Wednesday, February 1, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರುಗಳ ಬಳಕೆಯನ್ನು ಸ್ವಲ್ಪ ಮಟ್ಟಿಗೆ ನೋಡಿದೆವು; ಬರೀ ಲಘುವನ್ನೇ ಬಳಸಿ ಮತ್ತು ಬರೀ ಗುರುವನ್ನೇ ಬಳಸಿ ಕೆಲವು ಸಾಲುಗಳನ್ನು ಮಾಡಿದೆವು. (ನೋಡಿಲ್ಲದೆ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೆ ಒಂದು ಸಲ ನೆನಪಿಸಿಕೊಳ್ಳೋಣ. ಲಘುವನ್ನೇ ಬಳಸಿ ಎರಡು, ಮೂರು, ನಾಲ್ಕು, ಐದು ಮತ್ತು ಏಳು ಮಾತ್ರೆಗಳ ಗುಂಪಿರುವಂತೆ ಸಾಲುಗಳನ್ನು ರಚಿಸಿದೆವು, ಹಾಗೇ ಗುರುವನ್ನೇ ಬಳಸಿ ಎರಡು, ನಾಲ್ಕು ಮತ್ತು ಆರು ಮಾತ್ರೆಗಳ ಗುಂಪಿರುವಂತೆಯೂ ಸಾಲುಗಳನ್ನು ರಚಿಸಿದೆವು.

ಆದರೆ ನಾವು ಯಾವಾಗಲೂ ಬರೀ ಲಘುವಿನಲ್ಲಿ ಅಥವಾ ಬರೀ ಗುರುವಿನಲ್ಲಿ ಮಾತಾಡುತ್ತೀವಾ? ಖಂಡಿತಾ ಇಲ್ಲ. ನಮ್ಮ ಮಾತಲ್ಲಿ ಲಘು-ಗುರು ಎರಡೂ ರೀತಿಯ ಅಕ್ಷರಗಳು ಇದ್ದೇ ಇರುತ್ತವೆ ಅಲ್ಲವೇ? ಹಾಗೇ ಪದ್ಯದಲ್ಲೂ ಕೂಡ. ಯಾವುದೇ ಪದ್ಯವಾದರೂ ಲಘು-ಗುರುಗಳ ಮಿಶ್ರಣ. ಕೆಲವು ಅಕ್ಷರ ತುಂಡು (ಲಘು), ಕೆಲವಕ್ಕೆ ಎಳೆತ (ಗುರು). ಮೊದಲು ಮಾಡಿದೆವಲ್ಲ, ಮೂರು, ನಾಲ್ಕು, ಐದು, ಏಳು ಇತ್ಯಾದಿ ಲಯಬದ್ಧ ಗುಂಪು? ಅಲ್ಲಿ ಬರೀ ಲಘು ಅಥವ ಬರೀ ಗುರು ಬಳಸುವ ಬದಲು, ಲಘು ಮತ್ತು ಗುರು ಎರಡನ್ನೂ ಬೇರೆಬೇರೆ ರೀತಿಗಳಲ್ಲಿ ಬಳಸಿ ಬೇರೆ ಬೇರೆ ಲಯಗಳನ್ನು ಸೃಷ್ಟಿಸಬಹುದು.

ಇಲ್ಲಿ ನೋಡಿ (ಇದನ್ನು ಜೋರಾಗಿ ಹೇಳಿ):

ಬಳಸಿ ಬಳಸಿ ನುಡಿಯ ಬೇಡ ನೇರ ನುಡಿಯ ನೂ (ತಕಿಟ ತಕಿಟ ತಕಿಟ ತಕಿಟ ತಾತ ತಕಿಟ ತಾ ಎಂಬಂತೆ) [ಬಳಸಿ (UUU) ಬಳಸಿ (UUU) ನುಡಿಯ (UUU) ಬೇಡ ( _U) ನೇರ ( _U) ನುಡಿಯ (UUU) ನೂ - ಇಲ್ಲಿ ಮೂರುಮೂರು ಮಾತ್ರೆಯ ಜೊತೆ ಬಂದಿದೆ, ಆದರೆ ಕೆಲವು ಗುಂಪುಗಳಲ್ಲಿ ಎಲ್ಲವೂ ಲಘು, ಕೆಲವರಲ್ಲಿ ಲಘು-ಗುರುಗಳ ಮಿಶ್ರಣ]

ಗಣಪತಿ ಬಪ್ಪಾ ಬಂದಾ ನೋಡೂ (ತಕತಕ ತಾತಾ ತಾತಾ ತಾತಾ ಎಂಬಂತೆ) [ಗಣಪತಿ (UUUU) ಬಪ್ಪಾ ( _ _ ) ಬಂದಾ ( _ _ ) ನೋಡೂ ( _ _ ) - ನಾಲ್ಕುನಾಲ್ಕು ಮಾತ್ರೆಯ ಜೊತೆ, ಲಘು-ಗುರುಗಳ ಮಿಶ್ರಣ]

