Monday, October 29, 2018

ತೊಣಚಿ - (ಫರ್ನಾಂಡೋ ಸೊರೆನ್ತಿನೋನ ಕಿರುಗತೆ "The Pest"ನ ರೂಪಾಂತರ)

ನವೆಂಬರ್ ೮ನೇ ತಾರೀಕು ನನ್ನ ಹುಟ್ಟಿದಹಬ್ಬ.  ಇವತ್ತು ಯಾರಾದರೂ ಬೀದಿಯಲ್ಲಿ ಹೋಗೋರನ್ನ ಸ್ವಲ್ಪ ಮಾತಾಡಿಸಿದರೆ ಹೇಗೆ? ಹುಟ್ಟುಹಬ್ಬ ಆಚರಿಸಲು ಇದೇ ಒಳ್ಳೆಯ ದಾರಿಯೆನ್ನಿಸಿತು.

ಬೆಳಗ್ಗೆ ಸುಮಾರು ಹತ್ತು ಗಂಟೆ; ಕಾರ್ಪೊರೇಷನ್ ಸರ್ಕಲಿನಲ್ಲಿ ದಿರಿಸು ಧರಿಸಿ ಬಲಗೈಯಲ್ಲಿ ಬ್ರೀಫ್ ಕೇಸೊಂದನ್ನು ಹಿಡಿದು ಬಸ್ಸಿಗೆ ಕಾಯುತ್ತಿದ್ದ ವೃದ್ಧರೊಬ್ಬರನ್ನು ಕಂಡೆ; ಲಾಯರು ಮತ್ತು ಡಾಕ್ಟರುಗಳ ಮುಖದಲ್ಲಿ ಕಾಣುವ ಅದೊಂದು ರೀತಿಯ ಗತ್ತಿನ ಬಿಗುವು ಅವರ ಮುಖದಲ್ಲಿ ಕಾಣುತ್ತಿತ್ತು.

"ಸಾರ್" ಅವರನ್ನು ನಿಲ್ಲಿಸಿ ಕೇಳಿದೆ "ಲಾಲ್ಬಾಗಿಗೆ ಯಾವ್ ಕಡೆ ಹೋಗ್ಬೇಕು?"

ಆ ಆಸಾಮಿ ನನ್ನನ್ನೊಮ್ಮೆ ಅಳೆಯುವಂತೆ ನೋಡಿ ಬೇಕಿಲ್ಲದ ಪ್ರಶ್ನೆಯೊಂದನ್ನು ಕೇಳಿತು "ನೀವು ಲಾಲ್ಬಾಗಿಗೆ ಹೋಗಬೇಕೋ ಲಾಲ್ಬಾಗ್ ರೋಡಿಗೋ?"

"ನಿಜ ಹೇಳ್ಬೇಕು ಅಂದ್ರೆ, ನಾನು ಲಾಲ್ಬಾಗಿಗೇ ಹೋಗಬೇಕು; ಆದರೆ ಅದು ಆಗ್ಲಿಲ್ಲ ಅಂದ್ರೆ ಎಲ್ಲಿಗಾದ್ರೂ ಸರಿ"

"ಸರಿ ಹಾಗಿದ್ರೆ" ನನ್ನ ಮುಖವನ್ನೂ ನೋಡದೆ ಹೇಳಿತು ವ್ಯಕ್ತಿ -

"ಹೀಗೆ ಹೋಗಿ" ಎಡಗಡೆ ಕೈತೋರಿಸುತ್ತಾ, "ಕಾಳಿಂಗರಾವ್ ರೋಡು, ಸುಬ್ಬಯ್ಯ ಸರ್ಕಲ್ಲು, ಊರ್ವಶಿ ಟಾಕೀಸು..."

ಈ ಮುದುಕ ನನ್ನನ್ನು ವ್ಯರ್ಥವಾಗಿ ಎಂಟು ಹತ್ತು ಬೀದಿ ಸುತ್ತಿಸಿ ತಮಾಷೆ ನೋಡಲು ಯತ್ನಿಸುತ್ತಿದ್ದಾನೆನಿಸಿತು. ಅವರ ಮಾತನ್ನು ತುಂಡರಿಸುತ್ತಾ ಹೇಳಿದೆ - "ತಾವು ಹೇಳ್ತಿರೋದು ಸರಿಯಿದೆಯೇ?"

