ಇವತ್ತು ಬೆಳಗ್ಗೆ, ರೂಮಿನ ಪಕ್ಕದಲ್ಲೇ ಕುಳಿತು ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಯೊಂದರ ಸದ್ದಿಗೆ ಎಚ್ಚರಗೊಂಡು, ಎದ್ದು ಮುಖತೊಳೆದು, ಹಬೆಯಾಡುವ ಕಾಫಿಯೊಂದಿಗೆ ಹೊರಗೆ ಪಡಸಾಲೆಗೆ ಬಂದೆ. ಚುಮುಚುಮು ಬೆಳಗು. ಚಾಮುಂಡಿ ಬೆಟ್ಟದ ಕಡೆಯಿಂದ ಸೂರ್ಯನ ಮೊದಲ ಕಿರಣಗಳು ಆಗಷ್ಟೇ ಸೂಸುತ್ತಿದ್ದುವು, ಎಲೆಗಳ ಮೇಲಣ ಪನಿ ಇನ್ನೂ ಆರಿರಲಿಲ್ಲ. ಇವತ್ತು ಏನೇನು ಮಾಡಬೇಕೆಂದು ಯೋಚಿಸುತ್ತಾ ಪಡಸಾಲೆಯಲ್ಲಿದ್ದ ತೂಗುಯ್ಯಾಲೆಯಲ್ಲಿ ಕೂರುತ್ತಿದ್ದಂತೆ, ಆಗಲೇ ಎದ್ದು, ತೋಟವನ್ನೆಲ್ಲಾ ಒಂದು ಸುತ್ತು ಠಳಾಯಿಸಿ ಹೂಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ನಮ್ಮ ಸಿಂಬಣ್ಣ (ಆಯ್ತು, ಸಿಂಬಕ್ಕನೆಂದೇ ಇರಲಿ) ಓಡಿಬಂದು, ನನ್ನ ಮುಂದೆ ತನ್ನ ಎರಡೂ ಮುಂಗಾಲುಗಳನ್ನು ನೆಲಕ್ಕೆ ಚಾಚಿ, ತಲೆಯನ್ನದರಲ್ಲಿ ಹುದುಗಿಸುತ್ತಾ ಅರ್ಧದಂಡನಮಸ್ಕಾರ ಮಾಡಿದಳು (ಅರ್ಧದಂಡವೇ ಎಂದು ಮೂಗು ಮುರಿಯಬೇಡಿ, ನಾಯಿಗಳಿಗೆ ಅರ್ಧದಂಡವೇ ಶಾಸ್ತ್ರವಿಹಿತ; ದೀರ್ಘದಂಡ ಈ ಕಾಲದಲ್ಲಿ ಮನುಷ್ಯರಿಗೂ ಆಗದ ಕಸರತ್ತು). ಎಲಯೆಲಾ, ಮೊನ್ನೆಮೊನ್ನೆಯವರೆಗೂ ಚಪ್ಪಲಿ, ಪುಸ್ತಕ ಹೀಗೆ ಸಿಕ್ಕಿದ್ದನ್ನು ಹೊತ್ತೊಯ್ದು ಕಚ್ಚಿಕಚ್ಚಿ ಚಿಂದಿ ಮಾಡಿ ಹಾಕುತ್ತಿದ್ದ ಈಕೆ ನೋಡನೋಡುತ್ತಿದ್ದಂತೆ ಇಷ್ಟು ಸಂಸ್ಕಾರವಂತೆಯಾಗಿಬಿಟ್ಟಳಲ್ಲ, ಈಗಿನ ಕಾಲದಲ್ಲಿ ಮನುಷ್ಯರೇ ನಕ್ಕು ಕಡೆಗಣಿಸುವ ನಮಸ್ಕಾರವೆಂಬ ಆತ್ಮೋದ್ಧಾರಕಕ್ರಿಯೆಯನ್ನು, ನಾಯಿಯಾದರೂ ಈಕೆ ಮನಗಂಡು ಅಳವಡಿಸಿಕೊಂಡಿದ್ದಾಳಲ್ಲಾ ಎಂಬ ಅಚ್ಚರಿಯೊಂದಿಗೆ, ಮನಸ್ಸೂ ತುಂಬಿ ಬಂತು. ತಲೆಸವರಿ, ಮನದುಂಬಿ ಆಶೀರ್ವದಿಸುತ್ತಾ, ಹಿಂದೀ ಮಹಾಭಾರತದ ಭೀಷ್ಮದ್ರೋಣರಂತೆ (ಗಡ್ಡವಿಲ್ಲದುದರಿಂದ ಗಡ್ಡ ನೀವಿಕೊಳ್ಳಲಾಗಲಿಲ್ಲ) "ದೀರ್ಘಾಯುಷ್ಮಾನ್ ಭವ್" ಎಂದೆ.
