Wednesday, November 17, 2010

ಎರಡು ಸಂಸ್ಕೃತ ಶ್ಲೋಕಗಳು

ಕನ್ನಡ ಸಂಸ್ಕೃತ ಛಂದಸ್ಸುಗಳು ನನ್ನನ್ನು ಯಾವಾಗಲೂ ಆಕರ್ಷಿಸಿವೆ. ಹೀಗೇ ಆಗೀಗ ಅವುಗಳಲ್ಲಿ ಸುಮ್ಮನೇ ಕೈಯಾಡಿಸುವುದುಂಟು. ಮೊನ್ನೆ ಮೊನ್ನೆ ಗೆಳೆಯ ಶ್ರೀಕಾಂತರು "ಪ್ರಗತಿ" ಎಂಬ ಪದವಿರುವಂತೆ ಸರಸ್ವತಿ ಮತ್ತು ಗಣಪತಿಯಮೇಲೆ ಒಂದು ಸಂಸ್ಕೃತ ಶ್ಲೋಕವನ್ನು ರಚಿಸುವುದು ಸಾಧ್ಯವೇ ಎಂದು ಕೇಳಿದ್ದರು. ಸಂಸ್ಕೃತ ಯಾವತ್ತೂ ನನ್ನ ಭಾಷೆಯಾಗಿರಲಿಲ್ಲವಾದರೂ ಅದೊಂದು ಸಾಕಷ್ಟೇ ಪರಿಚಿತಭಾಷೆಯೇ ಸರಿ. ನೆರೆಮನೆಯ ಭಾಷೆಯೆಂಬ ಸಲುಗೆಯಿಂದ ಹೊಸೆದದ್ದು ಈ ಶ್ಲೋಕಗಳು

ಸರಸ್ವತೀ:ವಂದೇ ವಾಗೀಶ ವಾಣೀವಿಲಸಿತ ವರ ಚತ್ವಾರಿ ವಾಣೀಂ ಪುರಾಣೀಂ
ವಂದೇಹಂ ಹಂಸಿನೀಂ ತಾಂ ಸದಮಲ ಧವಳಾಂ ಸರ್ವವರ್ಣಾಂ ಸುವಾಣೀಂ
ಯುಕ್ತಿಸ್ಸಂಧಾನವಾದಾದ್ಯಖಿಲ ಪಟುಕಲಾ ಕಾರಿಣೀಂ ಚಾರುವಾಣೀಂ
ಬ್ರಹ್ಮಾಣೀಂ ಬ್ರಾಹ್ಮಣೀಂ ಸತ್ಪ್ರಗತಿವಿಗತಿ ಸಂದಾಯಿನೀಂ ಭಾವಯೇಹಂ - ಸ್ರಗ್ಧರಾವೃತ್ತ

ಗಣಪತಿ:ಗಜವಕ್ತ್ರಂ ಸುಜನಾಳಿವಂದಿತಲಸತ್ಪದ್ಮಾರುಣಶ್ರೀಪದಂ
ದುರಿತಾರಿಷ್ಟಸಮಸ್ತಮಸ್ತಕದಳೀಮತ್ತೇಭವಿಕ್ರೀಡಿತಂ
ಸಕಲಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಅಖಿಳಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾ ಶ್ರೀಕರಂ - ಮತ್ತೇಭವಿಕ್ರೀಡಿತವೃತ್ತ

ಇದು ಮತ್ತೇಭವಿಕ್ರೀಡಿತವೃತ್ತದಲ್ಲಿದೆ (ಮತ್ತ + ಇಭ = ಮತ್ತೇಭ, ಮದಿಸಿದ ಆನೆ; ಅರಿಷ್ಟವೆಂಬ ಹೆಬ್ಬಾಳೆಯ ವನಕ್ಕೆ ಹೊಕ್ಕ ಮದಿಸಿದ ಆನೆ ಎಂಬ ಎರಡನೆಯ ಸಾಲು ಇದನ್ನೇ ಸೂಚಿಸುತ್ತದೆ, ಜೊತೆಗೆ ಇದರ ಛಂದಸ್ಸನ್ನೂ)

ವಿ ಆರ್ ಭಟ್ಟರ ಕೋರಿಕೆಯ ಮೇರೆಗೆ ಮತ್ತೊಂದು ತರಲೆ ಪ್ರಯತ್ನ, ಮೇಲಿನ ಗಣಪತಿ ಸ್ತುತಿಯನ್ನು ಶಾರ್ದೂಲವಿಕ್ರೀಡಿತವೃತ್ತದಲ್ಲಿ ಅಂದರೆ ಹೇಗಿರುತ್ತದೆ? ಹೀಗೆ:

ವಿಘ್ನೇಶಂ ಸುರಮೌಳಿಮಂಡಿತಲಸತ್ಪದ್ಮಾರುಣಶ್ರೀಪದಂ
ವಿಘ್ನಾರಿಷ್ಟಸಮಸ್ತಮಸ್ತಕದಳೀವಿಧ್ವಂಸವಿಕ್ರೀಡನಂ
ಸರ್ವಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಸರ್ವಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾಶಂಕರಂ

ಮೊದಲಿನ ಶ್ಲೋಕವನ್ನೇ ತುಸು ಮಾರ್ಪಡಿಸಿದ್ದೇನಷ್ಟೇ. ನಿಜಹೇಳಬೇಕೆಂದರೆ, ಇದೇ ನಾನು ಮೊದಲು ರಚಿಸಿದ್ದು. ಆಮೇಲೆ ಕದಳಿಯ ಸಾಲಿನಲ್ಲಿ "ಮತ್ತೇಭವಿಕ್ರೀಡಿತ" ಅನ್ನುವ ಪದ ಉತ್ತಮ ಪ್ರತಿಮೆಯಾಗಬಹುದಲ್ಲವೇ ಅನ್ನಿಸಿತು. ಅದು ಛಂದಸ್ಸನ್ನು ಸೂಚಿಸುವುದು ಕೂಡ. ಅದನ್ನು ಬಳಸುವ ಮನಸ್ಸು ಮಾಡಿದ್ದರಿಂದ ಇಡೀ ಶ್ಲೋಕವನ್ನು ತುಸು ಮಾರ್ಪಡಿಸಿ ಶಾರ್ದೂಲವಿಕ್ರೀಡಿತದಿಂದ ಮತ್ತೇಭವಿಕ್ರೀಡಿತವೃತ್ತವನ್ನಾಗಿ ಮಾರ್ಪಡಿಸಿದೆ

15 comments:

V.R.BHAT said...

ಮಳೆಯಿಂದ ಚಳಿಹಿಡಿದು ಒಂಥರಾ ಜಡ್ಡುಗಟ್ಟಿದ ಮೈಗೆ ರಸ್ತೆಯಲ್ಲಿ ಪಕ್ಕದಲ್ಲಿ ಓಡಾಡುವ ಗಾಡಿಗಳು ಹೊಗೆಉಗುಳಿದರೂ ಪರವಾಗಿಲ್ಲ; ಬಿಸಿಗಾಳಿ ತಟ್ಟಿದರೆ ಸಾಕು ಎಂಬಂತಹ ಅವಸ್ಥೆಯಲ್ಲಿದ್ದೆ. ವ್ಯಾಕರಣವನ್ನೆಲ್ಲಾ ಗೋಕರ್ಣಕ್ಕೆ ಕಳಿಸಿ ಬಾಗಿಲು ಹಾಕಿ ಹಿಂಬದಿಯ ಬಾಗಿಲಿನಿಂದ ಎಂತೆಂಥೆದೋ ಬರೆದು ಸಾಹಿತ್ಯವೆಂದು ಕರೆಯುವ ಮಹಾಸಮುದಾಯ ಹಲವರ ಮಧ್ಯೆ, ಮರುಭೂಮಿಯಲ್ಲಿ ನೀರು ಸಿಕ್ಕ ಅನುಭವವಾದಂತೇ ಅಲ್ಲಲ್ಲಿ ಆಗಾಗ ನಿಮ್ಮಂಥವರು ಗಡ್ಡಕ್ಕೆ ಆನಿಸಿದ ಕೈತೆಗೆದು ಬರೆದರೆ ಒಳ್ಳೆಯದು ಅನಿಸುತ್ತದೆ. ಮೆಚ್ಚುಗೆಯಾಯ್ತು ಮಹನೀಯ, ಆದ್ರೆ ಇನ್ನೊಂದಾಸೆ ಸಮಯವಾದಾಗ ಶಾರ್ದೂಲವಿಕ್ರೀಡಿತದಲ್ಲಿ ಒಂದು ಬರೆಯಬಹುದೇ ? ಇದು ಕೇವಲ ನನ್ನಿಷ್ಟಕ್ಕಾಗಿ ಕೇಳುತ್ತಿದ್ದೇನೆಯೇ ಹೊರತು ’ನಂಜು’ ತುಂಬಿದ್ದಲ್ಲ ! ಭಳಿರೇ ಭೇಷ್, ನಿಮ್ಮ ಪ್ರಯತ್ನಕ್ಕೊಂದು ದೊಡ್ಡ ಸಲಾಮು

Manjunatha Kollegala said...

