Tuesday, September 7, 2010

ನಾನೇಕೆ ಬರೆಯುವುದಿಲ್ಲ

ನಾನು ಕೈಯಲ್ಲಿ ಪೆನ್ನೋ ಪುಸ್ತಕವೋ ಹಿಡಿದು ಎಷ್ಟುದಿನವಾಯಿತು? ತಿಂಗಳು? ವರ್ಷ?

ದಿನಬೆಳಗಾದರೆ ಬೇಕಾದಷ್ಟು ಪೇಪರುಗಳನ್ನು "ಹ್ಯಾಂಡಲ್" ಮಾಡುತ್ತೇನೆ, ಪೆನ್ನು ಹಿಡಿದು ಅನೇಕ ಸಹಿ ಹಾಕುತ್ತೇನೆ, ನೋಟ್ ಪ್ಯಾಡ್ ಹಿಡಿದು ಅನೇಕ "ನೋಟು"ಗಳನ್ನು ಬರೆದುಕೊಳ್ಳುತ್ತೇನೆ, ಅಲ್ಲ, ನಾನು ಅದರ ಬಗ್ಗೆ ಮಾತಾಡುತ್ತಿಲ್ಲ. ನಾನು ಹೇಳುತ್ತಿರುವುದು serious ಆದ ಓದು-ಬರಹದ ಬಗ್ಗೆ. ಸುಮಾರು ಒಂದು ಸಾವಿರದಷ್ಟಿರುವ ನನ್ನ ಪುಸ್ತಕ ಸಂಗ್ರಹ ಎರಡು ಮೂರುಕಡೆ ಹಂಚಿಹೋಗಿದೆ, ಈ ಎರಡು-ಮೂರು ವರ್ಷದಲ್ಲಿ ನಾನು ಅದರಲ್ಲಿ ಒಂದು ಪುಸ್ತಕವನ್ನೂ ಮುಟ್ಟಿದಂತಿಲ್ಲ, ಹಾಗೆಂದು ನನ್ನ ಓದುವ ಹವ್ಯಾಸವೇನು ಬಿಟ್ಟಿಲ್ಲ. ಅಂತರ್ಜಾಲದಲ್ಲಿ ಯಾವಾಗಲೂ ಅದು ಇದು ಓದುತ್ತಲೇ ಇರುತ್ತೇನೆ. ಇನ್ನು ಬರೆಯುವ ವಿಷಯಕ್ಕೆ ಬಂದರೆ, ನಾನು ಪೆನ್ನು ಪೇಪರು ಉಪಯೋಗಿಸಿ ಬರೆದ ಕೊನೆಯ ಬರಹವೆಂದರೆ ಅದೊಂದು ಕವನ, "ಶ್ರಾವಣ ಮುಗಿದಮೇಲೊಂದು ಸಂಜೆ", ೨೦೦೭ ಸೆಪ್ಟೆಂಬರಿನಲ್ಲಿ - ಸುಮಾರು ಹತ್ತಿರ ಹತ್ತಿರ ಮೂರು ವರ್ಷ. ಅದಾದಮೇಲೆ ಮತ್ತೆ ಎರಡು ಕವನ, ಮತ್ತು ಸುಮಾರು ಇಪ್ಪತ್ತೋ ಇಪ್ಪತ್ತೆರಡೋ ಬರಹಗಳನ್ನು 'ಬರೆ'ದೆ, ಆದರೆ ಅವೆಲ್ಲಾ ನಿಜಕ್ಕೂ ಬರೆದಿದ್ದಲ್ಲ, ನೇರವಾಗಿ ಬ್ಲಾಗಿನಲ್ಲಿ ಟೈಪು ಮಾಡಿದ್ದು! ನನ್ನ ಬರಹಗಳನ್ನೆಲ್ಲಾ ಸಂಗ್ರಹಿಸಿಡಲು ಒಂದು ಪುಸ್ತಕವನ್ನಿಟ್ಟಿದ್ದೆ. ಅದರಲ್ಲಿ ಕೊನೆಯದಾಗಿ ದಾಖಲಾಗಿರುವುದು ಈ ಕವನವಷ್ಟೇ. ಹಾಗಾದರೆ ನಿಜಕ್ಕೂ ಬರೆಯುವ ಹವ್ಯಾಸ ತಪ್ಪಿಹೋಗಿದೆಯೇ? ಬ್ಲಾಗಿಂಗ್ ಎಂಬ ಅಂತರ್ಜಾಲ ಬರಹದ ತಂತ್ರ ಜನಪ್ರಿಯಗೊಳ್ಳುತ್ತಿದ್ದಂತೆ ನಮ್ಮ ಬರಹಗಾರರನೇಕರು ಬ್ಲಾಗುಗಾರರಾಗಿಬಿಟ್ಟಿದ್ದಾರೆ. ಹೊಸ ಹೊಸ ಬ್ಲಾಗುಗಳು ಹುಟ್ಟಿಕೊಳ್ಳುತ್ತಿವೆ, ಬ್ಲಾಗಿಗರ ದೊಡ್ಡ ಪಡೆಯೇ ಸಿದ್ಧವಾಗಿದೆ. ಬರಹದ ಬಳಕೆ ತಪ್ಪಿದ್ದು ನನ್ನೊಬ್ಬನ ಅನುಭವವಲ್ಲ. ನೀವು ಇತರ ಬ್ಲಾಗಿಗರನ್ನು ಕೇಳಿನೋಡಿ, ಅವರಲ್ಲಿ ಬಹುತೇಕರ ಅನುಭವ ಇದೇ ಆಗಿರುತ್ತದೆ. ಬರೆಯುವಷ್ಟಿಲ್ಲ, ಬರೆದದ್ದನ್ನು ಹೊಡೆದುಹಾಕುವಷ್ಟಿಲ್ಲ, ಮತ್ತೊಮ್ಮೆ "ನೀಟ್" ಪ್ರತಿ ಮಾಡುವಷ್ಟಿಲ್ಲ; ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು draft modeನಲ್ಲಿ 'ಗೀಚಿ'ಇಟ್ಟಿದ್ದರಾಯಿತು. ಮತ್ತೆ ಮನಬಂದಾಗ ಮನಬಂದಷ್ಟು ಬಾರಿ ಅದನ್ನು edit ಮಾಡಿ, ತೃಪ್ತಿಯೆನಿಸಿದಾಗ ಪ್ರಕಟಿಸಿದರಾಯಿತು. ಪತ್ರಿಕೆಗಳಿಗೆ ಕಳಿಸಬೇಕಾದರೂ ಬರೆಯಬೇಕಿಲ್ಲ. ಸುಮ್ಮನೇ copy & paste ಮಾಡಿ e-ಅಂಚೆಯಲ್ಲಿ ಕಳಿಸಿಬಿಟ್ಟರಾಯಿತು. ಮರುಕ್ಷಣ ಅದು ಸಂಪಾದಕನ ಬುಟ್ಟಿಯಲ್ಲಿ (ಅಥವಾ ಕಸದ ಬುಟ್ಟಿಯಲ್ಲಿ - ಅದೂ e-ಬುಟ್ಟಿಯೇ!) ಬಿದ್ದಿರುತ್ತದೆ. ಎಂದರೆ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ... ಬಳಸಿ ಬರೆಯಲು ಕಂಠಪತ್ರದ ಉಲುಹು ಕೆಡದಗ್ಗಳಿಕೆ" ಎಂದೆಲ್ಲಾ ಕುಮಾರವ್ಯಾಸನು ಅಷ್ಟು ಹೊಗಳಿಕೊಂಡದ್ದನ್ನು ನಾವು ಪ್ರಯತ್ನವೇ ಇಲ್ಲದೇ ಸಾಧಿಸಿಬಿಟ್ಟೆವೇ?

ಖ್ಯಾತ ಲೇಖಕ-ಕತೆಗಾರ ರಸ್ಕಿನ್ ಬಾಂಡ್ ರನ್ನು ಪತ್ರಕರ್ತರೊಬ್ಬರು ಕೇಳಿದರಂತೆ "ಕಂಪ್ಯೂಟರ್, ಇಂಟರ್ ನೆಟ್ ಇತ್ಯಾದಿ ತಾಂತ್ರಿಕ ಪ್ರಗತಿಯ ಈ ಯುಗದಲ್ಲೂ ನೀವಿನ್ನೂ ಒಂದು ನೋಟ್ ಪ್ಯಾಡು ಪೆನ್ಸಿಲು ಹಿಡಿದಿರುವಿರಲ್ಲ, ಅದಕ್ಕೇನು ಕಾರಣ?" ತುಸು ಯೋಚಿಸಿ ಬಾಂಡ್ ಹೇಳಿದರಂತೆ, "ನೋಡೀ, ಬರೆಯುವಾಗ ಏನೂ ಹೊಳೆಯದಿದ್ದರೆ, ನಾನು ಪೆನ್ಸಿಲಿನ ತುದಿಯನ್ನು ಬಾಯಲ್ಲಿ ಹಾಕಿ ಕಚ್ಚುತ್ತಿರುತ್ತೇನೆ, ಕಂಪ್ಯೂಟರನ್ನು ಹಾಗೆ ಕಚ್ಚಲು ಬರುವುದಿಲ್ಲ"