"ಹೌದಲ್ಲ - ಯಾಕೆ?"

"ಅಲ್ಲಾ, ತಮ್ಮ ಮಾತಿಗೆ ಅನುಮಾನ ಪಡ್ತಿದೀನಿ ಅಂದ್ಕೋಬೇಡಿ, ಸ್ವಲ್ಪ ಹೊತ್ತಿನ ಕೆಳಗೆ, ಸ್ವಲ್ಪ ಬುದ್ಧಿವಂತರ ಥರ ಕಾಣ್ತಿದ್ದೋರೊಬ್ಬರು ಲಾಲ್ಬಾಗು ಈ ಕಡೆ ಅಂತ ಹೇಳಿದ್ರೂ..." - ಕಬ್ಬನ್ ಪಾರ್ಕಿನ ಕಡೆ ಕೈತೋರಿಸಿ ಹೇಳಿದೆ

"ಅವನ್ಯಾರೋ ಊರು ಗೊತ್ತಿಲ್ದೋನಿರಬೇಕು" ಮುದುಕರು ಮೊಟಕಾಗಿ ಉತ್ತರಿಸಿದರು

"ಆದ್ರೂ... ನಾನಾಗ್ಲೇ ಹೇಳಿದೆನಲ್ಲ, ಅವರು ಬುದ್ಧಿವಂತರ ಥರ ಕಾಣ್ತಿದ್ರು;  ನನಗೇನೋ ತಮಗಿಂತಾ ಅವರನ್ನೇ ಹೆಚ್ಚು ನಂಬಬಹುದು ಅನ್ಸುತ್ತಪ್ಪಾ..."

ಆತ ನನ್ನಕಡೆ ದುರುಗುಟ್ಟಿ ನೋಡಿ ಕೇಳಿದರು "ಅದ್ಸರಿ, ನನಗಿಂತಾ ಅವರನ್ನೇ ನಂಬಬೇಕು ಅಂತ ಯಾಕನ್ಸುತ್ತೆ ನಿಮಗೆ?"

"ಅಲ್ಲ ಅಲ್ಲ, ಅವರನ್ನೇ ನಂಬಬೇಕು, ನಿಮ್ಮನ್ನು ನಂಬಬಾರದು ಅಂತೇನು ಇಲ್ಲ, ಆದರೆ ಆಗಲೇ ಹೇಳಿದ್ನಲ್ಲ, ಅವರ ಮುಖದಲ್ಲಿ ಬುದ್ಧಿವಂತ ಕಳೆ ಇತ್ತು"

"ಹಾಗಂದ್ರೆ... ನಾನೇನು ಗಮಾರ್ ಥರ ಕಾಣ್ತೀನೇನ್ರೀ?"

"ಅಯ್ಯಯ್ಯೋ, ಇಲ್ಲ ಇಲ್ಲ - ಹಾಗಂತ ಯಾರು ಹೇಳಿದ್ರು ಸಾರ್?" ನನಗೆ ಆಶ್ಚರ್ಯವೇ ಆಯಿತು.

"ಮತ್ತೆ? ನೀವೇ ಹೇಳಿದ್ರಲ್ಲಾ, ಆ ಇನ್ನೊಬ್ಬ ಮನುಷ್ಯ ತುಂಬಾ ಬುದ್ಧಿವಂತನ ಥರಾ ಕಾಣ್ತಿದ್ದ ಅಂತ..."

