Saturday, October 6, 2018

ದಂಪತಿ ಶಬ್ದದ - ಲಿಂಗವಚನವಿಚಾರ

ಈ ಬರಹವು ಮೂಲತಃ, ಅಂಕಣಕಾರರಾದ ಶ್ರೀ ಶ್ರೀವತ್ಸಜೋಷಿಯವರು ಫೇಸ್ಬುಕ್ಕಿನಲ್ಲಿ ನಡೆಸುತ್ತಿರುವ "ಸ್ವಚ್ಛ ಭಾಷೆ ಅಭಿಯಾನ"ವೆಂಬ ಸರಣಿಯಲ್ಲಿ ಕಂಡು ಬಂದ ಅವರ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ಬಂದದ್ದು, ಆದ್ದರಿಂದ ಈ ಬರಹಕ್ಕೆ ಕಾರಣವಾದದ್ದಕ್ಕಾಗಿ ಶ್ರೀ ಜೋಷಿಯವರಿಗೆ ಅಭಿನಂದನೆ ಸಲ್ಲಬೇಕು.  

ತಮ್ಮ ಲೇಖನದಲ್ಲಿ ಅವರು, "ದಂಪತಿ" ಶಬ್ದವು ಕನ್ನಡದಲ್ಲಿ ಏಕವಚನ-ನಪುಂಸಕಲಿಂಗದ ಶಬ್ದವೆಂದು ಪ್ರತಿಪಾದಿಸುತ್ತಾರೆ.  ಈ ಅಭಿಪ್ರಾಯ ಸರಿಯಲ್ಲವೆಂದು ವಿವರಿಸಿ ಅವರ ಲೇಖನದಡಿಯಲ್ಲಿಯೇ ತಿದ್ದುಪಡಿಯನ್ನು ಸೂಚಿಸಿದೆ.  ಆದರೆ "ನಿಮ್ಮ ಪ್ರತಿಕ್ರಿಯೆಯನ್ನು ನೋಡಿದ್ದೇನೆ" ಎಂಬರ್ಧದ ಒಂದೆರಡು ಸಾಲು ಬಿಟ್ಟರೆ ಬೇರಾವ ಪ್ರತಿಕ್ರಿಯೆಯೂ ಅವರಿಂದ ಬರಲಿಲ್ಲ - ಸೂಚಿಸಿದ ತಿದ್ದುಪಡಿಯನ್ನು ಒಪ್ಪುವುದಾಗಲೀ, ಚರ್ಚಿಸಿ ನಿರಾಕರಿಸುವುದಾಗಲೀ, ತಮ್ಮ ಲೇಖನದ ಪ್ರಶ್ನಾರ್ಹ ಅಂಶಕ್ಕೆ ತಿದ್ದುಪಡಿ ತರುವುದಾಗಲೀ, ಅಥವಾ ಅದನ್ನು ಸಮರ್ಥಿಸಿಕೊಳ್ಳುವುದಾಗಲೀ ಇದಾವುದೂ ಅವರ ಕಡೆಯಿಂದ ಆಗಲಿಲ್ಲ.  ಶ್ರೀ ಜೋಷಿಯವರು ಅಂಕಣಕಾರರು, ಫೇಸ್ಬುಕ್ ಮತ್ತಿತರ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಓದುಗ ಬಳಗವನ್ನು ಹೊಂದಿದವರು.  ಈ ವೇಗದ ಯುಗದಲ್ಲಿ ಭಾಷೆ/ವ್ಯಾಕರಣದಂತಹ ಸಂಗತಿಗಳು ಒಂದು ’ಅಕ್ಯಾಡೆಮಿಕ್’ ನೆಲೆಯಲ್ಲಿ ಚರ್ಚೆಗೊಳಪಡುವುದೇ ಕಡಿಮೆ; ಅದರಲ್ಲೂ ಜೋಷಿಯವರಂತಹ ಜನಪ್ರಿಯ ಲೇಖಕರು ಇಂಥದ್ದು ಸರಿ ಇಂಥದ್ದು ತಪ್ಪು ಎಂದು ಅಷ್ಟು ನಿಖರವಾಗಿ ಹೇಳುವಾಗ ಅನೇಕರು ಹೆಚ್ಚು ಚರ್ಚೆಯಿಲ್ಲದೇ ಒಪ್ಪಿಬಿಡುವ ಸಾಧ್ಯತೆಯೇ ಹೆಚ್ಚು,  ಇಂಥಲ್ಲಿ ತಪ್ಪು ಮಾಹಿತಿ ಹರಡದಂತಿರಬೇಕಾದರೆ, ಲೇಖಕರು ವ್ಯಕ್ತಪಡಿಸುವ ಅಭಿಪ್ರಾಯಗಳು ನಿರ್ದುಷ್ಟವಾಗಿರಬೇಕಾದ್ದು ಬಹಳ ಮುಖ್ಯ.  ಅಂತಾಗದಿದ್ದರೆ, ಯಾವುದನ್ನೋ ಸರಿಪಡಿಸುತ್ತೇನೆಂದು ಹೋಗಿ ಸರಿದಾರಿಯಲ್ಲಿರುವವರನ್ನೂ ತಪ್ಪಿಗೆಳೆದ ಪಾಪ ಕಟ್ಟಿಟ್ಟ ಬುತ್ತಿ.  ಈ ಸರಣಿಯಲ್ಲಿ ಇಂಥವು ಹಲವು ಕಂಡುಬರುತ್ತವೆ, ಹಲವರು ಇದನ್ನು ತೋರಿಸಿ ತಿದ್ದುಪಡಿ ಸೂಚಿಸಿದ್ದಾರೆ ಕೂಡ - ನನ್ನ ಈ ಲೇಖನ ಕೇವಲ ಪ್ರಾತಿನಿಧಿಕವಷ್ಟೇ.  ನುಡಿಯ ವಿಷಯದಲ್ಲಿ ತಪ್ಪರಿಮೆ ಹರಡಬಾರದೆಂಬ ಉದ್ದೇಶದಿಂದ ಇದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಚರ್ಚಿಸಲು ಸರ್ವಥಾ ಸಿದ್ಧನಿದ್ದೇನೆ.

