ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದಂತಿತ್ತು. ಬಹುಶಃ ನಾವು ಈ ಚಾಳನ್ನು ಆರಿಸಿಕೊಳ್ಳಲು ಇದೂ ಒಂದು ಕಾರಣ.
ನಿವೇಶನದ ಬಹುಭಾಗ ಪಾಳು ಸುರಿಯುತ್ತಿದ್ದರೂ, ಮನೆಯ ಆಸುಪಾಸಿನಲ್ಲಿ ಸಾಕಷ್ಟು ಜಾಗದಲ್ಲಿ ಮನೆಯವರು ಹಬ್ಬಿಸಿದ್ದ ಮಲ್ಲಿಗೆ ಹಂಬು, ಜಾಜಿ, ಐದಾರು ಗುಲಾಬಿ ಗಿಡ - ಅದರ ಮೇಲೆ ಬೆಳಗು, ಸಂಜೆ, ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೀಸಿ ಬರುವ ತಂಗಾಳಿ ತೆರೆದ ಕಿಟಕಿಯ ಮೂಲಕ ನಮ್ಮ ಮನೆಯನ್ನೆಲ್ಲ ತುಂಬುತ್ತಿತ್ತು.
ಈ ಸೈಟಿನ ಪಕ್ಕ ಇನ್ನೊಂದು ಮನೆ. ಮನೆಯ ಯಜಮಾನ ಒಬ್ಬ ಶ್ರದ್ಧಾಳು ಬ್ರಾಹ್ಮಣ. ಯಾವುದೋ ಕೇಂದ್ರ ಸರಕಾರದ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ದಿನಾಲು ಬೆಳಗ್ಗೆ ಶುಭ್ರವಾಗಿ ಮೈತುಂಬಾ ವಿಭೂತಿ ಧರಿಸಿ, ರುದ್ರ-ಚಮಕಗಳನ್ನು ಪಠಿಸುತ್ತಾ ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದರು. ಈ ಸಮಯಕ್ಕೆ ಏಳುವ ಸುತ್ತ ಮುತ್ತಲ ಕೊನೇ ಪಕ್ಷ ನಾಲ್ಕೈದು ಮಕ್ಕಳು ಅವರಿಗೆ ಗುಡ್ ಮಾರ್ನಿಂಗ್ ಹೇಳಬೇಕು; ಅಲ್ಲೇ ಒಂದೈದು ನಿಮಿಷ ಮಕ್ಕಳೊಡನೆ ಕುಶಲೋಪರಿ, ನಂತರ ವೃದ್ಧರು ಪೂಜೆಗೆ ತೆರಳಬೇಕು. "ಗುಡ್ ಮಾರ್ನಿಂಗ್ ತಾತ" ಎಂದೇ ನಾವು ಅವರನ್ನು ನಿರ್ದೇಶಿಸುತ್ತಿದ್ದುದು.
ನಮ್ಮ ಪಕ್ಕದ ನಿವೇಶನ ಬಹುಪಾಲು ಪಾಳು ಸುರಿಯುತ್ತಿತ್ತು ಎಂದೆನಷ್ಟೆ? ಪಾಳು ಎಂದರೆ ನಿಜವಾಗಿ ಪಾಳೇನಲ್ಲ ಬಿಡಿ. ನಗರೀಕರಣದ ಸೋಂಕಿನಿಂದ ನನ್ನ ದೃಷ್ಟಿ ಪಲ್ಲಟವಾಗಿ ಬಂದ ಮಾತು ಅದು. ಪಾಳೆಂದರೆ, ಆ ಜಾಗವನ್ನು ಮನೆಯವರು ಯಾವುದಕ್ಕೂ ಬಳಸಿರಲಿಲ್ಲ ಎಂದಷ್ಟೇ ಅರ್ಥ. ಮತ್ತೇನನ್ನಾದರೂ ಕಟ್ಟಲು ಪಾಯವಾಗಲೀ, Land scaping ಅಥವಾ Gardening ಇತ್ಯಾದಿ ಸಂಸ್ಕಾರಗಳಾವುವೂ ಈ ಜಾಗಕ್ಕೆ ಆಗಿರಲಿಲ್ಲವೆಂದಷ್ಟೇ ಅರ್ಥ. ಸೈಟಿನ ಈಶಾನ್ಯ ಮೂಲೆಯಲ್ಲಿ ಚಿಕ್ಕ ರೂಮಿನಂಥದ್ದೊಂದು ಪಾಳು ಕಟ್ಟಡ, ಅಲ್ಲಲ್ಲಿ ಮುರಿದು ಬಿದ್ದ ಹಿಂಭಾಗದ ಕಾಂಪೌಂಡು ಗೋಡೆ, ಇವು ಈ ನಿವೇಶನಕ್ಕೆ ಪಾಳಿನ 'ಶೋಭೆ'ಯನ್ನು ತಂದಿತ್ತಿದ್ದುವು. ಮಿಕ್ಕಂತೆ ಹಸಿರೇನೋ ಸಮೃದ್ಧಿಯಾಗಿತ್ತು - ಅದನ್ನೂ ನೀವು ಹಸಿರೆಂದು ಒಪ್ಪುವುದಾದರೆ. ಯಾವಯಾವುದೋ ನೂರೆಂಟು ಜಾತಿಯ ಗಿಡ, ಬಳ್ಳಿಗಳು ಒತ್ತೊತ್ತಾಗಿ ಬೆಳೆದು ನಿಂತು ಒಂದು ಕಾಡನ್ನೇ ನಿರ್ಮಿಸಿದ್ದವು. ಹೀಗೆ ನಿರ್ಮಿತವಾದ ಆ ದಟ್ಟ ಪುಟ್ಟ ಅಭಯಾರಣ್ಯದಲ್ಲಿ, ವ್ಯಾಘ್ರದ ಠೀವಿಯಲ್ಲಿ ಬಾಲ ಝಳಪಿಸುತ್ತಾ ಹೊಂಚಿ ಕುಳಿತು ಇಲಿಬೇಟೆಯಾಡುವ ಮಾರ್ಜಾಲಗಳು (ಅಪರೂಪಕ್ಕೊಮ್ಮೆ ಗುಬ್ಬಿಯನ್ನೂ ಬೇಟೆಯಾಡಿದ್ದುಂಟು - ಗುಬ್ಬಚ್ಚಿ endangered species ಪಟ್ಟಿಯಲ್ಲಿರುವ ಪಕ್ಷಿ ಎಂದು ಅವಕ್ಕೆ ಹೇಗೆ ತಿಳಿಯಬೇಕು); ಕೀಚುಕೀಚೆನ್ನುತ್ತಾ ಅಲ್ಲಿದ್ದ ಬೇವಿನ ಮರದಿಂದ ಕಾಯಿ ಹೆಕ್ಕಿ ತಿನ್ನುತ್ತಾ ಒಂದನ್ನೊಂದು ಅಟ್ಟುತ್ತಾ ಗಲಭೆ ಮಾಡುವ ಅಳಿಲುಗಳು; ಸೈಟಿನ ವಾಯುವ್ಯಕ್ಕೆ (ಅಂದರೆ ನಮ್ಮ ಮನೆಗೆ ಚಾಚಿಕೊಂಡಂತೆ) ಹೊರವಾಗಿ ಬೆಳೆದು ನಿಂತಿದ್ದ ಮಾವಿನ ಮರ; ಅದರ ಚಿಗುರನ್ನೋ, ಹೂವನ್ನೋ ತಿನ್ನಲು ಬರುವ ಕೋಗಿಲೆಗಳು; ಚೈತ್ರವೋ ಶ್ರಾವಣವೋ ಬಂದರಂತೂ ಇವುಗಳ ಸುಗ್ಗಿಯೋ ಸುಗ್ಗಿ. ಬೆಳಗಿನಿಂದ ಸಂಜೆಯವರಗೂ ಒಂದೇ ಸಮನೆ ಕೂಗಿದ್ದೇ ಸೈ. ಕೋಗಿಲೆಯ ಸ್ವರ್ಗಸದೃಶ ಗಾನವನ್ನು ಬಣ್ಣಿಸಿ ತಣಿಯದ ಕವಿಯಿಲ್ಲ. ವರ್ಡ್ಸ್ ವರ್ತ್ ನಿಂದ ಹಿಡಿದು, ಕುವೆಂಪು, ಪು.ತಿ.ನ ವರೆಗೂ! ಬಳಸಿ ಬಳಸಿ ಅದೊಂದು ಸವಕಲು ಕವಿಸಮಯವಾಗಿಬಿಟ್ಟಿದೆ. ಆದರೂ, ಸವಕಲಾದದ್ದು ಕವಿಸಮಯವೇ ಹೊರತು ಕೋಗಿಲೆಯ ದನಿಯಲ್ಲವಲ್ಲ; ಅದು ನಿತ್ಯ ನೂತನ. ಹಾಗೆಂದೇ ಹೇಳುತ್ತೇನೆ, ಕೋಗಿಲೆಯ ಗಾನದ ಸವಿಯನ್ನು ಕೇಳಿಯೇ ಸವಿಯಬೇಕು.
