"ಸಾರ್, ಅಭಿನಂದನೆಗಳು" ಎಂದು ಗೆಳೆಯ ರಘು ಅಭಿನಂದಿಸಿದಾಗ ಏಕೆಂದು ಗೊತ್ತಾಗಲಿಲ್ಲ. ಮನೆ ಬದಲಿಸುವ ಗಡಿಬಿಡಿಯಲ್ಲಿ TV ಮುಂತಾದುವನ್ನೆಲ್ಲಾ ಕಟ್ಟಿಟ್ಟಿದ್ದಾಗಿತ್ತು. ದಿನಪತ್ರಿಕೆಯಲ್ಲೂ ಅಂಥಾ ಅಭಿನಂದನಾರ್ಹವಾದ ಸುದ್ದಿಯೇನೂ ಪ್ರಕಟವಾಗಿರಲಿಲ್ಲ. ನನಗಂತೂ ಯಾವ ಪ್ರಶಸ್ತಿಯೂ ಪ್ರಕಟವಾಗಿರಲಿಲ್ಲ (ಯಾವ ಪ್ರಶಸ್ತಿಗೂ ಅರ್ಜಿ ಹಾಕಿದ್ದ ನೆನಪೂ ಇಲ್ಲ)! ಆದ್ದರಿಂದ ನಾನು ಏಕೆಂದು ಕೇಳಿದಾಗ ಅವರಿಗೆ ಆಶ್ಚರ್ಯವಾಗಿರಲಿಕ್ಕೆ ಸಾಕು. "ಕೊನೆಗೂ ಕನ್ನಡಕ್ಕೆ ಪುರಸ್ಕಾರ ಕೊಡಿಸಿಬಿಟ್ರಲ್ಲ ಸಾರ್..." ಎಂದರು. ಯಾವ ಪುರಸ್ಕಾರ ಎಂದಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ ಎಂದು ತಿಳಿಯಿತು. "ಓ ಹೌದಾ" ಎಂದು ಹೇಳಿ ಸುಮ್ಮನಾದೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ! ಇಡೀ ನಾಡಿಗೆ ನಾಡೇ ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಿಸುತ್ತಿದೆ; ಎಲ್ಲೆಲ್ಲೂ ಉತ್ಸಾಹ ಉಕ್ಕಿ ಹರಿಯುತ್ತಿದೆ; ಅಂಥಾದ್ದರಲ್ಲಿ ನನ್ನ ತಣ್ಣನೆಯ ಪ್ರತಿಕ್ರಿಯೆ ಅವರಿಗೆ ಕೊಂಚ ನಿರಾಸೆ ಮೂಡಿಸಿರಲಿಕ್ಕೆ ಸಾಕು. ಆ "ಓ ಹೌದಾ" ದಲ್ಲಿ "ಏನೀಗ?", "ಅದರಲ್ಲಿ ಖುಶಿ ಪಡುವುದೇನಿದೆ?" ಇತ್ಯಾದಿ ಅನೇಕ ಪ್ರಶ್ನೆಗಳು ಅವರಿಗೆ ಕಂಡಿರಬೇಕು. ಇವನ ಬಳಿ ಮಾತೇನು ಎಂದುಕೊಂಡು ಸುಮ್ಮನಾದರು.
E-mail ನೋಡಲೆಂದು ತೆರೆದರೆ mail-box ತುಂಬಿಹೋಗಿತ್ತು. ಅಭಿಮಾನ, ಅಭಿನಂದನೆ, ಒಂದುರೀತಿ ಸಾರ್ಥಕ ಭಾವ, ಇಷ್ಟಕ್ಕೇ ನಿಲ್ಲಬಾರದು, ಕನ್ನಡ ಆಡಳಿತಭಾಷೆಯಾಗಬೇಕು ಎಂಬ ಕರೆ, "ಎಲ್ಲಾದರು ಇರು ಎಂತಾದರು ಇರು... ", "ಸತ್ಯಮೇವ ಜಯತೇ..." ವಿವಿಧ ರೀತಿಯ ಪ್ರತಿಕ್ರಿಯೆಗಳ ಸಂತೆಯೇ ಅಲ್ಲಿತ್ತು. ಕೊನೆಗೂ ಕನ್ನಡಕ್ಕೆ ಪುರಸ್ಕಾರ; ಕೊನೆಗೂ... ಕೊನೆಗೂಊಊ... ಏಕೋ ಆ "ಕೊನೆಗೂ" ಎನ್ನುವ ಶಬ್ದ ಮನಸಿಗೆ ಒಂದುರೀತಿ ಪಿಚ್ಚೆನ್ನಿಸ ಹತ್ತಿತು. ನೂರು ಪ್ರಶ್ನೆಗಳು.