ಇದೊಂದು ಪ್ರತಿಕ್ರಿಯಾಲೇಖನವಾದುದರಿಂದ, ಈ ಲೇಖನಕ್ಕೆ ಕಾರಣವಾದ ಶ್ರೀ ಜೋಷಿಯವರ ಅಭಿಪ್ರಾಯವನ್ನು ಒಮ್ಮೆ ಪರಿಶೀಲಿಸೋಣ.  ಮೇಲ್ಕಂಡ ಲೇಖನಸರಣಿಯ ಹತ್ತೊಂಬತ್ತನೆಯ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ:

‘ದಂಪತಿ’ ಒಂದು ಜೋಡಿ; ಬಹುವಚನ ಬಳಸಬೇಡಿ!
"ಸಚಿವ ಹೆಚ್.ಡಿ ರೇವಣ್ಣ ದಂಪತಿಗಳಿಂದ ಸಕಲೇಶಪುರದಲ್ಲಿ ಹೊಳೆಮಲ್ಲೇಶ್ವರ ಸ್ವಾಮಿಗೆ ಪೂಜೆ", "ಒಬಾಮ ದಂಪತಿಗಳನ್ನು ಅಚ್ಚರಿಗೊಳಿಸಿದ BSF ಯೋಧರ ಬೈಕ್‌ ಸ್ಟಂಟ್‌", "ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿದ ಇನ್ಫೊಸಿಸ್ ಮೂರ್ತಿ ದಂಪತಿಗಳು"... ಇವೆಲ್ಲವೂ ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಶೀರ್ಷಿಕೆಗಳು. ಇವೆಲ್ಲವುಗಳಲ್ಲೂ ‘ದಂಪತಿ’ ಎಂದು ಏಕವಚನ ಬಳಸಬೇಕಿತ್ತು, ಏಕೆಂದರೆ ಪ್ರತಿಯೊಂದರಲ್ಲೂ ನಿರ್ದಿಷ್ಟ ಒಂದು ಜೋಡಿ (ಇಂಗ್ಲಿಷ್‌ನಲ್ಲಾದರೆ Couple) ಬಗ್ಗೆ ಸುದ್ದಿ ಇರುವುದು. ಆ ದೃಷ್ಟಿಯಿಂದ, "ಎದ್ದೇಳು ಮಂಜುನಾಥ ಏಳು ಬೆಳಗಾಯಿತು..." ಪ್ರಖ್ಯಾತ ಭಕ್ತಿಗೀತೆಯಲ್ಲಿನ "ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು" ಸಹ ಸರಿಯಲ್ಲ, "ಹೆಗ್ಗಡೆ ದಂಪತಿ ನಿನ್ನಯ ಸೇವೆಗೆ ಕಾತರಿಸುತಿಹುದು" ಎಂದಿರಬೇಕಿತ್ತು (ಕವಿಗಳಿಗೆ ವ್ಯಾಕರಣ ನಿರ್ಬಂಧಗಳಿಂದ ಅಲ್ಪಸ್ವಲ್ಪ ವಿನಾಯಿತಿ ಇರುತ್ತದೆ ನಿಜ). ತಾತ್ಪರ್ಯ ಇಷ್ಟೇ: ‘ದಂಪತಿ’ ಅಂದರೆ ವಿವಾಹಸಂಬಂಧದಿಂದ ಬೆಸೆದ ಎರಡು ದೇಹಗಳು (ಗಂಡು ಮತ್ತು ಹೆಣ್ಣು ಎಂದು ಬರೆಯಬಹುದಿತ್ತು. ಈಗ ಭಾರತದಲ್ಲಿ ಐಪಿಸಿ ಸೆಕ್ಷನ್ 377 ಅಮಾನ್ಯವಾದ್ದರಿಂದ ’ಎರಡು ದೇಹಗಳು’ :-) ). ಅಲ್ಲಿ ಇಬ್ಬರಿದ್ದಾರೆಂದ ಮಾತ್ರಕ್ಕೇ ಬಹುವಚನ ಬೇಕಿಲ್ಲ. ಇಬ್ಬರದು ‘ಒಂದು’ ಜೋಡಿ. ಆದ್ದರಿಂದ ಏಕವಚನ ಸಾಕು, ಅದೇ ಸರಿ."

ಮೊದಲಿಗೆ, "‘ದಂಪತಿ’ ಅಂದರೆ ವಿವಾಹಸಂಬಂಧದಿಂದ ಬೆಸೆದ ಎರಡು ದೇಹಗಳು" ಎಂಬ ವ್ಯಾಖ್ಯೆ ಸರಿಯಲ್ಲ, ಅದು ಎರಡು ವ್ಯಕ್ತಿಗಳ ನಡುವಣ ಬೆಸುಗೆ (ಕೇವಲ ದೇಹಕ್ಕೂ ವ್ಯಕ್ತಿಗೂ ವ್ಯತ್ಯಾಸವಿದೆಯಲ್ಲವೇ?).  ಇರಲಿ, ಅದು ಬೇರೆಯ ವಿಷಯ.  ಇನ್ನು, "ಇಬ್ಬರಿದ್ದಾರೆಂದ ಮಾತ್ರಕ್ಕೇ ಬಹುವಚನ ಬೇಕಿಲ್ಲ. ಇಬ್ಬರದು ‘ಒಂದು’ ಜೋಡಿ. ಆದ್ದರಿಂದ ಏಕವಚನ ಸಾಕು" ಎಂಬುದು ಶ್ರೀ ಜೋಶಿಯವರ ವಾದ.  ಇದನ್ನು ವ್ಯಾಕರಣದೃಷ್ಟಿಯಿಂದ ನೋಡುವ ಮೊದಲು ಜನಸಾಮಾನ್ಯನ ದೃಷ್ಟಿಯಿಂದ, ರೂಢಿಯ ದೃಷ್ಟಿಯಿಂದ ನೋಡಬೇಕಾಗುತ್ತದೆ.  ಏಕೆಂದರೆ ಕನ್ನಡದಂತಹ ಜೀವಂತಭಾಷೆಯಲ್ಲಿ, ಪದವೊಂದರ ಸಾಧುತ್ವ ಅಸಾಧುತ್ವವನ್ನು ನಿಷ್ಕರ್ಷಿಸುವಲ್ಲಿ ವ್ಯಾಕರಣದಷ್ಟೇ ರೂಢಿಯೂ ಪ್ರಧಾನಪಾತ್ರವಹಿಸುತ್ತದೆ.  ಏಕೆಂದರೆ ವ್ಯಾಕರಣಪ್ರಜ್ಞೆ ಸಮಷ್ಟಿಯಲ್ಲಿ ಕೆಲಸ ಮಾಡುವುದೇ ರೂಢಿಯ ಮೂಲಕ.  ಆದ್ದರಿಂದ ಲೇಖಕರು ಹೇಳುತ್ತಿರುವ ’ತಿದ್ದುಪಡಿ’ ರೂಢಿಯಲ್ಲಿದೆಯೇ, ಅರ್ಥದಲ್ಲಿ/ರೂಪದಲ್ಲಿ ಕಟುವೆನಿಸುತ್ತದೆಯೇ, ಅಪಾರ್ಥಕ್ಕೆಡೆಮಾಡಿಕೊಡುತ್ತದೆಯೇ ಎಂಬುದು ಮೊದಲ ಪ್ರಶ್ನೆ.  ಈ ಕೆಳಗಿನ ಚಿತ್ರ ನೋಡಿ:

