Thursday, October 27, 2011

ಬೆಳಕಿನ ಹಾಡು

ದೀವಳಿಗೆಯ ಲಯಕ್ಕೆ ಹೊಂದುವಂತೆ ಕೆಲವು ಲಯಗಳು ಮನಕ್ಕೆ ಹೊಳೆದುದರ ಫಲವೇ ಈ ಕವನ. ಇದು ನಡುಗನ್ನಡದ "ರಗಳೆ" ಛಂದಸ್ಸನ್ನು ಬಹುತೇಕ ಹೋಲುತ್ತದೆಯಾದರೂ ಅಲ್ಲಲ್ಲಿ ಕವನದ ಓಟಕ್ಕೆ ತಕ್ಕಂತೆ ಛಂದಸ್ಸನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಿದ್ದೇನೆ. ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು ಲಲಿತ ರಗಳೆಗಳು ಇಲ್ಲಿ ಕಾಣಬರುವ ಛಂದೋರೂಪಗಳು. ಈ ಪದ್ಯದ ಉದ್ದೇಶವೇ ಹಬ್ಬದ, ಸಂಭ್ರಮದ, ಸ್ವಚ್ಛಂದದ ಅಂದವನ್ನು ಹಿಡಿಯುವುದಾದ್ದರಿಂದ ಪದ್ಯದ ಗಾತ್ರವನ್ನು ನಿಯಂತ್ರಿಸಲು ನಾನು ಯತ್ನಿಸಿಲ್ಲ. ಆದ್ದರಿಂದ ಪದ್ಯ ತುಸು ಉದ್ದವೇ ಬೆಳೆದಿದೆಯೆನ್ನಬೇಕು. ಪಟಾಕಿ ಹೊಡೆಯುವ ಮಕ್ಕಳ ಸಂಭ್ರಮವನ್ನು ಮೊಟಕುಗೊಳಿಸಿ ಊಟಕ್ಕೆಳೆದುಕೊಂಡು ಬಂದರೆ ಇಷ್ಟಪಡುವರೇ?

ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

15 comments:

Srikanth said...

ಆಹಾ! ಒಳ್ಳೆ ೧೦೦ ವಾಲಾ ಸರದ ಹಾಗಿದೆ ಕವನ.
ಅಮಾವಾಸ್ಯೆಯ ರಾತ್ರಿ ಕಾವ್ಯದ ಬೆಳಕನ್ನು ತೋರಿದಿರಿ.

Keshav.Kulkarni said...

chennaagide. navodayada kaalada kavanavannu nenapisitu.

Badarinath Palavalli said...

ಬೆಳಕಿನ ಹಬ್ಬ ದೀಪಾವಳಿಯ ಆತ್ಮೀಯ ಶುಭಾಶಯಗಳು.

ಆಧುನಿಕ ಕನ್ನಡ ಸೇವಕರಲ್ಲಿ ಛಂದೋಭರಿತ ಕಾವ್ಯ ಮಾಲೆ ಕಟ್ಟುವ ನಿಮ್ಮ ಮನೋಶಕ್ತಿಗೆ ನನ್ನ ವಂದನೆಗಳು.

ಕಾವ್ಯಕ್ಕೆ ಶೃತಿ ಮತ್ತು ಲಯಗಳು ಮಾತಾ ಪಿತೃಗಳು. ಮುಖ್ಯವಾಗಿ ಈ ಕವನದಲ್ಲಿ ಲಯದ ಓಟ ನಿಯಂತ್ರಿತ ಮತ್ತು ಸುಶ್ರಾವ್ಯ.

ಹಬ್ಬದ ದಿನಚರಿ ಧಾಖಲಿಸುತ್ತಾ ಊಟದ ವಿಭಾಗಕ್ಕೆ ಬರುವ ಚರಣ ನನಗೆ ಬಾಯಲ್ಲಿ ನೀರೂರಿಸಿತು.