"ಅದೇನೋ ಹೌದು... ಆ ಮನುಷ್ಯನ ಮುಖದಲ್ಲಿ ಒಳ್ಳೆ ಬುದ್ಧಿವಂತ ಕಳೆಯಿದ್ದಿದ್ದಂತೂ ನಿಜ"

ನನ್ನ ಮಿತ್ರರು ಬುಸುಗುಡುತ್ತಿದ್ದರು, ನಿಧಾನವಾಗಿ ಸಹನೆ ಕಳೆದುಕೊಳ್ಳುತ್ತಿದ್ದರು - "ಬಹಳ ಒಳ್ಳೇದು ಸ್ವಾಮಿ ಹಾಗಾದ್ರೆ" ರಪ್ಪನೆ ಕೈಮುಗಿಯುತ್ತಾ "ತಗೊಳ್ಳಿ ನಮಸ್ಕಾರ, ನಂಗೆ ತುಂಬಾ ಕೆಲಸ ಇದೆ, ಬರ್ತೀನಿ"

"ಅದು ಸರಿ ಸಾರ್, ಆದ್ರೆ ಕಬ್ಬನ್ ಪಾರ್ಕಿಗೆ ಹೋಗೋದು ಹ್ಯಾಗೆ?  ಹೇಳ್ಲೇ ಇಲ್ವಲ್ಲಾ.."

ಉಕ್ಕಿ ಬರುತ್ತಿದ್ದ ಕೋಪವನ್ನು ಹತ್ತಿಕ್ಕಲು ತುಂಬಾ ಪ್ರಯತ್ನ ಪಡುತ್ತಾ ಆಯಪ್ಪ ಸಿಡುಕಿದರು - "ಅಲ್ರೀ, ನೀವು ಹೋಗಬೇಕು ಅಂದಿದ್ದು ಲಾಲ್ಬಾಗಿಗೆ ತಾನೆ?"

"ಏ, ಅಲ್ಲ! ಕಬ್ಬನ್ ಪಾರ್ಕಿಗೆ.  ಲಾಲ್ಬಾಗ್ ಅಂತ ನಾನೆಲ್ಲಿ ಹೇಳ್ದೆ?"

"ಹಾಗಾದ್ರೆ" ಈಗ ಬಲಗಡೆ ಕೈತೋರಿಸುತ್ತಾ ಹೇಳಿದರು "ಅಗೋ, ಆ ದೊಡ್ಡ ಗಡಿಯಾರದ ಸರ್ಕಲ್ ದಾಟಿ ಸೆಂಟ್ರಲ್ ಲೈಬ್ರರಿ ದಾರಿಯಲ್ಲಿ ಹೋಗಿ"

"ಯಜಮಾನ್ರೇ, ನೀವೀಗ ನಿಜವಾಗ್ಲೂ ನನ್ನ ಮಂಗ ಮಾಡ್ತಿದೀರಿ - ಆಗಲೇ ಈ ಕಡೆ ಎಡಗಡೆ ಹೋಗು ಅಂತ ತಾನೆ ನೀವಂದಿದ್ದು?" ನಾನು ಕೇಳಿದೆ.

"ಯಾಕಂದ್ರೆ ಆಗ ನೀವು ಹೇಳಿದ್ದು ಲಾಲ್ಬಾಗಿಗೆ ಹೋಗಬೇಕು ಅಂತ"

"ನಾನು ಲಾಲ್ಬಾಗ್ ಬಗ್ಗೆ ಏನೂ ಹೇಳಲೇ ಇಲ್ವಲ್ಲ ಸಾರ್! ನಾನ್ಯಾಕೆ ಹಾಗೆ ಹೇಳ್ಲಿ?  ನಿಮಗೆ, ಒಂದೋ ಭಾಷೆ ಬರೊಲ್ಲ, ಅಥ್ವಾ ನೀವು ತೂಕಡಿಸ್ತಾ ಇದೀರಿ ಅಷ್ಟೇ, ಗ್ಯಾರಂಟಿ"

ಆ ಆಸಾಮಿಯ ಮುಖ ಕೆಂಪೇರಿತ್ತು.  ಬಲಗೈ ಬ್ರೀಫ್ ಕೇಸಿನ ಹಿಡಿಯನ್ನು ಬಿಗಿಹಿಡಿಯುತ್ತಿತ್ತು.  ಇಲ್ಲಿ ಹೇಳಬಾರದ್ದೊಂದು ಮಾತನ್ನು ಒದರಿ ಧಡಧಡನೆ ಹೆಜ್ಜೆ ಹಾಕುತ್ತಾ ಅಲ್ಲಿಂದ ವೇಗವಾಗಿ ಹೊರಟುಹೋದರು.