ಪ್ರತಿಯೊಂದು ಚಿತ್ರದ ಮುಂದೆಯೂ ಕೊಟ್ಟಿರುವ ನಾಲ್ಕು ವಾಕ್ಯಗಳಲ್ಲಿ, ಮೊದಲ ಎರಡು ಅಪಾರ್ಥದಾಯಕವಾಗಿಯೂ, ಕೆಲವೊಮ್ಮೆ ಅಗೌರವಕರವಾಗಿಯೂ ಕಾಣುತ್ತವೆಯಲ್ಲವೇ?  ಕೋತಿ ಬಂದಿತು, ನಾಯಿಗಳು ಮಲಗಿವೆ, ಕಲ್ಲು ಬಿದ್ದಿತು, ಮಗು ಎದ್ದಿತು, ಮುಂತಾಗಿ ನಿರ್ದಿಷ್ಟವ್ಯಕ್ತಿತ್ವವಿಲ್ಲದ, ವ್ಯಕ್ತಿತ್ವವನ್ನಾರೋಪಿಸಲಾಗದ ವಸ್ತು-ವಿಷಯಗಳಿಗೆ ನಾವು ನಪುಂಸಕಲಿಂಗವನ್ನು ಬಳಸುತ್ತೇವೆ.  ಎಷ್ಟೋ ವೇಳೆ ಮುದ್ದಿನ ಸಾಕುಪ್ರಾಣಿಗಳಿಗೂ ವ್ಯಕ್ತಿತ್ವವನ್ನಾರೋಪಿಸಿ ರಾಮು ಬಂದ, ರೋಜಿ ಹೋದಳು ಮುಂತಾಗಿ ನಿರ್ದೇಶಿಸುತ್ತೇವೆ.  ಆದರೆ ಈ ಸಾಮಾನ್ಯರೂಢಿಗೆ ವಿರುದ್ಧವಾಗಿ "ದಂಪತಿ" ಶಬ್ದವನ್ನು ನಪುಂಸಕಲಿಂಗ-ಏಕವಚನ ಮಾಡಬೇಕೆಂಬುದು ಲೇಖಕರ ಅಂಬೋಣ.  "ಜೋಡಿ", "ಜೊತೆ", "couple" ಮೊದಲಾದ ಶಬ್ದಗಳಂತೆ "ದಂಪತಿ" ಎಂಬುದೂ ಒಂದು ನಪುಂಸಕಲಿಂಗ ಏಕವಚನದ ಪದವೆಂದು ಲೇಖಕರು ಭಾವಿಸಿದಂತಿದೆ.  ಆದರೆ ಅದು ಸಾಮಾನ್ಯಲಿಂಗ-ಬಹುವಚನವೆಂಬುದನ್ನು ಪೂರ್ವಕವಿಪ್ರಯೋಗಗಳ ಆಧಾರಪೂರ್ವಕವಾಗಿ ಹಲವು ವಿದ್ವಾಂಸರು ವಿವರಿಸಿದ್ದಾರೆ.  ಹಾಗೆಯೇ ಸಂಸ್ಕೃತದಲ್ಲಿ ದಂಪತಿ ಪದದ ನಿಷ್ಪತ್ತಿಯನ್ನೂ ಸಹ ಕೆಲವರು ವಿವರಿಸಿದ್ದಾರೆ (ವಿವರಗಳಿಗೆ ವಿದ್ವನ್ಮಿತ್ರರಾದ ಶ್ರೀ ಗಣೇಶಭಟ್ಟ ಕೊಪ್ಪಲತೋಟ ಹಾಗೂ ಶ್ರೀ ಮಹೇಶಭಟ್ಟರ ಲೇಖನಗಳನ್ನು ಇಲ್ಲಿ ನೋಡಬಹುದು):
ಅವಧಾನಿ ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಲೇಖನ
ಅವಧಾನಿ ಶ್ರೀ ಮಹೇಶಭಟ್ಟರ ಲೇಖನ

