ದೀವಳಿಗೆಯ ಲಯಕ್ಕೆ ಹೊಂದುವಂತೆ ಕೆಲವು ಲಯಗಳು ಮನಕ್ಕೆ ಹೊಳೆದುದರ ಫಲವೇ ಈ ಕವನ. ಇದು ನಡುಗನ್ನಡದ "ರಗಳೆ" ಛಂದಸ್ಸನ್ನು ಬಹುತೇಕ ಹೋಲುತ್ತದೆಯಾದರೂ ಅಲ್ಲಲ್ಲಿ ಕವನದ ಓಟಕ್ಕೆ ತಕ್ಕಂತೆ ಛಂದಸ್ಸನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಿದ್ದೇನೆ. ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು ಲಲಿತ ರಗಳೆಗಳು ಇಲ್ಲಿ ಕಾಣಬರುವ ಛಂದೋರೂಪಗಳು. ಈ ಪದ್ಯದ ಉದ್ದೇಶವೇ ಹಬ್ಬದ, ಸಂಭ್ರಮದ, ಸ್ವಚ್ಛಂದದ ಅಂದವನ್ನು ಹಿಡಿಯುವುದಾದ್ದರಿಂದ ಪದ್ಯದ ಗಾತ್ರವನ್ನು ನಿಯಂತ್ರಿಸಲು ನಾನು ಯತ್ನಿಸಿಲ್ಲ. ಆದ್ದರಿಂದ ಪದ್ಯ ತುಸು ಉದ್ದವೇ ಬೆಳೆದಿದೆಯೆನ್ನಬೇಕು. ಪಟಾಕಿ ಹೊಡೆಯುವ ಮಕ್ಕಳ ಸಂಭ್ರಮವನ್ನು ಮೊಟಕುಗೊಳಿಸಿ ಊಟಕ್ಕೆಳೆದುಕೊಂಡು ಬಂದರೆ ಇಷ್ಟಪಡುವರೇ?
ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ
ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ
ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ
ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!
ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ
ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ
ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್
ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್
ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ
ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್
ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