ಕೋಗಿಲೆಯ ದನಿಯನ್ನು ಕೇಳದವರಾರು? ನಮ್ಮ ಕಚೇರಿಯ ಕರ್ಕಶ ವಾತಾವರಣದಲ್ಲೂ ಹೊರಗಿನ ಒಂದು ಅಬ್ಬೇಪಾರಿ ಮರದ ಮೇಲೆ ಕುಳಿತು ಕೋಗಿಲೆಯೊಂದು ಅಪ್ರಸ್ತುತವಾಗಿ ಆಲಾಪಿಸುತ್ತಿದ್ದುದನ್ನು ಕೇಳಿದ್ದೇನೆ. ಅದರಿಂದ, ಕಃ ಪದಾರ್ಥಗಳಾದ ಕಂಪ್ಯೂಟರು, ಲೆಡ್ಜರುಗಳಿಗೂ ಕೂಡ ಚೈತ್ರದ ಸೋಂಕು ಉಂಟಾಗುತ್ತಿದ್ದುದೂ, ಗಂಟುಮುಖದ ಬಾಸೂ ವಸಂತದೂತನಂತೆ ಕಾಣತೊಡಗುತ್ತಿದ್ದುದೂ ಅನುಭವಕ್ಕೆ ಬಂದಿದೆ. ಆದರೂ ಕೋಗಿಲೆಯ ಕರೆಯೆಂದರೆ ಇಷ್ಟೇ ಅಲ್ಲ. ಸಂಗಾತಿಯನ್ನು ಕರೆಯುವ ಅದರ ಉತ್ಕಂಠತೆ, ಮಾರ್ದವತೆ, ಒಂದು ವಿಧವಾದ ಯಾತನೆ-ಯಾಚನೆ, ಕೇಳಿಯೇ ಅನುಭವಿಸಬೇಕಾದ್ದು. ಆ ದನಿಯಲ್ಲಿನ ಖನಿ-ಇನಿ, ಅದರ ತೀಕ್ಷ್ಣತೆ, ಸ್ಪಷ್ಟತೆ, ಒಂದು ಸ್ತರದಿಂದ ಮತ್ತೊಂದಕ್ಕೆ ಜಾರುತ್ತಾ ಏರಿ, ಹಾಗೇ ಇಳಿದು ವಿರಮಿಸುವ ಪರಿ (ಸಂಗೀತದ ಪರಿಭಾಷೆಯಲ್ಲಿ ಇದನ್ನ ಗಮಕ ಅಂತೇವೆ), ನಿಮ್ಮ ಮನದ ಯಾವುದೋ ತಂತಿಯನ್ನು ಮೀಟಿ ಮಿಡಿಸುವ ಆ ಉತ್ಕಟತೆ, ಇನ್ನಿಲ್ಲದಂತೆ ಕೂಗಿ ಕರೆಯುವ ವಿಹ್ವಲತೆ (ಆದರೂ ಏಕೋ ಹೆಣ್ಣಿನ ಮನ ಕರಗದು - ಗಂಡಿನ ವಿಲಾಪ ನಿಲ್ಲದು!) ಇವನ್ನೆಲ್ಲಾ ಬರೇ ಕೇಳಿದರೆ ಸಾಲದು, ನಿಮ್ಮೆಲ್ಲಾ ಕೆಲಸಗಳನ್ನೂ ಕ್ಷಣ ಬಿಟ್ಟು ಅದಕ್ಕೆ ಕಿವಿಗೊಡಬೇಕು, ಮನಗೊಡಬೇಕು.
ಮಾವಿನ ಕಾಲಕ್ಕೆ ಈ ಮರದಲ್ಲಿ ಹೂವು-ಮಿಡಿ-ಹಣ್ಣುಗಳ ಹುಚ್ಚೇ ಹರಿಯುತ್ತಿತ್ತು. ಎಷ್ಟೋ ಬಾರಿ ಕಾಯಿ-ಹಣ್ಣುಗಳು ನಮ್ಮ ಬಾಲ್ಕನಿಯೊಳಗೆ ಉದುರುತ್ತಿದ್ದುದೂ ಉಂಟು. ಆಗಾಗ್ಗೆ ಮನೆಯವರು ಯಾರನ್ನಾದರೂ ಕರೆದು ಹಣ್ಣು ಕೀಳಿಸುತ್ತಿದ್ದರು.