ಇದಕ್ಕೆ ಪ್ರತಿಯಾಗಿ ಲೇಖಕರ ಪ್ರತಿವಾದಸರಣಿ ಸರಿಸುಮಾರು ಈ ರೀತಿ:
  • ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಅನ್ವಯಿಸಲೇಬೇಕಿಲ್ಲ.
  • ತಿದ್ದುಪಡಿ ಸೂಚಿಸಿದವರು ಸಂಸ್ಕೃತ ವಿದ್ವಾಂಸರು, ಕನ್ನಡದ ಅನೇಕ ರೂಢಿಗಳನ್ನು ಅವರು ಒಪ್ಪುವುದಿಲ್ಲ.
ಇದಕ್ಕೆ ಸಮಾಧಾನವೇನು?  ಮೇಲೆ ಸೂಚಿಸಿದ ಮಹನೀಯರಲ್ಲಿ ಶ್ರೀ ಮಹೇಶಭಟ್ಟರು ಸಂಸ್ಕೃತವಿದ್ವಾಂಸರೂ ಅಹುದಾದರೂ, ಇಬ್ಬರೂ ಕನ್ನಡದಲ್ಲಿ ಕಡಿಮೆ ವಿದ್ವಾಂಸರೇನಲ್ಲ - ಇಬ್ಬರೂ ಕನ್ನಡವ್ಯಾಕರಣ ಮತ್ತು ವಾಗ್ರೂಢಿಗಳನ್ನು ಆಳವಾಗಿ ಅರಿತವರು, ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದವರು ಮತ್ತು ಸಾಧು/ಅಸಾಧು ರೂಪಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು.  ಇಷ್ಟಕ್ಕೂ ತಿದ್ದುಪಡಿ ಸೂಚಿಸುವವರು ಕನ್ನಡ ವಿದ್ವಾಂಸರೋ ಸಂಸ್ಕೃತವಿದ್ವಾಂಸರೋ ಅಥವಾ ವಿದ್ವಾಂಸರೇ ಅಲ್ಲವೋ ಎಂಬುದು ಪ್ರಸ್ತುತವಾಗಬಾರದು, ಬದಲಿಗೆ ಅವರು ನೀಡಿರುವ ವಿವರಣೆ, ಉದಾಹರಣೆಗಳು ಮತ್ತವುಗಳ ಸಾಧುತ್ವ ಮುಖ್ಯವಾಗಬೇಕು - ತಮ್ಮ ತಿದ್ದುಪಡಿಯಲ್ಲಿ ಅವರು ನೀಡಿರುವ ಉದಾಹರಣೆಗಳೊಂದೂ ಸಂಸ್ಕೃತದ ಉದಾಹರಣೆಗಳಲ್ಲ, ಕನ್ನಡದವೇ.  ಇನ್ನು ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಅನ್ವಯಿಸಬೇಕಿಲ್ಲವೆಂಬ ಲೇಖಕರ ವಾದವು ಕನ್ನಡದ್ದೇ ಪದದ ವಿಷಯದಲ್ಲಿ ಸತ್ಯವಾದರೂ, ಅದು ಎಲ್ಲ ಸಂದರ್ಭಕ್ಕೂ ನಿಲ್ಲಲಾರದು.  ಕನ್ನಡಪದಗಳ ಜೊತೆ ಸೇರಿ ವಿಕೃತಿಹೊಂದಿಲ್ಲದ ಸಂಸ್ಕೃತಪದಗಳು ಸ್ವಭಾವತಃ ಕನ್ನಡದಲ್ಲಿ ಬಳಕೆಗೊಳ್ಳುವಾಗಲೂ ಸಂಸ್ಕೃತದ ನಿಯಮವನ್ನೇ ಅನುಸರಿಸುವುದು ರೂಢಿ (ಕನ್ನಡದ ರೂಢಿಯಲ್ಲಿ ಆ ಪದದ ಸ್ವಭಾವವೇ ಬದಲಾಗಿಲ್ಲದಿದ್ದರೆ) - ಉದಾಹರಣೆಗೆ ರಾಜ+ಆಜ್ಞೆ ಕನ್ನಡದಲ್ಲಿಯೂ ಸಂಸ್ಕೃತದ ಸವರ್ಣದೀರ್ಘಸಂಧಿಯ ನಿಯಮವನ್ನೇ ಅನುಸರಿಸಿ ರಾಜಾಜ್ಞೆಯಾಗುವುದೇ ಹೊರತು ಕನ್ನಡದ ಲೋಪಸಂಧಿಯನ್ನನುಸರಿಸಿ ರಾಜಜ್ಞೆ ಆಗುವುದಿಲ್ಲ (ಅದೇ ಅಣ್ಣ+ಅಪ್ಪ ಕನ್ನಡದ್ದೇ ಪದಗಳಾದ್ದರಿಂದ ಅಣ್ಣಪ್ಪ ಎಂದಾಗುತ್ತದೆ.  ಇಲ್ಲಿ ಯಾರೂ ಸಂಸ್ಕೃತಸಂಧಿ ಮಾಡುವುದಿಲ್ಲ, ಅದು ನಮ್ಮ ಆಗ್ರಹವೂ ಅಲ್ಲ).  ಹೀಗಾಗಿ ದಂಪತಿಯೆಂಬ ಸಂಸ್ಕೃತಮೂಲದ ಪದವು ಸಂಸ್ಕೃತದ ನಿಯಮವನ್ನೇ ಅನುಸರಿಸುವುದು ಸಹಜ - ಅದು ಕನ್ನಡದ ರೂಢಿಯಲ್ಲಿ ತನ್ನ ಅರ್ಥ-ರೂಪಗಳನ್ನು ಬದಲಿಸಿಕೊಂಡಿದ್ದರೆ ಅದು ಬೇರೆಯ ವಿಷಯ, ಆದರೆ ಈ ಪದದ ವಿಷಯದಲ್ಲಿ ಅಂಥದ್ದೇನೂ ಕಂಡುಬರುವುದಿಲ್ಲ.  ಇದನ್ನು ಪರಿಶೀಲಿಸುವ ಮೊದಲು ಕನ್ನಡದ ಪ್ರಾಚೀನ ವೈಯಾಕರಣರಲ್ಲೊಬ್ಬನಾದ ನಾಗವರ್ಮನ ಈ ಪದ್ಯವನ್ನು ನೋಡೋಣ:

ಯುಗಳಂ ಯುಗ್ಮಂ ದ್ವಂದ್ವಂ ಯುಗಮುಭಯಂ ಯಾಮಳಂ ದ್ವಯಂ ದ್ವಿತಯಂ ಸಂ-
ಜ್ಞೆಗಳಿವೆ ಪೊಣರೊಳ್ ಪುಂಸ್ತ್ರೀಯುಗವಾಚಕಮಱಿಗೆ ಮಿಥುನಮುಂ ದಂಪತಿಯುಂ
(ಅಭಿಧಾನವಸ್ತುಕೋಶ - ಸಾಮಾನ್ಯಕಾಂಡ - ವಿಶೇಷಣವರ್ಗ ಪ.೩೫)