ನನಗೇಕೋ ಅವರು ಸ್ವಲ್ಪ ಕೋಪಗೊಂಡಿದ್ದಂತೆ ತೋರಿತು.


ಮೂಲ: The Pest
Original Argentine: Fernando Sorrentino
Translated into English: Michele McKay Aynesworth


The eighth of November was my birthday. I figured the best way to celebrate was to strike up a conversation with someone I didn't know.

That would have been about ten A.M.  At the corner of Florida and Córdoba, I stopped a well-dressed sixty-year-old with a briefcase in his right hand and that certain uppitiness of lawyers and notaries.

"Excuse me, sir," I said, "could you please tell me how to get to the Plaza de Mayo?

The man stopped, gave me the once-over, and asked a pointless question: "Do you want to go to the Plaza de Mayo, or to the Avenida de Mayo?

"Actually, I'd like to go to the Plaza de Mayo, but if that's not possible, I'm fine with just about any place else."

"O.K., then," he said, eager to speak and without having paid any attention to me at all, "head that way" — he pointed south — "cross Viamonte, Tucumán, Lavalle…"

I realized he was having fun ticking off the eight streets I'd have to cross, so I decided to interrupt:

"Are you sure about what you're saying?"

"Absolutely."

"Forgive me for doubting your word," I explained, "but just a few minutes ago a man with an intelligent face told me that the Plaza de Mayo was the other way" — and I pointed toward the Plaza San Mart'n.

The fellow could only reply, "Must be someone who's not familiar with the city."

"Nevertheless, like I said, he had an intelligent face. And naturally, I prefer to believe him, not you."

Giving me a stern look, he asked, "All right, tell me, why do you prefer to believe him instead of me?"

"It's not that I prefer to believe him instead of you. But, like I said, he had an intelligent face."

"You don't say! And I suppose I look like an idiot?"

"No, no!" I was shocked. "Who ever said such a thing?"

"Since you said that the other fellow had an intelligent face…"

"Well, truthfully, this man had a very intelligent look about him."

My sparring partner was growing impatient.

"Very well, then, sir," he said, "I'm rather pressed for time, so I'll say good-bye and be on my way."

"That's fine, but how do I get to the Plaza San Mart'n?"

His face betrayed a spasm of irritation.

"But didn't you say you wanted to go to the Plaza de Mayo?"

"No, not the Plaza de Mayo. I want to go to the Plaza San Mart'n. I never said anything about the Plaza de Mayo."

"In that case," and now he was pointing north, "take Calle Florida past Paraguay…"

"You're driving me crazy!" I protested. "Didn't you say before that I should head in the opposite direction?"

"Because you said you wanted to go to the Plaza de Mayo!"

"I never said anything about the Plaza de Mayo! How do I have to say it? Either you don't know the language, or you're still half-asleep."

The fellow turned red. I saw his right hand grip the handle of his briefcase. He said something that's better not repeated and marched off with rapid, aggressive steps.

I got the feeling he was a bit upset.
 

