Tuesday, January 14, 2014

ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

ಕುಮಾರವ್ಯಾಸಜಯಂತಿಯಂದು ನನ್ನ ಭಾವಪೋಷಕನಾದ ಕುಮಾರವ್ಯಾಸನಿಗೆ ನಮನ

ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ

ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ

ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ

ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?

ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

8 comments:

sunaath said...

ಕುಮಾರವ್ಯಾಸ ಜಯಂತಿಗೆ ನಿಮ್ಮ ಭಾಮಿನೀಕುಸುಮಾಂಜಲಿಯು ನಿಜವಾದ ಅರ್ಪಣೆಯಾಗಿದೆ. ಇದು ಸಂತೋಷದ ಸಂಗತಿ.

ಈಶ್ವರ said...

ಅತ್ಯಂತ ಸುಂದರವಾಗಿದೆ ರಚನೆ ಗುರುಗಳೆ. ಒಂದು ಕಾವ್ಯವನ್ನು ಯಾಕೆ ಬರೆಯಬಾರದು ನೀವು? ಸಂಕ್ರಾಂತಿ ಶುಭಾಶಯಗಳು.

Manjunatha Kollegala said...

ಧನ್ಯವಾದ ಸುನಾಥರೇ. ಇದರಲ್ಲಿ ಮೊದಲ ಮೂರು ನಮ್ಮ ಗದುಗಿನ ಭಾರತದ ಯೋಜನೆಯ ಸಂದರ್ಭದಲ್ಲಿ ರಚಿಸಿದ್ದು. ಕೊನೆಯ ಎರಡು "ನಾರಣ"ನೆಂಬ ಆದಿಪ್ರಾಸವುಳ್ಳದ್ದು ಕಳೆದ ವರ್ಷ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ "ಪದ್ಯಪಾನ"ಕ್ಕಾಗಿ ಬರೆದದ್ದು. ಸಾಂದರ್ಭಿಕವಾಗಿ ಇಲ್ಲಿ ಹಂಚಿಕೊಂಡೆ.

Manjunatha Kollegala said...

ಧನ್ಯವಾದ ಈಶ್ವರಭಟ್ಟರೇ. ಕಾವ್ಯವೊಂದನ್ನು ಬರೆಯಲು ಸಾಧ್ಯವಾದರೆ ಬಹಳ ಸಂತೋಷವೇ. ಅದಕ್ಕೆ ನಿಮ್ಮ ಮಲ್ಲಿಗೆ ಕವನಗಳ ಘಮ ದಕ್ಕುವುದಾದರೆ ಏಕಾಗಬಾರದು. ಸಂಕ್ರಾಂತಿಯ ಶುಭಾಶಯಗಳು ನಿಮಗೂ ಕೂಡ.

Badarinath Palavalli said...

'ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು'
ಎನ್ನುತ ಕುಮಾರವ್ಯಾಸ ಜಯಂತಿ ಸುಸಂದರ್ಭದಲ್ಲಿ ತಾವು ಪ್ರಸ್ತುತಪಡಿಸಿರುವ ಈ ಕೃತಿ ನಮಗೆ ಸಂಗ್ರಹಯೋಗ್ಯ.

ಹೀಗಾದರೂ ತಾವು ಬ್ಲಾಗಿಗೆ ಹಿಂದಿರುಗಿದ್ದು ನನಗೆ ಖುಷಿಕೊಟ್ಟಿತು.

Subrahmanya said...

ಛಮ್ದೋಬದ್ದವಾದ ಕಾವ್ಯದ ಮೂಲಕ ಹಿಂದಿರುಗಿದ್ದೀರಿ. ಮತ್ತೆ ಮತ್ತೆ ಬರುತ್ತಿರಿ :)

Manjunatha Kollegala said...

ಧನ್ಯವಾದ ಬದರೀ ಮತ್ತು ಸುಬ್ರಹ್ಮಣ್ಯ. ನೀವು ಈ ಬ್ಲಾಗನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ನನಗೆ ಮತ್ತೆ ಹಿಂದಿರುಗಲು ಪ್ರೇರಕ

ಮನಸು said...

ಧನ್ಯವಾದಗಳು ಸರ್ ನಿಮ್ಮ ಬ್ಲಾಗ್ ಓದುವುದೇ ಒಂದು ಖುಷಿ. ಅಂತಹದರಲ್ಲಿ ಕುಮಾರವ್ಯಾಸರಿಗೆ ಅರ್ಪಣೆ ಮಾಡಿದ ಕವನ ಸುಂದರವಾಗಿದೆ.