Monday, August 25, 2014

ಹೋಗಿ ಬನ್ನಿ ಅನಂತಮೂರ್ತಿ... ವಿದಾಯ.

ಅನಂತಮೂರ್ತಿ ನಮ್ಮನ್ನಗಲಿದ್ದಾರೆ,  ನಂಬಲಾಗುತ್ತಿಲ್ಲ.  ಹಾಗೆಂದು ಇದು ಅಕಾಲಮೃತ್ಯುವಲ್ಲ, ಎಂಬತ್ತಕ್ಕೂ ಹೆಚ್ಚುಕಾಲ ಪುಷ್ಕಳವಾಗಿ ಬದುಕಿ ಬಹುಶಃ ಸಂತೃಪ್ತಿಯಿಂದ ಸಹಜ ಸಾವಿಗೇ ಸಂದಿದ್ದಾರೆ.  ಆದರೆ ಕೊನೆಯವರೆಗೂ ಸಾಮಾಜಿಕ ಜೀವನದಿಂದ ನಿವೃತ್ತಿಹೊಂದದೆಯೇ ನೆನ್ನೆಮೊನ್ನೆಯವರೆಗೂ ನಮ್ಮ ನಡುವೆಯೇ ಇದ್ದವರು ಇವತ್ತಿನಿಂದ ಇಲ್ಲವೆಂದರೆ ಗಕ್ಕಿಟ್ಟಂತಾಗುವುದು ಸಹಜವೇ, ಸತ್ಯ ಒಳಗಿಳಿಯಲು ತುಸು ಸಮಯ ಬೇಕಾಗುತ್ತದೆ.  ಕೊನೆ ದಿನಗಳಲ್ಲಿ ತೀವ್ರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನಶೀಲರಾಗಿದ್ದರೆಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ; ಅನಗತ್ಯವಾಗಿ ವಿವಾದಗಳು ಮೈಮೇಲೆ ಬೀಳುತ್ತವೆಂಬುದನ್ನು ತಿಳಿದೂ (ಅವರು ನುಡಿದದ್ದೆಲ್ಲಾ ವಿವಾದವಾಗುವುದಕ್ಕೇ ಕಾಯುತ್ತಿರುತ್ತವೆಂಬುದನ್ನು ತಿಳಿದೂ) ತಾವು ನಂಬಿದ್ದನ್ನು ಹೇಳಲು ಹಿಂಜರಿಯುತ್ತಿರಲಿಲ್ಲವೆಂಬುದನ್ನು ನೆನೆದಾಗ ಆ ಮೌಲ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರನ್ನಂಟಿಕೊಂಡ ವಿವಾದಗಳೇನೇ ಇರಲಿ, ನಾವು ಕಂಡ ಅತ್ಯಂತ ಸಂವೇದನಶೀಲ ವ್ಯಕ್ತಿ/ಸಾಹಿತಿಗಳಲ್ಲೊಬ್ಬರು ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತುಗಳಿಲ್ಲ.  ಮಾಸ್ತಿಯವರನಂತರ ಅನಂತಮೂರ್ತಿ ಕನ್ನಡ ಕತೆಗಳ ಪ್ರಪಂಚದಲ್ಲಿ ಕಡೆಗಣಿಸಲಾಗದ ಹೆಸರು.  ಅವರ ಕತೆಗಳು ಹೊಸ ಕತೆಗಾರರಿಗೆ ಹಿರಿಯಣ್ಣನ ಮೇಲ್ಪಂಕ್ತಿಯಂತೆ ಕಂಡರೆ, ಸೂಕ್ಷ್ಮ ಓದುಗನನ್ನು ಹಲವು ಬಗೆಗಳಲ್ಲಿ ಆವರಿಸುತ್ತವೆ.  ಅವುಗಳಲ್ಲಿ ನನಗೆ ಬಹು ಇಷ್ಟವಾಗುವ ಅಂಶಗಳೆಂದರೆ, ಪಾತ್ರಗಳ ಒಳತೋಟಿ - ಸನ್ನಿವೇಶಕ್ಕೆ ಸಹಜವಾಗಿ ಅವು ಮೂಡುವ ಪರಿ, ತತ್ತ್ವ, ತರ್ಕ, ಕಲಾತ್ಮಕತೆಗಳ ಆಡಂಬರವಿಲ್ಲದೆಯೂ ಕಲಾತ್ಮಕವಾಗಿ ಅವು ಚಿತ್ರಿತವಾಗುವ, ಕ್ರಿಯೆ ಪಡೆದುಕೊಳ್ಳುವ ರೀತಿ.  ತಾವು ಹುಟ್ಟಿ ಬೆಳೆದ ಬ್ರಾಹ್ಮಣ ಸಮುದಾಯ, ಅದರ ನಿಂತ ನೀರಿನಂಥ ವ್ಯವಸ್ಥೆ, ಆಚರಣೆಗಳು, ಬಿಡಿಸಲಾಗದಂತೆ ಬೆಸೆದ ಒಳಿತು-ಕೆಡಕುಗಳು ಮತ್ತು ಅದೇ ಪರಿಸರದಲ್ಲಿ ಮತ್ತದರ ಹೊರಗೆ ಎದುರಾಗುವ ಸಂಕೀರ್ಣ ಸಂದರ್ಭಗಳು ಬಹುಶಃ ಅವರಲ್ಲಿ ಹಲವು ದ್ವಂದ್ವಗಳನ್ನು ಸೃಷ್ಟಿಸಿದಂತೆನಿಸುತ್ತದೆ.  ಅದಕ್ಕೆಂದೇ ಅನಂತಮೂರ್ತಿಯವರಲ್ಲಿ ಹೊತ್ತಿ ಉರಿಯುವ ಬಂಡಾಯಗಾರನನ್ನು ಕಾಣೆವು, ಅಥವ ಕೊನೆಯಲ್ಲಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬೀಳುವ ಸಂಪ್ರದಾಯಶರಣನನ್ನೂ.  ಈ ಬಂಡಾಯಗಾರ ತಣ್ಣಗೆ ಉರಿಯುವಂಥವನು; ಭಾಷಣ ಮಾಡುವವನಲ್ಲ, ಪ್ರತಿಭಟನೆಯನ್ನು ತಣ್ಣನೆಯ ಕ್ರಿಯೆಯಿಂದಲೇ ದಾಖಲಿಸುವವನು, ಸುಡುತ್ತಲೇ ಶಾಖದೊಳಗಣ ತಂಪಿಗಾಗಿ ಹಂಬಲಿಸುವಂಥವನು, ತಂಪಿನೊಳಗಣ ಬಿಸುಪನ್ನು ಕಂಡು ಬೆಚ್ಚುವವನು.  ತಮ್ಮಲ್ಲೇ ಬೆಳೆದ ಈ ದ್ವಂದ್ವಗಳನ್ನು ಕತೆಯ ಹಲವು ಪಾತ್ರಗಳಾಗಿ ಹಂಚಿ ರೂಪಿಸುವ ಅನಂತಮೂರ್ತಿಯವರ ರೀತಿ ಬಲು ಸೊಗಸು.  ಆ ಪಾತ್ರಗಳು ತಮ್ಮ ನಡುವೆ ನಡೆಸುವ ಸಂವಾದ ವಿವಾದ ಕ್ರಿಯೆ ಪ್ರತಿಕ್ರಿಯೆಗಳು ಒಟ್ಟಂದದಲ್ಲಿ ಒಂದೇ ವ್ಯಕ್ತಿಯ ಒಳತೋಟಿಯಂತೆ ಕಾಣುವುದು,  ಇದೇ ಕಾರಣಕ್ಕಿರಬೇಕು.  ಇದೇ ದ್ವಂದ್ವಗಳು ಅನಂತಮೂರ್ತಿಯವರನ್ನು ಅವರ ನಿಜಜೀವನದಲ್ಲೂ ನೆರಳಂತೆ ಹಿಂಬಾಲಿಸಿರುವುದನ್ನು ಕಾಣುತ್ತೇವೆ.  ಸಂವೇದನೆಗಳು ಹೆಚ್ಚು ಸೂಕ್ಷ್ಮಗೊಂಡಂತೆ ದ್ವಂದ್ವಗಳೂ ಹೆಚ್ಚುವುದು ಸಹಜವೇನೋ. 

