Sunday, June 22, 2008

ಮರಳುಗಾಡಿನಲ್ಲಿ oh yes yes - ಒಂದು ಕನ್ನಡ ಕಲಾಪ

ಮಾತಿನ ಗಾರುಡಿಗ ಬೇಂದ್ರೆಯವರ ಮಾತಿನ ಮೋಡಿ, ಪದಗಳ ಜೊತೆಯ ಚಕ್ಕಂದ ಯಾರಿಗೆ ಗೊತ್ತಿಲ್ಲ? ಹೀಗೇ ಒಂದು ಪ್ರಸಂಗ; ಬೇಂದ್ರೆ ಮಿತ್ರರೊಡಗೂಡಿ ಮತ್ತೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಹೊರಗೆಲ್ಲೋ ಹೋಗಿದ್ದ ಮಿತ್ರರಿಗೆ ಕಾಯುತ್ತಾ ಕುಳಿತಿದ್ದಾಗ ಉಳಿದವರಿಗೆ ಹಾಗೇ ಸ್ವಲ್ಪ ಹೊರಗೆ ಸುತ್ತಾಡಿ ಬರೋಣವೆಂಬ ಇರಾದೆ. ಉರಿಬಿಸಿಲಲ್ಲಿ ಸುಮ್ಮನೇ ಸುತ್ತಲು ಒಪ್ಪದ ಬೇಂದ್ರೆ ಮಿತ್ರರ ಮನೆಯಲ್ಲೇ ಉಳಿದರಂತೆ. ಹೀಗೆ ಮನೆಯಲ್ಲಿ ಉಳಿದ ಬೇಂದ್ರೆಗೆ, ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ಗಾತ್ರದ ತಂಬಿಟ್ಟು ತಂದಿತ್ತರಂತೆ. ತಂಬಿಟ್ಟು ತಿಂದು ಮುಗಿಸುವಷ್ಟರಲ್ಲಿ ಹಿಂದಿರುಗಿದ ಉಳಿದ ಮಿತ್ರರು, "ಹೀಗೆ ನಮ್ಮನ್ನೆಲ್ಲಾ ಬಿಟ್ಟು ನೀವೊಬ್ಬರೇ ತಂಬಿಟ್ಟು ತಿನ್ನಬಹುದೇ" ಎಂದು ಆಕ್ಷೇಪಿಸಿದ್ದಕ್ಕೆ, ಬೇಂದ್ರೆಯವರ ಉತ್ತರ, "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ಟು ತಿಂದ್ವಿ" ("ನೀವು ನಮ್ಮನ್ನು ಬಿಟ್ಟು ಹೋದ್ರಿ, ನಾವು ತಮ್ಮನ್ನು ಬಿಟ್ಟು ತಿಂದ್ವಿ"). ಇದನ್ನು ಎನ್ಕೆಯವರು ಎಲ್ಲೋ ಬರೆದದ್ದೋ ಹೇಳಿದ್ದೋ ನೆನಪು.