ತುಸು ಸೂಕ್ಷ್ಮವಾಗಿ ನಿರುಕಿಸಿ ನೋಡಿದರೆ, ಬರೆಯುವ ಕ್ರಿಯೆಗೆ ಭೌತಿಕ ಸಾಧನಗಳಾದ ಪೆನ್ಸಿಲು ಪೇಪರು ಇತ್ಯಾದಿಗಳು ದೊರಕಿಸಿಕೊಡುವ ಅದೊಂದು ಬಗೆಯ ಆಪ್ಯಾಯತೆಯನ್ನು ಸೂಚಿಸುತ್ತವೆ ಈ ಮಾತುಗಳು. ಬರೆಯುವವನಿಗೆ ಪೆನ್ನು ಪೇಪರು ಕೇವಲ ಸಲಕರಣೆಯಲ್ಲ, ಆತ್ಮೀಯ ಸಂಗಾತಿ. ಅದರೊಡನೆ ನೀವು ಯಾವ ಸಲುಗೆಯನ್ನು ಬೇಕಾದರೂ ತೆಗೆದುಕೊಳ್ಳಬಹುದು. ಅದರಮೇಲೆ ನಿಮ್ಮ ಸಂಪೂರ್ಣ ನಿಯಂತ್ರಣವಿದೆ. ಅದನ್ನು ಹಿಡಿದೇ ನೀವು ಬರೆಯುವುದನ್ನು ಕಲಿತಿದ್ದೀರಿ. ಕಂಪ್ಯೂಟರಿನ ಕೀಬೋರ್ಡ್ ಮೇಲೆ ನೀವು ಹೇಗೇ ಬಡಿದರೂ ಆಯಾ ಅಕ್ಷರ ಆಯಾರೀತಿಯೇ ಅಚ್ಚಾಗುತ್ತದೆ. ಆದರೆ ನಿಮ್ಮ ಲೇಖನಿ ಹಾಗಲ್ಲ. ನಿಮ್ಮ ಕೈಬರಹ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ, ನಿಮ್ಮ ವ್ಯಕ್ತಿತ್ವ ನಿಮ್ಮ ಬರಹವನ್ನು ರೂಪಿಸುತ್ತದೆ. ಅದಕ್ಕೆಂದೇ 'ಬರಹ'ಕ್ಕೆ ನಮ್ಮ ವಿದ್ಯಾಭ್ಯಾಸಕ್ರಮದಲ್ಲಿ ಇವತ್ತಿಗೂ ಅತಿ ಪ್ರಮುಖ ಸ್ಥಾನ. ಬರಹ "ದುಂಡಗೆ"ಇಲ್ಲವೆಂದು ಕೈ ಗಿಣ್ಣಿನ ಮೇಲೆ ಹೊಡೆಯುತ್ತಿದ್ದ ನಮ್ಮ ಮೇಷ್ಟ್ರು ಇವತ್ತೂ ನಮಗೆ ಪೂಜನೀಯರು. ಬರಹದ ಬಳಕೆ ತಪ್ಪಿಹೋಗಿ ಇವತ್ತಿನ ನನ್ನ hand writing ನೋಡಿದರೆ ಮನಸ್ಸಿಗೆ ಪಿಚ್ಚೆನಿಸುತ್ತದೆ. ಬರಹವು ಭಾಷೆಯೊಡನೆಯೇ ಬೆಳೆಯಿತಲ್ಲವೇ? ವಿವಿಧ ಜನಾಂಗಗಳ ಮಾತು-ಬರಹಗಳ ಬಳಕೆಯ ಸೌಲಭ್ಯಪ್ರಜ್ಞೆಯನ್ನನುಸರಿಸಿಯೇ ತಾನೇ ಇವತ್ತು ಇಷ್ಟೊಂದು ಭಾಷೆ, ಇಷ್ಟೊಂದು ಲಿಪಿ. ಅದಕ್ಕಲ್ಲವೇ ಇಂಗ್ಲಿಷಿನ R ಮತ್ತು ದೇವನಾಗರಿಯ र ಅಷ್ಟೊಂದು ಬೇರೆಯಾಗಿ ಬೆಳೆದದ್ದು? ಅದಕ್ಕಲ್ಲವೇ ವಿವಿಧ ಭಾಷೆಗಳ ನಡುವಿನ ಇಷ್ಟೊಂದು ಸಾಮ್ಯ-ವ್ಯತ್ಯಾಸಗಳು. ಮಾತಿನಂತೆಯೇ ಬರಹ ನಿರಂತರ ಚಲನಶೀಲ. ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಪರಿವರ್ತನೆಹೊಂದುತ್ತಾ, ಎರಡು ವಿಭಿನ್ನ ಕಾಲಘಟ್ಟಗಳಲ್ಲಿ, ದೇಶಮಾನಗಳಲ್ಲಿ ಬೇರೆಯೇ ಆಗಿಬಿಡುತ್ತದೆ. ಆದ್ದರಿಂದ ಲಿಪಿಯೊಂದರ ಅವತಾರ ಜನಾಂಗವೊಂದರ ಬರೆಯುವಿಕೆಯ ವೈಶಿಷ್ಟ್ಯದ ಮೇಲೆ ಅವಲಂಬಿಸಿರುತ್ತದೆ. ಬರೆಯುವುದನ್ನು ನಿಲ್ಲಿಸಿ ಇರುವ ಲಿಪಿಯನ್ನು ಮುದ್ರಣಕ್ಕೆ ಅಳವಡಿಸಿ ಅದನ್ನು "standardise" ಮಾಡಿದ ಮೇಲೆ ಹೊಸ ಲಿಪಿಗಳು ಇನ್ನೆಲ್ಲಿ? ಅದರಿಂದಲೇ ಬಹುಶಃ ಮುದ್ರಣ ಮಾಧ್ಯಮ ಅಸ್ತಿತ್ವಕ್ಕೆ ಬಂದಮೇಲೆ ಮತ್ತಾವುದೂ ಹೊಸ ಲಿಪಿ ಬೆಳೆಯಲೇ ಇಲ್ಲವೇನೋ, ಬೆಳೆಯುವುದೂ ಇಲ್ಲವೇನೋ!

ಒಂದು ಕಂಪ್ಯೂಟರು ಸಾವಿರ ಪುಸ್ತಕಗಳನ್ನು ಅಡಗಿಸಿಕೊಂಡಿರಬಹುದು, ಆದರೆ ಅದನ್ನು ಪುಸ್ತಕವೆನ್ನಲಾದೀತೇ? ಸಾವಿರ ಪುಸ್ತಕಗಳನ್ನು ಹೊದಿಕೆ ಹೊಚ್ಚಿ ಒಪ್ಪಗೊಳಿಸಿ ಶೋಕೇಸಿನಲ್ಲಿಡುವಂತೆ ಕಂಪ್ಯೂಟರನ್ನು ಇಡಲಾದೀತೇ? ಕಂಪ್ಯೂಟರು ಯಾರಬಳಿಯಾದರೂ ಇರಬಹುದು. ಆದರೆ ಅದರ ಹೂರಣ ಹೊರಗೆ ಕಾಣುತ್ತದೆಯೇ? ಅದರಲ್ಲಿ ಪುಸ್ತಕಗಳೇ ಇರಬಹುದು, ಕೆಲಸಕ್ಕೆ ಬಾರದ ಮತ್ತೇನೇ ಇರಬಹುದು, ಅದೇನಿದ್ದರೂ ಅದು ಕಂಪ್ಯೂಟರ್ ಆಗಿಯೇ ಉಳಿಯುತ್ತದೆಯೇ ಹೊರತು ಅದರ ಹೂರಣವೇ ಅದಾಗಲಾರದು. ಇವತ್ತಿಗೂ ನಾವು ಸರಸ್ವತಿಯೆಂದು ಪುಸ್ತಕವನ್ನು ಪೂಜಿಸುತ್ತೇವೆಯೇ ಹೊರತು ಕಂಪ್ಯೂಟರನ್ನಲ್ಲ. ಕಂಪ್ಯೂಟರಿನ ಬಳಕೆಯಿಲ್ಲದ ನನ್ನ ಲೇಖಕಮಿತ್ರರೊಬ್ಬರು ಅವರ ಎರಡುಸಾವಿರ ಪುಸ್ತಕಗಳ ಲೈಬ್ರರಿಯಲ್ಲಿ (ಸದಾ ಸ್ವಚ್ಛ) ಟೇಬಲಿನ ಮೇಲೆ ಲಕ್ಷಣವಾಗಿ ಒಂದು ಹದಿನೈದಿಪ್ಪತ್ತು ಬಿಳೀ ಹಾಳೆಗಳನ್ನೊಳಗೊಂಡ ಒಂದು ಬರಹದ ಪ್ಯಾಡ್ ಮತ್ತು ಒಂದು ಪೆನ್ನು ಸಿದ್ಧವಾಗಿ ಇಟ್ಟಿರುತ್ತಾರೆ. ಅಲ್ಲಿ ಕುಳಿತು ಬರೆಯುವುದೇ ಒಂದು ಆನಂದ (ತಲೆಗೆ ಏನಾದರು ಹೊಳೆದರೆ). ಹೀಗೆ ಹೇಳುವಾಗ ನ್ಯೂಸ್ ಪೇಪರಿನ ಅನಿವಾರ್ಯತೆ ಕುರಿತ ಜಾಹೀರಾತೊಂದು ನೆನಪಿಗೆ ಬರುತ್ತದೆ. ನ್ಯೂಸ್ ಪೇಪರನ್ನು ಶೌಚಾಲಯದಲ್ಲಿ ಕೂಡ ಕೂತು ತೆರೆದು ಓದಬಹುದು, ಆದರೆ e-ಪತ್ರಿಕೆಯನ್ನು ಹಾಗೆ ಓದಬರುವುದಿಲ್ಲ ಎನ್ನುತ್ತದೆ ಆ ಜಾಹೀರಾತು (ಅಪವಾದವೆಂದರೆ, ನನ್ನ ಸಹೋದ್ಯೋಗಿಯೊಬ್ಬ ಲ್ಯಾಪ್ ಟಾಪ್ ತೆಗೆದುಕೊಂಡು ಶೌಚಕ್ಕೆ ಹೋಗಿ ಅಲ್ಲೇ ಕೂತು ದಿನ'ಪತ್ರಿಕೆ' ಓದಿ ಮುಗಿಸಿ ಬರುತ್ತಿದ್ದನೆನ್ನಿ).

