Sunday, August 5, 2007

ನೀನು ೧

ಅರೆ!
ನೀ ಯಾವಾಗ ಬಂದೆ?
ಬಂದದ್ದು ತಿಳಿಯಲೆ ಇಲ್ಲ!
ಬರುತಿರುವ ಸುದ್ದಿ ತಿಳಿಸುವುದಿರಲಿ,
ಕದವಾದರೂ ತಟ್ಟಿ ಬರಬಾರದೇ?
ತೆರೆದ ಬಾಗಿಲು ನಿಜ; ಹಾಗೆಂದು...
ಇರಲಿ ಬಿಡು, ತಮಾಷೆಗಂದೆ,
ನೀನು ಬಂದದ್ದೆ ಸಂತಸವೆನಗೆ.

ಹಗಲು ದುಡಿತದ
ನೆರಳು
ಕವಿದ ಕಾರಿರುಳಿನಲಿ
ಹೊರಳಾಟಳ ನಡುವೆ ಸಣ್ಣ ಜೊಂಪು;
ಕ್ಷಣದ ಸುಖ -
ನಿದ್ದೆ,
ಮಂಪರಲಿ ಹಿತ -
ವಾಗಿ ತೀಡುತ್ತಿರುವ ಮಲಯವಾತ
ಹೊತ್ತು ತಂದಿಹ ಪಾರಿಜಾತ
ಕುಸುಮದ ಕಂಪು;
ಚಿಲಪಿಲ ಹಕ್ಕಿಗೊರಳಿನ ಇಂಪು;
(ನಿನ್ನೊಡನೆ ತಂದುದೇನು?)
ದೂರದ ಮಸೀದಿಯಲಿ ಐದರ ನಮಾಜು,
ದೇಗುಲದಿ ಸುಬ್ಬಲಕ್ಷ್ಮಿಯು ಉಲಿವ
ಸುಪ್ರಭಾತ,
ದಿನವು ಆಗುವುದೆನಗೆ ಜೋಗುಳದ ಗೀತ.

ಕಣ್ತೆರೆದು ನೋಡೆ,
ನೀ
ಎಂದಿನಿಂದಲು ಇಲ್ಲೆ ಇದ್ದಂತೆ
ಸವ್ವಾರಿ ನಡೆಸಿದ್ದೆ ನನ್ನ ಮೇಲೆ;
ಹೊರಗೆ
ಬೀದಿಯ ತುಂಬ
ಹೊಸ ಚಿಗುರಿನೊಗರು,
ಹುರಿಯೆದ್ದ ಕಾಮನ ಬಿಲ್ಲು
ಮೆರವಣಿಗೆ ಹೊರಟಿತ್ತು ನೂರು ನೂರು;
ಮನೆಯ ಮುಂದೆಲ್ಲ
ನೂರ್ ಬಣ್ಣಗಳ ರಂಗೋಲೆ;
ಊರೆಲ್ಲ ಧರಿಸಿತ್ತು ಹಬ್ಬಗಳ ಮಾಲೆ.
ಈ ವಸಂತದ ಸಂತ -
ಸದ ಯಾವ ಕ್ಷಣದಲ್ಲಿ,
ಯಾವ ಮಾಯೆಯಲಿ ನೀ
ಹೊಕ್ಕು ಬಂದೆ?

ಎಂದಿನಿಂದಲು ನೀನಿಲ್ಲೆ
ಇದ್ದದ್ದೆ ನಿಜವಿರಬೇಕು;
ಇಲ್ಲದಿದ್ದರೆ,
ನೀನು ಕದ ದೂಡಿ ಒಳಬಂದರೂ
ಏಳದಿಹ ಕತ್ತೆ
ಆಸಾಮಿ ನಾನಲ್ಲ.
ಅಥವ
ನೀನು ಕಾಲಲಿ ಬೆಕ್ಕನಿಟ್ಟು ನಡೆದಿರಬೇಕು.

