ಲೌಕಿಕ-ವೈದಿಕ ವಿದ್ಯೆಗಳೆರಡರಲ್ಲೂ ಅಪಾರ ಜ್ಞಾನ, ಕವಿ ಹೃದಯ, ವ್ಯವಹಾರ ಚತುರತೆ, ಆಡಳಿತದಲ್ಲಿ ದಕ್ಷತೆ, ಇದೆಲ್ಲವನ್ನೂ ಮೀರಿದ ವಿರಕ್ತಿ-ಸನ್ಯಾಸ ಇವಿಷ್ಟೂ ಒಬ್ಬನೇ ವ್ಯಕ್ತಿಯಲ್ಲಿ ಮೇಳೈಸಿರುವುದು ಬಹು ವಿರಳ. ಅಂಥಾ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ವಿದ್ಯಾ ಪ್ರಸನ್ನ ತೀರ್ಥರು.
.
ಜನನ ೧೮೯೯, ತೆಕ್ಕಲೂರಿನಲ್ಲಿ. ತಂದೆ, ಆ ಕಾಲಕ್ಕೆ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ತೆಕ್ಕಲೂರು ಅಹೋಬಲಾಚಾರ್ಯರು (ಇವರೇ ಮುಂದೆ ಶ್ರೀ ವ್ಯಾಸರಾಜ ವಿದ್ಯಾ ಸಿಂಹಾಸನದಲ್ಲಿ ೩೫ನೇ ಯತಿಗಳಾಗಿ ವಿರಾಜಿಸಿದ ಶ್ರೀ ವಿದ್ಯಾ ರತ್ನಾಕರ ತೀರ್ಥರು); ತಾಯಿ, ಇದೇ ಸಂಸ್ಥಾನದಲ್ಲಿ ೩೧ನೇ ಯತಿಗಳಾಗಿದ್ದ ಶ್ರೀ ವಿದ್ಯಾ ಶ್ರೀಸಿಂಧು ತೀರ್ಥರ ಪೂರ್ವಾಶ್ರಮದ ಪುತ್ರಿ ಸತ್ಯಭಾಮಮ್ಮನವರು. ಹೀಗೆ ಶ್ರೀಮಠದ ನಿಕಟ ಸಂಪರ್ಕ, ಪಾಂಡಿತ್ಯದ ದಟ್ಟ ವಾತಾವರಣ ಇವುಗಳು ಬಾಲಕ ವೆಂಕಟ ನರಸಿಂಹನಿಗೆ ಬಾಲ್ಯದಲ್ಲೇ ಪಾಂಡಿತ್ಯದ ಉತ್ತಮ ಬುನಾದಿಯನ್ನು ಹಾಕಿ ಕೊಟ್ಟಿದ್ದುವೆನ್ನುವುದರಲ್ಲಿ ಸಂಶಯವಿಲ್ಲ. ಸ್ವತಃ ಪ್ರಕಾಂಡ ಪಂಡಿತರಾದ ಅಹೋಬಲಾಚಾರ್ಯರು ಮಗನ ವಿದ್ಯಾಭ್ಯಾಸದ ಹೊಣೆಯನ್ನು ಸ್ವತಃ ವಹಿಸಿದರು. ಮುಂದೆ ಅವರು ಸನ್ಯಾಸ ಸ್ವೀಕರಿಸಿದ ಮೇಲೂ ಹುಡುಗನ ವಿದ್ಯಾಭ್ಯಾಸಕ್ಕಾಗಿ ಉತ್ತಮ ಪಂಡಿತರನ್ನು ನಿಯಮಿಸಿ ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು.
.
ಆದರೆ ಆ ಕಾಲಕ್ಕಾಗಲೇ ಬ್ರಾಹ್ಮಣ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಸಾಂಪ್ರದಾಯಿಕ ವಿದ್ಯಾಭ್ಯಾಸ ಕ್ರಮಕ್ಕೆ ಶರಣು ಹೊಡೆದು, ಲಾಭ ತರುವ ಪಾಶ್ಚಾತ್ಯ ವಿದ್ಯಾಭ್ಯಾಸದೆಡೆಗೆ ಅನೇಕ ಪ್ರತಿಭಾವಂತ ತರುಣರು ಆಕರ್ಷಿತರಾಗುತ್ತಿದ್ದರು. ಈ ಆಕರ್ಷಣೆಗೆ ಬಾಲಕ ವೆಂಕಟ ನರಸಿಂಹನೇನೂ ಹೊರತಾಗಿರಲಿಲ್ಲ. ತಾಯಿಯ ಅಪೇಕ್ಷೆ/ಒತ್ತಾಸೆಯ ಮೇರೆಗೆ ಪರಿಚಿತರು/ಸಂಬಂಧಿಕರ ನೆರವಿನಿಂದ ಲೋವರ್ ಸೆಕೆಂಡರಿ ಪರೀಕ್ಷೆಗೆ ಕುಳಿತ ಹುಡುಗ ಸುಲಭವಾಗಿ ತೇರ್ಗಡೆ ಹೊಂದಿದ. ಹಾಗೆಯೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಬಿ.ಎ., ಬಿ.ಎಲ್ ಪದವಿಗಳನ್ನು ಗಳಿಸಿದ ವೆಂಕಟ ನರಸಿಂಹಾಚಾರ್ಯರು ೧೯೨೫ರಲ್ಲಿ ಮೈಸೂರಿನಲ್ಲಿ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಮುಂದೆ ಮೂವತ್ತಾರನೆಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸುವವರೆಗೂ ಇದೇ ವೃತ್ತಿಯಲ್ಲಿದ್ದು, ಅಂದಿನ ತರುಣ ವಕೀಲರ ಪಂಕ್ತಿಯಲ್ಲಿ ಅಗ್ರಗಣ್ಯರೆನಿಸಿದ್ದರು.
.
ಈ ಅವಧಿಯಲ್ಲಿ ಕಾವೇರಿ-ಕಪಿಲೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಆಚಾರ್ಯರು ನಾಲ್ಕರ ಕೂಸಾಗಿದ್ದಾಗಲೇ ಸನ್ಯಾಸ ಸ್ವೀಕರಿಸಿದ್ದ ಅಹೋಬಲಾಚಾರ್ಯರು ಶ್ರೀ ವಿದ್ಯಾ ರತ್ನಾಕರ ತೀರ್ಥರಾಗಿ ಹನ್ನೆರಡು ವರ್ಷ ವಿದ್ಯಾ ಸಾಮ್ರಾಜ್ಯವನ್ನಾಳಿ ಕೀರ್ತಿಶೇಷರಾಗಿದ್ದರು. ಅವರ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅಧಿಕಾರ ವಹಿಸಿಕೊಂಡಿದ್ದರು. ಮುಂದೆ ೧೯೩೫ ರಲ್ಲಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅನಾರೋಗ್ಯಪೀಡಿತರಾಗಿ ಶ್ರೀಮಠದ ಉತ್ತರಾಧಿಕಾರವನ್ನು ವಹಿಸಲು ಆಚಾರ್ಯರಿಗೆ ಕರೆ ಹೋದಾಗ, ಅವರ ವಕೀಲಿ ವೃತ್ತಿ ಬಿಡುವಿಲ್ಲದಷ್ಟು-ಬಿಡಬಾರದಷ್ಟು ಉನ್ನತ ಸ್ಥಿತಿಯಲ್ಲಿತ್ತು. ಮುಂದೊಂದು ದಿನ ಈ ಕರೆ ಬರುತ್ತದೆಯೆಂದು ಆಚಾರ್ಯರಿಗೆ ತಿಳಿದೇ ಇದ್ದರೂ, ಅದು ಅಷ್ಟು ಬೇಗ ಬರುತ್ತದೆಯೆಂದು ತಿಳಿದಿರಲಿಲ್ಲ. ಮಠದ ವಕೀಲಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದದ್ದು ಬಿಟ್ಟರೆ, ಆಚಾರ್ಯರ ಮಠ ಸಂಪರ್ಕ/ಅವಲಂಬನೆ ಕೇವಲ ಧಾರ್ಮಿಕ ಅಗತ್ಯಗಳಿಗಷ್ಟೇ ಸೀಮಿತವಾಗಿತ್ತು. ಲಾಭದಾಯಕವಾದ ವಕೀಲಿಕೆ, ಕೈತುಂಬಾ ಸಂಪಾದನೆ, ಚಿಕ್ಕ ಚೊಕ್ಕ ಸಂಸಾರ, ನೆಮ್ಮದಿಯ ಜೀವನ - ಸನ್ಯಾಸಕ್ಕೆ ಬೇಕಾದ ವಿರಕ್ತಿಯ ಯಾವ ಹೊಳಹೂ ಆಚಾರ್ಯರ ಜೀವನದ ಕ್ಷಿತಿಜದಲ್ಲಿ ಕಾಣುತ್ತಿರಲಿಲ್ಲ. ಹೀಗಾಗಿ ಸನ್ಯಾಸ ಸುಲಭದ ನಿರ್ಧಾರವಾಗಿರಲಿಲ್ಲ.