ಅದೆಷ್ಟೇ ಅನುಕೂಲವಾದರೂ ಈ ಕಂಪ್ಯೂಟರ್, ಲ್ಯಾಪ್ ಟಾಪ್, ಇತ್ಯಾದಿ ಸಾಧನಗಳು ನಿಮ್ಮಿಂದ ಅದೊಂದುಬಗೆಯ 'ಮರ್ಯಾದೆ'ಯನ್ನು ನಿರೀಕ್ಷಿಸುತ್ತದೆ. ಲ್ಯಾಪ್ ಟಾಪ್ ಅನ್ನು ಎಲ್ಲೆಂದರಲ್ಲಿ ಹೊತ್ತೊಯ್ಯುವಂತಿಲ್ಲ; ಅದಕ್ಕೆ ವಿದ್ಯುತ್ ಸರಬರಾಜು ಬೇಕು, ಅದಿಲ್ಲದಿದ್ದರೂ ಅದರ ಬ್ಯಾಟರಿ ಜೀವನ ಒಂದೋ ಎರಡೋ ಗಂಟೆಗಳು. ಅಷ್ಟರೊಳಗೆ ನಿಮ್ಮ 'ಓದು/ಬರಹ'ದ ಕರ್ಮವನ್ನು ಮುಗಿಸಿ ಬರಬೇಕು; ಇಲ್ಲವೆಂದರೆ ಲ್ಯಾಪ್ ಟಾಪ್ ನೊಂದಿಗೆ ಅದರ ಸಕಲ ಪರಿಕರಗಳನ್ನೂ ಹೊತ್ತೊಯ್ಯಬೇಕು, ಹೋದರೂ ಅಲ್ಲೆಲ್ಲಾದರೂ ವಿದ್ಯುತ್ ಪೂರೈಕೆ ಇರುವ ಜಾಗೆಯಲ್ಲೇ ಕುಳಿತು ಬರೆಯಬೇಕು; ನಮ್ಮಿಷ್ಟಬಂದಂತೆ ಬೆಟ್ಟವೋ, ಕಾಡೋ ನದಿಯೋ ಎಲ್ಲೆಂದರೆ ಅಲ್ಲಿ ಕೂಡುವಂತಿಲ್ಲ. ಅದರಲ್ಲೂ, ಅದನ್ನು ಎಲ್ಲೆಂದರೆ ಅಲ್ಲಿ ಇಡುವಂತಿಲ್ಲ. ಟೇಬಲ್ಲೇ ಆಗಬೇಕು, ಇಲ್ಲವೆಂದರೆ ನಿಮ್ಮ ತೊಡೆ; ಅದನ್ನು ಇಡುವ ರೀತಿಯೋ ಅಷ್ಟೇ - ಅದರ ಫ್ಯಾನಿನ ಗಾಳಿಗೆ ಅಡಚಣೆ ಬರಬಾರದು, ಇಲ್ಲವೆಂದರೆ ಲ್ಯಾಪ್ ಟಾಪ್ ಬಿಸಿಯೇರಿ ನಿಂತೇಹೋಗಿಬಿಡುತ್ತದೆ. ಬರಹದ ಸಿದ್ಧತೆಯೇ ಇಷ್ಟು ಔಪಚಾರಿಕವಾಗಿಬಿಟ್ಟರೆ, ಬರಹ ಹೊಮ್ಮುವುದೆಂತು? ಈ ಬರಹದ ಸ್ಪೂರ್ತಿಯೋ, ಬೇರೆಲ್ಲ ಸ್ಪೂರ್ತಿಗಳಂತೆಯೇ ಅದೂ ಕೂಡ, ಹೊತ್ತಿಲ್ಲ ಗೊತ್ತಿಲ್ಲ. ಮನಸ್ಸಿಗೆ ಬಂದಾಗ ಮೇಲೇರಿ ಸವಾರಿ ಮಾಡುತ್ತದೆ. ಆಗ ಬಂದ ಹದ ಮತ್ತೊಮ್ಮೆ ಬರದು. "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ಬರಕೋ ಪದಾ ಬರಕೋ" ಅನ್ನುತ್ತಾನೆ ಶಿಶುನಾಳ ಶರೀಫ. ಅದನ್ನು ಗುರುತು ಹಾಕಿಕೊಳ್ಳಬೇಕೆಂದು ಲ್ಯಾಪ್ ಟಾಪ್ ಶುರುಮಾಡುತ್ತಾ ಕುಳಿತುಕೊಳ್ಳುವುದುಂಟೇ? ಆದರೆ ಪೇಪರು ಪೆನ್ಸಿಲಿನ ವಿಷಯ ಹಾಗಲ್ಲ. ಅದನ್ನು ಪಕ್ಕದಲ್ಲೇ ಇಟ್ಟುಕೊಳ್ಳಬಹುದು, ಇಲ್ಲದಿದ್ದರೂ ಎದ್ದುಹೋಗಿ ಒಂದು ಪೇಪರು ಪೆನ್ಸಿಲು ತಂದು ಬರೆದುಕೊಳ್ಳಬಹುದು. ಪೇಪರಿನ ಕಂತೆಯನ್ನು ಕಿಸೆಯಲ್ಲಿ ತುರುಕಿಕೊಂಡು, ಪೆನ್ಸಿಲನ್ನು ಕೊನೆಗೆ ಕಿವಿಯಲ್ಲಿ ಕೂಡ ಸಿಕ್ಕಿಸಿಕೊಂಡು ಎಲ್ಲಿ ಬೇಕಾದರೂ ಹೋಗಬಹುದು. ನೀವು ಬರೆಯಲೆಂದೇ ಎಲ್ಲೂ ಹೋಗಬೇಕಿಲ್ಲ, ಹೋದಮೇಲೆ ಬರೆಯಲೂ ಬೇಕಿಲ್ಲ. ಸುಮ್ಮನೆ ಹೊರಗೆ ಹೋಗುವಾಗ ಇವನ್ನು ಒಯ್ದರೆ ಆಯಿತು. ಬರುವಾಗ ತಂದರೆ ಆಯಿತು. ಡಿವಿಜಿಯವರ ಜ್ಞಾಪಕ ಚಿತ್ರಶಾಲೆಯಲ್ಲೋ ಹಕ್ಕಿಯ ಪಯಣ ಸರಣಿಯಲ್ಲೋ ಎಲ್ಲೋ ಓದಿದ ಪ್ರಸಂಗ. ಖ್ಯಾತ ಸಂಗೀತವಿದ್ವಾಂಸರೊಬ್ಬರು ಯಾವಾಗಲೂ ತಮ್ಮೊಡನೆ ಒಂದು ಕಟ್ಟು ಪೇಪರು ಪೆನ್ಸಿಲು ಒಯ್ಯುತ್ತಿದ್ದರಂತೆ. ಯಾವುದೋ ಸೊಗಸಾದ ಪಲುಕೋ ಸಂಗ್ತಿಯೋ ನೆರವಲೋ ಎತ್ತುಗಡೆಯೋ ಹೊಳೆದರೆ ಅದನ್ನು ಅಲ್ಲಿಯೇ ಗುರುತು ಹಾಕಿಕೊಳ್ಳುವುದು, ಅದನ್ನೇ ಪದೇಪದೇ ಪಲುಕುತ್ತಾ ಗಟ್ಟಿಮಾಡಿಕೊಳ್ಳುವುದು, ಅದನ್ನು ಮುಂದಿನ ಸಂಗೀತ ಕಚೇರಿಯಲ್ಲಿ ಬಳಸುವುದು ಅವರ ವಾಡಿಕೆ. ಹೀಗೊಮ್ಮೆ ಹೊರಗೆ ಹೋದಾಗ ಅವತ್ತು ಎಂದೂ ಇಲ್ಲದ ಅದ್ಭುತವಾದ ರಾಗಸಂಚಾರವೊಂದು ಹೊಳೆದುಬಿಟ್ಟಿದೆ; ವಾಡಿಕೆಯಂತೆ ಬರೆದುಕೊಳ್ಳಲು ಪೇಪರು ಪೆನ್ಸಿಲು ಹುಡುಕುತ್ತಾರೆ, ಆದರೆ ಅವತ್ತೇ ಅದನ್ನು ಮರೆತಿರಬೇಕೇ? ಸಂಚಾರದ ನಡೆಯೋ ಕ್ಲಿಷ್ಟಾತಿ ಕ್ಲಿಷ್ಟ, ನೆನಪಿನಲ್ಲೂ ಉಳಿಯುವುದಲ್ಲ, ಬರೆದುಕೊಳ್ಳೋಣವೆಂದರೆ ಪೇಪರು ಪೆನ್ನು ಇಲ್ಲ. ಚಡಪಡಿಸಿ ಹೋದರಂತೆ. ಕೊನೆಗೆ ಇವರ ಪಾಡು ಗಮನಿಸಿದ ಯಾರೋ ಸಹೃದಯರು ಅದೆಲ್ಲಿಂದಲೋ ಒಂದು ಪೇಪರು ಪೆನ್ಸಿಲು ಸಂಪಾದಿಸಿ ತಂದಿತ್ತ ಮೇಲೇ ಸಮಾಧಾನ ಆ ವಿದ್ವಾಂಸರಿಗೆ. ಈ ಸ್ಪೂರ್ತಿದೇವತೆಯರ ಉಪಟಳವೇ ಹಾಗೆ. ಅವರು ಬಂದಾಗ ನೀವು ತಯಾರಾಗಿರಬೇಕೇ ಹೊರತು ನಿಮಗೆ ಬೇಕಾದಾಗ ಅವರು ಬರುವುದಿಲ್ಲ. ಗೆಳೆಯ ಜಯಂತರು ಅಲ್ಲೂ hifi technology ಬಿಟ್ಟುಕೊಡರು. ಹೀಗೆ "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ" ಅದನ್ನು ಅವರು ಮೊಬೈಲಿನಲ್ಲಿ ನಮೂದಿಸಿಕೊಳ್ಳುತ್ತಾರಂತೆ, ಮತ್ತೆ ಯಾವಾಗಲಾದರೂ lap top ಗೆ ವರ್ಗಾಯಿಸಿದರಾಯಿತು! ನಾನಂತೂ ಇನ್ನೂ ತಾಂತ್ರಿಕವಾಗಿ ಅಷ್ಟು ಮುನ್ನಡೆ ಸಾಧಿಸಿಲ್ಲ; ಲ್ಯಾಪ್ ಟಾಪಿನಲ್ಲಿ ಟೈಪು ಮಾಡಿ ಒಗ್ಗಿದ ನನ್ನ ಬೆರಳಿಗೆ ಇನ್ನೂ ಮೊಬೈಲಿನ ಅಕ್ಷರಗಳು ಒಗ್ಗಿಲ್ಲ, ಇರಲಿ.

