Saturday, January 7, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 1: ಲಘು-ಗುರು

ಇತ್ತೀಚಿಗೆ ನಾನು ಛಂದೋಬದ್ಧ ರಚನೆಗಳಿಗೆ ಕೈಹಾಕಿದ ಮೇಲೆ ಇದರಲ್ಲಿ ಆಸಕ್ತಿ ತಳೆದ ಅನೇಕ ಮಿತ್ರರು, ಈ ಬಗ್ಗೆ ಸರಳವಾಗಿ, ಪ್ರಾಕ್ಟಿಕಲ್ ಆಗಿ ಏನಾದರೂ ಏಕೆ ಬರೆಯಬಾರದೆಂದು ಕೇಳಿದರು. ಛಂದಸ್ಸಿನ ಬಗ್ಗೆ, ಕಾವ್ಯದ ಬಗ್ಗೆ ತಿಳಿಸುವ ಸಾವಿರಾರು ಪುಸ್ತಕಗಳೂ ನೂರಾರು ವೆಬ್ ಸೈಟುಗಳೂ ಇರುವಾಗ ನನ್ನದೊಂದು ಮಾತಿನ ಅಗತ್ಯ ಇಲ್ಲಿ ಇದೆಯೇ ಎನ್ನಿಸಿತು. ಆದರೂ ಈ ಛಂದಸ್ಸಾಹಿತ್ಯರಾಶಿಯಲ್ಲಿ ನಮಗೆ ಬೇಕಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಾದರೂ ಛಂದೋಜಗತ್ತಿನಲ್ಲಿ ತುಸು ಪ್ರವೃತ್ತಿ ಬೇಕಲ್ಲವೇ? ಅದನ್ನು ಹುಡುಕಿ ಓದುವವರಾರು, ಓದಿದರೂ ಯಾರೊಡನಾದರೂ personal ಆಗಿ ಚರ್ಚಿಸಿದಷ್ಟು ಪರಿಣಾಮ ಬೀರುತ್ತವೆಯೇ? ಈ ಹಿನ್ನೆಲೆಯೇನೂ ಇಲ್ಲದ, ಆದರೆ ಕಲಿಯುವ/ರಚಿಸುವ ಉತ್ಸಾಹವಂತೂ ಹೇರಳವಾಗಿರುವ ಕವಿಗಡಣಕ್ಕೇನು ದಾರಿ? ಈ ಅಗತ್ಯವನ್ನೂ ತುಂಬಿ ಕೊಡುವ ಪ್ರಯತ್ನಗಳೂ ಇಲ್ಲದಿಲ್ಲ. ಪ್ರೊ. ಅ.ರಾ.ಮಿತ್ರರ "ಛಂದೋಮಿತ್ರ" ಇಂಥದ್ದೊಂದು ಪ್ರಯತ್ನ. ಮಿತ್ರರಿಗೆ ವಿಶಿಷ್ಟವಾದ, ಸುಲಲಿತ ಹಾಸ್ಯಮಿಶ್ರಿತ ಶೈಲಿಯಲ್ಲಿ ಛಂದಶ್ಶಾಸ್ತ್ರದಂಥ ಗಂಭೀರ ವಿಷಯವನ್ನು ಸರಸವಾಗಿ ಹೇಳುವ ಶೈಲಿ ಅನ್ಯಾದೃಶ. ಆಯಾ ಛಂದಸ್ಸುಗಳನ್ನು ಆಯಾ ಛಂದಸ್ಸಿನ ಪದ್ಯಗಳಲ್ಲೇ ವಿವರಿಸುತ್ತಾ, ಅದೇ ಛಂದಸ್ಸಿನಲ್ಲಿ ಹಾಸ್ಯಮಿಶ್ರಿತವಾದ ಲಕ್ಷಣ ಪದ್ಯವನ್ನೂ ಕೊಡುವ ಈ ಪುಸ್ತಕ ಛಂದಶ್ಶಾಸ್ತ್ರಸಾಹಿತ್ಯದಲ್ಲಿ ಒಂದು ಅಪೂರ್ವ ಪ್ರಯತ್ನ. ಆದರೂ, ಇಷ್ಟು ಸುಲಲಿತ ಸರಳ ಶೈಲಿಯಿದ್ದಾಗ್ಯೂ ಈ ಪುಸ್ತಕವೂ ಪದ್ಯಭೂಯಿಷ್ಠವೇ ಆದ್ದರಿಂದ ಪದ್ಯವೆಂದರೆ ತುಸು ಕಣ್ಣೆಳೆಯುವ ಗುಂಪಿಗೆ ಇದನ್ನು ಇನ್ನೂ ಸರಳಗೊಳಿಸಿ ಲಲಿತ ಗದ್ಯದಲ್ಲಿ ಹೇಳುವ ಅಗತ್ಯವಿದೆಯೆನ್ನಿಸಿತು. ಹಾಗೆಯೇ ಛಂದಶ್ಶಾಸ್ತ್ರದ ಪಾಠಗಳನ್ನು ಸರಸ-ಗಂಭೀರವಾಗಿ ಪ್ರಾತ್ಯಕ್ಷಿಕೆಯೊಡನೆ ತಿಳಿಸಿಕೊಡುವ ಶ್ರೀ ಆರ್. ಗಣೇಶರ ವಿಡಿಯೋಗಳೂ ಇವೆ (http://www.padyapaana.com). ಪದ್ಯಪಾಠದ ಗಂಭೀರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೇಳಿ ಮಾಡಿಸಿದ ತಾಣ ಇನ್ನೊಂದಿರಲಾರದು. ಈ ಪಾಠಗಳು ಬಹು ಸರಳವಾಗಿ, ಸ್ವಾರಸ್ಯಕರವಾಗಿದ್ದರೂ, ಇಲ್ಲಿಯೂ ಕಾವ್ಯರಚನೆಗೆ ಕೈಹಾಕಬೇಕಾದರೆ ತುಸುವಾದರೂ ಭಾಷಾಸಿದ್ಧತೆ ಬೇಕು.

