Sunday, March 7, 2021

ಸರಸ್ವತೀಪ್ರಸಾದ

ಆಚಾರ್ಯರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಮೊನ್ನೆ ಇದ್ದಕ್ಕಿದ್ದಂತೆ ಕರೆಮಾಡಿ "ಹೇಗೆ ನಡೆದಿದೆ ಅಭ್ಯಾಸ?" ಎಂದರು. ದಿನದ ಇಪ್ಪತ್ನಾಲ್ಕು ಗಂಟೆಗಳ ಒಂದೊಂದು ಗಂಟೆಯ ಸ್ಲಾಟಿನಲ್ಲಿ ಒಂದೊಂದು ಅಭ್ಯಾಸ-ಅಭಾಸಗಳಲ್ಲಿ ಮುಳುಗಿರುವ ನಾನು, ಇವರು ಯಾವ ಅಭ್ಯಾಸದ ಬಗೆಗೆ ಕೇಳುತ್ತಿದ್ದಾರೆಂದು ತಿಳಿಯದೇ ಕ್ಷಣಕಾಲ ತಬ್ಬಿಬ್ಬಾದೆ - ಏಕೆಂದರೆ ಆ ಕ್ಷಣಕ್ಕೆ ನಾನು ಬ್ಯಾಂಕ್ ಸಾಲಕ್ಕೆ ಏನೇನು ಡಾಕ್ಯುಮೆಂಟುಗಳನ್ನು ಕೊಡಬೇಕೆಂಬುದರ ಅಭ್ಯಾಸದಲ್ಲಿ ಮುಳುಗಿದ್ದೆ. ಇನ್ನೊಂದು ಗಂಟೆಯಲ್ಲಿ ಕಛೇರಿ ಕರೆಯೊಂದರಲ್ಲಿ ಪ್ರಾಜೆಕ್ಟ್ ಡೆಡ್ಲೈನ್ ಮೀರಿದ್ದಕ್ಕಾಗಿ ಗ್ರಾಹಕನಿಗೆ ಏನೇನು ಸಬೂಬು ಹೇಳಬೇಕೆನ್ನುವ ಅಭ್ಯಾಸ ಆರಂಭವಾಗಬೇಕಿತ್ತು. ಯಾವ ಅಭ್ಯಾಸದ ಬಗೆಗೆ ಕೇಳುತ್ತಿರಬಹುದು ಎಂಬ ಗೊಂದಲದಲ್ಲೇ "ಯಾವ ಅಭ್ಯಾಸ ಸಾರ್" ಎಂದು ಕೇಳಿದೆ. "ನಿಮ್ಮ ರನ್ನನ ಅಭ್ಯಾಸ ಹೇಗೆ ಸಾಗಿದೆಯಪ್ಪಾ?" ಎಂದು ಕೇಳಿದರು. ಹಳಗನ್ನಡಪದ್ಯಗಳನ್ನು ಛಂದೋಬದ್ಧವಾಗಿ, ಆದರೆ ರಸ ಕೆಡದಂತೆ, ಕೂಡಿದಮಟ್ಟಿಗೂ ರಸಸ್ಫುರಣೆಯಾಗುವಂತೆ ಓದುವ ಬಗೆಯನ್ನು ಕುರಿತು ಬರೆಯಬೇಕೆಂಬುದು ನನ್ನ ಬಹುದಿನಗಳ ಆಶೆ. ಇದ್ದುದರಲ್ಲಿ ಸ್ವಲ್ಪ ಚಿಕ್ಕದಾಗಿರುವ, ರುಚಿಯಾಗಿಯೂ ಇರುವ ರನ್ನನ ಗದಾಯುದ್ಧವನ್ನೇ ಇದಕ್ಕಾಗಿ ಆರಿಸಿಕೊಳ್ಳಬಾರದೇಕೆ ಎನ್ನುವ ಹುಚ್ಚು ಆಲೋಚನೆಯನ್ನು ಶಾಸ್ತ್ರಿಗಳೂ ಸೇರಿದಂತೆ ಗುರುಸಮಾನರಾದ ಒಂದಿಬ್ಬರು ಹಿರಿಯರೊಡನೆ ಹಂಚಿಕೊಂಡೂ ಇದ್ದೆ. ಅದನ್ನವರು ಮೆಚ್ಚಿ ಪ್ರೋತ್ಸಾಹಿಸಿದ್ದಲ್ಲದೇ ಅದು ಕಷ್ಟದ ಕೆಲಸವೆಂದು ಎಚ್ಚರಿಸಿ, "ಒಂದು ಆಶ್ವಾಸವನ್ನು ಬರೆದುಕೊಂಡು ಬನ್ನಿ, ಹೇಗಾಗುತ್ತದೆ ನೋಡೋಣ" ಎಂದು ಹೇಳಿದ್ದರು. ಈ 'ಕಷ್ಟದ ಕೆಲಸ'ಕ್ಕಾಗಿ ನಾನು ಗಂಭೀರ ಅಭ್ಯಾಸದಲ್ಲಿ ತೊಡಗಿದ್ದೇನೆಂದು ಅವರ ಭಾವನೆ. ನಾವೋ, ಲೀಲಾಮಾತ್ರಜೀವರಷ್ಟೇ? "ಇಂದು ಇಂದಿಗೆ ನೆನ್ನೆ ನೆನ್ನೆಗೆ ಇರಲಿ ನಾಳೆಯು ನಾಳೆಗೆ" ಎಂಬ ಲೆಕ್ಕದಲ್ಲಿ ಇದ್ದುಬಿಡುವವರು.  ಆಗಾಗ್ಗೆ ಇಂತಹ ಎಚ್ಚರಿಕೆಗಳು ಬರದಿದ್ದರೆ ಲೀಲೆಯಲ್ಲೇ ಮುಳುಗಿ ತೂಕಡಿಕೆ ಆವರಿಸಿಬಿಡುತ್ತದೆ, ಕೈಲಾಸಂ ಹೇಳುವಂತೆ "ಬ್ರಹ್ಮನಿಗಪ್ನಾನೇ, ಸರಸ್ವತಿ ನನ್ ಸೊಸೆ" ಎಂಬ ಭ್ರಮೆ ಮುಸುಕಿದರೂ ಅಚ್ಚರಿಯಿಲ್ಲ. ಸಂಕೋಚದಿಂದಲೇ "ಕೆಲವು ಟಿಪ್ಪಣಿಗಳನ್ನು ಮಾಡಿಕೊಂಡಿದ್ದೇನೆ ಸಾರ್, ತಮ್ಮೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕಾದ್ದು ಹಲವಿವೆ. ಒಮ್ಮೆ ಒಂದಷ್ಟು ತಯಾರಿಸಿಕೊಂಡು ಬರುತ್ತೇನೆ" ಎಂದೆ. "ಆಗಲಿ ಆಗಲಿ ಮಾಡಿ, ನಿಧಾನಿಸಬೇಡಿ ಇವೆಲ್ಲಾ ಹಿಡಿದ ಉತ್ಸಾಹದಲ್ಲೇ ಮಾಡಬೇಕಾದಂಥವು" ಎಂದವರು "(ರನ್ನನ ಪದ್ಯವೊಂದನ್ನು ನೆನಪಿಸಿ) ಆ ಪದ್ಯದ ಬಗ್ಗೆ ನೀವು ಹೇಳಿದ ವ್ಯಾಖ್ಯಾನ ಸರಿಯಲ್ಲ, ಈ ವಿಷಯವನ್ನ ಹಲವರು ವಿದ್ವಾಂಸರು ಚಿಂತಿಸಿದ್ದಾರೆ, ನಾನೂ ಆಮೇಲೆ ಅದರ ಬಗ್ಗೆ ಮತ್ತೆ ಸಾಕಷ್ಟು ಪರಿಶೀಲಿಸಿದೆ, ನೀವೊಮ್ಮೆ ಬನ್ನಿ ಸಾವಕಾಶವಾಗಿ ವಿವರಿಸುತ್ತೇನೆ" ಎಂದರು. ಯಾವಾಗಲೋ, ತಿಂಗಳ ಹಿಂದೆ ಯಾವುದೋ ಓದಿನ ಮಧ್ಯೆ, ರನ್ನನ ಪದ್ಯವೊಂದಕ್ಕೆ ಇದುವರೆಗೆ ಬಂದ ವ್ಯಾಖ್ಯಾನ ಸಮರ್ಪಕವಾಗಿಲ್ಲವೆನಿಸಿತ್ತು. ಅದನ್ನೇ ಹಿಂದೆಮುಂದೆ ನೋಡದೇ ಅವರೆದುರಿಗೂ ಒದರಿಬಿಟ್ಟಿದ್ದೆ. ಅದಕ್ಕವರು ನನ್ನ ಅಭಿಪ್ರಾಯ ಹೇಗೆ ಸರಿಯಲ್ಲವೆಂಬುದನ್ನು ಅಲ್ಲಿಯೇ ಸಮಾಧಾನವಾಗಿ ವಿವರಿಸಿದ್ದರು ಕೂಡ. ಅದಾದ ಮೇಲೆ ನಾನದನ್ನು ಮರೆತೇಬಿಟ್ಟಿದ್ದೆ. ಆದರೆ ಆ ಪ್ರಶ್ನೆಯನ್ನು