ಬಹಳ ಹಿಂದೆ ನಾನು ಮಾಡಿದ W.B.Yeats ಕವನವೊಂದರ ಅನುವಾದವನ್ನು ತುಸು ಬದಲಿಸಿ ಮರುಬರೆದಿದ್ದೇನೆ. ಮೊದಲ ಅನುವಾದವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ (right click ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಂಡರೆ ಅನುಕೂಲ)
ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"
"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"
"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"
ಟಿಪ್ಪಣಿ:
ಕೊನೆಯ ಎರಡು ಸಾಲುಗಳಿಗೆ ಮೂಲದಲ್ಲಿರುವ ನುಡಿ:
For nothing can be sole or whole
That has not been rent?
ಸೋಲ್ (sole) ಮತ್ತು ಹೋಲ್ (whole) ಎನ್ನುವ ಪದಗಳನ್ನು ಉಚ್ಚರಿಸಿದಾಗ ಅವು soul ಮತ್ತು hole ಎನ್ನುವ ಧ್ವನಿಗಳನ್ನೂ ಹೊರಡಿಸುವ ಮೂಲಕ ಮುಂದಿನ ಸಾಲಿನಲ್ಲಿ ಬರುವ rent ಅನ್ನುವ ಪದಕ್ಕೆ ವಿವಿಧಾರ್ಥಗಳನ್ನು ಕೊಡುತ್ತದೆ; ಅದೇ ಇಲ್ಲಿನ ಸ್ವಾರಸ್ಯ - rent ಅನ್ನುವ ಪದಕ್ಕೇ ಬಾಡಿಗೆಗೆ ಕೊಡು/ಹರಿದುಹಾಕು (rend p.p. rent) ಅನ್ನುವ ಅರ್ಥಗಳಿರುವುದನ್ನೂ ಮತ್ತು ಈ ಕವನದಲ್ಲಿ ಬರುವ ಜೇನ್ ಓರ್ವ ವೇಶ್ಯೆಯೆನ್ನುವುದನ್ನೂ ಗಮನಿಸಿದರೆ rent ಅನ್ನುವುದರ ಸ್ವಾರಸ್ಯ ಹೊಳೆಯುತ್ತದೆ. ಹರಿಯದೇ ಹೊಲೆಯುವುದಕ್ಕಾಗುವುದೇ ಎಂಬ ಅರ್ಥದ ಜೊತೆ, ಇಲ್ಲಿ "ಹರಿಯದೇ ತೂತಾಗುವುದೇ" ಅನ್ನುವ ವ್ಯಂಗ್ಯಾರ್ಥವೂ ಮತ್ತು "ಹರಿದಿದ್ದಕ್ಕೇ ತಾನೆ ಒಂದಾಗುವ ಅಗತ್ಯ?" ಎಂಬ ಅರ್ಥವೂ ಕೂಡಿ ಬರುತ್ತದೆ. ಜೊತೆಗೆ, ತನ್ನ ಈ ಹರಿದ (ಮಾರಿಕೊಂಡ) ಜೀವನದ ಪಾಪಕೂಪವೇ ನನ್ನ ಆತ್ಮೋನ್ನತಿಯ ದಾರಿ ಎಂಬ ಧ್ವನಿಯೂ ಇದೆ (soul ಅನ್ನುವ ಉಚ್ಚಾರಣೆಯ ಭ್ರಮೆ ಇದನ್ನೇ ಧ್ವನಿಸುತ್ತದೆ). ಇದಕ್ಕೆ ಇಂಬುಕೊಡುವಂತೆ ಈ ಮೊದಲ ನಾಲ್ಕು ಸಾಲುಗಳನ್ನು ಗಮನಿಸಬಹುದು:
ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
("A woman can be proud and stiff
When on love intent;
But love has pitched his mansion in
The place of excrament;)
ಪ್ರೇಮದ ಉತ್ಕಟಸ್ಥಿತಿಯೇ ಆತ್ಮದ ಉನ್ನತಿಯೆನ್ನುತ್ತಾರೆ, ಆದರೆ ಆ "ಪ್ರೇಮ" ಅರಳುವುದೇ ಹೊಲಸಿನ ಕೂಪದಲ್ಲಿ ಅನ್ನುತ್ತಾಳೆ ಜೇನ್. ಶಿಷ್ಟ/ಪವಿತ್ರ ಜೀವನವನ್ನು ಪ್ರತಿನಿಧಿಸುವ ಪಾದ್ರಿಯ ಉಪದೇಶದ ಭಾಷೆಗೆ ಸವಾಲೆಸೆವಂತೆ ಮೈಮಾರಿ ಬದುಕುವ ಹೆಂಗಸಿನ ಒರಟು (rude and crude) ಭಾಷೆಯನ್ನೂ, ಆ ಭಾಷೆಯ ಒರಟುತನದಲ್ಲೇ ಅರಳುವ ತಲೆದೂಗಿಸುವ ತರ್ಕದ ಸೂಕ್ಷ್ಮತೆಯನ್ನೂ ಇಲ್ಲಿ ಗಮನಿಸಬಹುದು. ಕೆಸರಿನ ಕಮಲದಂತೆ ಒರಟು ಮಾತಿನಲ್ಲಿ ಅರಳುವ ಈ ಸೂಕ್ಷ್ಮ, ಜೇನಳೇ ಹೇಳುವಂತೆ ಹೊಲಸಿನಲ್ಲರಳುವ ಸೊಗಸು, ಕಾಮದ ಕೆಸರಿನಲ್ಲಿ ಹುಟ್ಟಿ ಮೇಲೇರುವ ಪ್ರೇಮದ ಔನ್ನತ್ಯವನ್ನೂ ಧ್ವನಿಸುತ್ತದೆ.