ಆದರೆ ನನ್ನ ಈ ಲೇಖನ ಸರಣಿಯ audience ಈ ಗಂಭೀರ ವಿದ್ಯಾರ್ಥಿಗಳೂ ಅಲ್ಲ - ಈಗಷ್ಟೇ ಪದ್ಯರಚನೆಗೆ ಕೈಹಾಕಿ, ನವ್ಯ ಕವನಗಳ ಮಾದರಿಯ ಗದ್ಯರೂಪದ ಪದ್ಯಗಳನ್ನು ಬರೆಯುತ್ತಾ, ಛಂದಸ್ಸು, ಹಳಗನ್ನಡ ಇವುಗಳ ಗಂಧಗಾಳಿಯೂ ಇಲ್ಲದಿದ್ದರೂ ಛಂದೋಬದ್ಧವಾಗಿ ರಚಿಸಬೇಕೆಂಬ ಆಸಕ್ತಿ, ಆದರೆ ಲಘು-ಗುರುಗಳ ಮಾತ್ರೆ ನುಂಗಲು ಹೇವರಿಕೆ ಇವೆರಡೂ ಸಮಾನವಾಗಿ ಸಮ್ಮಿಳಿತವಾಗಿರುವ ಉತ್ಸಾಹೀ ಕವಿ ಕಿಶೋರರಿಗೆ, ಕಿಶೋರ ಕವಿಗಳಿಗೆ ಈ ಸರಣಿ ಅರ್ಪಿತ. ಅದಕ್ಕೆಂದೇ ತೀರ ತೀರ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಛಂದೋಪ್ರಪಂಚದ ಕೆಲವು ಹೊಳಹುಗಳನ್ನಷ್ಟೇ ಕಾಣಿಸುವುದು ಈ ಸರಣಿಯ ಉದ್ದೇಶ. ಇದರಿಂದ ಕಾವ್ಯಕ್ಕೆ ಲಯಪ್ರಾಸಗಳೂ ರುಚಿಕರ ವ್ಯಂಜನ ಹೌದೆಂಬ ವಿಷಯ ಉತ್ಸಾಹೀ ಓದುಗರ ಮನಕ್ಕೆ ಹತ್ತಿದರೆ, ಛಂದಸ್ಸನ್ನು ಗಂಭೀರವಾಗಿ ಅಧ್ಯಯನಮಾಡಬೇಕೆಂಬ ಹುಕ್ಕಿ ಬಂದರೆ, ನಾನು ಧನ್ಯ. ಒಮ್ಮೆ ಇದು ಬಂದಮೇಲೆ ಮೇಲ್ಕಾಣಿಸಿದ ಪುಸ್ತಕ-ಜಾಲತಾಣಗಳಿದ್ದೇ ಇವೆ; ಜೊತೆಗೆ ಅಪಾರ ಸಾಹಿತ್ಯವೂ ಇದೆ.