ಇಂಥದ್ದು ಎಷ್ಟೋ ಪನ್ನುಗಳು, ಬೇಂದ್ರೆಯವರ ಜೋಳಿಗೆಯಲ್ಲಿ. ಇಂಥದ್ದೇ ಮತ್ತೊಂದು ಪ್ರಸಂಗ; ಜ್ಞಾನಪೀಠ ಪ್ರಶಸ್ತಿ ಬಂದ ಹೊಸದರಲ್ಲಿ ಬೇಂದ್ರೆಯವರಿಗೊಂದು ಸನ್ಮಾನ; ರಿಕ್ಷಾವೊಂದನ್ನು ಹಿಡಿದು ಸಮಾರಂಭಕ್ಕೆ ಬಂದ ಬೇಂದ್ರೆ ಮಾಸ್ತರಿಗೆ ಅತಿಥಿಯೊಬ್ಬರ ಕಳಕಳಿಯ ಪ್ರಶ್ನೆ, "ರಿಕ್ಷಾದಾಗ ಬಂದ್ರೇನು ಮಾಸ್ತರೇ"? ಜ್ಞಾನಪೀಠ ಪ್ರಶಸ್ತಿ ಪಡೆದ ವರಕವಿ ಕೇವಲ ರಿಕ್ಷಾದಲ್ಲಿ ಪಯಣಿಸುವುದೇ ಅನ್ನೋ ಕಳಕಳಿ. ಅದಕ್ಕೆ ಬೇಂದ್ರೆಯವರ ಜವಾಬು ನೋಡಿ. "ಕಾರಿರಲಿಲ್ಲ, ಅಂತsರಿಕ್ಷದಾಗೆ ಬಂದೆ" ("car ಇರಲಿಲ್ಲ ಅಂತ, ರಿಕ್ಷದಾಗೆ ಬಂದೆ"). ಇದನ್ನು ಮೊನ್ನೆ ನೆನಪಿಗೆ ತಂದವರು ಜರಗನಹಳ್ಳಿ ಶಿವಶಂಕರ್. ಸಂದರ್ಭ, ಧ್ವನಿ ಪ್ರತಿಷ್ಠಾನದ "ಶ್ರೀರಂಗ - ರಂಗ ಪ್ರಶಸ್ತಿ" ಪ್ರದಾನ ಸಮಾರಂಭ; ಸ್ಥಳ, ದುಬೈನ ಭಾರತೀಯ ದೂತಾವಾಸದ ಸಭಾಂಗಣ.

"ನಾಳೆ ದುಬೈನಲ್ಲಿ ಕಪ್ಪಣ್ಣ ಮತ್ತೆ ಜರಗನಹಳ್ಳಿ ಶಿವಶಂಕರ್ ಗೆ ಪ್ರಶಸ್ತಿ ಪ್ರದಾನ, ಕಂಬಾರರು ಬರ್ತಾರೆ, ಮತ್ತೆ ಹಯವದನ ನಾಟಕವುಂಟು ಬರ್ತೀರ ಮಾರಾಯರೆ" ಎಂದು ಶಾರ್ಜಾದಲ್ಲಿ ಹೊಸದಾಗಿ ಪರಿಚಯವಾದ ಗೆಳೆಯ ಗಣೇಶ್ ಆಹ್ವಾನಿಸಿದಾಗ ತುಂಬಾ ಖುಶಿಯಾಯಿತು, ಎರಡು ಕಾರಣಕ್ಕೆ. ಯಾವುದೋ ನನ್ನದಲ್ಲದ ನಾಡಿನಲ್ಲಿ (ಸುತ್ತೆಲ್ಲಾ ಭಾರತೀಯರೇ ತುಂಬಿದ್ದರೂ ಬರೀ ಹಿಂದಿ-ತಮಿಳುಮಯ ವಾತಾವರಣದಲ್ಲಿ) ಇದ್ದಕ್ಕಿದ್ದಂತೆ ಕನ್ನಡ ಕೇಳಿದ್ದಕ್ಕೆ; ಅನಿರೀಕ್ಷಿತವಾಗಿ ಒಂದು ಸಾಹಿತ್ಯಕ ಸಮಾರಂಭಕ್ಕೆ ಹೋಗುವ ಅವಕಾಶ ದಕ್ಕಿದ್ದಕ್ಕಾಗಿ (ಬೆಂಗಳೂರಿನಲ್ಲಿ ಇಂಥಾ ಅವಕಾಶಗಳು ದಿನಾ ಒದಗುತ್ತಿದ್ದರೂ ಒಮ್ಮೆಯೂ ಹೋಗಲಾಗುತ್ತಿರಲಿಲ್ಲ!)