"ಕೊನೆಗೂ" ಯಾವುದರ ಕೊನೆ? ನಮ್ಮ ಉಗ್ರ ಹೋರಾಟದ ಕೊನೆಗೇ? ಕನ್ನಡ ಏರಬಹುದಾದ ಎತ್ತರದ ಕೊನೆಗೇ? ನಮ್ಮ ದೇಶದಲ್ಲಿ ಪುರಸ್ಕಾರಗಳ ಭಿಕ್ಷೆಗೆ ಕಾದು ಕುಳಿತ ಸಾಲಿನ ಕೊನೆಗೇ?... ಉತ್ತರ ಹೊಳೆಯಲಿಲ್ಲ. ಯೋಚಿಸಿದಷ್ಟೂ ಈ ಸಂಭ್ರಮದಲ್ಲಿ ನಮ್ಮ ಹೆಮ್ಮೆಗಿಂತಾ ನಮ್ಮ ಕೀಳರಿಮೆಯೇ ಒಡೆದು ಕಂಡಿತು.
ಸ್ಥಾನ-'ಮಾನ' ಹೊಡೆದಾಡಿ ಸಂಪಾದಿಸುವಂಥದ್ದೋ, ಅಥವಾ ಯೋಗ್ಯತೆಯನ್ನು ನೋಡಿದ ಯೋಗ್ಯರು (ಅಕಸ್ಮಾತ್ ಅಂಥವರೊಬ್ಬರು ಇದ್ದರೆ) ತಾವಾಗಿ ಕೊಡ ಮಾಡುವ ಮರ್ಯಾದೆಯೇ? (ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಕರೆಯುವ, ಮುಖ್ಯ ಅತಿಥಿಯ ಪರಿಚಯ ಭಾಷಣಕ್ಕಾಗಿ ಅವರಿಂದಲೇ "ಬಯೋ ಡಾಟಾ" ಕೇಳುವ ಸಂಸ್ಕೃತಿ ನಮ್ಮದು, ಇರಲಿ).
ಕನ್ನಡ ಒಂದು "classical" ಭಾಷೆ ಎನ್ನುವುದರಲ್ಲಿ ಎರಡು ಮಾತಿಲ್ಲ - ಅದರ ಹಿರಿಮೆಯಲ್ಲಿ, ಹಳಮೆಯಲ್ಲಿ, ಭಾಷೆಯ ಬಹುಶ್ರುತತೆಯಲ್ಲಿ, ಗತ್ತು-ಗಾಂಭೀರ್ಯಗಳಲ್ಲಿ, ಸಾಹಿತ್ಯ ಸಿರಿಯಲ್ಲಿ. ಪಂಪನಿಂದ ಹಿಡಿದು ಕುವೆಂಪುವಿನವರೆಗೆ ಬೆಳೆದು ಬಂದ ಸಾಹಿತ್ಯ ರಾಶಿಯಲ್ಲಿ ಜಗತ್ತಿನ ಶ್ರೇಷ್ಠ "classic"ಗಳ ಸಾಲಿಗೆ ನಿಲ್ಲುವ ಕೃತಿಗಳು ಬೇಕಾದಷ್ಟಿವೆ. ಈ ದೃಷ್ಟಿಯಿಂದ, ತಮಿಳನ್ನು "classic" ಎಂದು ಪರಿಗಣಿಸುವುದಾದರೆ (ಅಥವ ಪರಿಗಣಿಸದಿದ್ದರೂ) ಕನ್ನಡ ಖಂಡಿತಾ ಒಂದು "classic" ಭಾಷೆಯೇ ಸರಿ. ಆದರೆ ಕೇಂದ್ರ ಕನ್ನಡಕ್ಕೆ ಏಕೆ "ಶಾಸ್ತ್ರೀಯ ಭಾಷೆ" ಸ್ಥಾನ ಕೊಟ್ಟಿರಲಿಲ್ಲ, ತಮಿಳಿಗೆ ಮಾತ್ರಾ ಕೊಟ್ಟಿತ್ತು? ಅದರರ್ಥ ತಮಿಳು ಮಾತ್ರಾ ನಿಜಕ್ಕೂ ಶಾಸ್ತ್ರೀಯ ಭಾಷೆ, ಕನ್ನಡ ಅಲ್ಲ ಎಂದೇ? ಅಥವಾ ಕೇಂದ್ರ, ತಮಿಳನ್ನು