ಬಹುಗಂಭೀರವಾಗಿ ತೆಗೆದುಕೊಂಡಿದ್ದ ಅವರು ಮತ್ತಷ್ಟು ಅಧ್ಯಯನದೊಂದಿಗೆ ಇನ್ನಷ್ಟು ವಿವರಣೆಗಳನ್ನು ನೀಡಲು ಕಾದಿದ್ದರು. ಮತ್ತೆ ಮುಂದುವರೆದು "ತೀನಂಶ್ರೀಯವರ ಅಪ್ರಕಟಿತಬರಹಗಳ ಸಂಕಲನವೊಂದು ಹೊರಬಂದಿದೆ ನೋಡಿ, 'ಮಾತು-ಮಥನ" ಅಂತ; ಅದರಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಅವರು ಬರೆಯಬೇಕೆಂದು ಟಿಪ್ಪಣಿ ಮಾಡಿಕೊಂಡು, ತಮಗೇ ತೃಪ್ತಿಯಾಗಲಿಲ್ಲವೆಂದು ಬರೆಯದೇ ಬಿಟ್ಟ ಬರಹಗಳ ಸಂಕಲನವಿದು; ಅವರು ಸಂಪೂರ್ಣ ಆಧಾರವಿಲ್ಲದೇ ಎಂದೂ ಏನನ್ನೂ ಪ್ರಕಟಿಸಿದವರಲ್ಲ, ಹಾಗಾಗಿ ಅವರು ಬರೆದದ್ದೇ ಕಡಿಮೆ, ಅದಕ್ಕೇ ಅದೆಷ್ಟೋ ನಿಜಕ್ಕೂ ಉತ್ಕೃಷ್ಟ ಬರಹಗಳು ನಮ್ಮ ಕೈತಪ್ಪಿ ಹೋದುವು. ಅವರ ಕಾಲಾನಂತರ ಅವರ ಮಕ್ಕಳು ಅವನ್ನೆಲ್ಲಾ ಒಗ್ಗೂಡಿಸಿ ಪ್ರಕಟಿಸಿ ಉಪಕಾರ ಮಾಡಿದ್ದಾರೆ. ನಾನೀಗ ಅದನ್ನೇ ಓದುತ್ತಿದ್ದೆ, ನಿಮ್ಮ ನೆನಪಾಯಿತು. ಇದನ್ನು ನೀವು ಓದತಕ್ಕದ್ದು. ಅಂಗಡಿಗಳಲ್ಲಿ ಸಿಗುತ್ತೆ, ವಿಚಾರಿಸಿ. ಸಿಗದಿದ್ದರೆ ನನ್ನ ಹತ್ತಿರ ಬನ್ನಿ, ಜೆರಾಕ್ಸ್ ಮಾಡಿಸಿಕೊಂಡು ಕೊಡುವಿರಂತೆ. ಇದನ್ನು ಓದುವ ಸುಖ, ಕಳೆದುಕೊಳ್ಳಬಾರದ್ದು" ಎಂದರು. ಇಂಥದ್ದೊಂದು ಕೃಪೆಗೆ ಹಿಗ್ಗಾಗದಿದ್ದೀತೇ? "ಆಗಲಿ ಸಾರ್, ಈ ಪುಸ್ತಕವನ್ನು ಅಂಗಡಿಯಲ್ಲಿ ವಿಚಾರಿಸುತ್ತೇನೆ, ಸಿಗದಿದ್ದರೆ ತಮ್ಮಲ್ಲಿಗೆ ಬಂದು ಪ್ರತಿಮಾಡಿಕೊಳ್ಳುತ್ತೇನೆ" ಎಂದೆ. "ಆಗಲಿ, ಹೇಗಿದ್ದರೂ ಬಂದಂತೂ ಬನ್ನಿ, ನಿಮಗೆ ಇನ್ನೊಂದು ಪುಸ್ತಕ ಕೊಡುತ್ತೇನೆಂದು ತುಂಬಾ ಹಿಂದೆಯೇ ಪ್ರಾಮಿಸ್ ಮಾಡಿದ್ದೆ, ಮುಧೋಳದ ರನ್ನಪ್ರತಿಷ್ಠಾನದವರು ಪ್ರಕಟಿಸಿದ್ದು, ಅದು ನನ್ನ ಕಡೆಯೇ ಬಾಕಿ ಉಳಿದುಹೋಗಿದೆ. ಅದನ್ನು ತೆಗೆದುಕೊಂಡ ಹಾಗೂ ಆಯಿತು, ಒಮ್ಮೆ ಬಂದು ಹೋಗಿ" ಎಂದರು.
 
