Friday, March 24, 2017

ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

 
ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ.  ಆದರೆ ಪಂಪನ ದುರ್ಯೋಧನ?  ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರಸಂಗ, ತನ್ನ ಹಲವು ಅಂತರ್ಧ್ವನಿಗಳಿಂದಾಗಿ ಪಂಪಭಾರತದ ಬಹು ಶಕ್ತವಾದ ಚಿತ್ರಣಗಳಲ್ಲೊಂದಾಗಿದೆ.  ಅದನ್ನೊಂದಿಷ್ಟು ನೋಡೋಣ.

ಕುರುಕ್ಷೇತ್ರದ ಯುದ್ಧ ಕೊನೆಯ ಹಂತಕ್ಕೆ ಬಂದಿದೆ.  ತನ್ನವರೆಲ್ಲರನ್ನೂ ಕಳೆದುಕೊಂಡು ಒಂಟಿಯಾಗಿರುವ ದುರ್ಯೋಧನನೀಗ ಪಾಂಡವರನ್ನು ಇದಿರಿಸಬೇಕಿದೆ.  ಅಳಿದುಳಿದ ಶತ್ರುಗಳನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿರುವ ಪಾಂಡವರು ದುರ್ಯೋಧನನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತಿದ್ದಾರೆ.  ಇತ್ತ ಅಶ್ವತ್ಥಾಮ ಕೃಪ ಕೃತವರ್ಮರೂ ಯುದ್ಧರಂಗದಿಂದ ಮರೆಯಾದ ಸ್ವಾಮಿಯನ್ನು ಸೇರಲು ಆತನಿಗಾಗಿ ಹುಡುಕುತ್ತಿದ್ದಾರೆ.  ಕೊನೆಯದಾಗೊಮ್ಮೆ ಭೀಷ್ಮರನ್ನು ಕಂಡು ಹೋಗಬೇಕೆಂಬ ಉದ್ದೇಶದಿಂದ, ಭೀಕರವಾದ ರಣಭೂಮಿಯಲ್ಲಿ ಎಡವುತ್ತಾ ತೊಡರುತ್ತಾ ಸಂಜಯನೊಡನೆ ಭೀಷ್ಮನನ್ನು ಹುಡುಕಿಕೊಂಡು ಬಂದಿದ್ದಾನೆ ದುರ್ಯೋಧನ.  ಒಬ್ಬೊಂಟಿಯಾದ ದುರ್ಯೋಧನಿಗೆ ಪಾಂಡವರಿಂದ ಉಳಿಗಾಲವಿಲ್ಲವೆಂದರಿತ ಭೀಷ್ಮರು ಅವನನ್ನು ಸಂಧಿಗೊಡಂಬಡುವಂತೆ ಅನುನಯಿಸುತ್ತಾರೆ.  ಸಹಜವಾಗಿಯೇ ದುರ್ಯೋಧನನು ಅದಕ್ಕೊಪ್ಪದಿದ್ದಾಗ - ಕೊನೆಯ ಪಕ್ಷ ಎಲ್ಲೋ ಇವನನ್ನರಸುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರು ಇವನನ್ನು ಕಂಡು ಸೇರುವವರೆಗಾದರೂ - ರಕ್ಷಿಸಬೇಕೆಂದು ಹವಣಿಸುತ್ತಾರೆ.  ಆದರೆ ಅಡಗಿರಲು ಅಭಿಮಾನಧನನಾದ ದುರ್ಯೋಧನನು ಒಪ್ಪುವನೇ?  ಅದಕ್ಕಾಗಿಯೇ "ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತೆ" ವೈಶಂಪಾಯನ ಸರೋವರಲ್ಲಡಗಿದ್ದು, ನಾಳೆ ಬಲದೇವ, ಅಶ್ವತ್ಥಾಮ ಕೃಪ ಕೃತವರ್ಮರು ಬಂದೊದಗಿದೊಡನೆ ಶತ್ರುಗಳ ಮೇಲೆ ಬಿದ್ದು ಗೆಲ್ಲುವೆಯಂತೆ ಎಂದು ಅವನ ಮನವೊಲಿಸಿ ಜಲಮಂತ್ರವನ್ನುಪದೇಶಿಸಿ ಅವನನ್ನು ವೈಶಂಪಾಯನಕ್ಕೆ ಕಳಿಸುತ್ತಾರೆ.

ಅವನಲ್ಲಿಗೆ ಹೋಗುವ ದಾರಿಯಲ್ಲಿ ಯುದ್ಧಭೂಮಿಯನ್ನು ಹಾದು ಹೋಗಬೇಕಲ್ಲ - ಹೀಗೆ ಹೋಗುವಾಗ ದುರ್ಯೋಧನನ ಯುದ್ಧದ ಘೋರವನ್ನು ಅವನಿಗೇ ಕಾಣಿಸುತ್ತಾನೆ ಕವಿ:

ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ

ಯುದ್ಧಭೂಮಿಯಲ್ಲಿ ಸುಟ್ಟುರಿಯುತ್ತಿರುವ ರಥಗಳಿಂದ ಹೊರಟ ಬೆಂಕಿ ತನ್ನ ಸಾವಿರ ಕೆನ್ನಾಲಗೆಗಳನ್ನು ಸುತ್ತೆಲ್ಲ ಹರಡಿರಲು ಭೀಕರ ರಣಪಿಶಾಚಿಗಳು ಆ ಬೆಂಕಿಯಲ್ಲಿ ಸಿಕ್ಕಿ ಬೇಯುತ್ತಿರುವ ಹೆಣಗಳ ರಾಶಿಯಿಂದ ಬೇಯಬೇಯುತ್ತಿರುವಂತೆಯೇ ಕೈಕಾಲುಗಳನ್ನು ಚಕ್ಕಮೊಕ್ಕೆಂದು ಕಿತ್ತು ತಿನ್ನುತ್ತಿರುವ ಭಯಾನಕವಾದ ದೃಶ್ಯವನ್ನು ದುರ್ಯೋಧನನು ಕಾಣುತ್ತಾನೆ.  ಅಷ್ಟೇ ಅಲ್ಲದೇ "ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ (ಇನ್ನೂ ಸುಟ್ಟುರಿಯುತ್ತಿರುವ ಹೆಣಗಳನ್ನು ನರಿಗಳು ತಮ್ಮ ಬಾಯಲ್ಲಿ ಕಚ್ಚಿಕೊಂಡಿದ್ದರೆ, ಹಳೆಯ ಬೇವಿನೆಣ್ಣೆಯಲ್ಲಿ ನೆನೆಸಿದ ಬೆಳ್ಳುಳ್ಳಿ ಸುಟ್ಟಂತೆ ನಾರುವ ಅದರ ವಾಸನೆಯನ್ನು ಸಹಿಸಲಾಗದೇ) ದಾಪುಗಾಲಿಡುತ್ತಾ ಆ ಯುದ್ಧಭೂಮಿಯನ್ನು ಬೇಗಬೇಗ ದಾಟಿ ದುರ್ಯೋಧನ ವೈಶಂಪಾಯನ ಸರೋವರಕ್ಕೆ ಬರುತ್ತಾನೆ.

ಆ ವೈಶಂಪಾಯನಸರೋವರವಾದರೂ ಹೇಗೆ ಕಾಣುತ್ತಿದೆ - ಪ್ರಳಯಕಾಲದ ಹೊಡೆತಕ್ಕೆ ಅಷ್ಟದಿಕ್ಕುಗಳ ಕೀಲುಗಳೇ ಕಳಚಿ ಆಕಾಶವೇ ಭೂಮಿಯ ಮೇಲೆ ಜರಿದು ಬಿದ್ದಿದೆಯೋ; ಆದಿವರಾಹನು ಸಮುದ್ರಮುದ್ರಿತಧರಾಮಂಡಳವನ್ನು ರಸಾತಳದಿಂದ ಮೇಲೆತ್ತಿದಾಗ ಆಕಾಶವೇ ಜಲಾವೃತವಾಗಿಬಿಟ್ಟಿತೋ (ಅಷ್ಟು ವಿಸ್ತಾರವಾಗಿ, ಕಣ್ಣು ಹರಿಯುವಷ್ಟು ದೂರಕ್ಕೂ ಗಗನವನ್ನು ಪ್ರತಿಫಲಿಸುತ್ತಿದ್ದ ಸರೋವರ)!  ಅಂಥಾ ವೈಶಂಪಾಯನ ಸರೋವರವನ್ನು ಕವಿ ವರ್ಣಿಸುವ ರೀತಿಯಿದು:

ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ

ಇದು ಪಾತಾಳಬಿಲಕ್ಕೆ ಬಾಗಿಲೋ, ಘೋರಾಂಧಕಾರವು ವಾಸಿಸಲಿಕ್ಕಾಗಿಯೇ ಮಾಡಿದ ಭಾವಿಯೋ, ಪ್ರಳಯಕಾಲದ ಭೀಕರ ಕಪ್ಪುಮೋಡಗಳ ನೆರಳೋ ಎಂಬಂತೆ ಕಡುಗಪ್ಪು-ನೀಲಿಯ ಗಾಜಿನಂತಿದ್ದ ನೀರಿಂದ ತುಂಬಿ, ಆಳವಾಗಿ, ಬಕಬಲಾಕಗಳ ಅರಚುವಿಕೆಯಿಂದ ಗಿಜಿಗುಟ್ಟಿಹೋಗಿತ್ತು ವೈಶಂಪಾಯನ ಸರೋವರ!

ಸರೋವರವೊಂದನ್ನು ಇಷ್ಟು ಗಾಢವಾಗಿ, ಅನಿಷ್ಟಕರವಾಗಿ ವರ್ಣಿಸಲು ಸಾಧ್ಯವೇ?  ಸಾಮಾನ್ಯವಾಗಿ ಸರೋವರವರ್ಣನೆಯೆಂದರೆ ಕವಿಗಳು ಅದರ ಸೌಂದರ್ಯವನ್ನು ವರ್ಣಿಸುತ್ತಾರೆ - ಅದರ ಅಂದಚಂದ, ಅದರ ನೀರು, ಅದರ ಬಿಳ್ಪು, ತೆಳ್ಪು, ತಂಪು, ಅದರಲ್ಲರಳಿದ ಹೂವುಗಳು, ಪಕ್ಷಿಸಂಕುಲ, ಸುತ್ತಲ ವನರಾಜಿ, ಹೀಗೆ, ಆ ಸರೋವರಗಳೂ ಆಳವಾಗಿ, ವಿಶಾಲವಾಗಿ, ಕಡುಸಂಜೆ ಸಮಯವಾದರೆ ನೀರೂ ಕಪ್ಪಾಗಿಯೇ ಇದ್ದೀತು.  ಆದರೂ ಕವಿಯ ವರ್ಣನೆಯಲ್ಲಿ ಅದು ಸರ್ವಾಂಗಸುಂದರವಾಗಿಯೇ ಹೊರಹೊಮ್ಮುತ್ತದೆ.  ಹಾಗೆಯೇ ಈ ವೈಶಂಪಾಯನಸರೋವರದಲ್ಲಿಯೂ ವಿಶಾಲತೆಯಿದೆ, ಆಳವಿದೆ, ತಂಪಿದೆ, ಬಕಬಲಾಕಾದಿ ಪಕ್ಷಿಗಳೂ ಇದೆ - ಸೌಂದರ್ಯವರ್ಣನೆಗೆ ಬೇಕಾದ ಅಂಶಗಳೆಲ್ಲವೂ ಇದೆ.  ಆದರೆ ಸೌಂದರ್ಯವನ್ನು ಕಾಣಲು ಬೇಕಿರುವ ಕಣ್ಣು ಮಾತ್ರ ಇಲ್ಲ - ದುರ್ಯೋಧನನಲ್ಲಿ.  ಅವನೀಗ ಯುದ್ಧದಲ್ಲಿ ಬಹುತೇಕ ಸೋತಿದ್ದಾನೆ, ಎಲ್ಲರನ್ನೂ ಕಳೆದುಕೊಂಡಿದ್ದಾನೆ, ಇವನಿಗಾಗಿಯೇ ಹುಡುಕುತ್ತಿರುವ ಪಾಂಡವರು ಯಾವ ಗಳಿಗೆಯಲ್ಲಾದರೂ ಬಂದೆರಗಬಹುದು.  ಆ ಭಯವನ್ನೂ ಮೀರಿದ ಭಯಂಕರವಾದ ಅಪಮಾನದ ಕೆಲಸವನ್ನೀಗ ಕೈಗೊಳ್ಳಲಿದ್ದಾನೆ ಈಗ, ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು,  ಇಂತಿರುವಲ್ಲಿ ಸರೋವರದ ಸೌಂದರ್ಯವರ್ಣನೆಯನ್ನು ಮಾಡುವ ರಸಾಭಾಸಕ್ಕೆ ಕವಿ ಎಳಸಬಾರದು.  ಆದ್ದರಿಂದಲೇ ಸರೋವರದ ಸೌಂದರ್ಯಕ್ಕಿಂತ ಅದು ಆ ಕ್ಷಣಕ್ಕೆ ತೋರುತ್ತಿರುವ ಬೀಭತ್ಸತೆಯನ್ನೇ ಕವಿ ಕಟ್ಟಿಕೊಡುತ್ತಾನೆ - ಅದಕ್ಕೇ ಗಗನವೇ ಜರಿದು ಬಿದ್ದಿದೆಯೋ, ಸಮುದ್ರವೇ ಆಕಾಶವನ್ನು ತುಂಬಿದೆಯೋ ಎಂಬಂತಿರುವ ವಿಸ್ತಾರವಾದ ಜಲರಾಶಿಯು ಪಾತಾಳದ ಬಾಗಿಲಿನಂತೆ, ಘೋರಾಂಧಕಾರಕ್ಕೆ ಮಾಡಿದ ಕೂಪದಂತೆ, ಪ್ರಳಯಕಾಲದ ಮೋಡಗಳ ಕರಿನೆರಳಂತೆ ಕಾಣುತ್ತದೆ.  ಬರೀ ಕಾಣುತ್ತದೆಯೇ?  ಕೇಳುತ್ತದೆ - ಕಿವಿಗಡಚಿಕ್ಕುತ್ತದೆ ಕೂಡ - ಆ ಸರೋವರವನ್ನು ತುಂಬಿದ್ದ ಜಲಪಕ್ಷಿಗಳ ಅರಚುವಿಕೆ - ಅದು ಕೇವಲ ಕಲರವಲ್ಲ, ರೌರವ!  ಅದಕ್ಕೆ ಕವಿ ಬಳಸಿಕೊಳ್ಳುವ ಪದವೂ ಅದೇ ಛಾಯೆಯನ್ನು ಕೊಡುವಂತಿದೆ - "ರಾವಾಕುಳಂ".  ರವ ಎಂದರೆ ಶಬ್ದ.  ಆಕುಲ/ಳ ಎಂದರೆ ತುಂಬಿಹೋದ, ಕೆದರಿಹೋದ, ಕದಡಿಹೋದ, ಕ್ಷೋಭೆಗೊಂಡ - ಆ ಸರೋವರ ಆ ಸಂಜೆ, ಪಕ್ಷಿಗಳ ಕೂಗಿನಿಂದ ಕ್ಷೋಭೆಗೊಂಡಿದೆ, ಕದಡಿಹೋಗಿದೆ.

ಆ ಪಕ್ಷಿಗಳಾದರೂ ಏಕೆ ಕೂಗುತ್ತಿವೆ, ಏನೆಂದು ಕೂಗುತ್ತಿವೆ?  ಈ ದುರ್ಯೋಧನನೀಗ ಪಾಂಡವರ, ಅದರಲ್ಲೂ ಭೀಮಾರ್ಜುನರ ಕೋಪಕ್ಕೆ ಪಕ್ಕಾಗಿದ್ದಾನೆ.  ಅವರ ಕ್ರೋಧಾಗ್ನಿ ಇವನನ್ನು ಎಲ್ಲಿದ್ದರೂ ಬಿಡದು; ಇವನಿಲ್ಲಿ ಬಂದರೆ, ಇವನೊಡನೆ ನಮ್ಮನ್ನೂ ಸುಟ್ಟು ಬೂದಿಮಾಡದೇ ಬಿಡದು.  ಆದ್ದರಿಂದ "ಇಲ್ಲಿ ಕದಡಬೇಡ, ಬರಬೇಡ ಬರಬೇಡ" ಎಂದು ದುರ್ಯೋಧನನಿಗೆ ಎಚ್ಚರಿಕೆಕೊಡುತ್ತಾ ಅಲ್ಲಿನ ಪಕ್ಷಿಗಳೆಲ್ಲಾ ಒಗ್ಗೊರಲಿನಿಂದ ಕೂಗುತ್ತಿದ್ದುವಂತೆ:

ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿ ರುಂದ್ರಫಣೀಂದ್ರಕೇತುವಂ

ಇಲ್ಲಿ ಕವಿ, ದುರ್ಯೋಧನನನ್ನು "ರುಂದ್ರಫಣೀಂದ್ರಕೇತು" ಎಂದು ನಿರ್ದೇಶಿಸುತ್ತಾನೆ.  ದುರ್ಯೋಧನನು ಫಣಿಕೇತನ (ಹಾವಿನ ಬಾವುಟವುಳ್ಳವನು) ಹೌದು.  ಆದರೆ ಕವಿ, ರುಂದ್ರಫಣೀಂದ್ರಕೇತು (ರುಂದ್ರ = ವಿಶಾಲವಾದ, ಅಗಲವಾದ, ಹರಡಿದ) ಎಂದು ನಿರ್ದೇಶಿಸಿರುವುದು ವಿಶಿಷ್ಟವಾಗಿದೆ.  ಈ "ರುಂದ್ರ" ವಿಶೇಷಣವು "ರುಂದ್ರಫಣೀಂದ್ರ"ನಾಗಿ ವಿಶಾಲವಾಗಿ ಹೆಡೆಬಿಚ್ಚಿದ ಹಾವನ್ನೂ ಸೂಚಿಸಬಹುದು, "ರುಂದ್ರಕೇತನ"ವಾಗಿ ಹರಡಿದ ಬಾವುಟವನ್ನೂ ಸೂಚಿಸಬಹುದು ಅಥವಾ "ರುಂದ್ರ ಫಣೀಂದ್ರಕೇತನ"ನಾಗಿ ಸ್ವತಃ ದುರ್ಯೋಧನನನ್ನೇ ಸೂಚಿಸಬಹುದು.  ಇದಾವುದರಿಂದಲೂ (ಅಥವಾ ಇದೆಲ್ಲದರಿಂದಲೂ), ಅದೀಗ ಕ್ರೋಧದಿಂದ ಹೆಡೆಯಗಲಿಸಿದ ಸರ್ಪದಂತೆ ಕೆರಳಿದ, ಕೆರಳಿ ಅರಳಿದ ದುರ್ಯೋಧನನ ಇರವನ್ನು "ರುಂದ್ರಫಣೀಂದ್ರಕೇತು" ಎಂಬ ಒಂದೇ ಮಾತಿನಲ್ಲಿ ಸೂಚಿಸಿಬಿಡುತ್ತಾನೆ ಕವಿ.  ಸರೋವರದ ಪಕ್ಷಿಗಳು ಕಂಡು ಬೆದರಿ, ಬೇಡಬೇಡವೆಂದು ಚೀರಲಿಕ್ಕೆ ಇದಕ್ಕಿಂತ ಕಾರಣ ಬೇಕೇ?  ಹೀಗೆ, ಸರೋವರವನ್ನು ಕಂಡಾಗ ದುರ್ಯೋಧನನ ಮನದಲ್ಲುಂಟಾದ ಭಾವದ ಪ್ರತಿಫಲನವನ್ನು, ಸ್ವತಃ ದುರ್ಯೋಧನನನ್ನು ಕಂಡು ಪಕ್ಷಿಗಳಲ್ಲುಂಟಾದ ಭಾವದಲ್ಲಿ ಕಟ್ಟಿಕೊಡುತ್ತಾನೆ.

ಇವೆಲ್ಲ ಕೇವಲ ಅಲಂಕಾರಗಳೆಂದೂ ಕವಿಚಮತ್ಕಾರಗಳೆಂದೂ ಓದಿ ಬಿಡುವಂಥದ್ದಲ್ಲ.  ಶಕ್ತಕವಿಯೊಬ್ಬ ಕೇವಲ ಚಪಲಕ್ಕಾಗಿ ಚಮತ್ಕಾರ ಪ್ರದರ್ಶಿಸಲಾರ.  ದುರ್ಯೋಧನನ ಆಗಿನ ಮನಸ್ಥಿತಿಯ ಪ್ರತಿಬಿಂಬವಾಗಿ ಚಿತ್ರಿತವಾಗುವ ವೈಶಂಪಾಯನ, ಇತರ ಸರೋವರ, ನದಿ, ಬೆಟ್ಟಗುಡ್ಡಗಳಂತಲ್ಲದೇ ಸ್ವತಃ ಒಂದು ಪಾತ್ರವಾಗಿಬಿಡುತ್ತದೆ.  ಭೀಷ್ಮರಿಂದ ಬೀಳ್ಕೊಂಡು ಉದ್ವಿಗ್ನಮನನಾಗಿ ಹೊರಡುವ ದುರ್ಯೋಧನನು ರಣಭೂಮಿಯಲ್ಲಿ ಕಂಡ ಬೀಭತ್ಸಗಳನ್ನು ಈಗಾಗಲೇ ನೋಡಿದೆವು.  ಅವೆಲ್ಲವೂ ಅವನ ಮನಸ್ಸಿನಲ್ಲಿ ಭಯಂಕರ ತುಮುಲವನ್ನೂ, ಭಯವನ್ನೂ, ಅಸಹ್ಯವನ್ನೂ, ಖಿನ್ನತೆಯನ್ನೂ ಹುಟ್ಟಿಸಿವೆ.  ಅಭಿಮಾನಧನನಾದ ದುರ್ಯೋಧನನು, ತನಗಿಷ್ಟವಿಲ್ಲದಿದ್ದರೂ ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು ತನ್ನ ವ್ಯಕ್ತಿತ್ವಕ್ಕೆ ಒಂದಿನಿತೂ ಒಗ್ಗದ ಕಾರ್ಯ ಮಾಡಲು ಇಲ್ಲಿಗೆ ಬಂದಿದ್ದಾನೆ.  ಶತ್ರುಗಳಿಗೆ ಹೆದರಿ ಹೇಡಿಯಂತೆ ನೀರಿನಲ್ಲಿ ಅವಿತುಕೊಳ್ಳುವುದು ದುರ್ಯೋಧನನಂಥಾ ವೀರನಿಗೆ ಸಾವಿಗಿಂತಲೂ ಕೆಟ್ಟದ್ದು, ಅದು ಆತನ ವ್ಯಕ್ತಿತ್ವ ಕಾಣುತ್ತಿರುವ ಅಧಃಪಾತ - ಆದ್ದರಿಂದಲೇ ತಾನೀಗ ಹೊಗಲಿರುವ ಸರೋವರ, ತನ್ನ ವ್ಯಕ್ತಿತ್ವವನ್ನೂ ಕೀರ್ತಿಯಶಸ್ಸುಗಳನ್ನೂ ಪಾತಾಳಕ್ಕೆ ಕೊಂಡೊಯ್ಯುವ ಬಾಗಿಲಿನಂತೆ ತೋರುತ್ತದೆ; ಸೂರ್ಯನಂತೆ ಬೆಳಗಿದ್ದ ತನ್ನ ಕೀರ್ತಿ ಅಡಗಲಿರುವ ಘೋರಾಂಧಕಾರದ ಕೂಪದಂತೆ ಕಾಣುತ್ತದೆ; ಇದಾದಮೇಲೆ ಘೋರ ಅಪಮಾನ ಅಪಕೀರ್ತಿಗಳಲ್ಲದೇ ಇನ್ನೇನುಳಿಯಿತು ದುರ್ಯೋಧನನಿಗೆ?  ಅದು ಆತನ ಪಾಲಿಗೆ ಪ್ರಳಯವೇ - ಮಹಾದುರಂತ!  ಆದ್ದರಿಂದಲೇ ಈ ಸರೋವರ ಪ್ರಳಯಮೇಘದ ಕರಿನೆರಳಂತೆ ಕಂಡರೆ ಆಶ್ಚರ್ಯವೇನು?  ಇನ್ನು ದುರ್ಯೋಧನನ ಅಪಯಶಸ್ಸನ್ನೇ ಕಿವಿಗಡಚಿಕ್ಕುತ್ತಿರುವ ಜಲಪಕ್ಷಿಗಳ ಕೂಗನ್ನು ಮೇಲೇ ವರ್ಣಿಸಿದೆ. 
ಕೊನೆಗೆ, ಗಾಯಗಳಿಂದ ರಕ್ತವೊಸರುತ್ತಿದ್ದ ಮೈಯನ್ನು ಒರೆಸಿ ತೊಳೆದು, ಜಲಾಭಿಮಂತ್ರಣಪೂರ್ವಕವಾಗಿ ಸರೋವರದಲ್ಲಿಳಿಯುವ ದುರ್ಯೋಧನನನ್ನು ಪಂಪ ಬಣ್ಣಿಸುವ ಕವಿ, "ತನ್ನ ತೇಜದಿಂದ ಸಮಸ್ತಭೂವಲಯವನ್ನು ಬೆಳಗಿ, ದೈತ್ಯರೊಡನೆ ಹೋರಾಡಿ ಕಳೆಗುಂದಿ ಬಳಲಿ ಕೊನೆಗೆ ಪಡುಗಡಲಲ್ಲಿ ಮುಳುಗುವ ಸೂರ್ಯನಂತೆ ಫಣಿರಾಜಕೇತನನು ಕೊಳದಲ್ಲಿ ಮುಳುಗಿದನು - ವಿಧಿ ಕಟ್ಟಿಟ್ಟದ್ದನ್ನು ಕಳೆಯುವವರಾರು!" ಎಂದು ನಿಟ್ಟುಸಿರಿಡುತ್ತಾನೆ - "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ರನ್ನನು ಕಟ್ಟಿಕೊಡುವ ದುರ್ಯೋಧನನ ಅವಸಾನದ ಚಿತ್ರಣವನ್ನು ಪಂಪ ಈಗಲೇ - ದುರ್ಯೋಧನನ ವೈಶಂಪಾಯನಪ್ರವೇಶದ ಸಂದರ್ಭದಲ್ಲೇ ಕೊಟ್ಟುಬಿಡುವುದು ವಿಶಿಷ್ಟವಾಗಿದೆ.  ದುರ್ಯೋಧನನ ತೇಜಸ್ಸಿನ ಅವಸಾನಕ್ಕೆ ಇದೇ ಶ್ರದ್ಧಾಂಜಲಿಯಂತೆ ಕೇಳುತ್ತದೆ.