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ (ತಾತಕಿಟ ತಾತಕಿಟ ತಾತಕಿಟ ತಾತಾ ಎಂಬಂತೆ) [ತೂಕಡಿಸಿ ( _UUU) ತೂಕಡಿಸಿ ( _UUU) ಬೀಳದಿರು ( _UUU) ತಮ್ಮಾ ( _ _ ) - ಐದೈದು ಮಾತ್ರೆಗಳ ಜೊತೆ, ಲಘು ಗುರುಗಳ ಸೊಗಸಾದ ಮಿಶ್ರಣ ಇಲ್ಲಿ]

ಶಾಲೆಯಲಿ ನೀ ಓತ್ಲ ಹೊಡೆದರೆ ನಾಕು ಬಾರಿಸಿ ಬಿಡುವೆನು (ತಾತಕಿಟತಾ ತಾತಕಿಟತಕ ತಾತತಾಕಿಟ ತಕಿಟತಾ ಎಂಬಂತೆ) [ಶಾಲೆಯಲಿ ನೀ ( _UUU _) ಓತ್ಲ ಹೊಡೆದರೆ ( _U UUUU) ನಾಕು ಬಾರಿಸಿ ( _U _UU) ಬಿಡುವೆನು (UUUU) - ಏಳೇಳು ಮಾತ್ರೆಯ ಜೊತೆ, ಲಘು-ಗುರುಗಳ ಹದವಾದ ಮಿಶ್ರಣ ಇಲ್ಲಿದೆ]

ಗೆಳೆಯರೇ, ಇಷ್ಟು ಓದಿದಮೇಲೆ, ಹಾಡಿದ ಮೇಲೆ, ನಿಮಗೆ ಮಾತ್ರೆ-ಲಯದ ಮರ್ಮ ಅರ್ಥವಾಗಿರಬೇಕು. ಇನ್ನು ವಿಜೃಂಭಿಸಿ. ೧-೨ (ಲಘು-ಗುರು) ಗಳನ್ನು ವಿವಿಧ ರೀತಿಯಲ್ಲಿ ಬಳಸಿ ಎರಡೋ ಮೂರೋ ನಾಲ್ಕೋ ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಲಯದಲ್ಲಿ ಸಾಲುಗಳನ್ನು ರಚಿಸಿ. ನೆನಪಿರಲಿ, ಇದು ಕಾವ್ಯವಾಗಬೇಕಿಲ್ಲ, (ಕಾವ್ಯವಾದರೂ ತಪ್ಪಲ್ಲ) ಒಟ್ಟಿನಲ್ಲಿ ಲಯಬದ್ಧವಾದ, ಅರ್ಥಬದ್ಧವಾದ ಸಾಲುಗಳು ಬಂದರೆ ಸರಿ.

ಮತ್ತೆ ನೆನಪಿಸುತ್ತೇನೆ, ಬರೀ ಯಾಂತ್ರಿಕವಾಗಿ ಲಘು ಗುರುಗಳನ್ನು ಲೆಕ್ಕಹಾಕಿ ಬರೆಯಬೇಡಿ. ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.

ಇದು ನಿಮ್ಮ ಹಿಡಿತಕ್ಕೆ ಸಿಕ್ಕಿದ ಮೇಲೆ ಮುಂದೆ ನೋಡೋಣ.

11 comments:

Badarinath Palavalli said...

ವ್ಯಾಕರಣದ ಮುಂದುವರೆದ ಭಾಗ ಮಾಹಿತಿ ಪೂರ್ಣ ಪಠ್ಯವಾಗಿದೆ.

ನೀವು ಉದಾಹರಿಸಿದಂತೆ ಇಂದೇ ಈ ಲೇಖನವನ್ನು ಪ್ರಿಂಟ್ ಔಟ್ ತೆಗೆದುಕೊಂಡು ನಾನೂ ಪ್ರಯತ್ನಿಸುತ್ತೇನೆ.

ಧನ್ಯವಾದಗಳು.

ನನ್ನ ಬ್ಲಾಗಿಗೂ ಸ್ವಾಗತ.

sunaath said...

ಪಾಠ ತುಂಬ ಚೆನ್ನಾಗಿದೆ!

ಚುಕ್ಕಿಚಿತ್ತಾರ said...

