Tuesday, November 10, 2009

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ...

ಮೊನ್ನೆ ಬೆಂಗಳೂರಿನಲ್ಲಿ ನಡೆದ ವಕೀಲರ ದಾಂದಲೆ ಯಾವ ಮಾನವಂತ, ವೃತ್ತಿವಂತ ವಕೀಲನೂ ತಲೆತಗ್ಗಿಸುವಂಥದ್ದು. ದಾಂದಲೆಗೆ ಪ್ರೇರಕವಾದ ಕಾರಣಗಳೇನೇ ಇರಲಿ, ಅವು ಅದೆಷ್ಟೇ ಸಕಾರಣವಾಗಿರಲಿ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವಿರಲಿಲ್ಲವೇ? ಕಾನೂನು ಅರಿಯದ ಸಾಮಾನ್ಯ ಜನ ಗೂಂಡಾಗಿರಿಗಿಳಿದರೆ ಅದು ಅವರ ಕಾನೂನು ಅಜ್ಞಾನ ಅಥವ ವ್ಯವಸ್ಥೆಯ ಬಗ್ಗೆ ಹತಾಶೆ ಎಂದಾದರೂ ಅರ್ಥಮಾಡಿಕೊಳ್ಳಬಹುದು; ಆದರೆ ಕಾನೂನು ಬಲ್ಲ ವಕೀಲರು ಈ ರೀತಿ ಕಾನೂನು ಹೊರಗಿನ ಪರಿಹಾರಕ್ಕೆಳಸಿದರೆ ಅದು ಅವರ ಕಾನೂನು ಅಜ್ಞಾನವೇ, ವ್ಯವಸ್ಥೆಯ ಬಗೆಗಿನ ಹತಾಶೆಯೇ? ಅಜ್ಞಾನವಾದರೆ, ಆ ಅಜ್ಞಾನಿ ನಮಗೆ ಯಾವ ಸಹಾಯ ಮಾಡಿಯಾನು? ಹತಾಶೆಯಾದರೆ, ಸ್ವತಃ ಕಾನೂನಿನಲ್ಲಿ ನಂಬಿಕೆ ಕಳೆದುಕೊಂಡ ವಕೀಲ ನಮಗೆ ಅದಾವ ನಂಬಿಕೆ ಕೊಟ್ಟಾನು? ಕೋರ್ಟಿನಲ್ಲಿ ನಿಂತು ವಾದಿಸುವ ಯೋಗ್ಯತೆಯಾದರು ಇದೆಯೇ ಇವರಿಗೆ? ಅದೂ ಒಬ್ಬ ಇಬ್ಬ ವಕೀಲನಾದರೆ ಹೋಗಲಿ, ಒಂದು ಇಡೀ ವಕೀಲ ಸಮುದಾಯ ಹೀಗೆ ಕಾನೂನಿನಲ್ಲಿ ಅಪನಂಬಿಕೆ ತಳೆದರೆ, ಕಾನೂನೇತರ ಮಾರ್ಗ ಹಿಡಿದರೆ ಸಮಾಜಕ್ಕೆ ಇವರ ಸಂದೇಶವೇನು? ಅಥವಾ ಇದು ಸೂಚಿಸುವಂತೆ, ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಿಜಕ್ಕೂ ದಮ್ಮೇ ಇಲ್ಲವೇ? ಹಾಗಾದರೆ ಕೋರ್ಟ್ ಏಕೆ, ಪೋಲೀಸ್ ಏಕೆ, ಸರಕಾರವೇಕೆ? ದಿಗ್ಭ್ರಮೆಗೊಂಡ ಒಬ್ಬ ಸಾಮಾನ್ಯ law abiding ನಾಗರಿಕನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು. ಉತ್ತರಿಸುವ ಹೊಣೆಗಾರರು ಯಾರಾದರೂ ಇದ್ದಾರೆಯೇ?

ಒಂದು ಜೋಕು ನೆನಪಿಗೆ ಬರುತ್ತದೆ (ಇದು ಜೋಕು ಮಾಡುವ ವಿಷಯವಲ್ಲ, ಆದರೂ). ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬನಿಗೆ ಆಪರೇಷನ್ ನೆಡೆಯಬೇಕಿತ್ತು, ಎಲ್ಲಾ ಸಿದ್ಧವಾಗಿತ್ತು. ಅರಿವಳಿಕೆ ಕೊಡಲು ನರ್ಸ್ ಹತ್ತಿರ ಬಂದಳು. ಡಾಕ್ಟರು ನರ್ಸ್ ಜೊತೆ ಮಾತಾಡುತ್ತಾ ಆಪರೇಷನ್ ಸಿದ್ಧತೆ ನೆಡೆಸಿದ್ದರು. ಆಪರೇಷನ್ ಟೇಬಲಿನ ಮೇಲೆ ಮಲಗಿದ್ದ ರೋಗಿ ಭಯಗೊಂಡು ಧಡಕ್ಕನೆ ಎದ್ದು ಓಡತೊಡಗಿದ. ಓಡುತ್ತಿದ್ದವನನ್ನು ದಾರಿಯಲ್ಲಿ ಒಬ್ಬ ತಡೆದು ಕಾರಣ ಕೇಳಿದ. ಅವರ ಸಂಭಾಷಣೆ ಹೀಗಿತ್ತು:

ದಾರಿಹೋಕ: ಯಾಕೆ ಓಡುತ್ತಿದ್ದೀ, ಏನಾಯ್ತು?
ರೋಗಿ: ನಂಗೆ ಆಪರೇಷನ್ ಆಗಬೇಕಿತ್ತು, ನನಗೆ ಭಯವಾಗಿ ಓಡಿಬಂದೆ
ದಾರಿಹೋಕ: ಭಯ ಯಾಕೆ?
ರೋಗಿ: ನರ್ಸ್ ಹೇಳ್ತಿದ್ದಳು "ಏನೂ ಹೆದರಬೇಡಿ, ನಾನಿದೀನಿ, ಏನೂ ಆಗಲ್ಲ"
ದಾರಿಹೋಕ: ಅದಕ್ಕೆ ನಿನಗೆ ಮತ್ತೂ ಧೈರ್ಯ ಬರಬೇಕು, ಹೆದರಿಕೆ ಯಾಕೆ?
ರೋಗಿ: ಯಾಕಂದ್ರೆ, ನರ್ಸ್ ಹಾಗೆ ಹೇಳಿದ್ದು ನನಗಲ್ಲ, ಡಾಕ್ಟರಿಗೆ

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ ಇನ್ನಾರಿಗೆ ದೂರುವೆನಯ್ಯಾ?

2 comments:

sunaath said...

ಇಂತಹ ವಕೀಲರನ್ನು debar ಮಾಡಬೇಕು. ಅಂದರೆ ಮಾತ್ರ ವಕೀಲರ ಕಾನೂನುಬಾಹಿರ ಗುಂಡಾಗಿರಿ ನಿಂತೀತು.

R. K. DIVAKARA said...

ಕಾನೂನುಬದ್ಧ 'ಗೂಂಡಾಗಿರಿ'ಯೂ ಉಂಟೇ?! ವಕೀಲರನ್ನು ಡಿಬಾರ್ ಮಾಡಬೇಕಾದ್ದೂ ನ್ಯಾಯಾಂಗವೇ. ಹಿಂಸಾಚಾರ ತಪ್ಪು. ಅದನ್ನು ನಡೆಸಿದವರಿಗೆ ಶಿಕ್ಷೆಯಾಗಬೇಕು. ಅದರೆ ಶಿಕ್ಷೆ, ನ್ಯಾಯಯುತವಾದ ಪ್ರಶ್ನೆ ಕೇಳಿದ್ದಕ್ಕಾಗಿ ಆಗಬೇಕೇ?