ಉದ್ದಕ್ಕೂ ಈ ಜಾಗವನ್ನು ಖಾಲಿ ಜಾಗ, ಸೈಟು, ನಿವೇಶನ ಇತ್ಯಾದಿ ವ್ಯವಹಾರೀ ನಾಮಗಳಿಂದ ಕರೆಯುತ್ತಿದ್ದೇನಷ್ಟೇ? ಇದೂ ನನಗಂಟಿದ ನಗರೀಕರಣದ ಮತ್ತೊಂದು ವ್ಯಾಧಿಯೇ! ನಮ್ಮೂರಲ್ಲಿ ನಮಗೂ ಮನೆಯ ಹಿಂದೆ ಇಂಥದ್ದೇ ಜಾಗವಿತ್ತು. ಅದನ್ನು "ಹಿತ್ತಿಲು" ಎನ್ನುತ್ತಿದ್ದೆವು. ನಾವೇನು, ಎಲ್ಲರೂ ಅದನ್ನು ಹಾಗೇ ಕರೆಯುವುದು ಎನ್ನಿ. ಮನೆಯ ಹಿತ್ತಿಲು "ಖಾಲಿ ಜಾಗ", "ಸೈಟು" ಇತ್ಯಾದಿ ಆಗುವುದು ಬೆಂಗಳೂರಿನಂಥ 'ಮುಂದುವರೆದ' ಊರುಗಳಲ್ಲಿ ಮಾತ್ರ. ಒಂದಂಗುಲವೂ ಚಿನ್ನದಷ್ಟು ಬೆಲೆಬಾಳುವ ಇಲ್ಲಿ, ಹಿತ್ತಿಲ ಗಿಡದ ಮದ್ದು ಬಲು ದುಬಾರಿ. ಅದಕ್ಕಿಂತ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಲುಗಳೇ ಅಗ್ಗ!
ಇರಲಿ, ಇದನ್ನು ನಮ್ಮ ಸಮಾಧಾನಕ್ಕಾದರೂ ಹಿತ್ತಿಲು ಎಂದೇ ಕರೆಯೋಣ. ಈ ಹಿತ್ತಿಲಿನ ನಡುವೆ ಒಂದು ಬಾವಿ, ಪಕ್ಕ ಒಂದು ನೀರಿನ ತೊಟ್ಟಿ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಕಟ್ಟೆ. ಅಲ್ಲಿ ನೀರು ಕುಡಿಯಲು ಬಂದು ದಿನವೆಲ್ಲ ಸದ್ದುಮಾಡುವ ಕಾಗೆಗಳು, ಮೈನಾ, ಮತ್ತೆಂಥದೋ ಹಕ್ಕಿಗಳು; ಈ ಶಬ್ದಸ್ರೋತಕ್ಕೆ ಅಲ್ಲಲ್ಲಿ ದೊರಕೊಳ್ಳುವ ಮೌನದ ವಿರಾಮ; ವಾಕ್ಯದ ನಡುವೆ ಅಲ್ಪ ವಿರಾಮವಿಟ್ಟಂತೆ ಕ್ಹೂ-ಕ್ಹೂ ಎಂದು ಎರಡೇ ಮಾತ್ರೆಯ ಸದ್ದು ಹೊರಡಿಸುವ ಗೀಜಗವೋ ಮತ್ತಾವುದೋ ಹಕ್ಕಿ. ಎರಡು ವರ್ಷದ ರಾಘವಾಂಕನನ್ನು ಎತ್ತಿಕೊಂಡು ಬಾಲ್ಕನಿಯಿಂದ ಅಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ ತೋರಿಸುತ್ತಾ, ವೀಕ್ಷಕ ವಿವರಣೆ ಕೊಡುತ್ತಾ ನಿಂತರೆ, ದಿನ ಕಳೆದದ್ದೇ ತಿಳಿಯದು (ಹೀಗೇ ನಮ್ಮೂರ ಮನೆಯ ಹಿತ್ತಿಲಲ್ಲಿ ದಿನವಿಡೀ ಓತಿಕ್ಯಾತಕ್ಕೆ ಕಲ್ಲು