ಅವಳಿಗೆ ನನ್ನ ಆಶೀರ್ವಚನವೇನು ಅರ್ಥವಾದಂತೆ ಕಾಣಲಿಲ್ಲ, ಬದಲಿಗೆ ಈ ಹೊಸ ಪೆಚ್ಚಿಗೆ ಅಚ್ಚರಿಗೊಂಡು ಕಣ್ಣರಳಿಸಿ ನನ್ನನ್ನೇ ನೋಡುತ್ತ "ಭೌ ಭೌ" ಎಂದಳು. ಓಹೋ, ಸರಿಸರಿ ಎಂದು ತಿದ್ದಿಕೊಂಡು "ದೀರ್ಘಾಯುಷ್ಮಾನ್ ಭೌ ಭೌ" ಎಂದೆ. ಈ 'ತಿದ್ದುಪಡಿ'ಯಿಂದಲೂ ಅವಳಿಗೇನೂ ತೃಪ್ತಿಯಾದಂತೆ ಕಾಣಲಿಲ್ಲ. ಅಲ್ಲೇ ಇಟ್ಟಿದ್ದ ಬಿಸ್ಕೆಟ್ಟಿನ ಡಬ್ಬದೆಡೆ ನೋಡಿ ಮತ್ತೆ ನನ್ನ ಕಡೆ ತಿರುಗಿ ದೀರ್ಘಪ್ಲುತಸಮನ್ವಿತವಾಗಿ "ಭೌವ್ ವೌವ್" ಎಂದಳು. ಓಹೋ, ತಿಳಿಯಿತು - ಈ ನಮಸ್ಕಾರವೆಲ್ಲಾ ಯಾವ ಆತ್ಮೋದ್ಧಾರಕ್ಕಾಗೂ ಅಲ್ಲ, ಕೇವಲ ಒಂದು ಹಿಡಿ ಬಿಸ್ಕೆಟ್ಟಿಗಾಗಿ (ಮನಸ್ಸಿಗೆ ಪಿಚ್ಚೆನ್ನಿಸಿತು)! ಅಷ್ಟಲ್ಲದೇ ದಾಸರು ಹೇಳಿದರೇ - "ಎಲ್ಲರು ಮಾಡುವುದು ಹೊಟ್ಟೆಗಾಗಿ". ಆದರೆ ಹೊಟ್ಟೆಗಾಗಿ ನರಮನುಷ್ಯರು ಮಾಡುವ ಗಿಲೀಟುಗಳನ್ನು ನಾಯಿಗಳೂ ಅಳವಡಿಸಿಕೊಂಡಿವೆಯೆಂಬುದು ನನಗಾದರೂ ಹೇಗೆ ತಿಳಿಯಬೇಕು? "ಸರಿಕಣವ್ವ" ಎಂದುಕೊಂಡು, ಎದ್ದು ಹೋಗಿ ಬಿಸ್ಕೆಟ್ ಡಬ್ಬದಿಂದ ಒಂದು ಹಿಡಿ ಬಿಸ್ಕೆಟ್ ತೆಗೆದು ತಟ್ಟೆಗೆ ಹಾಕಿದೆ, ಬಟ್ಟಲಿಗೆ ಹಾಲು ತಂದು ಸುರಿದೆ. ಉಲ್ಲಾಸದಿಂದ ಬಾಲವಾಡಿಸುತ್ತಾ ಬೆಳಗಿನ ಉಪಾಹಾರಕ್ಕೆ ಕುಳಿತಳು. ಅವಳು ಮೈಮುರಿದದ್ದನ್ನು ನಾನು ನಮಸ್ಕಾರವೆಂದುಕೊಂಡದ್ದು, ಮತ್ತೆ ಆ 'ನಮಸ್ಕಾರ'ವನ್ನು ಬಿಸ್ಕೆಟ್ಟಿಗಾಗಿ ಮಾಡಿದ ಗಿಲೀಟೆಂದುಕೊಂಡದ್ದು - ನನ್ನ ಈ ಯಾವ ಮನೋವಿಕಾರಗಳೂ ಆಕೆಯನ್ನು ಬಾಧಿಸಿದಂತೆ ಕಾಣಲಿಲ್ಲ. ಮುಗುಳ್ನಗುತ್ತಾ ಮತ್ತೊಮ್ಮೆ "ದೀರ್ಘಾಯುಷ್ಮಾನ್ ಭೌ ಭೌ" ಎಂದು ತಲೆ ನೇವರಿಸಿದೆ. ತಿನ್ನುತ್ತಲೇ ಹಗುರವಾಗಿ ಬಾಲವಾಡಿಸಿದಳು. ಇನ್ನಷ್ಟು ಆಪ್ತತೆಯಿಂದ "ದೀರ್ಘಾಯುಷ್ಮಾನ್ ಭೌಭೌ ಭೌಭೌ" ಎಂದೆ. ಅರೆ! ಒಂದು ಕ್ಷಣ ಸ್ತಬ್ಧನಾದೆ. ಮತ್ತೊಮ್ಮೆ ಅದನ್ನೇ ಹೇಳಿಕೊಂಡೆ - "ದೀರ್ಘಾಯುಷ್ಮಾನ್ ಭೌಭೌ ಭೌಭೌ" - ಈ ಸಾಲು ಅದೇಕೋ ಪರಿಚಿತವೆನಿಸಿತು. ಈಗಷ್ಟೇ ಮೂಡಿದ ಸಾಲುಗಳು, ಪರಿಚಿತವಿರಲು ಹೇಗೆ ಸಾಧ್ಯ? ಪೂರ್ವಜನ್ಮದ ವಾಸನೆಯೋ! ಮತ್ತೊಂದೆರಡು ಬಾರಿ ಹೇಳಿಕೊಂಡಾಗ ಹೊಳೆಯಿತು - ಪರಿಚಿತವೆನ್ನಿಸಿದ್ದು ಸಾಲಲ್ಲ, ಅದರ ಲಯ; ಪರಿಚಿತವೆಂದರೆ ತೀರ ಪರಿಚಿತವಲ್ಲ, ಅಪರಿಚಿತವೂ ಅಲ್ಲ; ಚಿಂತಿಸುತ್ತಿದ್ದಂತೆ ಒಂದೆರಡು ಕ್ಷಣದಲ್ಲೇ ಸೂತ್ರವಾಕ್ಯವೂ ನೆನಪಾಗಿಬಿಟ್ಟಿತು - "ವಿದ್ಯುನ್ಮಾಲಾ ಮೋ ಮೋ ಗೋ ಗಃ" - ವಿದ್ಯುನ್ಮಾಲಾ ಎಂಬ ಛಂದಸ್ಸಿನ ಲಕ್ಷಣವಾಕ್ಯವದು. ತಮಾಷೆಗೆಂದು ನುಡಿದ ಮಾತು ಒಂದು ಛಂದೋಬದ್ಧವಾದ ಸಾಲಾಗಿಬಿಟ್ಟಿತ್ತು!
ಒಂದು ಕ್ಷಣ, ಮೈಯಲ್ಲಿ ವಿದ್ಯುತ್ಸಂಚಾರವಾದಂತಾಯಿತು (ವಿದ್ಯುನ್ಮಾಲೆಯ ವಿಷಯವಲ್ಲವೇ ಮತ್ತೆ?). ಆದಿಕವಿ ವಾಲ್ಮೀಕಿಗೂ ಆತನ ಸುಪ್ರಸಿದ್ಧವಾದ "ಮಾನಿಷಾದಪ್ರತಿಷ್ಠಾಂ..." ಸಾಲು ಹೊಮ್ಮಿದನಂತರ ಇಂಥದ್ದೇ ರೋಮಾಂಚನವಾಗಿರಬೇಕು-
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾಃ|
ಯತ್ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್||
ಎಲೋ ಬೇಡನೇ, ಕಾಮಮೋಹಿತವಾಗಿದ್ದ ಈ ಕ್ರೌಂಚಪಕ್ಷಿಗಳಲ್ಲೊಂದನ್ನು ಹೊಡೆದು ಹಾಕಿದ ನೀನು ಬಹುಕಾಲ ಬದುಕಿರಬಾರದು - ಮಧುರವಾಗಿ ಕೂಗುತ್ತಾ ಒಂದನ್ನೊಂದು ಬಿಡದೇ ಹಾರಾಡುತ್ತಿದ್ದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಬೇಡನೊಬ್ಬನು ಹೊಡೆದುಹಾಕಿದಾಗ, ರಕ್ತಸುರಿಸುತ್ತಾ ಕೆಳಬಿದ್ದ ಗಂಡು ಹಕ್ಕಿ, ಅದರ ವಿಯೋಗದಿಂದ ಕರುಣಾಜನಕವಾಗಿ ಆಕ್ರಂದಿಸುತ್ತಿದ್ದ ಹೆಣ್ಣುಹಕ್ಕಿಯ ಗೋಳನ್ನು ನೋಡಲಾರದೇ ವಾಲ್ಮೀಕಿಯ ಬಾಯಿಂದ ಹೊರಟ ಶಾಪವಾಕ್ಯವಿದು.