ಕಲ್ಪನೆಯಲ್ಲೂ ಪ್ರಸ್ತುತಿಯಲ್ಲೂ ಕೊನೆಗೆ ಭಾಷೆಯಲ್ಲೂ ಅನೇಕ ಬಾರಿ ಪಂಪನನ್ನು ಪಡಿನೆಳಲಂತೆ ಅನುಸರಿಸುವ ರನ್ನನು ಇದೇ ವೈಶಂಪಾಯನಪ್ರಸಂಗವನ್ನು ವರ್ಣಿಸುವ ಬಗೆ ಬೇರೆ.  ಪಂಪನಲ್ಲಿ ದುರಂತವೆಂಬಂತೆ ಚಿತ್ರಿತವಾಗಿರುವ ಈ ಭಾಗವನ್ನು ರನ್ನನು ಅದೂ ಸುಯೋಧನನ ವೈಭವವೋ ಎಂಬಂತೆಯೇ ಚಿತ್ರಿಸುತ್ತಾನೆ - "ನರಲೋಕವನ್ನು ಅನುಭವಿಸಿ, ಸ್ವರ್ಗಸುಖವನ್ನೂ ವೈಭವದಿಂದ ಅನುಭವಿಸಿ ಅನಂತರ ನಾಗಲೋಕವನ್ನು ಹೊಗುವಂತೆ ಕುರುಪತಿಯು ವೈಶಂಪಾಯನವನ್ನು ಹೊಕ್ಕನು (ನರಲೋಕಮನುಪಭೋಗಿಸಿ ಸುರಲೋಕದ ಸುಖಮನಾತ್ಮವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ) ಎನ್ನುತ್ತಾನೆ.  ಮುಂದೆ ದುರ್ಯೋಧನನು ಹತನಾದಾಗಲೂ "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ಭಾವಪೂರ್ಣವಾಗಿ ಬೀಳ್ಕೊಡುತ್ತಾನೆ.

ಆದರೆ ಈ ವೈಭವದ ಪ್ರಭಾವಳಿಯನ್ನೇನೂ ಹಚ್ಚದ ಪಂಪನಿಗೆ ದುರ್ಯೋಧನನು ವೈಶಂಪಾಯನದಲ್ಲಿಳಿಯುವ ಈ ಪ್ರಸಂಗ, ದುರ್ಯೋಧನನ ದುರಂತದಂತೆ, ಸ್ವತಃ ಅದೇ ಆತನ ಅವಸಾನದಂತೆ ಕಾಣುತ್ತದೆ - ಮಾನಧನನಿಗೆ ಅಪಮಾನಕ್ಕಿಂತ, ಅಪಕೀರ್ತಿ ಅಪಯಶಗಳಿಗಿಂತ ಬೇರೆ ಸಾವುಂಟೇ?  ಆದ್ದರಿಂದ ಈ ಪ್ರಸಂಗವನ್ನೇ ಆತನ ಅವಸಾನವೆಂಬಂತೆ ಚಿತ್ರಿಸುವ ಪಂಪ, ಮುಂದೆ ಆತನು ನಿಜವಾಗಿ ಯುದ್ಧದಲ್ಲಿ ಸತ್ತುದನ್ನು ಚಿತ್ರಿಸುವ ಗೋಜಿಗೇ ಹೋಗುವುದಿಲ್ಲ - ಕರ್ಣನ ಅವಸಾನವನ್ನು ಚಿತ್ರಿಸುವ ಅಥವಾ ಮುಂದೆ ರನ್ನನು ದುರ್ಯೋಧನನ ಅವಸಾನವನ್ನೇ ಚಿತ್ರಿಸುವ ವೈಭವ ಇಲ್ಲಿ ಕಾಣುವುದೇ ಇಲ್ಲ! ಅದು ಏನೇನೂ ಮುಖ್ಯವಲ್ಲವಂತೆ "ಎಮಗಂತ್ಯಕಾಲಮೆಂದು ದುರ್ಯೋಧನಂ ಪ್ರಾಣತ್ಯಾಗಂಗೈದಂ" ಎಂದು ಅರ್ಧವಾಕ್ಯದಲ್ಲಿ ಮುಗಿಸಿಬಿಡುತ್ತಾನೆ!  ನಿಜವೇ.  ವೈಶಂಪಾಯನವನ್ನು ಹೊಕ್ಕು ಅಡಗಿ ಕುಳಿತಾಗಲೇ ದುರ್ಯೋಧನನು ಸತ್ತಿದ್ದಾಯಿತು.  ಆಮೇಲೆ ಉಳಿದದ್ದು, ಊರುಭಂಗ ಮಕುಟಭಂಗಗಳ ಹೀನಾಯವನ್ನು ಅನುಭವಿಸಿದ್ದು, ಆಮೇಲೆ ಸತ್ತು ಬಿದ್ದದ್ದು ಕೇವಲ ಉಸಿರಾಡುತ್ತಿದ್ದ ಆತನ ಶರೀರವಷ್ಟೇ.

ಹೀಗಾಗಿ, ದುರ್ಯೋಧನನ ಉಗ್ರತೇಜದ ಅಂತಿಮ ಕ್ಷಣಗಳನ್ನು - ನಿಜಾರ್ಥದಲ್ಲಿ ಆತನ ಅವಸಾನವನ್ನು - ಈ ವೈಶಂಪಾಯನ ಪ್ರಸಂಗ ಬಹು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

(ಚಿತ್ರಕೃಪೆ: ಅಂತರ್ಜಾಲ)

Thursday, March 16, 2017

ಕಲೆಗೆ ಕಟ್ಟೆಲ್ಲಯ್ಯಾ...

ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿದ್ದ ಕಾಲ ಅದು.  ನನ್ನ ಬಾಲ್ಯದ ಬೆಳಗುಗಳು ಶುರುವಾಗುತ್ತಿದ್ದುದೇ ನಮ್ಮ ತಂದೆಯವರ ರೇಡಿಯೋದಲ್ಲಿ ಬೆಳಗ್ಗೆ ಐದಕ್ಕೋ ಐದೂವರೆಗೋ ಅದಾವುದೋ ಸ್ಟೇಷನ್ನಿನಿಂದ ಮೊಳಗುತ್ತಿದ್ದ ಹಮ್ದ್ ಒ ನಾತ್ - ಇಸ್ಲಾಮ್ ಭಕ್ತಿಗೀತೆಗಳ ಕಾರ್ಯಕ್ರಮದಿಂದ. ಬೆಳಗಿನ ಮೌನವನ್ನು ಮೆಲ್ಲಮೆಲ್ಲಗೆ ಸರಿಸುತ್ತಾ, ಮಂದ್ರವೂ ಅಲ್ಲದ, ಕೀರಲೂ ಅಲ್ಲದ, ಸಹಜ ಧ್ವನಿಯಲ್ಲಿ ಹೊಮ್ಮುತ್ತಿದ್ದ ಗೀತೆಗಳು ವಾತಾವರಣದಲ್ಲಿ ಅದೊಂದು ರೀತಿಯ ಪ್ರಸನ್ನತೆಯನ್ನು ಪಸರಿಸುತ್ತಾ ಬೆಳಗಿನ ಸಕ್ಕರೆನಿದ್ದೆಯ ಸಿಹಿಯನ್ನು ಹೆಚ್ಚಿಸುತ್ತಿತ್ತು.  ಅದಾದಮೇಲೆ ಆರು ಗಂಟೆಗೆ ಬೆಂಗಳೂರು ಕೇಂದ್ರದ ಪ್ರಸಾರ ಶುರುವಾಗುತ್ತಿತ್ತು - ಒಂದೆರಡು ನಿಮಿಷ ನಾದಸ್ವರವಾದನ, ವಂದೇಮಾತರಂ, ಆಮೇಲೆ ಇಂಗ್ಲಿಷಿನಲ್ಲಿ ವಾರ್ತೆಗಳು, ಅನಂತರ ಗೀತಾರಾಧನ - ಭಕ್ತಿಗೀತೆಗಳ ಕಾರ್ಯಕ್ರಮ - ಹೀಗೆ ಸಾಗುತ್ತಿತ್ತು.  ಸಾಹಿತ್ಯ ಕಿವಿಗೆ ಬಿದ್ದರೂ ಅರ್ಥವಾಗದ ಕಾಲ, ಈ ಹಮ್ದ್ ನಾತ್ ಗೀತೆಗಳಲ್ಲಿ ಕೆಲವು - ಅಪ್ನಾ ಕ್ಯಾ ಹೈ, ತಮಾಮ್ ಉನ್ಕಾ ಹೈ; ಯೆಹ್ ಸಬ್ ತುಮ್ಹಾರಾ ಕರಮ್ ಹೈ ಆಕಾ ಮುಂತಾಗಿ ಹಲವು ಗೀತೆಗಳು ಇವತ್ತಿಗೂ ಕಿವಿಗಳಲ್ಲಿ ಅಚ್ಚೊತ್ತಿವೆ (ಹಾಡುತ್ತಿದ್ದ ಕಲಾವಿದರಾರೋ ಪರಿಚಯವಾಗದ ವಯಸ್ಸದು - ಆ ಮಾಧುರ್ಯವೂ ಆರ್ತತೆಯೂ ಸರಳತೆಯೂ ಮತ್ತೆ ಸಿಕ್ಕೀತೇ ಎಂದು ಇಂಟರ್ನೆಟ್ಟಿನಲ್ಲಿ ಹುಡುಕಿ ವಿಫಲನಾಗಿದ್ದೇನೆ).  ನಾದಮಾಧುರ್ಯವನ್ನು ಮೀರಿ ಹಾಡಿನಲ್ಲಿನ ’ಮಾತು’ ಸುಮಾರಾಗಿ ಅರ್ಥವಾಗತೊಡಗಿದ ಮೇಲೂ, ಭಾವವದಲ್ಲಾಗಲೀ ಭಕ್ತಿಯಾಗಲೀ ಈ ಗೀತೆಗಳು ನಮ್ಮದೇ ವಚನ-ದಾಸರ ಪದಗಳಿಂದ ಹೊರಗಿನವೆನಿಸಲಿಲ್ಲವೆನ್ನುವುದು ನನ್ನ ಅನುಭವ.   "ಕಿಸೀ ಕಾ ಎಹೆಸಾನ್ ಕ್ಯೂನ್ ಉಠಾಯೇನ್, ಕಿಸೀ ಕೊ ಹಾಲಾತ್ ಕ್ಯೂನ್ ಬತಾಯೇನ್; ತುಮ್ ಹಿ ಸೆ ಮಾಂಗೇಂಗೆ ತುಮ್ ಹೀ ದೋಗೇ (ಯಾರ ನೆರವನೋ ಕೇಳುವುದೇಕೆ, ಮತ್ತಾರೊಳೊ ಅಳಲನು ಪೇಳುವುದೇಕೆ; ಬೇಡುವೆವು ನಿನ್ನೊಬ್ಬನನೆ ನೀನೀವೆ ಬೇಡಿದ್ದೆಲ್ಲವ)" ಈ ಸಾಲು, "ಹಾಡಿದರೆ ಎನ್ನ ಒಡೆಯನ ಹಾಡುವೆ, ಬೇಡಿದರೆ ಎನ್ನ ಒಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ ಎನ್ನ ಬಡತನ ಬಿನ್ನಹ ಮಾಡುವೆ" ಎಂಬ ದಾಸವಾಣಿಗಿಂತ ಬೇರೆನಿಸುವುದೇ?    ಈ ಶರಣಾಗತಿ, ಪ್ರಪತ್ತಿ, ಏಕದೈವಾರಾಧನೆ, ಇವೆಲ್ಲ ಈ ನೆಲದ ಪರಿಕಲ್ಪನೆಗಳೇ ತಾನೆ! 

ಖವ್ವಾಲಿಗಳ ಕಡೆ ನಮ್ಮ ತಂದೆಯವರಿಗಿದ್ದ ಸೆಳೆತ ಕೇವಲ ಸಂಗೀತದ ಗಮ್ಮತ್ತಿನ ಕುರುಡು ಸೆಳೆತವಾಗಿರಲಿಲ್ಲ, ಅಲ್ಲೊಂದು ಅನುಸಂಧಾನವೂ ಇತ್ತೆಂಬುದು ಹಿನ್ನೋಟದಲ್ಲಿ ನನಗನಿಸಿದೆ.  ಎಷ್ಟೋ ಬಾರಿ ಅಲ್ಲೊಂದು ಇಲ್ಲೊಂದು ಸಾಲುಗಳ ಅರ್ಥ ಕೇಳಿದಾಗ, ಅವರು ಅರ್ಥವನ್ನು ಕನ್ನಡದಲ್ಲಿ ಹೇಳುವುದಲ್ಲದೇ ಅದೇ ಭಾವಮುದ್ರೆಯನ್ನು ದಾಸರ ಪದಗಳಿಂದಲೋ ವಚನಗಳಿಂದಲೋ ತಂದೊದಗಿಸುತ್ತಿದ್ದುದೂ ಉಂಟು.  ಹೀಗಾಗಿ, ಕಲೆಯ ಮಟ್ಟದಲ್ಲಿರಲಿ, ಧರ್ಮದ, ಅನುಭಾವದ ಮಟ್ಟದಲ್ಲೂ ನಮಗಿವು ಹೊರಗಿನವೆಂದು ಅನ್ನಿಸಿರಲೇ ಇಲ್ಲ.  ಇವತ್ತು ಬಲವಂತವಾಗಿಯಾದರೂ ತಂದುಕೊಳ್ಳಬೇಕಾಗಿರುವ ’ಸರ್ವಧರ್ಮಸಮನ್ವಯ’, ಆ ಪದದ ಪರಿಚಯವೂ ಇಲ್ಲದ ಬಾಲ್ಯದಲ್ಲಿ, ಬೆಳಗಿನ ಸವಿ-ಅರೆನಿದ್ದೆಯ ರೂಪದಲ್ಲಿ ನನ್ನದಾಗಿದ್ದು, ನನಗೊದಗಿದ ಬಹು ದೊಡ್ಡ ಸಂಸ್ಕಾರವೆಂದೇ ನನ್ನೆಣಿಕೆ.

ಮೊನ್ನೆ ದೂರದರ್ಶನ ವಾಹಿನಿಯೊಂದರಲ್ಲಿ ಸುಹಾನಾ ಎಂಬ ಹೆಣ್ಣುಮಗಳು ’ಹಿಂದೂ’ ಭಕ್ತಿಗೀತೆ ಹಾಡಿದ್ದನ್ನೇ ಒಂದು ಅದ್ಭುತವೆಂಬಂತೆ ಕಾರ್ಯಕ್ರಮ ನಿರ್ವಾಹಕರು ಹಿಗ್ಗಾಮುಗ್ಗಾ ಕೊಂಡಾಡಿದ್ದೂ, ಅದೇ ಕಾರಣಕ್ಕಾಗಿ ಆಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದದ್ದೂ, ನೋಡಿದಾಗ, ಕಳೆದುಹೋದ ಪ್ರಸನ್ನಬಾಲ್ಯ ನೆನಪಾಯಿತು.  ಘಟನೆಯೇ ಅಲ್ಲದ ಘಟನೆಗೆ ಇಷ್ಟು ಹುಯ್ಯಲೆಬ್ಬಿಸುವ ನಾವು, ಕಾಲದಿಂದ ನಮ್ಮನ್ನು ಬೆಸೆದಿರುವ ಧಾರ್ಮಿಕ ಸಾಮರಸ್ಯವನ್ನು ಕಾಣದೇ ಹೋಗುತ್ತಿದ್ದೇವೆಯೇ? ಎಷ್ಟು ಜನ ಮುಸ್ಲಿಮ್ ಭಕ್ತರು ಹಿಂದೂ ದೇವಾಲಯಗಳಿಗೆ ಹರಕೆ ಹೊರುತ್ತಾರೆ, ಹಿಂದೂಗಳು ದರ್ಗಾಗಳಿಗೆ ಹರಕೆ ಸಲ್ಲಿಸಿ ಸಕ್ಕರೆ ಪ್ರಸಾದ ಕೊಂಡು ಬರುತ್ತಾರೆ, ಎಷ್ಟು ಊರೊಟ್ಟಿನ ಹಿಂದೂ ದೇವಾಲಯಗಳ ಆಡಳಿತ ಮಂಡಲಿಯಲ್ಲಿ ಊರಿನ ಗಣ್ಯ ಮುಸ್ಲಿಮರಿರುತ್ತಾರೆ! ಇನ್ನು ಹಿಂದೂ ಮುಸ್ಲಿಂ ಭಾವೈಕ್ಯವನ್ನು ಸಾರಿದ, ನಮ್ಮೆಲ್ಲರ ಒಡೆಯನೊಬ್ಬನೇ ಎಂಬ ಸತ್ಯವನ್ನು ಪದೇಪದೇ ಎತ್ತಿಹಿಡಿದ ಅದೆಷ್ಟು ಸೂಫೀ ಸಂತರು ಈ ನೆಲದಲ್ಲಿ ಆಗಿಹೋಗಿಲ್ಲ!  ಇರಲಿ, ಧಾರ್ಮಿಕ-ಆಧ್ಯಾತ್ಮಿಕ ಸ್ತರದಲ್ಲೇ ಈ ಪರಿಯ ಸಾಮರಸ್ಯ ಸಾಧಿಸಿದ ಈ ಮಣ್ಣಿನ ಗುಣ, ಕಲೆಯಲ್ಲಿ ಧರ್ಮದ ಭೇದವನ್ನೆಣಿಸಿದ ಉದಾಹರಣೆಗಳಿವೆಯೇ? ಧರ್ಮವೊಂದು ಸಂಗೀತವನ್ನು ’ಹರಾಮ್’ ಎನ್ನುತ್ತದೆನ್ನುವುದು, ಸ್ವತಃ ಧಾರ್ಮಿಕರ ನಡುವೆಯೇ ವಿವಾದಕ್ಕೊಳಪಟ್ಟ ವಿಷಯ.  ಆದರೆ, ಕಲಾವಿದ, ಅದೊಂದಕ್ಕೂ ತಲೆ ಕೆಡಿಸಿಕೊಂಡದ್ದೇ ಇಲ್ಲ!  ಭಾರತೀಯ, ಅದರಲ್ಲೂ ಹಿಂದೂಸ್ತಾನೀ ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಮುಸ್ಲಿಮರೆಂಬುದನ್ನು ಮರೆಯುವಂತಿಲ್ಲ - ಸ್ವತಃ ತಾನ್ಸೇನನ ಮಕ್ಕಳಾದ ಬಿಲಾಸ್ ಖಾನ್, ತಾನತರಂಗ್ ಖಾನರಿಂದ ಹಿಡಿದು ತೀರ ಕಳೆದ ಶತಮಾನದ ಅಮೀರ್ ಖಾನರವರೆಗೆ ಎಷ್ಟು ಜನ!  ಅವರಲ್ಲಿ ಹಲವರು ಸ್ವತಃ ಘರಾನೆಗಳನ್ನು ಹುಟ್ಟುಹಾಕಿದವರು, ಹಲವರು ಕಳೆಗುಂದಿದ್ದ ಘರಾನೆಗಳನ್ನು ಉಜ್ಜಿ ಹೊಳಪು ನೀಡಿದವರು.  ಒಂದು ಕಾಲಕ್ಕೆ ಇದು ಎಷ್ಟು ಮುಸ್ಲಿಂ ಮಯವಾಗಿತ್ತೆಂದರೆ, ಉತ್ತರಾದಿ ಸಂಗೀತವೆಂದರೆ ಮುಸಲರ ಸಂಗೀತವೆನ್ನುವಷ್ಟು.  ಆದರೆ ಇವರೆಲ್ಲ ನೀಡಿದ್ದು ಅದೆಂಥಾ ದೈವೀ ಗಾನ!  ಇದನ್ನು ’ಹರಾಮ್’ ಎನ್ನಲಾದೀತೇ?  ಸಂಗೀತಕ್ಕೆ ಕಲೆಗೆ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದ ಮುಘಲ್ ಅರಸರು ಸ್ವತಃ ಸಂಗೀತಕಲೆಯಲ್ಲಿ ನಿಷ್ಣಾತರಾಗಿದ್ದರೆಂಬುದನ್ನೂ ಮರೆಯುವಂತಿಲ್ಲ (ಕೆಲವು ಅಪವಾದಗಳನ್ನುಳಿದು).  ಧರ್ಮದ ಕಟ್ಟಿರಲಿ, ಸಂಗೀತಕ್ಕೆ ಲಿಂಗದ ಕಟ್ಟಾದರೂ ಇದೆಯೇ? ಉಹೂಂ!  ಸಾಂಪ್ರದಾಯಿಕವಾಗಿ ಸಂಗೀತನೃತ್ಯಗಳು ಸ್ತ್ರೀಯರದೇ ಭದ್ರಕೋಟೆ.  ಈಗ ಬಿಡಿ, ಈ ಹಿಂದೆಯೂ ಅದೆಷ್ಟು ಜನ ವಿದುಷಿಯರು ಆಗಿಹೋದವರು!   ಗೋಹರ್ ಜಾನ್, ಗೋಹರ್ ಬಾಯಿ ಕರ್ನಾಟಕಿ, ಅಮಿರ್ ಬಾಯಿ ಕರ್ನಾಟಕಿ, ಅಬ್ದುಲ್ ಕರೀಮ್ ಖಾನರ ಶಿಷ್ಯೆ ರೋಷನಾರಾ ಬೇಗಂ, ಮತ್ತೆ ನಮ್ಮವರೇ ಆದ ಬೆಂಗಳೂರು ನಾಗರತ್ನಮ್ಮ (ಈಕೆಯ ಪ್ರಸಿದ್ಧಿ ಸಂಗೀತವೊಂದಕ್ಕೇ ಅಲ್ಲ - ತಿರುವಯ್ಯಾರಿನಲ್ಲಿ ಪಾಳಾಗಿದ್ದ ಸಂತ ತ್ಯಾಗರಾಜರ ಸಮಾಧಿಸ್ಥಳವನ್ನು ಪತ್ತೆಹಚ್ಚಿ, ಅದಕ್ಕೊಂದು ಭವನವನ್ನು ನಿರ್ಮಾಣಮಾಡಿ ವರ್ಷವರ್ಷ ಆರಾಧನೆ ನಡೆಯುವಂತೆ ಅನುವುಗೊಳಿಸಿದ್ದು, ಅದಕ್ಕೋಸ್ಕರ ತನ್ನೆಲ್ಲ ಸಂಪತ್ತನ್ನೂ ಸುರಿದದ್ದು ಈ ಮಹಾನ್ ಚೇತನ.  ಇವತ್ತು ತಿರುವಯ್ಯಾರು ದಕ್ಷಿಣಾದಿ ಸಂಗೀತದ ಶ್ರದ್ಧಾಕೇಂದ್ರವಾಗಿದ್ದರೆ ಅದರ ಶ್ರೇಯಸ್ಸು ಶ್ರೀಮತಿ ನಾಗರತ್ನಮ್ಮನವರಿಗೆ ಸೇರತಕ್ಕದ್ದು).  ಒಂದು ಕಾಲಕ್ಕೆ ’ಕುಲೀನ’ಸ್ತ್ರೀಯರು ಸಂಗೀತ-ನೃತ್ಯಗಳಲ್ಲಿ ಈಡುಪಡುವುದಕ್ಕೆ ನಿಷೇಧವಿದ್ದದ್ದು ನಿಜ, ಆದರೆ ಅದು ಕೇವಲ ಒಂದು ಕಾಲಘಟ್ಟವಷ್ಟೇ.  ಈಗಂತೂ ಆ ’ನಿಷೇಧ’ ಹೇಳಹೆಸರಿಲ್ಲದಂತೆ ಮಾಯವಾಗಿದೆಯಲ್ಲವೇ?  ಉತ್ತರಾದಿ ಸಂಗೀತವಿರಲಿ, ಇಸ್ಲಾಮಿಕ್ ಭಕ್ತಿಸಂಗೀತದಲ್ಲೂ ಆ ಕಟ್ಟು ಎಲ್ಲಿದೆ ಇವೊತ್ತು?  ಸಂಗೀತ ಸಾಮ್ರಾಜ್ಞಿ ಪರ್ವಿನ್ ಸುಲ್ತಾನಾ, ಬೇಗಮ್ ಅಕ್ತರ್, ಅಬಿದಾ ಪರ್ವೀನ್ ಇವರಾರ ಹೆಸರನ್ನೂ ನಾವು ಕೇಳಿಲ್ಲವೇ? (ಹೆಸರುಗಳು ಪ್ರಾತಿನಿಧಿಕವಷ್ಟೇ, ಇಂದು ಖ್ಯಾತನಾಮರಾದ ವಿವಿಧ ಧರ್ಮಗಳ ಎಲ್ಲ ಸ್ತ್ರೀ ಪುರುಷ ಕಲಾಕಾರರ ಹೆಸರುಗಳನ್ನು ಬರೆದರೆ ಗ್ರಂಥವೇ ಬೇಕಾದೀತು).

