ್ವವನ್ನೇ ಅಲ್ಲಗಳೆದೆವು), ಮತ್ತು ಸಾಗರವನ್ನು ಕೇವಲ ಒಂದು ನದಿಗೆ ಹೋಲಿಸುವುದರ ಮೂಲಕ ಆ ಸಾಗರದ ಮಹತ್ತನ್ನೂ ಅಲ್ಲಗಳೆದೆವು. ಹೀಗೆ ಉಪಮೆಯು ವೈಭವೀಕರಿಸುವ ತನ್ನ ಉದ್ದೇಶವನ್ನು ಕಳೆದುಕೊಂಡು, ಅದರ ವಿರುದ್ಧ ಪರಿಣಾಮವನ್ನು ನೀಡುತ್ತದೆ, ಉಪಮಾನ ಉಪಮೇಯಗಳೆರಡರ ಮಹತ್ವವನ್ನೂ ಕುಗ್ಗಿಸುತ್ತದೆ. ಇದು ಹೀನೋಪಮೆ.

ಆದರೆ ಯಾರನ್ನಾದರೂ/ಯಾವುದನ್ನಾದರೂ ಅತಿಯಾಗಿ ವೈಭವೀಕರಿಸುವ ಉದ್ದೇಶದಿಂದಲೂ ಮೇಲಿನಂತೆ ವ್ಯತಿರಿಕ್ತವಾದ ಉಪಮೆಯನ್ನು ಬಳಸುವುದುಂಟು - ನಿನ್ನ ದನಿ ಕೋಗಿಲೆಯಂತಿದೆ ಎನ್ನುವುದರ ಬದಲು, ಕೋಗಿಲೆಯ ದನಿಯೇ ನಿನ್ನದರಂತೆ ಇದೆ ಎನ್ನುವುದು (ಇಲ್ಲಿ ನಿನ್ನ ದನಿ ಕೋಗಿಲೆಯದ್ದಕ್ಕಿಂತ ಪ್ರಸಿದ್ಧವಾದುದು ಆದ್ದರಿಂದ ನಿನ್ನ ದನಿಯನ್ನೇ ಉಪಮಾನವಾಗಿ ಬಳಸುವುದು ಸೂಕ್ತ ಎನ್ನುವ ಭಾವವಿದ್ದು, ಅದು ಆ ದನಿಯನ್ನು ಕೋಗಿಲೆಯದ್ದಕ್ಕಿಂತ ಮೇಲಕ್ಕೇರಿಸುತ್ತದೆ); ಹಾಗೆಯೇ "ನೋಡು, ಆ ಆನೆ ನಿನ್ನಂತೆಯೇ ಇದೆ (ಗಾತ್ರದಲ್ಲಿ ನೀನು ಆನೆಗಿಂತಲೂ ಮಿಗಿಲು ಎನ್ನುವ ಧ್ವನಿ), ಆ ಕೋತಿ ನಿನ್ನಂತೆಯೇ ಆಡುತ್ತಿದೆ ಇತ್ಯಾದಿ. ಈ ವಿಪರೀತ ಉಪಮೆಯನ್ನು ಪ್ರತೀಪಾಲಂಕಾರ ಎಂದು ಕರೆಯುತ್ತಾರೆ.  ಇದಕ್ಕೆ ಪ್ರಖ್ಯಾತವಾದ ಇನ್ನೊಂದು ಉದಾಹರಣೆಯನ್ನು ಕೊಡಬಹುದು.  ರಾಮಾಯಣದ ಬಾಲಕಾಂಡದಲ್ಲಿ ಒಂದು ಮಾತು ಬರುತ್ತದೆ.  