ಮರುದಿನ ಸಂಜೆ ಆರೂವರೆಗೆ ಕರೆಮಾಡಿ, "ಪುಸ್ತಕ ಎಲ್ಲೂ ಸಿಗಲಿಲ್ಲ.  ನಿಮ್ಮಲ್ಲಿಗೇ ಬಂದು ತೆಗೆದುಕೊಳ್ಳುವೆ, ಈಗ ಬರಲೇ" ಎಂದೆ. "ಇಷ್ಟುಹೊತ್ತಿನ ಮೇಲೆ ಹೇಗಪ್ಪಾ, ವಿರಾಮವಾಗಿ ಮಾತಾಡಲು ಒಂದಷ್ಟು ಸಮಯವಿಟ್ಟುಕೊಂಡು ಬನ್ನಿ.  ಆರಕ್ಕೇ ಬಂದರೆ ಒಳ್ಳೆಯದು" ಎಂದರು. ಸರಿ, ಮರುದಿನ ಸಂಜೆ ಆರಕ್ಕೆ ನಾನು ಅವರ ಮನೆಯಲ್ಲಿರುವುದೆಂದು ಆಯಿತು.  ಅವರು ಆರೆಂದರೆ ಸರಿಯಾಗಿ ಆರಕ್ಕೆ ತಯಾರಾಗಿ ಕಾದು ಕುಳ್ಳಿರುವವರೇ. ನನಗೋ, ಎಂದಿನಂತೆ ಮರುದಿನ ಹೊರಗೆ ಯಾವುದೋ ಕೆಲಸದ ಒತ್ತಡದಲ್ಲಿ ಸಿಲುಕಿ, ಆರುಗಂಟೆಗೆ ಅಲ್ಲಿರುವುದಾಗಲಿಲ್ಲ. ಆರೂಕಾಲಕ್ಕೆ ಕರೆಮಾಡಿ, ಬಲುಸಂಕೋಚದಿಂದ 'ಹೀಗೆ ಏನೋ ತೊಂದರೆಯಾಗಿದೆ, ಸಮಯಕ್ಕೆ ಬರುವುದಾಗುತ್ತಿಲ್ಲ, ತುಂಬ ತಡವಾಗಬಹುದು...' ಎನ್ನುತ್ತಿದ್ದಂತೆ ಅವರು ನಕ್ಕು "ಹಹ್ಹ... 'ಶ್ರೇಯಾಂಸಿ ಬಹುವಿಘ್ನಾನಿ', ಆಯ್ತು, ಎಲ್ಲಾ ಮುಗಿಸಿಕೊಂಡೇ ಬನ್ನಿ" ಎಂದರು. ನಮಗೆ ಈ ಸೂಕ್ಷ್ಮಗಳು ಎಲ್ಲಿ ಅರ್ಥವಾಗಬೇಕು?  "ಇವತ್ತಾಗದಿದ್ದರೆ ನಾಳೆ ಬರಬಹುದೇ" ಎಂದೆ. ಮನಸ್ಸಿಲ್ಲದೇ "ನಾಳೆ ಬರುತ್ತೀರಾ... ಸ್ಸರಿ, ಬನ್ನಿ" ಎಂದರು. ಫೋನೇನೋ ಇಟ್ಟೆ. ಆದರೆ "ಶ್ರೇಯಾಂಸಿ ಬಹುವಿಘ್ನಾನಿ" ಎಂಬ ಮಾತು ಬಲು ಕೊರೆಯತೊಡಗಿತು. ಅದನ್ನವರು ಸುಮ್ಮನೇ ತಮಾಷೆಯ ಪ್ರತಿಕ್ರಿಯೆಯಾಗಿ ಹೇಳಿದ್ದರೂ, ಯಾರೋ ಹೇಗೋ ಮಾತಿನಲ್ಲಿ ಉರುಳಿಬಿಡುವ ಸುಭಾಷಿತದ ತುಂಡಾಗಿರಲಿಲ್ಲ ಆ ಮಾತು. ಹಿರಿಯರ ಅಪ್ರಜ್ಞಾಪೂರ್ವಕವಾದ ಮಾತಿನಲ್ಲೂ ಒಂದು ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆನ್ನುವುದು ನನ್ನ ಅನುಭವ.  ಇಲ್ಲಿ 'ಶ್ರೇಯಸ್ಸು' ಯಾರದು? ಅದಕ್ಕೆ ವಿಘ್ನಗಳನ್ನು ತಂದೊಡ್ಡಿಕೊಳ್ಳುತ್ತಿರುವವನು ಯಾರು? ಬಂದದ್ದನ್ನು ನಿವಾರಿಸಿಕೊಳ್ಳುವ ಮನಸ್ಸು ಮಾಡದವನು ಯಾರು, ದೈವ ಒಲಿದು ಬಾಗಿಲಮುಂದೆ ನಿಂತು "ನಿನ್ನ ಶ್ರೇಯಸ್ಸಿಗಾಗಿ ಏನೋ ತಂದಿದ್ದೇನೆ ತೊಗೋ" ಎಂದರೆ 'ನಾಳೆ ಬಾ' ಎನ್ನುವುದಕ್ಕಿಂತ ಮೂರ್ಖತನವಿದೆಯೇ? ಇದ್ದ ಕಡೆಯಿಂದ ಬಿಟ್ಟ ಬಾಣದಂತೆ ಮನೆಸೇರುವವರೆಗೆ ಇಷ್ಟು ಆಲೋಚನೆಗಳು. ಮನೆಗೆ ಬಂದೊಡನೆ ಮುಖತೊಳೆದುಕೊಂಡು ಅವರ ಮನೆಗೆ ಹೊರಟೆ. ತಡವಾಗಿದೆ, ಹಿರಿಯರಿಗೆ ತೊಂದರೆಯಾಗಬಹುದು, ಆದರೆ ಅದನ್ನವರು ತೆಗೆದುಕೊಳ್ಳುತ್ತಾರೆ ಎಂಬ ಭಂಡತನದೊಂದಿಗೆ ಮತ್ತೊಮ್ಮೆ ಕರೆ ಮಾಡಿ ಹೇಳಿದೆ "ಸಾರ್ ವಿಘ್ನನಿವಾರಣೆಯಾಯಿತು ಇನ್ನು ಹತ್ತು ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ". ಅದಕ್ಕವರು "ಓಹೋ ಬರುತ್ತಿದ್ದೀರಾ, ಒಳ್ಳೇದು ಹಾಗಿದ್ದರೆ, ಬನ್ನಿ ಬನ್ನಿ. ನಾನು ವಾಕಿಂಗಿಗೆ ಬಂದಿದ್ದೇನೆ, ಇನ್ನು ಹತ್ತು ನಿಮಿಷದಲ್ಲಿ ಮನೆಯಲ್ಲೇ ಇರುತ್ತೇನೆ ಬನ್ನಿ" ಎಂದರು. "ಅಯ್ಯೋ ವಾಕಿಂಗಿಗೆ ಹೊರಟಿರಾ?  ಹಾಗಿದ್ದರೆ ತೊಂದರೆ ಬೇಡ ಸಾರ್, ನಿಧಾನಕ್ಕೆ ಬನ್ನಿ, ನಾನು..." ಎನ್ನುತ್ತಿದ್ದಂತೆಯೇ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿದ ಅವರು "ಇಲ್ಲ ಇಲ್ಲ, ಬಂದುಬಿಡಿ, ಕಾಯುವುದು ಬೇಡ. An assignment taken is an assignment to be finished; it must be finished promptly; ಇವತ್ತು ಇವತ್ತಿಗೆ, ನಾಳೆ ಹೇಗೋ ಯಾರಿಗೆ ಗೊತ್ತು? ಇದು ಮುಗಿದುಬಿಡಲಿ, ನೀವು ಬಂದುಬಿಡಿ" ಎಂದರು.
 
