Sunday, March 22, 2020

ಧರ್ಮ-ವಿಜ್ಞಾನ-ವೈಜ್ಜಾನಿಕದೃಷ್ಟಿ


ಸನಾತನಧರ್ಮವೆಂಬುದು ಭಾರತೀಯರು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡು ಬಂದ ಬದುಕಿನ ವಿಧಾನ - ಹಲವು ಜೀವನಶೈಲಿ, ನಂಬುಗೆ, ಪದ್ಧತಿ, ಸಂಪ್ರದಾಯ, ಆಚರಣೆಗಳ ಕುದಿಮಡಕೆ (melting pot).  ಇಲ್ಲಿ ವೈವಿಧ್ಯವಿದೆ, ವೈರುಧ್ಯಗಳೂ ಇವೆ, ತಗ್ಗುತೆವರುಗಳಿವೆ, ಸಾಮರಸ್ಯವಿದೆ, ಪ್ರಶ್ನೆಗಾಸ್ಪದವಿದೆ, ಆರೋಗ್ಯಕರ ಹಾಸ್ಯಕ್ಕೂ.  ಶತಮಾನಗಳಿಂದ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ ಪರಿಶೀಲಿಸಿಕೊಳ್ಳುತ್ತಾ ಸರಿಪಡಿಸಿಕೊಳ್ಳುತ್ತಾ, ಹರಿದಿರುವ ಇದು, ನಿರಂತರ, ಚಲನಶೀಲ, ಪರಿವರ್ತನಶೀಲ ಕೂಡ.  ಕಾಲದಿಂದ ಕಾಲಕ್ಕೆ ತನ್ನ ತೆಕ್ಕೆಗೆ ಬಂದ ಹಲವು ಮತ-ಪಂಥ-ವಿಚಾರಧಾರೆಗಳನ್ನು ತನ್ನ ಮುಖ್ಯವಾಹಿನಿಯಲ್ಲಿ ಒಳಗೊಳ್ಳುತ್ತಾ ಹರಿದಿರುವ ಇದು ನಿರ್ದಿಷ್ಟ ಮತವಲ್ಲ, ಭಾರತೀಯನ ಸಹಜ ಜೀವನಧರ್ಮ.  ಇದರಲ್ಲಿ ನಂಬಿಕೆಶ್ರದ್ಧೆಗಳು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳುವಂಥವಲ್ಲ, ಸಹಜವಾಗಿಯೇ ಬರುವಂಥವು.  ಮೀನಿಗೆ ನೀರಿನಲ್ಲಿ ಈಜಲು ಬರುವುದಿಲ್ಲವೆಂದರೂ ನೀರನ್ನು ಬಿಟ್ಟು ನೆಲದ ಮೇಲೆ ಬಂದು ಬದುಕಬಲ್ಲುದೇ?  ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ಆದರೆ ಸನಾತನಧರ್ಮದಲ್ಲಿ ಅಭಿಮಾನವನ್ನು ಮಾತ್ರ ಉಳಿಸಿಕೊಂಡು ಇದರ ಮಹತ್ತನ್ನು ಮರೆತ, ಅದು ಹೇಗೋ ಪರವಿಚಾರಧಾರೆಯ ಪ್ರಭಾವಳಿಗೆ ಸಿಕ್ಕ ಮನಸ್ಸುಗಳಲ್ಲಿ ತಮ್ಮ ಸನಾತನಧರ್ಮದ ವಿಷಯದಲ್ಲಿ ಏನೋ ಕೀಳರಿಮೆ, ಏನೋ ಕೊರತೆ.  ತಮ್ಮ ಧರ್ಮವು 'ಕಂದಾಚಾರಗಳ ಮೂಟೆ'ಯೆಂದು ಯಾರೋ ಹೇಳಿದ ಮಾತಿನಲ್ಲಿ ದುಃಖಭರಿತ ನಂಬಿಕೆ, ಜೊತೆಗೆ ಕೆರಳಿಕೆ ಕೂಡ - ಆ ಮಾತನ್ನು ಸುಳ್ಳಾಗಿಸಬೇಕೆಂಬ ಹಳಹಳಿ.  ಅದಕ್ಕಾಗಿ ತಮ್ಮ 'ಧರ್ಮ' ಅತ್ಯಂತ ವೈಜ್ಞಾನಿಕಧರ್ಮವೆಂದು ಹೇಗಾದರೂ ಸಾಧಿಸಿ ತೋರಿಸಬೇಕೆಂಬ ಕಳಕಳಿ.  ವಿಜ್ಜಾನ ಬೇರೆ, ವೈಜ್ಞಾನಿಕತೆ ಬೇರೆ, ಧರ್ಮ ಬೇರೆ, ಮತ ಬೇರೆ, ನಂಬಿಕೆ ಬೇರೆ ಎಂಬ ಬೇರ್ಮೆ ಬುದ್ಧಿಗೆ ಹೋಗದು.  ಹೀಗಾದಾಗ, ಎಲ್ಲಕ್ಕೂ 'ವೈಜ್ಞಾನಿಕ' ವಿವರಣೆ ನೀಡುವ ತೆವಲು ಹುಟ್ಟಿಕೊಳ್ಳುತ್ತದೆ.  ಹಾಗೆ ವಿವರಣೆ ನೀಡುವವರಿಗೆ ಇತ್ತ ವಿಜ್ಞಾನವೂ ತಿಳಿದಿರುವುದಿಲ್ಲ, ಅತ್ತ ಪುರಾಣವೂ ತಿಳಿದಿರುವುದಿಲ್ಲ, ವೈಜ್ಞಾನಿಕಮನೋವೃತ್ತಿಯಂತೂ ಮೊದಲೇ ಇರುವುದಿಲ್ಲ.  ಯಾರಾದರೂ "ನಿಮ್ಮ ಶಿವ ನಿಜಕ್ಕೂ ಗಣೇಶನಿಗೆ ಆನೆ ತಲೆ ಜೋಡಿಸಿದನಾ" ಎಂದು ಲೇವಡಿ ಮಾಡಿದರೆಂದಿಟ್ಟುಕೊಳ್ಳಿ.  "ಹೌದಪ್ಪ, ಹಾಗೆ ಪುರಾಣದ ಕತೆ ಹೇಳುತ್ತದೆ, ಈಗ, ಜೀಸಸ್ ಸತ್ತ ಮೇಲೆ ಬದುಕಿ ಬರಲಿಲ್ಲವೇ ಹಾಗೇ, ಅದು ನಂಬಿಕೆಗೆ ಸಂಬಂಧಿಸಿದ ವಿಚಾರ, ನಮ್ಮ ಪಾಲಿಗೆ ಅದು ಪವಿತ್ರ ನಂಬಿಕೆ, ಪ್ರತಿಯೊಬ್ಬರಿಗೂ ಅವರವರ ನಂಬಿಕೆ ಪವಿತ್ರವಲ್ಲವೇ" ಎಂದು ಹೇಳಿ ಕೈಮುಗಿದು ಸುಮ್ಮನಾಗಲು ಮನಸ್ಸು ಬರುವುದಿಲ್ಲ. ಅನೇಕ ಪುರಾಣಕತೆಗಳಿಗೆ ಅದರದ್ದೇ ಆದ ಸಾಂಕೇತಿಕತೆಯಿರುತ್ತದೆ, ಕೆಲವೊಮ್ಮೆ ಕಲ್ಪನಾವಿಲಾಸವೂ ಇರಬಹುದು, ಮತಭಕ್ತಿಯೂ.  ಅದನ್ನು ಪರಿಶೀಲಿಸಿ ಅದು ಇರುವ ಹಾಗೇ ಒಪ್ಪಿ ಅದಕ್ಕೆ ತಕ್ಕ ಶ್ರದ್ಧೆಯಿಂದ ಮುಂದುವರೆಯಲು ಮನಸ್ಸು ಒಪ್ಪುವುದೇ ಇಲ್ಲ.  "ಹೂಂ ಮತ್ತೆ, ನಮ್ಮ ಹಿಂದೂ ಧರ್ಮ ಮತ್ತೇನೆಂದುಕೊಂಡಿರಿ, ಆಗಲೇ ನಮ್ಮಲ್ಲಿ ವಿಜ್ಞಾನ ಎಷ್ಟು ಮುಂದುವರೆದಿತ್ತು ಗೊತ್ತಾ, Head Transplantation ನಮಗೆ ಆಗಲೇ ಗೊತ್ತಿತ್ತು, Shiva was the first Head Surgeon" ಎಂದು ಬೊಂಕುತ್ತಾರೆ, ನಗುವವರ ಮುಂದೆ ಎಡವಿ ಬೀಳುತ್ತಾರೆ.  ಈ ವಿವರಣೆಗಳನ್ನು ಕಂಡು ಹಾಸ್ಯ ಮಾಡಿದವ, ಸ್ವಘೋಷಿತಧರ್ಮರಕ್ಷಕರ ದೃಷ್ಟಿಯಲ್ಲಿ ಧರ್ಮದ್ರೋಹಿಯಾಗಿಬಿಡುತ್ತಾನೆ (ಆತ ಮನೆಯಲ್ಲಿ ಶ್ರದ್ಧೆಯಿಂದ ತ್ರಿಕಾಲಸಂಧ್ಯಾವಂದನೆ, ದೇವತಾರ್ಚನೆ ಮಾಡುತ್ತಿದ್ದರೂ)! ನಮಸ್ಕಾರ-ಆಶೀರ್ವಾದಗಳಂತಹ ಗೌರವ-ವಾತ್ಸಲ್ಯಗಳ, ಆತ್ಮವಿಶ್ವಾಸ-ಭರವಸೆ ತುಂಬುವ ಸಾಮಾಜಿಕ-ಸಾಂಪ್ರದಾಯಿಕ ಕ್ರಿಯೆ ಕೂಡ, ತನ್ನ ಪವಿತ್ರಭಾವನೆಯಿಂದ ನಮ್ಮ ಮನಗೆಲ್ಲುವುದಿಲ್ಲ, ಅದಕ್ಕೆ ವೈಜ್ಞಾನಿಕ ವಿವರಣೆಯೇ ಬೇಕು - ಎಂಥದ್ದೋ blah blah blah ಕಿರಣಗಳು ಎಲ್ಲಿಂದಲೋ ಹೊರಟು ಇನ್ನೆಲ್ಲೋ ಹೊಕ್ಕು, ಮಿದುಳನ್ನೋ ಹೃದಯವನ್ನೋ ಕಿಡ್ನಿಯನ್ನೋ ಮೀಟಿ ಅದೇನೋ ಮ್ಯಾಜಿಕ್ ಮಾಡಿಬಿಡುತ್ತದೆ, "ನೋಡಿದಿರಾ, ನಮ್ಮ ಸನಾತನ ಹಿಂದೂಧರ್ಮದಲ್ಲಿ ಇವೆಲ್ಲಾ ಹೇಗೆ ಕಂಡುಹಿಡಿದಿದ್ದಾರೆ"!  ಮೊನ್ನೆ ವಾಟ್ಸಪ್ ಜಂಕಿನಲ್ಲಿ ಒಂದು ಬಂದಿತ್ತು.  ಶಿಖೆ ಬಿಡುವುದರಿಂದ ಜುಟ್ಟಿನ ಭಾರವು ತಲೆಯ ಹಿಂಭಾಗವನ್ನು ಚುಳ್ಳಗೆ ಎಳೆದು ಮಿದುಳಿನ ಮೇಲೆ ಅದೆಂಥದ್ದೋ ಒತ್ತಡ ಹಾಕುತ್ತದಂತೆ.  ಅದರಿಂದ concentration, mind-control, memory ಇವೆಲ್ಲಾ ವೃದ್ಧಿಸುತ್ತವಂತೆ.  ಯಜ್ಞೋಪವೀತವು ಅದಾವುದೋ ಕಾಸ್ಮಿಕ್ ಕಿರಣಗಳನ್ನು ಆಕರ್ಷಿಸಿ ಎಡಭುಜದಿಂದ ಬಲಸೊಂಟದವರೆಗೂ ಹಾದು ಹೃದಯ, ಶ್ವಾಸಕೋಶ, ಕಿಡ್ನಿಗಳನ್ನು ಬಲಗೊಳಿಸುತ್ತವಂತೆ.  ಇವೆಲ್ಲಾ ಯುವಜನರಲ್ಲಿ ಸನಾತನಧರ್ಮವನ್ನು popularize ಮಾಡುವ ಹತಾಶಪ್ರಯತ್ನದಂತೆ ಕಾಣುವುದಿಲ್ಲವೇ?  ಅಲ್ಪಸ್ವಲ್ಪ ವಿಜ್ಞಾನ ಓದಿಕೊಂಡು, ಅದೇ ಎಲ್ಲ ಎಂದು ತಿಳಿದುಕೊಂಡು ತಾವೇ ಬೃಹಸ್ಪತಿಯೆಂಬ ಭ್ರಮೆಯಲ್ಲಿ ಬೀಗುವ ಪಡ್ಡೆಗಳಿಗಂತೂ ಇದು ಇನ್ನೂ ನಗೆಪಾಟಲಾಗುತ್ತವಲ್ಲವೇ?  ಇದರ ಬದಲು ಮಕ್ಕಳಿಗೆ ಮನೆಯಲ್ಲಿ ಸ್ತೋತ್ರಪಾಠಾದಿಗಳನ್ನು ಹೇಳಿಕೊಟ್ಟು, ದೇವರಿಗೆ ಗುರುಹಿರಿಯರಿಗೆ ನಮಸ್ಕರಿಸುವ, ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಉಡುಪು ನಡೆನುಡಿ ಕಲಿಸಿಕೊಡುವ, ಅವುಗಳ ಮಹತ್ವವನ್ನು **ವಿಜ್ಞಾನದ ಹಂಗಿಲ್ಲದೇ** ಸರಳವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದರೆ ಬಹುಕಾಲ ಅವು ಮಕ್ಕಳಲ್ಲಿ ಉಳಿಯುವುದಲ್ಲವೇ?  ಮಕ್ಕಳು ಪ್ರಶ್ನಿಸುವುದಿಲ್ಲವೆಂದಲ್ಲ.  ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಪ್ರಶ್ನೆಗಳೇ ಹೆಚ್ಚು.  ಹಿಂದಿನ ಕಾಲದಲ್ಲಿ ಇಂತಹ ಪ್ರಶ್ನೆಗಳಿಗೆ ಸಿಡುಕುತ್ತಿದ್ದರು, ಈಗಿನವರು ಸಮಾಧಾನದಿಂದ 'ವೈಜ್ಞಾನಿಕ ಉತ್ತರ'ಗಳನ್ನು ಹೊಸೆದು ಕೊಡುತ್ತಾರೆ, ಎರಡೂ ಏಕಪ್ರಕಾರವಾಗಿ 'ಡ್ಯಾಮೇಜ್' ಮಾಡುವಂಥವು.  ಪ್ರಶ್ನೆ ಕೇಳುವುದು ನಮ್ಮ ಧರ್ಮದಲ್ಲಿಯೇ ಇದೆ, ಕೇಳಬೇಕು ಕೂಡ.  ಆದರೆ ಪ್ರಶ್ನೆಗೆಲ್ಲ ಉತ್ತರಿಸಲೇಬೇಕೆಂಬ ನಿಯಮವಾದರೂ ಎಲ್ಲಿದೆ?  ಕೆಲವಕ್ಕೆ ಉತ್ತರವಿರುತ್ತದೆ (ಅದರಲ್ಲಿ ನಿಜಕ್ಕೂ ಸ್ವಲ್ಪ ವಿಜ್ಞಾನವೂ ಇರಬಹುದು), ಕೆಲವಕ್ಕೆ ನಂಬಿಕೆ-ಶ್ರದ್ಧೆಗಳೇ ಉತ್ತರ.  ಅವನ್ನು ಒಪ್ಪಿ ಅಪ್ಪುವ, ಅಥವಾ ಗೌರವಪೂರ್ವಕವಾಗಿ ಪ್ರಶ್ನಿಸುವ/ನಿರಾಕರಿಸುವ ಸಂಸ್ಕಾರ ಮಕ್ಕಳಲ್ಲಿದ್ದರೆ ಆಯಿತು.  ಇನ್ನು ಕೆಲವಕ್ಕೆ ಉತ್ತರ ಕಂಡುಕೊಳ್ಳುವುದು ಕೇಳುವವನದೇ ಹೊಣೆ.  ಉಹೂಂ, ನಮಗೆ ಈ 'ಅವೈಜ್ಞಾನಿಕ' ಕ್ರಮಗಳಿಂದ ಸಮಾಧಾನವಾಗದು - ವಿವರಿಸಲು ವಿಜ್ಞಾನವೇ ಬೇಕು.  ವೈಜ್ಞಾನಿಕ ವಿವರಣೆಯಿಲ್ಲದಿದ್ದರೆ ಒಂದು ಹೊಸೆದರಾಯಿತು.

ಮೊನ್ನೆ ಇನ್ನೊಂದು 'ವೈಜ್ಞಾನಿಕ' ಸಂಶೋಧನೆ ಚಲಾವಣೆಯಲ್ಲಿತ್ತು.  "ವೈಜ್ಞಾನಿಕ ಜ್ಯೋತಿಷ್ಯದ ಪ್ರಕಾರ" ಕೊರೋನಾ ವೈರಸ್ ಪ್ರತಿ 29.5 ವರ್ಷಗಳಿಗೊಮ್ಮೆ ಶನಿಗ್ರಹದಿಂದ ಭೂಮಿಗೆ ಪಯಣಬೆಳೆಸುತ್ತದಂತೆ.  ಇಲ್ಲಿ ಕೆಲಕಾಲವಿದ್ದು ತಾನೇ ಮಾಯವಾಗುತ್ತದಂತೆ.  ಅದಕ್ಕೆ ಜ್ಯೋತಿರ್ಲಿಂಗವೆಂದರೆ ಭಯವಂತೆ, ಅದಕ್ಕೇ ಭಾರತದಲ್ಲಿ ಕೊರೋನಾ ವೈರಸ್ಸಿನ ಭಯ ಅಷ್ಟಿಲ್ಲವಂತೆ :o ಇದಕ್ಕೇನೆನ್ನೋಣ?  (ಇದಕ್ಕೂ "ಆಹಾ, ಶಿವಶಿವಾ" ಎಂದು ಕೆನ್ನೆಬಡಿದುಕೊಂಡು ಕೈಮುಗಿಯುವವರಿದ್ದಾರೆ, ಆದರೆ ಶಿವಭಕ್ತಿಗೆ ವಿಜ್ಞಾನದ, ಅದೂ ಢೋಂಗಿ ವಿಜ್ಞಾನದ ಕುಮ್ಮಕ್ಕು ಬೇಕೇ?) ಮೊದಲಿಗೆ, ವೈಜ್ಞಾನಿಕಜ್ಯೋತಿಷ್ಯ, ಅವೈಜ್ಞಾನಿಕಜ್ಯೋತಿಷ್ಯ ಎಂಬ ಎರಡು ಭಾಗಗಳಿವೆಯೇ?  ನಾನು ಜ್ಯೋತಿಷ್ಯದ ನಂಬಿಕೆಯನ್ನಿಲ್ಲಿ ಪ್ರಶ್ನಿಸುತ್ತಿಲ್ಲ (ಅದು ನನಗೆ ತಿಳಿದಿಲ್ಲ, ಆದ್ದರಿಂದ ಅದು ನನ್ನ ನಂಬಿಕೆ-ಅಪನಂಬಿಕೆಗಳಿಗೆ ಮೀರಿದ್ದು), ಆದರೆ ಈ 'ವೈಜ್ಞಾನಿಕಜ್ಯೋತಿಷ್ಯ' ಎಂದರೇನು?  ಆ 'ವೈಜ್ಞಾನಿಕ'ಜ್ಯೋತಿಷ್ಯಗ್ರಂಥವಾವುದು?  ಅದರಲ್ಲಿ ಶನಿಗ್ರಹದಿಂದ ಇಲ್ಲಿಗೆ ಬರುವ ಕೊರೋನಾ ವೈರಸ್ಸಿನ ಬಗೆಗೆ ಏನು ಬರೆದಿದೆ?  ಯಾವ ಅಧ್ಯಾಯ, ಯಾವ ಶ್ಲೋಕ?  ಅದರ ಮೇಲೆ ಭಾಷ್ಯ-ವ್ಯಾಖ್ಯಾನಗಳೇನಾದರೂ ಬಂದಿವೆಯೇ?  ನಮಗಿಲ್ಲಿಯವರೆಗೂ ಕಾಣದ ಲೋಕಾಂತರಗಳಲ್ಲಿ ಜೀವವಿದೆಯೋ ಇಲ್ಲವೋ ಎಂಬುದು ನಮಗೂ ವಿಜ್ಞಾನಿಗಳಿಗೂ ಇಬ್ಬರಿಗೂ ಸದ್ಯಕ್ಕೆ ಉತ್ತರಿಸಲಾಗದ ವಿಷಯ, ಇರಲಿ.  ಆದರೆ ನಮ್ಮದೇ ಸೌರಮಂಡಲದ ಭಾಗವಾಗಿರುವ ಶನಿಗ್ರಹದಲ್ಲಿ ಜೀವಜಾಲವಿದೆ, ಮತ್ತು ಅದು ಮೂವತ್ತು ವರ್ಷಕ್ಕೊಮ್ಮೆ ಭೂಮಿಗೂ ಬರುತ್ತಿದೆ ಎಂಬ ವಿಷಯ ಆಧುನಿಕವಿಜ್ಞಾನಿಗಳಿಗೆ ತಿಳಿದಿಲ್ಲವೆಂದರೆ, ಅವರಿಗಿಂತ ದಡ್ಡರಿದ್ದಾರೆಯೇ?  ಅವರು ಅದನ್ನು ತಿಳಿದು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾದ್ದು ಅವಶ್ಯಕವಲ್ಲವೇ?  ಅದು ಈಗಿನ 'ಅವೈಜ್ಞಾನಿಕ'ವಿಜ್ಞಾನಲೋಕದಲ್ಲಿ ಕ್ರಾಂತಿಯನ್ನೇ ಎಬ್ಬಿಸಬಹುದಲ್ಲವೇ?  ಅದಕ್ಕೆ ತಕ್ಕ ಆಕರಗಳನ್ನು ಅವರಿಗೆ ನೀಡಿ ಲೋಕೋಪಕಾರ ಮಾಡುವುದು 'ವೈಜ್ಞಾನಿಕ ಜ್ಯೋತಿಷ್ಯ'ವನ್ನು ಅರಿತವರ ಕರ್ತವ್ಯವಲ್ಲವೇ?  ಆದರೆ ಈ ಪ್ರಶ್ನೆಯೂ ನಮ್ಮ 'ನಂಬಿಕೆ'ಗಳ, ಸಂಪ್ರದಾಯ-ಪದ್ಧತಿಗಳ ಲೇವಡಿಯಂತೆ ಕಂಡರೆ ಏನು ಮಾಡಬೇಕು?  ಕೊರೋನಾವೈರಸು, ಶನಿಗ್ರಹದಲ್ಲಿ ಕೊರೋನಾ ವಾಸ ಇವು ಯಾವತ್ತೂ ನಮ್ಮ ಸಾಂಪ್ರದಾಯಿಕ ಸನಾತನ ನಂಬಿಕೆಗಳ ಭಾಗವಾಗಿರಲೇ ಇಲ್ಲ, ಕೊರೋನಾ ವೈರಸ್ಸು ಮಾಧ್ಯಮಗಳಲ್ಲಿ ಸದ್ದುಮಾಡತೊಡಗಿದ ಮೇಲೆ ಮೊನ್ನೆಮೊನ್ನೆ ಹುಟ್ಟಿಕೊಂಡ ನಂಬಿಕೆಯಿದು.  ಇದನ್ನೂ ಸನಾತನಧರ್ಮದ ಬುಟ್ಟಿಯಲ್ಲಿ ಸೇರಿಸಿ ಕೈಮುಗಿಯಬೇಕೇ?

ನಮ್ಮ ಧರ್ಮ, ಆಚಾರವಿಚಾರ, ಸಂಪ್ರದಾಯ, ಮತಾಚರಣೆಗಳನ್ನು ನೆಚ್ಚಿ ಆಚರಿಸಲು ನಮಗೆ ನಿಜಕ್ಕೂ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ಆಚರಣೆಗಳಲ್ಲಿ ವಿಜ್ಞಾನವಿದೆಯೇ?  ಸಂತೋಷ, ಅದರಿಂದ ಏನೋ ಒಳ್ಳೆಯದು ಆದೀತು.  ವಿಜ್ಞಾನವಿಲ್ಲವೇ?  ಅಡ್ಡಿಯಿಲ್ಲ, ನಾವು ಕುಳಿತಿರುವುದು ಲ್ಯಾಬಿನಲ್ಲಲ್ಲ, ಪೂಜಾಗೃಹದೊಳಗೆ.  ಇಲ್ಲಿ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ನಮ್ಮ ನಂಬಿಕೆ ಆಚರಣೆಗಳು ಪರಪೀಡಕವಲ್ಲದಿದ್ದರೆ, ಸ್ವಹಾನಿಕಾರಕವಲ್ಲದಿದ್ದರೆ ಆಯ್ತು.  ನಿರಪಾಯಕಾರಿಯಾದ ನಂಬಿಕೆಗಳು ಬದುಕಿಗೊಂದಷ್ಟು ಶಿಸ್ತು, ಸೌಂದರ್ಯ, ಭರವಸೆ, ನೆಮ್ಮದಿಗಳನ್ನು ತರುವುದಾದರೆ ಅವುಗಳನ್ನು ಹಾಳುಮಾಡಲು ಹಾಳು ವಿಜ್ಞಾನಕ್ಕೇಕೆ ಅವಕಾಶ ನೀಡಬೇಕು?  ಎಲ್ಲವನ್ನೂ ತ್ಯಜಿಸಿ ನಿಂತ ಗೊಮ್ಮಟನನ್ನು ನೋಡಲು ಕೋಲೂರಿಕೊಂಡು ಬರಿಗಾಲಿನಲ್ಲಿ ವಿಂಧ್ಯಗಿರಿಯನ್ನೇರುವ ವೃದ್ಧದಂಪತಿಯನ್ನು ನೋಡಿದರೆ ಕೈಗಳು ತಾವೇ ತಾವಾಗಿ ಮುಗಿಯುತ್ತವೆ, ವೈಜ್ಞಾನಿಕ ಆವಿಷ್ಕಾರವಾದ ಕೇಬಲ್ ಕಾರಿನಲ್ಲಿ ಕುಳಿತು ಸುಯ್ಯನೆ ಗೊಮ್ಮಟನ ನೆತ್ತಿಯ ಮೇಲೇ ಇಳಿಯುವ ಕಟ್ಟುಮಸ್ತಾದ ತರುಣರನ್ನು ಕಂಡರೆ ಅಲ್ಲ.  ಮೊದಲ ಚಿತ್ರದಲ್ಲಿ ನಮಗೆ ಕಂಡದ್ದು ಶ್ರದ್ಧೆ.  ಎರಡನೆಯದರಲ್ಲಿ ಕಂಡದ್ದು ವಿಜ್ಞಾನದ ಅಟಾಟೋಪ. 

ಇದು ಖೊಟ್ಟಿ ವಿಜ್ಞಾನದ ಮಾತಾಯಿತು.  ಇನ್ನು ಮೂಢನಂಬಿಕೆಗಳ ವಿಷಯ ಬೇರೆ.  ಅವು ಕೆಲವೊಮ್ಮೆ ಅಪಾಯಕಾರಿ, ಅಮಾನವೀಯ ಕೂಡ.  ಸನಾತನಧರ್ಮವೆಂಬ ಹಣ್ಣಿನ ಬುಟ್ಟಿಯಲ್ಲಿ ಮೂಢನಂಬಿಕೆಗಳು ಕೊಳೆತ ಹಣ್ಣುಗಳಾದರೆ, ಮೇಲೆ ವಿವರಿಸಿದ ರೀತಿಯ ಖೊಟ್ಟಿ ವಿಜ್ಞಾನ ಪ್ಲಾಸ್ಟಿಕ್ ಹಣ್ಣು.  ಕೊಳೆತ ಹಣ್ಣು ಇಡೀ ಬುಟ್ಟಿಯನ್ನೇ ಕೊಳೆಸಿಬಿಡಬಲ್ಲುದು.  ಪ್ಲಾಸ್ಟಿಕ್ ಹಣ್ಣು ಕ್ಯಾನ್ಸರ್ ತರಬಲ್ಲುದು, ತಿಂದರೆ ಇನ್ನೂ ಏನೇನನ್ನೋ ತರಬಲ್ಲುದು.  ಈ ಕೊಳೆತ/ಖೊಟ್ಟಿ ಹಣ್ಣುಗಳನ್ನು ನಿಜವಾದ ತಾಜಾ ಹಣ್ಣುಗಳಿಂದ ಬೇರ್ಪಡಿಸಿ ತೆಗೆದೊಗೆಯಲು ಬೇಕಾದ್ದು ವಿಜ್ಞಾನವಲ್ಲ, ವೈಜ್ಞಾನಿಕದೃಷ್ಟಿ.  ಧರ್ಮಕ್ಕೆ ಬೆಂಬಲ ನೀಡಬೇಕಾದ್ದು ಈ ವೈಜ್ಞಾನಿಕದೃಷ್ಟಿಯೇ ಹೊರತು, ವಿಜ್ಞಾನವಲ್ಲ. 

ಇರಲಿ, ಹಾಗಿದ್ದರೆ ನಮ್ಮಲ್ಲಿ ವಿಜ್ಞಾನ ಇರಲೇ ಇಲ್ಲವೇ?  ಏಕಿಲ್ಲ, ವೈಜ್ಞಾನಿಕರ, ಗಣಿತಜ್ಞರ, ದ್ರಷ್ಟಾರರ ಪರಂಪರೆಯೇ ನಮ್ಮಲ್ಲಿದೆ.  ಹಲವು ಆವಿಷ್ಕಾರಗಳಲ್ಲಿ, ವಾಸ್ತುಗಳಲ್ಲಿ, ಆಚರಣೆಗಳಲ್ಲಿ ಇವು ಎದ್ದು ಕಾಣುತ್ತವೆ ಕೂಡ.  ಕೆಲವು ನಮ್ಮ ಇವತ್ತಿನ 'ಜ್ಞಾನ'ಕ್ಕೆ ಅರ್ಥವಾಗುತ್ತವೆ, ಕೆಲವು ಅರ್ಥವಾಗುವುದಿಲ್ಲ.  ಜೊತೆಗೆ ಅನೇಕ ವಿಷಯಗಳ ಮೇಲೆ ಅರ್ಥಹೀನ ಕಂದಾಚಾರಗಳ ಪಾಚಿಯೂ ಬೆಳೆದಿದೆ.  ಯಾವುದರಡಿಯಲ್ಲಿ ವಿಜ್ಞಾನವಿದೆ, ಯಾವುದರಡಿಯಲ್ಲಿ ಇಲ್ಲ ಎಂದು ಹೇಳುವುದು ಕಷ್ಟ.  ಕಂಡ ಅನೇಕ ವಿಷಯಗಳನ್ನೂ ವಿಜ್ಞಾನವೆಂದು ಗುರುತಿಸುವ ಸ್ಥಿತಿಯಲ್ಲಿ ನಾವಿಲ್ಲ.  ಬದಲಿಗೆ ಅನೇಕ ಕಂದಾಚಾರಗಳನ್ನು ವಿಜ್ಞಾನವೆಂದು ಎತ್ತಿ ಮೆರೆಸುವ ಗದ್ದಲವೇ ಆಧುನಿಕ ಧರ್ಮೋತ್ಸಾಹಿಗಳಲ್ಲಿ ಅತಿಯಾಗಿ ಕಾಣುತ್ತಿದೆ.  ಮರೆವು ಮನುಷ್ಯನಿಗೆ ಸಹಜ, ಮನುಕುಲಕ್ಕೆ ಸಹಜ.  ಸಾವಿರಾರು ವರ್ಷಗಳ ಅವಧಿಯಲ್ಲಿ ವಿಜ್ಞಾನವೂ ಸೇರಿದಂತೆ ಅನೇಕ ವಿಷಯಗಳನ್ನು ಮನುಕುಲ ಮರೆಯುತ್ತದೆ, ಗ್ರಂಥಗಳು ನಷ್ಟವಾಗುತ್ತವೆ, ಸಿಕ್ಕಿದ ಗ್ರಂಥಗಳ ಭಾಷೆಯೇ ಅರ್ಥವಾಗದಿರಬಹುದು ಕೂಡ.  ಈ ಚಕ್ರದಲ್ಲಿ, ಯಾವುದೋ ಕಾಲದಲ್ಲಿ ನಮಗೆ ಆಗಲೇ ಗೊತ್ತಿದ್ದ ವಿಷಯಗಳನ್ನು ನಾವು ಹೊಸದಾಗಿ 'ಕಂಡುಹಿಡಿ'ದದ್ದೂ ಉಂಟು; ಆಗ ಇಲ್ಲದ ಅನೇಕ ವಿಷಯಗಳನ್ನು ಇವತ್ತು ನಾವು ಮೊಟ್ಟಮೊದಲಿಗೆ ಕಂಡುಹಿಡಿದದ್ದೂ ಉಂಟು.  ಮತ್ತು ಸಾವಿರ ವರ್ಷಗಳ ಹಿಂದೆ ನಮಗೆ 'ತಿಳಿದಿದ್ದ' ಅನೇಕ ವಿಷಯಗಳನ್ನು ನಾವಿಂದು ಮರೆತಿರುವುದೂ ಉಂಟು - ಅವುಗಳಲ್ಲಿ ಹಲವು ನಮಗೆ ಇವತ್ತು ಮೂಢನಂಬಿಕೆಯಂತೆ ಕಂಡರೆ, ತಪ್ಪು ವಿಜ್ಞಾನದ್ದಲ್ಲ, ಅದನ್ನು ಮರೆತ ಮರವೆಯದು.  ಯಾರಿಗೆ ಗೊತ್ತು, ಆಗ ತಿಳಿದಿದ್ದ ಅನೇಕ ವಿಷಯಗಳು ಇವತ್ತಿಗೆ ಮರೆತಿರುವಂತೆಯೇ, ಇವತ್ತಿನ ವಿಜ್ಞಾನವೂ ಹೀಗೇ ಕೆಲವಾರು ಸಾವಿರ ವರ್ಷಗಳಲ್ಲಿ ಮನುಕುಲದ ಮರವೆಗೆ ಸಲ್ಲಬಹುದು (ನಾವು ಅದುವರೆಗೆ ಬದುಕಿದ್ದರೆ).  ಆಗ ಇವತ್ತಿನ ವೈಜ್ಞಾನಿಕಸತ್ಯವನ್ನು ಮರೆತ ಮುಂದಿನವರು ಅದನ್ನು 'ಮೂಢನಂಬಿಕೆ' ಎಂದು ಗೇಲಿಮಾಡಿದರೂ ಅಚ್ಚರಿಯಿಲ್ಲ.  ಹೀಗಾಗಿ ಹಿಂದಿನವರೆಲ್ಲ ಕಾಡುಮನುಷ್ಯರು, ನಾವೇ ಬೃಹಸ್ಪತಿಗಳ ಪೀಳಿಗೆ ಎಂದು ಹಿಗ್ಗುವುದು ಹಳೆಯದನ್ನು ಜರಿಯುವುದು ಎಷ್ಟು ಮೂರ್ಖತನವೋ, ಇವತ್ತಿನದೆಲ್ಲಾ ಸಾವಿರಾರು ವರ್ಷಗಳ ಹಿಂದೆಯೇ ಇತ್ತು, ಇವತ್ತಿನದು ಏನೂ ಇಲ್ಲವೆಂದು ಬೋಂಗುಬಿಡುವುದೂ ಅಷ್ಟೇ ಮೂರ್ಖತನ; ಹಾಗೆಯೇ ಇವತ್ತು ನಮಗೆ ಗೊತ್ತಿರುವ 'ಜ್ಞಾನ' ಇನ್ನು ಸಾವಿರಾರುವರ್ಷಗಳನಂತರವೂ ನಮ್ಮ ನೆನಪಿನಲ್ಲಿರುತ್ತದೆಂದು ನಂಬುವುದೂ!

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾsಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ ||

(ಹಳತೆಂಬುದೆಲ್ಲ ಬಲು ಸಾಧುವೆಂದಲ್ಲ ಹೊಸ
ಹೊಳಹೆಂಬ ಕಬ್ಬವದು ಕಗ್ಗವೇನಲ್ಲ
ಬಳಸಿ ಅರಿವನು ಸಂತ ಮೇಣ್ ಮೂಢ ತನ್ನರಿಮೆ
ಬೆಳೆಯಿರದೆ ಪರಬುದ್ಧಿಯಾಶ್ರಯಿಸುವ)

ಈ ಕವಿವಾಣಿ ಕೇವಲ ಕಾವ್ಯಕ್ಕಲ್ಲ, ಜೀವನಕ್ಕೂ ಅನ್ವಯಿಸುವಂಥದ್ದು.  ಅರಿತರೆ ಬದುಕು ಹಸನು.  "ನಮಗೆ ಮಾತ್ರ ಏಕೆ ಹೇಳುತ್ತೀರಿ, 'ಅವರಿಗೂ' ಹೇಳಿ" ಎಂಬ ಸವಾಲು ಕೆಲವೊಮ್ಮೆ (ಕೆಲ ಸಾಮಾಜಿಕ-ರಾಜಕೀಯ ಸಂದರ್ಭಗಳಲ್ಲಿ) ಸರಿಯಾದದ್ದೇ ಆದರೂ, ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಬಾಲಿಶವಾಗಬಲ್ಲುದು, ಇದರಿಂದ ನಷ್ಟ ನಮಗೇ ಹೊರತು ಆ ಇನ್ನೊಬ್ಬರಿಗಲ್ಲ.  ಈ ಸ್ವವಿಮರ್ಶನನಿರಾಕರಣೆ ನಾವು ಹೆಮ್ಮೆಯಿಂದ ಪ್ರತಿಪಾದಿಸುವ ಸನಾತನಧರ್ಮದ್ದು ಯಾವತ್ತೂ ಆಗಿರಲಿಲ್ಲ.

Monday, March 16, 2020

ಕೊರೋನಾ - ಭೀತಿ ಬೇಡ, ಮೌಢ್ಯ ಬೇಡ - ಹೊಣೆಯಿರಲಿ


ಪ್ರಪಂಚವೆಲ್ಲಾ ಕೊರೋನಾ ಭೀತಿಯಲ್ಲಿ ತತ್ತರಿಸುತ್ತಿರುವಾಗ, ನಾಲ್ಕು ಮೌಢ್ಯದ ಸುದ್ದಿಗಳು ನನ್ನ ಮುಂದಿವೆ.  ಇಂಥವು ನೂರಾರಿರಬಹುದು, ಈ ನಾಲ್ಕು ಪ್ರಾತಿನಿಧಿಕ:
  1. ದುಬೈನಿಂದ ಬಂದ ನಾಲ್ವರು ಯುವಕರು ತಮ್ಮ ಧರ್ಮದ ನೆಪವೊಡ್ಡಿ ಕೊರೋನಾ ಪರೀಕ್ಷೆಗೆ ನಿರಾಕರಿಸಿದ್ದಾರೆ
  2. ಅದೇನೋ "ಗೋಮೂತ್ರ ಪಾರ್ಟಿ"ಯಂತೆ - ಗೋಮೂತ್ರವಾದಿ ಸಂಘಟನೆಯೊಂದು ಏರ್ಪಡಿಸಿದ್ದ 'ಪಾರ್ಟಿ'ಯಲ್ಲಿ ಎಷ್ಟೆಷ್ಟೋ ಜನ ದೂರದೂರದಿಂದ ಬಂದು ಲೋಟಗಟ್ಟಲೆ ಗೋಮೂತ್ರವನ್ನು ಗಟಗಟನೆ ಕುಡಿದು, ಕೊರೋನಾ ವೈರಸ್ಸಿಗೆ ಪೂಜೆ ಮಾಡಿ "ಕೊರೋನಾ ಸಾಂತ್ ಹೋ ಜಾವ್" ಎಂದು ಘೋಷಣೆ ಕೂಗಿ ಗೆದ್ದೆವೆಂದುಕೊಂಡಿದ್ದಾರೆ - ಗೋಮೂತ್ರದಿಂದ ಕೊರೋನಾ ಕಂಬಿಕೀಳುತ್ತದೆಂದೂ, ಕೊರೋನಾ ಹಿಡಿದಿರುವ ಯಾರನ್ನೇ ಆಗಲಿ ತಮ್ಮ ಬಳಿ ಕರೆತಂದರೆ ತಾವು ಚಟಕ್ಕನೆ ಅವರನ್ನು ಗೋಮೂತ್ರದಿಂದಲೇ ಗುಣಪಡಿಸುತ್ತೇವೆಂದು ಸಂಘಟನೆಯ ಕೆಲವರು ಘಂಟಾಘೋಷವಾಗಿ ಭರವಸೆ ನೀಡಿದ್ದಾರೆ.
  3. ಇರಾನಿನ ಮುಲ್ಲಾ ಒಬ್ಬ, ಗುದದ್ವಾರಕ್ಕೆ ಕೆಲವು ಎಣ್ಣೆ ಹಚ್ಚಿದರೆ ಕೊರೋನಾ ಮಟಾಮಾಯವಾಗುತ್ತದೆಂದು 'ಕಂಡುಹಿಡಿದು', ಹಾಗೇ ಮಾಡುವಂತೆ ಕರೆಕೊಟ್ಟಿದ್ದಾನೆ. 
  4. ಯಾವುದನ್ನಾದರೂ ಸರೇ, 'ಓರಾಟ'ವೇ ಪರಿಹಾರವೆಂದು ತಿಳಿದಿರುವ ಡಾಕ್ಟರೊಬ್ಬ, ಕೊರೋನಾ ವಿರುದ್ಧ ಮುನ್ನೆಚ್ಚರಿಕೆಯಾಗಿ ಶಾಲೆ ಕಾಲೇಜು ಸಮಾರಂಭ ಮೊದಲಾದುವುಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರತಿಭಟಿಸಿ, ಜನ ಬೀದಿಗಿಳಿದು ಹೋರಾಡಬೇಕೆಂದು ಕರೆಕೊಟ್ಟಿದ್ದಾನೆ.

ಮೌಢ್ಯದ ನಾಲ್ಕು ಮುಖಗಳನ್ನು ನೋಡಿದ್ದಾಯಿತಲ್ಲ.  ಇನ್ನಿವನ್ನು ಆಯಾ ಪಂಥದ ಪರವಿರುವವರು, ವಿರುದ್ಧವಿರುವವರು ಹಂಚಿಕೊಂಡು ಮೆಚ್ಚುತ್ತಾ ಹೀಗಳೆಯುತ್ತಾ ಸಂಭ್ರಮಿಸುತ್ತಿದ್ದರೆ, ಇತ್ತ ಟೀವಿ ಚಾನಲ್ಲುಗಳು, ಈಗಿನ್ನೂ ದೇಶದೊಳಗೆ ಮೂಗಿಟ್ಟು ಹತ್ತು ಜನರನ್ನೂ ಕೊಂದಿಲ್ಲದ ವೈರಸ್ಸಿನ ಬಗ್ಗೆ "ಕೊರೋನಾ ಮರಣಮೃದಂಗ", "ಕೊರೋನಾ ಸಾವಿನ ತಮಟೆ" ಎಂದೆಲ್ಲಾ ರುಮ್ಮರುಮ್ಮನೆ ಮಾರಿತಮಟೆಯನ್ನು ಬಡಿಯುತ್ತಾ, ಬೀದಿಬೀದಿಯಲ್ಲೂ ನೂರಾರು ಹೆಣ ಬೀಳುವ ದೃಶ್ಯವನ್ನು ಕಲ್ಪಿಸಿಕೊಂಡು ಜೊಲ್ಲುಸುರಿಸುತ್ತಾ ಕುಣಿಯುತ್ತಿವೆ; ಸರ್ಕಾರವೋ, ಫೋನು ಮಾಡುವವರ ಕಿವಿಯೊಳಗೆಲ್ಲಾ ಕೆಹ್ಹು ಕೆಹ್ಹು ಎಂದು ಕೆಮ್ಮುತ್ತಾ, ಕೊರೋನಾಗಿಂತಾ ಈ ಕೊರೋನಾ ಜಾಗೃತಿಯ ಬಗೆಗೇ ಅಸಹ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಯಾರಿಗಾದರೂ ಅರ್ಜೆಂಟಾಗಿ ಕರೆ ಮಾಡಬೇಕು, ಅವರು ಫೋನೆತ್ತುತ್ತಿಲ್ಲ.  ಹೀಗೆ ಒಂದಿಪ್ಪತ್ತು ಕರೆ ಮಾಡಿದರೆ, ಪ್ರತಿ ಕರೆಯಲ್ಲೂ ಅರ್ಧರ್ಧ ನಿಮಿಷ ಇವರ ಕೊರೋನಾ ಕೆಮ್ಮು - ವಿಫಲವಾದ ಇಪ್ಪತ್ತು ಕರೆಗೆ ಹತ್ತು ನಿಮಿಷ ಕೆಮ್ಮಿನ ನಿನಾದ ಕೇಳುವುದರಲ್ಲೇ ಖತಂ.  ಸಹನೆ ಉಳಿದೀತಾದರೂ ಎಲ್ಲಿಂದ?

ಇನ್ನಿವೆಲ್ಲಾ ಗೊಂದಲ ಗದ್ದಲಗಳ ನಡುವೆಯೂ, ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ನೂರಾರು ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ವೈರಸ್ಸಿಗೆ ಮದ್ದರೆಯುತ್ತಿದ್ದಾರೆ, ಸಾವಿರಾರು ಜನ ವೈದ್ಯರು, ದಾದಿಯರು, ತಮ್ಮ ಜೀವವನ್ನೇ ಒತ್ತೆಯಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ಈಡುಪಟ್ಟಿದ್ದಾರೆ, ಸರ್ಕಾರ, ಸಾವಿರಾರು ಜನ ಸರ್ಕಾರೀ ಅಧಿಕಾರಿಗಳು, ಆರೋಗ್ಯಕಾರ್ಯಕರ್ತರು ಏರ್ಪೋರ್ಟುಗಳಲ್ಲಿ, ಸಾರ್ವಜನಿಕಸ್ಥಳಗಳಲ್ಲಿ ರೋಗ ಹರಡದಂತೆ ತಕ್ಕ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಹೆಣಗುತ್ತಿದ್ದಾರೆ.

ಇವರೆಲ್ಲರ ಶ್ರಮ ವ್ಯರ್ಥವಾಗಬಾರದೆಂದರೆ, ನಮ್ಮ ಈ ಗದ್ದಲ ಗೊಂದಲಗಳನ್ನು ಹತ್ತಿಕ್ಕಿ, ಕಿಂಚಿತ್ತಾದರೂ ಪ್ರಬುದ್ಧತೆ ತೋರುವುದು ನಮ್ಮೆಲ್ಲರ ಹೊಣೆ.  ಕೊರೋನಾ ಬಗ್ಗೆ ಜೋಕು ಮಾಡಿ ನಕ್ಕುಕೊಳ್ಳುವುದಕ್ಕೂ, ಮೌಢ್ಯವನ್ನು ಚಳುವಳಿಯೋಪಾದಿಯಲ್ಲಿ ಹರಡುವುದಕ್ಕೂ ವ್ಯತ್ಯಾಸವಿದೆ.  ಮೊದಲನೆಯದು ಮನಸ್ಸನ್ನು ಹಗುರಗೊಳಿಸಿ ಸುಸ್ಥಿತಿಯಲ್ಲಿಡಬಲ್ಲುದು, ಎರಡನೆಯದು ಇದ್ದ ಬುದ್ಧಿಯನ್ನೂ ಕೆಡಿಸಿ ಅನಾಹುತಕ್ಕೆಡೆಮಾಡಿಕೊಡಬಲ್ಲುದು.

ಅನಗತ್ಯವಾಗಿ ಎಲ್ಲಿಯೂ ಹೋಗದೇ, ಕೊರೋನಾ ಶಂಕೆಯಿರುವ ಕಡೆಗಂತೂ ತಲೆಯನ್ನೇ ಹಾಕದೇ ಸಾಧ್ಯವಾದಷ್ಟೂ ಮನೆಯಲ್ಲಿ ಕಾಲ ಕಳೆಯಲು ಇದು ಸುಸಮಯ.  ಕೊನೆಯ ಪಕ್ಷ ಮನೋರಂಜನೆ, ಊಟ-ತಿಂಡಿಗಳಾದರೂ ಮನೆಯಲ್ಲೇ ಆದರೆ ಅಷ್ಟರ ಮಟ್ಟಿಗೆ ಸಂಸಾರದ ಬಂಧ ಬಲಗೊಂಡಿತೆನ್ನಬೇಕು.  ಕೆಲಸಕ್ಕೆ ಹೋಗಲೇಬೇಕಾದವರಿಗೆ ವಿಧಿಯಿಲ್ಲ, ಮಾಸ್ಕು ಧರಿಸಿ, ಇದ್ದುದರಲ್ಲಿ ಹುಷಾರಾಗಿದ್ದರೆ ಆಯಿತು.  ಮಾಸ್ಕಿಗಾಗಿ ಅಂಗಡಿಯ ಮುಂದೆ ನೂಕುನುಗ್ಗಲು ಬೇಡ.  ಸ್ವಚ್ಛವಾದ ಬಟ್ಟೆಯಿಂದ ಮನೆಯಲ್ಲಿ ಮಾಸ್ಕು ಮಾಡಿಳ್ಳುವುದು ಕಷ್ಟವಲ್ಲ - ಮಾಸ್ಕೇನು ಕೊರೋನಾದಿಂದ ರಕ್ಷಣೆ ನೀಡುವುದಿಲ್ಲ, ಕೆಮ್ಮಿದಾಗ ಸೀನಿದಾಗ ಅದು ಬಲವಾಗಿ ವಾತಾವರಣದೊಳಗೆ ಉಗ್ಗದಂತೆ ತಡೆಯುತ್ತದೆ, ಹೊರಗಿರುವ ವೈರಸ್ಸು ಸಲೀಸಾಗಿ ಮೂಗಿನೊಳಗೆ ನುಗ್ಗಲು ಕೆಲಮಟ್ಟಿಗೆ ತಡೆಯೊಡ್ಡುತ್ತದೆ - ಅಷ್ಟುಮಟ್ಟಿಗೆ ಹರಡುವಿಕೆಯನ್ನು ನಿಧಾನ ಮಾಡುತ್ತದಷ್ಟೇ.

ತಜ್ಞರ ಸಲಹೆ ಎಲ್ಲಕ್ಕಿಂತ ಮುಖ್ಯ, ಸ್ವವೈದ್ಯ ಬೇಡ.  ತುಳಸಿ, ಶುಂಠಿ, ಮೆಣಸು, ಬೆಳ್ಳುಳ್ಳಿ, ಅಮೃತಬಳ್ಳಿ, ಬೇವು, ಪರಂಗಿ ಎಲೆ ಇವೆಲ್ಲಾ ಸಾಮಾನ್ಯವಾಗಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆಂಬುದು ಹೌದು, ಹೆಚ್ಚಿದ ರೋಗನಿರೋಧಕಶಕ್ತಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿಯನ್ನೂ ಕೆಲಮಟ್ಟಿಗೆ ನೀಡಬಹುದು - "ಬಹುದು" ಅಷ್ಟೇ.  ಇವಾವುವೂ ನಿರ್ದಿಷ್ಟವಾಗಿ ಕೊರೋನಾ ವೈರಸ್ಸಿಗೆ ಮದ್ದೆಂಬ ಸಂಗತಿ ದೃಢಪಟ್ಟಿಲ್ಲ.  ಸಾಮಾನ್ಯ ಹಿತದೃಷ್ಟಿಯಿಂದ ಇವನ್ನು ಬಳಸಿದರೆ ನಷ್ಟವೇನೂ ಇಲ್ಲ.  ಸಾಂಪ್ರದಾಯಿಕ ಮನೆಮದ್ದು ಎಷ್ಟೋ ವಿಷಯಗಳಲ್ಲಿ ರಾಮಬಾಣವೆನ್ನುವುದು ಸತ್ಯ (ಬಳಸಿದ್ದರಿಂದ ಒಳ್ಳೆಯದಾದರೆ ಸಂತೋಷವೇ), ಆದರೆ ಬಳಸಿದ ಮಾತ್ರಕ್ಕೆ ನಾನು ಕೊರೋನಾದಿಂದ ಸುರಕ್ಷಿತ ಎಂಬ ಭ್ರಮೆ ಬೇಡ, ತಕ್ಕ ಪರೀಕ್ಷೆ/ಚಿಕಿತ್ಸೆಗಳನ್ನು ಕಡೆಗಣಿಸುವುದು ಬೇಡ.

ಸೋಂಕನ್ನು ತಡೆಗಟ್ಟಲು, ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕೆಂಬುದನ್ನು ಸರ್ಕಾರ ಮತ್ತಿತರ ಸಂಸ್ಥೆಗಳು ವಿಶದವಾಗಿ ತಿಳಿಸಿವೆ.  ಅದನ್ನು ಅನುಸರಿಸಿದರೆ ಸಾಕು.  ಅನಧಿಕೃತಮೂಲಗಳಿಂದ ಬರುವ ಯಾವ ವದಂತಿಯನ್ನೂ 'ಪರಿಹಾರ'ಗಳನ್ನೂ ನಂಬಬೇಡಿ.  ಮೇಲೆ ಹೇಳಿದ, ಎಣ್ಣೆಬಿಟ್ಟುಕೊಳ್ಳುವ ಕೆಲಸವೂ, ಗೋಮೂತ್ರ ಕುಡಿಯುವ ಕೆಲಸವೂ ಹೇಳುವವರೂ ಯಾರೂ ವೈದ್ಯರೂ ಅಲ್ಲ, ಕೊನೆಗೆ ಆಯುರ್ವೇದ/ಯುನಾನಿ ತಜ್ಞರೂ ಅಲ್ಲವೆಂಬುದು ನೆನಪಿರಲಿ.  ಗೋಮೂತ್ರ/ಸೆಗಣಿ ಒಂದು ಮಟ್ಟಕ್ಕೆ ಕ್ರಿಮಿನಾಶಕವೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಆದರೆ ಅದೇನಿದ್ದರೂ ಹೊರಗೆ, ದೇಹದೊಳಗೆ ತೆಗೆದುಕೊಳ್ಳಲಿಕ್ಕಲ್ಲ.  ಪಂಚಗವ್ಯದಂತಹ ಧಾರ್ಮಿಕ ಮಿಶ್ರಣಗಳೂ ಶಾಸ್ತ್ರಕ್ಕಾಗಿ ಒಂದೆರಡು ಹನಿಯಷ್ಟು ಗೋಮೂತ್ರವನ್ನು ಬಳಸುತ್ತವೆಯೇ ಹೊರತು, ಲೋಟಗಟ್ಟಲೆ ಚೊಂಬುಗಟ್ತಲೆ ಗೋಮೂತ್ರ ಕುಡಿಯುವುದು ಒಳ್ಳೆಯದೆಂದು ಯಾವ ಗ್ರಂಥದಲ್ಲೂ ಹೇಳಿದಂತಿಲ್ಲ.  ಹಾಗೊಮ್ಮೆ ಹೇಳಿದ್ದರೂ, ವೈಜ್ಞಾನಿಕವಾಗಿ ಸ್ಥಿರಪಟ್ಟಲ್ಲದೇ ಅದನ್ನು ನಂಬುವಂತಿಲ್ಲ (ಶಿಖಾ-ಯಜ್ಞೋಪವೀತ, ನಮಸ್ಕಾರಗಳಂತಹ, ಶ್ರದ್ಧೆ ನಂಬಿಕೆಗಳೇ ಆಧಾರವಾದ ವಿಷಯಗಳಿಗೆ, ಬೇಕಿಲ್ಲದಿದ್ದರೂ ಯಾವಯಾವುದೋ ಸುಳ್ಳು ವೈಜ್ಞಾನಿಕ ಕಾರಣಗಳನ್ನು ಪುಂಖಾನುಪುಂಖವಾಗಿ ಉದುರಿಸುವವರು, ಔಷಧವಾಗಿ ಹೊಟ್ಟೆಗೆ ತೆಗೆದುಕೊಳ್ಳಬೇಕೆನ್ನುವ ಗಂಜಲ ಮೊದಲಾದುವುಗಳನ್ನು ವೈಜ್ಞಾನಿಕವಾಗಿ ವಿವರಿಸುವ ಗೋಜಿಗೆ ಹೋಗುವುದಿಲ್ಲ) ಧಾರ್ಮಿಕ ಆಚರಣೆಗಳು, ಅಮಾನವೀಯವಲ್ಲದಿದ್ದರೆ, ಯಾವಾಗಲೂ ಗೌರವನೀಯ.  ಆದರೆ ಅವು ನಂಬಿಕೆಯ ಮಟ್ಟದಲ್ಲಿದ್ದರೆ ಚೆನ್ನ (ಕೆಲನಂಬಿಕೆಗಳು ಅನೇಕ ಬಾರಿ ಕೆಲಸ ಮಾಡುತ್ತವೆ ಎಂಬುದು ನನ್ನ ನಂಬಿಕೆ ಕೂಡ).  ಆದರೆ ನಮ್ಮ ನಂಬಿಕೆಯಿಂದ ಇತರರಿಗೆ ತೊಂದರೆಯಾಗಬಾರದು, ಇತರರು ದಾರಿತಪ್ಪಬಾರದು ಎನ್ನುವುದು ಮುಖ್ಯ.  ಕೊರೋನಾ ವಿರುದ್ಧ ತಿಮ್ಮಪ್ಪನಿಗೆ ಮುಡಿಪು ಕಟ್ಟಿಡುತ್ತೀರಾ, ತೋಟದ ಭೂತನಿಗೆ ಕಾಣಿಕೆ ಹಾಕುತ್ತೀರಾ, ದರ್ಗಾದಲ್ಲಿ ಸಕ್ಕರೆ ಹಂಚುತ್ತೀರಾ, ವೇಲಾಂಗಣಿಗೆ ಹರಕೆ ಹೊರುತ್ತೀರಾ, ಅದು ನಿಮ್ಮ ನಂಬಿಕೆ, ಗೌರವಿಸೋಣ, ನಿಮಗೆ ಶುಭವಾಗಲಿ; ಆದರೆ ಅದನ್ನು ಬಿಟ್ಟು ಬೇರೇನನ್ನೂ ನೀವು ಮಾಡುವುದಿಲ್ಲವೇ, ಸರಿ, ನಿಮ್ಮಿಷ್ಟ, ನಿಮ್ಮ ಹಣೆಯಬರಹ - ನಿಮ್ಮ ನಂಬಿಕೆ ನಿಮ್ಮನ್ನು ಕಾಪಾಡುವವರೆಗೂ ಬಾಗಿಲು ಹಾಕಿಕೊಂಡು ಮನೆಯಲ್ಲಿರಿ, ಹೊರಬಂದು ನಿಮ್ಮ ಕೇವಲ'ನಂಬಿಕೆ'ಯ ಫಲವನ್ನು ಅನ್ಯರಿಗೆ ಹರಡಬೇಡಿ.  ನಾನು ಒಂದು ಲೀಟರು ಗಂಜಲ ಕುಡಿದಿದ್ದೇನೆ, ಕೆಳಕ್ಕೆ ಎಣ್ಣೆ ಹಚ್ಚಿಕೊಂಡಿದ್ದೇನೆ, ನನ್ನ ಸುತ್ತಾ ಕೊರೋನಾ ಸುಳಿಯುವುದೂ ಇಲ್ಲ ಎಂಬೆಲ್ಲ ಭ್ರಮೆ ನಿಮ್ಮದಾಗಿದ್ದರೆ, ನಿಮಗೆ ನಮಸ್ಕಾರ, ಬೋನು ಬಿಟ್ಟು ಹೊರಗೆ ಬರಲೇಬೇಡಿ 🙏🙏🙏

[ಈ ಲೇಖನದ ಇಂಗ್ಲಿಷ್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

Sunday, March 1, 2020

ಪ್ರಶಸ್ತಂ ಶೌಚಚಿಂತನಮ್

ಇದೇನು, ಭಾನುವಾರ ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ, ಇವನಿಗೇನು ಬಂತು ಎಂದುಕೊಳ್ಳುತ್ತಿದ್ದೀರೋ.  ಅಂದುಕೊಳ್ಳಿ, ನನಗೇನೂ ಅಚ್ಚರಿಯಿಲ್ಲ, ಬೇಸರವೂ ಇಲ್ಲ.  ದಿನನಿತ್ಯದ ಗಡಿಬಿಡಿಯ ಬದುಕಿನಲ್ಲಿ ಟಾಯ್ಲೆಟ್ಟಿನಲ್ಲಿ ಒಂದರ್ಧ ಗಂಟೆಯಷ್ಟೇ ಕೂತು ಎದ್ದು ಬರುವುದಾಗಿರುತ್ತದೆ, ಭಾನುವಾರವೂ ಕೆಲಕಾಲ ನಿರಾಳವಾಗಿ ಕೂರಬಾರದೆಂದರೆ ಹೇಗೆ?  

ಹಿರಿಯರಾದ ಭೈರವಿ ಕೆಂಪೇಗೌಡರ ಅದ್ಭುತ ಗಾಯನವನ್ನು ಧ್ವನಿಮುದ್ರಿಸಬೇಕೆಂದು ಆಗಿನ ಗ್ರಾಮಾಫೋನ್ ಸಂಸ್ಥೆ ಅವರಲ್ಲಿ ವಿನಂತಿಸಿತಂತೆ.  "ಎಷ್ಟು ಸಮಯ ಹಾಡಬೇಕು?" - ಕೆಂಪೇಗೌಡರ ಪ್ರಶ್ನೆ.  "ಐದು ನಿಮಿಷ" - ಗ್ರಾಮಾಫೋನ್ ಕಂಪನಿಯ ಉತ್ತರ.  "ನಾನು ಲಹರಿಗೆ ಬರುವುದಕ್ಕೇ ಅರ್ಧಗಂಟೆ ಬೇಕು, ಆಗೊಲ್ಲ" ಎಂದು ಉತ್ತರಿಸಿ ಎದ್ದು ನಡೆದರಂತೆ ಕೆಂಪೇಗೌಡರು.  ಸಂಗೀತವೇನೋ "ನಾಭಿ ಹೃತ್ಕಂಠರಸನ ನಾಸಾದುಲಯಂದು" ಬರುವಂಥದ್ದು.  ಅದಕ್ಕೇ ಲಹರಿಗೆ ಬರುವುದಕ್ಕೆ ಅರ್ಧಗಂಟೆ ಬೇಕೆಂದರೆ, ಶೌಚವೆಂಬುದು ಅದಕ್ಕಿಂತ 'ಮೂಲ'ಭೂತ ವಿಚಾರ - ಮನೋಧರ್ಮವೊಂದಕ್ಕೇ ಅಲ್ಲ, ದೇಹಧರ್ಮಕ್ಕೂ ಸಂಬಂಧಿಸಿದ್ದು - ಅಡಿಗರು ಹೇಳುವಂತೆ "ಪಾತಾಳದಾಳದಿಂದೆದ್ದುಬರುವ ವಿಕಾರ"ವೆಂದೇ ಇಟ್ಟುಕೊಳ್ಳೋಣ.  ಅದಕ್ಕೇನು ಕಡಿಮೆ ಸಮಯ ಬೇಕಾದೀತೇ?  ಬ್ರಹ್ಮಶೌಚದ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಕೇಳಿ, ಹೇಳುತ್ತೇನೆ: 

ಬಿಡುವಿಲ್ಲದೇ ಜಗತ್ಸೃಷ್ಟಿಯಲ್ಲಿ ತೊಡಗಿದ್ದ ಬ್ರಹ್ಮದೇವರಿಗೆ ಇದ್ದಕ್ಕಿದ್ದಂತೆ 'ವಿಸರ್ಜನೆ'ಯ ಲಹರಿ ಬಂದು ಎದ್ದು ಹೊರಟರಂತೆ.  ಇನ್ನೇನು ಶೌಚಗೃಹದೊಳಗೆ ಕಾಲಿಡಬೇಕು, ಅಷ್ಟರಲ್ಲಿ ಪರಿಚಾರಕನು ಬಂದು "ರಾಮಜನನವಾಯಿತು ಸ್ವಾಮಿ" ಎಂದು ಸುದ್ದಿ ಮುಟ್ಟಿಸಿದನಂತೆ.  ಸರಿ ಎಂದು ಬ್ರಹ್ಮದೇವರು ಒಳಗೆ ಹೋದರು.  ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಸರಿಯಾಗಿ ಮತ್ತೊಬ್ಬ ಪರಿಚಾರಕ ಸುದ್ದಿ ಮುಟ್ಟಿಸಿದನಂತೆ.  "ರಾಮಪಟ್ಟಾಭಿಷೇಕವಾಯಿತು ಸ್ವಾಮಿ".  ಬ್ರಹ್ಮ ನಿರ್ಲಿಪ್ತನಾಗಿ, ಅದಕ್ಕೂ "ಸರಿ" ಎಂದು ಹೇಳಿ, ಮತ್ತೆ ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡನಂತೆ.  ನೋಡಿ, ರಾಮ ಹುಟ್ಟಿದಾಗ ಒಳಹೋದ ಬ್ರಹ್ಮ ಹೊರಬರುವ ಹೊತ್ತಿಗೆ ಇಡೀ ರಾಮಾಯಣವೇ ಮುಗಿದುಹೋಗಿತ್ತು.  ಇದು ಬ್ರಹ್ಮಶೌಚ.  ಇಡೀ ಜಗತ್ತಿನ ಸೃಷ್ಟಿಯ ಹೊಣೆಹೊತ್ತ ಬ್ರಹ್ಮನೇ ಶೌಚದಲ್ಲಿ ದಶಕವೆರಡು ದಶಕಗಳನ್ನೇ ಕಳೆಯಬಹುದಾದರೆ ಅಂತಹ ಯಾವ ಹೊಣೆಯೂ ಇಲ್ಲದ ಹುಲುಮಾನವರು ಇನ್ನೆಷ್ಟು ದಶಕಗಳನ್ನು ಶತಕಗಳನ್ನು ಕಳೆಯಬಾರದು.  ರಾಮಾಯಣದಂತೆ ಇದೊಂದು ಶೌಚಾಯನವೇ ಆದೀತು.  ಆದರೆ ನನ್ನ ಈ ಚಿಂತನೆಗೆ ಚಿಂತನೆಯೆಂದು ಕರೆದಿದ್ದೇನೆಯೇ ಹೊರತು ಶೌಚಾಯನವೆಂದಿಲ್ಲ.  ರಸಾಯನಕ್ಕೆ ಪ್ರಾಸಗೊಡುವ ಪದವನ್ನು ಇದಕ್ಕೆ ಹೊಂದಿಸಿ, ರಸಾಯನದ ರುಚಿ ಕೆಡಿಸಲಾರೆ.  ಶೌಚಪುರಾಣವೆಂದರೂ ನಡೆಯುತ್ತಿತ್ತು (ಅಷ್ಟೇಕೆ, ಸರಿಯಾದ ಸಮಯದಲ್ಲಿ ತಕ್ಕ ಎಡೆ ಸಿಕ್ಕದೇ ಕೈಮೀರಿದರೆ ಉದ್ದಕ್ಕೂ 'ಶೌಚಚರಿತೆ'ಯೂ ಆದೀತು, ’ಉಚ್ಚಾಟ’ನೆಯೂ ಆದೀತು).  ಶೌಚವೇನೋ ಪುರಾತನವಾದದ್ದೇ, ಪುರಾಣವೆನಿಸಿಕೊಳ್ಳಲು ಬೇಕಾದ ಹಳಮೆ ಅದಕ್ಕಿದೆ,  ನಮ್ಮಲ್ಲಿ ಶೌಚವು ಚಿಂತನೆಯ ವಿಷಯವಾದದ್ದು ಇತಿಹಾಸದಲ್ಲಿ ತೀರ ಇತ್ತೀಚಿಗೆ, ಒಂದೆರಡು ಗಂಟೆಗಳ ಹಿಂದೆ ಎನ್ನಿ. 

ನೋಡಿ, ಏನೋ ಹೇಳಲು ಹೋಗಿ ಏನೋ ಹೇಳತೊಡಗಿದೆ.  ನಿಮ್ಮ ತಕರಾರು ಶೌಚದ ಬಗೆಗಾಗಲೀ ಅವರವರ ಮನೆಯಲ್ಲಿ ಅವರವರು ಶೌಚಕ್ಕಾಗಿ ತೆಗೆದುಕೊಳ್ಳುವ ಸಮಯದ ಬಗೆಗಾಗಲೀ ಅಲ್ಲವೆಂದು ನನಗೆ ಗೊತ್ತು. ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ ಎಂಬುದು ನಿಮ್ಮ ತಕರಾರು ಅಲ್ಲವೇ?  ಅದನ್ನೇ ಹೇಳಲು ಹೊರಟೆ, ಆದರೆ ಈ ಶೌಚವೆಂಬುದು ಭಾವನಾತ್ಮಕವಿಷಯ ನೋಡಿ, ಅದರ ಸಮರ್ಥನೆಗಿಳಿದುಬಿಟ್ಟೆ, ಇರಲಿ.  ವಿಷಯಕ್ಕೆ ಬರೋಣ.  ನಮ್ಮಲ್ಲಿ ಇದೊಂದು ದೊಡ್ಡ ಮೌಢ್ಯ, ದೈವಚಿಂತನೆಗೂ ಶೌಚಚಿಂತನೆಗೂ ಅದು ಹೇಗೋ ಥಳಕು ಹಾಕುವುದು.  ಶೌಚದಲ್ಲಿ ದೈವಚಿಂತನೆ ಮಾಡಬಾರದೆಂದಾಗಲೀ, ದೈವಸಾನ್ನಿಧ್ಯದಲ್ಲಿ ಶೌಚಚಿಂತನೆ (ಕೊನೆಯಪಕ್ಷ ಚಿಂತೆ, ಕೆಲವೊಮ್ಮೆ ಅನಿವಾರ್ಯವಾಗಿ) ಮಾಡಬಾರದೆಂದಾಗಲೀ ಇದೆಯೇ?  ಶೌಚಾಶೌಚಗಳು ಪ್ರಕೃತಿವ್ಯಾಪಾರ, ಪರಮಾತ್ಮನಿಂದಲೇ ನಿರ್ಮಿಸಲ್ಪಟ್ಟಂಥವು.  ಚಿಂತನೆಯನ್ನೇನೋ ಮಾಡದಿದ್ದೇವು, ಆದರೆ ಚಿಂತೆ?  ನಮ್ಮ ಕೈಯಲ್ಲಿದೆಯೇ?  ಬಂದರೆ ಮುಗಿಯಿತು.  ದೈವಕ್ಕೆ ಅಪಚಾರವಾಗದಂತೆ ಅಲ್ಲಿಂದ ಕಳಚಿಕೊಳ್ಳುವುದು ಹೇಗೆಂಬ ಚಿಂತೆ ಬಾಧಿಸದೇ ಬಿಟ್ಟೀತೇ?  ಪರಮಾತ್ಮನೇನೋ ಭಯಕೃದ್ಭಯನಾಶನ, ಹೌದು.  ಆದರೆ ಈ ಕ್ಷಣಕ್ಕಂತೂ ಆತ ಭಯಕೃತ್ ಅಷ್ಟೇ.  ಭಯನಾಶನನೂ ಹೌದೆಂಬ ಮಾತು ನಮ್ಮ ಪ್ರಜ್ಞೆಯ ಮೇಲ್ಪದರದಲ್ಲಿದೆಯೇ ವಿನಾ ನಂಬಿಕೆಯಾಗಿ ಬೇರು ಬಿಟ್ಟಿಲ್ಲ; ಅವಸರವನ್ನು ರೂಪಿಸಿದ ಪರಮಾತ್ಮನು ಅದಕ್ಕೊಂದು ದಾರಿಯನ್ನೂ ಕಲ್ಪಿಸುತ್ತಾನೆಂದು ಮನಸ್ಸು ನಂಬಲೊಲ್ಲದು.  ನಂಬಿದರೂ ಆ ಮನಸ್ಸಿನ ಹಿಡಿತದಲ್ಲಿಲ್ಲದ ದೇಹ ನಂಬಲೊಲ್ಲದು.  ತನ್ನದೆಂಬುದನ್ನೆಲ್ಲವನ್ನೂ ಕೈಬಿಟ್ಟು "ಮಾನಾಭಿಮಾನ ನಿನ್ನದೋ" ಎಂದು ದ್ರೌಪದಿಯಂತೆ ಎರಡೂ ಕೈಗಳನ್ನು ಎತ್ತಲೊಲ್ಲದು.  ಬದಲಿಗೆ ಎರಡು ಬೆರಳನ್ನಷ್ಟೇ ಎತ್ತುತ್ತದೆ.  ಬಾಧೆಗೊಳಪಟ್ಟ ದೇಹದ್ದು ದ್ವೈತಚಿಂತನೆ - ಪರಮಾತ್ಮನೇ ಬೇರೆ, ಈ ಸಂಕಟವೇ ಬೇರೆ, ನೀನೇ ಬೇಗ ಮುಕ್ತಿಯ ದಾರಿ ಹುಡುಕಿಕೋ ಎನ್ನುತ್ತದೆ.  ಏನು ಮಾಡುತ್ತೀರಿ?  ಪರಮಾತ್ಮನನ್ನು ಈ ವಿಷಯದಲ್ಲಿ ದೂರುವಂತಿಲ್ಲ.  ಪ್ರಕೃತಿ ಪರಮಾತ್ಮನ ಸೃಷ್ಟಿ, ಅದರ ವಿಕೃತಿ ನಮ್ಮದೇ ಸೃಷ್ಟಿಯಷ್ಟೇ?  ದೇಹದಲ್ಲೇನೋ ಹೊರದಾರಿಯನ್ನು ಪರಮಾತ್ಮನು ಅಚ್ಚುಕಟ್ಟಾಗಿ ನಿರ್ಮಿಸಿ ಕೈತೊಳೆದುಕೊಂಡಿದ್ದಾನೆ (ಮತ್ತೆ?  ಕೈ ತೊಳೆಯಬೇಡವೇ).  ಆದರೆ ಅಲ್ಲಿ 'ಹೋಗ'ಬಾರದು ಇಲ್ಲಿ ಹೋಗಬಾರದು ಎಂಬ ಕಟ್ಟುಪಾಡು ನಮ್ಮದೇ ಸೃಷ್ಟಿ.  ಪ್ರಾಣಿಗಳನ್ನು ಮೀರಿದೆವೆಂಬ ಹಮ್ಮು ನಮಗಿದೆಯಲ್ಲವೇ? ಅದಕ್ಕೇ ನಮಗಿದು ಶಿಕ್ಷೆ.  ಆಯ್ತು, ಹಾಗೂ, ಪರಮಾತ್ಮನೇ ನೀಡಿರುವ ಬುದ್ಧಿಯನ್ನೂ ವಿವೇಕವನ್ನೂ ಉಪಯೋಗಿಸಿ, ಹೇಗೋ ಶೌಚಾಲಯವನ್ನು ಕಂಡುಹಿಡಿದು (ದೇವರ ದಯದಿಂದ ಅದು ಖಾಲಿಯೂ ಇದ್ದು), ಹೋಗಿ ಕೂತೆವೆನ್ನಿ.  ಆ 'ಮೋಕ್ಷ'ಕ್ಕೆ ಇನ್ನಾವ ಮೋಕ್ಷ ಸಾಟಿ?  "ಅಬ್ಬಾ, ಕಾಪಾಡಿದೆಯಲ್ಲ ಪರಮಾತ್ಮ" ಎಂಬ ಉದ್ಗಾರ ಆ ಶೌಚದಲ್ಲೂ ಹೊಮ್ಮಿದರೆ ತಪ್ಪೇ?  ಆತ ಸರ್ವಾಂತರ್ಯಾಮಿಯಲ್ಲವೇ?  ಶಿಷ್ಯರೆಲ್ಲರಿಗೂ ವ್ಯಾಸರಾಜರು ಒಂದೊಂದು ಬಾಳೆಯ ಹಣ್ಣನ್ನು ನೀಡಿ "ಯಾರೂ ಇಲ್ಲದೆಡೆ ತಿಂದು ಬನ್ನಿ" ಎಂದಾಗ, ಮೂರ್ಖಪಂಡಿತರು ಶೌಚದಲ್ಲಿ ಗುಟ್ಟಾಗಿ ತಿಂದು ಬಂದರಂತೆ, ಆದರೆ ಅಲ್ಲಿಯೂ ಪರಮಾತ್ಮನು ಇದ್ದಾನೆಂದು ಮನಗಂಡ ಕನಕದಾಸರು ಹಣ್ಣನ್ನು ತಿನ್ನದೇ ಬಂದರಲ್ಲವೇ?  ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಇಲ್ಲೂ ಸ್ಮರಿಸಿದರೆ ತಪ್ಪೇನು?  ಪುರಂದರದಾಸರೇ ಹೇಳಿಲ್ಲವೇ?

ಗಂಧವ ಪೂಸಿ ತಾಂಬೂಲ ಮೆಲುವಾಗ ಕೃಷ್ಣಾ ಎನಬಾರದೇ, ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ, ಕೃಷ್ಣಾ ಎನಬಾರದೇ?

"ಶೌಚದಲ್ಲಿರುವಾಗೊಮ್ಮೆ ಕೃಷ್ಣಾ ಎನಬಾರದೇ" ಎಂದಿಲ್ಲ ಒಪ್ಪೋಣ, ಆದರೆ ಅದೇ ಕೃತಿಯಲ್ಲಿ ಹೇಳಿದ್ದಾರಲ್ಲ

ದುರಿತರಾಶಿಗಳನು ತರಿದು ಬಿಸಾಡಲು, ಕೃಷ್ಣಾ ಎನಬಾರದೆ, ಸದಾ
ಗರುಡವಾಹನ ಸಿರಿಪುರಂದರವಿಠಲನ್ನ ಕೃಷ್ಣಾ ಎನಬಾರದೇ?

"ಸದಾ" ಕೃಷ್ಣಾ ಎನ್ನಬೇಕೆಂದಿರುವಾಗ, ಶೌಚಕಾಲವೂ ಆ ಸದಾಕಾಲದಲ್ಲೇ ಬರುತ್ತದಲ್ಲವೇ?  ಅದರಲ್ಲೂ "ದುರಿತರಾಶಿಗಳನ್ನು ತರಿದು ಬಿಸಾಡಲು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.  ಶೌಚವೆಂಬುದೇನು ಕಡಿಮೆ ದುರಿತರಾಶಿಯೇ?  ಸಂಕಟಬಂದಾಗ ವೆಂಕಟರಮಣನಲ್ಲದೇ ಇನ್ನಾರು ನೆನಪಿಗೆ ಬಂದಾರು?  ಶೌಚವೆಂತಹ ಸಂಕಟ ಎಂದಿರಾ?  ಮೂಲವ್ಯಾಧರನ್ನು (ಮೂಲವ್ಯಾಧಿಯಿಂದ ಬಾಧೆಪಡುವವರನ್ನು) ಕೇಳಿ ನೋಡಿ, ಗೊತ್ತಾದೀತು.  ಇನ್ನೊಂದು ಕತೆ ನೆನಪಾಗುತ್ತಿದೆ, ಹೇಳಿ, ಆಮೇಲೆ ಹೆಚ್ಚು ಸತಾಯಿಸದೇ ವಿಷಯಕ್ಕೆ ಬಂದುಬಿಡುತ್ತೇನೆ.  ಭಕ್ತಶಿರೋಮಣಿ ಹನುಮಂತನಿಗೂ ಈ ಶೌಚದ ಮಡಿವಂತಿಕೆಯ ಮೌಢ್ಯ ಮೆಟ್ಟಿಕೊಂಡಿತ್ತಂತೆ (ಆತನಿಗೆ ಪುರಂದರದಾಸರ ಹಾಡಿನ ಪರಿಚಯವಿದ್ದಿರಲಿಕ್ಕಿಲ್ಲ, ಆ ಕಾಲಕ್ಕೆ).  ಯಾರೋ ಪಾಪ ಒಬ್ಬ ಶೌಚಪೀಡಿತ, ಶೌಚಕ್ಕೆ ಕುಳಿತಿದ್ದನಂತೆ.  ಒಳಗಿನ ಬೇಗೆ, ಪಾಪ ಏನು ಸಂಕಟವಾಯಿತೋ, ಮುಕ್ಕುವಾಗೊಮ್ಮೆ "ರಾಮಾ... ರಾಮರಾಮಾ..." ಎಂದು ಉದ್ಗರಿಸಿದನಂತೆ.  ಆಂಜನೇಯನಿಗೆ ಈ ರಾಮನಾಮಸ್ಮರಣೆ ಕಿವಿಗೆ ಬಿತ್ತಂತೆ.  ಮಾರುತಿ, "ಯತ್ರಯತ್ರ ರಘುನಾಥಕೀರ್ತನಂ ತತ್ರತತ್ರ ಕೃತ ಮಸ್ತಕಾಂಜಲಿಂ" ತಾನೇ?  ಹೋಗಿ ನೋಡುತ್ತಾನೆ, ನೋಡುವುದೇನಿದೆ? ಈ ಪಾಪಿ ಶೌಚದಲ್ಲಿ ಕುಳಿತು ರಾಮನಾಮಸ್ಮರಣೆ ಮಾಡುತ್ತಿದ್ದಾನೆ!  ಸಿಟ್ಟು ಬರದಿರುತ್ತದೆಯೇ ಆ ರಾಕ್ಷಸಾಂತಕನಿಗೆ?  ಮುಷ್ಠಿ ಬಿಗಿದು ತಲೆಗೆ ಒಂದೇಟು ಅಪ್ಪಳಿಸಿದನಂತೆ.  ಆ ಸೀನ್ ಅಲ್ಲಿಗೆ ಕಟ್ ಆಗಿದೆ.  ಆ ಶೌಚಿಯ ಗತಿ ಏನಾಯಿತೋ ಆ ಕತೆ ಹೇಳುವುದಿಲ್ಲ.  ಬಹುಶಃ ಒಳಗೆ ಕಟ್ಟಿಕೊಂಡಿದ್ದೆಲ್ಲಾ ಒಂದೇಟಿಗೆ ಹೊರಬಂದು, ಶೌಚಬಾಧೆಯಿಂದ ಮುಕ್ತಿ ದೊರಕಿರಲೂ ಬಹುದು, ಆತ ಕೃತಜ್ಞನಾಗಿ (ಕಣ್ಣೀರಿನಲ್ಲೇ ಕೈ ತೊಳೆದುಕೊಂಡು) ಮನೆಗೆ ಹಿಂದಿರುಗಿರಲೂ ಬಹುದು.  ಇರಲಿ, ಕತೆಯ ಮುಂದಿನ ಸೀನು ಸ್ವಾರಸ್ಯಕರವಾಗಿದೆ.  ಮಾರುತಿ, ಒಡೆಯನ ಸೇವೆಯಲ್ಲಿ ಲೀನನಾಗಿದ್ದಾನೆ.  ರಾಮನಿಗೆ ಎಣ್ಣೆತಿಕ್ಕಿ ಅಭ್ಯಂಜನ ಮಾಡಿಸುವ ಕೆಲಸ.  ತಲೆಗೆ ಎಣ್ಣೆ ತಿಕ್ಕಲು ಕೈಯಲ್ಲಿ ಎಣ್ಣೆ ಹಾಕಿಕೊಂಡು ಆ ಮೃದುಕುಟಿಲಕೇಶರಾಶಿಯನ್ನು ತುಸುತುಸುವೇ ಸರಿಸುತ್ತಿದ್ದಾನೆ; ಕೈಗೇನೋ ದೊಡ್ಡ ಗುಬುಟೊಂದು ಸಿಕ್ಕಿದಂತಾಗಿ ಬೆಚ್ಚುತ್ತಾನೆ; ಇದೇನೆಂದು ಕೂದಲು ಸರಿಸಿ ನೋಡುತ್ತಾನೆ, ರಾಮನ ತಲೆಯ ಮೇಲೆ ಅಷ್ಟು ದಪ್ಪ, ಇಷ್ಟುದ್ದ ಬೋರೆ!.  ಹನುಮನಿಗೆ ದುಃಖ ಕೋಪಗಳೆರಡೂ ಒಟ್ಟಿಗೇ ಉಂಟಾಗುತ್ತದೆ.  "ಪ್ರಭೂ, ನಿನ್ನ ತಲೆಯ ಮೇಲೆ ಹೀಗೆ ಹೊಡೆದವನನ್ನು ಇಲ್ಲವೆನಿಸಿಬಿಡುತ್ತೇನೆ ಹೇಳು ಯಾರದು" ಎನ್ನುತ್ತಾನೆ ಹಲ್ಲು ಕಡಿಯುತ್ತಾ.  ರಾಮ ಹೇಳುತ್ತಾನೆ "ನನಗೂ ಗೊತ್ತಿಲ್ಲಪ್ಪಾ ಬೆಳಗ್ಗೆ ಯಾರೋ ಭಕ್ತ ನನ್ನ ಸ್ಮರಣೆ ಮಾಡಿದ.  ಆನಂದದಿಂದ ಕಣ್ಮುಚ್ಚಿದೆ, ಮರುಕ್ಷಣವೇ ತಲೆಯ ಮೇಲೆ ಯಾರೋ ಬಲವಾಗಿ ಗುದ್ದಿದಂತಾಯಿತು, ಮಾರುತೀ ಎಂದು ಚೀರಿದ್ದೊಂದೇ ನೆನಪು.  ಪಾಪ ಆ ನನ್ನ ಭಕ್ತನಿಗೆ ಅದಾವ ಪಾಪಿ ಹೊಡೆದನೋ, ನನ್ನ ತಲೆ ಅಸಾಧ್ಯವಾಗಿ ನೋಯುತ್ತಿದೆ".  ಇದನ್ನು ಕೇಳಿದ ಮಾರುತಿಗೆ, ಜ್ಞಾನೋದಯವಾಗಿ ತನ್ನ ಅಕಾರ್ಯಕ್ಕೆ ಬಹುವಾಗಿ ಪಶ್ಚಾತ್ತಾಪಪಟ್ಟನಂತೆ, ಇದು ಕತೆ.  ಇದು ನಿಜವೇ ಇರಬೇಕು.  ಏಕೆಂದರೆ, ಆಮೇಲೆ ಸ್ವತಃ ನಾನೇ ಅದೆಷ್ಟೋ ಎಂಥೆಂಥದ್ದೋ ಸಂದರ್ಭಗಳಲ್ಲಿ ರಾಮಾ ಎಂದಿದ್ದೇನೆ, ರಾಮರಾಮಾ ಎಂದಿದ್ದೇನೆ.  ಮಾರುತಿ ನನಗೆಂದೂ ಹೊಡೆದದ್ದಿಲ್ಲ.  ಬಾಷ್ಪವಾರಿಪರಿಪೂರ್ಣಲೋಚನನಾಗಿ ಆಶೀರ್ವದಿಸಿರಬೇಕೆಂದೇ ನನ್ನ ನಂಬಿಕೆ.