ಶುಕ್ರವಾರದ ರಜೆ, ಎರಡು ಗಂಟೆ ಕಾದು ಅಂತೂ ಶಾರ್ಜಾದಿಂದ ದುಬೈಗೆ ಒಂದು ಟಾಕ್ಸಿ ಹಿಡಿಯುವಷ್ಟರಲ್ಲಿ ಸಾಕಾಯಿತು. ಮಧ್ಯಪ್ರಾಚ್ಯದಲ್ಲೀಗ ಕಡು ಬೇಸಿಗೆ, ಮರಳುಗಾಳಿ (sand storm) ಕಾಲ. ಹತ್ತಿರದ ಮರಳುಗಾಡಿನಲ್ಲೆದ್ದ ಬಿರುಗಾಳಿಯಿಂದಾಗಿ ಇಡೀ ನಗರ ದಟ್ಟ ಗೋಧೂಳಿಯಂಥ ಧೂಳಿನಲ್ಲಿ ಮುಳುಗಿತ್ತು. ಹೊರಗಿನ ಬಿರುಬಿಸಿಲೊಂದು ಇಲ್ಲದಿದ್ದರೆ ಇದು ಖಂಡಿತಾ ಹಿಮದ ಮುಸುಕೆಂದು ಯಾರಾದರೂ ಹೇಳಿಬಡಬಹುದು. ಮರುಭೂಮಿಯ ಜಿಯಾಗ್ರಫಿಯ ನೇರ ಪರಿಚಯವಿಲ್ಲದ ನನಗೆ ಇದೊಂದು ಹೊಸ ಅನುಭವ, ಥ್ರಿಲ್ಲಿಂಗ್. ತೀರ ಹತ್ತಿರದ ಗಗನಚುಂಬೀ ಕಟ್ಟಡಗಳೂ ಮಂಜುಮಂಜಾಗಿ ಕಾಣುವಷ್ಟು ಧೂಳು, ಧೂಳಿನ ಜವನಿಕೆಯ ಹಿಂದೆ ಸೂರ್ಯನೋ ಚಂದ್ರನೋ ಗುರುತು ಸಿಗದಷ್ಟು ಬೆಳ್ಳಗೆ ಬಿಳಿಚಿಕೊಂಡ ಸಂಜೆ ಆರರ ಸೂರ್ಯ! ವಾರಗಟ್ಟಲೇ ದಿನಪೂರ್ತಿ ಹೀಗೇ ಇರುತ್ತದಂತೆ. ಇಂಥಾ ವಾತಾವರಣದಲ್ಲಿ ಮರಳುಗಾಡಿನ ಒಳಹೊರಗೆ ಸುಳಿದಾಡುವುದು, ಹೈ-ವೇ ಗಳಲ್ಲಿ ಪಯಣಿಸುವುದು ಸುರಕ್ಷಿತವಲ್ಲವಂತೆ; ವಿಮಾನದಿಂದ ಕಂಡ ದೃಶ್ಯ, ಒಂದು ಭಾರಿ ಹೈ-ವೇ, ಒಂದು ಸ್ವಲ್ಪ ದೂರ ಪಯಣಿಸಿ ಅಗಾಧ ಮರಳು ರಾಶಿಯಡಿ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಹತ್ತಿರದಿಂದೊಮ್ಮೆ ನೋಡಬೇಕು.

