ಕಳೆದ ವರ್ಷವೋ ಏನೋ, ಪ್ರಯಾಣದಲ್ಲಿ ಬೆನ್ನಿಗೆ ಪೆಟ್ಟಾಗಿ, ಎದ್ದು ನಿಲ್ಲುವುದೇ ದುಸ್ತರವಾಗಿ, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾಗ್ಯೂ ಎರಡೇ ದಿನದಲ್ಲಿ ಕೂಡಿದ ಮಟ್ಟಿಗೆ ನಿತ್ಯಕರ್ಮಾನುಷ್ಠಾನವನ್ನು ರೂಢಿಸಿಕೊಂಡರೆಂದು ಕೇಳಿದ್ದೇನೆ. ಸಾಂಪ್ರದಾಯಿಕ ಸನ್ಯಾಸಿಯೊಬ್ಬನಿಗೆ ನಿತ್ಯಕರ್ಮಾನುಷ್ಠಾನ ಅದೆಷ್ಟು ಮುಖ್ಯವೆಂದು ಸಂಪ್ರದಾಯವನ್ನು ಬಲ್ಲವರೆಲ್ಲರೂ ಅರಿತ ವಿಷಯ. ಇದು ಸನ್ಯಾಸಿಗಳಿಗೆಲ್ಲ ಮಾದರಿಯಾಗಬಹುದಾದ ವಿಶ್ವೇಶತೀರ್ಥರ ಇಚ್ಛಾಶಕ್ತಿ.
ಸಾಂಪ್ರದಾಯಿಕ ಸನ್ಯಾಸದ ಚೌಕಟ್ಟಿನೊಳಗೇ ಸಾಮಾಜಿಕಸುಧಾರಣೆಗಾಗಿ ತುಡಿದ ಈ ಚೇತನ, ಕೇಳಿದ ಕಟಕಿಗಳೆಷ್ಟು, ಎದುರಿಸಿದ ವಿರೋಧವೆಷ್ಟು, ಅನುಭವಿಸಿದ ನಿರ್ಲಜ್ಜ ವೈಯಕ್ತಿಕ ಭರ್ತ್ಸನೆಗಳೆಷ್ಟು? ರಾಜಕೀಯಸ್ಥನೆಂದರು, ಪೊಲಿಟಿಕಲ್ ಗಿಮಿಕ್ ಎಂದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿದರು, ಆಡಬಾರದ್ದನ್ನಾಡಿದರು - ಈ ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಸಮುದಾಯದ ಯತಿಗಡಣವಿರಲಿ, ಬ್ರಾಹ್ಮಣಸಮಾಜದ, ಇಡೀ ಹಿಂದೂ ಸಮಾಜದ ಯತಿಸಮುದಾಯವೂ ನಿರ್ಲಿಪ್ತಮೌನ ವಹಿಸಿದಾಗ್ಯೂ, ತಾವೂ ಸ್ವತಃ ನಿರ್ಲಿಪ್ತರಾಗಿ ತಾವು ಸರಿಯೆಂದು ಅರಿತದ್ದನ್ನು ನಡೆಸಿಕೊಂಡು ಹೋದ ದೃಢತೆ ಸ್ವಾಮಿಗಳದ್ದು.
ಸ್ವಚ್ಛತೆ, ಸದಾಚಾರ, ಸಂಯಮ, ಸೌಶೀಲ್ಯಗಳ ಒಂದು ಯುಗ ಇಂದಿಗೆ ಮುಗಿದಿದೆ. ಆ ಯುಗದ ಒಂದು ಭಾಗದಲ್ಲಿ ನಾವೂ ಜೀವಿಸಿದ್ದೆವೆಂಬ ಸಾರ್ಥಕತೆ ನಮಗುಳಿದಿದೆ, ಆ ಸಾರ್ಥಕತೆಗೆ ಮುಕ್ಕಾಗದಂತೆ ಬದುಕುವ ಹೊಣೆಗಾರಿಕೆಯೂ! ನೆಚ್ಚಿದ ತತ್ತ್ವಕ್ಕೆ ಕಟ್ಟಿ ನಿಲ್ಲುವ ಆ ದೃಢತೆ, ಗುಬ್ಬಚ್ಚಿಯಂತಹ ಪುಟ್ಟ ದೇಹದಲ್ಲಿ ಸದಾ ಪುಟಿಯುವ ಆ ಚೈತನ್ಯ, ಆ ಮಗುವಿನಂತಹ ನಗೆ - ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ.
ಈ ಚೇತನ ನಮ್ಮ ಹಿಂದೆ ಸದಾ ಬೆಂಗಾವಲಾಗಿರಲಿ ಎಂಬ ಹಾರೈಕೆಯೊಂದಿಗೆ 🙏🙏🙏
2 comments:
ಗುಬ್ಬಚ್ಚಿಯಂತಹ ಪುಟ್ಟ ಲೇಖನದಲ್ಲಿ ಆ ವಿಶ್ವಾಕಾರ ಚೈತನ್ಯವನ್ನು ಸಮರ್ಥವಾಗಿ ತೋರಿದ್ದೀರಿ, ಗಂಗಾನದಿಯನ್ನು ಗಿಂಡಿಯಲ್ಲಿ ತೋರಿಸಿದಂತೆ,ಕನ್ನಡಿಯಲ್ಲಿ ಕರಿಯನ್ನು ತೋರಿದಂತೆ.ಆ ಚೈತನ್ಯಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು. ನಿಮಗೂ ಧನ್ಯವಾದಗಳು.
ಧನ್ಯವಾದಗಳು ಸುನಾಥರೇ. ಅದು ಮಹಾನ್ ವ್ಯಕ್ತಿತ್ವ, ನೆನೆದಷ್ಟೂ ನೆನೆದಷ್ಟು ಅಚ್ಚರಿಯೆನಿಸುತ್ತದೆ.
Post a Comment