ದುಃಖದಿಂದ ಮಾತೇನೋ ಹೊರಬಿದ್ದಿತು. ಆಡಿದ ಮರುಕ್ಷಣದಲ್ಲಿಯೇ ವಾಲ್ಮೀಕಿಮುನಿಗೆ ಅಚ್ಚರಿಯಾಯಿತಂತೆ, ಏಕೆಂದರೆ ಅದು ಕೇವಲ ಮಾತಾಗಿರಲಿಲ್ಲ, ಲಯಬದ್ಧವಾದ ಶ್ಲೋಕವಾಗಿತ್ತು - ಎಲಾ, ದುಃಖದಲ್ಲಿ ನಾನು ಏನು ಮಾತಾಡಿದೆ (ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ)! ಶೋಕದಲ್ಲಿ ಆಡಿದ ಮಾತು ಪಾದಬದ್ಧವಾಗಿ, ಸಮಾಕ್ಷರಗಳಿಂದ ಕೂಡಿ, ತಂತಿಯ ಲಯಕ್ಕೆ ಹೊಂದುವಂತೆ ಮೂಡಿತಲ್ಲಾ (ಪಾದಬದ್ಧೋSಕ್ಷರಸಮಸ್ತಂತ್ರೀಲಯಸಮನ್ವಿತಃ); ಶೋಕದಿಂದ ಒಡಮೂಡಿದ ಮಾತು ಶ್ಲೋಕವಾಗಿಯೇ ಉಳಿಯಲಿ (ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ) ಎಂದು ಶಿಷ್ಯನಾದ ಭರದ್ವಾಜನಿಗೆ ಹೇಳಿದರಂತೆ. ಅಲ್ಲಿಂದ ನದಿಯಲ್ಲಿ ಸ್ನಾನ ಮುಗಿಸಿಕೊಂಡು ಆಶ್ರಮಕ್ಕೆ ಹಿಂದಿರುಗಿದ ಮೇಲೂ ಮುನಿಗೆ ಅದೇ ಗುಂಗು - ಶೋಕದಲ್ಲಿ ಆಡಿದ ಮಾತು ಶ್ಲೋಕವಾಯಿತಲ್ಲ, ಎಂತಹ ಸೋಜಿಗ! ಆಗ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಇದು ಆಕಸ್ಮಿಕವೇನಲ್ಲ, ನನ್ನ ಇಚ್ಛೆಯಿಂದಲೇ ಈ ವಾಣಿಯು ನಿನ್ನ ಮುಖದಿಂದ ಹೊರಹೊಮ್ಮಿತು (ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ); ನೀನು ಮಹಾತ್ಮನಾದ ರಾಮನ ಚರಿತ್ರೆಯನ್ನು ರಚಿಸು ಎಂದು ಹೇಳಿ ಕಣ್ಮರೆಯಾದನಂತೆ. ಆನಂತರ ವಾಲ್ಮೀಕಿಮುನಿಗಳು ಅದೇ ಶ್ಲೋಕವನ್ನು ಮತ್ತೆಮತ್ತೆ ಹೇಳುತ್ತಾ ಅದರ ಲಯವನ್ನು ಮನಸ್ಸಿನಲ್ಲಿ ಗಟ್ಟಿಮಾಡಿಕೊಳ್ಳುತ್ತಿದ್ದಂತೆ ರಾಮಕತೆಯು ಅದೇ ಅನುಷ್ಟುಪ್ ಛಂದಸ್ಸಿನಲ್ಲಿ ಮೂಡಲಾರಂಭಿಸಿತು. ಇದು ರಾಮಾಯಣಾವತಾರದ ಕತೆ.