ಇರಲಿ,
ನಿನಗೀ ಸವಾರಿ ಖುಶಿ ತಂದಿತಷ್ಟೆ?
ನೀ ಸುಖದ ಸವ್ವಾರಿ ನಡೆಸಿರಲು
ಮನದೊಳೊಸರಿದ ಬೆಚ್ಚನೆಯ
ಚೊಚ್ಚಲನುಭವಕೊಂದು ರೂಪವ ಕೊಡಲು
ಹುಡುಕಿರಲು
ಕಂಡಳಾ ಸೊಗಸುಗಾತಿ;
ಅವಳ ಕೆನ್ನೆಯ ಕೆಂಪು
ನುಡಿಯಿಂಪು, ಮೈಸೊಂಪು,
ಕಣ್ಣಂಗಳದ ತುಂಬ ಬೆಳದಿಂಗಳು.

ನೀನಂತು ಮತ್ತೇರಿ ತೂಗುತಿದ್ದೆ;
ಮರದೆದೆಯ ಹದಗೊಳಿಸಿ,
ಹೂವಂತೆ ಮಿದುಗೊಳಿಸಿ,
ಮಡಗಿಸಿದೆ ಅದನವಳ ಕಾಲಡಿಯಲಿ.
ನಿನ್ನ ಮಾಯೆಯೆ ಮಾಯೆ!
ಮಡಗಿದ್ದು, ಕಾಲಡಿಗೆ ಸಿಲುಕಿ ನಲುಗಿರುವಾಗ
ತಡೆವ ಕಡುಕಠೋರತೆ ಹನಿಸಿ ಹೂವೆದೆಗೆ,
ಕಾದೆ,
ಸುಮವಜ್ರಸಮವೆನ್ನಿಸಿ!
ಏನಿದೀ ಹುಡುಗಾಟ?
ಮಗುವನೂ ಜಿಗುಟಿ ತೊಟ್ಟಿಲ ತೂಗುವಾಟ!

ಪೊರೆಯಲಿನ್ನೊಂದು ಕೈ
ಮೈ-ಮನಗಳೊಡನಾಟ;
ಅಮೃತವಾಗಿತ್ತಿಲ್ಲಿ
ಕಾಳಕೂಟ!

ಅಂತೂ
(ನಾ ನಿನ್ನ ಹೊತ್ತೆನೋ, ನೀನೆನ್ನ ಹೊತ್ತೆಯೋ)
ಮುನ್ನೆಡೆದಿರಲು
ಹಾದಿಬದಿ ಮರವೆಲ್ಲ ಕೆಂದಳಿರು,
ಹೂ-ಹಸಿರು,
ಹಣ್ಣ ಸವಿದಿಹ ಹಕ್ಕಿ,
ಅಂಕದೊಳಗಾಡುತಿಹ ಹೂ ಮಕ್ಕಳು;
ಹಿಮ್ಮೇಳ - ಮುಮ್ಮೇಳ
ಬೆಳ್ಗೊಡೆಯ ನೆರಳಡಿಗೆ
ಮುಗಿದಿರಲು ಅರ್ಧ ದಾರಿ,
ಏಕೋ ಸಣ್ಣಗೆ ಸುಸ್ತು;
ನಿಂತೆ
ಒಂದರೆಗಳಗೆ;
ಮೇಳಗಳ ಸದ್ದಿಲ್ಲ,
ದೂರದಲಿ ಕೂಗಿತ್ತು ಒಂಟಿ ಕಾಗೆ.
ತಲೆಯೆತ್ತಿ ನೋಡಿದರೆ
ಮೇಲೆ ಬೆಳ್ಗೊಡೆ
ಬಿಸಿಲು,
ಮಧ್ಯಾಹ್ನ ಒಂದೊ ಎರಡೋ!
ಕುರಿತ ಊರಿನ್ನು ನಾಲ್ಕೈದು ತಾಸಿರಬೇಕು.
ಇದ್ದಕಿದ್ದಂತೆ ನೀನೆಲ್ಲಿ ಹೊರಟೆ?
ಅಥವ
ನೀನಿಲ್ಲೆಂದು ಹೇಳಬರುವುದೂ ಇಲ್ಲ;
ಇಲ್ಲೆ ನಗುತಿವೆ ಪಾರಿಜಾತದರಳು.

