ಬೆಲ್ಲಬೇಳೆಯ ಸೊಗಸಿನೊಬ್ಬಟ್ಟು ಹೂರಣದಿ
ಕಲ್ಲು ದೊರಕಿರಲು ನೀಂ ಕಡಿಯದಿರು ಹಲ್ಲ
ಬಲ್ಲವರದಾರು ಈ ಬದುಕೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು
ಹುಲ್ಲಿರದೆ ಪಶುವಿಹುದೆ ಕಲ್ಲಿರದೆ ಮನೆಯಹುದೆ
ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ
ಬಲ್ಲವರು ಪೇಳುವರು ಜಗವೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು
ಹುಲ್ಲ ಮಂತ್ರಿಸೆ ಕೊಲ್ವ ಕಣೆಯಾಯ್ತು ಕದನದೊಳು
ಕಲ್ಲಿನಿಂದರಿಸೇನೆ ಮಡಿದೊರಗಿತು
ನಲ್ಲೆಮುಡಿಗಷ್ಟೆ ತಗುವುದು ದಂಡೆ ಹೂ ರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು
12 comments:
ಮೊದಲೆರಡು ಪದ್ಯಗಳು ಸೊಗಸಾಗಿವೆ. ನಿಮ್ಮ ರಚನಾ ಕೌಶಲಕ್ಕೆ ವಂದಿಪೆನ್. ಮೂರನೆಯದರೊಳಗಣ ಕತೆಯು ತಿಳಿಯ ಲಿಲ್ಲವು !? ದಯಮಾಡಿ ಪೇಳುವಂತಹವರಾಗಿ.
ಆಗಿಪುದು ಕಬ್ಬಿಣದ ಕಡಲೆ
ಹಳೆಗನ್ನಡ-ನಡುಗನ್ನಡ ಓದುವಾಗಲೇ,
ಆಗಾಯ್ತು ಸೀಕರಣೆ ಪಾಯಸ
ನೋಡಿದಾಗ ನಿಮ್ಮಯ ಸಾಹಸ,
ಸ್ವರ್ಗದ ದರುಶನ ಹೀಗೂ ಮಾಡಬಹುದಂತೆ
ಹೂವಿನ ಜೊತೆ ನಮ್ಮಂಥ ನಾರೂ ಇರಬೇಕಂತೆ!
*
ನಿನ್ನೆ ನಿಮ್ಮ ಕವನ ನೋಡಿ ಮೊದಲ ನೋಟಕ್ಕೆ ಸುಸ್ತಾಗಿ ಮಡಚಿಟ್ಟಿದ್ದೆ.ಇವತ್ತು ಮತ್ತೇ ಓದಿ,ಈ ರೀತಿ ಖುಷಿಪಟ್ಟೆ..
ತುಂಬ ಚೆನ್ನಾಗಿದೆ.
"ನಲ್ಲೆಮುಡಿಗಷ್ಟೆ ತಗುವುದು ದಂಡೆ ಹೂ ರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು"
‘ಹೂರಣ’ವನ್ನು ‘ಹೂ ರಣ’ವಾಗಿ ಮಾಡಿದ ನಿಮ್ಮ ಕುಶಲತೆಗೆ ತಲೆ ಬಾಗುತ್ತೇನೆ.ಅಲ್ಲದೆ ‘ನಲ್ಲೆ’ ಮತ್ತು ‘ರಣ’ದ ನಡುವಿನ ವಿರೋಧಾಭಾಸವು ಪದ್ಯಕ್ಕೆ ವಿಶೇಷ ಅನುಭೂತಿಯನ್ನು ಕೊಟ್ಟಿದೆ.
ಪದಗಳ ಚತುರ ಪ್ರಯೋಗ, ಭೇಷ್!
`ಕಲ್ಲು ದೊರಕಿರಲು ನೀಂ ಕಡಿಯದಿರು ಹಲ್ಲ' ಉತ್ತಮ ಸಾಲುಗಳ ಚೌಪದಿಗಳು , ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.
ಸುಬ್ರಹ್ಮಣ್ಯರೇ ನನ್ನಿ.
ಆ ಚೌಪದಿಗೆ ನಿರ್ದಿಷ್ಟ ಕತೆಯೇನಿಲ್ಲ...
ಹುಲ್ಲನ್ನು ಮಂತ್ರಿಸಿ ಅಸ್ತ್ರಪ್ರಯೋಗ ಮಾಡಿದ ಎಷ್ಟೋ ಸಂದರ್ಭಗಳಿವೆ ಮಹಾಭಾರತದಲ್ಲಿ; ಮತ್ತು ಕಲ್ಲು ಬಂಡೆಗಳಿಂದ ವಾನರವೀರರು, ಮಹಾಭಾರತದ ರಕ್ಕಸವೀರರು ಯುದ್ಧ ಮಾಡಿದ ಸಂದರ್ಭಗಳೂ ಇವೆ ಆದರೆ ಹೂವಿನಿಂದ ಯಾರೂ ಯುದ್ಧಮಾಡಿದ ಉದಾಹರಣೆಗಳಿಲ್ಲ... ಪ್ರೀತಿಗಷ್ಟೇ ಮುಡಿಪು ಅದು :)
ಅದೇ ಕಂದದ ಸಾರಾಂಶ
ರಾಘವೇಂದ್ರ, ಕಲ್ಲು ಹುಲ್ಲು ನಾರುಗಳಿಂದಲೂ ಸ್ವರ್ಗದರ್ಶನ ಸಾಧ್ಯವೆಂದಂತಾಯಿತು. ನನ್ನಿ.
ಸುನಾಥರೇ ಎಂದಿನಂತೆ ನಿಮ್ಮ ವಿಶ್ಲೇಷಣಾತ್ಮಕವಾದ ಪ್ರತಿಕ್ರಿಯೆ ಸೊಗಸು. ಧನ್ಯವಾದ.
ಬದರೀನಾಥರೇ, ಧನ್ಯವಾದ
ಪ್ರಭಾಮಣಿಯವರೇ, ಧನ್ಯವಾದ.
ನಿಮ್ಮ ಬ್ಲಾಗಿಗೆ ಭೇಟಿಕೊಟ್ಟೆ, ಸೊಗಸಾಗಿದೆ. ನಿಮ್ಮ ಲಲಿತಪ್ರಬಂಧಗಳು ಮನಮೆಚ್ಚಿದುವು. ಬ್ಲಾಗನ್ನು ಗುರುತುಮಾಡಿಟ್ಟುಕೊಂಡಿದ್ದೇನೆ.
ಕೊನೆಯ ಪದ್ಯ ಇಡೀ ರಚನೆಗೆ ಕಲಶವಿಟ್ಟಂತಿದೆ
ಧನ್ಯವಾದ ಚಾರ್ವಾಕರೇ, ಬರುತ್ತಿರಿ.
Post a Comment