ಆದರೆ sole ಮತ್ತು whole ಗಳನ್ನು soul ಮತ್ತು hole ಎಂದೂ ಅರ್ಥ ಸ್ಫುರಿಸುವಂತೆ ಉಚ್ಚರಿಸುವ ಸೌಲಭ್ಯ ಕನ್ನಡದಲ್ಲಿ ಇಲ್ಲವಾದ್ದರಿಂದ ಈ ಸ್ವಾರಸ್ಯವನ್ನು ಕನ್ನಡದ ಅನುವಾದದಲ್ಲಿ ತರುವುದು ಕಷ್ಟ; ಆದ್ದರಿಂದ ಬರೀ ಅರ್ಥವನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಈ ದೃಷ್ಟಿಯಿಂದ ಈ ಅನುವಾದದ ಬಗೆಗೆ ನನಗೆ ಅತೃಪ್ತಿಯಿದೆ.
21 comments:
ಮಂಜುನಾಥರೆ,
ನೀವು ಮಾಡಿದ ಕೆಲವು ಬದಲಾವಣೆಗಳಿಂದಾಗಿ, ಮೊದಲಿನ ಅನುವಾದಕ್ಕಿಂತಲೂ ಎರಡನೆಯ ಅನುವಾದವು ಹೆಚ್ಚು ಸರಾಗವಾಗಿ, ಹೆಚ್ಚು ಮನನೀಯವಾಗಿ ಬಂದಿದೆ.
ಅನಂತಮೂರ್ತಿಯವರು ಏಟ್ಸ್ ಕವಿಯ ಕವನಗಳನ್ನು ಅನುವಾದಿಸಿ ಒಂದು ಸಂಕಲನ ಹೊರತಂದಿದ್ದಾರೆ. ಈ ಕವನವೂ ಸಹ ಆ ಸಂಕಲನದಲ್ಲಿದೆ. ಅನಂತಮೂರ್ತಿಯವರ ಅನುವಾದಕ್ಕಿಂತಲೂ ನಿಮ್ಮದೇ ಹೆಚ್ಚು ಚೆನ್ನಾಗಿದೆ ಎಂದು ನನಗೆ ಭಾಸವಾಗುತ್ತದೆ.
ಸುನಾಥರೇ, ನನ್ನ ಎರಡೂ ಅನುವಾದಗಳನ್ನು ನೀವು serious ಆಗಿ ಪಕ್ಕಪಕ್ಕದಲ್ಲಿಟ್ಟು ನೋಡಿದ್ದು ನನಗೆ ತುಂಬಾ ಸಂತಸವಾಯಿತು; ಹಾಗೆಯೇ ಈಗಾಗಲೇ ಪ್ರಕಟಗೊಂಡ ಮತ್ತೊಂದು ಅನುವಾದದ ಜೊತೆ ಹೋಲಿಸಿ ನೋಡಿದ್ದು. ಅನಂತಮೂರ್ತಿಯವರ ಅನುವಾದವನ್ನು ನೋಡುವೆ (ನಿಮಗೆ ವಿವರ ತಿಳಿದಿದ್ದರೆ ದಯವಿಟ್ಟು ಕೊಡಿ)
ಅನುವಾದವನ್ನು ಮೆಚ್ಚಿದ್ದಕ್ಕೆ ಧನ್ಯವಾದ.