ಓಹೋ ಬೆಳಕು ಹರಿಯಿತೇಂ..... ಚರಣದಲ್ಲಿ ಬರುವ ಇಂದ್ರಚಾಪದ ವಿವರಣೆ ಮತ್ತು ರವಿಯ ಬೆಳಕಿನಾಟದ ಸಾಲುಗಳು ಮನಸ್ಸು ಗೆದ್ದವು.

ಒಟ್ಟಾರೆಯಾಗಿ ಪದ್ಯ ದೀಘವಾದಷ್ಟು ಕವಿಯ ಉಣಿಸೂ ಹೆಚ್ಚೇ ಇರುತ್ತದೆ. ಉದ್ದದ್ದ ಪಟಾಕಿ ಸರ ಹಚ್ಚಿಟ್ಟು, ಅದರ ಸದ್ದು ಕೇಳಿ ಕುಣಿದಾಡುವ ಎಳೆ ಕಂದನ ಸಂಭ್ರಮ ನನ್ನದು.

ಉಘೇ ಉಘೇ...

Subrahmanya said...

"ಈಗೇಕೋ ಮನಸು ಛಂದೋರೂಪವಾದ ಕವನಗಳ ಕಡೆಗೆ ವಾಲುತ್ತಿದೆ " >
ವಾಲಿದ್ದು ಒಳ್ಳೆಯದೇ ಆಯ್ತಲ್ಲಾ !. ಕವನವು ಶಾಲಾ-ಕಾಲೇಜು ದಿನಗಳನ್ನು ನೆನಪಿಸಿತು. ತುಂಬ ಚೆನ್ನ್ನಾಗಿದೆ.

sunaath said...

ಮಂಜುನಾಥರೆ,
ನೀವು ನೈಜ ಕವಿಗಳು. ಕಾವ್ಯಪ್ರಯೋಗ ಯಾವುದೇ ಬಗೆಯದಿರಲಿ, ಓದುಗನ ಬಗೆಯನ್ನು ಅಪಹರಿಸುವಂತೆ ಕವನಿಸುತ್ತೀರಿ. ಶ್ರೀಕಾಂತರು ಬರೆದಂತೆ, ಬೆಳಕಿನ ಸುರುಬತ್ತಿ ಹಚ್ಚಿದಂತಹ ಸುಂದರ ಕವನ.
ದೀಪಾವಳಿಯ ಶುಭಾಶಯಗಳು!

Manjunatha Kollegala said...

ಧನ್ಯವಾದಗಳು ಶ್ರೀಕಾಂತ್ ಮತ್ತು ಕೇಶವ್ ಕುಲಕರ್ಣಿಯವರೇ.

ಬದರೀನಾಥರೇ, ಕಾವ್ಯಕ್ಕೆ ಲಯ ನಾದಗಳೇ ಪ್ರಧಾನ ಎಂದು ಸರಿಯಾಗಿ ಹೇಳಿದಿರಿ. ಅದು ಭಾಷೆಯ ಲಯವಾಗಬಹುದು, ಭಾವದ ಲಯವಾಗಬಹುದು. ಕಾವ್ಯ ನಿರುಮ್ಮಳವಾಗಿ ಹೊಮ್ಮುತ್ತಿರಬೇಕಾದರೆ ಅದು ಭಾಷೆಯ ಲಯವನ್ನು ಹೊಂದಿದ್ದ ಮಾತ್ರಕ್ಕೆ ತಿರಸ್ಕರಿಸಬೇಕಿಲ್ಲ ಎಂಬ ನಿಲುವು ನನ್ನದು. ಮೆಚ್ಚಿದ್ದಕ್ಕೆ ಧನ್ಯವಾದಗಳು

ಸುಬ್ರಹ್ಮಣ್ಯರೇ ಧನ್ಯವಾದ

Manjunatha Kollegala said...