ಅಲ್ಲ, ವಾಲ್ಮೀಕಿಯ ಮಾತು ಬಂದದ್ದಕ್ಕೆ ಇಷ್ಟು ಹೇಳಬೇಕಾಯಿತಷ್ಟೇ. ಈಗೇನು? ವಾಲ್ಮೀಕಿಯಂತೆಯೇ ನಿನ್ನದೊಂದು ರಾಮಾಯಣ ಬರಲಿದೆಯೋ ಎಂದು (ಮುಸಿನಗುತ್ತಾ) ಕೇಳುತ್ತೀರೆಂದು ನನಗೆ ಗೊತ್ತು. ಸದ್ಯ, ಸ್ವಾಮೀ ಆ ಘಟನೆಯನಂತರ ಅದೆಷ್ಟು ಬೇಡರು ಹುಟ್ಟಿಲ್ಲ, ಅದೆಷ್ಟು ಕ್ರೌಂಚಪಕ್ಷಿಗಳನ್ನು ಕೊಂದಿಲ್ಲ - ಕ್ರೌಂಚಪಕ್ಷಿಯೊಂದು ಬಿದ್ದಾಗೆಲ್ಲಾ ಒಂದು ರಾಮಾಯಣ ಹುಟ್ಟಿದ್ದಿದ್ದರೆ "ರಾಮಾಯಣದ ಕವಿಗಳ ಭಾರದಲಿ" ತಿಣುಕುತ್ತಿದ್ದ ಫಣಿರಾಯ ಈ ಹೊತ್ತಿಗೆ ನೆಲಕಚ್ಚಿಯೇ ಬಿಡುತ್ತಿದ್ದ. ಇಷ್ಟಕ್ಕೂ ರಾಮಾಯಣ ಬರೆಯುವುದೇನು ಸಾಮಾನ್ಯವೇ? ಛಂದಸ್ಸಿನ ಸಾಲೊಂದು ಹೊಳೆದರೆ ರಾಮಾಯಣವೇ ಹೊಳೆದುಬಿಡುವುದೇ? ಬ್ರಹ್ಮ ಪ್ರತ್ಯಕ್ಷವಾಗಬೇಕು, ಕತೆ ಬರೆಯೆಂದು ಆಶೀರ್ವದಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಹುತ್ತಗಟ್ಟಬೇಕು - "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು, ಪುರುಷೋತ್ತಮನ ಆ ಅಂಥ ರೂಪ-ರೇಖೆ?" ನನ್ನ ಸುತ್ತ ಹುತ್ತಗಟ್ಟಿಕೊಂಡರೆ ಈ ಮನೆ ಈ ಸಂಸಾರ ನೋಡಿಕೊಳ್ಳುವರಾರು? ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಿಂಬಣ್ಣನಿಗೆ ಬಿಸ್ಕೇಟು ಹಾಕುವವರಾರು? ಇದಕ್ಕೆಲ್ಲ ಒಂದು ವ್ಯವಸ್ಥೆಯಾಗದೇ, ಮೋಕ್ಷವೇ ಸಿಗುತ್ತದೆಂದರೂ ಹೋಗಲುಂಟೇ? ಏನೋ, ವಾಲ್ಮೀಕಿಗಾದಂತೆ ನಮಗೂ ಒಂದು ಅನುಭವವಾಯಿತು ಎಂದು ಹೇಳಬಂದೆನಷ್ಟೇ- "ಒಬ್ಬೊಬ್ಬ ಗಂಡನಲಿ ಶ್ರೀರಾಮನಡಗಿಹನು" ಕವಿವಾಣಿಯೇ ಇಲ್ಲವೇ? "ಒಂದೊಂದು ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ ವಾಲ್ಮೀಕಿ ನೆಲೆಸಿಹನು..." ಇರಬಹುದು, ಶ್ರೀರಾಮನ ಹೋಲಿಕೆಯೆಂದ ಮಾತ್ರಕ್ಕೆ ಪತ್ನಿಯನ್ನು ಕಾಡಿಗಟ್ಟಲಾದೀತೇ? ಶ್ರೀಕೃಷ್ಣನಂಥವನು ಎಂದ ಮಾತ್ರಕ್ಕೆ, ಹದಿನಾರು ಸಾವಿರ ಬೇಡ ಎಂಟು ಮಂದಿಯನ್ನಾದರೂ ಕಟ್ಟಿಕೊಂಡು ಜಯಿಸಲಾದೀತೇ? ವಾಲ್ಮೀಕಿಯಂತೆ ನನಗೂ ಒಂದು ಛಂದಸ್ಫುರಣವಾಯಿತೆಂದ ಮಾತ್ರಕ್ಕೆ ಮುಂದುವರೆದು ರಾಮಾಯಣವನ್ನೂ ಬರೆಯಲಾದೀತೇ?
ಈ ರಾಮಾಯಣವೆಲ್ಲ ನಮಗೇಕೆ? ವಿದ್ಯುನ್ಮಾಲೆಯ ವಿಷಯಕ್ಕೆ ಮರಳೋಣ. ವಿದ್ಯುನ್ಮಾಲೆ, ಎಂಟಕ್ಷರದ ಅಕ್ಷರಗಣದ ವೃತ್ತ - ವಿದ್ಯುನ್ಮಾಲಾ ಮೋ ಮೋ ಗೋ ಗಃ (ವಿದ್ಯುನ್ಮಾಲೆಯಲ್ಲಿ ಮಗಣ, ಮಗಣ, ಗುರು ಮತ್ತೊಂದು ಗುರು). ಮಗಣವೆಂದರೆ ಮೂರು ಗುರ್ವಕ್ಷರಗಳ ಗುಂಪು (ಎಂದರೆ ಮೂರು ದೀರ್ಘಾಕ್ಷರಗಳು); ಅಂಥವೆರಡು ಗಣಗಳು ಮತ್ತೆ ಎರಡು ಗುರು - ಎಂದರೆ ಎಂಟು ಗುರ್ವಕ್ಷರವಿರುವ ಸರ್ವಗುರು ವೃತ್ತವಿದು - ನಾನಾನಾ ನಾನಾನಾ ನಾನಾ ಎಂಬಂತೆ - ಸ್ವಲ್ಪ ಢಿಕ್ಕಿಹೊಡೆದಂತೆ ಚಲಿಸುವ ಅಡ್ಡಡ್ಡ ಚಲನೆ ಈ ಸಾಲಿನದು.