ನನಗೆ ಇಂಗ್ಲೀಶು ವ್ಯಾಕರಣ ಸರಾಗವಾಗಿ ಬರುವುದಿಲ್ಲ, ಹಾಗಾಗಿ ನಿಮ್ಮ ಕೊನೆಯ ಸಾಲುಗಳ ಟಿಪ್ಪಣಿಯ ಬಗೆಗೆ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ಅನುವಾದದ ಮಟ್ಟಿಗೆ ನಿಮ್ಮ ಪ್ರತಿಭೆಗೆ ಬೆರಗಾದೆ. ನನಗೆ ಎರಡೂ ಚೆನ್ನಾಗಿದೆ ಅನಿಸಿತು.(ನನ್ನ ಗ್ರಹಿಕೆಯ ಮಿತಿ ಅಷ್ಟೇ ಅನಿಸುತ್ತದೆ). ಚೆನ್ನಾಗಿದೆ.
ಇದನ್ನು ಹಿ೦ದೊಮ್ಮೆ ಓದಿದ ನೆನಪು .. Lovely translation
ಸುಬ್ರಹ್ಮಣ್ಯ, ಕವಿಯ ಪ್ರತಿಭೆಯೇ ಬೆರಗುಗೊಳಿಸುವಂಥದ್ದು, ಅದನ್ನು ಕನ್ನಡಕ್ಕೆ ಅಷ್ಟೇ ಚೆನ್ನಾಗಿ ತರುವಂತಿದ್ದರೆ, ಎನ್ನಿಸುವುದು. ನಿಮ್ಮ ಮಾತುಗಳಿಗೆ ಋಣಿ
ಜಯಂತ್, ಹೌದು; ಇದನ್ನು ಬಹು ಹಿಂದೆ (ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಅನುವಾದಿಸಿದ್ದು, ಅದೂ ಈ ಬ್ಲಾಗಿನಲ್ಲಿದೆ, ನೀವು ಓದಿರುತ್ತೀರಿ - http://nannabaraha.blogspot.com/2007/03/crazy-jane-talks-with-bishop.html).
ಈಗ ಹೀಗೇ ಶ್ರೀಕಾಂತರ ಜೊತೆ ಇಂಗ್ಲಿಷ್ ಕವನಗಳ ಬಗ್ಗೆ ಮಾತಾಡುತ್ತಿದ್ದಾಗ ಇದು ನೆನಪಾಯಿತು. ಓದಿದೆ, ಇದನ್ನು ತುಸು ಉತ್ತಮಗೊಳಿಸಬಹುದೆನಿಸಿತು. ಅದನ್ನೇ ಮತ್ತೆ ಬದಲಿಸಿ ಟಿಪ್ಪಣಿ ಬರೆದು ಮರುಪ್ರಕಟಿಸಿದೆ.
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್
Nice. Keep Translating.
ಮಂಜುನಾಥರೇ,
ನಿಮ್ಮ ಅನುವಾದದ ಬಗ್ಗೆ ಖುಷಿಯಿದೆ.ಹಾಗೆಯೇ ನಿಮ್ಮ ಪ್ರಯತ್ನದ ಬಗೆಗೂ ಕೂಡ.
ಆದರೆ ಬೇರೆ ಭಾಷೆಯ ಅದರಲ್ಲೂ ಭಾರತೀಯ ಭಾಷೆಯಲ್ಲದ ಬರಹ/ಕವಿತೆಗಳ ಬಗ್ಗೆ
ಅನುವಾದಿಸುವಾಗ ಅನೇಕ ಸವಾಲುಗಳು ಎದುರಾಗುತ್ತವೆ.ಅನುವಾದಕಾರ ಎಷ್ಟೇ ಪ್ರಾಮಾಣಿಕ ಪ್ರಯತ್ನಪಟ್ಟರೂ
ಮೂಲ ಭಾಷೆಯಲ್ಲಿನ ಸಂಸ್ಕೃತಿ,ಸೊಗಡು ಮತ್ತು pun ಗಳನ್ನು ಅನುವಾದಿಸುವದು ತೀರ ಕಷ್ಟ.ಅದು ನಮ್ಮ ಭಾಷೆಯ
ಮಿತಿಯೂ ಆಗಿರಬಹುದು ಅಥವಾ ಅಲ್ಲಿನ ಸಂದರ್ಭ,ನಡೆನುಡಿಗಳು ನಮಗೆ ಒಗ್ಗದಿರದೇ ಇರಬಹುದು.