ನನ್ನ ಚಿಂತನೆಯ, ಯೌವನದ ದಿನಗಳನ್ನು ರೂಪಿಸಿದ ಹಿರಿಮೆ ಅನಂತಮೂರ್ತಿ, ತೇಜಸ್ವಿ, ಲಂಕೇಶರದು.  ಆದ್ದರಿಂದಲೇ ನನಗವರು ಹೊಸ ಬದುಕಿನ, ಹೊಸ ಚಿಂತನೆಗಳ, ಸ್ವತಂತ್ರಶೀಲತೆಯ ಪ್ರತೀಕ.  ಅವರನ್ನು ಅವರ ಬದುಕಿನ ಉಚ್ಛ್ರಾಯದ ದಿನಗಳಲ್ಲಿ ಕಂಡು ಓದಿ ಬೆಳೆದ ನನಗೆ "ಹಿರಿಯರು" "ಅಗಲಿದ ವೃದ್ಧರು" ಎಂದೆಲ್ಲಾ ಹೇಳಲು ಮನಸ್ಸು ತಡೆಯುತ್ತದೆ.  ಬದುಕನ್ನು ತಮ್ಮಾಣತಿಯಂತೆಯೇ ಕುಣಿಕುಣಿದು ಬದುಕಿ, ಬದುಕಿನ ಕೊನೆ ಹನಿಯನ್ನೂ ಸವಿದು ತೀರಿದವರಿಗೆ "ಅಂತಿಮ ನಮನ"ಕ್ಕಿಂತ "ಪ್ರೀತಿಯ ವಿದಾಯ" ಎನ್ನುವುದು ಹೆಚ್ಚು ಆಪ್ಯಾಯಮಾನ.  ಈ ಮೂವರಲ್ಲಿ ಕೊನೆಯವರಾಗಿ ಅನಂತಮೂರ್ತಿ ಈಗ ನಮ್ಮನ್ನು ಅಗಲಿದ್ದಾರೆ - ಮಿಶ್ರ ಸಂವೇದನೆಗಳೊಂದಿಗೆ ನಮ್ಮನ್ನು ಬಿಟ್ಟು.  ಅನಂತಮೂರ್ತಿಯವರನ್ನು ಹತ್ತಿರದಿಂದ ಕಂಡು ಒಡನಾಡಿದವರು, ಅವರಲ್ಲಿ ಪಾಠ ಕೇಳಿದವರು, ಕೇಳದಿದ್ದರೂ ಪ್ರೀತಿಯ ಅನಂತು ಮೇಷ್ಟ್ರಾಗಿ ಸ್ವೀಕರಿಸಿದ ಅನೇಕ ಏಕಲವ್ಯ ಶಿಷ್ಯರು ಅವರಬಗ್ಗೆ ಭಾವುಕತೆಯಿಂದ, ಗದ್ಗದಿತರಾಗಿ ಮಾತಾಡುತ್ತಾರೆ.  ಇವೆಲ್ಲ ’ಪ್ರಗತಿಪರ’ ’ಬುದ್ಧಿಜೀವಿ’ ಮನಸ್ಸುಗಳು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡುವ ಒರಟು ಅಭ್ಯಾಸವೂ ಇತ್ತೀಚಿಗೆ ಬಂದುಬಿಟ್ಟಿದೆ.  ಆದರೆ ಈ ಪ್ರೀತಿ, ಅಸ್ಮಿತೆಗಳು ವ್ಯಕ್ತಿಯೊಬ್ಬನ ಕೇವಲ ಚಾಣಾಕ್ಷತೆಯಿಂದ, ರಾಜಕೀಯ/ಸಾಮಾಜಿಕ ’ಪ್ರಗತಿಪರತೆ’ಯಿಂದ, ಯಾವುದೋ ಸಿದ್ಧಾಂತದ ಮೇಲ್ಮೆಯಿಂದ, ಮೇಸ್ಟ್ರುಗಿರಿಯಿಂದ, ಲಾಬಿಯಿಂದ ಅಥವಾ ಸಾಹಿತ್ಯದ ಜನಪ್ರಿಯತೆಯಿಂದ ಬರುವುದಲ್ಲವೆಂಬುದನ್ನು ನೆನಪಿನಲ್ಲಿಡಬೇಕು.  