ರಾಮಂ ಸೀತಾರಾಮಂ ವಂದೇ
ಸೌಮಿತ್ರ್ಯಗ್ರೇಜಾತಂ ಶಾಂತಮ್
ವೈದೇಹೀಕಾಂತಂ ಕೌಸಲ್ಯಾ
ನಂದಂ ತಂ ಕೋದಂಡಸ್ಕಂಧಂ
ಹೀಗೆ ಬರುತ್ತದೆ. ಇಂಥದ್ದನ್ನೇ ಕನ್ನಡದಲ್ಲೂ ಮಾಡಬಹುದು
ಬುದ್ಧಂ ತಾನೆದ್ದಾಗಳ್ ಲೋಕಂ
ನಿದ್ರಾಸ್ವಪ್ನಾವಸ್ಥಾಬದ್ಧಂ
ಸಿದ್ಧಂ ತಾನೆಯ್ದಾಗಳ್ ಲೋಕಂ
ಮತ್ತಂ ನಿದ್ರಾವಸ್ಥಾಬದ್ಧಂ
(ಬುದ್ಧ ಎದ್ದಾಗ ಲೋಕ ನಿದ್ರಾಬದ್ಧವಾಗಿ ಕನಸು ಕಾಣುತ್ತಿತ್ತು; ಆತ ಸಿದ್ಧನಾಗಿ ಹೊರಟುಹೋದಾಗಲೂ ಲೋಕ ನಿದ್ರಾಬದ್ಧವಾಗಿಯೇ ಇತ್ತು)
ಛಂದೋಂಬುದಿಯಲ್ಲಿ ನಾಗವರ್ಮನು ವಿದ್ಯುನ್ಮಾಲೆಯ ಲಕ್ಷಣವನ್ನು ಹೀಗೆ ಕೊಡುತ್ತಾನೆ (ಅದೇ ಛಂದಸ್ಸಿನಲ್ಲಿ)-
ಪಿಂತುರ್ವೀಯುಗ್ಮಂಗಳ್ ಬರ್ಕುಂ
ಮುಂತೀಶಾನದ್ವಂದ್ವಂ ನಿಲ್ಕುಂ
ಸಂತಂ ನೀ ಕೇಳಂಭೋಜಾಕ್ಷೀ
ಕಾಂತಂ ವಿದ್ಯುನ್ಮಾಲಾವೃತ್ತಂ
ತಾವರೆಗಣ್ಣವಳೇ, ಗಮನಿಸಿ ಕೇಳು, ಮನೋಹರವಾದ ವಿದ್ಯುನ್ಮಾಲಾವೃತ್ತದಲ್ಲಿ ಮೊದಲು ಉರ್ವೀಯುಗ್ಮ (ಎರಡು ಭೂಮಿಗಳು) ಮತ್ತೆ ಈಶಾನಯುಗ್ಮ (ಇಬ್ಬರು ಹರರು); ಭೂಮಿ ಎಂದರೆ ಮಗಣ (ಮೂರು ಗುರುವಿನ ಗುಂಪು - ನಾನಾನಾ ಎಂಬಂತೆ); ಹರ ಎಂದರೆ ಗುರು, ದೀರ್ಘಾಕ್ಷರ. ವಿದ್ಯುನ್ಮಾಲೆಯಲ್ಲಿ ಎರಡು ಮಗಣ (ನಾನಾನಾ ನಾನಾನಾ ಎಂಬಂತೆ), ಮತ್ತು ಎರಡು ಗುರು (ನಾ ನಾ). ಇದು ಪ್ರಸಿದ್ಧಕರ್ಣಾಟಕವೃತ್ತಗಳಷ್ಟು (ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಗ್ಧರಾ), ಅಥವಾ ವಸಂತತಿಲಕ, ಹರಿಣೀ, ಮಂದಾಕ್ರಾಂತ ಮುಂತಾದ ಇತರ ವೃತ್ತಗಳಷ್ಟು ಪ್ರಸಿದ್ಧವಲ್ಲವಾದರೂ ಈ ಲಯ ತೀರ ಅಪರಿಚಿತವೇನಲ್ಲ.
ಶ್ರೀ ವಾದಿರಾಜರಿಗೆ ಸಂಬಂಧಿಸಿದ್ದೆಂದು ಒಂದು ಕತೆ ಪ್ರಚಲಿತವಾಗಿದೆ - ವಾದಿರಾಜರ ಶಿಷ್ಯರಲ್ಲೊಬ್ಬ, ನಾರಾಯಣಾಚಾರ್ಯನೆಂಬವನು ಬಹಳ ದೊಡ್ಡ ವಿದ್ವಾಂಸ, ಆದರೆ ವಿದ್ಯೆಗೆ ತಕ್ಕ ವಿನಯವಿಲ್ಲ. ವಿದ್ಯಾಮದದಿಂದ ಯಾರ ಮುಖ ಮುರಿಯಲೂ ಹಿಂಜರಿಯುತ್ತಿರಲಿಲ್ಲ. ಒಮ್ಮೆ ಗುರುಗಳಾದ ಶ್ರೀ ವ್ಯಾಸರಾಜರನ್ನು ಸಂದರ್ಶಿಸಲು ವಾದಿರಾಜರು ಶಿಷ್ಯಸಮೇತ ಹಂಪಿಗೆ ಬಂದಿದ್ದಾಗ, ಗುರುಗಳ ದರ್ಶನಕ್ಕೆ ತಡವಾಗಬಹುದೆಂದು ತಮ್ಮ ಸ್ನಾನಾಹ್ನಿಕಗಳನ್ನು ಸ್ವಲ್ಪ ಚುಟುಕಾಗಿಸಿದರಂತೆ. ಶಿಷ್ಯನಿಗೆ ಅದೇ ನೆಪವಾಯಿತು - ಗುರುಗಳಾದ ವಾದಿರಾಜರನ್ನೂ ವ್ಯಾಸರಾಜರನ್ನೂ ತುಂಬಾ ಹಂಗಿಸಿದನಂತೆ. ಗುರುಗಳನ್ನೂ ಬಿಡದಿದ್ದ ಶಿಷ್ಯನಮೇಲೆ ವಿಪರೀತ ಸಿಟ್ಟಿಗೆದ್ದ ವಾದಿರಾಜರು, ವಿದ್ಯಾಹಂಕಾರಿಯಾದ ನೀನು ಬ್ರಹ್ಮರಾಕ್ಷಸನಾಗು ಎಂದು ಶಪಿಸಿ ಹೊರಟುಹೋದರಂತೆ. ಅಂದಿನಿಂದ ಹಂಪಿಯ ದಾರಿಯಲ್ಲಿದ್ದ ಭಾರೀ ಮರವೊಂದರ ಮೇಲೆ ನಾರಾಯಣಾಚಾರ್ಯ ಉರ್ಫ್ ಬ್ರಹ್ಮರಾಕ್ಷಸನ ವಾಸ. ಆ ದಾರಿಯಲ್ಲಿ ಹೋಗಬರುವವರಿಗೆಲ್ಲ ಧುತ್ತನೆ ಪ್ರತ್ಯಕ್ಷನಾಗುವನು, ಬೆದರಿ ಮಿಡುಕುವ ದಾರಿಗನಿಗೆ ಒಂದು ಶರತ್ತು ಹಾಕುವನು - "ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸಿದರೆ ನೀನು ಬಚಾವು". ದಾರಿಗ ಒಪ್ಪಿ ತಲೆಯಾಡಿಸುತ್ತಿದ್ದಂತೆ ಬ್ರಹ್ಮರಾಕ್ಷಸ ಗರ್ಜಿಸಿ ಕೇಳುವನು - "ಆಕಾಮಾವೈ ಕೋ ನಸ್ನಾತಃ?". ಅರ್ಥವೇ ಆಗದ ಪ್ರಶ್ನೆಗೆ ದಾರಿಗ ಏನುತ್ತರಿಸಿಯಾನು? ಅಂದಿಗೆ ಆತ ಬ್ರಹ್ಮರಾಕ್ಷನ ಹೊಟ್ಟೆಗೆ ಆಹಾರ! ಜನ ಆ ದಾರಿಯಲ್ಲಿ ಓಡಾಡುವುದನ್ನೇ ಬಿಡಲಾರಂಭಿಸಿದರು. ಹೀಗಿರಲೊಮ್ಮೆ ಕೆಲಕಾಲಾನಂತರ ಸ್ವತಃ ವಾದಿರಾಜರು ಆ ದಾರಿಯಲ್ಲೇ ಬಂದರು. ಮುರಿದು ತಿನ್ನುವ ಬ್ರಹ್ಮರಾಕ್ಷಸನಿಗೆ ಯಾರಾದರೇನು? ಧುತ್ತನೆ ಮರದಿಂದ ಧುಮುಕಿದವನೇ ಗರ್ಜಿಸಿದ - "ಆಕಾಮಾವೈ ಕೋ ನಸ್ನಾತಃ". ಕೊಂಚವೂ ವಿಚಲಿತರಾಗದ ವಾದಿರಾಜರು ಉತ್ತರಿಸಿದರು - "ರಂಡಾಪುತ್ರ ತ್ವಂ ನಸ್ನಾತಃ" (ಆಷಾಢ ಕಾರ್ತಿಕ ಮಾಘ ವೈಶಾಖಗಳಲ್ಲಿ (ತೀರ್ಥ)ಸ್ನಾನ ಮಾಡದವನು ಯಾರು - ಇದು ಬ್ರಹ್ಮರಾಕ್ಷಸನ ಪ್ರಶ್ನೆ. ಆ ಪುಣ್ಯಮಾಸಗಳಲ್ಲಿ ಶಾಸ್ತ್ರವಿಹಿತವಾದ ತೀರ್ಥಸ್ನಾನ ಮಾಡದ ಪಾಪಿ, ನೀರು ಕಂಡರೆ ಹೆದರುವ ನೀನಲ್ಲದೇ ಇನ್ನಾರಾಗಿರಲು ಸಾಧ್ಯ? ಇದು ಉತ್ತರ - ರಂಡಾಪುತ್ರ (ರಂಡೆಯ ಮಗನೇ) ಈ ಬಗೆಯ ಬೈಗಳು ಎಲ್ಲ ಕಾಲದಲ್ಲೂ ಎಲ್ಲ ಸ್ತರಗಳಲ್ಲೂ ಇತ್ತು). ಬ್ರಹ್ಮರಾಕ್ಷಸನಿಗೆ ಪೂರ್ವಜನ್ಮಸ್ಮರಣೆ ಬಂತಂತೆ - ತನ್ನನ್ನು ಶಪಿಸಿ ಈ ಗತಿಗೆ ತಂದವರೇ ಇವರು. ತಿಳಿವು ತಿಳಿದು ಪಶ್ಚಾತ್ತಾಪವಾಗುವುದರ ಬದಲು ಸಿಟ್ಟು ಭುಗಿಲೆದ್ದಿತಂತೆ - ವಾದಿರಾಜರಿಗೆ ವಾದಕ್ಕಾಹ್ವಾನ ನೀಡಿತು ಬ್ರಹ್ಮರಾಕ್ಷಸ. ತಾನು ಗೆದ್ದರೆ ವಾದಿರಾಜರನ್ನು ಮುರಿದು ತಿನ್ನುವುದು; ತಾನು ಸೋತರೆ, ಅವರ ದಾಸನಾಗಿ ಪಲ್ಲಕ್ಕಿ ಹೊರುವುದು. ಕೊನೆಗೆ ಬ್ರಹ್ಮರಾಕ್ಷಸನೇ ಪಲ್ಲಕ್ಕಿ ಹೊರಬೇಕಾಯಿತೆಂದು ಬೇರೆ ಹೇಳಬೇಕಾಗಿಲ್ಲವಲ್ಲ.
ಇರಲಿ, ಬಾಲ್ಯದಲ್ಲಿ ಕೇಳಿದ ಕತೆ - ಕತೆಗೆ ಕಾಲಿಲ್ಲ, ಇನ್ನು ಆಧಾರವನ್ನೆಲ್ಲಿ ತರುವುದು? ಆಮೇಲೆ ಇದನ್ನು ಬೇಲೂರು ಕೇಶವದಾಸರ ಕರ್ಣಾಟಕ ಭಕ್ತವಿಜಯದಲ್ಲೂ ಓದಿದ್ದೇನೆ - ಆಕರ ತಿಳಿಯದು. ಅದೇನೇ ಇರಲಿ, ಕತೆಯ ವಿಮರ್ಶೆ ನಮ್ಮ ತಲೆನೋವಲ್ಲ. ಮೇಲಿನ ಸಂಭಾಷಣೆ - "ಆಕಾಮಾವೈ ಕೋ ನಸ್ನಾತಃ", "ರಂಡಾಪುತ್ರ ತ್ವಂ ನಸ್ನಾತಃ" ವಿದ್ಯುನ್ಮಾಲಾವೃತ್ತದಲ್ಲೇ ಇದೆಯೆನ್ನುವುದಕ್ಕೆ ಇಷ್ಟು ಹೇಳಬೇಕಾಯಿತು.
ವಿಚಿತ್ರ ನಡೆಯುಳ್ಳ ಈ ವೃತ್ತ, ಹಲವು ಚಮತ್ಕಾರದ ರಚನೆಗಳಿಗೆ ಸ್ಫೂರ್ತಿಯಾಗಿದೆ. ಉದಾಹರಣೆಗೆ, ವೆಂಕಟಾಧ್ವರಿಯ "ಶ್ರೀ ರಾಘವ ಯಾದವೀಯಂ" ಎಂಬ ದ್ವಿಸಂಧಾನಕಾವ್ಯ (ದ್ವಿಸಂಧಾನಕಾವ್ಯವೆಂದರೆ ನೇರವಾಗಿ ಓದಿದರೆ ಒಂದು ಕತೆ, ಅವೇ ಶ್ಲೋಕಗಳನ್ನು ತಿರುವುಮುರುವಾಗಿ ಓದಿದರೆ ಇನ್ನೊಂದು ಕತೆ - ಹೀಗೆ ಇಡೀ ಕಾವ್ಯ ಎರಡೆರಡು ಕತೆ ಹೇಳುವಂಥದ್ದು). ಉದಾಹರಣೆಯಾಗಿ ಇದರ ಮೊದಲ ಶ್ಲೋಕ ನೋಡಿ (ವಿದ್ಯುನ್ಮಾಲೆಯಲ್ಲಿರುವುದರಿಂದ ಈ ಉದಾಹರಣೆ)-
ವಂದೇSಹಂ ದೇವಂ ತಂ ಶ್ರೀತಂ
ರಂತಾರಂ ಕಾಲಂ ಭಾಸಾಯಃ
ರಾಮೋರಾಮಾಧೀರಾಪ್ಯಾಗೋ
ಲೀಲಾಮಾರಾಯೋಧ್ಯೇ ವಾಸೇ
ಇದು ಅಯೋಧ್ಯಾರಾಮನ ಸ್ತುತಿ. ಮೇಲಿನ ಶ್ಲೋಕವನ್ನೇ ಕೊನೆಯ ಅಕ್ಷರದಿಂದ ಮೊದಲಿನವರೆಗೆ ಓದಿಕೊಂಡು ಬಂದರೆ ಅದು ಹೀಗಾಗುತ್ತದೆ-
ಸೇವಾಧ್ಯೇಯೋರಾಮಾಲಾಲೀ
ಗೋಪ್ಯಾರಾಧೀ ಮಾರಾಮೋರಾಃ
ಯಸ್ಸಾಭಾಲಂಕಾರಂ ತಾರಂ
ತಂ ಶ್ರೀತಂ ವಂದೇSಹಂ ದೇವಂ
ಇದು ಗೋಪೀಲೋಲನಾದ, ಶ್ರೀನಿವಾಸನಾದ, ಅಷ್ಟಮಹಿಷಿಯರೊಡನೆ ವಿಲಸಿಸುವ ಕೃಷ್ಣನ ಸ್ತುತಿ.
