Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.

4 comments:

ಈಶ್ವರ said...

ಚೆನ್ನಾಗಿದೆ ಸರ್. ಕೊನೆಯ ಸಾಲುಗಳು ಆಶಯವನ್ನು ಹೇಳಿ ಮುಗಿಸಿದ್ದು ಅಡಿಗರ ಒಂದು ಕವನದ ನೆನಪನ್ನು ತಂದಿತು.

sunaath said...

ವಾಹ್! ನಿಮ್ಮ ಅಪೀಲು ಚೆನ್ನಾಗಿದೆ.
ಈಶ್ವರ ಭಟ್ಟರಿಗೆ ಅಡಿಗರ ‘ಪ್ರಾರ್ಥನೆ’ ನೆನಪಾಯಿತೆ?

Badarinath Palavalli said...

ಮಡಿದವರ ನೆನಪಲ್ಲಿ ಹೂವನು ಅರಳಿಸುವ ಕವಿ ಸಹೃದಯತೆ ನೆಚ್ಚಿಗೆಯಾಯಿತು.
ತಾಯತದ ಮಹತ್ತು ಮತ್ತು ಮುಕ್ತಿ ಕರುಣಿಸುವ ಬೇಡಿಕೆ ಚೆನ್ನಾಗಿ ಮೂಡಿಬಂದಿದೆ.

Subrahmanya said...

ಈ ಅಪೀಲಿಗೆ ಇಂದಿನ ಸುಪ್ರೀಂಕೋರ್ಟಿನಲ್ಲೂ ಜಯವು ಸಿಗುವುದು ಅನುಮಾನ !. ಅಪೀಲಂತೂ ಮನಮುಟ್ಟುವಂತಿದೆ.