ಭಾಷಣಗಳಲ್ಲಿ ಚಪ್ಪಾಳೆಯಿಕ್ಕುವುದು ಬೇರೆ, ಪ್ರೀತಿಯಿಂದ ನೆನೆಯುವುದು ಬೇರೆ.  ಗತಿಸಿದ ಮೇಷ್ಟ್ರ ಬಗೆಗಿನ ಸಾವಿರ ಬೆಚ್ಚನೆ ನೆನಪುಗಳಿವೆ ಅವರ ಮೆಚ್ಚುಗರಲ್ಲಿ.  ಹಾಗೇ ಅವರ ನಿಷ್ಠುರ ನಿಲುವಿನಿಂದಾಗಿ ಅವರನ್ನ ಕಾಯಾ ವಾಚಾ ಮನಸಾ ದ್ವೇಷಿಸುತ್ತಿದ್ದ, ಅವರ ಸಾವನ್ನೂ ಸಂಭ್ರಮಿಸುವ ಸಮೂಹವೂ ಇದೆ.  ಇದಂತೂ ಒಂದು ರೋಗಗ್ರಸ್ತ ಮನಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ.  ಎಷ್ಟೊ ಸಮಯ ಅಗತ್ಯವೇ ಇಲ್ಲದೆಡೆಯಲ್ಲೂ ಅವರ ಹೆಸರು ಎಳೆಯಲ್ಪಡುತ್ತಿತ್ತು, ಯಾರನ್ನಾದರೂ ಹೊಗಳಬೇಕಿದ್ದರೂ ತೆಗಳಿಕೆಗೆ ಅನಂತಮೂರ್ತಿಯೇ ಬೇಕು ಎಂಬಂಥ ಪರಿಸ್ಥಿತಿಯೂ ಏರ್ಪಟ್ಟಿತ್ತು.  ಅಷ್ಟಾದರೂ ಎಲ್ಲೋ ಒಂದುಕಡೆ ಈ ಅಸಹನೆಗೆ ರವೆಯಷ್ಟಾದರೂ ತಥ್ಯ ಕಾರಣವಿಲ್ಲದಿಲ್ಲ.  ಹಲವು ವಿಷಯಗಳಲ್ಲಿ ನಿಷ್ಠುರ ನಿಲುವು ತಾಳುತ್ತಿದ್ದ ಅನಂತಮೂರ್ತಿ, ಮತ್ತೆ ಕೆಲವು ವಿಷಯಗಳು ಕಂಡೂ ಕಾಣದಂತೆ ಇರುತ್ತಿದ್ದರೆಂಬುದು ಅಸಹನೀಯವಾಗುತ್ತಿತ್ತು.  ಅವರ ’ಸಮಾಜಪರ’ ’ಸಾಮಾಜಿಕನ್ಯಾಯುತ’ ನಿಲುವುಗಳು ಹಲವು ಬಾರಿ ಅಷ್ಟೇನು ಸಾಮಾಜಿಕ ನ್ಯಾಯದ್ದಾಗಿ ಕಾಣುತ್ತಲೇ ಇರಲಿಲ್ಲ.  ಅನೇಕವೇಳೆ ಅವರ ನಿಲುವುಗಳಲ್ಲಿ ಕಣ್ಣಿಗೇ ಹೊಡೆಯುವ ವಿರೋಧಾಭಾಸಗಳು ಇರುತ್ತಿದ್ದುವು.  ಈ ಸಮಯದಲ್ಲೆಲ್ಲಾ ಅವರ ಚಿನ್ಮೌನ ಕೂಡ ಹೊತ್ತಿ ಉರಿಯುತ್ತಿದ್ದ ಅಸಹನೆಗೆ ತುಪ್ಪ ಹೊಯ್ಯುತ್ತಿತ್ತು.  ಅನಂತಮೂರ್ತಿ-ಗಾಂಧಿ-ಕಸಬರನ್ನು ಒಟ್ಟಿಗೇ ದ್ವೇಷಿಸುವ ಜನವಿರುವಂತೆಯೇ ಈ ಮೂವರನ್ನೂ ಒಟ್ಟಿಗೇ ಪ್ರೀತಿಸುವ ಜನರೂ ಇರುವುದು, ಆ ಕಳವಳಕಾರೀ ಸಾಮಾಜಿಕ ಬೆಳವಣಿಗೆ, ಅನಂತಮೂರ್ತಿಯವರ ಗಮನಕ್ಕೆ ಬರಲೇ ಇಲ್ಲ.  ಕಸಬನಂಥವರ ಮೇಲಿನ ದ್ವೇಷ ಅನಂತಮೂರ್ತಿಯಂಥವರ ಮೇಲಿನ ಅಸಹನೆಯಾಗಿ ಪರಿಣಮಿಸುತ್ತಿದ್ದುದನ್ನೂ, ಅನಂತಮೂರ್ತಿಯವರ ಮೇಲಿನ ಪ್ರೀತಿ ಕಸಬನಂಥವರ ಮೇಲಿನ ಪ್ರೀತಿಯಾಗಿ ಚಲಾವಣೆಗೊಳ್ಳುತ್ತಿದ್ದುದನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.  ಹೀಗಾಗಿ ಯಾವುದೋ ಮಟ್ಟದಲ್ಲಿ ಅನಂತಮೂರ್ತಿ ಅವರದಲ್ಲದ ದ್ವೇಷಕ್ಕೆ ಅವರದಲ್ಲದ ಪ್ರೀತಿಗೆ ಪಕ್ಕಾಗುತ್ತಾ ಹೋದರು.  ಅಥವ ಇದು ಅನಂತಮೂರ್ತಿಯವರ ವೈಯಕ್ತಿಕ ನಿಲುವೆನ್ನುವುದಕ್ಕಿಂತ ಅವರು ಗುರುತಿಸಿಕೊಂಡ, ಈಗಾಗಲೇ ಒಂದು ಕಟ್ಟರ್ ’ಪಂಥ’ವೇ ಆಗಿ ಬೆಳೆದ ರಾಜಕೀಯ ಸಿದ್ಧಾಂತದ ಅನಿವಾರ್ಯ dynamics ಕೂಡ ಇರಬಹುದೆಂದು ನಾನು ಚಿಂತಿಸುತ್ತೇನೆ.  ಆ ದೃಷ್ಟಿಯಿಂದ ಉಳಿದ ಹಲವು ಪ್ರಗತಿಪರರಂತೆಯೇ ಅನಂತಮೂರ್ತಿಯವರೂ ತಾವೇ ನೀರೆರೆದು ಬೆಳೆಸಿದ ಪಂಥವನ್ನು ಪ್ರಶ್ನಿಸಿಕೊಳ್ಳುವ critical insider ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರೋ ಎನ್ನುವ ಅನುಮಾನ ಕಾಡುತ್ತದೆ.  ಬದಲಾದ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಸಮತೋಲನದ ಗುರುತ್ವಬಿಂದು (center gravity) ಬದಲಾಗಿದ್ದು ಅವರಿಗೆ ತಿಳಿಯಲೇಯಿಲ್ಲವೆನಿಸುತ್ತದೆ.  ಏಕೆಂದರೆ ತಮ್ಮ ಜೀವನವೆಲ್ಲಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಅದನ್ನು ಮೀರುತ್ತಾ ಗಟ್ಟಿಗೊಳ್ಳುತ್ತಾ ಬಂದ ಈ ಸಮಾಜವಾದಿ, ತಾವೇ ಮತ್ತೊಂದು ಬದಲೀ ವ್ಯವಸ್ಥೆಯ ಭಾಗವಾಗತೊಡಗಿದ್ದನ್ನೂ ಮತ್ತು ಆ ವ್ಯವಸ್ಥೆಯೇ ಮತ್ತೊಂದೆಡೆಯಿಂದ ಅದೇ ಹಲವು ಬಗೆಯ ವೈಪರೀತ್ಯಗಳಿಗೆಡೆಗೊಡತೊಡಗಿದ್ದನ್ನು ಗಮನಿಸದೇ ಹೋದರೇ?  ಇಲ್ಲದಿದ್ದರೆ ಅವರು ಎಲ್ಲೋ ಒಂದೆಡೆ ಅದನ್ನೂ ಮೀರಲೆತ್ನಿಸುತ್ತಿರಲಿಲ್ಲವೇ?  ಅಥವ ಅಷ್ಟುಹೊತ್ತಿಗಾಗಲೇ ಅವರ ಸುತ್ತ ರೂಪುಗೊಂಡಿದ್ದ ಆ ಪ್ರಭಾವಳಿ, ಗೌರವ, ಪ್ರೀತಿಗಳು ಅನಂತಮೂರ್ತಿಯವರೊಳಗಿದ್ದ ಬಂಡಾಯಗಾರನನ್ನು ಮೆತ್ತಗಾಗಿಸಿತ್ತೇ?  ಈ ಹಲವು ಪ್ರಶ್ನೆಗಳನ್ನಿಟ್ಟು ಅವರೊಡನೆ ಚರ್ಚಿಸಬೇಕೆಂದು ಎಷ್ಟೋಬಾರಿ ಅಂದುಕೊಂಡಿದ್ದಿದೆ.  ಅದು ಸಾಧ್ಯವಾಗುತ್ತಿದ್ದಿತೋ, ಇಲ್ಲವೋ - ಒಟ್ಟಿನಲ್ಲಿ ಈಗಂತೂ ಅವರಿಲ್ಲ.  ಬಹುಶಃ ಅವರಲ್ಲಿ ಉತ್ತರವಿದ್ದಿರಬಹುದು, ಕೇವಲ ಭರ್ತ್ಸನೆ, ಬೆದರಿಕೆ, ವೈಯಕ್ತಿಕ ನಿಂದನೆಗಳನ್ನು ಬಿಟ್ಟು ನಿಜದ ಪ್ರಶ್ನೆಗಳೇ ಅವರ ವಿರೋಧಿಗಳಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆದುರಾಗಲಿಲ್ಲವೇನೋ.  ಪ್ರಶ್ನೆಗಳಂತೂ ಇವೆ.  ಉತ್ತರಗಳೂ ಖಂಡಿತ ಇವೆ.  ಆದರೆ ಸಮಾಧಾನದಿಂದ ಕೂತು, ಪರಸ್ಪರ ಅನುಮಾನಗಳಿಲ್ಲದೇ ಚರ್ಚಿಸಿ ’ಅರ್ಥಮಾಡಿಕೊಳ್ಳುವುದು’ ಸಾಧ್ಯವಾದರೆ!  ಅನಂತ ಸರಳತೆ ಸಜ್ಜನಿಕೆ ಸನ್ನಡತೆಗಳ ಮೂರ್ತಿಗೆ ಅದು ನಿಜವಾದ ಶ್ರದ್ಧಾಂಜಲಿಯಾಗಬಹುದು.