ಸಂಗೀತವೇನೋ ಹೋಗಲಿ, ಆದರೆ ಅದರಲ್ಲಿ ’ಮಾತು’ ಇದೆಯಲ್ಲ, ಅದು ’ಅನ್ಯ’ ಧರ್ಮಕ್ಕೆ ಕಟ್ಟುಬಿದ್ದಿದೆಯಲ್ಲವೇ ಎನ್ನುವುದಾದರೆ, ಅದಕ್ಕೆ ಸಮಾಧಾನ ಈ ಲೇಖನದ ಮೊದಲಲ್ಲೇ ಇದೆ.  ಕಟ್ಟುಗಳಿರುವುದು ನೋಡುವವನ ಕಣ್ಣಿನಲ್ಲೇ ಹೊರತು ಗೀತೆಗಳಲ್ಲಲ್ಲ.  (ಅ)ಧಾರ್ಮಿಕ ಸಾಹಿತ್ಯವೆಂಬ ಕಾರಣಕ್ಕೆ ಮೇಲೆ ವಿವರಿಸಿದ ಮಹನೀಯ ಸಂಗೀತಗಾರರು ಯಾರೂ ತಾವು ಹಾಡುವ ಬಂದಿಶ್, ಠುಮ್ರಿಗಳಲ್ಲಿ ಸಾಹಿತ್ಯವನ್ನು ಬಿಟ್ಟು ಬರೀ ಸ್ವರವನ್ನೇ ಹಾಡಿದ್ದಿಲ್ಲ - ಅಂದ ಮಾತ್ರಕ್ಕೆ ಅವರು ಧರ್ಮಭ್ರಷ್ಟರಾಗಿದ್ದೂ ಇಲ್ಲ ಎಂಬುದನ್ನು ಗಮನಿಸಬೇಕು.  ಅಷ್ಟೇಕೆ, ಭಕ್ತಿಪ್ರಧಾನವೆಂದೇ ಹೆಸರಾದ ಕರ್ನಾಟಕಸಂಗೀತದಲ್ಲೇ ಸಾಧನೆಯ ಉತ್ತುಂಗಕ್ಕೇರಿದ ’ಹಿಂದು’ ಅಲ್ಲದ ಮಹನೀಯರಿದ್ದಾರೆ.  ಪಕ್ಕನೆ ಯಾರಿಗೂ ಹೊಳೆಯಬಹುದಾದ ಉದಾಹರಣೆ, ಡಾ. ಯೇಸುದಾಸರದು.  ಇನ್ನು ಹಿಗ್ಗಿನ್ಸ್ ಭಾಗವತರ್ ಎಂದೇ ಹೆಸರಾಗಿದ ಅಮೆರಿಕೆಯ ಶ್ರೀ ಜಾನ್ ಬಿ ಹಿಗಿನ್ಸ್ ಹೆಸರನ್ನು ಕರ್ನಾಟಕಸಂಗೀತ ರಸಿಕರು ಮರೆಯುವುದಕ್ಕಿಲ್ಲ.  ಅಂತೆಯೇ ಶೇಕ್ ಚಿನ್ನಾ ಮೌಲಾನ, ನಾಗೋರ್ ಎಸ್ ಎಮ್ ಎ ಖಾದಿರ್, ನಾಗೋರ್ ಯೂಸುಫ್, ದಾಸರ ಪದಗಳ ಕಂಪು ಹರಡುತ್ತಿರುವ ಹುಸೈನ್ ಸಾಬ್, ಫಯಾಜ್ ಖಾನ್, ಖಾನ್ ಸಹೋದರರೆಂದೇ ಹೆಸರಾದ ಉಸ್ತಾದ್ ರಾಯಿಸ್ ಬಲೇ ಖಾನ್ ಮತ್ತು ಹಫೀಜ಼್ ಬಲೇ ಖಾನ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಅಷ್ಟೇಕೆ, ಸ್ವತಃ ಉಸ್ತಾದ್ ಅಬ್ದುಲ್ ಕರೀಮ್ ಖಾನರು ಕರ್ನಾಟಕ ಸಂಗೀತಕೃತಿಗಳಾದ ರಾಮ ನೀ ಸಮಾನಮೆವರು (ಖರಹರಪ್ರಿಯ) ಮತ್ತು ಎಂತನೇರ್ಚಿನ (ಸಾವೇರಿ) ಎಂಬ ಎರಡು ಕೃತಿಗಳನ್ನು ಹಾಡಿರುವ ಅಪರೂಪದ ಧ್ವನಿಮುದ್ರಣ ಲಭ್ಯವಿದೆ (ಇವು ’ಹಿಂದೂ’ ಭಕ್ತಿರಚನೆಗಳೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ). 

ಸಂಗೀತ, ಸಾಹಿತ್ಯ, ಕಲೆಗಳು ಅಭಿವ್ಯಕ್ತಿಸಾಧನಗಳು.  ಅಭಿವ್ಯಕ್ತಿಯ ಹೆಸರಿನಲ್ಲಿ ಬರುವ ವಿಕೃತಿಗಳನ್ನು, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ತಡೆಗಟ್ಟಲು ಕಾನೂನು ಮಾಡಬಹುದು, ಧರ್ಮಶಾಸ್ತ್ರದ ಕಟ್ಟುಗಳನ್ನು ಹಾಕಬಹುದು.  ಆದರೆ ಹಾಗೆ ಸಮಾಜಕ್ಕೆ ಕೆಡಕುಂಟುಮಾಡದ ಶುದ್ಧ ಅಭಿವ್ಯಕ್ತಿಯನ್ನು ಯಾವ ಕಟ್ಟುಕಟ್ಟಲೆಗಳೂ ತಡೆಯಲು ಸಾಧ್ಯವಿಲ್ಲ - ಅದು ದೇಶ ಲಿಂಗ ಧರ್ಮಗಳಿಗೆ ಅತೀತವಾದುವು. 

ದೇಶ ಕಂಡ ಅತ್ಯುತ್ತಮ ಕಲಾವಿದರಲ್ಲೊಬ್ಬರಾದ ಶಹನಾಯ್ ಸಾಮ್ರಾಟ್ ಉಸ್ತಾದ್ ಬಿಸ್ಮಿಲ್ಲಾ ಖಾನರು ಈ ಸಂಗೀತವೆಂಬ ’ಹರಾಮ್’ ಬಿಟ್ಟುಬಿಡಿರೆಂದು ಬೋಧಿಸಿದ ಧರ್ಮಗುರುವೊಬ್ಬರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ:  "ನಾನೀಗ "ಅಲ್ಲಾಹು ಅಲ್ಲಾಹ್" ಎಂದು ಭೈರವ್ ರಾಗದಲ್ಲಿ ಹಾಡ್ತೇನೆ ಎಂದುಕೊಳ್ಳಿ.  ನೀವು ಅದನ್ನ ಅಲ್ಲಾಹ್ ಎನ್ನುತ್ತೀರಿ, ಆದರೆ ಅದರ ರಾಗವಂತೂ ಭೈರವವೇ.  ಕೇಳುವವರು ರಾಗವನ್ನ ಕೇಳುತ್ತಾರೆ, ಸ್ಮರಿಸುವವರು ಭಗವಂತನನ್ನು ಸ್ಮರಿಸುತ್ತಾರೆ, ಇದರಲ್ಲಿ ಹರಾಮ್ ಏನು ಬಂತು?"

ಅದೂಂದು ಅಲೌಕಿಕ ಶಕ್ತಿ - ಅದನ್ನು ಅಲ್ಲಾಹ್ ಎನ್ನಿ, ರಾಮನೆನ್ನಿ, ಶಿವನೆನ್ನಿ - ಎದೆಯೆದೆಯಲ್ಲೂ ಒಂದು ಜ್ಯೋತಿಯನ್ನು ಹೊತ್ತಿಸಿ ಇಟ್ಟಿದೆ - ಅದೇ ಪ್ರೀತಿ.  ಅದನ್ನು ಉದ್ದೀಪಿಸುವ ಸಾಧನಗಳೇ ಕಲೆ, ಸಾಹಿತ್ಯ, ಸಂಗೀತಗಳು.  ಅವನ್ನು ಉಪಯೋಗಿಸಿಕೊಂಡು ಎದೆಯ ಬೆಳಕನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಲೇ ಇದೆಯಲ್ಲವೇ?

ಅಂಧೇರೇ ಮೆ ದಿಲ್ ಕೇ ಚಿರಾಗ್ ಏ ಮೊಹಬ್ಬತ್
ಏ ಕಿಸ್ ನೇ ಜಲಾಯಾ ಸವೇರೇ ಸವೇರೇ

(ಚಿತ್ರಕೃಪೆ: ಅಂತರ್ಜಾಲ)

ಸೂ:  ಈ ಲೇಖನ ಇಂದಿನ ವಿಶ್ವವಾಣಿ ಪತ್ರಿಕೆಯ ’ಗುರು’ ವಿಭಾಗದಲ್ಲಿ "ಕಟ್ಟುವಿರೋ ಕಟ್ಟಿ ಕಲಾಧರ್ಮ" ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.  ಪ್ರಕಟಿತ ಲೇಖನದ ಕೊಂಡಿ ಇಲ್ಲಿದೆ:
http://epaper.vishwavani.news/bng/e/bng/16-03-2017/15

Monday, February 27, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ" - ಸಂವಾದ

ನನ್ನ ಬ್ಲಾಗ್ ಬರಹ "ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"" ಇದಕ್ಕೆ ಹಿರಿಯ ವಿದ್ವಾಂಸರಾದ ಶ್ರೀಯುತ ಸುಧೀಂದ್ರ ದೇಶಪಾಂಡೆಯವರ ಪ್ರತಿಕ್ರಿಯೆ ಅವರ ಸಲ್ಲಾಪ ಬ್ಲಾಗಿನಲ್ಲಿ ಪ್ರಕಟವಾಗಿದೆ "ಕನ್ನಡದಲ್ಲಿ apple".  ಅದಕ್ಕೆ ಪ್ರತಿಕ್ರಿಯೆಯನ್ನು ಬರೆಯುತ್ತಾ ಅದೇ ಒಂದು ಲೇಖನವಾದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ.  ಕನ್ನಡದ ಹಿತದೃಷ್ಟಿಯಿಂದ ಇಂಥಾ ವಿದ್ವಚ್ಚರ್ಚೆಗಳು ಹೆಚ್ಚಾಗಲೆಂದು ನನ್ನ ಹಾರೈಕೆ.  ಆಸಕ್ತರು ಎರಡೂ ಲೇಖನಗಳನ್ನು ಬೇರೆಬೇರೆ ಕಿಟಕಿಯಲ್ಲಿ ತೆರೆದಿಟ್ಟುಕೊಂಡು ಓದಿದರೆ ಚೆನ್ನು.

ಪ್ರಿಯ ಸುಧೀಂದ್ರ ದೇಶಪಾಂಡೆಯವರೇ,

ನನ್ನದೊಂದು ಬರಹ ತಮ್ಮ ಬ್ಲಾಗಿನಲ್ಲಿ ಕಾಣಿಸಿಕೊಂಡುದು ನನಗೆ ಹೆಮ್ಮೆ.  ಇದಕ್ಕಾಗಿ ತಮಗೆ ಧನ್ಯವಾದಗಳು.  ವಿಷಯದ ವಾಸ್ತವ ಚರ್ಚೆಗೆ ಹೋಗುವ ಮುನ್ನ ಕೆಲವು ವೈಯಕ್ತಿಕ ಗ್ರಹಿಕೆಗಳನ್ನು ಸ್ಪಷ್ಟಪಡಿಸಲಿಚ್ಛಿಸುವೆ.  ಮೊದಲಿಗೆ, ನನ್ನ ಲೇಖನವು ಪದಾರ್ಥಚಿಂತಾಮಣಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಲ್ಲ - ಪದಾರ್ಥಚಿಂತಾಮಣಿಯ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದ್ದೆನಾದರೂ, ಲೇಖನವನ್ನು ಬರೆದಾಗ ನನ್ನ ದೃಷ್ಟಿಯಲ್ಲಿದ್ದದ್ದು ರಾಜೇಶರು ಅವರ ಪುಟದಲ್ಲಿ ಪ್ರಕಟಿಸಿದ್ದ ಲೇಖನವಷ್ಟೇ.  ಇದೀಗ ನಿಮ್ಮ ಲೇಖನವನ್ನೋದಿದಮೇಲೆ, ಪದಾರ್ಥಚಿಂತಾಮಣಿಯ ಚರ್ಚೆಯನ್ನೂ, ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಮತ್ತೊಮ್ಮೆ ಕೂಲಂಕಶವಾಗಿ ಓದಿಕೊಂಡೆ.  ನಿಜ ಹೇಳಬೇಕೆಂದರೆ, ಕೆಲವು ವಿಷಯಗಳನ್ನು ಬಿಟ್ಟರೆ ತಮ್ಮ ನಿಲುವುಗಳ ಬಗ್ಗೆ ನನಗೆ ಒಮ್ಮತವೇ ಇದೆ (ಅಪವಾದಗಳನ್ನು ಮುಂದೆ ಚರ್ಚಿಸುತ್ತೇನೆ).  ಅಲ್ಲದೇ ಒಬ್ಬ ಅಪರೂಪದ ವಿದ್ವಾಂಸರಾಗಿ, ಹಿರಿಯರಾಗಿ ತಮ್ಮನ್ನು ಹಲವು ವರ್ಷಗಳಿಂದ ಬಲ್ಲ ನಾನು ತಮ್ಮನ್ನು "ಮಂದ ಕಿವಿಯ ಸುಧಾರಣಾವಾದಿ"ಗಳ ಗುಂಪಿಗೆ ಸೇರಿಸುವುದು ಶಕ್ಯವೇ ಇಲ್ಲ.  ಇನ್ನೂ ಮುಂದುವರೆದು "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ... ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ.  ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು" ಎಂಬ ಪ್ರಬುದ್ಧವಾದ ಮಾತು ತಮ್ಮಂತಹ ಹಿರಿಯ ವಿದ್ವಾಂಸರಿಂದ ಬರಬಲ್ಲುದಷ್ಟೇ ಹೊರತು "ಮಂದ ಕಿವಿಯ ಸುಧಾರಣಾವಾದಿ"ಗಳಿಂದ ಖಂಡಿತಾ ಅಲ್ಲ.  ""A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ" ಎಂಬ ನನ್ನ ಪೂರ್ಣವಾಕ್ಯವನ್ನಷ್ಟು ಪರಿಗಣಿಸಬೇಕೆಂದು ವಿನಂತಿ.  ಅಲ್ಲಿನ ಇತರ ಉದಾಹರಣೆಗಳು ಎಲ್ಲಿಂದ ಬರುತ್ತವೆಂಬುದು ತಮಗೆ ಗೊತ್ತು.  ಅಂಥಾ ’ಸುಧಾರಣಾವಾದಿ’ಗಳ ಉದಾಹರಣೆಯನ್ನು ತಾವೇ ತಮ್ಮ ಲೇಖನದಲ್ಲೇ ಹಿಂದಿನ ಪ್ಯಾರಾದಲ್ಲೇ ಸೂಚಿಸಿದ್ದೀರಿ.  ಇಷ್ಟು ಹೇಳಿದ ಮೇಲೆ, ತಾವು ಎತ್ತಿದ ಆಕ್ಷೇಪಗಳನ್ನಿಷ್ಟು ಪರಿಶೀಲಿಸಬಹುದು.

(೧) "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ."
ಇದು ಅತಿ ಸನಿಹದ ಉಚ್ಚಾರ ಎಂಬುದು ನಾನೂ ಒಪ್ಪತಕ್ಕ ಮಾತೇ, ಇಷ್ಟರಲ್ಲಿ ತಕರಾರೇನು ಇಲ್ಲ.  ಹಾಗಿದ್ದರೆ "ಆ್ಯ" ಎಂದು ಹೇಳುವುದರಲ್ಲಿ ತಪ್ಪೇನು ಎನ್ನುವುದಕ್ಕೆ ಸಮಾಧಾನವನ್ನು ನನ್ನ ಲೇಖನದಲ್ಲೇ ಕೊಟ್ಟಿದ್ದೇನೆ, ತಮ್ಮ ಮುಂದಿನ ಅಂಶಗಳ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸಬಹುದು.

(೨) "ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು (ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು!"
ಪ್ರಸ್ತುತ ಆ ಅಥವಾ ಯಾ ಎಂಬ ಸಾಧ್ಯವಾದಷ್ಟು ಹತ್ತಿರದ ಸಂಕೇತವನ್ನು ಬಳಸುತ್ತಿರುವ ಉದ್ದೇಶವಾದರೂ ಏನು?  ನಮ್ಮ ಈಗಿರುವ ಚೌಕಟ್ಟಿನಲ್ಲಿ ಇದಕ್ಕೆ ಅತಿ ಹತ್ತಿರದ್ದಾಗಿ ಒದಗುವುದು ಎಂದು ತಾನೆ?  ಈಗ ಆ್ಯ ಎಂಬ ಹೊಸ ಅಕ್ಷರವೊಂದನ್ನು ತಂದೂ ಅದು ಮೂಲ ಉಚ್ಚಾರಣೆಯನ್ನು ಯಥಾವತ್ ಪ್ರಸ್ತುತಪಡಿಸಲಾಗದೇ ಕೇವಲ ’ಹತ್ತಿರ’ದ ಉಚ್ಚಾರಣೆಯಷ್ಟೇ ಆಗುವುದಾದರೆ, ಅದಕ್ಕಾಗಿ ಇರುವ ಚೌಕಟ್ಟನ್ನೇ ಸಡಿಲಿಸುವಂಥ ದೊಡ್ಡ ಬೆಲೆಯನ್ನು ತೆರುವ ಅಗತ್ಯವೇನು (ಅದು ’ದೊಡ್ಡ ಬೆಲೆ’ ಏಕೆನ್ನುವುದನ್ನು ಮುಂದೆ ವಿವರಿಸುತ್ತೇನೆ).

(೩a) "ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ?"
ಲಿಪಿವರ್ಧನೆ ಆಗಬಾರದೆಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಅದಾಗುವ ಮೊದಲು ಈಗಿರುವ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಬೇಕೆನ್ನುವುದು, ಹೊಸ ಸೇರ್ಪಡೆಗಳನ್ನು ಇರುವ ಚೌಕಟ್ಟಿನಲ್ಲಿ ನಿರ್ದಿಷ್ಟವಾಗಿ ಎಲ್ಲಿ ಹೇಗೆ ಸೇರಿಸಬೇಕೆನ್ನುವುದೂ, ಹಾಗೆ ಬರುವ ಸೇರ್ಪಡೆಗಳು ಭಾಷೆಯ ಈಗಿನ ಚೌಕಟ್ಟಿಗನುಗುಣವಾಗಿ ಎಂಥ ಸೇರ್ಪಡೆಯಾಗಿರಬೇಕೆನ್ನುವುದನ್ನು ನಿರ್ಧರಿಸಬೇಕೆನ್ನುವುದೂ, ಹಾಗೆ ನಿರ್ಧರಿಸುವಾಗ ಕೇವಲ ಈಗಿನ ಅಗತ್ಯವಷ್ಟನ್ನಲ್ಲ, ಈ ಬದಲಾವನೆಯ ಭೂತ ಭವಿಷ್ಯದ್ವರ್ತಮಾನಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವೆಂಬುದು ನನ್ನ ಅಭಿಪ್ರಾಯ.  ಇಲ್ಲದಿದ್ದರೆ ಬದಲಾವಣೆ ಮಾಡಬೇಕೆನ್ನುವುದೇ ಒಂದು ಫ್ಯಾಶನ್ ಆಗಿ ಸೂಕ್ಷ್ಮವಾಗಿರುವ ಕನ್ನಡದ ಪರಿಸ್ಥಿತಿ ಮತ್ತಷ್ಟು ಕಠಿನವಾಗಬಾರದೆಂಬುದು ನನ್ನ ಆಶಯ.

ಇನ್ನು "ಸಂಕೇತಗಳನ್ನು ಕತ್ತರಿಸಿ ಹಾಕುವ" ಸಲಹೆಗಳು ನನ್ನಿಂದ ಬಂದಿಲ್ಲವಲ್ಲ!  ನಾನೂ ಅಂಥಾ ಪ್ರಯತ್ನಗಳ ವಿರೋಧಿಯೇ ಎಂಬುದನ್ನು ತಾವು ಬಲ್ಲಿರಿ.

(೩b) "ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು.  ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ"
ದೇವನಾಗರಿ ಸ್ವಯಂಸಂಪೂರ್ಣವಲ್ಲ ಎಂಬುದು ವೇದ್ಯವಾಗಿಯೇ ಇದೆ.  ಇದರಲ್ಲಿ ತಕರಾರಿಲ್ಲ.  ಮತ್ತು ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು ಎಂಬುದು ನನ್ನ ಅಭಿಪ್ರಾಯ ಕೂಡ.  ಆದರೆ ನಾವು ಹಾಗೆಲ್ಲಿ ಮಾಡುತ್ತಿದ್ದೇವೆ?  ಕನ್ನಡದ ವ್ಯಾಕರಣವು ಇದುವರೆಗೆ ಅನುಸರಿಸಿರುವ ದಾರಿಯೂ ಇದೇ ಅಲ್ಲವೇ?  ಸಂಸ್ಕೃತದ ತರ್ಕಬದ್ಧವಾದ ವೈಜ್ಞಾನಿಕವಾದ ಹಂದರವನ್ನು ಒಳಗೊಳ್ಳುವ ಮೂಲಕ ಅದರ ಲಾಭಗಳನ್ನು ಪಡೆದಿದೆ, ಆದರೆ ಅದೇ ಸಮಯದಲ್ಲಿ ಅದನ್ನು ಕನ್ನಡದ ಪ್ರಸ್ತುತತೆಗನುಗುಣವಾಗಿ ಮಾರ್ಪಡಿಸಿಕೊಂಡಿದೆ ಕೂಡ.  ಅದೇ ಕಾರಣಕ್ಕೇ ಸಂಸ್ಕೃತದಲ್ಲಿಲ್ಲದ ಎ ಮತ್ತು ಒ ಅಕ್ಷರಗಳನ್ನೂ, ಱೞಳ ಅಕ್ಷರಗಳನ್ನೂ ಕನ್ನಡದಲ್ಲಿ ನಾವು ಕಾಣುತ್ತೇವೆ.  ಅದರಲ್ಲೂ ತನ್ನ ಕಾಲಕ್ಕಾಗಲೇ ಬಳಕೆಯಿಂದ ಮರೆಯಾಗಿಯೇ ಹೋಗಿದ್ದರೂ ಱೞ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೇಶಿರಾಜನು ಮಾಡಿರುವುದನ್ನು ಕಾಣಬಹುದು (ತಿಳಿ ದೇಶೀಯಮಮೈದಂ; ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪಕ್ಷಳನಂ; ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಶಬ್ದಮಣಿದರ್ಪಣ).  ಆಮೇಲೆ ಅವು ವರ್ಣಮಾಲೆಯಿಂದ ಏಕೆ ಮರೆಯಾದುವೆನ್ನುವುದು ಬೇರೆಯೇ ಚರ್ಚೆಯ ವಿಷಯ.  ಅಷ್ಟೇ ಅಲ್ಲ, ಕನ್ನಡದಲ್ಲಿಲ್ಲವೆನ್ನುವ ಕಾರಣಕ್ಕೆ ಸಂಸ್ಕೃತದ ಋಲೃ ವರ್ಣಗಳನ್ನೂ ಶಷಗಳನ್ನೂ ವಿಸರ್ಗ, ೱಕ, ೲಪ ಗಳನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾನೆ ಕೇಶಿರಾಜ.  ಆದರೆ ಕನ್ನಡ ಮತ್ತು ಸಮಸಂಸ್ಕೃತಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾರಣದಿಂದಲೂ, ವರ್ಣಮಾಲೆಯ ತಾರ್ಕಿಕ ಪೂರ್ಣತೆಯನ್ನು ಕಾಯುಕೊಳ್ಳುವ ದೃಷ್ಟಿಯಿಂದಲೂ ಋಶಷಗಳೂ ವಿಸರ್ಗವೂ ಮತ್ತೆ ಸೇರಿಕೊಳ್ಳುತ್ತವೆ (ವ್ಯಾಕರಣದಲ್ಲೂ ಇಂಥ ಹಲವು ’ಅಳವಡಿಕೆ’ಗಳನ್ನು ವಿವರಿಸಬಹುದು, ಆದರೆ ಸಧ್ಯದ ಚರ್ಚೆಗೆ ಅದು ಅಪ್ರಸ್ತುತ).  ಆದ್ದರಿಂದ ಸಂಸ್ಕೃತವನ್ನು ಕನ್ನಡ ಕುರುಡಾಗಿ ಅನುಸರಿಸುತ್ತಿದೆಯೆಂಬುದೂ ಅದರ ಸ್ವತಃ ತನಗೆ ಶಕ್ತಿಯಿದ್ದಾಗ್ಯೂ ಅದರ ದೋಷಗಳನ್ನು ತಾನೂ ಒಳಗೊಳ್ಳುತ್ತಿದೆಯೆನ್ನುವುದೂ ಒಪ್ಪತಕ್ಕ ಮಾತಲ್ಲ.