ವಸಂತ್, ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಈ ಶ್ಲೋಕಗಳ ಅರ್ಥ ಹೀಗೆ:

ಸರಸ್ವತೀ:

ಒಟ್ಟಾರೆ ಭಾವಾರ್ಥ ಸಕಲ ವಿದ್ಯಾಧಿದೇವಿಯಾದ ಸರಸ್ವತಿಯನ್ನು ವಂದಿಸುತ್ತೇನೆ ಎಂದು:
ಮಾತಿನ ನಾಲ್ಕು ರೂಪಗಳನ್ನು ಗುರುತಿಸುತ್ತಾರೆ - ಪರಾ, ಪಶ್ಯಂತಿ, ಮಧ್ಯಮಾ ಮತ್ತು ವೈಖರೀ ಎಂಬುದೇ ಈ ನಾಲ್ಕು ವಾಗ್ರೂಪಗಳು (ಚತ್ವಾರಿವಾಣಿ); ಇದಕ್ಕೆ ವಾಗೀಶ-ವಾಗ್ದೇವಿಯರೇ ದೇವತೆಗಳು. ಸರಸ್ವತಿಯ ಒಂದುರೂಪವೇ ಮಾತಾದ್ದರಿಂದ ಆಕೆಯೇ ವಾಣಿ (ಮಾತು); ಅನಾದಿಕಾಲದಿಂದಲೂ ಇರುವುದರಿಂದ ಈಕೆ ಪುರಾಣೀ.

ಈಕೆ ಹಂಸವಾಹಿನಿ (ಹಂಸಿನೀ), ಶುಭ್ರಶ್ವೇತವರ್ಣೆ (ಸದಮಲ ಧವಳಾ); ಮತ್ತೆ ಶ್ವೇತವರ್ಣದಲ್ಲಿ ಎಲ್ಲ ಬಣ್ಣಗಳೂ ಅಡಕವಾಗಿರುವುದರಿಂದ "ಸರ್ವವರ್ಣಾ"; ವರ್ಣವೆಂದರೆ ಅಕ್ಷರವೆಂದು ಕೂಡ. ವಾಗ್ದೇವಿಯೇ ಸರ್ವ ಅಕ್ಷರಸ್ವರೂಪಳು, ಆದ್ದರಿಂದಲೂ ಆಕೆ "ಸರ್ವವರ್ಣಾ"

ಮಾತಿನ ಮುಖ್ಯ ಅಂಶವೆಂದರೆ, ಯುಕ್ತಿ, ಸಂಧಾನ, ವಾದ - ಈ ಎಲ್ಲ ಮಾತಿನ ಕಲೆಗಳಿಗೆ ಒಡತಿ, ಸೊಗಸಾದ ಮಾತುಗಳನ್ನು ನುಡಿಸುವವಳು, ಚಾರುವಾಣೀ

ಮತ್ತೆ ಬ್ರಹ್ಮನ ಸತಿಯಾದ್ದರಿಂದ ಬ್ರಹ್ಮಾಣೀ, ಬ್ರಹ್ಮಜ್ಞಾನಕ್ಕೆ ಸಾಧನವಾದ್ದರಿಂದ ಬ್ರಾಹ್ಮಣೀ, ನಮ್ಮೆಲ್ಲ ಪ್ರಗತಿ-ವಿಗತಿಗಳಿಗೂ ಕಾರಣಳಾದವಳನ್ನು ಸ್ಮರಿಸುತ್ತೇನೆ

ಗಣಪತಿ:
ಗಜಮುಖನೂ; ಸುಜನರಿಂದ ವಂದಿಸಲ್ಪಡುವವನೂ; ಕಷ್ಟಗಳೆಂಬ ಬಾಳೆಯವನಕ್ಕೆ ಮದಿಸಿದ ಆನೆಯಂತಿರುವವನೂ; ಎಲ್ಲ ಕಾರ್ಯಕ್ಕೂ ಮೊದಲು ಪೂಜಿತನೂ; ಶುಭಲಕ್ಷಣಗಳಿಂದ ತುಂಬಿದವನೂ; ಸಕಲಕಾರ್ಯಗಳಲ್ಲೂ ಪ್ರಗತಿಯನ್ನು ದಯಪಾಲಿಸುವವನೂ; ಶುಭಕರನೂ ಆದ ಗಣಪತಿಯನ್ನು ವಂದಿಸುತ್ತೇನೆ

Manjunatha Kollegala said...

ಭಟ್ಟರೇ, ನಿಮ್ಮ ಪ್ರೋತ್ಸಾಹವೇ ನನ್ನ ಉತ್ಸಾಹ ;)

ಮೊದಲಿನ ಶ್ಲೋಕವನ್ನೇ ತುಸು ಬದಲಿಸಿ ಶಾರ್ದೂಲವಿಕ್ರೀಡಿತದಲ್ಲಿ ಹಾಕಿದ್ದೇನೆ ನೋಡಿ. Actually ಮೊದಲು ಬರೆದದ್ದು ಇದನ್ನೇ. ಎರಡನೆಯ ಸಾಲಿಗೆ ಮತ್ತೇಭವಿಕ್ರೀಡಿತ ಅನ್ನುವ ಪದ ಅನಂತರ ಹೊಳೆದದ್ದರಿಂದ, ಅದರ ಛಂದಸ್ಸನ್ನೂ ಮತ್ತೇಭವಿಕ್ರೀಡಿತಕ್ಕೆ ಬದಲಿಸುವ idea ಬಂದು ಇಡೀ ಶ್ಲೋಕವನ್ನು ಬದಲಿಸಿ ಪ್ರಕಟಿಸಿದ್ದೆ. ಈಗ ಶಾರ್ದೂಲವಿಕ್ರೀಡಿತದ original ಕೂಡ ಇಲ್ಲಿದೆ

Srikanth said...

ಮಂಜುನಾಥರು ನನ್ನ ಕೋರಿಕೆಯನ್ನು ಮನ್ನಿಸಿ ಉನ್ನತ ಮಟ್ಟದ ಇಂತಹ ಶ್ಲೋಕರತ್ನಗಳನ್ನು ಅತ್ಯಲ್ಪ ಸಮಯದಲ್ಲಿ ದಯಪಾಲಿಸಿರುವುದು ನೋಡಿದರೆ, ನಾನು ಮತ್ತೆ ಮತ್ತೆ ’ಉಕ್ತಿ ಒಂದನ್ನು ರಚಿಸಿ ಕೊಡಿ’ ಎಂದು ಯಾಚಿಸಬೇಕಿನಿಸುತ್ತಿದೆ. ಈ ಮೂಲಕ ನನ್ನ ಧನ್ಯವಾದಗಳನ್ನು ತಿಳಿಸ ಬಯಸುತ್ತೇನೆ.

sunaath said...

ಮಂಜುನಾಥರೆ,
ನಿಮ್ಮ ಕವಿತಾಚಾರುಪಟುತ್ವವನ್ನು ಕಂಡು ಬೆಕ್ಕಸ ಬೆರಗಾದೆ.
ಈ ಎರಡೂ ಶ್ಲೋಕಗಳಲ್ಲಿ ಪಾಂಡಿತ್ಯಪೂರ್ಣ ಪದಜೋಡಣೆಗಿಂತ ಹೆಚ್ಚಿನ ಒಂದು ವಿಷಯವಿದೆ. ಈ ಶ್ಲೋಕಗಳನ್ನು ಹಳೆಯ ಸಂಸ್ಕೃತ ಕವಿಯೊಬ್ಬರು (ಉದಾಹರಣೆಗೆ ಮಾಘ,ಕಾಳಿದಾಸ ಇ.) ರಚಿಸಿದ್ದಾರೆ ಎಂದು ಹೇಳಿದರೆ ಸುಲಭವಾಗಿ ನಂಬಬಹುದು. ಗಜಾನನನು ಕದಳಿವನದಲ್ಲಿ ಕ್ರೀಡಿಸುವ ಮತ್ತೇಭನಾಗಿರುವದು ಸಹಜವೇ ಆಗಿದೆ. ನಿಮ್ಮನ್ನು ಪ್ರೇರೇಪಿಸಿದ ಶ್ರೀಕಾಂತರಿಗೆ ನನ್ನ ವಂದನೆಗಳು.
ನಿಮ್ಮ ಕಾವ್ಯಸ್ರೋತ ಹೀಗೆಯೆ ಹರಿಯುತ್ತಿರಲು ಗಣಪತಿ ಹಾಗು ವಾಣಿ ಅನುಗ್ರಹಿಸಲಿ.

Manjunatha Kollegala said...

ಶ್ರೀಕಾಂತರೇ, ನಿಮ್ಮ ಮಾತುಗಳಿಗೆ ಧನ್ಯವಾದ. ಜಗತ್ತಿನಲ್ಲಿ ತಮ್ಮಂಥ ಯಾಚಕರ ಸಂಖ್ಯೆ ಹೆಚ್ಚಲಿ ಎಂದು ಆಶೆ.

Manjunatha Kollegala said...

