Sunday, April 26, 2009

ಪಂಢರಿ ಚಾ ವಾಸ; ಚಂದ್ರಭಾಗಾ ಸ್ನಾನ...

ಮೇಲೆ ಸುರಿಯುವ ಬಿರುಬಿಸಿಲು, ಅಸಾಧ್ಯ ಶೆಖೆ, ದಾರಿಯುದ್ದಕ್ಕೂ ನಿಂತು ನಿಂತು ಮುನ್ನೆಡೆಯುವ ಬಸ್ಸು, ರಸ್ತೆಯಲ್ಲದ ರಸ್ತೆ, ಮಧ್ಯ ಟೈರು ಪಂಕ್ಚರ್ ಆಯಿತೆಂದು ಮತ್ತೆರಡು ಗಂಟೆ ನಿಲ್ಲಿಸಿದಾಗಲಂತೂ ಬೆಳಗ್ಗೆ ಏಳಕ್ಕೆ ಹೊರಡುವಾಗಿದ್ದ ಉತ್ಸಾಹ ಸಂಪೂರ್ಣ ಬತ್ತಿಹೋಗಿತ್ತು. ಪುಣೆಯಿಂದ ಪಂಢರಪುರಕ್ಕೆ ೨೦೪ ಕಿಲೋಮೀಟರು, ಮೈಸೂರು-ಬೆಂಗಳೂರು ಪಯಣದ ಲೆಕ್ಕದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾರದು; ಹನ್ನೊಂದಕ್ಕೆಲ್ಲ ಪಂಢರಪುರದಲ್ಲಿರುತ್ತೇನೆಂದು ಹೊರಟವನಿಗೆ ಕಂಡಕ್ಟರು ಐದು ಗಂಟೆಯ ಪಯಣವೆಂದಾಗಲೇ ಸ್ವಲ್ಪ ಉತ್ಸಾಹಭಂಗವಾಗಿತ್ತು. ಆದರೂ ಇನ್ನೊಂದು ಗಂಟೆ ತಾನೆ ಎಂದು ಹೊರಟವನಿಗೆ ಕಾದಿದ್ದು ಮತ್ತೊಂದೇ ವಾಸ್ತವ. ಹೊಟ್ಟೆಬೇರೆ ಚುರುಗುಡುತ್ತಿತ್ತು. ಇದುವರೆಗೂ ಸೌತ್ ಇಂಡಿಯನ್ ಊಟಕ್ಕೇ ಒಗ್ಗಿಹೋಗಿದ್ದವನಿಗೆ (ಪುಣೆಯಲ್ಲೂ ಕೊನೆಯ ಪಕ್ಷ ಇಡ್ಲಿ ದೋಸೆಗಳಿಗಂತೂ ಕಡಿಮೆಯಿರಲಿಲ್ಲ) ಮಹಾರಾಷ್ಟ್ರದ ಒಳನಾಡಿನ ಪಯಣದಲ್ಲಿ ಅಲ್ಲಲ್ಲಿ ರಸ್ತೆಬದಿಯ ಪಾವ್-ಭಾಜಿ ದುಕಾನದಲ್ಲಿ ದೊರೆಯುವ ಒಣಕಲು ಪಾವ್-ಭಾಜಿ, ರೊಟ್ಟಿ-ಮೆಣಸಿನಕಾಯಿ (ಅದೂ ಹಳ್ಳಿಕಡೆಯ ರೂಕ್ಷ ರುಚಿಯುಳ್ಳದ್ದು) ನಾಲಿಗೆಗೆ ಕಠೋರವಾಗಿತ್ತು. ರೊಟ್ಟಿಯ ಒಂದು ತುಂಡು ಒಳಗೆ ಸೇರಿದ್ದಷ್ಟೇ, ಇನ್ನೊಂದರ ಅಗತ್ಯವಿಲ್ಲವೆಂದು ಸಂದೇಶ ಬಂತು ಒಳಗಿಂದ. ಮೆಣಸಿನಕಾಯಿಯಂತೂ ಮೇಲೆ ಉರಿಯುತ್ತಿದ್ದ ಬಿಸಿಲಿನ ಏಜೆಂಟನಂತೆ ಕಂಡಿತು. ಇನ್ನದನ್ನು ಒಳಗೆ ಸೇರಿಸುವುದುಂಟೇ! ಸರಿ, ಅಷ್ಟೋ ಇಷ್ಟೋ ಹಣ್ಣು ಹಂಪಲು ತಿಂದುಕೊಂಡು, ಹಾಗೂ ಹೀಗೂ ಕುಂಟುತ್ತಿದ್ದ ಬಸ್ಸಿನ ಜೊತೆಗೂ ಕುಂಟಿಕೊಂಡು ಪಂಢರಪುರ ತಲುಪಿದಾಗ ಮಧ್ಯಾಹ್ನ ಎರಡು. ನಾನಿದ್ದ ಪರಿಸ್ಥಿತಿಗಾಗಿ ವಿಠ್ಠಲನಿಗೆ ಹಿಡಿಶಾಪ ಹಾಕುವುದೊಂದು ಬಾಕಿ.


ಪರಮಾತ್ಮನ ದರ್ಶನಕ್ಕೆ ಕಡುಕಷ್ಟ ಪಟ್ಟು ಹೋದಷ್ಟೂ "ಫಲ" ಹೆಚ್ಚೆಂದು ಒಪ್ಪುತ್ತೇನೆ. ಸಂತ ಜ್ಞಾನೇಶ್ವರರಿಗಾಗಲಿ, ಸಂತ ತುಕಾರಾಮರಿಗಾಲಿ ಅಥವ ವಿಠ್ಠಲನ ಇತರ ಭಕ್ತ ಕೋಟಿಗಾಗಲಿ ಬಸ್ಸು, ಕಾರು, ಹವಾನಿಯಂತ್ರಿತ ವಸತಿ ಇತ್ಯಾದಿ ಸೌಲಭ್ಯಗಳಿದ್ದಂತೇನೂ ಕಂಡುಬರುವುದಿಲ್ಲ. ಅಷ್ಟೇಕೆ, ಇಂದಿಗೂ ಪುಣ್ಯನಗರಿ(ಪುಣೆ)ಯಿಂದ ಪಂಢರಪುರಿಗೆ ಕಾಲ್ನಡಿಗೆಯಲ್ಲಿ ಸಾಗುವ "ವಾರಕರಿ" ಎಂಬ ಕಠಿಣ ಪರಿಕ್ರಮ ಜಾರಿಯಲ್ಲಿದೆ. ಉದ್ದಕ್ಕೂ ವಿಠ್ಠಲನ ಕುರಿತ ಅಭಂಗಗಳನ್ನು ಹಾಡುತ್ತಾ, ದಾರಿಯಲ್ಲಿ ಸಿಗುವ ಇತರ ಪುಣ್ಯಸ್ಥಳನ್ನು ಸಂದರ್ಶಿಸುತ್ತಾ ಅಲ್ಲಲ್ಲಿ ತಂಗುತ್ತಾ ಸಾಗುವ ಶ್ರಮದ ಪಯಣ ಅದು; ಹದಿನೈದೋ ಇಪ್ಪತ್ತೋ ದಿನದ್ದು. ತುಕಾರಾಮರ ಜನ್ಮಸ್ಥಳವಾದ ದೇಹು ಗ್ರಾಮ, ಜ್ಞಾನೇಶ್ವರರ ಪುಣ್ಯಸ್ಥಳವಾದ ಆಳಂದಿ ಈ ಪರಿಕ್ರಮದ ಅಂಗವೆಂದು ಕೇಳಿದ್ದೇನೆ; ಅದು ಸಂಪೂರ್ಣ ಯಾತ್ರೆ. ಜಗದ ಜಂಜಡಗಳನ್ನು ಅಷ್ಟುದಿನವಾದರೂ ಮರೆತು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾನೆ ಭಕ್ತ. ಯಾತ್ರಿಯ ಬಳಿ ಮೊಬೈಲ್ ಇರುವುದಿಲ್ಲ, ಫೋನಾಗಲೀ ಇತರ ಸಂಪರ್ಕ ಸಾಧನವಾಗಲೀ ಇರುವುದಿಲ್ಲ, ಮನೆಯದ್ದೋ ಕೆಲಸದ್ದೋ ಜವಾಬ್ದಾರಿಯಿರುವುದಿಲ್ಲ - ಅದೆಲ್ಲಕ್ಕೂ ಅವನು ವ್ಯವಸ್ಥೆಮಾಡಿಯೇ ಬಂದಿದ್ದಾನೆ. ಯಾತ್ರೆ ಅತಿ ನಿಷ್ಠವಾಗಿದ್ದ ಕಾಲಕ್ಕೆ ದಾರಿಯ ಖರ್ಚಿಗೆ ಹಣವೂ ಇರುತ್ತಿರಲಿಲ್ಲವೆಂದು ಕೇಳಿದ್ದೇನೆ - "ಸಾಲ ಮಾಡೆ; ಸಾಲದೆಂದೆನೆ; ನಾಳೆಗೆ ಇಡೆ" ಎಂಬುದೇ ದಾಸನ ದೀಕ್ಷೆತಾನೆ (ನಾನು ಹೇಳುತ್ತಿರುವುದು ಹಳೆಯ ಯಾತ್ರೆಯ ಮಾತು - ಈಗಿನ ಮಾತು ಬೇರೆ). ಈ ಹದಿನೈದಿಪ್ಪತ್ತು ದಿನ, ಅವನ ಸಂಪೂರ್ಣ ಗಮನ ವಿಠ್ಠಲನ ಕಡೆಗೆ.


"ತೀರ್ಥ ವಿಠ್ಠಲ; ಕ್ಷೇತ್ರ ವಿಠ್ಠಲ; ದೇವ ವಿಠ್ಠಲ; ದೇವಪೂಜಾ ವಿಠ್ಠಲ" (ಜ್ಞಾನದೇವ)


ಯಾತ್ರೆಯ ಕಡುಕಷ್ಟ-ನಿಷ್ಠುರಗಳೆಲ್ಲ ವಿಠ್ಠಲನೊಡನೆ ಅವನ ಸಂಪರ್ಕವನ್ನು ಬೆಸೆಯುವ, ಬಲಗೊಳಿಸುವ ಸಾಧನ. ಬೇಯಿಸುವ ಬಿರುಬಿಸಿಲೋ, ಕಿತ್ತು ತಿನ್ನುವ ಹಸಿವೋ, ಆಯಾಸವೂ, ರೋಗವೋ ರುಜಿನವೋ - ಅಧಿಕಸ್ಯ ಅಧಿಕಂ ಫಲಂ. ಇಷ್ಟೆಲ್ಲ ಶ್ರಮದ ಯಾತ್ರೆಯ ಕೊನೆಗೆ, ಅಗೋ ದೂರಕ್ಕೆ ಕಾಣುತ್ತದೆ ಭಕ್ತ ಪುಂಡಲೀಕನ ಗೋಪುರ, ಅದರ ಹಿಂದೆ ವಿಠ್ಠಲ-ರಕುಮಾಯೀ ಮಂದಿರದ ಗೋಪುರ; ಇನ್ನಷ್ಟು ಹತ್ತಿರ ಸಾಗಿದರೆ, ಪುಂಡಲೀಕನ ಗುಡಿಯ ಮುಂದೆ ಜುಳುಜುಳು ಹರಿಯುವ ಚಂದ್ರಭಾಗಾ ನದಿ; ಅದರ ದರ್ಶನವೇ ಮಾರ್ಗದ ಆಯಾಸವನ್ನು ಅಪಹರಿಸುತ್ತದೆ. ಇಲ್ಲಿಯೇ ಅಲ್ಲವೇ ತಾಯಿ-ತಂದೆಯ ಸೇವೆಯಲ್ಲಿ ಮಗ್ನನಾದ ಭಕ್ತ ಪುಂಡಲೀಕನಿಗೆ ಹರಿ ಮೈದೋರಿದ್ದು; ತನ್ನನ್ನು ನೋಡಲು ಬಂದ ದೇವನಿಗೆ ಪುಂಡಲೀಕ ಸ್ವಲ್ಪ ಕಾಯಲು ಹೇಳಿ ಕೂಡಲು ಇಟ್ಟಿಗೆಯ ತುಂಡನ್ನೆಸೆದದ್ದು; ಹಾಗೆಯೇ ಆಗಲೆಂದು ಅದೇ ಇಟ್ಟಿಗೆಯ ಮೇಲೆ ನಿಂತು ಕಾದೇ ಕಾದನಲ್ಲ ವಿಠ್ಠಲ! "ಕಟಿಯಲ್ಲಿ ಕರವಿಟ್ಟನು, ಪಂಢರಿರಾಯ". ಆ ಕ್ಷಣಕ್ಕೆ ಈ "ಇತಿಹಾಸ"ದಲ್ಲಿ ನಿಜವೆಷ್ಟು, ಕತೆಯೆಷ್ಟು ಎಂದು ಎಣಿಸುವ ಗೋಜಿಗೆ ಹೋಗದು ಭಕ್ತನ ಮನ. "ದೇವನಿಹುದು ದಿಟವೊ ಸಟೆಯೊ; ಭಕ್ತಿಯಂತು ದಿಟ" ಎನ್ನುವ ಪುತಿನ ರವರ ಮಾತು ನೆನಪಿಗೆ ಬರುತ್ತದೆ. ತಂಪು ಚೆಲ್ಲುತ್ತಾ ಹರಿಯುವ ಚಂದ್ರಭಾಗಾ; ಅದರ ತಡಿಯಲ್ಲಿ ಮರದ ತಣ್ಣೆಳಲಲ್ಲಿ ಮಲಗಿ ವಿಶ್ರಮಿಸುವ ವೃದ್ಧ ದಂಪತಿ, ಅವರ ಕಾಲೊತ್ತುತ್ತಿರುವ ಮಗ ಪುಂಡಲೀಕ, ದೇವರನ್ನೂ ಮರೆಯುವ ಶ್ರದ್ಧೆ ಸೇವೆಯಲ್ಲಿ; ಈ ವೈಚಿತ್ರವನ್ನು ನೋಡ ಬಂದ ದೇವರ ದೇವ; ಭಕ್ತನೆಸೆದ ಇಟ್ಟಿಗೆಯ ತುಂಡಮೇಲೆ ಅವ ನಿಂತ ರೀತಿ, ಟೊಂಕದ ಮೇಲೆ ಕೈಯನಿಟ್ಟು ನಗುವ ಆ ಚಿದ್ಬಂಗಿ - ಇಡೀ ಸನ್ನಿವೇಶದ ಕಾವ್ಯ ಮನವನ್ನಪರಿಹರಿಸುತ್ತದೆ. ಬಿರುಬಿಸಿಲು ಬೆಳದಿಂಗಳಾಗುತ್ತದೆ; ತಂಬೆಲರು ಹಾಯುತ್ತದೆ; ಮನ ತುಂದಿಲಗೊಳ್ಳುತ್ತದೆ, ಕಂಠ ಗದ್ಗದಗೊಳ್ಳುತ್ತದೆ, ಕಣ್ಣಲ್ಲಿ ನೀರು ತುಂಬುತ್ತದೆ. ಆ ಕ್ಷಣಕ್ಕೆ ಅದು ನಿಜ; ಆ ಅನುಭೂತಿಯಂತೂ ಸತ್ಯಸ್ಯ ಸತ್ಯ. ಪುರಂದರರಿಗಾಗಲೀ ತುಕಾರಾಮರಿಗಾಗಲೀ ಆಗಿದ್ದು ಇದೇ ಅಲ್ಲವೇ; ವರ್ಷಗಳ ಹಿಂದೆ ಅವರೂ ಪ್ರಾಯಶ: ಇದೇ ಜಾಗೆಯಲ್ಲಿ ಇದೇ ಸನ್ನಿವೇಶದಲ್ಲಿ ನಿಂತು ಹೀಗೇ ಕಣ್ಣೀರುಗರೆದಿದ್ದರಲ್ಲವೇ; ಈ identity, ಸಮಷ್ಟಿ ಭಾವನೆ ಮನವನ್ನು ಮತ್ತಷ್ಟು ಪರವಶಗೊಳಿಸುತ್ತದೆ. ಭಕ್ತಸಮುದಾಯದಿಂದ ದನಿಯೊಂದು ಮೊಳಗುತ್ತದೆ, "ಬೊಲೋ ಶ್ರೀ ಪುಂಡಲೀಕ ವರದೇ..." ಗದ್ಗದ ಕಂಠ ಪ್ರಯತ್ನವಿಲ್ಲದೆಯೇ ದನಿಗೂಡಿಸುತ್ತದೆ "ಪಾಂಡುರಂ...ಗ"


ವಿಠ್ಠಲ ಒಂದುರೀತಿ ಕೊಂಡಾಟದ ದೈವ. ತಿರುಪತಿಯ ತಿಮ್ಮಪ್ಪನಿಗಾಗಲೀ ಬಾಡದ ಆದಿಕೇಶವನಿಗಾಗಲೀ ಇಲ್ಲದ ಒಂದುಬಗೆಯ ಮುದ್ದು, ಕೊಂಡಾಟ, ಬಿಂಕ ಈತನಿಗೆ. ಭಕ್ತ-ದೇವನ ಏಕಾಂತ ಈತನಿಗೆ ಪ್ರಿಯವಾದರೂ ಅದಕ್ಕಿಂತ ಭಜನೆಯಲ್ಲಿಯೇ ಹೆಚ್ಚು ರುಚಿ ಈತನಿಗೆ. ಅದಕ್ಕೆಂದೇ ಈತ ಸಮಷ್ಟಿಯ ದೇವ. ತಾಳ ತಂಬೂರಿ ಮದ್ದಳೆ ಕುಣಿತ ಮೊರೆತಗಳ ಗೋಷ್ಟಿ ಭಜನೆಯೇ ಇವನಿಗೆ ಪ್ರಿಯ. ಭಕ್ತರ ಹಿಂಡು ಇವನನ್ನು ಕೊಂಡಾಡಬೇಕು, ಆಡಬೇಕು, ಇವನ ಮುಂದೆ ಹಾಡಬೇಕು, ಕುಣಿಯಬೇಕು. ಇಲ್ಲಿ ದೇವನಿಲ್ಲದೇ ಭಕ್ತನಿಲ್ಲವಷ್ಟೇ ಅಲ್ಲ; ಭಕ್ತನಿಲ್ಲದೇ ದೇವನಿಲ್ಲ - ಕೊನೆಯ ಪಕ್ಷ ಈ ದೇವನಿಲ್ಲ. ಅದಕ್ಕೆಂದೇ, "ವಿಠ್ಠಲ ವಿಠ್ಠಲ ಪಾಂಡುರಂಗ..." ಜೊತೆ ಜೊತೆಗೇ ಮೊಳಗುತ್ತದೆ "ಶ್ರೀ ತುಕಾರಾಮ ಮಹಾರಾಜ್ ಕೀ... ಜೈ..."; "ಸಂತ ನಾಮದೇವಜೀ ಮಹಾರಾಜ್ ಕೀ... ಜೈ..." ಇತ್ಯಾದಿ ಘೋಷಣೆ. "ಹಿಂಡುದೈವರ ಗಂಡ"ನಾದ ಈತ, ತಾನೇ ಸ್ವತಃ ಹಿಂಡುದೈವ. ಅದಕ್ಕೆಂದೇ ಇರಬೇಕು, ನಮ್ಮ ದಾಸ ಸಮುದಾಯದಲ್ಲಿ ಬಹು ಜನಪ್ರಿಯ ದೈವ ಈ ವಿಠ್ಠಲ. ವಚನ ಸಾಹಿತ್ಯ ಹೆಚ್ಚು ಬುದ್ಧಿಪ್ರಧಾನವಾದ ಅಮೂರ್ತದ ಕಡೆ ಒಲವುಳ್ಳದ್ದಾದರೆ, ದಾಸ ಸಾಹಿತ್ಯದ ಒಲವು ಭಾವಪ್ರಧಾನವಾದ ಮೂರ್ತದೆಡೆಗೇ ಹೆಚ್ಚೆಂದು ಹೇಳಬೇಕು. ಚೆನ್ನಮಲ್ಲಿಕಾರ್ಜುನನೋ ಗುಹೇಶ್ವರನೋ ನಮಗೆ ಕೇವಲ ಪರಿಕಲ್ಪನೆಯಾಗಿ ಕಂಡರೆ, ವಿಠ್ಠಲನೋ ಕೃಷ್ಣನೋ ಹಾಗಲ್ಲ. ಅವ ನಿಮ್ಮೊಡನೆ ಆಡುತ್ತಾನೆ, ಕಾಡುತ್ತಾನೆ, ಬೇಡುತ್ತಾನೆ, ಕಣ್ಣು ಮುಚ್ಚಿ ಓಡುತ್ತಾನೆ; ಕೊನೆಗೆ ನಿಲ್ಲೆಂದು ನೀವು ಇಟ್ಟಿಗೆಯನ್ನೆಸೆದರೆ ಅದರ ಮೇಲೇ ನಿಂತು ಕಲ್ಲಾಗಿಬಿಡುತ್ತಾನೆ. ಕಲ್ಲು - ನೀವು ಮುಟ್ಟಿ, ಮೂಸಿ ಅನುಭವಕ್ಕೆ ತಂದುಕೊಳ್ಳಬಹುದಾದ ಕಡುಗಲ್ಲು. ಈ ಕಲ್ಲ ಮೂರ್ತಿಯ ಮೂಲಕವೇ ಅಮೂರ್ತದೆಡೆಗೆ ನಿಮ್ಮ ಪಯಣ. ಆದರೆ ಅವ ಕಲ್ಲಾದ ಪರಿ, ಕತೆಯಾಗುತ್ತದೆ, ಪದವಾಗುತ್ತದೆ, ಅಭಂಗವಾಗುತ್ತದೆ, ಜನಮನದಲ್ಲಿ ಹರಿಯುತ್ತದೆ. ಅಂದಮೇಲೆ, ಮೂರ್ತಕ್ಕೆ ಹತ್ತಿರವಾದ ದಾಸರ ಪದಗಳಿಗೆ ವಿಠ್ಠಲನಿಗಿಂತ ಹತ್ತಿರದ ದೈವವೆಲ್ಲಿ? ಅದಕ್ಕೆಂದೇ ದಾಸರ ನೆಚ್ಚಿನ ದೈವ ವಿಠ್ಠಲ - ಅವ ಪುರಂಧರವಿಠಲನಿರಬಹುದು, ವಿಜಯವಿಠಲನಿರಬಹುದು, ಜಗನ್ನಾಥವಿಠಲನಿರಬಹುದು. ಕೀರ್ತನೆ ತಿರುಪತಿಯ ತಿಮ್ಮಪ್ಪನದಾದರೂ ಕೊನೆಯಲ್ಲಿ ವಿಠಲ ಬರಲೇ ಬೇಕು. ಕೊನೆಗೆ ಶ್ರೀರಂಗದಿಂದ ದಾಸವಾಣಿಯ ಸ್ಫೂರ್ತಿಪಡೆದ ಶ್ರೀಪಾದರಾಜರೂ ತಮ್ಮ ಅಂಕಿತದಲ್ಲಿ ರಂಗ"ವಿಠಲ"ನೆಂದರು, ರಂಗನೊಡನೆ ವಿಠಲನನ್ನೂ ತಂದರು.


ಎಲ್ಲಿಂದಲೋ ಹೊರಟು ಎಲ್ಲಿಗೋ ಬಂದೆ, ಇರಲಿ. ಪರಮಾತ್ಮನ ದರ್ಶನಕ್ಕೆ ಕಡುಕಷ್ಟ ಪಟ್ಟು ಹೋದಷ್ಟೂ ಅದು ಹೆಚ್ಚು ಸಫಲವೆಂದು ಒಪ್ಪುತ್ತೇನೆ. ಯಾತ್ರೆ ಸುಲಭವಾದಷ್ಟೂ ಅದರ ಮಹತ್ವ ಕಡಿಮೆಯಾಗುತ್ತದೆನ್ನುವರಲ್ಲಿ ನಾನೂ ಒಬ್ಬ. ಆದ್ದರಿಂದಲೇ, ಭಕ್ತಾದಿಗಳ "ಅನುಕೂಲಕ್ಕೆ" ಉಡುಪಿ ಕೃಷ್ಣನ ದೇವಳದಲ್ಲಿ ಹವಾನಿಯಂತ್ರಣದ ಅಳವಡಿಕೆ, ಅದೇ ಅನುಕೂಲಕ್ಕೆ ಗೊಮ್ಮಟೇಶನ ದರ್ಶನಕ್ಕೆ cable-carಗಳ ಬಳಕೆ ಇಂಥಾ ವ್ಯವಸ್ಥೆಗಳನ್ನು ಖಂಡಿಸಿದ್ದೇನೆ, ವಿಡಂಬಿಸಿದ್ದೇನೆ; ಗೊಮ್ಮಟನ ಮುಂದೆ ಚಡ್ಡಿ ಬೇಡುವ ಕಡು ಸಂಸಾರಿಗಳನ್ನೂ, ಪರಮ ವಿರಕ್ತನ "ದರ್ಶನ"ಕ್ಕೆ ಹಣ್ಣು ಮುದುಕರ ಬೆನ್ನ ಮೇಲೆ ಡೋಲಿಯಲ್ಲಿ ಕುಳಿತು ಇಂದ್ರಗಿರಿಯೇರುವ ತರುಣ "ಭಕ್ತ"ರನ್ನೂ ಕಂಡು ಮೈ ಉರಿದಿದ್ದೂ ಇದೆ. ಆದರೆ ಇಲ್ಲಿ ನನ್ನ ಕಷ್ಟ ವಿಚಿತ್ರರೀತಿಯದಿತ್ತು. ಮನೆ ಮಠ ಬಿಟ್ಟು ಕಷ್ಟಕರ ಯಾತ್ರೆಗಾಗೇ ಬಂದಿದ್ದ ವಾರಕರೀ ಯಾತ್ರಿಯಾಗಿರಲಿಲ್ಲ ನಾನು; ಅಥವ ಸರ್ವ ಸುಲಭ "ದರ್ಶನ ಪ್ಯಾಕೇಜ್" ಟೂರಿನಲ್ಲಿ ಬಂದ ಪ್ರವಾಸಿಗ ಕೂಡ ಆಗಿರಲಿಲ್ಲ (ನನಗದು ಹೊರತು); ಒಂದು ರೀತಿಯ ಎಡಬಿಡಂಗಿ ಅವತಾರವಾಗಿತ್ತು ನನ್ನದು. ಪ್ರಯಾಣಕ್ಕೆ ಆಯ್ದದ್ದು ಒಂದು ಕೆಂಪು ಡಬ್ಬದ ಬಸ್ಸು. (ತೀರ ಅಷ್ಟೂ ಆಗದೆಂದರೆ ಹೇಗೆ); ಒಂದು ಬರ್ಮುಡಾ ಮತ್ತು ಟಿ-ಷರಟು, ಕೈಯಲ್ಲೊಂದು ಬಿಸ್ಲೆರಿ ನೀರಿನ ಬಾಟಲಿ, ಮತ್ತೊಂದು ಕೈಲಿ ಒಂದಷ್ಟು ಹಣ್ಣುಗಳು; ನನ್ನ ಈ ಶಾಕವ್ರತ ವಾರಕರಿಯ ಕಷ್ಟ ನಿಷ್ಠೆಯ ಫಲವಾಗಿರಲಿಲ್ಲ, ತಿನ್ನಲು ಮತ್ತೇನೂ ದೊರಕದ್ದರ ಫಲವಾಗಿತ್ತು; ನನ್ನ ಮೆಟ್ರೋಪೋಲಿಟನ್ ಮನಸ್ಸು-ದೇಹ, ಹಳ್ಳಿಯ ಸಾಮಾನ್ಯ ಒರಟು ಊಟವನ್ನು ಒಲ್ಲದ್ದರ ಫಲವಾಗಿತ್ತು. ನನಗೆ ಆ ಕ್ಷಣಕ್ಕೆ ವಿಠಲ ಜೀವನದ ಸರ್ವಸ್ವವಾಗಿರಲಿಲ್ಲ (ಹಾಗಿದ್ದರೆ ಎಷ್ಟು ಚೆನ್ನಿತ್ತು!). Afterall, I was a week-end traveller. ಬೆಳಗ್ಗೆ ಪುಣೆ ಬಿಟ್ಟ ನನಗೆ ಶೀಘ್ರವಾಗಿ ವಿಠಲನನ್ನು ನೋಡಿಕೊಂಡು ಮರುಬಸ್ಸಿಗೇ ಪಯಣಿಸಿ ರಾತ್ರಿ ಹತ್ತರ ಮೊದಲು ಪುಣೆ ಸೇರುವುದಿತ್ತು (ಪಂಢರಿಯಲ್ಲಿ ಉಳಿದುಕೊಳ್ಳುವುದು ಅಸಾಧ್ಯವಾದರೆ). ತಡವಾದರೆ ನಾನಿಳಿದುಕೊಂಡಿದ್ದ ಮನೆಯ ಗೇಟು ಮುಚ್ಚುತ್ತಿತ್ತು; ಉದ್ದಕ್ಕೂ ನಾಯಿಯ ಕಾಟ; ಆಟೋ ಸಿಕ್ಕುವುದಿಲ್ಲ; ದರೋಡೆಕೋರರ ಭಯ... "ಅನುಗಾಲವು ಚಿಂತೆ ಜೀವಕ್ಕೆ... ". ಬಸ್ಸು ಚಂದ್ರಭಾಗಾ ಸೇತುವೆಯ ಬಳಿ ಬರುತ್ತಿದ್ದಂತೆ ಕಂಡಿತು ಪುಂಡಲೀಕನ ಗೋಪುರ - ಹಿಂದೆ ಎಷ್ಟೋ ಭಕ್ತಮಹನೀಯರಿಗೆ ಕಂಡಂತೆ. ಆದರೆ ಆ ದಿವ್ಯ ಅನುಭೂತಿಯ ನೆನಪು ಬರುವಷ್ಟು ಹದವಾಗಿರಲಿಲ್ಲ ಮನಸು; ಏಕೆಂದರೆ ಉದ್ದಕ್ಕೂ ನಾನು ಅಭಂಗ ನುಡಿಯುತ್ತಿರಲಿಲ್ಲ, ಬದಲಿಗೆ ನನ್ನನ್ನು ಈ ನಾನಾ ಭಂಗಕ್ಕೊಡ್ಡಿದ್ದ ಬಸ್ಸನ್ನೂ ಡ್ರೈವರನನ್ನೂ, ಈ ಬಸ್ಸನ್ನು ಆರಿಸಿಕೊಂಡ ನನ್ನನ್ನೂ ಶಪಿಸುವುದರಲ್ಲೇ ಮಗ್ನನಾಗಿದ್ದೆ. ಹಾಗೂ ಈ ಅನುಭೂತಿ ಮೂಡುವಷ್ಟರೊಳಗೆ ಬಸ್ಸು ಭರ್ರ್ ಎಂದು ಬಸ್ ನಿಲ್ದಾಣ ತಲುಪಿಯಾಗಿತ್ತು. ಧರ್ಮದರ್ಶನ ಸಿಗುವುದು ಕಷ್ಟವಾಗಬಹುದೆಂದೂ, ಬದಲಿಗೆ "ಸ್ಪೆಷಲ್ ಪೆಯ್ಡ್ ದರ್ಶನ್" ಕೂಪನು ಅಲ್ಲಿಯೇ ಹತ್ತಿರದ State Bank of Hyderabadನಲ್ಲಿ ದೊರೆಯುತ್ತದೆಂದೂ, ಕೇವಲ ನಲವತ್ತು ರುಪಾಯಿಯೆಂದೂ, bankನ ವ್ಯವಸ್ಥಾಪಕರು ತನಗೆ ಚೆನ್ನಾಗಿ ಪರಿಚಯವಿರುವುದರಿಂದ ಬೇಕಿದ್ದರೆ ಒಂದು ಮಾತು ಹೇಳುತ್ತೇನೆಂದೂ ನನ್ನ ಗೆಳೆಯರೊಬ್ಬರ ಸಲಹೆಯಿತ್ತು. ಸುಮ್ಮನೇ ದೇವಸ್ಥಾನಕ್ಕೆ ಹೋಗಿ ಅಲ್ಲಿ ದಳ್ಳಾಳಿಗಳ ಕೈಗೆ ಸಿಕ್ಕಿಬೀಳಬೇಡ, ನೂರು ಇನ್ನೂರು ಕಿತ್ತುಬಿಡುತ್ತಾರೆ, ಸುಮ್ಮನೆ "ದಂಡ" ಎಂದು ವಿವೇಕವನ್ನೂ ಹೇಳಿದ್ದರು. ಸಧ್ಯಕ್ಕೆ ಯಾವುದನ್ನೇ ಆಗಲೀ ಪ್ರಶ್ನಿಸುವ ವಿವೇಕವಂತೂ ನನ್ನಿಂದ ಹಾರಿ ಹೋಗಿತ್ತು. ಸುಮ್ಮನೇ ಬ್ಯಾಂಕಿಗೆ ಹೋದೆ. ಆದರೆ ಕೂಪನು ವ್ಯವಸ್ಥೆ ಕೇವಲ "ಸೀಸನ್" ನಲ್ಲಿ ಮಾತ್ರವೆಂದೂ ಈಗ ದೇವರ ದರ್ಶನ "ಫ್ರೀ"ಯಾಗಿ ಸಿಗುತ್ತದೆಂದೂ ಅವರು ಹೇಳಿದ್ದರಿಂದ ಆಲಯದ ಕಡೆ ತೆರಳಿದೆ.


ಆಲಯದ ಗೋಪುರ ಸುಲಭವಾಗಿ ಕಾಣಸಿಗುವಂತಿರಲಿಲ್ಲ. ದಾರಿಯುದ್ದಕ್ಕೂ ಕಿಕ್ಕಿರಿದ ಅಂಗಡಿಬೀದಿ, ಮಿಠಾಯಿ ಬತ್ತಾಸುಗಳ ನಿತ್ಯ ಜಾತ್ರೆ, ಜೊತೆಗೆ ಆಧುನಿಕ ಜಗತ್ತಿನ ಬಳುವಳಿ ಕಿವಿಗಡಚಿಕ್ಕುವ ಕ್ಯಾಸೆಟ್-ಸಿಡಿ ಅಂಗಡಿಗಳು, roaring business. ಹಾಗೆಯೇ ದೇವಳವನ್ನು ಸುತ್ತು ಹಾಕುತ್ತಾ ದೇವಳದ ಮುಂಭಾಗಕ್ಕೆ ಬಂದರೆ, ಮೂಲಗೋಪುರವನ್ನು ಮುಚ್ಚುವಂತೆ ಒಂದು ಕಮಾನು, "ಸಂತ ನಾಮದೇವ ಮಹಾದ್ವಾರ". ನಾಮದೇವರ ಪುಣ್ಯಸ್ಮೃತಿಗೆ ನಮಿಸುತ್ತಾ ಹಾಗೆಯೇ ದೇವಳವನ್ನು ಹಿಂದೆಬಿಟ್ಟು ಅಂಗಡಿ ಸಾಲಿನಲ್ಲಿ ಮುಂದುವರೆದೆ, ಕಂಡಿತು ಚಂದ್ರಭಾಗಾ. ಮನವು ಮತ್ತೆ ಮೆದುವಾಯಿತು (ಅದುವರೆಗೂ ಒರಟಾಗಿದ್ದು ಗಮನಕ್ಕೆ ಬಂದದ್ದು ಆಗಲೇ!). ನನ್ನ ಯೋಜನೆಯಿದ್ದದ್ದು ಅಂದು ಪಂಢರಪುರದಲ್ಲೇ ಉಳಿದುಕೊಳ್ಳುವುದು, ಚಂದ್ರಭಾಗಾ ಸ್ನಾನ ಮಾಡಿ ವಿಠಲನನ್ನು ನೋಡುವುದು, ಮರುದಿನ ಬೆಳಗ್ಗೆ ನದಿಯೊಂದಿಗೆ ಸ್ವಲ್ಪ ಸಮಯ ಕಳೆದು ಊರಿಗೆ ಮರಳುವುದು ಎಂದು. ಬಿಸಿಲಲ್ಲಿ ಬೆಂದು ಬಂದಿದ್ದ ನನಗಂತೂ ಈ ಯೋಚನೆಯೇ ಅಮೃತಪ್ರಾಯವಾಗಿತ್ತು. ಅದಕ್ಕೆಂದೇ ನನ್ನೊಡನೆ ವಿಶೇಷವಾಗಿ ಏನನ್ನೂ ತಂದಿರಲಿಲ್ಲ, ಜನ್ಮಕ್ಕೆ ಹತ್ತಿದ ಮೊಬೈಲ್ ಮತ್ತು ಒಂದಷ್ಟು ಹಣವನ್ನು ಬಿಟ್ಟು. ಈಗ ಸ್ನಾನಕ್ಕೆ ಹೇಗೆ ಇಳಿಯುವುದು? ಮೊಬೈಲನ್ನು ಯಾರು ನೋಡಿಕೊಳ್ಳುತ್ತಾರೆ? ಮೊದಲೇ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ? ಎಂದೆಲ್ಲಾ ಯೋಚಿಸುತ್ತಾ ನದಿಯ ಸಮೀಪಕ್ಕೆ ಬಂದಾಗಲೇ ಅರಿವಾದದ್ದು, ಅದುವರೆಗೂ ನಾನೆಂಥಾ ಭ್ರಮಾಲೋಕದಲ್ಲಿ ಜೀವಿಸುತ್ತಿದ್ದೆನೆಂದು. ಬೇಸಿಗೆಯಾದ್ದರಿಂದಲೋ ಏನೋ, ನದಿ ಹರಿಯುತ್ತಲೇ ಇರಲಿಲ್ಲ! ನದಿಯ ಮಧ್ಯಕ್ಕೆ ಹೋದರೂ ಕೇವಲ ಮೊಳಕಾಲು ಮುಳುಗುವಷ್ಟೇ ನೀರು! ನೀರೆಂದೆನೇ, ಅಲ್ಲ ಅಲ್ಲ; ಕೊಚ್ಚೆ - ಕಡುಕೊಚ್ಚೆ, ಕೆಸರು; ಎಲ್ಲೆಂದರಲ್ಲಿ ತೇಲಿ ಮುಳುಗುತ್ತಿದ್ದ ಪ್ಲಾಸ್ಟಿಕ್ ಕವರುಗಳು, ಬಟ್ಟೆ ತುಂಡುಗಳು, ಬಾಟಲಿಗಳು, ನೀರ ತಳದಲ್ಲಿ ರಕ್ತದಂತೆ ಹರಡಿ ನಿಂತಿದ್ದ ಕುಂಕುಮ, ಪಾಚಿ. ಅಲ್ಲೇ ಹಲ ಭಕ್ತರು ಮೀಯುತ್ತಿದ್ದರು. ಆ ಕ್ಷಣ ನನಗೆ ಹೊಳೆದಿರಲೇ ಇಲ್ಲ - ಇದು ಯಾತ್ರಾಸ್ಥಳ, ಬೇರೇನನ್ನಾದರೂ ಇಲ್ಲಿ ನಿರೀಕ್ಷಿಸುವುದು ಮೂರ್ಖತನ.


ಮನಸ್ಸು ಭಾರವಾಗಿತ್ತು. ಹಾಗೇ ನದಿಯ ಮಧ್ಯ ನಡೆಯುತ್ತಾ ದೇಗುಲದ ಸ್ಥಳಬಿಟ್ಟು ಸುಮಾರು ಅರ್ಧ ಕಿಲೋಮೀಟರು ಮೇಲೆ ಸೇತುವೆಯ ಕಡೆಗೆ ನಡೆದು ಹೋದೆ. ಗುಡಿಗೆ ದೂರವಿದ್ದುದರಿಂದಲೋ ಏನೋ, ಇಲ್ಲಿ ಕೊಚ್ಚೆಯಿರಲಿಲ್ಲ. ಇದು ನದಿಯ ಪಾತ್ರದಲ್ಲಿ ಗುಡಿಗಿಂತಾ ಮೇಲಿತ್ತು. ನದಿಯ ಮಧ್ಯಭಾಗದಲ್ಲಿ ನೀರು ಜುಳುಜುಳು ಹರಿಯುತ್ತಿತ್ತು. ಅಲ್ಲಿಲ್ಲಿ ತೇಲಿಬರುತ್ತಿದ್ದ ಪಾಚಿ-ಹಾವಸೆಯನ್ನು ಬಿಟ್ಟರೆ ನೀರು ಬಹುತೇಕ ಸ್ವಚ್ಛವಾಗಿತ್ತು. ಸ್ನಾನ ಮಾಡುವುದೇ - ಕೊಳಚೆ ನೀರಲ್ಲಿ? ಬುದ್ಧಿ ಭಾವನೆಗಳ ಯಥಾಪ್ರಕಾರದ ಹೊಯ್ದಾಟ ಸಾಗಿತ್ತು. ನಾನು ಇಲ್ಲಿಗೆ ಸುಮಾರು ಮೂವತ್ತು ವರ್ಷಗಳ ಕೆಳಗೆ ಬಂದಿದ್ದಾಗ ಎಂಟರ ಹುಡುಗ. ದೇಗುಲದ ಎದುರಲ್ಲೇ ಸ್ನಾನ ಮಾಡಿದ್ದೆ. ಆಗಲೂ ನೀರು ಕೊಚ್ಚೆಯಾಗಿತ್ತೇ, ನೆನಪಿಲ್ಲ. ಕೊಚ್ಚೆಯೇ ಇದ್ದಿರಬೇಕು - ಕೇವಲ ಮೂವತ್ತು ವರ್ಷಗಳ ಕಾಲಾವಧಿ ಭಕ್ತವೃಂದದ ಸ್ವರೂಪ ಬದಲಾವಣೆ ಮಾಡಿದ್ದಿರಲಾರದು. ಹಾಗಿದ್ದರೆ ಆದೇ ಕೊಚ್ಚೆಯಲ್ಲಿ ಮೀಯುವಾಗ ಅಥವ ಮಿಂದ ಮೇಲೆ ನನಗೇನೂ ಆಗಲಿಲ್ಲ? ಆಗೆಲ್ಲಾ ಏನೂ ಅನಿಸುತ್ತಲೂ ಇರಲಿಲ್ಲ!


ಮೇಲೆ ಬಿಸಿಲು ಕುದಿಯುತ್ತಿತ್ತು. ಒಳಗೆ ಹೊಟ್ಟೆ ಬೇಯುತ್ತಿತ್ತು. ಸ್ನಾನವಂತೂ ಸಾಧ್ಯವಿರಲಿಲ್ಲ, ಜೇಬೊಳಗೆ ಮೊಬೈಲಿತ್ತು, ದುಡ್ಡಿತ್ತು. ಹಾಗೇ ಬಗ್ಗಿ ಆ ತೆಳು ತಿಳಿ ನೀರನ್ನು ಮುಖಕ್ಕೆರಚಿಕೊಂಡೆ. ಮತ್ತೂ ಬೇಕೆನಿಸಿತು. ಮೊಬೈಲು ಇತ್ಯಾದಿಯನ್ನು ಪ್ಯಾಂಟಿನ ಜೇಬಿನಲ್ಲಿಟ್ಟು, ಬೊಗಸೆಯಲ್ಲಿ ಮತ್ತಷ್ಟು ನೀರು ಮೊಗೆದು ತಲೆಗೆ ಸುರಿದುಕೊಂಡೆ. ಹಾಯೆನಿಸಿತು; ಇನ್ನಷ್ಟು ಸುರಿದುಕೊಂಡೆ. ಮೂವತ್ತೋ ಮುನ್ನೂರೋ ವರ್ಷಗಳಿಂದ ನದಿಯ ಶೀತಲತೆ ಬದಲಾಗಿರಲಿಲ್ಲ; ಅದರ ಮಾರ್ದವ ಕೂಡ. ದಾಸರು, ಮರಾಠಿಯ ಸಂತರು ನೆನಪಿಗೆ ಬಂದರು. ಆ ಸ್ಪರ್ಷದ ಪವಿತ್ರತೆ ಕೂಡ ಕಡಿಮೆಯಾಗಿಲ್ಲ ಎಂದುಕೊಂಡೆ. ತಂಬೆಲರು ಬೀಸಿತು. ಹಾಯೆನಿಸಿತು. ನದಿ ಬಿಟ್ಟು ವಿಶಾಲ ಮರಳ ಹಾಸಿನ ಮೇಲೆ ಬರಿಗಾಲಲ್ಲಿ ನಡೆಯುತ್ತಾ ಗುಡಿಯಕಡೆ ನಡೆದೆ. ಪುಂಡಲೀಕನ ಗುಡಿಯಲ್ಲಿ ಪುರೋಹಿತನೊಬ್ಬ ಭಕ್ತನಿಗೂ ದೇವರಿಗೂ ಮಧ್ಯಸ್ತಿಕೆ ನಡೆಸುತ್ತಿದ್ದ. ಹಾಗೆಯೇ ಮೇಲೆ ಬಂದೆ. ಮತ್ತೊಬ್ಬ ಧುತ್ತನೆ ಪ್ರತ್ಯಕ್ಷನಾಗಿ ನಾನು ಬೇಡ-ಬೇಕೆನ್ನುವಷ್ಟರಲ್ಲಿ ಹಣೆಗೆ ಚಂದನ ತಿಲಕವಿಟ್ಟು ಹಣ ಬೇಡಿದ. ಅವನ ಕೈಗೊಂದೈದು ರುಪಾಯಿ ತುರುಕಿ ವಿಠಲನ ಗುಡಿಯ ಕಡೆ ಬಂದೆ. ತಲೆಯ ಮೇಲೆ ಚಂದ್ರಭಾಗೆಯ ತಂಪಿತ್ತು. ಹಣೆಯ ಮೇಲೆ ಐದು ರೂಪಾಯಿನ ಚಂದನ ತಣ್ಣಗೆ ಕೊರೆಯುತ್ತಿತ್ತು. ಗುಡಿಯೊಳಗೆ ತಣ್ಣಗಿತ್ತು. ವಿಠಲನ ಕಾಡುಗಲ್ಲಿನ ಮೂರ್ತಿ ನಗುತ್ತಿತ್ತು. ಅದುವರೆಗಿಲ್ಲದ ತಾದಾತ್ಮ್ಯ ಸಿದ್ಧಿಸಿತ್ತು. ದಿಕ್ಕು ತಪ್ಪಿಸುವ ದೇಗುಲ ಸಿಬ್ಬಂದಿಯ "ಛಲಾ ಛಲಾ..." ಉದ್ಗಾರ ನಿಜಕ್ಕೂ ದಿಕ್ಕು ತಪ್ಪಿಸಲಿಲ್ಲ. ಪಾದಸ್ಪರ್ಷ ಆಪ್ಯಾಯಮಾನವಾಗಿತ್ತು. "ನಾಮ ತುಝೇ ಸಾಂಗ ಲೇ, ಐಕತಾ ಮನ ಮಾಝೇ ರಂಗಲೇ... " ಅಭಂಗವಾಣಿಯೊಂದು ಮನಸಿನಲ್ಲಿ ಮೂಡಿ ಅಲ್ಲೇ ತುಂಡಾಯಿತು; ಕಂಠ ಗದ್ಗದವಾಯಿತು. ಅಲ್ಲಿ ಉಳಿಯುವ ಯೋಜನೆಯನ್ನು ರದ್ದುಗೊಳಿಸಿ ಪುಣೆಯ ಬಸ್ಸಿಗಾಗಿ ನಡೆದೆ.


ಇನ್ನು ವಾಪಸು ಪ್ರಯಾಣದ ಪಡಿಪಾಟಲುಗಳು, ವಾರಕರಿ ಭಕ್ತರ ಮರು ಪ್ರಯಾಣದಂತೆಯೇ irrelevant and uninteresting. ಅಲ್ಲೆಲ್ಲೋ ಒಂದು ಪುರಂಧರ ಕಂಬವಿದೆಯಂತೆ; ಸಮರ್ಥ ರಾಮದಾಸರ ಸ್ಮಾರಕವೇನೋ ಇದೆಯಂತೆ... ಸಾಧ್ಯವಾದರೆ ಮತ್ತೊಮ್ಮೆ ಹೋಗಬೇಕು, ಬೇರೆ ನಿರೀಕ್ಷೆಗಳಿಲ್ಲದೆ.