(೩c) "च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ"
ದೇವನಾಗರೀ ಲಿಪಿ ಅಸಂಪೂರ್ಣ ಎಂಬುದಕ್ಕೆ ತಾವು ಈ ಉದಾಹರಣೆ ನೀಡುತ್ತಿದ್ದರೆ, ಅದನ್ನು ನಾವು ಆಗಲೇ ಒಪ್ಪಿಯಾಗಿದೆ.  ಆದರೆ ಈ ಉದಾಹರಣೆ ಅದಕ್ಕೆ ಸಮರ್ಪಕವಾದ ಉದಾಹರಣೆಯಾಗಲಾರದು.  ದೇವನಾಗರಿಯಲ್ಲಿ ಚಾ+ಐತ್ವ ಬರೆಯಲಾಗದ್ದು ಅದರ ಲಿಪಿಯ ಅಸಂಪೂರ್ಣತೆಯಿಂದ ಎನ್ನುವುದಕ್ಕಿಂತ ಅಲ್ಲಿ ಅದರ ಅಗತ್ಯವಿಲ್ಲ ಎಂಬ ಕಾರಣದಿಂದ.  ಅಗತ್ಯವಿದ್ದಿದ್ದರೆ ಅದಕ್ಕನುಗುಣವಾಗಿ ಲಿಪಿ ರೂಪುಗೊಳ್ಳುತ್ತಿತ್ತು.  ಕನ್ನಡದಲ್ಲಿ ಅದರ ಲಿಪಿಸಾಧ್ಯತೆಯಿದೆ, ಆದರೆ ಅದನ್ನು ನಾವೆಲ್ಲಿ ಬಳಸುತ್ತಿದ್ದೇವೆ?  ಏಕೆಂದರೆ ಸಧ್ಯಕ್ಕೆ ನಮಗದರ ಅಗತ್ಯ ಕಂಡಿಲ್ಲ - ಏಕೆಂದರೆ ಚಾ ಅಕ್ಷರಕ್ಕೆ ಐತ್ವ ಕೊಡುವುದಾದರೆ ಅದು ಚಾಯ್ ಎಂಬ ಪದವೇ ಆಗುತ್ತದೆ, ಅದು ಈಗಾಗಲೇ ಸಾಧ್ಯ.  ಚೈ ಮತ್ತು ಚಯ್ ಗಳ ನಡುವಿರುವ ಸೂಕ್ಷ್ಮ ವ್ಯತ್ಯಾಸ ಚಾ(ಐ) ಮತ್ತು ಚಾಯ್ ಗಳ ನಡುವೆ ಇಲ್ಲ.  ಸಂಸ್ಕೃತದಲ್ಲಿ ಆ ಲಿಪಿಸಾಧ್ಯತೆ ಬರದಿದ್ದುದಕ್ಕೆ ಅದೇ ಕಾರಣವಿರಬಹುದು.

ಆದರೆ ನಾಗರೀ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತಲ್ಲ.  ಕೊಡುವ ಅಗತ್ಯವಿದ್ದರೆ ಬೇರೆಲ್ಲ ಪೂರ್ವಾಕ್ಷರಗಳನ್ನೂ ಅರ್ಧ ಬರೆದು ಮುಂದಿನ ಒತ್ತನ್ನು ಪೂರ್ಣಾಕ್ಷರವಾಗಿ ಬರೆಯುವಂತೆ ಇದನ್ನೂ ಬರೆಯಬಹುದು, अ್या ಎಂಬಂತೆ (ಇಲ್ಲಿ ಯೂನಿಕೋಡ್ ಇದನ್ನು ಬರೆದು ತೋರಿಸಲು ಸಹಕರಿಸುತ್ತಿಲ್ಲ, अ ಅಕ್ಷರದ ಉದ್ದಗೀಟನ್ನೂ ತಲಕಟ್ಟನ್ನೂ ತೆಗೆದುಹಾಕಿ, ಬಳ್ಳಿಯ ನಡುಗೀಟಿಗೆ ಹೊಂದಿದಂತೆ या ಬರೆಯಿರಿ, ನಿಮಗೆ ಬೇಕಾದ ಅಕ್ಷರ ಸಿಗುತ್ತದೆ.  ಕನ್ನಡದಲ್ಲೂ ಬರೆಯುವುದು ಸಾಧ್ಯವಂತೂ ಇದೆ (ಯೂನಿಕೋಡ್ ಸಹಕರಿಸದಿದ್ದರೂ ಮತ್ತೊಂದರ ಸಹಕಾರದಿಂದ ಇಲ್ಲೂ ಬರೆಯುತ್ತೇನೆ ನೋಡಿ "ಆ್ಯ").  ಆದರೆ ಸಂಸ್ಕೃತದಲ್ಲಾಗಲೀ ಕನ್ನಡದಲ್ಲಾಗಲೀ ಹಾಗೆ ಬರೆಯದಿದ್ದುದು ಲಿಪಿಸೌಲಭ್ಯದ ಕಾರಣಕ್ಕಲ್ಲ, ಅದು ತಾಂತ್ರಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ.  ಕಾರಣವನ್ನು ಮುಖ್ಯಲೇಖನದಲ್ಲಿ ವಿವರಿಸಿದ್ದೇನೆ.  ಮತ್ತೊಮ್ಮೆ ಕ್ವಚಿತ್ತಾಗಿ ವಿವರಿಸುತ್ತೇನೆ:

ಯಾವುದೇ ಅಕ್ಷರಕ್ಕೆ ಒತ್ತು ಕೊಡಬೇಕೆಂದರೆ ಮುಖ್ಯಾಕ್ಷರವು ಅರ್ಧವಾಗಿಯೂ ಒತ್ತಕ್ಷರವು ಪೂರ್ಣವಾಗಿಯೂ ಬರುವುದು ಅತ್ಯಗತ್ಯ (ಲಿಪಿಯಲ್ಲಲ್ಲ, ಉಚ್ಚಾರಣೆಯಲ್ಲಿ - ದೇವನಾಗರೀ ಲಿಪಿ ಈ ಕ್ರಮವನ್ನನುಸರಿಸುತ್ತದೆ, ಕನ್ನಡ ಲಿಪಿ ಇದರ ವಿರುದ್ಧ, ಅದು ಬೇರೆಯ ವಿಷಯ, ಆದರೆ ಉಚ್ಚಾರಣೆ ಮಾತ್ರ ಭಾಷಾತೀತ) - ಬೇಕಿದ್ದರೆ ಇಂಗ್ಲಿಷಿನಲ್ಲೂ ನೋಡಬಹುದು Tree (ಟ್ರೀ) ಎನ್ನುವಾಗ ಟ್ ಮತ್ತು ರೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಟಕಾರವು ಅರ್ಧವಾಗಿಯೂ ಒತ್ತಕ್ಷರವಾದ ರೀ ಪೂರ್ಣವಾಗಿಯೂ ಬರುತ್ತದೆ (ನಾನು ಹೇಳುತ್ತಿರುವುದು ಉಚ್ಚಾರದ ವಿಷಯ, ಲಿಪಿಯ ವಿಷಯವಲ್ಲ); ಹಿಂದಿಯಲ್ಲಿ ನೋಡಿ रब्डी (ರಬ್ಡೀ) ಎನ್ನುವಾಬ ಬ್ ಮತ್ತು ಡೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಬಕಾರವು ಅರ್ಧವಾಗಿಯೂ ಒತ್ತಕ್ಷರವಾದ ಡೀ ಪೂರ್ಣವಾಗಿಯೂ ಬರುತ್ತದೆ.  ತಮಿಳನ್ನು ನೋಡಿ பைத்யம் (ಪೈತ್ಯಂ) ಇಲ್ಲಿ ತ್ಯ ಅಕ್ಷರದಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ (த்) ಒತ್ತಕ್ಷರವಾದ ಯಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಜ಼ೆಕ್ ರಿಪಬ್ಲಿಕ್ ದೇಶಭಾಷೆಯಾದ ಜ಼ೆಕ್ ನೋಡಿ matka (ಮತ್ಕ = ಅಮ್ಮ) ಎಂಬಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ ಒತ್ತಕ್ಷರವಾದ ಕಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಎಂದರೇನಾಯಿತು? ಇದು ಭಾಷಾತೀತ - ಮತ್ತಿದು ನಿಯಮವಲ್ಲ, ಸಾಧ್ಯತೆ.

ಈಗ, ಸಂಯುಕ್ತಾಕ್ಷರವೊಂದರಲ್ಲಿ ಆಕಾರವನ್ನು ಮುಖ್ಯಾಕ್ಷರವಾಗಿ ಬಳಸಬೇಕೆಂದರೆ ಅದು ಅರ್ಧಾಕ್ಷರವಾಗಬೇಕಲ್ಲವೇ?  ಆಕಾರವನ್ನು ಅರ್ಧವಾಗಿ ನುಡಿಯಲು ಸಾಧ್ಯವೇ?  ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ ಅದು.  ಆಕಾರವನ್ನು ಅರ್ಧ ನುಡಿಯಲು ಹೋದರೆ ಏನೂ ಬರುವುದೇ ಇಲ್ಲ - ಸ್ವರದ ಸ್ವಭಾವವೇ ಹಾಗೆ.  ನೀವು ಸ್ವರವೊಂದಕ್ಕೆ ವ್ಯಂಜನದ ಒತ್ತು ಕೊಟ್ಟಾಗ, ಅರ್ಧಾಕ್ಷರವಾದ ಸ್ವರ ನಿಜದಲ್ಲಿ ಇಲ್ಲವಾಗುತ್ತದೆ, ಒತ್ತಕ್ಷರವಾದ ವ್ಯಂಜನಾಕ್ಷರ ಪೂರ್ಣಾಕ್ಷರವಾಗಿ ಕೇಳುತ್ತದೆ.  ಎಂದರೆ ನೀವು ಆಕಾರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ಬರೆದಾಗ ಹಾಗೆ ಬರೆಯಬಹುದಷ್ಟೇ ಹೊರತು ಉಚ್ಚರಿಸಲು ಸಾಧ್ಯವೇ ಇಲ್ಲ.  ಹಾಗೆ ಉಚ್ಚರಿಸಿದಾಗ ಮುಖ್ಯಾಕ್ಷರವಾದ ಆ ಕಾರ ಮರೆಯಾಗಿ, ಕೇಳುವುದು ಯಾ ಮಾತ್ರ.  ಹೆಚ್ಚೆಂದರೆ ಅಕಾರದ ಉತ್ಪತ್ತಿಸ್ಥಾನವನ್ನು ನೀವು ಗಂಟಲಿನಲ್ಲಿ ಒತ್ತಿ, ಅನಂತರ ಯಕಾರವನ್ನು ಉಚ್ಚರಿಸುಸುವುದರಿಂದ ಹಾಗೆ ಒತ್ತಿದ್ದು ಯಕಾರದ ಹಿಂದೊಂದು ವಿಚಿತ್ರ ಶಬ್ದವನ್ನು ಮೂಡಿಸುತ್ತದೆಯೇ ಹೊರತು ಅದು ಅಕಾರವೆನ್ನುವಂತಿಲ್ಲ.  ಅದು ಮನದಟ್ಟಾಗಬೇಕಾದರೆ ಯಕಾರವನ್ನು ಕೈಬಿಟ್ಟು ಇನ್ನೂ ಸ್ಪಷ್ಟವಾದ ಇನ್ನೊಂದು ಉದಾಹರಣೆಯನ್ನು ನೋಡೋಣ.  ಮಟ್ಕಾ ಎಂಬ ಪದವನ್ನು ತೆಗೆದುಕೊಳ್ಳಿ.  ಇಲ್ಲಿನ ಟ್ಕಾ ಎಂಬ ಅಕ್ಷರವನ್ನು ಗಮನಿಸಿ.  ಇಲ್ಲಿ ಏನೇನಿದೆ? ಟ್ ಕ್ ಆ ಅಲ್ಲವೇ?  ಮುಖ್ಯಾಕ್ಷರವಾದ ಟಾ ಎಂಬುದು ಸೀಳಿ ಹೋಗಿ, ಮೊದಲ ಭಾಗವಾದ ಟ್ ವ್ಯಂಜನವು ಮೊದಲು ಬಂತು, ಎರಡನೆಯ ಭಾಗವಾದ ಆ ಸ್ವರವು ಕಕಾರಕ್ಕೆ ಹೋಗಿ ಸೇರಿಕೊಂಡಿತು, ಅಲ್ಲವೇ?  ಈಗ ಟ ಅಕ್ಷರದ ಬದಲು ಅ ಅಕ್ಷರಕ್ಕೆ ಕವೊತ್ತು ಕೊಟ್ಟರೆ ಏನಾಗುತ್ತದೆ? (ಅ್ಕ).  ಮೊದಲಾದರೆ ಟಾ ಎಂಬಲ್ಲಿನ ವ್ಯಂಜನ ಸ್ವರಗಳು ಸೀಳಿ ವ್ಯಂಜನವು ಈಕಡೆಯೂ ಸ್ವರವು ಆಕಡೆಯೂ ಹೋಯಿತು.  ಈಗ ಅಕಾರಕ್ಕೇ ಒತ್ತು ಕೊಡುತ್ತಿದ್ದೇವೆ.  ಇಲ್ಲಿ ಸೀಳುವುದು ಯಾವುದು?  ಅ ಅರ್ಧಾಕ್ಷರವು ಸೀಳಿ ಒಂದು ಸೀಳು ಎಡಕ್ಕೆ ಬಂತು (ಅ್ ಎನ್ನೋಣ).  ಇನ್ನು ಕಕಾರಕ್ಕೆ ಬಂದು ಸೇರುವುದೇನು?  ಅ ಅರ್ಧಾಕ್ಷರವೇ? ಅ್ಕ ಎಂಬುದನ್ನು ಉಚ್ಚರಿಸಿ ನೋಡಿ?  ಕಕಾರದನಂತರ ಅಕಾರದ ಪೂರ್ಣಾಕ್ಷರವೇ ಕೇಳುತ್ತದಲ್ಲವೇ? (ಕ್ + ಅ = ಕ).  ಹಾಗಿದ್ದರೆ ಕಕಾರದ ಹಿಂದೆ ಉಳಿದದ್ದೇನು? ಅ್ ಎಂಬ, ರೂಪವಿಲ್ಲದ ವಿಚಿತ್ರ ಶಬ್ದವಷ್ಟೇ.  ಮುಖ್ಯವಾಗಿ ಕೇಳುವುದು ಕ ಎಂಬ ಅಕ್ಷರವಷ್ಟೇ.  ಇನ್ನಿದೇ ಪ್ರಯೋಗವನ್ನು ಇ ಅಕ್ಷರದೊಂದಿಗೆ ಪುನರಾವರ್ತಿಸಿ? (ಇ್ಕ).  ಈಗ ಸ್ವರಾಕ್ಷರದಲ್ಲಿ ಸೀಳಿದ್ದೇನು? ಇ್ ಎಂಬ ರೂಪವಿಲ್ಲದ ವಿಚಿತ್ರ ಶಬ್ದವು ಕಕಾರದ ಎಡಕ್ಕೂ, ಇ ಎಂಬ ಪೂರ್ಣಸ್ವರವು ಕಕಾರದನಂತರವೂ ಬಂದಿತಲ್ಲವೇ? ಇದನ್ನು ಉಚ್ಚರಿಸಿದಾಗ ಕೇಳುವುದೇನು?  ಇ್ + ಕಿ!  ಎಂದರೆ ಇಕಾರವು ಸಂಪೂರ್ಣವಾಗಿ ಕಕಾರಕ್ಕೆ ಸೇರಿಬಿಟ್ಟಿದೆ.  ಇನ್ನು ಹಿಂದೆ ಉಳಿದದ್ದು ಇ್ ಎಂಬ ರೂಪವಿಲ್ಲದ ಶಬ್ದವಷ್ಟೇ.  ಈಗ ಮೊದಲ ಉದಾಹರಣೆಯ ಅ್ ಶಬ್ದಕ್ಕೂ ಈ ಉದಾಹರಣೆಯ ಇ್ ಶಬ್ದಕ್ಕೂ ವ್ಯತ್ಯಾಸವೇನಾದರೂ ಉಂಟೇ? (ಅ ಇ ಎನ್ನುವುದು ಬೇಡ, ಅವು ಕಕಾರದನಂತರ ನುಡಿಯುತ್ತಿರುವ ಪೂರ್ಣಸ್ವರಗಳು - ಟ್ಕ ಎನ್ನುವಾಗಲೂ ಕಕಾರದನಂತರ ಅಕಾರವು ಬಂದಿದೆ, ಆದರೆ ಅದರ ಹಿಂದೆ ಟಕಾರದ ಅರ್ಧಾಕ್ಷರ ಸ್ಪಷ್ಟವಾಗಿ ನುಡಿಯುತ್ತಿದೆ.  ಆದರೆ ಅ್ ಇ್ ಗಳ ವಿಷಯದಲ್ಲಿ ಹೀಗಾಯಿತೇ?).  ಇದೇ ಪ್ರಯೋಗವನ್ನು ಅ್ ಆ್ ಇ್ ಈ್ ಉ್ ಊ್ ಈ ಎಲ್ಲ ’ಅರ್ಧ’ಸ್ವರಗಳೊಂದಿಗೆ ಪುನರಾವರ್ತಿಸಿ ನೋಡಿ - ಅ್ಕ ಆ್ಕ ಇ್ಕ ಈ್ಕ ಉ್ಕ ಊ್ಕ ಹೀಗೆ.  ಇವಕ್ಕೂ ಕ ಕಾ ಕಿ ಕೀ ಕು ಕೂ ಈ ಅಕ್ಷರಗಳಿಗೂ ವ್ಯತ್ಯಾಸವೇನು?  ಮೊದಲ ಗುಂಪಿನಲ್ಲಿ ಸ್ವರಸ್ಥಾನವನ್ನೊತ್ತಿದ ಅ್ ಎಂಬ ಧ್ವನಿ ಕೇಳುತ್ತದಷ್ಟೇ.  ಆದರೆ ಅ್ ಆ್ ಇ್ ಈ್ ಉ್ ಊ್ ಎಂಬ ವ್ಯತ್ಯಾಸವನ್ನು ಅಲ್ಲಿ ಕಂಡುಹಿಡಿಯಬಹುದೇ? ಈಗಲೂ ಹೌದೆನ್ನುವುದಾದರೆ, ಇದು ಇನ್ನೊಂದು ಕಠಿನವಾದ ಪರೀಕ್ಷೆಯನ್ನೆದುರಿಸಬೇಕಾಗುತ್ತದೆ.  ಸ್ವರಾಕ್ಷರವು ಅರ್ಧಾಕ್ಷರವಾಗಬಹುದೆನ್ನುವುದಾದರೆ, ಅದು ಸ್ವತಂತ್ರವಾಗಿಯೇ ಅರ್ಧಾಕ್ಷರವಾಗಿ ನುಡಿಯಬೇಕು.  ಮಸ್ಕ್ ಎನ್ನುವಲ್ಲಿ ಸ್ಕ್ ಎನ್ನುವ ಅಕ್ಷರ ಗಮನಿಸಿ.  ಸ್ ಮತ್ತು ಕ್ ಎರಡೂ ಅರ್ಧಾಕ್ಷರಗಳೇ.  ಎರಡೂ ಸ್ಪಷ್ಟವಾಗಿ ನುಡಿಯುತ್ತವೆ.  ಇಲ್ಲಿನ ಸಕಾರದಂತೆ ಸ್ವರಾಕ್ಷರವೂ ಅರ್ಧಾಕ್ಷರವಾಗಿ ನುಡಿಯಬಲ್ಲುದೇ?  ಪ್ರಯತ್ನಿಸಿ ನೋಡಿ ಮೊದಲೇ ಹೇಳಿದ ಸ್ವರಾಕ್ಷರಗಳಿಗೆ ಕವೊತ್ತನ್ನು ಅರ್ಧಾಕ್ಷರವಾಗಿ ಕೊಟ್ಟು ನೋಡಿ ಅ್ಕ್ ಆ್ಕ್ ಇ್ಕ್ ಈ್ಕ್ ಉ್ಕ್ ಊ್ಕ್.  ಇದನ್ನು ಉಚ್ಚರಿಸಿದಾಗ ಸ್ವರವ್ಯಂಜನಗಳೆರಡೂ ನುಡಿಯುತ್ತವೆಯೇ? ಇವಕ್ಕೂ ಬರೀ ಕ್ ಉಚ್ಚಾರಣೆಗೂ ವ್ಯತ್ಯಾಸವೇನು?

ಆದ್ದರಿಂದ "ಆ್ಯ" ಎಂಬ ’ಸ್ವರ’ಸಂಕೇತ ಬೇಡವೆನ್ನುತ್ತಿರುವುದು ಸ್ವಪ್ರೇರಿತ ಮುಜುಗರದಿಂದಲ್ಲ, ಬದಲಿಗೆ ಈ ಎರಡು ಕಾರಣಗಳಿಂದ:

೧) "ಆ್ಯ" ಎಂಬ ಅಕ್ಷರವನ್ನು ಲಿಪಿಯಲ್ಲಿ ಸಾಧ್ಯವಾಗಿಸಬಹುದಾದರೂ ಅದಕ್ಕೆ ಉಚ್ಚಾರಣೆಯಲ್ಲಿ ಅಸ್ತಿತ್ವವಿಲ್ಲ.  ತಿಳಿದೂ ತಿಳಿದೂ ಉಚ್ಚಾರಣಾಸಾಧುತ್ವವಿಲ್ಲದ ಅಕ್ಷರಗಳನ್ನು ಹುಟ್ಟುಹಾಕುವುದು ವೈಜ್ಞಾನಿಕವಲ್ಲ

೨) ಇಂಗ್ಲಿಷಿನ A ಅಕ್ಷರದ ಉಚ್ಚಾರಣೆ ಸುಮಾರಾಗಿ "ಆ್ಯ" ಎಂಬುದಕ್ಕೆ ಹತ್ತಿರಿರಬಹುದು, ಆದರೆ ಅದೇ ಅಲ್ಲ.  ಆದ್ದರಿಂದ ಆ ಮತ್ತು ಯಾ ಗಳಂತೆಯೇ "ಆ್ಯ" ಎಂಬುದೂ ದಾರಿತಪ್ಪಿಸುವಂಥದ್ದೇ.  ಹೊಸದಾಗಿ ಧ್ವನಿಸಂಕೇತವನ್ನು ತರುವುದಾದರೆ (ಸಾಧ್ಯವಾದರೆ ಅದು ಯಾವಾಗಲೂ ಸ್ವಾಗತಾರ್ಹವೇ), ಸುಮಾರಾಗಿ ಹತ್ತಿರದ್ದೊಂದು ಸಂಕೇತವನ್ನು ತರುವುದರ ಬದಲು ಯಥಾವತ್ತಾಗಿ ಅದನ್ನೇ ಧ್ವನಿಸುವ ಸಂಕೇತಗಳನ್ನು ಜಾರಿಗೆ ತರುವುದು ಒಳ್ಳೆಯದು.  ಸಾಗರಸ್ಸಾಗರೋಪಮಮ್ ಎನ್ನುವಂತೆ A ಅಕ್ಷರಕ್ಕೆ ಅದೇ ಸಾಠಿ.  ಆದ್ದರಿಂದ ಆ ಧ್ವನಿಯನ್ನು ಸಂಕೇತಿಸಲು ಕನ್ನಡದಲ್ಲೂ A ಅಕ್ಷರವನ್ನೇ ಬಳಸಿದರೂ ಅಭ್ಯಂತರವಿರಲಿಕ್ಕಿಲ್ಲ (ಕೈಲಾಸಂ ಈಗಾಗಲೇ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ - ಗಡFಖಾನ್ ನೆನಪಿಸಿಕೊಳ್ಳಿ).  ಇರಲಿ, Aಪಲ್, ಕಾFಈ, Zಈಬ್ರಾಗಳು ತೀರ ಅತಿರೇಕವೆನಿಸಿದರೂ, ಅದನ್ನೇ ಯಥಾವತ್ತಾಗಿ ಸೂಚಿಸುವ ಹೊಸ ಸಂಕೇತಗಳನ್ನು ಕನ್ನಡದಲ್ಲಿಯೂ ರೂಢಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.  ಈಗಾಗಲೇ F Z ಗಳಿಗೆ ಕನ್ನಡದಲ್ಲಿ ಫ಼ ಜ಼ ಎಂದು ಅಡಿಚುಕ್ಕಿಯಿಟ್ಟು ಸೂಚಿಸುತ್ತೇವೆ.  ಹಿಂದಿಯಲ್ಲಿಯೂ ವರ್ಣಮಾಲೆಯಲ್ಲಿಲ್ಲದ ಅನುನಾಸಿಕ ಉಚ್ಚಾರಕ್ಕೆ ಅರ್ಧಚಂದ್ರಬಿಂದುವಿನ ಸಂಕೇತವನ್ನು ಬಳಸುತ್ತಾರೆ (कहाँ).  ಹಾಗೆಯೇ ಕನ್ನಡದಲ್ಲಿಯೂ A ಅಕ್ಷರದ ವಿಶಿಷ್ಟ ಉಚ್ಚಾರವನ್ನು ಸೂಚಿಸಲು ಅ ಅಕ್ಷರದ ಕೆಳಗೆ ಅಡಿಚುಕ್ಕೆಯನ್ನೋ, ಮೇಲೆ ಚಂದ್ರನನ್ನೋ ಇಟ್ಟು ಸೂಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ - ಏಕೆಂದರೆ A ಎನ್ನುವುದು ಅ ಎನ್ನುವುದರ ವಿಶಿಷ್ಟ ಉಚ್ಚಾರವೇ ಹೊರತು ಆ್ಯ ಅಲ್ಲ.