ಕಾವ್ಯದಷ್ಟು ಸೃಜನಶೀಲವಲ್ಲದ (ಲೇಖನ, ಪ್ರಬಂಧ, ವಿಚಾರ ಎಂದಿಟ್ಟುಕೊಳ್ಳೋಣ) ಬರಹಕ್ಕೆ ಬೇಕಾದ ಸಾಧನ ಸಲಕರಣೆಗಳೇ ಬೇರೆ. ಅದಕ್ಕೆ ಸ್ಫೂರ್ತಿಯ ಅಂಶ ಕಡಿಮೆ. ಅಲ್ಲಿ ವಿಚಾರದ ಪ್ರಖರತೆ, ಹರಿವು, ಸುಸಂಬದ್ಧತೆ ಮುಖ್ಯವೇ ಹೊರತು ಭಾವದ ತೀವ್ರತೆಯಲ್ಲ. ಅದಕ್ಕೆ ಈಗಾಗಲೇ ಓದುಗರ ಗುಂಪೊಂದಿದೆ. ಬರಹಗಾರ ಆ ಗುಂಪನ್ನು ಮನಸ್ಸಿನಲ್ಲಿಟ್ಟೇ ತನ್ನ ವಾದಸರಣಿಯನ್ನು ಮಂಡಿಸುತ್ತಾನೆ. ಅದು ಹುಟ್ಟುವುದು ಅವನ ಮನಸ್ಸಿನಲ್ಲಾದರೂ ಬೆಳೆಯುವುದು ಗುಂಪಿನ ಮಧ್ಯೆಯೇ. ಆ ದೃಷ್ಟಿಯಿಂದ ಅದು ಬಹಿರ್ಮುಖಿ. ಆದ್ದರಿಂದಲೇ ಲೇಖನವೊಂದಕ್ಕೆ ಸ್ಫೂರ್ತಿಗಿಂತಾ ಪ್ರಯತ್ನ ಮುಖ್ಯವಾಗುತ್ತದೆ, ಆದರೆ ಕಾವ್ಯಕ್ಕೆ ಸ್ಫೂರ್ತಿಯೇ ಮುಖ್ಯ (ಅದನ್ನು ಅಲಂಕರಿಸುವಲ್ಲಿ ಪ್ರಯತ್ನವಿದ್ದರೂ, ಕಾವ್ಯದ ಜೀವವಿರುವುದು ಸ್ಫೂರ್ತಿಯಲ್ಲೇ). ಆದ್ದರಿಂದ ನೀವು ಕಂಪ್ಯೂಟರಿನಮುಂದೆಯೋ ಪೆನ್ನು ಪೇಪರು ಹಿಡಿದೋ ದಿನಗಟ್ಟಲೆ ಕುಳಿತು ಪುಟಗಟ್ಟಲೆ ಲೇಖನ ಬರೆಯಬಹುದು, ಆದರೆ ಕಾವ್ಯವನ್ನಲ್ಲ. ಇನ್ನು ಕತೆಯ ವಿಷಯ ನನಗೆ ಗೊತ್ತಿಲ್ಲ. ಕತೆಯೊಂದು ಮನಸ್ಸಿನ ಗಜಗರ್ಭದಲ್ಲಿ ೧೨ ವರ್ಷ ಕಳೆದು ಅದೆಲ್ಲೋ ಕರಗಿಯೇ ಹೋಯಿತು. ಮತ್ತೊಂದು ಕತೆ ತುಸುಕಾಲ ಸೊಗಸಾಗಿ ಬರೆಯಿಸಿಕೊಂಡಿತಾದರೂ ಅದೇಕೋ ಮುಂದುವರೆಯಲೊಲ್ಲದು. ಅದೂ ಕಾವ್ಯದಂತೆಯೇ ಸ್ಫೂರ್ತಿಜನ್ಯವಾದರೂ ಕಾವ್ಯದಂತೆ ಒಮ್ಮೆ ಮಿಂಚಿ ಮರೆಯಾಗಿಬಿಡುವುದಲ್ಲ. ಸ್ಫೂರ್ತಿ ಕತೆಗೆ ಕಾಲಿದ್ದಂತೆ. ಅದು ಉದ್ದಕ್ಕೂ ಹೊಳೆಯುತ್ತಲೇ ಹೋಗಬೇಕು. ಜೊತೆಗೆ ಅದಕ್ಕೆ ಗದ್ಯದ ಸುಸಂಬದ್ಧತೆಯೂ (ಅದಕ್ಕೆ ಬೇಕಾದ ನಿರಂತರ ಪ್ರಯತ್ನವೂ) ಜೊತೆಗೆ ತನ್ನದೇ ಆದ ತಂತ್ರಗಾರಿಕೆಯೂ ಬೇಕು. ಆದರೆ ಕಾವ್ಯ ಹಾಗಲ್ಲ. ಯಾವುದೋ ಘಳಿಗೆ ಮಿಂಚಿ ಮರೆಯಾಗುತ್ತದೆ. ಅದನ್ನು ಹಿಡಿದಿಟ್ಟುಕೊಂಡಿರೋ ಸರಿ, ಇಲ್ಲದಿದ್ದರೆ ಇಲ್ಲ. ಅದು ಒಂದು ಸಲಕರಣೆಯಾಗಿ ನಿಮ್ಮಿಂದ ಬಯಸುವುದು, ಹೊಳೆದಾಗ ಗುರುತು ಹಾಕಿಕೊಳ್ಳಲು ಕೇವಲ ಒಂದು ಸೀಸದ ಕಡ್ಡಿ ಮತ್ತು ಕಾಗದದ ತುಂಡು ಮಾತ್ರ. ಯಾರೋ ಲೇಖಕಿಯೊಬ್ಬರ ಪುಟ್ಟ ಕವನವೊಂದರಲ್ಲಿ (ಕವನವೋ ಕತೆಯೋ ನೆನಪಿಲ್ಲ, ಲೇಖಕಿಯ ಹೆಸರೂ ನೆನಪಿಲ್ಲ) ಅದರ ನಾಯಕಿ ತನ್ನ ಬ್ರಾ ದ ಸ್ಟ್ರಾಪಿನ ಮೇಲೆ ಕವನದ ಸಾಲೆರಡನ್ನು ಬರೆದಿಟ್ಟು ಅದನ್ನು ಒಗೆದಂತೆಲ್ಲಾ ಕರಗುವ ಆ ಸಾಲುಗಳನ್ನು ನೋಡುತ್ತಾ ವಿಷಾದವನ್ನನುಭವಿಸುತ್ತಾಳೆ. ಸಂವೇದನೆಯ ಅನೇಕ ಸ್ತರಗಳನ್ನೊಳಗೊಂಡ ಆ ಪ್ರತಿಮೆ ನನಗೆ ತುಂಬಾ ಹಿಡಿಸಿತು. ಕಾವ್ಯವೊಂದು ಹುಟ್ಟುವುದು ಕವಿಯ ಅತ್ಯಂತ ಖಾಸಗಿ ಕ್ಷಣದಲ್ಲಿ, ಬೆಳೆಯುವುದು ಅವನ/ಳ ಏಕಾಂತದಲ್ಲಿ, ಸೂಕ್ಷ್ಮ ಸಂವೇದನೆಗಳಲ್ಲಿ. ಅಲ್ಲಿ ಅವನಿಗೆ ಓದುಗರಿಲ್ಲ, ಚಪ್ಪಾಳೆಗಳಿಲ್ಲ, ಸ್ಪರ್ಧೆಯಿಲ್ಲ, ಅದನ್ನವನು ಯಾವ ಪತ್ರಿಕೆಗೂ ಕಳಿಸಬೇಕಿಲ್ಲ, ಬ್ಲಾಗಿನಲ್ಲೂ ಪ್ರಕಟಿಸಬೇಕಿಲ್ಲ. ಅಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಅವನು ಸರ್ವತಂತ್ರಸ್ವತಂತ್ರ. ಮನಕ್ಕೆ ಬಂದದ್ದನ್ನು ಬರೆಯಬಹುದು. ಚಂದ ಕಂಡದ್ದನ್ನು ಉಳಿಸಿಕೊಳ್ಳಬಹುದು. ಲಕ್ಷಣಕ್ಕೆ ಪ್ರಾಸ, ಲಯ, ಛಂದಸ್ಸುಗಳೇನಿದ್ದರೂ ಹೊರಗೆ ತೋರಿಸುವ ಅಲಂಕಾರ ಅಷ್ಟೇ. ಕಾವ್ಯ ಆಗತಾನೇ ಹುಟ್ಟಿದ ಮಗುವಿನಂತೆ, ಬೆತ್ತಲೆ. ಅಲಂಕಾರ ಆಮೇಲೆ. ಅದನ್ನು ಅಲ್ಲಿ ಇಲ್ಲಿ ಪ್ರಕಟಿಸುವುದೋ, ಪ್ರದರ್ಶಿಸುವುದೋ ಆಮೇಲೆ. ಈ ಸೃಜನದ ಏಕಾಂತಕ್ಕೆ, ಧ್ಯಾನಕ್ಕೆ, ತಾದಾತ್ಮ್ಯಕ್ಕೆ ಪೆನ್ನು ಪೇಪರಿನಂತಹ ಸುಲಭ ಸರಳ ಸಲಕರಣೆಗಳೇ least disturbing ಎಂದು ನನ್ನ ಅನಿಸಿಕೆ.