ಯುಗಳ, ಯುಗ್ಮ, ದ್ವಂದ್ವ, ಯುಗ, ಉಭಯ, ಯಮಳ, ದ್ವಯ, ದ್ವಿತಯ ಇವು ಜೋಡಿಯನ್ನು ಕುರಿತಾದ ಶಬ್ದಗಳಾದರೆ, ಮಿಥುನ, ದಂಪತಿ ಇವು ವಿಶೇಷವಾಗಿ ಗಂಡುಹೆಣ್ಣಿನ ಜೋಡಿಯನ್ನು ಕುರಿತದ್ದು ಎಂಬುದು ತಾತ್ಪರ್ಯ.  ಇಲ್ಲಿ ಕೊನೆಯ ಪದವನ್ನು ಬಿಟ್ಟು ಉಳಿದ ಯಾವ ಪದವೂ ಜೋಡುಪದವಾಗಲೀ ಸಮಸ್ತಪದವಾಗಲೀ ಅಲ್ಲ - ಏಕಧಾತುಕವಾದ ಸರಳಪದಗಳವು.  ಅರ್ಥದಲ್ಲಿ ಜೋಡಿಯನ್ನು ಸೂಚಿಸಿದರೂ ಸ್ವರೂಪದಲ್ಲಿ ಏಕವಚನ, ನಪುಂಸಕಲಿಂಗದ ಪದಗಳು.  ಆದ್ದರಿಂದ ಕನ್ನಡದಲ್ಲಿ ಸಹಜವಾಗಿಯೇ ಅವಕ್ಕೆ ಏಕವಚನ ನಪುಂಸಕಲಿಂಗದ ಪ್ರಯೋಗವೇ ಬರುತ್ತದೆ - ಪಾದಯುಗಳಕ್ಕೆರಗು/ಯುಗ್ಮಕ್ಕೆರಗು/ದ್ವಂದ್ವಕ್ಕೆರಗು/ಯುಗಕ್ಕೆರಗು ಇತ್ಯಾದಿ.  ತಮ್ಮ ವಾದಕ್ಕೆ ಆಧಾರವಾಗಿ ಲೇಖಕರು ಉದಾಹರಿಸುವ ಕನ್ನಡದ "ಜೋಡಿ", ಇಂಗ್ಲಿಷಿನ couple ಮುಂತಾದುವು ಈ ಗುಂಪಿಗೆ ಸೇರುವ ಪದಗಳು - ಆ ಜೋಡಿಯಲ್ಲಿರುವುದು ಗಂಡು ಹೆಣ್ಣೆಂಬ ಇಬ್ಬರು ವ್ಯಕ್ತಿಗಳೇ ಆದರೂ, ಅವರಿಬ್ಬರ ಗುಂಪನ್ನು ಸೂಚಿಸುವ ಪದ ಮಾತ್ರ ನಪುಂಸಕಲಿಂಗ ಏಕವಚನದ ಪದವಾದ್ದರಿಂದ ಜೋಡಿ ಬಂದಿತು, couple ಚೆನ್ನಾಗಿದೆ ಮೊದಲಾದುವು ಸಾಧುಪ್ರಯೋಗಗಳು.  ಆದರೆ ಮೇಲಿನ ಪಟ್ಟಿಯಲ್ಲಿರುವ ದಂಪತಿ ಪದವನ್ನು ಮಾತ್ರ ಇದಕ್ಕೆ ಸಮೀಕರಿಸಿ ದಂಪತಿ ಬಂದಿತು/ಹೋಯಿತು ಎನ್ನುವುದು ಸರಿಯಲ್ಲ, ಏಕೆಂದರೆ ಮೇಲಿನ ಇತರ ಪದಗಳಂತೆ "ದಂಪತಿ" ಪದವು ಅರ್ಥದಲ್ಲಿ ಮಾತ್ರ ಜೋಡಿಯನ್ನು ಸೂಚಿಸುವ ಏಕಪದವಲ್ಲ, ರೂಪದಲ್ಲಿಯೂ ಎರಡು ಪದಗಳನ್ನು ಕೂಡಿಸಿಕೊಂಡ ಜೋಡುಪದ - ಜಾಯಾ+ಪತಿ ಎಂಬ ಎರಡು ಪದಗಳು ಬೆಸೆದು ಉಂಟಾದ ಸಮಸ್ತಪದವದು - ಜಾಯಾಪತೀ, ಜಂಪತೀ, ದಂಪತೀ ಇವು ಸಂಸ್ಕೃತದ ರೂಪಗಳು.  ಆದ್ದರಿಂದ ಈ ಪದದಲ್ಲಿ ಇಬ್ಬರು ವ್ಯಕ್ತಿಗಳು ಹೇಗೋ ಹಾಗೆ ಎರಡು ಸ್ವತಂತ್ರ ಪದಗಳೂ ಬೆಸೆದಿವೆ - ಬೆಸೆದಿವೆಯಷ್ಟೇ, ಅವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿಲ್ಲ.  ಆದ್ದರಿಂದ ಆದ್ದರಿಂದ ಅದು ಇಬ್ಬರು ವ್ಯಕ್ತಿಗಳನ್ನು ನಿರ್ದೇಶಿಸುವ ಪದ, ಸಂಸ್ಕೃತದಲ್ಲಿ ದ್ವಿವಚನದೊಂದಿಗೆ ನಿರ್ದೇಶಿಸಲ್ಪಡುವುದು.  ಆದ್ದರಿಂದ ದಂಪತಿ ಪದವು ಜೋಡಿ, couple ಮೊದಲಾದುವುಗಳಿಗಿಂತಲೂ ತಾಯ್ತಂದೆ, ಗಂಡಹೆಂಡಿರು, ಪತಿಪತ್ನಿ, ಅಕ್ಕತಂಗಿ, ಅಣ್ಣತಮ್ಮ ಈ ಪ್ರಕಾರಕ್ಕೆ ಸೇರುವ ಪದ.  ತಾಯ್ತಂದೆ ಬಂದಿತು, ಗಂಡಹೆಂಡತಿ ಕುಳಿತಿತು, ಪತಿಪತ್ನಿ ಹೋಗುತ್ತಿದೆ ಎನ್ನುತ್ತೇವೆಯೇ?  ಹಾಗೆಯೇ ದಂಪತಿ ಬಂತು ಹೋಯ್ತು ಎನ್ನಲೂ ಆಗುವುದಿಲ್ಲ - ದಂಪತಿಗಳು ಎನ್ನುವುದು ಸರಿಯಾದ ಪ್ರಯೋಗ (ದಂಪತಿ ಬಂದರು ಎಂಬುದೂ ಸಾಧುವೇ, ಆದರೆ ಕ್ರಿಯಾಪದದಲ್ಲಾದರೂ ಬಹುವಚನ ಮುಖ್ಯ - ಅದನ್ನು ಮುಂದೆ ನೋಡೋಣ). 

ಒಟ್ಟಾರೆ ಇದರಿಂದ ಮನದಟ್ಟಾಗುವ ಅಂಶವೆಂದರೆ, ದಂಪತಿ ಎನ್ನುವುದು ಜೋಡಿ, ಯುಗಳ, couple ಎಂಬ ರೀತಿಯ ನಪುಂಸಕಲಿಂಗ ಏಕವಚನ ಪದವಲ್ಲ, ಅದೊಂದು ಸಮಸ್ತಪದ, ಎರಡು ಸ್ವತಂತ್ರ ಪದಗಳನ್ನು ಬೆಸೆದ ನಿತ್ಯದ್ವಿವಚನ ಎಂಬುದು.  ಈಗ ಈ ದ್ವಿವಚನವನ್ನು ಕನ್ನಡದಲ್ಲಿ ಹೇಗೆ ಪರಿಗಣಿಸುತ್ತಾರೆಂಬುದಕ್ಕೆ ಶಾಸ್ತ್ರಾಧಾರವನ್ನು ಈ ಮುಂದೆ ನೋಡಬಹುದು.

ದ್ವಿವಚನವೆಂದರೆ ಒಂದಕ್ಕಿಂತ ಹೆಚ್ಚು ಅಲ್ಲವೇ?  ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚಾದುದೆಲ್ಲವೂ ಬಹುವಚನವೇ - ಅದು ಎರಡಿರಲಿ, ಮೂರಿರಲಿ ಹತ್ತಿರಲಿ (ಕೆಲವು ಅಪವಾದಗಳಿವೆ, ಮುಂದೆ ವಿವರಿಸುತ್ತೇನೆ).  ಈ ತರ್ಕವನ್ನು ನಾಗವರ್ಮ ಕೇಶಿರಾಜರೇ ಆದಿಯಾಗಿ ಕನ್ನಡದ ಎಲ್ಲ ವೈಯಾಕರಣರೂ ಎತ್ತಿ ಹಿಡಿದಿದ್ದಾರೆ (ಗಮನಿಸಿ, ನಾನಿಲ್ಲಿ ನೀಡುತ್ತಿರುವುದು ಸಂಸ್ಕೃತಪಂಡಿತರ ನಿಲುವುಗಳನ್ನಲ್ಲ, ಕನ್ನಡಕ್ಕೆ ಆಚಾರ್ಯಪುರುಷರೆನಿಸಿಕೊಂಡ ಕನ್ನಡ ವೈಯಾಕರಣರ ನಿಲುವುಗಳನ್ನು)