ಅಭ್ಯಾಸ ಮಾಡಿದಷ್ಟು ಆಳವಾಗಿ ಕನ್ನಡವನ್ನು ಮಾಡಲಿಲ್ಲ ಎಂದೋ? ಅಥವಾ ತಮಿಳು ವಾದ್ಯಾರುಗಳ ಸಂಖ್ಯೆ ಕೇಂದ್ರ ಸಮಿತಿಗಳಲ್ಲಿ ಹೆಚ್ಚಿತ್ತು ಎನ್ನೋಣವೇ? ನನ್ನ ದೃಷ್ಟಿಯಲ್ಲಿ ಕಾರಣ ಇದಾವುದೂ ಅಲ್ಲ; ಎದ್ದು ಕಾಣುವ ತಮಿಳುತನದ ಉಪಸ್ಥಿತಿಯೇ (ಹಾಗೂ ಕನ್ನಡತನದ ಅನುಪಸ್ಥಿತಿ) ಬಹುಶಃ ಇದಕ್ಕೆ ಕಾರಣ.
ಇವತ್ತೂ ನೀವು ದಿಲ್ಲಿಗೆ ಹೋದರೆ ಅವರು ನಿಮ್ಮನ್ನು ನಿರ್ದೇಶಿಸುವುದು "ಮದ್ರಾಸೀ" ಎಂದೇ (ದಕ್ಷಿಣದವನು ಎಂದರ್ಥ). ರಾಜಕೀಯವಾಗಿ ಹಿಂದಿಯ ಸಾಂಪ್ರದಾಯಿಕ "ವೈರಿ" ತಮಿಳು (ಉತ್ತರ ಅಂದರೆ ಹಿಂದೀ, ದಕ್ಷಿಣ ಅಂದರೆ ತಮಿಳು!). ಅವನು ನಿಮ್ಮನ್ನು ತಿರಸ್ಕರಿಸಿದರೂ "ಮದ್ರಾಸೀ" ಎಂದೇ ತಿರಸ್ಕರಿಸುವುದು. ಪುರಸ್ಕರಿಸಿದರೂ "ಅವನು ಮದ್ರಾಸಿಯಾದರೆ ಏನು, ಅವನೂ ನಮ್ಮಂತೆಯೇ ಭಾರತೀಯನಲ್ಲವೇ" ಎಂದೇ ಪುರಸ್ಕರಿಸುವುದು. ಏಕೆ? ನಾವು ಎಲೆಮರೆಯ ಕಾಯಿಗಳು; ಯಾವುದಕ್ಕೂ ಅಡಾವುಡಿ ಮಾಡಿಕೊಂಡು ಮುಂದೆ (ಮೇಲೆ) ಬಿದ್ದು ಹೋಗುವುದಿಲ್ಲ; ನಮಗೆ ಬರಬೇಕಾದ್ದನ್ನೂ ನಾವು ಬಾಯಿ ಬಿಟ್ಟು ಕೇಳುವುದಿಲ್ಲ. ಉದಾಹರಣೆಗೆ ನೋಡಿ, ಹಿಂದಿ ರಾಜಭಾಷೆಯಾಗಿ ದೇಶದೆಲ್ಲೆಡೆ ಜಾರಿಯಲ್ಲಿದೆ, ತಮಿಳುನಾಡೊಂದನ್ನು ಬಿಟ್ಟು! - https://rajbhasha.gov.in/en/official-language-rules-1976. ಕೇಂದ್ರ, ತನ್ನ ಹಿಂದಿ ಸಂಬಂಧಿತ ಭಾಷಾ ನಿಯಮಗಳಲ್ಲಿ ತಮಿಳುನಾಡಿಗೆ ಸ್ಪಷ್ಟ ವಿನಾಯಿತಿ ನೀಡಿದೆ, ಏಕೆ? ತಮಿಳರು ಹಿಂದಿ ಬೇಡವೆಂದರು, ಬೇಡ. ನಾವು ಅವರೊಂದಿಗೆ ಕೈ ಕೂಡ ಜೋಡಿಸಲಿಲ್ಲ (ನಮಗೆ ಆ ಒಗ್ಗಟ್ಟು ಬೇಕೆನಿಸಲೂ ಇಲ್ಲ - ತಮಿಳು ನಮ್ಮ ಆಜನ್ಮ ವೈರಿ ತಾನೆ!).