ಈ ದಿಕ್ಕಿನಲ್ಲಿ ಯೋಚಿಸುತ್ತಾ ನನ್ನದೇ ಬರಹಗಳನ್ನು ಗಮನಿಸುತ್ತಿದ್ದಾಗ ಮತ್ತೊಂದು ಅಂಶ ನನ್ನ ಗಮನಕ್ಕೆ ಬಂತು. ಮೇಲೆ ತಿಳಿಸಿದ ಸೆಪ್ಟೆಂಬರು ೨೦೦೭ ರ ವರಿಗಿನ ಕವನಗಳೆಲ್ಲಾ ಹಳೆಯವು, ಕಂಪ್ಯೂಟರಿನ ಬಳಕೆ ಅಷ್ಟಾಗಿ ಇಲ್ಲದ ಕಾಲದಲ್ಲಿ ಬರೆದು ಆಮೇಲೆ ಬ್ಲಾಗಿನಲ್ಲಿ ಹಾಕಿದ್ದು. ಸೆಪ್ಟೆಂಬರ್ ೨೦೦೭ರ ಮೇಲೆ ಮೇಲೆ ನಾನು ಬರೆದದ್ದು ಕೇವಲ ಎರಡೇ ಎರಡು ಕವನ, ಅದೂ ನನಗೆ ಚೆನ್ನಾಗಿ ನೆನಪಿರುವಂತೆ ಎಲ್ಲೋ ಪೇಪರಿನಮೇಲೆ ಗೀಚಿ ಇಟ್ಟುಕೊಂಡಿದ್ದು, ಬಿಡುವಾದಾಗ ಪರಿಷ್ಕರಿಸಿ ಬ್ಲಾಗಿಗೆ ಹಾಕಿದ್ದು. ಅದು ಬಿಟ್ಟರೆ ಆ ನಂತರ ನಾನು ಬರೆದದ್ದೆಲ್ಲಾ (ಅಷ್ಟೊಂದು ಸೃಜನಶೀಲವೆನ್ನಲಾಗದ) ಲೇಖನಗಳೇ! ಅವಕ್ಕೆ ಬರೆದು, ಹೊಡೆದು, ಹರಿದುಹಾಕುವ ಪೆನ್ನು ಪೇಪರಿಗಿಂತ, ಕಟ್ ಕಾಪಿ ಪೇಸ್ಟ್ ಸಾಮರ್ಥ್ಯವನ್ನೊಳಗೊಂಡ ಕಂಪ್ಯೂಟರೇ ಸುಲಭವೆನ್ನಿಸಿದ್ದೂ ನಿಜ, ಅದನ್ನು ಕೂಡಲೇ ಬ್ಲಾಗಿನಲ್ಲಿ ಪ್ರಕಟಿಸುವ ಅನುಕೂಲವಿದ್ದದ್ದೂ ನಿಜ.

ಸ್ಫೂರ್ತಿಗಾಗಿ ಧ್ಯಾನಿಸುವುದಕ್ಕಿಂತಾ ಸುಮ್ಮನೇ ಕುಳಿತು ಯೋಚಿಸಿ ಬರೆಯುವುದು ನನಗೀಗ ಸುಲಭವಾದ್ದರಿಂದ ಸ್ಪೂರ್ತಿಯನ್ನಪೇಕ್ಷಿಸುವ ಕಾವ್ಯ ಹಿಂದೆ ಸರಿದು ಬರಹಗಳ ಹರಿವು ಮುಂಚೂಣಿಗೆ ಬಂತೇ? ಅಥವಾ ಕಾವ್ಯದ ಬುಗ್ಗೆ ಸೊರಗಿದ್ದರ ಕೊರತೆಯನ್ನು ನೀಗಲೆಂದೇ ಇಷ್ಟೆಲ್ಲಾ ಬರೆಯುತ್ತಿದ್ದೇನೆಯೇ? ತುಸು ದಿನ ಬರೆಯುವುದು ಬಿಟ್ಟರೆ ಮತ್ತೆ ನಾನು ಕಾವ್ಯದ ದಾರಿಗೆ ಹೊರಳಿಕೊಳ್ಳಬಹುದೇ? ಪ್ರಶ್ನೆಗಳು ಹಲವು. ಉತ್ತರ ಕಂಡುಕೊಳ್ಳಬೇಕು.

21 comments:

Susheel Sandeep said...

ಹಮ್ಮ್....ತೀರಾ ಯೋಚನೆಗೀಡು ಮಾಡಬಹುದಾಗಿದ್ದ ಬರಹ ಆದ್ರೆ ಯಾಕೋ ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ನನ್ನನ್ನ ಯೋಚನೆಗೀಡು ಮಾಡಲಿಲ್ಲ. ಕಾರಣ ಪ್ರಾಯಶಃ ದಿನೇ ದಿನೇ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮನ್ನು ನಾವು ಅಪ್‍ಡೇಟಿಸಿಕೊಂಡಿರುವುದಿರಬಹುದೇನೋ!

ಜಯಂತರಂತೆ ನನ್ನದೂ ಕೂಡಾ ಮೊಬೈಲ್ ಸಾಂಗತ್ಯವೇ. ಕವಿಸಮಯಕ್ಕೆ ಅದರದೇ ಸಾತ್.ಹೆಚ್ಚೆಂದರೆ ಯಾವುದೋ ರಸೀತಿ ಇಲ್ಲವೆ ಬಸ್ ಟಿಕೆಟ್ ಇಲ್ಲ ನನ್ನದೇ ವಿಸಿಟಿಂಗ್ ಕಾರ್ಡ್ ಒಮ್ಮೊಮ್ಮೆ. ಹಿಂದೊಮ್ಮೆ ಹೋದಕಡೆಗೆಲ್ಲ ನನ್ನದೊಂದು ಚಂದನೆಯ ಪುಸ್ತಕ ಪೆನ್ನುಗಳೆರಡನ್ನು ಬ್ಯಾಗಿನಲ್ಲಿ ಒಯ್ತಿದ್ದ ಕಾಲವಿತ್ತು.(ನೆಪಮಾತ್ರಕ್ಕೆ ಪುಸ್ತಕ ಪೆನ್ನು ಈಗಲೂ ಬ್ಯಾಗಿನಲ್ಲಿರುತ್ತದೆನ್ನಿ.ಆದ್ರೆ ತೆಗೆದು ಗೀಚಿದ್ದ್ದು ನೆನಪುನಲ್ಲಿಲ್ಲ :()