ಮೊದಲಿಗೆ ನಾಗವರ್ಮನ ಅಭಿಪ್ರಾಯಗಳನ್ನು ನೋಡಿ:
ಅವಱೊಳ್ ದ್ವಿತ್ವಬಹುತ್ವಂ ಬವರಿಸೆ ತಳ್ತಿರ್ಕುಮಲ್ಲಿ ಗಳ್ ಶಬ್ದಂ ಮ-
ತ್ತವು ಸರ್ವನಾಮ ಗುಣವಚನವೃತ್ತಿಯಂ ತಾಳ್ದೆನೆಗೞ್ಗುಮವು ಬಹುಳತೆಯಿಂ
(ಕಾವ್ಯಾವಲೋಕನ - ಶಬ್ದಸ್ಮೃತಿ - ನಾಮಪ್ರಕರಣ - ಸೂ. ೧೭)

ದ್ವಿತ್ವಬಹುತ್ವಯೋಃ ಗಳಾದೌ
(ಕರ್ಣಾಟಕಭಾಷಾಭೂಷಣ, ವಿಭಕ್ತಿವಿಧಾನಂ - ಸೂ. ೪೧)
ದ್ವಿತ್ವ ಬಹುತ್ವಗಳಿಗೆ ಗಳ್ ಪ್ರತ್ಯಯವು ಸೇರುತ್ತದೆ ಎಂಬುದು ಈ ಎರಡೂ ಉಲ್ಲೇಖಗಳ ತಾತ್ಪರ್ಯ

ಇನ್ನು ಕೇಶಿರಾಜನಾದರೋ, ಕನ್ನಡದಲ್ಲಿ ಏಕ-ಬಹುವಚನಗಳಷ್ಟೇ ಸ್ವೀಕಾರ್ಯ; ಇಲ್ಲಿ ದ್ವಿವಚನವಿಲ್ಲದಿರುವುದರಿಂದ ಅದು ಸಂದರ್ಭೋಚಿತವಾಗಿ (ಏಕ/ಬಹುವಚನವಾಗಿ) ಬರುತ್ತದೆ ಎನ್ನುತ್ತಾನೆ:
ಏಕದ್ವಿತ್ವಬಹುತ್ವಮನೇಕದ್ವಿಬಹುತ್ವವಸ್ತುಗಳೊಳಾಚರಿಪರ್
ಸ್ವೀಕಾರಂ ಕನ್ನಡದೊಳಗೇಕಬಹುತ್ವಂ ದ್ವಿವಚನಮುಚಿತದೆ ಬರ್ಕುಂ
(ಶಬ್ದಮಣಿದರ್ಪಣ - ನಾಮಪ್ರಕರಣ ಸೂ. ೯೪)

ಇದೇ ಮಾತನ್ನು ಎತ್ತಿ ಹಿಡಿಯುವ ಭಟ್ಟಾಕಳಂಕನೂ "ಭಾಷಾಯಾಂ... ಏಕವಚನಬಹುವಚನಯೋರೇವವ್ಯವಹಾರೋ ನ ದ್ವಿವಚನಸ್ಯ; ತಸ್ಯ ತು ಔಚಿತ್ಯಾದೇವ ವಿಜ್ಞೇಯತ್ವಾತ್" ("ಭಾಷೆ"ಯಲ್ಲಿ (ಕನ್ನಡದಲ್ಲಿ) ಏಕ-ಬಹುವಚನವಷ್ಟೇ ವ್ಯವಹಾರದಲ್ಲಿದೆ, ದ್ವಿವಚನವಿಲ್ಲ.  ದ್ವಿವಚನದ್ದೇನಿದ್ದರೂ ಔಚಿತ್ಯಾನುಸಾರವಾಗಿ ತಿಳಿಯಬೇಕಾದದ್ದು) ಎಂದು ಹೇಳುವುದಲ್ಲದೇ "ಉಕ್ತಂ ಚ ದರ್ಪಣಕೃತಾ" ಎಂದು ಹೇಳಿ ಕೇಶಿರಾಜನ ಮೇಲಿನ ಪದ್ಯವನ್ನೇ ಉದಾಹರಿಸುತ್ತಾನೆ (ಕರ್ಣಾಟಕ ಶಬ್ದಾನುಶಾಸನಂ ದ್ವಿತೀಯಪಾದ, ಸೂ. ೨೩೨ - "ಗಳನೇಕತ್ವೇ ಸುಪಿ")

ಮೇಲಿನವು ನಪುಂಸಕಲಿಂಗ ದ್ವಿ/ಬಹುವಚನದ್ದಾದರೆ, ಪು/ಸ್ತ್ರೀಲಿಂಗ ದ್ವಿವಚನಕ್ಕೆ ಬಹುವಚನದಂತೆಯೇ ಅರ್ ದಿರ್ ವಿರ್ ಮೊದಲಾದ ಪ್ರತ್ಯಯಗಳು ಸೇರುತ್ತವೆಂಬುದನ್ನೂ ಮುಂದಿನ ಸೂತ್ರಗಳು ವಿವರಿಸುತ್ತವೆ.  ಉದಾಹರಣೆಗೆ ಕೇಶಿರಾಜನಿಂದ - "ಮಿಕ್ಕಾ ಸ್ತ್ರೀಪುಲ್ಲಿಂಗದೊಳಕ್ಕುಮಿರರ್ದಿರ್ವಿರೆಂದು ಲೋಕೋಕ್ತಿಗಳೊಳ್" (ಶ.ಮ.ದ - ನಾಮಪ್ರಕರಣ ಸೂ. ೯೭)

