Wednesday, May 11, 2022

ಹಿರಿದು ಕಿರಿದು

ಹಿರಿದೆಂಬುದ ಭಂಜಿಸಿದೊಡೆ ಹಿರಿದಹೆನೆಂಬ ಕಿರಿತನವ ನೋಡಿರೇ ನೆರೆಗೆರೆಯನಳಿದು ತಾ ಹಿರಿದಹೆನೆಂಬ ಕಿರಿಗೆರೆಯಂತಪ್ಪಿರಯ್ಯಾ ಅಯ್ಯಾ ನಿಮ್ಮೀ ಕಿರಿತನವೆ ಹಿರಿದು ವಿಕಾರಮಾಯಿತ್ತು ಮೊಳೆವ ಸಿರಿಗೆ ನೆರಳಾಗದೆ ಎಲರಾಗದೆ ಬಿಸುಪಾಗದೆ ಬೆಳಕಾಗದೆ ಮರೆಯಾಗದೆ ಹಿರಿದಲ್ಲ ಬೆಳೆಯ ಹಿಗ್ಗಿಂಗೆ ಎದೆಯರಳದೆ ಕೈವರಿಯದೆ ಮೈದಡಹದೆ ತಕ್ಕೈಸದೆ ಹಿರಿದಲ್ಲ ಪೆತ್ತ ಮಗುವ ತಿಂಬ ರಕ್ಕಸಿ ತಾಯಪ್ಪಳೇ ಶಿವಪೂಜೆಗೆ ಗೋಕ್ಷೀರವಲ್ಲದೆ ಕತ್ತೆಯ ಹಾಲಪ್ಪುದೇ ಮೊಲ್ಲೆಮಲ್ಲಿಗೆಯಲ್ಲದೆ ಕಳ್ಳಿಯ ಮುಳ್ಳಪ್ಪುದೇ ಹೂವಿನೊಳಗಂಧವಾಗದೆ ಹೊಗುವ ಮುಳ್ಳಪ್ಪೊಡೆ ಹಣ್ಣಿನೊಳಸ್ವಾದವಾಗದೆ ಹಿಡಿದ ಹುಳುವಪ್ಪೊಡೆ ಆದರಿಸಿ ಅಂದಣವನಿಕ್ಕಿರೆ ಸೊಣಗನಂತಪ್ಪೊಡೆ ಆ ಮುಳ್ಳನಾ ಹುಳುವನಾ ಸೊಣಗನನೆಡಗೈಯ ತುದಿವೆರಲೊಳೆ ಚಿಮ್ಮಿ ಮಿಂದು ಮಡಿಯಾಗೆಂದ ನಮ್ಮ ದಮ್ಮಪುರದ ಮಂಜೇಶನು.



3 comments:

Anonymous said...

ಮುಳ್ಳೆಂದಿರಿ
ಹುಳುವೆಂದಿರಿ
ಸೊಣಗನೆಂದಿರಿ
ಪಾಪ ಅವಕ್ಕೆ ನೋವಾಗುವುದಿಲ್ಲವೇ
ಅದು ಅವುಗಳ ಪ್ರಕೃತಿ
ಸಂಸ್ಕಾರ ಪಡೆಯುವ ಸಂದರ್ಭವಿಲ್ಲ
ಮನುಷ್ಯರಲ್ಲವಲ್ಲ
ಮನುಷ್ಯರಾದವರು ವಿಕಾರವಾದರೆ
ಏನು ಮಾಡಲಾದೀತು

Manjunatha Kollegala said...

ನಮ್ಮ ಮಾತು ಅಭಿಪ್ರಾಯ ಧೋರಣೆಗಳು ಅವು ಒಳ್ಳೆಯದಾದರೂ ಕೆಟ್ಟದಾದರೂ ಅವಕ್ಕೆ ನೋವುನಲಿವುಗಳಾಗವು. ಆದರೆ ನಾವು, ನಾವು ಅವಕ್ಕಿಂತ ಮೇಲೆಂದು ಭಾವಿಸುವುದರಿಂದ, ಹಾಗೆ ಮೇಲಾಗಿಯೇ ಬಾಳುವುದು ನಮಗೆ ಮುಖ್ಯ. ನಮ್ಮ ಮಾತೇನಿದ್ದರೂ ನಮ್ಮೊಳಗಿನ ಸಂವಹನಕ್ಕೆ. ಅದಾದರೆ ಮಾತು ಸಾರ್ಥಕವಷ್ಟೇ.

Anonymous said...

ಈ ಅನ್ಯೋಕ್ತಿ ಯಾವುದರ/ಯಾರ ಬಗ್ಗೆ? ಏನಾದರೂ ಕುಮಾರವ್ಯಾಸ ಭಾರತ ಪುಸ್ತಕದ ಲೋಕಾರ್ಪಣೆಯ ಸಮಾರಂಭದ ಕೊನೆಯ ಅಧ್ಯಕ್ಷ ಭಾಷಣದ ಬಗ್ಗೆಯೆ? :-)

(ಅದರ ಬಗ್ಗೆ ನಿಮ್ಮಿಂದ ಇಲ್ಲೋ facebookನಲ್ಲೊ ಒಂದು ಪ್ರತಿಕ್ರಿಯೆ ನಿರೀಕ್ಷಿಸಿದ್ದೆ, ಕಾಣಲಿಲ್ಲ)