ಆದರೂ ಏನನ್ನೋ ಕಳೆದುಕೊಂಡ ಭಾವವೇಕೋ ನನಗಿನ್ನೂ ಕಾಡಿದ್ದಿಲ್ಲ. ಇದಕ್ಕೆ ಹೋಲಿಸಿಕೊಂಡರೆ ಸ್ನೇಹಿತರೆಗಿಷ್ಟು ನಾ ಬರೀತಿದ್ದ ಕಾಗದಗಳು ನನ್ನನ್ನು ಇಂದಿಗೂ ಕಾಡುವುದು ದಿಟ. ಹೆಚ್ಚೆಂದರೆ ಈಗ ಈಮೈಲುಗಳು ಮಾತೆತ್ತಿದರೆ ಫೋನ್ ಕಾಲ್, ಟೆಕ್ಸ್ಟ್ ಮೆಸೇಜು ಮಾಡುವ ಸಲಿಗೆ ಇದ್ದರೂ ಆ ಪತ್ರಗಳಲ್ಲಿದ್ದ ಆತ್ಮೀಯತೆ ಮಿಸ್ಸಿಂಗು :/

ಉತ್ತಮವಾದ ಲೇಖನ.
(ಒಟ್ಟಿನಲ್ಲಿ ಸೀಸದ ಕಡ್ಡಿಯೋ ರೆನಾಲ್ಡ್ಸ್ ಪೆನ್ನೋ ಇಲ್ಲವೆ ಲ್ಯಾಪ್‍ಟಾಪೋ ಬರವಣಿಗೆ ಹೀಗೆ ಬರ್ತಿದ್ರೆ ಸರಿ...ಮಿಕ್ಕೆಲ್ಲವೂ ಗೌಣವೇ!)

ಸೀತಾರಾಮ. ಕೆ. / SITARAM.K said...

ತೀರಾ ಆಪ್ತವಾದ ಲಲಿತ ಪ್ರಭಂಧ. ತುಂಬಾ ಚೆನ್ನಾಗಿ ವಿವರಿಸಿದ್ದಿರಾ... ಕಾವ್ಯ ಮತ್ತು ಲೇಖನದ ವಿಭಿನ್ನತೆ ತುಂಬಾ ಸ್ಫತ್ತವಾಗಿ ಹೇಳಿದ್ದಿರಾ.. ಬ್ಲಾಗಿಗೂ ಮತ್ತು ಪುಸ್ತಕ ಪೆನ್ನು ಬರವಣಿಗೆಯನ್ನ ಸೂಕ್ಷ್ಮವಾಗಿ ಅವಲೋಕಿಸಿದ್ದಿರಾ!
ಧನ್ಯವಾದಗಳು.

Chamaraj Savadi said...

ಮಂಜುನಾಥ ಕೊಳ್ಳೇಗಾಲ ಅವರೇ,

ತುಂಬ ಆಪ್ತವೆನಿಸಿತು ಬರಹ. ಒಂದು ವೇಳೆ ಅವಕಾಶ ಇದ್ದರೆ ಪ್ರತಿಕ್ರಿಯೆಯನ್ನು ಕೈಬರಹದಲ್ಲೇ ನೀಡಬೇಕೆನಿಸುವಷ್ಟು ಆಪ್ತವಾಗಿದೆ.

ವಿಜಯ ಕರ್ನಾಟಕ ಜನಿಸಿದ ವೇಳೆಯಲ್ಲಿ ಎಲ್ಲಾ ವರದಿಗಾರರು ಕಂಪ್ಯೂಟರ್‌ ಮೂಲಕವೇ ಸುದ್ದಿ ಕಳಿಸುವುದನ್ನು ಕಡ್ಡಾಯ ಮಾಡಿದಾಗಿನಿಂದ ಶುರುವಾದ ನನ್ನ ಗಣಕ ಬರವಣಿಗೆ ಇವತ್ತಿಗೂ ಹಾಗೇ ಮುಂದುವರಿದಿದೆ.

ಹಾಗಂತ ನಾನು ಕೈ ಬರಹವನ್ನು ಬಿಟ್ಟಿಲ್ಲ. ಇವತ್ತಿಗೂ ನನ್ನ ಆಪ್ತ ಬರವಣಿಗೆಗಳ ಬಹುಪಾಲು ಮೊದಲು ಮೂಡುವುದು ಕೈಬರಹದಲ್ಲಿ. ನಾನು ಓದಿ ಇಷ್ಟಪಟ್ಟ ಸಾಲುಗಳನ್ನು ಬರೆದುಕೊಳ್ಳುವುದರ ಜೊತೆಗೆ ನನ್ನ ಆಪ್ತ ಬರವಣಿಗೆಗಳನ್ನು ದಾಖಲಿಸಲು ದೊಡ್ಡ ಗಾತ್ರದ ಪ್ರತ್ಯೇಕ ನೋಟ್‌ಬುಕ್‌ ಮಾಡಿಕೊಂಡಿದ್ದೇನೆ. ಹೀಗಾಗಿ ಕೈ ಬರಹದಿಂದ ವಂಚಿತನಾದ ಅಸಮಾಧಾನ ನನಗಿಲ್ಲ. :)

ಏನೇ ಆದರೂ, ಕೈಬರಹದ ಪ್ರಮಾಣದ ಕಡಿಮೆ ಆಗಿದ್ದಂತೂ ನಿಜ. ಬಹುಶಃ ಅದು ಅನಿವಾರ್ಯವೂ ಹೌದು. ಇವತ್ತಿಗೂ ತಿಂಗಳ ಪಡಿತರ ಪಟ್ಟಿ, ಹೊರಗೆ ಹೋದಾಗ ತರಬೇಕಾದ ಸಾಮಾನುಗಳ ಪಟ್ಟಿ, ಹೆಂಡತಿಗೆ ಹೇಳಬೇಕಾದ ಕೆಲ ಗೃಹಕೃತ್ಯದ ಸೂಚನೆಗಳು, ಯಾರದೋ ನಂಬರ್‌, ಕೆಣಕುವ ಯಾವ್ಯಾವೋ ಭಾವನೆಗಳು ಮೂಡುವುದು ಪೆನ್ನು-ಪೇಪರ್‌ನಿಂದಲೇ. ಅವು ಪರಿಷ್ಕೃತಗೊಂಡ ನಂತರವಷ್ಟೇ ಗಣಕ ಬರಹಗಳಾಗುವುದು.

ಕಚೇರಿಯಲ್ಲಿ ಬರೆಯುವ ಸ್ಕ್ರಿಪ್ಟ್‌ಗಳನ್ನು ಮಾತ್ರ ಗಣಕದಲ್ಲೇ ಬರೆಯುವುದು ಅನಿವಾರ್ಯ. ಇಲ್ಲದಿದ್ದರೆ, ಅವನ್ನೂ ಕೈಬರಹದಲ್ಲೇ ಬರೆಯಲು ಇಷ್ಟಪಡುತ್ತಿದ್ದೆ.

ನಿಮ್ಮ ಲೇಖನ ಇವೆಲ್ಲವನ್ನೂ ಮತ್ತೆ ನೆನಪಿಸಿತು.

- ಚಾಮರಾಜ ಸವಡಿ

Umesh Balikai said...

ನಾನು ಸೀರೀಯಸ್ ಆಗಿಬರೆಯೋಕೆ ಶುರು ಹಚ್ಚಿಕೊಂಡಿದ್ದೇ ಕಂಪ್ಯೂಟರಿನಲಿ. ಶಾಲೆಗೆ ಹೋಗುವ ದಿನಗಳಲ್ಲಿ, ಪತ್ರಿಕೆಗಳಲ್ಲಿ ಬರುತ್ತಿದ್ದ ಕಥೆ, ಕವನಗಳನ್ನು ನೋಡಿ ಉತ್ತೇಜನಗೊಂಡು ನಾನೂ ಏನೇನೋ ಬರೆದಿದ್ದರೂ ಅವನ್ನೆಲ್ಲ ನಂತರ ಕಸದ ಬುಟ್ಟಿಗೆ ಹಾಕಿದ್ದೆ.. ಈಗ ತುಂಬಾ ಚೆನ್ನಾಗಿ ಅಲ್ಲದಿದ್ದರೂ ಕಡೆ ಪಕ್ಷ ಎರಡು ಕ್ಷಣ ಓದಿಸಿಕೊಂಡು ಹೋಗುವ ಮಟ್ಟಿಗಾದರೂ ಬರೆಯಬಲ್ಲೆ... ಅದೂ ಅಲ್ಲದೇ, ಭೌತಿಕ ವಸ್ತುಗಳೊಂದಿಗೆ ಆಪ್ಯಾಯತೆ ಬೆಳೆಯುವುದು ನಾವು ಅವುಗಳೊಂದಿಗೆ ಬೆಳೆದಾಗಲೇ.. ದಿನವಿಡೀ ಕಂಪ್ಯೂಟರಿನ ಮುಂದೆ ಕೂತು ಕೀಲಿಮನೆ ಕುಟ್ಟುವ ನನ್ನಂತ ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೆ ಲ್ಯಾಪ್‌ಟಾಪ್ ನಂತಹ ಪರಿಕರದೊಂದಿಗೆ ಆಪ್ಯಾಯತೆ ಬೆಳೆಯುವುದು.. ಅದೂ ಅಲ್ಲದೇ, ಹವ್ಯಾಸಕ್ಕೆಂದು ಬರೆಯುವ ನಾವು ಸದಾ ಪೆನ್ನು ಪುಸ್ತಕ ಹಿಡಿದುಕೊಂಡು ತಿರುಗುವುದು ಅಸಾಧ್ಯದ ಮಾತು. ಲ್ಯಾಪ್‌ಟಾಪ್ ಒಂದಿದ್ದರೆ ಅದರಲ್ಲಿ ನಮ್ಮ ದೈನಂದಿನ ಕೆಲ್ಸದ ಜೊತೆಗೆ, ಓದುವುದು, ಬರೆಯುವುದು, ಹಾಡು ಕೇಳುವುದು, ಚಲನಚಿತ್ರ ನೋಡುವುದು ಇನ್ನೂ ಇತ್ಯಾದಿ ಮಾಡಬಹುದು.. ಹೀಗಾಗಿ ನಮ್ಮಂತವರಿಗೆ ಲ್ಯಾಪ್‌ಟಾಪ್ ಜೊತೆಯಲ್ಲಿನ ಹೆಚ್ಚಿನ ಬಾಂಧವ್ಯ.. ಅದಕ್ಕೆ ಕರೆಂಟ್, ಬ್ಯಾಟರೀ ಇತ್ಯಾದಿ ಬೇಕು ಅನ್ನೋದು ನಿಜ.. ಅದೇ ತರಹ ಪೆನ್ನಿಗೂ ಶಾಯಿ ಬೇಕಲ್ಲವೇ.. ಪುಸ್ತಕದಲ್ಲಿ ಬರೆಯಲು ಖಾಲಿ ಹಾಳೆಗಳೂ ಇರಬೇಕಲ್ಲವೇ.. ಪುಸ್ತಕ, ಪೆನ್ನಿನ ಮೇಲಿನ ಮೋಹಕ್ಕೆ ಗಣಕ ಯಂತ್ರಗಳನ್ನು ದೂಷಿಸುವುದು ಸರಿಯಲ್ಲ ಅಂತ ನನ್ನ ಅನಿಸಿಕೆ...