ಇದು ಎಲ್ಲ ಅನುವಾದಕರ ಸರ್ವಕಾಲಿಕ ಸಮಸ್ಯೆ.ಹೀಗಾಗಿ ನಾನು ಕೂಡ ಒಮ್ಮೊಮ್ಮೆ ಅನುವಾದ ಮಾಡುವಾಗ ಭಾವಾನುವಾದ ಅಥವಾ
ಅದರ recreation ಮಾಡುವ ಪ್ರಯತ್ನ ಮಾಡುತ್ತೇನೆ.ಹೀಗಾದಾಗ ಮೂಲಕೃತಿಗೆ ನಾವು ನ್ಯಾಯ ಒದಗಿಸಬಹುದು ಅನಿಸುತ್ತದೆ.
ಅನುವಾದಿಸುವ ಪ್ರತಿ ಕವಿಯೂ ಹಪ ಹಪಿಗೆ ಬೀಳುವ ತೊಡಕು, ಈ ಪದಗಳ ಮಾಯಾ ಪ್ರಪಂಚ. ಗಾಲಿಬ್ ಗಜಲುಗಳನ್ನು ಕನ್ನಡಕ್ಕೆ ಇಳಿಸುವಾಗ, ಇಂತದೇ ಪ್ರಸವ ವೇದನೆ ನಾನೂ ಅನುಭವಿಸಿದ್ದೇನೆ.
ಆದ್ದರಿಂದ ಇಲ್ಲಿ ಅನುವಾದಕನ ಪ್ರಾಮಾಣಿಕೆಯಷ್ಟೇ ತೌಲಿಕವಾಗುತ್ತದೆ. ಈ ನಿಟ್ಟಿನಲ್ಲಿ ನೀವು ಗೆದ್ದಿದ್ದೀರಿ.
ಧನ್ಯವಾದಗಳು ಸತೀಶ್, ಬರುತ್ತಿರಿ.
ಸರ್,
ತಿದ್ದುಪಡಿಯೊಂದಿಗೆ ಮತ್ತೊಮ್ಮೆ ಏರಿಸಿದ್ದಕ್ಕೆ ಥ್ಯಾಂಕ್ಸು. ಈ ಮೊದಲು ಇದನ್ನು ಓದಿದ್ದೆನಾದರೂ ಅಷ್ಟಾಗಿ ಪರಿಣಾಮ ಬೀರಿರಲಿಲ್ಲ. ಈಗ ಮತ್ತೊಮ್ಮೆ ಈ ನಿಮ್ಮ ಕವನವನ್ನ ಓದಿಕೊಂಡೆ. ಮೂಲ ಕವಿತೆಯನ್ನೂ ಕೂಡಾ. ಮೇಲಿನವರೆಲ್ಲ ಹೇಳಿರುವಂತೆ ತಿದ್ದುಪಡಿಯು ಕವನಕ್ಕೆ ಹೆಚ್ಚು ಸೂಕ್ತವಾದ ಕ್ಲೈಮ್ಯಾಕ್ಸ್ ಒದಗಿಸಿದೆ.
ಮೂಲ ಕವಿತೆಯಲ್ಲಿರುವ ಪನ್ ವ್ಯಂಗ್ಯ ಎಲ್ಲವನ್ನೂ ಅನುವಾದಿತ ಕವನಗಳಲ್ಲಿ ಹಿಡಿದಿಡೋದು ಕಷ್ಟಸಾಧ್ಯ. ಅದು ಆ ಕವನದ ದೇಶ-ಕಾಲ-ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿರ್ಧರಿತವಾಗಿರುತ್ತದೆ.ಜಾಗತಿಕವಾಗುವುದಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್!
ಹೀಗೇ ಬರೀತಿರಿ
Yeats poetic development can be traced in four distinct phases. Initially that of a Romantic, then a phase of social realism, followed by visionary phase and finally culminating in a phase of calm resignation.