ಸರಿ, ಇನ್ನು ನಡೆಯೋಣ,
ತಾಸೆರಡು ತಾಸಿನಲಿ ಕಂತೀತು ಸುಡುಬಿಸಿಲು
ಹರಡೀತು ಹೊನ್ನ ಹೊನಲು.
ಹಾದಿಬದಿಯಲ್ಲೊಂದು ಹೊಂಗೆ ಮರವಿದೆಯಂತೆ
ಹಿತವಂತೆ ಅದರ ನೆರಳು.

- ೨೧/೦೧/೨೦೦೭

7 comments:

Anonymous said...

Once again, an excellent kavana. Deeply emotive, evokes pathos and eventually leads to poetic solace.. mana haguravaaguvaguttade... represents anachronism of top order which we experience many times.

* [tereda baagilu nija; haagendu] - is typical KS Manjunath - 'keNakuva tamashe' ;).

* [malayavaata] and [paarijaata] induces unexpected lilting rhyme and tickles the reader. Very nice instantenoues rhyme.


* 5 O Clock Allah Namaz and MSS Suprabhaata reminds the picturesque early morning images similar to [padakka satta suddi]

* [ kshaNada sukha - nidde] -- aaha, wonderful expression.

* [saNNage susthu] and [himmELa] reminds and takes us back to [bandhi]

* Overall, a nice poem. But, somewhere I felt it is a bit too long in terms of length.

---

samnvaya2 said...

wowwwwww a very good one sir
keep writing

Anonymous said...

Dear Manju,

Indeed a nice poem.

Nicely composed, well maintained throughout...

Thanks,
Vivekanand

Susheel Sandeep said...

ಅವ್ಯಕ್ತ ಅಮೂರ್ತ ಭಾವಗಳ ಸಮ್ಮೇಳನ! ವಾವ್!! ಕವನದ ಓಘ ಸಲೀಸಾಗಿ ಓದಿಸಿಕೊಂಡು ಹೋಯಿತು. ಬರಲಿ ಸಾರ್ ಇನ್ನೂ ಹೀಗೆ

Manjunatha Kollegala said...

Thanks every one for your kind words

ಚಾರ್ವಾಕ ವೆಂಕಟರಮಣ ಭಾಗವತ said...

ಏಕೋ ಸಣ್ಣಗೆ ಸುಸ್ತು;
ನಿಂತೆ
ಒಂದರೆಗಳಗೆ;
ಮೇಳಗಳ ಸದ್ದಿಲ್ಲ,
ದೂರದಲಿ ಕೂಗಿತ್ತು ಒಂಟಿ ಕಾಗೆ.

ಹಿಮ್ಮೇಳ ಮುಮ್ಮೇಳಗಳ ರಾಜ ಮೆರವಣಿಗೆಯ ಉಬ್ಬಸಕ್ಕೆ ತುಸುವೇ ವಿರಾಮ, ಆ ವಿರಾಮದಲ್ಲೇ ಗಕ್ಕನೆ ಪ್ರತ್ಯಕ್ಷವಾಗುವ ಒಂಟಿತನ... ದೂರದಲ್ಲಿ ಕೂಗುವ ಒಂಟಿ ಕಾಗೆಯ ಪ್ರತಿಮೆ ಅದ್ಭುತವಾಗಿ ಬಿಂಬಿಸಿದೆ.

ಹಾಗೆಯೇ,

ಹಾದಿಬದಿಯಲ್ಲೊಂದು ಹೊಂಗೆ ಮರವಿದೆಯಂತೆ
ಹಿತವಂತೆ ಅದರ ನೆರಳು.

ಎನ್ನುವ ಸಾಲುಗಳು ಮೇಲೆ ಕಾಣುವ ಆಯಾಸಕ್ಕೆ ಅನಿವಾರ್ಯವಾಗಿ ಹೇಳಿಕೊಳ್ಳಲೇ ಬೇಕಾದ ಸಮಾಧಾನದಂತೆ ಬಂದು, ಆಯಾಸದ ಗಾಢತೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. A poem full of swift undercurrents.

Manjunatha Kollegala said...

ಧನ್ಯವಾದ ಚಾರ್ವಾಕರೇ. ನಿಮ್ಮ ವಿವರಣೆ ಹಿಡಿಸಿತು. ಬರುತ್ತಿರಿ.