ಬರೆಯಲು ತೋಚದಂತಾದಾಗ ಪೆನ್ನು ಕಚ್ಚಿದಂತೆ ಲ್ಯಾಪ್‌ಟಾಪ್ ಗೆ ತಲೆ ಚಚ್ಚಬಹುದು :)

AntharangadaMaathugalu said...

ಮಂಜುನಾಥ್ ಅವರೇ...
ನಿಮ್ಮ ಬರಹ ಬಹಳ ಆಪ್ತವೆನಿಸಿತು. ನನಗೀಗಲೂ ಬರೆಯುವುದೇ ಇಷ್ಟ. ನನ್ನ ಬ್ಲಾಗಿನ ಬರಹಗಳು ಮೊದಲು ಪುಸ್ತಕದಲ್ಲಿ ದಾಖಲಾಗಿಯೇ ನಂತರ ಗಣಕ ಯಂತ್ರಕ್ಕೇರುವುದು. ನನಗೇನೋ ಬರೆಯುವುದರಿಂದ ನಮ್ಮ ಲಹರಿಯ ದಿಕ್ಕು ನಮ್ಮೊಳಗೆ ಸಂಚಲನ ಮೂಡಿಸುತ್ತದೆ ಅನ್ನಿಸುತ್ತೆ. ನಮಗೆ ಪ್ರಿಯವಾದ ಒಂದು ಜಾಗದಲ್ಲಿ ಕುಳಿತು, ಆಲೋಚಿಸುತ್ತಾ ಮನದ ವಿಚಾರಗಳ ಮಂಥನ ಮಾಡುತ್ತಾ ಕೈಯಲ್ಲಿರುವ ಲೇಖನಿಯ ಮೂಲಕ, ನೀಲಿ, ಕಪ್ಪು ಅಕ್ಷರಗಳನ್ನು (ನಾನು ಬರೆಯುವುದು ಶಾಯಿ ಹಾಕುವ ಲೇಖನಿಗಳಲ್ಲೇ..!) ಗೆರೆ ಹಾಕಿದ ಬಿಳಿಯ ಹಾಳೆಯ ಮೇಲೆ ಮುದ್ದಾಗಿ ಮುತ್ತು ಪೋಣಿಸಿದಂತೆ ಮೂಡಿಸುವಾಗ ಆಗುವ ಆನಂದ ಕೀಲಿ ಮಣೆಯಲ್ಲಿ ಅಕ್ಷರಗಳನ್ನು ಕುಟ್ಟಿದಾಗ ಆಗೋಲ್ಲ...!!!!

ಶ್ಯಾಮಲ

Arun ಅರುಣ್ said...

It was thought provoking, I completely agree to whatever you said. I writing this comment in English itself suggest that I am totally out of touch with my Kannada writing. If I write in Kannada it will have thousands of mistakes. I am in touch with English only because I use it for official purpose (there also it cannot be complete without spell check / grammar check).
But one thing is sure, without the computer revolution I would not have been able to read your writing sitting thousands of miles away from you. I think we need to respect that aspect.
Use pencil it is fine, but eating lead is not good for body :).
Please keep writing.

ದಿನಕರ ಮೊಗೇರ said...

ಮಂಜುನಾಥ್ ಸರ್,
ನಿಮ್ಮ ಬರಹ ಚಿಂತನೆಗೆ ಗುರಿ ಮಾಡಿತು..... ನಮ್ಮ ಬರಹದಲ್ಲಿ ನಮ್ಮ ವ್ಯಕ್ತಿತ್ವ ಗೊತ್ತಾಗತ್ತೆ ಅಂತಾರೆ... ಆದ್ರೆ ಇಲ್ಲಿ ಕುಟ್ಟಿದರೆ ಎಲ್ಲಾ ಗೌಣ..... ಗಡಿಬಿಡಿಯಿಂದ ಬರೆದಿದ್ದೀನೋ ಅಥವಾ ಆರಾಮಾಗಿ ಬರೆದಿದ್ದೀನೋ ಗೊತ್ತಾಗಲ್ಲ..... ನಿಮ್ಮ ಬರಹ ಎಲ್ಲರನ್ನೂ ಚಿಂತಿಸುವಲ್ಲಿ ಯಶಶ್ವಿಯಾಗಿದೆ..... ನನ್ನ ಬ್ಲೊಗಿಗೊಮ್ಮೆ ಬನ್ನಿ ಸರ್...
ಒಂದು ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ... ಬಂದು ಓದಿ ಸರ್...

sunaath said...

ಮಂಜುನಾಥ,
ತುಂಬ ಆಪ್ತಚಿಂತನೆಯ, ಸುಂದರ ಲೇಖನ. ಕೈಬರಹದ ಗಮ್ಮತ್ತು ಕೀಲಿಮಣೆ ಬರಹಕ್ಕೆ ಇಲ್ಲವೆನ್ನುವದು ನಿಜ. ಆದರೂ ಸಹ ನಾವೀಗ ತಿರುಗಿ ಹೋಗಲಾರದಷ್ಟು ದೂರ ಕ್ರಮಿಸಿದ್ದೇವೆಯಲ್ಲವೆ?

Manjunatha Kollegala said...

ಸುಶೀಲ್,

ಬರೆದದ್ದೆಲ್ಲಾ ಯೋಚನೆಗೆ ಹಚ್ಚಬೇಕೆಂಬ ನಿಯಮವಿದೆಯೇ? ;)

ಒಬ್ಬೊಬ್ಬರಿಗೆ ಒಂದೊಂದರ ಬಳಕೆ. ದಿನದಲ್ಲಿ ಸರಿಸುಮಾರು ೧೫-೧೬ ಗಂಟೆ ಕಂಪ್ಯೂಟರಿನ ಮುಂದೆಯೇ ಕೂರುವ, ಕಂಪ್ಯೂಟರಿನಲ್ಲೇ ಉಸಿರಾಡುವ ನನಗೂ ಇವತ್ತು ಕಂಪ್ಯೂಟರು ಇಂಟರ್ನೆಟ್ಟು ಇಲ್ಲದಿದ್ದರೆ ತಲೆಯೇ ಓಡುವುದಿಲ್ಲ. ಆದರೆ ಅದೇ ನನಗೆ, ಸ್ಲೇಟು-ಬಳಪದ ಆತ್ಮೀಯ ಬಾಲ್ಯ/ಪೆನ್ನು-ಪೇಪರಿನ ಆತ್ಮೀಯ ಯೌವನ ಕೂಡ ಇದೆ. ಆ ಚೆಂದದ ದಿನಗಳಿಗೊಂದು ಶ್ರದ್ಧಾಂಜಲಿ ಈ ಲೇಖನ ಅಷ್ಟೇ :)

Manjunatha Kollegala said...

ಧನ್ಯವಾದ ಸೀತಾರಾಮರೇ, ಬರುತ್ತಿರಿ

Manjunatha Kollegala said...