.
ವಿರಕ್ತಿಯಿಂದ ಸನ್ಯಾಸವೋ ಸನ್ಯಾಸದಿಂದ ವಿರಕ್ತಿಯೋ ಎಂಬ ಒಳತೋಟಿ ಆಚಾರ್ಯರನ್ನು ಬಹಳ ಕಾಡಿತೆನಿಸುತ್ತದೆ. ಕೊನೆಗೂ ಮುಂದೆಂದಾದರೂ ಬರುವುದೇ ಆಗಿದ್ದ ಸನ್ಯಾಸವೆಂಬ "ಜವಾಬ್ದಾರಿ"ಯನ್ನು ಅಂದೇ ಹೊರುವ ನಿರ್ಧಾರಕ್ಕೆ ಬಂದರು ಆಚಾರ್ಯರು.
.
ಹೀಗೆ ಶ್ರೀ ವಿದ್ಯಾ ಪ್ರಸನ್ನ ತೀರ್ಥರೆಂಬ ಹೆಸರಿನಿಂದ ಆಶ್ರಮ ಸ್ವೀಕರಿಸಿದ ಆಚಾರ್ಯರು, ಮುಂದಿನ ಐದು ವರ್ಷ (ಶ್ರೀ ವಿದ್ಯಾ ವಾರಿಧಿ ತೀರ್ಥರು ಬೃಂದಾವನಸ್ಥರಾಗುವವರೆಗೂ) ತಮ್ಮ ಮುಂದಿದ್ದ ಸನ್ಯಾಸ ಜೀವನದ ಹೊಣೆಗಾರಿಕೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಲು ತೊಡಗಿದರು. ಆಸ್ಥಾನದ ಮಹಾ ಮಹಾ ವಿದ್ವಾಂಸರ ನೆರವಿನಿಂದ ಮಧ್ವ ಸಿದ್ಧಾಂತದ ಆಳವಾದ ಅಧ್ಯಯನ ಕೈಗೊಂಡರು. ಅತಿ ಲೌಕಿಕದ ನಡುವಿನಿಂದ ಅಧ್ಯಾತ್ಮದೆಡೆಗೆ ಪಯಣ ಒಂದು ದೊಡ್ಡ ಸವಾಲೇ ಆಗಿತ್ತು. ವಕೀಲಿಯ ಬೆಚ್ಚನೆ ಕರೀ ಕೋಟನ್ನು ಕಿತ್ತೊಗೆದು ತೆಳುವಾದ ಕಾಷಾಯ ಧರಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಬಿಟ್ಟುಬಂದ ಸಂಸಾರವಿರಲಿ, ಕಟ್ಟಿಕೊಂಡ ಮಠವೂ ಮತ್ತೊಂದು ಮಹಾಸಂಸಾರದಂತೆ ಕಂಡಿರಲು ಸಾಕು. ಅದರ ನೂರೆಂಟು ರೀತಿ-ರಿವಾಜುಗಳು, ಆಡಳಿತದ-ವ್ಯವಹಾರದ ತಲೆನೋವುಗಳು; ಸನ್ಯಾಸವೆಂದರೆ ವೈರಾಗ್ಯಸಾಧನೆಯೆಂದು ನೆಚ್ಚಿ ಬಂದ ಆಚಾರ್ಯರಿಗೆ ಧುತ್ತನೆ ನೂರು ಪ್ರಶ್ನೆಗಳು ಎದುರಾದಂತಿವೆ. ಇಡೀ ವ್ಯವಸ್ಥೆಯಲ್ಲಿ ತನ್ನ ಪಾತ್ರವೇನು? ಜ್ಞಾನಾರ್ಜನೆಯೇ, ಧಾರ್ಮಿಕ ನಾಯಕತ್ವವೇ, ಗುರುತನವೇ, ಮಠದ ಆಡಳಿತವೇ, ಆಸ್ತಿಪಾಲನೆಯೇ, ವಿರಕ್ತಿಯೇ, ಸನ್ಯಾಸವೇ... ಈ ಅವಧಿಯಲ್ಲಿ ತರುಣ ಸನ್ಯಾಸಿ ಅನುಭವಿಸಿದ ಒಳತೋಟಿ ಈ ಕೆಳಕಂಡ ಹಾಡಿನಲ್ಲಿ ಎಷ್ಟು ಶಕ್ತವಾಗಿ ಚಿತ್ರಿತವಾಗಿದೆ ನೋಡಿ:
.