ಮನೆಗೆ ಹೋಗುವ ಹೊತ್ತಿಗೆ ಗುರುಗಳು ಮೇಜಿನ ಮುಂದೆ ಕೂತು ಏನನ್ನೋ ಬರೆಯುತ್ತಿದ್ದರು. ನಮಸ್ಕಾರ ಸಾರ್ ಎಂದೆ. ತಲೆಯನ್ನೂ ಎತ್ತದೇ "ಬನ್ನಿ ಬನ್ನಿ, ಇದೇನೋ ಕರಡು ತಿದ್ದುವುದು ಅನಿರೀಕ್ಷಿತವಾಗಿ ಬಂತು, ಹತ್ತೇ ನಿಮಿಷದಲ್ಲಿ ಮುಗಿಸಿಬಿಡುತ್ತೇನೆ ಕುಳಿತುಕೊಳ್ಳಿ" ಎಂದರು. ನಮಸ್ಕರಿಸಿ ಕೂರುತ್ತಿದ್ದಂತೆ ಏನೋ ನೆನೆದುಕೊಂಡವರಂತೆ ಪೆನ್ನನ್ನು ಕೆಳಗಿಟ್ಟು ಎದ್ದು ಒಳನಡೆದರು. ಹೊರಬರುತ್ತಾ ಅವರ "ರನ್ನಕವಿ ಕೃತಿಗಳು" ಪುಸ್ತಕವನ್ನು ತಂದು ಕೈಲಿಟ್ಟು "ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ; ನೋಡುತ್ತಿರಿ, ಬಂದೆ" ಎಂದು ಹೇಳಿ ದೊಡ್ಡ ಭಾರ ಕಳೆದವರಂತೆ ಬರೆಯಲು ಕುಳಿತರು.
 