Wednesday, October 24, 2018

ದೇವೇಗೌಡರಿಗೆ ವಾಲ್ಮೀಕಿಪ್ರಶಸ್ತಿ


ಅಲ್ಲಾ, ಗೌಡರು ಕಾಲಕಾಲಕ್ಕೆ ಹಲವು 'ರಾಮಾಯಣ'ಗಳನ್ನು ಮಾಡಿದ್ದಾರೆ ಇಲ್ಲವೆಂದಲ್ಲ, ತಮ್ಮ ಅರವತ್ತೈದು ವರ್ಷಗಳ ಸುದೀರ್ಘ ರಾಜಕೀಯವೃತ್ತದಲ್ಲಿ ಅವರು ರಚಿಸಿದ ರಾಮಾಯಣದ ಒಟ್ಟು ಮೊತ್ತವೇನು ಕಡಿಮೆಯೇ? - ಎಪಿಕ್ ಪ್ರಮಾಣದ್ದು! ಹಾಗೆಂದ ಮಾತ್ರಕ್ಕೆ, ಈ ಪ್ರಶಸ್ತಿಯನ್ನು ಈ 'ರಾಮಾಯಣ'ಪ್ರತಿಭೆಗಾಗಿ ನೀಡಿದ್ದೆಂದು ನೀವು ಭಾವಿಸಿದ್ದರೆ, ಅಲ್ಲ, ಅಲ್ಲ, ಖಂಡಿತಾ ಅಲ್ಲ. ರಾಜಕೀಯದಲ್ಲೇನು ರಾಮಾಯಣಕ್ಕೆ ಕಡಿಮೆಯೇ - ಇತ್ತೀಚಿನ ಸಮೀಕ್ಷೆಯ ಪ್ರಕಾರ ದಿನಕ್ಕೊಂದು ರಾಮಾಯಣ ಹುಟ್ಟಿಕೊಳ್ಳುತ್ತಿದೆ (ಕ್ಷಣಕ್ಕೊಂದು ಎಂದರೂ ನಡೆದೀತು). ನಮ್ಮ ದೇಶದಲ್ಲಿ ರಾಮಾಯಣದ ಪರಂಪರೆ ಬಹಳ ದೊಡ್ಡದು - ಕಾವ್ಯದಲ್ಲೂ ರಾಜಕೀಯದಲ್ಲೂ. ಹಾಗೆಂದು ಎಲ್ಲಕ್ಕೂ ಪ್ರಶಸ್ತಿ ಕೊಡುತ್ತಾ ಹೋದರೆ ಮುಜರಾಯಿ, ಅಬಕಾರಿ ಎರಡೂ ಇಲಾಖೆಗಳ ಆದಾಯ ಬರಿದಾದೀತು, ಎಷ್ಟೋ ನೌಕರರಿಗೆ ಪಾಕೆಟ್ ಮನಿ ನೀಡಲು ಕಾಸಿಲ್ಲದೇ ಸರ್ಕಾರಕ್ಕೆ ಸರ್ಕಾರವೇ ನಿಮ್ಮ ಮನೆಯ ಮುಂದೆ ಭಿಕ್ಷೆಗೆ ಬಂದು ಕುಳಿತೀತು. ಇನ್ನೆಷ್ಟೆಷ್ಟೋ ದೇವಸ್ಥಾನಗಳು ಮುಜರಾಯಿ ತೆಕ್ಕೆಗೆ ಬಂದಾವು, ಹೆಂಡ ಸಾರಾಯಿ ಚಿನ್ನಕ್ಕಿಂತ ತುಟ್ಟಿಯಾದೀತು, ಮಹಾವಿಪ್ಲವವೇ ಆದೀತು. ಹಾಗೆಲ್ಲಾ ರಾಮಾಯಣಕ್ಕೆ ಪ್ರಶಸ್ತಿ ಕೊಡುವ ಕಾಲ ಯಾವತ್ತೋ ಹೋಯಿತು. ಐನೂರು ವರ್ಷದ ಹಿಂದೆಯೇ ಕುಮಾರವ್ಯಾಸನೇ ಹೇಳಲಿಲ್ಲವೇ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ".  ನೆನಪಿಡಿ, ಆತ ಹೇಳಿದ್ದು ಕೇವಲ ರಾಮಾಯಣದ ಕವಿಗಳ ವಿಷಯ. ಇನ್ನು ಮೇಲೆ ಹೇಳಿದ 'ರಾಮಾಯಣ'ಗಳು ಇನ್ನೆನಿತೋ, ಅದರ ಕರ್ತೃಗಳೆನಿತೋ - ಐನೂರು ವರ್ಷವಾದ ಮೇಲೆ ಈಗ ಇನ್ನೂ ಇನ್ನೆನಿತೋ! ಭೂಮಿ ಬಿರಿಯದಿರುವುದು ಹೆಚ್ಚು - ಆಕೆಯ ತಾಳಿಕೆ ಅಮೋಘವಾದದ್ದು. ಹೀಗೆ ಭೂಮಿಗೆ ಭಾರವಾದ ರಾಮಾಯಣದ ಕರ್ತೃಗಳಿಗೆ ಎಲ್ಲಾದರೂ ಪ್ರಶಸ್ತಿ ಕೊಡುವುದುಂಟೇ - ಅದೂ "ರಾಮಾಯಣವನ್ನು ಸುಡಿ" "ರಾಮನಿಗೆ ಚಾವಟಿಯಲ್ಲಿ ಹೊಡೆಯಿರಿ" ಮೊದಲಾದ 'ಭೂಭಾರವನ್ನಿಳಿಸುವ' ಅಭಿಯಾನಗಳು ಜೋರಾಗಿ ನಡೆಯುತ್ತಿರುವ ಈ ಕಾಲದಲ್ಲಿ! ಎಲ್ಲೋ ಭ್ರಾಂತು. ಅದಕ್ಕೇ ಹೇಳಿದ್ದು, ದೇವೇಗೌಡರಿಗೆ ಈ ಪ್ರಶಸ್ತಿ ಸಂದದ್ದು ಅವರ 'ರಾಮಾಯಣ'ಕೃತಿಸರಣಿಗೆ ಅಲ್ಲ, ಅಲ್ಲ, ಖಂಡಿತಾ ಅಲ್ಲ ಎಂದು.
ಹಾಗಿದ್ದರೆ ಕುಶೀಲವರಂತಹ ಇಬ್ಬರು ಮುದ್ದು ಮಕ್ಕಳನ್ನು ಹೆತ್ತುದಕ್ಕೋ? ಅದಕ್ಕೂ ಇರಲಾರದು. ಈ ದೇಶದಲ್ಲಿ ಮಕ್ಕಳ ಸಂಖ್ಯೆಯಂತೂ ರಾಮಾಯಣದ ಕವಿಗಳ ಸಾವಿರಪಟ್ಟು ಹೆಚ್ಚು. ಮಕ್ಕಳ ಹೆತ್ತುದಕ್ಕೆ ಪ್ರಶಸ್ತಿ ಕೊಡಲು ಇದೇನು ಆಸ್ಟ್ರೇಲಿಯಾ ಕೆಟ್ಟುಹೋಯಿತೇ?