ಬಿಡಿಸೋ ಬಂಧನ ಕೇಶವ ಬಿಗಿಯುತಲಿದೆ
ನಾನು ಬಿಟ್ಟರೂ ಎನ್ನ ಕಂಬಳಿ ಬಿಡದಿದೆ
.
ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೋ
ಎಲ್ಲವು ಎನ್ನನು ಬಿಡಲಿಲ್ಲವೋ
ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೋ
ಹುಲ್ಲೆಯ ಮರಿಯಂತೆ ನಡುಗುವಂತಾಯಿತೋ
.
ಮಿಕ್ಕ ವಿಷಯಗಳ ಬೇಡಬೇಡೆನ್ನುತ
ಹೊಕ್ಕರೂ ಮೂಲೆ ಮೂಲೆಗಳನ್ನು
ದಿಕ್ಕುದಿಕ್ಕುಗಳಿಂದ ಸೆಳೆಯುತಲಿರುವುವು
ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು
.
ಲೋಕರಕ್ಷಕನು ನೀನೆಂಬುದನರಿತರೂ
ವ್ಯಾಕುಲವೇತಕೆ ಪ್ರತಿಕ್ಷಣವೂ
ತಾ ಕಾಣದ ನರ ವರವ ಕೊಡಲುಬಹುದೇ
ಏಕಾಂತಭಕುತ ಪ್ರಸನ್ನನೆ ಕರುಣದಿ
.
ಶ್ರೀ ಪ್ರಸನ್ನ ತೀರ್ಥರು ಕೇವಲ ಕವಿಗಳಷ್ಟೇ ಅಲ್ಲ, ಒಬ್ಬ ಸಮರ್ಥ ಧಾರ್ಮಿಕ ಮುಖಂಡರೂ ಆಗಿದ್ದರು. ಅಖಿಲಭಾರತ ಮಾಧ್ವ ಮಹಾಮಂಡಲಿ ಸ್ಥಾಪಕ ಶಕ್ತಿಗಳಲ್ಲಿ ಪ್ರಮುಖರು. ಮಂಡಲಿಯ ಅಧ್ಯಕ್ಷರಾಗಿ ಅದಕ್ಕೆ ಮಾರ್ಗದರ್ಶನ ನೀಡಿದ್ದಲ್ಲದೇ ಅದರ ಆಶ್ರಯದಲ್ಲಿ ನಡೆದ ಅನೇಕ ಸಮ್ಮೇಳನಗಳಲ್ಲಿ ತಮ್ಮ ವಿಚಾರಪ್ರಚೋದಕವೂ ಸ್ಪೂರ್ತಿದಾಯಕವೂ ಆದ ಭಾಷಣಗಳಿಂದ ಮಾಧ್ವ ಸಮಾಜಕ್ಕೆ ಹೊಸ ಚೈತನ್ಯ ತುಂಬಿದರು.
.
.