ಇವೆಲ್ಲ ವೈಯಾಕರಣನ ಕಸರತ್ತೇ ಇರಬಹುದು, ಆದರೆ ಕನ್ನಡದ ಲಿಪಿ ವರ್ಣಮಾಲೆಯು ಇಂಗ್ಲಿಷಿನಂತೆ ಯರ್ರಾಬಿರ್ರಿ ಬೆಳೆಯುವ ಹಂತಕ್ಕಿಂತ ಬಹು ಮುಂದೆ ಹೋಗಿದೆ.  ಆದ್ದರಿಂದ ಭಾಷೆಯಲ್ಲಲ್ಲದಿದ್ದರೆ ಕೊನೆಯಪಕ್ಷ ವರ್ಣಮಾಲೆಯಲ್ಲಾದರೂ ಈ ರೀತಿಯ ಪ್ರಜ್ಞಾಪೂರ್ವಕ ಕಸರತ್ತು ಅತ್ಯವಶ್ಯ.

Sunday, February 26, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"


ಇಂಗ್ಲಿಷಿನ Apple, Add ಮೊದಲಾದ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯುವಾಗ ಆಪಲ್, ಆಡ್ ಅಥವಾ ಯಾಪಲ್, ಯಾಡ್ ಎಂದು ಬರೆಯುವ ಪದ್ಧತಿಯಿದೆ.  ಹಲವು ಇಂಗ್ಲಿಷ್-ಕನ್ನಡ ನಿಘಂಟುಗಳಲ್ಲಿ ಅದರ ನೈಜ ಉಚ್ಚಾರಕ್ಕೆ ಹತ್ತಿರವಾಗುವಂತೆ ಆ ಎಂಬ ಅಕ್ಷರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ತೋರಿಸಿರುತ್ತಾರೆ.  ಕೈಬರಹದಲ್ಲೇನೋ ಇದು ಸಾಧ್ಯ, ಆದರೆ ಆದರೆ ಕಂಪ್ಯೂಟರಿನಲ್ಲಿ ಯೂನಿಕೋಡಿನಲ್ಲಿ ಬರೆಯುವಾಗ ಇದು ಸಾಧ್ಯವಿಲ್ಲ.  ಅಕಾರಕ್ಕೆ ಯವೊತ್ತನ್ನು ಕೊಡುವುದು ಭಾಷಿಕವಾಗಿ ಸಾಧುವಲ್ಲವಾದ್ದರಿಂದ, ಆ ಸೌಲಭ್ಯವನ್ನು ಯೂನಿಕೋಡಿನಲ್ಲೂ ಕೊಡಮಾಡಿಲ್ಲ.  ಆದರೆ ಇದನ್ನೊಂದು ’ದೋಷ’ ಅಥವಾ ಕೊರತೆಯೆಂದು ಭಾವಿಸುವ ಹಲವರು ಈ ಕೊರತೆಯನ್ನು ತುಂಬಲು ಯೂನಿಕೋಡಿನಲ್ಲಿ ತಕ್ಕ ಮಾರ್ಪಾಡುಗಳನ್ನು ಮಾಡಬೇಕೆಂದು ಚರ್ಚಿಸುತ್ತಿದ್ದಾರೆ.  ಭಾಷಾವೇದಿಕೆಯೊಂದರಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ನನ್ನ ಗಮನಕ್ಕೆ ತಂದ ಮಿತ್ರ ರಾಜೇಶರಿಗೆ (”ಪರಿವರ್ಧಿತ ಕನ್ನಡ ಲಿಪಿ") ಪ್ರತಿಕ್ರಿಯೆ ಬರೆಯುತ್ತಾ ಇದೊಂದು ಪೂರ್ಣಪ್ರಮಾಣದ ಲೇಖನವೇ ಆಯಿತು.  ಈ ವಿಷಯದಲ್ಲಿ ನನ್ನ ಅಭಿಪ್ರಾಯಗಳು ಇಂತಿವೆ.

ಇಲ್ಲಿ ನಾವು ಯೂನಿಕೋಡಿನ ವಿಷಯ ಚಿಂತಿಸುವ ಮೊದಲು ನೇರ ಲಿಪಿಯ ಬಗೆಗೇ ಚಿಂತಿಸಬೇಕಾಗುತ್ತದೆ, ಏಕೆಂದರೆ ಲಿಪಿಸಂಕೇತಗಳು ಯೂನಿಕೋಡಿನಲ್ಲಿ ಬಂದಮಾತ್ರಕ್ಕೆ ಬಳಕೆಯಲ್ಲಿ ನಿಲ್ಲದು.  ಕೈಬರಹವು ನಿಧಾನಕ್ಕೆ ಕಣ್ಮರೆಯಾಗುತ್ತಾ ಕಂಪ್ಯೂಟರು ಅದರ ಸ್ಥಾನವನ್ನಾಕ್ರಮಿಸುತ್ತಾ ಹೋದಂತೆ, ವಿವಿಧ ಭಾಷೆ ಪ್ರದೇಶ ಸನ್ನಿವೇಶಗಳ ಪ್ರಭಾವದಿಂದ ಸಾವಿರಾರು ವರ್ಷಗಳಿಂದ ವಿಕಾಸಗೊಳ್ಳುತ್ತಾ ಬಂದಿರುವ ಲಿಪಿ, ಲಿಪಿಸಂಸಾರ-ವ್ಯವಸ್ಥೆಗಳು ವಿಕಾಸಮಾರ್ಗದಲ್ಲಿ ಸ್ಥಗಿತಗೊಂಡು, ಯೂನಿಕೋಡಿನಲ್ಲಿ standard ರೂಪ ಪಡೆದು ಅಲ್ಲಿಗೆ ನಿಂತುಬಿಡುತ್ತವೆಂಬುದು ನಿಜವಾದರೂ, ಸಧ್ಯಕ್ಕಂತೂ ಕಂಪ್ಯೂಟರಿಗೆ ಹೊರತಾದ ದೈನಂದಿನ ಜಗತ್ತಿನ ಮಾನ್ಯತೆ ಮುಖ್ಯವಾಗಿಯೇ ಉಳಿದಿದೆ.  ಯೂನಿಕೋಡಿನಲ್ಲಿ ಕೊಡಮಾಡುವ ಲಿಪಿಸೌಲಭ್ಯವೇನಿದ್ದರೂ ವಾಸ್ತವ ಜಗತ್ತಿನ ಲಿಪಿಸೌಲಭ್ಯದ ಪ್ರತಿಫಲನವಷ್ಟೇ.

ಸರಿ, ಲಿಪಿಯಲ್ಲಾದರೂ (ಉದಾಹರಣೆಗೆ) ’ಅ’ ಸ್ವರಕ್ಕೆ ’ಯ’ವೊತ್ತು ಕೊಡುವ ಅಗತ್ಯವಿದೆಯೇ ನೋಡಬೇಕಲ್ಲ.  ಈ ಅಗತ್ಯ ಕಂಡುಬಂದದ್ದು ಇಂಗ್ಲಿಷಿನ Apple ಮೊದಲಾದ ಪದಗಳಲ್ಲಿನ A ಅಕ್ಷರವನ್ನು ಕನ್ನಡ ಲಿಪಿಯಲ್ಲಿ ಬಳಸಲೋಸುಗ.  ಈ ಉಚ್ಚಾರಣೆಯನ್ನು ಕನ್ನಡದಲ್ಲಿ ತೋರಿಸುವ ಅಗತ್ಯವಿದೆಯೇ ಎಂಬುದನ್ನು ಅನಂತರ ನೋಡೋಣ.  ಅದಕ್ಕೂ ಮೊದಲು ಗಮನಿಸಬೇಕಾದ ವಿಷಯವೆಂದರೆ, ಇಂಗ್ಲಿಷಿನ A ಅಕ್ಷರದ್ದು "ಆ್ಯ" ಎಂಬ ರೀತಿಯ ಉಚ್ಚಾರಣೆ ಎಂಬ ಗ್ರಹಿಕೆಯೇ ತಪ್ಪು - ಸ್ವರ-ವ್ಯಂಜನಗಳ ಮೂಲಭೂತ ಅರಿವಿನ ಕೊರತೆಯಿಂದ ಬಂದದ್ದು!  ಭಾಷೆಯೊಂದು ಗ್ರಹಿಸುವ ಸ್ವರ-ವ್ಯಂಜನಗಳ ಸಂಖ್ಯೆ ಬೇರೆಬೇರೆಯಿರಬಹುದು, ಅವುಗಳನ್ನು ವರ್ಣಮಾಲೆಯಲ್ಲಿ ಪ್ರಸ್ತುತಪಡಿಸುವ ಕ್ರಮ ಬೇರೆಬೇರೆಯಿರಬಹುದು, ಮತ್ತು ಒಂದು ಭಾಷೆಯಲ್ಲಿ ಬಳಕೆಯಲ್ಲಿರುವ ಸ್ವರ/ವ್ಯಂಜನ ಇನ್ನೊಂದರಲ್ಲಿ ಇಲ್ಲದಿರಬಹುದು (ಕೆಲವು ಭಾಷೆಗಳಿಗೆ ವರ್ಣಮಾಲೆಯೇ ಇಲ್ಲ!  ಆದರೂ ಭಾಷೆಯಂತೂ ಇದೆ). ಧ್ವನಿಯೊಂದು ಸ್ವರವೋ ವ್ಯಂಜನವೋ ಆಗಿ ಗುರ್ತಿಸಿಕೊಳ್ಳುತ್ತದಲ್ಲ, ಆ ಸ್ವಭಾವ ಮಾತ್ರ ಭಾಷಾತೀತವಾದದ್ದು.  ಸ್ವರವೊಂದು ಯಾವ ಭಾಷೆಯಲ್ಲಿದ್ದರೂ (ಅಥವ ಪ್ರಾಣಿಯ ಧ್ವನಿಯೇ ಆಗಿದ್ದರೂ) ಅದು ಸ್ವರವೇ, ವ್ಯಂಜನ ಎಲ್ಲಿದ್ದರೂ ವ್ಯಂಜನವೇ.  ಆದ್ದರಿಂದ ಈ ಉಚ್ಚಾರವಿಷಯವನ್ನು ನೋಡುವ ಮೊದಲು ಸ್ವರ-ವ್ಯಂಜನಗಳ ಮೂಲಭೂತ ವ್ಯತ್ಯಾಸವನ್ನು ಅರಿಯುವುದು ಮುಖ್ಯ.

ಸ್ವರಕ್ಕೆ ಸ್ವತಂತ್ರ ಅಸ್ತಿತ್ವವಿದೆ (ಎಂದರೆ ಉಚ್ಚಾರಣೆಯಲ್ಲಿ ಅದು ಸ್ವತಂತ್ರವಾಗಿ ತನ್ನಿಂತಾನೇ ಪ್ರಕಟಗೊಳ್ಳುತ್ತದೆ), ಆದರೆ ವ್ಯಂಜನಕ್ಕೆ ಇರುವುದು ಕೇವಲ ಸಾಂಕೇತಿಕ ಅಸ್ತಿತ್ವ ಮಾತ್ರ - ಅನುನಾಸಿಕ ವ್ಯಂಜನಗಳು, ಮತ್ತು ಕೆಲವು ಅವರ್ಗೀಯ ವ್ಯಂಜನಗಳನ್ನು ಬಿಟ್ಟರೆ ಉಳಿದುವಾವುವೂ ಸ್ವತಂತ್ರವಾಗಿ ತನ್ನಿಂತಾನೇ ಉಚ್ಚಾರಣೆಯಲ್ಲಿ ಪ್ರಕಟಗೊಳ್ಳವು (ಬೇಕಿದ್ದರೆ ಕ್ ಚ್ ಟ್ ತ್ ಪ್ ಮೊದಲಾದುವುಗಳನ್ನು ಒಂದೂ ಚೂರೂ ಎಳೆಯದೇ ಉಚ್ಚರಿಸಿ ನೋಡಿ - ಅವು ಕೇವಲ ರೂಪವಿಲ್ಲದ ಲೊಚಗುಟ್ಟುವಿಕೆಯಂತ ಕೇಳುತ್ತವೆ, ಏಕೆಂದರೆ ಅವಕ್ಕೆ ಸ್ವರಗಳ ಆಧಾರವಿಲ್ಲ (ಕೆಲವರು ಅರ್ಧಾಕ್ಷರವನ್ನು ಉಚ್ಚರಿಸಿ ತೋರಿಸಲು ಅದಕೆ ಅಕಾರವನ್ನೋ ಉಕಾರವನ್ನೋ ಸೇರಿಸಿ ಅದನ್ನೇ ’ಅರ್ಧ’ಮಾಡಿ ಎಳೆದಂತೆ ಉಚ್ಚರಿಸುತ್ತಾರೆ (ಕ್ಅ್ ಖ್ಅ್ ಗ್ಅ್ ಘ್ಅ್ ಹೀಗೆ) ಅದು ತಪ್ಪು.  ವ್ಯಂಜನದ ಸ್ವರೂಪ ಧ್ವನಿಯಲ್ಲಿ ಪ್ರಕಟವಾಗಲು ಅದಕ್ಕೆ ಸ್ವರಗಳ ಬೆಂಬಲ ಬೇಕಾಗುತ್ತದೆ.  ಇದು ಒಂದೆಡೆಯಾದರೆ, ಮತ್ತೊಂದೆಡೆ, ’ಅರ್ಥ’ಕ್ಕೆ ಅತ್ಯಗತ್ಯವಾದ ಧ್ವನಿವೈವಿಧ್ಯ ಸ್ವರಗಳಿಗಿಲ್ಲ.  ಆ ವೈವಿಧ್ಯಕ್ಕಾಗಿ, ಅರ್ಥ ತುಂಬುವುದಕ್ಕಾಗಿ ಅವು ವ್ಯಂಜನಗಳನ್ನೇ ಆಶ್ರಯಿಸಬೇಕು.  ಎಂದರೆ ಅ ಆ ಇ ಈ ಮೊದಲಾದ ಸ್ವರಗಳನ್ನು ಬೇರಾವುದರ ಹಂಗೂ ಇಲ್ಲದೇ ಸ್ವತಂತ್ರವಾಗಿ ನುಡಿಯಬಹುದೇನೋ ಹೌದು - ಅವಕ್ಕೆ ಸ್ವತಂತ್ರ ಅಸ್ತಿತ್ವವಿದೆ; ಆದರೆ ಅದಕ್ಕೆ ಅರ್ಥವಿರಬೇಕೆಂದಿಲ್ಲ (ಬಹುಪಾಲು ಅರ್ಥವಿರುವುದಿಲ್ಲ ಕೂಡ). ಉದಾಹರಣೆಗೆ "ಆಉ ಓಇಎ" ಎಂದು ಸ್ವತಂತ್ರವಾಗಿ ಉಚ್ಚರಿಸಬಹುದು, ಆದರೆ ಅರ್ಥ? ಇದಕ್ಕೆ ಅರ್ಥ ತುಂಬಬೇಕಾದರೆ, ಸಂದರ್ಭಾನುಸಾರವಾಗಿ ನ್ ನ್ ನ್ ಡ್ ದ್ ಈ ವ್ಯಂಜನಗಳು ಬರಬೇಕು - ಆಗ ನಾನು ನೋಡಿದೆ ಎಂದಾಗುತ್ತದೆ. ಬದಲಿಗೆ ಇವೇ ಸ್ವರಗಳಿಗೆ ಮ್ ಡ್ ಸ್ ರ್ ದ್ ವ್ಯಂಜನಗಳನ್ನು ಹಾಕಿದರೆ ಮಾಡು ಸೋರಿದೆ ಎಂದಾಯಿತು. ಎರಡರಲ್ಲೂ ಮೂಲವಸ್ತು, ಸ್ವತಂತ್ರ ಅಸ್ತಿತ್ವವಿರುವ ಸ್ವರಗಳು ಆ ಉ ಓ ಇ ಎ ಗಳೇ. ಆದರೆ ವಿವಿಧ ವ್ಯಂಜನಗಳ ಸಂಯೋಗದೊಡನೆ ವಿವಿಧ ಉಚ್ಚಾರಣೆಯುಳ್ಳ ಅಕ್ಷರಗಳಾದುವು, ವಿವಿಧ ಅರ್ಥವುಳ್ಳ ಪದ/ವಾಕ್ಯಗಳಾದುವು. ಆದರೆ ನ್ ನ್ ನ್ ಡ್ ದ್ ಅಥವಾ ಮ್ ಡ್ ಸ್ ರ್ ದ್ ಈ ಅಕ್ಷರಗಳಿಗೆ ಇಷ್ಟು ಶಕ್ತಿಯಿದ್ದರೂ ಸ್ವತಂತ್ರ ಅಸ್ತಿತ್ವವಿಲ್ಲ, ಅವೇನಿದ್ದರೂ ಮೂಲಸ್ವರಗಳಿಗೆ ವಿವಿಧ ರೂಪ-ವ್ಯಕ್ತಿತ್ವ ನೀಡುವ ವ್ಯಂಜನಗಳಷ್ಟೇ.

ಎಂದರೇನು? ಸ್ವರಾಕ್ಷರಗಳು *ಯಾವಾಗಲೂ* ಪೂರ್ಣಾಕ್ಷರಗಳು, ಅವು ಅರ್ಧವಾಗುವುದೇ ಇಲ್ಲ, ಮತ್ತೆ ವ್ಯಂಜನಗಳು ಯಾವಾಗಲೂ ಅರ್ಧಾಕ್ಷರಗಳೇ, ಅವು ತಮ್ಮ ಸ್ವಸ್ವರೂಪದಲ್ಲಿ ಪ್ರಕಟವಾಗಿ ಕೇಳುವುದೇ ಇಲ್ಲ (ಮ್ ಣ್ ನ್ ಲ್ ಳ್ ರ್ ಮೊದಲಾದ ಕೆಲವು ವ್ಯಂಜನಗಳ ಹೊರತಾಗಿ).  ಆದ್ದರಿಂದ ವ್ಯಂಜನಗಳು ತಮ್ಮ ಪೂರ್ಣತ್ವಕ್ಕಾಗಿ ಸ್ವರಗಳನ್ನು ಆಶ್ರಯಿಸಲೇ ಬೇಕಾಗುತ್ತದೆ.  ಈಗ ಒತ್ತಕ್ಷರಗಳನ್ನು ನೋಡಿ.  ಇವು ಹಲವು ಅರ್ಧಾಕ್ಷರಗಳು ಮತ್ತು ಒಂದು ಪೂರ್ಣಾಕ್ಷರದ ಸಂಯೋಗ ತಾನೆ?  ಈ ಅರ್ಧಾಕ್ಷರಗಳು ಯಾವುವು?  ವ್ಯಂಜನಗಳೇ.  ಉದಾಹರಣೆಗೆ ಕ್ರ ಎಂಬಲ್ಲಿ ಕ್ ರ್ ಮತ್ತು ಅ ಅಕ್ಷರಗಳಿವೆ.  ಮೊದಲೆರಡೂ ವ್ಯಂಜನಗಳು, ಮತ್ತು ಕೊನೆಯ ಪೂರ್ಣಾಕ್ಷರ ಸ್ವರ.  ಕ್ರ ಎನ್ನುವುದರ ಬದಲು ರ‍್ಕ ಎಂದರೂ ಇದೇ ಕತೆಯೇ - ರ್ ಕ್ ಮತ್ತು ಅ.  ಅದೇ ಉಣ್ ಎಂಬ ಪದ ನೋಡಿ.  ಇಲ್ಲೂ ಪೂರ್ಣಾಕ್ಷರವಾದ ಉಕಾರವು ಸ್ವತಂತ್ರವಾಗಿಯೇ ಪ್ರಕಟವಾಗಿದೆ.  ಇನ್ನು ಣ್ ವ್ಯಂಜನ ಸ್ವತಃ ಸ್ವತಂತ್ರ, ಅದು ಹಾಗೆಯೇ ಪ್ರಕಟಗೊಂಡಿದೆ.  ಆದರೆ ಉಕಾರಕ್ಕೆ ಣಕಾರವನ್ನು ’ಒತ್ತು’ ಎನ್ನಲಾಗುವುದಿಲ್ಲ.  ಏಕೆಂದರೆ ಒತ್ತಕ್ಷರವಾಗಲು ಮೊದಲಕ್ಷರ ಅರ್ಧಾಕ್ಷರವೇ ಆಗಿರಬೇಕು.  ಮೊದಲೇ ತಿಳಿಸಿದಂತೆ, ಸ್ವರಾಕ್ಷರಗಳು ಸ್ವಭಾವತಃ ಪೂರ್ಣಾಕ್ಷರಗಳು, ಮತ್ತು ಅವು ಅರ್ಧವಾಗುವುದೇ ಇಲ್ಲ.  ಕ್, ಗ್, ಜ್ ಎಂದು ವ್ಯಂಜನವನ್ನುಚ್ಚರಿಸುವಂತೆ ಯಾವುದಾದರೂ ಸ್ವರವನ್ನು ಅರ್ಧಾಕ್ಷರವಾಗಿ ಉಚ್ಚರಿಸಿ ನೋಡೋಣ.  ಆಗದು ಅಲ್ಲವೇ (ಔತ್ತರೇಯರು ಈ ಸ್ವರಗಳನ್ನೂ ಹಲ್ಲು ಹಿಡಿದು ಅರ್ಧಾಕ್ಷರವಾಗಿ ಕೇಳುವಂತೆ ವಿಚಿತ್ರವಾಗಿ ಉಲಿಯುತ್ತಾರೆ - ಅ್ ಆ್ ಇ್ ಈ್ ಉ್ ಊ್ ಹೀಗೆ - ಆದರೆ ಅದು ಸರಿಯಲ್ಲ).  ಆದ್ದರಿಂದ ಅರ್ಧವಾಗಲಾರದ ಅಕಾರಕ್ಕೆ ಯವೊತ್ತನ್ನು ಕೊಡುವುದು ಪ್ರಾಯೋಗಿಕವಾಗಿ ಅಸಾಧ್ಯ.  ನೆನಪಿರಲಿ, ಇದು ಕೇವಲ ಕನ್ನಡ/ಸಂಸ್ಕೃತಕ್ಕಷ್ಟೇ ಅನ್ವಯವಾಗುವ ಮಾತಲ್ಲ, ಯಾವುದೇ ಭಾಷೆಗೂ, ಯಾವುದೇ ಮನುಷ್ಯಧ್ವನಿಗೂ ಅನ್ವಯಿಸುವಂಥದ್ದು.

ಹಾಗಿದ್ದರೆ ಇಂಗ್ಲಿಷಿನಲ್ಲಿ ಆ ಪ್ರಯೋಗವಿದೆಯಲ್ಲ, ಎಂದರೆ ಅದು ಸುಳ್ಳು - ಇಂಗ್ಲಿಷಿನ A ಅಕ್ಷರವು ಸುಮಾರಾಗಿ ಅಕಾರಕ್ಕೆ ಯವೊತ್ತನ್ನು ಕೊಟ್ಟಂತೆ ಕೇಳುತ್ತದೆಯೇ ಹೊರತು ಅದು ಅದೇ ಅಲ್ಲ - ಅ/ಆಕಾರದ್ದೇ ಮತ್ತೊಂದು ಪ್ರಭೇದವಷ್ಟೇ - ಆ ಎನ್ನುವ ಸ್ವರವೇ ಸ್ವಸ್ಥಾನದಿಂದ ಸ್ವಲ್ಪ ಮೇಲಿನ ಜಾಗೆಯಿಂದ ಹೊರಡುತ್ತದೆ, ಮತ್ತು ಅದನ್ನುಚ್ಚರಿಸುವಾಗ ಎಂದುಚ್ಚರಿಸುವಾಗ ನಾಲಿಗೆಗೂ ಬಾಯಿಯ ಮೇಲ್ಗೋಡೆಗೂ ನಡುವಿರುವ ಅವಕಾಶ ಸ್ವಲ್ಪ ಕಿರಿದಾಗಿ ಚಪ್ಪಟೆಯಾಗುತ್ತದೆ.  "A = ಆ್ಯ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ.  ’ಸುಧಾರಣಾ’ವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ.  ಹಾಗಿದ್ದರೆ ಈ ಸಮಸ್ಯೆಯನ್ನು ಪರಿಗಣಿಸುವುದು ಹೇಗೆ?

ಕನ್ನಡ ವರ್ಣಮಾಲೆ ಸಂಸ್ಕೃತವರ್ಣಮಾಲೆಯ ಪ್ರಸ್ತುತಿಯನ್ನೇ ಬಹುಪಾಲು ಅನುಸರಿಸಿದ್ದರೂ, ಕನ್ನಡದ ಅಗತ್ಯಗಳಿಗೆ ತಕ್ಕಂತೆ ಮಾರ್ಪಟ್ಟು ಅನುವಾಗಿದೆ.  ಅದರಲ್ಲಿರುವ ಐವತ್ತು (ನಲವತ್ತೊಂಬತ್ತು ಅನ್ನೋಣ) ಅಕ್ಷರಗಳು ಕನ್ನಡದ ಸಂಪರ್ಕದಲ್ಲಿರುವ ಬಹುತೇಕ ಭಾಷೆಗಳನ್ನೂ ನುಡಿಯಲು ಅನುವಾಗುವಂತಿದೆ.  ಇಷ್ಟಿದ್ದೂ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು.  ನೂರಾರು ಧ್ವನಿಗಳನ್ನು ಹಿಡಿದಿಡುವ ಕೆಲಸವನ್ನು ಐವತ್ತು ಅಕ್ಷರದ ವರ್ಣಮಾಲೆ ನಿಭಾಯಿಸುತ್ತಿದೆ.  ಅದೇ ಕೆಲಸವನ್ನೇ ಇಂಗ್ಲಿಷಿನ ಇಪ್ಪತ್ತಾರು ಅಕ್ಷರದ ವರ್ಣಮಾಲೆಯೂ ಮಾಡುತ್ತಿದೆ. ಅದರರ್ಥವೇನು?  ವರ್ಣಮಾಲೆಯೊಂದು ಸಾಧ್ಯವಿರುವ *ಎಲ್ಲ* ಧ್ವನಿಗಳನ್ನೂ ಒಳಗೊಳ್ಳುವುದು ಅಸಾಧ್ಯ.  ಬದಲಿಗೆ ಆ ಭಾಷೆಯಲ್ಲಿ ಬಳಕೆಯಲ್ಲಿದ್ದ/ಇರುವ/ಇರಬಹುದಾದ ಮತ್ತು ಇತರ ಭಾಷೆಗಳೊಡನೆ ದೈನಂದಿನ ಕೊಡುಕೊಳ್ಳುವಿಕೆಗೆ ಅನುವಾಗುವಷ್ಟು ಅಕ್ಷರಗಳನ್ನು ಆ ಭಾಷೆಯ ವರ್ಣಮಾಲೆ ಒಳಗೊಳ್ಳುತ್ತದೆ.  ಇನ್ನಿದನ್ನು ಧ್ವನಿವೈಜ್ಞಾನಿಕವಾಗಿ ತರ್ಕಬದ್ಧವಾಗಿ ಜೋಡಿಸಿಟ್ಟುಕೊಳ್ಳುವ ಕೆಲಸವನ್ನು ಸಂಸ್ಕೃತದಂಥ ಕೆಲವು ಭಾಷೆಗಳು ಮಾಡುತ್ತವೆ, ಆದರೆ ಇಂಗ್ಲಿಷಿನಂಥ ಹಲವು ಭಾಷೆಗಳು ಮಾಡುವುದಿಲ್ಲವಷ್ಟೇ.  ಹೀಗೆ ಅನುವುಗೊಂಡ ವರ್ಣಮಾಲೆಯ ಒಂದು ಅಕ್ಷರಕ್ಕೆ ಹಲವು ಧ್ವನಿಗಳಿರುವುದು ಸಾಧ್ಯ, ಅಲ್ಲವೇ?  ಉದಾಹರಣೆಗೆ ನೋಡಿ, A ಅಕ್ಷರಕ್ಕೆ ಇಂಗ್ಲಿಷಿನಲ್ಲೇ ನಿರ್ದಿಷ್ಟ ಧ್ವನಿಯಿಲ್ಲ.  ಅ ಎನ್ನುವುದರಿಂದ ಎ ಎನ್ನುವವರೆಗೂ ಅದರ ಧ್ವನಿವ್ಯಾಪ್ತಿ - ನೇರ A ಅಕ್ಷರ ಬಂದರೊಂದು ಉಚ್ಚಾರಣೆ, ಪದದ ಕೊನೆಯಲ್ಲಿ ಬಂದರೆ ಒಂದು ಉಚ್ಚಾರಣೆ, ಪದದ ಮೊದಲಲ್ಲಿ ಬಂದರೆ ಒಂದು; ಇನ್ನು ಪದದ ಕೊನೆಯಲ್ಲಿ E ಅಕ್ಷರ ಬಂದರೇ ಪದದ ನಡುವಿನಲ್ಲಿ ಬರುವ A ಅಕ್ಷರಕ್ಕೊಂದು ಉಚ್ಚಾರಣೆ, A ಅಕ್ಷರದ ಮುಂದೆ ಬರುವ ಅಕ್ಷರದ ಮೇಲೆ ಅವಲಂಬಿತವಾಗಿ ಬೇರೊಂದು ಉಚ್ಚಾರ - ಹೋಗಲಿ ಇದರಲ್ಲಾದರೂ ಏಕರೂಪತೆಯಿದೆಯೇ ಎಂದರೆ ಅದೂ ಕಾಣದು.  ಒಂದೊಂದು ಭಾಷೆಯ ಮೂಲದಿಂದ ಬಂದ ಪದದಲ್ಲಿ ಒಂದೊಂದು ಉಚ್ಚಾರ.  ಇದಕ್ಕೆ ಕಾರಣವೂ ಇಲ್ಲದಿಲ್ಲ.  ಇಂಗ್ಲಿಷ್ ನಾಗರಿಕತೆ ಮತ್ತು ವ್ಯವಹಾರಸಂಬಂಧಗಳು ಬೆಳೆದಷ್ಟು ಪ್ರಚಂಡವೇಗದಲ್ಲಿ ಭಾಷೆ/ವ್ಯಾಕರಣ/ಲಿಪಿಸೌಲಭ್ಯಗಳು ಬೆಳೆಯಲಿಲ್ಲ.  ಲ್ಯಾಟಿನ್, ಗ್ರೀಕ್, ಸ್ವೀಡಿಶ್, ಸ್ಕ್ಯಾಂಡಿನೇವಿಯನ್, ಐಸ್ಲಾಂಡಿಕ್ ಹೀಗೆ ಹಲವು ಭಾಷಾಮೂಲದ ಪದಗಳ ಕುದಿಗುಲುಮೆ ಇಂಗ್ಲಿಷ್ ಭಾಷೆ.  ಆಯಾ ಭಾಷೆಯ ಮೂಲದಿಂದ ಬಂದ ಪದಗಳು ಬಹುತೇಕ ಅದೇ ಉಚ್ಚಾರವನ್ನುಳಿಸಿಕೊಂಡಿದ್ದರೂ, ಅದಕ್ಕೆ ತಕ್ಕ ಅಕ್ಷರಸಂಜ್ಞೆ ಮಾತ್ರ ಇಂಗ್ಲಿಷಿನಲ್ಲಿ ಮೂಡಲಿಲ್ಲ (ಆದ್ದರಿಂದಲೇ, ಸ್ಪೆಲ್ಲಿಂಗ್ ಕಲಿಕೆ ಕೇವಲ ಭಾರತೀಯ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರಿಗೂ ಬಹು ದೊಡ್ಡ ಗೊಂದಲವೇ - ಇನ್ನು ಅಮೆರಿಕನ್ನರ ಬಗೆಗಂತೂ ಹೇಳುವುದೇ ಬೇಡ.  ಆಂಗ್ಲೇಯರಿಂದಲೇ ಬರುವ ಇ-ಮೈಲ್ ಪತ್ರವ್ಯವಹಾರವು ಎಣೆಯಿಲ್ಲದಷ್ಟು ಕಾಗುಣಿತದ ದೋಷದಿಂದ ತುಂಬಿರುವುದು ನನ್ನ ಸ್ವಂತ ಅನುಭವ).  ಒಂದೇ ಅಕ್ಷರಗಳ ವಿವಿಧ ಉಚ್ಚಾರಗಳನ್ನು ಸೂಚಿಸಲು a ā ä ẚ à á â ಮೊದಲಾದ ಸಂಜ್ಞೆಗಳನ್ನು ಬಳಸಲಾಗುತ್ತದೆಯಾದರೂ ಅದರಲ್ಲಿ ಏಕರೂಪತೆಯೂ ಇಲ್ಲ, ಎಲ್ಲೆಡೆಯೂ ಬಳಸುವ ಸಾರ್ವತ್ರಿಕತೆಯೂ ಇಲ್ಲ ಮತ್ತಿದು ಎಲ್ಲ ಉಚ್ಚಾರಣಾ ಸನ್ನಿವೇಶಗಳನ್ನು ಒಳಗೊಳ್ಳುವುದೂ ಇಲ್ಲ.  ಸಧ್ಯಕ್ಕೆ ಈ ಗೊಂದಲಗಳ ಭಾಷಾಮೂಲವನ್ನು ಕಡೆಗಣಿಸೋಣ.  ನಮಗೆ ಇವು ಪರಿಚಿತವಾಗುವುದು ಇಂಗ್ಲಿಷಿನ ಮೂಲಕ.  ಸ್ವತಃ ಇಂಗ್ಲಿಷ್ ಭಾಷೆಯೇ ಬಗೆಹರಿಸಿಕೊಳ್ಳಲಾಗದ ಸಮಸ್ಯೆಯನ್ನು, ನಾವು ಬಗೆಹರಿಸುವ ಅಗತ್ಯವೂ ಸಾಧ್ಯತೆಯೂ ಇದೆಯೇ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.

ಇಷ್ಟು ಹೇಳಿದ ಮೇಲೆ, ಇದೇ ಸಮಸ್ಯೆಯನ್ನು ಇಂಗ್ಲಿಷಿನೊಡನೆ ಇಂಥದೇ ಸಂಬಂಧ ಹೊಂದಿರುವ ಇತರ ಭಾರತೀಯ ಭಾಷೆಗಳು ಹೇಗೆ ನಿಭಾಯಿಸುತ್ತಿವೆ ನೋಡಬಹುದು.  ಸಂಸ್ಕೃತವಂತೂ ಕನ್ನಡ ಪದಗಳನ್ನೇ ಮುಟ್ಟಿಸಿಕೊಳ್ಳುವುದಿಲ್ಲವಾದ್ದರಿಂದ, ಇಂಗ್ಲಿಷಿನ ಉಚ್ಚಾರಣಾಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸ್ಕೃತ ನಮಗೆ ಉದಾಹರಣೆಯಾಗಲಾರದು.  ಹಿಂದಿ?  ಹಿಂದಿಯೂ ಒಂದು ರೀತಿ ಇಂಗ್ಲಿಷಿನಂತೆಯೇ ಹಲವು ಭಾಷೆಗಳ ಮಿಶ್ರಣ.  ಅರೇಬಿಕ್, ಪರ್ಶಿಯನ್, ಉರ್ದೂ ಮತ್ತು ದೇಶೀಯ ಪ್ರಾಕೃತಭಾಷೆಗಳ ಮಿಶ್ರಣವನ್ನು ಮೂಲವಾಗುಳ್ಳದ್ದು.  ಕೆಲವು ಸಂದರ್ಭಗಳಲ್ಲಿ, ವರ್ಣಮಾಲೆಯಲ್ಲಿಲ್ಲದ ವಿಶೇಷ ಉಚ್ಚಾರಣೆಗಾಗಿ (ಉದಾಹರಣೆಗೆ ಅನುನಾಸಿಕ) ಇರುವ ಅಕ್ಷರಕ್ಕೇ ಚಂದ್ರಚಿಹ್ನೆಯನ್ನು ಬಳಸುವ ಉದಾಹರಣೆಗಳಿವೆ (ಉದಾ: ಕಹಾ = कहा; ಕಹಾಂ = कहॅ).  ಆದರೆ ಅದು ಇಂಗ್ಲಿಷಿನಂತೆ ಹೊರಗಿನ ಪದಗಳನ್ನು ಅವುಗಳ ಮೂಲರೂಪದಲ್ಲೇ ಸ್ವೀಕರಿಸಿದ್ದಾಗಲೀ, ಅದಕ್ಕಾಗಿ ತನ್ನ ವರ್ಣಮಾಲೆಯಲ್ಲಿ ಬದಲಾವಣೆ ಮಾಡಿಕೊಂಡದ್ದಾಗಲೀ ಇಲ್ಲ.   ಇಂಗ್ಲಿಷಿನ bank ಎನ್ನುವುದನ್ನು ನಾವು ಬ್ಯಾಂಕ್ ಎಂದಾದರೂ ಬರೆಯುತ್ತೇವೆ, ಆದರೆ ಹಿಂದಿಯಲ್ಲಿ ಅದು बैंक ಆಗಿಬಿಡುತ್ತದೆ.  ಕೊನೆಗೆ ಹಿಂದಿಯಲ್ಲಿ ಸುಲಭವಾಗಿ ಬರೆಯಬಹುದಾದ hospital (हास्पिटल) ಕೂಡ आस्पताल ಆಗಿಬಿಡುತ್ತದೆ.  ಇನ್ನು ತಮಿಳಿಗೆ ಬಂದರೆ, ಇಂಗ್ಲಿಷಿನ ಎರವಲಿರಲಿ, ಇಂಗ್ಲಿಷಿನ ಕಾಗುಣಿತದಲ್ಲಿ ಕಾಣುವ ಗಲಿಬಿಲಿಯ ಹತ್ತು ಪಟ್ಟನ್ನು ತಮಿಳಿನ ಒಳಗೇ ಕಾಣಬಹುದು.  ಅಲ್ಲಿ ಕ ಖ ಗ ಘ; ತ ಥ ದ ಧ; ಪ ಫ ಬ ಭ ಮುಂತಾದ ನಾಲ್ಕುನಾಲ್ಕು ಅಕ್ಷರಗಳ ಧ್ವನಿಯನ್ನು ಒಂದೊಂದೇ ಅಕ್ಷರವು ನಿಭಾಯಿಸುತ್ತಿದೆ.  ಕನ್ನಡದ ಗೋಪಿಯೂ ಸಂಸ್ಕೃತದ ಕೋಪಿಯೂ ಹಿಂದಿಯ ಗೋಬಿಯೂ ತಮಿಳಿನಲ್ಲಿ ಕೋಪಿಯೇ (கோபி); ಕನ್ನಡದ ಬೀದಿಯೂ ಸಂಸ್ಕೃತದ ಭೀತಿಯೂ ತಮಿಳಿನಲ್ಲಿ ಪೀತಿಯೇ (பீதி); ಇನ್ನು ತಮಿಳಿನಲ್ಲಿಯೇ ಸರಿಯಾಗಿ ಬರೆಯಬಹುದಾದ ಹೊಸೂರು (ஹொசூர்) ಪದವನ್ನು ಅವರು ಬರೆಯುವುದು ஓசுர் (ವೊಚೂರ್) ಎಂದೇ!ಬಹುಪಾಲು ಸಂಸ್ಕೃತ ವರ್ಣಮಾಲೆಯ ಹಂದರವನ್ನನುಸರಿಸುವ (ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಸಂದರ್ಭಕ್ಕೆ ಅನುವಾಗಿಸಿಕೊಂಡಿರುವ) ಕನ್ನಡ ವರ್ಣಮಾಲೆಯಲ್ಲಿ ಈ ಬಗೆಯ ಗೊಂದಲಗಳು ಬಹುತೇಕ ಇಲ್ಲವೇ ಇಲ್ಲವೆನ್ನಬಹುದು.  ಹಾಗೆಂದು ಗೊಂದಲಗಳು ಇಲ್ಲವೇ ಇಲ್ಲವೆಂದಲ್ಲ - ಮೊದಲೇ ಹೇಳಿದಂತೆ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು, ಆದರೆ ಕನ್ನಡದಲ್ಲಿ ಈ ಗೊಂದಲಗಳು ಕಡೆಗಣಿಸಬಹುದಾದಷ್ಟು ಕಡಿಮೆ.  ಉದಾಹರಣೆಗೆ, ಪ್ರತಿಯೊಂದು ಅಕ್ಷರವೂ ಹಲವು ಧ್ವನಿಗಳನ್ನು ನಿಭಾಯಿಸುವ ತಮಿಳಿನಲ್ಲಿ ನಕಾರಕ್ಕೆ ಎರಡು ಅಕ್ಷರಗಳಿವೆ ந ಮತ್ತು ன - நாராயணன் (ನಾರಾಯಣನ್) ಎಂಬಲ್ಲಿ ಮೊದಲ ಮತ್ತು ಕೊನೆಯ ನಕಾರಗಳನ್ನು ಗಮನಿಸಬಹುದು.  ಈ ಎರಡನ್ನೂ ಕನ್ನಡದಲ್ಲಿ ನ ಎಂಬ ಒಂದೇ ಅಕ್ಷರ ನಿಭಾಯಿಸುತ್ತದೆ, ಅದಕ್ಕಾಗಿ ಹೊಸದೊಂದು ಸಂಜ್ಞೆಯೋ ಹೊಸದೊಂದು ಸೂಚಿಯೋ ಅಗತ್ಯ ನಮಗೆ ಕಂಡಿಲ್ಲ.  ಇದೇ ಕಾರಣಕ್ಕೆ ನಮ್ಮಲ್ಲಿ ಈ ಎರಡು ನಕಾರಗಳ ಸೂಕ್ಷ್ಮ ಭೇದಗಳೂ ಕಾಣೆಯಾಗಿವೆ.  ಇದೇ ಕತೆ ள ழ ಅಕ್ಷರಗಳದ್ದೂ.  ಇದಕ್ಕೆ ಸಮಾನವಾಗಿ ಹಳಗನ್ನಡದಲ್ಲಿ ಳ ಮತ್ತು ೞ ಎಂಬ ಎರಡು ಅಕ್ಷರಗಳಿದ್ದುವು.  ಆದರೆ ಕ್ರಮೇಣ ಕನ್ನಡದಲ್ಲಿ ಈ ಎರಡನೆಯ ಅಕ್ಷರ ಬಿದ್ದುಹೋಗಿ ಕೇವಲ ಳಕಾರವಷ್ಟೇ ಉಳಿದಿದೆ.  ಅದಕ್ಕನುಗುಣವಾಗಿ ಉಚ್ಚಾರಣ ಸೂಕ್ಷ್ಮವೂ ಬಿದ್ದುಹೋಗಿದೆಯಾಗಿ ನಾವು ತಮಿೞನ್ನು ತಮಿಳ್ ಎಂದೇ ಉಚ್ಚರಿಸುತ್ತೇವೆ.

ಹೀಗಾಗಿ, ಯಾವ ಭಾಷೆಯೂ ಹೊರಗಿನ ಪದಗಳಿಗಾಗಿ ತಮ್ಮ ವರ್ಣಮಾಲೆಯನ್ನು ಬದಲಿಸಿಕೊಂಡದ್ದು ಕಂಡಿಲ್ಲ.  ಬದಲಿಗೆ, ಹೊರಗಿನಿಂದ ಬಂದ ಪದಗಳು, ಅತಿಥಿ ಭಾಷೆಯ ಜಾಯಮಾನಕ್ಕೆ ತಕ್ಕಂತೆ ರೂಪಾಂತರ ಹೊಂದುತ್ತವೆ.  ಕನ್ನಡದಲ್ಲೂ ಇದೇ ರೂಢಿಯನ್ನು ಕಾಣುತ್ತೇವೆ (ಸಂಸ್ಕೃತಪದಗಳು ಮಾತ್ರ ಏಕೆ ಹಾಗೇ ಉಪಯೋಗಿಸಲ್ಪಡುತ್ತವೆ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಲ್ಲ, ಅದು ಬೇರೆಯೇ ಚರ್ಚೆಯ ವಿಷಯ - ಆಡುನುಡಿಗೆ ಬಿದ್ದ ಸಂಸ್ಕೃತಪದಗಳೂ ಕನ್ನಡದಲ್ಲಿ ತದ್ಭವಗಳಾಗುವುದನ್ನೂ ಮರೆಯುವಂತಿಲ್ಲ).  ಹೀಗಾಗಿ ಕುರ್ಚಿ, ಮೇಜು, ತಾರೀಖುಗಳಂತೆಯೇ ಆಸ್ಪತ್ರೆ, ಬಸ್ಸು ಕಾರುಗಳೂ ಬ್ಯಾಟುಗಳೂ (hospital, bus, car, bat) ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬಳಕೆಯಲ್ಲಿರುವುದನ್ನು ಗಮನಿಸಿರಬಹುದು.  car ಮತ್ತು batಗಳಲ್ಲಿರುವ A ಅಕ್ಷರದ ಉಚ್ಚಾರ ಬೇರೆಬೇರೆ.  ಅದಕ್ಕನುಗುಣವಾಗಿ ಕನ್ನಡದಲ್ಲಿ ಅದು ಕಾರ್ (ಕ್ ಆ ರ್) ಮತ್ತು ಬ್ಯಾಟ್ (ಬ್ ಯಾ ಟ್) ಆಗಿ ಬಳಕೆಯಲ್ಲಿರುವುದನ್ನು ಕಾಣಬಹುದು.  ಅದೇ ತರ್ಕದಲ್ಲಿ Apple ಪದವನ್ನು ಯಾಪಲ್ ಎಂದು ಬರೆಯಬಹುದು (ಸರಿಯಾದ ಉಚ್ಚಾರಣೆಯಲ್ಲ, ಆದರೆ ಮೂಲಕ್ಕೆ ಹತ್ತಿರದ್ದು), ಅಥವಾ ಅದು ತೀರ ದೂರವೆನಿಸಿದರೆ ಸುಮ್ಮನೇ ಆಪಲ್ ಎಂದರೂ ಆಯಿತು.

ಇಂಗ್ಲಿಷಿನಲ್ಲಿ ಸ್ಪಷ್ಟ ಉಚ್ಚಾರಣೆಯಿರುವ, ಆದರೆ ಕನ್ನಡದಲ್ಲಿ ಇಲ್ಲದ, F, Z ಮೊದಲಾದುವುಗಳನ್ನೂ ಕನ್ನಡದಲ್ಲಿ ಮೊದಲು ಫ್, ಜ್ ಎಂದು ತೋರಿಸುತ್ತಿದ್ದೆವು, ಆಮೇಲೆ ಈ ಅಕ್ಷರಗಳಿಗೇ ಅಡಿಯಲ್ಲಿ ಎರಡು ಚುಕ್ಕಿಯಿಟ್ಟು ತೋರಿಸಲಾರಂಭಿಸಿದ್ದೇವೆ.  ಇವು ವರ್ಣಮಾಲೆಯ ಹೊಸ ಅಕ್ಷರಗಳಲ್ಲ, ಬದಲಿಗೆ ಇರುವ ಅಕ್ಷರಗಳ ವಿಶಿಷ್ಟ ಉಚ್ಚಾರಸೂಚಕಗಳು.  ಇದು ಬರಹದಲ್ಲಿ ಬಳಕೆಯಲ್ಲಿ ಬಂದಿರುವುದರಿಂದ ಯೂನಿಕೋಡಿನಲ್ಲೂ ಬಳಕೆಯಲ್ಲಿದೆ (ಫ಼್ ಜ಼್ ಹೀಗೆ). ಆದರೆ F Z ಗಳಂತೆ ನಿರ್ದಿಷ್ಟ ಉಚ್ಚಾರವಿಲ್ಲದ A ಅಕ್ಷರವನ್ನು ಕೈಬರಹದಲ್ಲಿ ಆ ಅಥವಾ ಯಾ ಎಂದೇ ಬರೆಯುವ ರೂಢಿ.  ಆದರೂ ಇದಕ್ಕೂ ಒಂದು ನಿರ್ದಿಷ್ಟ ಸಂಕೇತವನ್ನು ನೀಡಬೇಕೆಂದರೆ ಹೊಸದೊಂದು (ತಪ್ಪಾದ) ಅಕ್ಷರದ ಬದಲು F Z ಗಳಿಗೆ ಬಳಸುವಂಥದ್ದೇ ಒಂದು ವಿಶಿಷ್ಟ ಚಿಹ್ನೆಯನ್ನು ಬಳಸಬಹುದೇನೋ (ಭಾರಧ್ವಾಜ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಅ ಮತ್ತು ಓ ಗಳ ನಡುವಿನ ಉಚ್ಚಾರಣೆಯನ್ನು ಸೂಚಿಸಲು ಅಕ್ಷರದ ಮೇಲೆ ಅರ್ಧಚಂದ್ರ ಚಿಹ್ನೆಯನ್ನು ಬಳಸುವುದನ್ನು ನಾನು ಕಂಡಿದ್ದೇನೆ).