ಸರಣಿಯ ಹೆಸರೇ ಸೂಚಿಸುವಂತೆ ಕಾವ್ಯದ ಕುಣಿತದ ಭಾಗವನ್ನು ತೋರಿಸುವುದೇ ಈ ಸರಣಿಯ ಉದ್ದೇಶ. ಕುಣಿತ ಎಂಬುದರ ಬದಲು ನಡಿಗೆಯೆಂಬುದು ಹೆಚ್ಚು ಗಂಭೀರವಾಗಿರುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ, "ಹೌದು, ಅದಕ್ಕೇ ನಡಿಗೆಯ ಬದಲು ಕುಣಿತ ಆದದ್ದು" ಎಂಬುದು ನನ್ನ ಉತ್ತರ. ಮೊದಲೇ ಹೇಳಿದಂತೆ ಕಾವ್ಯದ ಗಂಭೀರ ನಡಿಗೆಯನ್ನೂ ಗಜಗಮನವನ್ನೂ ತೋರಿಸುವ ಅನೇಕ ಪ್ರೌಢಾತಿಪ್ರೌಢ ಗ್ರಂಥಗಳು ಈಗಾಗಲೇ ಇವೆ. ಆದರೆ ಆಡುವ ಮಕ್ಕಳಿಗೆ ಬ್ರಹ್ಮಸೂತ್ರದಿಂದೇನು ಪ್ರಯೋಜನ?

ಮೊದಲೇ ಹೇಳಿದಂತೆ ಈ ಸರಣಿ ಕೇವಲ ಆರಂಭಿಕರಿಗೋಸ್ಕರ. ಪರಿಭಾಷೆಯನ್ನು ಆದಷ್ಟು ಕಡಿಮೆಗೊಳಿಸುವುದು ಇಲ್ಲಿ ಉದ್ದೇಶ. ಹಾಗೂ ಬಳಸಿದ ಪರಿಭಾಷೆಯಲ್ಲಿ ಸೂಕ್ಷ್ಮ ಅದಲುಬದಲು (interchange) ಆಗಲೂ ಬಹುದು. ಈ ಸರಣಿಯಲ್ಲಿ ಒಂದೊಂದು ಲೇಖನವೂ ಒಂದೊಂದು ಹೊಸ ವಸ್ತು-ವಿಷಯವನ್ನೊಳಗೊಂಡಿರುತ್ತದೆ. ಬರೆದಿದ್ದಕ್ಕೆ ತಕ್ಕಷ್ಟು ಉದಾಹರಣೆಗಳನ್ನೂ ಕೊಡುತ್ತೇನೆ. ಇದರ ಉದ್ದೇಶ ಸುಮ್ಮನೇ ಬರೆದು ಮರೆಯುವುದಲ್ಲ. ಆಸಕ್ತರು ತಾವೂ ಆಯಾ ಪ್ರಕಾರದಲ್ಲಿ ಪದ್ಯವನ್ನು ರಚಿಸಲು ಪ್ರಯತ್ನಿಸಬಹುದು. ನಿಜಕ್ಕೂ ಇದೊಂದು ಆಟದಂತೆ, ಹರಟೆ ಕಟ್ಟೆಯಂತೆ ಚೇತೋಹಾರಿಯಾಗಬೇಕೆಂದು ನನ್ನ ಆಸೆ. ಇಲ್ಲಿ ನೀವು ಮಾಮೂಲಾಗಿ ಹರಟಿದರೂ ಅಡ್ಡಿಯಿಲ್ಲ, ಒಬ್ಬರು ಇನ್ನೊಬ್ಬರ ಕಾಲೆಳೆದರೂ ಅಡ್ಡಿಯಿಲ್ಲ, ಆದರೆ ಒಂದೇ ಒಂದು ಶರತ್ತೆಂದರೆ ಹರಟಿದರೂ ಪದ್ಯದಲ್ಲೇ ಹರಟಬೇಕು, ಕಾಲೆಳೆದರೂ ಪದ್ಯದಲ್ಲೇ ಕಾಲೆಳೆಯಬೇಕು, ಒದ್ದರೂ ಪದ್ಯದಲ್ಲೇ ಒದೆಯಬೇಕು [:)]

ಇನ್ನು ಮುಂದುವರೆಯೋಣ. ಮೊದಲಿಗೆ, ಛಂದಸ್ಸು ಅಂದ್ರೆ ಏನು? ಛಂದಸ್ಸು ಅಂದ್ರೆ, ಕವನಕ್ಕೆ ಬೇಕಾದ ಲಯ, ಪ್ರಾಸಗಳ ಕಟ್ಟುಪಾಡು. ಅರೇ, ಒಂದು ನಿಮಿಷ! ಈ ಲಯ ಅಂದ್ರೆ ಏನಪ್ಪಾ?!!

ಈ ಕೆಳಗಿನ ಸಾಲುಗಳನ್ನು ನೋಡಿ (ಜೋರಾಗಿ ಹೇಳಿ, ಬೇಕಿದ್ರೆ ಕೈ ಚಪ್ಪಾಳೆ ಹಾಕಿಕೊಂಡು ಹೇಳಿ):

ಅನಂತದಿಂ ದಿಗಂತದಿಂ
ಅನಂತದಾ ದಿಗಂತದಿಂ|

ಏನಿದು ಧೂಳೀ ಓಹೋ ಗಾಳೀ
ಸುರ್ರನೆ ಬಂತೈ ಸುಂಟರಗಾಳೀ|

ಆಟಕ್ಕುಂಟೂ ಲೆಕ್ಕಕ್ಕಿಲ್ಲಾ|

ಬಂದಾ ಬಂದಾ ಸಣ್ ತಮ್ಮಣ್ಣಾ|

ಬೇಕೇ ಬೇಕೂ
ನ್ಯಾಯಾ ಬೇಕೂ|

ಲಗ್ಗ ಲಗಾ ಲಗಾ ಲಗಾ
ಲಗ್ಗ ಲಗಡಿ ಲಗಾ ಲಗಾ|

ಇಲ್ಲೊಂದು ಕುಣಿತದ ಸ್ಥಿತಿ ಕಾಣುತ್ತದೆ ಅಲ್ಲವೇ? ಅದೇ ಲಯ/rhythm. ಅದು ಹೇಗೆ ಬಂತು? ಹೇಗೆ ಅಂದ್ರೆ, ಕೆಲವು ಅಕ್ಷರಗಳು ಚಿಕ್ಕವು, ಕೆಲವು ಉದ್ದ; ಕೆಲವಕ್ಕೆ ಕಡಿಮೆ ಕಾಲ ತೆಗೆದುಕೊಂಡರೆ ಕೆಲವಕ್ಕೆ ಜಾಸ್ತಿ ಕಾಲ. ಅದಕ್ಕೇ ಅಲ್ಲೊಂದು ಕುಣಿತದ ಲಯ ಮೂಡಿಬರುತ್ತದೆ. ಅನೇಕ ವೇಳೆ ನಮಗೆ ಅರಿವಿಲ್ಲದೇ ನಾವು ಲಯಬದ್ಧವಾಗಿ ಮಾತಾಡಿಬಿಡುತ್ತೇವೆ. ಇನ್ನು ಮೇಲಿನ ಉದಾಹರಣೆ ತಗೊಂಡ್ರೆ, "ಅನಂತ" ಅನ್ನೋ ಪದಾನೇ ನೋಡಿ. ಅ ಎನ್ನುವ ಅಕ್ಷರದ ಎರಡರಷ್ಟು ಸಮಯ ನಂ ಅನ್ನುವ ಅಕ್ಷರಕ್ಕೆ ಬಂತು; ಹಾಗೇ ತ ಎಂಬ ಅಕ್ಷರವು ಅ ಎಂಬ ಅಕ್ಷರದಷ್ಟೇ ಸಮಯ ತೆಗೆದುಕೊಂಡಿತು. ಹೀಗೆ ಒಂದು ಎರಡರಷ್ಟು ಸಮಯ ತೆಗೆದುಕೊಳ್ಳುವ ಅಕ್ಷರಗಳನ್ನು ಯಾವುದೋ ಕ್ರಮದಲ್ಲಿ ಜೋಡಿಸಿದರೆ ಅಲ್ಲಿ ಲಯ ಮೂಡುತ್ತದೆ. ಉದಾಹರಣೆಗೆ ಲ(2)ಗ್ಗ(1) = 3; ಲ(1)ಗಾ(2) = 3; ಲ(1)ಗಾ(2) = 3; ಲ(1)ಗಾ(2) = 3 ಇಲ್ಲಿ ಮೂರುಮೂರಕ್ಷರದ 123,123,123,123 ಎನ್ನುವ ಲಯವನ್ನು ಕಾಣುತ್ತೇವಲ್ಲವೇ (ಮತ್ತೆ ಜೋರಾಗಿ ಓದಿ ನೋಡಿ)?

ಅಂದರೆ ಅಕ್ಷರಗಳನ್ನು ನುಡಿಯುವ ಕಾಲಾವಧಿಯೇ ಲಯಕ್ಕೆ ಮೂಲ ಎಂದಾಯಿತು. ಈ ಕಾಲಾವಧಿಯನ್ನೇ ಮಾತ್ರಾಕಾಲ ಅಂತೀವಿ. ಮಾತ್ರೆ ಎಂದರೆ ಒಂದು ಚಿಟಿಕೆ ಹಾಕುವಷ್ಟು ಕಾಲ (ಮಾತ್ರೆ ಅಂದ್ರೆ tablet ಅನ್ಕೊಂಡೀರಿ ಮತ್ತೆ [:)] ).

ಈ ಅಕ್ಷರಗಳನ್ನು ಎಲ್ಲೂ ನಿಲ್ಲಿಸದೇ ಜೋರಾಗಿ ಹೇಳಿ ನೋಡಿ:

ಅ, ಇ, ಉ, ಋ, ಎ, ಒ
ಕ, ಖ, ಗ, ಘ, ಙ, ಯ, ರ, ಲ, ವ...

ಇವನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲವಷ್ಟೇ ಬೇಕಾಗುವುದು. ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಲಘು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( U ) ಎಂದು ಸೂಚಿಸುತ್ತೇವೆ.

ಇನ್ನು ಇವನ್ನು ಜೋರಾಗಿ ಹೇಳಿ:

ಆ, ಈ, ಊ, ೠ, ಏ, ಐ, ಓ, ಔ, ಅಂ, ಅಃ,
ಕಾ, ಖಾ, ಗಾ, ಘಾ, ಗೀ, ಮೀ, ಯೂ, ಲೇ, ರೌ...

ಇವನ್ನು ಹೇಳಲು ಮೇಲಿನ ಎರಡರಷ್ಟು ಕಾಲ ಬೇಕಾಗುವುದು (ಎರಡು ಚಿಟಿಕೆಯಷ್ಟು ಎನ್ನೋಣ). ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಗುರು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( _ ) ಎಂದು ಸೂಚಿಸುತ್ತೇವೆ.

ಗಮನಿಸಿ: ಯಾವುದಾದರೂ ಒತ್ತಕ್ಷರದ ಹಿಂದಿರುವ ಅಕ್ಷರ ಸಹಜವಾಗಿಯೇ ಎಳೆಯುತ್ತದೆ. ಉದಾಹರಣೆಗೆ, ಅಣ್ಣ. ಇಲ್ಲಿ ಅ ಎನ್ನುವುದು ಒಂದೇ ಚಿಟುಕೆಯಲ್ಲಿ ಪೂರೈಸುವ ಅಕ್ಷರವಾದರೂ ಮುಂದೆ ಣ್ಣ ಇರುವುದರಿಂದ ಅ ಎಂಬ ಅಕ್ಷರ ಆ ಎಂಬಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.

ಈ ಪದಗಳನ್ನು ಜೋರಾಗಿ ಹೇಳಿ ನೋಡಿ: ಅಣ - ಅಣ್ಣ, ಹಿಗು - ಹಿಗ್ಗು; ಬಕ - ಭಕ್ಷ್ಯ - ಇಲ್ಲೆಲ್ಲಾ ಮೊದಲನೆಯ ಪದದಲ್ಲಿ ಅ ಎನ್ನುವ ಅಕ್ಷರ ಮಾಮೂಲಾಗೇ ಬಂತು. ಎರಡನೆಯ ಪದಗಳಲ್ಲಿ ಅ ಎನ್ನುವುದು ಎರಡರಷ್ಟು ಸಮಯ ತೆಗೆದುಕೊಂಡಿತು.

ಆದ್ದರಿಂದ ಒತ್ತಕ್ಷರದ ಹಿಂದಿನ ಅಕ್ಷರವು ಲಘುವಾಗಿದ್ದರೂ ಅದನ್ನು ಗುರುವೆಂದೇ ಲೆಕ್ಕಹಾಕಬೇಕು
ಈ ಸರಣಿಯ ಮುಂದಿನ ಬರಹ ಇಲ್ಲಿದೆ.

13 comments:

ಚುಕ್ಕಿಚಿತ್ತಾರ said...

ನಾನೂ ಕೂಡಾ ಶಾಲೆಗೆ ಬರುವೆ
ಲಘು ಗುರು ಆಟವ ಆಡಲಿಕೆ..
ಎಲ್ಲರ ಸ೦ಗಡ ನಾನೂ ಕಲಿವೆ
ಜೊತೆಯಲಿ ಮಗಳನು ನಾ ಕರೆವೆ.

ಧನ್ಯವಾದ.. ಹೊಸ ಶಾಲೆ ಶುರು ಮಾಡಿದ್ದಕ್ಕೆ..:))

Badarinath Palavalli said...

ಮರೆತು ಹೋದ ಲಘು ಗುರುಗಳನ್ನು ಮತ್ತೆ ಪಠ್ಯವಾಗಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.

ಮುತವರ್ಜಿಯಿಂದ ಪದೇ ಪದೇ ಓದಿಕೊಳ್ಳುತ್ತೇನೆ.

ನನ್ನ ಬ್ಲಾಗಿಗೂ ಸ್ವಾಗತ.

Manjunatha Kollegala said...

@ ಚುಕ್ಕಿ ಚಿತ್ತಾರ,

ನೀವೂ ಬನ್ನಿ ನಿಮ್ಮ ಮನೆಯವರನ್ನೂ ಕರೆತನ್ನಿ :)

ಆದರೊಂದು ವಿಚಾರ, ಈ ’ಶಾಲೆ’ ಮಾನ್ಯತೆ ಪಡೆದ ಶಾಲೆಯಲ್ಲ. Study circle ಅಂದುಕೊಂಡರೆ ಪರವಾಗಿಲ್ಲ :)

Manjunatha Kollegala said...

ಬದರೀನಾಥ್, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.

sunaath said...