ಸುನಾಥರೇ, ತಮ್ಮಂಥ ಹಿರಿಯರು, ತಿಳಿದವರು ಇದನ್ನು ಹೇಳಿದರೆ ನಮಗೆ ಅದು ಹೆಮ್ಮೆಯೇ ಸರಿ.

ಆದರೂ ಭಾಷೆಯನ್ನು ಆಟವಾಡುವ ಮರಳಿನಂತೆ ಉಪಯೋಗಿಸಿ ಮನೆ ಕಟ್ಟಿ ಕೆಡವಿ ಆನಂದಿಸಿ ಮರೆಯುವ ನಮ್ಮ ಬಾಲಿಶ ಕಲ್ಪನೆಗಳಿಗೂ ಮಾಘ-ಕಾಳಿದಾಸರಂಥ ಪೂರ್ವಸೂರಿಗಳ ದೈತ್ಯ ಪ್ರತಿಭೆಗೂ ಅಜಗಜಾಂತರಕ್ಕಿಂತ ಹಿರಿದಾದ ಅಂತರವುಂಟೆಂದು ಬಲ್ಲೆ. "ಮತ್ತೇಭವಿಕ್ರೀಡಿತ"ದಂಥಾ ಚಾಟುಕಲ್ಪನೆಗಳು ಅದೆಷ್ಟೋ.

ಈ ರಚನೆಗಳು ತಮಗೆ ಮೆಚ್ಚಾದದ್ದು ನನಗೆ ಸಂತೋಷ ಮತ್ತು ಉತ್ತೇಜನ.

ಮೃತ್ಯುಂಜಯ ಹೊಸಮನೆ said...

ಕಾವ್ಯ ಸಹಜವಾಗಿ ನಮ್ಮೊಳಗಿಂದ ಹುಟ್ಟದಿದ್ದಲ್ಲಿ ಛಂದಸ್ಸು,ಪ್ರಾಸ ಇವೆಲ್ಲ ಲೆಕ್ಕಾಚಾರವಾಗಿಬಿಡುವ ಅಪಾಯವಿರುತ್ತದೆ. ನಿಮ್ಮ ಈ ಎರಡು ಪ್ರಯತ್ನಗಳು ಕಾವ್ಯಸತ್ವಕ್ಕೆ ಎರವಾಗದ,ಲಯ,ಭಾವಗಳನ್ನು ಉಳಿಸಿಕೊಂಡ, ಛಂದೋಬದ್ಧವಾದ ರಚನೆಗಳು. ಅಭಿವಂದನೆಗಳು.

Manjunatha Kollegala said...

ಹೊಸಮನೆಯವರೇ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನನ್ನಿ. ನಿಮ್ಮ ಮಾತು ನಿಜ. ಕಾವ್ಯ ಸಹಜವಾಗಿ ನಮ್ಮೊಳಗಿನಿಂದ ಹುಟ್ಟದಿದ್ದಲ್ಲಿ ಛಂದಸ್ಸು, ಪ್ರಾಸ ಇವೆಲ್ಲ ಲೆಕ್ಕಾಚಾರವೆನಿಸುವ ಅಪಾಯವಿರುತ್ತದೆ. ಕವಿ ಡಬ್ಲ್ಯೂ ಬಿ ಯೇಟ್ಸ್ ಹೀಗನ್ನುತ್ತಾನೆ:

"A line will take us hours maybe;
Yet, if it doesn't seem a moment's thought
Our stitching and unstitching has been naught.
Better go down upon your marrow-bones
And scrub a kitchen pavement, or break stones
Like an old pauper, in all kinds of weather"

("ಕವಿತೆ ಸಾಲೊಂದ ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲೆದು ಬಿಚ್ಚಿದ್ದೆಲ್ಲ ಪೂರ ವ್ಯರ್ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆಮನೆ ನೆಲವನ್ನುಜ್ಜುವುದೋ,
ಕಡುಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೋ
ಇದಕಿಂತ ಉತ್ತಮ"

- ಅನು: ಡಾ. ಲಕ್ಷ್ಮೀನಾರಾಯಣಭಟ್ಟ)

ಮೃತ್ಯುಂಜಯ ಹೊಸಮನೆ said...