ದಾಸ ಸಾಹಿತ್ಯಕ್ಕೆ ಶ್ರೀಗಳ ಕೊಡುಗೆ ಬಹು ವಿಶಿಷ್ಟವಾದದ್ದು. ಶ್ರೀಪಾದರಾಜ-ವ್ಯಾಸರಾಜ-ವಾದಿರಾಜ-ಪುರಂದರ-ಕನಕರ ದಾಸಪರಂಪರೆಯಲ್ಲೇ ಬಂದರೂ, ಪಾಶ್ಚಾತ್ಯ ಸಾಹಿತ್ಯದ ರಮ್ಯತೆ ಗೇಯತೆಗಳನ್ನೂ ಮೈಗೂಡಿಸಿಕೊಂಡ ಹೊಸತನವೇ ಪ್ರಸನ್ನ ತೀರ್ಥರ ಕೃತಿಗಳ ವೈಶಿಷ್ಟ್ಯ. ಕಲ್ಪನೆಯ ಉತ್ಕೃಷ್ಟತೆ, ಅನುಭಾವ, ವಸ್ತು-ವಿಷಯಗಳ ಹರಹು, ಗೇಯತೆ, ರಮ್ಯತೆಗಳ ಸೊಂಪು ಇವುಗಳನ್ನು ಓದಿ, ಹಾಡಿ, ಕೇಳಿ ಅನುಭವಿಸುವುದೇ ಸೊಗಸು. ಹಾಡುಗಳನ್ನು ರಚಿಸಿ, ತಾವೇ ರಾಗ ಸಂಯೋಜಿಸಿ, ಕಲಿಸಿ ಹಾಡಿಸುತ್ತಿದ್ದರಂತೆ ಶ್ರೀಗಳು. ಕೆಲವೊಂದು ಹಾಡುಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಶ್ರೀಮಠದ್ದೇ ಆದ ವಿಶಿಷ್ಟ ಮಟ್ಟಿನಲ್ಲಿ ಶಿಷ್ಯ ಸಮುದಾಯ ಹಾಡುತ್ತಿದ್ದ ಸಂಪ್ರದಾಯವಿತ್ತು. ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಕಾಲದಲ್ಲೂ ಈ ಕ್ರಮ ಚಾಲ್ತಿಯಲ್ಲಿದ್ದುದನ್ನು ನಾನು ಕಂಡಿದ್ದೇನೆ. ಅದು ಈಗಲೂ ಇದೆಯೋ ಇಲ್ಲವೋ ನಾ ಕಾಣೆ. ಇಲ್ಲದಿದ್ದರೆ ಅದು ನಮ್ಮೆಲ್ಲರ ನಷ್ಟ.
ಇತ್ತೀಚಿಗೇನೋ ಅನೇಕ ಪ್ರತಿಭಾವಂತ ಸಂಗೀತಗಾರರು ತಮ್ಮದೇ ರಾಗ-ಶೈಲಿಗಳಲ್ಲಿ ಹಾಡಿ ಜನಪ್ರಿಯಗೊಳಿಸುತ್ತಿದ್ದಾರೆ, ಆದರೆ ಅದೇಕೋ ಅದರಲ್ಲಿ ಆ ಸಾಂಪ್ರದಾಯಿಕ ಶೈಲಿಯ originality ಕಾಣಬರುತ್ತಿಲ್ಲ. ಈ ಹಾಡುಗಳನ್ನು ಮಠದ ಶೈಲಿಯಲ್ಲಿ ಹಾಡಿ-ಕೇಳಿ ಬಲ್ಲವರು ಅದನ್ನು ಧ್ವನಿಮುದ್ರಿಸಿ ಕಳುಹಿಸಿದರೆ, ಅದೆಲ್ಲವನ್ನು ಒಂದೆಡೆ ಸಂಗ್ರಹಿಸಬಹುದು. ಅದೊಂದು ಆಸ್ತಿಯಾಗುತ್ತದೆ ಎಂದು ನನ್ನ ಅನಿಸಿಕೆ.
.
ವಿ.ಸೂ: ಶ್ರೀ ಪ್ರಸನ್ನ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಸಿದ್ಧಪಡಿಸಿದ ಈ ಲೇಖನಕ್ಕಾಗಿ ಕೆಲ ಮಾಹಿತಿಗಳನ್ನು "ಪ್ರಸನ್ನ ಸಾಹಿತ್ಯ ಸೌರಭ" (ಪ್ರಕಾಶಕರು: ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಮಾರಕ ಸಮಿತಿ, ಬೆಂಗಳೂರು) ಗ್ರಂಥದಿಂದ ಪಡೆಯಲಾಗಿದೆ, ಧನ್ಯವಾದಗಳೊಂದಿಗೆ.
1 comment:
ಇವರ ಬಗ್ಗೆ ಎಲ್ಲೋ ಓದಿದ ನೆನಪು.
ಆದರೆ "ಎಷ್ಟು ತಪವನು ಮಾಡಿ ಪಡೆದೆನೋ ನಾ ನಿನ್ನ "
ನನ್ನ ಮೆಚ್ಚಿನ ಹಾಡುಗಳಲ್ಲೊಂದು.
ವಿವರಕ್ಕಾಗಿ ಧನ್ಯವಾದಗಳು.
Post a Comment