ಇವತ್ತು ಇಬ್ಬರು ಕನ್ನಡಿಗರು ಬೇರೆಡೆ ಎಲ್ಲಾದರೂ ಭೇಟಿಮಾಡಲಿ, ಅವರು ಮಾತಾಡುವುದು ಹಿಂದಿಯಲ್ಲಿ (ಅಥವ englishನಲ್ಲಿ). ಎದುರಿನ ಪ್ರಾಣಿ ಕನ್ನಡದವನೆಂದು (ಬೇರೆ ಯಾರಿಂದಲಾದರೂ) ತಿಳಿಯುವವರೆಗೂ ಇದು ಮುಂದುವರೆಯುತ್ತದೆ. ಆಮೇಲೆ ಕೂಡ ಏಕಾಂತದಲ್ಲಿ ಮಾತ್ರ ಕನ್ನಡ. ಗುಂಪಿನಲ್ಲಿ ಗುಂಪು ಭಾಷೆ (ಹಿಂದಿ/english). ಗುಂಪಿನಲ್ಲಿ english ಮಾತಾಡುವುದು ತಪ್ಪೆನ್ನುತ್ತಿಲ್ಲ, ಉಳಿದವರಿಗೆ ಇರಿಸುಮುರಿಸಾಗಬಾರದು ಎನ್ನುವ ಶಿಷ್ಟಾಚಾರ, ಅದು ನಮ್ಮ ಹೆಮ್ಮೆ, ಸರಿ. ಅದೇ ತಮಿಳರ ವಿಷಯಕ್ಕೆ ಬನ್ನಿ. ಎದುರಿಗಿರುವ ವ್ಯಕ್ತಿ ತಮಿಳನಲ್ಲ ಎಂದು ಅವರಿಗೆ ತಿಳಿಯದ ಹೊರತು ಅವರು ತಮಿಳಿನಲ್ಲೇ ಮಾತಾಡುವುದು. ಹಾಗೆಂದು ಅವರೇನೂ ಹಟ ಹಿಡಿದು ತಮಿಳಿನಲ್ಲಿ ಮಾತಾಡುವುದಿಲ್ಲ; ನಿಮಗೆ ತಮಿಳು ಬರುವುದಿಲ್ಲವೆಂದರೆ ಪಾಪ englishನಲ್ಲಿ ಮಾತಾಡುತ್ತಾರೆ (ಅವರಿಗೆ ಗೊತ್ತಿದ್ದರೆ). ಆದರೆ default ಭಾಷೆ ತಮಿಳು. ನಮಗೆ? default language ರಾಜಭಾಷೆ (ಕನ್ನಡ ಕೇವಲ ನಮ್ಮ ಖಾಸಗೀ ಭಾಷೆ - ನಾವು ಕನ್ನಡ ಆಡಳಿತಭಾಷೆಯಾಗುವ ಬಗ್ಗೆ ಮಾತನಾಡುತ್ತೇವೆ!)
ಈ ನಮ್ಮ "ಮುದುರಿಕೊಳ್ಳುವ" ಗುಣವೇ, ಇವತ್ತು ನಮ್ಮನ್ನು ಮೂಲೆಗೆ ತಳ್ಳಿರುವುದು; ನಮ್ಮ ಸಣ್ಣ ಸಣ್ಣ ಹಕ್ಕುಗಳಿಗೂ ನಾವು "ಹೋರಾಟ" ಮಾಡಬೇಕಾದ ಪರಿಸ್ಥಿತಿ ತಂದಿರುವುದು; ನಮಗೆ ಜಗಳಗಂಟರೆಂದು ಹೆಸರು ತಂದುಕೊಟ್ಟಿರುವುದು (ಒಪ್ಪಿಕೊಳ್ಳೋಣ).