ಹಾಗಿದ್ದರೆ ಮತ್ತೇತಕ್ಕೆ ಈ ಪ್ರಶಸ್ತಿ? ಊಹಾಪೋಹಗಳನ್ನು ಪಕ್ಕಕ್ಕಿಡಿ - ಕೆಳಗಿನ ನ್ಯೂಸ್ ಐಟಮ್ ನೋಡಿ - ಈ ಪ್ರಶಸ್ತಿಯನ್ನು ಕೊಡಮಾಡಿದ್ದು "ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ"ದ್ದಕ್ಕಾಗಿ - ರಾಮಾಯಣಕ್ಕಾಗಿ ಅಲ್ಲ - ವಾಲ್ಮೀಕಿಯೆಂದರೆ ರಾಮಾಯಣವೊಂದನ್ನೇ ಕಾಣುವುದು ನಿಮ್ಮದೇ ದೃಷ್ಟಿದೋಷವೆನ್ನದೇ ವಿಧಿಯಿಲ್ಲ. ಅದಿರಲಿ, ಸ್ವತಃ ರಾಮನಿಂದ ಶೂದ್ರತಪಸ್ವಿಯ ಕೊಲೆ ಮಾಡಿಸಿದ, ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಗರ್ಭಿಣಿಯೆಂಬುದನ್ನೂ ನೋಡದೇ ಕಾಡಿಗಟ್ಟಿಸಿದ, ದಿಟ್ಟತೆಯಿಂದ 'ಬ್ರಾಹ್ಮಣ್ಯ'ವನ್ನು ತೊರೆದು ಪ್ರಗತಿಪರತೆಯ ದೀಕ್ಷೆತೊಟ್ಟ ರಾವಣೇಶ್ವರನನ್ನೂ ಕೊಲ್ಲಿಸಿದ, ಕಬಂಧ ಮಾರೀಚ ಸುಬಾಹುಗಳೇ ಮೊದಲಾದ ಈ ನೆಲದ ಜನಪ್ರಿಯ ದ್ರಾವಿಡರಾಜರನ್ನು ಬರ್ಬರವಾಗಿ ಕೊಲ್ಲಿಸಿದ, ಪ್ರೇಮಭಿಕ್ಷೆ ಬೇಡಿ ಬಂದ ಶೂರ್ಪಣಖಿಯ ಕಿವಿಮೂಗು ಕೊಯ್ಸಿದ ವಾಲ್ಮೀಕಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದು ಯಾವಾಗ ಎಂದು ನೀವು ಕೇಳಿದರೆ, ಅದು ನಿಮ್ಮ ಅಜ್ಞಾನದ ಪ್ರಶ್ನೆ, ಏಕೆಂದರೆ ಅದು ಕೇವಲ ಕಾವ್ಯ, ಕಟ್ಟುಕತೆ. ಗೊತ್ತಿಲ್ಲವೇ? "ಸೇತುಬಂಧ ಮಾಡಿಸಿದ ರಾಮ ಯಾವ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್ ಡಿಗ್ರೀ ಪಡೆದ" ಎನ್ನುವ ದಿವಂಗತ ರಾಜಕಾರಣಿಯೊಬ್ಬರ ಪ್ರಶ್ನೆಗೆ ಪುರಾವೆಯೊದಗಿಸಲು ಇನ್ನೂ ನಮ್ಮಿಂದ ಆಗಿಲ್ಲ. ರಾವಣನಿಗೆ ಹತ್ತು ತಲೆಯಿತ್ತೆಂಬುದೂ ನಂಬಲಾಗದ ವಿಷಯವೇ, ಒಂದು ತಲೆಯೇ ಅಚ್ಚರಿಯ ವಿಷಯವಾದ ಈ ಕಾಲದಲ್ಲಿ.

ಆದ್ದರಿಂದ ರಾಮಾಯಣವು ಸತ್ಯಕತೆಯೆನ್ನುವ ಮೌಢ್ಯಕ್ಕೆ ಬೀಳದಿರಿ (ಮೌಢ್ಯವಿರೋಧಿ ಕಾನೂನು ಜಾರಿಯಲ್ಲಿದೆಯೆಂಬುದನ್ನು ಮರೆಯದಿರಿ). ರಾಮನೆಂಬ ಆರ್ಯರಾಜನ ದುಷ್ಟಗುಣವನ್ನು ಚಿತ್ರಿಸಲು ವಾಲ್ಮೀಕಿ ರಚಿಸಿದ ಕಟ್ಟುಕತೆಯಿದು (ಅಲ್ಲದೇ ಸುಮಾರು ಭಾಗಗಳನ್ನು ಆಮೇಲೆ ಬ್ರಾಮಣರು ಸೇರಿಸಿದರೆಂಬ ವಾದವೂ ಇದೆ). ಆದ್ದರಿಂದ ಇವೆಲ್ಲಕ್ಕೂ ವಾಲ್ಮೀಕಿಯ ಬೆಂಬಲವಿತ್ತೆಂದು ಭಾವಿಸದಿರಿ. ನಿಜವಾದ ಕತೆಯಲ್ಲಿ ಆಮೇಲೆ ನೋಡಿ, ಅದೇ ವಾಲ್ಮೀಕಿ ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಆಶ್ರಮದಲ್ಲಿರಿಸಿಕೊಂಡು ತಂದೆಯಂತೆ ಪೊರೆಯುತ್ತಾನೆ; ಆಕೆಯ ಮಕ್ಕಳನ್ನು ತಾತನಂತೆ ಸಾಕುತ್ತಾನೆ; ಅವರಿಗೆ ತಾನು ರಚಿಸಿದ ರಾಮಕಥೆಯನ್ನು ಕಲಿಸಿ, ರಾಮನ ಬಳಿಗೇ ಕಳಿಸಿ ಅವನಿಗೆ ಬುದ್ಧಿ ಕಲಿಸುತ್ತಾನೆ. ಹೀಗೆ ವಾಲ್ಮೀಕಿ ಕೇವಲ ತನ್ನ ಜನಾಂಗಕ್ಕಲ್ಲ ಇಡೀ ತುಳಿತಕ್ಕೊಳಗಾದ ಎಲ್ಲರ ಸೆಕ್ಯುಲರ್ ಪ್ರತಿನಿಧಿಯಾಗಿ ನಿಲ್ಲುತ್ತಾನೆ.