ಸಂಸ್ಕೃತದ ಈ ವೃತ್ತಗಳಲ್ಲಿ ದ್ವಿತೀಯಾಕ್ಷರ ಪ್ರಾಸದ ನಿಯಮವಿದೆ ಎಂಬ ನೆನಪು. ನಲವತ್ತು ವರ್ಷಗಳ ಹಿಂದೆ ಅಭ್ಯಾಸಮಾಡಿದ್ದು. ಪಂಪನ ಬಹಳ ಪದ್ಯಗಳನ್ನು ಮತ್ತೆ ಓದಿದೆ. ಈ ನಿಯಮ ಎಲ್ಲೂ ಭಂಗವಾಗಿಲ್ಲ. ನನಗೀಗ ಗೊಂದಲ. ನನ್ನ ತಿಳಿವಳಿಕೆ ತಪ್ಪೇ? (ಇದನ್ನು ಗಮನಿಸಿದ್ದರೂ, ಪರಿಶೀಲಿಸದೆ ಬರಿಯೋದು ತರವಲ್ಲ ಅಂತ ನನ್ನ ಮೊದಲ ಪ್ರತಿಕ್ರಿಯೆಯಲ್ಲಿ ಸುಮ್ಮನಿದ್ದೆ.)

Manjunatha Kollegala said...

ಹೊಸಮನೆಯವರೇ, ದ್ವಿತೀಯಾಕ್ಷರಪ್ರಾಸದ ಬಳಕೆ ನನಗೆ ತಿಳಿದಿರುವಮಟ್ಟಿಗೆ ಸಂಸ್ಕೃತದ್ದಲ್ಲ, ಕನ್ನಡದ್ದು. ವೃತ್ತಗಳನ್ನು ಸಂಸ್ಕೃತದಿಂದ ಎರವಲು ಪಡೆದರೂ ಕನ್ನಡದಲ್ಲಿ ಅವು ಕೆಲವೊಂದು ಬದಲಾವಣೆ ಹೊಂದಿವೆ. ಉದಾಹರಣೆಗೆ ಸಂಸ್ಕೃತದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವ ಯತಿನಿಯಮವನ್ನು ಕನ್ನಡದಲ್ಲಿ ಅಷ್ಟಾಗಿ ಅನುಸರಿಸುವುದಿಲ್ಲ (ಯತಿವಿಲಂಘನವನ್ನು ಕನ್ನಡದ ಹಕ್ಕೆಂದೇ ಘೋಷಿಸಿಬಿಟ್ಟಿದ್ದಾನೆ ಕೇಶಿರಾಜ); ಹಾಗೆಯೇ ಸಂಸ್ಕೃತದಲ್ಲಿಲ್ಲದ ಆದಿಪ್ರಾಸದ ಬಳಕೆಯನ್ನು ಕನ್ನಡದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಉದಾಹರಣೆಗೆ ಈ ಕೆಳಕಂಡ ಸಂಸ್ಕೃತ ರಚನೆಗಳನ್ನು ಗಮನಿಸಿ, ಇವು ಆದಿಪ್ರಾಸವನ್ನು ಅನುಸರಿಸುವುದಿಲ್ಲ:

ಶಾಂತಾಕಾರಂ ಭುಜಗ ಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ
- ಮಂದಾಕ್ರಾಂತ

ಕ್ಷೀರೋಧನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೈರ್ಮೌಕ್ತಿಕಾನಾಂ
ಮಾಲಾಕ್ಲೃಪ್ತಾಸನಸ್ಥ ಸ್ಪಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ
- ಸ್ರಗ್ಧರಾ

ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾನ್ವಿತಾ
ಯಾ ವೀಣಾ ವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ
- ಶಾರ್ದೂಲವಿಕ್ರೀಡಿತ

ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯ ಭವತ್ಪ್ರಭುಃ
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ
- ಅನುಷ್ಟುಪ್

ಅದೇ ಛಂದಸ್ಸುಗಳು ಕನ್ನಡದಲ್ಲಿ ಬಳಕೆಯಾದಾಗ ಆದಿಪ್ರಾಸವನ್ನನುಸರಿಸುವುದನ್ನು ಕಾಣುತ್ತೇವೆ:

ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯ ನಿಶ್ವಾಸೆಯಂ
ತಳಿರೇ ತಾವರೆಯೇ ಮದಾಳಿಕುಲಮೇ ಕನ್ನೈದಿಲೇ ಮತ್ತ ಕೋ
ಕಿಳಮೇ ಕಂಡಿರೆ ಪಲ್ಲವಾಧರೆಯನಂಬೋಜಾಸ್ಯೆಯಂ ಭೃಂಗ ಕುಂ
ತಳೆಯಂ ಕೈರವ ನೇತ್ರೆಯಂ ಪಿಕರವ ಪ್ರಖ್ಯಾತೆಯಂ ಸೀತೆಯಂ
- ಮತ್ತೇಭವಿಕ್ರೀಡಿತ

ಅದೇ ರೀತಿ ಕನ್ನಡದ್ದೇ ಆದ ಛಂದಸ್ಸುಗಳಲ್ಲೂ ಆದಿಪ್ರಾಸದ ಬಳಕೆಯನ್ನು ನೋಡುತ್ತೇವೆ:

ಗುಣಮಿದು ದೋಷಮಿದೆಂಬೀ
ಗಣಿದಮನೆತ್ತರಿಗುಮಶ್ರುತಪ್ರಕೃತಿಜನಂ
ತೃಣ ಸಸ್ಯ ಘಾಸ ವಿಷಯ
ಪ್ರಣಯಂ ಸಮವೃತ್ತಿಯಪ್ಪವೋಲ್ ಮೃಗಗಣದೊಳ್
- ಕಂದ

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ
ತೀವಳಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ
ಆವಗಂ ಸರಸಕರುಣಾಮೃತದ ಕಲೆಗಳಿಂ
ತೀವಿದೆಳೆನಗೆಯ ಬೆಳ್ದಿಂಗಳಂ ಪಸರಿಸುವ
ದೇವಪುರ ಲಕ್ಷ್ಮೀರಮಣನಾಸ್ಯಚಂದ್ರನಾನಂದಮಂ ನಮಗೀಯಲಿ
- ಷಟ್ಪದಿ (ವಾರ್ಧಕ)

ಮೃತ್ಯುಂಜಯ ಹೊಸಮನೆ said...

ನನಗೆ ಈ ವಿಷಯ ತಿಳಿದಿರಲಿಲ್ಲ. ತಿಳಿಸಿದ್ದಕ್ಕಾಗಿ ಧನ್ಯವಾದಗಳು.

Harisha - ಹರೀಶ said...

ಸೂರ್ಯಾಶ್ವೈರ್ಮಸಜಾಸ್ತತಾಸ್ಸಗುರವಃ ಶಾರ್ದೂಲವಿಕ್ರೀಡಿತಂ ಎಂದು ನೆನಪು. ನಿಮ್ಮ ಶ್ಲೋಕದ ಮೊದಲ ಸಾಲಿನಲ್ಲಿ ೧೨, ೭ (ದ್ವಾದಶ ಸೂರ್ಯ, ಸಪ್ತ ಅಶ್ವ) ಯತಿ ನಿಯಮ ಭಂಗವಾಗಿಲ್ಲವೆ?

ನನ್ನ ಅನಿಸಿಕೆ ತಪ್ಪಿದ್ದರೆ ತಿಳಿಸಿ

Manjunatha Kollegala said...

ಪ್ರಿಯ ಹರೀಶ್, ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ. ನಿಮ್ಮ ಸೂಕ್ಷ್ಮ ಓದಿನ ಬಗ್ಗೆ ಖುಶಿಯಾಯಿತು. ತಮ್ಮ ಅನಿಸಿಕೆ ಖಂಡಿತ ತಪ್ಪಲ್ಲ

