Sunday, May 5, 2013

ಶತಮಾನಂ ಭವತಿ - ಪುಸ್ತಕ ಬಿಡುಗಡೆ ಸಮಾರಂಭ

ಈಗ್ಗೆ ಒಂದೂವರೆ ವರ್ಷದ ಹಿಂದೆ ಇಂಥದ್ದೇ ಒಂದು ಬರಹವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೆ.  ಆರ್ಕುಟ್ ನ "3K ಬಳಗ"ದ ಉತ್ಸಾಹೀ ಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತಂದಿದ್ದರು, ಆಗ.

ಅದಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಈ ತಂಡ ಸಾಕಷ್ಟು ಬೆಳೆದಿದೆ - ಸಂಖ್ಯೆಯಲ್ಲಿ, ಹುಮ್ಮಸಿನಲ್ಲಿ, ಅನುಭವದಲ್ಲಿ,  ಆತ್ಮೀಯತೆಯಲ್ಲಿ.  ಆರ್ಕುಟ್ಟಿನಲ್ಲಿ ಕುಡಿಯೊಡೆದ ಬಳ್ಳಿ, ಫೇಸ್ ಬುಕ್ಕನ್ನು ಬಳಸಿ ಕತೆ-ಕವನಗಳ ಸೀಮೆಯನ್ನು ಮೀರಿ ಇನ್ನೂ ಅನೇಕ ಸಾಂಸ್ಕೃತಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಹಬ್ಬಿದ್ದರೂ ಮೂಲತಃ ಕವಿಗಳೆಂದೇ ತಮ್ಮನ್ನು ಗುರ್ತಿಸಿಕೊಳ್ಳುವ ಇಚ್ಛೆ ಈ ಉತ್ಸಾಹಿಗಳಿಗೆ.  ಕಾವ್ಯಸಂಚಾರದ ಹೆಸರಲ್ಲಿ ಆಗಿಂದಾಗ್ಗೆ ಮೈಸೂರು, ಮಂಗಳೂರು ಹೀಗೆಲ್ಲ ಸಂಚಾರ ಕೈಗೊಳ್ಳುವ ಈ ತಂಡ, ಸ್ಥಳೀಯ ಸಂಸ್ಥೆಗಳೊಡನೆ ಬೆರೆತು ಸಾಹಿತ್ಯಕ-ಸಾಂಸ್ಕೃತಿಕ ವಿನಿಮಯದಲ್ಲಿ ಪಾಲ್ಗೊಳ್ಳುತ್ತದೆ.  

ಪ್ರೀತಿತುಂಬಿದ ಈ ಉತ್ಸಾಹೀ ಕವಿಸಮೂಹದ ಮತ್ತೊಂದು ಹೆಜ್ಜೆ - ನೂರು ಕವಿಗಳ ನೂರು ಕವನಗಳನ್ನೊಳಗೊಂಡ ಎರಡನೆಯ ಕವನಸಂಕಲನ "ಶತಮಾನಂ ಭವತಿ" ಇದೀಗ ಬಿಡುಗಡೆಗೆ ಸಜ್ಜಾಗಿದೆ.  ಕವನ ಸಂಕಲನವನ್ನು ನಾನು ಸಂಪಾದಿಸಿರುವೆನಾಗಿ, ಕವಿತೆಯ ತೇರಿಗೆ ನನ್ನದೂ ಒಂದು ದವನ. 

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದೂವರೆ ವರ್ಷದ ನಂತರ ಮತ್ತೆ ಕಬ್ಬಿಗವಕ್ಕಿಗಳ ಕಲರವ ತುಂಬಲಿದೆ.  ಇದು ಸಂತೋಷದ ವಿಷಯ.  ಬಹುಕಾಲದ ನಂತರ ಬ್ಲಾಗ್ ಲೋಕದ ಹಲಕೆಲವು ಮಿತ್ರರನ್ನು ಭೇಟಿಮಾಡುವ ಹಿಗ್ಗು ನನಗೆ.  ನೀವೂ ಬನ್ನಿ.

ದಿನಾಂಕ: ೧೨/೦೫/೨೦೧೩, ಭಾನುವಾರ
ಸಮಯ: ಸಂಜೆ ೫.೩೦
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.


3 comments:

Badarinath Palavalli said...

ಒಂದು ಸಾರ್ಥಕ ಪ್ರಯತ್ನಕ್ಕೆ ಸಾಕ್ಷಿಯಾಗುವ ಅವಕಾಶ ನನ್ನದು ಸಾರ್. ನಿಮ್ಮಂತಹ ಮಾರ್ಗದರ್ಶಕರ ಬೆಳಕಿನಲ್ಲಿ ನಮ್ಮ ಸಾಹಿತ್ಯಾಸಕ್ತಿ ಇನ್ನಷ್ಟು ಬೆಳಗುತ್ತದೆ.

ಅಷ್ಟೊಂದು ಪಂಡಿತರ ನಡುವೆ ಈ ಪಾಮರನ ಕವಿತೆಯೂ ಪ್ರಕಟವಾಗುತ್ತಿದೆ ಎಂದರೆ ಅದು 3K ಅವರ ಸಹೃದಯತೆ ಮತ್ತು ಆಯ್ಕೆ ಸಮಿತಿಯ ವಿಶಾಲ ಮನೋಭಾವವೇ ಕಾರಣ.

ಈ ಮೂಲಕವಾದರೂ ಈ ಅಜ್ಞಾತ ಕವಿಯು ಪುಸ್ತಕದಲ್ಲಿ ದಾಖಲಾಗುತ್ತಾನೆ ಎನ್ನುವುದು ಹುರುಪಿನ ಸಂಗತಿ.

ಕಾರ್ಯಕ್ರಮ ಯಶಸ್ವಿಯಾಗಲಿ, ಆಯೋಜಕ ಗೆಳೆಯ ಗೆಳತಿಯರ ಬಾಳುಮೆ ಹಸನಾಗಲಿ ಮತ್ತು ಆದಷ್ಟು ಬೇಗ 3ನೇ ಆವೃತ್ತಿ,
"ಸಾವಿರ ಕವಿತೆ"
ಪ್ರಕಟವಾಗಲಿ ಎನ್ನುವುದು ನನ್ನ ಆಶಯ.

ನಿಮ್ಮನ್ನು ಭೇಟಿಯಾಗುವ ಸುಯೋಗ ಆವತ್ತು ನನ್ನದು.

Srikanth Manjunath said...

ಕಿರಿದಾದ ಉತ್ಸಾಹದ ಚಿಲುಮೆ... ಇಂದು ಹುಮ್ಮಸ್ಸಿನಿಂದ ಗರಿಗೆದರಿ ಹಂಸವಾಗಿ ಹಾರಾಡುತ್ತಿದೆ. ವಿಧ್ಯೆಗೆ ಬುದ್ದಿಗೆ ತಾತ್ಸಾರ ಇಲ್ಲವೆನ್ನುವ ಮಾತು ಈ ತಂಡದಲ್ಲಿ ಇರುವ ಪ್ರೋತ್ಸಾಹಿಸುವ, ಬೆನ್ನು ತಟ್ಟುವ ಸಹೃದಯ ಮನಸ್ಸಿನ ಸೃಷ್ಠಿಗಳನ್ನು ನೋಡಿದಾಗ, ಮಾತನಾಡಿಸಿದಾಗ ತಿಳಿದುಬರುತ್ತೆ. ಸುಂದರ ತಂಡಕ್ಕೆ ಸುಂದರ ಸಮಾರಂಭಕ್ಕೆ ಮುನ್ನುಡಿಯಾಗಿ ಬಂದಿರುವ ಈ ಲೇಖನ ನಿಜಕ್ಕೂ ಒಂದು ಆಳದ ಮರದ ನೆರಳೇ ಹೌದು. ಸುಂದರ ಲೇಖನ.

sunaath said...

ಖುಶಿಯ ಸಂಗತಿ. ಶತಶತ ಶುಭ ಹಾರೈಕೆಗಳು.