ಹಿ೦ದಿನ ಸಾಲಲೆ ಕುಳಿತರು ನಾವು
ಮನೆಪಾಠವನು ಮರೆತಿಲ್ಲ..
ಬಳಪದ ಕಡ್ಡಿಯು ಕಳೆದೇ ಹೋಯ್ತು..
ಬರೆಯಲು ಮನೆಯಲಿ ನೆಟ್ಟಿಲ್ಲ..[net]


ರಸ್ತೆ ಅಗೆಯುವವರ ಕಾರ್ಯಕ್ರಮದಲ್ಲಿ ನಮ್ಮನೆ ನೆಟ್ ಹಾಳಾಗಿ ಹೋಗಿತ್ತು.. ಅನೇಕ ದಿನಗಳ ನ೦ತರ ಬ್ಲಾಗ್ ಓದುತ್ತಿದ್ದೇನೆ.. ಉತ್ತಮ ಪಾಠದೊ೦ದಿಗೆ..

Manjunatha Kollegala said...

ಧನ್ಯವಾದ ಬದರಿ ಹಾಗೂ ಸುನಾಥರಿಗೆ

Manjunatha Kollegala said...

@ ಚುಕ್ಕಿಚಿತ್ತಾರ

ಆಹ, ಸೊಗಸಾದ ಚತುರ್ ಮಾತ್ರಾ ಚೌಪದಿ. ಕಾಲೇಜು ಬಿಟ್ಟು ಈ ಒಂದನೆಯ ತರಗತಿಗೇನು ಬಂದಿರಿ ?

ಸರಸರ ಬರೆಯುತ ನಾಲ್ಕರ ಗಣದೊಳ್
ಮೆರೆದಿರಿ ಕವಿತಾ ಪ್ರೌಢಿಮೆಯ
ಮರೆಯುತ ಮೇಲಿನ ತರಗತಿಗಳ ನೀವ್
ಸೊರಗುವಿರೇಕೊಂದನೆ ಕ್ಲಾಸೊಳ್

:)

prabhamani nagaraja said...

`ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.' ಸತ್ಯವಾದ ಮಾತು! ನನ್ನ ಬ್ಲಾಗ್ ಗೆ ಬನ್ನಿ.

Manjunatha Kollegala said...

ಧನ್ಯವಾದ ಪ್ರಭಾಮಣಿಯವರೆ

Subrahmanya said...

ಪಾಠ ಚೆನ್ನಾಗಿದೆ ಮಾಸ್ತರೆ. ಹಿಡಿತಕ್ಕೆ ಸಿಗೋವರೆವಿಗೂ ಯತ್ನಿಸಿ ನಂತರ ಬರೆಯುತ್ತೇನೆ.

ರಾಘವೇಂದ್ರ ಜೋಶಿ said...

ಎಲ್ಲಿ ಮರೆತೆ ಹೇಗೆ ಮರೆತೆ ಇಂಥದೊಂದು ಲೇಖನ?
ಈಗ ನೋಡಿದೆ ಇಲ್ಲಿ ನೋಡಿದೆ ಚೆಂದದೊಂದು ಲೇಖನ!
:-)
"ನೀವು ಬರೆದದ್ದು ನಿಮಗೇ ತಾಳ ಹಾಕಿಕೊಂಡು ಓದಲು ಆಗುವಂತಿರಬೇಕು.ಲಯ ಮನದಲ್ಲಿ ಮೂದಬೇಕೆ ವಿನಃ ಲೆಕ್ಕದಲ್ಲಿ ಅಲ್ಲ.."
ಎಷ್ಟು ಸರಿ ಅಲ್ವ? ನಾನಂತೂ ಕವಿತೆ ಗೀಚುವಾಗಲಲ್ಲೆಲ್ಲ ಈ ಫಾರ್ಮುಲಾ ಉಪಯೋಗಿಸುತ್ತಲೇ ಇರುತ್ತೇನೆ. :-)

Swarna said...

ಮನೆ ಕೆಲ್ಸಕ್ಕೆ ಸಮಯಾಭಾವ ಸರ್.
ತಡವಾಯಿತು,ಕ್ಷಮಿಸಿ
ಸರಿಯೇ ತಿಳಿಸಿ

ಇಂದು ಶಿವರಾತ್ರಿ ಉಪವಾಸ
ಥರಾವರಿ ತಿಂಡಿಗಿಲ್ಲ ಮೋಸ
ಆಟ್ವಾಡಿ ಸಿನ್ಮ ನೋಡ್ಕಂಡು,
ಸಕಲ ಜನ ಜಾಗರಣೆ ಮಾಡಿ,
ಹೇಗಿದೆ ಆ ಪಶುಪತಿ ಮೋಡಿ ?

ಸ್ವರ್ಣಾ

kanasu said...

ಎಷ್ಟು ಸರಳವಾಗಿ ವಿವರಿಸಿದ್ದೀರಿ! ಧನ್ಯವಾದಗಳು!