Thursday, June 2, 2011

ಸಕ್ಕದಮೋ ಕನ್ನಡಮೋ ನುಡಿಯೋ...

ಮೊನ್ನೆ ನಯಸೇನನ ಈ ಸಾಲುಗಳು ಕಣ್ಣಿಗೆ ಬಿತ್ತು:

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೆ ಸಕ್ಕದಂಗಳ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ

ಇದನ್ನು google buzz ನಲ್ಲಿ ಹಂಚಿಕೊಂಡಾಗ ಗೆಳೆಯ ಹಂಸಾನಂದಿ ಇಂತೆಂದರು. "True - for today we should also say the same thing about English!"

ಅಲ್ಲವೇ ಮತ್ತೆ? ಅಟ್ಟುವುದಾದರೆ ಸಂಸ್ಕೃತವೊಂದನ್ನೇ ಏಕೆ? ನಯಸೇನನ ಕಾಲದಲ್ಲಿ ಆಂಗ್ಲದ ಹಾವಳಿಯಿರಲಿಲ್ಲ. ಇದ್ದಿದ್ದರೆ ಅವ ಹೀಗೆ ಹೇಳಿರಬಹುದಿತ್ತೇ?

ಆಂಗಿಲಮಂ ಪೇೞ್ವೊಡೆ ನೆಱೆ
ಯಾಂಗಿಲಮನೆ ಪೇೞ್ಗೆ ಬೆರೆಸಿ ಕಿಡಿಸುವುದೇಂ ತಾ
ಮಂಗಳಮೆ ಚೊಕ್ಕ ಕನ್ನಡ
ಕಾಂಗಿಲಮಂ ತುಪ್ಪಕೆಣ್ಣೆ ಬೆರೆಸುವ ತೆರದೊಳ್

ಮೊದಲು ಹೇಳಿದ ನಯಸೇನನ ಸಾಲುಗಳೂ ಮತ್ತು ಅದರ ಅಭಿಪ್ರಾಯಭೂತವಾಗಿ ನಾನು ಬರೆದ ಮೇಲಿನ ಸಾಲುಗಳೂ, ಸವಿಗನ್ನಡದಲ್ಲಿ ಕಟಕಟೆಯೆನಿಸುವಷ್ಟು ಅಸಹಜವಾಗಿ ಸಕ್ಕದ/ಆಂಗ್ಲಗಳನ್ನು ಬಳಸುವ ಬಗೆಗೆನ್ನುವುದು ಸ್ಪಷ್ಟ. ಆದರೆ ಸಕ್ಕದದ ಮೈಲಿಗೆಯಿಂದ ಕನ್ನಡವನ್ನೇ ಬುಡಮಟ್ಟ clean ಮಾಡಿಬಿಡಬೇಕೆನ್ನುವ ಇಂದಿನ ಅರ್ಥಹೀನ ಕೂಗಿಗೂ ಇವೇ ಸಾಲುಗಳು ಆಧಾರವಾದೀತಲ್ಲವೇ? ಈ ದಿಕ್ಕಿನಲ್ಲಿ ಯೋಚಿಸುತ್ತಿದ್ದಾಗ ಮೂಡಿದುವು ಈ ಕೆಳಗಿನ ಕಂದಗಳೈದು.

ಸಜ್ಜಿಗೆಗೆರೆಯದೆ ತುಪ್ಪಮ
ನೊಜ್ಜೆಯೊಳಿಕ್ಕುವರೆ ಮಜ್ಜಿಗೆಗೆ ರುಚಿಯರಿಗರ್
ಮಜ್ಜನಕೆಣ್ಣೆಯನೆರೆಯದೆ
ಯುಜ್ಜುವವೋಲ್ ತಲೆಗೆ ತುಪ್ಪಮನ್ ಸಕ್ಕರೆಯನ್ ೧

ಎಣ್ಣೆಯೆ ರುಚಿಯೋಗರಕೆನೆ
ಬೆಣ್ಣೆಯದರ ಸವಿಯನೆತ್ತದೇಂ ಕಿಡಿಸುಗುಮೇ
ಎಣ್ಣೆಯಬೆಣ್ಣೆಯ ಸವಿಯರಿ
ದುಣ್ಣುವ ರಸಿಗನವಗಲ್ತೆ ಸೊಗಯಿಪುದಿನಿಗಳ್ ೨

ನುಡಿಯೇಂ ಬರಿ ಪದಮೇ ಕ
ನ್ನಡಪದವೊಟ್ಟುತಲೆ ಸಕ್ಕದಮನಕ್ಕಜದಿಂ
ಬಡಿದಟ್ಟಲ್ಕಾನುಡಿ ಕ
ನ್ನುಡಿಯಪ್ಪುದೆ ಮರುಳೆ ಕನ್ನಡಮದನೆ ಮರೆವಾ ೩

ಪದನರಿದುಲಿಯದೆ ಸವಿಯದೆ
ಪದವಿಡಿದೆಳೆಯುತಿದು ಕನ್ನಡಂ ಸಕ್ಕದಮೆಂ
ದದರುೞಿವಿಡಿಯಲ್ ಕಬ್ಬದ
ಪದಮದು ಕಿಡದುಳಿವುದೆಂತುಪುೞಿವಾಲಿನವೋಲ್ ೪

ನುಡಿಯೊಳನುಡಿತಕೆ ಗಮನಂ
ಗುಡುತೆಸೆವನುನಯದಿ ನಾದದೊಳ್ ಮನವಿಡುವನ್
ನುಡಿಯರಿಗನ್ ಗಮನಂಗಿಡೆ
ನುಡಿದರಿಗನೆನಲ್ ಸಮಂತು ನುಡಿಗದೆ ಲಕ್ಷ್ಯಂ ೫

9 comments:

sunaath said...

ನಯಸೇನನ ಪದ್ಯದ ಜೊತೆಜೊತೆಗೇ ನಿಮ್ಮ ಪದ್ಯಗಳನ್ನೂ
ಸೇರಿಸಲೇ ಬೇಕು! ಔಚಿತ್ಯಪೂರ್ಣ ವಿಮರ್ಶಾ ಪದ್ಯಗಳು.

Manjunatha Kollegala said...

ಸುನಾಥರೇ, ಧನ್ಯವಾದ

ಚುಕ್ಕಿಚಿತ್ತಾರ said...

ಮ೦ಜುನಾಥರೆ..
ಕ೦ದಗಳು ಚೆನ್ನಾಗಿವೆ..:)

V.R.BHAT said...

bahala chennaagive, Sunaathara helike samanjasavaagide!

Manjunatha Kollegala said...

ಧನ್ಯವಾದ, ಚುಕ್ಕಿ ಚಿತ್ತಾರ.
ಭಟ್ಟರೇ, ಚಿಕ್ಕ ಕಂದಕ್ಕೆ ದೊಡ್ಡ ಮಾತು! ಧನ್ಯವಾದ

Santhosh Mugoor (ಸಂk) said...

bahaLa chennaagi ide. arthapoorNavaagive.

Manjunatha Kollegala said...

Thanks Santosh

ಬಾಲು said...

ನಿಮ್ಮ ಕಂದಪದ್ಯ ಗಳು ಸಮಯೋಚಿತವಾಗಿದೆ.

Manjunatha Kollegala said...

ಧನ್ಯವಾದ ಬಾಲು...