ಮೇಲಿನ ಎಲ್ಲಾ ಉಲ್ಲೇಖಗಳಿಂದ ಸ್ಪಷ್ಟವಾಗುವುದೆಂದರೆ ಸಂದರ್ಭದ ಕಟ್ಟಲೆಯಿಲ್ಲದಿದ್ದರೆ ಸಂಸ್ಕೃತದ ದ್ವಿವಚನವು ಕನ್ನಡದಲ್ಲಿ ಬಹುವಚನವಾಗಿಯೇ ವ್ಯವಹರಿಸಲ್ಪಡುವುದೆಂಬುದು - ಕಣ್ಗಳ್, ನಯನಂಗಳ್, ತೊಡೆಗಳ್, ತೋಳ್ಗಳ್, ಇರ್ವರ್, ಭೀಮಾರ್ಜುನರ್, ರಾಮಕೃಷ್ಣರ್ ಇತ್ಯಾದಿ ಉದಾಹರಣೆಗಳನ್ನು ಗ್ರಂಥಗಳು ಕೊಡುತ್ತವೆ.  ಇವೆಲ್ಲವೂ ಸಂಸ್ಕೃತದಲ್ಲಿ ದ್ವಿವಚನಗಳೆಂಬುದನ್ನು ಗಮನಿಸಿ - ಸಂದರ್ಭೋಚಿತವಾಗಿ ಕನ್ನಡದಲ್ಲಿ ಬಹುವಚನಗಳಾಗಿವೆ.  ಅದೇ, ಸಂದರ್ಭೋಚಿತವಾಗಿ ಏಕವಚನಗಳಾಗುವ ಉದಾಹರಣೆಗಳನ್ನು ಸೂತ್ರಕಾರರು ಕೊಟ್ಟಿಲ್ಲ, ಆದರೆ ಪ್ರೊ. ಟಿ ವಿ ವೆಂಕಟಾಚಲಶಾಸ್ತ್ರಿಗಳು ತಮ್ಮ ದರ್ಪಣವಿವರಣದಲ್ಲಿ ಇಂತಹ ಹಲವು ಉದಾಹರಣೆಗಳನ್ನು ಕೊಡುತ್ತಾರೆ: 
ನೇರಿದುವು ಬೆರಲ್-ನೇರಿದುವು ಬೆರಲ್ಗಳ್; 
ತೋರಿದುವು ಜಘನಂ-ತೋರಿದುವು ಜಘನಂಗಳ್ 

ಹೀಗೆ ಏಕವಚನ ಮತ್ತು ಬಹುವಚನ ಎರಡೂ ರೂಪಗಳು ಸಾಧ್ಯ, ಆದರೆ ಅದರ ಕ್ರಿಯಾಪದವು ಮಾತ್ರ ಬಹುವಚನವೇ ಎಂಬುದನ್ನು ಗಮನಿಸಿ.  ಎಂದರೆ ಬೆರಲ್, ಜಘನಂ ಎಂದು ಏಕವಚನವನ್ನೇ ಹೇಳಿದರೂ, ಕ್ರಿಯೆಯಲ್ಲಿ ಅದು ಬಹುವಚನವೇ (ಅಂತೆಯೇ ದಂಪತಿಗಳು ಬಂದರು - ದಂಪತಿ ಬಂದರು ಎರಡೂ ಸಾಧುವೇ).  ಆದರೆ ನಿಜಕ್ಕೂ ಏಕವಚನವಾಗಿಯೇ ಬಳಸುವ ಉದಾಹರಣೆಗಳನ್ನು ಕೊಡಬಹುದು: 
ಕಣ್ ಸೋಲ್ತುದು-ಕಣ್ ಸೋಲ್ತುವು/ಕಂಗಳ್ ಸೋಲ್ತುವು; 
ಮೊಲೆ ಮೂಡಿತು-ಮೊಲೆ ಮೂಡಿದುವು/ಮೊಲೆಗಳು ಮೂಡಿದುವು; 
ಕಾಲುಡುಗಿತು-ಕಾಲುಡುಗಿದುವು/ಕಾಲ್ಗಳುಡುಗಿದುವು.  

ಇಲ್ಲಿ ಕಣ್, ಮೊಲೆ, ಕಾಲು ಇವು ದ್ವಿವಚನಗಳೇ ಮತ್ತು ಅದರ ಕ್ರಿಯೆಯೂ ದ್ವಿವಚನವೇ ಎಂಬುದನ್ನು ಗಮನಿಸಿ.  ಏಕೆಂದರೆ ಒಂದು ಕಣ್ಣು ಸೋಲುವುದಿಲ್ಲ, ಒಂದು ಮೊಲೆ ಮೂಡುವುದಿಲ್ಲ, ಒಂದು ಕಾಲು ಉಡುಗುವುದಿಲ್ಲ, ಸೋತಿತು, ಮೂಡಿತು, ಉಡುಗಿತು ಎಂಬ ಏಕವಚನವನ್ನೇ ಹೇಳಿದರೂ ಅರ್ಥ ಮಾತ್ರ ದ್ವಿವಚನದ್ದೇ (ಕನ್ನಡದ ಬಹುವಚನದ್ದೇ).  ಆದ್ದರಿಂದ ಸಂಸ್ಕೃತದ ನಿತ್ಯದ್ವಿವಚನಗಳು ಕನ್ನಡದಲ್ಲಿ ಯಾವ ರೂಪದಲ್ಲೇ ಇರಲಿ ಪರಿಣಾಮದಲ್ಲಿ ಬಹುವಚನವೇ ಎಂಬುದು ಸ್ಪಷ್ಟ

ಅಲ್ಲಿಗೆ ಏನು ಹೇಳಿದ ಹಾಗಾಯಿತು?  ದ್ವಿವಚನವೆಂದರೆ ಒಂದಕ್ಕಿಂತ ಹೆಚ್ಚು, ಅಂದರೆ ಕನ್ನಡದ ಮಟ್ಟಿಗೆ ಬಹುವಚನವೇ.  ಆದ್ದರಿಂದ ಸಂಸ್ಕೃತದ ದ್ವಿವಚನವು ಕನ್ನಡದಲ್ಲಿ ಆಗೀಗ ರೂಪ ಬದಲಿಸಿದರೂ ಅರ್ಥತಃ ಬಹುವಚನವೇ ಆಗಬೇಕು.