ಅದೇನೋ ಸರಿ, ಆದರೆ ವಾಲ್ಮೀಕಿ ಪ್ರಶಸ್ತಿ ಪಡೆಯಲು ದೇವೇಗೌಡರು ವಾಲ್ಮೀಕಿ ಜನಾಂಗಕ್ಕಾದರೂ ಏನು ಮಾಡಿದರು ಎಂದು ಕೇಳಬೇಡಿ. ಅವರೂ ಬಹಳ ಸೆಕ್ಯುಲರ್ ಆಗಿ ಹಿಂದುಳಿದವರನ್ನು ಮುಂದೆ ತರಲು, ಕೆಳಗೆ ಬಿದ್ದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಏನೂ ಏನೇನೂ ಏನೇನೇನೂ ಇಲ್ಲದವರೆಷ್ಟೋ ಜನ ಅವರ ಕೃಪಾಕಟಾಕ್ಷದಿಂದ ಇಂದು ಲಕ್ಷ್ಮೀಪುತ್ರರಾಗಿ ಸುಖಜೀವನ ನಡೆಸುತ್ತಿದ್ದಾರೆ. ಎಂದ ಮೇಲೆ ಈ ಪ್ರಶಸ್ತಿಗೆ ಅವರಿಗಿಂತ ಹೆಚ್ಚಿನವರಾರು ಯೋಗ್ಯರಿದ್ದಾರು? ಆದ್ದರಿಂದ ಇದು ಖಂಡಿತಾ ಸರಿಯಾದ ಆಯ್ಕೆ ಎಂದು ನನ್ನ ಅನಿಸಿಕೆ.

ಅಂದ ಹಾಗೆ ವಾಲ್ಮೀಕಿಯ ಜನ್ಮದಿನವನ್ನು ಅದಾವ ಇತಿಹಾಸಕಾರರು ಅದು ಹೇಗೆ ಲೆಕ್ಕ ಹಾಕಿದರೋ ತಿಳಿಯದು - ಹೇಗಿದ್ದರೇನು? ಪುಣ್ಯಸ್ಮರಣೆಗೊಂದು ನೆಪ ಸಾಕಲ್ಲವೇ? ಈ ಜಗತ್ತಿಗೆ ರಾಮಾಯಣವೆಂಬ ಬಹುದೊಡ್ಡ ಉಡುಗೊರೆಯನ್ನಿತ್ತ ಮಹರ್ಷಿ ವಾಲ್ಮೀಕಿಯ ದಿವ್ಯಚೇತನ ನಮ್ಮೆಲ್ಲರನ್ನೂ ಪೊರೆಯಲಿ, "ಸೀತಾಯಾಶ್ಚರಿತಂ ಮಹತ್" ಆದ ರಾಮಾಯಣಕಾವ್ಯವು ನಮ್ಮೆಲ್ಲರ ಹೃದಯಗಳನ್ನು ಹದಗೊಳಿಸಲಿ, ಮೆದುಗೊಳಿಸಲಿ, ನಮ್ಮ ಭಾವದಾರಿದ್ರ್ಯವನ್ನು ಹಿಂಗಿಸಲಿ, "ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ" ಎಂದು ನವನಿಷಾದರನ್ನು ಶಪಿಸಬೇಕಾದ ದೌರ್ಭಾಗ್ಯವು ಶೀಘ್ರವಾಗಿ ತಪ್ಪಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್

(ಈ ಲೇಖನವನ್ನು ಫೇಸ್ಬುಕ್ಕಿನಲ್ಲಿಯೂ ನೋಡಬಹುದು)