ನಮ್ಮ ಭಾಷೆಗೆ (ಯಾವ ಭಾಷೆಗೆ ಅದು ಯಥಾ ಸಹಜವಾಗೇ ಬರಬೇಕಿತ್ತೋ ಆ ಕನ್ನಡಕ್ಕೆ) ಇವತ್ತು ಈ "ಶಾಸ್ತ್ರೀಯ ಸ್ಥಾನ-'ಮಾನ'" ಬಂದಿರುವುದು ಈ "ಹೋರಾಟದ" ಫಲ (ಅತ್ತೂ ಕರೆದೂ...); ತೆಲುಗಿಗೂ ಬಂತು; ರಾಜಕೀಯ ಬಲವಿದ್ದರೆ ನಾಳೆ ಮಣಿಪುರಿಗೂ ಬರುತ್ತದೆ. ಅದಕ್ಕೊಂದು ಬೆಲೆಯೇ? ಇಷ್ಟಕ್ಕೂ ಕೊಟ್ಟವರು ಯಾರು? ಅವರ ಯೋಗ್ಯತೆಯೇನು?
ಈ ದೃಷ್ಟಿಯಲ್ಲಿ ನಮ್ಮ (ನನ್ನ) ನಿಲುವು ಪ್ರಾಯಶಃ ಇದು: ಕೇಂದ್ರ ಒಪ್ಪಲಿ ಬಿಡಲಿ, ಕನ್ನಡ ಶಾಸ್ತ್ರೀಯ ಭಾಷೆ(ಆಗಿತ್ತು, ಆಗಿದೆ, ಆಗಿರುತ್ತದೆ): ಹೇಗೋ ಇವತ್ತು ಇದನ್ನು official ಆಗಿ ಕೇಂದ್ರ ಪರಿಗಣಿಸಿದೆ, ತತ್ಪರಿಣಾಮವಾಗಿ ರಾಜ್ಯಕ್ಕೆ, ಭಾಷೆಯ ಬೆಳವಣಿಗೆಗೆ ಆರ್ಥಿಕ ಸಹಾಯ ಒದಗಬಹುದು, ಅದು ಒಳ್ಳೆಯದು (ಅದರ ಉಪಯೋಗ ಎಷ್ಟರಮಟ್ಟಿಗೆ ಆಗುತ್ತದೆಯೋ ನೋಡೋಣ); ಅದೇನೇ ಇರಲಿ ಕನ್ನಡಿಗರ ಭಾಷಾಜೀವನಕ್ಕಾಗಲೀ ಭಾವ ಜೀವನಕ್ಕಾಗಲೀ ಇದರ ಕೊಡುಗೆಯೇನೂ ಇಲ್ಲ; ನಮ್ಮ ಮುಂದಿನ ಸವಾಲುಗಳು ಮುಂಚಿನಂತೆಯೇ ಇಂದೂ ಇವೆ, ಅವು ಪ್ರಾಯಶಃ ಹೀಗಿವೆ:
ಸಾಂಸ್ಕೃತಿಕವಾಗಿ/ಭಾಷೆಗೆ ಸಂಬಂಧಿಸಿದಂತೆ:

- ನಮ್ಮ ಸಂಸ್ಕೃತಿ, ಪರಂಪರೆಗಳ ಬಗ್ಗೆ ಉತ್ತಮ ತಿಳಿವು.
- ನಮ್ಮ ನಡೆ-ನುಡಿಗಳಲ್ಲಿ ಕನ್ನಡತನ ಎದ್ದು ಕಾಣುವಂತೆ ರೂಪಿಸಿಕೊಳ್ಳುವುದು. ಉದಾಹರಣೆಗೆ ನಮ್ಮ ನೆಲದಲ್ಲಿದ್ದಾಗ by default ಕನ್ನಡವನ್ನೇ ಮಾತಾಡುವುದು (ಎದುರಿನ ವ್ಯಕ್ತಿಗೆ ಕನ್ನಡ ಬರುವುದಿಲ್ಲವೆಂದು ನಮಗೆ ತಿಳಿಯುವ ವರೆಗೂ - ಅದನ್ನು ತಿಳಿಯ ಪಡಿಸುವುದು ಅವನ ಕೆಲಸ; ನಾವು ಅವನ ಭಾಷೆ ತಿಳಿದುಕೊಂಡು ಮಾತಾಡುವ ಅಗತ್ಯವಿಲ್ಲ)
- ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯ ಓದುವ (ಬರೆಯುವ) ಹವ್ಯಾಸ ಬೆಳೆಸಿಕೊಳ್ಳುವುದು.