ಧನ್ಯವಾದ ಸವಡಿಯವರೇ, ಹೌದಲ್ಲ, ಬರೆಯುವ ಕ್ರಿಯೆಯೇ ಹಾಗೆ, ಅದೊಂದು ಆಪ್ತ-ಖಾಸಗೀ ಕ್ಷಣ. ಪ್ರತಿಕ್ರಿಯೆಯನ್ನು ಕೈಬರಹದಲ್ಲೇ ನೀಡಬೇಕೆನ್ನಿಸಿದರೆ ಖಂಡಿತಾ ಹಾಗೆ ಮಾಡಿ. ಈಗೀಗಂತೂ ಪತ್ರಗಳು ಬರುವುದೇ ನಿಂತಿದೆ. ಅಂದಹಾಗೆ ವಿಜಯಕರ್ನಾಟಕದಲ್ಲಿ ಬರಹಗಳನ್ನು ಕಂಪ್ಯೂಟರಿನ ಮೂಲಕವೇ ಕಳಿಸುವ ಖಡ್ಡಾಯ ನನಗೆ ತಿಳಿದಿರಲಿಲ್ಲ. ವರ್ಷಗಳ ಹಿಂದೆ ಅಲ್ಲಿಗೊಂದು ಲೇಖನವನ್ನೋ ಏನೋ ಕಳಿಸಿದ್ದೆ ಬರವಣಿಗೆಯಲ್ಲಿ. ಅದರ ಪತ್ತೆಯಿಲ್ಲದ್ದು ಕಂಡು ಬಹುಶಃ ಅದು ಸಂಪಾದಕರ ಕ.ಬು ಸೇರಿರಬೇಕು ಎಂದೆಣಿಸಿ ಸುಮ್ಮನಾಗಿದ್ದೆ. ಕಾರಣ ಈಗ ಹೊಳೆಯುತ್ತಿದೆ :)

Manjunatha Kollegala said...

ಒಂದೇ ಮಾತಿನಲ್ಲಿ ಎಂಥಾ ತೀರ್ಮಾನ ಕೊಟ್ಟುಬಿಟ್ರಿ ಉಮೇಶ ಬಾಳೀಕಾಯಿಯವರೇ!

ನನಗೆ ಪೆನ್ನು ಪೇಪರಿನ ಸಂಬಂಧ ತಪ್ಪಿಹೋಯಿತು, ಅದರ ಅನುಕೂಲ ಅದಿತ್ತು ಇದಿತ್ತು, ಅದು ಕಂಪ್ಯೂಟರಿನಲ್ಲಿ ಇಲ್ಲ ಅಂತ ಏನೋ feelings ಹೇಳಿಕೊಂಡರೆ, ಕಂಪ್ಯೂಟರನ್ನು ದೂಷಿಸುತ್ತಿದ್ದೇನೆ ಅಂತ ನಿರ್ಧರಿಸಿಬಿಟ್ರಲ್ಲ :) ನಾನೂ ನಿಮ್ಮಹಾಗೇ softwareನಲ್ಲೇ ಕೆಲಸಮಾಡೋದ್ರೀಯಪ್ಪ; ಕಂಪ್ಯೂಟರಿಲ್ಲದೇ ನಮಗೆ ಉಸಿರೇ ಇಲ್ಲ :)

ಪೆನ್ನು ಕಚ್ಚಿದಷ್ಟು ಸುಲಭವಲ್ಲ ಲ್ಯಾಪ್ಟಾಪಿಗೆ ತಲೆ ಚಚ್ಚುವುದು :) ತುಂಬಾ ಖರ್ಚಿನ ಪ್ರಸಂಗ

ಇರಲಿ, ಅಂದಹಾಗಿ ನಿಮ್ಮ ಬ್ಲಾಗಿಗೆ ಭೇಟಿಕೊಟ್ಟಿದ್ದೆ. ತುಂಬಾ ಸ್ವಾರಸ್ಯವಾಗಿ ಬರೆಯುತ್ತೀರಿ. ನಿಮ್ಮ ಫೋಟೋಗ್ರಫಿಕೂಡ ಹಿಡಿಸಿತು.

ಬರುತ್ತಿರಿ

Manjunatha Kollegala said...

ಧನ್ಯವಾದಗಳು ಶ್ಯಾಮಲಾ ಅವರೆ, ನಿಮ್ಮ ಬರಹದ ಖುಶಿ ಹಾಗೆಯೇ ಇರಲಿ. ಬರೆಯುತ್ತಿರಿ, ಬರುತ್ತಿರಿ

Manjunatha Kollegala said...

Thanks ದಿನಕರ ಅವರೆ. ನಿಮ್ಮ ಬ್ಲಾಗಿಗೆ ಬಂದಿದ್ದೆ. ನಿಮ್ಮ ಬರಹಗಳನ್ನು ಆನಂದಿಸಿದೆ ಕೂಡ.

Manjunatha Kollegala said...

ಸುನಾಥರೆ, unfortunately ನಿಜ; ನಾವು ತಿರುಗಿ ಹೋಗಲಾಗದಷ್ಟು ದೂರಬಂದಿದ್ದೇವೆ

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

Manjunatha Kollegala said...

Arun, Thanks for coming, and thanks for the comment.

Just to remind you, if at all somebody chews a pencil, they chew the other end of it, not the tip ;) And they just chew it, and dont eat up the lead, I suppose. We need to get a clarification from Ruskin Bond if he ever did so :)

ಜಯಂತ ಬಾಬು said...

ಸಾರ್, ಒಂದು ಸುಂದರ ಲಲಿತ ಪ್ರಬಂಧಕ್ಕೆ ಧನ್ಯವಾದಗಳು, ಹೇಗೋ ನನ್ನ ಹೆಸರು ಸುಳಿದಿದ್ದೇ ನನ್ನ ಭಾಗ್ಯ ಅಂದುಕೊಂಡೆ. ಇತ್ತೀಚೆಗೆ ನನಗೆ ಆ ಕವಿಸಮಯ ಬರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಈಗೆಲ್ಲ mobile phone ಫೊಟೊಗಳಿಗೆ ಬಳಕೆ ಆಗ್ತ ಇದೆ. ನನಗೂ ಅನಿಸಿದ್ದುಂಟು ನಾನು ಬರೆದ ಕೆಲವು ಸೃಜನಶೀಲ ಎಂದುಕೊಳ್ಳಬಹುದಾದ ಕತೆಗಳು ಪೇಪರ‍್ ಪೆನ್ನಿನಿಂದಲೇ. ಅಂದ ಮಾತ್ರಕ್ಕೆ ನನ್ನ ಅಭಿಪ್ರಾಯ ಈ ವಿಷಯದ ಬಗ್ಗೆ ಇಷ್ಟು " ಕವಿಸಮಯವೋ,ರಸನಿಮಷವೋ, ಅದೊಂದು ಎಳೆ,ಭಾವ ಮನಸ್ಸಿನಲ್ಲಿ ಮನೆ ಮಾಡಿದರೆ , ಯಾವ ಮಾಧ್ಯಮವಾದರೂ ತೂರಿ ಬರುತ್ತದೆ " .

Anonymous said...

ಒಳ್ಳೆಯ ಬರಹ. ರವಿ ಬೆಳೆಗೆರೆ ಮಾತು ನೆನಪಾಯಿತು. ಅವರಿಗೆ ಯಾರೋ ನೀವ್ಯಾಕೆ ಕಂಪ್ಯೂಟರ್ ನಲ್ಲಿ ಬರೆಯೋಲ್ಲ ಅಂತ ಕೇಳಿದ್ರಂತೆ, ಅದಕ್ಕೆ ರವಿ " ಕಂಪ್ಯೂಟರ್ ನಲ್ಲಿ ಬರೆಯೋದಂದ್ರೆ ಚಮಚೆಯಲ್ಲಿ ಮಾವಿನ ಹಣ್ಣು ತಿಂದ ಹಾಗೆ" ಅಂತ..:)

ಚಾರ್ವಾಕ ವೆಂಕಟರಮಣ ಭಾಗವತ said...

ಆತ್ಮೀಯ ಬರಹ, ಎಂದಿನಂತೆ.

ಕಾವ್ಯವೊಂದು ಹುಟ್ಟುವುದು ಕವಿಯ ಅತ್ಯಂತ ಖಾಸಗಿ ಕ್ಷಣದಲ್ಲಿ, ಬೆಳೆಯುವುದು ಅವನ/ಳ ಏಕಾಂತದಲ್ಲಿ, ಸೂಕ್ಷ್ಮ ಸಂವೇದನೆಗಳಲ್ಲಿ. ಅಲ್ಲಿ ಅವನಿಗೆ ಓದುಗರಿಲ್ಲ, ಚಪ್ಪಾಳೆಗಳಿಲ್ಲ, ಸ್ಪರ್ಧೆಯಿಲ್ಲ... ಈ ಸೃಜನದ ಏಕಾಂತಕ್ಕೆ, ಧ್ಯಾನಕ್ಕೆ, ತಾದಾತ್ಮ್ಯಕ್ಕೆ ಪೆನ್ನು ಪೇಪರಿನಂತಹ ಸುಲಭ ಸರಳ ಸಲಕರಣೆಗಳೇ least disturbing"

ನೂರಕ್ಕೆ ನೂರು ದಿಟ

Manjunatha Kollegala said...

ಜಯಂತ ಬಾಬು, ನೀಲಿ ಹೂವು ಮತ್ತು ಚಾರ್ವಾಕರೇ ನಿಮ್ಮ ಅನಿಸಿಕೆಗಳಿಗೆ ಧನ್ಯವಾದ. Keep visiting

Nandhini. N said...

uttama baraha. nija book nalli bareyode kushi ansutte