Yeats, the modernist poet is replete with symbolism in the visionary period of his poetic development. The Crazy Jane Poems (a bunch of seven poems) belong to this period. These were started in the spring of 1929 after a phase of extreme personal depression and inactivity. The Reader can easily gauge the "greatest mental excitement" Yeats was going though when he wrote these poems. Such intense poems are the most difficult to translate too. And, K.S. Manjunatha has done complete justice to this arduous task. The choice and balance of words are without exaggeration second to none. Especially his Kannada translation of "Love has pitched his mansion in the place of excrement," has elevated “Translation” to the status of “supreme art”. It is very easy to mess up the translation of this line -- to make it sound either trivial or vulgar, -- or paint it in a totally orthodox hue. But, KSM has found success in striking the right chord by making the translation as close to the original as possible.
Now, couple of other points which will help in overall appreciation of this poem.
i)Yeats had been ousted from the Irish Senate by the Catholic group. The anti-religious attitude of Crazy Jane may be reflecting Yeats’ own feeling in the months that followed his removal.
ii)Crazy Jane was founded on an old woman who lived in a cottage near Gort. She was a local satirist and a really terrible one. She embodies all natural energies of mankind pitted against conventional religion and abstract intellect. She is intensely alive.
NOTE: I apologize for having commented in English, but I felt my expression will be more natural in English, especially since the original poem is an excellent piece of English Literature.
ರಾಘವೇಂದ್ರ,
ನಿಮ್ಮ ಮಾತು ಒಂದು ರೀತಿಯಲ್ಲಿ ನಿಜ. ಮೊದಲನೆಯ ತೊಡಕು, ಮೂಲ ಭಾಷೆಯ ಪರಿಸರದ್ದು. ಎರಡನೆಯದು ಭಾಷೆಯದೇ ಸೌಲಭ್ಯ/ದೌರ್ಲಭ್ಯಗಳು. ಭಾವಾನುವಾದ/recreation ಮೊದಲನೆಯ ತೊಡಕನ್ನು ನಿವಾರಿಸುತ್ತದೆ; ಆದರೆ ಕವನವೊಂದರ ಸ್ವಾರಸ್ಯ ಆ ಭಾಷೆಯ ನುಡಿಸೌಲಭ್ಯದಮೇಲೇ ನಿಂತಿರುವಾಗ (ಈ ಕವನದ ಕೊನೆಯ ಸಾಲುಗಳಂತೆ), ಕೇವಲ ಭಾವಾನುವಾದ/recreation ಕವನಕ್ಕೆ ಪೂರ್ಣ ನ್ಯಾಯ ಒದಗಿಸುವುದಿಲ್ಲ, ಏಕೆಂದರೆ ಅಷ್ಟಾಗ್ಯೂ ನಾವು ಆ ನುಡಿಯ ಸ್ವಾರಸ್ಯ ಹಿಡಿಯಲಾಗುವುದಿಲ್ಲ.
ಇದು ಹೇಗಪ್ಪಾ ಅಂದರೆ ಹಾಡುಗಾರಿಕೆಗೆ ಮೃದಂಗ ನುಡಿಸಿದಂತೆ. ಮೃದಂಗವಾದಕ, ಹಾಡಿನ ಲಯ ಹಿಡಿಯಬಹುದು, ತನ್ನದೇ ಆದ ರೀತಿಯಲ್ಲಿ ಅದರ ಭಾವವನ್ನೂ ಹಿಡಿಯಬಹುದು, ಆದರೆ ಹಾಡುವಿಕೆಯ ಬಾಗು/ಬಳುಕು/ಪಲುಕುಗಳನ್ನು ಹಿಡಿಯಲಾರ, ಏಕೆಂದರೆ ಮೃದಂಗದ ಮಿತಿಯೇ ಅದು. ಆದರೂ ಆ ಹಾಡಿನ ಬಾಗು-ಬಳುಕುಗಳು ನಿರ್ಮಿಸಿದ್ದೇ ಭಾವವನ್ನು ಮೃದಂಗದ ಮತ್ತಾವುದಾದರೂ ಚಮತ್ಕಾರದಿಂದ ನಿರ್ಮಿಸಿದ್ದೇ ಆದರೆ, ಅವ ಧೀರ :)
ಬದರಿನಾಥ್, ನಿಮ್ಮ ಹೋಲಿಕೆ ಖುಶಿ ಕೊಟ್ಟಿತು; ನಾನೂ ಹಾಗೆ ಹೇಳಿಕೊಳ್ಳಬಹುದು :)
ಅನುವಾದವನ್ನು ಮೆಚ್ಚಿದ್ದಕ್ಕೆ ಧನ್ಯವಾದ. ಬರುತ್ತಿರಿ
ಮೆಚ್ಚಿದ್ದಕ್ಕೆ ಧನ್ಯವಾದ ಸುಶೀಲ್. ನಿಮ್ಮ ಇತ್ತೀಚಿನ ಬಿಜಿ ದಿನಗಳಲ್ಲೂ ಇತ್ತ ಹಣಕಿಕ್ಕಲು ಸಮಯ ಮಾಡಿಕೊಂಡದ್ದು ಮತ್ತೊಂದು ಖುಶಿ.