ಶ್ರೀ ವೇದಾಂತದೇಶಿಕರ ಪಾದುಕಾಸಹಸ್ರದಲ್ಲಿ ಬರುವ ಈ ಪದ್ಯವಂತೂ ಇನ್ನೂ ಚಮತ್ಕಾರಯುಕ್ತವಾದದ್ದು (ಇದೂ ವಿದ್ಯುನ್ಮಾಲೆಯೇ)
ಯಾಯಾಯಾಯಾಯಾಯಾಯಾಯಾ
ಯಾಯಾಯಾಯಾಯಾಯಾಯಾಯಾ
ಯಾಯಾಯಾಯಾಯಾಯಾಯಾಯಾ
ಯಾಯಾಯಾಯಾಯಾಯಾಯಾಯಾ
(ಪಾದುಕಾಸಹಸ್ರಂ - 30-26)
ಇದು ಕೇವಲ ಏಕಾಕ್ಷರಶ್ಲೋಕವಷ್ಟೇ ಅಲ್ಲ, ಇದರಲ್ಲಿ ಕಂಕಣ, ಪದ್ಮ, ಗೋಮೂತ್ರಿಕೆ ಮೊದಲಾದ ಹಲವು ಚಿತ್ರಬಂಧಗಳೂ ಅಡಗಿವೆಯೆನ್ನುತ್ತಾರೆ ಪ್ರಾಜ್ಞರು - ನಾನು ಪರಿಶೀಲಿಸಿ ನೋಡಹೋಗಿಲ್ಲ. ಇಂಥವನ್ನು ಮಹಾಯಮಕಗಳೆನ್ನುತ್ತಾರೆ. ಚಮತ್ಕಾರಿಕಪದ್ಯ ಹೌದು, ಆದರೆ ಇದೇನು ಅರ್ಥವಿಲ್ಲದ ಅಕ್ಷರಜೋಡಣೆಯಲ್ಲ. ಬೇರೆಬೇರೆ ಪದಗಳು ಸಂಧಿಯಾಗಿ, ಪರಿಣಾಮದಲ್ಲಿ ಎಲ್ಲ ಒಂದೇ ಅಕ್ಷರವಾಗಿರುವುದು. ಇದನ್ನು ಬಿಡಿಸಿದರೆ -
ಯಾಯಾಯಾ ಅಯ ಆಯಾಯ ಅಯಾಯ ಅ-
ಯಾಯ ಅಯಾಯ ಅಯಾಯ ಅಯಾಯಾ
ಯಾಯಾಯ ಆಯಾಯಾಯ ಆಯಾಯಾ-
ಯಾ ಯಾ ಯಾ ಯಾ ಯಾ ಯಾ ಯಾ ಯಾ
ಇದರ ಅರ್ಥವಿವರಣೆ ಸದ್ಯದ ಬರಹದ ವ್ಯಾಪ್ತಿಯನ್ನು ಮೀರಿದುದಾದ್ದರಿಂದ ಅದಕ್ಕೆ ಕೈ ಹಾಕಿಲ್ಲ. ಇಂಥವು ಬೇರೆಬೇರೆ ಛಂದಸ್ಸುಗಳಲ್ಲೂ ಇವೆ, ಸದ್ಯದ ಬರಹ ವಿದ್ಯುನ್ಮಾಲೆಯನ್ನು ಕುರಿತದ್ದಾದ್ದರಿಂದ ಈ ಶ್ಲೋಕವನ್ನು ಉದಾಹರಿಸಿದೆ. ಹಾಗೇ ವೇದಾಂತದೇಶಿಕರದೇ ಯಾದವಾಭ್ಯುದಯದ ಈ ಶ್ಲೋಕವನ್ನೂ ನೋಡಬಹುದು-
ನಾನಾನಾನಾನಾನಾನಾನಾ
ನಾನಾನಾನಾನಾನಾನಾನಾ
ನಾನಾನಾನಾನಾನಾನಾನಾ
ನಾನಾನಾನಾನಾನಾನಾನಾ
(ಯಾದವಾಭ್ಯುದಯ - 6-96)
ಅದೇ ರೀತಿ ಶ್ರೀ ಮಧ್ವಾಚಾರ್ಯರ ಯಮಕಭಾರತದಲ್ಲಿಯೂ ಇಂತಹ ರಚನೆಗಳನ್ನು ಕಾಣಬಹುದು, ಅದರಲ್ಲಿ ವಿದ್ಯುನ್ಮಾಲಾವೃತ್ತದ ಈ ರಚನೆಯನ್ನು ನೋಡಿ-
ಭಾಭಾಭಾಭಾಭಾಭಾಭಾಭಾ
ಭಾಭಾಭಾಭಾಭಾಭಾಭಾಭಾ
ಭಾಭಾಭಾಭಾಭಾಭಾಭಾಭಾ
ಭಾಭಾಭಾಭಾಭಾಭಾಭಾಭಾ
(ಯಮಕಭಾರತ - 78)
ಮೇಲಿನವು ಗಂಭೀರವಾದ ರಚನೆಗಳಾದುವು. ಆದರೆ ನಮ್ಮ ಉದ್ದೇಶ ಈ ರಚನೆಗಳ ಪರಿಚಯವಲ್ಲ, ಈ ವೃತ್ತದ ಸ್ವಭಾವಪರಿಚಯವಷ್ಟೇ? ಇದು ಎಷ್ಟು ಸರಳವಾದ, ಸುಲಭವಾಗಿ ಕೈಗೆಟುಕುವ ಲಯವೆಂದರೆ, ಸರಳವಾದ ದಿನಬಳಕೆಯ ಮಾತುಗಳೂ ಈ ಲಯಕ್ಕೆ ಹೊಂದಿಬಿಡುತ್ತವೆ. ಬಾಲ್ಯದಲ್ಲಿ ಕಣ್ಣಾಮುಚ್ಚಾಲೆಯಾಟದಲ್ಲಿ ಹೇಳುತ್ತಿದ್ದ ಈ ಪದ್ಯ ನೆನಪಿದೆಯೇ?