Friday, August 5, 2016

ಸವಿಯಬಾರದ ಹಣ್ಣು...

ಇತ್ತೀಚಿಗೆ ಕನ್ನಡದ್ದೇ ಪದಗಳನ್ನು ಬಳಸಬೇಕೆಂಬ ಪ್ರಚಾರದಡಿಯಲ್ಲಿ ಟೊಮ್ಯಾಟೋ ಮತ್ತು ಕ್ಯಾರೆಟ್ ಗಳಿಗೆ ಗೂದೆಹಣ್ಣು ಮತ್ತು ಕೆಂಗೆಣಸು ಎಂಬ ಹೆಸರು ಬಳಸಿ ಎಂದು ಹೇಳಲಾಗುತ್ತಿದೆ.  ಹೀಗೆ ಕರೆಕೊಡುವ ವಿಡಿಯೋ ತುಣುಕೊಂದು ಇಲ್ಲಿದೆ. 

https://www.facebook.com/TheKachaguli/videos/1063052510445410/

ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ.  ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ.  ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ.  ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ.  ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.

ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ.  ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ.  ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.

ಗೂದೆ ಎನ್ನುವ ಪದಕ್ಕೆ ಕನ್ನಡದಲ್ಲಿ ಅಷ್ಟು ಬಾಯಿಚಪ್ಪರಿಸುವ ಅರ್ಥವೇನಿಲ್ಲ.  ಕೆಲವೊಮ್ಮೆ ಮಲದ್ವಾರದಲ್ಲಿ ದುರ್ಮಾಂಸ ಬೆಳೆದು, ಮಲವಿಸರ್ಜನೆಯ ಸಮಯದಲ್ಲಿ ಹೊರಬಂದುಬಿಡುತ್ತದೆ; ಇದನ್ನು ಕೈಯಿಂದ ಒಳತಳ್ಳಬಹುದು - ಅಸಾಧ್ಯ ನೋವಾಗುತ್ತದೆಂಬುದು ಅನುಭವಿಸಿದವರ ನುಡಿ.  ಇದನ್ನು ಮೂಲವ್ಯಾಧಿ (anal prolapse/piles/fistula) ಎನ್ನುತ್ತಾರೆ.  ಹೀಗೆ ಹೊರಬರುವ ಕೆಂಪನೆಯ ಭಾಗವೇ ಗೂದೆ.  ಅದಕ್ಕೇ ಈ ರೋಗಕ್ಕೆ ಗೂದೆರೋಗ ಎಂದೂ ಹೆಸರು.  ಕೆಲವು ಜಾತಿಯ ಮಂಗಗಳಲ್ಲಿ ಪೃಷ್ಠಭಾಗವು ಕೆಂಪಗೆ ಊದಿ ಹೊರಚಾಚಿಕೊಂಡಂತಿರುತ್ತದೆ.  ಸಂಗಾತಿಯನ್ನು ಆಕರ್ಷಿಸಲು ಇದು ಸಹಕಾರಿ ಎಂದು ಪ್ರಾಣಿಶಾಸ್ತ್ರಜ್ಞರ ಅಂಬೋಣ.  ಇದನ್ನು ಮಂಗನಗೂದೆ ಎನ್ನುತ್ತಾರೆ. 

ಸೊಗಸಾಗಿ ರಸತುಂಬಿ ನಳನಳಿಸುವ ಟೊಮ್ಯಾಟೋ ವಿಷಯ ಬರೆಯಹೋಗಿ ಇದನ್ನು ವಿವರಿಸಬೇಕಾಯಿತು ನೋಡಿ, ಇರಲಿ, ಈಗ ಟೊಮ್ಯಾಟೋ ವಿಷಯಕ್ಕೆ ಬರೋಣ.  

ಟೊಮ್ಯಾಟೋ ಭಾರತದ ಸ್ಥಳೀಯ ಹಣ್ಣಲ್ಲ.  ಆದ್ದರಿಂದಲೇ ಇದಕ್ಕೊಂದು ಸ್ಥಳೀಯ ಹೆಸರಿಲ್ಲ.  ಇದನ್ನು ಭಾರತಕ್ಕೆ ತಂದಿದ್ದು ಪೋರ್ತುಗೀಸರು, ಹದಿನಾರು-ಹದಿನೇಳನೆಯ ಶತಮಾನದ ಸುಮಾರಿಗೆ.  ಎಲ್ಲ ವಿದೇಶೀ ವಸ್ತುಗಳ ವಿಷಯದಲ್ಲಾಗುವಂತೆ ಇದನ್ನೂ ಸ್ಥಳೀಯರು ಅನುಮಾನ ಅಸಹ್ಯಗಳಿಂದಲೇ ನೋಡಿದರು.  ಹೀಗಾಗಿ ತಿಪ್ಪೆಯ ಮೇಲೆ ಬೆಳೆಯುವ ಈ ಹಣ್ಣು ಅವರಿಗೆ ಪೃಷ್ಠದಿಂದ ಹೊರಚಾಚಿದ ದುರ್ಮಾಂಸದಂತೆ ಅಸಹ್ಯಕರವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ.  ಗೂದೆಹಣ್ಣು ಹೆಸರು ಪ್ರಚಾರ ಮಾಡುವವರಿಗೆ ಬಹುಶಃ ಇದರ ಅರಿವಿಲ್ಲವೇನೋ.  ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಉದಾಹರಣೆಗೆ ಇಡ್ಲಿಯನ್ನು rice cake, backed rice ball ಎಂಬ ಏನೇ ಹೆಸರಿನಿಂದ ಕರೆದರೂ ಅದು ಇಡ್ಲಿಯಾಗುವುದಿಲ್ಲ, ಇಡ್ಲಿ ಇಡ್ಲಿಯೇ.  ಹಾಗೆಯೇ ದ್ವಿಚಕ್ರವಾಹನವು ಸ್ಕೂಟರ್ ಆಗುವುದಿಲ್ಲ, ಅದು ಸೈಕಲ್ ಕೂಡ ಆಗಬಹುದು, ಆದರೆ ಸ್ಕೂಟರ್ ಸ್ಕೂಟರೇ, ಸೈಕಲ್ ಸೈಕಲೇ.  ತಮಿಳನ್ನು ಬಿಟ್ಟು ಭಾರತದ ಬೇರೆಲ್ಲ ಭಾಷೆಗಳಲ್ಲೂ ಈ ಹಣ್ಣಿಗೆ ಟೊಮ್ಯಾಟೋ ಅಥವ ಅದರ ವಿವಿಧ ರೂಪಗಳೇ ಹೆಸರು - ತಮೋಟ, ತಮಾಟ, ತಮಾಟರ್, ತಮೇಟೋ ಕಾಯಿ ಹೀಗೆ.  ತಮಿಳಿನಲ್ಲಿ ಇದನ್ನು ತಕ್ಕಾಳಿ ಎನ್ನುತ್ತಾರೆ ಆದರೆ ಅದೂ ಪ್ರಾಚೀನವಾದ ಹೆಸರೇನಲ್ಲ - ತಕ್+ಆಳ್+ಇ = ಆಳಿಗೆ ತಕ್ಕ ಪುಷ್ಠಿ ಕೊಡುವುದು ಎಂಬಂಥದ್ದೇನೋ ಅರ್ಥದಲ್ಲಿ ಅದನ್ನು ಹಾಗೆ ಕರೆಯುತ್ತಾರೆ.

ಟೊಮ್ಯಾಟೋ ನಮಗೆ ಟೊಮ್ಯಾಟೋ ಎಂದೇ ಪರಿಚಿತವಾದ ವಿದೇಶೀ ತರಕಾರಿ, ಅದು ಹಾಗಿರುವುದೇ ಚೆನ್ನ.  ನಮ್ಮವರೂ ಮೊದಮೊದಲು ಗೂದೆಹಣ್ಣು ಎಂಬ ಅಸಹ್ಯ ಹೆಸರನ್ನಿಟ್ಟು ಅಪಹಾಸ್ಯ ಮಾಡಿದರೂ ಆಮೇಲಾಮೇಲೆ ಅದನ್ನು ಅಪ್ಪಿ-ಕೊಂಡಿಲ್ಲವೇ?  ಈಗಂತೂ ಟೊಮ್ಯಾಟೋ ಯಾವುದೇ ಅಡುಗೆ ಮನೆಯ ಬಹುಮುಖ್ಯ ತರಕಾರಿಗಳಲ್ಲೊಂದು.  ಸೊಗಸಾದ ಟೊಮ್ಯಾಟೋ ಗೊಜ್ಜನ್ನು ಗೂದೆಹಣ್ಣಿನ ಗೊಜ್ಜು ಎಂದು ಕಲ್ಪಿಸಲಾದರೂ ಆಗುತ್ತದೆಯೇ, ಹಾಗೆ ಕಲ್ಪಿಸಿದರೆ ಆ ಗೊಜ್ಜು ಗಂಟಲಲ್ಲಿ ಇಳಿಯಬಹುದೇ?

ಇನ್ನು ಕೆಂಗೆಣಸು (carrot) ಎನ್ನುವುದೂ ಇತ್ತೀಚಿಗೆ ಕನ್ನಡ ಉತ್ಸಾಹಿಗಳು ಕಟ್ಟಿದ ಪದವಷ್ಟೇ.  ಪ್ರಾಚೀನಸಾಹಿತ್ಯದಲ್ಲಾಗಲೀ ಅಥವ ಜನಬಳಕೆಯಲ್ಲಾಗಲೀ carrot ಎಂಬುದಕ್ಕೆ ಕೆಂಗೆಣಸು ಎಂಬ ಬಳಕೆಯಿಲ್ಲ.  ಹೊಸ ಪದ ಕಟ್ಟುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕೆ ಅರ್ಥವನ್ನೂ ನೋಡಬೇಕಲ್ಲ?  ಕೆಂಪು + ಗೆಣಸು = ಕೆಂಗೆಣಸು; ಆದರೆ, ಕ್ಯಾರಟನ್ನು ಯಾವುದಕ್ಕಾದರೂ ಹೋಲಿಸುವುದೇ ಆದರೆ, ಅದು ಗೆಣಸಿಗಿಂತಾ ಮೂಲಂಗಿಗೇ ಹತ್ತಿರ.  carrot ನೋಡಲು ಕೆಂಪಾಗಿದ್ದ ಮಾತ್ರಕ್ಕೆ ಅದನ್ನು ಕೆಂಗೆಣಸು ಎನ್ನಲು ಆಗುವುದಿಲ್ಲ, ಗೆಣಸಿಗೂ ಕ್ಯಾರಟಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ - ರೂಪ, ಗುಣ, ಸ್ವಭಾವ ಎಲ್ಲದರಲ್ಲೂ. ಅದೇನೇ ಇರಲಿ ಕ್ಯಾರಟ್ ಭಾರತದ ಸ್ಥಳೀಯ ತರಕಾರಿಯೇ, ಹೊರಗಿನದೇನಲ್ಲ.  ಭಾರತದ ವಿವಿಧಭಾಗಗಳಲ್ಲಿ ಇದರ ಬೇರೆಬೇರೆ ಜಾತಿಗಳು ಬೆಳೆಯುತ್ತವೆ.  ಸಂಸ್ಕೃತದಲ್ಲಿ ಇದಕ್ಕೆ ಗರ್ಜರ ಎನ್ನುತ್ತಾರೆ.  ಅದೇ ಪ್ರಾಕೃತದಲ್ಲಿ ಗಜ್ಜರ ಆಗಿ, ಹಿಂದೀ ಮುಂತಾದ ಉತ್ತರ ಭಾಷೆಗಳಲ್ಲಿ ಗಾಜರ್ ಆಗಿಯೂ ಮತ್ತೆ ಕನ್ನಡದಲ್ಲಿ ಗಜ್ಜರಿ ಆಗೂ ಬಳಕೆಯಲ್ಲಿದೆ.  ಹಾಗೇ ನೆಲದೊಳಗೆ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳನ್ನೆಲ್ಲಾ ಸಂಸ್ಕೃತದಲ್ಲಿ ಮೂಲ/ಮೂಲಕ ಎಂಬ ಹೆಸರಿನಿಂದ ಗುರುತಿಸುವುದು ವಾಡಿಕೆ - ಮೂಲಕ, ಚಾಣಕ್ಯಮೂಲಕ, ದೀರ್ಘಮೂಲಕ, ನೇಪಾಳಮೂಲಕ - ಹೀಗೆ, ಕ್ಯಾರಟು, ಮೂಲಂಗಿ, ಗೆಣಸು, ಎಲ್ಲವೂ ಒಂದಿಲ್ಲೊಂದು ’ಮೂಲ’ಕವೇ.  ಇದೇ ಹಿಂದಿಯಲ್ಲಿ ಮೂಲೀ ಆಗಿ ಬರಬರುತ್ತಾ ಕೇವಲ ಮೂಲಂಗಿ ಎಂಬ ಒಂದು ತರಕಾರಿಗೆ ಮಾತ್ರ ಹೆಸರಾಗಿ ನಿಂತಿತು.  ಹಾಗೇ ಮೂಲಕ ಎನ್ನುವುದು ದ್ರಾವಿಡದಲ್ಲಿ ಮೂಲಗೈ ಆಗಿ ಮೂಳಂಗಿ ಆಗಿ (ಇಟ್ಟಿಗೆ > ಇಟ್ಟಂಗಿ; ಹಚ್ಚಿಗೆ > ಹಚ್ಚಂಗಿ ಆದಹಾಗೆ) - ಕೊನೆಗೆ ಮೈಯುದ್ದಕ್ಕೂ ಮುಳ್ಳಿನಂತೆ ಸಣ್ಣಸಣ್ಣ ಬೇರುಗಳಿರುವುದರಿಂದ ಮುಳ್ಳಂಗಿ ಆಯಿತು.  ಆಮೇಲೆ ಅದೇ ಹಿಂದಿಯ ಮೂಲೀ ಪ್ರಭಾವದಿಂದ ಮೂಲಂಗಿಯಾಗಿ ಬಳಕೆಗೆ ಬಂತು.  ಮುಳ್ಳಂಗಿ ದ್ರಾವಿಡಭಾಷೆಗಳಲ್ಲಿ ಬಹುಕಾಲದಿಂದ ಬಳಕೆಯಲ್ಲಿರುವ ಪದ.  ವಿಶಾಲಾರ್ಥದಿಂದ ಅರ್ಥವು ಕುಗ್ಗಿ ಒಂದು ವಸ್ತುವಿಗೇ ಸೀಮಿತವಾಗುವ ಉದಾಹರಣೆಯಿದು.

ಇನ್ನು ಮೈಯೆಲ್ಲಾ ಗಂಟುಗಂಟಾಗಿರುವ (ಗೆಣ್ಣುಗಳಿಂದ ತುಂಬಿರುವ)ದಕ್ಕೆ ಗೆಣಸು (ಗಿಣ್ > ಗೆಣ್ > ಗೆಣಸು).  ಉರುಟುರುಟಾಗಿ ಗೆಣ್ಣುಗಳಿಂದ ತುಂಬಿರುವ ಗೆಣಸಿನ ರೂಪವೇ ಬೇರೆ, ಸಪೂರವಾಗಿ ನೇರವಾಗಿರುವ ಕ್ಯಾರಟ್ಟಿನ ರೂಪವೇ ಬೇರೆ.  ಅದು ರೂಪದಲ್ಲಿ ಗೆಣಸಿಗಿಂತ ಮೂಲಂಗಿಗೇ ಹತ್ತಿರ.  ನೆಲದಲ್ಲಿ ಬೆಳೆಯುವ ಹಲವು ’ಮೂಲಂಗಿ’ಗಳಲ್ಲಿ (ಮೂಲ ಅಥವಾ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳಲ್ಲಿ) ಗರ್ಜರ (ಗಜ್ಜರಿ) ಸಹ ಒಂದು.  ಆದ್ದರಿಂದ ’ಮೂಲ’ಸಂಬಂಧದ ಹೆಸರು ಇದಕ್ಕೂ ಹತ್ತುತ್ತದೆ.  ಆದ್ದರಿಂದಲೇ ತಮಿಳಿನಲ್ಲಿ ಕ್ಯಾರೆಟ್ಟಿಗೆ ಮಂಜಳ್ ಮೂಲಂಗಿ (ಹಳದಿ/ಕೇಸರಿ ಮೂಲಂಗಿ) ಎಂಬ ನಿರ್ದೇಶನವೂ ಇದೆ.  ಕ್ಯಾರೆಟ್ಟಿಗೂ ಮೂಲಂಗಿಗೂ ಎಷ್ಟೋ ವ್ಯತ್ಯಾಸವಿದ್ದರೂ ಆ ವ್ಯತ್ಯಾಸವು ತೀರ ಕ್ಯಾರೆಟ್ಟು ಗೆಣಸುಗಳ ನಡುವಿನಷ್ಟಲ್ಲ.  ಆದ್ದರಿಂದ ಕರೆಯುವುದೇ ಆದರೆ, ಕೆಂಗೆಣಸು ಎಂದು ತಪ್ಪಾಗಿ ಕರೆಯುವುದಕ್ಕಿಂತ ಕೆಂಪುಮೂಲಂಗಿ ಎನ್ನುವುದು ಎಷ್ಟೋ ವಾಸಿ, ಆದರೆ ಮೂಲಂಗಿಯಲ್ಲೇ ಕೆಂಪುಮೂಲಂಗಿ ಕೂಡ ಈಗಾಗಲೇ ಇದೆ!  ಇಷ್ಟೆಲ್ಲಾ ತಾಪತ್ರಯಗಳ ಬದಲು ಈಗಾಗಲೇ ಇರುವ ಗಜ್ಜರಿ ಎನ್ನುವ ಹೆಸರೇ ಸೊಗಸಾಗಿದೆಯಲ್ಲವೇ, ಮೊದಲೇ ಹೇಳಿದಂತೆ ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಅದು ಇಲ್ಲಿ ಬಂದು, ಈ ಭಾಷೆಯ ಜಾಯಮಾನಕ್ಕೆ ಹೊಂದಿಕೊಂಡು ನೆಲೆಯೂರುತ್ತದೆ.  ಕ್ಯಾರಟ್ ಕೂಡ ಬಳಸುತ್ತಾ ಬಳಸುತ್ತಾ ಕನ್ನಡದ ಪದವೇ ಆಗಿದೆ.

Monday, June 6, 2016

ಔಚಿತ್ಯಪ್ರಜ್ಞೆ

ಈ ದಿನ ಶ್ರೀ Raghavendra Hebbalalu ಅವರ ಗೋಡೆಯಲ್ಲಿ ಕಂಡ ಕ್ಷೇಮೇಂದ್ರನ ಒಂದು ಉಕ್ತಿ, ಔಚಿತ್ಯಪ್ರಜ್ಞೆಯನ್ನು ಕುರಿತದ್ದು:

कण्ठॆ मॆखलया नितम्बफलकॆ तारॆण हारॆण वा
पाणौ नूपुरबन्धनॆन चरणॆ कॆयूरपाशॆन वा
शौर्यॆण प्रणतॆ रिपौ करुणया नायान्ति कॆ हास्यताम्
औचित्यॆन विना रुचिं प्रतनुतॆ नालङ्कृतीर्नॊ गुणाः

ಕಂಠೇ ಮೇಖಲಯಾ ನಿತಂಬಫಲಕೇ ತಾರೇಣ ಹಾರೇಣ ವಾ
ಪಾಣೌ ನೂಪುರಬಂಧನೇನ ಚರಣೇ ಕೇಯೂರಪಾಶೇನ ವಾ
ಶೌರ್ಯೇಣ ಪ್ರಣತೇ ರಿಪೌ ಕರುಣಯಾ ನಾಯಾನ್ತಿ ಕೇ ಹಾಸ್ಯತಾಮ್
ಔಚಿತ್ಯೇನ ವಿನಾ ರುಚಿಂ ಪ್ರತನುತೇ ನಾಲಂಕೃತೀರ್ನೋ ಗುಣಾಃ

ಔಚಿತ್ಯಪ್ರಜ್ಞೆಯನ್ನು ಇದಕ್ಕಿಂತ ಸೊಗಸಾಗಿ ಪ್ರಸ್ತುತಪಡಿಸಲು ಸಾಧ್ಯವೇ? ನನ್ನ ಕನ್ನಡಾನುವಾದ ಇಲ್ಲಿದೆ:

ಕೊರಳೊಳ್ ಮೇಖಲೆಯಾ ನಿತಂಬಮದರೊಳ್ ರಾಜಿಪ್ಪ ಹಾರಂಗಳುಂ
ಕರಮಂ ಜಗ್ಗಿಪ ಕಾಲ ಗೆಜ್ಜೆ, ನಡೆಯಂ ಬಂಧಿಪ್ಪ ತೋಳ್ವಂದಿಗಳ್
ಶರಣೆಂದುಂ ಮಿಗೆ ಶೌರ್ಯ, ಶತ್ರುದಯೆಗಳ್ ಹಾಸ್ಯಕ್ಕೆ ಠಾವಲ್ತೆ ಸಿಂ-
ಗರದಿಂ ಮೇಣ್ ಗುಣದಿಂದಲೇಂ ಸೊಗಮೆ ತಾನೌಚಿತ್ಯಮಂ ಮೀರಿರಲ್

 ಕೊರಳಿನಲ್ಲಿ ಒಡ್ಯಾಣವೂ; ನಿತಂಬದ ಮೇಲೆ ಓಲಾಡುವ ಹಾರವೂ, ಕೈಗಳನ್ನು ಜಗ್ಗುವ ಕಾಲ್ಗೆಜ್ಜೆಗಳೂ, ಕಾಲನ್ನು ಬಂಧಿಸುವ ತೋಳಬಂದಿಗಳೂ, ಶರಣಾಗತರ ಮೇಲೆ ಶೌರ್ಯವೂ, ಹೊಡೆಯಬಂದ ಶತ್ರುವಿನ ಮೇಲೆ ದಯೆಯೂ ನಗೆಯುಕ್ಕಿಸುವುದಿಲ್ಲವೇನು? ಯಾವ ಅಲಂಕಾರವೂ ಯಾವ ಸದ್ಗುಣವೂ ಔಚಿತ್ಯವನ್ನು ಮೀರಿದರೆ ರುಚಿಯಾಗವು.

ಅರಿಯುವವರಿಗೆ ನೂರು ಅರ್ಥ - ಅರಿಯದವರಿಗೆ ವಿವರಿಸುವುದೇ ವ್ಯರ್ಥ - ಆ ಅನೌಚಿತ್ಯ ನಮಗೇಕೆ?

Tuesday, April 12, 2016

ಕೇಶಿರಾಜನ ಕನ್ನಡವರ್ಣಮಾಲೆ

ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ"
ಕೆಲದಿನಗಳ ಹಿಂದೆ ಪದಾರ್ಥಚಿಂತಾಮಣಿಯಲ್ಲಿ ಕೇಶಿರಾಜನ “ಅಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ” ಎಂಬ ಸಾಲು ಚರ್ಚೆಗೆ ಬಂತು.  ಕೇಶಿರಾಜನು ಶಬ್ದಮಣಿದರ್ಪಣದ ಸಂಜ್ಞಾಪ್ರಕರಣದಲ್ಲಿ ಅಚ್ಚಗನ್ನಡದ ವರ್ಣಮಾಲೆಯನ್ನು ಹೀಗೆ ವಿವರಿಸುತ್ತಾನೆ.

ತಿಳಿ ದೇಶೀಯಮಮೈದಂ
ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ
ಕ್ಷಳನಂ ನಾಲ್ವತ್ತೇೞಾ
ಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ

ಇದು ಪದ್ಯ. ಪ್ರಸಿದ್ಧವಾದ ಸಂಸ್ಕೃತವರ್ಣಮಾಲೆಯಿಂದ ಯಾವಯಾವ ಅಕ್ಷರಗಳನ್ನು ಕಳೆದು, ಅಚ್ಚಗನ್ನಡದ ಯಾವಯಾವ ಅಕ್ಷರಗಳನ್ನು ಅದಕ್ಕೆ ಕೂಡಿಸಿದರೆ ಅಚ್ಚಗನ್ನಡದ ವರ್ಣಮಾಲೆ ಸಿದ್ಧವಾಗುತ್ತದೆ ಎಂದು ಕೇಶಿರಾಜನು ಮೇಲಿನ ಪದ್ಯದಲ್ಲಿ ತಿಳಿಸುತ್ತಾನೆ, ಹೀಗೆ:

(ಐವತ್ತೆರಡು ಅಕ್ಷರಗಳಿರುವ ಸಂಸ್ಕೃತವರ್ಣಮಾಲೆಯನ್ನು ಹಿಡಿದು) ಅದಕ್ಕೆ -  
  1. ತಿಳಿ ದೇಶೀಯಮಮೈದಂ (ಸಂಸ್ಕೃತವರ್ಣಮಾಲೆಯಲ್ಲಿಲ್ಲದ, ಆದರೆ ಅಚ್ಚಗನ್ನಡದಲ್ಲಿರುವ ಎಒಱೞಳ ಎಂಬ ಐದಕ್ಷರಗಳನ್ನು ಸೇರಿಸು)
  2. ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ ಕ್ಷಳನಂ (ಸಂಸ್ಕೃತದಲ್ಲಿ ಮಾತ್ರ ಬಳಕೆಯಲ್ಲಿರುವ, ಆದರೆ ಕನ್ನಡದಲ್ಲಿಲ್ಲದ ಋೠಲೃಲೄಶಷಳ ಅಕ್ಷರಗಳನ್ನೂ, ವಿಸರ್ಗ (ಅಃ), ಜಿಹ್ವಾಮೂಲೀಯ (ೱಕ), ಉಪಧ್ಮಾನೀಯ (ೲಪ) - ಈ ಹತ್ತು ಅಕ್ಷರಗಳನ್ನು ಕಳೆ)
ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಹೀಗೆ ಅಚ್ಚಗನ್ನಡದ ಶುದ್ಧವರ್ಣಮಾಲೆಯನ್ನು ನಲವತ್ತೇಳೆಂದು ಅಳೆ - ಇದು ಈ ಪದ್ಯದ ಅರ್ಥ.