ಸ್ವಚ್ಛವಾಗಿ ಹರಿಯುತ್ತಿರುವ ತಮಸಾನದಿಯನ್ನು ಕಂಡ ವಾಲ್ಮೀಕಿಗಳು ಶಿಷ್ಯನಾದ ಭರದ್ವಾಜನಿಗೆ ಹೇಳುತ್ತಾರೆ - "ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ | ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ" (ಭರದ್ವಾಜಾ, ಸ್ವಚ್ಛವಾದ ತಿಳಿನೀರಿನಿಂದ ತುಂಬಿದ ಈ ತೀರ್ಥವನ್ನು ನೋಡು, ಸಜ್ಜನರ ಮನಸ್ಸಿನಂತೆ ಎಷ್ಟು ರಮಣೀಯವಾಗಿದೆ).  ಸಜ್ಜನರ ಮನಸ್ಸು ತಿಳಿನೀರಿನಂತೆ ನಿರ್ಮಲವಾಗಿರುತ್ತದೆ ಎನ್ನುವುದು ಸಾಮಾನ್ಯವಾದ ಉಪಮಾಲಂಕಾರ.  ಸಜ್ಜನರ ಮನಸ್ಸನ್ನು ನಾವರಿಯೆಯು, ಆದರೆ ತಿಳಿನೀರನ್ನು ಬಲ್ಲೆವು.  ಆದ್ದರಿಂದ ಇದರ ಸಹಾಯದಿಂದ ಅದನ್ನು ವರ್ಣಿಸುವುದು ಸಾಮಾನ್ಯ.  ಆದರೆ ಇಲ್ಲಿ ಕವಿ ತಿಳಿನೀರಿನ ಬದಲು ಸಜ್ಜನರ ಮನಸ್ಸನ್ನೇ ಉಪಮಾನವಾಗಿ ಬಳಸಿಕೊಂಡು, ಅದರ ಸಹಾಯ ನದಿಯ ತಿಳಿನೀರನ್ನು ವರ್ಣಿಸುವ ಮೂಲಕ ಸಜ್ಜನರ ಮನಸ್ಸು ಆ ನೀರಿಗಿಂತ ಹೆಚ್ಚು ನಿರ್ಮಲವಾದದ್ದೆಂದೂ, ಹೆಚ್ಚು ಪ್ರಸಿದ್ಧವೆಂದೂ ಬಿಂಬಿಸುತ್ತಾನೆ.  ಇದು ಪ್ರತೀಪಾಲಂಕಾರಕ್ಕೆ ಸೊಗಸಾದ ಉದಾಹರಣೆ.  ಹಾಗೆಯೇ, ಮುತ್ತುಸ್ವಾಮಿ ದೀಕ್ಷಿತರ ಸುಪ್ರಸಿದ್ಧ ನವಗ್ರಹ ಕೃತಿಯೊಂದರ "ಚಂದ್ರಂ ಭಜ ಮಾನಸ ಸಾಧುಹೃದಯ ಸದೃಶಂ" ಎಂಬ ಸಾಲನ್ನೂ ಗಮನಿಸಬಹುದು.  ಇಲ್ಲಿಯೂ ಸುಪ್ರಸಿದ್ಧನಾದ ಚಂದ್ರನನ್ನು ಸಾಧುಹೃದಯಕ್ಕೆ ಹೋಲಿಸುವುದರ ಮೂಲಕ ಪ್ರಕಾರಾಂತರವಾಗಿ ಸಾಧುಹೃದಯದ ಮಹತ್ವವನ್ನೇ ಎತ್ತಿ ಹಿಡಿಯುತ್ತಾರೆ, ಮತ್ತು ಚಂದ್ರನು ಆ ಸಾಧುಹೃದಯದಷ್ಟು ಆಹ್ಲಾದಕರ ಎಂದು ಸೂಚಿಸುವ ಮೂಲಕ ಚಂದ್ರನ ಆಹ್ಲಾದಕಾರಕತ್ವವನ್ನೇ ಒಂದು ಮೆಟ್ಟಿಲು ಮೇಲೇರಿಸುತ್ತಾರೆ.