ಕಣ್ಣಾಮುಚ್ಚೇ ಕಾಡೇಗೂಡೇ
ಉದ್ದಿನ್ಮೂಟೇ ಉಂಟೇ ಹೋಯ್ತು
ನಮ್ಮಾ ಹಕ್ಕೀ ಬಿಟ್ಟೇ ಬಿಟ್ಟೇ
ನಿಮ್ಮಾ ಹಕ್ಕೀ ಬಚ್ಚಿಟ್ಕೊಳ್ಳೀ
ಇಲ್ಲಿ ಲಯಕ್ಕಾಗಿ ಅಕ್ಷರಗಳನ್ನು ಜಗ್ಗಿಸುವುದು, ತುರುಕುವುದು ಇಂಥವೆಲ್ಲ ಇದೆ, ಪದಗಳು ಅವುಗಳ ಮೂಲರೂಪದಲ್ಲಿಲ್ಲ, ಇರಲಿ. ಒಂದು ಗಂಭೀರವಾದ ವೃತ್ತರಚನೆಯಲ್ಲಿ ಹೀಗಿರುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡೋಣ. ಆದರೆ ವಿದ್ಯುನ್ಮಾಲೆಯ ಲಯ ಆಡುಮಾತಿಗೂ ಎಷ್ಟು ಸೊಗಸಾಗಿ ಹೊಂದುತ್ತದೆಂದು ತೋರಿಸಬಯಸಿದೆನಷ್ಟೇ. ತುಂಬಾ ದಿನದ ಹಿಂದೆ ನಾನೊಂದು ತಮಾಷೆಯ ಚೌಪದಿ ರಚಿಸಿದ್ದೆ-
ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ
ಛಟ್ಟನೆ ಹಾರಿಸಿ ಬಿಟ್ಟಂ ಕಿಟ್ಟಂ
ಸಿಟ್ಟಿಂದಟ್ಟುತ ಸುಬ್ಬಾ ಭಟ್ಟಂ
ದಟ್ಟಿಯು ತೊಡರಲ್ ಬಿದ್ದಂ ಕೆಟ್ಟಂ
ಇದು ವಿದ್ಯುನ್ಮಾಲೆಯಲ್ಲ, ಚತುರ್ಮಾತ್ರಾಚೌಪದಿ (ನಾಲ್ಕುನಾಲ್ಕು ಮಾತ್ರೆಯ ಲಯವುಳ್ಳದ್ದು); ವಿದ್ಯುನ್ಮಾಲೆಯಲ್ಲಾದರೆ, ಮೇಲೆ ವಿವರಿಸಿದಂತೆ ಸರ್ವಗುರು ಬರಬೇಕು. ಆದರೆ ಇದನ್ನು ಸುಲಭವಾಗಿ ವಿದ್ಯುನ್ಮಾಲೆಯಾಗಿ ಪರಿವರ್ತಿಸಬಹುದು (ಮೊದಲ ಸಾಲು ಈಗಾಗಲೇ ಪೂರ್ತಿ ಗುರ್ವಕ್ಷರಗಳೇ ಇದ್ದು, ವಿದ್ಯುನ್ಮಾಲೆಯಾಗಿಯೇ ಇದೆ, ಉಳಿದದ್ದನ್ನೂ ಪರಿವರ್ತಿಸಿದರೆ ಹೀಗೆ)-
ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ
ಕಿಟ್ಟಂ ಛಟ್ಟೆಂದೆತ್ತೇ ಬಿಟ್ಟಂ
ಸಿಟ್ಟಿಂದಟ್ಟಲ್ ಸುಬ್ಬಾ ಭಟ್ಟಂ
ಕೆಟ್ಟಂ ಕಿಟ್ಟಂ ಬಿದ್ದೇ ಬಿಟ್ಟಂ
ಅಯ್ಯೋ, ನಾನು ನಿಮ್ಮೊಡನೆ ಹರಟುತ್ತಾ ಕೂತೆ - ಸಿಂಬಣ್ಣ ನೋಡಿ, ಬಿಸ್ಕೆಟ್ ತಿಂದು ಮುಗಿಸಿ, ಅದೇನೋ ಗಲಾಟೆ ನೋಡಲು ಗೇಟಿನ ಮುಂದೆ ಹೋಗಿ ನಿಂತಿದೆ; ಅಲ್ಲೆಲ್ಲೋ ಮೆರವಣಿಗೆ, ಒಂದಷ್ಟು ಜನ ಘೋಷಣೆ ಕೂಗುತ್ತಿದ್ದಾರೆ-
"ಬೇಕೇಬೇಕೂ ನ್ಯಾಯಾ ಬೇಕೂ"
"ಸಾಲಾ ಮನ್ನಾ ಮಾಡ್ಲೇ ಬೇಕೂ"
"ಅಕ್ಕೀಬೇಳೇ ಬಿಟ್ಟೀ ಬೇಕೂ"
"ಕಾರೂ ಬೇಕು ಬೈಕೂ ಬೇಕು"
"ಚಟ್ನೀಗಿಡ್ಲೀ ಬೇಕೇ ಬೇಕೂ
ಆಲೂಗಡ್ಡೇ ಪಲ್ಯಾ ಬೇಕೂ
ಪೂರೀ ಸಾಗೂ ಕಾಫೀ ಬೇಕೂ
ಬೇಕೇಬೇಕೂ ಬೇಕೇಬೇಕೂ"