ಇಗೊಳ್ಳಿ, ಇದನ್ನು ನಿಮಗೆ ಕೊಡಬೇಕೆಂದು ಯಾವತ್ತೋ ಎತ್ತಿಟ್ಟಿದ್ದೆ
 
ಹೇಳಿದಂತೆ ಹತ್ತೇ ನಿಮಿಷದಲ್ಲಿ ಬರೆದು ಮುಗಿಸಿ ತಲೆಯೆತ್ತಿ ಹಸನ್ಮುಖಿಯಾಗಿ ಆರಾಮವಾಗಿ ಕೂರುತ್ತಾ ಹೇಳಿದರು "ಮತ್ತೇನು ಸಮಾಚಾರ? ನೀವು ಆ ಪದ್ಯದ ಬಗೆಗೆ ಹೇಳಿದಮೇಲೆ ನಾನೂ ಮತ್ತೊಮ್ಮೆ ಪರಿಶೀಲಿಸಿದೆ, ಈಗಲೂ ಅದನ್ನೇ ಓದುತ್ತಿದ್ದೆ."  ತಮ್ಮ ಮೇಜಿನ ಕಡೆ ಕೈ ತೋರಿಸಿದರು. ಅಲ್ಲಿ ರನ್ನನ ಹಲವು ಆವೃತ್ತಿಗಳು, ಅದರ ಬಗೆಗೆ ಬಂದ ಹಲವು ಲೇಖನ/ಕೃತಿಗಳನ್ನೊಳಗೊಂಡ ಎಂಟು ಹತ್ತು ಪುಸ್ತಕಗಳಿದ್ದುವು - ಅಷ್ಟೂ, ನಾನು ಸುಮ್ಮನೇ ಸಂದೇಹವಾಗಿ ಕೇಳಿದ ಒಂದು ಪದ್ಯದ ಅರ್ಧ ಸಾಲಿಗಾಗಿ! ಅಧ್ಯಯನವೆಂದರೇನು, ಅದರ ಗಂಭೀರತೆಯೇನೆಂಬುದನ್ನು ಕುರಿತು ಪಾಠ ಹೇಳುವಂತಿತ್ತು ಆ ದೃಶ್ಯ. "ತೀನಂಶ್ರೀಯವರ ಮಾತು-ಮಥನ ನೋಡಿ ಇಲ್ಲಿದೆ.  ಅವರು ಬರೆದಿಟ್ಟುಕೊಂಡು ಪ್ರಕಟಿಸದೇ ಬಿಟ್ಟ ಟಿಪ್ಪಣಿಗಳು ಇವು.  ತೊಗೊಳ್ಳಿ but you must return it to me, ಯಾಕೆ ಅಂದ್ರೆ ಇದನ್ನು ನಾನು ಬಹಳ ಓದುತ್ತೇನೆ, ನನ್ನ ಮೇಜಿನ ಮೇಲೇ ಇರುತ್ತೆ ಇದು; ಇದನ್ನು ಓದುವ ಸುಖ ಬಹಳ ದೊಡ್ಡದು" ಎಂದು ಹೇಳಿ ತೀನಂಶ್ರೀಯವರ ಪುಸ್ತಕವನ್ನು ಕೊಟ್ಟರು.  
 
ಇದನ್ನು ಓದುವ ಸುಖ ಬಹಳ ದೊಡ್ಡದು


ಆಮೇಲೆ ಆ ಪದ್ಯ ಕುರಿತು, ಮತ್ತೆ ಇನ್ನೂ ಹಲವು ವಿಷಯ ಕುರಿತು ಸುಮಾರು ಅರ್ಧ ಗಂಟೆ ಮಾತಾಯಿತು. ಮಾತಿನ ಮಧ್ಯೆ ಅದೆಷ್ಟು ಬಾರಿ ಎದ್ದು ಲೈಬ್ರರಿಗೆ ಹೋದರೋ, ಅದೆಷ್ಟು ಪುಸ್ತಕಗಳನ್ನು ತಂದು ತಂದು ತೋರಿಸಿದರೋ. "ಅಂದ ಹಾಗೆ ನೀವು ಅವತ್ತು ಒತ್ತು ಇಳಿ ದೀರ್ಘಗಳ ಬಗೆಗೆ ಕೇಳಿದ್ದಿರಲ್ಲ? ಇರಿ ಬಂದೆ" ಎಂದು ಮತ್ತೊಮ್ಮೆ ಲೈಬ್ರರಿಗೆ ಹೋಗಿ ಪುಸ್ತಕವೊಂದನ್ನು ಹಿಡಿದು ಬಂದು, "ಇಲ್ಲಿ ನೋಡಿ, ನಿಮಗೋಸ್ಕರವೇ ಎತ್ತಿಟ್ಟಿದ್ದೆ ಈ ಪುಸ್ತಕವನ್ನ (ಟಿ ಕೇಶವಭಟ್ಟರು ಬರೆದ 'ಸಂಶೋಧನರತ್ನಮಾಲಿಕೆ') ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು. ಇದರಲ್ಲಿ ಮುಖ್ಯವಾಗಿ 'ಅಕ್ಷರಸಂಜ್ಞಾಕಾರ'ದ ಅಧ್ಯಾಯವನ್ನು ಜೆರಾಕ್ಸ್ ತೆಗೆಸಿಕೊಂಡು ಪುಸ್ತಕವನ್ನು ನನಗೆ ವಾಪಸು ಕೊಡಿ" ಎಂದರು. 
 
ಸ್ವತಃ ಲೇಖಕರು ಎಸ್ ವಿ ಪರಮೇಶ್ವರಭಟ್ಟರಿಗೆ ಕೊಟ್ಟದ್ದು, ಅದನ್ನವರು ನನಗೆ ಪ್ರೀತಿಪೂರ್ವಕವಾಗಿ ಕೊಟ್ಟರು