ಹೊಡೆಯುತ್ತಲೋ, ಏರೋಪ್ಲೇನ್ ಚಿಟ್ಟೆ ಹಿಡಿದು ಬಾಲಕ್ಕೆ ದಾರ ಕಟ್ಟಿ ಹಾರಿಸುತ್ತಲೋ, ಹಿತ್ತಿಲಲ್ಲಿ ಬೆಳೆದ ಟೊಮ್ಯಾಟೋ ಕಾಯಿ ಹಣ್ಣಾಗುವ ಕೌತುಕವನ್ನು ಗಮನಿಸುತ್ತಲೋ, ಮೊನ್ನೆ ತಾನೇ ನೆಟ್ಟ ಕುಂಬಳ ಬೀಜ ಮೊಳಕೆಯಾಗುವ ಬೆರಗನ್ನು ಅನುಭವಿಸುತ್ತಲೋ, ಒತ್ತಾಗಿ ಬೆಳೆದ ಹಿಪ್ಪುನೇರಳೆ ಹಿಂಡಿಲ ನಡುವೆ ಥಟ್ಟನೆ ಇಣುಕಬಹುದಾದ ದೆವ್ವವೊಂದನ್ನು ಹುಡುಕುತ್ತಲೋ, ಇಲ್ಲ, ಹಲ ವರುಷಗಳ ನಂತರ, ಹಾಗೇ ಗಿಡಗಳ ಪಾತಿ ಮಾಡುತ್ತಾ ನೀವಾರಶೂಕವನ್ನು ಕುರಿತು ಚಿಂತಿಸುತ್ತಲೋ, ಯಾವುದೋ ವರ್ಣವನ್ನೋ ಕೀರ್ತನೆಯನ್ನೋ ಗಟ್ಟಿ ಮಾಡುತ್ತಲೋ, ಕುವೆಂಪು ಸಾಹಿತ್ಯ ಸಹ್ಯಾದ್ರಿಯಲ್ಲಿ ಕಳೆದು ಹೋಗುತ್ತಲೋ ಬಾಲ್ಯ ಕೌಮಾರ್ಯಗಳ ಬಹುಪಾಲು ಕಳೆಯುವ ಬಾಲಭಾಗ್ಯ ನನ್ನದಾಗಿತ್ತೆಂದು ನೆನೆದರೆ ಬಹಳ ಸಂತಸವಾಗುತ್ತದೆ - ಹಾಗೇ ಪುಟ್ಟ ರಾಘವಾಂಕನ ಬಗ್ಗೆ ಮರುಕ ಕೂಡ)
ಇದು ಹಗಲಿನ ಚಿತ್ರವಾದರೆ, ಇರುಳಿನ ಚಿತ್ರವೇ ಬೇರೆ. ನಿಶೆಯ ನೀರವ ಮೌನವನ್ನು ಮುರಿಯಲೋಸುಗವಷ್ಟೇ ಕೂಗುವಂತೆ ಯಾವುದೋ ಪಕ್ಷಿ ಕಿಚುಕಿಚ್ಚೆಂದು ಕೂಗು ಹಾಕಿ ಸುಮ್ಮನಾಗುತ್ತದೆ. ಹಗಲಿನ ಸದ್ದಿನಂತೆ ನಿರಂತರವಾದ ಸದ್ದಲ್ಲ, ಅದು. ಈಗ ಕೂಗಿತು, ಮತ್ತೆ ಇನ್ನು ಐದೋ ಹತ್ತೋ ನಿಮಿಷಕ್ಕೆ ಮತ್ತೊಂದು ಚರಣ; ಮತ್ತೆರಡುಗಂಟೆ ಅಖಂಡ ಮೌನ. ಒಂದು ರಾತ್ರಿ - ಹನ್ನೆರಡರ ಸಮಯ, ಏತಕ್ಕೋ ಬಾಲ್ಕನಿಗೆ ಬಂದವನಿಗೆ ಪಕ್ಕದ ಹಿತ್ತಿಲಿನ ಬಾವಿಯ ಮೇಲೆ ಬೆಕ್ಕಿನಂಥದ್ದೇನೋ ಕುಳಿತದ್ದು ಕಾಣಿಸಿತು. ಬೆಕ್ಕು ಬಾವಿಯ ಮೇಲೆ ಕುಳಿತು ಏನು ಮಾಡುತ್ತಿದೆ ಇಷ್ಟು ಹೊತ್ತಿನಲ್ಲಿ, ಎಂದು ಹತ್ತಿರ ಬಗ್ಗಿ, ಕಣ್ಣು ಕೀಲಿಸಿ ನೋಡಿದರೆ ಕಂಡದ್ದು, ತನ್ನ ದೊಡ್ಡ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ನನ್ನತ್ತಲೇ ದುರುಗುಟ್ಟಿ ನೋಡುತ್ತಿದ್ದ ಗೂಬೆ. ನನ್ನನ್ನು ನೋಡುತ್ತಲೇ ಎದ್ದು ಕಿಚುಕಿಚ್ಚೆಂದು ಕೂಗುತ್ತಾ ಹಾರಿಹೋಯಿತು. ಗೂಬೆಗಳು "ಗೂ" ಎಂದು ಮಾತ್ರ ಕೂಗುತ್ತವೆ ಎಂದು ತಿಳಿದಿದ್ದ ನನಗೆ, ಇವುಗಳ ಇನ್ನೊಂದು ಪ್ರಭೇದ ಅರಿವಿಗೆ ಬಂದದ್ದು ಆಗಲೇ. ಇದು ಪ್ರತಿ ರಾತ್ರಿ ಅಲ್ಲಿ ಬಾವಿ ಕಟ್ಟೆಯ ಮೇಲೆ ಕೂರುತ್ತಿತ್ತು. ಏನು ಮಾಡುತ್ತಿತ್ತೋ, ದೇವರೇ ಬಲ್ಲ. ಮತ್ತೊಂದು ದಿನ ನೋಡಿದರೆ ತನ್ನ ಸಂಗಾತಿಯನ್ನೂ ಕರೆತಂದಿತ್ತು. ಈ ಜೋಡಿ ಗೂಗೆಗಳು ರಾತ್ರಿಯಿಡೀ ಅಲ್ಲಿ ಹಾಗೆ ಕುಳಿತೇ ಕಾಲ ಕಳೆಯುತ್ತಿದ್ದುವೆನಿಸುತ್ತದೆ. ಮತ್ತೊಂದು ಗಂಟೆ ಕಳೆದು ಮತ್ತೆ ಹೋಗಿ ನೋಡಿದರೆ ಅವು ಹಾಗೇ ಕುಳಿತಿದ್ದುವು, ಕೂತಿದ್ದ ಭಂಗಿಯಲ್ಲಾಗಲೀ ಜಾಗದಲ್ಲಾಗಲೀ ಕೊಂಚವೂ ಬದಲಾಗಿರಲಿಲ್ಲ. ಅವುಗಳನ್ನು ಗಮನಿಸುವ ಹಟಕ್ಕೆ ಬಿದ್ದು ಅಲ್ಲೇ ಸುಮಾರು ಒಂದು ಗಂಟೆ ನಿಂತೆ. ಉಹ್ಹೂಂ! ಎರಡೂ ಒಂದಿನಿತೂ ಕದಲಲಿಲ್ಲ. ಸುಮ್ಮನೇ ಕುಳಿತೇ ರಾತ್ರಿಯೆಲ್ಲ ಕಳೆಯುವ ಇವುಗಳ ಪರಿ ನನಗೆ ಸೋಜಿಗ ತಂದಿತು. "ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್" ಎಂದ ಶ್ರೀ ಕೃಷ್ಣ ಈ ಗೂಬೆಗಳನ್ನು ನೋಡಬೇಕಿತ್ತು! ಕರ್ಮ ನಿರಾಕರಣೆಯ ಪರಮಾವಧಿ! ಅದಾವ ಸಿದ್ಧಾಂತವನ್ನು ಹೇಗೆ ಅರಗಿಸಿಕೊಂಡಿದ್ದುವೋ, ಅದಾವ ಬ್ರಹ್ಮ ಜ್ಞಾನವನ್ನು ಗಳಿಸಿಕೊಂಡಿದ್ದುವೋ (wise old owls)
ಇನ್ನು ಮಳೆಗಾಲ ಬಂದರೆ ಇರುಳಲ್ಲಿ ಬೇರೊಂದು ಕಿನ್ನರ ಲೋಕವೇ ಸೃಷ್ಟಿಯಾಗುತ್ತಿತ್ತು. ಹಗಲೆಲ್ಲ ಎಲ್ಲಿರುತ್ತಿತ್ತೋ, ಕತ್ತಲೆ ಕವಿಯುವುದೇ ತಡ, ನೂರಾರು ಸಂಖ್ಯೆಯಲ್ಲಿ ಮಿಂಚು ಹುಳಗಳು ನಮ್ಮ ಈ ಹುಚ್ಚು ಕಾಡನ್ನು ಇಂದ್ರವನವನ್ನಾಗಿಸುತ್ತಿದ್ದವು.