- ಅನ್ಯ ಭಾಷೆ/ಭಾಷಿಕರ ಬಗ್ಗೆ ಕೀಳರಿಮೆ/ಅಸಹನೆಗಳನ್ನು ನಿವಾರಿಸಿಕೊಳ್ಳುವುದು, ಸೌಹಾರ್ದ
- ಬೇರೆ ನೆಲದಲಿರುವಾಗ ಅಲ್ಲಿನ ಸ್ಥಳೀಯ ಭಾಷೆಗೆ ಅತ್ಯುಚ್ಛ ಗೌರವ/ಪ್ರಾಮುಖ್ಯ ನೀಡುವುದು (ಇದರಿಂದ ನಮ್ಮ ನೆಲದಲ್ಲಿ ನಾವು ಏನನ್ನು ನಿರೀಕ್ಷಿಸಬಹುದೆಂಬುದು ನಮಗೇ ಮನದಟ್ಟಾಗುತ್ತದೆ)
- ತಮಿಳರನ್ನು ಎಲ್ಲಾ ವಿಷಯದಲ್ಲೂ copy ಮಾಡುವುದನ್ನು ಬಿಡುವುದು, ಹಾಗೆಯೇ ಅವರಲ್ಲಿರುವ ಅನುಕರಣೀಯ ಅಂಶಗಳನ್ನು ಕಡೆಗಣಿಸದಿರುವುದು.
- ಮಕ್ಕಳಿಗೆ ಬೇರೆ ಯಾವ ಭಾಷೆಯನ್ನು ಕಲಿಸುವ ಮೊದಲು ಸ್ವಚ್ಛ ಕನ್ನಡದ ಕಲಿಕೆಗೆ ಒತ್ತು ನೀಡುವುದು. ಇದು ಕೇವಲ ಶಾಲೆಯಲ್ಲಿ ಆಗುವ ಮಾತಲ್ಲ, ಮನೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರಾಜಕೀಯವಾಗಿ
- ಭಾಷೆಯ ವಿಷಯದಲ್ಲಿ ಪಕ್ಷಪಾತ ನಡೆಯದಂತೆ ಎಚ್ಚರ ವಹಿಸುವುದು (ಉದಾಹರಣೆಗೆ ಮೇಲಿನ link ನೋಡಿ)
- ಆಡಳಿತ ಭಾಷೆಯಾಗಿ ಕನ್ನಡವನ್ನು ಸರ್ವಥಾ ಪ್ರೋತ್ಸಹಿಸುವುದು
- ಕನ್ನಡ ಆಡಳಿತ ಭಾಷೆ ಎಂದ ಮಾತ್ರಕ್ಕೆ ಅರ್ಥವಾಗದ ಸಂಸ್ಕೃತದ್ದೋ, ಅಥವಾ ಕನ್ನಡದ್ದೇಯೋ ಪದಗಳನ್ನು englishನ ಜಾಗದಲ್ಲಿ ಅಡಕಬೇಕೆಂದಲ್ಲ, ಭಾಷಾಂತರ ಅರ್ಥಪೂರ್ಣವಾಗಿರುವಂತೆ ನೋಡಿಕೊಳ್ಳುವುದು; ಹೇಳಬೇಕಾದ್ದನ್ನು ಅರ್ಥವಾಗುವಂತೆ ಕನ್ನಡದಲ್ಲಿ ಸ್ಪಷ್ಟವಾಗಿ ಹೇಳುವುದು
- ನಮ್ಮ ಕನ್ನಡಾಭಿಮಾನ/ಹೋರಾಟ ಪುಂಡಾಟಿಕೆಯಾಗದಂತೆ ಎಚ್ಚರ ವಹಿಸುವುದು
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು