Friday, September 14, 2007

ಶ್ರಾವಣ ಮುಗಿದ ಮೇಲೊಂದು ಸಂಜೆ

ಶ್ರಾವಣ ಮುಗಿಯಿತು,
ಗೌರಿ
ಬರುವ ಸಮಯ
ಆದರೂ ಬರಲಿಲ್ಲ
ಮಳೆ.

ಆಗಸದಿ ಕಿಕ್ಕಿರಿದ ಮೋಡ,
ಕಂಬಳಿ ಕವುಚಿದಂತೆ;
ಮೂರುದಿನದಿಂದ
ಒಂದೇ ಸಮ
ಧಗೆ,
ಮೂಗುಬ್ಬಸ;

ಅಲ್ಲಲ್ಲಿ ಮಿಂಚು -
ಒಳಗೆಲ್ಲೋ
ಮಿಡಿಯುವ ಕವಿತೆ
ಮೂಡಲೊಲ್ಲದು ಏಕೊ -
ನಡುವೆ ಸಣ್ಣನೆ ಗುಡುಗು,
ಮಳೆರಾಯ ನಕ್ಕಂತೆ -
ಆಹ! ಒಳ್ಳೆಯ ಉಪಮೆ -
ಆಗೊಮ್ಮೆ - ಈಗೊಮ್ಮೆ
ಬೀಸಿ ಬಹ ತಂಗಾಳಿ
ಆದರೂ
ಮಳೆಗೆ ಸಮನೇ ಹೇಳಿ!
ಮಾತು ಕೊಟ್ಟ ಮಳೆ
ಬರಲೇ ಬೇಕಲ್ಲ,
ಗೌರಿಯ ತಣಿಸಲಲ್ಲದಿದ್ದರೂ,
ಕಾವ್ಯದ ತಂತ್ರಕ್ಕಾದರೂ!

ಕಾಯುತ್ತೇನೆ,
ಹನಿಗಣ್ಣ ಮುಗಿಲಲಿ ನೆಟ್ಟು
ನೋಡುತ್ತೇನೆ;
ಮನದಿ ಮೂಡಿದ್ದನ್ನು
ಮುಂದಿರುವ ಕಾಗದದಿ
ಗೀಚುತಿದೆ ಪೆನ್ನು.
ಗುಡುಗಿಗೆಚ್ಚೆತ್ತ ಮಗು
ಅಳು ನಿಲಿಸಿ ನೋಡುತಿದೆ,
ಬರೆವ ಕಾಗದದ ಮೇಲವನ ಕಣ್ಣು;
ಅವಗೀಗ ಆಟದ ಸಮಯ.
ನೂರು ನಲ್ಗಬ್ಬಗಳ-
ನೊಮ್ಮೆಲೇ ಚಿಮ್ಮಿಸುವ ಹಾಲುನಗು-
ಮೊಗದಲ್ಲಿ
ಎರಡು ಹಲ್ಲು,
ಬಾಯ್ತುಂಬ ಜೊಲ್ಲು,
ಅಳು-ನಗು
ಬೆರೆತ ಮಳೆಬಿಲ್ಲು.

ಅರೆ ಇವನ!
ಕಾಗದವ ಕಸಗೊಂಡು
ನಗುತ ಓಡುವ ಪೋರ,
ಪುಟ್ಟ ಕೈಗಳಲಿದ್ದ ನನ್ನ ಕವನ,
ಸರ್ರ ಹರಿಯಿತು
ಮನೆಯ ತುಂಬಿ ಸುರಿಯಿತು
ಕೇಕೆ!
ಹೊರಗೆ ಧೋ... ಮಳೆ!

- ೧೩/೦೯/೨೦೦೭