ಆದರೇನು? ಸ್ವಪ್ನಲೋಕಕ್ಕೊಂದು ಕೊನೆಯಿರಲೇಬೇಕಲ್ಲವೇ? ಇರಲಿ. ಬೆಂಗಳೂರಿನ ಮಧ್ಯಭಾಗದಲ್ಲಿ ಬಸವನಗುಡಿಯಂತಹ posh ಏರಿಯಾಗಳಲ್ಲಿ ಏನಿಲ್ಲೆಂದರೂ ಕನಿಷ್ಠ ಐದಾರು ಕೋಟಿ ಬಾಳುವ ಈ ಜಾಗ ರಿಯಲ್ ಎಷ್ಟೇಟ್ ದಂಧೆಯ ಕಣ್ಣಿಗೆ ಬೀಳದೇ ಉಳಿದಿರುವುದು ಹೇಗೆ ಎಂಬ ನಮ್ಮ ಕೌತುಕ ಬಹುಕಾಲ ಉಳಿಯಲಿಲ್ಲ. ಮನೆಯವರು ಅಲ್ಪಸ್ವಲ್ಪ ಹಣಕಾಸಿನ ಮುಗ್ಗಟ್ಟಿನಲ್ಲಿದ್ದರೆಂದು ಹೇಗೋ ತಿಳಿದು ಬರುತ್ತಿತ್ತು. ಆದರೆ ಅದು ಬೀದಿಗೂ ಬಂದು, ಸಾಲಗಾರರು ಮನೆಯ ಮುಂದೆ ಹೀನಾಯವಾಗಿ ಮಾತಾಡತೊಡಗಿದಾಗ, ಪರಿಸ್ಥಿತಿ ಗಂಭೀರವಾಯಿತು. ಬೆಂಗಳೂರಿನಲ್ಲಿ ಬೆದರಿಸಿ ನೆಲ ಕಿತ್ತುಕೊಳ್ಳುವ (extrotion) ದಂಧೆ ಎಷ್ಟು ಪ್ರಬಲವಾಗಿದೆ ಎಂಬುದು ತಿಳಿಯದ್ದೇನಿಲ್ಲ. ಮನೆಯಾತ ಆರ್ಥಿಕವಾಗಿ, ಭಾವನಾತ್ಮಕವಾಗಿ ನಿಸ್ಸಹಾಯಕನಾಗಿ ಸ್ವತ್ತನ್ನು ಬಂದಷ್ಟಕ್ಕೆ ಮಾರಿ ಕೈ ತೊಳೆದುಕೊಳ್ಳುವಂತೆ ಒತ್ತಡ ತರುವುದು ಇವರ ಕಾರ್ಯ ತಂತ್ರಗಳಲ್ಲೊಂದು. ಮುಂದೆ ನಡೆದದ್ದೆಲ್ಲ ಬಲು ಕ್ಷಿಪ್ರ ಗತಿಯಲ್ಲಿ ನಡೆಯಿತು. ಈ ಮನೆಯ ಆಚೆಬದಿಯ ಮನೆ ಆಗಲೇ ನೆಲಕ್ಕುರುಳಿತ್ತು. ಆ ಚಿಕ್ಕ ಸೈಟಿನಲ್ಲಿ ಆಗಲೇ ಒಂದು residential complex ಕಾಮಗಾರಿ ಶುರುವಾಗಿತ್ತು. ಈ ಮನೆಗೂ ಜನ ಬರತೊಡಗಿದರು - ಸಾಲಗಾರರು, ಕೊಳ್ಳುವವರು, ರಿಯಲ್ ಎಷ್ಟೇಟ್ ಕುಳಗಳು, ದಳ್ಳಾಳಿಗಳು, ಗೂಂಡಾಗಳು. ಸಾಲದ ವಿಲೇವಾರಿ ಮಾತುಕತೆ ನಡುಬೀದಿಯಲ್ಲೇ ನಡೆಯತೊಡಗಿತು. ಆಸ್ತಿಯನ್ನು ಬಂದಷ್ಟು ದುಡ್ಡಿಗೆ ಮಾರಲೇ ಬೇಕಾದ ಅನಿವಾರ್ಯ ಆಗಲೇ ಬಂದೊದಗಿತ್ತು.
ಮತ್ತೆ ಸ್ವಲ್ಪ ದಿನಕ್ಕೆ ಒಂದಷ್ಟು ಜನ ಬಂದು ಸೈಟಿನ ಅಳತೆ ಹಿಡಿದರು; ಇಂಜಿನಿಯರ್ ತನ್ನ ಪ್ಲಾನುಗಳ ಜೊತೆ ಬರತೊಡಗಿದ. ಹಿತ್ತಿಲಲ್ಲಿ ಬೆಳೆದ "ಸತ್ತೆ"ಯ "cleaning" ಆಗಬೇಕಿತ್ತು. ನೋಡನೋಡುತ್ತಿದ್ದಂತೆ ಎಲ್ಲ clean ಆಯಿತು. ಮತ್ತೆ ಸ್ವಲ್ಪ ದಿನಕ್ಕೆ ಆ ದಿನ ಬಂದೇ ಬಂತು. ಹಾರೆ-ಸನಿಕೆಗಳ ಜೊತೆ ಬಂದ ಕೆಲಸಗಾರರ ಗುಂಪು ಮನೆ ಒಡೆಯುವ ಕಾಯಕಕ್ಕೆ ಮೊದಲಿಟ್ಟಿತು. ಕಬ್ಬಿಣದ ಗಟ್ಟಿಯಂಥ ಆ ಮನೆಯನ್ನು ನಿಜಕ್ಕೂ ಒಡೆಯಲು ಸಾಧ್ಯವೇ ಎಂದು ಖೇದಮಿಶ್ರಿತ ಕೌತುಕದಿಂದ ನಾವು ವೀಕ್ಷಿಸುತ್ತಿದ್ದೆವು. ನರಪೇತಲನಂಥ ಹುಡುಗನೊಬ್ಬ ಮನೆಯಮೇಲೇರಿ ತನಗಿಂತ ದೊಡ್ಡದಾದ ಸುತ್ತಿಗೆಯಿಂದ ಮನೆಯ ಬಿಸಿಲುಮಚ್ಚಿನ ನೆಲವನ್ನು ಕುಟ್ಟುತ್ತಿದ್ದರೆ, ಬೆಟ್ಟವನ್ನು ಮುಷ್ಟಿಯಿಂದ ಕುಟ್ಟಿ ಕೆಡಹುವ ವ್ಯರ್ಥ ಪ್ರಯತ್ನದಂತೆ ತೋರುತ್ತಿತ್ತು. ಆದರೂ ದಶಕಗಳ ಕಾಲ ತಲೆಮಾರುಗಳು ಬಾಳಿ ಬದುಕಿದ ಆ ಭದ್ರವಾದ ಮನೆ ನೆಲಕಚ್ಚಿಯೇ ತೀರುವುದೆನ್ನುವ ಅರಿವು, ನಮ್ಮ ನಂಬಿಕೆಗೆ ಮೀರಿದ, ನಂಬಲೊಲ್ಲದ ಸತ್ಯವಾಗಿತ್ತು.