Monday, January 7, 2019

ಆಲೂಗಡ್ಡೆ ಈರುಳ್ಳಿ ಹುಳಿ

ಯಾವಾಗಲೂ ಗಂಭೀರ ವಿಷಯವನ್ನೇ ಏಕೆ ಬರೆಯಬೇಕೆಂದು ನಾನು ವಾದಿಸುವುದಿಲ್ಲ, ಆದರೆ ತಿನ್ನುವುದು ಗಂಭೀರ ವಿಷಯವಲ್ಲವೆಂದು ಯಾರು ಹೇಳಿದರು.  ಒಂದು ದಿನ ಏಕಾದಶಿ ನಿಟ್ಟುಪವಾಸ ಮಾಡಿ, ಮರುದಿನ ಪಾರಣೆ, ಇನ್ನೇನು ತುತ್ತು ಬಾಯಿಗಿಡಬೇಕೆಂದಾಗ ಯಾರೋ ದೂರದ ಬಂಧುವೊಬ್ಬರು ಶಿವನಪಾದ ಸೇರಿದ ಸುದ್ದಿ ಬಂತೆನ್ನಿ, ಅಥವಾ ಅಡುಗೆ ಮಾಡುವವರೊಡನೆ (ಅದು ನಿಮ್ಮ ಪತ್ನಿಯಿರಬಹುದು, ಪತಿಯೇ ಇರಬಹುದು) ಸ್ವಲ್ಪ ಕಿರೀಕ್ ಮಾಡಿಕೊಂಡು ನೋಡಿ - ಸಾರಿಗೋ ಪಲ್ಯಕ್ಕೋ ಒಂದು ಹಿಡಿ ಉಪ್ಪೋ ಮೆಣಸಿನಪುಡಿಯೋ ಹೆಚ್ಚು ಬೀಳಲಿ, ಆಗ, ಆಹಾರ ಎಷ್ಟು ಗಂಭೀರ ವಿಷಯವೆಂಬುದು ಮನದಟ್ಟಾಗುತ್ತದೆ - ಅಷ್ಟಲ್ಲದೇ ವೇದಗಳು ಸಾರಿದುವೇ? "ಅನ್ನಂ ಬ್ರಹ್ಮೇತಿವ್ಯಜಾನಾತ್"

ಇರಲಿ, ಒಂದು ಆಲೂಗೆಡ್ಡೆ ಈರುಳ್ಳಿ ಹುಳಿಯ ರೆಸಿಪಿ ಹಾಕಲಿಕ್ಕೆ ಇಷ್ಟೊಂದು ಜಸ್ಟಿಫಿಕೇಶನ್ ಏಕೆ ಎಂದಿರಾ?  ಅದೇ ನನಗೂ ಅರ್ಥವಾಗುತ್ತಿಲ್ಲ.  ಅಡುಗೆಯ ಘನತೆಯ ಬಗೆಗೆ ಇಷ್ಟು ಕೀಳರಿಮೆಯಿದ್ದಿದ್ದರೆ ಮಂಗರಸನು ಸೂಪಶಾಸ್ತ್ರವನ್ನು ಬರೆಯುತ್ತಲೇ ಇರಲಿಲ್ಲ, ಇರಲಿ.  ನಾನಾದರೂ ಕುಗ್ಗಲಿ ಏಕೆ, ದಿಟ್ಟತನದಿಂದಲೇ ಹೇಳುತ್ತೇನೆ.  ಫೇಸ್ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಕೇಳಿದರು.  ಹಲವು ವರ್ಷಗಳಿಂದ ಮಾಡಿಕೊಂಡು ಬಂದ ಸ್ವಯಂಪಾಕ - ಹೇಳಿದೆ.  ಮರೆತುಹೋಗಬಾರದೆಂದು ಇಲ್ಲಿ ಬರೆದಿಟ್ಟುಕೊಂಡಿದ್ದೇನೆ - ಬರೆದಿಟ್ಟದ್ದು ಒಂದಷ್ಟು ಜನಕ್ಕಾದರೂ ಉಪಯೋಗವಾಗುವುದಾದರೆ ಆಗಿಯೇ ಹೋಗಲಿ ಎಂದು ಇಲ್ಲಿ ಹಾಕುತ್ತಿದ್ದೇನೆ.  ಮತ್ತೆ, "ಉಪಯೋಗವೇ ಆಗುತ್ತೆ ಎಂದು ಹೇಗೆ ಹೇಳುತ್ತೀ?" ಎಂದು ಕೇಳಬೇಡಿ - ಸುಮಾರು ವರ್ಷಗಳು ಹಸಿಯಗೊಡದೇ ಈ ಸ್ವಯಂಪಾಕವು ನನ್ನನ್ನು ಪೊರೆದಿದೆಯೆಂಬ ಧೈರ್ಯದ ಮೇಲೆ ಹೇಳುತ್ತಿದ್ದೇನೆ :) Take it with a pinch/bag of salt as required.