ಗುರುವೇ ಬರುವೆ ಪಾಠಶಾಲೆಗೆ
ಕರುಣದಿ ಕಲಿಸು ಕಾವ್ಯದ ಕುಣಿತ
ಸುರುವಿಗೆ ತಿಳಿಸೈ ದಡ್ಡ ಬುದ್ಧಿಗೆ
ಗುರು ಲಘುಗಳಾ ಛಂದದ ಗಣಿತ!

ಕಾವ್ಯದ ಕುಣಿತ ಎನ್ನುವ ಶೀರ್ಷಿಕೆಯು ನಿಜವಾಗಿಯೂ ಅರ್ಥಪೂರ್ಣವಾಗಿದೆ. ನಿಮ್ಮ ಹೊಸ ಸಾಹಸಕ್ಕೆ ಅಭಿನಂದನೆಗಳು. ಇದು ನಮಗೆಲ್ಲರಿಗೂ ತುಂಬ ಉಪಯುಕ್ತವಾಗಲಿದೆ.

Pradeep Rao said...

ಸಾರ್.. ನಿಮ್ಮ ಪಾಂಡಿತ್ಯ ಮೆಚ್ಚಲೇಬೇಕು... ತುಂಬಾ ಚೆನ್ನಾಗಿ ವಿವರಿಸಿದ್ದೀರಿ.. ನನ್ನಂತ ಎಡಬಿಡಂಗಿಗೆ ಸ್ವಲ್ಪ ಕಷ್ಟವಾದರೂ ಚಿಂತೆಯಿಲ್ಲ ಈ ಅಂಕಣವನ್ನು ಇನ್ನು ಒಂದೆರಡು ಸಲ ಓದಿ ಅರ್ಥ ಮಾಡಿಕೊಳ್ಳುತ್ತೇನೆ. ಈ ಅಮೂಲ್ಯ ಮಾಹಿತಿಗೆ ಧನ್ಯವಾದಗಳು!

Ashok.V.Shetty, Kodlady said...

ಸರ್....

ಧನ್ಯವಾದಗಳು.... ಹೈಸ್ಕೂಲ್ ನಲ್ಲಿ ಓದಿ, ಮರೆತು ಬಿಟ್ಟಿದ್ದ 'ಲಘು -ಗುರು' ಗಳನ್ನು ಮತ್ತೆ ನೆನಪಿಸುತ್ತಿರುವುದಕ್ಕೆ...'ಕಾವ್ಯದ ಕುಣಿತ' ದಲ್ಲಿ ನಿಮ್ಮ ಜೊತೆ ಹೆಜ್ಜೆ ಕಲಿಯಲು ನಾನು ಮೊದಲ ಬೆಂಚ್ ನಲ್ಲೇ ಇರ್ತೀನಿ ಸರ್......

ನಿಮ್ಮ ಮುಂದಿನ ಪೋಸ್ಟ್ ನ ದಾರಿ ಕಾಯುತ್ತಿರುವ ನಿಮ್ಮ ಶಿಷ್ಯ ....

Manjunatha Kollegala said...

ಸುನಾಥರೇ, ಧನ್ಯವಾದ. ತಾವು ಪಾಠಶಾಲೆಗೆ ಕಲಿಸಲು ಬರುವರೆಂದು ನನ್ನರಿವು. ಕಾವ್ಯದ ಕುಣಿತದಲ್ಲಿ ಹೆಚ್ಚೇನಿದೆ? ನೀವು ಬೇಂದ್ರೆಯವರ ರಾವಣಗುಣಿತ ನೋಡಿದವರಲ್ಲವೇ? :)

ಗುರುವೇ ಕಲಿಯಲ್ ಮುಂದೈ
ತರಲದ ಲಘುವೆಂದು ಭಾವಿಸದಿರೈ ಕಂದಾ
ಮರೆಯಿಸಿ ತನ್ನರಿವಂ ನೆರೆ
ಒರೆಯಿಕ್ಕಲ್ ಬಂದನೆಂದೆ ತಿಳಿ ನಿನ್ನರಿವಂ

ಇರಲಿ, ಲಘು ಗುರುಗಳ ಮರ್ಮ ಸರಳವಾಗಿ ಹೀಗೆ. ಅಕ್ಷರವನ್ನು ಎಳೆದು ಹೇಳುವುದಿದ್ದರೆ (ಎರಡು ಚುಟುಕೆಗಳಷ್ಟು ಕಾಲಾವಧಿಯಲ್ಲಿ), ಅದು ಗುರು. ಅದನ್ನು ಮೊಟಕಾಗಿ ಹೇಳುವುದಿದ್ದರೆ (ಒಂದು ಚುಟುಕೆ ಹೊಡೆಯುವಷ್ಟು ಕಾಲ) ಅದು ಲಘು.