ಮರುದಿನ ವಿದೇಶಕ್ಕೆ ಹೊರಟುನಿಂತ ನಾನು ಹದಿನೈದು ದಿನ ಬಿಟ್ಟು ಮರಳಿಬರುವ ಹೊತ್ತಿಗೆ ಅಲ್ಲೊಂದು ದೊಡ್ಡ ಬಯಲಿತ್ತು. ಬುಲ್ಡೋಝರ್ ಉಪಯೋಗಿಸಿ ಒಡೆದರಂತೆ, ನನ್ನ ಮಡದಿ ಹೇಳಿದ್ದು. ಹೇಗೋ, ನನ್ನ ಅರಿವಿಗೆ ನಿಲುಕಲಿಲ್ಲ.
ಇದಾಗಿ ಕೆಲವು ತಿಂಗಳು ಕಳೆದಿವೆ. ನೆರೆಮನೆಯ ಹುಡುಗರು ಈಗ ರಜಾ ದಿನಗಳಂದು foot ball ಆಡುತ್ತ ಗದ್ದಲವೆಬ್ಬಿಸುವುದಿಲ್ಲ. ನಮ್ಮ ಮನೆಗೇ ಮುಖವಿಟ್ಟುಕೊಂಡ ನೆರೆಮನೆಯಿಂದ ಕಿವಿಗಡಚಿಕ್ಕುವ music systemನ ಗದ್ದಲದ ನಡುವೆ ಇದನ್ನು ಬರೆಯುತ್ತಿದ್ದೇನೆ. ಇಲ್ಲಿ ಈಗ ಕೋಗಿಲೆ ಕರೆಯುವುದಿಲ್ಲ; ಕಾಗೆ ನೀರು ಕುಡಿಯಲು ಬರುವುದಿಲ್ಲ; ಬೆಕ್ಕು ವ್ಯಾಘ್ರದೋಪಾದಿಯಲ್ಲಿ ಇಲಿ ಬೇಟೆಯಾಡುವುದಿಲ್ಲ; ಜ್ಞಾನವೃದ್ಧರಾದ ಘೂಕದಂಪತಿಗಳು ಬಂದು ಕೂರಲು ಬಾವಿ ಕಟ್ಟೆ ಇಲ್ಲಿಲ್ಲ. ಇಲ್ಲೀಗ ಒಂದು luxury apartment complex ತಲೆಯೆತ್ತಿದೆ. ಮನೆಯ ಮುಂದೆ landscape ಮಾಡಿದ ಸಣ್ಣ ಉದ್ಯಾನವಿದೆ, ಚಿಕ್ಕದೊಂದು ಈಜು ಕೊಳವೂ ಇದೆ. ಒಂದೊಂದು ಪ್ಲಾಟಿನ ಬೆಲೆ ಎಂಬತ್ತೈದರಿಂದ ತೊಂಬತ್ತು ಲಕ್ಷ. ಒಂದಷ್ಟು ಹಿಂದೀ, ಸಿಂಧೀ, ಮಾರವಾಡಿ ಸಂಸಾರಗಳು ನೆಲೆಯೂರಿವೆ. ಅಂದಹಾಗೆ, ಇನ್ನೂ ಒಂದೆರಡು ಪ್ಲಾಟು ಮಿಕ್ಕಿವೆ, ಮಾರಾಟಕ್ಕೆ (car parking ಇದೆ)
ನಾವು ಬೇರೆ ಮನೆ ನೋಡುತ್ತಿದ್ದೇವೆ.