ತುಂಬಿದ ವಾಹನ ದಟ್ಟಣೆಯಿಂದಾಗಿ ಹತ್ತು ನಿಮಿಷದ ರಸ್ತೆಯಲ್ಲಿ ಒಂದು ಗಂಟೆ ಪಯಣಿಸಿ ದುಬೈನ ಇಂಡಿಯನ್ ಕಾನ್ಸುಲೇಟ್ ತಲುಪಿ ಸಭಾಂಗಣ ಪ್ರವೇಶಿಸಿದರೆ ಸ್ವಾಗತಿಸಿದ್ದು ಘಮ್ಮನೆ ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆಯೇ ಇರಬೇಕು, ಇಲ್ಲವೆಂದರೆ ದುಬೈನ ಮರುಭೂಮಿಯಲ್ಲಿ ಮಲ್ಲಿಗೆಯೆಲ್ಲಿ ಬಂದೀತು! ಕನ್ನಡದ ಒಂದು ಕ್ರಿಮಿಯೂ ಕಾಣದ ವಾತಾವರಣದಲ್ಲಿ ಅಂದು ಕನ್ನಡದ್ದೇ ಒಂದು ದೊಡ್ಡ buble ನಿರ್ಮಾಣವಾಗಿತ್ತು. ಇಷ್ಟೊಂದು ಜನ "ನಮ್ಮವರು" ಅಲ್ಲಿ ನೆರೆದು, ನಿರ್ಭಿಡೆಯಾಗಿ ಕನ್ನಡ ಮಾತಾಡುವುದನ್ನು ನೋಡಿ ಒಂದು ಕ್ಷಣ ಕಂಠ ಗದ್ಗದವಾಗಿದ್ದಂತೂ ನಿಜ (ಅಥವ ನಾನು ಹಲವು ತಿಂಗಳಿಂದ ದೇಶಭ್ರಷ್ಟನಾಗಿ ಬದುಕುತ್ತಿರುವುದೂ ಈ ಉತ್ಕಂಠತೆಗೆ ಕಾರಣವಿದ್ದೀತು), ಅದೇನೇ ಇರಲಿ, ಈ missing-my-home ಮನಸ್ಥಿತಿ ಅಲ್ಲಿದ್ದ ಬಹುಪಾಲು ಜನರಲ್ಲಿ ಎದ್ದು ಕಾಣುತ್ತಿತ್ತು.

ಕಪ್ಪಣ್ಣ ತಮ್ಮ ಚಿಕ್ಕ-ಚೊಕ್ಕ ಮಾತಿನಲ್ಲಿ ಈ ಹೊರನಾಡ ಕನ್ನಡಿಗರ ಕನ್ನಡ ಸೇವೆಯನ್ನು ಶ್ಲಾಘಿಸಿದರೆ, ಜರಗನ ಹಳ್ಳಿ ತಮ್ಮ ಚುರುಕು ಚುಟುಕಗಳಿಂದ ರಂಜಿಸಿದರು. ಆದರೆ ತಮ್ಮ ಬಹುಪಾಲು ಭಾಷಣವನ್ನು ಅವರು ತಮ್ಮ ಕವನ ವಾಚನಕ್ಕೇ ಮೀಸಲಿಟ್ಟಂತೆ ತೋರಿತು. ಕಂಬಾರರು ಎಂದಿನಂತೆ ತಮ್ಮ ಹೃದಯಕ್ಕೆ ಹತ್ತಿರವಾದ ಜನಪದ ಹಾಗೂ ವಚನ ಸಾಹಿತ್ಯದ ಶ್ರೇಷ್ಠತೆ-ಪ್ರಸ್ತುತತೆಗಳ ಬಗ್ಗೆ ಮಾತಾಡಿದರು. ಕಂಬಾರ ನನ್ನ ನೆಚ್ಚಿನ ಕವಿಗಳಲ್ಲೊಬ್ಬರು. ಆದರೂ ಅವರ ಕವನಗಳಲ್ಲಿ ಕಾಣುವ-ಕಾಡುವ ಆ ತೀವ್ರತೆ-ಗಾಢತೆ ಅಂದು ಅವರ ಮಾತಿನಲ್ಲಿ ಕಾಣಲಿಲ್ಲ; ಅಥವಾ ಔಪಚಾರಿಕ ಭಾಷಣವೊಂದರಲ್ಲಿ ಕಾವ್ಯದ ವೈಯಕ್ತಿಕತೆಯನ್ನು ನಿರೀಕ್ಷಿಸುವುದು ತಪ್ಪೇನೋ. ಕಾವ್ಯದಲ್ಲಿ ಭಾಷಣ ಅಭಾಸವೆನಿಸುವಂತೆ, ಭಾಷಣದಲ್ಲಿ ಕಾವ್ಯ ಅಪ್ರಸ್ತುತವೆನಿಸಬಹುದು? ಕಂಬಾರರಂಥ ವೈಯಕ್ತಿಕ ನೆಲೆಯ ಕವಿಯ ವಿಷಯದಲ್ಲಂತೂ ಇದು ಹೆಚ್ಚು ನಿಜವೆನಿಸುತ್ತದೆ ನನಗೆ.