ಮೇಲಿನ ಪೂರ್ಣ ಚರ್ಚೆಯ ಹಿನ್ನೆಲೆಯಲ್ಲಿ ದಂಪತಿ ಶಬ್ದವನ್ನು ಗಮನಿಸಬಹುದು.  ಅದು ನಿತ್ಯದ್ವಿವಚನವೂ ಹೌದು (ಆದ್ದರಿಂದ ಕನ್ನಡದಲ್ಲಿ ಬಹುವಚನವಾಗಬೇಕಾದ್ದು), ಸಮಸ್ತಪದವಾದ್ದರಿಂದ ಅದನ್ನು ಜೋಡಿ, ಯುಗ್ಮ ಮೊದಲಾದುವುಗಳಂತೆ ಏಕಪದವಾಗಿ ಪರಿಗಣಿಸಬಾರದು, ಮತ್ತು ದಂಪತಿ ಎಂಬುದು ಇಬ್ಬರು ವ್ಯಕ್ತಿಗಳನ್ನೊಳಗೊಳ್ಳುವುದರಿಂದ ಅದು ನಪುಂಸಕಲಿಂಗವಾಗಲಾರದು.  ಆದ್ದರಿಂದ ದಂಪತಿ ಎನ್ನುವ ನಾಮಪದಕ್ಕೆ ಹತ್ತಬೇಕಾದ್ದು ದಂಪತಿಗಳು ಎಂಬ ಸಾಮಾನ್ಯಲಿಂಗದ ಬಹುವಚನವೇ ಎಂಬುದು ಸಿದ್ಧವಾಗುತ್ತದೆ.  ನಾಮಪದಕ್ಕೆ ಲಿಂಗವಚನವಿಭಕ್ತಿಯನ್ನು ಹೇಳದೇ ಕೇವಲ ದಂಪತಿ ಎಂದರೂ  ಆದೀತು, ಆದರೆ ಕ್ರಿಯೆ ಮಾತ್ರ ಬಹುವಚನದ್ದೇ.  ಆದ್ದರಿಂದ ದಂಪತಿಗಳು ಬಂದರು-ದಂಪತಿ ಬಂದರು ಎರಡೂ ಸಾಧುಪ್ರಯೋಗಗಳೇ. ಆದರೆ ದಂಪತಿ ಬಂದಿತು ಅಥವಾ ದಂಪತಿ ಬಂದುವು ಎನ್ನುವುದು ಅಸಾಧು (ಹೀಗಾಗಿ, "ಹೆಗ್ಗಡೆ ದಂಪತಿ ನಿನ್ನಯ ಸೇವೆಗೆ ಕಾತರಿಸುತಿಹುದು" ಎನ್ನುವುದು ಸರ್ವಥಾ ಅಗೌರವಕರ)

3 comments:

sunaath said...

ದಂಪತಿ ಎನ್ನುವುದು, couple ತರಹದ ಏಕವಚನ ಅಲ್ಲ; ಇದು ‘ರಾಮಲಕ್ಷ್ಮಣೌ’ ತರಹದ ದ್ವಿವಚನ, (ಕನ್ನಡದಲ್ಲಿ ಬಹುವಚನ) ಎನ್ನುವುದನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದ್ದೀರಿ. ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಗೊತ್ತಿಲ್ಲದ ನನ್ನಂಥ ಸಾಮಾನ್ಯರಿಗೆ ಈ ವಿವರಣೆ ಬೆಳಕು ಚೆಲ್ಲಿತು. ನಿಮಗೆ ಧನ್ಯವಾದಗಳು. (Of course ಶ್ರೀ ಶ್ರೀವತ್ಸ ಜೋಶಿಯವರು ಭಾಷೆಗೆ ಸಂಬಂಧಿಸಿದ ಅನೇಕ ಉತ್ತಮ ವಿವರಣೆಗಳನ್ನು ಇತರತ್ರ ನೀಡಿದ್ದಾರೆ. ಅವರಿಗೂ ಸಹ ವಂದನೆಗಳು.)

ಗಣೇಶ ಕೊಪ್ಪಲತೋಟ said...

ನಮಸ್ಕಾರ. ನಿಮ್ಮ ಲೇಖನವನ್ನು ಓದಿದೆ. ಚೆನ್ನಾಗಿ ಬರೆದಿದ್ದೀರಾ. ಆ ಕಡೆ ವಿಶ್ವೇಶ್ವರ ಭಟ್ಟರು "ತಪ್ಪಾಯ್ತು ತಿದ್ಕೋತೀವಿ" ಅಂತ ಅಂಕಣ ಬರೆಯುತ್ತಿದ್ದರು. ಈಗ ಅವರ ಪೇಪರಿನ ಅಂಕಣಕಾರರಾದ ಶ್ರೀವತ್ಸಜೋಶಿ ಅವರು "ಏನೇ ಆದರೂ ತಿದ್ದುವುದಿಲ್ಲ" ಅಂತ ಹೇಳ್ತಾರೆ! ಏನು ವಿಚಿತ್ರವೋ ಎಂದೆನಿಸುತ್ತದೆ. ಮಹೇಶ ಭಟ್ಟರೂ ನೀವೂ ಹಾಗೂ ಇತರ ಮಿತ್ರರೂ ಇಷ್ಟು ವಿಸ್ತಾರವಾಗಿ ಹೇಳಿದರೂ ತಿದ್ದಿಕೊಳ್ಳುವ ಮನಸ್ಸಿಲ್ಲದವರಿಗೆ(ಅಥವಾ ಜಿಜ್ಞಾಸುವಾಗಿರದೇ ಕೇವಲ ನೆಗಳ್ತೆಯ ಪಿಪಾಸುವಾಗಿರುವವರಿಗೆ) ನನ್ನ ಮಾರ್ಗವೇ ಸರಿಯೇನೋ ಅನಿಸುತ್ತದೆ.:-) ಆದರೂ ಯೋಗ್ಯವಾದ ರೀತಿಯಲ್ಲಿ ಪೂರ್ವಪಕ್ಷವನ್ನು ಖಂಡನೆ ಮಾಡುವುದೂ ಬೇಕು. "ತಪ್ಪನ್ನು ಒಪ್ಪಿಕೊಂಡರೆ ದಡ್ಡರಾಗುವುದಿಲ್ಲ ದೊಡ್ಡವರಾಗುತ್ತೇವೆ" ಅಂತ ಮಹೇಶ ಭಟ್ಟರು ಬರೆದದ್ದರ ಅರ್ಥ ಜೋಶಿಯವರಿಗೆ ಯಾವಾಗ ಆಗುತ್ತದೆಯೋ! ಇನ್ನೂ ಹೆಚ್ಚು ಬರೆಯುತ್ತಿರಿ. ಒಟ್ಟಾರೆ ನಿಮ್ಮನ್ನು ಮತ್ತೆ ಬ್ಲಾಗಿನಲ್ಲಿ ನೋಡಲು ಸಂತೋಷವಾಗುತ್ತಿದೆ ☺🙏

Suresh said...

"ಎದ್ದೇಳು ಮಂಜುನಾಥಾ" ಎಂದು ಮಂಜಣ್ಣನವರನ್ನು ಬಡಿದೆಬ್ಬಿಸಿದ್ದು ಈ ರೀತಿಯ ಸೊಗಸಾದ ಲೇಖನಕ್ಕೆ ನಾಂದಿಯಾಗಿದೆ.😀😀 ನಿಜಕ್ಕೂ ಇಂತಹ ಸುಂದರ ಸುದೀರ್ಘ ಲೇಖನಗಳು ನಮ್ಮ ಬುದ್ಧಿಗೆ ಒಳ್ಳೆಯ ಮೇವನ್ನು ನೀಡಿವೆ ಇಬ್ಬರು ಪಂಡಿತರಿಗೂ ಈ ರೀತಿಯ ಅಭಿಯಾನಗಳಿಗೂ ಮತ್ತು ಸಮಂಜಸ ಪ್ರತಿಕ್ರಿಯೆಗಳಿಗೂ ಧನ್ಯವಾದಗಳು.