1) ಒಲೆ ಹೊತ್ತಿಸಿ (ತುಂಬಾ ಮುಖ್ಯ - ಅನುಭವದಿಂದ ಕಲಿತದ್ದು)

೨) ಎರಡು ಕಪ್ ತೊಗರೀಬೇಳೆ ಬೇಯಲಿಕ್ಕೆ ಇಡಿ (ಮುಚ್ಚಿಡುವ ಮೊದಲು ಮೇಲೊಂದು ಚಮಚೆ ಎಣ್ಣೆ ಹಾಕಿ ಅರಿಸಿನ ಉದುರಿಸಿ)

೩) ರುಚಿಗೆ ತಕ್ಕಷ್ಟು ಹುಣಸೇ ಹಣ್ಣು ನೆನೆಹಾಕಿಕೊಳ್ಳಿ

೪) ಎರಡು ಚಮಚೆ ಹುಳಿ ಪುಡಿ, ಒಂದಷ್ಟು ಶುಂಠಿ, ಒಂದು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ, ಇಷ್ಟನ್ನು ಮಿಕ್ಸಿಯಲ್ಲಿ ಹಾಕಿಕೊಳ್ಳಿ (ನಾನು ಇದರ ಜೊತೆಗೆ ಈರುಳ್ಳಿ ಟೊಮ್ಯಾಟೋ ಕೂಡ ರುಬ್ಬಿ ಹಾಕಿಬಿಡುತ್ತೇನೆ, ಸಾಮಾನ್ಯವಾಗಿ ನೇರ ಹುಳಿಗೆ ಹಾಕುತ್ತಾರೆ, ಹೋಳು ಸಿಕ್ಕುವ ಹಾಗೆ. ಹೇಗಾದರೂ ಮಾಡಬಹುದು - ಸಣ್ಣೀರುಳ್ಳಿ (ಸಾಂಬಾರ್ ಈರುಳ್ಳಿ) ಸಿಕ್ಕರೆ ಅದರ ರುಚಿಯೇ ಬೇರೆ).

೫) ಇಷ್ಟು ಹೊತ್ತಿಗೆ ಕುಕ್ಕರ್ ಕೂಗಿರಬೇಕು, ಆರಲು ಬಿಟ್ಟು, ದೊಡ್ಡದಾಗಿ ಹೆಚ್ಚಿದ ಆಲೂ ತೆರೆದ ಪಾತ್ರೆಯಲ್ಲಿ ಬೇಯಲು ಇಡಿ. ಹುಳಿಗೆ ಹಾಕಬೇಕಾದಷ್ಟು ಉಪ್ಪಿನಲ್ಲಿ ಅರ್ಧವನ್ನು ಈಗಲೇ ಹಾಕಿಬಿಡಿ.

೬) ಮೇಲೆ ರುಬ್ಬಲು ತಯಾರಾದ ಮಿಶ್ರಣಕ್ಕೆ, ನೆನೆಹಾಕಿದ ಹುಣಸೇಹಣ್ಣು ಕಿವುಚಿ ಹಾಕಿ, ಮಿಕ್ಸಿ ಮಾಡಿಟ್ಟುಕೊಳ್ಳಿ

೭) ಕುಕ್ಕರ್ ತೆಗೆದು ಬೆಂದ ಬೇಳೆಯನ್ನು ಚೆನ್ನಾಗಿ ಮಿದ್ದು, ಬೇಯುತ್ತಿರುವ ಆಲೂ ಜೊತೆಗೆ ಹಾಕಿ. ಈರುಳ್ಳಿ ಮತ್ತು ಟೊಮ್ಯಾಟೋ ಹೆಚ್ಚಿ ಹಾಕಿ (ಮೇಲಿನಂತೆ ಈಗಾಗಲೇ ರುಬ್ಬಿ ಹಾಕಿಲ್ಲದಿದ್ದರೆ).

೮) ಇಷ್ಟು ಹೊತ್ತಿಗೆ ಆಲೂ ಒಂದರ್ಧ ಬೆಂದಿರಬೇಕು. ಮೇಲೆ ಮಿಕ್ಸಿ ಮಾಡಿಟ್ಟುಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ.

೯) ಇದಾದಮೇಲೆ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರುವುದು ಒಳ್ಳೆಯದು. ಒಂದು ಕುದಿ ಬಂದನಂತರ ಒಂದೆರಡು ದೊಡ್ಡ ಹಸಿ ಮೆಣಸಿನ ಕಾಯನ್ನು ಉದ್ದುದ್ದಕ್ಕೆ ಸೀಳಿ ಅದಕ್ಕೆ ಹಾಕಿಬಿಡಿ, ಹಾಗೇ ಒಂದು ನಿಂಬೇಹಣ್ಣು ಹಿಂಡಿ (ಸಾಂಬಾರು ಒಂದು ಸ್ವಲ್ಪ ಹುಳಿ ಮುಂದಾಗಿದ್ದರೆ ಚೆನ್ನ ಎಂಬುದಕ್ಕಾಗಿ ಇದು, ಇಲ್ಲದಿದ್ದರೆ ಅರ್ಧ ನಿಂಬೇಹಣ್ಣು ಸಾಕು), ಜೊತೆಗೆ ಅರ್ಧ ನಿಂಬೆಯ ಗಾತ್ರದ ಬೆಲ್ಲ.

೧೦) ಈಗ ಹುಳಿಯ ಗಟ್ಟಿತನ ನೋಡಿಕೊಂಡು ಒಂದೋ ಎರಡೋ ಲೋಟ ನೀರು, ಇನ್ನೂ ಹಾಕಬೇಕಾದ ಉಳಿದ ಉಪ್ಪನ್ನು ಹಾಕಿಬಿಡಿ. ನೀರಿಗೆ ಒಂದು ಚಮಚ ಅಕ್ಕಿಪುಡಿಯನ್ನು ಕದರಿ ಹಾಕಿದರೆ ಇನ್ನೂ ರುಚಿ.

೧೧) ಎಲ್ಲಾ ಒಂದು ಕುದಿ ಕುದ್ದಮೇಲೆ, ಒಂದು ಜೊಂಪೆ ಬೇರು ಕಿತ್ತು ಶುದ್ಧಗೊಳಿಸಿದ ಕೊತ್ತಂಬರಿ ಸೊಪ್ಪನ್ನು ಹಾಗೆಯೇ ಹುಳಿಯಲ್ಲಿ ಮುಳುಗಿಸಿ ಮುಚ್ಚಿಟ್ಟುಬಿಡಿ - ಸಣ್ಣ ಉರಿಯಿರಲಿ.

೧೨) ಇನ್ನೊಂದು ಒಲೆಯ ಮೇಲೆ ಎರಡೋ ಮೂರೋ ಚಮಚೆ ಒಳ್ಳೆಯ ತುಪ್ಪ ಕಾಯಲಿಕ್ಕಿಟ್ಟು (ಎಣ್ಣೆಯೇ? ಅಡುಗೆಗೆ ತುಪ್ಪವಿಲ್ಲದಿದ್ದರೆ ಅದೆಂತಹ ಸಮೃದ್ಧಿ   ತುಪ್ಪವನ್ನೇ ಬಳಸಿ), ಅದಕ್ಕೆ ಸಾಸಿವೆ ಹಾಕಿ ಚಟಗುಟ್ಟಿಸಿ, ಆಮೇಲೆ ಒಂದು ಚಮಚೆಯಷ್ಟು ಕಡಲೆ ಬೇಳೆ, ಉದ್ದಿನಬೇಳೆ ಒಂದೆರಡು ಕಾಳು ಮೆಂತ್ಯ, ಒಂದು ಚಿಟುಕೆ ಇಂಗಿನ ಪುಡಿ, ಒಂದೆಸಳು ಕರಿಬೇವಿನ ಸೊಪ್ಪಿನ ಎಲೆಗಳು ಇಷ್ಟನ್ನೂ ಹಾಕಿ ಬಾಡಿಸಿ ಒಗ್ಗರಣೆ ಹಾಕಿ.

೧೩) ಒಳ್ಳೆಯ ಘಮಘಮ ಸಾಂಬಾರಿನ ಫೋಟೋ ತೆಗೆದು (ಇದು ಮುಖ್ಯ), ಒಲೆ ಆರಿಸಿ, ಮುಚ್ಚಿಟ್ಟುಬಿಡಿ (ಇದೂ ತುಂಬಾ ಮುಖ್ಯ)

೧೪) ಬಂದು ಫೇಸ್ಬುಕ್ಕಿಗೆ ಆ ಫೋಟೋ ಅಪ್ಲೋಡ್ ಮಾಡಿ, ಒಂದೈವತ್ತು ಅರವತ್ತು ಲೈಕ್ ಬರುವವರೆಗೆ ಕಾಯಿರಿ.

೧೫) ಇಷ್ಟುಹೊತ್ತಿಗೆ ಕೊತ್ತಂಬರಿ ಸೊಪ್ಪು ತನ್ನ ಘಮಲನ್ನು ಬಿಟ್ಟಿರುತ್ತದೆ. ಈಗ ಪಾತ್ರೆಯನ್ನು ನೇರ ಊಟದ ಟೇಬಲಿಗೆ ವರ್ಗಾಯಿಸಿ (ಅನ್ನ ಮಾಡಿದ್ದೀರಿ ತಾನೆ?); ಸೊಗಸಾದ ಸಾಂಬಾರ್-ಅನ್ನವನ್ನು ಸವಿಯಲು ಸಿದ್ಧರಾಗಿ.

ಸೂ: ಮೇಲೆ (೪) ರಲ್ಲಿ ಹುಳಿಪುಡಿಯ ಬಗ್ಗೆ ಹೇಳಿದೆ. ಹುಳಿಪುಡಿ - ಶಕ್ತಿ ಸಾಂಬಾರ್ ಪೌಡರನ್ನೋ ಇನ್ನಾವುದನ್ನೋ ಹಾಕಬಹುದು. ಮನೆಯಲ್ಲೇ ಮಾಡಿಕೊಳ್ಳುವುದಾದರೆ ಹೀಗೆ (ಅಳತೆ ಹೇಳಲು ಕಷ್ಟ, ಒಂದು ವಾರಕ್ಕಾಗುವಷ್ಟು ಹೀಗೆ ತಯಾರಿಸಿಕೊಳ್ಳಬಹುದು):

೧) ಕಾಲು ಕೆಜಿ ಒಣಮೆಣಸಿನ ಕಾಯಿ (ಗುಂಟೂರಿನದ್ದಾದರೆ ಒಂದು ಹಿಡಿ ಕಡಿಮೆ ಮಾಡಿ), ಒಂದು ಹಿಡಿ ಕೊತ್ತಂಬರಿ ಬೀಜ, ಒಂದು ಹಿಡಿ ಕಡಲೇಬೇಳೆ, ಒಂದು ಹಿಡಿ ಉದ್ದಿನ ಬೇಳೆ, ಒಂದರ್ಧ ಹಿಡಿ ಮೆಂತ್ಯ, ಎರಡು ಚಮಚ ಜೀರಿಗೆ, ಎರಡು ಚಮಚ ಮೆಣಸು, ಅರ್ಧ ಚಮಚ ಇಂಗಿನ ಪುಡಿ, ಅರ್ಧ ಗಿಟುಕು ಕೊಬ್ಬರಿ ತುರಿ - ಎಲ್ಲವನ್ನೂ ಬೇರೆಬೇರೆ ಹುರಿದಿಟ್ಟುಕೊಳ್ಳಿ (ಕೆಲವರು ಚಕ್ಕೆ, ಲವಂಗ ಎಲ್ಲಾ ಹಾಕುತ್ತಾರೆ, ನನಗೆ ಸೇರದು)