ಅನಂತಮೂರ್ತಿಯವರ ಬಗೆಗೆ ನೆನೆಸಿಕೊಳ್ಳಲು ನನಗೆ ವೈಯಕ್ತಿಕ ಆಪ್ತ ಅನುಭವಗಳಿಲ್ಲ.  ಅಥವ ದ್ವೇಷಿಸುವ ಧಾರ್ಮಿಕ/ಸಾಮಾಜಿಕ ಕಾರಣಗಳೂ ಇಲ್ಲ.  ನನ್ನ ನೆಚ್ಚಿನ ಕತೆಗಾರ ಅನಂತಮೂರ್ತಿ ಮಾತ್ರ ಹಿಂದಿನಂತೆಯೇ ಇನ್ನು ಮುಂದೆಯೂ ನನ್ನ ಜೊತೆಯಿರುವರೆಂಬುದಂತೂ ನಿಜ, ನನ್ನ ಪುಸ್ತಕದ ಕಪಾಟಿನಲ್ಲಿ, ನನ್ನ ಓದಿನ ನೆನಪುಗಳಲ್ಲಿ, ಸ್ಫೂರ್ತಿಯಲ್ಲಿ.  ಅದೇಕೋ ಮೊನ್ನೆ ಅನಂತಮೂರ್ತಿಯವರು ಕೊನೆಯ ಕ್ಷಣಗಳನ್ನೆಣಿಸುತ್ತಿದ್ದ ಸುದ್ದಿ ತಿಳಿದಾಗ ನನಗೆ ನೆನಪಾದದ್ದು, ವಿಪರೀತ ಕಾಡತೊಡಗಿದ್ದು ಅವರು ಕುಮಾರಗಂಧರ್ವರ ಬಗ್ಗೆ ಬರೆದ ಒಂದು ಕವನ.  ಮೊದಲೇ ಹೇಳಿದಂತೆ ನಾನು ವೈಯಕ್ತಿಕವಾಗಿ ಅನಂತಮೂರ್ತಿಯವರನ್ನು ಬಲ್ಲವನಲ್ಲ, ಆದರೆ ಅವರು ನನ್ನೊಡನೆ ಅಷ್ಟು ಆಪ್ತವಾಗಿ ಮಾತನಾಡಿದ್ದು ಈ ಕವನದ ಮೂಲಕವೇ, "ಸಂತೆಯಿಂದ ಸುಸ್ತಾಗಿ ಬಂದ ಶೆಟ್ಟಿ"ಯಂಥ ಆ ಗಂಧರ್ವ ಈ ಮೂರ್ತಿಯನ್ನು ಮಾತಾಡಿಸಿದಷ್ಟೇ ಆಪ್ತತೆಯಿಂದ.  ಅವರ ಸಾವಿನ ಸುದ್ದಿ ಬಂದಾಗ, ಅವರ ಈ ಕವನ ಓದಬೇಕೆಂದು ತುಂಬಾ ಅನ್ನಿಸಿತು.  ನನ್ನ ಲೈಬ್ರರಿಗೆ ದೂರವಿದ್ದೆ.  ಗೆಳೆಯ ರಾಜೇಂದ್ರನ ಬಳಿ ಹೇಳಿ ತರಿಸಿಕೊಂಡು ಒಮ್ಮೆ ಏಕಾಂತದಲ್ಲಿ ಕುಳಿತು ಓದಿಕೊಂಡೆ.  ಗಂಧರ್ವನ ಜಾಡು ಹಿಡಿದು ಹೊರಟ ಅನಂತಮೂರ್ತಿ ಮುಗುಳ್ನಕ್ಕು ಕೈಬೀಸಿದರು.

ಈ ಕವನದ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಬಹುದು:
http://youtu.be/hPrOY1EC7oI

Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.

Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.