ಅರ್ಥ ಮತ್ತು ಗತಿಗೆ ಭಂಗಬಾರದಂತೆ ಉಚ್ಚಾರಣೆಯ ಸೌಕರ್ಯಕ್ಕಾಗಿ ದೊರೆಯುವ ನಿಲುಗಡೆಯೇ ಯತಿ. ಸಾಮಾನ್ಯವಾಗಿ ಉಚ್ಚಾರಣೆಯ ಗತಿ ಬದಲಾಗುವಲ್ಲಿ (ಉದಾಹರಣೆಗೆ ಗುರುಬಾಹುಳ್ಯವಿರುವ ಅಕ್ಷರಗಳ ಗುಂಪಿನಿಂದ ಲಘುಬಾಹುಳ್ಯವಿರುವ ಅಕ್ಷರಗಳ ಗುಂಪಿಗೆ ಬದಲಾಗುವಾಗ) ಅಲ್ಲೊಂದು ಪುಟ್ಟ ನಿಲುಗಡೆ ಬೇಕಾಗುತ್ತದೆ. ಉದಾಹರಣೆಗೆ ಶಾಂತಾಕಾರಂ (ಸರ್ವಗುರು) ಭುಜಗಶಯನಂ (ಸರ್ವಲಘು, ನಂ ಬಿಟ್ಟು) ಪದ್ಮನಾಭಂ (ಮಿಶ್ರ) ಹೀಗೆ ಒಂದುಗತಿಯಿಂದ ಮತ್ತೊಂದುಗತಿಗೆ ಬದಲಾಗುವಲ್ಲೆಲ್ಲಾ ಕೊನೆಯ ಅಕ್ಷರದಲ್ಲಿ ನಿಲುಗಡೆ ಬಂದದ್ದನ್ನು ಗಮನಿಸಿ. ಯತಿನಿಯಮಗಳ ಮೂಲ ಆಶಯ ಇದು. ಇನ್ನು ಶಾರ್ದೂಲವಿಕ್ರೀಡಿತದ ಉದಾಹರಣೆಗೆ ಬಂದರೆ ನೀವು ಹೇಳಿದಂತೆ ೧೨ ಮತ್ತು ೭ನೆಯ (ಪಾದಾಂತ್ಯ) ಅಕ್ಷರಕ್ಕೆ ಯತಿ ಬರಬೇಕು. "ಯಾ ಕುಂದೇಂದು ತುಷಾರಹಾರಧವಲಾ" (ದ್ವಾದಶ ಯತಿ) ಯಾ ಶುಭ್ರವಸ್ತ್ರಾನ್ವಿತಾ" (ಸಪ್ತಮ ಯತಿ). ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯತಿಯೆನ್ನುವುದು ಉಚ್ಚಾರಣೆಗೆ ಸಂಬಂಧಿಸಿದ ವಿಚಾರವೇ ಹೊರತು ಅಕ್ಷರದ ಬಾಹ್ಯರೂಪಕ್ಕೆ ಸಂಬಂಧಿಸಿದ್ದಲ್ಲ. ಅಂದರೆ ಉಚ್ಚಾರಣೆಯಲ್ಲಿ ನಿಲುಗಡೆ ಬರಬೇಕೇ ಹೊರತು ಅಕ್ಷರ ಭೌತಿಕವಾಗಿ ಕೊನೆಗೊಳ್ಳಬೇಕೆಂದಾಗಲೀ ಸಂಯುಕ್ತಾಕ್ಷರಗಳಿರಬಾರದೆಂದಾಗಲೀ ಅಲ್ಲ. ಇದೇ ಸ್ತೋತ್ರದ ಮೂರನೆಯ ಸಾಲನ್ನು ಗಮನಿಸಿ. "ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಸ್ಸದಾ ಪೂಜಿತಾ" ಇಲ್ಲಿ ಕೇವಲ ಅಕ್ಷರಗಳ ಬಾಹ್ಯರೂಪವನ್ನು ಗಮನಿಸಿದರೆ "ಪ್ರಭೃತಿಭಿ" ಎಂಬಲ್ಲಿ ಯತಿನಿಯಮ ಭಂಗವಾಗಿದೆಯೆನ್ನಿಸುತ್ತದೆಯಲ್ಲವೇ? ಆದರೆ ಅದರ ಉಚ್ಚಾರಣೆ ಹೀಗೆ "ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ" (ಯತಿ) "ದೇವೈಃ ಸದಾ ಪೂಜಿತಾ" ಹೀಗೆ ಉಚ್ಚಾರಣೆಯಲ್ಲಿ ಯತಿ ಬಂದೇಬರುತ್ತದೆ. ಹಾಗೆಯೇ ಪ್ರಸ್ತುತ ಸ್ತೋತ್ರ "ವಿಘ್ನೇಶಂ ಸುರಮೌಳಿಮಂಡಿತಲಸತ್ಪದ್ಮಾರುಣಶ್ರೀಪದಂ" ಎಂಬಲ್ಲಿ "ಮಂಡಿತಲಸ" ಇಲ್ಲಿ ಯತಿ ಕಾಣುತ್ತಿಲ್ಲವೆಂದರೂ, ಅದರ ಉಚ್ಚಾರಣೆಯಲ್ಲಿ ಅದು "ವಿಘ್ನೇಶಂ ಸುರಮೌಳಿಮಂಡಿತಲಸತ್" (ಯತಿ) "ಪದ್ಮಾರುಣಶ್ರೀಪದಂ" (ಯತಿ) ಎಂದೇ ಬರುತ್ತದೆ. ಆದ್ದರಿಂದ ನೀವು ಹೇಳಿದ ದ್ವಾದಶ ಸೂರ್ಯ, ಸಪ್ತಾಶ್ವ ಯತಿನಿಯಮಗಳು ಅಲ್ಲಿ ಯಥಾಸಹಜವಾಗಿ ಬಂದಿವೆ.

Dhannu said...

ಗುಣಮಿದು ದೋಷಮಿದೆಂಬೀ
ಗಣಿದಮನೆತ್ತರಿಗುಮಶ್ರುತಪ್ರಕೃತಿಜನಂ
ತೃಣ ಸಸ್ಯ ಘಾಸ ವಿಷಯ
ಪ್ರಣಯಂ ಸಮವೃತ್ತಿಯಪ್ಪವೋಲ್ ಮೃಗಗಣದೊಳ್

ಯಾವ ಕೃತಿಯದ್ದು?