ಸುನಾಥರೇ, ಬರೆದಿದ್ದನ್ನು ಮೆಚ್ಚಿ ಪ್ರೋತ್ಸಾಹಿಸುವ ನಿಮ್ಮ ಸಹೃದಯತೆಯೇ ಬರೆಯಲು ಸ್ಫೂರ್ತಿ. ಧನ್ಯವಾದಗಳು

Pradeep Rao said...

sogasaada kavana saar!

ರಾಘವೇಂದ್ರ ಜೋಶಿ said...

ಮಂಜುನಾಥರೇ,
ಈ ಪ್ರಾಕಾರದ ಕವಿತೆಗಳು ನನಗೆ ತುಂಬ ಬೋರು ಎನಿಸುತ್ತವೆ.ಹೀಗಾಗಿ ಕೆಲದಿನಗಳ ಹಿಂದೆ ಮೊದಲಿಗೆ ಎರಡು ಲೈನು ಮಾತ್ರ ಓದಿ ಬಿಟ್ಟೇಬಿಟ್ಟಿದ್ದೆ.ಇವತ್ತು ಮತ್ತೇ ನಿಧಾನವಾಗಿ ಓದಿ ಮುಗಿಸಿದಾಗ ನನಗೆ ಗೊತ್ತಿಲ್ಲದೇ ಮುಗುಳ್ನಗೆಯೊಂದು ಮೂಡಿತ್ತು.ಮನದಲ್ಲೊಂದು ಪ್ರೈಮರಿಯ ''ನಮ್ಮ ಮನೆಯಲ್ಲೊಂದು ಸಣ್ಣ ಪಾಪವಿರುವದು.." ಎನ್ನುವ ಭಾವ.
ಛೆ,ದೀಪಾವಳಿಯ ಹಬ್ಬದಲ್ಲೇ ಇದನ್ನು ಓದಿದ್ದರೆ ಖುಷಿಯ ಮೊತ್ತ ಇನ್ನೂ ದೊಡ್ಡದಾಗಿರುತ್ತಿತ್ತು ಅಂತ ಅನಿಸಿದ್ದು ಸುಳ್ಳಲ್ಲ.. :-)

Manjunatha Kollegala said...

ಥ್ಯಾಂಕ್ಸ್ ಪ್ರದೀಪ್... ಬರುತ್ತಿರಿ

Manjunatha Kollegala said...

ರಾಘವೇಂದ್ರರೇ, ನಿಮಗೆ ಮೊದಲೇ ಓದದಿದ್ದುದಕ್ಕೆ ಬೇಸರ, ನನಗೆ ಮೊದಲೇ ಬರೆಯದಿದ್ದುದಕ್ಕೆ ಬೇಸರ. ನಾವು ಓದುತ್ತಾ ಬರೆಯುತ್ತಾ ಸಾಹಿತ್ಯದಲ್ಲೂ ನಮಗೇ ಅರಿಯದಂತೆ ಯಾವುದೋ ’ಇಸಂ’ಗೆ ಕಟ್ಟುಬಿದ್ದು ಕಾವ್ಯದ ಬದ್ಧತೆಯನ್ನೇ ಮರೆಯುತ್ತೇವೆನಿಸುತ್ತದೆ. ಒಮ್ಮೊಮ್ಮೆ ಧಿಗ್ಗನೆ ಹೊಳೆಯುತ್ತದೆ, ಅರೇ, ಈ ಮಾರ್ಗದಲ್ಲೂ ಕಾವ್ಯ ಮೂಡಬಹುದಲ್ಲವೇ ಅಂತ :) ಇದನ್ನು ಬರೆಯುತ್ತಿರುವಾಗ ನನಗಾದ ಖುಶಿ ಇಂಥದ್ದು.

ಪದ್ಯ ತಮಗೆ ಖುಶಿ ತಂದಿದ್ದು ಸಂತೋಷ.

V.R.BHAT said...

ದೀಪಲಹರಿ ಬಹಳ ಮಜವಾಗಿಯೂ ಕಳಾಪೂರ್ಣವಾಗಿಯೂ ಒಡಮೂಡಿದೆ. ಕಾವ್ಯ ಎಂಬುದು ಒಂದು ರಸಾನುಭೂತಿ, ಬರೆಯುವುದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಡವೆಂದು ಕಾರಂತರು ವೈದೇಹಿಯವರ ಹತ್ತಿರ ಹೇಳಿದ್ದರಂತೆ, ಅದು ಸರಿಯೇ, ಆದರೆ ಅವರ ಮಾತಿನ ದಾಟಿಯಲ್ಲಿ ಬರವಣಿಗೆ ಅಷ್ಟೇ ಅರ್ಥಗರ್ಭಿತವಾಗಿಯೂ ಇರಬೇಕು-ಬರೆದದ್ದೆಲ್ಲಾ ಕಾವ್ಯವೋ ಸಾಹಿತ್ಯವೋ ಆಗುವುದಿಲ್ಲ ಎಂಬ ಧೋರಣೆ ಇತ್ತು ಎಂಬುದು ಸತ್ಯ. ಬೇಂದ್ರೆಯವರು ಕಾವ್ಯ ಹೇಗಿರಬೇಕು ಎಂಬ ಬಗ್ಗೆ ಬಹಳ ಬರೆದಿದ್ದಾರೆ ಎಂದು ಕೇಳಿದ್ದೇನೆ ಆ ಕುರಿತು ನಮ್ಮ ಸುಧೀಂದ್ರರಲ್ಲಿ ಕೇಳಬೇಕು, ಇತ್ತೀಚೆಗೆ ’ಮಯೂರ’ದಲ್ಲಿ ಕಾವ್ಯದ ಕುರಿತು ಗೌರೀಶ್ ಕಾಯ್ಕಿಣಿಯವರು ಅಂದು ಬರೆದಿದ್ದ ಪ್ರಬಂಧ ಪ್ರಕಟವಾಗಿದೆ-ಅದ್ರೆ ಓದಿ, ಕವನ ಬಿಸಿರಸಗವಳ ಎನ್ನಲು ಯಾವುದೇ ಆತಂಕವಿಲ್ಲ. ನಿಮ್ಮ ಬರಹದ ಝರಿ, ಲಹರಿ ಹೀಗೇ ಮುನ್ನಡೆಯಲಿ, ಉತ್ತಮ ಅಭಿರುಚಿಯುಳ್ಳ, ರಸಾಭಿಜ್ಞತೆಯುಳ್ಳ, ಸಂಸ್ಕೃತದ ಅಧ್ಯಯನ-ಅಧ್ಯಾಪನವುಳ್ಳ ನಿಮ್ಮಂಥವರಿಂದ ಅನೇಕ ಕೃತಿಗಳು ಹೊರಬರಲಿ ಎಂದು ನಿಮ್ಮ ಬೆಳಕಿನ ಕವನದ ಸಂದರ್ಭದಲ್ಲೇ ಶುಭ ಕೋರುತ್ತಿದ್ದೇನೆ, ಧನ್ಯವಾದಗಳು.

prabhamani nagaraja said...

ಜುಳುಜುಳು ನೀರು ಹರಿದ೦ತೆ,
ಪಟಪಟನೆ ಪಟಾಕಿ ಸಿಡಿದ೦ತೆ.......
ಕವನದ ಸಾಲುಗಳು ಮೋಡಿಮಾಡಿವೆ ಸರ್, ಸು೦ದರ ಸುಧೀರ್ಘ ಕವನಕ್ಕಾಗಿ ಅಭಿನ೦ದನೆಗಳು.

Manjunatha Kollegala said...

ಭಟ್ಟರೇ, ಎಂದಿನಂತೆ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.

Manjunatha Kollegala said...

ಧನ್ಯವಾದ ಪ್ರಭಾಮಣಿಯವರೇ, ಬರುತ್ತಿರಿ