ಮುಂದೆ ಪ್ರಸ್ತುತಪಡಿಸಿದ "ಹಯವದನ" ನಾಟಕಕ್ಕೆ ಪೂರ್ವಭಾವಿಯಾಗಿ ಅದರ ಕರ್ತೃ ಗಿರೀಶ್ ಕಾರ್ನಾಡರ ಸಂದೇಶವನ್ನು ಕಪ್ಪಣ್ಣ ತಿಳಿಸಿದರು. "ಹಯವದನ ನಾಟಕ ಮಾಡೋದೇ ಕಷ್ಟ, ಅಂಥಾ ಒಂದು challengeನ್ನು ಆಯ್ಕೆ ಮಾಡಿಕೊಂಡಿದ್ದಾರೆ, ನನಗೆ royalty ಏನೂ ಬೇಡ, ತಂಡಕ್ಕೆ ನನ್ನ good luck ತಿಳಿಸಿ" ಇದು ಕಾರ್ನಾಡರ ಸಂದೇಶದ ಸಾರಾಂಶ. ಕಾರ್ನಾಡರು ಉತ್ಸಾಹಿ ತಂಡಗಳನ್ನು ಅಷ್ಟೊಂದು ಹೆದರಿಸದಿದ್ದರೇ ಚೆನ್ನೇನೋ. Jokes apart, ಹಯವದನ ತನ್ನೆಲ್ಲ ಸಂಕೀರ್ಣತೆ, ದ್ವನಿ ಪೂರ್ಣತೆಗಳಿಂದ ರಂಗಪ್ರಯೋಗಕ್ಕೆ ಒಂದು ಸವಾಲೆಂಬುದೇನೋ ನಿಜ. ಈ ಮಾತನ್ನು ಮುಂದೆ ನಡೆದ ನಾಟಕ ಪ್ರದರ್ಶನ ಕೂಡ ಮತ್ತಷ್ಟು ದೃಢಪಡಿಸಿತು.

ತಂಡದ ಪ್ರದರ್ಶನದಲ್ಲಿ ಪರಿಣತಿ, ಪರಿಶ್ರಮಗಳಿಗಿಂತ ಹೆಚ್ಚಾಗಿ ಎದ್ದು ಕಾಣುತ್ತಿದ್ದದ್ದು, ಖುಷಿ ಕೊಟ್ಟದ್ದು ಅದರ ಉತ್ಸಾಹ, ಸಡಗರ ಮತ್ತು ಆ involvement. ಬಹುಶ: ಪ್ರದರ್ಶನವನ್ನು ಹೆಚ್ಚು ಪ್ರಿಯಗೊಳಿಸಿದ್ದು ಈ ಉತ್ಸಾಹವೇ ಇರಬೇಕು. ಹಯವದನವನ್ನು ಹೆಚ್ಚು "professional" ಆಗಿ ಅದರೆಲ್ಲಾ ಸಂಕೀರ್ಣತೆಗಳೊಂದಿಗೆ ಪ್ರಸ್ತುತಗೊಳಿಸುವ ಬೇಕಾದಷ್ಟು ವೃತ್ತಿಪರ ಹವ್ಯಾಸೀ ತಂಡಗಳಿವೆ. ಇನ್ನೊಮ್ಮೆ serious ಆಗಿ ನೋಡಿದರಾದೀತು.

ಧ್ವನಿ ಪ್ರತಿಷ್ಠಾನದ ೨೩ನೇ ವಾರ್ಷಿಕೋತ್ಸವವಂತೆ ಇದು. ಆಚರಿಸಿಕೊಂಡ ರೀತಿ ಮನಸ್ಸಿಗೆ ಮುದ ನೀಡಿತು, ಚೆನ್ನಾಗಿತ್ತು. ಸಂಸ್ಥೆಗೆ All the best.