೨) ಆರಿದ ಮೇಲೆ, ಚೆನ್ನಾಗಿ ತೊಳೆದು ಒಣಗಿಸಿದ ಒಂದು ಹತ್ತೋ ಹದಿನೈದೋ ಎಸಳು ಕರಿಬೇವಿನ ಎಲೆಯನ್ನೂ ಹಾಕಿ ಮಿಕ್ಸಿ ಮಾಡಿಟ್ಟುಕೊಳ್ಳಿ

ಮೇಲಿನ ಅಳತೆ ಕೇವಲ ಕೈತೂಕದ್ದಷ್ಟೇ. ಮಾಡುವಾಗ ನೋಡಿಕೊಂಡು ಹದಕ್ಕೆ ತಕ್ಕಂತೆ ಹಾಕಬೇಕು.

ವಿ.ಸೂ: ರುಬ್ಬಿದ ಹುಳಿ ಮಾಡುವುದಾದರೆ ಇನ್ನೂ ರುಚಿಯಾಗಿರುತ್ತದೆ. ಹಾಗೆ ಮಾಡುವುದಾದರೆ, ಮೇಲೆ (೪)ರಲ್ಲಿರುವ ಸೂಚನೆಯ ಬದಲು ಹೀಗೆ ಮಾಡಿ:

೧) ಒಂದೆರಡು ಗುಂಟೂರು ಮೆಣಸಿನಕಾಯಿ (ಬೇರೆಯದಾದರೆ ನಾಲ್ಕು), ಒಂದರ್ಧ ಚಮಚ ಕೊತ್ತಂಬರಿ ಬೀಜ, ಅರ್ಧರ್ಧ ಚಮಚೆ ಕಡಲೇಬೇಳೆ, ಉದ್ದಿನ ಬೇಳೆ, ಎರಡೆರಡು ಕಾಳು ಮೆಂತ್ಯ, ಜೀರಿಗೆ, ಮೆಣಸು, ಚುಟುಕೆ ಇಂಗು ಇಷ್ಟನ್ನೂ ಹುರಿದುಕೊಳ್ಳಿ (ಹುರಿಯದೇ ಹಾಗೇ ಮಾಡುವುದೂ ಉಂಟು, ಅದೂ ಒಂದು ರೀತಿ ರುಚಿ - ಹಾಗೆ ಮಾಡುವುದಾದರೆ ಕಡಲೇಬೇಳೆ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಕೆಲಕಾಲ ನೀರಿನಲ್ಲಿ ನೆನೆ ಹಾಕಿಟ್ಟುಕೊಳ್ಳುವುದು ಒಳ್ಳೆಯದು)

೨) ಮೇಲೆ ಹೇಳಿದ ಮಿಶ್ರಣಕ್ಕೆ ಒಂದೆಸಳು ಕರಿಬೇವಿನ ಸೊಪ್ಪು, ಒಂದಷ್ಟು ಶುಂಠಿ, ಎರಡು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ ಸೇರಿಸಿ ರುಬ್ಬಿಕೊಳ್ಳಿ (ಮೇಲೆ ಹೇಳಿದಂತೆ, ಈರುಳ್ಳಿ ಮತ್ತು ಟೊಮ್ಯಾಟೋ ಕೂಡ ಸೇರಿಸಿ ರುಬ್ಬಿಕೊಳ್ಳಬಹುದು, ಅಥವಾ ಸಾಮಾನ್ಯವಾಗಿ ಮಾಡುವಂತೆ ಅದನ್ನ ಪ್ರತ್ಯೇಕವಾಗಿಯೂ ಹಾಕಬಹುದು). ರುಬ್ಬಲು ಮಿಕ್ಸಿಯ ಬದಲು ಒರಳಿದ್ದರೆ ಇನ್ನೂ ಚಂದ

ಐದನೇ ಪಾಯಿಂಟಿನಿಂದಾಚೆಗೆ ಮೇಲೆ ಹೇಳಿದಂತೆ ಮುಂದುವರೆಯಿರಿ.

ಚಿತ್ರಕೃಪೆ: ವಿಕಿಪೀಡಿಯಾ (Trimmed to fit the frame)