ಓ, ದೈವಚಿಂತನೆಯ ಬಗ್ಗೆ ನಿಮ್ಮದೇನು ತಕರಾರಿಲ್ಲವೇ?  ತಕರಾರೇನಿದ್ದರೂ ಶೌಚಚಿಂತನೆಯ ಬಗೆಗೇ?  ಸರಿ ಬಿಡಿ.  ನನಗೇನು ಚಿಂತನೆಗೆ ಶೌಚವೇ ಆಗಬೇಕೆಂದೇನಿಲ್ಲ.  ಅಥವಾ ಶೌಚ ಆಗಬಾರದೆಂಬ ಮಡಿವಂತಿಕೆಯೂ ಇಲ್ಲ.  ಎಲ್ಲೋ ಈ ವಿಷಯ ಬಂತು, ಚಿಂತನೆ ಹರಿಯಿತಷ್ಟೇ, ಇರಲಿ, ಅದೇಕೆ ಬಂದಿತೆಂದರೆ, ಮಿತ್ರರೊಬ್ಬರು, ಪಬ್ಲಿಕ್ ಟಾಯ್ಲೆಟುಗಳಲ್ಲಿ ನಮನಮೂನೆ ಹಾಡುಗಳನ್ನು ಹಾಡುತ್ತಾ ಕುಳಿತವರ ಬಗ್ಗೆ ಒಂದು ನಗೆಬರಹ ಬರೆದಿದ್ದರು.  ಯಾರೋ ಒಬ್ಬ ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಕುಳಿತು "ಓ... ಮೇಘವೇ, ಮೇಘವೇ ಓಡಿಬಾ" ಎಂದು ಹಾಡುತ್ತಿದ್ದನಂತೆ.  ಇನ್ನೊಬ್ಬ ಯಾರೋ "ಓ ಮಲೆನಾಡಿನ ಮೈಸಿರಿಯೇ" ಎಂದು ಹಾಡುತ್ತಿದ್ದನಂತೆ.  ಇವರು ಹೀಗೆ ಹಾಡುತ್ತಿದ್ದರೆ ಹೊರಗಿರುವವರು ಏನೆಂದು ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ಮಿತ್ರರ ಅಳಲು.  ಅದಕ್ಕೆ ನನಗೆನಿಸಿದ್ದು, ಅಲ್ಲಿಂದ (ಶೌಚಾಲಯದಿಂದ) ಹೊಮ್ಮುವ ಹಾಡುಗಳಿಗೆ ಅರ್ಥ ಕಲ್ಪಿಸಹೊರಡುವುದು ವ್ಯರ್ಥಶ್ರಮ.  ಅವರಿಬ್ಬರೂ ಬಹುಶಃ ಉಳಿದವರನ್ನೂ ಹಾಡಲು ಪ್ರೇರೇಪಿಸಿ ಟಾಯ್ಲೆಟ್ಟಿನ ಪ್ರಶಾಂತವಾತಾವರಣವನ್ನು ಕದಡಲು ಯತ್ನಿಸುತ್ತಿದ್ದರೆನಿಸುತ್ತದೆ. ಇಂಥವರಿಗೆ ಮೌನವೇ ಪ್ರತ್ಯುತ್ತರ. ಅದಕ್ಕೇ ನನ್ನ ಮಿತ್ರರಿಗೆ ಸಲಹೆ ಕೊಟ್ಟೆ - ನೀವೂ ಮೌನವಾಗಿಯೇ ಪ್ರತ್ಯುತ್ತರ ನೀಡಬೇಕಿತ್ತು "ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು... ಕೋಪಿಸಲು, ನಿಂದಿಸಲು, ಮೌನವ ಮೀರುವನೇನು"

ಕೆಲವೊಮ್ಮೆ ಹೀಗಾಗುತ್ತದೆ.  ತಮಾಷೆಯಲ್ಲ, ಹಿರಿಯರೊಬ್ಬರು (ಎಲ್ಲಿ ಹೋದರೂ ಹಾಡುವ ಅಭ್ಯಾಸ ಬಿಡದವರು) ಒಮ್ಮೆ ಟಾಯ್ಲೆಟ್ಟಿನಿಂದ ಹಾಡುತ್ತಿದ್ದರು "ಏನಿದೀ ಗ್ರಹಚಾರವೋ... ಏನಿದೀ ವನವಾಸವೋ... ಏನ ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ..."

ಅವರು ಹಾಡುತ್ತಿದ್ದುದೇನೋ ಪಾಪ, ಅಷ್ಟನ್ನೇ.  ಅವರ ಕಷ್ಟವೇನೋ ಯಾರಿಗೆ ಗೊತ್ತು!  ಆದರೆ ಈ ಕಿಡಿಗೇಡಿ ಮನ ಬಿಡಬೇಕಲ್ಲ, ಹಾಡಿನ ಮುಂದಿನ ಚರಣವನ್ನು ಆ ಸಂದರ್ಭದಲ್ಲಿ ಅನ್ವಯಿಸಿಬಿಟ್ಟಿತು, ಕಲ್ಪಿಸಿಕೊಂಡು ನಗು ತಡೆಯಲಾಗಲಿಲ್ಲ

"ಕಾಲ ಕಾಲಕೆ ತಿಂದು ತೇಗಿ
ಕಾಲ ಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ
ಅಲೆವ ಗತಿಯಿದು ಬಂದಿತೋ"

ಸದ್ಯ, ನನ್ನ ನಗೆ ಆ ಹಿರಿಯರಿಗೆ ತಲುಪಲಿಲ್ಲ, ಅಷ್ಟಕ್ಕೆ ನಾನು ಬಚಾವು.  ನಗೆ ಕೊಲ್ಲುವಂತೆ ಹಗೆ ಕೊಲ್ಲದು.  ಇಂತಹ ಸಂದರ್ಭದಲ್ಲಿ ನಗೆಯೆನ್ನುವುದು ಆತ್ಮಹತ್ಯೆಗೆ ಅದ್ಭುತ ಸಾಧನ.  ಒಮ್ಮೆ ಹೀಗಾಯಿತು, ಕೆಲವು ದಶಕಗಳ ಹಿಂದೆ.  ನಾನು ನನ್ನ ಸ್ಥೂಲದೇಹಿ ಮಿತ್ರನೊಬ್ಬನೊಡನೆ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ.  ಅಲ್ಲೆಲ್ಲ ತೂಕ ನೋಡುವ ಮಿಶಿನ್ನುಗಳಿದ್ದುವಲ್ಲ - ನನ್ನ ಮಿತ್ರನಿಗೆ ತೂಕ ನೋಡಿಕೊಳ್ಳೋಣವೆನಿಸಿತು.  ನೋಡಿದರೆ ಎಪ್ಪತ್ತು ಕಿಲೋ ತೋರಿಸುತ್ತಿತ್ತು!  ಕಾರ್ಡಿನ ಹಿಂದೆ ರೋಗಬಾಧೆ ಎಂಬ ಒಂದು ಪದದ ಭವಿಷ್ಯ ಬೇರೆ.  ಪಾಪ ಈತ ಭೂಮಿಗಿಳಿದು ಹೋದ.  ಅರವತ್ತೈದಿದ್ದನಂತೆ.  ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದನಂತೆ, ಐದು ಕಿಲೋ ಇಳಿದಿರಬೇಕೆಂದು ಅವನೆಣಿಕೆ.  ಇಲ್ಲಿ ನೋಡಿದರೆ ಐದು ಕಿಲೋ ಹೆಚ್ಚಾಗಿತ್ತು.  ಸಹಜವಾಗಿಯೇ ಮಂಕಾಗಿದ್ದ.  ಬಸ್ ಬರುವುದಕ್ಕೆ ಇನ್ನೂ ಒಂದು ಗಂಟೆಯ ಕಾಲವಿತ್ತು.  ಆರು ಗಂಟೆಯ ಪಯಣ ಬೇರೆ.  ಯಾವುದಕ್ಕೂ ಇರಲಿ ಒಮ್ಮೆ ಟಾಯ್ಲೆಟ್ಟಿಗೆ ಹೋಗಿ ಬಂದುಬಿಡುತ್ತೇನೆ ಎಂದು, ಬ್ಯಾಗುಗಳನ್ನು ನನ್ನ ಕೈಗೆ ಕೊಟ್ಟು ಹೋದ.  ಹೋದವನು ಹತ್ತೇ ನಿಮಿಷದಲ್ಲಿ ಬಂದನೆನ್ನಿ.  ಮತ್ತೆ ಸುತ್ತಾಡುತ್ತಾ ಅದೇ ತೂಕ ಹೇಳುವ ಮೆಶಿನ್ನಿನ ಬಳಿ ಬಂದೆವು.  ಇವನಿಗೆ ಅದೇನೋ ಅನುಮಾನ, ಮಶೀನು ಕೆಟ್ಟಿರಬೇಕು, ಮತ್ತೊಮ್ಮೆ ನೋಡುವೆ ತಡಿ ಎಂದು ಮತ್ತೆ ನೋಡಿದ.  ಏನಾಶ್ಚರ್ಯ!  ಈಗ ಆ ಯಂತ್ರ, 55 ಕಿಲೋ ತೋರಿಸುತ್ತಿತ್ತು - ಹಿಂದೆ ತೋರಿಸಿದ್ದಕ್ಕಿಂತ ಏಕ್ ದಂ 15 ಕಿಲೋ ಕಡಿಮೆ!  ಅದೂ ಕೇವಲ ಹದಿನೈದಿಪ್ಪತ್ತು ನಿಮಿಷಗಳ ಅಂತರದಲ್ಲಿ!!  ಇಪ್ಪತ್ತು ನಿಮಿಷದಲ್ಲಿ ಹದಿನೈದು ಕಿಲೋ ಇಳಿಸುವ ಯಾವ ಕೆಲಸವನ್ನೂ ಆತ ಮಾಡಿದ್ದಿಲ್ಲ, ಟಾಯ್ಲೆಟ್ಟಿಗೆ ಹೋಗಿ ಬಂದದ್ದನ್ನು ಬಿಟ್ಟು.  ಈಗ ಇದು ಟಾಯ್ಲೆಟ್ಟಿನ ಮಹಿಮೆಯಲ್ಲದೇ ಮತ್ತೇನು?  ನಗೆ ಕೊಲ್ಲುವಂತೆ ಹಗೆ ಕೊಲ್ಲದು ನೋಡಿ.  ಜೀವರಕ್ಷಕವಾದ ವಿವೇಕ ಮತ್ತೊಮ್ಮೆ ನನ್ನ ಕಿಸುಬಾಯನ್ನು ಮುಚ್ಚಿಸಿ ನನ್ನನ್ನು ಕಾಪಾಡಿತು.  ಒಳಗೇ ನಕ್ಕುಕೊಂಡು ಸುಮ್ಮನಾದೆ.  ಇವನಿಗೋ ಅನುಮಾನ, ಮಶೀನು ಇವನಂದುಕೊಂಡದ್ದಕ್ಕಿಂತ ಕಡಿಮೆ ತೋರಿಸುತ್ತಿತ್ತು.  ಇನ್ನೊಂದರಲ್ಲಿ ಒಮ್ಮೆ ನೋಡಿಬಿಡೋಣ ಎಂದವನನ್ನು, ಬೇಡ ನಡೆ ಬಸ್ಸು ಬಂತು, ಇದು ಸರಿಯಾಗಿದೆ ಎಂದು ದಬ್ಬಿಕೊಂಡು ಹೋದದ್ದಾಯಿತು.  ಅಲ್ಲದೇ ಈ ಬಾರಿಯ ಭವಿಷ್ಯಚೀಟಿಯಲ್ಲಿ "ಪ್ರಣಯಲಾಭ" ಎಂದು ಬೇರೆ ಬರೆದಿತ್ತು.  ಸುಕಾಸುಮ್ಮನೇ ಆ ಖುಷಿಯನ್ನೇಕೆ ಹಾಳುಗೆಡವಬೇಕು ಎಂಬ ಮಾತಿಗೆ ಸೋತು ಸುಮ್ಮನಾದನೆನ್ನಿ.  ಅದೇನೇ ಇರಲಿ, ಅಂದು ನನಗೊಂದು ಹೊಸ ಅರಿವಂತೂ ಮೂಡಿತು.  ಟಾಯ್ಲೆಟು ತೂಕ ಇಳಿಸುವಲ್ಲಿಯೂ ಭಾರೀ ಸಹಕಾರಿ ಎಂಬುದೇ ಆ ಅರಿವು.  ಸರ್ಕಾರವೇಕೆ "ಟಾಯ್ಲೆಟ್ಟಿನಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯಿರಿ, ತೂಕವಿಳಿಸಿ ಆರೋಗ್ಯವಂತರಾಗಿರಿ" ಎಂಬ ಘೋಷಣೆಯನ್ನು ಜಾರಿಗೆ ತರಬಾರದು?  "ಶೌಚವೇ ಆರೋಗ್ಯ; ಆರೋಗ್ಯವೇ ಭಾಗ್ಯ" ಎಂಬ ಘೋಷಣೆಯೊಂದಿಗೆ ಶೌಚಭಾಗ್ಯ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.  ಶೌಚದಲ್ಲಿಯೇ ಹೆಚ್ಚುಹೆಚ್ಚು ಸಮಯ ಕಳೆದವರನ್ನು ಗುರುತಿಸಿ "ಶೌಚಶ್ರೀ" ಪ್ರಶಸ್ತಿ ನೀಡುವ ಬಗೆಗೂ ಯೋಚಿಸಬಹುದು. 

ನೀವೇನೇ ಹೇಳಿ, ಈ ಟಾಯ್ಲೆಟ್ ಎನ್ನುವುದು ಒಂದು ರೀತಿ ತಪೋಭೂಮಿಯಿದ್ದಂತೆ. ಅಲ್ಲಿ ಮಾಡಿದ ಯಾವ ಕೆಲಸವೂ ಬೇಗ ಕೈಗೂಡುತ್ತದೆಂಬ ನಂಬಿಕೆಯಿದೆ. ಅನೇಕರು ಅದಕ್ಕೇ ಟಾಯ್ಲೆಟ್ಟಿನಲ್ಲೇ ಯಜ್ಞಯಾಗಾದಿಗಳನ್ನೂ ಮಾಡುವ ಅಭ್ಯಾಸವಿಟ್ಟುಕೊಂಡಿದ್ದಾರೆ - ಅಂತಹ ಸಿದ್ಧಯಾಜ್ಞಿಕರು ಆರಣಿಯನ್ನೂ ಸಮಿತ್ತನ್ನೂ ಜೇಬಿನಲ್ಲೇ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಶೌಚಕುಂಡವನ್ನು ಕಂಡೊಡನೆಯೇ ಆರಣಿಯನ್ನು ಮಥಿಸಿ ಯಜ್ಞೇಶ್ವರನನ್ನು ಆಮಂತ್ರಿಸಿ, ಸಮಿತ್ತನ್ನು ಬಾಯಲ್ಲಿ ನಿಧಾನಿಸಿ, ಅಗ್ನಿಸ್ಪರ್ಶಮಾಡಿ, ಪೂರ್ಣಶ್ವಾಸೋಚ್ಛ್ವಾಸದೊಡನೆ ಧೂಮೋತ್ಪಾಟನ ಮಾಡಿ ಯಜ್ಞವನ್ನು ಪೂರ್ಣಗೊಳಿಸುತ್ತಾರೆ.  ಇದು ಧೀಶಕ್ತಿಯನ್ನುದ್ದೀಪಿಸಿ, ಚಿಂತನಕ್ರಮವನ್ನು ಚುರುಕುಗೊಳಿಸುತ್ತದೆನ್ನುತ್ತಾರೆ.  ಬೇರೆಲ್ಲೂ ಹೊಳೆಯದ ಅದ್ಭುತ ಚಿಂತನೆಗಳು ಪರಿಹಾರಗಳೂ ಅಲ್ಲಿ ಹೊಳೆದು ಯುರೇಕಾ ಎಂದು ಕೂಗಿಕೊಳ್ಳುತ್ತಾ, ಇದ್ದದ್ದು ಇದ್ದಂತೆಯೇ ಎದ್ದು ಓಡಿಹೋದವರೂ ಇದ್ದಾರೆ.   ತೀರಾ, ಬಾಗಿಲನ್ನೂ ವಾಪಸು ಮುಚ್ಚದೇ ಹಾಗೆ ಓಡಿಹೋಗುವವರ ಅನಾಗರೀಕತೆ ಕೆಲವೊಮ್ಮೆ ಸಿಟ್ಟು ತರಿಸುತ್ತದೆ, ಇರಲಿ.  ಆದರೆ ಜ್ಞಾನದ ’ಸೆಳವು’ ಅಂಥದ್ದು.  ಅಷ್ಟಲ್ಲದೇ ಅದನ್ನು ಜ್ಞಾನಮಂಟಪವೆಂದರೇ ಹಿರಿಯರು? ಕಲೆಯೂ ಒಂದು ಜ್ಞಾನಶಾಖೆಯಷ್ಟೇ?  ಆದ್ದರಿಂದ ಟಾಯ್ಲೆಟ್ಟಿನಲ್ಲಿ ಸಂಗೀತಾಭ್ಯಾಸವೂ ಶೀಘ್ರಫಲಪ್ರದವೆಂದು ಕೆಲವರಿಗೆ ಅನಿಸಿದ್ದರೆ ಅಚ್ಚರಿಯೇನಿಲ್ಲ.