ಮೇಲಿನ ಪದ್ಯದಲ್ಲಿ ಸೂಚಿಸಿರುವ ೱ ಮತ್ತು ೲ ಎಂಬ ಎರಡಕ್ಷರಗಳ ಬಗ್ಗೆ ಒಂದು ಕಿರುಟಿಪ್ಪಣಿ: ಇವು ಕ್ರಮವಾಗಿ ಜಿಹ್ವಾಮೂಲೀಯ ಮತ್ತು ಉಪಧ್ಮಾನೀಯಗಳೆಂದು ಕರೆಯಲ್ಪಡುತ್ತವೆ. ಇವು ಸಂಸ್ಕೃತದಲ್ಲಿ ಕ ಮತ್ತು ಪ ಅಕ್ಷರಗಳ ಹಿಂದೆ ಬರುವ ವಿಶೇಷ ವಿಸರ್ಗಗಳಷ್ಟೇ, ಆದರೆ ಉಚ್ಚಾರಣೆ ವಿಸರ್ಗಕ್ಕಿಂತ ತುಸು ಭಿನ್ನ - ಉಪಧ್ಮಾನೀಯ(ೲ)ದ ಉಚ್ಚಾರವು ಸರಿಸುಮಾರು ಇಂಗ್ಲಿಷಿನ f ಅಕ್ಷರದಂತೆ ಬರುತ್ತದೆ (ಉದಾ: ಮನಃಪರಿವರ್ತನೆ > ಮನfಪರಿವರ್ತನೆ); ಜಿಹ್ವಾಮೂಲೀಯ(ೱ)ದ ಉಚ್ಚಾರವು ಕ ಮತ್ತು ಗ ನಡುವಿನ ಉಚ್ಚಾರವಾಗಿ, ತೆಳುವಾದ ಹಕಾರದೊಂದಿಗೆ (ಮುರುಘಾ, ಮಹೇಶ್ವರಿ, ಮೊಳಗಾ ಈ ಪದಗಳಲ್ಲಿ ಬರುವ ಘ, ಹ, ಗ ಅಕ್ಷರಗಳನ್ನು ತಮಿಳರು ಉಚ್ಚರಿಸುವಂತೆ) ಬರುತ್ತದೆ (ಉದಾ: ಮನಃಕ್ಲೇಶ ಎಂಬುದು ಮನhkhಕ್ಲೇಶ ಎಂದು ಉಚ್ಚರಿಸಲ್ಪಡುತ್ತದೆ) – ಆದರೆ ಕನ್ನಡದಲ್ಲಿ ಇವುಗಳ ಬಳಕೆಯಿಲ್ಲ – ಇಲ್ಲಿ ಉಪಧ್ಮಾನೀಯ ಮತ್ತು ಜಿಹ್ವಾಮೂಲೀಯಗಳನ್ನೂ ವಿಸರ್ಗಾಕ್ಷರಗಳಾಗಿಯೇ ಉಚ್ಚರಿಸುವುದು ರೂಢಿ (ಮನಃಪರಿವರ್ತನೆ ಮನಃಕ್ಲೇಶಗಳನ್ನು ಮನಃಪರಿವರ್ತನೆ, ಮನಃಕ್ಲೇಶ ಎಂದೇ ಉಚ್ಚರಿಸಲಾಗುತ್ತದೆ).

ಹೀಗೆ, ಕೇಶಿರಾಜನ ಪ್ರಕಾರ ಅಚ್ಚಗನ್ನಡದ ವರ್ಣಮಾಲೆ:
ಅಆಇಈಉಊಎಏಐಒಓಔ (=೧೨)
ಂ (ಅನುಸ್ವಾರ - ಅಂ) (=೧)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯಱರಲವಸಹೞಳ (=೯)

ಒಟ್ಟು ೪೭ ಅಕ್ಷರಗಳು.

ಕೇಶಿರಾಜನೇನೋ "’ಅಚ್ಚ’ಕನ್ನಡದಲ್ಲಿ ಬಳಕೆಯಲ್ಲಿಲ್ಲ"ವೆಂದು ಹಲವು ಅಕ್ಷರಗಳನ್ನು ತೆಗೆದುಹಾಕಿದ. ಸಂಸ್ಕೃತದಲ್ಲೇ ತೀರ ಕಡಿಮೆ ಉಪಯೋಗವಿದ್ದು, ಕನ್ನಡದಲ್ಲಿ ಬಳಕೆಯಲ್ಲೇ ಇಲ್ಲದ ೠ, ಲೃ, ಲೄ, ೱ, ೲ ಗಳನ್ನು ತೆಗೆದದ್ದೇನೋ ಸರಿ, ಆದರೆ ನಾವು ಇವತ್ತು ವ್ಯಾಪಕವಾಗಿ ಬಳಸುತ್ತಿರುವ ಋ, ಶ, ಷ ಮತ್ತು ವಿಸರ್ಗಗಳನ್ನೂ ತೆಗೆದುಬಿಟ್ಟ. ಅದಕ್ಕೆ ಆತನ ತರ್ಕ ಹೀಗೆ: ಅಚ್ಚಗನ್ನಡದಲ್ಲಿ ಈ ಅಕ್ಷರಗಳು ಬಳಕೆಯಲ್ಲಿಲ್ಲ; ಸಂಸ್ಕೃತ ಪದಗಳಲ್ಲಿದ್ದರೂ ಅವು ಕನ್ನಡದಲ್ಲಿ ತದ್ಭವವಾಗುವಾಗ ಆ ಅಕ್ಷರಗಳು ದೇಸೀ ಅಕ್ಷರಗಳಿಗೆ ಬದಲಾಗುತ್ತವೆ (ಉದಾಹರಣೆಗೆ, ಋಷಿ > ರಿಸಿ, ಪಶು > ಪಸು/ಹಸು, ದುಃಖ > ದುಕ್ಕ ಹೀಗೆ) - ಆದ್ದರಿಂದ ಅಚ್ಚಗನ್ನಡ ವರ್ಣಮಾಲೆಯಲ್ಲಿ ಈ ಅಕ್ಷರಗಳ ಅಗತ್ಯವಿಲ್ಲ.  ಆದರೆ ಈ ತರ್ಕಕ್ಕೆ ಕೊನೆಯೆಲ್ಲಿ?  ಇದೇ ದಾರಿಯಲ್ಲಿ ಮುನ್ನೆಡೆದರೆ ಮಹಾಪ್ರಾಣಗಳೂ ಹೀಗೇ ಅಲ್ಲವೇ? ಅಚ್ಚಗನ್ನಡದಲ್ಲಿ ಮಹಾಪ್ರಾಣವೆಲ್ಲಿದೆ? ಸಂಸ್ಕೃತದ ಮಹಾಪ್ರಾಣಶಬ್ದಗಳೂ ಕನ್ನಡಕ್ಕೆ ಬರುವಾಗ ತದ್ಭವವಾಗಿಯೇ ಬರುತ್ತವೆ (ಹಠ > ಹಟ; ಘಂಟಾ > ಗಂಟೆ; ದುಃಖ > ದುಕ್ಕ ಹೀಗೆ). ಇನ್ನು ಙ ಮತ್ತು ಞಗಳ ಕೆಲಸವನ್ನು ಅನುಸ್ವಾರ (೦) ಮಾಡುತ್ತದೆ;  ಐಔ ಎಂಬುದು ಅ+ಏ ಮತ್ತು ಅ+ಓ ಅಕ್ಷರಗಳ ಸಂಯುಕ್ತ - ಕನ್ನಡದಲ್ಲಿ ಇದನ್ನೇ ಅಯ್ ಮತ್ತು ಅವ್ ಎಂದು ಬಳಸಬಹುದಾದ್ದರಿಂದ ಆ ಎರಡು ಸ್ವರಗಳ ಅಗತ್ಯವೂ ಇಲ್ಲ. ಆದ್ದರಿಂದ ಹತ್ತು ಮಹಾಪ್ರಾಣಗಳನ್ನೂ ಙಞಗಳನ್ನೂ ಐಔ ಸಂಯುಕ್ತ ಸ್ವರಗಳನ್ನೂ ತೆಗೆದರೆ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳ ಸಂಖ್ಯೆ ಮೂವತ್ಮೂರಕ್ಕಿಳಿಯುತ್ತದೆ, ಹೀಗೆ:

ಅಆಇಈಉಊಎಏಒಓ (=೧೦)
ಂ (ಅನುಸ್ವಾರ - ಅಂ) (=೧)
ಕಗ ಚಜ ಟಡಣ ತದನ ಪಬಮ (=೧೩)
ಯರಱಲವಸಹಳೞ (=೯)

ಒಟ್ಟು ೩೩ ಅಕ್ಷರಗಳು.

ತರ್ಕವೇನೋ ಸರಿಯೇ, ಆದರೆ ಕೇಶಿರಾಜನು ಈ ದಿಕ್ಕಿನಲ್ಲಿ ಮುಂದುವರೆಯದಿದ್ದುದಕ್ಕೆ ಕಾರಣವಿದೆ.  ಮೊದಲಿಗೆ ಸಂಸ್ಕೃತಪದಗಳೆಲ್ಲವೂ ಕನ್ನಡಕ್ಕೆ ತದ್ಭವವಾಗಿಯೇ ಬರುತ್ತವೆ/ಬರಬೇಕು ಎನ್ನುವ ಮಾತೇ ಪ್ರಾಯೋಗಿಕವಲ್ಲ. ರಿಸಿ ಪಸು ದುಕ್ಕ ಮುಂತಾಗಿ ಜನಬಳಕೆಯಲ್ಲಿ ಬಿದ್ದು ಸಹಜವಾಗಿ ಬದಲಾಗುವ ಪದಗಳಷ್ಟೇ ತದ್ಭವಗಳಾಗುತ್ತವೆಯೇ ಹೊರತು ಕನ್ನಡದಲ್ಲಿ ಬಳಸಲ್ಪಡುವ ಎಲ್ಲ ಸಂಸ್ಕೃತ ಪದಗಳೂ ಅಲ್ಲ. ಉದಾಹರಣೆಗೆ, ಶಂಕರ, ಅಘೋರ, ದರ್ಶನ ಇತ್ಯಾದಿ ಪದಗಳು ಜನಬಳಕೆಯದ್ದಲ್ಲ, ಆದರೆ ಗ್ರಾಂಥಿಕ ಕನ್ನಡದಲ್ಲೂ, ಅದನ್ನನುಸರಿಸುವ ಶಿಷ್ಟ ಕನ್ನಡದಲ್ಲೂ ಬಳಕೆಯಲ್ಲಿವೆ.  ಆದ್ದರಿಂದ ಮಹಾಪ್ರಾಣಯುಕ್ತ ಸಂಸ್ಕೃತ ಪದಗಳೂ ಕನ್ನಡದ ಅವಿಭಾಜ್ಯ ಅಂಗವೇ.  ಇವಿಲ್ಲದ ಕಾವ್ಯವನ್ನೂ ಶಾಸ್ತ್ರೀಯ ಸಾಹಿತ್ಯವನ್ನೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.  ಎಂದಮೇಲೆ ಈ ಪದಗಳನ್ನು ಬಳಸುವ ಅಗತ್ಯಕ್ಕೆ ತಕ್ಕಂತೆ ಹಾಗೆಯೇ ಬರೆಯುವ ಸೌಲಭ್ಯ ಕನ್ನಡದಲ್ಲಿ ಉಳಿದಿರಬೇಕಾದದ್ದು ಸಹಜವೇ ತಾನೇ? ಹೀಗಾಗಿ ಕೇಶಿರಾಜನು ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳಬೇಕಾಯಿತು. ಹಾಗೆಯೇ ಐಔ ಗಳನ್ನು ಅಯ್ ಮತ್ತು ಅವ್ ಗಳು ನಿಭಾಯಿಸಬಲ್ಲುವಾದರೂ ಉಚ್ಚಾರಣೆಯಲ್ಲಿ ಸೂಕ್ಷ್ಮ ವ್ಯತ್ಯಾಸವಿದ್ದೇ ಇದೆ. ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನು ವಿಕಾರವಿಲ್ಲದೇ ಹಾಗೇ ಬಳಸಬಹುದಾದರೆ ಐಔಗಳನ್ನು ಮಾತ್ರ ಏಕೆ ವಿಕಾರಮಾಡಬೇಕು? ಅದಕ್ಕೆ ಬಲಗೊಡುವ ಯಾವ ಪ್ರಯೋಗವೂ ಇಲ್ಲವಲ್ಲ! ಅದಕ್ಕೇ ಐಔಗಳೂ ಉಳಿದುವು.  ಹೀಗೆ ವಿಪರೀತಕ್ರಾಂತಿಯ ಗೊಡವೆಗೆ ಹೋಗದೇ ಕೇವಲ ಪ್ರಯೋಗಸಾಧುವಾದ ’ಶುದ್ಧಗೆ’ಯ ಪ್ರಸ್ತುತ ಪಡಿಸುವಲ್ಲಿಗೆ ಕೇಶಿರಾಜ ನಿಂತ.

ಇದಿಷ್ಟು ಕೇಶರಾಜನ ವಿಷಯವಾಯಿತು, ಆದರೆ ನಮ್ಮ ಆಧುನಿಕ ಕನ್ನಡ ವರ್ಣಮಾಲೆಯು, ಕೇಶಿರಾಜನು ಸೂಚಿಸಿದ ’ಶುದ್ಧಗೆ’ಯಿಂದ ಸಾಕಷ್ಟು ಬದಲಾವಣೆ ಹೊಂದಿದೆ, ಪರಿಷ್ಕೃತಗೊಂಡಿದೆ.  ಹಾಗಾದರೆ ಈ ಪುನಃಪರಿಷ್ಕರಣಗಳ ಅಗತ್ಯವಾದರೂ ಏಕೆ ಬಿದ್ದಿತೆಂಬುದನ್ನು ನೋಡೋಣ.  ಈ ಹಿಂದೆ ನೋಡಿದಂತೆ ಜನಬಳಕೆಗೆ ಬಿದ್ದ ಹಲವು ಸಂಸ್ಕೃತ ಪದಗಳು ಕನ್ನಡಕ್ಕೆ ತದ್ಭವವಾಗಿ ಬರುವುದು ನಿಜವಾದರೂ, ಅಷ್ಟುಮಾತ್ರಕ್ಕೆ ಮೂಲ ತತ್ಸಮದ ಬಳಕೆಯೇ ಇಲ್ಲವೆನ್ನುವಂತಿಲ್ಲ, ಈ ತದ್ಭವಗಳ ಜೊತೆಜೊತೆಗೇ ಅವುಗಳ ತತ್ಸಮರೂಪಗಳೂ ಬಳಕೆಯಲ್ಲಿದ್ದೇಯಿವೆ.  ಉದಾಹರಣೆಗೆ ರಿಸಿ ಪಸು ದುಕ್ಕ ಮುಂತಾದುವು ತದ್ಭವಗಳಾದರೂ, ಅವುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿವೆ. ಪದವೊಂದನ್ನು ತದ್ಭವವಾಗಿ ಬಳಸಬೇಕೋ ತತ್ಸಮವಾಗಿಯೋ ಎಂದು ನಿರ್ಧರಿಸುವಲ್ಲಿ ಬಳಕೆಯ ಸಂದರ್ಭ, ಇತರ ಕನ್ನಡ ಹಾಗೂ ಸಂಸ್ಕೃತ ಪದಗಳೊಡನೆ ಅವಕ್ಕಿರುವ ಸಂಧಿ/ಸಮಾಸ ಸೌಲಭ್ಯ, ಇದರಿಂದ ಬರವಣಿಗೆಗೆ ದಕ್ಕುವ ಬಾಗು-ಬಳುಕುಗಳು, ನಿಖರತೆ, ತೇಜಸ್ಸು, ಶ್ರೀಮಂತಿಕೆ ಮುಂತಾದುವು ಪ್ರಮುಖ ಪಾತ್ರವಹಿಸುತ್ತವೆ. ಅದೇನೇ ಇರಲಿ, ಅಗತ್ಯ ಬಿದ್ದಾಗ ಎರಡೂ ರೂಪಗಳನ್ನು ಕೈತಡೆಯದೇ ಬಳಸುವ ಸ್ವಾತಂತ್ರ್ಯವು ಬಳಸುವವನಿಗೆ ಇರಬೇಕಾಗುತ್ತದೆ.  ಆದ್ದರಿಂದ ಮಹಾಪ್ರಾಣಗಳನ್ನು ಉಳಿಸಿಕೊಂಡಂತೆಯೇ ರಿಸಿ ಪಸು ದುಕ್ಕ ಮುಂತಾದುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳಲ್ಲಿರುವ ಋಶಷ ಮತ್ತು ವಿಸರ್ಗಗಳನ್ನೂ ಉಳಿಸಿಕೊಳ್ಳುವ ಅಗತ್ ಬೀಳುತ್ತದೆ.  ಆದ್ದರಿಂದಲೇ ಕನ್ನಡದ್ದಲ್ಲವೆಂದು ಕೇಶಿರಾಜನು ಓಡಿಸಿದ್ದ ಋಶಷ ಮತ್ತು ವಿಸರ್ಗಗಳೂ ಹಿಂದಿರುಗಿದುವು.

ಅಕ್ಷರಗಳು ಮರಳಿ ಬಂದದ್ದೇನೋ ಸರಿ, ಆದರೆ ಕೇಶಿರಾಜನು ಕನ್ನಡದ್ದೇ ಎಂದು ನಿರ್ದಿಷ್ಟವಾಗಿ ಉಳಿಸಿಕೊಂಡಿದ್ದ ಱೞ ವರ್ಣಗಳು ಮರೆಯಾದದ್ದೇಕೆ?  ಮಹಾಪ್ರಾಣ, ಋಶಷ ಮತ್ತು ವಿಸರ್ಗಗಳಿಗೆ ಅನ್ವಯಿಸುವ ತರ್ಕವೇ ಇಲ್ಲೂ ಅನ್ವಯವಾಗಬೇಕಿತ್ತಲ್ಲವೇ?  ಬಳಸುವ ಅಗತ್ಯ ಬಿದ್ದಾಗ ಅಕ್ಷರವಿಲ್ಲದಿದ್ದರೆ ಹೇಗೆ?  ಅದಕ್ಕೇ ಅಲ್ಲವೇ ಕೇಶಿರಾಜನು ಅವುಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡದ್ದು?  ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಱೞ ವರ್ಣಗಳು ಕೇಶಿರಾಜನ ಕಾಲಕ್ಕೇ ನಿಧಾನಕ್ಕೆ ರಳ ಅಕ್ಷರಗಳ ಜೊತೆ ಬೆರೆತುಹೋಗುತ್ತಿದ್ದು, ನಡುಗನ್ನಡದ ಕಾಲಕ್ಕಾಗಲೇ ಆ ವ್ಯತ್ಯಾಸ ಅಳಿದುಹೋಗಿತ್ತು; ವಿದ್ವಾಂಸರಲ್ಲೇ ಈ ಬಗೆಗಿನ ಗೊಂದಲಗಳಿತ್ತು. ಹನ್ನೆರಡನೇ ಶತಮಾನದ ಶರಣಸಾಹಿತ್ಯದಲ್ಲೂ ಱೞಗಳ ಬಳಕೆ ಕ್ವಚಿತ್ತಾಗಿ ಮಾತ್ರ ಕಂಡುಬರುತ್ತದೆ.  ಕೇಶಿರಾಜನಿಗಿಂತ ಅರ್ಧಶತಮಾನದಷ್ಟಾದರೂ ಹಿಂದಿನವನಾದ ಹರಿಹರನೇ - "ಕವಿತತಿ ವಿಚಾರಿಸಬೇಡದರಿಂ ಱೞಕುಳಕ್ಷಳಂಗಳನಿದರೊಳ್" ಎಂದು ತನ್ನ ಗಿರಿಜಾಕಲ್ಯಾಣದಲ್ಲಿ ಹೇಳಿದ್ದಾನೆ (ಕಾವ್ಯಸೌಷ್ಟವಕ್ಕೆ ಗಮನ ಕೊಡಬೇಕಾದ ಕವಿಗಳು ಅರ್ಥವಿಲ್ಲದ ಱೞಕುಳಕ್ಷಳಗಳ ಚರ್ಚೆಯ ಗೊಡವೆಗೆ ಹೋಗದಿರುವುದೇ ಲೇಸು ಎಂದು ಅವನ ಅಭಿಪ್ರಾಯ).  ಹರಿಹರನೂ ರಾಘವಾಂಕನೂ ಱೞಗಳನ್ನು ಹಠ ಹಿಡಿದಂತೆ ಬಳಸಿದರೂ ಆಮೇಲಾಮೇಲೆ ಬಂದ ಕುಮಾರವ್ಯಾಸನಲ್ಲಿ ಹಾಗೂ ದಾಸರ ಪದಗಳಲ್ಲಿ ಅವು ಸಂಪೂರ್ಣ ಮರೆಯಾಗಿರುವುದನ್ನು ನೋಡುತ್ತೇವೆ.  ಹೀಗೆ ದಿನಬಳಕೆಯಿಂದ ತನ್ನ ಕಾಲಕ್ಕಾಗಲೇ ಹೊರನಡೆದಿದ್ದ ಱೞ ಅಕ್ಷರಗಳಿಗೆ ವರ್ಣಮಾಲೆಯಲ್ಲಾದರೂ, ಶಾಸ್ತ್ರಕ್ಕಾದರೂ ಒಂದು ಆಶ್ರಯ ಕಲ್ಪಿಸುವ ಕೇಶಿರಾಜನ ಪ್ರಯತ್ನವು ಫಲಿಸದೇ ಅವು ಕ್ರಮೇಣ ಕಣ್ಮರೆಯೇ ಆದುವು.  ಹೀಗಾಗಿ ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯಿಂದ, ಬದಲಾದ ಆಧುನಿಕ ಕನ್ನಡವರ್ಣಮಾಲೆಗೆ ಮತ್ತೊಂದು ತಾಳೆ ಪಟ್ಟಿ ಬರೆಯುವುದಾದರೆ ಅದು ಹೀಗಿರುತ್ತದೆ:

ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳು - ೪೭
ಅದರಿಂದ ಕೈಬಿಟ್ಟ, ಇಂದಿಗೆ ಬಳಕೆಯಲ್ಲಿಲ್ಲದ ಅಕ್ಷರಗಳು - ೨ (ಱೞ)
ಮತ್ತೆ ಸೇರಿಸಿಕೊಂಡ ಸಂಸ್ಕೃತಮೂಲದ ಅಕ್ಷರಗಳು - ೪ (ಋಶಷ ಮತ್ತು ವಿಸರ್ಗ )
ಹೊಸಗನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು - ೪೯

ಹೀಗೆ, ಸಧ್ಯ ಬಳಕೆಯಲ್ಲಿರುವ ಆಧುನಿಕ ಕನ್ನಡದ ವರ್ಣಮಾಲೆ:
ಅಆಇಈಉಊಋಎಏಐಒಓಔ (=೧೩)
ಂ (ಅನುಸ್ವಾರ - ಅಂ) ಃ (ವಿಸರ್ಗ - ಅಃ) (=೨)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯರಲವಶಷಸಹಳ (=೯)

ಒಟ್ಟು ೪೯ ಅಕ್ಷರಗಳು.  ನಾವು ಓದುತ್ತಿದ್ದ ಕಾಲದಲ್ಲಿ ೠ ಅಕ್ಷರವನ್ನೂ ಕನ್ನಡ ವರ್ಣಮಾಲೆಯ ಭಾಗವಾಗಿಸಿ ಒಟ್ಟು ಐವತ್ತು ಅಕ್ಷರಗಳಾಗಿ ಹೇಳಿಕೊಡುತ್ತಿದ್ದರು.  ಈಗ ಆಧುನಿಕ ಕನ್ನಡ ವರ್ಣಮಾಲೆಯು ೠಕಾರದಿಂದ ಮುಕ್ತಿಪಡೆದಿದೆ.

ಇನ್ನು ಈ ಲೇಖನದಲ್ಲಿ ಹೇಳಿದ ಱೞ ಕುೞ ಕ್ಷಳಗಳ ವಿಷಯ ಮತ್ತೊಂದು ದೊಡ್ಡ ಕತೆ.  ಮತ್ತೆಂದಾದರೂ ಬರೆಯುತ್ತೇನೆ.