"ಅನಂತರಂಗಾಚಾರ್ಯರೂ ಈ ಬಗ್ಗೆ ಬಹುವಿಸ್ತಾರವಾಗಿ ಬರೆದಿದ್ದಾರೆ. ಲೋಚನ ಪತ್ರಿಕೆಯಲ್ಲಿ ಬಲು ಹಿಂದೆ ಪ್ರಕಟವಾಗಿತ್ತು. ನನ್ನ ಬಳಿ ಅದರ ಕಟ್ಟೇ ಇದೆ. ಲೇಖನದ ಸಂಚಿಕೆಗಳನ್ನ ಹುಡುಕಿ ಎತ್ತಿಟ್ಟಿರುತ್ತೇನೆ, ನೀವು ಇನ್ನೊಮ್ಮೆ ಬಂದಾಗ ಕೊಡುತ್ತೇನೆ" ಎಂದರು. ಮತ್ತಿನ್ನೊಂದು ಬಾರಿ ಒಳಗೆದ್ದು ಹೋಗಿ ಪುಸ್ತಕವೊಂದನ್ನು ಹಿಡಿದು ಬಂದಾಗ ನಾನು ತಡೆಯಲಾಗದೇ ಸಂಕೋಚದಿಂದ "ಸಾರ್ ನಿಮ್ಮನ್ನು ತುಂಬಾ ಓಡಾಡಿಸುತ್ತಿದ್ದೇನೆನಿಸುತ್ತಿದೆ" ಎಂದೆ. "ಛೇ, ಹಾಗೇನಿಲ್ಲ" ಎನ್ನುತ್ತಾ ತಾವು ತಂದಿದ್ದ ಡೈರಿಯನ್ನು ಬಿಡಿಸಿ "ಎಲ್ಲಿ, ಯಾವಯಾವ ಪುಸ್ತಕ ಕೊಟ್ಟಿದ್ದೇನೆ ಹೇಳಿ" ಎಂದು ಕೇಳಿ ಕೊಟ್ಟ ಪುಸ್ತಕಗಳ ಹೆಸರು ಬರೆದುಕೊಂಡು, ದಿನಾಂಕ ಬರೆದುಕೊಂಡು "ರನ್ನನದು ಮಾತ್ರ ನಿಮಗೇ.  ಉಳಿದೆರಡನ್ನು ಒಂದು ವಾರ ಇಟ್ಟುಕೊಳ್ಳಿ ಪರವಾಗಿಲ್ಲ, ಆಮೇಲೆ ತಂದುಕೊಟ್ಟುಬಿಡಿ" ಎಂದು ಮತ್ತೊಮ್ಮೆ ಹೇಳಿದರು. ಆ ಹಳೆಯಕಾಲದ ಕಟ್ಟುನಿಟ್ಟು, ಸರಳತೆ, ಅಕ್ಕರೆ, ಉತ್ಸಾಹ, ಹಕ್ಕಿನಿಂದ ಕರೆದು ಬಡಿಸುವ ವಾತ್ಸಲ್ಯ, ಬೆರಳು ತೋರಿಸಿ ಕಟ್ಟು ಮಾಡುವ ಅಧಿಕಾರ - ಪ್ರೊ. ನಿಸಾರರು ಮಾಸ್ತಿಯವರನ್ನು ಕುರಿತು ಹೇಳಿದ "ಸಂದ ಜೀವನದೊಂದು ರೀತಿ" ಕಣ್ಣಮುಂದೆಯೇ ಕಾಣಿಸಿ ಹನಿಗಣ್ಣಾಯಿತು.
 
ಕೊನೆಗೆ ಹೊರಟು ನಿಂತು ರಾಘವಾಂಕ ನಮಸ್ಕರಿಸಿದಾಗ "ರಾಘವಾಂಕ, ಹೇಗಿದ್ದೀಯೋ ಅಣ್ಣ, ಚೆನ್ನಾಗಿ ಓದು, ಬರಿ" ಎಂದು ನನ್ನೆಡೆಗೆ ತಿರುಗಿ "ಮಗನಿಗೆ ಒಳ್ಳೆಯ ಸಂಸ್ಕಾರ ಕೊಡುತ್ತಿದ್ದೀರಿ, ಅದು ಸಂತೋಷ" ಎಂದರು. ನಾನು ಸಂಕೋಚದೊಡನೆ "ನನ್ನದೇನಿಲ್ಲ ಸಾರ್, ಅವನು ಆಯ್ಕೆ ಅವನ ಬದುಕು ಅಷ್ಟೇ" ಎಂದರೆ "ಇಲ್ಲ ಇಲ್ಲ ಹಾಗೆನ್ನಬೇಡಿ, ನೀವು ಪ್ರಯತ್ನಪಟ್ಟು ಕೊಡುವುದೇನು ಇಲ್ಲ. ಅದು ತಾನಾಗೇ ನಿಮ್ಮಿಂದ ಬರುವಂಥದ್ದು. ನನ್ನ ಚಿಕ್ಕಂದಿನಲ್ಲೂ ನಮ್ಮ ತಂದೆಯವರು ತಮ್ಮಷ್ಟಕ್ಕೆ ಪದ್ಯಗಳನ್ನು ಹೇಳುತ್ತಿದ್ದರು, ನನ್ನಿಂದಲೂ ಆಗೀಗ ಹೇಳಿಸುತ್ತಿದ್ದರು. ನನಗೆ ತಾನಾಗೇ ಭಾಷೆಯಲ್ಲಿ ಆಸಕ್ತಿ ಬಂತು. ಆಮೇಲೆ ಮೈಸೂರಿಗೆ ಬಂದಮೇಲಂತೂ ಎಂತೆಂತಹ ಮೇಷ್ಟ್ರುಗಳು - ಕುವೆಂಪು, ತೀನಂಶ್ರೀ, ಡಿಎಲ್ಲೆನ್ - ಇವರಿಂದ ಪಾಠ ಕೇಳುವುದೇನು ಸಾಮಾನ್ಯದ ಮಾತೇ? ಬಲುದೊಡ್ಡ ಭಾಗ್ಯ, ಸುವರ್ಣಯುಗ ಅದು" ಎನ್ನುತ್ತಾ ಹನಿಗಣ್ಣಾದರು.  ಭಾರತೀಯ ಅಳತೆಯಲ್ಲಿ ಇಪ್ಪತ್ನಾಲ್ಕು ನಿಮಿಷಕ್ಕೆ ಒಂದು ಗಳಿಗೆಯೆನ್ನುತ್ತಾರೆ. ಆ ಲೆಕ್ಕದಲ್ಲಿ ನಾವಂದು ಕಳೆದ ಆ ಎರಡು ಗಳಿಗೆಗಳು ಬದುಕಿನ ಅಮೃತಗಳಿಗೆಗಳು. ಎಂದೂ ಇಲ್ಲದ ಧನ್ಯತೆಯೊಡನೆ ಬೀಳ್ಕೊಂಡೆವು.
 