ಇನ್ನೂ ಸರಳಗೊಳಿಸಬೇಕೆಂದರೆ

ಹ್ರಸ್ವಾಕ್ಷರಗಳೆಲ್ಲಾ ಲಘು (ಸ್ವರವಿರಲಿ ವ್ಯಂಜನವಿರಲಿ) - ಏಕೆಂದರೆ ಇದನ್ನು ನುಡಿಯಲು ಒಂದು ಚುಟುಕೆಯಷ್ಟು ಸಮಯ ಸಾಕು
ಧೀರ್ಘಾಕ್ಷರಗಳು (ಸ್ವರ ಅಥವ ವ್ಯಂಜನ), ಅಂ, ಅಃ, ಹ್ರಸ್ವ+ಅರ್ಧಾಕ್ಷರಗಳು (ಅಟ್, ಕಲ್, ಜಂ, ಕಃ, ಲೈ, ಕೌ, ಇತ್ಯಾದಿ); ಒತ್ತಕ್ಷರದ ಹಿಂದಿನ ಅಕ್ಷರಗಳು (ಅಣ್ಣ ಎಂಬಲ್ಲಿ ಅ, ಭಿಕ್ಷ ಎಂಬಲ್ಲಿ ಭಿ ಇತ್ಯಾದಿ), ಇವೆಲ್ಲಾ ಗುರು - ಏಕೆಂದರೆ ಇದನ್ನು ನುಡಿಯಲ್ಲು ಲಘುವಿನ ಎರಡರಷ್ಟು, ಅಂದರೆ ಎರಡು ಚುಟುಕೆಯಷ್ಟು ಸಮಯ ಬೇಕು.

ಒಂದು ಚುಟುಕೆಯೊಳ್ ಹ್ರಸ್ವಂ
ಸಂದಿತೆನಲ್ಕೆರಡರಷ್ಟವಧಿಯದೆ ಧೀರ್ಘಂ
ಛಂದದಿ ಹ್ರಸ್ವಕೆ ಲಘುವೆಂ
ತೆಂದಪರಾ ಗುರುವು ಧೀರ್ಘದೊಳ್ ಸೊಗಯಿಸುಗುಂ

Manjunatha Kollegala said...

ಪ್ರದೀಪ್ ರಾವ್ ಮತ್ತು ಅಶೋಕ್, ಧನ್ಯವಾದ

Swarna said...

ಏಳನೇ ತರಗತಿಯಲ್ಲಿ ಕಲಿತದ್ದು ಸರ್.
ಗುರುವನ್ನ ಹೇಗೆ ಸೂಚಿಸಬೇಕು ಅಂತಾಳೆ ಮರ್ತು ಹೋಗಿತ್ತು.
ಜ್ಞಾಪಿಸಿದ್ದಕ್ಕಾಗಿ ಅನಂತ ಧನ್ಯವಾಗಳು
ಸ್ವರ್ಣಾ

Manjunatha Kollegala said...

ಸ್ವರ್ಣಾ ಅವರೆ, ಧನ್ಯವಾದ. ಬರುತ್ತಿರಿ.

ba ashoka said...

ಮರೆತೇ ಹೋಗಿದ್ದ ಲಘು-ಗುರುಗಳನ್ನು ಸರಳವಾಗಿ ವಿವರಿಸಿದ್ದೀರೀ.... ಧನ್ಯವಾದಗಳು ಸಾರ್...

Manjunatha Kollegala said...

ಧನ್ಯವಾದ ಅಶೋಕ...