ನನ್ನ ಎಳವೆಯಲ್ಲಿ, ಕೊಳ್ಳೇಗಾಲದಲ್ಲಿ ಒಂದು ವಠಾರದ ಮನೆಯಲ್ಲಿದ್ದೆವು. ಆಗ ನನಗಿನ್ನೂ ಮೂರೋ ನಾಲ್ಕೋ ವರ್ಷ, ಇನ್ನೂ ಸ್ಕೂಲಿಗೆ ಹೋಗುತ್ತಿದ್ದಿಲ್ಲ. ಸಾಲಾಗಿ ಇದ್ದ ಐದೋ ಆರೋ ಮನೆಗಳ ಕೊನೆಯಲ್ಲಿ ಕಾಮನ್ ಟಾಯ್ಲೆಟು. ನಮ್ಮ ಮನೆ ಆ ಸಾಲಿನ ಇನ್ನೊಂದು ತುದಿಯಲ್ಲಿ. ದಿನಾ ಬೆಳಗ್ಗೆ ನನ್ನನ್ನು ಟಾಯ್ಲೆಟ್ಟಿಗೆ ಕರೆದೊಯ್ಯುವ ಕೆಲಸ ನಮ್ಮ ತಂದೆಯವರದ್ದು. ನಮ್ಮ ತಂದೆಯವರಿಗೆ ರೇಡಿಯೋ ಕೇಳುವ ಹುಚ್ಚು. ಅವರ ಬಳಿ, ಕೈಯಲ್ಲಿ ಹೊತ್ತೊಯ್ಯಬಹುದಾದ ಟ್ರಾನ್ಸಿಸ್ಟರ್ ಒಂದಿತ್ತು. ಹಾಗಾಗಿ ನನ್ನನ್ನು ಕರೆದೊಯ್ಯಬೇಕಾದರೂ ಒಂದು ಕೈಯಲ್ಲಿ ನನ್ನ ಕೈ, ಇನ್ನೊಂದರಲ್ಲಿ ಟ್ರಾನ್ಸಿಸ್ಟರು ಹಿಡಿದೇ ಒಯ್ಯುತ್ತಿದ್ದರು.  ರೇಡಿಯೋದವರ ಸಮಯಪ್ರಜ್ಞೆಯಂತೆ ಸಂದರ್ಭಪ್ರಜ್ಞೆಯೂ ಅದ್ಭುತವಾದದ್ದು.  ಯಾವ ಸ್ಟೇಶನೋ ನೆನಪಿಲ್ಲ, ದಿನಾ ಆ ಸಮಯಕ್ಕೆ ಸರಿಯಾಗಿ ನಾದಸ್ವರ ವಾದನ. ವಠಾರದ ಜನ ಕಾಮೆಂಟು ಮಾಡುತ್ತಿದ್ದರು. "ಮೇಷ್ಟ್ರು ನೋಡು, ಮಗನನ್ನ ಒಳ್ಳೆ ರಾಜಕುಮಾರನ ರೀತಿ ನೋಡಿಕೊಳ್ಳುತ್ತಾರೆ. ಟಾಯ್ಲೆಟ್ಟಿಗೆ ಕರೆದೊಯ್ಯಬೇಕಾದರೂ ಮಂಗಳವಾದ್ಯ ತಾಳಮೇಳಗಳ ಸಮೇತ ಕರೆದೊಯ್ಯುತ್ತಾರೆ" ಎಂದು!  ನನಗೆ ಹೋಗುವಾಗಲೂ ವಾಲಗ, ಬರುವಾಗಲೂ ವಾಲಗ!  "ತಾಳಮೇಳಬಿರುದಾವಳಿ ಸಹಿತಲಿ ಪೌರವೀಧಿಯಲಿ ಮೆರೆಯುತ" ಬರುವ ಅನುಭವ.  ಚಡ್ಡಿ ಹಾಕಿಕೊಳ್ಳುವ ವಸ್ತ್ರಸೇವೆ ನಡೆಯುತ್ತಿದ್ದುದು ಮನೆಗೆ ಮರಳಿದ ಮೇಲೆ.

ಹೀಗೆ ಶೌಚಕಾಲದಲ್ಲಿ ತಾನಾಗಿಯೇ ಸಾಕಷ್ಟು ಸಂಗೀತದ ಗಲಾಟೆ ಇದ್ದುದರಿಂದ ಟಾಯ್ಲೆಟ್ಟಿನಲ್ಲಿ ಹಾಡುವ ಅಭ್ಯಾಸ ನನಗಂತೂ ಬರಲಿಲ್ಲ. ಬಂದಿದ್ದರೆ, ಯಾರಿಗೆ ಗೊತ್ತು, ದೊಡ್ಡ ಸಂಗೀತಗಾರನೇ ಆಗುತ್ತಿದ್ದೆನೇನೋ.  ಆದರೆ ಕೆಲವರು ಪಬ್ಲಿಕ್ ಟಾಯ್ಲೆಟ್ಟಿನಲ್ಲೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡುತ್ತಾರೆಂದರೆ ಅವರ ಸಂಗೀತಾಸಕ್ತಿ ಮೆಚ್ಚಬೇಕಾದ್ದೇ. ಆದ್ದರಿಂದ ಟಾಯ್ಲೆಟ್ಟಿನಲ್ಲಿ ಹಾಡಲು ಅನುಕೂಲವಾದ ಕೆಲವು ಹಾಡುಗಳ ಪಟ್ಟಿ ಸುಲಭವಾಗಿ ಸಿಗುವಂತಿದ್ದರೆ ಸಾಧಕರಿಗೆ ಅನುಕೂಲವಾಗಬಹುದೇನೋ. ಅವರವರ ಆಸಕ್ತಿಗೆ ತಕ್ಕಂತೆ ಈ ಕೆಲವು ಹಾಡುಗಳನ್ನು ಅಭ್ಯಸಿಸಬಹುದು:

ರೊಮ್ಯಾನ್ಸ್ ಪ್ರಿಯರಿಗೆ:
ಈ ಸಮಯ ಆನಂದಮಯಾ
ನೂತನ ಬಾಳಿನ ನವೋದಯಾ

ಶ್ರುತಿ ಸೇರಿದೆ, ಹಿತವಾಗಿದೆ, ಬಾಳೆಲ್ಲ ಹಗುರಾಗಿದೇ...

ಸುತ್ತಮುತ್ತ ಯಾರು ಇಲ್ಲ...

ಆಕಾಶದಿಂದ ಧರೆಗಿಳಿದ ರಂಭೇ
ಇವಳೇ ಇವಳೇ, ಚಂದನದ ಗೊಂಬೆ

ಬಾರೇ ಬಾರೇ ಚೆಂದದ ಚೆಲುವಿನ ತಾರೆ
ಬಾರೇ ಬಾರೇ ಒಲವಿನ ಚಿಲುಮೆಯ ಧಾರೆ
 
ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೇ ಒಳಗೆ ವೇದನೆ ಇಳಿದು ಬಾ ಬಾಲೆ

ಬಳ್ಳಿಯೊಂದು ಬಳುಕುತಿದೆ...ಆಹಾ... ಆಹಾ ನಡೆಯುತ್ತಿದೆ

ಆಜಾ ಅಹಹ ಆಜಾ ಅಹಹ ಆಜ ಆಜ ಆಜ ಆಜ ಆಜಾ...

ಭಾವಗೀತೆ ಪ್ರಿಯರಿಗೆ:
ಅನಂತದಿಂ ದಿಗಂತದಿಂ
ನೋಡೆನೋಡೆ ಮೂಡಿತೊಂದು ಮೋಡಗೋಪುರ
ಗಿರಿಯ ಬಿತ್ತರ, ಶಿಖರದೆತ್ತರ

ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೇ (ಇಳಿದು ಬಾ)

ಹೊನ್ನ ಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸೀ...
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ

ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವಾ ಹೊಯ್ದಾ ನುಣ್ಣನೆ ಎರಕಾವಾ ಹೊಯ್ದಾ...

ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ಕಂಪು

ಆಗು ಗೆಳೆಯ ಆಗು, ನೀನು ಭರವಸೆಯಾ ಪ್ರವಾದಿ
ಹತಾಶೆಯಲ್ಲೇನಿದೇ, ಬರಿ ಶೂನ್ಯ ಬರೀ ಬೂದಿ

'ಸೋಗಪಾಟ್ಟು' ಪ್ರಿಯರಿಗೆ 
(ಸೋಗಪಾಟ್ಟು (ತ) = ಶೋಕದ ಹಾಡಿಗೆ ನಾವು ಪಡ್ಡೆಗಳು ಇಟ್ಟಿದ್ದ ಹೆಸರು):
ಏನಿದೀ ಗ್ರಹಚಾರವೋ ಏನಿದೀ ವನವಾಸವೋ
ಏನು ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವಾ ಆಸೆಯೂ ತುಂಬಿದೇ ನನ್ನಲಿ

ಒಲವಿನಾ ಪ್ರಿಯಲತೇ ಅವಳದೇ ಚಿಂತೇ...

ಅಹಹಾ ಅಹಹಾ... ವಿರಹಾ... ನೂರು ನೂರು ತರಹಾ

Happy-go-lucky ಮನೋಧರ್ಮವುಳ್ಳವರಿಗೆ:
ಸುಹಾನಾ ಸಫರ್ ಔರ್ ಎ ಮೌಸಮ್ ಹಸೀನ್
ಹಮೇ ಡರ್ ಹೈ ಹಮ್ ಖೋ ನಜಾಯೇಂ ಕಹೀಂ

ಆಡಿಸಿ ನೋಡು ಬೀಳಿಸಿ ನೋಡೂ
ಉರುಳಿ ಹೋಗದು

ನಗುನಗುತಾ ನಲೀ ನಲೀ ಏನೇ ಆಗಲಿ
ಎಲ್ಲಾ ದೇವನಾ ಕಲೆಯೆಂದೇ ನೀ ತಿಳೀ ಅದರಿಂದಾ ನೀ ಕಲಿ

ಎಲ್ಲೆಲ್ಲೂ ಊಟವನ್ನೇ ಕನಸುವವರಿಗೆ:
ಶ್ರಾದ್ಧದೂಟ ಸುಮ್ಮನೇ ನೆನೆಸಿಕೊಂಡ್ರೆ ಜುಮ್ಮನೇ

ವಿವಾಹಭೋಜನವಿದು, ವಿಚಿತ್ರಭಕ್ಷ್ಯಗಳಿವು
ಬೀಗರಿಗೌತಣವಿದು ದೊರಕೊಂಡಿತೆನಗೆ ಬಂದು
ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಾ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೇ
ವಿಠಲನಾಮ ತುಪ್ಪವ ಬೆರೆಸೀ ಬಾಯ ಚಪ್ಪರಿಸಿರೋ

ಶಾಸ್ತ್ರೀಯಸಂಗೀತವನ್ನು ಅಭ್ಯಾಸ ಮಾಡುವವರಿಗೆ:
ನಿನ್ನುಕ್ಕೋಓ ರೀಈಈಈಈಈಈ ಯುಉಉಉ ನ್ನಾಅಅಅ ನುವುವು ರಾಅಅಅ
ಕಾವಾ ವಾ ಕಂದಾ ವಾ...
ಮರಿಯಾದಗಾದುರಾಆಆ...

ಟಾಯ್ಲೆಟ್ಟಿನಲ್ಲೂ ತತ್ತ್ವಚಿಂತನೆ ಮಾಡುವ ಅನುಭಾವಿಗಳಿಗೆ:
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ

ಮನುಜಶರೀರವಿದೇನು ಸುಖಾ
ಎಲುಬು ರಕ್ತಮಾಂಸಗಳ ಮೇಲೆ ಚರ್ಮದ ಹೊದಿಕೆ
ಒಳಗೆ ಮಲಮೂತ್ರಾದಿ ಕ್ರಿಮಿಗಳಿಹವೋ

ಪರಚಿಂತೆ ನಮಗೆ ಏಕೆ ಅಯ್ಯಾ
ನಮ್ಮ ಚಿಂತೆ ನಮಗೆ ಸಾಲದೇ

ನಿಜ, ಹೊರಗೆ ಕಾದಿರುವವರ ಚಿಂತೆ ನಮಗೇಕೆ, ಅವರವರ ಚಿಂತೆ ಅವರವರಿಗೆ. ನೆರೆಯವರ ದುಃಖಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ. ಕಾದವರು ಬೇಕಾದರೆ "ಕಾದಿರುವೇ ಏಏಏಏ ಏಏಏಏ ಏಏಏಏ ನಿನಗಾಗಿ" ಎಂದೋ, "ಬಾ ಬಾರೋ ಬಾರೋ ರಣಧೀರಾ ಆಆಆಆ ಆಆಆಆ ಆಆಆಆ" ಎಂದೋ "ಜಾಡಿಸಿ ವದಿ ಅವನನು... " ಎಂದೋ ಬೇಕಾದ್ದನ್ನು ಹಾಡಿಕೊಂಡಿರಲಿ. ಹೊರಗೆ ನಿಂತು ಹಾಡುತ್ತಾ ಜನದ ಕಣ್ಣಿಗೆ ಬಿದ್ದು ನಗೆಪಾಟಲಾಗುವವರು ಅವರೇ... ನಮಗೇನು?

ಸರಿ, ವಿಷಯವೇನು ಹೇಳು ಎಂದಿರಾ?  ಸರಿ ಹೋಯ್ತು.  ಚಿಂತನೆಯೆಂದು ಆಗಲೇ ಹೇಳಿದೆನಲ್ಲ.  ಚಿಂತನೆಗೂ ಒಂದು ಸಮಯಮಿತಿಯಿದೆ ದೇವ್ರೂ.  ಯುಗವೆಲ್ಲಾ ಶೌಚದಲ್ಲೇ ಕುಳಿತಿರಲು ನಾನೇನು ಚತುರ್ಮುಖಬ್ರಹ್ಮನೇ?  ನನಗೆ ಇರುವುದು ಒಂದೇ ಮುಖ, ಅದೇ ನಾಲ್ಕು ದಿಕ್ಕುಗಳನ್ನೂ ನೋಡಬೇಕು, ಹೊಟ್ಟೆಪಾಡು ಆಗಬೇಕು.  ದಿನವೆಲ್ಲಾ ಇಲ್ಲೇ ಕುಳಿತಿದ್ದರೆ ಹೊಟ್ಟೆಪಾಡು ನಡೆಯುವುದು ಹೇಗೆ, ಹೊಟ್ಟೆಗೇ ಇಲ್ಲದಿದ್ದರೆ ಶೌಚದ ಗತಿಯೇನು?.  ಸರಿ, ಬರುತ್ತೇನೆ, ಇನ್ನೊಮ್ಮೆ ವಿರಾಮವಾಗಿ ಸಿಕ್ಕೋಣ.  ನಮಸ್ಕಾರ.