ಶ್ರೀಕಾಂತರೇ, ನನ್ನ ಅನುವಾದದಲ್ಲಿ ಇಷ್ಟೊಂದು ಇದೆಯೆಂದು ನನಗೇ ಗೊತ್ತಿರಲಿಲ್ಲ :) ಗೊತ್ತಿದ್ದರೆ ಬಹುಶಃ ಹಿಂಜರಿದು ಪ್ರಯತ್ನವನ್ನೇ ಮಾಡುತ್ತಿರಲಿಲ್ಲವೇನೋ :)
ತಮಾಷೆಗೆ ಹೇಳಿದೆ. ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು. ಮತ್ತೆ ಬಹು ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ Crazy Jane ಸರಣಿಯ ಬಗ್ಗೆ ಮತ್ತು ಅದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ. Thanks for that; it should be really helpful in a better appreciation of the poem.
ಮಂಜುನಾಥ ಸ್ವಾಮೀ ಅಲ್ಲಲ್ಲ ಸಾರಿ ನಿನ್ನೆಯವರೆಗೆ ಅದೇ ತಲೆಯಲ್ಲಿದ್ದೆ: ಇಬ್ಬರೂ ಹೋಗಿಬಂದರಲ್ಲ! ಇರಲಿ ನಿಮಗೂ ಹಾಗೆ ಕರೆದರೆ ತಪ್ಪಿಲ್ಲಬಿಡಿ, ಬೇರೇಯವರು ಹೇಳಿದ ಪದಗಳನ್ನೇ ಬಳಸಿ ಹೇಳುವುದು ನಿಮಗೆ ಬೋರು ಹೊಡೆಸಬಹುದು, ಒಂದೇ ಪದದಲ್ಲಿ ಮುಗಿಸಿಬಿಟ್ಟರೆ ಹೇಳಿಕೆಗೆ ಅನ್ಯಾಯವಾಗಬಹುದು-ಹೀಗಾಗಿ ಎರಡು ಶಬ್ದಗಳಲ್ಲಿ ಬಣ್ಣಿಸುವುದಾದರೆ ಅತ್ಯಂತ ಪಸಂದಾಗಿದೆ ! ನಿಮ್ಮ ಬರಹಗಳು ಹೀಗೆ ಮುಂದುವರಿಯುತ್ತಿರುವುದು ನಮಗೆ ಸಂತಸ ತಂದಿದೆ.
ಭಟ್ಟರೇ ನಿಮ್ಮ ಎರಡೇ ಮಾತಿಗೆ ಹತ್ತು ಮಾತಿನ ತೂಕ. ಧನ್ಯವಾದ :)
ಈ ಕವನದ ಅನುವಾದವನ್ನು ನಾನು ಓದಿದ ಪುಸ್ತಕದ ಹೆಸರು ಬಹುಶ: ‘ಯೇಟ್ಸನ ಇಪ್ಪತ್ತು ಕವನಗಳು’ ಎಂದು ಇರಬಹುದು. ಈ ಪುಸ್ತಕವನ್ನು ನಾನು ಗ್ರಂಥಾಲಯದಿಂದ ಎರವಲು ಪಡೆದು ಓದಿದ್ದೆ. ಎರಡು ದಿನಗಳಿಂದಲೂ ಪ್ರಯತ್ನಿಸುತ್ತಿದ್ದೇನೆ. ಆದರೆ ಪುಸ್ತಕ ಸಿಗುತ್ತಿಲ್ಲ. ದೊರೆತ ಬಳಿಕ ನಿಮಗೆ ಮಾಹಿತಿ ನೀಡುತ್ತೇನೆ!
ಯೇಟ್ಸನ ಕವನವನ್ನು ಬಹಳ ಸಮರ್ಥವಾಗಿ ಅನುವಾದಿಸಿದ್ದೀರಿ ಹಾಗೂ ವಿವರಣೆಯೂ ಚೆನ್ನಾಗಿದೆ. ಅಭಿನ೦ದನೆಗಳು.
ಧನ್ಯವಾದ ಪ್ರಭಾಮಣಿಯವರೇ
Post a Comment