ರನ್ನ ಒಂದುಕಡೆ "ಸಹಸ್ರಮುಖಪ್ರಸಾರಿತಸರಸ್ವತೀಸರಿತ್ಪ್ರವಾಹನಿವಹ"ದ ಬಗೆಗೆ ಹೇಳುತ್ತಾನೆ. ಆದರೆ ಆತ ಆ ಹೋಲಿಕೆಯನ್ನು ತರುವುದು ರಣಭೂಮಿಯಲ್ಲಿ ಸಹಸ್ರಮುಖದಿಂದ ಹರಿಯುತ್ತಿರುವ ರಕ್ತಪ್ರವಾಹದ ಭೀಭತ್ಸವನ್ನು ತೋರಿಸುವ ಸಲುವಾಗಿ. ಆದರೆ ಜ್ಞಾನವಾಹಿನಿ ಸರಸ್ವತಿ ಸ್ವಭಾವತಃ ಸಹಸ್ರಮುಖಿಯೇ "ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ" - ಆಕೆಗೆ ಸಾವಿರಾರು ಮೊಲೆಗಳು, ಸಾವಿರಾರು ಧಾರೆಗಳು. ಒಂದೊಂದು ಧಾರೆಯದು ಒಂದೊಂದು ಸ್ವಾದ. ಅದಾವುದೋ ಪ್ರಸನ್ನತೆಯಿಂದ ಒಮ್ಮೊಮ್ಮೆ ವಾತ್ಸಲ್ಯವುಕ್ಕಿ, ತನ್ನ ಸುತ್ತಲೇ ಹರಿಯುವ ಅಮೃತಧಾರೆಗಳ ಪರಿವೆಯಿಲ್ಲದೇ ಅಲ್ಲೆಲ್ಲೋ ಮಣ್ಣಾಟದಲ್ಲಿ ಮೈಮರೆತಿರುವ ಪಾಮರಶಿಶುವನ್ನೂ ಆಕೆ ಬರಸೆಳೆದು ಅಂಥವು ಒಂದೆರಡು ಧಾರೆಗಳನ್ನು ಮಗುವಿನೆಡೆಗೆ ಹರಿಸುವುದುಂಟು. ಪುಟ್ಟ ಹೊಟ್ಟೆಗೆಷ್ಟು ತಾನೆ ಬೇಕು?  ಅದು ಸರಸ್ವತೀಪ್ರಸಾದ - ಅಯಾಚಿತ, ಅದೃಷ್ಟ, ಆಸ್ವಾದ್ಯ.

1 comment:

sunaath said...

ಪ್ರೊ. ವೆಂಕಟಾಚಲಶಾಸ್ತ್ರಿಗಳ ಬಗೆಗೆ ಓದಿದಾಗ, ಅವರ ಘನತೆಯನ್ನು ಅರಿತು ಹನಿಗಣ್ಣಾದೆ. ಎಂತಹ ದೊಡ್ಡ ಮನುಷ್ಯರು!. ಅವರ ಜೊತೆ ಸಂಪರ್ಕ ಬಂದಂತಹ ನೀವೇ ಪುಣ್ಯವಂತರು. ನಿಮ್ಮ ಅಧ್ಯಯನ ಮುಗಿದ ನಂತರ ಈ ವಿಷಯದ ಬಗೆಗೆ ಸ್ವಲ್ಪ ಬರೆಯಿರಿ. ಹಳಗನ್ನಡ ನನಗೆ ತಿಳಿಯದ ಕನ್ನಡ ಎಂದು ಗೊತ್ತಿದೆ. ಆದರೂ ಸಹ ನಿಮ್ಮ ಟಿಪ್ಪಣಿಯ ಮೂಲಕ ಸ್ವಲ್ಪವಾದರೂ ಅರಿತೇನು, ಜೇನಿನ ಎರಡು ಹನಿಗಳನ್ನಾದರೂ ಸವಿದೇನು ಎನ್ನುವ ದುರಾಸೆ ನನ್ನದು!